Saturday, April 24, 2010

ನಾಗೇಶ ಹಂದಿ ಹಿಡಿದದ್ದು

ನಮ್ಮ ಊರಿನಿಂದ ಸ್ವಲ್ಪ ದೂರದಲ್ಲಿ ನಮ್ಮದೊಂದಷ್ಟು ಜಮೀನಿದೆ. ಹೊಸದಾಗಿ ತೋಟ ಹಾಕಿಸಿದ್ದು. ದೂರದ್ದಾದ್ದರಿಂದ ನೋಡಿಕೊಳ್ಳಲು ಒಂದು 'ಜನ' ಬಿಟ್ಟಿದ್ದೇವೆ.'ಜನ 'ಅಂದರೆ ನಾಗೇಶ ಮತ್ತು ಅವನ ಫ್ಯಾಮಿಲಿ....!ಅವನದ್ದೂ ಅರ್ಧ ಎಕರೆ ತೋಟ ಪಕ್ಕದಲ್ಲಿಯೇ ಇದೆ. ಒಳ್ಳೆಯವನು . ನಮ್ಮ ತೋಟದ ಎಲ್ಲಾ ಜವಾಬ್ಧಾರಿ ಅವನದೇ...ಅಂದರೆ ಯಾವ ಕೆಲಸ ಮಾಡುವುದಾದರೂ ಅವನೇ ಗುತ್ತಿಗೆ ಹಿಡಿಯುತ್ತಾನೆ. ಆಳು ಜನರ ವ್ಯವಸ್ತೆ, ಹಣಕಾಸಿನ ಮಾತುಕತೆ ಎಲ್ಲಾ ಅವನದೇ ಜವಾಬ್ಧಾರಿ.. ತೋಟಕ್ಕೆ ಬಂದ ದನ ಹೊಡೆದು ಓಡಿಸುವುದರಿಂದ ಹಿಡಿದು.

ತನ್ನದೇ ತೋಟ ಎಂಬಷ್ಟು ಶ್ರದ್ಧೆಯಿಂದ ಕೆಲಸ ಮಾಡುತ್ತಾನೆ ಪಾಪ.... ಹಾಗಾಗಿ ತೋಟದ ಸೂಪರ್ ವೈಸರ್ ಎಂತಲೂ ಹೇಳಬಹುದು... ಅಲ್ಲದೆ ನಾವಿಲ್ಲದಿದ್ದಾಗ ತೋಟದ ಯಜಮಾನ ಅವನೇ....!! ನನ್ನವರು ಅವನನ್ನು ಮ್ಯಾನೇಜರ್, ಕೆಲವೊಮ್ಮೆಸಿ.ಇ.ಓ.ಎಂತೆಲ್ಲಾ ಕರೆಯುವುದೂ ಉಂಟು.....!!!!!

ಪಾಪದವ ಮತ್ತು ಒಂತರಾ ಹುಂಬ ..

ಅವನದ್ದೊಂದು ಎಂ 80 ಇತ್ತು. ಅದನ್ನು ಹತ್ತಿ ಹೊರಟನೆಂದರೆ ಮನೆ ಸೇರುತ್ತಾನಾ ಎಂದು ಸಂಶಯ ಪಡಬೇಕಾದ್ದು ನೋಡುವವರ ಧರ್ಮ.

ಒಂದಿನಾ ನಮ್ಮ ಬಾವನವರನ್ನು' ಇಲ್ಲಪ್ಪಾ ನಿನ್ನ ಗಾಡಿಯಲ್ಲಿ ಹತ್ತಲು ಭಯ' ಎಂದರೂ ಕೇಳದೆ ಒತ್ತಾಯ ಮಾಡಿ ಜೊತೆಗೆ ಇನ್ನೊಬ್ಬರನ್ನೂ ಕೂರಿಸಿ ಕೊಂಡು ತ್ರಿಬ್ಬಲ್ ರೈಡ್ ಮಾಡಿದ ಹೊಡೆತಕ್ಕೆ ಸ್ವಲ್ಪ ದೂರ ಹೋಗುವಷ್ಟರಲ್ಲಿಯೇ ಅದು ವಿಮಾನದಂತೆ ಟೇಕಾಫ್ ಆಗಿ ಹಿಂದಿದ್ದ ಇಬ್ಬರೂ ನೆಲಕ್ಕೆ ಕಾಲು ಕೊಟ್ಟು ಹೇಗೋ ಬಚಾವಾದ ಕಥೆ ನೆನಪಿಡುವನ್ತದ್ದು.


ಹೋದಲ್ಲೆಲ್ಲಾ ಒಂದಲ್ಲ ಒಂದು ಆಕ್ಸಿಡೆಂಟ್ ಮಾಡಿಕೊಳ್ಳದಿದ್ದರೆ ಅವನ ಗಾಡಿಗೆ ಮರ್ಯಾದೆಯೇ ಇಲ್ಲ. ಒಮ್ಮೆ ನಿಂತ ಲಾರಿಗೆ ಹೋಗಿ ಗುದ್ದಿ ಕುದುರೆಯಂತೆ ಹಾರಿ ಬಿದ್ದಿದ್ದ .
ಇನ್ನೊಮ್ಮೆ ಅಡ್ಡರಸ್ತೆಯಿಂದ ಹಾರನ್ ಕೂಡಾ ಮಾಡದೆ, ಎಡ ಬಲ ನೋಡದೆ ಸೀದಾ ಮೇನ್ ರೋಡಿಗೆ ನುಗ್ಗಿ ಎದುರಿಗೆ ಬರುತ್ತಿದ್ದ ರಿಕ್ಷಾಕ್ಕೆ ಗುದ್ದಿದ್ದ.. ಹೆಚ್ಚಿಗೆ ವೇಗ ಇರಲಿಲ್ಲವಾದ್ದರಿಂದ ಕೈಕಾಲು ಮುರಿತದಿಂದ ಬಚಾವಾದರೂ ಎಲ್ಲರೂ ಸೇರಿ ಗುದ್ದಿದ್ದರ ಪರಿಣಾಮವಾಗಿ ಮೈ ಕೈ ಊದಿ ಎರಡು ದಿನ ಆಸ್ಪತ್ರೆಯಲ್ಲಿ ರೆಷ್ಟು ತಗೊಂಡು ಬಂದಿದ್ದು ನಿಜ. ಊರಿಗೆ ಬಂದು'' ಎಂತಾಆಯಿಲ್ಲೇ...''ಎನ್ನುತ್ತಾ ಮತ್ತೆ ರೆಡಿಯಾದದ್ದೂ ಸುಳ್ಳಲ್ಲ..

ಒಮ್ಮೆ ತೋಟದಲ್ಲಿ ಮೀಟು ಕಡಿಯುವಾಗ ಬದಿಯಲ್ಲೇ ಹರಿದು ಹೋಗುತ್ತಿದ್ದ ನಾಗರ ಹಾವೊಂದನ್ನು ಗುದ್ದಲಿಯಿಂದ ನೋಡದೆ ಕಡಿದು ಬಿಟ್ಟಿದ್ದ.ಅದು ತಲೆ ಬಾಲ ಬೇರೆಯಾಗಿ, ತಲೆಯ ಭಾಗ ಜೀವ ಸಂಕಟದಿಂದ ಒಂದು ಏಡಿ ಕುಣಿಯನ್ನು ಹೊಕ್ಕು ಬಿಟ್ಟಿತ್ತು.ಉಳಿದ ಉದ್ದದ ಬಾಲದ ಭಾಗ ತೋಟದ ಬಣ್ಣದ ಮೇಲೆ ಬಿದ್ದಿತ್ತು.
ಎಲ್ಲಾ ಅಕ್ಕಪಕ್ಕದವರು ....'' ಹಾವಿನ ದ್ವೇಷ ಹನ್ನೆರಡು ವರುಷ ... ಮನೆ ಮಾಡಲ್ಲೆಲ್ಲಾ ಸರ್ಪಿನ ಹಾವೇ ಕಾಣಸಿ ಕೊಳ್ಳತ್...ಎಂತಾಅಂದ್ರೂ ತಪ್ಪಾಗಿ ಹೋಯಿತೇ... ಮಕ್ಳು ಮರಿ ಇರುವವ ನೀನ'' ಅಂದರು. ಇವನ ಹೆಂಡತಿ ಶಾರದೆಯಂತೂ ಹಾವು ನಾಗೇಶನಿಗೆ ಕಡಿದಿದೆಯೇನೋ ಎಂಬಂತೆ ಮೂರ್ಚೆ ಹೋಗಿದ್ದೂ ಆಯ್ತು.

ಆಮೇಲೆ ಇವನಿಗೆ ಹೆದರಿಕೆಯಾಗಿ ಸರ್ಪಸಂಸ್ಕಾರ ಮಾಡಿಸಲು ಪಕ್ಕದ ಹಳ್ಳಿಯ ಜೋಯಿಸರ ಹತ್ತಿರ ಹೋದ. ಜೋಯಿಸರು '
'ಬರೀಬಾಲ ಮಾತ್ರದಿಂದ ಸರ್ಪ ಸಂಸ್ಕಾರ ಮಾಡಲು ಸಾಧ್ಯವಿಲ್ಲ ... ತಲೆ ಭಾಗ ಜೀವ ಇದ್ದರೆ ಮತ್ತೆ ಪಾಪ ಹೆಚ್ಚು ಸುತ್ತಿ ಕೊಳ್ಳುತ್ತೆ... ತಲೆಹುಡುಕಿ ಸಂಸ್ಕಾರ ಮಾಡು ...'' ಎಂದರು


ಹಾವಿನ ಸ್ಪೆಷಲಿಸ್ಟ್ ರ ಹತ್ತಿರ ಬಾಲ ತುಂಡಾದ ಹಾವು ಬದುಕಿರುತ್ತದೋ ಇಲ್ಲವೋ ಪ್ರಶ್ನಿಸಿ ಬದುಕಿರಲು ಸಾಧ್ಯವೇ ಇಲ್ಲ ಎಂಬ ಸಮಾಧಾನದೊಂದಿಗೆ ಧೈರ್ಯವಾಗಿ ಇಂವ ಬಂದು ಏಡಿ ಕುಣಿಯನ್ನು ಸುಮಾರು ಆರೇಳು ಅಡಿಗಳಾಗುವಷ್ಟು ಅಗೆದ. ಕಡೆಗೆ ಸತ್ತ ಹಾವಿನ ತಲೆ ಸಿಕ್ಕಿತು. ಎರಡನ್ನೂ ಸೇರಿಸಿ ಸುಬ್ರಹ್ಮಣ್ಯಕ್ಕೆ ತಪ್ಪುಗಾಣಿಕೆಯಿತ್ತು... ಅದಕ್ಕೆ ಒಂದು ಸಂಸ್ಕಾರ ಅಂತ ಮಾಡಿಯಾಯಿತು...

ಹೀಗೆ ಇವನು ಮಾಡಿಕೊಳ್ಳುವ ಭಾನಗಡೆ ಒಂದೆರಡಲ್ಲ.

ಒಮ್ಮೆ ಇವನ ನಾಲ್ಕಾರು ಸ್ನೇಹಿತರೊಂದಿಗೆ ಹಂದಿ ಬೇಟೆಗೆ ಅಂತ ಊರ ಹಿಂದಿನ ಕಾಡಿಗೆ ಹೋದ. ಹೊಟ್ಟೆಗೆ ಸ್ವಲ್ಪ ಔಷಧಿ ಬೇರೆ ..... ಶಕ್ತಿ ...ಧೈರ್ಯಕ್ಕೆ... ಇರಲಿ ಅಂತ ...
ಎಲ್ಲರೂ ಯಥಾನ್ಶಕ್ತಿ ಕುಡಿದಿದ್ದರು...ಹಂದಿಯೊಂದನ್ನು ಬಿಟ್ಟು..

ಅಲ್ಲಿ ಕೋವಿ ಇದ್ದದ್ದು ಇವನ ಸ್ನೇಹಿತ ಗಿಡ್ಡ ನಾಯಕನಹತ್ತಿರ .. ಅವನಿಗೆ ಮೂವತೈದಕ್ಕೆ ಚಾಳೀಸು ಬಂದಿತ್ತು....!!!!ಹಗಲೇ ಸುಮಾರಾಗಿ ಕಣ್ಣು ಕಾಣಿಸುವವ ರಾತ್ರಿ ಹೇಗಿರಬೇಡ....? ಹಂದಿ ಹೊಡೆಯುವವ ಅವನೇ....
ಕೋವಿ ಅವನದಾದ್ದರಿಂದ ಗುರಿ ಇಡುವ ನೈತಿಕ ಹಕ್ಕು ಅವನದೇ ಅಲ್ಲವೇ...?

ಎಲ್ಲರೂ ಪ್ಲಾನ್ ಮಾಡಿ ಕೊಂಡರು..ಬೆಟ್ಟದಲ್ಲಿ ಮರಗಿಡಗಳ ನಡುವಿನಲ್ಲಿ ಒಂದು ಜಾಗವನ್ನು ಆಯ್ದು ಕೊಂಡು, ಅಲ್ಲಿ ಗಿಡ್ದನಾಯಕ ಕೋವಿ ಮತ್ತು ಗುರಿಯೊಂದಿಗೆ ಸಜ್ಜಾಗಿರಬೇಕು... ಮತ್ತು ನಾಲ್ಕು ಜನ ಹಂದಿಯನ್ನು ಆ ಸ್ಪಾಟಿಗೆ ಓಡಿಸಿಕೊಂಡು ಬರಬೇಕು.. ಅಲ್ಲದೆ ಗುಂಡು ತಗುಲಿದ ಹಂದಿಯನ್ನು ತಪ್ಪಿಸಿಕೊಂಡು ಹೋಗದಂತೆ ಹಿಡಿದು ಅದುಮಲು ನಾಗೇಶ....!!
ಪ್ರಾಜೆಕ್ಟ್ ರೆಡಿಯಾಯಿತು.


ಆ ಕಡೆಯಿಂದ ಸ್ಪಾಟಿಗೆ ಹಂದಿಯನ್ನು ಬೆದರಿಸಿಕೊಂಡು, ಓಡಿಸಿಕೊಂಡು ಬಂದರು.
ಗಿಡ್ಡನಾಯಕ ರೆಡಿಯಾಗಿದ್ದ... ಹೊಟ್ಟೆಯಲ್ಲಿ ಹಾಕಿಕೊಂಡ ಥರ್ಟಿ, ಸಿಕ್ಸ್ಟಿ +,+,+,+ ಕೂಡಾ ಕೆಲಸ ಮಾಡಲಾರಮ್ಬಿಸಿತ್ತು .
ನಾಗೇಶನಿಗೆ ಉತ್ಸಾಹ ಹೆಚ್ಚಾಗಿ ಕಬ್ಬಡ್ಡಿ ಆಡುವವರಂತೆ ಅತ್ತ ಇತ್ತ ಹಾರುತ್ತಿದ್ದ... ಯಾವುದೇ ಕಾರಣಕ್ಕೂ ಹಂದಿ ತಪ್ಪಿಸಿಕೊಂಡು ಹೋಗಬಾರದು ಮತ್ತು ಗುಂಡು ತಾಗಿದ ನಂತರ ಹಂದಿ ಹಾರಿ ಬೀಳುವುದು ತನ್ನ ಕೈಗೆ .......ಕ್ರಿಕೆಟ್ ಬಾಲ್ ಹಿಡಿದ ಹಾಗೇ ಹಿಡಿಯುವುದು ..... ಅನ್ನುವ ಲಾಜಿಕ್ಕು...!!

ಹಂದಿ ಓಡುತ್ತಾ ಬಂತು... ಬಂತು... ಬಂತು... ಬಂದೆ ಬಿಟ್ಟಿತು...........!!!!
ಡಂ.... ಡಾಮ್... ಡಮಾರ್ ...
ಗಿಡ್ದನಾಯಕನ ಕೋವಿಯಿಂದ ಗುಂಡು ಪಾಸಾಯ್ತು..
ಗುಂಡು ಪಾಸಾಗಿದ್ದಿದ್ದು ನಿಜ..
ಹಂದಿಯೂ ಬದಿಗೆ ಹಾರಿ ಪಾಸಾಗಿದ್ದುದು ಅದಕ್ಕಿಂತಲೂ ನಿಜ...!!
ಹಂದಿಯನ್ನು ಹಿಡಿಯುವವನು ಎಲ್ಲಿ ಹೋದ ಎಂದು ಎಲ್ಲರೂ ನಾಗೇಶನನ್ನು ಹುಡುಕಿದರು.. ಪಾಪ ಪೊದೆಯ ಸಂದಿಯಲ್ಲಿ ನರಳುವ ಶಬ್ದ ಕೇಳಿ ನೋಡಿದರೆ... ಕಾಲು ಪೂರ ರಕ್ತವಾದ ನಾಗೇಶ ಬಿದ್ದಿದ್ದ..

'
' ಎಂತ ಮಾರಾಯ ''ಎಂದು ಎಲ್ಲರೂ ನೋಡಿದರೆ ... ಗುಂಡು ಬಿದ್ದಿದ್ದು ಹಂದಿಗಲ್ಲ.. ನಾಗೇಶನ ಕಬಡ್ಡಿಯ ತೊನೆದಾಟದಿಂದಾಗಿ ಹಗಲುಗುರುಡ ಗಿಡ್ದನಾಯಕನ ಕಣ್ಣಿಗೆ ನಾಗೇಶನೇ ಹಂದಿಯಂತೆ ತೋರಿ ಗುರಿಯಿಟ್ಟಿದ್ದ...ಒಂದು ಗುಂಡು ಕಾಲಿಗೆ ಬಿದ್ದಿತ್ತು..ಗುರಿಕಾರನ ಸಾಮರ್ಥ್ಯದ ದೆಸೆಯಿಂದ ಇನ್ನೊಂದು ಗುಂಡು ಸರಿಯಾಗಿ ''ಎದೆಗೆ''ಬಿದ್ದಿತ್ತು.....!!!

ಹೆದರುವ ಅಗತ್ಯವಿಲ್ಲ....!!
.ನಾಗೇಶನ ಗ್ರಾಚಾರ ಸರಿಯಿತ್ತು.......!!!!!!
ಇವನೇನು ಮಾಡಿದ್ದಾ ಅಂದರೆ....... ಎಡದ ಜೇಬಿನಲ್ಲಿ ಸುಣ್ಣದಂಡೆ ಇಟ್ಟುಕೊಂಡಿದ್ದ.. ಗುಂಡು ಸರಿಯಾಗಿ ಸುಣ್ಣದಂಡೆಗೆ ಬಿದ್ದಿತ್ತು... ಸಧ್ಯ.. ಇಲ್ಲದಿದ್ದರೆ ಈ ವರ್ತಮಾನ ಹೇಳಲು ನಾಗೇಶ ಭೂತವಾಗಿರುತ್ತಿದ್ದ..
ಎಲ್ಲರೂ ಪ್ರಾಣ ಕಾಪಾಡಿದ ಸುಣ್ಣದಂಡೆಯನ್ನು ಕೊಂಡಾಡಿದ್ದೆ ಕೊಂಡಾಡಿದ್ದು.

ಪ್ರತೀ ಸಾರಿ ಊರಿಗೆ ಹೋದಾಗಲೂ ಒಂದಲ್ಲ ಒಂದು ನಾಗೇಶನ ಕಥೆ ಇದ್ದೇ ಇರುತ್ತದೆ...ಇಷ್ಟೆಲ್ಲಾ ಭಾನಗಡೆ ಮಾಡಿಕೊಂಡರೂ ಮತ್ತೆ ಮರುದಿನ ರೆಡಿ ಹೊಸ ಕಥೆಗೆ..........!!!!!

ವಂದನೆಗಳು.

Monday, April 19, 2010

ಫ್ಲೂ ಜ್ವರ...

ಬೇಸಿಗೆ ಮರಳಲು ಕರೆಯದೆ ಬರುವೆ
ತಣ್ಣನೆ ತಂಪಿನಲಿ
ಬಣ್ಣದ ನೀರಿಗೆ ಮರುಳಾದೊಡೆ ನೀ
ಕಣ್ಣಿನ ಜೊ೦ಪಿನಲಿ


ಒಂದರ ಹಿಂದಿನ್ನೊಂದರ ಬರುವು
ಸಾಗರದಲೆಯಂತೆ
ಭರತವು ಮೊರೆತವು ಚಳಿಯದು ಕೊರೆತವು
ನಾಲಿಗೆ  ಕಹಿ ಬೇವೂ


ಕೊರಳಲಿ ಹಣೆಯಲಿ ಹನಿಯೊಡೆದಿಹ ಮಣಿ
ಮದ್ದಿಗೆ ಮೈ ಚಾಚಿ
ಎದ್ದೊಡುವೆ ನೀ ಸುದ್ದಿಗೂ ಬಾರದೆ
ಮರಳುವೆ ಕೈ ಚಾಚಿ


ಮೈ ಕೈ ನಡುಕವು ಕುತ್ತಿಗೆ ಕಡು ಬಿಸಿ
ಕಣ್ಣಿನ ಬುಡ ಕಪ್ಪು
ಬಣ್ಣವ ತೆಗೆಯುವೆ ಸುಣ್ಣವ ಬಳಿಯುವೆ
ಮುಖದಲಿ ಸುರಿಗಪ್ಪು


ಒಬ್ಬರ ಬಿಟ್ಟಿನ್ನೊಬ್ಬರ ಹಿಡಿಯುವೆ
ಖೋ ಖೋ ತೆರನಂತೆ
ನಲ್ಲೆಯ ಬಿಡುತಲಿ ನಲ್ಲನ ಬೆಸೆಯುವೆ
ಆಟದಿ ಸಿಗದಂತೆ


ಶಿಶು ಗೂಸೆ೦ದರು ತೋರದೆ ನೀ ದಯೆ
ವೃದ್ಧರ ಬಿಡಲೊಲ್ಲೆ
ವರವಾಗುವೆ ನೀ ಘನ ವೈಧ್ಯರಿಗೆ
ಸ್ಪರ್ಧೆಯ ಭಯದಲ್ಲೇ


ನೀನಿರೆ ಸನಿಹದಿ ಬುದ್ಧಿಗು ಜಡವೂ
ದಿಂಬಿಗೆ ತಲೆ ಇಟ್ಟು
ಮೊದಲಿನ ಮದ್ದದು ನೊಸಲಿಗೆ ತಣ್ಣೀ -
ರಿನ ಶಾಖದ ಕಟ್ಟು


ತುರ್ತಿಗೆ ನಾ ಇಟ್ಟಿರುವೆನು ಆ ಕ್ರೋ-
ಸಿನ್ನಿನ ಗುಳಿಗೆಯನು
ಜ್ವರವದು ಬಿಡದಿರೆ ಬೇಕಿದ್ದರೆ ಕಾ-
ಣೆನುತಲಿ ವೈದ್ಯರನು


Sunday, April 11, 2010

ಒಳ್ಳೆಯತನ ಅಂದ್ರೇನು....? ಸುಮ್ನೆ ಹರಟಿದ್ದು...

ಒಳ್ಳೆಯವರು ಅಂದರೆ.. ನೈತಿಕವಾಗಿ, ಬೌದ್ಧಿಕವಾಗಿ ಮೇಲ್ಮಟ್ಟದಲ್ಲಿರುವ, ಪರೋಪಕಾರಿಯಾಗಿರುವ, ಮೌಲ್ಯಯುತ ವಿಚಾರಗಳಿರುವ,ಸಹನಶೀಲ, ನುಡಿದಂತೆ ನಡೆಯುವ,ಕರ್ತವ್ಯ ಶಾಲಿ .......,.......,.......,.......,ಇತ್ಯಾದಿ ಸಕಲ ಗುಣಗಳಿರುವ ವ್ಯಕ್ತಿಗಳು.. ಅನ್ನುವುದು ನನಗೆ ಮತ್ತು ನಿಮಗೆ ಹಾಗೂ ಎಲ್ಲರಿಗೂ ಗೊತ್ತು ಅಲ್ಲವೇ...?

ಆದರೆ ಈ ಒಳ್ಳೆಯ ಗುಣಗಳೆಲ್ಲವೂ ಒಬ್ಬನೇ ವ್ಯಕ್ತಿಯಲ್ಲಿ ಇರುತ್ತವೆಯೇ...?
ಒಂದೆರಡು ಗುಣಗಳು ಮಿಸ್ಸಾದರೆ ಆತ ಕೆಟ್ಟವನೇ....? ಛೇ... ಇಲ್ಲ..
ಹಾಗಂತ ಒಂದೋ ಎರಡೋ ಗುಣಗಳು, ಕೆಟ್ಟ ವ್ಯಕ್ತಿ ಎಂದು ಪ್ರತಿಬಿಮ್ಬಿತನಾದ ವ್ಯಕ್ತಿಯಲ್ಲಿ ಇದ್ದಾಕ್ಷಣ ಆತ ಒಳ್ಳೆಯವನೇ...?


ಒಳ್ಳೆಯ ತನ ಅನ್ನುವುದನ್ನು ಅಂದಾಜಿಸುವುದು ಹೇಗೆ...?
ಅದನ್ನು ಅಳೆಯುವ ಮಾನದಂಡ ಯಾವುದು...?ಸ್ಕೇಲ್ ಯಾವುದು...? [ಧೈರ್ಯವನ್ನಾದರೆ ಈಗೀಗ ಮೀಟರಿನಲ್ಲಿ ಅಳೆಯುತ್ತಾರೆ... ದರ್ಶನ್ ಸಿನಿಮಾಗಳಲ್ಲಿ....!!!!]


ಈ ತರದ ವಿಚಾರಗಳು ನನ್ನ ತಲೆ ತಿನ್ನುತ್ತವೆ ಆಗಾಗ..
ಬೆಳಿಗ್ಗೆ ಟೀ ಕಪ್ಪನ್ನು ಟೀಪಾಯ್ ಮೇಲಿಟ್ಟು ಪೇಪರಿನಲ್ಲಿ ತಲೆ ಹುದುಗಿಸಿ ಕೊಂಡಿದ್ದ ನನ್ನ ಪತಿದೇವರನ್ನು ಕರೆದೆ...


ರೀ..... ''

ಏನು ನಿನ್ನ ಸಮಸ್ಯೆ...? ''


ನಾ ಕರೆವ ಧಾಟಿಯಲ್ಲಿಯೇ ಇವರಿಗೆ ಸಮಸ್ಯೆಯೋ.. ಸಲ್ಲಾಪವೋ .... ಸಮಾಚಾರವೋ ಗೊತ್ತಾಗಿಬಿಡುತ್ತದೆ...!!ನನ್ನನ್ನ ಅಷ್ಟು ಚನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಇವರು......!!! ನನ್ನ ಈ'' ಒಳ್ಳೆಯತನ ''ದ ಸಮಸ್ಯೆಯನ್ನು ಇವರ ಮುಂದೆ ಸುರುವಿದೆ. [ಅರುಹಿದೆ ಇದರ ವುತ್ಪ್ರೆಕ್ಷಾಲಂಕಾರ--ಸುರುವಿದೆ...] ಅದು ಗುಪ್ಪೆಯಾಗಿ,ರಾಶಿಯಾಗಿ, ಗುಡ್ದವಾಗಿ ಅದರ ಹಿಂದಿರುವ ನಾನು ಕಾಣದೆ ಸಮಸ್ಯೆಯೊಂದೆ ಕಂಡು ಸಮಸ್ಯೆಯನ್ನೇ ಕಟ್ಟಿಕೊಂಡಿದ್ದೀನಾ ಎನ್ನುವ ಸಮಸ್ಯೆ ಏನಾದರೂ ನನ್ನವರಿಗೆ ಶುರುವಾಗಿದೆಯಾ... ಎನ್ನುವುದು ನನ್ನ ಇತ್ತೀಚಿನ ಸಮಸ್ಯೆಯಾಗಿದೆ...!!!!! ಇರಲಿ..


''ಒಳ್ಳೆಯವರು.. ಒಳ್ಳೆಯತನ... ಅಂದರೇನು..? ''

''ನಿನಗೆ ಗೊತ್ತಿಲ್ವಾ..? ''

''ಗೊತ್ತಾದಂತೆ ಅನ್ನಿಸುತ್ತೆ...ಆದರೂ ಸ್ವಲ್ಪ ಕನ್ಫ್ಯೂಜನ್ . ನೀವು ಹೇಳಿದ ಮೇಲೆ ಸರಿಯಾಗಿ ಅರ್ಥವಾಗತ್ತೆ...''

''ನೋಡೇ.. ಒಳ್ಳೆಯತನ ಅಂತ ಅಂದ್ರೆ ಅದು ನೋಡುವವರ , ಅನುಭವಿಸುವವರ ದೃಷ್ಟಿಯಲ್ಲಿ, ಅನುಭವದಲ್ಲಿ ಇರುತ್ತೆ...
ಎಲ್ಲರೂ ಎಲ್ಲ ವಿಚಾರಗಳಲ್ಲೂ , ಎಲ್ಲರಿಗೂ ಎಲ್ಲಾ ಸಮಯದಲ್ಲೂ ಒಳ್ಳೆಯವರಾಗಿ ಇರಬೇಕೆಂದಿಲ್ಲ...
ಕಳ್ಳನನ್ನು ಹಿಡಿದ ಪೋಲೀಸ್ ಜನರ ದೃಷ್ಟಿಯಲ್ಲಿ ಒಳ್ಳೆಯವ .. ಕಳ್ಳನ ದೃಷ್ಟಿಯಲ್ಲಿ ಕೆಟ್ಟವ..
ಇಲ್ಲಿ ಕರ್ತವ್ಯ ಪ್ರಜ್ಞೆ ಇದೆ..ಒಬ್ಬ ಕಳ್ಳನಿಂದ ಹಲವರಿಗೆ ಆಗುವ ತೊಂದರೆಯನ್ನು ಪರಿಗಣಿಸಿ ಆತ ಕೆಟ್ಟವನು ಎಂದು ತಿಳಿಯುತ್ತೇವೆ.... ''


''ಕಳ್ಳತನ ಕೆಟ್ಟದ್ದೇ...''

''ಇರು.. ಒಮ್ಮೆ ಅದೇ ಕಳ್ಳ ಸಹಕಳ್ಳರೊಡಗೂಡಿ ಯಾವುದೋ ಮನೆಗೆ ಡಕಾಯಿತಿಗೆ ಹೋದ ಎಂದಿಟ್ಟುಕೊಳ್ಳೋಣ. ಅಲ್ಲಿ ಎಲ್ಲವನ್ನೂ ದೋಚಿದ ಮೇಲೆ ಸಂಗಡಿಗನೊಬ್ಬ ಆ ಮನೆಯ ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದಾಗ ಈ ಕಳ್ಳ ತಡೆದ ಎಂದಿಟ್ಟುಕೊಳ್ಳೋಣ... ಆ ಹೆಂಗಸಿನ ದೃಷ್ಟಿಯಲ್ಲಿ ಈ ನಮ್ಮ 'ಕಳ್ಳ' ದೇವರೇ ಆಗುವುದಿಲ್ಲವೇ...? ಆಪದ್ರಕ್ಷಕ ಶ್ರೀ ಕೃಷ್ಣ ಪರಮಾತ್ಮನೇ ಆಗುವುದಿಲ್ಲವೇ..?''

''ಹೌದು..ಕೆಲಸದವಳು ಹೇಳಿದ್ದಳು .. ಅಕ್ಕ .....ಶ್ರೀರಾಮನಂತ ಒಳ್ಳೆ ಗಂಡನ್ನ ಕೊಡಪ್ಪಾ ಅಂತ ಮಾತ್ರಾ ಬೇಡಿ ಕೊಳ್ಳಬಾರದು.. ಬಸರೀ ಹೆಂಡತೀನ ನಡೂ ಕಾಡಲ್ಲಿ ಬಿಟ್ಟು ಬರ್ತಾನೆ..ಕೃಷ್ಣನ ತರದ ಗಂಡ ಸಿಕ್ಕಿದರೂ ಪರವಾಗಿಲ್ಲ.. ಯಾರಿಗೂ ಮೋಸ ಮಾಡದೆ ಕೊನೆ ಪಕ್ಷ ಬಾಡಿಗೆ ಮನೆನಾದ್ರೂ ಮಾಡಿ ಇಟ್ಟುಕೊಳ್ತಾನೆ .....!!! ಅಂತ. ''

''ಹೌದು .. ಇಲ್ಲಿ ಸನ್ನಿವೇಶ, ಸಮಯ, ಸಂದರ್ಭ , ಆವಶ್ಯಕತೆ ಎಲ್ಲ ಅಂಶಗಳೂ ಒಳಗೊಂಡಿರುತ್ತವೆ..
ಒಬ್ಬನಿಗೆ ಒಳ್ಳೆಯದಾದದ್ದು ಇನ್ನೊಬ್ಬನಿಗೆ ಕೆಟ್ಟದ್ದಾಗಿ ಪರಿಣಮಿಸಬಹುದು.. ''


''.........''

''ತರಕಾರಿ ಮಾರುವವರೊಂದಿಗೆ ಚೌಕಾಸೀ ಮಾಡುತ್ತೀರಲ್ಲ...ನೀವು ಹೆಂಗಸರು... ಐದು ರೂಪಾಯಿ ಆಲೂಗಡ್ಡೆಯನ್ನಮೂರೇ ರೂಪಾಯಿಗೆ ಆತ ಕೊಟ್ಟರೆ ಅವನು ಒಳ್ಳೆಯವನು.ಅವನ ಲಾಭ ಮುರಿದುಕೊಂಡ ನೀವು.... ಅವನಿಗೆ ಕೆಟ್ಟವರಾಗುತ್ತೀರಿ.... ಹೀಗೆ.''


''ಒಳ್ಳೆಯತನಕ್ಕೆ ನಾನಾ ತರದ ಮುಖಗಳಿವೆ... ಕೆಟ್ಟತನದಂತೆಯೇ......ನಾಣ್ಯದ ಎರಡು ಮುಖದಂತೆ ಯಾವುದು ಒಳ್ಳೆಯತನವೋ ಅದಕ್ಕೆ ಸಂಬಂಧಿಸಿದಂತೆ ತದ್ವಿರುದ್ಧ ಕೆಟ್ಟ ತನವೂ ಇರುತ್ತದೆ...ಆಲ್ವಾ......?''


''ಹೌದು... ಮತ್ತು ಒಳ್ಳೆಯತನ ''ಆ ಕ್ಷಣವನ್ನು 'ಅವಲಂಬಿಸಿರುತ್ತದೆ....''ನಮಗೆ ಸಹಾಯ ಬೇಕಿದ್ದಾಗ ಯಾರು ಆ ಕ್ಷಣದಲ್ಲಿ ಸಹಾಯ ಮಾಡುತ್ತಾರೋ ಅದು ಅವರ ಒಳ್ಳೆಯತನ... ಬೇರೆಯವರಿಗೆ ಅವರು ಕೆಟ್ಟವರೆ ಇದ್ದಿರಲೂ ಬಹುದು..
ಉದಾಹರಣೆಗೆ...ನೀನು ರಸ್ತೆಯಲ್ಲಿ ಹೋಗುತ್ತಿರುತ್ತೀಯ... ತಲೆಸುತ್ತು ಬಂದು ಬೀಳುತ್ತೀಯ ಅಂದುಕೋ .. ಅಲ್ಲಿ ಯಾರೋ ದಾರಿಹೋಕರೊಬ್ಬರು ನೀರು ತಂದು ಕುಡಿಸುತ್ತಾರೆ . ಸಂಬಂಧವೇ ಇರದ ಜನ ಸಹಾಯ ನೀಡುತ್ತಾರಲ್ಲಾ.. ಅದು ಆ ಕ್ಷಣದ ಸಾಮಾಜಿಕ,ನೈತಿಕ , ಮಾನವೀಯ ಪ್ರಜ್ಞೆ...''


''ಕೆಲವೊಮ್ಮೆ ನಮ್ಮ ಸ್ವಾರ್ಥಕ್ಕಾಗಿ ಕೂಡಾ ನಾವು ಒಳ್ಳೆಯವರಾಗಿರುತ್ತೇವೆ, ಮತ್ತು ಬೇರೆಯವರು ನಮಗಾಗಿ ಎಷ್ಟು ಖರ್ಚು ಮಾಡಲು ತಯಾರಿರುತ್ತಾರೆ ಅಲ್ಲದೆ ಅವರಿಂದ ಎಷ್ಟು ಲಾಭವಿದೆ ಎನ್ನುವುದರ ಮೇಲೂ ಇನ್ನೊಬ್ಬರ ಒಳ್ಳೆಯತನವನ್ನು ಅಳೆಯುತ್ತೇವೆ...ನಾವು......!!!!''

'' ಒಳ್ಳೆಯತನ ತೋರಿಸಲು ಕೆಲವೊಮ್ಮೆ ಸಮಯ ಕೂಡಾ ಇರಬೇಕಾಗುತ್ತೆ .... ಅನಿವಾರ್ಯ ಸಮಯಗಳನ್ನು ಬಿಟ್ಟು ಉಳಿದಂತೆ ನಾವು ನಮ್ಮ ಒಳ್ಳೆಯ ತನ ತೋರ್ಪಡಿಸಲು ಸಮಯ ಇದೆಯಾ.. ಇಲ್ಲವಾ ಅನ್ನುವುದನ್ನೂ ಅವಲೋಕಿಸುತ್ತೇವೆ..

''ಮತ್ತು ಕೆಲವೊಮ್ಮೆ ಗಿಲ್ಟ್ ಕಾಡದಿರಲು ಕೂಡಾ ನಾವು ಒಳ್ಳೆಯ ತನ ತೋರಿಸುತ್ತೇವೆ ... ''

'' ಅಂದರೆ ಒಳ್ಳೆಯತನ ಅನ್ನುವುದು... ಇರುವ ಬೇರೆಲ್ಲ ಗುಣಗಳಿಗಿಂತ ವ್ಯಕ್ತಿಯ ತತ್ ಕ್ಷಣದ ನಿರ್ಧಾರವನ್ನು, ಆತನ ಮಾನವೀಯ ಪ್ರಜ್ಞೆಯನ್ನು ಅವಲಂಬಿಸಿರುತ್ತದೆ.....ಗೊತ್ತಾಯ್ತಾ...? ''

''ಗೊತ್ತಾಯ್ತು.. ಮೊದಲೇ ಗೊತ್ತಿದ್ದರೂ ಹೀಗೆ ಸುಮ್ಮನೆ.........''

''ಈಗ ನೀನು ಇನ್ನೂ ಸುಮ್ಮನಿರದಿದ್ದರೆ... ನನ್ನ ಪೇಪರ್ ಓದುವ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದಕ್ಕಾಗಿ ಈ ಕ್ಷಣದಲ್ಲಿ ನಾನು ಕೆಟ್ಟವನಾಗ ಬೇಕಾಗುತ್ತದೆ.......!''


'' ಅಂದರೆನಿಮ್ಮ ಮಾತಿನರ್ಥ ನಾನು ಕೆಟ್ಟವಳು ಅಂತಾ ಅಲ್ವೇ....? ''

'' ಅದರ ಬಗ್ಗೆ ಹೇಳಬೇಕು ಅಂದರೆ .... ಈಗ ಈ ತಣಿದ ಟೀಯನ್ನು ಒಳಗೆ ತಗೊಂಡು ಹೋಗಿ ಹಾಗೇ ಬಿಸಿ ಮಾಡಿ ತರದೇ ಹೊಸತಾಗಿ ಟೀ ಮಾಡಿ ತಂದರೆ , ಕುಡಿದಾದ ಮೇಲೆ ನೀನು ಒಳ್ಳೆಯವಳೋ......,... ಎಂಬುದರ ಬಗ್ಗೆ ಆಲೋಚನೆ ಮಾಡುತ್ತೇನೆ.'' ಎನ್ನುತ್ತಾ ನನ್ನ ಪ್ರತಿಕ್ರಿಯೆಗೂ ಅವರಿಗೂ ಸಂಬಂಧವಿಲ್ಲವೇನೋ ಎಂಬಂತೆ ಪೇಪರಿನಲ್ಲಿ ಮುಖ ಮುಚ್ಚಿಕೊಂಡರು....




[ ಈ ಪೋಸ್ಟಿನಲ್ಲಿ ಸಾಕಷ್ಟು ದೋಷಗಳು ಕಾಣಿಸಿರ ಬಹುದು .. ಅದು ನೆಟ್ಟಿನ ತಪ್ಪು.... ನನ್ನದಲ್ಲ ..... ಇದನ್ನು ಓದಿ ಯಾರೂ ಈ ಕ್ಷಣದಲ್ಲಿ ನನ್ನ ಬಗ್ಗೆ ಕೆಟ್ಟವರಾಗದಿದ್ದರೆ ಸಾಕು...!!!!]