Tuesday, August 16, 2011

ಮೊಂಬತ್ತಿ ..


''ಅಮ್ಮಾ ಭ್ರಷ್ಟಾಚಾರ ಅಂದರೇನು..?'' ಮೊಂಬತ್ತಿ ಉರಿಯುವುದನ್ನೇ ತದೇಕವಾಗಿ ನೋಡುತ್ತಾ ಕುಳಿತ ನನ್ನ ಮಗ ಕೇಳಿದ. 




ನಿನ್ನೆ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ  ಆಂದೋಲನಕ್ಕೆ  ಬೆಂಬಲ ಸೂಚಿಸಿ ರಾತ್ರಿ   ಎಂಟರಿಂದ  ಒಂಬತ್ತರ  ವರೆಗೆ  ಮನೆಯ ದೀಪಗಳನ್ನೆಲ್ಲಾ ಆರಿಸಿದ್ದೆವಲ್ಲಾ .. ಅವನಿಗೆ ಅದು ಆಶ್ಚರ್ಯದ  ಸಂಗತಿಯಾಗಿತ್ತು.ಅವನಿಗೆ ನಾನು ವಿವರಿಸಿ ಹೇಳಿದ್ದು ಎಷ್ಟರ ಮಟ್ಟಿಗೆ ಅರ್ಥವಾಯಿತೋ ಗೊತ್ತಾಗಲಿಲ್ಲ. ಕತ್ತಲೆ ಅನ್ನುವುದು ಅವನಿಗೆ ಭಯ ಮೂಡಿಸಿದ್ದು ನಿಜ. 



 ಆಚೆ ಈಚೆ ಹಾರುವ ಹಾಗಿಲ್ಲ. ಮನಸ್ಸಿಗೆ ಬಂದ ಹಾಗೆ ಕುಣಿಯುವ ಹಾಗಿಲ್ಲ. ಬರೀ ಮೋಂಬತ್ತಿಯ ಬೆಳಕಿನಲ್ಲಿ ತನ್ನದ್ಯಾವುದೋ ಪುಸ್ತಕ  ತೆಗೆದು  ಬರೆಯುವುದು,  ಚಿತ್ರ ಬಿಡಿಸುವುದು ಮಾಡತೊಡಗಿದ. ನಮ್ಮಲ್ಲಿ ಯು.ಪಿ. ಎಸ್ ಇರುವುದರಿಂದ ಪವರ್ ಕಟ್ ಇದ್ದಾಗ ಕೂಡಾ ಅದರ ಅನುಭವ ಆಗುವುದೇ ಇಲ್ಲ.   ಇದು ಒಂತರಾ ಹೊಸ ಅನುಭವ ಮಕ್ಕಳಿಗೆ. ಆದರೆ ಇದರ ಹಿಂದಿನ ಉದ್ದೇಶ ಅವರಿಗೆ ಸ್ವಲ್ಪ ಯೋಚಿಸುವಂತೆ ಮಾಡಿತ್ತೆನಿಸುತ್ತದೆ.ಈಗ ಈ ವಯಸ್ಸಿನಲ್ಲಿ ಅವರಿಗೆ ಏನೂ ಅರ್ಥವಾಗದಿದ್ದರೂ ಕೂಡಾ ಅವರದ್ದೇ ಆದ ಜೀವನ ನಡೆಸುವಾಗ, ನಿರ್ಧಾರ ತೆಗೆದುಕೊಳ್ಳುವಾಗ ಈ ಸಂಗತಿ ನೆನಪಾಗಬಹುದೆಂಬ ಭರವಸೆ ನನಗೆ.ಭ್ರಷ್ಟಾಚಾರದ ವಿರುದ್ಧ  ಈ ವಯಸ್ಸಿನಲ್ಲಿ ಒಂದು ಚಿಕ್ಕದಾಗಿ ಸಂಚಲನೆ ಶುರುವಾದರೂ ಸಾಕು.




ಕತ್ತಲೆಯಲ್ಲಿದ್ದಾಗ ಬೆಳಕಿನ ಮಹತ್ವ ಗೊತ್ತಾಗುತ್ತದೆ.ಕತ್ತಲೆ ಮನದೊಳಕ್ಕೆ ತೆರೆದುಕೊಳ್ಳಲು   ಸಹಕಾರಿಯಾಗುತ್ತದೆ. ಅದು ಕತ್ತಲೆಯ ಇನ್ನೊಂದು ಮುಖ. ಬಾಹ್ಯಾಕರ್ಷಣೆಗಳು ಕತ್ತಲಲ್ಲಿ ಕಳೆದುಹೋಗಿ ಚಿಂತನೆಗಳು  ಮನದೊಳಕ್ಕೆ ಬೆಳಕು ಬೀರತೊಡಗುತ್ತದೆ. ಬಹುಷಃ ನಮಗೂ ಈಗ ಅದೇ ಆಗುತ್ತಿರುವುದು.ಈ ಭ್ರಷ್ಟಾಚಾರ, ಲಂಚ, ಶೋಷಣೆ ಇವುಗಳ ಕತ್ತಲೆಯ ಕೂಪದಲ್ಲಿದ್ದಾಗ  ಇದರ ಮುಕ್ತಿಗಾಗಿ ಒದ್ದಾಡುತ್ತೇವೆ. ದೂರದ ಬೆಳಕಿಗಾಗಿ ಕೈ ಚಾಚುತ್ತೇವೆ. ಕೈ  ಚಾಚಿದಂತೆಲ್ಲಾ ಸಿಗದೇ ದೂರ ಓಡುವ ಚುಕ್ಕೆಯನ್ನು ಹಿಂಬಾಲಿಸ ತೊಡಗುತ್ತೇವೆ.




ಸಿಗುತ್ತದೆ ಎನ್ನುವ ಚಿಕ್ಕದೊಂದು  ಆಶಾವಾದದಿಂದ. ಖಂಡಿತಾ ಸಿಗುತ್ತದೆ. ಮನಸ್ಸಿಗೆ ಹಾಕಿದ ಕರ್ಫ್ಯೂ ತೆಗೆದಾಗ!



 ಜೈ  ಅಣ್ಣಾ..