Wednesday, March 14, 2012

ಒ೦ದು ಬಸ್ಸಿನ ಪ್ರಯಾಣ..!

ಕ.ರಾ.ರ. ಸಾ.ಸಂ ಬಸ್ಸು ನಾವಿದ್ದ ಸ್ಟಾಪಿಗೆ  ಬ೦ದು ನಿಲ್ಲುತ್ತಿದ್ದ೦ತೆ ಟಿಕೆಟ್ ತೋರಿಸಿ ಲಗುಬಗೆಯಿ೦ದ ಹತ್ತಿದೆವು. ಒಂದು ದಿನದ ಮಟ್ಟಿಗೆ ನಮಗೆ ಊರಿಗೆ ಹೋಗುವುದಿತ್ತು. ದಿವಂಗತ ಮಾವ ನಮ್ಮನ್ನು ಹರಸಿ ಹೋಗಲು ಬರುವ ದಿನವಾಗಿತ್ತು. ಅದಕ್ಕೆ ಮಕ್ಕಳಿಗೆ ಒಂದು ದಿನದ ರಜೆ ಹಾಕಿಸಿ ಕರೆದೊಯ್ದಿದ್ದೆವು. ಬಸ್ಸಿನ ಒಳಗೆ ಹತ್ತುತ್ತಿದ್ದಂತೆಯೇ ಡ್ರೈವರ್ ''ಓಹೋ ಊರಿಗೆ ಹೋಗುವಾಗ ಎಲ್ಲಾ ಒಟ್ಟಿಗೆ ಹೋಗುವುದಾ...?'' ಎಂದು ಕೇಳಿದ. ನಾನೂ ನನ್ನ ಓರಗಿತ್ತಿ ಮಕ್ಕಳೊಂದಿಗೆ ಹೊರಟಿದ್ದೆವು. ಅವನಿಗೆ ಈ ಪರೀಕ್ಷಾ ಸಮಯದಲ್ಲಿ  ಬಸ್ಸಿನಲ್ಲಿ  ಜನಸಮೂಹವೇ ಕಾಣಿಸಿದಂತಾಗಿ ಆಶ್ಚರ್ಯ ಗೊಂಡಿದ್ದ.  ಅವನು  ನಮ್ಮೂರ ಬಸ್ ರೂಟಿನ ಖಾಯಂ ಡ್ರೈವರ್ರು. ನಮಗೆ ಅವನ ಪರಿಚಯವಿಲ್ಲದಿದ್ದರೂ ಅವನಿಗೆ ಮಾತ್ರಾ ಅವನ ಬಸ್ಸಿನ ರೂಟಿನ ಅಷ್ಟೂ ಮನೆಗಳಿಗೆ ಬೆಂಗಳೂರಿನಿಂದ ಯಾರ್ಯಾರು ನೆಂಟರು ಬರುತ್ತಾರೆಂಬುದು ಎಲ್ಲರಿಗಿಂತ ಚನ್ನಾಗಿ  ಗೊತ್ತು...!

ರಾತ್ರಿ  ಇಲ್ಲಿ ಬಸ್ಸು ಹತ್ತಿದರೆ ಬೆಳಕು ಹರಿಯುವ ಮುನ್ನ ಊರಲ್ಲಿರಬಹುದು. ನಮ್ಮೂರ ಕ.ರಾ.ರ. ಸಾ.ಸಂ ರಾಜ[ ಹಿಂಸೆ ]ಹಂಸ  ಬಸ್ಸು ಹತ್ತಿ ಕಾದಿಟ್ಟ ಸೀಟಿನಲ್ಲಿ ವಿರಾಜಮಾನರಾದೆವು.. ಮತ್ತು ನಾನಂತೂ ಅಲರ್ಟ್ ಆಗಿಯೇ ಕುಳಿತುಕೊಂಡೆ!   ಮತ್ತೇನಲ್ಲ ..  ಬಸ್ಸಿನ ಮೂಲನಿವಾಸಿಗಳಿಗೆ ಗೌರವ ಕೊಟ್ಟು!     ಅಗಣಿತ  ತಿಗಣೆಯ  ಗಣಗಳ ನಡುವೆ ಸುಮ್ಮನೆ ಕುಳಿತಿಹೆ ನಾನು..! ಸಮಾಜವಾದದ ಪ್ರಕಾರ  ನನ್ನದು   ತಿಗಣೆ   ಸಾಮ್ರಾಜ್ಯದ ಮೇಲಿನ ಅತಿಕ್ರಮಣ.. ಅಲ್ಲವೇ..? ತಿಗಣೆ , ಜಿರಳೆ ಮತ್ತು ಅಲೆಮಾರಿ ಜನಾಂಗದವರಾದ ಸೊಳ್ಳೆಗಳಿಗೂ ಈ ಭೂಮಿಯ ಅರ್ಥಾತ್ ಬಸ್ಸಿನ ಮೇಲೆ ಬದುಕಲು ಹಕ್ಕಿಲ್ಲವೇ..?   ಅವರ ಖಾಯಂ ಸೀಟಿನಲ್ಲಿ ನಾನು ಟೆಂಪರರಿಯಾಗಿ ಭಯ ಭಕ್ತಿಯಿ೦ದ ಕುಳಿತುಕೊಳ್ಳುವುದೇ ಕ್ಷೇಮ.

ಸುಮಾರು ಹೊತ್ತು ಬಹಳ ಹುಶಾರಿಯಿಂದಲೇ ಕುಳಿತರೂ ಕುಳಿತುಕೊಳ್ಳಲು ಪರಿಸ್ಥಿತಿ ಸುಮ್ಮನೆ ಬಿಡದು. ಶಿಶಿರ ''ಅಮ್ಮಾ ಕಥೆ ಹೇಳು'' ಅಂದ.  ಅವನಿಗೆ ಕಥೆ ಹೇಳಿದ್ದು ಅಕ್ಕಪಕ್ಕದವರಿಗೆ ಹರಿಕಥೆಯೋ ಶನಿಕಥೆಯೋ ಆಗಿ ಪರಿಣಮಿಸಿದರೆ ಅದಕ್ಕೆ ನಾನು ಜವಾಬ್ಧಾರಳೇ..?  ಅಷ್ಟೊತ್ತಿಗೆ ಬಸ್ಸಿನ ತೊನೆದಾಟ ಮತ್ತು ಬ್ರೇಕು ಹಾಕುವುದು, ಹೊಂಡ ಹಾರಿ ಮುಗ್ಗರಿಸುವುದು.. ಇದರೊಳಗೆ ನನ್ನ ಹುಶಾರಿಯೆಲ್ಲಾ ಹಾರಿಹೋಯಿತು.ಮತ್ತು ಎಲ್ಲಿವರೆಗೆ ಸಾಧ್ಯ..?

ಒಮ್ಮೆಯಂತೂ ಹೀಗೆ ಊರಿಗೆ ಹೋಗುವಾಗ ಪುಟ್ಟ ಶಿಶಿರನಿಗೆ ಸಿಕ್ಕಾಪಟ್ಟೆ ತಿಗಣೆ  ಕಚ್ಚಿ  ಬಿಳಿಯ ಆಗಸದಲ್ಲಿ ಕೆಂಪು ನಕ್ಷತ್ರಗಳು ಹೊಳೆಯುವಂತೆ  ಮುಖ  ಥಳ ಗುಟ್ಟುತ್ತಿತ್ತು.    ಗುಲಾಬಿ ಕಾಲ್ಗಳಲ್ಲಿ ಮದರಂಗಿಯ ಬೊಟ್ಟುಗಳನ್ನಿಟ್ಟಂತೆ   ತಿಗಣೆ ಚಿತ್ತಾರ ಬಿಡಿಸಿತ್ತು.
 ಸ್ವಲ್ಪ ಹೊತ್ತಿಗೆ ಅವ ನಿದ್ದೆ ಹೋದ. ನನಗೆ  ಹಾಗೆಲ್ಲಾ ನಿದ್ದೆ ಬಂದು ಬಿಡುವುದೇ.. ಅದೂ ಹೀಗೆಲ್ಲಾ ಸಂಗತಿ  ಇರುವಾಗ.

ಬಸ್ಸು ಬಹುಷಃ ಖರೀದಿಸಿದ  ಮೊದಲಲ್ಲಿ ಹೊಸದಾಗಿಯೇ ಇತ್ತೇನೋ..! ನಮ್ಮೂರ ಬಸ್ಸು .. ಅದು. ಅದರ  ಬಗೆಗೆ ಅಭಿಮಾನ ಇರಬೇಕಾದ್ದು ನ್ಯಾಯ.   ನಾನೂ ಹಾಗೆಯೇ ಒರಗಿಕೊಂಡೆ. ನನ್ನ ತಲೆ ಕಡೆಯೇ ಒ೦ದು ಲೈಟ್ ಇತ್ತು.  ಅದರ ಹೊರಗಾಜು ಒಡೆದುಹೋಗಿ ಸೀಳು ಸೀಳಾಗಿತ್ತು.. ನನ್ನ ಪ್ರಕಾರ ಯಾರೋ ಎಂಟಡಿ ಇರುವವರ ತಲೆಗೆ ತಾಗಿ ಅದು ಒಡೆದಿರಬಹುದು! ಆದರೂ ಬೆಳಕಿತ್ತು..!   ಒಂದೆರಡು ಸೊಳ್ಳೆಗಳು ಮುಖದ ಮೇಲೆ ಹಾರಾಡಿ  ತಮ್ಮ  ಸಂಗೀತವನ್ನು ಚೆನ್ನಾಗಿ  ನುಡಿಸಿ ಹಾರಿಹೋದವು. ಲೈಟೆಲ್ಲಾ ಆರಿಸಿ ಸುಮಾರು ಹೊತ್ತಾಯ್ತು .ತಣ್ಣನೆಯ ಗಾಳಿ ತನ್ನ ಚಾಮರ ಸೇವೆಯನ್ನು ಒದಗಿಸಲು ತೊಡಗಿತು.ಕಿಟಕಿ ಗ್ಲಾಸ್ ಮುಚ್ಚಿದೆನಾದರೂ ಅದಕ್ಕೆ ಮತ್ತಿನ್ನೆಂತಾ ದಾಕ್ಷಿಣ್ಯವೋ ಏನು ಕಥೆಯೋ ಅದು ನಿಧಾನಕ್ಕೆ ಜಾರಿ ಜಾರಿ ಗಾಳಿಯ ಸೇವೆಯನ್ನು ಜಾರಿಯಲ್ಲಿರಿಸಿತು.ತುಂಬಾ ಚಳಿ  ಆಗುತ್ತಿತ್ತು. ಮನೆಯಿಂದ ಹೊರಡುವಾಗ ಎಷ್ಟು ಸೆಖೆ..  ಬಸ್ಸಿನಲ್ಲಿ  ವಿಪರೀತ ಚಳಿ..!   ಹವಾಮಾನ  ಕ್ಷಣ ಕ್ಷಣ  ಬದಲಾಗುತ್ತದೆ.  ಮುಂದೆ ಹೋಗಬೇಕೋ  ಹಿಂದೆ ಹೋಗಬೇಕೋ  ಅದಕ್ಕೂ ಕಾಲದ ಕನ್ಫ್ಯೂಜನ್ನು. ಕಾಣದ ಪೊಲ್ಯೂಷನ್ನು.
ಬಸ್ಸಿನ   ಸೀಟು ಮಾತ್ರ ಒಳ್ಳೆ ಜಾರುಬಂಡಿಯನ್ನು ನೆನಪಿಸಿತು ನನಗೆ. ಬಸ್ಸು ಮುಂದೆ ಮುಂದೆ ಸಾಗಿದಂತೆ ಸೀಟಿನಲ್ಲಿ ಕುಳಿತವರು ಮೆಲ್ಲ ಮೆಲ್ಲ ಧರೆಗೆ..


ಮಧ್ಯ ರಾತ್ರಿಯಷ್ಟಿರಬಹುದು. ನನಗೆ ನಿದ್ರೆ ಆವರಿಸಿಕೊಳ್ಳುತ್ತೆ ಅನ್ನುವಷ್ಟರಲ್ಲಿ ಬಾಗಿಲು ನಿಧಾನ ಜಾರಿ ಗಾಳಿ ನುಗ್ಗುತ್ತಿತ್ತು. ಕಿವಿಗೆ ಶಾಲು ಸುತ್ತಿಕೊಂಡರೂ ಮುಖಕ್ಕೆ ಗಾಳಿಯ ಬಡಿತ.  ಆಡ್ರಾ ಡ್ಡ ಣಾಕು ಮುಕಾ  ಣಾಕು ಮುಕಾ.. ಎ೦ದು ಮುಂಗುರುಳು ಮುಖದ ಮೇಲೆ ನರ್ತಿಸುತ್ತಿತ್ತು.

ಆಗ  ನಿಧಾನಕ್ಕೆ  ಕೇಳಿಸ ತೊಡಗಿತ್ತು ,   ಕಟ ಕಟ.. ಕಟ ಕಟ... ಮಧ್ಯೆ ಮದ್ಯೆ ಜರೀಲ್ ...ಜರೀಲ್ .. ಅನ್ನುವಂತೆ ಒಡಕು ಗೆಜ್ಜೆಯ ಸ್ವರ... ಏನದು ಸದ್ದು..? ಯಾವುದರದ್ದು..?  ಸ್ಮಶಾನದಲ್ಲಿ ಎಲುಬು ಕಡಿಯುವ ಶಾಕಿನಿ ಡಾಕಿಣಿ ಪಿಶಾಚಗಳಿರಬಹುದೇ..? ಅಥವಾ ಮೊಹಿನಿಯೋ , ನಾಗವಲ್ಲಿಯೋ..?  ಯಾವದಾದರೂ ಸಂಸ್ಕಾರ ಸಿಗದ ಪ್ರೇತ ದಾರಿ ತಪ್ಪಿ  ಬಸ್ಸಿಗೆ ಬಂದಿರಬಹುದೇ..?

  ಥತ್ಥೆರಿಕೆ .... ಮುಂದಿನ ಸೀಟಿನ ಕಿಟಕಿಯ ಗ್ಲಾಸೂ.. ಅದರ ಮುಂದಿನ ಸೀಟಿನದೂ.. ಅದಕ್ಕೂ ಮುಂದಿನ .. ಹಿಂದಿನ ಕಿಟಕಿಯ ಗ್ಲಾಸುಗಳು ಇಂಗ್ಲೀಷರು  ಸ್ವಾತಂತ್ರ್ಯ ಕೊಟ್ಟಿದ್ದು ತಮಗೇನೆ ಎಂಬಂತೆ ಹಿಂದೆ ಮುಂದೆ ಅಲುಗಾಡುತ್ತಾ.. ಸದ್ದು ಮಾಡುತ್ತಾ..  ಸರ್ವ ಸ್ವಾತಂತ್ರ್ಯವನ್ನೂ ಅನುಭವಿಸುತ್ತಿದ್ದವು.. ಮಕ್ಕಳೆಲ್ಲಾ ನಿದ್ರೆಯಲ್ಲಿ ಸಿಲುಕಿಕೊಂಡಿರುವುದರಿಂದ ಅದನ್ನು ವಿವರಿಸಿ ಹೇಳುವ ಪ್ರಮೆಯವೊಂದು ಬರಲಿಲ್ಲ. ಇಲ್ಲದಿದ್ದರೆ ಹಾರರ್ ಸಿನಿಮಾದ ಪ್ರಭಾವದಿಂದ ಸದ್ದು  ಭೂತದ್ದೇ ಇರಬಹುದು, ಎಂದು ಮಕ್ಕಳು ವಾದ ಹೂಡಿ..ತೋರಿಸು ಎಂದೂ.. ಅದರ ಕುರಿತಾಗಿ ಪ್ರಶ್ನೆ ಕೇಳುತ್ತಾ ಬಸ್ಸಿನ ಎಲ್ಲರೂ ನನ್ನನ್ನು ಪ್ರೇತವನ್ನು ನೋಡುವಂತೆ ನೋಡಿ ಬಿಡುವ ಪ್ರಸಂಗವೊಂದು ತನ್ನಷ್ಟಕ್ಕೆ ತಾನೇ ತಪ್ಪಿ ಹೋಯಿತು.

ಆದರೆ ಪ್ರತಿ ಸಲದಂತೆ ಈ ಸಲ ತಿಗಣೆ  ಕಡಿಯದೇ,  ಈ ಮೊದಲು  ಕಚ್ಚಿಸಿಕೊಂಡ  ಸಂತ್ರಸ್ತ  ಜನರ ಒಕ್ಕೊರಲ  ಆರ್ತನಾದವನ್ನು ಆಲಿಸಿ ಅದರ   ಸಂತಾನವನ್ನು ಸರಕಾರದವರು ಕಡಿತಗೊಳಿಸಿದ್ದುದು,  ಅದರಿಂದಾಗಿ ಈ ಬಸ್ಸಿನಲ್ಲಿ ಅವುಗಳ  ಸಂಸಾರವೇ ಸರ್ವನಾಶಗೊಂಡಿದ್ದುದು  ನನಗೆ ಬೆಳಗಾದ ನಂತರ ಜ್ಞಾನೋದಯವಾಯಿತು..! ಜಿರಳೆಗಳೂ ತಮ್ಮ ವಾಸ್ತವ್ಯವನ್ನು ಬೇರೆಡೆಯಲ್ಲೆಲ್ಲಿಯೋ ಹೂಡಿ ಅವುಗಳೂ ಕಾಣದಾಗಿ ಬಸ್ಸು ಪ್ರಾಯಶಃ   ಬಣ ಬಣ ಗುಟ್ಟಿತು.ಹಾಗಾಗಿ ಬರಿಯ ಸಂಗೀತಸೇವೆಯೇ ಅಂದಿನ  ಪ್ರಧಾನ ಆಕರ್ಷಣೆಯಾಗಿತ್ತು.

ಅಂತೂ ಯಾವುದೇ ಪ್ರಾಣಿ ರೂಪೀ  ಮಾರಕಾಸ್ತ್ರಗಳ ಹಾವಳಿಗೊಳಗಾಗದೆ ಸಾವಕಾಶ ಮನೆ ತಲುಪಿದೆವು.. ರಾತ್ರಿ ಪುನಃ ವಾಪಾಸು ಬೆಂಗಳೂರಿಗೆ ಹೊರಟು ಅತಿ ಬುದ್ಧಿವಂತಿಕೆಯಿಂದ ಪ್ಲಾನ್ ಮಾಡಿ  ಸ್ಲೀಪಿಂಗ್ ಕೋಚ್ ಬಸ್ಸಿನಲ್ಲಿ ಬಂದೆವು. ಅದು ಒಳ್ಳೆ ರೋಲರ್ ಕೋಸ್ಟರ್ ತರಾ ನಮ್ಮೂರ ತಿರುಮುರುವು ರಸ್ತೆಯಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಬೀಸಿ ಬೀಸಿ ಒಗೆಯುತ್ತಾ ಜಾತ್ರೆಯ ಅನುಭವವನ್ನು   ನೆನಪು ಮಾಡಿಕೊಳ್ಳುತ್ತಾ ಬೆಂಗಳೂರು ತಲುಪಿಸಿದ್ದು ಈಗ ಇತಿಹಾಸ....!



Saturday, March 3, 2012

ಮಂಟಪ ಕಟ್ಟಿರಿ..!


 ಮದುವೆ, ಉಪನಯನ, ಚೌಲ, ನೂತನ  ಗೃಹಪ್ರವೇಶ  ಹೀಗೆ   ಕಾರ್ಯದ ಮನೆಗಳು ಸಾಲು ಸಾಲಾಗಿ ಬರುತ್ತಿವೆ.. ಒಂದರ ಹಿಂದೊಂದು, ಜೊತೆ ಜೊತೆಗೆ  ಒಮ್ಮೆಲೇ ರಶ್ಯಿನಲ್ಲಿ ಶುರುವಾಗುತ್ತವೆ. ಕೆಲಸಕಾರ್ಯಗಳು ವೇಗ ಗತಿಯಲ್ಲಿ ಸಾಗುತ್ತವೆ.  ಮದುವೆ, ಉಪನಯನಕ್ಕೆ ಮಂಟಪ ಕಟ್ಟುವ ಚತುರರಿಗೆ ತಮ್ಮ  ಕಾರ್ಯ ಕೌಶಲ್ಯವನ್ನು ತೋರಲು ಒಳ್ಳೆಯ ಅವಕಾಶ ಸಿಗುತ್ತದೆ.  ಹೆಚ್ಚಿನ ಖರ್ಚಿಲ್ಲದೆ ಸುಲಭವಾಗಿ ಕಟ್ಟಬಹುದಾದ ಮಂಟಪಕ್ಕೆ ಒಂದು ಚಂದದ ಉದಾಹರಣೆ ಇಲ್ಲಿದೆ..

 ಬೆಲ್ಲದ ಡಬ್ಬಕ್ಕೆ ಬಣ್ಣ ಬಳಿದು ಮೇಲಿಂದ ಶೇಡಿ ಬರೆದದ್ದು..










ಪಾಂಡವರಡಿಕೆ  ಗಿಡವನ್ನು   ಕಿತ್ತು   ತಂದು  ಡಬ್ಬದಲ್ಲಿ ಮರಳು ಹಾಕಿ ಅದರಲ್ಲಿ ಹುಗಿಯಲಾಗಿದೆ.ಮನೆಯ ಹಿತ್ತಲಲ್ಲಿರುವ ಕೆಲ ಚಂದದ ಗಿಡದ ಹೆಣಿಕೆಗಳನ್ನು ಕಿತ್ತು ತಂದು  ಡಬ್ಬದಲ್ಲಿ ಊರಲಾಗಿದೆ.


 ಖರ್ಚಿಲ್ಲದ ಚಂದದ ಮಂಟಪ 
 ಶೇಡೀ  ಬರೆಯಲು  ಮಾತ್ರಾ  ಎರಡು  ದಿನ  ನನಗೆ  ಖರ್ಚಾಯಿತು...:))   ಅಣ್ಣನ  ಮಗನ ಉಪನಯನಕ್ಕೆ..