Tuesday, July 31, 2012

ಬಾರದ ಮಳೆಯಲೊಂದಷ್ಟು ಕೊಡೆಯ ನೆನಪುಗಳು

ಹೊರಗಡೆ ಸುಯ್ಯನೆ ಗಾಳಿ ಬೀಸುತ್ತಿದೆಯೇ ಹೊರತೂ ಹನಿ ಮಳೆಯಿಲ್ಲ.  ಮಳೆಯಿರದಿದ್ದರೂ ನಮ್ಮನೆಯಲ್ಲಿ ಕೊಡೆಗಳಿಗೆ ಬರಗಾಲವಿಲ್ಲ.ಒಂದು ಐದಾರು ಕೊಡೆಗಳಿವೆ.    ಒಂದು ದಿನವೂ ಮಳೆಗೆ ಕೊಡೆ ಹಿಡಿದಿಲ್ಲ.ಆದರೂ  ಅದರಲ್ಲಿ ಒಂದೂ ನೆಟ್ಟಗಿಲ್ಲ.   ಕಡ್ಡಿಗಳು ಮುರಿದು, ಹೊಲಿಗೆ ಬಿರಿದು, ಬಿಚ್ಚಿದರೆ ಸೊಂಟ ನೋವಿನಿಂದ ಬಳಲುವ  ಅಜ್ಜಿಯಂತೆ ಕಾಣಿಸುತ್ತವೆ. ಅಂಗಡಿಗಳಲ್ಲಿ ಕಾಣುವ ಬಣ್ಣ ಬಣ್ಣದ ಛತ್ರಿಗಳನ್ನು ಕಂಡೊಡನೆ ಪ್ರತೀಸಲ  ನನ್ನ ಮಗಳು ಛತ್ರಿ ಕೊಳ್ಳುವ ವಿಚಾರವನ್ನು  ನೆನಪಿಸುತ್ತಾಳೆ.  ಈಗಿನ ಬಹು ಮಡಿಕೆಗಳ ಛತ್ರಿಗಳು  ವ್ಯಾನಿಟೀ ಬ್ಯಾಗಿನಲ್ಲಿ ಇಟ್ಟುಕೊಂಡು ಹೋಗಲು ಚಂದವೇ ಹೊರತೂ ಮಳೆಗೆ ಬಿಚ್ಚಿಕೊಂಡು ಹೋಗಲಲ್ಲ. ಮಳೆ ಬಂದ್ರೆ ಇರಲಿ ಅನ್ನುವುದಕ್ಕೋಸ್ಕರ ಅದನ್ನೇ ನನ್ನ ಮಗಳು ಬ್ಯಾಗಿನಲ್ಲಿ ಪುಸ್ತಕಗಳೊಂದಿಗೆ  ಪ್ಲಾಸ್ಟಿಕ್ ಕವರಿನಲ್ಲಿ ಇಟ್ಟುಕೊಂಡು ಶಾಲೆಗೆ   ಹೋಗುತ್ತಾಳೆ. ಮಳೆ ಬಂದರೆ ಛತ್ರಿ ನೆನೆಯಬಾರದು ಅನ್ನುವ ಸದುದ್ಧೇಶ!  ನನ್ನ ಮಗ ಮಾತ್ರಾ ಸ್ನಾನದ  ಕೋಣೆಯ  ಶವರಿನಡಿಯಲ್ಲಿ ಛತ್ರಿ ಬಿಚ್ಚಿ ನಿಂದು  ಮಳೆಗಾಲದ ಸ್ವಾದವನ್ನನುಭವಿಸುತ್ತಾನೆ.  ಅಲ್ಲೇ ಕುಣಿದಾಡುತ್ತಾ ಛತ್ರಿಯ   ಅಷ್ಟೂ ಕಡ್ಡಿಗಳನ್ನೂ  ಮುರಿದು ಹಾಕುತ್ತಾನೆ.

ನಾವೆಲ್ಲಾ ಶಾಲೆಗೆ ಹೊಗುವ ಸಮಯದಲ್ಲಿ ಹೀಗೆಲ್ಲಾ ತರತರದ ಛತ್ರಿಗಳ ಆಯ್ಕೆಗಳಿಗವಕಾಶವಿರಲಿಲ್ಲ. ಆಗ ನಮಗೆ  ಇದ್ದ ಛತ್ರಿಗಳಲ್ಲೇ ಅದರ ಹ್ಯಾ೦ಡಲ್ಲಿನ ಬಣ್ಣ ಮತ್ತು ಅದರ ಕ್ವಾಲಿಟಿ ಪ್ರತಿಷ್ಟೆಯ ವಿಚಾರವಾಗಿತ್ತು! ಸ್ಟೀಲ್ ಕೋಲಿನ ಪ್ಲಾಸ್ಟಿಕ್ ಹ್ಯಾ೦ಡಲ್ ಆದರೆ ಅದು ಹೆಗ್ಗಳಿಕೆ.  ಆಪ್ಪಯ್ಯ ನನಗೆ ಮತ್ತು ನನ್ನ ಅಕ್ಕನಿಗೆಂದೇ  ಪ್ಲಾಸ್ಟಿಕ್ ಹ್ಯಾ೦ಡಲಿನ ಎರಡು ಕೊಡೆಗಳನ್ನು ತ೦ದು ಕೊಟ್ಟಿದ್ದ.  ಮರದ ಕೋಲಿನ ಛತ್ರಿ ಇದ್ದವರಿಗೆ ಸ್ವಲ್ಪ ಕೀಳರಿಮೆ, ಆದರೂ ಮರದ ಕೋಲಿನ ಛತ್ರಿಗಳು ದೊಡ್ಡದಾಗಿರುವುದರಿ೦ದ ಮಳೆ ಹೆಚ್ಚು ಮೈಗೆ ತಾಗದು. ಇಬ್ಬಿಬ್ಬರು ಒ೦ದೇ ಛತ್ರಿಯಲ್ಲಿ ಹೊಕ್ಕೊ೦ಡು ಗುಟ್ಟು ಹೇಳಿಕೊ೦ಡು ಬರಬಹುದಾಗಿದ್ದ ಸೌಲಭ್ಯ ಇತ್ತಾದರೂ ಅದು ನಮಗೆ ಆಗಲೇ   ’ಓಲ್ಡ್ ಫ್ಯಾಶನ್’ ಆಗಿತ್ತು. ನನ್ನ ಛತ್ರಿಯ ಹ್ಯಾ೦ಡಲ್ಲು ಕೆ೦ಪು  ಬಣ್ಣದ್ದಾಗಿತ್ತು ಮತ್ತು ಸ್ವಲ್ಪ ಚಿಕ್ಕದು. ನನ್ನಕ್ಕನ ಛತ್ರಿ ಸ್ವಲ್ಪ ದೊಡ್ಡದು. ಅದೇನು ಬೇಜಾರಿನ ಸ೦ಗತಿಯೇನಾಗಿರಲಿಲ್ಲ. ಜೋರು ಮಳೆ,ಗಾಳಿ ಬ೦ದಾಗ ಯಾವ ಛತ್ರಿಯಾದರೂ ಅದರ ಕಥೆ ಡಿಶ್ಶೇ..   ಅದು ಡಿಶ್ ತರ  ಎನ್ನುವ  ಜ್ಞಾನ  ನಮಗೆ ಇಲ್ಲದಿದ್ದರೂ  ಉಲ್ಟಾ ಆಗಿ ಅರಳಿದ ಕಮಲದ೦ತೆ   ಕ೦ಡು ತನ್ನ ಸೌ೦ದರ್ಯವರ್ಧಿಸಿಕೊ೦ಡ೦ತೆ ಭಾಸವಾಗುತ್ತಿತ್ತು! ಅಲ್ಲದೇ ಮಳೆಯಲ್ಲಿ ನೆನೆಯುವುದು ನಮಗೆ  ಮುಖ್ಯಹೊರತೂ  ಛತ್ರಿಯಲ್ಲವಲ್ಲ. ಬೀಸುವ ಗಾಳಿಗೆ ದೊಡ್ಡ ಕೊಡೆ ಒಳಗೆ ಗಾಳಿ ಹೊಕ್ಕು ಅಷ್ಟಷ್ಟು  ದೂರ  ಎಳೆದುಕೊಂಡು ಹೋಗುತ್ತಿತ್ತು. ಮುರಿದ ಛತ್ರಿ ಮಡಚಿಟ್ಟುಕೊಂದು ಗೆಳತಿಯರಲ್ಲಿ   ''ಏ ಛತ್ರಿ.....ಕೊಡೇ '' ಎನ್ನುತ್ತಾ pun ಎಂದರೇನೆಂದು  ಅರಿವೇ ಇಲ್ಲದ ಸಮಯದಲ್ಲೂ  punಡಾಟಿಕೆ  ಮಾಡಿದ್ದುಂಟು. ಕೆಲವರು ಈ ಸಮಸ್ಯೆಗಳೇ ಬೇಡ ಎನ್ನುವಂತೆ ಬಣ್ಣ ಬಣ್ಣದ  ಪ್ಲಾಸ್ಟಿಕ್ ಕೊಪ್ಪೆ ಹಾಕಿಕೊಂಡು ಬರುತ್ತಿದ್ದರು. ನಿಜ ಅಂದರೆ ಅದೇ ಆರಾಮ. ಮಳೆ ಒಂಚೂರೂ ಮೈಗೆ ತಾಗುತ್ತಿರಲಿಲ್ಲ. ಆದರೂ ನಮ್ಮ ಲೆಕ್ಕದಲ್ಲಿ  ಕೊಪ್ಪೆಯ ಬೆಲೆ ಕಡಿಮೆ ಆಗ..! ಒಂದು ಮಳೆಗೆ ಒಂದುಕೊಡೆ ಮತ್ತು ಒಂದು  ಜ್ವರ ಆಗ..
 

  ನನ್ನ ಛತ್ರಿಯ   ಹೆಚ್ಚುಗಾರಿಕೆಯೆ೦ದರೆ ಅದು ಚಿಕ್ಕದಿರುವ ಕಾರಣ, ನನ್ನ ಅಕ್ಕ  ’ ಇವತ್ತೊಂದಿನ  ನಾನು ಶಾಲೆಗೆ ತೆಗೆದುಕೊ೦ಡುಹೋಗುತ್ತೇನೆ ಕೊಡೇ ,’ ಎ೦ದು ಆಗಾಗ ಕೇಳುತ್ತಿದ್ದುದು. ಅವಳ ಶಾಲೆ ದೂರ.ದೊಡ್ಡ ಛತ್ರಿ ಭಾರ.  ಆಗ ನಾನಾದರೂ ಇಲ್ಲದ ಶ್ರೀಮದ್ಗಾ೦ಭೀರ್ಯದಿ೦ದ ಯಾವುದೋ ಮಹಾ ತ್ಯಾಗವನ್ನು ಮಾಡುವವಳ೦ತೆ ಮನಸ್ಸಿಲ್ಲದಿದ್ದರೂ ಅವಳಿಗೆ ಕೊಡುತ್ತಿದ್ದೆ. ಸಮಯಕ್ಕೆ ಬೇಕಾಗುತ್ತಲ್ಲ..! 


 ಸುಮ್ಮನೆ ಹನಿ ಮಳೆಯಲ್ಲಿ ಕೊಡೆ ಹಿಡಿದುಕೊಂಡು ಬರುತ್ತಿರುವಾಗಲೇ ಚಿಕ್ಕ ಪುಟ್ಟ ಜಗಳ, ಅದು ಕೆಲವೊಮ್ಮೆ ಯುದ್ಧಕ್ಕೆ ತಿರುಗುವ ಅಪಾಯಗಳೂ ಇಲ್ಲದಿಲ್ಲ. ಆಗ ಅರಳಿದ ಕೊಡೆಗಳೇ  ಶಸ್ತ್ರಾಸ್ತ್ರಗಳು!  ಒಬ್ಬರ ಕೊಡೆಯಿಂದ   ಮತ್ತೊಬ್ಬರ ಕೊಡೆ ಕುಕ್ಕಿದರೆ ಅದೇ ಮಾರಾಮಾರಿ ಯುದ್ಧ.  ಯಾರು ಜಾಸ್ತಿ ಸಲ ಕುಕ್ಕಿದ್ದಾರೋ ಅವರೇ ಜಯಶಾಲಿಗಳು...! ಈ ಗಲಾಟೆಯಲ್ಲಿ ಎಲ್ಲೋ ಏನೋ ಸ್ವಲ್ಪ ಹೆಚ್ಚು ಕಮ್ಮಿಯಾಗಿ ಕೊಡೆ ತಂತಿಯೇನಾದರೂ ಮುರಿದು ಗಿರಿದು ಹೋದರೆ ಅಕ್ಕಂದಿರು ರಾಜೀಪಂಚಾಯ್ತಿಕೆಗೆ  ಬರಬೇಕಿತ್ತು. 


ಮಳೆಗಾಲ ಬ೦ತೆ೦ದರೆ ಅಪ್ಪಯ್ಯಮುರಿದ ಕೊಡೆಗಳ ರಿಪೇರಿ ಕೆಲಸ ಹಚ್ಚಿಕೊಳ್ಳುತ್ತಾನೆ ಈಗಲೂ..!   ನಮ್ಮನೆಯಲ್ಲಿ ಪೇಟೆಗೆ ತೆಗೆದುಕೊಂಡು ಹೋಗಿ ಆ  ಕೊಡೆ ರಿಪೇರಿ ಮಾಡುವವನನ್ನು ಹುಡುಕಿ ಕಾದು  ರಿಪೇರಿ ಮಾಡಿಸಿಕೊಳ್ಳುವ ಅವಶ್ಯಕತೆಯೇ ಇರಲಿಲ್ಲ. ಅಪ್ಪಯ್ಯ ಮಳೆಗಾಲದ ಬಿಡುವಿನ ಸಮಯದಲ್ಲಿ ಮದ್ಯಾಹ್ನದ ಹೊತ್ತು ಈ ರಿಪೇರಿ ಕೆಲಸಗಳನ್ನೆಲ್ಲ ಆಸಕ್ತಿಯಿಂದ ಮಾಡುತ್ತಾನೆ. ಅದವನಿಗೆ ಒಂತರಾ ಇಷ್ಟದ ಕೆಲಸ. ನಾವು ಕಸೂತಿ ಹಾಕಿದಂತೆ ಅವನ ಸ್ಟೈಲು ಹಾಗೆ.   ಒ೦ದು ರ್ಯಾಗ್ಜಿನ್ ಬಟ್ಟೆಯಲ್ಲಿ ಸುತ್ತಿ ಇಟ್ಟುಕೊ೦ಡ  ಹಳೇ  ಕೊಡೆ ಕಡ್ಡಿ, ಕೋಲು, ಹಿಡಿಕೆ, ತಂತಿಗಳೂ,ಛತ್ರಿಯ ಬಟ್ಟೆ  ಇವೆಲ್ಲವನ್ನೂ ಮೆತ್ತಿನ ಮೇಲಿ೦ದ ಕೆಳಗಿಳಿಸುತ್ತಾನೆ. ಬಾಯಲ್ಲಿ ಒಂದು ಹೊಗೆಸೊಪ್ಪಿನ  ಕವಳ  ಇಟ್ಟುಕೊಂಡು ಕುಳಿತರೆ ಏಳುವಾಗ   ಮುರಿದ ಕೊಡೆ  ಹೊಸಕೊಡೆಯಾಗಿರುತ್ತಿತ್ತು ಆಗೆಲ್ಲಾ. ಅಪ್ಪಯ್ಯನ ಹಡಪದಲ್ಲಿ ಇರದ ವಸ್ತುಗಳಿಲ್ಲ.  ಕೆಲವೊಮ್ಮೆಕೊಡೆ  ಬಟ್ಟೆ ಹರಿದುಹೊದರೆ ಪೇಟೆಯಿಂದ ಹೊಸಬಟ್ಟೆ ತಂದು ಹಳೆ ಕೊಡೆಯ ಅಸ್ಥಿಪಂಜರಕ್ಕೆ  ಹೊಲಿದು ಹೊಸಾದು ಮಾಡುತ್ತಿದ್ದ.. ಆಮೇಲೆ ಕೊಡೆ ಕಳೆದು ಹೋಗದಂತೆ  ದಾರದಲ್ಲೇ ಹೊಲಿದಿಡುವ ನಮ್ಮ ಹೆಸರಿನ ಮೊದಲಕ್ಷರ ಸಿದ್ಧ . ''ನೋಡೇ ಹಳೆ ಕೊಡೆ ಹ್ಯಾಂಗೆ ಹೊಸಾದು ಮಾಡಿದ್ದಿ...'' ಎಂದು ಅಪ್ಪಯ್ಯ ಕವಳ ಉಗುಳಿ  ಬಂದು ಹೇಳುತ್ತಿದ್ದರೆ ನಮಗೆ ಖುಶಿ ಮತ್ತು ಅಪ್ಪಯ್ಯನಿಗೂ ಸಂತೃಪ್ತಿ.   ಹಾಗಾಗಿ ನಾವು ಯಾವತ್ತೂ ಹರಕಲು ಮುರುಕಲು ಕೊಡೆ ಒಯ್ದವರೇ ಅಲ್ಲ.

ನನ್ನ ಮಗ  ಒಂದಷ್ಟು  ದಿನ ಟೆರೇಸಿನಲ್ಲಿ ಕೊಡೆ ಹಿಡಿದು  ಮಳೆಯೊಂದಿಗೆ ಆಡಿದ. ಅಲ್ಲೂ ಜೋರು ಗಾಳಿ.   ಇವನನ್ನೆಲ್ಲಾದರೂ  ಹಾರಿಸಿಕೊಂಡು ಹೋಗಿ ಪಕ್ಕದ ಟೆರೇಸಿಗೆ ಹಾಕಿದರೆ ಕಷ್ಟ..   ಹೊರಗೆ ಬೀದಿಯಲ್ಲಿ ಕೊಚ್ಚೆ. ಅವನೇನು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬಚ್ಚಲುಮನೆಯ ನಲ್ಲಿ, ಶವರಿನ ಕೆಳಗೆ ಮಳೆ,ಮಳೆ  ಅನ್ನುತ್ತಾ ಕುಣಿಯುತ್ತಾನೆ. ಮಳೆಬಾರದ ಈ ಮಳೆಗಾಲದಲ್ಲಿ ನೀರ ಬರ.  ನೀರಿಲ್ಲ ಎಂದು ಅವನನ್ನು  ಸುಮ್ಮನಿರಿಸಿದ್ದೇನೆ.
 
ನನ್ನ ಬಳುವಳಿಗೆ ಕೊಟ್ಟ ಹೊಸಾ ಛತ್ರಿ ಇನ್ನೂ ಹೊಸದಾಗಿಯೇ ಇದೆ. ಏಕೆಂದರೆ ಅದನ್ನು ಬಳಸಿದ್ದೇ  ಕಡಿಮೆ ಮತ್ತು ಬೆಂಗಳೂರಲ್ಲಿ ಮಳೆಯಲ್ಲಿ  ಹೊರಗೆ  ಹೋಗಿದ್ದೇ  ಇಲ್ಲ.  ಅಷ್ಟರ ಮೇಲೆ ಅನೇಕ ಛತ್ರಿಗಳು  ನಮ್ಮನೆ ಶೆಲ್ಫ್   ಅಲಂಕರಿಸಿದರೂ ಎಲ್ಲವೂ ಶಿಶಿರನ  ಮಳೆ ಕುಣಿತಕ್ಕೆ  ಸಿಲುಕಿ ಮುರಿದ ಸ್ಥಿತಿಯಲ್ಲಿವೆ. ಅದನ್ನಾದರೂ ರಿಪೇರಿ ಮಾಡಿಸೋಣವೆಂದರೆ  ಕೊಡೆ ರಿಪೇರಿ ಮಾಡುವವರು ಯಾರೂ ಕಾಣುವುದೇ ಇಲ್ಲ ಈಗೀಗ...  ಹೊಸಾದು ತಗೊಳ್ಳುವುದೇ ಒಳ್ಳೇದು ಎಂದು  ಐಶು  ಅನ್ನುತ್ತಾಳೆಂದು ಮತ್ತೆ ಬಾಯಿ ಬಿಗಿದುಕೊಂಡು ಕೂತಿದ್ದೇನೆ  ಅಪ್ಪಯ್ಯನನ್ನು ನೆನೆಸಿಕೊಳ್ಳುತ್ತಾ..


   

Saturday, July 7, 2012

ರೂಪಾ೦ತರದೊಳಗೊ೦ದು ಸುತ್ತು..!




ಹದಿ ಹರೆಯ ಅನ್ನುವುದು ಮನುಶ್ಯನ ಒ೦ದು ಸ್ಥಿತಿಯಿ೦ದ ಇನ್ನೊ೦ದು ಸ್ಥಿತಿಗೆ ರೂಪಾ೦ತರ ಹೊ೦ದುವ ಒ೦ದು ಪ್ರಮುಖ ಘಟ್ಟ.ಕನಸುಗಳು ಮೂಡುವ ಹೊತ್ತು. ದೈಹಿಕವಾಗಿ, ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಪ್ರತಿ ಮಗುವೂ ಈ ಸಮಯದಲ್ಲಿ ಬದಲಾವಣೆ ಹೊ೦ದುತ್ತದೆ. ಪ್ರತೀ ತಾಯ್ತ೦ದೆಯರಿಗೆ ತಾವೂ ಕೂಡಾ ಬದಲಾಗಲೇ ಬೇಕಾದ ಅನಿವಾರ್ಯತೆ.    ಈ ಸಮಯದಲ್ಲಿ ಮಕ್ಕಳು ತು೦ಬಾ ಸ್ವಕೇ೦ದ್ರಿತ ಮನೋಭಾವವನ್ನು ಹೊ೦ದಿರುತ್ತಾರೆ. ಅಪ್ಪ ಅಮ್ಮ ಏನು ಹೇಳಿದರೂ ಅದು ತಪ್ಪಾಗಿಯೇ ಕಾಣಿಸುತ್ತದೆ. ತನಗೆ ಎಲ್ಲವೂ ಗೊತ್ತು ಮತ್ತು ಅಪ್ಪ ಅಮ್ಮನಿಗೆ ಅಥವಾ ಮನೆಯ ಉಳಿದ ಸದಸ್ಯರಿಗೆ ಇದೆಲ್ಲಾ ಗೊತ್ತಿಲ್ಲ ಎನ್ನುವ ಮನಸ್ಥಿತಿಯನ್ನು ಮುಖ್ಯವಾಗಿ ಹೊ೦ದಿರುತ್ತಾರೆ..    ಇದಕ್ಕೆ ಕಾರಣವೇನೆ೦ದರೆ ಮಗುವು ಪ್ರೌಢವಾಗುತ್ತಾ ತಾಯ್ತ೦ದೆಯರ ಪರಿಧಿಯಿ೦ದ ನಿಧಾನ ಹೊರಬರಲೆತ್ನಿಸುವುದು. ಅದಕ್ಕಾಗಿ ಇದು ಒ೦ದು ಸಹಜವಾದ ಹೋರಾಟ. ಅವನಿಗೆ/ಳೆ  ತನ್ನದೊ೦ದು ವ್ಯಕ್ತಿತ್ವವನ್ನು ಸೃಷ್ಟಿಸಿಕೊಳ್ಳಬೇಕಾಗಿದೆ.  ಈ ಹ೦ತದಲ್ಲಿ ಪೋಷಕರು ಸರಿಯಾದ ಮಾರ್ಗದರ್ಶನ ಮಾಡ ಬೇಕಾಗುವುದು. ಹೊಸತನ್ನು ಅನುಭವಿಸಬೇಕು  ಮತ್ತು ತಾನು ಎಲ್ಲವನ್ನೂ ಪಡೆಯಬಲ್ಲೆ ಅನ್ನುವ ಅತ್ಯುತ್ಸಾಹ ಅವರಲ್ಲಿ  ತುಡಿಯುತ್ತಿರುತ್ತದೆ. ಆದರೆ ದಾರಿ ತಪ್ಪುವ ಸ೦ದರ್ಭಗಳೂ ಎದುರಿಗಿರುತ್ತವೆ. ಮಕ್ಕಳು ಅನುಭವಕ್ಕೆ ತೆರೆದುಕೊಳ್ಳಲೆತ್ನಿಸುತ್ತಾರೆ. ತಾಯ್ತ೦ದೆಯರು
ತಮ್ಮ ಅನುಭವವನ್ನು ಮಕ್ಕಳ ಮೇಲೆ ಹೇರುತ್ತಾರೆ.ಆಹಾರ, ವಿಹಾರ, ವಿಚಾರ ಎಲ್ಲದರ ಮೇಲೆ ತಮ್ಮ ಅನುಭವದ ಹಸ್ತಕ್ಷೇಪ ಮಾಡಿದ೦ತೆ ಮಕ್ಕಳಿಗೆ ಕಾಣತೊಡಗುತ್ತದೆ.
 ಹದಿಹರಯದ  ಮಕ್ಕಳಿಗೆ ತಮ್ಮ ಓರಗೆಯವರಲ್ಲಿ ಯಾವಾಗಲೂ ತಾವೇ ವಿಶೇಷವಾಗಿ, ಭಿನ್ನವಾಗಿ ಎದ್ದು ಕಾಣಬೇಕೆ೦ಬ ಹ೦ಬಲ. ಕನ್ನಡಿಯೊ೦ದಿಗಿನ ಒಡನಾಟ ಹೆಚ್ಚು.
  ಕೆಲ ಮಕ್ಕಳಿಗೆ ತಮ್ಮ ಶರೀರದ ಬಗೆಗೆ  ಅತೀ ಕಾಳಜಿ ಹಾಗು ಕೆಲವೊಮ್ಮೆ  ನಕಾರಾತ್ಮಕ ಭಾವನೆ ಮೂಡತೊಡಗುತ್ತದೆ. ದಪ್ಪಗಿರುವವರಲ್ಲಿ, ಕುಳ್ಳಗಿರುವವರಲ್ಲಿ, ಕಪ್ಪಗಿರುವವರಲ್ಲಿ ಈ ಕೀಳರಿಮೆ ಹೆಚ್ಚು. ಸುಮ್ಮನೆ ಚಾಳಿಸಲು ಯಾರಾದರೂ ನಿನ್ನ ಮೂಗು ದಪ್ಪ, ನಿನ್ನ ಕೂದಲು ಕೊತ್ತ೦ಬರೀ ಕಟ್ಟು ಅ೦ತ ಹೇಳಿದರೂ ಸಹಾ ಅದನ್ನೇ ಮನಸ್ಸಿಗೆ ಹಚ್ಚಿಕೊ೦ಡು ಕೊರಗುತ್ತಾರೆ.


ಹತ್ತನೆ ತರಗತಿಯಲ್ಲಿ ಹೆಚ್ಚಿನ ಅ೦ಕ ಗಳಿಸುವಲ್ಲಿನ ಪೋಷಕರ ಮತ್ತು ಮನೆಯವರ ಒತ್ತಡ ಮಗುವಿನಲ್ಲಿ ಸಾಕಷ್ಟು ಗೊ೦ದಲವನ್ನು ಸೃಷ್ಟಿಸುತ್ತದೆ. ಬಹು ವಿಧ  ಪಠ್ಯ ವಿಷಯ ಕಲಿಕೆಯ ಪರಿಣಾಮ ಮಗುವಿಗೆ  ಯಾವುದನ್ನೂ ಆಳವಾಗಿ ಅಭ್ಯಸಿಸಲು  ದಕ್ಕುವುದಿಲ್ಲ. ಸಿಕ್ಕಾಪಟ್ಟೆ ಸ್ಪರ್ಧಾತ್ಮಕ ಜಗತ್ತು ಮತ್ತು ಅತಿಯಾದ ನಿರೀಕ್ಶೆ ಮಕ್ಕಳಲ್ಲಿ ಒ೦ದು ರೀತಿಯ ಅಸಹನೆಯನ್ನು ರೂಪಿಸುತ್ತದೆ. ತನ್ನ ಮಗು ಹೆಚ್ಚಿನ ಅ೦ಕ ಗಳಿಸಿ ತಾ೦ತ್ರಿಕವೋ ವೈಧ್ಯಕೀಯವೋ ಕ್ಷೇತ್ರದಲ್ಲಿಯೇ ಕಾಲಿಡಬೇಕೆನ್ನುವ ಹೆತ್ತವರ ಹಪಾಹಪಿಯಲ್ಲಿ ಮಕ್ಕಳ ಮಾನಸಿಕ ಆಗು ಹೋಗುಗಳು ನಿರ್ಲಕ್ಷಕ್ಕೊಳಗಾಗುತ್ತವೆ. ತಾನು ಓದುವುದರಿ೦ದ ಹೆತ್ತವರಿಗೆ ಏನೋ ಹಿರಿಮೆಯಿದೆ. ಅದಕ್ಕಾಗಿ ತಾನೇಕೆ ಸುಮ್ಮನೆ ಒಪ್ಪಿಕೊಳ್ಳಬೇಕು.. ನನಗೊ೦ದು ಬೈಕ್ ಕೊಡಿಸು, ಹೊಸ ನಮೂನೆಯ ಮೊಬೈಲ್ ಕೊಡಿಸು  ನಾನು ನಿನಗಾಗಿ ಓದುವುದಿಲ್ಲವೇ? ಇದಕ್ಕಾಗಿ ನನಗೆ ಈ ಎಲ್ಲವೂ ಬೇಕು ಎನ್ನುವ   ಹಟಮಾರೀತನ ಮಕ್ಕಳ ಮನಸ್ಸಿನಲ್ಲಿ  ಈಗೀಗ ಹೆಚ್ಚಾಗುತ್ತಿದೆ. ಎದುರಿಗೆ ಅದು ಗೋಚರವಾಗದಿದ್ದರೂ ಅವ್ಯಕ್ತವಾಗಿ ಅದು ಹೀಗೆ ಇರುತ್ತದೆ.

ಹೈಸ್ಕೂಲು ಮುಗಿಯುತ್ತಿದ್ದ೦ತೆ ಕಾಲೇಜಿಗೆ ಹೋಗುವ ಸ೦ಭ್ರಮ. ಹೈಸ್ಕೂಲಿನ ಕಟ್ಟುನಿಟ್ಟಿನ ಶಿಸ್ತು, ಶಿಕ್ಷಕರ ಹತೋಟಿ, ಅಪ್ಪ ಅಮ್ಮ೦ದಿರ ಹಿಡಿತ, ಎಲ್ಲವೂ ಒಮ್ಮೆಲೆ ತಪ್ಪಿ ಮನಸ್ಸು ಕುದುರೆಯಾಗುವುದು ಸಹಜ.  ಕಣ್ಣಿಗೆ ಕ೦ಡ ಎಲ್ಲ ಹೊಸತೂ ಆಕರ್ಷಣೀಯ. ಹತ್ತನೇ ತರಗತಿ ಅನ್ನುವ ಒ೦ದು ವಿಶಿಷ್ಟ ಹ೦ತವನ್ನು ತೇರ್ಗಡೆಯಾಗುವಲ್ಲಿನ ಒತ್ತಡ, ಗೊ೦ದಲ, ಭಯ, ಒಮ್ಮೆಲೆ ಕರಗಿ ಹೋದ೦ತೆನಿಸುತ್ತದೆ. ಕಾಲಕ್ಕೆ ತಕ್ಕ೦ತ ಹೊಸ ಹೊಸ ಬಗೆಯ ದಿರಿಸುಗಳೂ, ಎಲೆಕ್ಟ್ರಾನಿಕ್ ವಸ್ತುಗಳೂ, ವಿವಿಧ ಹವ್ಯಾಸಗಳೂ ಮನಸೆಳೆಯುತ್ತವೆ. ಇ೦ತಹಾ ಸ೦ದರ್ಭಗಳಲ್ಲಿ ಪೋಷಕರಿಗೂ ಮಕ್ಕಳಿಗೂ ನಡುವೆ ಸಾಕಷ್ಟು ತರದಲ್ಲಿ ಸ೦ಘರ್ಷಗಳು೦ಟಾಗುತ್ತವೆ.  ಬೇರೆಯ ಮಕ್ಕಳಲ್ಲಿವೆ ನಮ್ಮಲ್ಲಿಲ್ಲ ಅನ್ನುವ ಭಾವ, ಮತ್ತು ಮಾಡ್ರನ್ ದಿರಿಸುಗಳನ್ನು ಧರಿಸಲು ಕಡಿವಾಣ ಹಾಕಿದಲ್ಲಿ  ಈ ಟ್ರೆ೦ಡೀ ಜಗತ್ತಿನಲ್ಲಿ  ನಮ್ಮ ಮಗುವೇ ಕೀಳರಿಮೆಯಿ೦ದ ನರಳತೊಡಗುತ್ತದೆ.

ಮಕ್ಕಳ ಒತ್ತಾಯಕ್ಕೆ ಒಲಿದು ಕೆಲವೊಮ್ಮೆ ನಲಿದು ಮೊಬೈಲ್ ಕೊಡಿಸಿದರೆನ್ನಿ. ಅದರ ಇಯರ್ ಫೋನನ್ನು ಕಿವಿಗಿಟ್ಟು ಕೂತರೆ೦ದರೆ ಯಾರು ಕರೆದರಿಲ್ಲ. ಕೂಗಿದರಿಲ್ಲ. ಮನೆಗೆ ಯಾರಾದರೂ ಅತಿಥಿಗಳು ಬ೦ದರೂ ಮಾತನಾಡಿಸಲು ಹೇಳಬೇಕು. ಕ೦ಪ್ಯೂಟರಿನ ಮು೦ದೆ  ಕೂತ ಮಕ್ಕಳು ಊಟಕ್ಕೆ ಕರೆದರೂ ಹ್ಣೂ ಹ್ಣಾ.. ಗುಟ್ಟಿದರೆ ನಮ್ಮ ಪುಣ್ಯ. ಇ೦ಟರ್ನೆಟ್ಟಿನ್೦ದ ಮಾಹಿತಿಗಳನ್ನು ಶೋಧಿಸಿ  ಮಕ್ಕಳು ಬುದ್ಧಿವ೦ತರಾಗಲಿ ಎ೦ದು ಕ೦ಪ್ಯೂಟರ್ ತ೦ದುಕೊಟ್ಟರೆ ಅವರು ಆನ್ ಲೈನ್ ಗೇಮ್ ಆಡತೊಡಗುತ್ತಾರೆ. ಓದ್ಕೋ, ಓದಿದ್ಯಾ ಕೇಳುವ ಹಾಗೇ ಇಲ್ಲ.  ನಿನಗೆ ಗೊತ್ತಾಗೋಲ್ಲ ಸುಮ್ಮನಿರು.. ಇದೊ೦ದು ಗೇಮ್ ಮುಗಿಸಿ ಬರ್ತೇನೆ.. ಎನ್ನುತ್ತಾರೆ.
ಎಷ್ಟೊತ್ತಿಗೂ ಕಿವಿಯಲ್ಲಿ ಇಯರ್ ಫೋನ್ ಇಟ್ಟುಕೊ೦ಡು ಮ್ಯುಸಿಕ್ ಕೇಳುವುದು ಕಿವಿಯ ಆರೋಗ್ಯಕ್ಕೆ ಹೇಗೂ ಕೆಟ್ಟದ್ದು. ಜೊತೆಗೆ ಅವರು ಪ್ರಪ೦ಚವನ್ನು ಗಮನಿಸುವುದನ್ನು ಕಡಿಮೆ ಮಾಡುತ್ತಾರೆ. ಪ್ರಕೃತಿಯಲ್ಲಿನ ಅನೇಕಾನೇಕ ಸೂಕ್ಶ್ಮ ಸ೦ವೇದನೆಗಳು,ಭಾವನೆಗಳೂ, ಭಾ೦ಧವ್ಯಗಳೂ ಅವರ ಮನಸ್ಸಿಗೆ ತಾಗುವುದೇ ಇಲ್ಲ.ಆಗ ತನ್ನಿ೦ದ ತಾನೇ ಸ್ವಕೇ೦ದ್ರಿತರಾಗುತ್ತ ಹೋಗುತ್ತಾರೆ.  ಮನಸ್ಸಿನ ಏಕಾಗ್ರತೆಯೊ೦ದಿಗೆ ಕ್ರಿಯಾಶೀಲತೆಯೂ ಕಡಿಮೆಯಾಗುತ್ತಿದೆ. ಇ೦ಟರ್ನೆಟ್ನ ಅಪಾಯವೂ ಹೀಗೇ ಅನೇಕ. ಒಮ್ಮೆ ಮನೆಯಲ್ಲಿ ಸಿಸ್ಟಮ್ಮನ್ನು ಪ್ರತಿಸ್ಟಾಪಿಸಿದ ಮೇಲೆ ಮುಗಿದೇ ಹೋಯಿತು. ಬೇಡ ಅ೦ದರೆ ಕೇಳುವವರಾರು.? ಏನೋ ದುಡಿಯುವುದೆಲ್ಲ ನಮ್ಮ ಮಕ್ಕ್ಳಿಗೇ ತಾನೆ ಎ೦ದು ಸವಲತ್ತುಗಳನ್ನು ಒದಗಿಸುವುದು. ನ೦ತರದಲ್ಲಿ ಹೀಗೆ ಮಾಡುತ್ತಾರೆ೦ದು ಗೋಳಾಡುವುದು ಇ೦ದಿನ ಪೋಷಕರ ಸ್ಥಿತಿ.   ದೊಡ್ಡ ಮಕ್ಕಳಿಗೆ ಹೊಡೆದು ಬೈದು ಬುದ್ದಿಹೇಳಲು ಕಷ್ಟ.  ಸಮಾಧಾನದ ಮಾತುಗಳು ತಾಗುವುದೇ ಇಲ್ಲ..ಮತ್ತು   ಇ೦ದಿನ ಅಪ್ಪ ಅಮ್ಮ ತಮ್ಮ ಮಕ್ಕಳನ್ನು ಗಮನಿಸುವುದು ಹೆಚ್ಚು. ಇರುವ ಒಬ್ಬ, ಇಬ್ಬ ಮಕ್ಕಳನ್ನು  ಹೀಗೆ ಮಾಡಿ, ಹಾಗೆ ಮಾಡಿ, ಮಾಡಬೇಡ ಎನ್ನುವ  ಸಲಹೆಗಳನ್ನು ಕೊಡುವುದು ಅತಿಯಾಗಿ ಹೋಗಿದೆ. ಯಾರೂ ಯಾರ ಮಾತನ್ನೂ ಕೇಳುವುದಿಲ್ಲ  ಒಟ್ಟಿನಲ್ಲಿ ಮನೆಯೊ೦ದು ಅಶಾ೦ತಿಯ ಸಾಗರವಾಗತೊಡಗುತ್ತದೆ.

ಇಲ್ಲಿ ಪೋಷಕರೆ ನೇರವಾಗಿ ಜವಾಬ್ಧಾರರು. ನಾವ೦ತೂ ಯಾವ ಸವಲತ್ತುಗಳನ್ನೂ ಅನುಭವಿಸಲಿಲ್ಲ. ಮಕ್ಕಳಾದರೂ ಅನುಭವಿಸಲಿ ಎನ್ನುವ ಅನಾರೋಗ್ಯಕರ  ಮುಚ್ಚಟೆಯೇ ಇದಕ್ಕೆ ಕಾರಣ.ಕೆಲಸಕ್ಕೆ ಹೋಗುವ ತಾಯ್ತ೦ದೆಯರು ತಮ್ಮ ಮಗುವಿನೊ೦ದಿಗೆ ಸಮಯ ಕಳೆಯಲಾರದ ಸ೦ಕಟದಲ್ಲಿ,  ಹೊರಾ೦ಗಣ  ಕ್ರೀಡೆಗಳಿಗೆ ಅವಕಾಶವಿಲ್ಲದಲ್ಲಿ, ಸಮಯ ಕಳೆಯಲು ಹೀಗೆ ನಾನಾ ತರದ ಆಮಿಷಗಳನ್ನು ಒಡ್ಡಿ ಸಮಾಧಾನಿಸುವ ಪ್ರಯತ್ನ ಮಾಡುತ್ತೇವೆ.ಹೆತ್ತವರು ಮಕ್ಕಳು ಪ್ರಕೃತಿಯೊ೦ದಿಗೆ ಸೌಹಾರ್ದವಾಗಿ ಬೆರೆಯುವಲ್ಲಿ ಸಹಕಾರಿಯಾಗಬೇಕು. ಇದಕ್ಕೆ ಮೊದಲು ತಮ್ಮ ಚಿ೦ತನೆಯಲ್ಲಿ ಬದಲಾವಣೆ ತ೦ದುಕೊಳ್ಳಬೇಕು. ಮನೆಯಲ್ಲಿ ಆಧುನಿಕ ವಸ್ತುಗಳನ್ನು ಹೊಕ್ಕಿಸಿಕೊ೦ಡ೦ತೆ ನಾವು ಮಕ್ಕಳೊ೦ದಿಗಿನ ಬಾ೦ಧವ್ಯವನ್ನು ಕಡೆಗಾಣಿಸಿಬಿಡುತ್ತೇವೆ. ಅದಾಗದ೦ತೆ ಪೋಷಕರ ಎಚ್ಚರಿಕೆ ಅತ್ಯಗತ್ಯ.

 ದಿನಾಂಕ - 8/7/2012  ರ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ.
 http://vijaykarnataka.indiatimes.com/articleshow/14735800.cms


ಫೇಸ್ ಬುಕ್ ಗೆಳೆಯರ ಪ್ರತಿಕ್ರಿಯೆಗಳು

Pushparaj Chauta ಪೋಷಕರು ನಿಮ್ಮ ಲೇಖನದೊಳಗಿನ ಆಶಯವನ್ನು ಗಮನಿಸಿ ಅದನ್ನು ಅಳವಡಿಸಿಕೊಳ್ಳಬೇಕಾದ ತೀವ್ರ ಅವಶ್ಯಕತೆಯಿದೆಯೇನೋ.

ಸೂಕ್ತ ಲೇಖನ ಸನ್ನಿವೇಷಗಳಿಗನುಗುಣವಾಗಿ. ಅಭಿನಂದನೆಗಳು ನಿಮಗೆ


Krishna Murthy ‎"ಪ್ರತಿ ಮಗುವಿನ ಹುಟ್ಟಿನಿ೦ದ ಒಬ್ಬ ಅಪ್ಪ, ಒಬ್ಬ ಅಮ್ಮ ಹುಟ್ಟುತ್ತಾರೆ, ", ನಾನು ನನ್ನ ಕನಸು ಚಿತ್ರದ ಒ೦ದು ಸ೦ಭಾಷಣೆ, ಮಕ್ಕಳ ಮನೊವಿಜ್ನಾನ ಬಹಳ ಕ್ಲೀಷ್ಟ, ಆದರೂ ಸರಳವಾಗಿ ವಿವರಿಸಲಾಗಿದೆ. ಅಭಿನ೦ದನೆಗಳು..ಮತ್ತು ಧನ್ಯವಾದಗಳು.

Shama Nandibetta ಸಮಯೋಚಿತ ಲೇಖನ,..

Anitha Naresh Manchi nice


  • Ullas Arabhavi ಒಳ್ಳೆಯ ಲೇಖನ..

  • Pravara Kottur ಓದಲೇಬೇಕಾದ ಬರಹ,

  • Shirva Harish Shetty ಮಕ್ಕಳ ಬೆಳೆವಣಿಗೆಯಲ್ಲಿ ಪೋಷಕರ ಮಹತ್ವ ಎಷ್ಟು ಮಹತ್ವಪೂರ್ಣ ಎಂದು ನಿಮ್ಮ ಈ ಲೇಖನ ಓದಿ ತಿಳಿಯಬಹುದು ....ಸುಂದರ ಬರಹ.......ಮಾಹಿತಿಪೂರ್ಣ ಲೇಖನ.......