Wednesday, February 24, 2010
Wednesday, February 17, 2010
ಅಂದು ಸಂಜೆಯ ಹೊತ್ತು...
ತಿಳಿಗೊಳದಲಲ್ಲೊಂದು
ಸುಳಿಯೆದ್ದು ಬಂದಂತೆ
ಹೊನಲ ತೋಟದಿ ಮಿಂಚಿ
ಮರೆಯಾದಂತೆ ಮಿಣುಕು ಹುಳು..
ಬೆನ್ನಟ್ಟಿ ಬರುತಲಿತ್ತು
ಅರ್ಥವಾಗದ ಭಾವ
ಆಚೀಚೆ ಸುಳಿಸುಳಿದು ತನ್ನಷ್ಟಕೆ.
ವ್ಯಕ್ತವಾಗದ ಬರಿಯ
ಅಸ್ಪಷ್ಟ ಚಹರೆಯ
ಸುತ್ತ ಹತ್ತೆಂಟು ಅಕ್ಷಿ ಸಾಕ್ಷಿ
ಅವಲೋಕನವೋ .. ಅನುಶಾಸನವೋ..
ಕತ್ತೆತ್ತಿ ನೋಡಲೆನಗೆ
ಭಯ, ಗೊಂದಲ
ಮತ್ತಲ್ಲೇ ಮಧುರ ಬೆಂಬಲ
ಸುಪ್ತವಾಗಿಯೋ... ಗುಪ್ತವಾಗಿಯೋ
ಆಸೆಯೊಂದರ ಮಂಜು ಹನಿದಂತೆ
ಪವನನವಸರದಿತೀಡಿ ನಾಚಿ
ಸರಿಯುವ ಗಂಧದಂತೆ
ಒಲವೊಂದು ಬಳಸಿ
ಪಿಸುಮಾತನುಸುರಿದಂತೆ
ಅಂದು ನನ್ನ ವಧುಪರೀಕ್ಷೆ.....!
.
.
.
ಮತ್ತೆ ತಿಂಗಳಿಗೆ ವಧೂಪ್ರವೇಶ......!!!!!
Thursday, February 11, 2010
Thursday, February 4, 2010
ಚಿಟ್ಟೆ ನೀನ್ಯಾರು.....?
ಒಗಟಾಗಿತ್ತು ನನಗೆ...ನಿನ್ನಂತರಂಗ..
ಪುಸ್ತಕವೊಂದ ಎದೆಗವಚಿ ,
ಮುಂಗುರುಳನೊತ್ತಿ,
ರಸ್ತೆಯಲಿ ನಡೆವ ಕಾಲೇಜು ಕನ್ಯೆಯ
ಓರೆನೋಟ ನೋಡಿ
ಸಿಳ್ಳೆ ಹಾಕಿದ್ದ ಹುಡುಗ
'' ಬಣ್ಣದ ಚಿಟ್ಟೆ ಬಂತಲ್ಲಿ ನೋಡು..''
ಅನಿಸಿತ್ತು ನೀ ಪೋರಿಯೇ... ಇರಬೇಕು

ಆದರೂ ಅನುಮಾನ ಕಾಡಿತ್ತು...
ಆಗಷ್ಟೇ ಬಿರಿದ ಹೂಮೊಗ್ಗ
ಮುದ್ದಿಸಿ ಮಕರಂದ ಹೀರುವಾಗ...
ಒರಟು ಮೀಸೆಯವ 'ಪೋರ ' ನೀನೆಂದು

ನೀ ಗಂಡೋ ...ಹೆಣ್ಣೋ...
ಮೂಡಿತ್ತು ಪ್ರಶ್ನೆ
ಬಗೆಹರಿಯದ ಪ್ರಶ್ನೆಯಾಗಿಯೇ ಕಾಡಿತ್ತು..
ಬದಲಾಗುವೆಯಲ್ಲ..ನೀ ಕವಿತೆಯಲ್ಲಿ
ಭಾವಕ್ಕೆ ತಕ್ಕಂತೆ ಕವಿಸಮಯದಲ್ಲಿ..!!!
Subscribe to:
Posts (Atom)