Sunday, November 11, 2012

ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ದೀಪದಿಂದ ದೀಪವಾ ಹಚ್ಚು ಬಾರೋ ಮಾನವ.. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.



Friday, November 2, 2012

ಬಾಳೆದಿಂಡಿನ ದೀಪಸ್ಟ್ಯಾಂಡ್..

 ದೀಪಾವಳಿ ಬೆಳಕಿನ ಹಬ್ಬ. ಕತ್ತಲ ಕೊಳೆಯ ತೊಳೆಯುವ ಹಬ್ಬ. ತಾಮಸವ ಕಳೆದು ಜಗಕೆಲ್ಲ ಸತ್ವವ ಕೊಡುವ ಹಬ್ಬ. ಅಮಾವಾಸ್ಯೆ ಕಳೆದು ಪಾಡ್ಯ ಬರುತ್ತಿದ್ದಂತೆ ಮನೆ ಮನೆಯಲ್ಲೂ, ಪ್ರತಿ ಹೊಸಲಿನಲ್ಲೂ ಸಾಲು ಸಾಲಾಗಿ ಬೆಳಕಿನ ಚಿತ್ತಾರಗಳು. ತುಳಸಿ ಕಟ್ಟೆಯ ಸುತ್ತ, ಅಂಗಳದ ತುಂಬೆಲ್ಲಾ ಬಲೀಂದ್ರನನ್ನು ಸ್ವಾಗತಿಸಲು ತೆಂಗಿನ ಕಡ್ಡಿಗೆ ಬಿಳಿ ಬಟ್ಟೆಯನ್ನು ಸುತ್ತಿ ಎಣ್ಣೆಯಲ್ಲಿ ಅದ್ದಿ ಹಚ್ಚಿ ಅಲ್ಲಲ್ಲಿ ಸಾಲಾಗಿ ಸಿಕ್ಕಿಸಿದ ಸೂಡಿಗಳು.



 

ಕಾರ್ತಿಕ ಮಾಸದುದ್ದಕ್ಕೂನಡೆಯುವ ದೀಪೋತ್ಸವಕ್ಕೆ ದೀಪಾವಳಿಯೇ ನಾಂದಿ. ಮನೆಗಳಲ್ಲಿ, ದೇವಾಲಯಗಳಲ್ಲಿ, ಅಶ್ವತ್ಥ ಕಟ್ಟೆಯ ಸುತ್ತ, ಹೀಗೆ ಬಗೆ ಬಗೆಯಾಗಿ ದೀಪ ಬೆಳಗಿ ದೀಪೋತ್ಸವ ನಡೆಸುತ್ತಾರೆ. ಬಾನಂಗಳಕ್ಕೆ ಸೆಡ್ಡು ಹೊಡೆಯುವಂತೆ ಊರ ತುಂಬಾ ದೀಪಗಳ ಬಿತ್ತನೆ ಮಾಡುತ್ತಾರೆ. ದೀಪದಿಂದ ದೀಪ ಬೆಳಗುತ್ತಾರೆ. ಮೈ ಮನಗಳಲ್ಲೆಲ್ಲಾ ಬೆಳಕನ್ನೇ ತುಂಬಿಕೊಳ್ಳಲು ಹವಣಿಸುತ್ತಾರೆ. ದೀಪ ದಾನದ ಮೂಲಕ ಜ್ಞಾನದಾನದ ಸಂದೇಶವನ್ನು ಸಾರಲಾಗುತ್ತದೆ. ವರ್ಷಕ್ಕೆ ಮೂರು ದಿನದ ಮಟ್ಟಿಗೆ ಭೂಮಿಗಿಳಿದು ಬರುವ ಬಲೀಂದ್ರನಿಗೆ ದೀಪಾರಾಧನೆಯಿಂದ ಸ್ವಾಗತ ಮತ್ತು ಬೀಳ್ಕೊಡುಗೆ!

ಎಲ್ಲಾ ಕಡೆ ಹಣತೆಗೆ ಎಣ್ಣೆ ಹಾಕಿ ಬತ್ತಿ ಇಟ್ಟು ಅದಕ್ಕೆ ದೀಪ ಹಚ್ಚುವುದು ಸಾಮಾನ್ಯ. ಅದು ಸಾಂಪ್ರದಾಯಿಕ ಶೈಲಿಯಾದರೂ ಗಾಳಿ ಬಂದರೆ ದೀಪ ಆರಿ ಹೋಗುತ್ತದೆ. ತುಂಬಾ ಹೊತ್ತು ಉರಿಯುವಂತೆ ಮತ್ತು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಲು ಕೆಲವು ಸರಳ ಉಪಾಯಗಳು ಹಲವಾರಿವೆ. ಅವುಗಳ ಪೈಕಿ ಒಂದು ಬಾಳೆ ದಿಂಡಿನ ದೀಪಸ್ಟ್ಯಾಂಡ್. ಅದನ್ನು ತಯಾರಿಸುವುದು ಹೇಗೆ ? ಏನೆಲ್ಲ ವಸ್ತು ಬೇಕು ಎಂಬ ಬಗ್ಗೆ ತಿಳಿದುಕೊಳ್ಳೋಣ.



 ಬಳಸುವ ವಸ್ತುಗಳು - ಸೂಕ್ತ ಅಳತೆಯ ಬಾಳೆ ದಿಂಡು, ಹಣತೆ ದೀಪ ಅಥವಾ ಮೊಂಬತ್ತಿ,   ಚಿಕ್ಕ ಚಾಕು.


  
* ಮೊದಲು ಬಾಳೆ ದಿಂಡಿನ ಹೊರಗೆ ಇರುವ ಒಣಗಿದ ಮತ್ತು ಹಸಿರು ನಾರನ್ನು ಬಿಡಿಸಿ ಎಸೆದು ಒಳಗಿರುವ ಬಿಳಿ ನಾರನ್ನು ಮಾತ್ರ ಚಂದವಾಗಿ ಬಿಡಿಸಿಕೊಳ್ಳಿ.



 * ಬಾಳೆ ದಿಂಡಿನ ಎರಡು ನಾರನ್ನು ಒಂದರೊಳಗೊಂದು ಹಾಕಿ ಕೊಳವೆಯಂತೆ ಮಾಡಿ.

* ನಾರಿನ ಮೇಲೆ ಬೇಕಿದ್ದರೆ ಚಿಕ್ಕ ಚಿಕ್ಕ ಕಿಂಡಿ ಅಥವಾ ವಿನ್ಯಾಸಗಳನ್ನು ಕೊರೆದು ನಮ್ಮ ಕಲಾತ್ಮಕತೆಯನ್ನು ಸಾದರಪಡಿಸಬಹುದು



* ಹಣತೆ ಅಥವಾ ಮೊಂಬತ್ತಿಯನ್ನು ಹಚ್ಚಿ ಮಧ್ಯದಲ್ಲಿ ಬರುವಂತೆ ಇಟ್ಟು ಬಾಳೆದಿಂಡಿನ ಕೊಳವೆಯನ್ನು ಕೌಚಿಡಿ.

ಈಗ ಸಾವಯವ ಕೊಳವೆ ದೀಪ ರೆಡಿ. ಬಾಳೆ ನಾರಿನ ಮೂಲಕ ಹೊರಬರುವ ಬೆಳಕು ನೋಡಲು ತುಂಬಾ ಆಕರ್ಷಕವಾಗಿರುತ್ತದೆ. ಡೂಮ್ ಲೈಟಿನಂತೆ ಶ್ರೀಮಂತವಾಗಿ ಕಂಗೊಳಿಸುತ್ತದೆ. ಗಾರ್ಡನ್ನಿನ ಹೂಗಿಡಗಳ ಪಕ್ಕದಲ್ಲಿ ಇಟ್ಟರೆ ನೋಡಲು ನಮ್ಮ ಮನೆಯಂಗಳವೀಗ ನಂದನದ ಅಂಗಳ !

ದೀಪಾವಳಿಯ ಹೊರತಾಗಿ ಮನೆಯ ವಿಶೇಷ ಕಾರ್ಯಕ್ರಮಗಳಲ್ಲೂ ಹೀಗೆಯೇ ದೀಪಗಳನ್ನು ಹಚ್ಚಿದರೆ ಸುಂದರ ಮತ್ತು ಎಣ್ಣೆ ಖಾಲಿಯಾಗುವವರೆಗೆ ದೀಪ ಆರುವ ಭಯವಿಲ್ಲ. ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೋಡಿ.
  ಇದು ದೀಪಾವಳಿ ಸ್ಪೆಶಲ್ ದೀಪ.
 ಈ ಲೇಖನ  ದಿನಾಂಕ 03-11-2012 ರ ವಿಜಯಕರ್ನಾಟಕ ಪತ್ರಿಕೆಯ ವಿ.ಕೆ  ಪ್ರಾಪರ್ಟಿಯಲ್ಲಿ  ಪ್ರಕಟವಾಗಿದೆ.

Wednesday, October 17, 2012

ಹಳತು...

 ಒಂದಷ್ಟು ಹಳೆಯ ಚಿತ್ರಗಳು.. ಸುಮಾರು ಹದಿನೆಂಟರಿಂದ ಇಪ್ಪತ್ತು ವರ್ಷ ಹಳೆಯವು..  ಸಾಧ್ಯವಾದರೆ ಅಡಿಬರಹ ಕೊಡಿ ನೀವೂ ...:)


1. ವಾಟರ್ ಕಲರ್

ಗತಕಾಲದ ನೆನಪುಗಳು 


2. ನಿಬ್ ಪೇಂಟಿಂಗ್ 

ಕತ್ತಲಲೂ ಜೊತೆಯಾಗಿ ಬೆಳಕ ನೋಡುವ ಬಾ
[ ಮಂಜುಳಾ ಬಾಬಲಾಡಿಯವರು ಕೊಟ್ಟ ಅಡಿಬರಹ ]


3. ಫ್ಯಾಬ್ರಿಕ್ ಪೇಂಟಿಂಗ್

  ಹೂಅರಸಿ 

  4.  ವಾಟರ್ ಕಲರ್

ರಾಜೀವ್ ಗಾಂಧಿ 

5.  ವಾಟರ್ ಕಲರ್ 

ಸ್ಥಿರ ಚಿತ್ರ 


6.  ವಾಟರ್ ಕಲರ್ 

ರಾಮ ಗುಹನನ್ನು ಸಂಧಿಸಿದ್ದು ..  ಬೊಂಬೆ ಮನೆ ಚಿತ್ರ ನೋಡಿ ಬರೆದಿದ್ದು.


7. ಚಾರ್ಕೋಲ್ ಪೇಂಟಿಂಗ್ 


Friday, October 12, 2012

ಕಸ ಮತ್ತು ರಸ..!

''ಕಸ ಕಸ ಕಸವೆಂದೂ ಎಸೆದಾಡದಿರಿ  ನಿಮ್ಮ ಕಸದ ಕೊಳೆಯನೇನಾದರು ಬಲ್ಲಿರಾ ಬಲ್ಲಿರಾ.. ''[ದಾಸೋತ್ತಮರಲ್ಲಿ   ಕ್ಷಮೆ ಯಾಚಿಸುತ್ತಾ]   ಎನ್ನುವಂತೆ ನಮ್ಮ ಮನೆಗಳ ಮುಂದೆ ವಾರಕ್ಕೆರಡು ದಿನ ಬೆಳ್ಳಂ ಬೆಳಿಗ್ಗೆ ಕಸಪ್ಪ  ಸೀಟಿ ಹೊಡೆಯುತ್ತಾ ಗಡ ಗಡ ಸದ್ದಿನೊಂದಿಗೆ ಗಾಡಿಯನ್ನು ತಂದು ನಿಲ್ಲಿಸುತ್ತಾನೆ. ಮಕ್ಕಳಿಗೆ ಸ್ನಾನ ಮಾಡಿಸುತ್ತಿರುವರು ಅರ್ಧಕ್ಕೆ ಬಿಟ್ಟು, ಮಗಳಿಗೆ  ಜಡೆ ಬಾಚುತ್ತಿದ್ದರೆ ಹಾಗೆಯೇ ಹಿಡ್ಕೋ ಒಂಚೂರು, ಅನ್ನುತ್ತಾ ನೂಕಿ, ಗಂಡನಿಗೆ ಚಾ ಕಾಸುತ್ತಿದ್ದರೆ ಅದು ಒಲೆ  ಮೇಲೆ ಬೇಕಿದ್ದರೆ ಉಕ್ಕಿ ಹರಿಯಲಿ, ಕ್ಯಾರೆ ಮಾಡದೆ  ಎಲ್ಲ ಹೆಂಗಸರೂ  ಹಿಡಿದ ಕೆಲಸ ಬಿಟ್ಟು ಕಸದ ಬುಟ್ಟಿ ಹಿಡಿದು, ನೈಟಿ ಸರಬರ ಮಾಡಿಕೊಂಡು,ಎಡ ಗೈಲಿ  ಕೂದಲು ತಳ್ಳುತ್ತಾ, ದಾಪುಗಾಲಿಕ್ಕುತ್ತಾ ಗಾಡಿಗೆ ಕಸ ಹಾಕುವುದರಲ್ಲಿ ಬ್ಯುಸಿ..! ವಾರಕ್ಕೆರಡೇ  ಬಾರಿ ಕಸಪ್ಪನ ಆಗಮನ ನಮ್ಮ ಏರಿಯಾಕ್ಕೆ. ಮನೆಯನ್ನೇ ಮಗುಚಿ ಬಿಡುವರೆನೋ ಎನ್ನುವಷ್ಟು ಕಸ ಶೇಖರಣೆ ಯಾಗಿರುತ್ತದೆ.   ಈ ಕ್ಲಿಷ್ಟಕರ  ಸಮಯದಲ್ಲಿ ಬಡಪಾಯಿ ಗಂಡಂದಿರೇನಾದರೂ  ಪೇಪರ್ ಓದುತ್ತಾ ಕೂತಿದ್ದುದು ಕಣ್ಣಿಗೆ ಬಿದ್ದಿದ್ದೆ ಹೌದಾದರೆ ಥೇಟ್ ಶುದ್ಧ ಸೋಮಾರಿಯಂತೆಯೇ ಕಂಡು ಹೆಂಗಸರ  ಉಗ್ರ ನೇತ್ರಗಳಿಗೆ ಆ ದಿನವಿಡೀ ಈಡಾಗಬೇಕಾಗುತ್ತದೆ..!!!
ಮೊದಲೆಲ್ಲಾ   ಹಸಿ ಒಣ ಅಂತೇನೂ  ಬೇರೆ ಮಾಡದೆ ಇದ್ದ ಹಾಗೆಯೇ ಕಸ ತಗೊಂಡು ಹೋಗಿ ನಿರ್ಲಕ್ಷ್ಯವಾಗಿ ಸುರುವಿ ಬಂದಿದ್ದರೆ ಮುಗಿದು ಹೋಗುತ್ತಿತ್ತು. ಈಗ ಕಾನೂನು..ಕಾನೂನು ಬಂದಿದೆಯಲ್ಲ.  ಹಸಿ,ಒಣ ವಿಷಯುಕ್ತ ಅಂತೆಲ್ಲಾ ವಿಂಗಡಿಸಿ ಕಸ ಹಾಕಬೇಕು ಅಂತ.  ಕಾನೂನು ಆಗಲೂ ಇತ್ತು, ಬಿಗಿ ಇರಲಿಲ್ಲ. ಕಸಪ್ಪ ಸೀಟೀ ಹೊಡೆಯುತ್ತಲೇ ನೆಲದ ಮೇಲೊಂದು ಕತ್ತರಿಸಿದ  ಪ್ಲಾಸ್ಟಿಕ್ ಚೀಲವೊಂದನ್ನು ಜಮಖಾನ ಹಾಸಿದಂತೆ  ಹಾಸಿ ಎಲ್ಲ ಕಸವನ್ನೂ ಮೊದಲು ಅದರ ಮೇಲೆ ಸುರುವಲು  ತಾಕೀತು ಮಾಡಿ ಅದರಲ್ಲೇನಾದರೂ ವ್ಯತ್ಯಾಸವಾಗಿ ಹಸಿ ಒಣ  ಮಿಕ್ಸ್ ಆಗಿದ್ದು ಕಂಡು ಬಂದರೆ ಕಸ ತಂದವರ ಹತ್ತಿರವೇ ಬೇರೆ ಬೇರೆ ಮಾಡಿಸುತ್ತಾನೆ. ಈಗ ಹೆಂಗಸರಿಗೆ ರಸ್ತೆಯ ಮೇಲೆ ಕಸ ಕೆದಕುವ ಗತಿ.. ಆಚೀಚೆಯವರು ಕಸ ಗೆಬರುವುದನ್ನು ನೋಡಿಯಾರೆಂಬ ಒಂತರಾ  ಆಗುವಿಕೆ, ಈ ಎಲ್ಲದರ ಮಧ್ಯೆ ಬೆಳಗಿನ ಗಡಿಬಿಡಿ ಎಲ್ಲವೂ ಸೇರಿ ತಲೆ ಪೂರಾ ಕಸದ ತೊಟ್ಟಿ..!
ಕಸಪ್ಪನ ಸ್ಟ್ರಿಕ್ಟ್ ಆಜ್ಞೆಯ ಮೇರೆಗೆ ಈಗ ಎಲ್ಲಾ ಕಸ ಬೇರೆ ಬೇರೆ ಮಾಡಿಯೇ ಕೊಡುತ್ತಾರೆ. ಇಲ್ಲದಿದ್ದರೆ ರಸ್ತೆಯಲ್ಲಿ ಕಸ ಹೆಕ್ಕಿಸುತ್ತಾನೆ ಅವನು..ಹಾಳಾದವನು. ಕಸ ವಾಪಾಸ್ ಕಳಿಸುತ್ತಾನೆ.  ಗಂಡ ಮಕ್ಕಳಿಗೆ ಹೆದರಿಸಿಯಾದರೂ ಕಸ ವಿಂಗಡಣೆಯ ಕಾನೂನು ಪಾಲನೆ ಮಾಡುತ್ತಾರೆ ಕಸಪ್ಪನ ಕಸ ಹೆಕ್ಕಿಸುವಿಕೆಗೆ ಹೆದರಿ. ಯಾವಾಗಲೂ ಅದು ಹಾಗೆಯೇ.. ಸುಮ್ಮನೆ ಹೇಳಿದರೆ ಯಾರು ಕೇಳುತ್ತಾರೆ..? ತಲೆ ಮೇಲೆ ಮೊಳೆ ಇಟ್ಟು  ಸುತ್ತಿಗೆ ಎತ್ತಿದರೆ ಮಾತ್ರ ಹೇಳಿದ ಮಾತು ಕೇಳುವುದು.ಕಸಪ್ಪನಾದರೂ ಅಷ್ಟೇ ಅವನಿಗೆ ಅಲ್ಲಿ ಬಿಸಿ, ನಮಗೆ ಇಲ್ಲಿ ಬಿಸಿ. ಏನಾದರೂ ಆಗಲಿ ಕಸಕ್ಕೊಂದು ಗತಿಯಾಯಿತಲ್ಲಾ, ಅಭ್ಯಾಸವಾಗುವ ವರೆಗೆ ಜನರಿಗೂ ರಗಳೆ, ನಂತರ ತನ್ನಿಂದ ತಾನೇ ಸರಿಯಾಗಿ ಬಿಡುತ್ತದೆ.ಬದಲಾಗಲಿಕ್ಕೆ ಸಮಯ ಮತ್ತು ಭಯ ಬೇಕಾಗುತ್ತದೆ!  ರೂಲ್ಸ್ ಫಾಲೋ ಮಾಡಲು ಸರಿಯಾಗಿ ಬಿಗಿ ಬೇಕು! 

ಹ್ಞೂ , ಕಸದ್ದೇ   ಸುದ್ದಿಯಾಯಿತು.. ನಾನಾದರೂ ಈ ನಡುವೆ ಕೆಲವು ಒಳ್ಳೆಯ ಕೆಲಸ ಮಾಡಿ ಒಳ್ಳೆಯವಳಾಗಲು ಹೊರಟಿದ್ದೇನೆ. ಕೆಲವಾರು ಚಿತ್ರ ಪತ್ರ ಬರೆದು ಖುಷಿ ಪಡುತ್ತಿದ್ದೇನೆ. ನಿಜ, ನನ್ನ ಈ ಚಿತ್ರ ಬರೆಯುವ ವಿಚಾರಕ್ಕೆ ಮಹಾ ಇತಿಹಾಸವೇ ಇದೆ ನಂಬಿ!  ಬಾಲ್ಯದಿಂದಲೂ ಚಿತ್ರ ಬರೆಯುತ್ತಿದ್ದುದರಿಂದ ಮತ್ತು ಈಗಲೂ ಅದೇ ತೆರದಲ್ಲಿ ಬರೆಯುವುದರಿಂದ ನನ್ನನ್ನು ನೀವು 'ಬಾಲ ಕಲಾವಿದೆ' ಎಂದು ಬೇಕಾದರೆ ಈಗಲೂ  ಕರೆಯಿರಿ  ಪರವಾಗಿಲ್ಲ..:)

ಹೈಸ್ಕೂಲು, ಕಾಲೇಜು ಕಲಿಯುವಾಗ ನನ್ನ ನೋಟ್ಸು, ರೆಕಾರ್ಡುಗಳ ರಕ್ಷಾ ಪುಟದ  ಮುಂಬದಿ ಮತ್ತು ಹಿಂಬದಿ,  ಮೊದಲ ಪುಟ, ಕೊನೆಯ ಪುಟ, ಮಧ್ಯದ ಪುಟ ಹೀಗೆ ಪುಸ್ತಕದ ಅನೇಕ ಕಡೆ ಚಿತ್ರ ಬರೆದಿಟ್ಟುಕೊಳ್ಳುತ್ತಿದ್ದೆ. ನನ್ನ ಪುಸ್ತಕವೊಂದೇ  ಅಲ್ಲದೆ ಗೆಳತಿಯರ ನೋಟ್ ಬುಕ್ಕುಗಳ ಮೇಲೂ. 'ಏ ನನಗೊಂದು ಚಿತ್ರ ಬರ್ಕೊಡೇ,' ಅನ್ನುತ್ತಾ ಒಬ್ಬೊಬ್ಬರಾಗಿ ತಮ್ಮ ನೋಟ್ಸ್ ಗಳನ್ನೂ ನನ್ನ ಮುಂದಿಡುತ್ತಿದ್ದರು.  ನಾನು  ಒಳ್ಳೆ ಆಸ್ಥಾನ ಕಲಾವಿದೆಯ ಹುರುಪಿನಲ್ಲಿ ಯಾರಿಗೂ ಇಲ್ಲವೆನ್ನದೇ ಎಲ್ಲರ ಪುಸ್ತಕದ ಮೇಲೂ ನವಿಲು, ಚಿಟ್ಟೆ, ಹೂಬಳ್ಳಿ, ತರತರ ಡಿಸೈನುಗಳೂ, ದೇವರುಗಳೂ, ತೀರಾ ಆಪ್ತರಿಗೆ ಎರಡೆರಡು ಚಿತ್ರಗಳೂ, ಹೀಗೆ ಬರೆದು ಪ್ರಾಕ್ಟೀಸ್ ಮಾಡುತ್ತಿದ್ದೆ. ಲೀಸರ್ ಪೀರಿಯಡ್ಡಿನಲ್ಲಿ , ಊಟದ ಸಮಯದಲ್ಲಿ, ಬಸ್ಸಿಗೆ ಕಾಯುತ್ತಿರುವ ಸಮಯದಲ್ಲಿ ಕೂರುವ ವ್ಯವಸ್ಥೆಯಿದ್ದರೆ, ಬಸ್ಸಿನಲ್ಲಿ, ಹೀಗೆ ಎಲ್ಲೆಂದರಲ್ಲಿ ನನ್ನ ಗೆಳತಿಯರಿಗೆ ಚಿತ್ರ ಬರೆದು ಕೊಡುತ್ತಿದ್ದೆ.  ನನ್ನ ಗೆಳತಿಯರ ಮಧ್ಯೆ  ಆಗ ನಾನು ಸಿಕ್ಕಾಪಟ್ಟೆ ವರ್ಲ್ಡ್ ಫೇಮಸ್ಸು!

ನನ್ನದೊಂದು ಸಮಸ್ಯೆ ಎಂದರೆ ಏನೋ ಮೂಡು ಬಂದಾಗ ಬರೆದು ಬಿಡುತ್ತೇನೆ. ಮತ್ತೆ ವರ್ಷಗಟ್ಟಲೆ ಬರೆಯದಿದ್ದರೂ ಆದೀತು.  ಯಾರಾದರೂ ಬರ್ಕೊಡು  ಅಂದಾಗ ಮಾತ್ರ  ನನಗೆ ಬರೆಯುವ ನೆನಪಾಗಿ ಬಿಡುತ್ತದೆ ಮಹಾ ದೊಡ್ಡದಾಗಿ.  ಹೀಗೆ ಸುಮ್ಮನೆ ಫೇಸ್ ಬುಕ್ಕಿನ ಗೆಳತಿಗೆ ಸರ್ಪ್ರೈಸ್ ಮಾಡಲು ಒಂದು ಚಿತ್ರ ಬರೆದು ಗೋಡೆಗೆ ತೂಗು ಬಿಟ್ಟಿದ್ದೆ. ಎಲ್ಲರೂ ಅದನ್ನು ಅವರೇ ಅಂತ ಗುರುತಿಸಿ ನನಗೇ  ಸರ್ಪ್ರೈಸ್ ಮಾಡಿದರು!  ಅಲ್ಲಿಂದ ಮುಂದೆ  ನನಗೆ ನನ್ನ ಶಾಲಾ ದಿನಗಳೇ ಎದುರಿಗೆ ಬಂದಿತು. ನಂದೊಂದು ಚಿತ್ರ ಬರ್ಕೊಡಿ. ಅನ್ನುವ ಸ್ನೇಹಮಯ ಬೇಡಿಕೆಗಳು. ಎಲ್ಲರ ಕಾಲ್ಪನಿಕ ನೋಟ್ಸುಗಳು.  ನನ್ನ ಎಲ್ಲಾ ಚಿತ್ರಗಳು ಏನು ಬರೆದಿದ್ದೀನೋ ಅದೇ ಆಗಿರುತ್ತದೆಂಬ ನಂಬಿಕೆ ನನಗೆ ಯಾವತ್ತೂ ಇಲ್ಲವಾದರೂ ಸುಮಾರು ಜನರ ಚಿತ್ರ ಬರೆದೆ.  ನಾನು ಚಿತ್ರಿಸಿದ ಗೆಳತಿಯರು ಹೋಲಿಕೆ ಇದೆಯೋ ಇಲ್ಲವೋ ಅಂತೂ ಚೆನ್ನಾಗಿದೆ ಅಂತ ಒಪ್ಪಿಕೊಂಡು ನನ್ನ ಬೆನ್ನು ತಟ್ಟಿ,  ಕಾಮೆಂಟು ಕುಟ್ಟಿ ನನಗೆ ಇನ್ನಷ್ಟು ಚಿತ್ರಿಸಲು ಪ್ರೋತ್ಸಾಹ ಕೊಡುತ್ತಿದ್ದಾರೆ. ನನ್ನ ಪೆನ್ಸಿಲ್ಲಿನ ಒರಟು ರೇಖೆಗಳಲ್ಲಿ  ಅವರ ಮುಖಗಳನ್ನು ಸುರೂಪವಾಗಿಸಿದ್ದೆನೆಯೋ ಕುರೂಪವಾಗಿಸಿದ್ದೇನೆಯೋ ಅಂತೂ ನನಗೆ ಮಾತ್ರ   ಅನೇಕ ರೀತಿಯ ಮುಖಗಳು ಸಿಕ್ಕು ನನ್ನ ಭಾವಚಿತ್ರ ಬರೆಯುವ ಕಲೆ ನನಗೇ ಅರಿವಿಲ್ಲದಂತೆ   ಅಭಿವೃದ್ಧಿಯಾಗುತ್ತಿದೆ. ನನಗೆ  ಯಾರಾದರೂ, ಬರೀ... ಅಂತ ನನ್ನ  ನೂಕ ಬೇಕು. ಇಲ್ಲದಿದ್ದರೆ ಬರೆದರಾಯಿತು ಅಂದುಕೊಂಡು ನಾಳೆಗೆ  ಇಟ್ಟುಕೊಳ್ಳುತ್ತೇನೆ. ಅದು ವರ್ಷ ಗಟ್ಟಲೆ ಮುಂದುವರೆದು ಬಿಡುತ್ತದೆ. ಈ ಕಸ ಹಾಕುವ ಕಾನೂನಿನಂತೆಯೇ. ಸ್ವಲ್ಪ ಒತ್ತಾಯ ಬೇಕು.ಜೊತೆಗೆ  ಮುಲಾಜು ಬೇಕು..!

 ಕೆಲವು  ಚಿತ್ರಗಳು.






















ಅಂತೂ ಇಂತೂ ಈ ಮೂರು ವರ್ಷಗಳು ನೀವು ನನ್ನ ರಗಳೆಯನ್ನು ಸಹಿಸಿಕೊಂಡು ಮತ್ತಷ್ಟು ರಗಳೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ.   ಟೆಕ್ನಾಲಜಿಯಲ್ಲಿ ನಾನು ಯಾವತ್ತೂ ಹಿಂದೆ ಮತ್ತು ಕಂಪ್ಯೂಟರ್ ನಲ್ಲಂತೂ ನಾನು ಅನಕ್ಷರಸ್ತೆ.  ಈಗೀಗ ವಯಸ್ಕರ ಶಾಲೆಯಲ್ಲಿ ಅಕ್ಷರ ಕಲಿಯುವಂತೆ ಮಕ್ಕಳಿಂದ ಚೂರು ಪಾರು ಕಲಿತುಕೊಂಡು ಬ್ಲಾಗು ಫೇಸ್  ಬುಕ್  ಬಳಸುವುದನ್ನು  ಗೊತ್ತು   ಮಾಡಿಕೊಂಡಿದ್ದೇನೆ. ಆದರೂ ಎಷ್ಟು ಮಾಡಿದರೂ ಕಾಗುಣಿತ ತಪ್ಪಿ ಹೋಗಿಬಿಡುತ್ತದೆ. ಸರಿ ಮಾಡಲು ಮತ್ತೆ ಕಷ್ಟ ಪಡಬೇಕು. ಕನ್ನಡವನ್ನು ಇಂಗ್ಲೀಷಲ್ಲಿ ಬರೆದು ಇಂಗ್ಲೀಷನ್ನು ಕನ್ನಡದ ಇಂಗ್ಲೀಶ್ ಸ್ಪೆಲ್ಲಿಂಗ್ ನಲ್ಲಿ ಬರೆಯುವ ಮಟ್ಟಕ್ಕೆ ಹೋಗಿಬಿಟ್ಟಿದ್ದೇನೆ. ಹೀಗೆ ಆಗಾಗ ಆಗುವ ಅಪಸವ್ಯವನ್ನು ತಿದ್ದುತ್ತಾ  ಮತ್ತೆ ಮತ್ತೆ ಬರೆಯಲು ಎಳಸುವ ನಿಮ್ಮ ಪ್ರೋತ್ಸಾಹಕರ ನುಡಿಗಳನ್ನು  ಈ ನಾಲ್ಕನೆಯ ವರ್ಷಕ್ಕೆ ಕಾಲಿಡುವ ಸಮಯದಲ್ಲಿ  ಮತ್ತೊಮ್ಮೆ ನೆನಪಿಸಿಕೊಳ್ಳುತ್ತಿದ್ದೇನೆ.

ಎಲ್ಲರಿಗೂ ವಂದನೆಗಳು.












Sunday, October 7, 2012

ಮನೋಚಿಕಿತ್ಸೆ ಅಥವಾ ಸೈಕೊಥೆರಪಿ

ಮನೋಚಿಕಿತ್ಸೆ ಅಥವಾ ಸೈಕೊಥೆರಪಿ
 ಮನೋರೋಗ ಚಿಕಿತ್ಸೆಯಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ೧. ಸೈಕಿಯಾಟ್ರೀ ೨. ಸೈಕೊಥೆರಪಿ.
ವೈದ್ಯಕೀಯ ಅಭ್ಯಾಸವನ್ನು ಮುಗಿಸಿದ ನ೦ತರ ಸೈಕಿಯಾಟ್ರಿಯನ್ನು ಹೆಚ್ಚಿನ ಓದಿಗಾಗಿ ಅಭ್ಯಾಸ ಮಾಡಿರುವವರು ಸೈಕಿಯಾಟ್ರಿಸ್ಟ್.  ಸೈಕೊಥೆರಪಿಯನ್ನು ಅಭ್ಯಾಸಮಾಡಿರುವವರು ಸೈಕೊಥೆರಪಿಸ್ಟ್ ಅಥವಾ ಮನೋಚಿಕಿತ್ಸಕ.
ಮನೋಚಿಕಿತ್ಸೆ ಅಥವಾ ಸೈಕೋ ಥೆರಪಿ ಇದು  ಮನೋರೋಗ ಚಿಕಿತ್ಸೆಯಲ್ಲಿ  ಬಳಸಲಾಗುವ ಒ೦ದು ವಿಧಾನ.  ದೇಹಕ್ಕೆ ಯಾವುದೇ ಔಷಧಿ ಕೊಡದೇ, ವೈಜ್ಣಾನಿಕವಾಗಿ ರೂಪುಗೊ೦ಡ ಸಿದ್ಧಾ೦ತಗಳನ್ನು ಬಳಸಿ ಅಸಮತೋಲನಗೊ೦ಡಿರುವ  ಮಾನಸಿಕಕ್ರಿಯೆಯನ್ನು ಮತ್ತು  ಇದರಿ೦ದ ಕಾಣಿಸಿಕೊಳ್ಳುವ ದೈಹಿಕತೊ೦ದರೆಗಳನ್ನು ಗುಣಪಡಿಸುವ ಒ೦ದು ಅತ್ಯುತ್ತಮ ವಿಧಾನವೇ ಮನೋಚಿಕಿತ್ಸೆ.
ಇಲ್ಲಿ ಬಳಸಲಾಗುವ ಪ್ರಧಾನ ಮಾಧ್ಯಮವೆ೦ದರೆ ಸ೦ವಹನ ಅಥವಾ ಮಾತು. ಮಾತನ್ನು ಎಷ್ಟು ಪರಿಣಾಮಕಾರಿಯಾಗಿ ಮತ್ತು ಕ್ರಿಯಾಶೀಲವಾಗಿ ಬಳಸಲು ಬಲ್ಲರೋ ಅ೦ತವರು   ಈ ವಿಭಾಗದಲ್ಲಿ ಯಶಸ್ಸು ಹೊ೦ದುತ್ತಾರೆ.  ಇದಲ್ಲದೇ ಸೂಕ್ಶ್ಮ ಒಳನೋಟ, ಉತ್ತಮ ಸ೦ಬ೦ಧ, ಅರಿವು, ಜ್ಣಾನ,  ಸ್ವೀಕಾರ ಮನೋಭಾವ,ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳುವಿಕೆ, ಸಮಸ್ಯೆಗೆ ಪರಿಹಾರ, ಸಾಮಾಜಿಕ ಕಳಕಳಿ, ಕೌಶಲ್ಯ, ಅನುಭೂತಿ ಶಕ್ತಿ ಮು೦ತಾದ ಗುಣಗಳನ್ನು ಬೆಳೆಸಿಕೊ೦ಡಲ್ಲಿ ಉತ್ತಮ ಥೆರಪಿಸ್ಟ್ ಆಗಬಲ್ಲರು.

ಸೈಕೊಥೆರಪಿಯ ಮುಖ್ಯ ಉದ್ದೇಶವೆ೦ದರೆ ಮನುಷ್ಯ  ಜೀವನದಲ್ಲಿ ಉತ್ತಮ ಮಾನಸಿಕ  ಆರೋಗ್ಯವನ್ನು ಅನುಭವಿಸುವ೦ತೆ ಮಾಡುವುದು. ಒಬ್ಬ ವ್ಯಕ್ತಿಗೆ ಏನು ಆಗುತ್ತಿದೆ ಅಥವಾ ಯಾಕೆ ಆಗುತ್ತಿದೆ ಅನ್ನುವುದನ್ನು ಗಮನಿಸುತ್ತಾ ಆಗುತ್ತಿರುವ ಅಸಮತೋಲನವನ್ನು ಬದಲಾಯಿಸಿ ಸಮತೋಲನಕ್ಕೆ ತರುವ ವೈಜ್ಣಾನಿಕ ತ೦ತ್ರವೇ ಸೈಕೊಥೆರಪಿ.
ಇಲ್ಲಿ ಮುಖ್ಯವಾಗಿ ಮಾನಸಿಕ ಸಮಸ್ಯೆ ಇರುವ ವ್ಯಕ್ತಿಯ ವರ್ತನೆಗಳನ್ನು ಮತ್ತು ಯೋಚನಾಕ್ರಮವನ್ನು ಗಮನಿಸುತ್ತಾ ಅದಕ್ಕೆ ಸರಿಯಾದ ಚಿಕಿತ್ಸಾ ಕ್ರಮ ರೂಪಿಸಲು ಅನೇಕ ರೀತಿಯ ವೈಜ್ಞಾನಿಕ  ತ೦ತ್ರಗಳನ್ನು ಥೆರಪಿಸ್ಟ್ ರೂಪಿಸಿಕೊಳ್ಳುತ್ತಾನೆ. ಥೆರಪಿಸ್ಟನ ಉದ್ಧೇಶವೆ೦ದರೆ ಸಮಸ್ಯೆಯುಳ್ಳ ವ್ಯಕ್ತಿಯ ಯೋಚನಾವಿಧಾನವನ್ನು ಬದಲಿಸಿ ಗುರಿ ಸಾಧಿಸುವುದು.

ಇ೦ದಿನ ನಾಗಾಲೋಟದ ಯುಗದಲ್ಲಿ ನಾಗರೀಕತೆ ಬೆಳೆದ೦ತೆ ಪ್ರತಿಯೊಬ್ಬ ವ್ಯಕ್ತಿಯೂ ಒ೦ದಿಲ್ಲೊ೦ದು ಸಮಸ್ಯೆಯಲ್ಲಿ, ಗೊ೦ದಲದಲ್ಲಿ ಸಿಲುಕಿಕೊಳ್ಳುತ್ತಿದ್ದಾನೆ.  ಒತ್ತಡ, ಖಿನ್ನತೆ ಇವುಗಳ ನಿಯ೦ತ್ರಣಕ್ಕೆ ನಾನಾ ರೀತಿಯ ಉಪಶಮನಗಳ ಮೊರೆ ಹೋಗುತ್ತಾನೆ. ಸತತವಾಗಿ ದೈಹಿಕಕಾಯಿಲೆಗಳಿ೦ದ ಮಾನಸಿಕ ಕಾಯಿಲೆಗಳಿಗೆ, ಮಾನಸಿಕ ಕಾಯಿಲೆಗಳಿ೦ದ ದೈಹಿಕ ಕಾಯಿಲೆಗಳಿಗೆ ಒಳಗಾಗುತ್ತಲೇ ಇರುತ್ತಾನೆ. ಹಾಗಾಗಿ ಪ್ರತಿಯೊಬ್ಬನಿಗೂ ಒ೦ದಿಲ್ಲೊ೦ದು ತರದಲ್ಲಿ  ಸಾ೦ತ್ವಾನದ ಆವಶ್ಯಕತೆ ಹೆಚ್ಚಾಗುತ್ತಲೇ ಇದೆ.


ಥೆರಪಿಸ್ಟ್ ಎ೦ದರೆ ಯಾವುದೇ ಔಷಧ ಕೊಡದೇ ಮನೋರೋಗವನ್ನು ವಾಸಿಮಾಡುವ ಚಿಕಿತ್ಸಕ. ಸೈಕೊ ಥೆರಪಿಸ್ಟ್ ಆಗಲು ಇರಬೇಕಾದ  ವಿದ್ಯಾರ್ಹತೆಗಳೆ೦ದರೆ, ಅದರಲ್ಲಿ ಎರಡು ಬಗೆಯಾಗಿ ವಿ೦ಗಡಿಸಬಹುದು.
೧.    ಎಮ್.ಬಿ.ಬಿ.ಎಸ್ ಮುಗಿಸಿ ಸೈಕಿಯಾಟ್ರಿಯಲ್ಲಿ ಪರಿಣತರಾದವರೂ, ಸೈಕಾಲಜಿಯಲ್ಲಿ ಡಿಗ್ರೀ ಮುಗಿಸಿ  ಸ್ನಾತಕೋತ್ತರ ಶಿಕ್ಷಣ ಎಮ್.ಎ ಅಥವಾ ಎಮ್. ಎಸ್ಸಿ.  ಪಡೆದವರು ಸೈಕೊಥೆರಪಿ ಮಾಡಬಹುದು.  
೨.    ಯಾವುದೇ ರೀತಿಯ ವೈದ್ಯರೂ ಅಲ್ಲದೆ, ಮನ:ಶಾಸ್ತ್ರದ ಪದವಿ ಪಡೆಯದವರೂ ಕೂಡಾ ಆಸಕ್ತಿಯಿದ್ದಲ್ಲಿ  ಕೆಲವು ಸ೦ಸ್ಥೆಗಳು ನಡೆಸುವ ತರಬೇತಿಗಳನ್ನು ಪಡೆದು  ಮನೋ ಚಿಕಿತ್ಸೆ  ಮಾಡಬಹುದು.

ಮನೋಚಿಕಿತ್ಸೆಗೆ ಸ೦ಭ೦ಧಿಸಿದ೦ತೆ ಅನೇಕ ರೀತಿಯ ತರಬೇತಿಗಳಿವೆ. ಹಿಪ್ನೋಟಿಸ೦, ಗೆಸ್ಟಾಲ್ಟ್ ಥೆರಪಿ, ಟ್ರಾನ್ಸ್ಯಾಕ್ಷನಲ್ ಅನಾಲಿಸಿಸ್,ಸೈಕೊಅನಾಲಿಸಿಸ್, ಪಾಸಿಟಿವ್ ಸೈಕೊಥೆರಪಿ,ಗ್ರೂಪ್ ಸೈಕೊ ಥೆರಪಿ,ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ,  ನಾನ್-ಡೈರೆಕ್ಟಿವ್ ಕೌನ್ಸೆಲಿ೦ಗ್, ರಾಶನಲ್ ಎಮೋಟಿವ್ ಥೆರಪಿ ಮು೦ತಾದವು ಮುಖ್ಯವಾದವುಗಳು.

 *  ಮನೋಚಿಕಿತ್ಸೆ ಬಳಕೆಯಾಗುವ ಕ್ಷೇತ್ರಗಳು.

ವ್ಯಕ್ತಿಯೊಬ್ಬನ ವೈಯಕ್ತಿಕ ಬದುಕಿಗೆ,ಮಾನಸಿಕ ಒತ್ತಡ, ಖಿನ್ನತೆ,ಭಯ, ಉದ್ವೇಗ  ಮು೦ತಾದ ಮಾನಸಿಕ ರೋಗಗಳಿಗೆ, ಲೈ೦ಗಿಕಸಮಸ್ಯೆಗಳಿಗೆ, ಕೌಟು೦ಬಿಕ ಸಮಸ್ಯೆಗಳಿಗೆ,  ವೈವಾಹಿಕ ಸಮಸ್ಯೆಗಳಿಗೆ, ಹರೆಯದ ಸಮಸ್ಯೆಗಳಿಗೆ, ಮಕ್ಕಳಿಗೆ, ಪೋಷಕರಿಗೆ,  ಶಾಲಾ ಕಾಲೇಜುಗಳಲ್ಲಿ,   ಔದ್ಯೋಗಿಕ ಕ್ಷೇತ್ರಗಳಲ್ಲಿ, ಆಸ್ಪತ್ರೆಗಳಲ್ಲಿ, ಸಮಾಜಸೇವಾ ಸ೦ಸ್ಥೆಗಳಲ್ಲಿ, ಪುನರ್ವಸತಿ ಕೇ೦ದ್ರಗಳಲ್ಲಿ, ದೈಹಿಕ ಮತ್ತು ಮಾನಸಿಕ ಹಲ್ಲೆಗೊಳಗಾದ ವ್ಯಕ್ತಿಗಳಿಗೆ, ಮಾನಸಿಕ ಸ೦ಘರ್ಷ ಹೊ೦ದಿರುವವರಿಗೆ, ಈ ಎಲ್ಲಾ ಕ್ಷೇತ್ರಗಳಲ್ಲಿ ತಲೆದೋರುವ ಮಾನಸಿಕ  ಅಸ್ತವ್ಯಸ್ತತೆಗೆ ಮನೋಚಿಕಿತ್ಸೆಯ ಮೂಲಕ ಪರಿಹಾರ ಕೊಡಬಹುದಾಗಿದೆ. 

ಮನೋಚಿಕಿತ್ಸೆ ಕೇವಲ ಚಿಕಿತ್ಸಕ ಅಳವಡಿಸಿಕೊಳ್ಳುವ ತ೦ತ್ರಗಾರಿಕೆ ಮತ್ತು ಕೌಶಲ್ಯದ ಮೇಲೆಯೇ ಅವಲ೦ಬಿತವಾಗಿರುವುದರಿ೦ದ ಈ ವೃತ್ತಿಯನ್ನು ಕೈಗೊಳ್ಳಲು ಯಾವುದೇ ಮೂಲ ಬ೦ಡವಾಳದ ಅವಶ್ಯಕತೆಯಿರುವುದಿಲ್ಲ.  ಬೇರೆಯವರ ಅಳಲಿಗೆ ಎಷ್ಟು ಸಮರ್ಪಕವಾಗಿ ಭುಜ ಕೊಟ್ಟು ಅವರ ದು:ಖವನ್ನು ಕಡಿಮೆಮಾಡಲು ಸಾಧ್ಯ ಅನ್ನುವುದೇ ಈ ವೃತ್ತಿಯ ಮೂಲ ಬ೦ಡವಾಳ. ಇದು ಸಮಾಜಸೇವೆಯ ಒ೦ದು ಮುಖವೂ ಹೌದು.   ದೇಹಾರೋಗ್ಯಕ್ಕಾಗಿ ಒಬ್ಬ ವೈದ್ಯ ಎಷ್ಟು ಬಗೆಯಲ್ಲಿ ಸೇವೆ ಸಲ್ಲಿಸಲು ಸಾಧ್ಯವೋ ಅದೇ ಬಗೆಯಲ್ಲಿ ಮನಸ್ಸಿನ ಆರೋಗ್ಯದಲ್ಲೂ ಸಲ್ಲಿಸಬಹುದು.ಚಿಕಿತ್ಸೆಯ ವಿಧಾನವೊ೦ದನ್ನು ಹೊರತುಪಡಿಸಿ ಮನೋಚಿಕಿತ್ಸಕ ಒಬ್ಬ ನಿಜವಾದ ವೈದ್ಯನ೦ತೆಯೇ ಕೆಲಸ ಮಾಡುತ್ತಾನೆ.  ಭಾರತದಲ್ಲಿ  ಮನಸ್ಸಿಗೆ ಸ೦ಬ೦ಧಿಸಿದ ಸಮಸ್ಯೆಗಳೆಲ್ಲವನ್ನೂ ತು೦ಬಾ ಮಡಿವ೦ತಿಕೆಯಿ೦ದ ಮತ್ತು ತಾತ್ಸಾರದಿ೦ದ ನೋಡುವುದರಿ೦ದ ಅಲ್ಲದೇ  ಆ ನಿಟ್ಟಿನಲ್ಲಿ ಸಾಕಷ್ಟು ಅಜ್ಣಾನವೂ ತು೦ಬಿರುವುದರಿ೦ದ ಈಗೀಗಷ್ಟೇ ಸೈಕಾಲಜಿ ಆಗಲೀ ಅದರ ಶಾಖೆಗಳಾಗಲೀ ಮಹತ್ವವನ್ನು ಪಡೆದುಕೊಳ್ಳುತ್ತಿವೆ. ಧಾವ೦ತದ ಬದುಕಿನ  ಮು೦ದಿನ ದಿನಗಳಲ್ಲಿ ದೈಹಿಕ ಚಿಕಿತ್ಸೆಗಿ೦ತಲೂ ಮನೋಚಿಕಿತ್ಸೆಯೇ  ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆಯೆ೦ದರೆ ಉತ್ಪ್ರೇಕ್ಷೆಯಲ್ಲ. ಈ ಸೈಕೊಥೆರಪಿ ಅನ್ನುವುದು ವೃತ್ತಿಬದುಕಿಗೊ೦ದೇ ಅಲ್ಲದೇ ವೈಯಕ್ತಿಕ ಬದುಕಿಗೂ ಕೂಡಾ ತು೦ಬಾ ಸಹಾಯಕಾರಿಯಾಗಲಿದೆ.

  * ಸೈಕೊ ಥೆರಪಿಯ ಬಗ್ಗೆ  ತರಬೇತಿ ನೀಡುವ  ಸ೦ಸ್ಥೆಗಳು.

ಪರಿವರ್ತನ- ಕೌನ್ಸೆಲಿ೦ಗ್,ಟ್ರೈನಿ೦ಗ್ ಎ೦ಡ್ ರೀಸರ್ಚ್ ಸೆ೦ಟರ್, ಇ೦ದಿರಾನಗರ. ಬೆ೦ಗಳೂರು.
ಮೆಡಿಸೆಕ್ಸ್ ಫೌ೦ಡೇಶನ್ಸ್, ರಾಜಾಜಿನಗರ.ಬೆ೦ಗಳೂರು.
ಸೀಡ್ ಥೆರಪಿ ಸೆ೦ಟರ್. ಇ೦ದಿರಾನಗರ,ಬೆ೦ಗಳೂರು.
ಹೃದಯಶಕ್ತಿ -ಎ ಸೆ೦ಟರ್ ಫಾರ್ ಕೌನ್ಸೆಲಿ೦ಗ್,ಸೈಕೊಥೆರಪಿ ಎ೦ಡ್ ಸೈಕೊಲೊಜಿಕಲ್ ಅಸೆಸ್ಮೆ೦ಟ್. ಎಚ್,ಎಸ್,ಆರ್ ಲೇಔಟ್. ಬೆ೦ಗಳೂರು.

 ಮಾನಸ ಎಜುಕೇಶನ್ ಫೌ೦ಡೇಶನ್ ಫಾರ್ ಮೆ೦ಟಲ್ ಹೆಲ್ತ್. ಕುವೆ೦ಪು ಯೂನಿವರ್ಸಿಟಿ.  ಶಿವಮೋಗ್ಗ  - ಇಲ್ಲಿ  ಸೈಕೊ ಥೆರಪಿಯಲ್ಲಿ ದೂರ ಶಿಕ್ಷಣದ ಮೂಲಕ ಪಿ.ಜಿ. ಡಿಪ್ಲೋಮ ಕೋರ್ಸ್ ಮಾಡಲು ಅವಕಾಶವಿದೆ.
ತಮಿಳುನಾಡು ಓಪನ್ ಯೂನಿವರ್ಸಿಟಿಯಲ್ಲಿ ಸೈಕೊಥೆರಪಿಯಲ್ಲಿ ಎಮ್.ಎಸ್ಸಿ ಮಾಡಲು ಅವಕಾಶವಿದೆ.

ಸೈಕೊಥೆರಪಿಯನ್ನು ವೃತ್ತಿಯನ್ನಾಗಿ ಆಯ್ದುಕೊಳ್ಳಲು ಆಸಕ್ತಿಯುಳ್ಳವರು ಈ ತರಬೇತಿಗಳನ್ನು ಕೊಡುವ ಕೇ೦ದ್ರಗಳಿ೦ದ ಥೆರಪಿ ಮಾಡಲು ಸೂಕ್ತ ತರಬೇತಿ, ಪ್ರಮಾಣಪತ್ರ ಮತ್ತು  ಸನ್ನದು ಹೊ೦ದಬೇಕಾಗುತ್ತದೆ.


ದಿನಾ೦ಕ ೦೮-೧೦-೨೦೧೨ ರ ವಿಜಯಕರ್ನಾಟಕದ ಶಿಕ್ಷಣ ಆವೃತ್ತಿ ವಿಕೆ ಎಜುಕೇಷನ್ ನಲ್ಲಿ ಪ್ರಕಟಗೊ೦ಡಿದೆ.

Sunday, September 30, 2012

ತುಂತುರು ಹನಿಗಳು.

 ಫೇಸ್ ಬುಕ್ಕಿನ ಗೋಡೆಯಲ್ಲಿ ಬರೆದ ನನ್ನ  ಕೆಲ  ತುಂತುರು ಹನಿಗಳು.


ನೀರಸ!

ರಾತ್ರಿಯಿಡೀ
ನಿದ್ರೆಗೊಡದೇ
ಗಲ್ಲಕ್ಕೆ ಹಚ್ಚೆ ಚುಚ್ಚಿದ್ದು
ನಲ್ಲನೇನು..?
ಅಲ್ಲ, ಚಚ್ಚಿ ಹಾಕಿದ್ದೇನೆ
ನೋಡು ಯಕಶ್ಚಿತ್ ಸೊಳ್ಳೆ!

----------------------------------

ವ್ಯತ್ಯಾಸ!
 
ನಾನ್ಯಾವತ್ತೂ ದೊಡ್ಡವರೊ೦ದಿಗೇ
ಹೋಲಿಸಿಕೊಳ್ಳುವುದು.
ಲತಾ ಮ೦ಗೇಶ್ಕರ್ ಗೂ ನನಗೂ ಒ೦ದೇ ವ್ಯತ್ಯಾಸ..
.
.
.
.
ಅವರು ಹಾಡುತ್ತಾರೆ,
ನಾನು ಹಾಡೋಲ್ಲ...!!!

--------------------------------------------------------


 ಕೆಲಸ..

 ಆಯಾ ದಿನದ ಕೆಲಸ
ಅ೦ದೇ ಮುಗಿಸಿ ಎ೦ದದ್ದಕ್ಕೆ
ಎಲ್ಲರೂ ಅ೦ದ೦ದೇ
ದಿನ ಮುಗಿಸಿದರು!

---------------------------------------

 ಹೆಸರು..

ಚಿತ್ರಾನ್ನ ಮಾಡಿದ೦ದು
ನನ್ನವರು ನನ್ನ
ಕರೆದದ್ದು,
ಚಿತ್ರಾ೦ಗೀ ಎಂದು !

  --------------------------------------------


ಜ್ಣಾನೋದಯ!

 ಜೀವನ ಒ೦ದು ವಾಶಿ೦ಗ್ ಮಶಿನ್ನು ಕಣೇ..
ಸೆನ್ಸರ್ ಸರಿ ಇದ್ದರೆ ಸರಿ
ಇಲ್ಲಾ.. ನೀರು ಓವರ್ ಫ್ಲೋ ಆಗುತ್ತೆ
ಇಲ್ಲಾ.. ನೀರೇ ತಗೋಳ್ಳಲ್ಲ..
ಒಮ್ಮೆ ತಿರುಗುತ್ತೆ ಇನ್ನೊಮ್ಮೆ ಹಿ೦ಡುತ್ತೆ..
ಕೆಲವೊಮ್ಮೆಸುಮ್ಮನೆ ಗುಮ್ ಅ೦ತ ಕೂತಿರುತ್ತೆ.
ರಿಪೇರಿಗೆ ಮತ್ಯಾರನ್ನೋ ಕರೆಸು,ರಾಜೀ ಮಾಡಿಸು..
ಸರಿಯಾಗೋ ಹೊತ್ತಿಗೆ ಸಾಕಾಗುತ್ತೆ..
ಜೀವನ ಒ೦ದು ವಾಶಿ೦ಗ್ ಮಶಿನ್ನು ಕಣೇ..

[ ಮಧ್ಯಾಹ್ನದ ಹೊತ್ತಲ್ಲಿ ನನ್ನವರಿಗೆ ಆದ ಜ್ಣಾನೋದಯ]...:)


-------------------------------------------------------
ಶೂನ್ಯ

ಬದುಕೆ೦ಬುದೊ೦ದು ಶೂನ್ಯ ಎ೦ದರು,
ಹೌದು ಬದುಕು ಶೂನ್ಯ,
ಶ್ಯೂನ್ಯವೆ೦ದರೆ ಸೊನ್ನೆ,
ಸೊನ್ನೆಯೆ೦ದರೆ ವೃತ್ತ,
ವೃತ್ತ ತಿರುಗುತ್ತಾ ಚಕ್ರ
ಬದುಕು ಚಕ್ರದ೦ತೆ ಸುತ್ತುತ್ತದೆ,
ಹಾಗಾಗಿ ಬದುಕೆ೦ಬುದು ಶೂನ್ಯ..!
ನಾನು ಸಾಧಿಸಿ[prove] ತೋರಿಸಿದೆ!
 --------------------------------------------------------------------------
 

Tuesday, September 25, 2012

ಚಕ್ಕುಲಿ ಮಾಡಿ ನೋಡಿ..

ಚೌತಿ ಬರಲು ಎರಡು ವಾರಗಳಿರುವಂತೆಯೇ  ಊರಲ್ಲಿ  ಚಕ್ಕುಲಿ ಮಾಡಲು ತಯಾರಿ ಶುರುವಾಗುತ್ತದೆ. ಅಕ್ಕಿ ತೊಳೆದು ಆರಲು ಹಾಕಿ, ಕಾಳು, ಬೇಳೆಗಳನ್ನು ಹೊಂಬಣ್ಣ ಬರುವವರೆಗೆ ಹುರಿದು ಎಲ್ಲವನ್ನೂ ಡಬ್ಬ ತುಂಬಿ ಹಿಟ್ಟು ಮಾಡಿಸಿಕೊಂಡು ಬರಲು ಮನೆಯ ಗಂಡಸರ ಹೆಗಲಿಗೇರಿಸಿದರೆ ಅಲ್ಲಿಗೆ ಮೊದಲ  ಹಂತದ ಹಬ್ಬದ  ತಯಾರಿ ಶುರುವಾಯಿತೆಂದೇ ಲೆಕ್ಕ. ಹಬ್ಬ ಈಗ ಹೇಗೋ ಮುಗಿದಿದೆ. ಈಗ ಇವರ ವರಾತ ಶುರುವಾ..! ಎಂದುಕೊಳ್ಳುವಿರಿ  ನನಗೆ ಗೊತ್ತು. ಹಬ್ಬ ಮುಗಿದರೂ ಹಬ್ಬಕ್ಕೆ ಮಾಡಿದ ಚಕ್ಕುಲಿ ಡಬ್ಬದಲ್ಲಿ ಇರುತ್ತಲ್ಲ!     ಅದು ಖಾಲಿಯಾಗುವವರೆಗೂ ಹಬ್ಬ ಚಾಲ್ತಿಯಲ್ಲಿದೆ ಅಂತ  ತಿಳಿಯಬೇಕು!


ಎಲ್ಲ ಹೆಂಗಳೆಯರಿಗೂ   ತಾವು ಮಾಡಿದ ಚಕ್ಕುಲಿ ಸಪೂರಾಗಿ, ಗರಿಗರಿಯಾಗಿ ಇರಬೇಕೆಂಬ ಬಯಕೆ. ಅದಕ್ಕಾಗಿ ನಾನಾತರದಲ್ಲಿ ಹರಸಾಹಸವನ್ನೇ ಮಾಡುತ್ತಾರೆ. ಹಿಟ್ಟಿಗೆ ಎಣ್ಣೆ, ಬೆಣ್ಣೆ, ಹಾಲುನೀರು, ಯಾವ್ಯಾವುದೋ ಮರದ ಕಾಂಡದ ನೀರು, ಯಾವ್ಯಾವುದೋ ಬೇಳೆ ಕಾಳು  ಬೇಯಿಸಿ ಹಿಟ್ಟು ಮಾಡಿಕೊಳ್ಳುವುದೂ, ಅದು ಬಣ್ಣ ಗೆಟ್ಟು ಕರಿಮುಖನಿಗೆ ಕರಿ ಚಕ್ಕುಲಿಯಾಗಿ, ಗಟ್ಟಿ ಯಾಗಿ ಕೊನೆಗೆ ನಾಯಿ ಎಲುಬು ಕಡಿದಂತೆ, ಹಲ್ಲಿನಿಂದ  ಕಟ ಕಟ ಸದ್ದಿನೊಂದಿಗೆ  ಕಡಿಯುವಂತಾಗಿ ಅವಮಾನಗೊಳುವ  ಸಮಸ್ಯೆಗಳು ಹೆಂಗಳೆಯರಿಗೆ ಸಾವಿರಾರು.  ಚೂರೇ  ಚೂರು ಹದ ತಪ್ಪಿದರೂ ಗಟ್ಟಿಯಾಗೋ, ಮೆತ್ತಗಾಗೋ ಆಗಿ, ಈ ಸಲದ ಚಕ್ಕುಲಿಯೊಂದು ಹೀಗಾಗ್ಬಿಟ್ಟಿದೆ, ಅಂದುಕೊಳ್ಳುತ್ತಲೇ ಗಣೇಶನನ್ನು ನೋಡಲು  ಬಂದವರ ಮುಂದೆ ಚಕ್ಕುಲಿ, ಪಂಚಕಜ್ಜಾಯದ ತಟ್ಟೆ ಇಡಬೇಕಾದ ಅನಿವಾರ್ಯತೆ ಮತ್ತು ತಪ್ಪಿತಸ್ತ ಭಾವ!


ನಾವು ಚಿಕ್ಕವರಿರುವಾಗ ಹಬ್ಬದ ಮರುದಿನ ಗಣೇಶನನ್ನು ನೋಡಲು ಎಲ್ಲರ ಮನೆಗಳಿಗೆ ಹೋಗುವುದು ಸಾಮಾನ್ಯವಾಗಿತ್ತು  ಮತ್ತು ಅದು ಸಂತಸದ ವಿಷಯ. ಒಮ್ಮೆ ಯಾರದ್ದೋ ಮನೆಗೆ  ನಾನು ಗೆಳತಿಯ ಸಂಗಡ ಹೋಗಿದ್ದೆ. ಅಲ್ಲಿ  ಮಕ್ಕಳಿಗೆ ಅಂತ ಚಕ್ಕುಲಿಯನ್ನು ಎರಡು ಜಾಸ್ತಿನೇ ಇಟ್ಟಿದ್ದರು. ಲಗುಬಗೆಯಿಂದ ಚಕ್ಕುಲಿಯೊಂದನ್ನು ಬಾಯಿಗಿಟ್ಟು   ಕಚ್ಚಿದ್ದೆ ತಡ.. ನನ್ನ ಹಾಲುಹಲ್ಲು 'ಪಟಕ್' ಎಂದಿತು.ಅದೆಷ್ಟು ಗಟ್ಟಿಯಿತ್ತೆಂದರೆ ಎರಡು ಕಲ್ಲಿನ ಮದ್ಯೆ ಇಟ್ಟು  ಜಜ್ಜಿದರೂ ಮುರಿಯದಷ್ಟು. ಮೊದಲ ಹಲ್ಲು ಹೀಗೆ ಮುರಿದಿದ್ದು ನನಗೆ ಭಯವಾಯಿತು. ಮಾತೆ ಆಡದೇ ಸುಮ್ಮನೆ ಹೊರಗೆ ಬಂದು ಬಾಯಲ್ಲಿ ತುಂಬಿಕೊಂಡ ರಕ್ತ ಉಗುಳಿದ್ದೆ. ಮತ್ತೆ ಅಲ್ಲಿಂದ ಅವರ  ಪಕ್ಕದ ಮನೆಗೆ ಹೋದೆವು. ಅಲ್ಲಿಯ ಗಣೇಶ ಸುಂದರನಾಗಿದ್ದ. ದೊಡ್ಡ ಗಣೇಶ,ದೊಡ್ಡ ಹೊಟ್ಟೆ. ಮುರಿದ ಹಲ್ಲು ಮಾತ್ರಾ ಇನ್ನೂ  ಸುಂದರವಾಗಿ ಕಾಣುತ್ತಿತ್ತು. ಅದಕ್ಕೊಂದು ಉಂಗುರ ಬೇರೆ ಇತ್ತು! ನನಗೆ ಮೊದಲ ಮನೆಯವರು ಕೊಟ್ಟ ಚಕ್ಕುಲಿ ಮತ್ತು   ಮುರಿದ ಹಲ್ಲು ನೆನಪಾಯಿತು. ಹೀಗೆ ಎಲ್ಲರ ಮನೆ ಗಣೇಶನನ್ನೂ ನೋಡಿ ವಾಪಾಸು  ಬರುತ್ತಿರುವಾಗ ನನ್ನಮ್ಮ ಹೇಳಿದ  ಚಂದ್ರ ನಕ್ಕ ಕತೆ ನೆನಪಾಗುತ್ತಿತ್ತು. ಯಾಕೋ ಒಂದಕ್ಕೊಂದು ತಾಳೆಯೇ  ಆಗುತ್ತಿರಲಿಲ್ಲ.    ಅಂತಹಾ ವಿದ್ಯಾಬುದ್ಧಿ ಪ್ರಧಾಯಕ  ಗಣೇಶ, ತನ್ನ ಒಡೆದ ಹೊಟ್ಟೆಗೆ  ಅಶ್ವಿನೀ ದೇವತೆಗಳು ಹಾವು ಕಟ್ಟಿ ಸಕ್ಸಸ್ ಫುಲ್ಲಾಗಿ ಆಪರೇಷನ್ ಮಾಡಿದ್ದನ್ನು ಕಂಡು  ಚಂದ್ರ  ನಕ್ಕನೆಂದು, ಬುದ್ಧಿಯಿಲ್ಲದೆ ತನ್ನದೇ ಹಲ್ಲು ಮುರಿದು ಅವನೆಡೆಗೆ  ಒಗೆಯುತ್ತಾನೆಯೇ? ಅಷ್ಟೊಂದು ಬುದ್ಧಿಗೇಡಿಯೇ ಆ ದೇವರು.  ಅಲ್ಲವೇ ಅಲ್ಲ.  ಯಾವುದೋ ಭಕ್ತರ ಮುಲಾಜಿಗೆ ಸಿಕ್ಕು ಕಲ್ಲುಗಟ್ಟಿ  ಚಕ್ಕುಲಿ ತಿಂದು  ಈ ಪರಿಸ್ಥಿತಿಯನ್ನು ತಂದುಕೊಂಡಿದ್ದಾನೆ ಅನ್ನುವ ವಿಚಾರ ಆವತ್ತೇ ನನಗೆ ಮನದಟ್ಟಾಗಿತ್ತು. ಆಮೇಲಿಂದ  ಯಾರದ್ದೇ ಮನೆಗೆ ಹೋದರು ಚಕ್ಕುಲಿ ತಿನ್ನುವಾಗ ನನ್ನ ಹಲ್ಲಿನ ಸಾಮರ್ಥ್ಯವನ್ನೂ, ಚಕ್ಕುಲಿಯ ಗಟ್ಟೀ ತನವನ್ನೂ ಒಂದಕ್ಕೊಂದು ಹೋಲಿಸಿ ನಂತರ ಮುಂದಡಿಯಿಡುತ್ತೇನೆ!

ಅದಿರಲಿ, ಸಪೂರ,ಹೊಂಬಣ್ಣದ  ಗರಿಗರಿ  ಚಕ್ಕುಲಿ ಮಾಡುವ  ಸುಲಭ ವಿಧಾನವೊಂದನ್ನು ನಿಮಗೆ ಹೇಳುತ್ತೇನೆ.

ಕಡಲೆ ಬೇಳೆ  - 200 ಗ್ರಾಂ
ಉದ್ದಿನ ಬೇಳೆ - 100 ಗ್ರಾ
ಹೆಸರು ಬೇಳೆ - 100 ಗ್ರಾಂ
ಜೀರಿಗೆ           - ಎರಡು ಚಮಚ

  ಇವಿಷ್ಟನ್ನೂ ಬೇರೆ ಬೇರೆಯಾಗಿ ತೆಳು ಹೊಂಬಣ್ಣ ಬರುವ ವರೆಗೆ ಹುರಿದು ಬಿಸಿ ತಣಿದ ಮೇಲೆ ಮಿಕ್ಸಿಯಲ್ಲಿ ಪುಡಿ ಮಾಡಿ. ಸಾಣಿಗೆಯಿಂದ ಸಾಣಿಸಿ.

 ಅಕ್ಕಿಹಿಟ್ಟನ್ನು ಈಗ ಬಾಣಲೆಗೆ ಹಾಕಿ ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳಿ.

ನಾಲ್ಕು ಲೋಟ ಅಕ್ಕಿ ಹಿಟ್ಟಿಗೆ   ಒಂದು ಲೋಟ  ಬೇಳೆ  ಪುಡಿಯನ್ನು ಸೇರಿಸಿ ಮಿಕ್ಸ್ ಮಾಡಿಟ್ಟುಕೊಳ್ಳಿ. ಒಟ್ಟು ಐದು ಲೋಟ ಹಿಟ್ಟಾಯಿತು.
ಪಾತ್ರೆಯೊಂದಕ್ಕೆ ಐದು ಲೋಟ ನೀರು ಹಾಕಿ ಕುದಿಸಿ. ನೀರು ತೆಳುವಾಗಿ ಉಪ್ಪಾಗುವಷ್ಟು ಉಪ್ಪು ಸೇರಿಸಿ.  ಕುದಿದ   ನಂತರ ಒಂದು ಚಮಚ ಬಿಳಿ ಎಳ್ಳು, ಒಂದು ಚಮಚ ಓಮ ಸೇರಿಸಿ.  ಕುದಿಯುತ್ತಿರುವ ನೀರಿಗೆ ಹಿಟ್ಟು ಹಾಕಿ ಓಲೆ ಆರಿಸಿ. ನಂತರ ಚೆನ್ನಾಗಿ ಕದಡಿ ಸ್ವಲ್ಪ ಹೊತ್ತು ಮುಚ್ಚಿಟ್ಟು ಬಿಡಿ.  ಈಗ ನೀಟಾಗಿ ಉಂಡೆ ಮಾಡಿ  ಚಕ್ಕುಲಿ ಮಟ್ಟಿನೊಳಗೆ  ಹಾಕಿ, ಒತ್ತಿ ಚೆಂದಕ್ಕೆ ಚಕ್ಕುಲಿ ಸುತ್ತಿ ಎಣ್ಣೆಯಲ್ಲಿ ಕರಿಯಿರಿ. 
ಈಗ ಹೊಂಬಣ್ಣದ  ಚಕ್ಕುಲಿ ರೆಡಿ.





ನೆನಪಿನಲ್ಲಿಡಬೇಕಾದ ಅಂಶಗಳು.
*   ಸಮ ಸಮ ನೀರು ಹಾಕುವುದು ಮುಖ್ಯ. ಮತ್ತೆ ಹಿಟ್ಟು ಸೇರಿಸುವುದೂ, ನೀರು ಸೇರಿಸುವುದೂ ಮಾಡಿದಲ್ಲಿ ಗಟ್ಟಿ ಅಥವಾ ಮೆತ್ತಗಾಗುತ್ತದೆ.

* ಬೇಳೆಗಳ ಅನುಪಾತವನ್ನು ಬೇಕಾದರೆ ಅವರವರ ರುಚಿಗೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು, ಆದರೆ ನೀರು ಮಾತ್ರ ಎಲ್ಲಾ ತರದ ಹಿಟ್ಟಿಗೂ 1:1 ಅನುಪಾತದಲ್ಲಿರಬೇಕು.

*   ಒಲೆ  ಉರಿ ಹದವಾಗಿರಬೇಕು. ದೊಡ್ಡ ಉರಿ ಅಥವಾ ಚಿಕ್ಕ ಉರಿಯಾದರೆ  ಕರಟಿ ಹೊಗುತ್ತದೆ ಅಥವಾ ನಾರಾಗುತ್ತದೆ.

* ಹಿಟ್ಟಿಗೆ ಎಣ್ಣೆಯನ್ನೋ, ಬೆಣ್ಣೆಯನ್ನೋ  ಸೇರಿಸುವ ಅಗತ್ಯವಿಲ್ಲ. ಪರಿಮಳಕ್ಕೆ ಬೇಕಿದ್ದರೆ  ಒಂದು ಚಮಚ ತುಪ್ಪ ಸೇರಿಸಬಹುದು.

* ವಿಶೇಷ ಸೂಚನೆಯೆಂದರೆ ಎಣ್ಣೆಯಲ್ಲಿಯೇ ಕರಿಯಬೇಕು!


 ಮಾಡಿ ನೋಡಿ ಹೇಳಿ.ನನ್ನನ್ನುತಿನ್ನಲು  ಕರೆಯಿರಿ.  ಗಟ್ಟಿಯಾದರೆ ಮೊದಲೇ ಹೇಳಿ!  ಈ ಮೊದಲೇ ನಿಮಗೆ ಇನ್ನೂ ಉತ್ತಮ  ವಿಧಾನಗಳು ಗೊತ್ತಿದ್ದಿದ್ದರೆ  ಅದನ್ನೂ  ಹೇಳಿ..

ವಂದನೆಗಳು.

Monday, September 10, 2012

ಗೋಡೆ ಮೇಲಿನ ಚಿತ್ತಾರಗಳು.


 ನಮ್ಮ ಮನೆಗೆ ಯಾರಾದರೂ  ನೆಂಟರು ಬರುತ್ತಾರೆಂದು ಗೊತ್ತಾದ ಹಿಂದಿನ ದಿನ ನಾವು ಮನೆಗೆ ಬಣ್ಣ ಹೊಡೆಸುವುದರ  ಬಗ್ಗೆ  ಚರ್ಚಿಸುತ್ತೇವೆ. ಮನೆಗೆ ಕಾಲಿಟ್ಟ ಪ್ರತಿ ನೆಂಟರೂ ''ಓಹ್ಹೋ .. ಗೋಡೆಯ ತುಂಬಾ ಬರೆದು ಮುಗಿಸಿದ್ದಾನೆ.. ಮಗರಾಯ,'' ಎನ್ನುತ್ತಾ ದೇಶಾವರೀ ನಗೆ ಬೀರುತ್ತಾರೆ. ನೀವೇನಾದರೂ  ಬಂದು ಸೋಫಾದ ಮೇಲೆ ಕೂತು ಎದುರಿನ ಗೋಡೆಯನ್ನು ಸಹಜವಾಗಿ ದಿಟ್ಟಿಸಿದಿರೋ  ನೀವು ಮೂರ್ಚೆಹೊಗುತ್ತೀರಿ. ಎದುರಿಗೆ ಅಷ್ಟೂ ಹಲ್ಲುಗಳನ್ನೂ ಕಿರಿದು ಹೆದರಿಸುತ್ತಿರುವ ದೊಡ್ಡ ಬಾಯಿಯ ರಾಕ್ಷಸನಿದ್ದಾನೆ.  ರಾಕ್ಷಸನ ಚಿತ್ರವಿದೆ! ಶಿಶಿರನ ಕರ ನೈಪುಣ್ಯ!




ಸುಮಾರು ಅವನಿಗೆ ಎರಡು ವರ್ಷಗಳಿದ್ದಾಗ ನಾವೂ ಬಾಡಿಗೆ ಮನೆ ಬಿಟ್ಟು ಹೊಸದಾಗಿ ನಮ್ಮದೇ ಮನೆ ಕಟ್ಟಿಸಿಕೊಂಡು ಚಂದದ ಬಣ್ಣ ಹುಡುಕಿ ಹೊಡೆಸಿಕೊಂಡು ಗೃಹ ಪ್ರವೇಶಿಸಿದೆವು.ಹೊಸಾ ಮನೆ, ಹೊಸ ಬಣ್ಣ, ನಮ್ಮ ಟೇಸ್ಟಿಗೆ ನಾವೇ ಮೆಚ್ಚಿಕೊಳ್ಳುತ್ತಾ ಇರುವ ಒಂದು ದಿನ ನಮ್ಮವರು ಸ್ನಾನ ಮುಗಿಸಿ ಹೊರ ಬಂದವರೇ ಅತ್ಯಾಶ್ಚರ್ಯಕರವಾದ ಧ್ವನಿಯಲ್ಲಿ ನನ್ನನ್ನು ಕರೆದರು, 'ನೋಡಿಲ್ಲಿ ಎಷ್ಟ್ ಚನಾಗಿ ಬರೆದಿದ್ದಾನೆ,'  ಎನ್ನುತ್ತಾ! ನಾನಾದರೂ ಕೈಯಲ್ಲಿ ದೋಸೆ ಸೌಟನ್ನು ಹಿಡಿದುಕೊಂಡು ಬೆಡ್ ರೂಮಿಗೆ ಓಡಿದೆ. ನಮ್ಮವರು ಮುಖದಲ್ಲಿ ಸಾವಿರ ಕ್ಯಾಂಡಲ್ ಲೈಟ್  ಬೀರುತ್ತಾ, ಹಿಗ್ಗುತ್ತಾ ನಿಂತಿದ್ದು ಕಾಣಿಸಿ ಅವರ ದೃಷ್ಟಿಯನ್ನು ಹಿಂಬಾಲಿಸಿದರೆ ಅಲ್ಲಿ ಕಾಣಿಸಿತು. ABCD ಎನ್ನುವ ಹೊಳೆಯುವ ಅಕ್ಷರಗಳು.  ಮಗ ಇಂಜಿನಿಯರೋ, ಡಾಕ್ಟರೋ ಆದನೇನೋ ಎನ್ನುವ ಸಂಭ್ರಮದಲ್ಲಿ ಬರೆದ ಅಕ್ಷರಗಳನ್ನು ನೋಡುತ್ತಿದ್ದಂತೆ ಒಮ್ಮೆಲೇ ಉಸಿರು ಅರ್ಧವಾಯಿತು! ಬೆಡ್ ರೂಮಿನ ಗೋಡೆಯ ಮೇಲೆ ಕ್ರೆಯಾನ್ಸ್ ನಿಂದ ಮುದ್ದಾದ ಅಕ್ಷರಗಳು ನಳ ನಳಿಸುತ್ತಿದ್ದವು!  ''ಪುಟ್ಟಾ ಗೋಡೆಯ ಮೇಲೆ ಬರೀ ಬಾರದು,'' ಎನ್ನುತ್ತಾ ನಾನಾದರೂ ಗೋಡೆ ಹಾಳಾಯಿತೆಂದು  ತೀವ್ರವಾದ ಸಂತಾಪದಿಂದ ಕೈಯಲ್ಲಿರುವ ಕ್ರೆಯಾನ್ಸ್ ಕಸಿದು ಬಚ್ಚಿಟ್ಟೆ. ಮಗಳಿಗೆ ''ಕಂಡ ಕಂಡಲ್ಲಿ ಪೆನ್ಸಿಲ್ಲು, ಕ್ರೆಯಾನ್ಸು ಒಗೆದರೆ ನೋಡು,'' ಎನ್ನುತ್ತಾ ಸುಮ್ಮನೆ ಅವಳಿಗೆ ಜೋರು ಮಾಡಿದೆ.ನನ್ನವರು ಮಾತ್ರಾ ಗೋಡೆಯ ಮೇಲೆ ಬರೆದ ಅನ್ನುವುದಕ್ಕಿಂತ ಎಷ್ಟು ಚನ್ನಾಗಿ ಬರೆದಿದ್ದಾನೆ, ಅನ್ನುವ ಆನಂದಾನುಭೂತಿಯಿಂದ ಹೊರಬಂದಂತೆ ಕಾಣಿಸಲಿಲ್ಲ.ನಾನು   ಇವರ ಹಳೆ ಬನಿಯನ್ನನ್ನು ನೆನೆಸಿ    ಹಿಂಡಿ ಬರೆದದ್ದನ್ನು  ಮೆಲ್ಲಗೆ ಒರೆಸಿ ಅಳಿಸಲು  ಶುರು ಮಾಡಿದೆ.
 ಅವನು ಬರೆದಂತೆಲ್ಲಾ ನನ್ನದು ಒರೆಸುವ ಕೆಲಸ. ಹೀಗೆ ಸುಮಾರು ದಿನ.




ಅವನಿಗೆ ಗೋಡೆಯ ಮೇಲೆ ಬರೆಯುವ ಆಸೆ ಅದೆಷ್ಟು ತೀವ್ರವೆಂದರೆ ಎಲ್ಲಿ ಏನಾದರೂ ಚಿಕ್ಕ ಪೆನ್ಸಿಲ್ಲೋ ಕ್ರೆಯಾನ್ಸೋ ಸಿಕ್ಕರೆ ಸಾಕು ಬಚ್ಚಿಟ್ಟುಕೊಂಡು ಬರೆಯುತ್ತಿದ್ದ. ಮೊದ  ಮೊದಲು ಅಕ್ಷರಗಳು, ಸೊನ್ನೆ ಸುತ್ತುವುದು,ಗೆರೆ ಎಳೆಯುವುದು ಹೀಗೆ. ಪ್ರಿ ಕೇಜಿಗೆ ಸೇರಿಸಿದ ಮೇಲೆ ಅದು ಕಥಾರೂಪಗಳನ್ನು ಪಡೆಯಲು ಶುರುವಾಯಿತು. ಆಗವನಿಗೆ ಯಕ್ಷಗಾನವೆಂದರೆ ಸಿಕ್ಕಾಪಟ್ಟೆ ಆಸಕ್ತಿ. ಅದರ ಕಿರೀಟಗಳನ್ನು ಅಪ್ಪನಿಂದ ಪೇಪರ್ ಮೇಲೆ ಬರೆಸಿಕೊಳ್ಳುತ್ತಿದ್ದ. ತದನಂತರ ಗೋಡೆಯ ಮೇಲೆ ನಾನಾ ತರದ ಕಿರೀಟಗಳು.  ಆದಿಶೇಷನ ಚಿತ್ರ,  ಕೆಳಗೆ ವಸುದೇವ ಕೃಷ್ಣನನ್ನು ಬುಟ್ಟಿಯಲ್ಲಿ ಎತ್ತಿಕೊಂಡು ಹೋಗುವಂತೆ. ಜೊತೆಗೆ ಅವನ ಸಂಗಡಿಗರು ಒಂದಷ್ಟು ಚಿಕ್ಕ, ದೊಡ್ಡ ಹಾವುಗಳು.ಉದ್ದ ಹಾವು ಬರೆಯುತ್ತೀನೆಂದು ಚೇರ್ ಹತ್ತಿ ಮೇಲಿನಿಂದ ಕೆಳವರೆಗೆ ಬರೆದಿದ್ದು.   ಶಾಲೆಯಲ್ಲಿ ಪಾಠ ಮಾಡಿದಂತೆಲ್ಲಾ ಅದು ನಮ್ಮ ಮನೆಯ ಗೋಡೆಯ ಮೇಲೆ.   ಸೋಲಾರ್ ಸಿಸ್ಟಂ,  ಅದರಲ್ಲಿ ಸೂರ್ಯ ಮತ್ತು ಚಂದ್ರ  ಜೊತೆ ಜೊತೆಯಲ್ಲೇ ಇರುತ್ತಾರೆ! ಶನಿಗ್ರಹವಂತೂ ನೋಡಲು ಎರಡು ಕಣ್ಣು ಸಾಲದು. ಪರ್ಮನೆಂಟ್ ಮಾರ್ಕರ್ ಎಲ್ಲಿ ಸಿಕ್ಕಿತ್ತೋ ಏನೋ ಅದರಲ್ಲೇ ಬರೆದಿದ್ದ. ಬಿಲ್ಲು ಬಾಣ ಬತ್ತಳಿಕೆಗಳ ಚಿತ್ರವಂತೂ ಹೇರಳವಾಗಿ ಕಾಣ ಸಿಗುತ್ತವೆ. ಅಷ್ಟೊತ್ತಿಗೆ ಯಕ್ಷಗಾನದ ಖಯಾಲಿ ಕಡಿಮೆಯಾಗಿ ಕಾರ್ಟೂನುಗಳ ಮೇಲೆ ತಲೆ ಹಾಯ ತೊಡಗಿತು. ಬೆನ್ ಟೆನ್ ನ ಅಷ್ಟೂ ಕ್ಯಾರೆಕ್ಟರ್ಗಳೂ, ಸ್ಪೈಡರ್ ಮ್ಯಾನ್,   ಬ್ಯಾಟ್ ಮಾನ್, ಆ ಮ್ಯಾನ್, ಈ ಮ್ಯಾನ್ ಅನ್ನುವ ಹೊತ್ತಿಗೆ ಒರೆಸಿ ಒರೆಸಿ ನಾನು ನಿಶ್ಯಕ್ತಿ ಮ್ಯಾನು !





ಅವನು ಬರೆದಂತೆಲ್ಲಾ ಹಿಂದೆ ಹಿಂದೆ ನಾನು ಖಡ್ಗವನ್ನು ಹಿರಿದು  ದಕ್ಷಯಜ್ನವನ್ನು ಧ್ವಂಸ ಮಾಡುವ ವೀರಭದ್ರನಂತೆ ಇವರ ಹಳೆ ಬನಿಯನ್ ಹಿಡಿದು ಎಲ್ಲವನ್ನೂ ಒರೆಸುತ್ತಾ ವೀರಗಾಸೆ ಶುರುಮಾಡಿದೆ. ಒರೆಸುವಾಗ ನನಗೆ ತೀವ್ರವಾಗಿ ಬೇಜಾರಾಗುತ್ತಿತ್ತು. 'ಎಷ್ಟ್ ಚನ್ನಾಗ್ ಬರ್ದಿದಾನೆ. ಪೇಪರ್ ಮೇಲೆ ಬರೆಯಕ್ಕೆ  ಏನ್ ಧಾಡಿ ಇದಕ್ಕೆ,'  ಎನ್ನುತ್ತಾ  ಬಹಳ  ಸಂತಾಪದಲ್ಲಿಯೇ ಒರೆಸುತ್ತಿದ್ದೆ. ನಾನು ಒರೆಸಿದ್ದರಿಂದ ಅವನಿಗೆ ತುಸುವಾದರೂ ಬೇಜಾರಿಲ್ಲದೆ ನಾನು ಮುಂದೆ ಮುಂದೆ ಹೋದಂತೆ ಹಿಂದೆ ಹಿಂದೆ ಬರುತ್ತಿದ್ದ  ಹೊಸ ಚಿತ್ರಗಳ ಸರಣಿಯೊಂದಿಗೆ. ಇವರ ತೂತಾದ ಬನಿಯನ್ ಗಳೆಲ್ಲಾ ಹರಿದು ಚಿಂದಿಯಾದವು. ಈಗ ಸ್ವಲ್ಪ ಮಾಸಲಾದ ಬನಿಯನ್ನುಗಳನ್ನು ನಾನು ನನ್ನ ಗೋಡೆ ವರೆಸುವ ಬಟ್ಟೆಯನ್ನಾಗಿ ಮಾಡಿಕೊಳ್ಳುವ ಹೊತ್ತಿಗೆ ಇವರು ಹೌಹಾರ ತೊಡಗಿದರು. ಬೇರೆ ಬಣ್ಣದ  ಬಟ್ಟೆಯಾದರೆ ಬಟ್ಟೆಯ ಬಣ್ಣ ಮತ್ತೆ ಗೋಡೆಗೆ ಮೆತ್ತುವುದಿಲ್ಲವೇ..? ಅಂತೆಯೇ ನನ್ನ ಪ್ಲಾನು. ನಾನು ಒರೆಸಿದ ಪರಿಣಾಮಕ್ಕೆ ಗೋಡೆ ಅಲ್ಲಲ್ಲಿ ಬಣ್ಣ ಬಿಟ್ಟುಕೊಂಡು ಮತ್ತಷ್ಟು ವಿಕಾರವಾಗಿ ಕಾಣಿಸತೊಡಗಿತು.




ಮೆತ್ತಗೆ ಹೇಳಿದರಿಲ್ಲ, ಜೋರು ಮಾಡಿ ಹೇಳಿದರಿಲ್ಲ. ಎರಡು ಕೊಟ್ಟು ಹೇಳಿದರೂ ಊಹ್ಞೂ .. ಗೋಡೆಯ ಮೇಲೆ ಬರೆಯುವುದನ್ನು ತಪ್ಪಿಸಲಾಗಲೇ ಇಲ್ಲ. ಡ್ರಾಯಿಂಗ್ ಪುಸ್ತಕವಾಯ್ತು, ಬಿಳೀ ಬೋರ್ಡ್ ಆಯ್ತು. ಅದೆಲ್ಲಾ ಬೋರಾಗಿ ಮತ್ತೆ ಗೋಡೆಯೇ ಬೇಕಾಯ್ತು.   ಮತ್ತೆ ಬಂದವರೆಲ್ಲಾ ಹೇಳತೊಡಗಿದರು. ''ಬರ್ಕೊಳ್ಳಿ ಬಿಡಿ.  ಆಮೇಲೆ ಒಂದೇ ಸಲ ಬಣ್ಣ ಹೊಡೆಸಿದರಾಯ್ತು..'' ಎಂದು ಸಮಾಧಾನ ಪಡಿಸಿದರು. ಗೆಳತಿಯೊಬ್ಬಳು, ''ನೀವು ಎಲ್ಲಾ ಹುಟ್ಟಾ ಕಲಾವಿದರಲ್ಲವೇ..? ಬರ್ಕೊಳ್ಳಿ ಬಿಡೇ,''  ನನಗೇ  ಅಂದಳು. ಬಿಟ್ಟರೂ ಸೈ, ಬಿಡದಿದ್ದರೂ ಸೈ.


ಅಷ್ಟೊತ್ತಿಗೆ ಸುಧಾದಲ್ಲಿ ಯಾರೋ ಪುಣ್ಯಾತ್ಮನ ಬಗೆಗೆ ಬರೆಯಲಾಗಿತ್ತು.ಹೆಸರು ಮರೆತೆ, ಆತ ತುಂಬಾ ಕ್ರಿಯೇಟಿವ್ ವ್ಯಕ್ತಿ. ಆತನೂ ಗೋಡೆಯ ಮೇಲೆ ಬರೆಯುತ್ತಿದ್ದನಂತೆ! ಮತ್ತು ಮಕ್ಕಳಿಗೆ ಗೋಡೆಯ ಮೇಲೆ ಬರೆಯಲು ಬಿಡಿ, ಅವರ ಕಲ್ಪನಾ ಶಕ್ತಿ ಕ್ರಿಯೇಟಿವಿಟಿ ಹೆಚ್ಚುತ್ತದೆ, ಎಂದೆಲ್ಲಾ ಸಂದೇಶ ಕೊಟ್ಟಿದ್ದ. ಅದನ್ನು ಓದಿದ ಮೇಲೆ ನಮಗೆ ಮತ್ತಷ್ಟು ಸಮಾಧಾನವಾಯಿತು. ಪ್ಹಾರಿನ್ನಿನವರು ಹೇಳಿದ್ದಾರೆಂದರೆ ಅದು ಸರಿಯೇ ಸರಿ, ಎನ್ನುತ್ತಾ ಅಲ್ಲಿಂದ ನನ್ನ ಹರಕು ಬನಿಯನ್ ಹಿಡಿದುಕೊಂಡು ಮಾಡುವ  ಯಕ್ಷಗಾನ, ತಾಳ ಮದ್ದಲೆ, ವೀರ ಗಾಸೆ ಎಲ್ಲವನ್ನೂ ಬಿಟ್ ಹಾಕಿ 'ಅಮ್ಮಾ ಬೋರು' ಅಂದರೆ 'ಅಲ್ಲೇ  ಗೋಡೆ ಮೇಲೆ ಏನಾರು ಬರೀ' ಅನ್ನುವಷ್ಟರ ಮಟ್ಟಿಗೆ ಒಳ್ಳೆಯವಳಾದೆ.

 ಈಗ ಗೋಡೆಯ ಮೇಲೆ ನಾನೇನಾದ್ರೂ ಬರೀಬೇಕಂದ್ರೂ  ಚೂರೂ ಜಾಗವಿಲ್ಲ! ಪಕ್ಕದ ಮನೆಗೆ ಹೋಗಿ ಸಖೇದಾಶ್ಚರ್ಯಗಳಿಂದ ಕೇಳುತ್ತಾನಂತೆ, 'ನಿಮ್ಮ ಮನೆಯಲ್ಲಿ ಗೋಡೆಯೆಲ್ಲಾ ಖಾಲಿ ಇದೆಯಲ್ಲಾ..?' ಅಂತ. ಆವತ್ತು ಅಪ್ಪನ ಹತ್ತಿರ ಹೇಳುತ್ತಿದ್ದ. ''ನನಗೂ ಹೆಲಿಕ್ಯಾಪ್ಟರಿಗೆ ಕೀ ಕೊಟ್ಟರೆ ಹಾರುವಂತೆ ಕೀ ಇದ್ದಿದ್ದರೆ ನಾನೂ ಹಾರಿಕೊಂಡು ಮನೆಯ ಸೀಲಿಂಗ್ ಮೇಲೆ ಬರೆಯುತ್ತಿದ್ದೆ,'' ಅಂತ. ಮಗನ ಈ ಘನಂಧಾರೀ ಪ್ಲಾನಿಗೆ ಇವರು ಬೆಚ್ಚಿಬಿದ್ದದ್ದು ಹೌದು.

ಮಕ್ಕಳ ಕಲ್ಪನೆಗಳನ್ನು ಹಿಂಬಾಲಿಸಿಕೊಂಡು ಹೋದರೆ ನಮಗಾದರೂ ಎಷ್ಟೊಂದು ಉಪಾಯಗಳು ಹೊಳೆದು ಬಿಡುತ್ತವೆ.  ಅವರನ್ನು ಇರುವಂತೆಯೇ ಬೆಳೆಯಲು  ಬಿಡಿ.  ಆ ಕಲ್ಪನೆಗಳನ್ನೆಲ್ಲಾ  ಹಳೆ ಬನಿಯನ್ನಿನಿಂದ ತಾಯಂದಿರು ಒರೆಸ ಬಾರದು ಅಷ್ಟೇ.

ಆವತ್ತು ಶಾಲೆಯಿಂದ ಬರುತ್ತಾ ಎದುರು ಮನೆ ಆಂಟಿಗೆ ಹೇಳುತ್ತಿದ್ದ. ''ಆಂಟೀ ನಂಗೆ ಫಸ್ಟ್ ಪ್ರೈಸು.. ಡ್ರಾಯಿಂಗ್ ಕಾಂಪಿಟೆಶನ್ ನಲ್ಲಿ.!'' ಮನೆಗೆ ಬಂದು ಪ್ರೈಸ್ ತೋರಿಸಿದ. ಒಂದು ಆರ್ಟ್  ಸೀಡಿ.ಡ್ರಾಯಿಂಗ್ ಬುಕ್, ಕಲರಿಂಗ್ ಪೆನ್ಸಿಲ್ಸ್ .     ನಾನು ಅಂತಾದರೂ ಬಿಡದೆ, ''ಎಲ್ಲರಿಗೂ ಕೊಟ್ರಾ ನಿನಗೊಂದೆ ಕೊಟ್ರಾ?'' ಕೇಳಿದೆ.  ಗೋಡೆಯ ಮೇಲೆ ಬರೆದದ್ದು ಬಿಟ್ರೆ ಉಳಿದಂತೆ ಅವನ ಸಾಮರ್ಥ್ಯ ನನಗೆ ಗೊತ್ತಿರಲಿಲ್ಲ!
 ''ನನಗೊಬ್ಬನಿಗೆ..'' ನನಗೆ ಅನುಮಾನ,  ನಾಲ್ಕಾರು ಬಾರಿ ಕೇಳಿದೆ, ''ಅಮ್ಮಾ ಎಷ್ಟು ಸಲ ಹೇಳಲಿ, ಪಸ್ಟು ಪ್ರೈಸನ್ನು  ಒಬ್ಬರಿಗೇ  ಕೊಡೋದು'' ಅಂದ. ನಾನು ಬಾಯಿ ಮುಚ್ಚಿಕೊಂಡೆ.
ಅವನಿಗೆ ಈಗೀಗ ನಾಚಿಕೆಯಾಗುತ್ತದೆ. ಯಾರಾದರೂ ನೆಂಟರು ಬಂದವರು ಸೀದಾ ಅವನಲ್ಲೇ ಕೇಳುತ್ತಾರೆ, ಅಕ್ಕನ ಗೆಳತಿಯರ ಮುಂದೆ ನಾಚಿಕೆ  ತುಸು ಜಾಸ್ತಿ.. ''ಅಮ್ಮಾ ಗೋಡೆಗೆ ಬಣ್ಣ ಹೊಡೆಸಿ'' ಅನ್ನುವ ರಾಗ ಶುರು ಮಾಡಿದ್ದಾನೆ.ನನಗೆ ಮಾತ್ರ ಇಷ್ಟವಿಲ್ಲ.


ನನಗೆ ಅವನ ಕಲ್ಪನೆಗಳನ್ನು ಒರೆಸಿ, ಅಳಿಸಿ  ಹಾಳು  ಮಾಡಿದ್ದಕ್ಕೆ ಬಹಳ ಬೇಜಾರಿದೆ.  ಒರೆಸಿದರೂ ಮತ್ತೆ ಮತ್ತೆ ಬರೆದು ಸ್ವಲ್ಪ ಮಟ್ಟಿಗೆ ನನ್ನ ತಪ್ಪಿತಸ್ತ ಭಾವವನ್ನು ಕಡಿಮೆ ಮಾಡಿದ್ದಾನೆ. ಅದಕ್ಕೆ ನಮಗೀಗ ಮನೆಗೆ ಬಣ್ಣ ಹೊಡೆಸಿದರೆ ಗೋಡೆಯ ತುಂಬಾ ಇರುವ  ಅವನ ಮುಗ್ಧತೆಯೆಲ್ಲಾ ಕಳೆದು ಹೋಗಿಬಿಡುತ್ತದಲ್ಲಾ ಅನ್ನುವ ಚಿಂತೆ.  ಮೊನ್ನೆ ಮೊನ್ನೆ ವರೆಗೂ ಬರೆದ.  ನಾಳೆಯೂ ಬರೆದರೆ  ಬರೆಯಲಿ ಬಿಡಿ. ನಿಮ್ಮ ಮಕ್ಕಳಿಗೂ ಬಿಟ್ಟು ಬಿಡಿ, ಬರೆದರೆ ಬರೆದುಕೊಳ್ಳಲಿ.



[ಅವನ ಗೋಡೆಯ ಮೇಲಿನ ಚಿತ್ರಗಳು ತುಂಬಾ ಮಬ್ಬು ಮಬ್ಬಾಗಿವೆ. ಅದಕ್ಕೆ ಅದರ ಪರಿಚಯ ನಿಮಗೆ ಇಲ್ಲ..:)]

ವಂದನೆಗಳು.

Tuesday, September 4, 2012

ಕನಸು ಮಾರಲು ಬಂದ!






ಬೀನ್ ಬ್ಯಾಗಿಗೆ ಸುರಿಯಲು  ಥರ್ಮಾಕೋಲ್ ಮಣಿಗಳನ್ನು  ತಂದ ದೊಡ್ಡ  ಪ್ಲಾಸ್ಟಿಕ್ ಕವರು ಅವತ್ತು ನನ್ನ ಮಗನ ಆಟದ ವಸ್ತುವಾಗಿತ್ತು.  ಅಲ್ಲಲ್ಲಿ ಹೆಕ್ಕಿದಂತೆ ನಟಿಸುತ್ತಾ ಅದರ  ಅಗಲ ಬಾಯಿಗೆ ಅದೇನನ್ನೋ ತುಂಬುತ್ತಿದ್ದ. ನನಗೆ ಕುತೂಹಲ, ಕೇಳಿದೆ,

ಅವನು ಡ್ರೀಮ್ ಕಲೆಕ್ಟರ್ ಅಂತೆ, ಎಲ್ಲರ ಕನಸುಗಳನ್ನು ತುಂಬಿಕೊಂಡು ಬೇಕಾದವರಿಗೆ ಬೇಕಾದ ಕನಸು ಮಾರುತ್ತಾನಂತೆ, ಬೇಕಾದವರಿಗೆ ಬೇಕಾದ ಕನಸು!   ನೀವೂ ಬೇಕಿದ್ದರೆ ಈ ಕನಸು ವ್ಯಾಪಾರಿಯಿಂದ ಕನಸು ಕೊಳ್ಳಬಹುದು..!



Tuesday, July 31, 2012

ಬಾರದ ಮಳೆಯಲೊಂದಷ್ಟು ಕೊಡೆಯ ನೆನಪುಗಳು

ಹೊರಗಡೆ ಸುಯ್ಯನೆ ಗಾಳಿ ಬೀಸುತ್ತಿದೆಯೇ ಹೊರತೂ ಹನಿ ಮಳೆಯಿಲ್ಲ.  ಮಳೆಯಿರದಿದ್ದರೂ ನಮ್ಮನೆಯಲ್ಲಿ ಕೊಡೆಗಳಿಗೆ ಬರಗಾಲವಿಲ್ಲ.ಒಂದು ಐದಾರು ಕೊಡೆಗಳಿವೆ.    ಒಂದು ದಿನವೂ ಮಳೆಗೆ ಕೊಡೆ ಹಿಡಿದಿಲ್ಲ.ಆದರೂ  ಅದರಲ್ಲಿ ಒಂದೂ ನೆಟ್ಟಗಿಲ್ಲ.   ಕಡ್ಡಿಗಳು ಮುರಿದು, ಹೊಲಿಗೆ ಬಿರಿದು, ಬಿಚ್ಚಿದರೆ ಸೊಂಟ ನೋವಿನಿಂದ ಬಳಲುವ  ಅಜ್ಜಿಯಂತೆ ಕಾಣಿಸುತ್ತವೆ. ಅಂಗಡಿಗಳಲ್ಲಿ ಕಾಣುವ ಬಣ್ಣ ಬಣ್ಣದ ಛತ್ರಿಗಳನ್ನು ಕಂಡೊಡನೆ ಪ್ರತೀಸಲ  ನನ್ನ ಮಗಳು ಛತ್ರಿ ಕೊಳ್ಳುವ ವಿಚಾರವನ್ನು  ನೆನಪಿಸುತ್ತಾಳೆ.  ಈಗಿನ ಬಹು ಮಡಿಕೆಗಳ ಛತ್ರಿಗಳು  ವ್ಯಾನಿಟೀ ಬ್ಯಾಗಿನಲ್ಲಿ ಇಟ್ಟುಕೊಂಡು ಹೋಗಲು ಚಂದವೇ ಹೊರತೂ ಮಳೆಗೆ ಬಿಚ್ಚಿಕೊಂಡು ಹೋಗಲಲ್ಲ. ಮಳೆ ಬಂದ್ರೆ ಇರಲಿ ಅನ್ನುವುದಕ್ಕೋಸ್ಕರ ಅದನ್ನೇ ನನ್ನ ಮಗಳು ಬ್ಯಾಗಿನಲ್ಲಿ ಪುಸ್ತಕಗಳೊಂದಿಗೆ  ಪ್ಲಾಸ್ಟಿಕ್ ಕವರಿನಲ್ಲಿ ಇಟ್ಟುಕೊಂಡು ಶಾಲೆಗೆ   ಹೋಗುತ್ತಾಳೆ. ಮಳೆ ಬಂದರೆ ಛತ್ರಿ ನೆನೆಯಬಾರದು ಅನ್ನುವ ಸದುದ್ಧೇಶ!  ನನ್ನ ಮಗ ಮಾತ್ರಾ ಸ್ನಾನದ  ಕೋಣೆಯ  ಶವರಿನಡಿಯಲ್ಲಿ ಛತ್ರಿ ಬಿಚ್ಚಿ ನಿಂದು  ಮಳೆಗಾಲದ ಸ್ವಾದವನ್ನನುಭವಿಸುತ್ತಾನೆ.  ಅಲ್ಲೇ ಕುಣಿದಾಡುತ್ತಾ ಛತ್ರಿಯ   ಅಷ್ಟೂ ಕಡ್ಡಿಗಳನ್ನೂ  ಮುರಿದು ಹಾಕುತ್ತಾನೆ.

ನಾವೆಲ್ಲಾ ಶಾಲೆಗೆ ಹೊಗುವ ಸಮಯದಲ್ಲಿ ಹೀಗೆಲ್ಲಾ ತರತರದ ಛತ್ರಿಗಳ ಆಯ್ಕೆಗಳಿಗವಕಾಶವಿರಲಿಲ್ಲ. ಆಗ ನಮಗೆ  ಇದ್ದ ಛತ್ರಿಗಳಲ್ಲೇ ಅದರ ಹ್ಯಾ೦ಡಲ್ಲಿನ ಬಣ್ಣ ಮತ್ತು ಅದರ ಕ್ವಾಲಿಟಿ ಪ್ರತಿಷ್ಟೆಯ ವಿಚಾರವಾಗಿತ್ತು! ಸ್ಟೀಲ್ ಕೋಲಿನ ಪ್ಲಾಸ್ಟಿಕ್ ಹ್ಯಾ೦ಡಲ್ ಆದರೆ ಅದು ಹೆಗ್ಗಳಿಕೆ.  ಆಪ್ಪಯ್ಯ ನನಗೆ ಮತ್ತು ನನ್ನ ಅಕ್ಕನಿಗೆಂದೇ  ಪ್ಲಾಸ್ಟಿಕ್ ಹ್ಯಾ೦ಡಲಿನ ಎರಡು ಕೊಡೆಗಳನ್ನು ತ೦ದು ಕೊಟ್ಟಿದ್ದ.  ಮರದ ಕೋಲಿನ ಛತ್ರಿ ಇದ್ದವರಿಗೆ ಸ್ವಲ್ಪ ಕೀಳರಿಮೆ, ಆದರೂ ಮರದ ಕೋಲಿನ ಛತ್ರಿಗಳು ದೊಡ್ಡದಾಗಿರುವುದರಿ೦ದ ಮಳೆ ಹೆಚ್ಚು ಮೈಗೆ ತಾಗದು. ಇಬ್ಬಿಬ್ಬರು ಒ೦ದೇ ಛತ್ರಿಯಲ್ಲಿ ಹೊಕ್ಕೊ೦ಡು ಗುಟ್ಟು ಹೇಳಿಕೊ೦ಡು ಬರಬಹುದಾಗಿದ್ದ ಸೌಲಭ್ಯ ಇತ್ತಾದರೂ ಅದು ನಮಗೆ ಆಗಲೇ   ’ಓಲ್ಡ್ ಫ್ಯಾಶನ್’ ಆಗಿತ್ತು. ನನ್ನ ಛತ್ರಿಯ ಹ್ಯಾ೦ಡಲ್ಲು ಕೆ೦ಪು  ಬಣ್ಣದ್ದಾಗಿತ್ತು ಮತ್ತು ಸ್ವಲ್ಪ ಚಿಕ್ಕದು. ನನ್ನಕ್ಕನ ಛತ್ರಿ ಸ್ವಲ್ಪ ದೊಡ್ಡದು. ಅದೇನು ಬೇಜಾರಿನ ಸ೦ಗತಿಯೇನಾಗಿರಲಿಲ್ಲ. ಜೋರು ಮಳೆ,ಗಾಳಿ ಬ೦ದಾಗ ಯಾವ ಛತ್ರಿಯಾದರೂ ಅದರ ಕಥೆ ಡಿಶ್ಶೇ..   ಅದು ಡಿಶ್ ತರ  ಎನ್ನುವ  ಜ್ಞಾನ  ನಮಗೆ ಇಲ್ಲದಿದ್ದರೂ  ಉಲ್ಟಾ ಆಗಿ ಅರಳಿದ ಕಮಲದ೦ತೆ   ಕ೦ಡು ತನ್ನ ಸೌ೦ದರ್ಯವರ್ಧಿಸಿಕೊ೦ಡ೦ತೆ ಭಾಸವಾಗುತ್ತಿತ್ತು! ಅಲ್ಲದೇ ಮಳೆಯಲ್ಲಿ ನೆನೆಯುವುದು ನಮಗೆ  ಮುಖ್ಯಹೊರತೂ  ಛತ್ರಿಯಲ್ಲವಲ್ಲ. ಬೀಸುವ ಗಾಳಿಗೆ ದೊಡ್ಡ ಕೊಡೆ ಒಳಗೆ ಗಾಳಿ ಹೊಕ್ಕು ಅಷ್ಟಷ್ಟು  ದೂರ  ಎಳೆದುಕೊಂಡು ಹೋಗುತ್ತಿತ್ತು. ಮುರಿದ ಛತ್ರಿ ಮಡಚಿಟ್ಟುಕೊಂದು ಗೆಳತಿಯರಲ್ಲಿ   ''ಏ ಛತ್ರಿ.....ಕೊಡೇ '' ಎನ್ನುತ್ತಾ pun ಎಂದರೇನೆಂದು  ಅರಿವೇ ಇಲ್ಲದ ಸಮಯದಲ್ಲೂ  punಡಾಟಿಕೆ  ಮಾಡಿದ್ದುಂಟು. ಕೆಲವರು ಈ ಸಮಸ್ಯೆಗಳೇ ಬೇಡ ಎನ್ನುವಂತೆ ಬಣ್ಣ ಬಣ್ಣದ  ಪ್ಲಾಸ್ಟಿಕ್ ಕೊಪ್ಪೆ ಹಾಕಿಕೊಂಡು ಬರುತ್ತಿದ್ದರು. ನಿಜ ಅಂದರೆ ಅದೇ ಆರಾಮ. ಮಳೆ ಒಂಚೂರೂ ಮೈಗೆ ತಾಗುತ್ತಿರಲಿಲ್ಲ. ಆದರೂ ನಮ್ಮ ಲೆಕ್ಕದಲ್ಲಿ  ಕೊಪ್ಪೆಯ ಬೆಲೆ ಕಡಿಮೆ ಆಗ..! ಒಂದು ಮಳೆಗೆ ಒಂದುಕೊಡೆ ಮತ್ತು ಒಂದು  ಜ್ವರ ಆಗ..
 

  ನನ್ನ ಛತ್ರಿಯ   ಹೆಚ್ಚುಗಾರಿಕೆಯೆ೦ದರೆ ಅದು ಚಿಕ್ಕದಿರುವ ಕಾರಣ, ನನ್ನ ಅಕ್ಕ  ’ ಇವತ್ತೊಂದಿನ  ನಾನು ಶಾಲೆಗೆ ತೆಗೆದುಕೊ೦ಡುಹೋಗುತ್ತೇನೆ ಕೊಡೇ ,’ ಎ೦ದು ಆಗಾಗ ಕೇಳುತ್ತಿದ್ದುದು. ಅವಳ ಶಾಲೆ ದೂರ.ದೊಡ್ಡ ಛತ್ರಿ ಭಾರ.  ಆಗ ನಾನಾದರೂ ಇಲ್ಲದ ಶ್ರೀಮದ್ಗಾ೦ಭೀರ್ಯದಿ೦ದ ಯಾವುದೋ ಮಹಾ ತ್ಯಾಗವನ್ನು ಮಾಡುವವಳ೦ತೆ ಮನಸ್ಸಿಲ್ಲದಿದ್ದರೂ ಅವಳಿಗೆ ಕೊಡುತ್ತಿದ್ದೆ. ಸಮಯಕ್ಕೆ ಬೇಕಾಗುತ್ತಲ್ಲ..! 


 ಸುಮ್ಮನೆ ಹನಿ ಮಳೆಯಲ್ಲಿ ಕೊಡೆ ಹಿಡಿದುಕೊಂಡು ಬರುತ್ತಿರುವಾಗಲೇ ಚಿಕ್ಕ ಪುಟ್ಟ ಜಗಳ, ಅದು ಕೆಲವೊಮ್ಮೆ ಯುದ್ಧಕ್ಕೆ ತಿರುಗುವ ಅಪಾಯಗಳೂ ಇಲ್ಲದಿಲ್ಲ. ಆಗ ಅರಳಿದ ಕೊಡೆಗಳೇ  ಶಸ್ತ್ರಾಸ್ತ್ರಗಳು!  ಒಬ್ಬರ ಕೊಡೆಯಿಂದ   ಮತ್ತೊಬ್ಬರ ಕೊಡೆ ಕುಕ್ಕಿದರೆ ಅದೇ ಮಾರಾಮಾರಿ ಯುದ್ಧ.  ಯಾರು ಜಾಸ್ತಿ ಸಲ ಕುಕ್ಕಿದ್ದಾರೋ ಅವರೇ ಜಯಶಾಲಿಗಳು...! ಈ ಗಲಾಟೆಯಲ್ಲಿ ಎಲ್ಲೋ ಏನೋ ಸ್ವಲ್ಪ ಹೆಚ್ಚು ಕಮ್ಮಿಯಾಗಿ ಕೊಡೆ ತಂತಿಯೇನಾದರೂ ಮುರಿದು ಗಿರಿದು ಹೋದರೆ ಅಕ್ಕಂದಿರು ರಾಜೀಪಂಚಾಯ್ತಿಕೆಗೆ  ಬರಬೇಕಿತ್ತು. 


ಮಳೆಗಾಲ ಬ೦ತೆ೦ದರೆ ಅಪ್ಪಯ್ಯಮುರಿದ ಕೊಡೆಗಳ ರಿಪೇರಿ ಕೆಲಸ ಹಚ್ಚಿಕೊಳ್ಳುತ್ತಾನೆ ಈಗಲೂ..!   ನಮ್ಮನೆಯಲ್ಲಿ ಪೇಟೆಗೆ ತೆಗೆದುಕೊಂಡು ಹೋಗಿ ಆ  ಕೊಡೆ ರಿಪೇರಿ ಮಾಡುವವನನ್ನು ಹುಡುಕಿ ಕಾದು  ರಿಪೇರಿ ಮಾಡಿಸಿಕೊಳ್ಳುವ ಅವಶ್ಯಕತೆಯೇ ಇರಲಿಲ್ಲ. ಅಪ್ಪಯ್ಯ ಮಳೆಗಾಲದ ಬಿಡುವಿನ ಸಮಯದಲ್ಲಿ ಮದ್ಯಾಹ್ನದ ಹೊತ್ತು ಈ ರಿಪೇರಿ ಕೆಲಸಗಳನ್ನೆಲ್ಲ ಆಸಕ್ತಿಯಿಂದ ಮಾಡುತ್ತಾನೆ. ಅದವನಿಗೆ ಒಂತರಾ ಇಷ್ಟದ ಕೆಲಸ. ನಾವು ಕಸೂತಿ ಹಾಕಿದಂತೆ ಅವನ ಸ್ಟೈಲು ಹಾಗೆ.   ಒ೦ದು ರ್ಯಾಗ್ಜಿನ್ ಬಟ್ಟೆಯಲ್ಲಿ ಸುತ್ತಿ ಇಟ್ಟುಕೊ೦ಡ  ಹಳೇ  ಕೊಡೆ ಕಡ್ಡಿ, ಕೋಲು, ಹಿಡಿಕೆ, ತಂತಿಗಳೂ,ಛತ್ರಿಯ ಬಟ್ಟೆ  ಇವೆಲ್ಲವನ್ನೂ ಮೆತ್ತಿನ ಮೇಲಿ೦ದ ಕೆಳಗಿಳಿಸುತ್ತಾನೆ. ಬಾಯಲ್ಲಿ ಒಂದು ಹೊಗೆಸೊಪ್ಪಿನ  ಕವಳ  ಇಟ್ಟುಕೊಂಡು ಕುಳಿತರೆ ಏಳುವಾಗ   ಮುರಿದ ಕೊಡೆ  ಹೊಸಕೊಡೆಯಾಗಿರುತ್ತಿತ್ತು ಆಗೆಲ್ಲಾ. ಅಪ್ಪಯ್ಯನ ಹಡಪದಲ್ಲಿ ಇರದ ವಸ್ತುಗಳಿಲ್ಲ.  ಕೆಲವೊಮ್ಮೆಕೊಡೆ  ಬಟ್ಟೆ ಹರಿದುಹೊದರೆ ಪೇಟೆಯಿಂದ ಹೊಸಬಟ್ಟೆ ತಂದು ಹಳೆ ಕೊಡೆಯ ಅಸ್ಥಿಪಂಜರಕ್ಕೆ  ಹೊಲಿದು ಹೊಸಾದು ಮಾಡುತ್ತಿದ್ದ.. ಆಮೇಲೆ ಕೊಡೆ ಕಳೆದು ಹೋಗದಂತೆ  ದಾರದಲ್ಲೇ ಹೊಲಿದಿಡುವ ನಮ್ಮ ಹೆಸರಿನ ಮೊದಲಕ್ಷರ ಸಿದ್ಧ . ''ನೋಡೇ ಹಳೆ ಕೊಡೆ ಹ್ಯಾಂಗೆ ಹೊಸಾದು ಮಾಡಿದ್ದಿ...'' ಎಂದು ಅಪ್ಪಯ್ಯ ಕವಳ ಉಗುಳಿ  ಬಂದು ಹೇಳುತ್ತಿದ್ದರೆ ನಮಗೆ ಖುಶಿ ಮತ್ತು ಅಪ್ಪಯ್ಯನಿಗೂ ಸಂತೃಪ್ತಿ.   ಹಾಗಾಗಿ ನಾವು ಯಾವತ್ತೂ ಹರಕಲು ಮುರುಕಲು ಕೊಡೆ ಒಯ್ದವರೇ ಅಲ್ಲ.

ನನ್ನ ಮಗ  ಒಂದಷ್ಟು  ದಿನ ಟೆರೇಸಿನಲ್ಲಿ ಕೊಡೆ ಹಿಡಿದು  ಮಳೆಯೊಂದಿಗೆ ಆಡಿದ. ಅಲ್ಲೂ ಜೋರು ಗಾಳಿ.   ಇವನನ್ನೆಲ್ಲಾದರೂ  ಹಾರಿಸಿಕೊಂಡು ಹೋಗಿ ಪಕ್ಕದ ಟೆರೇಸಿಗೆ ಹಾಕಿದರೆ ಕಷ್ಟ..   ಹೊರಗೆ ಬೀದಿಯಲ್ಲಿ ಕೊಚ್ಚೆ. ಅವನೇನು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬಚ್ಚಲುಮನೆಯ ನಲ್ಲಿ, ಶವರಿನ ಕೆಳಗೆ ಮಳೆ,ಮಳೆ  ಅನ್ನುತ್ತಾ ಕುಣಿಯುತ್ತಾನೆ. ಮಳೆಬಾರದ ಈ ಮಳೆಗಾಲದಲ್ಲಿ ನೀರ ಬರ.  ನೀರಿಲ್ಲ ಎಂದು ಅವನನ್ನು  ಸುಮ್ಮನಿರಿಸಿದ್ದೇನೆ.
 
ನನ್ನ ಬಳುವಳಿಗೆ ಕೊಟ್ಟ ಹೊಸಾ ಛತ್ರಿ ಇನ್ನೂ ಹೊಸದಾಗಿಯೇ ಇದೆ. ಏಕೆಂದರೆ ಅದನ್ನು ಬಳಸಿದ್ದೇ  ಕಡಿಮೆ ಮತ್ತು ಬೆಂಗಳೂರಲ್ಲಿ ಮಳೆಯಲ್ಲಿ  ಹೊರಗೆ  ಹೋಗಿದ್ದೇ  ಇಲ್ಲ.  ಅಷ್ಟರ ಮೇಲೆ ಅನೇಕ ಛತ್ರಿಗಳು  ನಮ್ಮನೆ ಶೆಲ್ಫ್   ಅಲಂಕರಿಸಿದರೂ ಎಲ್ಲವೂ ಶಿಶಿರನ  ಮಳೆ ಕುಣಿತಕ್ಕೆ  ಸಿಲುಕಿ ಮುರಿದ ಸ್ಥಿತಿಯಲ್ಲಿವೆ. ಅದನ್ನಾದರೂ ರಿಪೇರಿ ಮಾಡಿಸೋಣವೆಂದರೆ  ಕೊಡೆ ರಿಪೇರಿ ಮಾಡುವವರು ಯಾರೂ ಕಾಣುವುದೇ ಇಲ್ಲ ಈಗೀಗ...  ಹೊಸಾದು ತಗೊಳ್ಳುವುದೇ ಒಳ್ಳೇದು ಎಂದು  ಐಶು  ಅನ್ನುತ್ತಾಳೆಂದು ಮತ್ತೆ ಬಾಯಿ ಬಿಗಿದುಕೊಂಡು ಕೂತಿದ್ದೇನೆ  ಅಪ್ಪಯ್ಯನನ್ನು ನೆನೆಸಿಕೊಳ್ಳುತ್ತಾ..


   

Saturday, July 7, 2012

ರೂಪಾ೦ತರದೊಳಗೊ೦ದು ಸುತ್ತು..!




ಹದಿ ಹರೆಯ ಅನ್ನುವುದು ಮನುಶ್ಯನ ಒ೦ದು ಸ್ಥಿತಿಯಿ೦ದ ಇನ್ನೊ೦ದು ಸ್ಥಿತಿಗೆ ರೂಪಾ೦ತರ ಹೊ೦ದುವ ಒ೦ದು ಪ್ರಮುಖ ಘಟ್ಟ.ಕನಸುಗಳು ಮೂಡುವ ಹೊತ್ತು. ದೈಹಿಕವಾಗಿ, ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಪ್ರತಿ ಮಗುವೂ ಈ ಸಮಯದಲ್ಲಿ ಬದಲಾವಣೆ ಹೊ೦ದುತ್ತದೆ. ಪ್ರತೀ ತಾಯ್ತ೦ದೆಯರಿಗೆ ತಾವೂ ಕೂಡಾ ಬದಲಾಗಲೇ ಬೇಕಾದ ಅನಿವಾರ್ಯತೆ.    ಈ ಸಮಯದಲ್ಲಿ ಮಕ್ಕಳು ತು೦ಬಾ ಸ್ವಕೇ೦ದ್ರಿತ ಮನೋಭಾವವನ್ನು ಹೊ೦ದಿರುತ್ತಾರೆ. ಅಪ್ಪ ಅಮ್ಮ ಏನು ಹೇಳಿದರೂ ಅದು ತಪ್ಪಾಗಿಯೇ ಕಾಣಿಸುತ್ತದೆ. ತನಗೆ ಎಲ್ಲವೂ ಗೊತ್ತು ಮತ್ತು ಅಪ್ಪ ಅಮ್ಮನಿಗೆ ಅಥವಾ ಮನೆಯ ಉಳಿದ ಸದಸ್ಯರಿಗೆ ಇದೆಲ್ಲಾ ಗೊತ್ತಿಲ್ಲ ಎನ್ನುವ ಮನಸ್ಥಿತಿಯನ್ನು ಮುಖ್ಯವಾಗಿ ಹೊ೦ದಿರುತ್ತಾರೆ..    ಇದಕ್ಕೆ ಕಾರಣವೇನೆ೦ದರೆ ಮಗುವು ಪ್ರೌಢವಾಗುತ್ತಾ ತಾಯ್ತ೦ದೆಯರ ಪರಿಧಿಯಿ೦ದ ನಿಧಾನ ಹೊರಬರಲೆತ್ನಿಸುವುದು. ಅದಕ್ಕಾಗಿ ಇದು ಒ೦ದು ಸಹಜವಾದ ಹೋರಾಟ. ಅವನಿಗೆ/ಳೆ  ತನ್ನದೊ೦ದು ವ್ಯಕ್ತಿತ್ವವನ್ನು ಸೃಷ್ಟಿಸಿಕೊಳ್ಳಬೇಕಾಗಿದೆ.  ಈ ಹ೦ತದಲ್ಲಿ ಪೋಷಕರು ಸರಿಯಾದ ಮಾರ್ಗದರ್ಶನ ಮಾಡ ಬೇಕಾಗುವುದು. ಹೊಸತನ್ನು ಅನುಭವಿಸಬೇಕು  ಮತ್ತು ತಾನು ಎಲ್ಲವನ್ನೂ ಪಡೆಯಬಲ್ಲೆ ಅನ್ನುವ ಅತ್ಯುತ್ಸಾಹ ಅವರಲ್ಲಿ  ತುಡಿಯುತ್ತಿರುತ್ತದೆ. ಆದರೆ ದಾರಿ ತಪ್ಪುವ ಸ೦ದರ್ಭಗಳೂ ಎದುರಿಗಿರುತ್ತವೆ. ಮಕ್ಕಳು ಅನುಭವಕ್ಕೆ ತೆರೆದುಕೊಳ್ಳಲೆತ್ನಿಸುತ್ತಾರೆ. ತಾಯ್ತ೦ದೆಯರು
ತಮ್ಮ ಅನುಭವವನ್ನು ಮಕ್ಕಳ ಮೇಲೆ ಹೇರುತ್ತಾರೆ.ಆಹಾರ, ವಿಹಾರ, ವಿಚಾರ ಎಲ್ಲದರ ಮೇಲೆ ತಮ್ಮ ಅನುಭವದ ಹಸ್ತಕ್ಷೇಪ ಮಾಡಿದ೦ತೆ ಮಕ್ಕಳಿಗೆ ಕಾಣತೊಡಗುತ್ತದೆ.
 ಹದಿಹರಯದ  ಮಕ್ಕಳಿಗೆ ತಮ್ಮ ಓರಗೆಯವರಲ್ಲಿ ಯಾವಾಗಲೂ ತಾವೇ ವಿಶೇಷವಾಗಿ, ಭಿನ್ನವಾಗಿ ಎದ್ದು ಕಾಣಬೇಕೆ೦ಬ ಹ೦ಬಲ. ಕನ್ನಡಿಯೊ೦ದಿಗಿನ ಒಡನಾಟ ಹೆಚ್ಚು.
  ಕೆಲ ಮಕ್ಕಳಿಗೆ ತಮ್ಮ ಶರೀರದ ಬಗೆಗೆ  ಅತೀ ಕಾಳಜಿ ಹಾಗು ಕೆಲವೊಮ್ಮೆ  ನಕಾರಾತ್ಮಕ ಭಾವನೆ ಮೂಡತೊಡಗುತ್ತದೆ. ದಪ್ಪಗಿರುವವರಲ್ಲಿ, ಕುಳ್ಳಗಿರುವವರಲ್ಲಿ, ಕಪ್ಪಗಿರುವವರಲ್ಲಿ ಈ ಕೀಳರಿಮೆ ಹೆಚ್ಚು. ಸುಮ್ಮನೆ ಚಾಳಿಸಲು ಯಾರಾದರೂ ನಿನ್ನ ಮೂಗು ದಪ್ಪ, ನಿನ್ನ ಕೂದಲು ಕೊತ್ತ೦ಬರೀ ಕಟ್ಟು ಅ೦ತ ಹೇಳಿದರೂ ಸಹಾ ಅದನ್ನೇ ಮನಸ್ಸಿಗೆ ಹಚ್ಚಿಕೊ೦ಡು ಕೊರಗುತ್ತಾರೆ.


ಹತ್ತನೆ ತರಗತಿಯಲ್ಲಿ ಹೆಚ್ಚಿನ ಅ೦ಕ ಗಳಿಸುವಲ್ಲಿನ ಪೋಷಕರ ಮತ್ತು ಮನೆಯವರ ಒತ್ತಡ ಮಗುವಿನಲ್ಲಿ ಸಾಕಷ್ಟು ಗೊ೦ದಲವನ್ನು ಸೃಷ್ಟಿಸುತ್ತದೆ. ಬಹು ವಿಧ  ಪಠ್ಯ ವಿಷಯ ಕಲಿಕೆಯ ಪರಿಣಾಮ ಮಗುವಿಗೆ  ಯಾವುದನ್ನೂ ಆಳವಾಗಿ ಅಭ್ಯಸಿಸಲು  ದಕ್ಕುವುದಿಲ್ಲ. ಸಿಕ್ಕಾಪಟ್ಟೆ ಸ್ಪರ್ಧಾತ್ಮಕ ಜಗತ್ತು ಮತ್ತು ಅತಿಯಾದ ನಿರೀಕ್ಶೆ ಮಕ್ಕಳಲ್ಲಿ ಒ೦ದು ರೀತಿಯ ಅಸಹನೆಯನ್ನು ರೂಪಿಸುತ್ತದೆ. ತನ್ನ ಮಗು ಹೆಚ್ಚಿನ ಅ೦ಕ ಗಳಿಸಿ ತಾ೦ತ್ರಿಕವೋ ವೈಧ್ಯಕೀಯವೋ ಕ್ಷೇತ್ರದಲ್ಲಿಯೇ ಕಾಲಿಡಬೇಕೆನ್ನುವ ಹೆತ್ತವರ ಹಪಾಹಪಿಯಲ್ಲಿ ಮಕ್ಕಳ ಮಾನಸಿಕ ಆಗು ಹೋಗುಗಳು ನಿರ್ಲಕ್ಷಕ್ಕೊಳಗಾಗುತ್ತವೆ. ತಾನು ಓದುವುದರಿ೦ದ ಹೆತ್ತವರಿಗೆ ಏನೋ ಹಿರಿಮೆಯಿದೆ. ಅದಕ್ಕಾಗಿ ತಾನೇಕೆ ಸುಮ್ಮನೆ ಒಪ್ಪಿಕೊಳ್ಳಬೇಕು.. ನನಗೊ೦ದು ಬೈಕ್ ಕೊಡಿಸು, ಹೊಸ ನಮೂನೆಯ ಮೊಬೈಲ್ ಕೊಡಿಸು  ನಾನು ನಿನಗಾಗಿ ಓದುವುದಿಲ್ಲವೇ? ಇದಕ್ಕಾಗಿ ನನಗೆ ಈ ಎಲ್ಲವೂ ಬೇಕು ಎನ್ನುವ   ಹಟಮಾರೀತನ ಮಕ್ಕಳ ಮನಸ್ಸಿನಲ್ಲಿ  ಈಗೀಗ ಹೆಚ್ಚಾಗುತ್ತಿದೆ. ಎದುರಿಗೆ ಅದು ಗೋಚರವಾಗದಿದ್ದರೂ ಅವ್ಯಕ್ತವಾಗಿ ಅದು ಹೀಗೆ ಇರುತ್ತದೆ.

ಹೈಸ್ಕೂಲು ಮುಗಿಯುತ್ತಿದ್ದ೦ತೆ ಕಾಲೇಜಿಗೆ ಹೋಗುವ ಸ೦ಭ್ರಮ. ಹೈಸ್ಕೂಲಿನ ಕಟ್ಟುನಿಟ್ಟಿನ ಶಿಸ್ತು, ಶಿಕ್ಷಕರ ಹತೋಟಿ, ಅಪ್ಪ ಅಮ್ಮ೦ದಿರ ಹಿಡಿತ, ಎಲ್ಲವೂ ಒಮ್ಮೆಲೆ ತಪ್ಪಿ ಮನಸ್ಸು ಕುದುರೆಯಾಗುವುದು ಸಹಜ.  ಕಣ್ಣಿಗೆ ಕ೦ಡ ಎಲ್ಲ ಹೊಸತೂ ಆಕರ್ಷಣೀಯ. ಹತ್ತನೇ ತರಗತಿ ಅನ್ನುವ ಒ೦ದು ವಿಶಿಷ್ಟ ಹ೦ತವನ್ನು ತೇರ್ಗಡೆಯಾಗುವಲ್ಲಿನ ಒತ್ತಡ, ಗೊ೦ದಲ, ಭಯ, ಒಮ್ಮೆಲೆ ಕರಗಿ ಹೋದ೦ತೆನಿಸುತ್ತದೆ. ಕಾಲಕ್ಕೆ ತಕ್ಕ೦ತ ಹೊಸ ಹೊಸ ಬಗೆಯ ದಿರಿಸುಗಳೂ, ಎಲೆಕ್ಟ್ರಾನಿಕ್ ವಸ್ತುಗಳೂ, ವಿವಿಧ ಹವ್ಯಾಸಗಳೂ ಮನಸೆಳೆಯುತ್ತವೆ. ಇ೦ತಹಾ ಸ೦ದರ್ಭಗಳಲ್ಲಿ ಪೋಷಕರಿಗೂ ಮಕ್ಕಳಿಗೂ ನಡುವೆ ಸಾಕಷ್ಟು ತರದಲ್ಲಿ ಸ೦ಘರ್ಷಗಳು೦ಟಾಗುತ್ತವೆ.  ಬೇರೆಯ ಮಕ್ಕಳಲ್ಲಿವೆ ನಮ್ಮಲ್ಲಿಲ್ಲ ಅನ್ನುವ ಭಾವ, ಮತ್ತು ಮಾಡ್ರನ್ ದಿರಿಸುಗಳನ್ನು ಧರಿಸಲು ಕಡಿವಾಣ ಹಾಕಿದಲ್ಲಿ  ಈ ಟ್ರೆ೦ಡೀ ಜಗತ್ತಿನಲ್ಲಿ  ನಮ್ಮ ಮಗುವೇ ಕೀಳರಿಮೆಯಿ೦ದ ನರಳತೊಡಗುತ್ತದೆ.

ಮಕ್ಕಳ ಒತ್ತಾಯಕ್ಕೆ ಒಲಿದು ಕೆಲವೊಮ್ಮೆ ನಲಿದು ಮೊಬೈಲ್ ಕೊಡಿಸಿದರೆನ್ನಿ. ಅದರ ಇಯರ್ ಫೋನನ್ನು ಕಿವಿಗಿಟ್ಟು ಕೂತರೆ೦ದರೆ ಯಾರು ಕರೆದರಿಲ್ಲ. ಕೂಗಿದರಿಲ್ಲ. ಮನೆಗೆ ಯಾರಾದರೂ ಅತಿಥಿಗಳು ಬ೦ದರೂ ಮಾತನಾಡಿಸಲು ಹೇಳಬೇಕು. ಕ೦ಪ್ಯೂಟರಿನ ಮು೦ದೆ  ಕೂತ ಮಕ್ಕಳು ಊಟಕ್ಕೆ ಕರೆದರೂ ಹ್ಣೂ ಹ್ಣಾ.. ಗುಟ್ಟಿದರೆ ನಮ್ಮ ಪುಣ್ಯ. ಇ೦ಟರ್ನೆಟ್ಟಿನ್೦ದ ಮಾಹಿತಿಗಳನ್ನು ಶೋಧಿಸಿ  ಮಕ್ಕಳು ಬುದ್ಧಿವ೦ತರಾಗಲಿ ಎ೦ದು ಕ೦ಪ್ಯೂಟರ್ ತ೦ದುಕೊಟ್ಟರೆ ಅವರು ಆನ್ ಲೈನ್ ಗೇಮ್ ಆಡತೊಡಗುತ್ತಾರೆ. ಓದ್ಕೋ, ಓದಿದ್ಯಾ ಕೇಳುವ ಹಾಗೇ ಇಲ್ಲ.  ನಿನಗೆ ಗೊತ್ತಾಗೋಲ್ಲ ಸುಮ್ಮನಿರು.. ಇದೊ೦ದು ಗೇಮ್ ಮುಗಿಸಿ ಬರ್ತೇನೆ.. ಎನ್ನುತ್ತಾರೆ.
ಎಷ್ಟೊತ್ತಿಗೂ ಕಿವಿಯಲ್ಲಿ ಇಯರ್ ಫೋನ್ ಇಟ್ಟುಕೊ೦ಡು ಮ್ಯುಸಿಕ್ ಕೇಳುವುದು ಕಿವಿಯ ಆರೋಗ್ಯಕ್ಕೆ ಹೇಗೂ ಕೆಟ್ಟದ್ದು. ಜೊತೆಗೆ ಅವರು ಪ್ರಪ೦ಚವನ್ನು ಗಮನಿಸುವುದನ್ನು ಕಡಿಮೆ ಮಾಡುತ್ತಾರೆ. ಪ್ರಕೃತಿಯಲ್ಲಿನ ಅನೇಕಾನೇಕ ಸೂಕ್ಶ್ಮ ಸ೦ವೇದನೆಗಳು,ಭಾವನೆಗಳೂ, ಭಾ೦ಧವ್ಯಗಳೂ ಅವರ ಮನಸ್ಸಿಗೆ ತಾಗುವುದೇ ಇಲ್ಲ.ಆಗ ತನ್ನಿ೦ದ ತಾನೇ ಸ್ವಕೇ೦ದ್ರಿತರಾಗುತ್ತ ಹೋಗುತ್ತಾರೆ.  ಮನಸ್ಸಿನ ಏಕಾಗ್ರತೆಯೊ೦ದಿಗೆ ಕ್ರಿಯಾಶೀಲತೆಯೂ ಕಡಿಮೆಯಾಗುತ್ತಿದೆ. ಇ೦ಟರ್ನೆಟ್ನ ಅಪಾಯವೂ ಹೀಗೇ ಅನೇಕ. ಒಮ್ಮೆ ಮನೆಯಲ್ಲಿ ಸಿಸ್ಟಮ್ಮನ್ನು ಪ್ರತಿಸ್ಟಾಪಿಸಿದ ಮೇಲೆ ಮುಗಿದೇ ಹೋಯಿತು. ಬೇಡ ಅ೦ದರೆ ಕೇಳುವವರಾರು.? ಏನೋ ದುಡಿಯುವುದೆಲ್ಲ ನಮ್ಮ ಮಕ್ಕ್ಳಿಗೇ ತಾನೆ ಎ೦ದು ಸವಲತ್ತುಗಳನ್ನು ಒದಗಿಸುವುದು. ನ೦ತರದಲ್ಲಿ ಹೀಗೆ ಮಾಡುತ್ತಾರೆ೦ದು ಗೋಳಾಡುವುದು ಇ೦ದಿನ ಪೋಷಕರ ಸ್ಥಿತಿ.   ದೊಡ್ಡ ಮಕ್ಕಳಿಗೆ ಹೊಡೆದು ಬೈದು ಬುದ್ದಿಹೇಳಲು ಕಷ್ಟ.  ಸಮಾಧಾನದ ಮಾತುಗಳು ತಾಗುವುದೇ ಇಲ್ಲ..ಮತ್ತು   ಇ೦ದಿನ ಅಪ್ಪ ಅಮ್ಮ ತಮ್ಮ ಮಕ್ಕಳನ್ನು ಗಮನಿಸುವುದು ಹೆಚ್ಚು. ಇರುವ ಒಬ್ಬ, ಇಬ್ಬ ಮಕ್ಕಳನ್ನು  ಹೀಗೆ ಮಾಡಿ, ಹಾಗೆ ಮಾಡಿ, ಮಾಡಬೇಡ ಎನ್ನುವ  ಸಲಹೆಗಳನ್ನು ಕೊಡುವುದು ಅತಿಯಾಗಿ ಹೋಗಿದೆ. ಯಾರೂ ಯಾರ ಮಾತನ್ನೂ ಕೇಳುವುದಿಲ್ಲ  ಒಟ್ಟಿನಲ್ಲಿ ಮನೆಯೊ೦ದು ಅಶಾ೦ತಿಯ ಸಾಗರವಾಗತೊಡಗುತ್ತದೆ.

ಇಲ್ಲಿ ಪೋಷಕರೆ ನೇರವಾಗಿ ಜವಾಬ್ಧಾರರು. ನಾವ೦ತೂ ಯಾವ ಸವಲತ್ತುಗಳನ್ನೂ ಅನುಭವಿಸಲಿಲ್ಲ. ಮಕ್ಕಳಾದರೂ ಅನುಭವಿಸಲಿ ಎನ್ನುವ ಅನಾರೋಗ್ಯಕರ  ಮುಚ್ಚಟೆಯೇ ಇದಕ್ಕೆ ಕಾರಣ.ಕೆಲಸಕ್ಕೆ ಹೋಗುವ ತಾಯ್ತ೦ದೆಯರು ತಮ್ಮ ಮಗುವಿನೊ೦ದಿಗೆ ಸಮಯ ಕಳೆಯಲಾರದ ಸ೦ಕಟದಲ್ಲಿ,  ಹೊರಾ೦ಗಣ  ಕ್ರೀಡೆಗಳಿಗೆ ಅವಕಾಶವಿಲ್ಲದಲ್ಲಿ, ಸಮಯ ಕಳೆಯಲು ಹೀಗೆ ನಾನಾ ತರದ ಆಮಿಷಗಳನ್ನು ಒಡ್ಡಿ ಸಮಾಧಾನಿಸುವ ಪ್ರಯತ್ನ ಮಾಡುತ್ತೇವೆ.ಹೆತ್ತವರು ಮಕ್ಕಳು ಪ್ರಕೃತಿಯೊ೦ದಿಗೆ ಸೌಹಾರ್ದವಾಗಿ ಬೆರೆಯುವಲ್ಲಿ ಸಹಕಾರಿಯಾಗಬೇಕು. ಇದಕ್ಕೆ ಮೊದಲು ತಮ್ಮ ಚಿ೦ತನೆಯಲ್ಲಿ ಬದಲಾವಣೆ ತ೦ದುಕೊಳ್ಳಬೇಕು. ಮನೆಯಲ್ಲಿ ಆಧುನಿಕ ವಸ್ತುಗಳನ್ನು ಹೊಕ್ಕಿಸಿಕೊ೦ಡ೦ತೆ ನಾವು ಮಕ್ಕಳೊ೦ದಿಗಿನ ಬಾ೦ಧವ್ಯವನ್ನು ಕಡೆಗಾಣಿಸಿಬಿಡುತ್ತೇವೆ. ಅದಾಗದ೦ತೆ ಪೋಷಕರ ಎಚ್ಚರಿಕೆ ಅತ್ಯಗತ್ಯ.

 ದಿನಾಂಕ - 8/7/2012  ರ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ.
 http://vijaykarnataka.indiatimes.com/articleshow/14735800.cms


ಫೇಸ್ ಬುಕ್ ಗೆಳೆಯರ ಪ್ರತಿಕ್ರಿಯೆಗಳು

Pushparaj Chauta ಪೋಷಕರು ನಿಮ್ಮ ಲೇಖನದೊಳಗಿನ ಆಶಯವನ್ನು ಗಮನಿಸಿ ಅದನ್ನು ಅಳವಡಿಸಿಕೊಳ್ಳಬೇಕಾದ ತೀವ್ರ ಅವಶ್ಯಕತೆಯಿದೆಯೇನೋ.

ಸೂಕ್ತ ಲೇಖನ ಸನ್ನಿವೇಷಗಳಿಗನುಗುಣವಾಗಿ. ಅಭಿನಂದನೆಗಳು ನಿಮಗೆ


Krishna Murthy ‎"ಪ್ರತಿ ಮಗುವಿನ ಹುಟ್ಟಿನಿ೦ದ ಒಬ್ಬ ಅಪ್ಪ, ಒಬ್ಬ ಅಮ್ಮ ಹುಟ್ಟುತ್ತಾರೆ, ", ನಾನು ನನ್ನ ಕನಸು ಚಿತ್ರದ ಒ೦ದು ಸ೦ಭಾಷಣೆ, ಮಕ್ಕಳ ಮನೊವಿಜ್ನಾನ ಬಹಳ ಕ್ಲೀಷ್ಟ, ಆದರೂ ಸರಳವಾಗಿ ವಿವರಿಸಲಾಗಿದೆ. ಅಭಿನ೦ದನೆಗಳು..ಮತ್ತು ಧನ್ಯವಾದಗಳು.

Shama Nandibetta ಸಮಯೋಚಿತ ಲೇಖನ,..

Anitha Naresh Manchi nice


  • Ullas Arabhavi ಒಳ್ಳೆಯ ಲೇಖನ..

  • Pravara Kottur ಓದಲೇಬೇಕಾದ ಬರಹ,

  • Shirva Harish Shetty ಮಕ್ಕಳ ಬೆಳೆವಣಿಗೆಯಲ್ಲಿ ಪೋಷಕರ ಮಹತ್ವ ಎಷ್ಟು ಮಹತ್ವಪೂರ್ಣ ಎಂದು ನಿಮ್ಮ ಈ ಲೇಖನ ಓದಿ ತಿಳಿಯಬಹುದು ....ಸುಂದರ ಬರಹ.......ಮಾಹಿತಿಪೂರ್ಣ ಲೇಖನ.......

Monday, June 18, 2012

ನನಗ್ಯಾಕೆ ಈ ನೇಮಿಚಂದ್ರ ಇಷ್ಟೊಂದು ಕಾಡುತ್ತಾರೆ?

  ಈ ನೇಮಿಚಂದ್ರ ಇಷ್ಟೊಂದು ಕಾಡುತ್ತಾರೆ ಅಂತ ಗೊತ್ತಾಗಿದ್ದೇ  ಅವರ ಪೆರುವಿನ ಪವಿತ್ರ ಕಣಿವೆಯಲ್ಲಿ ಅನ್ನುವ ಪ್ರವಾಸ ಕಥನವನ್ನು ಓದಿದಾಗಲಿಂದ.    ಸುಧಾದಲ್ಲಿ ಧಾರಾವಾಹಿಯಾಗಿ ಪ್ರಕಟಿಸುತ್ತಿರುವಾಗಲೂ ಓದಿದ್ದೆ.. ಆದರೆ  ಈಗ ಪುಸ್ತಕ ರೂಪದಲ್ಲಿ ಒಂದೇ ಸಲ ಮುಕ್ಕಿದಂತೆ ಓದಿದ್ದೇನೆ. ಅವರು ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡು ಹಾರಿದ್ದು, ದೇಶ ದೇಶ ಸುತ್ತಿದ್ದು, ಅಲ್ಲಿ ಸೋವಿಯಲ್ಲಿ  ಅಮೂಲ್ಯವಾದ ಅನುಭವಗಳನ್ನು ಇನ್ನಿಲ್ಲದಂತೆ ಚೀಲದಲ್ಲಿ ತುರುಕಿಕೊಂಡಿದ್ದು, ಅದನ್ನು  ಒಂದೂ ಕೊಂಡಿ ತಪ್ಪದಂತೆ ಮತ್ತೆ ಚೀಲದಿಂದ  ತೆಗೆದು ಬರಹಕ್ಕೆ ಭಟ್ಟಿ ಇಳಿಸಿದ್ದು ,,,,  ಇವೆಲ್ಲವೂ ನನಗಂತೂ ರೋಚಕವಾಗಿ ಮನಸ್ಸಿನಾಳಕ್ಕೆ ಇಳಿಯುತ್ತದೆ. ಸುಧಾದಲ್ಲಿ   ಅವರ ಇಡಾಸ್ಕಡರ್ ಕುರಿತಾದ ಲೇಖನವನ್ನು ಸಹಾ  ಇನ್ನಿಲ್ಲದ ಕುತೂಹಲದಿಂದ ಓದಿದ್ದೆ. ಈಗೀಗ  ಕನಸಿನಲ್ಲಿಯೂ ಕೂಡಾ ಪೆರುವಿನ ಬೀದಿಗಳೇ, ಪರ್ವತಗಳೇ  ಕಾಣಿಸುತ್ತಿವೆ.  ತಕ್ಷಣ   ಪೆರುವಿಗೇ ಹೊರಟು  ಬಿಡೋಣ ಅನ್ನಿಸಿಬಿಡುತ್ತದೆ.


ಪ್ರತೀ ಸಲ ಅವರ ಪುಸ್ತಕ ಕೈಗೆತ್ತಿಕೊಳ್ಳುವಾಗ ನಾನೂ ಅವರ ಜೊತೆ ಕೈ ಚೀಲದಂತೆ ಹೊರಟು  ಬಿಡುತ್ತೇನೆ ಮನಸ್ಸಿನಲ್ಲಿಯೇ.. ಅಷ್ಟೊಂದು ತಾದಾತ್ಮ್ಯ ಭಾವವನ್ನು ಮೂಡಿಸುತ್ತದೆ ಅವರ ವಿಚಾರಗಳು  ಮತ್ತು ಅದನ್ನು  ಅವರು ಮಂಡಿಸುವ ಬಗೆ. ಅವರು ಭಯವಿಲ್ಲದೆ ಮುಂದೆ ಮುಂದೆ ಹೋಗುತ್ತಿದ್ದರೆ  ನನಗೆ ಮಾತ್ರಾ ಭಯ ಶುರುವಾಗುತ್ತದೆ. ಎರಡೆರಡು ತಿಂಗಳು ಅದು ಹೇಗೆ ಆರೋಗ್ಯವನ್ನು ಕಾಪಾಡಿಕೊಂಡರೋ.. ? ಹೇಗೆ ಮುಂಚಿತವಾಗಿ ಪ್ಲಾನೇ ಮಾಡಲು ಅವಕಾಶ ಸಿಗದ  ಸ್ಥಳಗಳಿಗೆಲ್ಲ ಹೋಗಿಬಂದರೋ,  ಆಹಾರವನ್ನು ಹೊಂದಿಸಿಕೊಂಡರೋ ..? ಆಶ್ಚರ್ಯದ ಜೊತೆ ನನಗೆ ಭಯ ಆಗುತ್ತದೆ.  ಅತ್ಯಂತ ಕಡಿಮೆ ಬೆಲೆಯಲ್ಲಿ ಶ್ರೀಮಂತ ಅನುಭವಗಳನ್ನೆಲ್ಲಾ ಬಿಟ್ಟೂ ಬಿಡದೇ ಎಲ್ಲವನ್ನೂ ಮೂಟೆ ಕಟ್ಟಿ ತಂದು ಸುರಿದರೆ ಒಮ್ಮೆಲೇ ಭ್ರಾಂತಿಯೇ  ಆಗುತ್ತದೆ. ಅದೂ ಒಬ್ಬ ಹೆಣ್ಣು  ಮಗಳು  ಎಲ್ಲಾ ತರದ ಕಷ್ಟಗಳಿಗೂ ಹೊಂದಿಕೊಳ್ಳುತ್ತಾ ಕೇವಲ ಕನಸನೊಂದೆ ಬೆನ್ನಟ್ಟಿ ಹೋಗಿ ಕದ್ದು ತರುವುದಿದೆಯಲ್ಲ..! ಅದು ರೋಮಾಂಚನವನ್ನು ಉಂಟು ಮಾಡುತ್ತದೆ.


ನಾವು ಎಲ್ಲಿ ಪ್ರವಾಸ ಹೋಗಬೇಕಾದರೂ ಮುಂಚಿತವಾಗಿ ತೆಗೆದುಕೊಳ್ಳುವ ಮುಂಜಾಗ್ರತೆಯೇ ಎಲ್ಲಕ್ಕಿಂತ ಭಾರವಾಗಿರುತ್ತದೆ..!  ಯಾವ ತರದ ರೂಮು ಬೇಕು..? ಯಾವ ಹೋಟೆಲಲ್ಲಿ ಯಾವ ತರದ ತಿನಿಸು ಸಿಗುತ್ತದೆ..? ಎಲ್ಲಿ ಏನು ನೋಡಲು ಸಿಗುತ್ತದೆ..? ಯಾವ ಸಮಯಕ್ಕೆ ಎಲ್ಲಿಗೆ ಹೋಗುವುದು? ಎಲ್ಲಿ ನಿಂತ್ಕೋ ಬೇಕು ಎಲ್ಲಿ ಕೂತ್ಕೋ ಬೇಕು ? ಎನ್ನುವುದರ ಪಟ್ಟಿಯನ್ನು  'ಅ' ದಿಂದ 'ಳ' ವರೆಗೆ ಮೊದಲೇ  ತೀರ್ಮಾನಿಸಿ ಬರೆದುಕೊಂಡು, ಅದರ ಪ್ರಕಾರ ಚಾಚೂ ತಪ್ಪದೆ ಹಾಕಿಕೊಂಡ ಬಟ್ಟೆಯ  ಇಸ್ತ್ರಿ ಮುರಿಯದಂತೆ, ಮುಖದ  ಮೇಕಪ್ಪು ಸರಿಯದಂತೆ, ಚಪ್ಪಲಿಗೆ  ಚೂರೂ  ನೋವಾಗದಂತೆ   ಹೋಗಿ ಬರುವ ಪ್ರವಾಸದ ಅನುಭವಗಳಿಗೂ,    ಹೋದಲ್ಲೆಲ್ಲಾ  ಸಿಕ್ಕಷ್ಟೂ  ಅನುಭವಗಳನ್ನು ಕೊಳ್ಳೆ ಹೊಡೆಯುವ ನೇಮಿಚಂದ್ರರ ಕಡಿಮೆ ಖರ್ಚಿನ ಶ್ರೀಮಂತ  ಪ್ರವಾಸ ಕಥನಕ್ಕೂ  ಎಲ್ಲಿಂದೆಲ್ಲಿಯ ಹೋಲಿಕೆ ..?  ಆ ಪೂರ್ಣ ಚಂದ್ರನಿಗೂ ಭೂಮಿಗೂ ಇರುವಷ್ಟು ಅಂತರ ..!!

  ಆಕೆಗೊಂದು ದೀರ್ಘ ಪ್ರಣಾಮ...

Tuesday, June 12, 2012

ಕಾಯುವ ಸಹನೆಯೂ ಇಲ್ಲ ಮತ್ತು ಧೈರ್ಯವೂ ಇಲ್ಲ..!

ಬಸ್ಸಿಗಾಗಿ ಕಾದು  ಕಾದು  ಸುಸ್ತಾಯಿತು. ಬೇಗ ಬೇಗ ಕೆಲಸ ಮುಗಿಸಿ ಇರುವ ಸ್ವಲ್ಪ  ಸಮಯದಲ್ಲಿ ಏನೋ ತರಲು  ಎಲ್ಲೋ  ಹೋಗಬೇಕಿತ್ತು. ಆಟೋ ಒಂದೂ ಸಿಗಲಿಲ್ಲ.  ಮೀಟರಿನ ಮೇಲೆ ಇಷ್ಟು ಎಕ್ಸಟ್ರಾ ಕೊಟ್ಟು   ಅವರನ್ನು ಓಲೈಸಿ ಹೋಗುವುದಕ್ಕಿಂತ ಬಸ್ಸೇ ಮೇಲು ಅಂದುಕೊಂಡು, ಆಟೋದವರ ಸೊಕ್ಕಿಳಿಸಲು   ಬಸ್ ಸ್ಟ್ಯಾಂಡ್ ಗೆ ಬಂದು ನೋಡಿದರೆ ನನಗೆ ಬೇಕಾದ ಬಸ್ಸೊಂದು ಬಿಟ್ಟು ಯಾವ್ಯಾವುದೋ ಎಲ್ಲೆಲ್ಲಿಗೋ ಹೋಗುವ ಬಸ್ಸುಗಳೆಲ್ಲ ಬರುತ್ತಿದ್ದವು ಹೋಗುತ್ತಿದ್ದವು. ಸುಮಾರು ಹೊತ್ತಾಯಿತು. ಸಮಯ ನೋಡಿಕೊಂಡೆ. ಬಸ್ ಸ್ಟ್ಯಾಂಡಿಗೆ  ಬಂದು ಇನ್ನೂ ಐದು ನಿಮಿಷವಾಗಿತ್ತು. ಥೋ,  ಅಷ್ಟರಲ್ಲಿ ನನಗೆ ಐದಾರು ಘಂಟೆಯೇ ಆದಂತಾಗಿತ್ತು.  ಕಾಯಲು ಸಹನೆಯೇ ಸಾಲುತ್ತಿಲ್ಲ ಈ ನಡುವೆ. ಇವರು ಆಟೋದಲ್ಲಿ  ಹೋಗು  ಅಂದರೂ ಕೇಳದೆ ಬಸ್ಸಿನಲ್ಲೇ ಹೋಗುತ್ತೇನೆ ಅಂತ ಜುಟ್ಟು  ಹಾರಿಸಿಕೊಂಡು ಬಂದಿದ್ದಕ್ಕೆ ಯಾಕೋ ಮರ್ಯಾದೆಯೇ ಸಿಗುತ್ತಿಲ್ಲ..!

ಶಾಲೆ ಕಾಲೇಜುಗಳಿಗೆ ಹೋಗುವಾಗ ಅದೆಷ್ಟು ಹೊತ್ತು ಬಸ್ಸಿಗಾಗಿ ಕಾಯುತ್ತಿದ್ದೆವು. ಬರೆದರೆ ದೊಡ್ಡ ಇತಿಹಾಸ ಪುಸ್ತಕವೇ  ಆಗುತ್ತದೆ.
ನಮ್ಮೂರಿಗೆ ಸಾಕಷ್ಟು ಬಸ್ಸುಗಳಿದ್ದರೂ  ಒಂದೂ ಸಮಯಕ್ಕೆ ಸರಿಯಾಗಿ ಬರುವ ನಿಷ್ಠೆ ತೋರುತ್ತಿರಲಿಲ್ಲ. ಕಟ್ ರೂಟು ಬೇರೆ. ಪ್ರತಿಯೊಬ್ಬರೂ ಮತ್ತೊಬ್ಬರನ್ನು  ''ಇವತ್ತು ಐದು ಘಂಟೆ ಹಂಸಗಾರು  ಬಸ್ಸು ಎಷ್ಟೊತ್ತಿಗೆ ಬರುತ್ತದೆ?'' ಎಂದೇ ಕೇಳುವುದು ರೂಢಿಯಾಗಿ ಹೋಗಿತ್ತು. ಆರು ಘಂಟೆ ಆರೂವರೆ, ಏಳು  ಹೀಗೆ ಬಸ್ಸಿನ ಸಮಯ ವ್ಯತ್ಯಾಸವಾಗುತ್ತಿತ್ತು. ಆ ಬಸ್ಸು ಕೆಲವೊಮ್ಮೆ ಬರುತ್ತಲೇ ಇರಲಿಲ್ಲ.  ಕುಮುಟಾದಿಂದ ಬರುವ ಬಸ್ಸು ಮಧ್ಯದಲ್ಲಿ ಎಲ್ಲಾದರೂ ಕೆಟ್ಟು ನಿಂತು ದೊಡ್ಡವರು ತಮ್ಮ  ಕವಳದ  ಬಾಯಿಯಲ್ಲಿ ''ಬಸ್ಸು ಇವತ್ತು ಅಲ್ಲೆಲ್ಲೋ ಬಾಳೆಬರೆ  ಘಾಟೀಲಿ  ಕರ ಹಾಕಿದ್ದಡಾ'' ಎಂದು ಆಕಾಶಕ್ಕೆ ಮಳೆಗರೆಯುತ್ತಿದ್ದರು.ಅದು  ಬಿಟ್ಟರೆ ಮತ್ತೆ ರಾತ್ರಿ ಒಂಬತ್ತರ ವರದಕ್ಕೆ ಕಾಯಬೇಕಿತ್ತು.ಹೆಚ್ಚಾಗಿ ಸಾಗರದ ಬಸ್ ಸ್ಟ್ಯಾಂಡ್ ನಲ್ಲಿ ಬಂಗಾರಿ ಭಟ್ಟರ ಮನೆ ಹೊರಗೆ ನಿಲ್ಲಲು  ಸ್ವಲ್ಪ ಜಾಗವಿತ್ತು. ಅಲ್ಲಿ ನಾವೆಲ್ಲಾ ಹೆಣ್ಣು ಮಕ್ಕಳು ನಿತ್ಕೊಂಡು ಕೂತ್ಕೊಂಡು ಬಸ್ ಸ್ಟ್ಯಾಂಡ್  ಕಾಯ್ಕೊಂಡು ಇರುತ್ತಿದ್ದೆವು.  ನೀರು ಪಾರು ಬೇಕಾದ್ರೆ ಅವ್ರ ಮನೆಯಲ್ಲೇ ಕೇಳಿ ಕುಡಿಯುವುದು. ಸೇವಾಸಾಗರಕ್ಕೆ ಹೋಗುವ ಚಿಳ್ಳೆ  ಪಿಳ್ಳೆಗಳಿಂದ  ಹಿಡಿದು ಕಾಲೇಜು ಕನ್ಯೆಯರ ವರೆಗೆ ಎಲ್ಲರೂ ಅಲ್ಲೇ  ಝಾಂಡಾ  ಊರುವುದು. ಅಜ್ಜಿ ಮನೆ ಅಂತ ಒಂದಿತ್ತು. ಅಲ್ಲೂ ಕೆಲವರು ಇರುತ್ತಿದ್ದರು.  ಇಲ್ಲಾ ಅಂದರೆ ಪೈ ಅಣ್ಣನ ಅಂಗಡಿ. ನಮ್ಮ ಶಾಲೆ ಕಾಲೇಜುಗಳ ಮಂಗಾಟ, ಕಕ್ರತನ, ಇನ್ನಿತರೇ ಕೆಲಸಕ್ಕೆ ಬರುವ, ಬಾರದ ಸುದ್ದಿಗಳೆಲ್ಲ ವಿನಿಮಯವಾಗುತ್ತಿದ್ದು ಅಲ್ಲೇ.  ಹೊತ್ತು ಕಳೆಯಲು ಹುಂಡಿ ಪದ, ಚುಕ್ಕಿ ಆಟ.ಕೆಲ ಸ್ಕೂಲ್ ಮಕ್ಕಳು ಪಾಪ ಅಲ್ಲೇ ತಮ್ಮ ಹೋಂ ವರ್ಕ್ ಮಾಡಿಕೊಳ್ಳುತ್ತಿದ್ದರು.ನಾನಂತೂ ಎಷ್ಟೊಂದು ಸಾಯಿಸುತೆ, ಉಷಾ ನವರತ್ನರಾಮ್ ತರದವರು ಬರೆದ ಪ್ರೇಮ ಕಾದಂಬರಿಗಳನ್ನೆಲ್ಲಾ ಅಲ್ಲೇ ಓದಿ ಅಲ್ಲೇ  ಮರೆಯುತ್ತಿದ್ದೆನೋ ಏನೋ..!  ಬಸ್ ಸ್ಟ್ಯಾಂಡಿನಲ್ಲಿ   ಲೈನ್ ಹೊಡೆಯುವ ಹುಡುಗರು ಬಂಗಾರಿ ಭಟ್ಟರ ಮನೆ  ಬಾಗಿಲಿಗೆ ಕಣ್ಣೋಟ ಎಸೆಯುತ್ತಾ, ಕ್ರಾಪು ತೀಡುತ್ತಾ ಪ್ಯಾಂಟು ಜೋಬಿನಲ್ಲೊಂದು ಕೈ ಹಾಕಿಕೊಂಡು ಬಸ್  ಸ್ಟ್ಯಾಂಡಿನಲ್ಲಿ ಮೇಲೆ ಕೆಳಗೆ ಓಡಾಡುತ್ತಿದ್ದರು. ಕೆಲ ತುಂಟ ಹುಡುಗಿಯರು ಕಣ್ಣು ಗೋಲಿಯನ್ನು  ಮೂಗಿನ ಪಕ್ಕಕ್ಕೆ ತಂದು ವಚ್ಗಣ್ಣು  ಮಾಡಿ  ಹೆದರಿಸುತ್ತಿದ್ದರು. ಅಂತೂ ನಮಗೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ.ಮಧ್ಯಾಹ್ನ ತಿಂದ ಒಣಕಲು ದೋಸೆಯೋ, ಅಥವಾ ಉಪ್ಪಿಟ್ಟೋ   ಹೊರತೂ ಹಸಿವಾದರೂ ನಾವ್ಯಾರೂ ಹಾಗೆಲ್ಲಾ ಹೋಟೆಲಿಗೆ ಹೋಗುತ್ತಿರಲಿಲ್ಲ.  ಯಾವಾಗಲಾದರೂ   ನಿಂಬೆ ಹುಳಿ  ಪೆಪ್ಪರಮೆಂಟು ಇಲ್ಲ  ಯಾರಾದರೂ ಉಪ್ಪಿಗೆ ಹಾಕಿದ ನೆಲ್ಲಿಕಾಯಿಗಳನ್ನು ಕೊಟ್ಟರೆ  ಬಾಯಲ್ಲಿ ಅಡಗಿಸಿ ಇಟ್ಟುಕೊಳ್ಳುವುದು. ಅಪರೂಪಕ್ಕೊಮ್ಮೆ ಐಸ್ ಕ್ಯಾಂಡಿಯನ್ನು ತಿನ್ನುತ್ತಿದ್ದೆವು. ಅಂತೂ ಬಸ್ಸು ಬರುವವರೆಗೆ ಅಲ್ಲೇ ಜೋತು ಬಿದ್ದಿರುತ್ತಿದ್ದೆವು. ನಮ್ಮೂರ ಬಸ್ಸಿಗೆ ಬರುವ ಗಂಡು ಮಕ್ಕಳೆಲ್ಲ ಬೇರೆ ಬಸ್ಸಿಗೆ ಹೋಗಿ ಮೂರು ಮೈಲು ನಡೆದುಕೊಂಡು ಮನೆಗೆ ಹೋಗಿಬಿಡುತ್ತಿದ್ದರು.   ಹೆಣ್ಣುಮಕ್ಕಳಿಗೆ ಹಾಗೆ  ಹೋಗಲು ಭಯ.



ಬೆಳಿಗ್ಗೆ ಕಾಲೇಜಿಗೆ ಹೋಗಲು  ಎಂಟೂವರೆ ಬಸ್ಸು ಹತ್ತಿದೊಡನೆಯೇ  ಸಾಯಂಕಾಲದ ಬಸ್ಸು ಬರುತ್ತಾ ..? ಇವತ್ತು ಯಾವ ಕಂಡಕ್ಟರು..? ಯಾವ ಡ್ರೈವರ್ರು..?  ಯಾವ ಯಾವ ಪೀರಿಯಡ್ಡು ಇದೆ..? ಯಾರ್ಯಾರು ಐದು ಘಂಟೆ ಬಸ್ಸಿಗೆ ಬರುವವರು..? ಎಲ್ಲಾ ತನಿಖೆ  ಶುರುವಾಗುತ್ತಿತ್ತು. ಕಾಲೇಜಿಗೆ ಹೋಗುವುದ್ಯಾಕೆ ಅಂತ ಅಂದರೆ ಬಸ್ಸು  ಕಾಯ್ಕೊಂಡು  ಮನೆಗೆ ಬರೋಕೆ ಅನ್ನುವಷ್ಟರ ಮಟ್ಟಿಗೆ ನಮ್ಮ  ಬಸ್ ಸ್ಟ್ಯಾಂಡ್  ಕಾವಲು ನಡೆಯುತ್ತಿತ್ತು...! ಇವತ್ತು ಬಸ್ಸು ಬಂದರೆ ಡ್ರೈವರಿಗೆ ಒಂದು ಕಾಯಿ ಒಡೆದು ಕೊಡುತ್ತೇನೆ ಎನ್ನುವ ತಲೆಹರಟೆ ಹರಕೆಗಳನ್ನೆಲ್ಲಾ ಹೊತ್ತು ಕೊಳ್ಳುತ್ತಿದ್ದೆವು. ಚಿಳ್ಳೆ ಪಿಳ್ಳೆಗಳ ಜೊತೆ ಸುಮ್ಮನೆ ಕೀಟಲೆ ಮಾಡುತ್ತಿದ್ದೆವು. ಯಾರಾದರೂ ಹೊಸ ಶೂ ಹಾಕಿಕೊಂಡು ಬಂದರೆ '' ಎರಡೂ  ಕಾಲಿಗೂ ಒಂದೇ ತರದ್ದು ಶೂ ಹಾಕ್ಕೊಂಡು ಬಂದಿದ್ದೀಯಲ್ಲ.  ಎರಡಿದೆ ಆಲ್ವಾ ನನಗೊಂದು ಕೊಡು.ಆಗ್ಲಿ ಕೊಡಾ.. ಪ್ಲೀಸ್ ಕೊಡಾ.. '' ಅಂತಾ ರೇಗಿಸುತ್ತಿದ್ದೆವು.ಕೈ ತುಂಬಾ ಬಳೆ  ಹಾಕಿಕೊಂಡು ಬಂದವರನ್ನು ನೋಡಿ,'' ಮಾರಾಯ್ತಿ ಯಾವ  ಕಡೆಯಿಂದ ಇಷ್ಟು  ಬಳೆ  ಸುರುಗಿಕೊಂಡಿದ್ದೀಯಾ ಅಂತಾನೂ  ಗೊತ್ತಾಗ್ತಿಲ್ವೇ.. ..ಕನ್ಫ್ಯೂಸ್ ಆಗ್ತಿದೆ ಕಣೆ ''ಅಂತಾ ಸುಳ್ಳು ಸುಳ್ಳೇ ಆಶ್ಚರ್ಯ ಪಡುತ್ತಿದ್ದೆವು. ಹೇಗಾದರೂ ಮೂರು ತಾಸು ಸಮಯ ಕೊಲ್ಲಬೇಕಿತ್ತಲ್ಲ.   ಸಮಯಕ್ಕೆ ಸರಿಯಾಗಿ ಅಪರೂಪಕ್ಕೊಮ್ಮೆ ಬಸ್ಸು ಬಂದರೆ ನಮಗೆ ಏನನ್ನೋ  ಕಳೆದುಕೊಂಡ ಹಾಗೆ..!  ಕಾಲೇಜು ಏನು ಓದಿದೆವೋ ಬಿಟ್ಟೆವೋ ನೆನಪಿಲ್ಲ ಆದರೆ ಬಸ್ಸು ಕಾದಿದ್ದು ಮಾತ್ರ ಮರೆಯಲಾದೀತೇ ..?

ಮತ್ತೊಂದೇನೆಂದರೆ ಬಸ್ಸು ಬಂದ ದಿನ ಬಸ್ಸು ಸರಿಯಾಗಿ ಬರುತ್ತಿಲ್ಲ ಅಂತಾ ಬಸ್ಸು ತಡೆದು ಸ್ಟ್ರೈಕ್ ಮಾಡುತ್ತಿದ್ದೆವು.ಸಿರಸಿಯಿಂದ ಡಿಪೋ ಮ್ಯಾನೇಜರ್ ಬಂದು ಸಮಾಧಾನ ಮಾಡಿ ಬಸ್ಸು ಬಿಡಿಸಿಕೊಂಡು ಹೋಗಬೇಕಾಗಿತ್ತು. ಅಂತೂ ಬಸ್ಸು ಬಂದರೂ ಒಂದೇ ಬರದಿದ್ದರೂ ಒಂದೇ.

 ಕಾದಿದ್ದು ಕಾದಂತೆಯೇ ಅನಿಸದೆ ಚೂರೂ ಬೇಸರಿಸದೆ ಹಸನ್ಮುಖಿಯರಾಗಿ ಮನೆಗೆ ಬರುತ್ತಿದ್ದುದು ಹೇಗೆ ಅಂತ ನನಗೆ ಆಶ್ಚರ್ಯವಾಗುತ್ತದೆ.ಮನೆಯಲ್ಲಿ ಅಪ್ಪ ಅಮ್ಮ ಮಾತ್ರಾ, ಬಸ್ಸಿನ್ನು ಬರಲಿಲ್ಲ ಕಾಣುತ್ತೆ ..ಹುಡ್ರು ಬಂದಿಲ್ಲ... ಎಂದು ಆಗಾಗ ಹೇಳುತ್ತಿದ್ದರೇನೋ..? ಆವತ್ತಿನ ಕಾಲಕ್ಕೆ ಅಷ್ಟೆಲ್ಲಾ ಯಾರೂ ಹೆದರುವ ಅವಶ್ಯಕತೆಯೂ ಇರಲಿಲ್ಲ. ಈಗಾದರೆ ಇಲ್ಲಿ ನನ್ನ ಮಕ್ಕಳು ಹಾಗೆ ಸ್ಕೂಲು ಬಿಟ್ಟು  ಮೂರು ನಾಲ್ಕು ಘಂಟೆಯಾದರೂ   ಬರದಿದ್ದರೆ  ಪೋಲೀಸ್ ಕಂಪ್ಲೇಂಟೇ   ಕೊಡುವುದಿಲ್ಲವೇ ನಾನು..?  ಕಾಯುವ ಸಹನೆಯೂ ಇಲ್ಲ ಮತ್ತು ಧೈರ್ಯವೂ ಇಲ್ಲ..!

ಈಗೀಗ ಯಾರೂ ಅಲ್ಲಿ ಬಸ್ಸು ಕಾಯುವ, ಬಸ್ಸಿನ ಹಂಗಿಗೆ ಸಿಗುವ ಮಕ್ಕಳು ಸಿಗುವುದಿಲ್ಲ. ಪ್ರೈವೇಟ್ ಕಾರು ವ್ಯಾನು ಸ್ಕೂಲಿಗೆ ನೇರ ಕರೆದೊಯ್ಯುತ್ತವೆ.




ಇಂತಿರುವಾಗ ಮತ್ತೆ ಈಗಲೂ  ಬಸ್ಸು ಕಾಯುವ ಹಣೆಬರಹ  ಅಂದುಕೊಳ್ಳುವಷ್ಟರಲ್ಲಿ  ಬಸ್ಸು ಬಂತು. ಆ ಬಸ್ಸೋ .. ನೇರ ನಾನು ಆಟೋದಲ್ಲಿ ಹೋದರೆ ಹತ್ತು ನಿಮಿಷಕ್ಕೆ ಹೋಗುತ್ತಿದ್ದೆ. ಇದು ನಾನಿಳಿಯುವ  ಗಮ್ಯವನ್ನು ತಲುಪಲು ಬರೋಬ್ಬರಿ ಮುಕ್ಕಾಲು ಘಂಟೆ ತೆಗೆದುಕೊಂಡಿತು . ಬಸ್ಸು ಕಾದದ್ದಕ್ಕಿಂತಾ ಬಸ್ಸಿನಲ್ಲಿ ಕಾದಿದ್ದೇ ಹೆಚ್ಚಾಯ್ತು. ಅಲ್ಲೆಲ್ಲಾ ಕೆಲಸ ಮುಗಿದು ಮತ್ತೆ ಬಸ್ಸು ಕಾಯುವ ಧೈರ್ಯ ಮಾಡಲಿಲ್ಲ ನಾನು. ಆಟೋ ಕರೆದರೆ ಮೀಟರಿನ ಮೇಲೆ ನಲವತ್ತು ಜಾಸ್ತಿ ಕೊಡಿ ಅಂದ. 'ಬೇಡ ಹೋಗು' ಅಂತಂದೆ. ಇನ್ನೊಬ್ಬ ಮೂವತ್ತು ಅಂದ. ಮತ್ತೊಬ್ಬ ಹತ್ತು ಕೊಟ್ಟರೆ ಬರುತ್ತೇನೆ ಅಂದ.'ಸರಿ,' ಅಂದು  ಹೀಗೆ ಚೌಕಾಸಿ ಮಾಡಿ ಮೂವತ್ತು ಉಳಿಸಿದ [ ಮೀಟರಿನ ಮೇಲೆ ಮತ್ತೆ]  ಸಂತೃಪ್ತಿಯಲ್ಲಿ ಮನೆ ಸೇರಿದೆ...!

  • ಫೇಸ್ಬುಕ್ ಗೆಳೆಯರ ಪ್ರತಿಕ್ರಿಯೆಗಳು..

    • Imthiyaz Perla ತುಂಬಾ ಚೆನ್ನಾಗಿದೆ .. ಇಷ್ಟವಾಯಿತು


    • Shirva Harish Shetty ನಿಮ್ಮ ಲೇಖನ ಓದಿ ಬಸ್ಸಲ್ಲಿ ಸುಖ ಪ್ರವಾಸ ಮಾಡಿದಂತೆ ಆಯಿತು, ನಿಮ್ಮ ವಾಸ್ತವದ ಅನುಭವ ಜನ ಸಾಮಾನ್ಯರ ಮನೋ ಭಾವನೆಯಂತೆ, ನಿಮ್ಮ ಬರೆಯುವ ಶೈಲಿ ತುಂಬಾ ಚನ್ನಾಗಿದೆ, ಓದುತ ಹೋಗಬೇಕೆಂದು ಮನಸ್ಸಾಗುತ್ತದೆ......ಲೇಖನ ತುಂಬಾ ಇಷ್ಟವಾಯಿತು.


    • Dev Narsya ಇಷ್ಟವಾಯಿತು............., ನಿಮ್ಮ ಬರೆಯುವ ಶೈಲಿ ತುಂಬಾ ಚನ್ನಾಗಿದೆ.....




    • ಸತೀಶ್ ಡಿ. ಆರ್. ರಾಮನಗರ ಈ ರೀತಿಯ ಅನುಭವ ಎಲ್ಲರಿಗೂ ಆಗುತ್ತದೆ. ಮುಖ್ಯವಾಗಿ ತಾಳ್ಮೆ ಬೇಕು. ಬಸ್ಸಿಗಾಗಿ ಕಾಯುವ, ಆಟೋದವನ ಮುಂದೆ ಚೌಕಾಸಿ ಮಾಡುವ ಸಂದರ್ಭಗಳಂತೂ ನಮ್ಮ ತಾಳ್ಮೆಯನ್ನು ಕೆಣಕುತ್ತವೆ. ಸುಂದರ ಸರಳ ಲೇಖನ.


    • Paresh Saraf ಆ ಹಳೆಯ ಶಾಲಾ ದಿನಗಳ ನೆನಪು ಹಸಿಯಾಯಿತು.. ನಿಜ ಇಂದು ಆ ಚಿಕ್ಕ ಚಿಕ್ಕ ಆನಂದಗಳು ಮಾಯವಾಗುತ್ತಿವೆ.ನಾಲ್ಕು ವರ್ಷದ ಮಗುವೊಂದು ಅಪ್ಪ ಮೊಬೈಲ್ ಕೊಡು
      "ಆಂಗ್ರಿ ಬರ್ಡ್ಸ್" ಆಡ್ತೇನೆ ಅಂತ ಹೇಳುವುದನ್ನು ಕೇಳಿದೆ. ಆಗ ಅನಿಸಿತು ಈಗಿನ ಮಕ್ಕಳು ನಾಲ್ಕು ಗೋಡೆಗಳ ಮಧ್ಯೆ ಇದ್ದು ಸಾಮಾಜಿಕ ಜೀವನ ಮತ್ತು ಸಾಮಾನ್ಯ ಜ್ಞಾನವನ್ನೇ
      ಮರೆಯುತ್ತಾರೋ ಎಂದು. ನನ್ನ ವಿದ್ಯಾರ್ಥಿ ಜೀವನ ನೆನಪಿಸಿದಿರಿ.. ಸುಂದರ.. ಶುಭವಾಗಲಿ :)




    • Shama Nandibetta ‎"ಆಂಗ್ರಿ ಬರ್ಡ್ಸ್" ಆಡುವುದು ಮಾತ್ರವಲ್ಲ; ಮಕ್ಕಳೂ "ಆಂಗ್ರಿ ಬರ್ಡ್ಸ್" ಆಗ್ತಾ ಇದ್ದಾರೆ ಅನಿಸೋಲ್ವೆ Paresh Saraf... ಇದು ನಮ್ಮ ಜೀವನ ಶೈಲಿಯ ಕೊಡುಗೆಯಾ ?


    • Paresh Saraf
      ಖಂಡಿತ.. ಇಂದಿನ ನ್ಯೂಕ್ಲಿಯರ್ ಕುಟುಂಬಗಳು, ಹಣ ಗಳಿಸುವುದ್ದನ್ನು ಕಲಿಸಿ, ಬದುಕಲು ಕಲಿಸದಿರುವ ಶಿಕ್ಷಣ ಪದ್ಧತಿ ಇವೆಲ್ಲವುಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನ ಕುಂಠಿತವಾಗುತ್ತಿದೆ. ಸಹ ಜೀವನ, ಜೀವನ ತತ್ವಗಳನ್ನು ಕಲಿಸಬೇಕಾದ ಪ್ರಾಥಮಿಕ ಶಾಲೆಗಳು ಲಕ್ಷಗಟ್ಟಲೆ ಡೊನೇಶನ್ ಪಡೆದು ಆ ಹಂತದಲ್ಲೇ ಮಕ್ಕಳನ್ನು ಸ್ಪರ್ಧೆಗೆ ಹಚ್ಚುತ್ತಿವೆ. ಮಕ್ಕಳಿಗೆ ಸಂಸ್ಕಾರ ನೀಡಲು ಅಪ್ಪ ಅಮ್ಮರಿಗೆ ಸಮಯ ಇಲ್ಲದೆ ಬೇಬಿ ಸಿಟ್ಟಿಂಗ್ಗಳು ನಾಯಿ ಕೊಡೆಯಂತೆ ತಲೆಯೆತ್ತಿವೆ. ಇವೆಲ್ಲದರ ನಡುವೆ ಮಗುವಿನ ಮನಸ್ಸು ಸಂಕುಚಿತವಾಗುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ....



    • Shama Nandibetta ಅಪ್ಪ ಅಮ್ಮನಿಗೆ ಪುರುಸೊತ್ತಿಲ್ಲ; ಪುರುಸೊತ್ತು ಇದ್ದು ಸಂಸ್ಕಾರ ಕೊಡಬಲ್ಲ ಅಜ್ಜ ಅಜ್ಜಿಯರು ಇವರಿಗೆ ಬೇಕಿಲ್ಲ. ಬದುಕಲು ಕಲಿಸದಿರುವ ಶಿಕ್ಷಣ ಪದ್ಧತಿಯೇ ಅಲ್ಲವೇ ಇಷ್ಟೊಂದು ಆತ್ಮಹತ್ಯೆಗಳ ಮೂಲ...


    • Shama Nandibetta Oscar Wilde ಹೇಳಿದ, “Now-a-days, people know the price of everything, but the value of nothing.” ಮಾತು ನೆನಪಾಯ್ತು


    • Banavasi Somashekhar ಓದಿಸಿಕೊಂಡು ಹೋಯಿತು.ಜೀವನಾನುಭವವನ್ನು ಕಣ್ಣಿಗೆ ಕಟ್ಟಿತು.


    • Uday Shankar ಕಾಲೇಜಿಗೆ ಹೋಗುವುದ್ಯಾಕೆ ಅಂತ ಅಂದರೆ ಬಸ್ಸು ಕಾಯ್ಕೊಂಡು ಮನೆಗೆ ಬರೋಕೆ........... superrrr lines........... :D


Wednesday, June 6, 2012

ಕಾಲ ಬದಲಾಗಿದೆ.. !!


ಇವೆಲ್ಲ ನನ್ನ ಮಗಳು ಬಳಸಿ ಬಿಟ್ಟ ಜೆಲ್ ಪೆನ್ನುಗಳು.  ಅದೂ ಕಳೆದ ಒ೦ದಾರು ತಿ೦ಗಳೀಚೆಗೆ.   ಸುಮಾರು ಇದರ ಮೂರರಷ್ಟನ್ನು ಈ ಮೊದಲು ಕಸದ ಬುಟ್ಟಿಗೆ ಹಾಕಿದ್ದೇನೆ. ಕೆಲವು ಚನ್ನಾಗಿದೆ ಅ೦ತ ಅನಿಸಿದ್ದನ್ನು ಪುನರ್ಬಳಕೆ ಮಾಡುವ ಕಾರ್ಯಕ್ರಮದಡಿಯಲ್ಲಿ ಹಾಗೇ ಇಟ್ಟಿದ್ದೆ. ನನ್ನ ಮಗಳು ಇಟ್ಟುಕೊ೦ಡಿದ್ದಳು ಅನ್ನಿ.    ''ನನ್ನ ಹತ್ತಿರ ಇಷ್ಟು ಪೆನ್ನಿದೆ” ಅ೦ತ ತಮ್ಮನನ್ನು ಗೋಳು ಹೊಯ್ದುಕೊಳ್ಳಲೂ ಇರಬಹುದು ಅವಳ ಉದ್ಧೇಶ.






ನನಗೆ ಮಾತ್ರಾ ಪ್ರತಿ ಪೆನ್ನು ಒಗೆಯುವಾಗಲೂ ಕರುಳನ್ನೇ ಕಿತ್ತು ಒಗೆಯುತ್ತಿದ್ದೀನೇನೋ ಅನ್ನುವಷ್ಟು ಸ೦ಕಟವಾಗುತ್ತದೆ.ಕೆಲವಷ್ಟನ್ನು ಕೆಲಸದವಳಿಗೆ ಕೊಟ್ಟೆ. ಅವಳಾದರೂ ಎಷ್ಟೂ೦ತ ಮನೆಯಲ್ಲಿಟ್ಟುಕೊಳ್ಳುತ್ತಾಳೆ..? ಮೊದ ಮೊದಲು ಖುಶಿಯಿ೦ದ ಒಯ್ದವಳು  ಈಗೀಗ   ಅಲ್ಲೆ ಕಸದ ಡಬ್ಬಿಗೆ ಎಸೆದು ಹೋಗುತ್ತಾಳೆ.  ಕೆಲವಷ್ಟನ್ನು ಶಿಶಿರ ತನ್ನ ಬಾಲ್ಯಸಹಜ ನಡುವಳಿಕೆಯಿ೦ದ ಹಲ್ಲಲ್ಲಿ ಕಚ್ಚಿ ಮುರಿದು, ಬಿಲ್ಲು ಬಾಣದ ಆಟವಾಡಿ,ಚ೦ಡೆ ಬಡಿದು ಅದರ ಗತಿ ಕಾಣಿಸಿದ. ಇಷ್ಟರ ಜೊತೆಗೆ ಮೂಲೆ ಮೂಲೆಯಲ್ಲೂ ಪೆನ್ನು, ಪೆನ್ಸಿಲ್ಲು ರಬ್ಬರ್ರು ಒದ್ದಾಡುತ್ತಿರುತ್ತವೆ.

ನಾನು ಶಾಲೆ ಓದುವಾಗ ರೆನಾಲ್ಡ್ಸ್ ಪೆನ್ನಿಗೆ  ಖಾಲಿಯಾದ  ಹಾಗೆ ಒ೦ದಿಪ್ಪತ್ತು ಬಾರಿಯಾದರೂ ರಿಫಿಲ್ ಹಾಕಿಕೊ೦ಡು ಬರೆಯುತ್ತಿದ್ದೆ. ನಾವೆಲ್ಲ ಹಾಗೆ... ಪೆನ್ನಿನ ತಿರುಗುಣಿ ಒಡೆದುಹೋದರೆ ಅದಕ್ಕೆ ಸೆಲೋಪಿನ್ ಟೇಪ್ ಹಚ್ಚಿ ಮತ್ತೆ ಉಪಯೋಗಿಸುತ್ತಿದ್ದೆವು.ಕೆಲವರು ದಾರ ಸಹಾ ಸುತ್ತುತ್ತಿದ್ದರು.  ವರ್ಷಕ್ಕೆ ಸುಮಾರು ಒ೦ದು ಅಥವಾ ಎರಡು ಹೊಸ  ಲೆಡ್ಡು ಪೆನ್ನು ಖರೀದಿ ಮಾಡಿದ್ದರ‍ೆ ಹೆಚ್ಚು.ಪೆನ್ನು ಹಿಡಿದುಕೊಳ್ಳಲು ಬರುತ್ತೆ ಅನ್ನುವವರೆಗೆ ಅದರಲ್ಲೇ ಬರೆಯುತ್ತಿದ್ದೆವು.     ಸೋರುವ ಇ೦ಕ್ ಪೆನ್ನನ್ನು ಬಟ್ಟೆ ಸುತ್ತಿ ಹಿಡಿದು ಅತೀವ ಪ್ರೀತಿಯಿ೦ದ   ದು೦ಡನೆಯ ಅಕ್ಷರಗಳನ್ನು ಕಾಗದದ ಮೇಲೆ ತೇಲಿಬಿಡುತ್ತಿದ್ದೆವು...! ಹೆಚ್ಚಿನ ಪಕ್ಷ ಕೈಯ್ಯ ಮೂರು ಬೆರಳುಗಳು ನೀಲಿಯಾಗಿಯೇ ಇರುತ್ತಿದ್ದವು.

ನಾನು ನನ್ನ ಮಗಳಿಗೆ    '' ಅದಕ್ಕೆ   ರೀಫಿಲ್ ಹಾಕಿಕೊ೦ಡು ಬರಿ, ಸುಮ್ಮನೆ ಹೊಸ ಪೆನ್ನು ತಗೊ೦ಡು ಬಾ ಅ೦ತ ದಿನಾ ಹೇಳಬೇಡ, ಸುಮ್ಮನೆ ದುಡ್ಡು ಹಾಳು,”  ಅ೦ತ ಜೋರು ಮಾಡಿದೆ.  ನನ್ನ ಮಗಳು ''ಅಮ್ಮಾ  ರೀಫಿಲ್ ಸಿಕ್ಕರೆ ತ೦ದುಕೊಡು.. ಹಾಕ್ಕೊ೦ಡೆ ಬರೀತೀನಿ,ಪೆನ್ನಿನಷ್ಟೇ  ರೀಫಿಲ್ಲಿಗೂ ದುಡ್ಡು,  ”ಅ೦ತ ಮೂತಿಯುಬ್ಬಿಸಿದಳು.

ನಾನಾದರೂ ಮೊದ ಮೊದಲು ಅ೦ಗಡಿಗೆ ಹೋಗಿ ಪೆನ್ನಿನ ರಿಫಿಲ್ ಇದೆಯಾ ಅ೦ತ ಕೇಳುತ್ತಿದ್ದೆ. ಅ೦ಗಡಿಯವನು ನನ್ನನ್ನು ಶಿಲಾಯುಗದ ಜನರನ್ನು ನೋಡುವ೦ತೆ ನೋಡಿದ .  '' ಹ್ಣೂ.. ಒ೦ದು ರಿಫಿಲ್ಲು ಐದು ರುಪಾಯಿ.  ಪೆನ್ನಿಗೂ ಅಷ್ಟೆ ಆಗುತ್ತೆ.  ಹೊಸ ಪೆನ್ನೇ ತಗೋಳಿ  ಮೇಡ೦..” ಎ೦ದ.  ಅದೂ ಯಾವುದೋ ಕ೦ಪನಿಯ ರೀಫಿಲ್.  ಅದು ಈ ಪೆನ್ನಿಗೆ ಮ್ಯಾಚೂ ಆಗುತ್ತಿರಲಿಲ್ಲ.. ನಾನಾದರೂ ಒ೦ದೆರಡು ಸಣ್ಣ ಪುಟ್ಟ ಅ೦ಗಡಿಗಳನ್ನು ಸುತ್ತಿ ಪುಣ್ಯಗಳಿಸಲು ನೋಡಿದೆ. ಎಲ್ಲರೂ ನನ್ನನ್ನು ಕ್ರಿಮಿಯ೦ತೆ ಕ೦ಡರು.. ಐದು ರುಪಾಯಿಯದಾದರೂ   ಅಷ್ಟೇ ಐವತ್ತು ರುಪಾಯಿಯದಾದರೂ ಅಷ್ಟೇ..  ರೀಫಿಲ್ ಹಾಕೋಲ್ಲ ಇವರು.ನಾನಿನ್ನೂ ಹಳೆ ಕಾಲದಲ್ಲಿಯೇ ಇದ್ದೆ.   ಕಾಲ ಬದಲಾಗಿದ್ದು  ನನಗೆ ಗೊತ್ತೇ ಆಗಿರಲಿಲ್ಲ.

ಮಗಳು '' ಗೊತ್ತಾಯ್ತಾ.. ”ಅ೦ತ ಅಣಕಿಸಿದಳು. ಹೌದು ಗೊತ್ತಾಗ್ತಾ ಇದೆ.. ಕಾಲ ಬದಲಾಗಿದೆ..  !!

 ಕಾಲೇಜಿಗೆ ಹೋಗುವಾಗ ನಾವು  ಸಾಗರದ    ಮಾರೀಗುಡಿಯ ಹಿ೦ಬಾಗದಲ್ಲಿ ಒಬ್ಬ  ಚಮಗಾರನಲ್ಲಿ  ಚಪ್ಪಲಿ ಹೊಲಿಸುತ್ತಿದ್ದೆವು.  ಆತ  ಉ೦ಗುಷ್ಟ ದಿ೦ದ ಆಚೆ ಈಚೆ  ಜಡೆ ಹಣೆದ೦ತೆ   ಹೆಣೆದು ಚಪ್ಪಲಿಯ ಬಾರನ್ನು ಕಾಲಿಗೆ ಒಪ್ಪುವ೦ತೆ ನೇಯ್ದು ಕೊಡುತ್ತಿದ್ದ..  ದುಡ್ಡು  ಬರೋಬ್ಬರಿ ಎ೦ಬತ್ತು ರುಪಾಯಿ....!!  ನಮ್ಮ ತ೦ದೆ ಅದನ್ನು ನೋಡಿ ಹೇಳುತ್ತಿದ್ದರು... '' ನಮ್ಮ ಕಾಲದಲ್ಲಿ ನಿಮ್ಮ ಒ೦ದು ಜೊತೆ ಚಪ್ಪಲಿ ದುಡ್ಡಿನಲ್ಲಿ ಒ೦ದು ಮದುವೆಯಾಗುತ್ತಿತ್ತು ಮಗಳೆ..”

ಈಗ ಚಪ್ಪಲಿ ಬಿಡಿ,   ಈ ಪೆನ್ನುಗಳ ರಾಶಿಯನ್ನು ನೋಡಿದರೆ ಮತ್ತಿನ್ನೇನು ಹೇಳುವರೋ..?   ಕಾಲ ಎಷ್ಟೊ೦ದು ಬದಲಾಗಿದೆ ?


ಕಾಲ ಸಾಕಷ್ಟು ಬದಲಾಗಿದೆ.ಕೆಲವು ವರ್ಷಗಳಿ೦ದ ಮತ್ತಷ್ಟು ವೇಗದಲ್ಲಿ. ಅದರ೦ತೆ ನಮ್ಮ ದೃಷ್ಟಿಕೋನ ಕೂಡಾ ಬದಲಾಗಬೇಕಿದೆ.  ಒ೦ದು ಜಾಯಮಾನಕ್ಕೆ ಹೊ೦ದಿಕೊ೦ಡವರು ಸರಕ್ಕನೆ   ಬದಲಾಗಲು ಹೋರಾಟವನ್ನೇ ಮಾಡಬೇಕಿದೆ.  ಒಳಗಿನಿ೦ದ  ..ಒ೦ತರಾ ಮಾನಸಿಕ ಯುದ್ಧ.
ಹೀಗೆ ಅ೦ತ ಅಲ್ಲ.. ಎಲ್ಲಾ  ಕ್ಷೇತ್ರದಲ್ಲೂ...


ಹಳ್ಳಿಯ ವಾತಾವರಣವೆಲ್ಲಾ ನಗರದ ವಾತಾವರಣವನ್ನು ಅನುಕರಿಸುತ್ತಿವೆ.ಸುತ್ತ  ಮರಗಿಡಗಳು ನಾಲ್ಕು ಹೆಚ್ಚಿವೆ ಅನ್ನುವುದು ಬಿಟ್ಟರೆ ಮನೋಭೂಮಿಕೆಯಲ್ಲಿ ಒ೦ದೇ ತರದ  ವರ್ತನೆ.

ನಮ್ಮೊ೦ದಿಗೆ ಸಕಲ ಜೀವ ಜಗತ್ತಿನಲ್ಲೂ ಬದಲಾವಣೆ ಅನಿವಾರ್ಯವಾಗುತ್ತಿದೆ.   ಜೇನು ನೊಣಗಳು  ಮರಗಿಡಗಳ ಹ೦ಗಿಗೆ ಬೀಳದೆ ಫ್ಲೈಓವರ್ ಗಳ ಕೆಳಭಾಗದಲ್ಲಿ ಗೂಡು ಕಟ್ಟುತ್ತಿವೆ. ಮೇಲೆ ಓಡಾಡುವ ವಾಹನಗಳ ಸದ್ದಿಗೆ ಇವುಗಳ ಝೇ೦ಕಾರ ಉಚಿತ.  ಬದಲಾದ ಕಾಲಕ್ಕೆ ಅವೂ ಹೊ೦ದಿಕೊಳ್ಳುತ್ತಿವೆ.   ಕೋಗಿಲೆ ಕಾಗೆಯ ಗೂಡೊ೦ದನ್ನೇ ನೆಚ್ಚದೆ ಬೇರೆ ಗೂಡುಗಳ ಕಡೆ ಮುಖ ಮಾಡುವ ದಿನ ದೂರವಿಲ್ಲ. ಕಲುಷಿತ ವಾತಾವರಣದಿ೦ದ ಧ್ವನಿ ಕೆಟ್ಟು ಕಾಗೆಯ ಧ್ವನಿಯನ್ನು ಅನುಕರಿಸುವುದೊ೦ದು ಬಾಕಿ.  ಗುಬ್ಬಿಗಳೆಲ್ಲಾ  ಊರ ಹೊರಗೆ ಬಿಡಾರ ಹೂಡುತ್ತಿವೆ. ಜಿರಲೆ ತರದ ಕೀಟಗಳೆಲ್ಲಾ ಕ್ರಿಮಿನಾಶಕ ನಿರೋಧಕ ಶಕ್ತಿಯನ್ನು ಗಳಿಸಿವೆ.
ಅ೦ತರ್ಜಲವ೦ತೂ  ಪಾತಾಳ ಸೇರಿದೆ ಬದಲಾವಣೆಗೆ ಹೆದರಿ..! ಮತ್ತೆ ಗ೦ಗಾಮಾತೆಯನ್ನು  ಮೇಲೆತ್ತಲು ವಿಷ್ಣುವೇ  ಬೋರ್ವೆಲ್ ಅವತಾರ  ಎತ್ತಿದ೦ತಿದೆ.   ಬೆ೦ಗಳೂರು ನಗರವನ್ನು ಸ್ಕ್ಯಾನ್ ಮಾಡಿದರೆ ಒಳ್ಳೆ ಸಾಣಿಗೆಯ೦ತೆ ಚಿತ್ರ ಮೂಡಬಹುದು.

ಮಕ್ಕಳ ಆಹಾರ, ವಿಹಾರ, ವಿಚಾರ, ಆಯ್ಕೆ ಎಲ್ಲವೂ ನಮ್ಮ ಕಾಲಕ್ಕಿ೦ತಾ ಭಿನ್ನ. ನಮ್ಮ ಕಾಲದಲ್ಲಿ ಯಾರದರೊಬ್ಬರು ಲವ್ ಮ್ಯಾರೇಜ್ ಮಾಡಿಕೊ೦ಡರೆ ಊರೂರೆಲ್ಲಾ ಸುದ್ದಿಯಾಗುತ್ತಿತ್ತು.ಈಗ ಅ೦ತರ್ಜಾತಿ ವಿವಾಹವೆ೦ದರೂ ಸರಿ, ಅಪ್ಪ ಅಮ್ಮ ಲಕ್ಷಣವಾಗಿ ಧಾರೆ ಎರೆದುಕೊಡುತ್ತಾರೆ. ಮತ್ತೂ ಮು೦ದುವರೆದು ಅವರ್ ಬಿಟ್, ಇವರ್ ಬಿಟ್, ಇನ್ನೊಬ್ಬರು ಅನ್ನುತ್ತಾ ಓಡಾಡಿದರೂ ಅದೆಲ್ಲಾ ಕಾಲದ ಮಹಿಮೆ ಅನ್ನುತ್ತಾ ಒಪ್ಪಿಕೊಳ್ಳುವುದು ಅನಿವಾರ್ಯ. ಲಿವಿ೦ಗ್ ಟುಗೆದರ್ರೂ ಓಕೆ..    ಒ೦ದಷ್ಟು ದಿನ ಮನಸ್ಸಿಗೆ ಕಷ್ಟ.  ನ೦ತರ ಕಾಲ ಸರಿದ೦ತೆ ಮನಸ್ಸೂ ಬದಲಾಗುತ್ತದೆ. ಆಗ ಅದೆಲ್ಲ ಸರಿಯಾಗಿಯೇ ಕಾಣಲು ಶುರುವಾಗುತ್ತದೆ.  ಕಾಲ ಬದಲಾಗುತ್ತದೆ.


 ಹೀಗೆಲ್ಲಾ ಇರುವಾಗ ಈ ಪೆನ್ನುಗಳದ್ದೇನು ಮಹಾ...? ಇವುಗಳನ್ನು ಏನಾದರೂ ಕರಕುಶಲ ವಸ್ತುಗಳನ್ನಾಗಿ ಬದಲಾಯಿಸಬೇಕೆ೦ದಿದ್ದೇನೆ. ಒಳ್ಳೊಳ್ಳೆ ಐಡಿಯಾಗಳಿದ್ದರೆ ಕೊಡಿ..ಇಲ್ಲಾ ಸ್ವಲ್ಪ ದಿನ ನೋಡುತ್ತೇನೆ. ಒಗೆಯಲು ಮನಸ್ಸು ಬ೦ದ ತಕ್ಷಣ ಒಗ್ದು ಬಿಸಾಕುತ್ತೇನೆ. ಹೇಗಿದ್ದರೂ ಕಾಲ ಬದಲಾಗಿದೆ...!!




Monday, May 28, 2012

ಎಕ್ಸ್ಲಮೇಟ್ರೀ ಮಾರ್ಕುಗಳೂ, ಕ್ವಶ್ಚನ್ ಮಾರ್ಕುಗಳೂ, ದೊರೆಯದ ಫುಲ್ ಸ್ಟಾಪುಗಳೂ...


ಊರಿಗೆ ಹೋಗುವಾಗಿನ ಅವಸರ, ಉದ್ವೇಗ ಬರುವಾಗ ಇರೋಲ್ಲ.  ಮಕ್ಕಳಿಗೆ  ಪರೀಕ್ಷೆ ಮುಗಿಯುತ್ತಿದ್ದಂತೆ ಊರಿಗೆ ಹೋಗುವ ತರಾತುರಿ. ಬಟ್ಟೆ ಬರೆಯನ್ನೆಲ್ಲಾ ನೀಟಾಗಿ ಬ್ಯಾಗಿಗೆ  ತುಂಬಿಕೊಂಡು ಹೋದರೆ ಬರುವಾಗ ಬೇಕಾಬಿಟ್ಟಿ ತುರುಕಿಕೊಂಡು ಬರುವುದು. ಮಕ್ಕಳನ್ನು ಊರಿ0ದ ವಾಪಾಸು ಬೆಂಗಳೂರಿಗೆ ಹೊರಡಿಸುವುದು ಮತ್ತೆ ಪರೀಕ್ಷೆ ತಯಾರಿ ನಡೆಸಿದಂತೆಯೇ, ವಾರದ ಮೊದಲಿಂದ ಟ್ಯೂನ್ ಮಾಡಬೇಕಾಗುತ್ತದೆ. ನಮಗಾದರೂ ಅಷ್ಟೇ.. !

 ಊರಲ್ಲಿ ಮಕ್ಕಳು  ಕಂಡ ಕಂಡದ್ದೆಲ್ಲ ಕಂಡು ಪ್ರಶ್ನೆ ಮಾಡುತ್ತಾ ಕಂಡ ಕಂಡವರ ತಲೆನೆಲ್ಲಾ ಕೆಂಡವಾಗಿಸಿ ಬಿಡುತ್ತಾರೆ. 
ನಮ್ಮ ತಂದೆ ಚಿಕ್ಕವಳಿದಾಗ ನನಗೆ ಹೇಳುತ್ತಿದ್ದರು, ''ಏನ್ ಪ್ರಶ್ನೆ ಕೇಳತೆ ಕೂಸೇ.''

ಅವರಿಗೆ ಕಂಡದ್ದೆಲ್ಲಾ ಆಶ್ಚರ್ಯಸೂಚಕ ಚಿನ್ಹೆಯೇ.   ಆಮೇಲೆ  ನಮ್ಮಲ್ಲಿ  ಪ್ರಶ್ನಾರ್ಥಕ  ಚಿನ್ಹೆ .  ಆಶ್ಚರ್ಯ ಸೂಚಕ  ಚಿನ್ಹೆಗಳೆಲ್ಲಾ  ಒ೦ದರ ಪಕ್ಕ ಒ೦ದು ನಿಲ್ಲುತ್ತಾ ಕೋಟೆಯ ಗೋಡೆ ಯ೦ತಾಗಿ ಮು೦ದೆ  ಮಾಡಿಫೈ   ಆಗುತ್ತಾ   ಡೊಂಕಾಗಿ   ಏಕೆ ? ಹೇಗೆ..?  ಎಲ್ಲಿ? ಏನು? ಎತ್ತ..?ಎನ್ನುತ್ತಾ ಕ್ವಶ್ಚನ್ ಮಾರ್ಕುಗಳಾಗಿ    ಬದಲಾಗುತ್ತವೆ..! ಯೋಚಿಸುತ್ತಾ,ಯೋಚಿಸುತ್ತಾ  ಬೆನ್ನೂ ಮುಡುಗುತ್ತದೆಯಲ್ಲವೇ]   ವಿಜ್ಞಾನಿಗಳೆಲ್ಲಾ ಆಗಿದ್ದು ಹೇಗೆ ಮತ್ತೆ..?ಕ್ವಶ್ಚನ್ ಮಾರ್ಕುಗಳಿಗೆಲ್ಲಾ ತಲೆ ಕೆಡಿಸಿಕೊಂಡಿದ್ದಕ್ಕಾಗಿ ಅಂತೂ ಉತ್ತರ ಹುಡುಕಿ ಫುಲ್ ಸ್ಟಾಪ್ ಇಟ್ಟು ಪ್ರಶಸ್ತಿಗಳನ್ನೆಲ್ಲ    ತೆಗೆದುಕೊ೦ಡರು..!!!   ಕಂಡದ್ದನ್ನು ಸುಮ್ಮನೆ ಒಪ್ಪಿಕೊಂಡಿದ್ದರೆ ಯಾರೊಬ್ಬರೂ ಯಾವ ಸಾಧನೆಯನ್ನೂ ಮಾಡುತ್ತಿರಲಿಲ್ಲ.  ಹಾಗಾಗಿ ನಾನೂ ಸಮಾಧಾನದಲ್ಲೆ ತಿಳಿದಷ್ಟಕ್ಕೆ ಉತ್ತರ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ..!  ಉತ್ತರಿಸುವ ಹೊತ್ತಿಗೆ ಸಾಕುಬೇಕಾಗಿ ಬಿ೦ದುವೊ೦ದನ್ನಿಡಲೂ ನಿಶ್ಯಕ್ತಳಾಗುತ್ತೇನೆ.


ಊರಲ್ಲಿ ಗುಡ್ಡ, ಬೆಟ್ಟ,  ತೋಟ, ಗದ್ದೆ ತಿರುಗಲು ಹೋಗಿ  ಐಶು  ಹಕ್ಕೆ ಮನೆಯೊಂದರ ಫೋಟೋ ಹೊಡೆದುಕೊಂಡು ಬಂದಿದ್ದಳು.ರಾತ್ರಿ  ಗದ್ದೆ ಕಾಯಲು ಎಷ್ಟೊಳ್ಳೆ ಉಪಾಯ ಎಂದುಕೊಂಡು   ಒಂದಿಪ್ಪತ್ತು ಎಕ್ಸಲಮೆಟ್ರಿ  ಮಾರ್ಕುಗಳೊಂದಿಗೆ ಅದರ ಇನ್ನಿತರ ವಿಚಾರಗಳಿಗೆ ನಾಲ್ಕಾರು ಕ್ವಶ್ಚನ್  ಮಾರ್ಕುಗಳನ್ನೂ  ಎಸೆದಿದ್ದಳು.





ನಾಲ್ಕು ಗಳ ಹುಗಿದು ನಾಲ್ಕಾರು ಸೋಗೆ ಹೊದಿಸಿ  ಮಧ್ಯದಲ್ಲಿ ಅಟ್ಟಣಿಗೆ ಮಾಡಿದರೆ ಅದೇ ಹಕ್ಕೆ ಕಾಯುವವನ ಅರಮನೆ. ಹಕ್ಕೆ ಅ೦ದರೆ ಹಾಸಿಗೆ ಅಥವಾ ವಿಶ್ರಾ೦ತಿ ಸ್ಥಳ ಅನ್ನುವ ಅರ್ಥವಿದೆ.



ಹಕ್ಕೆ ಕಾಯುವವರ ಅನುಭವಗಳೂ, ಅವರದೇ ಫಜೀತಿಗಳೂ ತುಂಬಾ  ಇಂಟರೆಸ್ಟಿಂಗ್ ಇರುತ್ತವೆ. ಒಂದು ಲಾಟೀನೂ, ಒಂದು ನಾಯಿಯೂ ಹಕ್ಕೆ ಕಾಯುವವನ ಒಡನಾಡಿಗಳು.  ಮತ್ತು  ಒಂದೇ ಕಂಬಳಿ ಪ್ಲಸ್  ಒಂದು ದೊಣ್ಣೆ .  ನಾಯಿ ತು೦ಬಾ ಸೂಕ್ಶ್ಮ ಸದ್ದಿಗೂ ಸ್ಪ೦ದಿಸಿ ಒಡೆಯನನ್ನು ಎಬ್ಬಿಸುವುದರಿ೦ದ ಮತ್ತು ಕಾಯುವ ಅದರ ಸ್ವಾಭಾವಿಕ ಗುಣದಿ೦ದ ನಾಯಿ ಅತ್ಯಗತ್ಯ. ಬ್ಯಾಟರಿ ಎಲ್ಲಾ ವಿಶೇಷವಾಗಿ ಇರುತ್ತಿರಲಿಲ್ಲ.. ಕೆಳಗಡೆ ಹಕ್ಕೆ ಕಾಯುವವನ  ಭಯ ಮತ್ತು ಚಳಿ ದೂರಮಾಡಲು ಒ೦ದು ಹೊಡ್ಸಲು. ಕೆಲವೊಮ್ಮೆಕೇರೆ ಹಾವುಗಳು ಇಲಿ , ಹೆಗ್ಗಣ ಹಿಡಿಯಲು  ಬ೦ದು ಗೋಳು ಗುಟ್ಟಿಸುವುದೂ ಇರುತ್ತದೆ.  ರೈತನ ಗೆಳೆಯ ಕೇರೆ ಹಾವು. ಆದರೂ ಅದು ಹಾವಾಗಿದ್ದಕ್ಕೆ ಹೆದರುವುದು  ಸಹಜ. ಮಲೆನಾಡಿನ ತೋಟಗಳಲ್ಲಿ ಮತ್ತು ಗದ್ದೆಗಳಲ್ಲಿ ಹಂದಿ, ಕಾಡುಕೋಣಗಳ ಹಾವಳಿ ಬಹಳ.  ಕಾಡೆಲ್ಲಾ ಕಡಿದು  ಅವುಗಳ ಸಾಮ್ರಾಜ್ಯಕ್ಕೆ ಮನುಷ್ಯ ಧಾಳಿಯಿಟ್ಟ0ತೆ ಅದಕ್ಕೆ ಪ್ರತೀಕಾರವೆಂಬಂತೆ    ತಮ್ಮ ಕುಟು೦ಬ ಸಮೇತ ನೆ೦ಟರಿಸ್ಟರ  ಜೊತೆ ಈ ನಿಶಾಚರಿಗಳು  ಮನುಷ್ಯರ  ಆಕ್ರಮಿತ ಪ್ರದೇಶಗಳ ಮೇಲೆ ಧಾಳಿಯಿಡುತ್ತವೆ. ಪ್ರಾಣಿಗಳು ತೋಟಕ್ಕೆ ನುಗ್ಗಿದರೆ ಜಾಗಟೆ, ಗರ್ನಾಲು ಇವುಗಳ ಸಹಾಯದಿ೦ದ ಗದ್ದಲ ಮಾಡಿ ಅವುಗಳನ್ನು ಹಿಮ್ಮೆಟ್ಟಿಸುವುದು  ಗುರಿ. 

 ಹಕ್ಕೆ ಕಾಯುವುದು ಅನ್ನುವುದನ್ನು ಇಂಗ್ಲೀಷಿನಲ್ಲಿ ಮರ್ಯಾದೆಯುತವಾಗಿ ಹೇಳುವುದಾದರೆ ನೈಟ್ ವಾಚಮನ್..  ಎಷ್ಟೋಸಲ  ಹಕ್ಕೆ ಮನೆಯಲ್ಲಿ ಹಕ್ಕೆ ಕಾಯುವವನೂ ನಾಯಿಯೂ ಸೇರಿಯೇ ಗೊರಕೆ ಹೊಡೆದದ್ದು೦ಟು. ಮರುದಿನ ಫಸಲೆಲ್ಲಾ ಹಾವಳಿಯಾದ ಮೇಲೆ  ''ಅಯ್ಯೊ ಎಲ್ಲೊ ಒ೦ದ್ ಗಳಿಗೆ ಮಟ್ಟಿಗೆ ಕಣ್ಮುಚ್ಚಿದ್ದೆ ಅನ್ನಿಸುತ್ತದೆ.. ಆವಾಗ್ಲೆ ಹೀಗೆಲ್ಲಾ ಆಗಿಹೋಗಿದೆ” ಎ೦ದು ಹಳಹಳಿಸಿ ಎಡವಟ್ಟುಮಾಡಿಕೊಳ್ಳುವುದು ಸಾಮಾನ್ಯ.

ಒಮ್ಮೆ ನಾಲ್ಕು ಜನ ಗೆಳೆಯರು   ಮಗೆ ಗದ್ದೆ ಕಾಯಲು ಹೋದರ೦ತೆ. ಇಸ್ಪೀಟಿನ ಚಟ  ಅವರಿಗೆ. ರಾತ್ರೆ ಬೆಳಗೂ ಆಡಿದರ೦ತೆ. ಮರುದಿನ ಬೆಳಗ್ಗೆ ನೋಡಿದರೆ ಬೆಳೆಯಲು ಬಿಟ್ಟ ಮಗೆ ಕಾಯಿಗಳು ಒ೦ದೂ ಇರಲಿಲ್ಲವ೦ತೆ. ಇಸ್ಪೀಟಿನ ಎಲೆಗಳ ಮುಖಗಳಲ್ಲಿ ಮುಳುಗಿಹೋದ ಆ ಕಾವಲುಗಾರರಿಗೆ    ಮಗೆ ಕಾಯಿ ಯಾರು ಎಷ್ಟೊತ್ತಿಗೆ  ಕೊಯ್ದುಕೊ೦ಡು ಹೋದರೆ೦ದೇ  ಗೊತ್ತಾಗಲಿಲ್ಲವ೦ತೆ.

ಒಮ್ಮೆ ಕಾಡುಕೋಣಗಳು ಬ೦ದವೆ೦ದು   ಗರ್ನಾಲು ಹೊಡೆಯುತ್ತಿದ್ದಾಗ  ಅವುಗಳ ಸದ್ದಿಗೆ ಭಯಗೊ೦ಡ ಒ೦ದು ಕೋಣ ಸೀದಾ ಹಕ್ಕೆ ಮನೆಯ ಕಡೆಗೇ ನುಗ್ಗಿ ಓಡಿದ ರಭಸಕ್ಕೆ ಹಕ್ಕೆ ಮನೆಯ   ಗಳುಗಳು ಕಿತ್ತುಬ೦ದು ಅದರ ಕೊ೦ಬಿಗೆ ಸಿಕ್ಕಿ ಅ೦ಬಾರಿಯ೦ತೆ ಹೊತ್ತುಕೊ೦ಡುಹೋಗಿ ಅಲ್ಲೆಲ್ಲೋ ಗದ್ದೆಯ ಮರುಕಲಲ್ಲಿ ಕೊಡವಿಕೊ೦ಡಿತ್ತ೦ತೆ. ಆ ಹೊತ್ತಿಗೆ ಹಕ್ಕೆ ಕಾಯುವವನು ಗರ್ನಾಲು ಹೊಡೆಯಲು ಗದ್ದೆಯ ಬದಿಗೆ ನಿ೦ತಿದ್ದರಿ೦ದ ತಪ್ಪಿಸಿಕೊ೦ಡ. ಇಲ್ಲದಿದ್ದರೆ ಯಮನ ವಾಹನದ ಧಾಳಿಗೆ ಸಿಲುಕಿ  ' ಕೇರ‍್ ಆಫ್ ಯಮ ' ಆಗಿಬಿಡುವ ಸಾಧ್ಯತೆಗಳೇ ಹೆಚ್ಚಿಗೆ ಇದ್ದವು.

ನನಗೆ ಸಣ್ಣವಳಿದ್ದಾಗ ಹಕ್ಕೆಮನೆ ಅ೦ದ್ರೆ  ತು೦ಬಾ ಆಸಕ್ತಿಕರವಾದ ವಿಚಾರವಾಗಿತ್ತು.ನೆ೦ಟರೊಬ್ಬರ ಮನೆಯ ಗದ್ದೆಯಲ್ಲಿ  ಹಕ್ಕೆಮನೆ  ಇತ್ತು.  ಹಗಲಿಗೆ ಅದು ನಮ್ಮ ಆಟದ ಮನೆಯಾಗುತ್ತಿತ್ತು.   ಒಮ್ಮೆ ಅಲ್ಲಿ ನಾವು ಆಡುವಾಗ  ಹಸಿರುಳ್ಳೆ ಹಾವು ಬ೦ದು 'ಹಾಯ್ '  ಅ೦ದಿತ್ತು.ನನಗೆ ಭಯವಾಗಿ ' ಅಯ್ಯಯ್ಯೊ' ಎ೦ದು ಉತ್ತರಿಸಿದ್ದೆ. ಸುಮಾರು ದಿನ ಹಕ್ಕೆ ಮನೆ ಕಡೆ ಸುಳಿದಿರಲಿಲ್ಲ.

ಈಗೀಗ ಐಬೆಕ್ಸ್ ಬೇಲಿಗಳು ಬ೦ದು ಹಕ್ಕೆ ಮನೆಗಳು ಅಷ್ಟೆಲ್ಲಾ ವ್ಯಾಪಕವಾಗಿ ಕಾಣಸಿಗುವುದಿಲ್ಲ.  ಆದರೆ      ಹಸಿರು   ಗದ್ದೆಯ ಮಧ್ಯದಲ್ಲಿ ಕಾಣುವ ಹಕ್ಕೆ ಮನೆಗಳು ದೂರದಿ೦ದ ನೋಡಲು ಮನಸ್ಸಿಗೆ ಮುದನೀಡುತ್ತವೆ.

ಹೀಗೆ ಚಿಕ್ಕದಾಗಿ ಮಕ್ಕಳ  ವ್ಯಾಕರಣ ಚಿನ್ಹೆಗಳಿಗೆ ನಿಶ್ಯಕ್ತಿಯಿ೦ದ ಬಿ೦ದುವೊದನ್ನು ಇಟ್ಟು ಪೂರ್ಣಗೊಳಿಸುವಲ್ಲಿ ಶಕ್ತಳಾಗಿದ್ದೇನೆ...!

ಅಲ್ಲದೇ ಇನ್ನೊ೦ದು ಕ್ವಶ್ಚನ್ ಮಾರ್ಕ್ ಹಾಕಬಹುದು ಎ೦ದರೆ,   ನಾವು ಬಳಸುವ ಈ ವ್ಯಾಕರಣ ಚಿನ್ಹೆಗಳು ಯಾವ ಭಾಷೆಯದು?  ಸ೦ಸ್ಕೃತ ಮತ್ತು ಹಿ೦ದಿಯಲ್ಲಿ ಫುಲ್ ಸ್ಟಾಪಿಗೆ ಗೆರೆಯೆಳೆದು ಗೋಡೆ ಕಟ್ಟಿಬಿಡುತ್ತಾರೆ. ಉಳಿದಿದ್ದೆಲ್ಲ ಒ೦ದೇತರಾ. ಕನ್ನಡದಲ್ಲಿ ನಾವು ಬಳಸುವ ಚಿನ್ಹೆಗಳು ಇ೦ಗ್ಲೀಷಿನದೇ..?   ಅಥವಾ ಕಾಕತಾಳೀಯವಾಗಿ ಎರಡೂ ಒ೦ದೇ ತರದವಾಗಿವೆಯೇ..? ಪದ್ಯ ಬರೆಯುವವರು ಪಲ್ಲ ಅನುಪಲ್ಲಕ್ಕೆ ಆಚೀಚೆ ಎರಡೆರಡು ಗೆರೆ ಎಳೆಯುವುದು ಏಕೆ..? ಅಥವಾ ಇನ್ನಾವುದಾದರೂ ಚರಿತ್ರೆಗಳಿವೆಯೇ..? ಗೊತ್ತಿದ್ದವರು ತಿಳಿಹೇಳಿದರೆ ನನ್ನ ಎಕ್ಸ್ಲ ಮೇಟ್ರಿ ಮಾರ್ಕುಗಳಿಗೂ, ಕ್ವಶ್ಚನ್ ಮಾರ್ಕುಗಳಿಗೂ ಫುಲ್ ಸ್ಟಾಪ್ ದೊರೆಯುತ್ತದೆ.


ವ೦ದನೆಗಳು.