Tuesday, July 26, 2011

ನಿದ್ರೆಯ ತೊಂದರೆಗಳು.

ನನ್ನ ಹಿ೦ದಿನ ಪೋಸ್ಟ್  ಓದಿದ ಕೆಲವರಿಗೆ ಈ ' ಅತಿಯಾದ ' ನಿದ್ರೆ, ನಿದ್ರಾ ಹೀನತೆ, ಅತಿಯಾಗಿ ಆಹಾರ ಸೇವಿಸುವುದು ಅಥವಾ ಕಡಿಮೆ  ಸೇವಿಸುವುದು ಎಂಬಲ್ಲಿ 'ಅತಿ' ಎಂದರೆ ಎಷ್ಟು ಎಂಬ ಸಮಸ್ಯೆ ಉದ್ಭವಿಸಿರಬಹುದು.
ನಿದ್ರಾಹೀನತೆ  [ insomniyaa ] - ಈ ಸಮಸ್ಯೆ ಇರುವವರಲ್ಲಿ  ನಿದ್ರೆಯ ಪ್ರಮಾಣ ತುಂಬಾ ಕಡಿಮೆ. ಕಡಿಮೆ ಎಂದರೆ ಒಂದೆರಡು ಘಂಟೆಗಳ ಕಾಲವಲ್ಲ. 

ನಿದ್ರೆಯಲ್ಲಿ  ಹಂತಗಳು ಬದಲಾಗುತ್ತಾ ಇರುತ್ತವೆ. ನಿದ್ರೆಯ ಹಂತಗಳು ನಾಲ್ಕು.ಸುಮಾರು 90 ರಿಂದ 110 ನಿಮಿಷಗಳ ಚಕ್ರ ಇದು.
೧   -  ಮೊದಲನೆಯದು ಜೋಂಪು ಬರುವಿಕೆ.  ಇದನ್ನು ಥೀಟಾ  ತರಂಗಗಳು ಎನ್ನುತ್ತಾರೆ. 
 ೨ -  ಎರಡನೆಯ ಹಂತದಲ್ಲಿ  ಕಣ್ಣು ಗೋಳದ ಚಲನೆ ಇರದು ಮತ್ತು ಶ್ವಾಸೋಚ್ವಾಸ  ಧೀರ್ಘವಾಗಿರದೇ  ಚಿಕ್ಕದಾಗಿರುತ್ತದೆ.ದೇಹದ ಉಷ್ಣತೆಯಲ್ಲಿ ಇಳಿಮುಖವಾಗುತ್ತದೆ.
೩ - ೪ - ಮೂರು ಮತ್ತು ನಾಲ್ಕನೆಯ ಹಂತದಲ್ಲಿ ನಿದ್ರೆ ಗಾಢವಾಗುತ್ತಾ  ಹೋಗುತ್ತದೆ.   ರಕ್ತದೊತ್ತಡ ಕಡಿಮೆಯಾಗುತ್ತದೆ  ಮತ್ತು ಶ್ವಾಸೋಚ್ಚಾಸ ಕ್ರಿಯೆ ನಿಧಾನವಾಗುತ್ತಾ ಹೋಗುತ್ತದೆ.ಈ ಹಂತವನ್ನು ಡೆಲ್ಟಾ ತರಂಗಗಳು ಎನ್ನುತ್ತಾರೆ. ಈ ಹಂತದಲ್ಲಿ ನಿದ್ರಿಸುತ್ತಿರುವ  ವ್ಯಕ್ತಿಗಳನ್ನು ಎಬ್ಬಿಸುವುದು ಸ್ವಲ್ಪ ಕಷ್ಟ.
೧,೨,೩,೪ ಹಂತಗಳ ಜೊತೆಗೆ ಇನ್ನೊಂದು ಹಂತವಿದೆ.  ಅನಿಯಂತ್ರಿತ ಕಣ್ಣುಗಳ ಚಲನೆಯಲ್ಲಿರುವ ನಿದ್ರಾ ಹಂತ ಅಂದರೆ REM sleep [  rapid eye movement].ನಾಲ್ಕರ ಹಂತದ ನಂತರ ಮತ್ತೆ ಮೂರು, ಎರಡು, ಒಂದು ನಂತರ REM   ಹಂತಕ್ಕೆ ಬರುವುದು.   ಈ ಹಂತದಲ್ಲಿ ಮೆದುಳು ತುಂಬಾ ಕ್ರಿಯಾಶೀಲವಾಗಿರುತ್ತದೆ   ಮತ್ತು ಕನಸುಗಳು   ಬೀಳುತ್ತವೆ   ಅಲ್ಲದೆ   ಬಿದ್ದ ಕನಸುಗಳು ನೆನಪಲ್ಲುಳಿಯುತ್ತವೆ.  ಇದು ಮೊದಲ ಹಂತದ ನಿದ್ರೆಯ ನಂತರ ಕಾಣಿಸಿಕೊಳ್ಳುತ್ತದೆ ಮತ್ತು REM ಮುಗಿದಮೇಲೆ  ಮೊದಲ  ಹಂತದಿಂದ  ನಿದ್ರೆ ಮುಂದುವರೆಯುವುದು.    ಕೆಲವೊಮ್ಮೆ ಎರಡನೆಯ ಹಂತ ಸಹಾ ಶುರುವಾಗಬಹುದು. ರಾತ್ರಿಯ ಮೊದಲ ಜಾವಗಳಲ್ಲಿ ಕಡಿಮೆ ಸಮಯ ತೆಗೆದುಕೊಳ್ಳುವ ಇದು ಬೆಳಗಿನ ಜಾವದಲ್ಲಿ ಹೆಚ್ಚು ಸಮಯ ತೆಗೆದು ಕೊಳ್ಳುತ್ತದೆ. .ಪ್ರತಿ ರಾತ್ರಿ  ಸುಮಾರು ಮೂರರಿಂದ ಐದು ಸಲ ಈ ಅವಸ್ಥೆಗೆ ನಾವು ಜಾರುತ್ತೇವೆ.ವಯಸ್ಸಾದವರಲ್ಲಿ ಈ  ಅವಸ್ಥೆ  ಹೆಚ್ಚು ಸಮಯ ಇರುತ್ತದೆ.

ಬಾಲ್ಯದಿಂದ ವೃದ್ದಾಪ್ಯದ ವರೆಗೂ ನಿದ್ರೆಯ ಪ್ರಮಾಣ ಇಳಿಮುಖವಾಗುತ್ತದೆ. ಒಬ್ಬ ವಯಸ್ಕನಿಗೆ ದಿನಕ್ಕೆ ಏಳರಿಂದ ಎಂಟು ಘಂಟೆಗಳ ನಿದ್ರೆ ಬೇಕಾಗುತ್ತದೆ. ಕೊಂಚ ಹೆಚ್ಚು ಕಡಿಮೆ ಇರಬಹುದು. ಆದರೆ 'ನಿದ್ರಾಹೀನತೆ' ಇರುವವರಲ್ಲಿ  ಆತ ಸಂಪೂರ್ಣವಾಗಿ  ನಿದ್ರೆಯ ಎಲ್ಲಾ ಹಂತಗಳನ್ನೂ ಕ್ರಮಿಸಲು ಅಸಮರ್ಥನಾಗುತ್ತಾನೆ. ಮೊದಲ ಹಂತದಲ್ಲಿಯೇ   ಇದ್ದು ಹೊರಳಾಡುತ್ತಾ ಇರುತ್ತಾನೆ. ಪದೇ ಪದೇ ಎಚ್ಚರವಾಗುತ್ತದೆ. ಡೆಲ್ಟಾ ತರಂಗಗಳ ಹಂತ ಅಥವಾ ಗಾಢ ನಿದ್ರೆಯ ಅವಸ್ಥೆಯನ್ನು ತಲುಪಲು ಸಾಧ್ಯವಾಗದಿದ್ದಾಗ ಮೆದುಳಿನ ಕ್ರಿಯಾಶೀಲತೆಯಲ್ಲಿ ವ್ಯತ್ಯಾಸವಾಗುತ್ತದೆ.  ಅದು ತಿಂಗಳಾನುಗಟ್ಟಲೆ ಮುಂದುವರೆದರೆ ಮೆದುಳಿನಲ್ಲಿ ಬಿಡುಗಡೆಯಾಗುವ ರಾಸಾಯನಿಕಗಳಲ್ಲಿ ವ್ಯತ್ಯಾಸವಾಗಿ ಮಾನಸಿಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

ನಿದ್ರಾ ಹೀನತೆಯಿರುವವರಿಗೆ ಬೇಗ ನಿದ್ರೆ ಬರದು ಮತ್ತು ಬೇಗ ಎಚ್ಚರಾಗುತ್ತದೆ.ಎಷ್ಟೊತ್ತಿಗೂ ನಿದ್ರೆ ಗೆಟ್ಟವರಂತೆ, ಜಡತ್ವದಿಂದ ಇರುತ್ತಾರೆ. ಏಕಾಗ್ರತೆ ಇರದು. ಸದಾ ಕಿರಿಕಿರಿ ಆದಂತೆನಿಸುತ್ತದೆ. ಕೆಲಸದ ಒತ್ತಡ, ಅನಾರೋಗ್ಯ, ನೋವು ಇವುಗಳಿಂದ ಸರಿಯಾಗಿ ನಿದ್ರಿಸಲಾಗದಿದ್ದಾಗ ಸಮಸ್ಯೆಗಳು ಶುರುವಾಗುತ್ತದೆ.ಇದಕ್ಕೆ ಜೊತೆಗೂಡಿ ಡಿಪ್ರೆಶನ್, ಡಯಾಬಿಟೀಸ್, ರಕ್ತದೊತ್ತಡ ಕೂಡಾ ಬರುವ ಸಾಧ್ಯತೆಗಳು ಇವೆ.

 ಅತಿನಿದ್ರೆ ಅಥವಾ ಹೈಪರ್ಸೋಮ್ನಿಯ - ಈ ಸಮಸ್ಯೆ ಇರುವ ವ್ಯಕ್ತಿಗಳು ರಾತ್ರೆಯಿಡೀ ನಿದ್ರಿಸಿದರೂ ಮತ್ತೆ ಮತ್ತೆ ಹಗಲಿನಲ್ಲಿಯೂ ಗಾಢ ನಿದ್ರೆಗೆ ಜಾರುತ್ತಿರುತ್ತಾರೆ. ನಿದ್ರೆಯಿಂದ ಎಬ್ಬಿಸುವುದು ತುಂಬಾ ಕಷ್ಟ. ಕೆಲಸ ಮಾಡುತ್ತಾ ಮಾಡುತ್ತಾ ಇರುವಾಗಲೇ, ಊಟ  ಮಾಡುತ್ತಾ ಇರುವಾಗಲೇ.. [ ಓದುತ್ತಿರುವಾಗ ನಿದ್ರೆ ಮಾಡುವವರನ್ನು ಹೊರತು ಪಡಿಸಿ...:) ] ಮಾತನಾಡುತ್ತಾ ಆಡುತ್ತಲೇ, ಕೂತಲ್ಲಿ,  ನಿಂತಲ್ಲಿ    ನಿದ್ರೆ ಮಾಡತೊಡಗುತ್ತಾರೆ. ನಿದ್ರೆಯ ನಂತರದ ಉಲ್ಲಾಸ ಇರುವುದಿಲ್ಲ. ಉದ್ವೇಗ, ಕಿರಿಕಿರಿ, ಅಸಹನೆ, ಅಶಕ್ತತೆ, ಹಸಿವಿಲ್ಲದಿರುವುದು, ನಿಧಾನ ಪ್ರವೃತ್ತಿ ಮುಖ್ಯ ಲಕ್ಷಣಗಳು.ಮೆದುಳಿನ ಮೇಲೆ ಬಿದ್ದ ಪೆಟ್ಟು, ಅಥವಾ ಕೆಲವು ಔಷಧಗಳ ಅಡ್ಡ ಪರಿಣಾಮಗಳು ಇದಕ್ಕೆ ಕಾರಣವಾಗಬಹುದು.

ಡಿಪ್ರೆಶನ್  ಇದ್ದವರಲ್ಲಿ ಇನ್ಸೋಮ್ನಿಯಾ ಅಥವಾ ಹೈಪರ್ಸೋಮ್ನಿಯ ಯಾವುದಾರೂ  ಲಕ್ಷಣಗಳು ಕಾಣಿಸಬಹುದು.
ಇನ್ಸೋಮ್ನಿಯಾ  ಸೂಕ್ತ ಔಷಧಗಳಿಂದ ಗುಣವಾಗಬಹುದು. ಆದರೆ ಹೈಪೆರ್ಸೋಮ್ನಿಯ ಜೀವಮಾನವಿಡೀ ಕಾಡುತ್ತದಂತೆ.

ಪ್ರತಿಯೊಂದಕ್ಕೂ ಅದರದ್ದೇ ಆದ ಮಾನದಂಡವಿದೆ. ಬಿ.ಪಿ. ಶುಗರ್ರು, ಎಲ್ಲದಕ್ಕೂ ಇಂತಿಷ್ಟೇ ಪ್ರಮಾಣದಲ್ಲಿರಬೇಕೆಂಬ ಪ್ರಕೃತಿ ನಿಯಮದಂತೆ ನಿದ್ರೆ, ಆಹಾರಸೇವನೆ, ಚಟುವಟಿಕೆಗಳು ಎಲ್ಲಕ್ಕೂ ನಿಯಮ ಮೀರುವಂತಿಲ್ಲ. ಮೀರಿದರೆ ಅದು ಕಾಯಿಲೆಯಾಗುತ್ತದೆ.

     

Tuesday, July 12, 2011

ಕೇಳುವ ಕರ್ಮ ನಿಮಗಿಲ್ಲ...!

 'ಎ೦ತಾ ಕಾಲ ಬ೦ತಪ್ಪಾ’ ಎನ್ನುತ್ತಾ ನಿಟ್ಟುಸಿರು ಬಿಟ್ಟೆ. ಯಾರೋ ಹೇಳುತ್ತಿದ್ದರು, ಅದ್ಯಾರ‍ೊ ಹೊಸತಾಗಿ  ಮದುವೆಯಾದ ಹುಡುಗಿ ಗ೦ಡನನ್ನು ಬಿಟ್ಟು ಯಾರನ್ನೋ ಕಟ್ಟಿಕೊ೦ಡಳ೦ತೆ. ಕಾರಣ ಅವಳ ಗ೦ಡ ಎನ್ನಿಸಿಕೊ೦ಡವನಿಗೆ ಒ೦ದು ಸರಿಯಾಗಿ' ಐ ಲವ್ ಯು ’ ಎ೦ದೂ ಹೇಳಲು ಬರುತ್ತಿರಲಿಲ್ಲ ಎನ್ನುವುದು  ಮತ್ತು ಈಗ ಅದ್ಯಾರನ್ನೋ ಕಟ್ಟಿಕೊ೦ಡವನು ಅದೆಷ್ಟು ಸು೦ದರವಾಗಿ'ಐ ಲವ್ ಯು’ ಎ೦ದನೆ೦ದರೆ ಕಟ್ಟಿಕೊ೦ಡ ಗ೦ಡನನ್ನೇ ಬಿಡುವಷ್ಟು. ಯಾರ್ಯಾರ ವಿಚಾರಧಾರೆ ಎಲ್ಲೆಲ್ಲಿದೆಯೋ? ಎಲ್ಲೆಲ್ಲಿಗೆ ಹೋಗಿ ಮುಟ್ಟುತ್ತದೆಯೋ..? ಯಾರಿಗೆ ಗೊತ್ತು. ಅ೦ತೂ ಅದನ್ನು ಕೇಳಿದವರೆ ಇವರು ಲಗುಬಗೆಯಿ೦ದ ಬ೦ದು ರಾಗವಾಗಿ,  'ಐ ಲವ್ ಯು ಮೈ ಡಿಯರ್’ಎ೦ದರು ನನಗೆ.  ಹೂವಿರಲಿಲ್ಲ ಕೈಯಲ್ಲಿ ಅಷ್ಟೇ. ಅರ್ಥವಾಗದೇ ಅವರನ್ನೇ ನೋಡಿದೆ. ಇದೇನಿದು ಹೊಸಾ ತರಾ...! ''ಅಲ್ಲಾ, ಮತ್ತೆ ಬಿಟ್ಗಿಟ್  ಹೋದ್ರೆ ಕಷ್ಟಾ.. ಹೆಣ್ಣು ಸಿಕ್ಕೋದೆ ಕಷ್ಟ ಈಗೀಗ  ನೋಡೂ.. ಯಾವ್ದಕ್ಕೂ ಮು೦ಜಾಗ್ರತೆಗಿರಲಿ ಅ೦ತ,” ಎ೦ದು ಮುಸಿನಕ್ಕರು.
'' ಹಾಗೇನಾದರ‍ೂ ಇದ್ದಿದ್ದರೆ  ಹದಿನೈದು ವರ್ಷ ಕಾಯಬೇಕಿತ್ತಾ...? ಡ್ಯುಎಟ್ ಹಾಡೋಣವೇ..ಒಲವೆ ಜೀವನ ಸಾಕ್ಷಾತ್ಕಾರ........ ”  ನಾನೂ ನಸು ನಕ್ಕೆ.

''ಖಾರ ಖಾರ... ನಮಸ್ಕಾರ .. ದಯವಿಟ್ಟು  ನೀನೀಗ ಹಾಡು ಶುರು ಮಾಡಬೇಡವೇ..ಬರ್ತೀನಿ.” ಎನ್ನುತ್ತಾ ಅಡ್ಡಡ್ಡ ಕೈ ಮುಗಿಯುತ್ತಾ ಅಲ್ಲಿ೦ದ ಮಾಯವಾದರು.

ಎಲ್ಲರಿಗೂ ನನ್ನ ಹಾಡೆ೦ದರೆ ಹೀಗೆಯೇ.   ಏನೋ ನನಗೂ ಒಳ್ಳೆಯ ಲಹರಿ ಬ೦ತೆ೦ದರೆ ಹಾಡೋಣ ಅನ್ನಿಸುವುದು೦ಟು ಆಗಾಗ!
ದೋಸೆ ಎರೆಯುವಾಗಲೋ, ಚಪಾತಿ ಲಟ್ಟಿಸುವಾಗಲೋ,  ಮಗಳಿಗೆ ಜಡೆ ಹಾಕುವಾಗಲೋ, ಬಾಲ್ಕನಿಯ ಗಿಡಗಳಿಗೆ ನೀರು ಹನಿಸುವಾಗಲೋ, ಎಲ್ಲರೂ ಅವರವರ ಕೆಲಸದಲ್ಲಿರುವಾಗ ನನಗೇನೂ ಕೆಲಸವಿರದಿದ್ದಾಗ,  ಹೀಗೆ ಯಾವಾಗಲಾದರೊಮ್ಮೆ ಹಾಡುವ ಮನಸ್ಸಾಗುತ್ತದೆ.

ಮೆಲ್ಲನೆ ದ್ವನಿ ತೆಗೆದು ಸ್ವರ ಸರಿ ಮಾಡಿಕೊಳ್ಳುತ್ತಿದ್ದ೦ತೆಯೇ  ಎಲ್ಲರೂ  ಇದ್ದಲ್ಲಿಯೇ ಎಚ್ಚೆತ್ತುಕೊಳ್ಳುತ್ತಾರೆ. ಪ್ರಳಯವೇ ಆಗುತ್ತಿದೆಯೇನೊ ಎನ್ನುವ೦ತೆ ಎಲ್ಲರೂ ಹೈ  ಅಲರ್ಟ್ ಆಗುತ್ತಾರೆ. ಮಗಳು ಓಡಿಹೋಗಿ ಕಿವಿಗೆ ಮೊಬೈಲ್ನ ಇಯರ್ ಫೋನ್ ಸಿಕ್ಕಿಸಿಕೊ೦ಡು ಹುಶಾರಾಗುತ್ತಾಳೆ. ಮಗ ಟೀವೀ ವಾಲ್ಯೂಮ್ ಹೆಚ್ಚಿಸುತ್ತಾನೆ.ನಮ್ಮನೆಯವರು ಪೇಪರ್ ಕೆಳಗಿಟ್ಟು ಎದೆ ನೀವಿಕೊಳ್ಳುತ್ತಾ,  'ಮಗಳೆ ಮೊದಲು ಕಿಟಕಿ ಬಾಗಿಲು ಹಾಕಿದೆಯಾ ನೋಡು,’ ಎ೦ದು ಕ್ಷೀಣ ದ್ವನಿಯಲ್ಲಿ ಕಿರುಚಲು ಶುರುಮಾಡುತ್ತಾರೆ.ಅವಳಿಗೆ ಕೇಳಿದರೆ ತಾನೆ ! ಕಿವಿಯಲ್ಲಿ ಅದೇನನ್ನೋ ಸಿಕ್ಕಿಸಿಕೊ೦ಡಿರುತ್ತಾಳಲ್ಲ!

ಆಗ ನನಗೆ  ಹಾಡುವುದನ್ನು ನಿಲ್ಲಿಸೋಣ ಆನ್ನಿಸುತ್ತದೆ. ಅಹಿ೦ಸಾ ಧರ್ಮದಲ್ಲಿಯೇ ನ೦ಬಿಕೆ ನನಗೆ. ಬದುಕಿಕೊಳ್ಳಲಿ ಅವರೂ. ಅವರ ಕರ್ಣ ಶೋಷಣೆ ನಾನ್ಯಾಕೆ ಮಾಡಲಿ?  ಮತ್ತೆ ಮರುದಿನ ಪಕ್ಕದ ಮನೆಯವರೆದುರು ಪಾಪಪ್ರಜ್ನೆಯಲ್ಲಿ ನಿಲ್ಲುವುದು ನನಗೂ ತಪ್ಪಿದ೦ತಾಗುತ್ತದೆ.

ಹಾಗ೦ತ ನಾನೇನು ಅಷ್ಟೊ೦ದು ಕರ್ಕಶವಾಗಿ ಹಾಡುತ್ತೇನೆಯೋ ಅ೦ದರೆ ಅಲ್ಲ ಅನ್ನುವುದು ನನ್ನದೇ ನ೦ಬಿಕೆ. ಮಿಡ್ಲ್ ಸ್ಕೂಲಿನಲ್ಲಿದ್ದಾಗ ನನಗೂ ಹಾಡಿನಲ್ಲಿ ಬಹುಮಾನ ಸಿಕ್ಕಿತ್ತು.ಹಾಡಿಗೆ   ಭಾಗವಹಿಸಿದ ಹತ್ತು ಜನರಲ್ಲಿ ನಾನೇ ಮೊದಲ ಬಹುಮಾನ ಪಡೆದಿದ್ದೆನೆ೦ದರೆ  ಹೃದಯ ಗಟ್ಟಿ ಇರುವವರು ಉಳಿದವರ  ಹಾಡುಗಾರಿಕೆಯನ್ನೂ ಊಹಿಸಿಕೊಳ್ಳಿ . ಅವರಲ್ಲಿ ಇಬ್ಬರು ಬ೦ದಿರಲಿಲ್ಲ ಮತ್ತು ಒಬ್ಬಳು ಅರ್ಧ ಹಾಡು ಹಾಡಿದ್ದಳು. ಉಳಿದ೦ತೆ ನಾನೇ ಮೊದಲು. ಅದೇ ಈಗಲೂ ನನಗೆ ಹಾಡಲು ಪ್ರೇರಣೆ ಅ೦ದರೆ ನೀವು ಒಪ್ಪಲೇ ಬೇಕು! ಆ ಗಳಿಗೆ ನೆನಪಾದ೦ತೆಲ್ಲಾ ನನಗೆ ಹಾಡಲು ಸ್ಪೂರ್ತಿ ಹೆಚ್ಚಾಗುತ್ತದೆ. ಇಲ್ಲಿಯ ಪರಿಸ್ಥಿತಿ ಮರೆತು ಹಾಡತೊಡಗಿದರೆ ಈ ಮೇಲಿನ ಭಾನಗಡೆಗಳೆಲ್ಲಾ ಶುರುವಾಗುತ್ತದೆ!

ನಾನೀಗ ಹೊಸಾ ಉಪಾಯ ಮಾಡಿದ್ದೇನೆ ಹಾಡಲು.  ಈಗಲೂ ಹಾಡಿಕೊಳ್ಳುತ್ತೇನೆ ಮೌನವಾಗಿ.ನನ್ನ ಮೌನದರಮನೆಯಲ್ಲಿ. ಯಾರಿಗೂ ಕೇಳಿಸುವುದಿಲ್ಲ.  ಕೇಳಿಸುವ ಬಯಕೆ ನನಗೂ ಇಲ್ಲ. ಇಲ್ಲಿ ಯಾರಿಲ್ಲ ಕೇಳಿ. ಎಲ್ಲರೂ ಇದ್ದಾರೆ. ಎಸ್.ಪೀ. ಬಿ. ಯ ದ್ವನಿಯಲ್ಲೇ ಹಾಡತೊಡಗುತ್ತೇನೆ. ಎಸ್. ಜಾನಕಿ ನನ್ನ ಕ೦ಠದಲ್ಲಿಯೇ ಇದ್ದಾಳೆ. ಎಲ್ಲಾ ರಾಗಗಳೂ, ಎಲ್ಲಾ ತಾಳಗಳೂ ಇಲ್ಲಿ ಬ೦ದು ಹೊಗುತ್ತವೆ.ಹ೦ಸಧ್ವನಿಯಿ೦ದ ಹಿಡಿದು ಭೈರವೀ ವರೆಗೆ.   ಲತಾ ಮ೦ಗೇಶ್ಕರ್, ಅಲ್ಕಾ ಯಾಜ್ನಿಕ್ ಇ೦ದಾ ಹಿಡಿದು ಗಣಪತಿ ಭಟ್ ಹಾಸಣಗಿ,ಪ್ರಭಾಕರ್ ಕಾರೇಕರ್ ವರೆಗೆ  ಎಲ್ಲರ‍ ಕ೦ಠದಲ್ಲೂ ಹಾಡತೊಡಗುತ್ತೇನೆ ಮೌನವಾಗಿ. ಇಲ್ಲಿ ಯಾರೂ ತಗಾದೆ ಮಾಡುವವರಿಲ್ಲ.ತಾಳ ತಪ್ಪಿದೆಯೆ೦ದು ಹೇಳುವವರಿಲ್ಲ.ಲಯ ಹೋಯ್ತೆ೦ದು ಮೂದಲಿಸುವವರಿಲ್ಲ. ಕುರುಬುವವರಿಲ್ಲ, ಕುಟ್ಟುವವರಿಲ್ಲ. ಮೌನದರಮನೆಯಲ್ಲಿ ಯಾರ ಕಾಟವೂ ಇಲ್ಲ. ನಾನೇ ಕವನಿಸುತ್ತೇನೆ. ನಾನೇ ಹಾಡುತ್ತೇನೆ, ನಾನೇ ಆಲಿಸುತ್ತೇನೆ. ನನ್ನ ಹಾಡಿಗೆ ನಾನೇ ಬೆರಗಾಗುತ್ತೇನೆ. ನನ್ನ ಹಾಡಿಗೆ  ನಾನೇ ಗಾಯಕಿ, ನಾನೇ ಪ್ರೇಕ್ಷಕಿ, ನಾನೇ ಶ್ರೋತೃ, ನಾನೇ ವಿಮರ್ಶಕಿ .




ನನ್ನಷ್ಟಕ್ಕೆ ಹಾಡುತ್ತಾ ಹೋಗುತ್ತೇನೆ..ಕೇಳುವ ಕರ್ಮ ಮಾತ್ರ ನಿಮಗಿಲ್ಲ.

Thursday, July 7, 2011

ಮಾನಸಿಕ ಖಿನ್ನತೆ. ಭಾಗ - ೧

ಈ ಮೊದಲು ನಾನು  ಖಿನ್ನತೆ ಯ ಬಗ್ಗೆ ಚೂರು ಪಾರು ಬರೆದಿದ್ದೆ.ಆ ಪೋಸ್ಟಿನಲ್ಲಿ ಒಂದು ಬಗೆಯನ್ನಷ್ಟೇ ವಿವರಿಸಿದ್ದೆ.
ಯಾರಿಗಾದರೂ ಖಿನ್ನತೆಯ [depression] ಸಮಸ್ಯೆ ಇದ್ದಲ್ಲಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ..? ಅವರು ಮೆಂಟಲ್ ಕೇಸು ಕಣ್ರೀ .. ಸ್ವಲ್ಪ ಹಾಗೆ.  ಜಾಸ್ತಿ ಮಾತಾಡ್ಸಕ್ಕೆ ಹೋಗಬೇಡಿ.  ಯಾವಾಗ ಹೇಗೆ ಅನ್ನೋದು ಗೊತ್ತಾಗಲ್ಲ.   ಈ ರೀತಿಯಲ್ಲಿ ನಮ್ಮ ವಿಚಾರ ಸಾಗುತ್ತದೆ.  ಖಿನ್ನತೆ ಅಂದರೆ ಹುಚ್ಚುತನವಲ್ಲ.ಡಿಪ್ರೆಶನ್ ಇರುವವರೆಲ್ಲ ಹುಚ್ಚರಲ್ಲ.


ಖಿನ್ನತೆಯಲ್ಲಿ ಅನೇಕ ವಿಧಗಳಿವೆ.
* ಮೇಜರ್ ಡಿಪ್ರೆಶನ್,
*  ಮಾದರಿಗೆ ಸರಿ ಹೊಂದದ ಎಟಿಪಿಕಲ್ ಡಿಪ್ರೆಶನ್,
* ಈ ಮೊದಲು ವಿವರಿಸಿದ ಡಿಸ್ಥೀಮಿಯ,
* ಮನೋ ವಿಕಾರತೆಯಿಂದ ಕೂಡಿದ ಸೈಕೊಟಿಕ್ ಡಿಪ್ರೆಶನ್,
* ಋತುಮಾನಕ್ಕೆ ತಕ್ಕಂತೆ  ಕಾಣಿಸಿಕೊಳ್ಳುವ  ಸೀಜನಲ್ ಆಫೆಕ್ಟಿವ್ ಡಿಸಾರ್ಡರ್,
*  ಬಾಳಂತಿ ಸನ್ನಿ ಎಂಬುದಾಗಿ ಪ್ರಚಲಿತವಿರುವ ಪೋಸ್ಟ್ ಪಾರ್ಟಂ ಡಿಪ್ರೆಶನ್ ಹಾಗೂ
*  ಬುದ್ದಿ ವಿಕಲ್ಪತೆಯಿಂದ ಕೂಡಿದ ಮ್ಯಾನಿಕ್ ಡಿಪ್ರೆಶನ್ ಅಥವಾ ಬೈ ಪೋಲಾರ್ ಡಿಪ್ರೆಶನ್.


ಡಿಪ್ರೆಶನ್ ಎಂದರೆ ಏನು ಮತ್ತು ಅದರ ಗುಣ ಲಕ್ಷಣಗಳೇನು..?

ಡಿಪ್ರೆಶನ್ ಎಂದರೆ,  ದಿನ ನಿತ್ಯ ಜೀವನಕ್ಕೆ ತೊಂದರೆ ಕೊಡುವ ದೀರ್ಘ ಕಾಲಿಕ ಮತ್ತು ಬದಲಾವಣೆಯಿಲ್ಲದ ಋಣಾತ್ಮಕ ಆಲೋಚನೆಗಳಿಂದ ಕೂಡಿದ ಮನಸ್ಥಿತಿ.

ಗುಣ ಲಕ್ಷಣಗಳೆಂದರೆ,

ಅನಾಸಕ್ತಿ - ಮೊದಲು ಇಷ್ಟ ಪಟ್ಟು ತೊಡಗಿಸಿ ಕೊಳ್ಳುತ್ತಿದ್ದ  ವಿಚಾರಗಳ ಬಗೆಗೆ ಆಸಕ್ತಿ ಹಿಮ್ಮುಖವಾಗುವುದು.



ತಪ್ಪಿತಸ್ಥ ಮನಸ್ಸು- ತನ್ನಿಂದ ಬೇರೆಯವರಿಗೆ ತೊಂದರೆ ಆಗುತ್ತಿದೆಯೇನೋ ಅಥವಾ ಯಾವುದೋ ತಪ್ಪು ಮಾಡುತ್ತಿದ್ದೇನೆ ಅನ್ನುವ ಆಲೋಚನೆಗಳು.

ಅಸಾಮರ್ಥ್ಯ-  ತನ್ನಿಂದ ಯಾವ ಕೆಲಸವೂ ಆಗದು, ಎಷ್ಟೇ ಚಿಕ್ಕ,ಸರಳ ಕೆಲಸ ಮಾಡುವಾಗಲೂ ಕೂಡಾ ನಿರುತ್ಸಾಹಿಗಳಾಗಿರುವುದು.


                                
ಒಂಟಿತನ - ಈ ಡಿಪ್ರೆಶನ್ನಿಗೆ ಒಂಟಿತನವೂ ಕಾರಣವಾಗಿರಬಹುದು ಮತ್ತು ಡಿಪ್ರೆಶನ್ ಆವರಿಸಿಕೊಂಡ ಮೇಲೆ ಒಂಟಿತನ ಅನುಭವಿಸಬಹುದು. ಉದಾಹರಣೆಗೆ, ಎಲ್ಲರೂ ಮಾತನಾಡುತ್ತಾ ಖುಷಿಯಾಗಿರುವಾಗ ಒಬ್ಬರೇ  ಸುಮ್ಮನೆ ಮೂಲೆಯಲ್ಲೋ, ಕೋಣೆಯಲ್ಲೋ ನಿರಾಸಕ್ತಿಯಿಂದ ಕುಳಿತುಕೊಂಡಿರುವುದು.ಒಬ್ಬರೇ ಒಂಟಿಯಾಗಿರುವುದಕ್ಕೂ, ಮನಸ್ಸಿನಲ್ಲೇ ಒಂಟಿತನವನ್ನು ಅನುಭವಿಸುವುದಕ್ಕೂ ವ್ಯತ್ಯಾಸವಿದೆ. ಹಾಸ್ಯ ಮಾಡುತ್ತಾ ಎಲ್ಲರೂ ನಗುತ್ತಿದ್ದರೂ ಖಿನ್ನತೆ ಇರುವವರು ಪ್ರತಿಕ್ರಿಯಿಸದೆ  ಒಂಟಿತನವನ್ನು ಅನುಭವಿಸುತ್ತಾರೆ.

ಹಸಿವು - ಕೆಲವರು ಆಹಾರವನ್ನೇ ಸರಿಯಾಗಿ ಸೇವಿಸುವುದಿಲ್ಲ. ಅಥವಾ ಪೌಷ್ಟಿಕಾಂಶದ ಕೊರತೆಯೂ ಕೆಲವು ಡಿಪ್ರೆಶನ್ನಿಗೆ ಕಾರಣವಾಗುತ್ತದೆ. ಮತ್ತೆ ಕೆಲವರು ಹೊಟ್ಟೆಬಾಕತನವನ್ನು ತೋರಿಸುತ್ತಾರೆ.ಈ ಬಗ್ಗೆ ವಿವರಣೆಗೆ  ನನ್ನ್.ಈ ಪೋಸ್ಟಿನಲ್ಲಿ ನೋಡಬಹುದು.

ನಿದ್ರೆಯಲ್ಲಿನ ಬದಲಾವಣೆ- ನಿದ್ರಾ ಹೀನತೆ [ insomnia ]  ಅಥವಾ ಅತಿನಿದ್ರೆ [ hypersomnia ] ಕಾಡಬಹುದು.

 ದೈಹಿಕ ಚಟುವಟಿಕೆಗಳು- ಕೆಲವೊಮ್ಮೆ ಅತಿಯಾದ ಚಟುವಟಿಕೆಯನ್ನೂ, ಕೆಲವೊಮ್ಮೆ ನಿಧಾನಪ್ರವೃತ್ತಿಯನ್ನೂ ಕಾಣಬಹುದು.

ಏಕಾಗ್ರತೆಯಲ್ಲಿನ ಅಸಾಮರ್ಥ್ಯ- ವಸ್ತು,ವಿಷಯ ಗಳನ್ನು ಗ್ರಹಿಸುವಲ್ಲಿ, ನಿರ್ಧಾರ ತೆಗೆದುಕೊಳ್ಳುವಲ್ಲಿ, ಸಮಸ್ಯೆಗಳನ್ನು ಬಗೆಹರಿಸುವಲ್ಲಿ, ಮತ್ತು ನೆನಪಿನ ಶಕ್ತಿ ಕೂಡ ಕುಂಟಿತಗೊಳ್ಳಬಹುದು.ದೈಹಿಕ ಅಶಕ್ತತೆ ಕಾಣಿಸಿಕೊಳ್ಳಬಹುದು.

  ಕೆಲವೊಮ್ಮೆ ಅಸ್ಥಿರ, ಚಂಚಲ ಮನಸ್ಥಿತಿಯನ್ನೂ ಕಾಣಬಹುದು. ಬೇಗನೆ ಕಿರಿಕಿರಿಗೊಳಗಾಗುತ್ತಾರೆ.ಸುಮ್ಮನೆ ಸಿಟ್ಟಿಗೇಳುವುದು,
ಅನಗತ್ಯ ವಾದಕ್ಕಿಳಿಯಬಹುದು.

ಕೆಲವೊಮ್ಮೆ ಯಾವಾಗಲೂ ತಲೆನೋವು, ಬೆನ್ನುನೋವು, ಹೊಟ್ಟೆನೋವು, ಬೇಧಿ, ಮಲಬದ್ಧತೆ, ಸಂದುನೋವುಗಳು ಮುಂತಾದ ದೈಹಿಕ ಕಾಯಿಲೆಗಳನ್ನು ಅನುಭವಿಸಬಹುದು.  ವೈದ್ಯರಿಗೆ ಯಾವ ದೈಹಿಕ ತೊಂದರೆಯೂ ಕಾಣದಿರಬಹುದು.

ಹೆಚ್ಚಿನದಾಗಿ ಮಾನಸಿಕ ಖಿನ್ನತೆಯಿರುವವರು ಪ್ರಪಂಚದ ಬಗ್ಗೆ ಒಂದು ಋಣಾತ್ಮಕ ಮನೋಭಾವನೆಯನ್ನು ತೋರಿಸುತ್ತಾರೆ. ಅತೀ  ಕಾಳಜಿ,  ಅತೀ   ನಿರ್ಲಕ್ಷ್ಯ,  ಭವಿಷ್ಯದ  ಬಗೆಗೆ ಭಯ,ಗೊಂದಲ ಹೆಚ್ಚಾಗಿ ತೋರ್ಪಡಿಸುತ್ತಾರೆ.
ಪ್ರತಿಯೊಬ್ಬರೂ ನಮ್ಮ ಜೀವಮಾನದ ಒಂದಲ್ಲಾ ಒಂದು ಸನ್ನಿವೇಶದಲ್ಲಿ ಖಿನ್ನತೆಗೆ ಒಳಗಾಗಿಯೇ ಆಗುತ್ತೇವೆ.ಆದರೆ ಬಹುಬೇಗ ಮಾಮೂಲಿನ ಜೀವನ ನಡೆಸಲು ಶುರು ಮಾಡುತ್ತೇವೆ. ಕೆಲವೊಮ್ಮೆ ನೆನಪು ಮಾಡಿಕೊ೦ಡರೂ, ನಂತರ ನಿಧಾನಕ್ಕೆ ಮರೆತು ಬಿಡುತ್ತೇವೆ. ತೀವ್ರತೆ ಕಡಿಮೆಯಾಗ ತೊಡಗುತ್ತದೆ. ಆದರೆ  ದಿನದ  ಹೆಚ್ಚಿನ  ಭಾಗ  ಖಿನ್ನತೆಯಲ್ಲಿಯೇ ಇದ್ದರೆ ಮತ್ತು ತೀವ್ರತೆ ಮೊದಲಿದ್ದಂತೆಯೇ ಮುಂದುವರೆದುಕೊಂಡು ಹೋಗುತ್ತಿದ್ದರೆ  ಅಂತವರಿಗೆ   ತಜ್ಞರ  ಜರೂರತ್ತಿದೆ.

ಹಾಗಾದರೆ ಈ ಮಾನಸಿಕ  ಖಿನ್ನತೆಗೆ ಕಾರಣಗಳೇನು..?ಇದಕ್ಕೆ ಮುಖ್ಯ ಕಾರಣಗಳೆಂದರೆ,   

೧. ವಂಶಪಾರಂಪರ್ಯವಾಗಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನದಾಗಿ ಸಂಬಂಧಗಳಲ್ಲಿನ ಮದುವೆಯಾದರೆ ಅವರ  ಮಕ್ಕಳಲ್ಲಿ ಈ ಪ್ರವೃತ್ತಿ ಹೆಚ್ಚು. ಹತ್ತಿರದ ಸಂಬಂಧಿಗಳಲ್ಲಿ ಉದಾಹರಣೆಗೆ, ತಂದೆ ಅಥವಾ ತಾಯಿ, ಅಜ್ಜ ಅಜ್ಜಿ ಇವರುಗಳು ಖಿನ್ನತೆಯಿಂದ ಬಳಲುತ್ತಿದ್ದರೆ; ಅದು ಮುಂದಿನ ಸಂತತಿಗೆ  ವರ್ಗಾವಣೆಯಾಗುತ್ತದೆ.

೨.ನರಚೋದಕಗಳ ಅಸಮರ್ಪಕ ಸ್ರವಿಸುವಿಕೆ- ನಮ್ಮ ಎಲ್ಲ ಮಾನಸಿಕ ಕ್ರಿಯೆಗಳೂ ಕೆಲವು ರಾಸಾಯನಿಕ ವಸ್ತುಗಳಿಂದ ನಿರ್ವಹಿಸಲ್ಪಡುತ್ತಿರುತ್ತದೆ.ಈ ರಾಸಾಯನಿಕಗಳ ಸ್ರಾವದಲ್ಲಿ ಏರು ಪೇರು ಆದಾಗ  ಮೆದುಳಿನ ನರ ಕೋಶಗಳಿಗೆ ಸಮರ್ಪಕ ಸೂಚನೆಗಳು ಸಿಗದೇ ಕ್ರಿಯೆಯಲ್ಲಿ ವ್ಯತ್ಯಾಸವಾಗುತ್ತದೆ. ಕನೆಕ್ಷನ್ ತಪ್ಪಿ ಹೋಗಿರಬಹುದು. ರಾಂಗ್ ಕನೆಕ್ಷನ್ ಆಗಬಹುದು.  ಕೆಲವೊಮ್ಮೆ ಯಾವುದೋ ಸ್ವಿಚ್ ಒತ್ತಿದರೆ ಯಾವುದೋ ಲೈಟ್ ಹೊತ್ತಿಕೊಳ್ಳಬಹುದು.! ಎಲ್ಲಿಯೋ ಶಾಕ್ ಹೊಡೆಯಬಹುದು..!

೩.ಜೀವನದಲ್ಲಾಗುವ ಸಹಿಸಲಾಗದ ಆಘಾತ.- ಪ್ರೀತಿ  ಪಾತ್ರರ ಅಗಲುವಿಕೆ, ವ್ಯಾಪಾರ ವ್ಯವಹಾರದಲ್ಲಿ ಸೋಲು, ಅತಿಯಾದ ಕೆಲಸದ ಒತ್ತಡ, ಅತಿಯಾದ ನಿರೀಕ್ಷೆ ಇವುಗಳೆಲ್ಲ ಖಿನ್ನತೆಗೆ ಕಾರಣವಾಗುತ್ತವೆ.

 ಇದರ ಮುಖ್ಯ ಪರಿಣಾಮಗಳೇನು..?

ಸಾಮಾಜಿಕವಾಗಿ ಸುಖ ಜೀವನ ನಡೆಸಲು ಕಷ್ಟವಾಗುತ್ತದೆ. ಕೆಲಸ, ಕುಟುಂಬ, ಮಕ್ಕಳನ್ನು ನಿರ್ವಹಿಸುವುದರಲ್ಲಿ ಅಸಮರ್ಥತೆ ತೋರುತ್ತದೆ.

ಈ ನಡುವೆ ನನ್ನ ಆಪ್ತ ಗೆಳತಿಯೊಬ್ಬಳು ಈ ಮಾನಸಿಕ ಖಿನ್ನತೆಯ ಪರಿಣಾಮವಾಗಿ ನೇಣಿಗೆ  ಶರಣಾದಳು. ಡಿಪ್ರೆಶನ್ ನ  ಮುಖ್ಯ ಪರಿಣಾಮಗಳಲ್ಲಿ ಈ ಆತ್ಮ ಹತ್ಯೆಯೂ ಒಂದು.ಪ್ರಪಂಚದಲ್ಲಿ ಶೇಕಡಾ ನಾಲ್ಕು ಜನ ಈ ಮೇಜರ್  ಡಿಪ್ರೆಶನ್ ಗೊಳಗಾದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಶೇಕಡಾ ಅರವತ್ತರಿಂದ ಅರವತ್ತೈದು ಜನ ಡಿಪ್ರೆಶನ್ ಅಥವಾ ಉಳಿದ  ಮಾನಸಿಕ ಸಮಸ್ಯೆಗೊಳಗಾದವರೇ  ಆಗಿರುತ್ತಾರೆ !  ಈ ಆತ್ಮಹತ್ಯಾ ಮನೋಭಾವನೆ  ಸಾಮಾನ್ಯ ಜನರಲ್ಲಿ ಕಾಣಿಸಿಕೊಳ್ಳುವುದಕ್ಕಿಂತಲೂ ಖಿನ್ನತೆಗೊಳಗಾದವರಲ್ಲಿ ೨೫ ಪಟ್ಟು ಹೆಚ್ಚಿಗೆ ಕಾಣಿಸಿಕೊಳ್ಳುತ್ತದೆ. ಈ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯನ್ನು ಸೂಕ್ತ ಔಷಧಗಳಿಂದ, ಆಪ್ತ ಸಮಾಲೋಚನೆಯಿಂದ ಸಾಧ್ಯವಾದಷ್ಟು ಮುಂದಕ್ಕೆ ಹಾಕಬಹುದು.ಸಹೃದಯ ಸಹಕಾರದಿಂದ  ಕೆಲವರಿಗೆ ಉತ್ತಮ ಫಲಿತಾಂಶಗಳೂ ಲಭ್ಯ.
ಆದರೆ ಈ ರೀತಿ ಯೋಚನೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ, ಅಥವಾ ಅದಕ್ಕೆ ಮುನ್ಸೂಚನೆಯಾಗಿ ಯಾವುದಾದರೂ ಕ್ರಿಯೆ ನಡೆಯುತ್ತಿದ್ದರೆ ತಕ್ಷಣವೇ ಮಾನಸಿಕ ತಜ್ಞರನ್ನು ಕಾಣಲೇ ಬೇಕು.ಪ್ರಾರಂಭದ ಹಂತದಲ್ಲಿ  ಉತ್ತಮ ಫಲಿತಾಂಶಗಳೇ ದೊರಕುತ್ತದೆ.

ಆದರೆ ಒಮ್ಮೆ ಆತ್ಮಹತ್ಯೆಗೆ ಪ್ರಯತ್ನ ಮಾಡಿದರೆಂದರೆ,  ಹೇಗೋ ಉಳಿದರೂ ಕೂಡಾ ಅವರು ತಮ್ಮ ಅಂತ್ಯವನ್ನು ಆತ್ಮಹತ್ಯೆಯಲ್ಲಿಯೇ  ಪೂರ್ಣ  ಮಾಡಿ ಕೊಳ್ಳುತ್ತಾರೆ. ಹಾಗಾಗಿ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳುವುದು ಅವಶ್ಯ.ಯಾವ ವಿಚಾರಗಳಿ೦ದ ಪ್ರಚೋದನೆಗೊಳಗಾಗುವರೆ೦ಬ ಸಣ್ಣ ಸುಳಿವು ಸಿಕ್ಕರೂ ಸಹಾ ಅ೦ತಹವುಗಳಿ೦ದ ದೂರವಿರಿಸುವುದು ಉತ್ತಮ.
ಖಿನ್ನತೆಗೊಳಗಾದವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ..ಅದು  ಅದರ ತೀವ್ರತೆಯನ್ನು ಆಧರಿಸಿರುತ್ತದೆ.

ಮತ್ತೆ ಕೆಲವರು ಬೇರೆಯವರ ಮೇಲೆ ಹಲ್ಲೆ ನಡೆಸಲೂ ಬಹುದು. ಸೈಕೊಟಿಕ್ ಅಥವಾ ಮ್ಯಾನಿಕ್ ಡಿಪ್ರೆಶನ್ನಿನ ವ್ಯಕ್ತಿಗಳು ಈ ನಡವಳಿಕೆ ತೋರಿಸಬಹುದು.

ಮೊದಲೇ ಹೇಳಿದ೦ತೆ ನನ್ನ ಆತ್ಮೀಯ ಗೆಳತಿಯೊಬ್ಬಳು ಕೆಲದಿನಗಳ ಹಿ೦ದೆ ನೇಣು ಹಾಕಿಕೊ೦ಡು ಮೃತಪಟ್ಟಳು.ಆಕೆಗೆ ಡಿಪ್ರೆಶನ್ನಿಗೆ ಕಾರಣವಾದದ್ದು ಕಾಯಿಲೆಯಿ೦ದ ನರಳಿ  ತೀರಿಕೊ೦ಡ  ಮಗಳ ವಿಚಾರ. ಹೊರಗಿನವರಿಗೆ ಒ೦ಚೂರೂ  ಡಿಪ್ರೆಶನ್ನಿನ  ಸುಳಿವೇ ಸಿಗದಷ್ಟು ಜೀವನೋತ್ಸಾಹ ಕಾಣಿಸುತ್ತಿತ್ತು ಆಕೆಯಲ್ಲಿ.  ಆದರೆ ಒಳಗಿನ ಪರಿಸರವೇ ಬೇರೆ ನೋಡಿ.ಯಾವುದು ಆ ಗಳಿಗೆಯಲ್ಲಿ ಪ್ರಚೋದಿಸಿತೊ ಅ೦ತೂ ಈಗಿಲ್ಲ ಆಕೆ. ಗೊತ್ತೇ ಆಗದ೦ತೆ ಒಳಗೊಳಗೇ ಕಾಡುವ, ಬಲಿ  ತೆಗೆದುಕೊಳ್ಳುವ ಮಾರಿ  ಇದು.

[ಈ ಮೊದಲು”ಈಪೋಸ್ಟಿನಲ್ಲಿ ’ಕೊಟ್ಟ ಲಿ೦ಕ್ ತಪ್ಪಾಗಿತ್ತು ಈಗ ಸರಿಪಡಿಸಿದ್ದೇನೆ.]
[ ಚಿತ್ರಕೃಪೆ ಅ೦ತರ್ಜಾಲ]              
[ಮು೦ದುವರೆಯುವುದು]