Sunday, September 30, 2012

ತುಂತುರು ಹನಿಗಳು.

 ಫೇಸ್ ಬುಕ್ಕಿನ ಗೋಡೆಯಲ್ಲಿ ಬರೆದ ನನ್ನ  ಕೆಲ  ತುಂತುರು ಹನಿಗಳು.


ನೀರಸ!

ರಾತ್ರಿಯಿಡೀ
ನಿದ್ರೆಗೊಡದೇ
ಗಲ್ಲಕ್ಕೆ ಹಚ್ಚೆ ಚುಚ್ಚಿದ್ದು
ನಲ್ಲನೇನು..?
ಅಲ್ಲ, ಚಚ್ಚಿ ಹಾಕಿದ್ದೇನೆ
ನೋಡು ಯಕಶ್ಚಿತ್ ಸೊಳ್ಳೆ!

----------------------------------

ವ್ಯತ್ಯಾಸ!
 
ನಾನ್ಯಾವತ್ತೂ ದೊಡ್ಡವರೊ೦ದಿಗೇ
ಹೋಲಿಸಿಕೊಳ್ಳುವುದು.
ಲತಾ ಮ೦ಗೇಶ್ಕರ್ ಗೂ ನನಗೂ ಒ೦ದೇ ವ್ಯತ್ಯಾಸ..
.
.
.
.
ಅವರು ಹಾಡುತ್ತಾರೆ,
ನಾನು ಹಾಡೋಲ್ಲ...!!!

--------------------------------------------------------


 ಕೆಲಸ..

 ಆಯಾ ದಿನದ ಕೆಲಸ
ಅ೦ದೇ ಮುಗಿಸಿ ಎ೦ದದ್ದಕ್ಕೆ
ಎಲ್ಲರೂ ಅ೦ದ೦ದೇ
ದಿನ ಮುಗಿಸಿದರು!

---------------------------------------

 ಹೆಸರು..

ಚಿತ್ರಾನ್ನ ಮಾಡಿದ೦ದು
ನನ್ನವರು ನನ್ನ
ಕರೆದದ್ದು,
ಚಿತ್ರಾ೦ಗೀ ಎಂದು !

  --------------------------------------------


ಜ್ಣಾನೋದಯ!

 ಜೀವನ ಒ೦ದು ವಾಶಿ೦ಗ್ ಮಶಿನ್ನು ಕಣೇ..
ಸೆನ್ಸರ್ ಸರಿ ಇದ್ದರೆ ಸರಿ
ಇಲ್ಲಾ.. ನೀರು ಓವರ್ ಫ್ಲೋ ಆಗುತ್ತೆ
ಇಲ್ಲಾ.. ನೀರೇ ತಗೋಳ್ಳಲ್ಲ..
ಒಮ್ಮೆ ತಿರುಗುತ್ತೆ ಇನ್ನೊಮ್ಮೆ ಹಿ೦ಡುತ್ತೆ..
ಕೆಲವೊಮ್ಮೆಸುಮ್ಮನೆ ಗುಮ್ ಅ೦ತ ಕೂತಿರುತ್ತೆ.
ರಿಪೇರಿಗೆ ಮತ್ಯಾರನ್ನೋ ಕರೆಸು,ರಾಜೀ ಮಾಡಿಸು..
ಸರಿಯಾಗೋ ಹೊತ್ತಿಗೆ ಸಾಕಾಗುತ್ತೆ..
ಜೀವನ ಒ೦ದು ವಾಶಿ೦ಗ್ ಮಶಿನ್ನು ಕಣೇ..

[ ಮಧ್ಯಾಹ್ನದ ಹೊತ್ತಲ್ಲಿ ನನ್ನವರಿಗೆ ಆದ ಜ್ಣಾನೋದಯ]...:)


-------------------------------------------------------
ಶೂನ್ಯ

ಬದುಕೆ೦ಬುದೊ೦ದು ಶೂನ್ಯ ಎ೦ದರು,
ಹೌದು ಬದುಕು ಶೂನ್ಯ,
ಶ್ಯೂನ್ಯವೆ೦ದರೆ ಸೊನ್ನೆ,
ಸೊನ್ನೆಯೆ೦ದರೆ ವೃತ್ತ,
ವೃತ್ತ ತಿರುಗುತ್ತಾ ಚಕ್ರ
ಬದುಕು ಚಕ್ರದ೦ತೆ ಸುತ್ತುತ್ತದೆ,
ಹಾಗಾಗಿ ಬದುಕೆ೦ಬುದು ಶೂನ್ಯ..!
ನಾನು ಸಾಧಿಸಿ[prove] ತೋರಿಸಿದೆ!
 --------------------------------------------------------------------------
 

Tuesday, September 25, 2012

ಚಕ್ಕುಲಿ ಮಾಡಿ ನೋಡಿ..

ಚೌತಿ ಬರಲು ಎರಡು ವಾರಗಳಿರುವಂತೆಯೇ  ಊರಲ್ಲಿ  ಚಕ್ಕುಲಿ ಮಾಡಲು ತಯಾರಿ ಶುರುವಾಗುತ್ತದೆ. ಅಕ್ಕಿ ತೊಳೆದು ಆರಲು ಹಾಕಿ, ಕಾಳು, ಬೇಳೆಗಳನ್ನು ಹೊಂಬಣ್ಣ ಬರುವವರೆಗೆ ಹುರಿದು ಎಲ್ಲವನ್ನೂ ಡಬ್ಬ ತುಂಬಿ ಹಿಟ್ಟು ಮಾಡಿಸಿಕೊಂಡು ಬರಲು ಮನೆಯ ಗಂಡಸರ ಹೆಗಲಿಗೇರಿಸಿದರೆ ಅಲ್ಲಿಗೆ ಮೊದಲ  ಹಂತದ ಹಬ್ಬದ  ತಯಾರಿ ಶುರುವಾಯಿತೆಂದೇ ಲೆಕ್ಕ. ಹಬ್ಬ ಈಗ ಹೇಗೋ ಮುಗಿದಿದೆ. ಈಗ ಇವರ ವರಾತ ಶುರುವಾ..! ಎಂದುಕೊಳ್ಳುವಿರಿ  ನನಗೆ ಗೊತ್ತು. ಹಬ್ಬ ಮುಗಿದರೂ ಹಬ್ಬಕ್ಕೆ ಮಾಡಿದ ಚಕ್ಕುಲಿ ಡಬ್ಬದಲ್ಲಿ ಇರುತ್ತಲ್ಲ!     ಅದು ಖಾಲಿಯಾಗುವವರೆಗೂ ಹಬ್ಬ ಚಾಲ್ತಿಯಲ್ಲಿದೆ ಅಂತ  ತಿಳಿಯಬೇಕು!


ಎಲ್ಲ ಹೆಂಗಳೆಯರಿಗೂ   ತಾವು ಮಾಡಿದ ಚಕ್ಕುಲಿ ಸಪೂರಾಗಿ, ಗರಿಗರಿಯಾಗಿ ಇರಬೇಕೆಂಬ ಬಯಕೆ. ಅದಕ್ಕಾಗಿ ನಾನಾತರದಲ್ಲಿ ಹರಸಾಹಸವನ್ನೇ ಮಾಡುತ್ತಾರೆ. ಹಿಟ್ಟಿಗೆ ಎಣ್ಣೆ, ಬೆಣ್ಣೆ, ಹಾಲುನೀರು, ಯಾವ್ಯಾವುದೋ ಮರದ ಕಾಂಡದ ನೀರು, ಯಾವ್ಯಾವುದೋ ಬೇಳೆ ಕಾಳು  ಬೇಯಿಸಿ ಹಿಟ್ಟು ಮಾಡಿಕೊಳ್ಳುವುದೂ, ಅದು ಬಣ್ಣ ಗೆಟ್ಟು ಕರಿಮುಖನಿಗೆ ಕರಿ ಚಕ್ಕುಲಿಯಾಗಿ, ಗಟ್ಟಿ ಯಾಗಿ ಕೊನೆಗೆ ನಾಯಿ ಎಲುಬು ಕಡಿದಂತೆ, ಹಲ್ಲಿನಿಂದ  ಕಟ ಕಟ ಸದ್ದಿನೊಂದಿಗೆ  ಕಡಿಯುವಂತಾಗಿ ಅವಮಾನಗೊಳುವ  ಸಮಸ್ಯೆಗಳು ಹೆಂಗಳೆಯರಿಗೆ ಸಾವಿರಾರು.  ಚೂರೇ  ಚೂರು ಹದ ತಪ್ಪಿದರೂ ಗಟ್ಟಿಯಾಗೋ, ಮೆತ್ತಗಾಗೋ ಆಗಿ, ಈ ಸಲದ ಚಕ್ಕುಲಿಯೊಂದು ಹೀಗಾಗ್ಬಿಟ್ಟಿದೆ, ಅಂದುಕೊಳ್ಳುತ್ತಲೇ ಗಣೇಶನನ್ನು ನೋಡಲು  ಬಂದವರ ಮುಂದೆ ಚಕ್ಕುಲಿ, ಪಂಚಕಜ್ಜಾಯದ ತಟ್ಟೆ ಇಡಬೇಕಾದ ಅನಿವಾರ್ಯತೆ ಮತ್ತು ತಪ್ಪಿತಸ್ತ ಭಾವ!


ನಾವು ಚಿಕ್ಕವರಿರುವಾಗ ಹಬ್ಬದ ಮರುದಿನ ಗಣೇಶನನ್ನು ನೋಡಲು ಎಲ್ಲರ ಮನೆಗಳಿಗೆ ಹೋಗುವುದು ಸಾಮಾನ್ಯವಾಗಿತ್ತು  ಮತ್ತು ಅದು ಸಂತಸದ ವಿಷಯ. ಒಮ್ಮೆ ಯಾರದ್ದೋ ಮನೆಗೆ  ನಾನು ಗೆಳತಿಯ ಸಂಗಡ ಹೋಗಿದ್ದೆ. ಅಲ್ಲಿ  ಮಕ್ಕಳಿಗೆ ಅಂತ ಚಕ್ಕುಲಿಯನ್ನು ಎರಡು ಜಾಸ್ತಿನೇ ಇಟ್ಟಿದ್ದರು. ಲಗುಬಗೆಯಿಂದ ಚಕ್ಕುಲಿಯೊಂದನ್ನು ಬಾಯಿಗಿಟ್ಟು   ಕಚ್ಚಿದ್ದೆ ತಡ.. ನನ್ನ ಹಾಲುಹಲ್ಲು 'ಪಟಕ್' ಎಂದಿತು.ಅದೆಷ್ಟು ಗಟ್ಟಿಯಿತ್ತೆಂದರೆ ಎರಡು ಕಲ್ಲಿನ ಮದ್ಯೆ ಇಟ್ಟು  ಜಜ್ಜಿದರೂ ಮುರಿಯದಷ್ಟು. ಮೊದಲ ಹಲ್ಲು ಹೀಗೆ ಮುರಿದಿದ್ದು ನನಗೆ ಭಯವಾಯಿತು. ಮಾತೆ ಆಡದೇ ಸುಮ್ಮನೆ ಹೊರಗೆ ಬಂದು ಬಾಯಲ್ಲಿ ತುಂಬಿಕೊಂಡ ರಕ್ತ ಉಗುಳಿದ್ದೆ. ಮತ್ತೆ ಅಲ್ಲಿಂದ ಅವರ  ಪಕ್ಕದ ಮನೆಗೆ ಹೋದೆವು. ಅಲ್ಲಿಯ ಗಣೇಶ ಸುಂದರನಾಗಿದ್ದ. ದೊಡ್ಡ ಗಣೇಶ,ದೊಡ್ಡ ಹೊಟ್ಟೆ. ಮುರಿದ ಹಲ್ಲು ಮಾತ್ರಾ ಇನ್ನೂ  ಸುಂದರವಾಗಿ ಕಾಣುತ್ತಿತ್ತು. ಅದಕ್ಕೊಂದು ಉಂಗುರ ಬೇರೆ ಇತ್ತು! ನನಗೆ ಮೊದಲ ಮನೆಯವರು ಕೊಟ್ಟ ಚಕ್ಕುಲಿ ಮತ್ತು   ಮುರಿದ ಹಲ್ಲು ನೆನಪಾಯಿತು. ಹೀಗೆ ಎಲ್ಲರ ಮನೆ ಗಣೇಶನನ್ನೂ ನೋಡಿ ವಾಪಾಸು  ಬರುತ್ತಿರುವಾಗ ನನ್ನಮ್ಮ ಹೇಳಿದ  ಚಂದ್ರ ನಕ್ಕ ಕತೆ ನೆನಪಾಗುತ್ತಿತ್ತು. ಯಾಕೋ ಒಂದಕ್ಕೊಂದು ತಾಳೆಯೇ  ಆಗುತ್ತಿರಲಿಲ್ಲ.    ಅಂತಹಾ ವಿದ್ಯಾಬುದ್ಧಿ ಪ್ರಧಾಯಕ  ಗಣೇಶ, ತನ್ನ ಒಡೆದ ಹೊಟ್ಟೆಗೆ  ಅಶ್ವಿನೀ ದೇವತೆಗಳು ಹಾವು ಕಟ್ಟಿ ಸಕ್ಸಸ್ ಫುಲ್ಲಾಗಿ ಆಪರೇಷನ್ ಮಾಡಿದ್ದನ್ನು ಕಂಡು  ಚಂದ್ರ  ನಕ್ಕನೆಂದು, ಬುದ್ಧಿಯಿಲ್ಲದೆ ತನ್ನದೇ ಹಲ್ಲು ಮುರಿದು ಅವನೆಡೆಗೆ  ಒಗೆಯುತ್ತಾನೆಯೇ? ಅಷ್ಟೊಂದು ಬುದ್ಧಿಗೇಡಿಯೇ ಆ ದೇವರು.  ಅಲ್ಲವೇ ಅಲ್ಲ.  ಯಾವುದೋ ಭಕ್ತರ ಮುಲಾಜಿಗೆ ಸಿಕ್ಕು ಕಲ್ಲುಗಟ್ಟಿ  ಚಕ್ಕುಲಿ ತಿಂದು  ಈ ಪರಿಸ್ಥಿತಿಯನ್ನು ತಂದುಕೊಂಡಿದ್ದಾನೆ ಅನ್ನುವ ವಿಚಾರ ಆವತ್ತೇ ನನಗೆ ಮನದಟ್ಟಾಗಿತ್ತು. ಆಮೇಲಿಂದ  ಯಾರದ್ದೇ ಮನೆಗೆ ಹೋದರು ಚಕ್ಕುಲಿ ತಿನ್ನುವಾಗ ನನ್ನ ಹಲ್ಲಿನ ಸಾಮರ್ಥ್ಯವನ್ನೂ, ಚಕ್ಕುಲಿಯ ಗಟ್ಟೀ ತನವನ್ನೂ ಒಂದಕ್ಕೊಂದು ಹೋಲಿಸಿ ನಂತರ ಮುಂದಡಿಯಿಡುತ್ತೇನೆ!

ಅದಿರಲಿ, ಸಪೂರ,ಹೊಂಬಣ್ಣದ  ಗರಿಗರಿ  ಚಕ್ಕುಲಿ ಮಾಡುವ  ಸುಲಭ ವಿಧಾನವೊಂದನ್ನು ನಿಮಗೆ ಹೇಳುತ್ತೇನೆ.

ಕಡಲೆ ಬೇಳೆ  - 200 ಗ್ರಾಂ
ಉದ್ದಿನ ಬೇಳೆ - 100 ಗ್ರಾ
ಹೆಸರು ಬೇಳೆ - 100 ಗ್ರಾಂ
ಜೀರಿಗೆ           - ಎರಡು ಚಮಚ

  ಇವಿಷ್ಟನ್ನೂ ಬೇರೆ ಬೇರೆಯಾಗಿ ತೆಳು ಹೊಂಬಣ್ಣ ಬರುವ ವರೆಗೆ ಹುರಿದು ಬಿಸಿ ತಣಿದ ಮೇಲೆ ಮಿಕ್ಸಿಯಲ್ಲಿ ಪುಡಿ ಮಾಡಿ. ಸಾಣಿಗೆಯಿಂದ ಸಾಣಿಸಿ.

 ಅಕ್ಕಿಹಿಟ್ಟನ್ನು ಈಗ ಬಾಣಲೆಗೆ ಹಾಕಿ ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳಿ.

ನಾಲ್ಕು ಲೋಟ ಅಕ್ಕಿ ಹಿಟ್ಟಿಗೆ   ಒಂದು ಲೋಟ  ಬೇಳೆ  ಪುಡಿಯನ್ನು ಸೇರಿಸಿ ಮಿಕ್ಸ್ ಮಾಡಿಟ್ಟುಕೊಳ್ಳಿ. ಒಟ್ಟು ಐದು ಲೋಟ ಹಿಟ್ಟಾಯಿತು.
ಪಾತ್ರೆಯೊಂದಕ್ಕೆ ಐದು ಲೋಟ ನೀರು ಹಾಕಿ ಕುದಿಸಿ. ನೀರು ತೆಳುವಾಗಿ ಉಪ್ಪಾಗುವಷ್ಟು ಉಪ್ಪು ಸೇರಿಸಿ.  ಕುದಿದ   ನಂತರ ಒಂದು ಚಮಚ ಬಿಳಿ ಎಳ್ಳು, ಒಂದು ಚಮಚ ಓಮ ಸೇರಿಸಿ.  ಕುದಿಯುತ್ತಿರುವ ನೀರಿಗೆ ಹಿಟ್ಟು ಹಾಕಿ ಓಲೆ ಆರಿಸಿ. ನಂತರ ಚೆನ್ನಾಗಿ ಕದಡಿ ಸ್ವಲ್ಪ ಹೊತ್ತು ಮುಚ್ಚಿಟ್ಟು ಬಿಡಿ.  ಈಗ ನೀಟಾಗಿ ಉಂಡೆ ಮಾಡಿ  ಚಕ್ಕುಲಿ ಮಟ್ಟಿನೊಳಗೆ  ಹಾಕಿ, ಒತ್ತಿ ಚೆಂದಕ್ಕೆ ಚಕ್ಕುಲಿ ಸುತ್ತಿ ಎಣ್ಣೆಯಲ್ಲಿ ಕರಿಯಿರಿ. 
ಈಗ ಹೊಂಬಣ್ಣದ  ಚಕ್ಕುಲಿ ರೆಡಿ.





ನೆನಪಿನಲ್ಲಿಡಬೇಕಾದ ಅಂಶಗಳು.
*   ಸಮ ಸಮ ನೀರು ಹಾಕುವುದು ಮುಖ್ಯ. ಮತ್ತೆ ಹಿಟ್ಟು ಸೇರಿಸುವುದೂ, ನೀರು ಸೇರಿಸುವುದೂ ಮಾಡಿದಲ್ಲಿ ಗಟ್ಟಿ ಅಥವಾ ಮೆತ್ತಗಾಗುತ್ತದೆ.

* ಬೇಳೆಗಳ ಅನುಪಾತವನ್ನು ಬೇಕಾದರೆ ಅವರವರ ರುಚಿಗೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು, ಆದರೆ ನೀರು ಮಾತ್ರ ಎಲ್ಲಾ ತರದ ಹಿಟ್ಟಿಗೂ 1:1 ಅನುಪಾತದಲ್ಲಿರಬೇಕು.

*   ಒಲೆ  ಉರಿ ಹದವಾಗಿರಬೇಕು. ದೊಡ್ಡ ಉರಿ ಅಥವಾ ಚಿಕ್ಕ ಉರಿಯಾದರೆ  ಕರಟಿ ಹೊಗುತ್ತದೆ ಅಥವಾ ನಾರಾಗುತ್ತದೆ.

* ಹಿಟ್ಟಿಗೆ ಎಣ್ಣೆಯನ್ನೋ, ಬೆಣ್ಣೆಯನ್ನೋ  ಸೇರಿಸುವ ಅಗತ್ಯವಿಲ್ಲ. ಪರಿಮಳಕ್ಕೆ ಬೇಕಿದ್ದರೆ  ಒಂದು ಚಮಚ ತುಪ್ಪ ಸೇರಿಸಬಹುದು.

* ವಿಶೇಷ ಸೂಚನೆಯೆಂದರೆ ಎಣ್ಣೆಯಲ್ಲಿಯೇ ಕರಿಯಬೇಕು!


 ಮಾಡಿ ನೋಡಿ ಹೇಳಿ.ನನ್ನನ್ನುತಿನ್ನಲು  ಕರೆಯಿರಿ.  ಗಟ್ಟಿಯಾದರೆ ಮೊದಲೇ ಹೇಳಿ!  ಈ ಮೊದಲೇ ನಿಮಗೆ ಇನ್ನೂ ಉತ್ತಮ  ವಿಧಾನಗಳು ಗೊತ್ತಿದ್ದಿದ್ದರೆ  ಅದನ್ನೂ  ಹೇಳಿ..

ವಂದನೆಗಳು.

Monday, September 10, 2012

ಗೋಡೆ ಮೇಲಿನ ಚಿತ್ತಾರಗಳು.


 ನಮ್ಮ ಮನೆಗೆ ಯಾರಾದರೂ  ನೆಂಟರು ಬರುತ್ತಾರೆಂದು ಗೊತ್ತಾದ ಹಿಂದಿನ ದಿನ ನಾವು ಮನೆಗೆ ಬಣ್ಣ ಹೊಡೆಸುವುದರ  ಬಗ್ಗೆ  ಚರ್ಚಿಸುತ್ತೇವೆ. ಮನೆಗೆ ಕಾಲಿಟ್ಟ ಪ್ರತಿ ನೆಂಟರೂ ''ಓಹ್ಹೋ .. ಗೋಡೆಯ ತುಂಬಾ ಬರೆದು ಮುಗಿಸಿದ್ದಾನೆ.. ಮಗರಾಯ,'' ಎನ್ನುತ್ತಾ ದೇಶಾವರೀ ನಗೆ ಬೀರುತ್ತಾರೆ. ನೀವೇನಾದರೂ  ಬಂದು ಸೋಫಾದ ಮೇಲೆ ಕೂತು ಎದುರಿನ ಗೋಡೆಯನ್ನು ಸಹಜವಾಗಿ ದಿಟ್ಟಿಸಿದಿರೋ  ನೀವು ಮೂರ್ಚೆಹೊಗುತ್ತೀರಿ. ಎದುರಿಗೆ ಅಷ್ಟೂ ಹಲ್ಲುಗಳನ್ನೂ ಕಿರಿದು ಹೆದರಿಸುತ್ತಿರುವ ದೊಡ್ಡ ಬಾಯಿಯ ರಾಕ್ಷಸನಿದ್ದಾನೆ.  ರಾಕ್ಷಸನ ಚಿತ್ರವಿದೆ! ಶಿಶಿರನ ಕರ ನೈಪುಣ್ಯ!




ಸುಮಾರು ಅವನಿಗೆ ಎರಡು ವರ್ಷಗಳಿದ್ದಾಗ ನಾವೂ ಬಾಡಿಗೆ ಮನೆ ಬಿಟ್ಟು ಹೊಸದಾಗಿ ನಮ್ಮದೇ ಮನೆ ಕಟ್ಟಿಸಿಕೊಂಡು ಚಂದದ ಬಣ್ಣ ಹುಡುಕಿ ಹೊಡೆಸಿಕೊಂಡು ಗೃಹ ಪ್ರವೇಶಿಸಿದೆವು.ಹೊಸಾ ಮನೆ, ಹೊಸ ಬಣ್ಣ, ನಮ್ಮ ಟೇಸ್ಟಿಗೆ ನಾವೇ ಮೆಚ್ಚಿಕೊಳ್ಳುತ್ತಾ ಇರುವ ಒಂದು ದಿನ ನಮ್ಮವರು ಸ್ನಾನ ಮುಗಿಸಿ ಹೊರ ಬಂದವರೇ ಅತ್ಯಾಶ್ಚರ್ಯಕರವಾದ ಧ್ವನಿಯಲ್ಲಿ ನನ್ನನ್ನು ಕರೆದರು, 'ನೋಡಿಲ್ಲಿ ಎಷ್ಟ್ ಚನಾಗಿ ಬರೆದಿದ್ದಾನೆ,'  ಎನ್ನುತ್ತಾ! ನಾನಾದರೂ ಕೈಯಲ್ಲಿ ದೋಸೆ ಸೌಟನ್ನು ಹಿಡಿದುಕೊಂಡು ಬೆಡ್ ರೂಮಿಗೆ ಓಡಿದೆ. ನಮ್ಮವರು ಮುಖದಲ್ಲಿ ಸಾವಿರ ಕ್ಯಾಂಡಲ್ ಲೈಟ್  ಬೀರುತ್ತಾ, ಹಿಗ್ಗುತ್ತಾ ನಿಂತಿದ್ದು ಕಾಣಿಸಿ ಅವರ ದೃಷ್ಟಿಯನ್ನು ಹಿಂಬಾಲಿಸಿದರೆ ಅಲ್ಲಿ ಕಾಣಿಸಿತು. ABCD ಎನ್ನುವ ಹೊಳೆಯುವ ಅಕ್ಷರಗಳು.  ಮಗ ಇಂಜಿನಿಯರೋ, ಡಾಕ್ಟರೋ ಆದನೇನೋ ಎನ್ನುವ ಸಂಭ್ರಮದಲ್ಲಿ ಬರೆದ ಅಕ್ಷರಗಳನ್ನು ನೋಡುತ್ತಿದ್ದಂತೆ ಒಮ್ಮೆಲೇ ಉಸಿರು ಅರ್ಧವಾಯಿತು! ಬೆಡ್ ರೂಮಿನ ಗೋಡೆಯ ಮೇಲೆ ಕ್ರೆಯಾನ್ಸ್ ನಿಂದ ಮುದ್ದಾದ ಅಕ್ಷರಗಳು ನಳ ನಳಿಸುತ್ತಿದ್ದವು!  ''ಪುಟ್ಟಾ ಗೋಡೆಯ ಮೇಲೆ ಬರೀ ಬಾರದು,'' ಎನ್ನುತ್ತಾ ನಾನಾದರೂ ಗೋಡೆ ಹಾಳಾಯಿತೆಂದು  ತೀವ್ರವಾದ ಸಂತಾಪದಿಂದ ಕೈಯಲ್ಲಿರುವ ಕ್ರೆಯಾನ್ಸ್ ಕಸಿದು ಬಚ್ಚಿಟ್ಟೆ. ಮಗಳಿಗೆ ''ಕಂಡ ಕಂಡಲ್ಲಿ ಪೆನ್ಸಿಲ್ಲು, ಕ್ರೆಯಾನ್ಸು ಒಗೆದರೆ ನೋಡು,'' ಎನ್ನುತ್ತಾ ಸುಮ್ಮನೆ ಅವಳಿಗೆ ಜೋರು ಮಾಡಿದೆ.ನನ್ನವರು ಮಾತ್ರಾ ಗೋಡೆಯ ಮೇಲೆ ಬರೆದ ಅನ್ನುವುದಕ್ಕಿಂತ ಎಷ್ಟು ಚನ್ನಾಗಿ ಬರೆದಿದ್ದಾನೆ, ಅನ್ನುವ ಆನಂದಾನುಭೂತಿಯಿಂದ ಹೊರಬಂದಂತೆ ಕಾಣಿಸಲಿಲ್ಲ.ನಾನು   ಇವರ ಹಳೆ ಬನಿಯನ್ನನ್ನು ನೆನೆಸಿ    ಹಿಂಡಿ ಬರೆದದ್ದನ್ನು  ಮೆಲ್ಲಗೆ ಒರೆಸಿ ಅಳಿಸಲು  ಶುರು ಮಾಡಿದೆ.
 ಅವನು ಬರೆದಂತೆಲ್ಲಾ ನನ್ನದು ಒರೆಸುವ ಕೆಲಸ. ಹೀಗೆ ಸುಮಾರು ದಿನ.




ಅವನಿಗೆ ಗೋಡೆಯ ಮೇಲೆ ಬರೆಯುವ ಆಸೆ ಅದೆಷ್ಟು ತೀವ್ರವೆಂದರೆ ಎಲ್ಲಿ ಏನಾದರೂ ಚಿಕ್ಕ ಪೆನ್ಸಿಲ್ಲೋ ಕ್ರೆಯಾನ್ಸೋ ಸಿಕ್ಕರೆ ಸಾಕು ಬಚ್ಚಿಟ್ಟುಕೊಂಡು ಬರೆಯುತ್ತಿದ್ದ. ಮೊದ  ಮೊದಲು ಅಕ್ಷರಗಳು, ಸೊನ್ನೆ ಸುತ್ತುವುದು,ಗೆರೆ ಎಳೆಯುವುದು ಹೀಗೆ. ಪ್ರಿ ಕೇಜಿಗೆ ಸೇರಿಸಿದ ಮೇಲೆ ಅದು ಕಥಾರೂಪಗಳನ್ನು ಪಡೆಯಲು ಶುರುವಾಯಿತು. ಆಗವನಿಗೆ ಯಕ್ಷಗಾನವೆಂದರೆ ಸಿಕ್ಕಾಪಟ್ಟೆ ಆಸಕ್ತಿ. ಅದರ ಕಿರೀಟಗಳನ್ನು ಅಪ್ಪನಿಂದ ಪೇಪರ್ ಮೇಲೆ ಬರೆಸಿಕೊಳ್ಳುತ್ತಿದ್ದ. ತದನಂತರ ಗೋಡೆಯ ಮೇಲೆ ನಾನಾ ತರದ ಕಿರೀಟಗಳು.  ಆದಿಶೇಷನ ಚಿತ್ರ,  ಕೆಳಗೆ ವಸುದೇವ ಕೃಷ್ಣನನ್ನು ಬುಟ್ಟಿಯಲ್ಲಿ ಎತ್ತಿಕೊಂಡು ಹೋಗುವಂತೆ. ಜೊತೆಗೆ ಅವನ ಸಂಗಡಿಗರು ಒಂದಷ್ಟು ಚಿಕ್ಕ, ದೊಡ್ಡ ಹಾವುಗಳು.ಉದ್ದ ಹಾವು ಬರೆಯುತ್ತೀನೆಂದು ಚೇರ್ ಹತ್ತಿ ಮೇಲಿನಿಂದ ಕೆಳವರೆಗೆ ಬರೆದಿದ್ದು.   ಶಾಲೆಯಲ್ಲಿ ಪಾಠ ಮಾಡಿದಂತೆಲ್ಲಾ ಅದು ನಮ್ಮ ಮನೆಯ ಗೋಡೆಯ ಮೇಲೆ.   ಸೋಲಾರ್ ಸಿಸ್ಟಂ,  ಅದರಲ್ಲಿ ಸೂರ್ಯ ಮತ್ತು ಚಂದ್ರ  ಜೊತೆ ಜೊತೆಯಲ್ಲೇ ಇರುತ್ತಾರೆ! ಶನಿಗ್ರಹವಂತೂ ನೋಡಲು ಎರಡು ಕಣ್ಣು ಸಾಲದು. ಪರ್ಮನೆಂಟ್ ಮಾರ್ಕರ್ ಎಲ್ಲಿ ಸಿಕ್ಕಿತ್ತೋ ಏನೋ ಅದರಲ್ಲೇ ಬರೆದಿದ್ದ. ಬಿಲ್ಲು ಬಾಣ ಬತ್ತಳಿಕೆಗಳ ಚಿತ್ರವಂತೂ ಹೇರಳವಾಗಿ ಕಾಣ ಸಿಗುತ್ತವೆ. ಅಷ್ಟೊತ್ತಿಗೆ ಯಕ್ಷಗಾನದ ಖಯಾಲಿ ಕಡಿಮೆಯಾಗಿ ಕಾರ್ಟೂನುಗಳ ಮೇಲೆ ತಲೆ ಹಾಯ ತೊಡಗಿತು. ಬೆನ್ ಟೆನ್ ನ ಅಷ್ಟೂ ಕ್ಯಾರೆಕ್ಟರ್ಗಳೂ, ಸ್ಪೈಡರ್ ಮ್ಯಾನ್,   ಬ್ಯಾಟ್ ಮಾನ್, ಆ ಮ್ಯಾನ್, ಈ ಮ್ಯಾನ್ ಅನ್ನುವ ಹೊತ್ತಿಗೆ ಒರೆಸಿ ಒರೆಸಿ ನಾನು ನಿಶ್ಯಕ್ತಿ ಮ್ಯಾನು !





ಅವನು ಬರೆದಂತೆಲ್ಲಾ ಹಿಂದೆ ಹಿಂದೆ ನಾನು ಖಡ್ಗವನ್ನು ಹಿರಿದು  ದಕ್ಷಯಜ್ನವನ್ನು ಧ್ವಂಸ ಮಾಡುವ ವೀರಭದ್ರನಂತೆ ಇವರ ಹಳೆ ಬನಿಯನ್ ಹಿಡಿದು ಎಲ್ಲವನ್ನೂ ಒರೆಸುತ್ತಾ ವೀರಗಾಸೆ ಶುರುಮಾಡಿದೆ. ಒರೆಸುವಾಗ ನನಗೆ ತೀವ್ರವಾಗಿ ಬೇಜಾರಾಗುತ್ತಿತ್ತು. 'ಎಷ್ಟ್ ಚನ್ನಾಗ್ ಬರ್ದಿದಾನೆ. ಪೇಪರ್ ಮೇಲೆ ಬರೆಯಕ್ಕೆ  ಏನ್ ಧಾಡಿ ಇದಕ್ಕೆ,'  ಎನ್ನುತ್ತಾ  ಬಹಳ  ಸಂತಾಪದಲ್ಲಿಯೇ ಒರೆಸುತ್ತಿದ್ದೆ. ನಾನು ಒರೆಸಿದ್ದರಿಂದ ಅವನಿಗೆ ತುಸುವಾದರೂ ಬೇಜಾರಿಲ್ಲದೆ ನಾನು ಮುಂದೆ ಮುಂದೆ ಹೋದಂತೆ ಹಿಂದೆ ಹಿಂದೆ ಬರುತ್ತಿದ್ದ  ಹೊಸ ಚಿತ್ರಗಳ ಸರಣಿಯೊಂದಿಗೆ. ಇವರ ತೂತಾದ ಬನಿಯನ್ ಗಳೆಲ್ಲಾ ಹರಿದು ಚಿಂದಿಯಾದವು. ಈಗ ಸ್ವಲ್ಪ ಮಾಸಲಾದ ಬನಿಯನ್ನುಗಳನ್ನು ನಾನು ನನ್ನ ಗೋಡೆ ವರೆಸುವ ಬಟ್ಟೆಯನ್ನಾಗಿ ಮಾಡಿಕೊಳ್ಳುವ ಹೊತ್ತಿಗೆ ಇವರು ಹೌಹಾರ ತೊಡಗಿದರು. ಬೇರೆ ಬಣ್ಣದ  ಬಟ್ಟೆಯಾದರೆ ಬಟ್ಟೆಯ ಬಣ್ಣ ಮತ್ತೆ ಗೋಡೆಗೆ ಮೆತ್ತುವುದಿಲ್ಲವೇ..? ಅಂತೆಯೇ ನನ್ನ ಪ್ಲಾನು. ನಾನು ಒರೆಸಿದ ಪರಿಣಾಮಕ್ಕೆ ಗೋಡೆ ಅಲ್ಲಲ್ಲಿ ಬಣ್ಣ ಬಿಟ್ಟುಕೊಂಡು ಮತ್ತಷ್ಟು ವಿಕಾರವಾಗಿ ಕಾಣಿಸತೊಡಗಿತು.




ಮೆತ್ತಗೆ ಹೇಳಿದರಿಲ್ಲ, ಜೋರು ಮಾಡಿ ಹೇಳಿದರಿಲ್ಲ. ಎರಡು ಕೊಟ್ಟು ಹೇಳಿದರೂ ಊಹ್ಞೂ .. ಗೋಡೆಯ ಮೇಲೆ ಬರೆಯುವುದನ್ನು ತಪ್ಪಿಸಲಾಗಲೇ ಇಲ್ಲ. ಡ್ರಾಯಿಂಗ್ ಪುಸ್ತಕವಾಯ್ತು, ಬಿಳೀ ಬೋರ್ಡ್ ಆಯ್ತು. ಅದೆಲ್ಲಾ ಬೋರಾಗಿ ಮತ್ತೆ ಗೋಡೆಯೇ ಬೇಕಾಯ್ತು.   ಮತ್ತೆ ಬಂದವರೆಲ್ಲಾ ಹೇಳತೊಡಗಿದರು. ''ಬರ್ಕೊಳ್ಳಿ ಬಿಡಿ.  ಆಮೇಲೆ ಒಂದೇ ಸಲ ಬಣ್ಣ ಹೊಡೆಸಿದರಾಯ್ತು..'' ಎಂದು ಸಮಾಧಾನ ಪಡಿಸಿದರು. ಗೆಳತಿಯೊಬ್ಬಳು, ''ನೀವು ಎಲ್ಲಾ ಹುಟ್ಟಾ ಕಲಾವಿದರಲ್ಲವೇ..? ಬರ್ಕೊಳ್ಳಿ ಬಿಡೇ,''  ನನಗೇ  ಅಂದಳು. ಬಿಟ್ಟರೂ ಸೈ, ಬಿಡದಿದ್ದರೂ ಸೈ.


ಅಷ್ಟೊತ್ತಿಗೆ ಸುಧಾದಲ್ಲಿ ಯಾರೋ ಪುಣ್ಯಾತ್ಮನ ಬಗೆಗೆ ಬರೆಯಲಾಗಿತ್ತು.ಹೆಸರು ಮರೆತೆ, ಆತ ತುಂಬಾ ಕ್ರಿಯೇಟಿವ್ ವ್ಯಕ್ತಿ. ಆತನೂ ಗೋಡೆಯ ಮೇಲೆ ಬರೆಯುತ್ತಿದ್ದನಂತೆ! ಮತ್ತು ಮಕ್ಕಳಿಗೆ ಗೋಡೆಯ ಮೇಲೆ ಬರೆಯಲು ಬಿಡಿ, ಅವರ ಕಲ್ಪನಾ ಶಕ್ತಿ ಕ್ರಿಯೇಟಿವಿಟಿ ಹೆಚ್ಚುತ್ತದೆ, ಎಂದೆಲ್ಲಾ ಸಂದೇಶ ಕೊಟ್ಟಿದ್ದ. ಅದನ್ನು ಓದಿದ ಮೇಲೆ ನಮಗೆ ಮತ್ತಷ್ಟು ಸಮಾಧಾನವಾಯಿತು. ಪ್ಹಾರಿನ್ನಿನವರು ಹೇಳಿದ್ದಾರೆಂದರೆ ಅದು ಸರಿಯೇ ಸರಿ, ಎನ್ನುತ್ತಾ ಅಲ್ಲಿಂದ ನನ್ನ ಹರಕು ಬನಿಯನ್ ಹಿಡಿದುಕೊಂಡು ಮಾಡುವ  ಯಕ್ಷಗಾನ, ತಾಳ ಮದ್ದಲೆ, ವೀರ ಗಾಸೆ ಎಲ್ಲವನ್ನೂ ಬಿಟ್ ಹಾಕಿ 'ಅಮ್ಮಾ ಬೋರು' ಅಂದರೆ 'ಅಲ್ಲೇ  ಗೋಡೆ ಮೇಲೆ ಏನಾರು ಬರೀ' ಅನ್ನುವಷ್ಟರ ಮಟ್ಟಿಗೆ ಒಳ್ಳೆಯವಳಾದೆ.

 ಈಗ ಗೋಡೆಯ ಮೇಲೆ ನಾನೇನಾದ್ರೂ ಬರೀಬೇಕಂದ್ರೂ  ಚೂರೂ ಜಾಗವಿಲ್ಲ! ಪಕ್ಕದ ಮನೆಗೆ ಹೋಗಿ ಸಖೇದಾಶ್ಚರ್ಯಗಳಿಂದ ಕೇಳುತ್ತಾನಂತೆ, 'ನಿಮ್ಮ ಮನೆಯಲ್ಲಿ ಗೋಡೆಯೆಲ್ಲಾ ಖಾಲಿ ಇದೆಯಲ್ಲಾ..?' ಅಂತ. ಆವತ್ತು ಅಪ್ಪನ ಹತ್ತಿರ ಹೇಳುತ್ತಿದ್ದ. ''ನನಗೂ ಹೆಲಿಕ್ಯಾಪ್ಟರಿಗೆ ಕೀ ಕೊಟ್ಟರೆ ಹಾರುವಂತೆ ಕೀ ಇದ್ದಿದ್ದರೆ ನಾನೂ ಹಾರಿಕೊಂಡು ಮನೆಯ ಸೀಲಿಂಗ್ ಮೇಲೆ ಬರೆಯುತ್ತಿದ್ದೆ,'' ಅಂತ. ಮಗನ ಈ ಘನಂಧಾರೀ ಪ್ಲಾನಿಗೆ ಇವರು ಬೆಚ್ಚಿಬಿದ್ದದ್ದು ಹೌದು.

ಮಕ್ಕಳ ಕಲ್ಪನೆಗಳನ್ನು ಹಿಂಬಾಲಿಸಿಕೊಂಡು ಹೋದರೆ ನಮಗಾದರೂ ಎಷ್ಟೊಂದು ಉಪಾಯಗಳು ಹೊಳೆದು ಬಿಡುತ್ತವೆ.  ಅವರನ್ನು ಇರುವಂತೆಯೇ ಬೆಳೆಯಲು  ಬಿಡಿ.  ಆ ಕಲ್ಪನೆಗಳನ್ನೆಲ್ಲಾ  ಹಳೆ ಬನಿಯನ್ನಿನಿಂದ ತಾಯಂದಿರು ಒರೆಸ ಬಾರದು ಅಷ್ಟೇ.

ಆವತ್ತು ಶಾಲೆಯಿಂದ ಬರುತ್ತಾ ಎದುರು ಮನೆ ಆಂಟಿಗೆ ಹೇಳುತ್ತಿದ್ದ. ''ಆಂಟೀ ನಂಗೆ ಫಸ್ಟ್ ಪ್ರೈಸು.. ಡ್ರಾಯಿಂಗ್ ಕಾಂಪಿಟೆಶನ್ ನಲ್ಲಿ.!'' ಮನೆಗೆ ಬಂದು ಪ್ರೈಸ್ ತೋರಿಸಿದ. ಒಂದು ಆರ್ಟ್  ಸೀಡಿ.ಡ್ರಾಯಿಂಗ್ ಬುಕ್, ಕಲರಿಂಗ್ ಪೆನ್ಸಿಲ್ಸ್ .     ನಾನು ಅಂತಾದರೂ ಬಿಡದೆ, ''ಎಲ್ಲರಿಗೂ ಕೊಟ್ರಾ ನಿನಗೊಂದೆ ಕೊಟ್ರಾ?'' ಕೇಳಿದೆ.  ಗೋಡೆಯ ಮೇಲೆ ಬರೆದದ್ದು ಬಿಟ್ರೆ ಉಳಿದಂತೆ ಅವನ ಸಾಮರ್ಥ್ಯ ನನಗೆ ಗೊತ್ತಿರಲಿಲ್ಲ!
 ''ನನಗೊಬ್ಬನಿಗೆ..'' ನನಗೆ ಅನುಮಾನ,  ನಾಲ್ಕಾರು ಬಾರಿ ಕೇಳಿದೆ, ''ಅಮ್ಮಾ ಎಷ್ಟು ಸಲ ಹೇಳಲಿ, ಪಸ್ಟು ಪ್ರೈಸನ್ನು  ಒಬ್ಬರಿಗೇ  ಕೊಡೋದು'' ಅಂದ. ನಾನು ಬಾಯಿ ಮುಚ್ಚಿಕೊಂಡೆ.
ಅವನಿಗೆ ಈಗೀಗ ನಾಚಿಕೆಯಾಗುತ್ತದೆ. ಯಾರಾದರೂ ನೆಂಟರು ಬಂದವರು ಸೀದಾ ಅವನಲ್ಲೇ ಕೇಳುತ್ತಾರೆ, ಅಕ್ಕನ ಗೆಳತಿಯರ ಮುಂದೆ ನಾಚಿಕೆ  ತುಸು ಜಾಸ್ತಿ.. ''ಅಮ್ಮಾ ಗೋಡೆಗೆ ಬಣ್ಣ ಹೊಡೆಸಿ'' ಅನ್ನುವ ರಾಗ ಶುರು ಮಾಡಿದ್ದಾನೆ.ನನಗೆ ಮಾತ್ರ ಇಷ್ಟವಿಲ್ಲ.


ನನಗೆ ಅವನ ಕಲ್ಪನೆಗಳನ್ನು ಒರೆಸಿ, ಅಳಿಸಿ  ಹಾಳು  ಮಾಡಿದ್ದಕ್ಕೆ ಬಹಳ ಬೇಜಾರಿದೆ.  ಒರೆಸಿದರೂ ಮತ್ತೆ ಮತ್ತೆ ಬರೆದು ಸ್ವಲ್ಪ ಮಟ್ಟಿಗೆ ನನ್ನ ತಪ್ಪಿತಸ್ತ ಭಾವವನ್ನು ಕಡಿಮೆ ಮಾಡಿದ್ದಾನೆ. ಅದಕ್ಕೆ ನಮಗೀಗ ಮನೆಗೆ ಬಣ್ಣ ಹೊಡೆಸಿದರೆ ಗೋಡೆಯ ತುಂಬಾ ಇರುವ  ಅವನ ಮುಗ್ಧತೆಯೆಲ್ಲಾ ಕಳೆದು ಹೋಗಿಬಿಡುತ್ತದಲ್ಲಾ ಅನ್ನುವ ಚಿಂತೆ.  ಮೊನ್ನೆ ಮೊನ್ನೆ ವರೆಗೂ ಬರೆದ.  ನಾಳೆಯೂ ಬರೆದರೆ  ಬರೆಯಲಿ ಬಿಡಿ. ನಿಮ್ಮ ಮಕ್ಕಳಿಗೂ ಬಿಟ್ಟು ಬಿಡಿ, ಬರೆದರೆ ಬರೆದುಕೊಳ್ಳಲಿ.



[ಅವನ ಗೋಡೆಯ ಮೇಲಿನ ಚಿತ್ರಗಳು ತುಂಬಾ ಮಬ್ಬು ಮಬ್ಬಾಗಿವೆ. ಅದಕ್ಕೆ ಅದರ ಪರಿಚಯ ನಿಮಗೆ ಇಲ್ಲ..:)]

ವಂದನೆಗಳು.

Tuesday, September 4, 2012

ಕನಸು ಮಾರಲು ಬಂದ!






ಬೀನ್ ಬ್ಯಾಗಿಗೆ ಸುರಿಯಲು  ಥರ್ಮಾಕೋಲ್ ಮಣಿಗಳನ್ನು  ತಂದ ದೊಡ್ಡ  ಪ್ಲಾಸ್ಟಿಕ್ ಕವರು ಅವತ್ತು ನನ್ನ ಮಗನ ಆಟದ ವಸ್ತುವಾಗಿತ್ತು.  ಅಲ್ಲಲ್ಲಿ ಹೆಕ್ಕಿದಂತೆ ನಟಿಸುತ್ತಾ ಅದರ  ಅಗಲ ಬಾಯಿಗೆ ಅದೇನನ್ನೋ ತುಂಬುತ್ತಿದ್ದ. ನನಗೆ ಕುತೂಹಲ, ಕೇಳಿದೆ,

ಅವನು ಡ್ರೀಮ್ ಕಲೆಕ್ಟರ್ ಅಂತೆ, ಎಲ್ಲರ ಕನಸುಗಳನ್ನು ತುಂಬಿಕೊಂಡು ಬೇಕಾದವರಿಗೆ ಬೇಕಾದ ಕನಸು ಮಾರುತ್ತಾನಂತೆ, ಬೇಕಾದವರಿಗೆ ಬೇಕಾದ ಕನಸು!   ನೀವೂ ಬೇಕಿದ್ದರೆ ಈ ಕನಸು ವ್ಯಾಪಾರಿಯಿಂದ ಕನಸು ಕೊಳ್ಳಬಹುದು..!