Saturday, November 16, 2013

ನೂರಾ ಮೂವತ್ತು ರೂಪಾಯಿ ಚಪ್ಪಲಿಯೂ, ಬಸ್ಸೆಂಬ ಸಮುದ್ರವೂ !!

   


    ನನಗೆ ಯಾವತ್ತೂ  ಚಪ್ಪಲಿ ತಗೊಳ್ಳೋಕೆ ಹೋದಾಗ   ಇಲ್ಲದ ಸಮಸ್ಯೆ ವಕ್ಕರಿಸಿ ಬಿಡುತ್ತೆ.  ಯಾವ ಚಪ್ಪಲಿ ತಗೊಳ್ಳೋದು,ಅದು ಹೇಗಿದ್ದರೆ ಚೆನ್ನ, ಯಾವ ಅಂಗಡಿಯಲ್ಲಿ ಒಳ್ಳೆ ಚಪ್ಪಲಿ ಸಿಗುತ್ತೆ..  ಹೀಗೆ.   ಹುಡುಕಿ ಹುಡುಕಿ ಕೊನೆಗೆ ಯಾವುದೋ ಒಂದು ಹಿಡಿದುಕೊಂಡು ಬರುವುದು.   ನನಗೋ  ಹೆಚ್ಚು ಎತ್ತರವಿಲ್ಲದ,   ಲೈಟ್ ವೆಯಿಟ್ ಇರುವ ಮೆತ್ತನೆಯ ಚಪ್ಪಲಿ ಬೇಕು.ನನ್ನ ಮಟ್ಟಿಗೆ ಚಪ್ಪಲಿ ಯಾವುದು ಸರಿ ಅನ್ನುವುದನ್ನು ಹುಡುಕುವುದೂ ಒಂದು ಪ್ರಾಜೆಕ್ಟೇ . ಚಪ್ಪಲಿ  ಅಂಗಡಿಗಳಲ್ಲಿನ  ಶೋಕೇಸ್ ಅನ್ನು ಥರ ಥರದ ವಿನ್ಯಾಸವಿರುವ ಚಪ್ಪಲಿಗಳಿಂದ ಅಲಂಕರಿಸಿದ್ದು ನೋಡಿ  ಮರುಳಾಗಿ ಒಳ ಹೋಗುವುದು, ಊಹ್ಞೂ .. ನನಗೆ ಬೇಕಾದ ರೀತಿಯದು ಇಲ್ಲ.. ವಾಪಾಸು ಬರುವುದು . ಅದೆಷ್ಟು ಥರದ ಬ್ರಾಂಡುಗಳೂ, ವೆರೈಟಿಗಳೂ ಇದ್ದರೂ ನನಗೆ ಒಂದಿಲ್ಲೊಂದು ಸಮಸ್ಯೆ.  ಎಲ್ಲವೂ ಸರಿ ಎನ್ನುವ ಹೊತ್ತಿಗೆ ಅದರ ಡಿಸೈನ್ ಸರಿ ಇಲ್ಲ ಅಂತ ಅನಿಸುವುದು.  ಅದೂ ಸರಿ ಇದೆ ಅಂದ್ಕೊಳ್ಳಿ ಚಪ್ಪಲಿಗೆ ರೇಟ್ ಜಾಸ್ತಿ !   ನನ್ನವರಂತೂ,'' ನಿನಗೆ ಚಪ್ಪಲಿ ಮಾಡಲು ಆ ಬ್ರಹ್ಮನೇ ಬರಬೇಕು,'' ಎಂದು ತೀರ್ಪು ಕೊಟ್ಟಾಗಿದೆ ಯಾವತ್ತೋ.

ಕೊನೆಗೆ  ಅಷ್ಟೆಲ್ಲಾ ಕೊಟ್ಟು ತಂದರೂ ಏನೋ ತೊಂದರೆ.  ಹಿಂದೆಲ್ಲಾನಮ್ಮೂರಲ್ಲಿ ಸಿಗುತ್ತಿದ್ದ ಚಪ್ಪಲಿ ಕಾಲನ್ನು ಕಚ್ಚುತ್ತಿತ್ತು. ಅದರ ಕ್ವಾಲಿಟಿ ಯಾವ  ತರದ್ದು ಇರುತ್ತಿತ್ತೋ  ಏನೋ.. ?  ಹೊಸ ಚಪ್ಪಲಿ ಕಾಲು  ಕಚ್ಚಿದೆ ಎನ್ನುವ ಮಾತುಗಳು ಸಾಮಾನ್ಯವಾಗಿತ್ತು. ನಾನು ಮಾತ್ರ ಹಾಗೆ ಹೇಳುತ್ತಿರಲಿಲ್ಲ..  ಕಾಲನ್ನು ಚಪ್ಪಲಿ ಕಚ್ಚಿದೆ ಅಂದರೆ ನೀನೂ ಹಿಡಿದು  ಕಚ್ಚು ಎಂದು ಉತ್ತರ ಶತ:ಸ್ಸಿದ್ಧವಾಗಿರುತ್ತಿತ್ತು  ಅಣ್ಣಂದಿರಿಂದ! 

ಒಮ್ಮೆ   ಹಾಗೆ  ಹೀಗೆ ಎಲ್ಲಾ ಲೆಕ್ಕಾಚಾರ ಮಾಡುವ  ಹೊತ್ತಿಗೆ   ಸಾವಿರದ ತೊಂಬತ್ತಾರು ಗುಣದ   ಒಂದು ಭಯಂಕರ  ಚಂದದ ಚಪ್ಪಲಿ  ಸಿಕ್ಕಿಬಿಡ್ತು ಹೇಳಾಯ್ತು. ನಾನು ಹೇಳುವ ಫೀಚರ್ಸು, ಕ್ಯಾರೆಕ್ಟರ್ಸು ಎಲ್ಲಾ ಇರುವ ಚಪ್ಪಲಿ.    ಸಾವಿರದೆಂಟು ನೂರು ಕೊಟ್ಟು ತಂದಾಯ್ತು .. ನಾನೂ ಹಾಕಿಕೊಂಡು ಜಂಬದಿಂದ ನಡೆದಿದ್ದೂ ನಡೆದಿದ್ದೂ ....ಅಪರೂಪಕ್ಕೆ ಒಂದು ಜೊತೆ ಒಳ್ಳೆ ಚಪ್ಪಲಿ ಸಿಕ್ಕಿದೆಯೆಂದು.
ಕಾಲೇಜಿಗೆ ಹೋಗುವಾಗ ನೂರು ರುಪಾಯಿಗೆ ಚಪ್ಪಲಿ ಹೊಲಿಸುತ್ತಿದ್ದೆವು.  ನಾನು ಪ್ರತೀ ಸಾರಿ ಅದೇ ನೆನಪಿನಲ್ಲಿ ಅಂಗಡಿ ಒಳಗೆ ಹೋಗುವುದು. ಈಗ ನೂರು ರೂಪಾಯಿಗೆ ಒಂದು ಬಾರೂ  ಬರೋಲ್ಲ ನೆಟ್ಟಗೆ.  ಬರಲು ಮಳ್ಳೆ ..?  ನಾವೆಲ್ಲಾ ಆಗ ಹವಾಯಿ ಥರದ ಚಪ್ಪಲಿಗಳನ್ನೆಲ್ಲಾ ಹಾಕಿಕೊಂಡು ಮೆರೆದಾಡುತ್ತಿದ್ದೆವಪ್ಪ.ಹೆಚ್ಚಿನ  ಎಲ್ಲರೂ ಹಾಗೆ.  ಈಗ ಹವಾಯಿಯನ್ನು ಯಾರಾದರೂ ಮನೆಯಿಂದ ಹೊರಗೆ ಹಾಕಿಕೊಂಡು ಹೋಗುತ್ತಾರ?
  ಒಮ್ಮೆ  ನನ್ನ ಕಾಲಿಗೆ ಸ್ವಲ್ಪ ಪೆಟ್ಟಾಗಿತ್ತು. ಡಾಕ್ಟರು  ಕಾಲಿಗೆ ಕ್ರೇಪ್ ಬ್ಯಾಂಡೇಜ್ ಸುತ್ತಿ ಓಡಾಡಲು ಹೇಳಿದ್ದರು. ಪೆಟ್ಟು ಮಾಡಿಕೊಂಡ ಮರು ದಿನವೇ ನನ್ನ ಮಗಳ ಡಾನ್ಸ್ ಪ್ರೋಗ್ರಾಮೊಂದಿತ್ತು. ನನ್ನ ಚಪ್ಪಲಿ ಹಾಕಲು ಬಾರದೆ,  ಅದಕ್ಕೆ ನಾನು ಹೊಸಾ ಹವಾಯಿ ಚಪ್ಪಲಿ ಖರೀದಿ ಮಾಡಿ ಅದನ್ನು ಗುಟ್ಟಾಗಿ[!] ಹಾಕಿಕೊಂಡು  ಹೋದೆ ಅನ್ನಿ. ಹವಾಯಿ ಯಾರು ಗಮನಿಸುತ್ತಾರೆ ಅಂತ ನನ್ನ ಭಾವನೆ,  ಅಲ್ಲಿ ನನ್ನ ಗೆಳತಿಯೊಬ್ಬಳು ಅಪರೂಪಕ್ಕೆ ಸಿಕ್ಕವಳಿಗೆ ನನ್ನ ಹವಾಯಿಯೇ  ಕಾಣಿಸ ಬೇಕೇ. ''ಏ  ಹೊಸಾ ಹವಾಯಿ ಅಂತ ಹಾಕ್ಕೋ ಬಂದ್ಯಾ ''ಅಂತ ನನ್ನ ಸತ್ಯ ನಾಶ ಮಾಡಿದ್ದಳು.
 ಕಾಲೇಜಿಗೆ ಹೋಗುವ ಸಮಯದಲ್ಲಿ ನಾವು ಬರೀ ಚಪ್ಪಲಿ ಅಂತ ಒಂದು ಹೆಸರಿಟ್ಟು  ಕರೆಯುತ್ತಲೇ ಇರಲಿಲ್ಲ. ಹೊಸ ಚಪ್ಪಲಿ ಹಾಕಿಕೊಂಡು ಬಂದವರಿಗೆ  ' ಹೊಸ    ಚಪ್ಪಲಿ, ಮೆಟ್ಟು, ಜೋಡು, ಎಕ್ಕಡ,  ಪಾದರಕ್ಷೆ ,  ಪಾದುಕೆ  ಹಾಕಿಕೊಂಡು ಬಂದಿದ್ದೀಯ' ಅಂತ 'ಸಮಾನಾರ್ಥ'  ವತ್ತಾಗಿ ಕೂಗುತ್ತಿದ್ದೆವು.  ಪಾದುಕೆ ಅನ್ನುತ್ತಿದ್ದ ಹಾಗೆ ನೆನಪಿಗೆ ಬಂತು, ರಾಮಾಯಣದಲ್ಲಿ ರಾಮ ವನವಾಸಕ್ಕೆ ಹೊರಟಾಗ  ಭರತ  ಬಂದು ದಾರಿ  ಮಧ್ಯದಲ್ಲಿಯೆ ರಾಮನ ಪಾದುಕೆಗಳನ್ನು ಒಯ್ದಿದ್ದನಲ್ಲ.. ಅದನ್ನು ಓದುವಾಗ ನನಗಂತೂ ರಾಮನ ಬಗ್ಗೆ ಭಾರೀ ಪಶ್ಚಾತ್ತಾಪ ಆಗುತ್ತಿತ್ತು.. ಬದಲಿಗೆ ಬೇರೆ ಪಾದುಕೆ ಇತ್ತೋ   ಇಲ್ಲ ಪೂರಾ ಅರಣ್ಯ ಬರಿಗಾಲಲ್ಲಿ ಸುತ್ತಿದನಾ..? ಅನ್ನುವ ಅನುಮಾನ ಯಾವಾಗಲೂ ಕಾಡುತ್ತದೆ ನನ್ನ, ಕೆಲವೊಮ್ಮೆ ಭರತನ ಮೇಲೆ ಸಿಟ್ಟು ಬಂದಿದ್ದೂ ಇದೆ..!   ಅಲ್ಲ,  ಸುಮಾರು ಏಳನೇ ಕ್ಲಾಸ್ ವರೆಗೆ ಚಪ್ಪಲಿ ಮೆಟ್ಟದೆಯೇ ಶಾಲೆಗೇ ಓಡಾಡುತ್ತಿದ್ದೆವು..  ಹೊಸಾ ಚಪ್ಪಲಿ ಕೊಡಿಸಿದಾಗ ಅದನ್ನು  ಮರುದಿನವೇ ಶಾಲೆಗೇ ಹಾಕಿಕೊಂಡು ಹೋಗಿ ಅಲ್ಲಿಯೇ ಮರೆತು ಬಿಟ್ಟು ಬಂದು ಮರುದಿನ ಅದನ್ನು ತರಲು ಭಕ್ತಿಯಿಂದ  ಬರಿಗಾಲಿನಲ್ಲಿ ಹೋಗುತ್ತಿದ್ದೆವು  ... ಬಿಡಿ ಅದ್ನ ...

ರಜೆಯಲ್ಲಿ   ಊರಿಗೆ ಹೋದಾಗ ನನ್ನ  ಸಾವಿರದೆಂಟುನೂರರ  ಚಪ್ಪಲಿ ಕಾರಿನಿಂದ ಲಾಂಚಿಗೆ  ದಾಟುವಾಗ  ನೀರಿಗೆ ಸಿಕ್ಕು ಅದರ ಬಾರು ಮೆಲ್ಲಗೆ ಸೋಲ್ ಗೂ ನನಗೂ ಯಾವ 'ಅಂಟಿ'ನ ನಂಟೂ ಇಲ್ಲ ಅನ್ನುತ್ತಾ ಕಿತ್ತು ಬಂತು!  ನನಗೆ ಬೇರೆ ಗತಿಯಿರದೆ ಅಲ್ಲೇ ಪೇಟೆಯಲ್ಲಿ ಅರ್ಜಂಟಿಗೆ  ಒಂದು ಜೊತೆ  ಚಪ್ಪಲಿ ಕೊಳ್ಳುವ ಅನಿವಾರ್ಯ ಉಂಟಾಯಿತು.  ಚಪ್ಪಲಿಯ ಬೆಲೆ ನೂರಾ ಐವತ್ತು!   ನಾನು ನಯಾ ಪೈಸೆ ಚೌಕಾಸಿ ಮಾಡದಿದ್ದರೂ ಚಪ್ಪಲಿ ಅಂಗಡಿಯವ ನೂರ ಮೂವತ್ತಕ್ಕೆ ಕೊಟ್ಟ ..!!!    ನನ್ನ ಲೆಕ್ಕದಲ್ಲಿ ಬೆಂಗಳೂರಿಗೆ ಮರಳುವ ವರೆಗೆ ಏನೋ ಸರಿ ಇದ್ದರಾಯಿತೆನ್ನುವುದು.  ದರ ಕೇಳಿದವರೆಲ್ಲ ಒಂದು  ವಾರ ಬಾಳಿಕೆ ಬಂದರೆ ಹೆಚ್ಚೆಂದರು.
  ಊರಲ್ಲೆಲ್ಲಾ  ನೂರಾ ಮೂವತ್ತು ರೂಪಾಯಿ ಚಪ್ಪಲಿ ಮೆಟ್ಟಿಯೇ ಸುಮಾರು ಕಡೆ ಓಡಾಡಿದೆ. ನಮ್ಮೂರ ಹತ್ತಿರದ ಜಲಪಾತವೊಂದನ್ನು ನೋಡಲು   ಅದೇ ನೂರಮೂವತ್ತರ ಚಪ್ಪಲಿ ಹಾಕಿಕೊಂಡು ಹೋಗಿ ಬಂದೆ! ಚಪ್ಪಲಿ ಹರೀಲಿಲ್ಲ. ಕಲ್ಲುಗಳ ಮೇಲೆಲ್ಲಾ ಕಾಲಿಟ್ಟು,  ಗುಡ್ಡ ಹತ್ತಿ ನಡೆದರೂ ಜಾರಿಸಲಿಲ್ಲ ನನ್ನ ನೂರಾ ಮೂವತ್ತು ರುಪಾಯಿ ಚಪ್ಪಲಿ.   ನಾನಂತೂ   ನನ್ನ ಈ ಮಿರಾಕಲ್ ನೂರಾಮೂವತ್ತು ರೂಪಾಯಿ ಚಪ್ಪಲಿಯ ಬಗ್ಗೆ ಹೇಳಿದ್ದೆ ಹೇಳಿದ್ದು. ಹೊಗಳಿದ್ದೇ ಹೊಗಳಿದ್ದು. ಎಲ್ಲರಿಗೂ ಕೇಳಿ ಕೇಳಿ ಸಾಕಾಯಿತು! ಎಲ್ಲರಿಗೂ ಇವಳ್ಮನೆ ನೂರಾ ಮೂವತ್ತು ರೂಪಾಯಿ ಚಪ್ಪಲಿ ಸುದ್ದಿ ಸಾಕಪ್ಪಾ ಎಂದುಕೊಂಡು ಓಡಾಡತೊಡಗುವಷ್ಟು ರಗಳೆಯಾಯಿತು.



ಅದೇ ಚಪ್ಪಲಿ ಮೆಟ್ಟಿಕೊಂಡು ಬೆಂಗಳೂರಿಗೆ ಬಂದೆ.  ಸಾವಿರದೆಂಟು ನೂರರ ಚಪ್ಪಲಿಯನ್ನು ಸರಿ ಮಾಡಿಸಿದ್ದೂ ಆಯಿತು.
ನನಗೆ ಆಗಾಗ ಬಸ್ಸಿಗೆ ಹೋಗುವ ಚಟ.  ಕೆಲವು ಸಲ ಆಟೋದಷ್ಟೇ ದುಡ್ಡು ಬಸ್ಸಿಗೂ ಆಗಿ ಬಿಡುತ್ತದೆ, ಆದರೂ ನನಗೆ ಬಸ್ಸಿನ ಪ್ರಯಾಣ ಒಂಥರಾ ಖುಷಿ. ಈ ನಡುವೆ  ಈ ಬಸ್ಸಿನ ಪ್ರಯಾಣಕ್ಕೆ ನನ್ನ ಜೊತೆ ಈ ನೂರಾ ಮೂವತ್ತು ರುಪಾಯಿ ಚಪ್ಪಲಿಗಳ ಜೊತೆ.  ಹೇಗಿದ್ದರೂ ಬಸ್ಸಿನ ರಶ್ಶಿನಲ್ಲಿ ಕಿತ್ತು ಹೋದರೂ ಕೊಟ್ಟಿದ್ದು ನೂರಾ ಮೂವತ್ತು ತಾನೇ ಅಂತ. ಬೆಳಗಿನ ಸಮಯದಲ್ಲಿ ಜನ ಸಾಗರದಿಂದ  ತುಂಬಿರುವ    ಬಿ ಟಿ ಎಸ್  ಬಸ್ಸಿನಲ್ಲಿ ನಿಲ್ಲಲೂ ಜಾಗವಿರದು. ಅಂತಾದ್ದರಲ್ಲಿ  ಈ ನೂರಾ ಮೂವತ್ತು ರೂಪಾಯಿ ಚಪ್ಪಲಿ ಮೆಟ್ಟಿಕೊಂಡು ನಾನು ಬಸ್ಸು  ಹತ್ತಿ  ನಿಲ್ಲಲು ಹರ ಸಾಹಸ ಮಾಡುತ್ತೇನೆ. ಆ ಕಡೆ ಈ ಕಡೆ ತೂರಾಡಿ ನನ್ನ ನೂರಾ ಮೂವತ್ತು ರುಪಾಯಿ ಚಪ್ಪಲಿಗೆ ಒಂದು ಜಾಗ ಮಾಡಿಕೊಂಡು  ನಿಲ್ಲುವಷ್ಟರ ಹೊತ್ತಿಗೆ ಹಗಲಿನಲ್ಲೂ ನಕ್ಷತ್ರಗಳು ಕಾಣಿಸ ತೊಡಗುತ್ತವೆ.  ಆ ಕಂಡಕ್ಟರ್ ಪುಣ್ಯಾತ್ಮ ಆ ಬಾಗಿಲಿಂದ ಈ  ಬಾಗಿಲಿಗೆ ಈ ಬಾಗಿಲಿಂದ ಆ ಬಾಗಿಲಿಗೆ ಓಡುತ್ತಾ ಮಧ್ಯೆ  ಮಧ್ಯೆ ಜಾಗ ಮಾಡಿಕೊಂಡು ಟಿಕೆಟ್ ಟಿಕೆಟ್ , ಪಾಸು ತೋರ್ಸಿ ಅನ್ನುತ್ತಾ ಓಡಾಡುತ್ತ ಇರುವುದು ನನಗೆ   ಮಜ್ಜಿಗೆ ಕಡೆಯುವ  ಕಡಗೊಲಿಗೆ ಕಟ್ಟಿರುವ  ಹಗ್ಗದಂತೆ ಭಾಸವಾಗುತ್ತದೆ. ಆ ಕಡೆಯಿಂದ  ಈಕಡೆ  ಈ ಕಡೆಯಿಂದ ಆಕಡೆ  ಈ ಬಸ್ ಸಮುದ್ರದ ಮಥನ ಮಾಡುವನೇನೋ ಅನ್ನುವಂತೆ ತಿರುಗುತ್ತಿರುತ್ತಾನೆ.    'ಮುಂದೆ ಹೋಗ್ರೀ ಯಾರಲ್ಲಿ ಕಂಬ ಹಿಡ್ಕೊಂಡಿರೋರು' ಎನ್ನುತ್ತಾ ಕಂಬದಲ್ಲಿ ಉಗ್ರ ನರಸಿಂಹನನ್ನು ಬಚ್ಚಿಟ್ಟವನಂತೆ  ಆಡುತ್ತಾನೆ. ಆಗಾಗ ಚಿಲ್ಲರೆಗಾಗಿ ಅವನು    ಚೀಲವನ್ನು ಹುಡುಕುವ ಸದ್ದು ವಾಸುಕಿಯೇ ಫೂತ್ಕರಿಸಿದಂತಾಗುತ್ತದೆ.  ನಾನಂತೂ ಬಸ್ಸಿನ ರಾಡಿಗೆ ಜೋತಾಡುತ್ತಾ ' ಜೋತಾಡ್  ಜೋತಾಡು  ಮೆಲ್ಲಗೆ ' ಎನ್ನುತ್ತಾ ನನ್ನನ್ನೇ ಸಂತೈಸಿ ಕೊಳ್ಳುತ್ತಿರುತ್ತೇನೆ. ಕೆಲವು ಸಲ ನನ್ನ ನೂರ ಮೂವತ್ತು ರುಪಾಯಿ ಚಪ್ಪಲಿಯ ಅರ್ಧ ಭಾಗದಲ್ಲಿ ಯಾರದ್ದೋ ಪಾದ  ಇರುತ್ತದೆ..!! 'ಯಾರೂ ಕೈ ಬಿಟ್ಟರೂ  ನೀ ಕಾಲು ಬಿಡಬೇಡ' ಅನ್ನುತ್ತಾ ಆಜ್ಞಾಪೂರ್ವಕ ವಿನಂತಿಯನ್ನು ಮಾಡುತ್ತಿರುತ್ತೇನೆ ಚಪ್ಪಲಿಗೆ!

 ಅಂತಾ ರಶ್ಶಿನಲ್ಲೂ  ಎಂತೆಂತಹ ವೈವಿದ್ಯಮಯ ದೃಶ್ಯಗಳೂ,   ಮನೋ ವ್ಯಾಪಾರಗಳು ಕಾಣ ಸಿಗುತ್ತವೆ. ಮೊಬೈಲ್ ಕಿವಿಗೆ ಸಿಕ್ಕಿಸಿಕೊಂಡು ಬಿಲ್ಡಿಂಗುಗಳ ನಡುವೆ ಕಾಣದ ದಿಗಂತವನ್ನು ದಿಟ್ಟಿಸುತ್ತಾ  ಕುಳಿತ ಚೆಲುವೆ,  ಕಾಲೇಜಿನಲ್ಲಿ ಸಿಗುವ ಗೆಳತಿಗೋ ಗೆಳೆಯನಿಗೋ  ಮೆಸೇಜ್ ಮಾಡುವ ಕಾಲೇಜು ಕುವರಿ, ನಿಂತಿದ್ದರೂ ಮೊಬೈಲ್ ನಲ್ಲಿ ದರ್ಶನ್ ಫೋಟೋ ಕಲೆಕ್ಷನ್ ನೋಡುತ್ತಾ ಮನದಲ್ಲೇ ನಾಚುತ್ತಾ ಮುದಗೊಳ್ಳುತ್ತಿರುವವಳೊಬ್ಬಳು,   ಸೀಟು  ಸಿಕ್ಕಾಕ್ಷಣ ಕುಳಿತಲ್ಲೇ   ಹನುಮಾನ್ ಚಾಲೀಸ ಓದುವ ಮದುವೆಯಾಗದ  ಹೆಣ್ಣು ಮಗಳೊಬ್ಬಳು , ಲಲಿತ ಸಹಸ್ರ ನಾಮವೋ ಮತ್ತಿನ್ನೇನೋ  ಗೊಣಗುತ್ತಾ ಕೂತಿರುವ ಕೆಲ  ಹೆಂಗಸರು, ನಿನ್ನೆಯ ಧಾರಾವಾಹಿಯ ಕಥೆಯನ್ನು ವಿಮರ್ಶೆಗೊಳಪಡಿಸುತ್ತಿರುವ ಮತ್ತೆ ಕೆಲವರು, ಮತ್ತು ಇದನ್ನೆಲ್ಲಾ ಗಮನಿಸುತ್ತಾ ಮನಸ್ಸಲ್ಲೇ ನಗುವ ನನ್ನಂತವರೂ,   ಜೊತೆಗೆ  ಇವರೆಲ್ಲರ ನಡುವೆ ಸಮುದ್ರ ಮಥನ ಮಾಡುವ ವಾಸುಕಿಯ ತೆರದಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡುವ  ಕಂಡಕ್ಟರು.. ಎಷ್ಟೋ ಸಲ ಇಳಿಯುವವರಿಂದ, ಹತ್ತುವವರಿಂದ ನನ್ನ ನೂರಾ ಮೂವತ್ತರ ಚಪ್ಪಲಿಯ ಮೇಲಾಗುವ ಘಾತಗಳು ಎಣಿಸಲಸದಳ.ಯಾರಾದರೂ ಸೀಟಿನಿಂದ ಎದ್ದರೆ ಆ ಸೀಟು ಹಿಡಿದು ಕುಳಿತುಕೊಳ್ಳುವ ಭರದಲ್ಲಿ  ಕೆಲವರಿಂದ ನನ್ನ ಚಪ್ಪಲಿಯ ಮೇಲೆ ಆಗುವ ಅತ್ಯಾಚಾರವನ್ನು ಹೇಗೆ ವರ್ಣಿಸಲಿ ?   ಆದರೂ ಅದು 'ಬಿಡೆನು ನಿನ್ನ ಪಾದ' ಎನ್ನುತ್ತಾ ನನ್ನ ಕಾಲಿಗೆ ಕಚ್ಚಿಕೊಂಡೆ ಇರುತ್ತದೆ..! ಇಲ್ಲಿಯ ವರೆಗೂ ಬಾರು ತುಂಡಾಗಿಲ್ಲ!!  ಕೆಲವೊಮ್ಮೆ ಯಕಶ್ಚಿತ   ಎನ್ನುವ  ವಸ್ತುಗಳೂ  ಎಷ್ಟೊಂದು  ಮಹತ್ವ ಪಡೆದುಕೊಂಡು ಬಿಡುತ್ತವೆ! 
ನಾನು ಹೆಣ್ಣು ಮಕ್ಕಳ ಸಂತೆಯಲ್ಲಿಯೇ ಕಳೆದು ಹೋಗುವುದರಿಂದ ಅಲ್ಲಿಯ ವಿದ್ಯಮಾನಗಳು ಮಾತ್ರಾ ನನ್ನ ಗಮನಕ್ಕೆ ಬರುತ್ತಿರುತ್ತವೆ.

 ತಂತಮ್ಮ ಜಾಗ ಬರುತ್ತಲೂ   ಜನರು ಮರಕತ ಮಣಿಗಳಂತೆ ಬಸ್ಸಿನಿಂದ  ಉದುರುದುರಿ  ಹೋಗುತ್ತಿರುವುದನ್ನು ನೋಡುತ್ತಾ ನಿಧಾನ ಉಸಿರು ಎಳೆದುಕೊಳ್ಳುತ್ತೇನೆ.   ಇಲ್ಲಿ ಪಿಕ್ ಪಾಕೆಟ್ ಮಾಡುವವರನ್ನು,  ಮೈ ಕೈ ತಾಗಿಸುವ ಕಾಮಣ್ಣರನ್ನು  [ಕೆಲವೊಮ್ಮೆ ಕಂಡಕ್ಟರ್ ಸಹಿತ ] ಬೇಕಿದ್ದರೆ ಹಾಲಾಹಲಕ್ಕೆ ಹೋಲಿಸೋಣ.
ಅಂತೂ ನನ್ನ ಸ್ಟಾಪು ಬರುವ ಹೊತ್ತಿಗೆ ನಾನು ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಮೆತ್ತಗಾಗಿರುತ್ತೇನೆ.  ನನ್ನ ನೂರಾ ಮೂವತ್ತು ರುಪಾಯಿ ಚಪ್ಪಲಿ ಮೆಟ್ಟಿಕೊಂಡ ಕಾಲು ಗಮ್ಯದತ್ತ ತೂರಾಡುತ್ತ ನಡೆಯಲಾರಂಬಿಸುತ್ತದೆ.   ಪ್ರತೀ ಸಲ ಬಸ್ಸು ಹತ್ತಿ ಇಳಿಯುವ ವರೆಗೆ   ಹೊಸದೊಂದು ಜನ್ಮ ಎತ್ತಿ  ಬಂದಂತೆ ಭಾಸವಾಗುತ್ತದೆ..!!

ವಂದನೆಗಳು.


















Sunday, October 13, 2013

ಅಂಧಕಾರವೂ.. ಜ್ಞಾನೋದಯವೂ ..

ಆ ಐ ಕೇರ್ ಸೆಂಟರಿನ ಕುರ್ಚಿಗೆ ತಲೆಯಾನಿಸಿ ಕೂತಿದ್ದೆ.  ಸ್ವಲ್ಪ ಹೊತ್ತಿನ ಮೊದಲು  ಕಣ್ಣಿಗೆ ಡ್ರಾಪ್ಸ್ ಹಾಕಿಸಿಕೊಂಡು..
ತಲೆಯಲ್ಲಿ ಸಾವಿರ ಯೋಚನೆಗಳು.. ಒಂದರ ಮೇಲೊಂದು, ಎಲ್ಲಾ ಒಟ್ಟೊಟ್ಟಿಗೆ, ಯಾವುದು ಮೊದಲು ಬರುತ್ತೆ ಯಾವುದು ಕೊನೆಗೆ ಗೊತ್ತಾಗದಷ್ಟು .
 ಇಷ್ಟು ನಡೆದಿದ್ದು,
 ನಮ್ಮ ಅತ್ತೆಯವರಿಗೆ ಕಣ್ಣಿನ ಪೊರೆಯ  ತೊಂದರೆ  ಶುರು ಆಗಿತ್ತು. ಸರಿ, ಐ ಸ್ಪೆಶಲಿಷ್ಟರಿಗೆ ತೋರಿಸುವುದು ಅಂತಾಯಿತು. ಹತ್ತಿರದಲ್ಲೇ ಒಂದು ಪ್ರಸಿದ್ಧ  ಐ ಕೇರ್ ಸೆಂಟರಿನಲ್ಲಿ ಚೆಕ್ ಮಾಡಿಸುವುದು ಅಂತ ತೀರ್ಮಾನವಾಯಿತು. ಇವರು ಹೇಳಿದರು, ''ಅಮ್ಮನ ಜೊತೆಯಲ್ಲೇ ನೀನೂ ಕಣ್ಣು ಟೆಸ್ಟ್ ಮಾಡಿಸಿಕೊಂಡು ಬಾ, ನಿನಗೂ ಕಣ್ಣಿನ ತೊಂದರೆ ಇದೆ ! ''
''ಅದು ಹೇಗೆ  ನನ್ನ ಕಣ್ಣಿನ ವಿಚಾರ ನಿಮಗೆ   ಗೊತ್ತಾಯಿತು..?'' ನನ್ನ ಪ್ರಶ್ನೆ..
''ನಾನು ಎದುರಿಗೇ  ಇದ್ದರೂ ಜೋರಾಗಿ ಕಿರುಚುತ್ತೀಯಲ್ಲ, ಅದಕ್ಕೆ ನಿನ್ನ ಕಣ್ಣೂ ಚೆಕ್ ಮಾಡಿಸ ಬೇಕು.. ತೊಂದರೆ ಇದ್ದೆ ಇದೆ..!!
ಅತ್ತೆಯ ಎದುರಿಗೇ ಹೇಳುತ್ತಾರೆ. ನೋಡಿ ಅಮ್ಮನ ಎದುರಿಗೆ ಮಕ್ಕಳಿಗೆ  ಧೈರ್ಯ ಜಾಸ್ತಿ.. 
  '' ಗಂಡಂದಿರಿಗೆ  ಕಿವಿ ದೂರ ಅನ್ನುವುದು ಲೋಕಕ್ಕೆಲ್ಲಾ ಗೊತ್ತು, ಕೂಗದೆ ಮತ್ತಿನ್ನೇನು? '' ನಾನು ಸುಮ್ಮನಿರಲಾ..?
''ಅದು ಹಾಗಲ್ಲ, ನಿನಗೆ ನಾನೆಲ್ಲೋ ದೂರದಲ್ಲಿದ್ದಂತೆ ಕಾಣಿಸುತ್ತದೆ, ಶಬ್ಧದ ವೇಗ ಕಡಿಮೆ,   ಅದಕ್ಕೆ ನೀನು ಕೂಗುವುದು ಅಂತ ನನಗೆ ಚೆನ್ನಾಗಿ ಗೊತ್ತು..''ಎಂದು ರಾಜಿಗೆ ಬಂದರು.. ಎಷ್ಟು ಒಳ್ಳೆಯವರು ..!!

ಸರಿ, ಇಷ್ಟೆಲ್ಲಾ ಆದಮೇಲೆ   ನಮ್ಮತ್ತೆಯವರನ್ನು ಕರೆದುಕೊಂಡು ಆ ಐ ಕೇರ್ ಸೆಂಟರಿಗೆ ಹೋದೆ. ಅಲ್ಲಿ ಅವರು ನಮ್ಮ ಹೆಸರು, ವಿಳಾಸ ತಗೊಂಡು ನಾ ನಿನ್ನ ಮರೆಯಲಾರೆ,  ಅನ್ನುತ್ತಾ ಕಂಪ್ಯೂಟರ್ ನಲ್ಲಿ  ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳುವ ವ್ಯವಸ್ಥೆ  ಮಾಡಿಕೊಂಡರು.
ನಮ್ಮ ಅತ್ತೆಯ ಪರೀಕ್ಷೆಯಾಯಿತು.. ಈಗ ನನ್ನ ಸರದಿ, ಐ ಟೆಸ್ಟಿಂಗ್  ಮಷೀನ್ ಮೇಲೆ ಗದ್ದ  ಊರಿ ಕೂರಲು ತಿಳಿಸಿ ಅದೇನೋ ಟೆಸ್ಟ್ ಮಾಡಿದ್ರು ಅಲ್ಲಿ ಒಬ್ರು ಲೇಡಿ. ಮತ್ತೆ ಇನ್ನೊಂದು ಮಷೀನ್, ಕಣ್ಣಿನ ಪ್ರೆಶರ್ ಟೆಸ್ಟ್ ಮಾಡುವುದು.  ಮತ್ತೆ  ಮಷೀನ್ ಗೆ ಗದ್ದ ಊರಿ ಕುಳಿತುಕೊಂಡೆ.  ''ಏನಿಲ್ಲ  ಸ್ವಲ್ಪ ಗಾಳಿ ಊದುತ್ತೇವೆ ಹೆದರಬೇಡಿ ಅಂದ್ರು.  ಸರಿ, ಸ್ವಲ್ಪ ಫೋರ್ಸ್ ಇಂದ ಕಣ್ಣಿಗೆ ಗಾಳಿ ಬಂತು. ನನಗೆ ಇಷ್ಟುದ್ದಾ ನಾಲಿಗೆ ಸುಳಿಯುವ ಹಸಿರು ಹಾವಿನ ನೆನಪಾಯಿತು.  ತೊಂಡೆ ಚಪ್ಪರದ ಮೇಲೆ, ಬೇಲಿಗೆ ಅಲ್ಲಿ ಇಲ್ಲಿ ಕಾಣ ಸಿಗುವ ಪಾಪದ ಹಾವನ್ನು ಕೆಲವು ತುಂಟ ಹುಡುಗರು ಬಾಲ ಹಿಡಿದು ತಿರುಗಿಸಿ ದೂರಕ್ಕೆ ಒಗೆಯುತ್ತಿದ್ದರು ..  ಆಗ ದೊಡ್ಡವರು  ಹಸಿರುಳ್ಳೆ  ಹಾವು   ಕಣ್ಣಿಗೆ ಊದುತ್ತೆ . ಕಣ್ಣು ಕುರುಡೇ ಆಗಿ ಬಿಡುತ್ತೆ ಅದರ ಸುದ್ದಿಗೆ ಹೋಗಬೇಡಿ ಎಂದು ಹೆದರಿಸುತ್ತಿದ್ದರು. ಯಾವತ್ತೂ ಯಾರಿಗೂ  ಅದು ಕಣ್ಣು ಊದಿದ್ದಿಲ್ಲ ಎಂತಿಲ್ಲ, ಆದರೂ ಊದಿದರೆ ಹೀಗೆ ಊದಬಹುದೇನೋ ಅನ್ನಿಸಿತು.

ಮತ್ತೆ ಅದರಿಂದ ರಿಪೋರ್ಟ್ ತೆಗೆದುಕೊಡುತ್ತಾ , ಸುಮ್ಮನೆ ಕೊಡಬಹುದಿತ್ತು.. ''ನಿಮಗೆ  ಪ್ರೆಶರ್ ಇದೆ ಅಂತೇನಾದ್ರೂ ಈ ಮೊದಲು  ಡಾಕ್ಟರ್ ಹೇಳಿದ್ರಾ ..? ''ಅಂತ ಲೋಕಾಭಿರಾಮವಾಗಿ ಆಕೆ ಕೇಳಿದರು.    ಅವರು ಕೇಳಿದ್ದೆ ಸರಿ,,  'ಇಲ್ಲವಲ್ಲ'  ಅಂತ ತಕ್ಷಣಕ್ಕೆ  ಅಂದು ಹೊರಬಂದರೂ ನನಗೆ ತಲೆಯಲ್ಲಿ ಹುಳ ಕೊರೆಯಲಾರಂಬಿಸಿತು.. ಒಂಥರಾ ವಿವರಿಸಲಾಗದ ದುಗುಡ,

ಈಗ ಇನ್ನೊಬ್ಬರು phoropter ನಲ್ಲಿ ಒಂದಿಪ್ಪತ್ತು ಲೆನ್ಸ್ ಗಳನ್ನೂ ಹಾಕಿ ತೆಗೆದು ಮಾಡಿ ದೃಷ್ಟಿ ಚೆಕ್ ಮಾಡಿದರು. ಆ ರಿಪೋರ್ಟ್ ನೋಡಿ,'' ಏನ್ರೀ  ಕಣ್ಣಿನ ಪ್ರೆಶರ್ ೨೩, ೨೨  ಇದೆ.. ''ಅಂತಾ ರಾಗ ಎಳೆದರು.. ನನ್ನ ತಲೆಯಲ್ಲಿ ಈಗ ಸಾವಿರ ಹುಳುಗಳ ನರ್ತನ..ಮತ್ತೊಮ್ಮೆ ಚೆಕ್ ಮಾಡಿಸಲು ಅದೇ ಪ್ರೆಶರ್ ಮಶಿನ್ನಿನ ಬಳಿ ಕಳಿಸಿದರು. ಆದರ ಪಾಲಕ ಅದಕ್ಕೆ ಇಯರ್ಬಡ್  ಹಾಕಿ ಧೂಳು ಎಲ್ಲಾ ಒರೆಸಿ ಮತ್ತೆ ಕಣ್ಣಿನ ಚೆಕ್ ಮಾಡಿದ..!
ಚೇರ್ ನಲ್ಲಿ ಕೂರಿಸಿ ಅತ್ತೆ ಮತ್ತು ನನಗೆ ಕಣ್ಣಿಗೆ ಅದೆಂತದೋ ಡ್ರಾಪ್ಸ್ ಬಿಟ್ಟು ಕೂರಿಸಿದರು.. ''ಕಣ್ಣು ಮುಚ್ಚಿ ಕುಳಿತುಕೊಳ್ಳಿ.. ಕೆಲವು ಘಂಟೆ ಕಣ್ಣು ಮಂಜಾಗಿರುತ್ತೆ.. ಕ್ಲಾರಿಟಿ ಇರೋಲ್ಲ..ಮುಕ್ಕಾಲು ಘಂಟೆ ಬಿಟ್ಟು ಕಣ್ಣಿನ ಡಾಕ್ಟ್ರು ಟೆಸ್ಟ್ ಮಾಡ್ತಾರೆ,'' ಅಂದರು.

ಈಗ ಕಣ್ಣಿನ ಮುಂದೆ ಅಂಧಕಾರ..!

ಇಲ್ಲಿಂದ ಶುರು ಆಲೋಚನೆಗಳ ಸಂತೆ..         ೨೩, ೨೨  ಪ್ರೆಶರ್ ಇದೆ ಅಂದರೆ ಏನರ್ಥ ..? ಗ್ಲೂಕೋಮ ಇದೆ ಅಂತ ಅಲ್ಲವೇ..? ಅಂದರೆ ಈಗಲೇ ಶುರು ಆಯ್ತು ಅಂದರೆ ಮುಂದೆ ಏನು ಕಥೆ,  ಕಣ್ಣೇ  ಕಾಣಿಸುತ್ತೋ ಇಲ್ವೋ,,? ಸ್ವಲ್ಪವಾದರೂ ಕಾಣಿಸಬಹುದ..? ಕಾಣಿಸದಿದ್ರೆ ಏನು ಮಾಡೋದು..? ಹೇಗೆ ಓದೋದು ? ಬರಿಯೋದು..? ಚಿತ್ರ ಬರಿಯೋದು ? ಕೆಲಸ ಮಾಡೋದು..? ಮಕ್ಕಳ ಹೋಂ ವರ್ಕ್ ಕಥೆ ಏನು..?   ಇಂಟರ್ ನೆಟ್ಟು , ಬ್ಲಾಗು, ಫೇಸ್ ಬುಕ್ಕು  ಕಥೆ ಏನು..?

ಅತ್ತೆ,  ಪಕ್ಕದಲ್ಲಿ ಕುಳಿತವರಿಗೆ ಅವರ ಸಂಕಟ ಅವರದ್ದು.. ಯಾವ ಕಾರಣಕ್ಕೂ ಇಲ್ಲಿಯವರೆಗೆ ಯಾವುದಕ್ಕೂ  ಆಪರೇಶನ್ ಗೀಪರೆಶನ್ ಗೆ ಒಳಗಾಗದ ಘಟ್ಟಿ  ಆರೋಗ್ಯವಂತ ಜೀವ ಅವರದು,  ಅಂತಾದ್ದರಲ್ಲಿ ಕಣ್ಣಿಗೆ ಪೊರೆ ಬಂದಿದೆ! ಅದನ್ನು ಆಪರೇಟ್ ಮಾಡಿ ತೆಗೆಯಬೇಕು ಅಂದಿದ್ದು ಮತ್ತು ಕೂಡಲೇ  ಮಾಡಿಸಬೇಕು ಅಂದಿದ್ದು ಅವರಿಗೆ ಸಿಕ್ಕಾಪಟ್ಟೆ  ತಲೆ ಬಿಸಿ ..  '' ವಿಜಯ, ಕಣ್ಣು ಒಂದು ಕಾಣಿಸುವುದಿಲ್ಲ  ಅಂದರೆ   ಮನುಷ್ಯ ಸತ್ತಂತೆ..'' ಅಂದರು!  ಅತ್ತೆ ಬೇರೆ ಹಾಗಂದರು.

ಹುಟ್ಟುಗುರುಡರಾದರೆ ಅದೊಂದು ಕಥೆ, ಈಗ ಮಧ್ಯದಲ್ಲಿ ಈ ಗ್ಲೂಕೋಮ   ಅನ್ನುವ ರಾಕ್ಷಸನ ಕೈಯಲ್ಲಿ ಸಿಲುಕಿ ಕಣ್ಣೆ ಹೋಗಿಬಿಟ್ಟರೆ ?  ಯಾಕೋ ಒಂಟಿ ಕಣ್ಣಿನ ರಾಕ್ಷಸನ ಕಥೆ  ನೆನಪಾಯಿತು. ಈಗ ನನ್ನ ಕಣ್ಣು ಪೂರಾ ಹೋಯಿತು ಅಂತಿಟ್ಟುಕೊಳ್ಳೋಣ. ಅಡುಗೆ ಮಾಡೋದು ಹೇಗೆ..? ಅಲ್ಲ ಒಂದು ರೂಮಿಂದ ಇನ್ನೊಂದು ರೂಮಿಗೆ ಓಡಾಡೋದು ಹೇಗೆ..? ನಿಧಾನ ಕಲಿತುಕೊಳ್ಳಬೇಕು. ಚಿತ್ರ ಬರೆಯೋದು ಮಾತ್ರ ಕಷ್ಟ ಆಗಬಹುದು.ಯಾವುದೋ ಅಂಧ ಆರ್ಟಿಸ್ಟ್  ಬಗ್ಗೆ  ಎಲ್ಲೋ ಓದಿದ್ದು ಮಸುಕಾಗಿ ನೆನಪಾಯಿತು. ಎಷ್ಟೋ ಕಾದಂಬರಿಗಳು ಓದದೇ ಇರುವುದು ಸಾಕಷ್ಟಿವೆ.   ಮೊದಲು ಬ್ರೈಲ್ ಕಲಿತುಕೊಳ್ಳಬೇಕು. ಅದಕ್ಕೂ ಮೊದಲು ಕೋಲು ಬೇಕಲ್ಲ..!     ಪ್ರತಿಯೊಂದಕ್ಕೂ ಅವರಿವರನ್ನು  ಆಶ್ರಯಿಸುವುದು ಕಷ್ಟ ಕಷ್ಟ . ಹತ್ತು ಹಲವು ಬಗೆಯ ಸಂಕಟಗಳು.  ಹಾಳಾಗ್ಲಿ  ಫೇಸ್ ಬುಕ್ ನೋಡುವುದು ಹೇಗೆ..?  ಸುಮಾರು ದಿನ ಯಾವುದೇ ಸ್ಟೇಟಸ್,  ಪ್ರೊಫೈಲ್ ಚಿತ್ರ  ಚೇಂಜ್ ಇರದಿದ್ದುದನ್ನು ನೋಡಿ ಫೇಸ್ ಬುಕ್ಕಿನ ಫ್ರೆಂಡ್ಸ್,  ಅಂತಃಪುರದ ಸಖಿಯರು  ಎಲ್ಲಿ,  ಎಲ್ಲಿ ವಿಜಯಶ್ರೀ?   ಅನ್ನಬಹುದು.. ಆಮೇಲೆ ಹೇಗೋ   ಹೀಗೆ  ಆಗಿ ಹೀಗಾಗಿದೆ ಅಂತ ಸುದ್ದಿ ಹೋಗಿರುತ್ತೆ.. ಅಯ್ಯೋ ಪಾಪ, ಹೀಗಾಗ್ಬಾರ್ದಿತ್ತು,  ಅಂತ ಅವರೆಲ್ಲಾ ಅಲವತ್ತು ಕೊಳ್ಳುತ್ತಿರಬಹುದಾ..? ನನಗೆ ಕಾಣಿಸಲ್ವೆ.  :)   ನನ್ನ ಕಣ್ಣಿನ ಬಗ್ಗೆ ಹೀಗೆ  ಒಂದಷ್ಟು ಶ್ರದ್ಧಾಂಜಲಿ  ಕಾಮೆಂಟುಗಳು ಇರಬಹುದೇ..?    :)  ಎಲ್ಲದಕ್ಕೂ ಸೊಲ್ಯುಶನ್ಸ್ ಇರುತ್ತೆ ಸುಮ್ನಿರೇ,  ಅಂದ ಹಾಗಾಯ್ತು ಇವರು ಕಿವಿಯಲ್ಲಿ..

ಆಲೋಚನೆಗಳು ಸಾಗುತ್ತಾ ಸಾಗುತ್ತಾ ಇರುವಂತೆಯೇ ಡಾಕ್ಟರು ನಮ್ಮನ್ನು ಕರೆದು ಆಪ್ಥಾಲ್ಮೊಸ್ಕೊಪಿ ಯಿಂದ ಕೂಲಂಕುಶವಾಗಿ ಟೆಸ್ಟ್ ಮಾಡಿ,  ಅಷ್ಟೊತ್ತಿಗೆ ಪುನಃ ಮಾಡಿಸಿದ ಟೆಸ್ಟ್ ರಿಪೋರ್ಟ್ ಕೂಡಾ ಬಂದಿದ್ದು ಪ್ರೆಶರ್ ನಾರ್ಮಲ್   ಇತ್ತು.. ಎಂತ ಸಮಸ್ಯೆಯೂ ಇಲ್ಲ..ಗ್ಲೂಕೊಮಾವೂ  ಇಲ್ಲ, ಕೊಮಾವೂ  ಇಲ್ಲ ಅಂತ ರಿಪೋರ್ಟ್ ಕೊಟ್ಟರು.  ಹ್ಹಾ ... ಸುಮ್ಮನೆ ಇಷ್ಟೊತ್ತು ತಲೆ ಹಾಳು ಮಾಡಿಕೊಂಡಿದ್ದೆ ಬಂತು.   ಸುಖಾ ಸುಮ್ಮನೆ  ಹುಳಬಿಟ್ಟಿರಿ,  ಅಂತ ಆ ಡಾಕ್ಟರಿಗೆ ಹೇಳಿಯೇ ಹೊರ ಬಂದೆ.ಕರೆದು ಕೊಂಡು  ಹೋಗಲು ಬಂದ ನನ್ನವರ ಮೇಲೆ ಈಗ ಸಿಟ್ಟು. ಅವರೇ ಕಳಿಸಿದ್ದಲ್ವಾ..? ಮುಕ್ಕಾಲು ಘಂಟೆಯ ಅಂಧಕಾರದಲ್ಲಿ ಎಷ್ಟೆಲ್ಲಾ  ಅನುಭವ.. 

ನೋಡಿ, ಈ ದುಗುಡ ಅನ್ನುವುದು ಸುಮ್ಮನೆ ಗೊತ್ತಿಲ್ಲದೇನೆ ಮನಸ್ಸಿನೊಳಗೆ ಸೇರಿಕೊಂಡು ಬಿಡುತ್ತೆ.. ಎಲ್ಲದಕ್ಕೂಈ ಕಾಲದಲ್ಲಿ   ಪರಿಹಾರ ಇದೆ ಅನ್ನುವುದು ಗೊತ್ತಿದ್ದರೂ ಸುಮ್ಮನೆ ಉದ್ವೇಗ,
  ಈ ಭಾವಗಳು  ಒಂಥರಾ ನಮಗೆ ಗೊತ್ತಿಲ್ಲದೇನೆ ನಮ್ಮನ್ನು ಆಳುತ್ತಿರುತ್ತದೆ. ಭಯ, ಗೊಂದಲ, ದುಗುಡ,  ಉದ್ವೇಗ ಹೀಗೆ. ಕೆಲವೊಮ್ಮೆ ಎಲ್ಲವೂ !  ಪರಿಹಾರ ಇದೆ ಅನ್ನುವುದು  ಗೊತ್ತಿಲ್ಲದ್ದೇನೂ ಅಲ್ಲ.   ಸುಮ್ಮ ಸುಮ್ಮನೆ ತಲೆ ಬಿಸಿ ಮಾಡುತ್ತಿರುತ್ತದೆ..  ಎಷ್ಟೋ ಸಲ ನಮಗೆ ಆಗುತ್ತಿರುವ ಭಾವ  ಏನು  ಅಂತ ಗೊತ್ತಾಗುವುದೂ ಇಲ್ಲ..   ಬೇರೆಯವರ ವಿಚಾರದಲ್ಲಾದರೆ  ಕೆಲವೊಮ್ಮೆ  ಅದಕ್ಕೆ ಜಾಗ್ರತೆ ಅನ್ನುವ ಹೆಸರು ಕೊಟ್ಟು ಮರ್ಯಾದೆ ಉಳಿಸಿಕೊಳ್ಳಬಹುದು ಬೇಕಿದ್ದರೆ.  ಕೆಟ್ಟ ಅಡುಗೆಯ ಮೇಲೆ ಕಾಯಿ ತುರಿ, ಕೊತ್ತಂಬರಿ ಸೊಪ್ಪಿನ ಅಲಂಕಾರ ಮಾಡಿದ ಹಾಗೆ.


 ಮೊನ್ನೆ ಉತ್ತರ ಭಾರತದ ಕಡೆ ಪ್ರವಾಸ ಹೋಗಿದ್ದೆವಲ್ಲ.. ಮಧ್ಯದಲ್ಲಿ ನಮ್ಮ ಟ್ಯಾಕ್ಸಿಯವನು ಯಾವುದೋ ಒಂದು  ಹೋಟೆಲ್ ಗೆ ಕರೆದೊಯ್ದ. ನೋಡುತ್ತಿದ್ದಂತೆಯೇ   ನಾಲ್ಕಾರು ಅಂಧ ಕುಟುಂಬಗಳು ಅದೇ ಹೋಟೆಲಿಗೆ ಬಂದವು..  ಗಂಡ, ಹೆಂಡತಿ ಇಬ್ಬರೂ ಕುರುಡರೇ, ಮಕ್ಕಳು ಮಾತ್ರಾ ಅಲ್ಲ.. ಅವರಿಗೆ ಶಬ್ಧ ಮಾಧ್ಯಮವೇ ಮುಖ್ಯ.  ಹೋಟೆಲಿನಲ್ಲಿ ಗೌಜು.  ಹೋಟೆಲ್ ಸೂಪರ್ವೈಸರ್ ಕೂಡಾ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದ ಕಾಣುತ್ತೆ..    ನಮಗೆ  ಊಟ ಮಾಡುವುದಕ್ಕಿಂತ ಅವರನ್ನು ಗಮನಿಸುವುದೇ ಸೋಜಿಗದ ವಿಚಾರವಾಗಿತ್ತು.   ಕಣ್ಣಿದ್ದವರಾಗಿದ್ದರೆ ಯಾಕ್ಲಾ .. ಗುರಾಯಿಸ್ತೀಯಾ.. ಹೆಂಗೈತೆ ಮೈಗೆ?  ಅನ್ನುವಷ್ಟು.    ಅವರು ಊಟ ಮಾಡುವಾಗ ಬಟ್ಟಲನ್ನು  ಹೇಗೆ ನಿಧಾನಕ್ಕೆ ತಡವಿ  ಪರೀಕ್ಷಿಸುತ್ತಾರೆ.    ರೋಟಿ, ದಾಲ್ . ಸಬ್ಜಿ ಗಳನ್ನೆಲ್ಲಾ ಕೈ ಬೆರಳುಗಳಿಂದ ಮುಟ್ಟಿದಿಕ್ಕು ಗುರುತಿಸಿಕೊಂಡರು.    ಎಲ್ಲರೂ ಅದೆಷ್ಟು ಆತ್ಮ ವಿಶ್ವಾಸದಿಂದಿದ್ದರು  ಅಂದ್ರೆ   ನನಗೆ   ಐ ಕೇರ್ ಸೆಂಟರಿನ ಕಥೆ ನೆನಪಾಗಿ ನಗು ಬಂತು. ಯಾರೊಬ್ಬರೂ ಕಂಬ , ಟೇಬಲ್ಲು, ಕುರ್ಚಿ ಇನ್ನಿತರೇ ವಸ್ತುಗಳನ್ನು ಎಡವಲಿಲ್ಲ.. ಬೀಳಲಿಲ್ಲ.. ಯಾರಿಗೆಲ್ಲಾ ಫೋನ್ ಮಾಡಿದರು..! ಮನಸ್ಸು ಒಂಥರಾ ಒದ್ದೆ ಒದ್ದೆ .   ನನ್ನ ಮಗಳು  ತಮ್ಮನಿಗೆ ಹೇಳುತ್ತಿದ್ದಳು.. ಅವರು ಮೊಬೈಲನ್ನು ಬಳಸುವ ಬಗೆ ಕುರಿತು .. ಐದು ಸಂಖ್ಯೆಯ ಮೇಲೊಂದು ಚುಕ್ಕಿ ಇರುತ್ತೆ, ಅದನ್ನು ಗುರುತಿಸಿಕೊಂಡು  ಅದರ ಆಚೀಚೆ, ಮೇಲೆ ಕೆಳಗೆ  ಇರುವ ಸಂಖ್ಯೆಗಳನ್ನು  ನೆನಪಿಟ್ಟುಕೊಂಡು ಬಳಸುತ್ತಾರೆ ಅಂತ..
ಅವರ ಸೂಕ್ಷ್ಮತೆಗೆ,  ಆತ್ಮ ವಿಶ್ವಾಸಕ್ಕೆ ಶರಣು ಶರಣೆನ್ನುವೆ..  

 ಜೀವನ ಅನ್ನುವುದು ಯಾವ್ಯಾವುದೋ ಸಂದರ್ಭದಲ್ಲಿ  ಏನೇನನ್ನೋ ಕಲಿಸುತ್ತೆ !   ಗೊತ್ತಿಲ್ಲದೇನೇ,  ಕಷ್ಟ ಪಡದೇ  ಜ್ಞಾನದ ಹನಿ ಶೇಖರವಾಗುತ್ತೆ ತುಸುವಾದರೂ. 

 ಹೀಗೆ ಅಲ್ಪ ಸ್ವಲ್ಪ ಜೀವನವನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ   ಅನ್ನುವ ಹೆಮ್ಮೆಯೊಂದಿಗೆ ನಾನಿರಬೇಕಾದರೆ  ನನ್ನ ಬ್ಲಾಗು   ನಾಲ್ಕು ಕಳೆದು ಐದನೇ  ವರ್ಷಕ್ಕೆ ಕಾಲಿಡುತ್ತಾ ಇದೆ ಅನ್ನುವ ಜ್ಞಾನವೂ ಆಗಿ ಅದನ್ನೇ ಎಲ್ಲರಲ್ಲಿ   ಟಾ೦  .. ಟಾ೦ ಹೊಡೆಯುತ್ತಿದ್ದೇನೆ.

ವಂದನೆಗಳು.  


Friday, August 23, 2013

ನಮ್ ಕಾಲು ನಾವೇ ಎಳ್ಕೊಂಡ್ರೆ ಹೇಗಿರುತ್ತೆ ..!! ?


 ಗೆಳತಿ ಜಯಲಕ್ಷ್ಮಿ ಶೇಖರ್ ಯಾವತ್ತೂ ಹೇಳ್ತಿರ್ತಾರೆ ,  ''ವಿಜಯ ನಮ್ಮ ಕಾಲನ್ನು ನಾವೇ ಎಳ್ ಕೊಳ್ಳೋದು ಕಷ್ಟ ಕಣ್ರೀ, ಆದ್ರೆ ನೀವು ನಿಮ್ಮ ಕಾಲನ್ನೇ  ಎಷ್ಟ್ ಚನ್ನಾಗಿ ಎಳ್ಕೊತೀರ ಅಂತೆಲ್ಲಾ.  ನನಗೆ ಆಶ್ಚರ್ಯ,  '' ನಾನ್ಯಾವಾಗ ನನ್  ಕಾಲ್ ಎಳ್ಕೊಂಡೆ,  ಇವ್ರ್ಯಾವಾಗ ನೋಡಿದ್ರು  ಅಂತಾ.''   ಆದರೂ 'ಚನ್ನಾಗಿ' ಅಂತ ಹೇಳಿದ್ರು ಅಂತ ನಾನು ಯಾರೂ ಇಲ್ಲದಾಗ ನನ್ನ ಕಾಲು   ನಾನೇ ಎಳೆದುಕೊಳ್ಳುವ   ಪ್ರಯೋಗ ಶುರುಮಾಡಿದೆ . ನನ್ನ ಕೈಗೆ ಕಾಲೇ ಎಟುಕಲಿಲ್ಲ.  ಎನ್ಮಾಡಲಿ ..?  ಬೇಜಾರಾಗೊಯ್ತು. ಮನಸ್ಸೆಲ್ಲಾ ಬ್ಲಾಂಕು ..ಸೊನ್ನೆ,   . ತಲೆ ಪೂರಾ ಶೂನ್ಯ..   ಜಯಲಕ್ಷ್ಮಿ ಸುಳ್ಳೇ ಹೇಳಿದ್ದಾರೆ   ಅಂತ ತಲೆ ಮೇಲೆ ಕೈ ಹೊತ್ತು ಕೂತೆ.   ಪ್ರಾಕ್ಟಿಕಲ್ ಫೇಲು .. ಥಿಯರಿನಾದ್ರೂ ಬರಿಯೋಣ ಅಂದುಕೊಂಡು ಪೆನ್ನು ತಗೊಂಡಿದ್ದಕ್ಕೆ   ಹೀಗಾಯ್ತು  ನನ್ನ ಕಥೆ.   ನನ್ನ ಕಾಲು ನಾನೇ ಎಳೆದುಕೊಂಡರೆ, ಎಳೆದುಕೊಳ್ಳುತ್ತಾ ಇದ್ದರೆ ನಾನು ಹೀಗೇ ಕಾಣಬಹುದು  ಸೊನ್ನೆ ಥರಾ,  ಅನ್ನುವ ಇಮ್ಯಾಜಿನೆಷನ್ನು... :) :)   







Thursday, July 11, 2013

ನಂಬಿದ್ರೆ ನಂಬಿ ಬಿಟ್ರೆ ಬಿಡಿ ... ಇದು ಜಿಲೇಬೀನೆ.




ಸತ್ಯವನ್ನೇ ನುಡಿಯುತ್ತೇನೆ. ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ.. ಇದು ಜಿಲೇಬಿ...!!!!  ಹಾಗಂತ ಹೇಳುವ ಪರಿಸ್ಥಿತಿ ಆಗಿಹೋಯ್ತು  ಹೀಗೊಮ್ಮೆ ನನ್ನ ಅಡುಗೆ ಪ್ರಯೋಗಕ್ಕೆ ಒಳಗಾಗಿ. 

ಊರಿಗೆ ಹೋದಾಗ ಹೀಗೆ ಸುಮ್ಮನೆ ಅದು ಇದು ಮಾತನಾಡುವ ಸಮಯದಲ್ಲಿ ಜಿಲೇಬಿ ವಿಚಾರ ಬಂದಿತ್ತು.   ಮತ್ತು ಅದನ್ನು ಮಾಡುವ ವೀರೋಚಿತ ಆಲೋಚನೆಯೂ ಹೊರ ಹೊಮ್ಮಿತು.  ಈ ಸಲ ಉಳಿದಿದ್ದು ಕಡಿಮೆ ಮತ್ತು ಬರೀ ಮದುವೆ ಮನೆ ಸೀಜನ್ನೇ  ಆಗಿ  ಊರಲ್ಲಿ ಅದು ನಮ್ಮ ಪ್ರಯೋಗಕ್ಕೆ ಒಳಗಾಗಲೇ ಇಲ್ಲ. ಅದೂ ಅಲ್ಲದೆ ಆ ಥರಾ ಮದ್ವೆ ಮನೆಗಳಲ್ಲಿ  ಸ್ವೀಟುಗಳನ್ನು  ತಿಂದೂ ತಿಂದೂ , ನೋಡೀ ನೋಡೀ, ನಾಲಗೆ ಕೆಟ್ಟುಹೋಗಿ   ಹೊಸ ಪ್ರಯೋಗ ಮಾಡಲು ಆಗ ಮನಸ್ಸೂ ನೆರವಾಗಲಿಲ್ಲ. ಆದರೂ ಸ್ಕೆಚ್ ಹಾಕಿದ್ದು ಹಾಗೆಯೇ  ಮನದಲ್ಲಿ   ಉಳಿದುಕೊಂಡಿತ್ತು. ಹಿಂತಿರುಗಿದ ಮೇಲೆ ಒಂದು ಶುಭ ಮುಂಜಾನೆ ಯಾಕೋ ಇದ್ದಕ್ಕಿದ್ದಂತೆ ಜಿಲೇಬಿಯ  ನೆನಪಾಗಿ ನನ್ನ ಸಾಮರ್ಥ್ಯವನ್ನು ಒರೆ ಹಚ್ಚುವ ಕಾಲ ಕೂಡಿ ಬಂತು. ಮಕ್ಕಳನ್ನೆಲ್ಲಾ ಶಾಲೆಗೇ ಕಳಿಸಿದವಳು  ನೆಟ್ ಮುಂದೆ ಕುಳಿತು ಅಲ್ಲಿ ಇಲ್ಲಿ ಜಾಲಾಡಿ ಅಂತೂ ಯೂ ಟ್ಯೂಬ್ ನ ಸಹಾಯದಿಂದ ಜಿಲೇಬಿ ಮಾಡಲು ಏನೇನು, ಎಷ್ಟೆಷ್ಟು ಬೇಕು ಅನ್ನುವ ಲಿಸ್ಟ್ ತಗೊಂಡು ಮೊದಲನೇ ಹೆಜ್ಜೆ ಇಟ್ಟೆ. ಮೈದಾಹಿಟ್ಟು, ಅರಿಶಿನ, ಸ್ವಲ್ಪ ಮಜ್ಜಿಗೆ  ಬೆರೆಸಿ ಕಲೆಸಿ ಹಿಟ್ಟನ್ನು ಹುಳಿ  ಬರಲು ಇಪ್ಪತ್ನಾಲ್ಕು ಘಂಟೆ ಬಿಡಬೇಕು ಅಂತ ಇತ್ತು. ಹಾಗೆಯೇ  ಮಿಕ್ಸ್ ರೆಡಿ ಮಾಡಿದವಳಿಗೆ ಸುಮಾರು ಎರಡು ಘಂಟೆ ಕಳಿಯುವ   ಹೊತ್ತಿಗೆ ಎಷ್ಟೊತ್ತಿಗೆ ಇಪ್ಪತ್ನಾಲ್ಕು ಘಂಟೆ ಆಗುತ್ತದೋ ಎನ್ನುವ ಯೋಚನೆ ನಿಮಿಷ ನಿಮಿಷಕ್ಕೂ ಬರಲು ತೊಡಗಿತು. ಯಾವುದಾದರೂ ತಲೆಗೆ ಹಾಕಿಕೊಂಡರೆ ಅದು ಮುಗಿಯುವ ವರೆಗೆ ಒಂಥರಾ ರೆಸ್ಟ್ ಲೆಸ್ ನೆಸ್ ...     ಅಂತೂ ಸಾಯಂಕಾಲದ ಹೊತ್ತಿಗೆ ಏನಾದರಾಗಲಿ ಸ್ವಲ್ಪ ಜಿಲೇಬಿ  ಮಾಡಿ ನೋಡೋಣ ಅನ್ನುವ ಆತುರ ಶುರು.ಎಲ್ಲಾ ಸರಿ  ಸಕ್ಕರೆ ಪಾಕ ಮಾಡಿಟ್ಟುಕೊಂಡು ನೋಡ್ತೇನೆ ಎಣ್ಣೆ ಸ್ವಲ್ಪವೇ ಇದೆ ..!! ನಮ್ಮನೆಯಲ್ಲಿ ಕರಿಯುವ ಪದಾರ್ಥಗಳು ಸಾಮಾನ್ಯವಾಗಿ ಕಡಿಮೆಯಾದ್ದರಿಂದ ಒಮ್ಮೊಮ್ಮೆ ಹೀಗೆಲ್ಲಾ ಎಡವಟ್ಟು ಆಗಿ ಬಿಡುತ್ತದೆ. ಮೊದಲನೇ ಅಪಶಕುನ ಹೀಗಾಯ್ತು. ಹತ್ತಿರದ  ಒಂದೆರಡು ಅಂಗಡಿಗಳಿಗೆ ಫೋನ್ ಮಾಡಿ ಕೇಳಿದ್ರೆ  ನಾನು ಬಳಸುವ ಬ್ರಾಂಡಿನ ಎಣ್ಣೆ ಇರಲಿಲ್ಲ.ಹೀಗೆ  ಎಣ್ಣೆ ಹತ್ತಿರದಲ್ಲೆಲ್ಲೂ ಸಿಗದ ಕಾರಣ ಯಾವಾಗಲೂ ತರುವ ದೂರದ  ಅಂಗಡಿಯನ್ನೇ ಆಶ್ರಯಿಸುವಂತಾಯ್ತು. ಅಷ್ಟೊತ್ತಿಗೆ ಆಫೀಸಿನಿಂದ ಬಂದ  ನನ್ನವರ ಕೈ ಕಾಲು ಹಿಡಿದು ಅವರ ಜೊತೆ ನಾನೇ  ಖುದ್ದು  ಹೋಗಿ ಎಣ್ಣೆಯೊಂದಿಗೆ ಮತ್ತೊಂದಿಷ್ಟು ಸಾಮಾನುಗಳನ್ನೂ ತಂದಾಯ್ತು.

ಈಗ ಎರಡನೇ ಹಂತಕ್ಕೆ ಪ್ರವೇಶ ..!   ಬಂದವಳೇ   ಒಂದು ಹಾಲು ಕವರ್ ನ ಒಂದು ಮೂಲೆಯ  ತುದಿಯನ್ನು ಸ್ವಲ್ಪವೇ ಕತ್ತರಿಸಿ ಜಿಲೇಬಿ ಹಿಟ್ಟನ್ನು ಅದರಲ್ಲಿ ತುಂಬಿ ಎಣ್ಣೆಗೆ ಬಿಡಲು ಸಿದ್ಧ ಮಾಡಿಕೊಂಡೆ. ಫ್ಲಾಟ್ ಪ್ಯಾನ್ ಗೆ ಎಣ್ಣೆ ಹುಯ್ದು ಎಣ್ಣೆ ಕಾದ ನಂತರ ಭಾರೀ ಪ್ರೊಫೆಶನಲ್ ಥರಾ  ಜಿಲೇಬಿ ಹಿಟ್ಟು  ತುಂಬಿದ ಹಾಲು ಕವರನ್ನು ಹಿಡಿದು ಎಣ್ಣೆಯಲ್ಲಿ ನಿಧಾನಕ್ಕೆ  [ ಹಾಗಂತ ನಾನಂದುಕೊಂಡಿದ್ದು]    ಹಿಟ್ಟನ್ನು ಬಿಡ ತೊಡಗಿದೆ. ಎರಡು ಸುತ್ತು  ಸುತ್ತಿ ಮಧ್ಯ  ಒಂದು ಗೆರೆ ಥರ ಹಾಕಬೇಕು ಅನ್ನುವುದು ನೋಡಿ, ಓದಿ ಕಲಿತ ಅನುಭವ .. ! ಕಾರ್ಯಕ್ರಮಗಳಲ್ಲಿ ಜಿಲೇಬಿ ಮಾಡುವವರನ್ನು ನೋಡಿ 'ಓ ಜಿಲೇಬಿ  ಬಿಡುವುದು  ಭಾರೀ ಸುಲಭ,'  ಅನ್ಕೊಂಡಿದ್ದೆ. ಪಾಕ ಒಂದು ಸರಿ ಹದ ಬರಬೇಕು,  ಅಂತ ಯಾರೋ ಹೇಳಿದ್ದು ಕೇಳಿಸಿಕೊಂಡಿದ್ದೆ. ಯಾವುದಾದರೂ ಕಾರ್ಯದ ಮನೆಯಲ್ಲಿ ಜಿಲೇಬಿ ಹದ ಸರಿ ಇಲ್ಲದಿದ್ದರೆ 'ಎಲ್ಲಾ ಪಾಸು,   ಜಿಲೇಬಿ ಮಾತ್ರಾ ಫೇಲು,'   ಅಂತ ಯಾರೂ ಕೇಳದಿದ್ದರೂ ನನ್ನ ಅಮೂಲ್ಯ ಕಾಮೆಂಟನ್ನು  ಹೊತ್ಹಾಕುತ್ತಿದ್ದೆ.
 ಮೊದಲ ಸಲ ಎಣ್ಣೆಗೆ ಜಿಲೇಬಿ ಹಿಟ್ಟು ಬಿಡುತ್ತಿದ್ದಂತೆ,   ಎರಡು  ಸುತ್ತು  ಹೋಗಲಿ,  ಜಿಲೇಬಿ ಎಣ್ಣೆಯಲ್ಲಿ ಮುಳುಗೇಳುತ್ತಾ ಸುನಾಮಿಯಲ್ಲಿ ಸಿಕ್ಕ ಬಾಳೇ ಎಲೆಯಂತೆ ಛಿದ್ರ ಛಿದ್ರ ವಾದಂತೆ ತೋರತೊಡಗಿತು. ಬಿಟ್ಟ ಕಣ್ಣುಗಳಿಂದ ನೋಡುತ್ತಾ ಇರುವಷ್ಟರಲ್ಲಿ ಅದು ಬೆಂದಿರ ಬಹುದೆಂಬ ಸೂಕ್ಷ್ಮ ತಲೆಗೆ ಬಂದು ಅಂತೂ ಇಂತೂ ಅಷ್ಟಾ ವಕ್ರನ೦ತಿದ್ದ ಆಕಾರವೊಂದು ಪಾಕಕ್ಕೆ ವರ್ಗಾವಣೆಯಾಯಿತು. ಸಕ್ಕರೆ ಪಾಕದಲ್ಲಿ ಅದ್ದಿ ಅದನ್ನು ಹೊರಗೆ ತೆಗೆದಿಟ್ಟು ಮತ್ತೆ ನನ್ನ ಎರಡನೆಯ  ಪ್ರಯತ್ನಕ್ಕೆ ತಯಾರಾದೆ. ಈ ಸಲ ಹಿಟ್ಟು  ಎಣ್ಣೆಗೆ  ಬೀಳುತ್ತಿದ್ದಂತೆ ಜಿಲೇಬಿಯ  ಎಳೆ   ಪ್ಯಾನಿನ ಸುತ್ತಲೂ ಓಡಿ  ತನ್ನಷ್ಟಕ್ಕೆ ಒಂದೇ ಒಂದು ಸುತ್ತು ಆಯಿತು.  ಹಿಟ್ಟು ಒತ್ತುತ್ತಾ ಇರುವಾಗಲೇ  ನನ್ನನ್ನು  ನೋಡಿದ್ದಿದ್ದರೆ   ಕಾಳಿಂಗನ ಜುಟ್ಟು[?] ಹಿಡಿದುಕೊಂಡ ಕೃಷ್ಣನಂತೆ ಕಾಣುತ್ತಿದ್ದೆನೇನೋ...! ಇದೂ ಒಂದು ಆಯಿತು.  ಈಗ ಇನ್ನೊಮ್ಮೆ , ಮಗದೊಮ್ಮೆ . ಯಾವತ್ತೂ ನಾನು ಅಷ್ಟೆಲ್ಲಾ ಸುಲಭಕ್ಕೆ ಸೋಲೋಪ್ಪಿಕೊಳ್ಳುವವಳೇ ಅಲ್ಲ. ಮೂರನೇ ಸಲ ಭಾರೀ ಗಮನ ಇಟ್ಟು ಎರಡು ಸುತ್ತು ಬಿಟ್ಟು ಮಧ್ಯ ಗೆರೆ ಎಳೆಯುವ ಹೊತ್ತಿಗೆ ನಾನು ಬಿಟ್ಟಿದ್ದೆಲ್ಲೋ ಗೆರೆ ಬಿದ್ದಿದ್ದೆಲ್ಲೋ ಆಗಿ ಅದೂ ಕೂಡಾ ನವ್ಯ  ಚಿತ್ರವಾಯಿತು.  ಮತ್ತೊಮ್ಮೆ ಎಲ್ಲಾ ಹಿಟ್ಟು ಮೇಲೆ ಮೇಲೆಯೇ ಬಿದ್ದು ಜಿಲೇಬಿ ಹೋಗಿ  ದೋಸೆ  ಥರಾ..!  ಅದನ್ನು ಹೊರ ತೆಗೆದವಳು ನಾನು ಬೇಜಾರು ಮಾಡಿಕೊಳ್ಳದೆ 'ಮಾಲ್ಪುವಾ ' ಥರಾ ಆಗಿದೆ ಎಂದು ಸಮಾಧಾನ ಪಟ್ಟುಕೊಂಡೆ. ಎಡಿಸನ್ ಬಲ್ಬ್ ಕಂಡು ಹಿಡಿಯುವ ಪ್ರಯತ್ನದಲ್ಲಿದ್ದಾಗ ಹೀಗೆಯೇ ಎಡವಟ್ಟಾಗಿ ಅದೆಷ್ಟು ಹೊಸ ಹೊಸ ವಸ್ತುಗಳ ಸಂಶೋಧನೆಗಳಾಗಿಲ್ಲ..!!  ಹೀಗೆ  ಜಿಲೇಬಿ ಬಿಡುವ ಕೌಶಲ್ಯ  ಪ್ರಯೋಗಗಳ ಮೇಲೆ ಪ್ರಯೋಗ  ನಡೆದು ಒಂದು ಹಂತಕ್ಕೆ ಬರುವ ಹೊತ್ತಿಗೆ  ಹಿಟ್ಟು ಖಾಲಿಯಾಯ್ತು..!  ಜಿಲೇಬಿ ಮಾಡೋದು ಏನ್ ಮಹಾ ಎನ್ನುವ ನನ್ನ ಅಹಂಕಾರವೂ ಕರಗಿ ಹೋಯ್ತು.  
ಇನ್ನು ಮೂರನೇ ಹಂತ,  ಸಕ್ಕರೆ ಪಾಕದಿಂದ ತೆಗೆದಿಟ್ಟ ಜಿಲೇಬಿ[?] ಎನ್ನುವ ವಸ್ತುವಿನ ರುಚಿ ನೋಡ ಬೇಡವೇ ? ಮೊದಲು ನನ್ನ ಮಗಳಿಗೆ ಕೊಟ್ಟೆ. ಅಮ್ಮ ಜಿಲೇಬಿ ಮಾಡುತ್ತಾಳೆ ಅಂತ ಕಾದು   ಕುಳಿತುಕೊಂಡಿದ್ದಳು. ತಿನ್ನಲು ಬಯಸಿ ಅಂತ ಏನೂ ಅಲ್ಲ, ಜಿಲೇಬಿ ಏನಾಗಬಹುದು ಎನ್ನುವ ಸಣ್ಣ ಅನುಮಾನದಲ್ಲಿ.  ಒಂದು  ಎಳೆ  ತಿಂದವಳೇ 'ಓ ಭಾರೀ ಚನಾಗಿದೆ,  ಆಸ್ಸಮ್,   ಸ್ವಲ್ಪ ಮೆತ್ತಗಿದೆ.''  ಎಂದವಳೇ 'ಜಿಲೇಬಿ ಆಲ್ವಾ' ಅಂತ ಮತ್ತೆ  ಕನ್ಫರ್ಮ್ ಮಾಡಿಕೊಂಡಳು..!  ಬಿಸಿಯಾಗಿದ್ದಾಗ ಏನೋ ಒಂದು ಥರಾ ರುಚಿ ಇತ್ತು.ನನ್ನ ಯಾವತ್ತಿನ ಪ್ರಯೋಗ ಪಶು ಯಾ  ನನ್ನ  ಎಲ್ಲಾ   ರುಚಿಗಳ ಫಲಾನುಭವಿಯಾದ   ಪತಿ ಮಹಾಶಯರು ಬಿಸಿ ಬಿಸಿಯಾದ ಜಿಲೇಬಿಯನ್ನು ಸವಿದು,  ''ಚನ್ನಾಗಿದೆ .  ಮೆತ್ತಗೆ ಚನ್ನಾಗಿದೆ.   ಈ ಥರದ್ದು ಏನೋ ಒಂದನ್ನು ಈ ಮೊದ್ಲು ತಿಂದ ನೆನಪು ಬರ್ತಾ ಇದೆ '' ಎಂದು ಇದನ್ನು ಕೊಂಡಾಡಿದರು. ಯಾವತ್ತೂ ನನ್ನ ಅಡುಗೆಯನ್ನು ತೆಗಳಿದವರೇ ಅಲ್ಲಪ್ಪ... ತಾಳಿದವನು ಬಾಳಿಯಾನು ಮತ್ತು ಸಹನೆಯೇ ಶಕ್ತಿ ಎನ್ನುವ ಎರಡು ನಾಣ್ಣುಡಿಗಳಲ್ಲಿ  ನನ್ನವರಿಗೆ ಅಪಾರ ನಂಬಿಕೆ..!!





ಇಷ್ಟಕ್ಕೆ ನಿಲ್ಲದೆ ಮರುದಿನ ಕೆಲಸದವಳ  ಮೇಲೂ ಇದರ ಪ್ರಯೋಗವಾಯಿತು. ಏನು ಅಂತ ಹೇಳಲಿಲ್ಲ.. ''ಏನಕಾ .. ಇದು ಏನೋ ಬೋಂಡ ಕರ್ದು  ಪಾಕಕ್ಕೆ ಹಾಕಿದಂಗೆ ಇದೆ..   ಏನಕ್ಕಾ ಇದು?  ಎಂದು ಮತ್ತೆ ಮತ್ತೆ ವಿಚಾರಿಸಿಕೊಂಡಳು. 'ಜಿಲೇಬಿ' ಎಂದು ಹೇಳಿದ್ದೇ  ತಡ ಹೊಟ್ಟೆ ಹಿಡಿದುಕೊಂಡು ನಕ್ಕಳು. ''ಇದ್ಯಾವ ಡಿಸೈನ್  ಅಕಾ'' ಅನ್ನುತ್ತಾ ಬಿದ್ದು ಬಿದ್ದು ನಕ್ಕಳು. ''ಅಕ್ಕನ  ಜಿಲೇಬಿ ಅಂತ ಊರೆಲ್ಲಾ ಹಬ್ಬಿಸಿದರೆ ಕೊಂದು ಬಿಡುತ್ತೇನೆ   ನೋಡು,'' ಎಂದು ಆವಾಜ್ ಹಾಕಿದೆ.

 ಅಷ್ಟೊತ್ತಿಗೆ  ಮಧ್ಯಾನ್ಹಕ್ಕೆ ಊಟಕ್ಕೆ ಶಿವ ಶಿವಾ .. ಅಂತ ನನ್ನ ಎರಡನೆಯ ಅಣ್ಣ ಮತ್ತು ಮೊದಲ ಅಣ್ಣನ ಮಗ ಇಬ್ಬರೂ ಬಂದರು.  ನನ್ನವರು '' ಜಿಲೇಬಿಗೆ ಮತ್ತಿಬ್ಬರ ಬಲಿ''  ಎಂದು ಮುಸಿ ಮುಸಿ ನಕ್ಕರು. ನನ್ನ ಅಣ್ಣನಂತೂ ಚೂರು ತಿಂದವನೇ ದಾಕ್ಷಿಣ್ಯವಿಲ್ಲದೆ ''ಹೈಟ್ ಆಫ್ ಟಾರ್ಚರ್''  ಎಂದ.   ಮುಖದ ಮೇಲೆ ಹೀಗೂ ಉಂಟೇ ಎನ್ನುವ ಲುಕ್ಕು...! ನಾನು ಸುಮ್ಮನೆ ನಕ್ಕೆ.   ಮದುವೆಗೂ   ಮೊದಲು ಅನೇಕ ಸಲ ಈ ರೂಪದ  ಹೀರೋಯಿಕ್   ಡೀಡ್ಸ್ ಗಳಿಗೆ ಬಲಿಪಶು ಆದವನೇ ಆದರೂ ಆಗ ಹೀಗೆ ಹೇಳಿದ್ದರೆ   ಬೇರೆನೇ  ಇತ್ತು.      ನನ್ನ  ಸೋದರಳಿಯ  ಮಾತ್ರ '' ಯಾವುದೋ ಒಂದು  ಯ್ಯಾಂಗಲ್ ನಿಂದ ಜಿಲೇಬಿ ಥರಾನೇ ಕಾಣ್ತಾ  ಇದೆ, ಸಕ್ಕರೆ ಪಾಕ ಚನ್ನಾಗಾಗಿದೆ ''  ಎಂದು ನನಗೆ ಸಮಾಧಾನ ಹೇಳಿದ.

ಇದನ್ನು ನೋಡಿದ ಮೇಲೂ ನೀವು, ''ನೀವು ಮಾಡಿದ್ದು  ಜಿಲೇಬಿನೇ  ಹೌದಾ '' ಅಂತ ಕೇಳ್ತೀರಂದ್ರೆ ..... ..... .....


ನಂಬಿದ್ರೆ ನಂಬಿ ಬಿಟ್ರೆ ಬಿಡಿ ...

[ಈ ವಾರದ ೧೮ /೦ ೭ / ೨ ೦ ೧ ೩  ರ  ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಿತ ]

Wednesday, June 19, 2013

ಮಾವನವರ ಚಿತ್ರ .

ಇದು ನಾನು ರಚಿಸಿದ ನನ್ನ ಮಾವನವರ ಚಿತ್ರ . ಅವರು ನಮ್ಮನ್ನಗಲಿ ಮೂರು ವರ್ಷಗಳ ಮೇಲಾಯ್ತು.  ಬದುಕಿದ್ದಾಗ ಅನೇಕ ಸಲ ಹೇಳಿದ್ದರು.   ''ವಿಜಯ, ನನ್ನದೊಂದು ಚಿತ್ರ ಬರಿ'' ಅಂತ. ನಾನು ಬರೆದಿರಲಿಲ್ಲ. ನನಗೆ ಇಷ್ಟರ ಮಟ್ಟಿಗೆ ಚಿತ್ರಿಸಲು ಬರುತ್ತೆ ಅನ್ನುವ ಕಲ್ಪನೆ ಆಗ  ನನಗಿರಲಿಲ್ಲ. ಆ ಅಳುಕಿನಿಂದ  'ಬರೀತೀನಿ, ಬರೀತೀನಿ' ಅನ್ನುತ್ತಾ ಕಾಲ ಕಳೆಯುತ್ತಿದ್ದಂತೆ  ಅವರೇ 'ಬರುತ್ತೀನಿ,' ಎನ್ನುತ್ತಾ ಎದ್ದು ಹೋದರು.  ನನಗೆ ಅದೊಂತರ ಗಿಲ್ಟ್ ಸದಾ ಕಾಡುತ್ತಲೇ ಇರುತ್ತದೆ. ಕೆಲವು ತಿಂಗಳುಗಳ ಕೆಳಗೆ  ಮನೆಯಲ್ಲಿ  ಮದುವೆ  ಸಮಾರಂಭವಿತ್ತು. ಆ ಸಮಯದಲ್ಲಿ   ಈ ಚಿತ್ರ ಬರೆದು ಕಟ್ಟು ಹಾಕಿಸಿ ಗೋಡೆಗೆ ನೇತು ಹಾಕಿದೆ.  ಮಾವ ಇದ್ದಿದ್ದರೆ ತುಂಬಾ ಸಂತಸ ಪಡುತ್ತಿದ್ದರು.




ಚಿತ್ರ ಬರೆದಾದ ತಕ್ಷಣ ಸ್ಕ್ಯಾನ್ ಮಾಡದೇ   ಗಡಿಬಿಡಿಯಲ್ಲಿ ಫ್ರೇಮ್ ಹಾಕಿಸಿ ಊರಿಗೆ  ಕಳಿಸಿಯಾಯ್ತು . ನಂತರ ಫೋಟೋ ತೆಗೆದು ಇಲ್ಲಿ ಹಾಕಿದ್ದು.  
ಮಾವ



ವಂದನೆಗಳು


Friday, May 17, 2013

ಕರಡಿ ಸೊಪ್ಪಿನ ಸ್ಪೆಷಾಲಿಟಿ..!

ಸೊಪ್ಪುಗಳಲ್ಲಿ ತಯಾರಿಸುವ ಅಡುಗೆಯಲ್ಲಿನ  ವೈವಿಧ್ಯತೆಯನ್ನು  ಸವಿಯಲು  ನೀವು ನಮ್ಮ  ಮಲೆನಾಡಿನ ಕಡೆ ಬರಬೇಕು. ಕಾಡಿನಲ್ಲಿ, ಮನೆಯ ಹಿತ್ತಲಿನಲ್ಲಿ, ತೋಟದಲ್ಲಿ  ಬೆಳೆಯುವ  ಸೊಪ್ಪುಗಳಾದ  ಕೆಸವಿನ ಸೊಪ್ಪು , ಚೋಗತೆ ಸೊಪ್ಪು, ಎಲವರಿಗೆ ಸೊಪ್ಪು, ಕಾಕಮಟ್ಲೆ ಸೊಪ್ಪು, ದಾಳಿಂಬೆ ಸೊಪ್ಪು, ಹೊನಗೆನೆ ಸೊಪ್ಪು,   ಸ್ವಾರ್ಲೆ ಸೊಪ್ಪು,ಸಾಂಬಾರ್ ಸೊಪ್ಪು, ಬೀಪಿ ಸೊಪ್ಪು, ಒಂದೆಲಗ, ಸೂಜ್ಮೆಣಸಿನ ಕುಡಿ, ಬಸಳೆ ಸೊಪ್ಪು, ಕೆಂಪು ಹರಿವೆ ಸೊಪ್ಪು, ನುಗ್ಗೆ ಸೊಪ್ಪು, ಗಂಧದ ಸೊಪ್ಪು, ಕರಡಿ ಸೊಪ್ಪು .. ಹೀಗೆ  ತರ  ತರದ ಸೊಪ್ಪುಗಳನ್ನು ಬಳಸಿ   ಸಾಂಬಾರು, ಸಾರು, ಪಲ್ಯ, ಚಟ್ನೆ, ಕಟ್ನೆ, ತಂಬುಳಿ ತರದ ಅನೇಕ ರೀತಿಯ  ಪದಾರ್ಥಗಳನ್ನು ತಯಾರಿಸುತ್ತಾರೆ. ಜೊತೆಗೆ ಪತ್ರೊಡೆ, ಆಂಬೊಡೆ,  ಬೋಂಡ ತರದ ತಿನಿಸುಗಳನ್ನೂ ಮಾಡುತ್ತಾರೆ.

ಉಳಿದೆಲ್ಲ ಬಗೆಯ ಸೊಪ್ಪುಗಳ ಮಾಹಿತಿ ಸರ್ವೇ ಸಾಧಾರಣವಾಗಿ ಸಿಕ್ಕರೂ ''ಕರಡಿ ಸೊಪ್ಪು'' ಎಲ್ಲಾ ಕಡೆ  ಅಷ್ಟೊಂದು ಪ್ರಚಾರದಲ್ಲಿಲ್ಲ ಅನ್ನುವುದು ನನ್ನ ಅಭಿಪ್ರಾಯ.   ಸಿರಸಿ, ಸಿದ್ದಾಪುರ ವಲಯದಲ್ಲಿರುವವರಿಗೆ    ಈ ಸೊಪ್ಪಿನ ಬಳಕೆ ಮಾಡುವುದು ಗೊತ್ತು ಹೊರತೂ  ಉಳಿದ ಕಡೆಯ ಜನರಿಗೆ ಈ ಸೊಪ್ಪಿನ ಪರಿಚಯ ಅಷ್ಟಾಗಿ ಇಲ್ಲ ಅನಿಸುತ್ತದೆ. ನಮ್ಮ ಕಡೆ  ಕೆಲಸಕ್ಕೆ ಬರುವ ಹೆಂಗಸರಿಂದ ಈ ಸೊಪ್ಪಿನ ಬಗೆಗೆ ತಿಳಿದ ನನ್ನಮ್ಮ ಇದರ ಅಡುಗೆಗಳನ್ನು ಮಾಡುತ್ತಿದ್ದಳು.  ನಾನು ಅನೇಕರನ್ನು  ಕೇಳಿದೆ. ಎಲ್ಲರೂ    ಇದ್ಯಾವ 'ಕರಡಿ ಸೊಪ್ಪು' ಎಂದು ಆಶ್ಚರ್ಯ ಪಡುತ್ತಾರೆ. ಗೊತ್ತಿಲ್ಲದವರೇ ಹೆಚ್ಚು.  ನೋಡಲು  ಕಾಡು ಮಲ್ಲಿಗೆಯ ಸೊಪ್ಪಿನಂತೆ ಕಾಣಿಸುತ್ತದೆ. ಚಿಕ್ಕ ಪೊದೆಯಾಗಿ  ಬೆಳೆಯುತ್ತದೆ. ಚಿಕ್ಕ ಚಿಕ್ಕ ಕಾಯಿಗಳೂ ಬಿಡುತ್ತವಂತೆ. ಇದರ ಹೂ ಮತ್ತು ಕಾಯಿಯನ್ನು ನಾನು ನೋಡಿಲ್ಲ.

 ಕರಡಿ ಸೊಪ್ಪು


 ಈ ಸೊಪ್ಪಿನಿಂದ ತಯಾರಿಸಬಹುದಾದ ಪದಾರ್ಥಗಳು.
೧. ಕರಡಿ ಸೊಪ್ಪಿನ  ಚಟ್ನೆ.

ವಿಧಾನ :-

 ಹತ್ತು ಹದಿನೈದು ಎಲೆಗಳನ್ನು ಚನ್ನಾಗಿ ತೊಳೆದು ಕಂದು  ಬಣ್ಣ ಬರುವಂತೆ ಎಣ್ಣೆ ಹಾಕಿ ಹುರಿಯಬೇಕು.
 ಅರ್ಧ ಚಮಚ ಜೀರಿಗೆ
 ಅರ್ಧ ಚಮಚ ಸಾಸಿವೆ
ಅರ್ಧ ಚಮಚ ಬೋಳ್ಕಾಳು [ ಮೆಣಸಿನ ಕಾಳು ]
 ಎಂಟರಿಂದ ಹತ್ತು ಬ್ಯಾಡಗಿ ಮೆಣಸು,
ಇವನ್ನು ಸಹಾ ಬೇರೆಯಾಗಿ ಹುರಿದುಕೊಂಡು  ಅದಕ್ಕೆ ಒಂದು ಕಪ್ ಕೊಬ್ಬರಿ ತುರಿ + ಹುರಿದ ಸೊಪ್ಪು + ಸ್ವಲ್ಪ ಬೆಲ್ಲ+ ಒಂದು ಸುಲಿದ ಅಡಿಕೆ ಗಾತ್ರದ ಹುಣಸೆ ಹಣ್ಣು+ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಬೇಕಿದ್ದರೆ ಮೇಲೊಂದು ಸಾಸಿವೆ ಒಗ್ಗರಣೆ ಕೊಡಿ.  ಅನ್ನದ ಜೊತೆ ಕೊಬ್ಬರಿ ಎಣ್ಣೆಯೊಂದಿಗೆ   ಕಲೆಸಿಕೊಂಡು ತಿನ್ನಲು ಬಲು ರುಚಿ.



೨.  ಕರಡಿ ಸೊಪ್ಪಿನ ಹುಳಿ [ಸಾಂಬಾರು]

ವಿಧಾನ:-
 ತೊಗರಿ ಬೇಳೆ -ಎರಡು ಕಪ್
 ಸೊಪ್ಪು-  ಹದಿನೈದಿಪ್ಪತ್ತು
ಬಾಳೆ ಕಾಯಿ [ಅಥವಾ ಆಲೂಗಡ್ಡೆ ] - ಎರಡು
ತೆಂಗಿನ ತುರಿ -ಒಂದು ಕಪ್
 ಹುಣಸೆ ಹಣ್ಣು -ಸ್ವಲ್ಪ
ಬೆಲ್ಲ - ಒಂದು ಚಮಚ
ಸಾಂಬಾರಪುಡಿ  - ಮೂರು  ಚಮಚ
 ಉಪ್ಪು

ಬೇಳೆ  ಬೇಯಿಸಿಕೊಂಡು ಅದಕ್ಕೆ ಬಾಳೇ ಕಾಯಿಯ ಹೋಳುಗಳನ್ನು  ಮತ್ತು  ಸೊಪ್ಪನ್ನು  ಹಾಕಿ ಉಪ್ಪು, ಬೆಲ್ಲ ಹಾಕಿ  ಬೇಯಿಸಿ.   ಸೊಪ್ಪನ್ನು ಹೆಚ್ಚಿಯೂ ಹಾಕಬಹುದು.  ಹಾಗೆಯೂ ಹಾಕಬಹುದು. ತೆಂಗಿನ ತುರಿ  ಮತ್ತು ಸಾಂಬಾರ ಪುಡಿಯನ್ನು ಹುಣಸೆ ಹಣ್ಣಿನೊಂದಿಗೆ  ರುಬ್ಬಿ ಅದಕ್ಕೆ ಸೇರಿಸಿ ಚೆನ್ನಾಗಿ ಕುದಿಸಿ. ಸಾಂಬಾರು ದಪ್ಪಗಿರಲಿ.ಉಪ್ಪು, ಹುಳಿ, ಖಾರ  ಸ್ವಲ್ಪ ಹೆಚ್ಚಾಗಿ ಬೇಕಾಗುತ್ತದೆ.  ಮಾಮೂಲಿ ತರಕಾರಿಗಳನ್ನು ಬಳಸಿ ಮಾಡುವ ಹುಳಿಗೆ ಹಾಕುವದಕ್ಕಿಂತಲೂ ಒಂದೂವರೆ ಪಟ್ಟು ಹೆಚ್ಚು ಬೇಕು. ಅನ್ನದ ಜೊತೆ ತುಪ್ಪದೊಂದಿಗೆ ಕಲೆಸಿ ತಿಂದರೆ ನಾಲಿಗೆಗೆ  ಹಿತವಾಗಿರುತ್ತದೆ.




೩ . ಕರಡಿ ಸೊಪ್ಪಿನ ತಂಬುಳಿ

ಮಾಡುವ ವಿಧಾನ - 


ಸೊಪ್ಪನ್ನು ಚೆನ್ನಾಗಿ ತೊಳೆದುಕೊಂಡು ಚೆನ್ನಾಗಿ ಹುರಿದುಕೊಳ್ಳಬೇಕು. ಅದಕ್ಕೆ ಅರ್ಧ ಚಮಚ ಕಾಳು ಮೆಣಸು+ ಅರ್ಧ ಚಮಚ ಜೀರಿಗೆ  ಹುರಿದು ಸೇರಿಸಿ. ಅದಕ್ಕೆ   ಉಪ್ಪು+ಸ್ವಲ್ಪ ಕಾಯಿತುರಿ + ಚೂರು ಬೆಲ್ಲ ಹಾಕಿ ಮಿಕ್ಸಿಯಲ್ಲಿ ರುಬ್ಬಿ. ನಂತರ ಕಡೆದ ಮಜ್ಜಿಗೆ ಸೇರಿಸಿ ಕುಡಿಯುವಷ್ಟು ತೆಳ್ಳಗೆ ಮಾಡಿ. ತುಪ್ಪದಲ್ಲಿ ಜೀರಿಗೆ ಒಗ್ಗರಣೆ ಕೊಡಿ. ಅನ್ನಕ್ಕೆಕಲೆಸಿ ಉಣ್ಣ ಬಹುದು. ಹಾಗೆಯೂ ಕುಡಿಯ  ಬಹುದು. 

 ೪. ಕರಡಿ ಸೊಪ್ಪಿನ ಬೋಂಡ 

ಮಾಡುವ ವಿಧಾನ :-

  ಒಂದು ಕಪ್ ಕಡಲೆ ಹಿಟ್ಟಿಗೆ  ರುಚಿಗೆ ತಕ್ಕಷ್ಟು ಉಪ್ಪು + ಒಮ + ರುಬ್ಬಿದ ಕಾಯಿ ತುರಿ  ನಾಲ್ಕು ಚಮಚ + ಸ್ವಲ್ಪ ಲಿಂಬೆ ಹುಳಿ+ ಮೆಣಸಿನ ಪುಡಿ  ಹಾಕಿಕೊಂಡು ನೀರು ಹಾಕಿ ದಪ್ಪಗೆ ಬೋಂಡ   ಹಿಟ್ಟನ್ನು ಕಲೆಸಿಕೊಳ್ಳಿ. ಒಂದೊಂದೇ ಎಲೆಯನ್ನು ಹಿಟ್ಟಿನಲ್ಲಿ  ಅದ್ದಿ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ. ನಂತರ ಕಾಯಿ ಚಟ್ನಿಯೊಂದಿಗೆ ಸವಿಯಿರಿ. 





ತಂಬುಳಿ ಕುಡಿದ ನಂತರ ಅಥವಾ  ಚಟ್ನಿಯನ್ನು,ಸಾಂಬಾರನ್ನು  ಅನ್ನಕ್ಕೆ ಕಲೆಸಿ ತಿಂದ ನಂತರ ನೀರು ಕುಡಿಯಲು ಹೋದೀರಾ ಜೋಕೆ .. ಬಾಯಿ ಕಹಿ ಕಹಿಯಾಗುತ್ತದೆ.  ಉಣ್ಣುವಾಗ  ಕಹಿ ಗೋಚರಿಸುವುದಿಲ್ಲ. ನೀರು ಕುಡಿದರೆ ಮಾತ್ರ ಕಹಿಯ ಅನುಭವವಾಗುತ್ತದೆ.  ಇದು ಅದರ ಸ್ಪೆಷಾಲಿಟಿ.

ಉಪಯೋಗ - ಇದು ಮೂಲತ: ಕಹಿ ಗುಣವನ್ನು ಹೊಂದಿರುವುದರಿಂದ ಮೈ ನಂಜನ್ನು ಕಡಿಮೆ ಮಾಡುತ್ತದಂತೆ. ಡಯಾಬಿಟೀಸ್ ಇರುವವರಿಗೆ ಒಳ್ಳೆಯದಂತೆ. ವರ್ಷಕ್ಕೊಮ್ಮೆಯಾದರೂ ಬಳಸಿದರೆ ಆರೋಗ್ಯವಂತೆ..


ಇದರ ಬಗ್ಗೆ ಹೆಚ್ಚಿನ ಮಾಹಿತಿ ಇರುವವರು ಹಂಚಿಕೊಳ್ಳಿ.  

 ವಂದನೆಗಳು. 

Saturday, April 6, 2013

ಮತ್ತದೇ ಹಾಡು ಅದೇ ರಾಗ..

ನಮ್ಮ ಮನೆ ಎದುರಿಗೆ ಎಳನೀರಪ್ಪನ ಮನೆ. ಮನೆಯೆಂದರೆ ಎದುರಿನ ಸೈಟಿನಲ್ಲೊಂದು ಶೆಡ್ಡು. ದಿನಾಲೂ ಬೆಳಗ್ಗೆ  ಇಂತಾ ಹೊತ್ತು ಎಂಬುದಿಲ್ಲ, ಸೈಕಲ್ಲಿನ ಮೇಲೆ ಎಂಟರಿಂದ ಹತ್ತು ಎಳನೀರಿಟ್ಟು ಕೊಂಡು, ಏಳ್ ನೀರ್  ... ಎಂದು  ತಾರಕದಲ್ಲಿ ಕೂಗುತ್ತಾ ಶುರುಮಾಡಿ ಮಂದ್ರದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಾನೆ.. ಆದರೆ ಕೊನೆಯಲ್ಲಿ  ಶಬ್ದ ಸೈಲೆಂಟಾಗಿ ನಿಶ್ಯಬ್ಧವಾಗುತ್ತದೆ.  ಸೈಕಲ್ಲಿನಲ್ಲಿರುವ ಎಳನೀರು ಕಾಯಿಗಳನ್ನು ನೋಡಿದಮೇಲೆ  'ಏಳ್ ನೀ.....' ಎಂದು ಕೂಗುತ್ತಿದ್ದಾನೆಂಬುದು  ಸ್ಪಷ್ಟವಾಗುತ್ತದೆ.
ಎಳನೀರಪ್ಪನಿಗೆ ವಯಸ್ಸು ಸುಮಾರು ಅರವತ್ತರ ಮೇಲಾಗಿರಬಹುದು. ಮದುವೆಯಾದ ಮಗ ಇದ್ದಾನೆ. ಸೊಸೆ ಮಾತ್ರಾ ಮಗನನ್ನು ಬಿಟ್ಟು ಹೋಗಿದ್ದಾಳೆ.  ಎಳನೀರಪ್ಪನ ಹೆಂಡತಿ ಗಾರ್ಮೆಂಟ್ಸ್ ಗೆಲ್ಲೋ ಹೋಗುತ್ತಾಳೆ.ಅವಳಿಗೂ ಸುಮಾರೇ  ವಯಸ್ಸಾಗಿರಬಹುದು.  ದಿನಾಲೂ ಬೆಳಗಾಯಿತೆಂದರೆ ಕಿವಿಗೆ ಕಡ್ಡಿ ಹಾಕುತ್ತಾ ಹೆಗಲ ಮೇಲಿನ ಟವೆಲ್ಲಿನಿಂದ ಆಗಾಗ ಮುಖ ಉಜ್ಜುತ್ತಾ ಕೂತಿರುವ ಎಳನೀರಪ್ಪನ ದರ್ಶನ ನಮಗೆ. ಬೆಳ ಬೆಳಗ್ಗೆ ಅವನ ಹೆಂಡತಿ ತಿಂಡಿ ಮಾಡಿ ಮನೆ ಕೆಲಸ ಪೂರೈಸಿ ಅವನಿಗಷ್ಟು ತಿಂಡಿ ಕೊಟ್ಟು ತಾನೂ ತಿಂದು ಡಬ್ಬಿ ತೆಗೆದುಕೊಂಡು ಹೋಗುವ ವರೆಗೂ ಹೀಗೆಯೇ ಹಲ್ಲು ಕುಕ್ಕುತ್ತಲೋ, ಕಾಲು ನೀವುತ್ತಲೋ ಕುಳಿತಿರುವ ದುಡಿಯುವ ಗಂಡು  ಎಳನೀರಪ್ಪ ಅದ್ಯಾವಾಗಲೋ ಹೋಗಿ ಒಂದಷ್ಟು ಕಾಯಿಗಳನ್ನು ಸೈಕಲ್ಲಿಗೆ ನೇತು ಹಾಕಿಕೊಂಡು ಬರುತ್ತಾನೆ. ಮನೆ ಮುಂದೆಯೇ ನಾಲ್ಕಾರು ಬಾರಿ ಕೂಗಿ ಕೂಗಿ ಪ್ರಚಾರ ಮಾಡುತ್ತಾನೆ.

ಆವತ್ತು  ಬೆಳಗಿನ ಟೀ  ಸಮಯ, ಮಕ್ಕಳಿಗೆ ರಜೆಯಿದ್ದಿದ್ದರಿಂದ ಮಕ್ಕಳಿನ್ನೂ   ಎದ್ದಿರಲಿಲ್ಲ. ಮನೆಯೊಳಗೆ  ಬೆಳಗ್ಗೆಯೇ ಅದೆಂಥಾ ಸೆಖೆ!  ಫ್ಯಾನಿನ ಕೆಳಗೆ ಕುಳಿತರೆ ಟೀ  ಆರಿ ಹೋಗುತ್ತದೆಂದು ಕಿಟಕಿಯ ಪಕ್ಕದಲ್ಲಿ ನಿಂತು  ತೆಳುವಾಗಿ ಬೀಸುವ ಗಾಳಿಯನ್ನು ಆಸ್ವಾದಿಸುತ್ತಾ  ಟೀ  ಹೀರುತ್ತಿದ್ದೆ.  ಕಿಟಕಿಯಲ್ಲಿ ಹೊರಗೆ ನೋಡಿದಾಗ ನಮ್ಮ ಎಳನೀರಪ್ಪನ ಹೆಂಡತಿ ಲಕ್ಷಣವಾಗಿ ತಲೆಸ್ನಾನ ಮಾಡಿ ತಲೆಗೊಂದು ಬಟ್ಟೆ ಸುತ್ತಿಕೊಂಡು ಊದಿನ  ಕಡ್ಡಿಯಿಂದ  ಹೊಸಲಿನ ಮೇಲಿರುವ ಯಾವುದೋ ದೇವರನ್ನು ಪೂಜಿಸುತ್ತಿದ್ದುದು ಕಾಣಿಸಿತು. ಎಳನೀರಪ್ಪ ಯಥಾಪ್ರಕಾರ ಕಿವಿಗೆ ಕಡ್ಡಿ ಹಾಕುತ್ತಾ ಕುಳಿತಿದ್ದ. ಆ ಮನೆಗೆ ಆತ ಬಾಡಿಗೆಗೆ ಬಂದ  ಹೊಸತು. ನನಗಾದರೋ ಮಕ್ಕಳನ್ನು ಶಾಲೆಗೆ  ಕಳಿಸುವ ಬೆಳಗಿನ ಧಾವಂತವಿರಲಿಲ್ಲ.  ನೋಡುತ್ತಾ ನಿಂತೆ.

ಪೂಜೆ ಮಾಡಿ ಎಳನೀರಪ್ಪನ ಮಡದಿ   ಒಳಗಿನಿಂದ  ಹರಿವಾಣದಲ್ಲಿ ಒಡೆದ ತೆ೦ಗಿನ ಕಾಯಿ, ಹೂ ಮತ್ತೆ೦ತದೋ ಪ್ರಸಾದವನ್ನು ಇಟ್ಟುಕೊ೦ಡು ಬ೦ದು ಗ೦ಡನ ಕೈಲಿ ಕೊಟ್ಟು ಕಾಲಿಗೆ ಭಕ್ತಿಯಿ೦ದ  ನಮಸ್ಕರಿಸಿದಳು.  ಎಳನೀರಪ್ಪ ಕೈಯಲ್ಲಿದ್ದ ಕಡ್ಡಿ ಒರೆಸಿ ಪಕ್ಕಕ್ಕಿಟ್ಟು , ಅವಳ ಹಣೆಗೆ ಕು೦ಕುಮ ಹಚ್ಚಿ  ಹೆರಳಿಗೆ  ಹೂ ಮುಡಿಸಿದ.ಮೇಲು ನಕ್ಕ.  ಪ್ರೀತಿಗೆ ಬಡತನವೇನೂ ಸಿರಿತನವೇನೂ..? ನೋಡುತ್ತಿದ್ದ ನನಗೆ ಮನಸ್ಸು ಮುದವಾಯಿತು. ಅವಳ ಮುಖದಲ್ಲಿ ಅದೆ೦ತದೋ ಕಳೆ.  ಎಳನೀರಪ್ಪ ಪ್ರಸಾದವನ್ನ ತಾನೊ೦ಚೂರು ಬಾಯಿಗೆ ಹಾಕಿಕೊ೦ಡು  ಅವಳಿಗೊ೦ಚೂರು ಕೈಗೆ ಹಾಕಿದ.  ಕುಕ್ಕರುಗಾಲಿನಲ್ಲಿ ಕುಳಿತು ಎರಡೂ ಕೈಗಳಲ್ಲಿ ಪ್ರಸಾದವನ್ನು  ಕಣ್ಣಿಗೊತ್ತಿಕೊ೦ಡು ಬಾಯಿಗೆ ಹಾಕಿಕೊ೦ಡಳು.  ನನಗೆಲ್ಲೊ  ''ಬಡವನಾದರೆ ಏನು ಪ್ರಿಯೆ ಕೈತುತ್ತೂ  ತಿನಿಸುವೆ ”  ಎ೦ದು ರಾಜು ಅನ೦ತ ಸ್ವಾಮಿ ಹಾಡಿದ೦ತಾಯ್ತು.

ಕೆಲಸದವಳು ಬಂದಾಗ ಈ ವಿಚಾರ ಹೇಳಿದೆ..'ಪಾಪ ಕಣೆ,' ಅಂತಾ ಎಕ್ಸ್ಟ್ರಾ ಸೇರಿಸಿದೆ.  ಅವಳು ಕೇಳಿದ್ದೇ  ಮುಸಿ ಮುಸಿ ನಕ್ಕಳು. ''ಅಕ್ಕೋ ಅವ್ನ ಸುದ್ದಿ ಯಾಕೆ, ಎರಡು ಹೆಂಡ್ರಂತೆ ಅವನಿಗೆ.  ಇಲ್ಲೋಬ್ಳು,  ಊರಲ್ಲೋಬ್ಳು  ಇಲ್ಲಿ ಜಗಳ ಮಾಡ್ಕೊಂಡು ಅಲ್ಲಿಗೆ, ಅಲ್ಲಿ ಜಗಳ ಮಾಡ್ಕೊಂಡು ಇಲ್ಲಿಗೆ ಹೋಗ್ತಾನೆ ಇರತ್ತೆ ಸವಾರಿ.  ಸಾಯಂಕಾಲ ನೋಡು ಗೊತ್ತಾಗತ್ತೆ,''  ಅಂತ ಮತ್ತಷ್ಟು ನಕ್ಕಳು.

ಏನೋ  ನನಗೆ ನನ್ನ ಕೆಲಸದಲ್ಲಿ ಅವತ್ತು  ಮರೆತು ಹೊಯಿತು.  

ಮತ್ತೆ ಒಂದೆರಡು ದಿನ ಕಳೆದು ಒಂದಿನ ರಾತ್ರೆ ಸಿಕ್ಕಾಪಟ್ಟೆ ಸೆಖೆ, ಮಳೆ ಬರುತ್ತೇನೋ ಅನ್ನುವಂತೆ  ಆಗಾಗ ಮಿಂಚು, ಗುಡುಗು, ಹೊರಗಡೆ ಒಂದೇ ಸಮನೆ  ಬೀದಿ ನಾಯಿಗಳ ಕೂಗಾಟ.    
ಸೆಖೆ ಅಂದರೆ ಯಮಸೆಖೆ, ಫ್ಯಾನ್ ಹಾಕಿದರೆ ಅದೂ ಬಿಸಿ ಗಾಳಿ. ಕಣ್ಣು ತೆರೆದು ಕುಳಿತರೆ ಕಣ್ಣನೀರ   ಪಸೆಯಷ್ಟೂ ಆವಿಯಾಗಿ  ಬಿಡುವುದೇನೋ ಎಂಬಂತೆ ಕಣ್ಣು ಉರಿ. ಕಿಟಕಿಯ ಬಾಗಿಲು ತೆರೆದು ಸ್ವಲ್ಪ ಗಾಳಿಗೆ ಮುಖವೊಡ್ಡಲು ಪ್ರಯತ್ನಿಸಿದೆ.  ಬೀದಿಯಲ್ಲಿ ಕರೆಂಟು ಕೂಡಾ ಹೋಗಿತ್ತು.  ಮಳೆ ಬರುವ ಲಕ್ಷಣಗಳಿದ್ದುದರಿಂದ ಆಕಾಶವೂ   ಕಪ್ಪು  ಕಾರ್ಗತ್ತಲು.
ಎದುರಿನ ಶೆಡ್ಡಿನಲ್ಲಿ ಇಬ್ಬರು ಜೋರಾಗಿ ಬೈದುಕೊಳ್ಳುವ ಶಬ್ಧ.. ಯಾರೆಂದು ತಿಳಿಯಲಿಲ್ಲ.  ಮಿಂಚು ಹೊಡೆದಾಗ  ಪಕ್ಕನೆ ಎಳನೀರಪ್ಪನ ಮುಖ ಕಾಣಿಸಿತು. ಅವನ ಹೆಂಡತಿಯ ಜುಟ್ಟು ಹಿಡಿದು ರಪ ರಪ ಬಡಿಯುತ್ತಿದ್ದ.  ಯಾವುದೋ ಕೇಳಲಾಗದ ಭಾಷೆಯಲ್ಲಿ ಬೈಯ್ಯುತ್ತಿದ್ದ. ಚೆನ್ನಾಗಿ ಕುಡಿದಿದ್ದನೆಂದು  ತೋರುತ್ತದೆ.  ತೂರಾಡುತ್ತಿದ್ದರೂ ಸಮಾ  ಬಡಿಯುತ್ತಿದ್ದ. ಅಷ್ಟೊತ್ತಿಗೆ ಅವನ ಮಗ ಶೆಡ್ ಒಳಗಿನಿಂದ ಬಂದವನೇ ತಾಯಿಯನ್ನು ಬಿಡಿಸಿ ಅಪ್ಪನಿಗೆ ಮುಖ ಮೂತಿ ನೋಡದೆ ಭಾರಿಸಲು ಶುರು ಮಾಡಿದ. ಅಂತೂ ತಪ್ಪಿಸಿಕೊಂಡ ಎಳನೀರಪ್ಪನ ಹೆಂಡತಿ ಆಚೆ ಕುಕ್ಕರಿಸಿ ಸುಧಾರಿಸಿಕೊಳ್ಳುತ್ತಿದ್ದವಳು   ಕೆಲ ನಿಮಿಷ ಬಿಟ್ಟು ಒಳ ಹೋಗಿ ಬಿಂದಿಗೆಯಲ್ಲಷ್ಟು ನೀರು ತಂದು ಅವನಿಗೆ ಎರಚಿದಳು. ಮಗ ಹೊಡೆಯುತ್ತಲೇ ಇದ್ದ.

ಎಳನೀರಪ್ಪನ ಹೆಂಡತಿ ತಾನು  ಹೊಡೆಸಿಕೊಂಡರೂ ಈಗ,  ''ಸಾಕು ಬಿಡೋ ಸಾಕು ಬಿಡೋ,''ಎಂದು ಮಗನನ್ನು ತಡೆಯಲು ಬಂದಳು. ಮಗ ಕೇಳದಿದ್ದಾಗ ''ನಿನ್ನ ದಮ್ಮಯ್ಯ ಬಿಟ್ಬಿಡೋ ಹೊಡಿಬೇಡ,'' ಎಂದು ಅಂಗಲಾಚ ತೊಡಗಿದಳು. ನೋಡುತ್ತಿದ್ದ ನಮಗೆ ಸಂಕಟವಾಯಿತು.

ಮತ್ತೆ ಬೆಳಿಗ್ಗೆ ಏನೂ ಆಗಲೇ ಇಲ್ಲವೆಂಬಂತೆ ಎಳನೀರಪ್ಪ ಕಾಲು ನೀವಿಕೊಳ್ಳುತ್ತಾ  ಕುಳಿತಿದ್ದ. ಹೆಂಡತಿ ತಿಂಡಿ ಕಟ್ಟುತ್ತಿದ್ದಳು...ಮತ್ತದೇ ಹಾಡು ಅದೇ ರಾಗ..  ಸಂಜೆಯಾಗುತ್ತಲೂ ಅದೇ ತಾಳ..!

ಎಷ್ಟು ಕಾನೂನುಗಳು ಬಂದರೂ, ಎಷ್ಟು ಮಹಿಳಾ ದಿನಾಚರಣೆಗಳು ಆಚರಿಸಿಕೊಂಡರೂ ಕುಡುಕ ಗಂಡನ ಹೆಂಡತಿ ಹೀಗೆಯೇ ಇರುತ್ತಾಳೆ, ಹೆಂಡದಂಗಡಿ ಇರುವ  ತನಕ.  ...!!






Wednesday, April 3, 2013

ಬೇರಿನಲ್ಲೇನಿದೆ ಮಹಾ..!!

ಬಸ್ಸಿಳಿದು ಮನೆಗೆ ಬರುವ ದಾರಿಯಲ್ಲಿ  ಅಪ್ಪಯ್ಯನ ಜೊತೆ ಹೆಜ್ಜೆ ಹಾಕುವುದೆಂದರೆ ಅದು ಓಟಕ್ಕೆ ಸಮ.ದಾಪುಗಾಲಿಡುತ್ತಾ ಹೋಗುತ್ತಿರುವ  ಅಪ್ಪಯ್ಯನನ್ನು  ರಸ್ತೆಯ ಪಕ್ಕದ ಇಳಿಜಾರಿನ ದರೆಯಲ್ಲಿ ಚಾಚಿಕೊಂಡಿರುವ ಒಣ  ಮರದ ಬೇರೊಂದು ತಡೆದು ನಿಲ್ಲಿಸಿಬಿಡುತ್ತಿತ್ತು.    ನಾನು  ಓಡುತ್ತಾ  ಬಂದು ''ಯಂತಾ ಅಪ್ಯಾ ...'' ಎನ್ನುವ ಹೊತ್ತಿಗೆ ಅಪ್ಪಯ್ಯನ ತಲೆಯಲ್ಲೊಂದು ಆಕಾರ ಕುಣಿಯುತ್ತಿರುತ್ತಿತ್ತು. ''ಈ ಬೇರು ನೋಡಿದ್ಯಾ..  ಯಂತ್ ಕಂಡಂಗೆ  ಕಾಣ್ತು  ಹೇಳು ನೋಣ.....'' ಎನ್ನುತ್ತಾ ನಮ್ಮ ಕಲಾಪ್ರಜ್ನೆಗೆ ಸವಾಲು ಹಾಕುತ್ತಿದ್ದ. ಬೇರಿಗೆ ಮೊದಲ ಸಾಮ್ಯತೆ ಹಾವಾಗಿದ್ದರಿಂದ ''ಹಾವು ಮಾಡ್ಳಕ್ಕನಾ ಇದ್ರಲ್ಲಿ,?'' ಎನ್ನುತ್ತಾ  ನಾನೂ  ಅದರ ಹಾವ ಭಾವ ಪರಿಶೀಲಿಸುತ್ತಿದ್ದೆ. ''ಆನೆ ಸೊಂಡ್ಲಿದ್ದಂಗೆ ಇಲ್ಯನೇ,'' ಎನ್ನುತ್ತಾ ಅಪ್ಪಯ್ಯ  ''ಬಾ ಹೋಪನ''ಎನ್ನುತ್ತಾ ಕರೆದೊಯ್ಯುತ್ತಿದ್ದ. ಸಾಯಂಕಾಲದ ಹೊತ್ತಿಗೋ, ಮರುದಿನವೋ ಕತ್ತಿ  ತಂದು ಅದನ್ನು ನಿಧಾನಕ್ಕೆ ಬಿಡಿಸಿಕೊಂಡು ಮನೆಗೆ ತಂದು ಬಿಸಿನೀರಲ್ಲಿ ನೆನೆಸಿಟ್ಟು ಅದರ ತೊಗಟೆ ಬಿಡಿಸುವ ಯತ್ನದಲ್ಲಿರುತ್ತಿದ್ದ.ಅದನ್ನು ಒಣಗಿಸಿ ಅದನ್ನು ತಿದ್ದಿ ತೀಡಿ,  ಮರಳು ಪೇಪರ್ ಹಾಕಿ ಉಜ್ಜಿ, ಅದಕ್ಕೆ ಪಾಲಿಷ್  ಹಾಕಿ  ಅದರ ಅಸ್ಪಷ್ಟ ರೂಪಕ್ಕೊಂದು  ಸುಂದರ ರೂಪವನ್ನು ತೆರೆದಿಡುತ್ತಿದ್ದ. 

 ಅಪ್ಪಯ್ಯನ ಈ ಕಾಷ್ಠ ಶಿಲ್ಪದ ಪ್ರೇಮ ಬೆಳೆಯಲು ಪ್ರಾರಂಭವಾಗಿದ್ದು ಸುಮಾರು ಅವನ ಮಧ್ಯ ವಯಸ್ಸಿನ ನಂತರ.  ನಮಗೆಲ್ಲಾ ಪಾಠ ಕಲಿಸಿದ ನಮ್ಮೂರ ಪ್ರಾಥಮಿಕ ಶಾಲೆಯ ಮೇಷ್ಟರು   ಈ ರೀತಿಯ ಬೇರು ನಾರುಗಳ ಶಿಲ್ಪಗಳನ್ನು ಮಾಡುವ ಹವ್ಯಾಸದವರಾಗಿದ್ದರು. ಅಪ್ಪಯ್ಯನಿಗೆ ಯಾವುದನ್ನಾದರೂ ಮಾಡಬೇಕೆಂದು  ತಲೆಗೆ ಹೊಕ್ಕಿತೆಂದರೆ ಶತಾಯ ಗತಾಯ ಅದನ್ನು ಮಾಡಿಯೇ ಸಿದ್ಧ..  ಹೀಗೆ ಸುಮ್ಮನೆ ಯಾವುದೋ ಬೇರೊಂದನ್ನು ತಂದು ಅದನ್ನು ಕೆತ್ತಿ ಹಾವಿನ ರೂಪ ಕೊಟ್ಟ.  ಅಲ್ಲಿಂದ  ದಿನಗಳೆದಂತೆ ಅಪ್ಪಯ್ಯನ ಆಸಕ್ತಿ ಹೆಚ್ಚಾಗುತ್ತಲೇ ಹೊಯಿತು. ಒಂದಾದ ಮೇಲೊಂದರಂತೆ , ಕಂಡ ಕಂಡ ಒಣ ಮರಗಳನ್ನೆಲ್ಲಾ ಪರಿಶೀಲಿಸಿ ಬೇರು ಹುಡುಕುವುದೂ,   ಅದಕ್ಕೊಂದು ರೂಪ ಕೊಡುವುದೂ ನಿತ್ಯದ ಕೆಲಸವಾಯಿತು. ಅದಕ್ಕೆಂದೇ ಚಿಕ್ಕ ದೊಡ್ಡ ಚಾಣ, ಉಳಿ, ಈ ತರದ ಹತಾರಗಳನ್ನೆಲ್ಲಾ ಕೊಂಡು ತಂದು  ಮಧ್ಯ ರಾತ್ರಿಯ ವರೆಗೂ ಕೆತ್ತಿ ಉಜ್ಜಿ  ತಿರುಗಿಸಿ ಮುರುಗಿಸಿ ನೋಡುತ್ತಾ ಮನಸ್ಸಿನಲ್ಲಿಯೇ ಸಮಾಧಾನ ಪಡುತ್ತಿದ್ದ.    ನಾವೂ ಅಪ್ಪಯ್ಯನ ಪಕ್ಕ ಕುಕ್ಕರುಗಾಲಲ್ಲಿ  ಕುಳಿತುಕೊಂಡು  ಈ ಕೆಲಸಗಳನ್ನೆಲ್ಲಾ ನೋಡುತ್ತಿದ್ದೆವು. ಮೊದಮೊದಲಿಗೆ ಅದೇನು ಆಕಾರ ತಳೆಯುತ್ತದೆ ಅನ್ನುವುದು ನಮ್ಮ ಕಲ್ಪನೆಗೆ ನಿಲುಕುತ್ತಿರಲಿಲ್ಲ.  ಇದು ಅದರ ಹಾಗೆ ಕಾಣುತ್ತೆ, ಇದರ ಹಾಗೆ ಕಾಣುತ್ತೆ ಅನ್ನುತ್ತಾ ಸುಳ್ಳು ಸುಳ್ಳೇ  ಲೆಕ್ಕಾಚಾರ  ಹಾಕುತ್ತಿದ್ದೆವು.ಕೊನೆ ಕೊನೆಗೆ ರೂಪ ಸ್ಪಷ್ಟವಾಗುತ್ತಾ ಬಂದಂತೆ 'ಹೌದಲ್ವಾ, ನಮಗೆ ಗೊತ್ತೇ ಆಗ್ಲಿಲ್ಲ 'ಅನ್ನುತ್ತಾ ಪೆಚ್ಚುನಗು ಬೀರುತ್ತಿದ್ದೆವು.   ಕಲಾವಿದನಿಗಷ್ಟೇ ಗೊತ್ತು ಕಲೆಯ ಮರ್ಮ..!  ಸುಮ್ಮನೇ  ನೋಡಿದರೆ ಈ ಬೇರಿನಲ್ಲೇನಿದೆ  ಮಹಾ ಅನ್ನಿಸಿಬಿಡುತ್ತೆ..  ಬೇರು ಹುಡುಕಿದ್ದು, ಅದಕ್ಕೆ  ಸಂಸ್ಕಾರ ಕೊಟ್ಟಿದ್ದು,    ಕೊನೆಗೆ  ಕಲ್ಪನೆಗೆ ತಕ್ಕ ರೂಪು ತಾಳಲು ಮಾಡಿದ  ಶತಪ್ರಯತ್ನ,  ಇವೆಲ್ಲದರ ಕಥೆ  ಅಪ್ಪಯ್ಯನ ಬಾಯಲ್ಲೇ ಕೇಳಲು  ಚಂದ!


ಕೆಲವು ರೂಪಾಂತರಗೊಂಡ  ಬೇರುಗಳು 

 ಹಾವುಗಳು  ಮತ್ತು ಮುಂಗುಸಿ .. 


 ಆನೆ ಮುಖ 

 ಕೆಂಬೂತ ಮತ್ತು ನವಿಲು 

 ಕ್ರಿಕೆಟ್ ಬೌಲರ್ 

 ಪೀರ್ ಸಾಬ್ 



 ಮತ್ತು ಮಹಮ್ಮದ್ ಸಾಬ್ 

 ನರ್ತಕಿ 


    ಅಪ್ಪಯ್ಯ ಮತ್ತು ಅವನ  ಕಾಷ್ಠ ಶಿಲ್ಪಗಳನ್ನು ಒತ್ತಾಯಪೂರ್ವಕವಾಗಿ ಚಿತ್ರಿಸಿದ್ದು.. [ ಈಗ ಯಂಗೆ ಪುರ್ಸೋತ್ತಿಲ್ಲೇ,  ಕಡಿಗೆ  ಫೋಟೋ ತೆಗಿಲಕ್ಕು  ಎನ್ನುವ ಅಪ್ಪಯ್ಯನನ್ನು ಹಿಡಿದು ಕೂರಿಸಿದ್ದು  ಹೀಗೆ ...:)   ] 


ಈಗೀಗ ಈ ಬೇರುಕೆತ್ತುವ ಕೆಲಸ  ಸ್ವಲ್ಪ ಕಡಿಮೆಯಾಗಿದೆ. ವಯಸ್ಸಿನ ಕಾರಣದಿಂದ ಹಾಗೂ ಆರೋಗ್ಯದ ಕಾರಣದಿಂದ ತುಂಬಾ ಹೊತ್ತು ಕುಳಿತುಕೊಳ್ಳಲು ಕಷ್ಟ .  ಆದರೂ  ಊರಿಗೆ  ಹೋದಾಗೆಲ್ಲಾ, ''ಇದೊಂದು ಹೊಸಾದು ನೋಡಿದ್ಯನೇ,'' ಅನ್ನುತ್ತಾ ಹೊಸದೊಂದು ಆಕೃತಿಯನ್ನು ತೋರಿಸುತ್ತಾನೆ ಅಪ್ಪಯ್ಯ..!

ವಂದನೆಗಳು

 . 

Thursday, January 10, 2013

ಆಟೋದ ಪ್ರಯಾಣವೂ ಕಾರಿನ ರಗಳೆಯೂ..

ನಾನ್ಯಾವತ್ತೂ ಮಾರ್ಕೆಟಿಗಾಗಲೀ ಶಾಪಿಂಗ್ ಗಾಗಲೀ ಸಾಧ್ಯವಾದಷ್ಟೂ ಆಟೋದಲ್ಲೇ ಹೋಗುವುದು.. ಮತ್ತು ಯಾವಾಗ ನಾನು ಮಲ್ಲೇಶ್ವರಮ್ಮೋ , ಮತ್ತೆಲ್ಲೋ ಹೋಗ ಬೇಕಾದರೆ ನನ್ನವರನ್ನು ಕೇಳುತ್ತೇನೆ.. 'ಏನ್ರೀ  ಸ್ವಲ್ಪ ಡ್ರಾಪ್   ಕೊಡುತ್ತೀರಾ?'    ನನ್ನವರು ಯಾವತ್ತೂ ಇಲ್ಲಾ ಅನ್ನದೆ, ''ಮಲ್ಲೇಶ್ವರಮ್ಮಾ... ಎಷ್ಟೊತ್ತಿಗೆ..?  ಆ೦..  ಊಂ..  ಇವತ್ತು ಯಾರೋ ವಿಸಿಟರ್ಸ್ ಬರೋರಿದಾರೆ...  ಆಂ.. ಊಂ... ಏನ್ ಕೆಲ್ಸಾ ಅಲ್ಲಿ ಅರ್ಜ೦ಟಾ? ...''
 ನಾನು,  ''ಸರಿ, ಆಟೋದಲ್ಲೇ ಹೋಗ್ತೇನೆ ಬಿಡಿ..''ಎಂದು ಅವರನ್ನು  ಉಭಯಸಂಕಟದಿಂದ  ಪಾರು ಮಾಡುತ್ತೇನೆ..  ಅಥವಾ ಹಾಗಂದುಕೊಳ್ಳುತ್ತೇನೆ...!! ಹಾಗೊಂದು ಪಕ್ಷದಲ್ಲಿ ಸಮಯವಿದ್ದು ಜೊತೆಗೆ ಬಂದರು ಅನ್ನಿ, ನಾನು ಅಂಗಡಿ ಮೆಟ್ಟಿಲು ಹತ್ತುತ್ತಿದ್ದಂತೆ ಎಷ್ಟೊತ್ತಿದೆ ನಿನ್ ಕೆಲಸ.. ಎನ್ನುವ ಪ್ರಶ್ನೆ ಬೀಳುತ್ತದೆ.  ಸೀರೆಗೊಂದು ಮ್ಯಾಚಿಂಗ್ ಬ್ಲೌಸ್ ಪೀಸ್ ಹುಡುಕಲು ಕನಿಷ್ಠ ನಾಲ್ಕು ಅಂಗಡಿ ತಿರುಗಬೇಕಾಗುತ್ತದೆ ಅಂಥಾದ್ದರಲ್ಲಿ ಇವರನ್ನು ಕಟ್ಟಿಕೊಂಡು ನಾನು ಶಾಪಿಂಗ್ ಗೆ ಹೊರಟರೆ ಅಷ್ಟೇ.. ಮಕ್ಕಳು ಬಂದರೆ ಅವರ ಚಿಪ್ಸ್ ಪ್ಯಾಕೆಟ್ಟು, ಐಸ್ ಕ್ರೀಮು, ಸ್ವೀಟ್ ಕಾರ್ನು ಇವುಗಳ ಶಾಪಿ೦ಗೇ  ಆಗಿಬಿಡುತ್ತದೆ.. ಅದಕ್ಕೆ ನನ್ನ ಕೆಲಸಕ್ಕೆ ನಾನೊಬ್ಬಳೆ..ಇಲ್ಲಾ ಯಾರಾದರೂ ಸಮಾನ ಮನಸ್ಕ ಗೆಳತಿಯರೊಟ್ಟಿಗೆ  ಆಟೋ ದಲ್ಲಿ.

ಆಟೋನೆ ಪರವಾಗಿಲ್ಲ ಈ ಟ್ರಾಫಿಕ್ ಗೆ.   ಜಿರಳೆಯ ಮೀಸೆ ತೂರಿದರೆ  ಸಾಕು ಎಂತಹಾ ಪದರದಲ್ಲೂ ನುಸಿಯುವ ಹಾಗೆ ಈ ಆಟೋದ ಮುಂದಿನ ಚಕ್ರ ನುಸುಳಿದರೆ ಸಾಕು ಇಡೀ  ಆಟೋನೆ ನುಸುಳುತ್ತದೆ.. ಎಂತಹಾ ಟ್ರಾಫಿಕ್ ನಲ್ಲೂ...!   ಕಾರಿನದೇ  ತೊಂದರೆ.  ಅಲ್ಲೆಲ್ಲೋ ಕಿಲೋಮೀಟರ್ ದೂರದಲ್ಲಿ  ಪಾರ್ಕಿಂಗ್ ಪ್ಲೇಸ್ ಹುಡುಕಿ ಅಲ್ಲಿ ಇಟ್ಟು ಮತ್ತೆ ಆಟೋನೆ ಮಾಡಿಸಿಕೊಂಡು ಗಮ್ಯವನ್ನು ತಲುಪಬೇಕು. ಆಟೋನೆ ಸಾಕಪ್ಪಾ.. ಕಾರಿನ ಹಂಗೆ ಬೇಡ. ಆಟೋದವರ ಜೊತೆ ಜಗಳ  ಮಾಡಿಕೊಂಡು, ಕೇಳಿದಷ್ಟು,  ಒಂದಕ್ಕೆ  ಒಂದೂವರೆ  ಕೊಟ್ಟು ಅವರನ್ನು ಓಲೈಸಿಕೊಂಡು  ಬರುವುದರಲ್ಲಿಯೇ ಒಂಥರಾ ರೋಚಕತೆಯಿದೆ ಬಿಡಿ. ಮತ್ತು   ಬೆಂಗಳೂರಿನ ರಸ್ತೆಯ ಅವಸ್ಥೆಗೆ ಯಾಕೆ ಸುಮ್ಮನೆ  ನಮ್ಮನೆ ಕಾರು  ಹಾಳು ಮಾಡಿ ಕೊಳ್ಳಬೇಕು ..?

 ಹ್ಣೂ  ಕಣ್ರೀ..   ಮೊನ್ನೆ ನಮ್ಮ ಏರಿಯಾದ ಮುಖ್ಯ ರಸ್ತೆಯನ್ನು  ಅದೆಷ್ಟು ಚನ್ನಾಗಿ ಟಾರು  ಹಾಕಿದ್ದರೆಂದರೆ,   ನನಗೆ ನಮ್ಮೂರಲ್ಲಿ  ಹೆಬ್ಬಾಗಿಲ ಮುಂದೆ ರಂಗೋಲಿ ಹಾಕುವ ಜಾಗವನ್ನು ಕೊಚ್ಚಿ ಮಗುಚಿ, ಪೆಟ್ನೆ ಬಡಿದು,  ಕೈ ಮಣ್ಣು ಹಾಕಿ, ಗಣಪೆ ಕಾಯಿ ತಗೊಂಡು ಒರೆದು ನುಣ್ಣಗೆ ಮಾಡುತ್ತಿದ್ದುದರ  ನೆನಪಾಗಿತ್ತು...!!  ನನಗೆ ಖುಷಿಯಾಗಿ   ದಿನಾಲೂ ಬೆಳಿಗ್ಗೆ  ಒಂದ್ಸಲಾ, ಸಾಯಂಕಾಲ ಒಂದ್ಸಲಾ  ಹೋಗಿ ಅಡ್ಡಾಡಿ ಸುಮ್ಸುಮ್ನೆ  ತರಕಾರಿ ತಗೊಂಡು ಬಂದೆ ಹೊಸಾ ರಸ್ತೆ ಅಂತಾ..!  ಯಾರ ದೃಷ್ಟಿ ತಾಗಿತೋ ಏನೋ ಮತ್ತೆ ಮೂರ್ ದಿನಕ್ಕೆ ಬಂದ್ರಪ್ಪಾ ಒಳಚರಂಡಿಯವರು.. 'ಅಯ್ಯೋ ಅಯ್ಯೋ ಅಯ್ಯೋ' ಅನ್ಕೊಂಡು.   ಬಂದವರೇ   ಅಲ್ಲೊಂದು  ಹೊಂಡಾ.. ಇಲ್ಲೊಂದು ಹೊಂಡಾ ತೆಗೆದು ರಸ್ತೆಯನ್ನೆಲ್ಲಾ ಅಗೆದು ಯಮರಾಡಿಯೆಬ್ಬಿಸಿಬಿಟ್ಟರು. ಹಾಗಾಗಿ ಈ ಅವಸ್ಥೆಯ ರಸ್ತೆಗಳಲ್ಲಿ ಕಾರಿನಲ್ಲಿ ಕುಳಿತು  'ಬ್ರೇಕ್ ಡ್ಯಾನ್ಸ್' ಮಾಡುತ್ತಾ ಹೋಗುವುದಕ್ಕಿಂತಾ ಆಟೋದಲ್ಲೇ ಹೋಗುತ್ತಾ  'ಅಣ್ಣಮ್ಮನ ಡ್ಯಾನ್ಸ್' ಮಾಡುವುದೊಳಿತು.ಹೋದ ಅನುಭವ ಚೆನ್ನಾಗಿ ನೆನಪಿನಲ್ಲಾದರೂ ಉಳಿಯುತ್ತೆ. ಮತ್ತೆ ಆ ಕಾರಿನ ಏಸಿ  ನನಗಾಗೋಲ್ಲಪ್ಪಾ.  ಹಾಗಂತಾ ಹೇಳಿ  'ನಿನಗೆ ಸುಖ ಹೆಚ್ಚಾಯ್ತು ಕಣೆ' ಅಂತ ಇವರಿಂದ ಮೂತಿ ತಿವಿಸಿಕೊಳ್ಳುವುದಕ್ಕಿಂತಾ ನನಗೆ ಸಮೃದ್ಧ ಗಾಳಿ ಧೂಳು ಸಿಗುವ ಆಟೋನೆ ಸಾಕು..

ಮೊದಲ ಸಲ ಕಾರು ತಗೊಂಡಾಗ ಅದೂ,   ಮಾರುತಿ ಒಮ್ನಿ... ಎಂತಹಾ ಆನಂದ.. ಅದರಲ್ಲಿ ಕುಳಿತು ಹೋಗುತ್ತಿದ್ದರೆ ಪ್ರಪಂಚದ ಎಲ್ಲರೂ ನಮ್ಮನ್ನೇ ನೋಡಿದ ಹಾಗೆ ಅನ್ನಿಸುತ್ತಿತ್ತು..!! ಅಷ್ಟೊಂದು ಥ್ರಿಲ್.   ಮೊದಲನೇ ಸಲದ್ದು ಎಲ್ಲಾ ಹಾಗೆ. 'ಮೊದಲ ಬಾರಿ ಸೆಕೆಂಡ್ ಹ್ಯಾಂಡ್ ಬೈಕ್ ತಗೊಂಡಾಗ ಆದ ಸಂತೋಷ  ಕಾರು ತಗೊಂಡಾಗ ಆಗಿಲ್ಲ ಕಣೇ. ' ಆನ್ನೋದು ನನ್ನವರ ಯಾವತ್ತಿನ  ಅನಿಸಿಕೆ. ವ್ಯವಹಾರಸ್ತರ ಮೊದಲ ಕಾರು ಹೆಚ್ಚಾಗಿ ಒಮ್ನಿಯೇ ಆಗಿರುತ್ತದೆ ಅನ್ನುವುದು ನನ್ನ ಪರ್ಸನಲ್ ಒಪೀನಿಯನ್ನು.  ಮೊದಲು ಲಗ್ಗೆಜಿಗೆ, ಪುರಸೋತ್ತಿದ್ದರೆ ಮನೆ ಮಂದಿಗೆ ಅನ್ನುವುದು ನೂರಕ್ಕೆ ನೂರು ನಿಜ.




ಆಮೇಲಾಮೇಲೆ ಕಾರುಗಳು ನಾನಾ ತರದವು ಬಂದು ಹೋಗಿ ಮಾಡಿದ್ದರೂ  ನನಗೆ ಅರಿವಿಗೆ ಬರುವುದು ಮಾರುತಿ ಒಮ್ನಿ ಮಾತ್ರಾ.ಮತ್ತು ಇನ್ನೊಂದು ವಿಶೇಷ ಅಂದರೆ, ನಮ್ಮ ಪಕ್ಕದ್ಮನೆ ಮಗು ಒಂದಿಪ್ಪತ್ತು   ತರದ ಕಾರುಗಳನ್ನು ಅದರ ಚಕ್ರವೋ, ಲೈಟನ್ನೋ, ಮೂತಿಯನ್ನೋ  ನೋಡಿಯೇ ಅದು ಇಂತಾ ಕಾರು ಅಂತ ಗುರುತಿಸಿಬಿಡುತ್ತದೆ. ಇದು ನ್ಯಾನೋ, ಇದು ಸ್ಕಾರ್ಪಿಯೋ, ಇದು ಡಿಸೈರ್,ಇದು ಬೆಂಜ್   ಅಂತ ನೋಡಿದಾಕ್ಷಣ ಹೇಳಿಬಿಡುತ್ತದೆ. ನಾನಂತೂ  ಕಾರುಗಳಲ್ಲಿ ಮಾರುತಿ ಒಮ್ನಿಯನ್ನಾದರೆ ತಕ್ಷಣಕ್ಕೆ ಅದು ಅದೇ ಅಂತ ಗುರುತಿಸಬಲ್ಲೆ.ಯಾಕೆ ಅಂದರೆ ಅದು ಪೆಟ್ಟಿಗೆ ತರಾ ಇರುತ್ತಲ್ಲ ಅದು ಒಮ್ನಿ.. ಮೂತಿ ಇರುವುದೆಲ್ಲಾ ಕಾರುಗಳು.. ಇಲ್ಲಾ ಅಂದರೆ ನಮ್ಮ ಶೆಡ್ ನಲ್ಲಿ ಯಾವ ಕಾರು ನಿಂತಿದೆಯೋ ಅದು ಮಾತ್ರಾ ಗುರುತಿಸಿ ಹೇಳಬಲ್ಲೆ. ಅದು ರಸ್ತೆಗಿಳಿದರೆ ಮತ್ತೆ ನನಗೆ ಅಯೋಮಯ..!   ಮೂತಿಯಿರುವವು ಎಲ್ಲವನ್ನೂ ಒಟ್ಟುಗೂಡಿಸಿ 'ಕಾರು' ಲಿಸ್ಟಿಗೆ ಸೇರಿಸಿಬಿಡುತ್ತೇನೆ ನಾನು.  ನಾವು ಕಲಿತಿದ್ದೆ ಹಾಗಲ್ವಾ.. ಕಾರು, ಜೀಪು, ಬಸ್ಸು,  ಲಾರಿ,  ರೈಲು, ವಿಮಾನ ಅಂತ ಸಂಚಾರ ಮಾಧ್ಯಮಗಳನ್ನು..!!
ಇದೊಂದು ಕೇಳಿ,  ನಾವೆಲ್ಲಾ  ಎಲ್ಲಾದರೂ  ಹೋಗುತ್ತಿರಬೇಕಾದರೆ ನನ್ನ ಜಾಣತನದ ಪರೀಕ್ಷೆ ನಡೆಯುತ್ತಿರುತ್ತದೆ.    ನನ್ನ ಮಕ್ಕಳು ಆಗಾಗ ಆಚೀಚೆ ನೋಡುತ್ತಾ.. ಆಡಿ, ಆಡಿ.. ಮರ್ಸಿಡಿಸ್  ಬೆಂಜ್ ಬೆಂಜ್ ವಾವ್.. ಎನ್ನುತ್ತಿರುತ್ತಾರೆ.. ನಾನು ಎಲ್ಲಿ ಎಲ್ಲಿ ಅನ್ನುತ್ತಾ ಎದುರಿಗೆ ಹೋಗುವ ಆಟೋ, ಮತ್ಯಾವುದೋ  ಬೆನ್ನು ನಪ್ಪಿದ ಕಾರುಗಳನ್ನು ನೋಡುತ್ತಿರುತ್ತೇನೆ. ಪೇಪರ್ ಓದುವಾಗ, ಟೀವಿ ನೋಡುವಾಗ.. 'ಏ ಬುಗಾಟಿ ನೋಡು, ಲ್ಯಾಮ್ಬರ್ಗಿನಿ ನೋಡು.. ಯಪ್ಪಾ ಫೆರಾರಿ ಯಂತಾ ಚನಾಗಿದೆ..'ಅನ್ನುತ್ತಾ ನಮ್ಮನೆಯ ಕನ್ನಡ ಕುವರಿ, ಕುವರ .. ಇಬ್ಬರೂ ಉದ್ಘರಿಸುತ್ತಿದ್ದರೆ ನನಗೆ ಅದರ ತಲೆ ಬುಡ ತಿಳಿಯುವುದಿಲ್ಲ.





ಕಾರಿನ ಹಿಂದಗಡೆಯೇ ಅಲ್ಲವೇ  ಹೆಸರು ಇರುವುದು..?     ನನಗೋ ಎದುರಿಗೆ ಹೋಗುವ ಕಾರಿನ ಹಿಂಬದಿಯಲ್ಲಿ ಏನು ಬರೆದರೆ ಅದೇ 'ಕಾರಿನ ಹೆಸರು' ಅಂದುಕೊಂಡುಬಿಡುತ್ತೇನೆ. .. ಆಲ್ಟೊ, ಸ್ವಿಫ್ಟ್, ಹೊಂಡಾ ಸಿಟಿ, ಇನ್ನೋವಾ  .. ,...,...,.. ಜೊತೆಗೆ  ಬಾಲಾಜಿ, ಪ್ರೇರಣಾ, ಆರ್ ಎನ್ ಎಸ್ಸ್ ಎಲ್ಲವೂ ಕಾರಿನ ಹೆಸರುಗಳಾಗಿ ಕಾಣಿಸುತ್ತವೆ..!   ''ಓ ಇದ್ಯಾವುದೋ ಹೊಸಾ ಕಾರು ಮಾಂಡೋವಿ ನೋಡಿ..!!!'' ಅಂತ ನಾನು ನನ್ನ ಜಾಣತನವನ್ನು ಪ್ರದರ್ಶಿಸುತ್ತಿದ್ದರೆ  ನನ್ನವರು  ಸ್ಟೇರಿಂಗ್ ಗೆ ತಲೆ ತಲೆ ಜಪ್ಪಿಕೊಳ್ಳಲು ಶುರು ಮಾಡುತ್ತಾರೆ. ಈಗೀಗ ಅದ್ಯಾವ ಉಸಾಬರಿಗೂ ಹೋಗುವುದೇ ಇಲ್ಲ.. ಎದುರಿಗೆ ಹೋಗುವ ಗಾಡಿಗಳ ಹಿಂದೆ ಬರೆದಿರುವ ಶ್ರೀ ಧರ್ಮಸ್ಥಳ,ಶ್ರೀ ಸಿಗಂದೂರೇಶ್ವರಿ. ವೆಂಕಟೇಶ್ವರ,  ಅಣ್ಣಮ್ಮ ದೇವಿ, ಮಾತೃ ಕೃಪಾ,...,.. ಎನ್ನುವ ಹೆಸರುಗಳನ್ನೂ ತಪ್ಪಿಯೂ ಬಾಯ್ಬಿಟ್ಟು ಓದುವುದಿಲ್ಲ..!!! 


 [ ಇಲ್ಲಿನ ವಿಚಾರಗಳಲ್ಲಿನ ಸತ್ಯತೆ ಮತ್ತು ಉತ್ಪ್ರೇಕ್ಷೆಗಳನ್ನು ಓದುಗರ ಊಹೆಗೆ  ಬಿಟ್ಟಿದ್ದೇನೆ...:) ]