Thursday, March 25, 2010

ಅಜ್ಜ ಸ್ಟಾರ್ ಆಗಿದ್ದಾನಲ್ವ ....?

ಶಿಶಿರ ಬಾಲ್ಕನಿಯಲ್ಲಿ ನಿಂತು ಆಕಾಶದಲ್ಲಿರುವ ನಕ್ಷತ್ರಗಳನ್ನೇ ದಿಟ್ಟಿಸುತ್ತಿದ್ದ.

''ಅಮ್ಮಾ,ಅಜ್ಜ ಸ್ಟಾರ್ ಆಗಿದ್ದಾನಲ್ವ...? ಈ ಬ್ರೈಟ್ ಸ್ಟಾರ್ ಅಜ್ಜನದೇ ಇರಬೇಕು... ''

ಅವನ ಅಜ್ಜ , ಅ೦ದರೆ ನಮ್ಮ ಮಾವ ತೀರಿಕೊಂಡು ತಿಂಗಳಿಗೆ ಬಂತು. ಶಿಶಿರನಿಗೆ ದಿನಾಲೂ ಅಜ್ಜನದೇ ನೆನಪು...

ಜೊತೆಗೆ ನೂರಾರು ಪ್ರಶ್ನೆಗಳು.

ಸಾವಿನ ಬಗೆಗಿನ ಪ್ರಶ್ನೆಗಳಿಗೆ ಉತ್ತರವೇ ದೊರಕುತ್ತಿಲ್ಲ....... ಬಹುಷಃ ಇಲ್ಲ.....

ಆರೋಗ್ಯವಾಗಿಯೇ ಇದ್ದ ಅಜ್ಜ ಹೀಗೆ ಏಕಾಏಕಿ ತೀರಿಕೊಂಡಿದ್ದು ಶಿಶಿರನಿಗೆ ನಂಬಲು ಸಾಧ್ಯವಾಗುತ್ತಿಲ್ಲ. ನಮಗೂ ಕೂಡಾ........

ನಮ್ಮ ಮಾವನವರು ಆರೋಗ್ಯವಾಗಿಯೇ ಇದ್ದವರು ಈಗೆರಡು ತಿಂಗಳಿನಿಂದ ಸ್ವಲ್ಪ ಅಸ್ವಸ್ತರಾಗಿದ್ದರೂ ಕೂಡಾ ನಾವೆಲ್ಲ ಹ್ನ.... ಅರಾಮಾಗ್ತಾರೆ.... ಅಂತಲೇ ಅಂದುಕೊಂಡಿದ್ದೆವು.

ಬಿಟ್ಟೆ ಹೋದರು. ನಮ್ಮನ್ನೆಲ್ಲಾ....

ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಸಾಯುವುದು ನಿಜವೇ ಆದರೂ ' ನಮ್ಮ ಪ್ರೀತಿಪಾತ್ರರು ನಮ್ಮನ್ನಗಲಿದಾಗ ಆಗುವ ನೋವು, ಸಂಕಟವೇ ಬೇರೆ.' ಏಕೆಂದರೆ ಅವರು ನಮ್ಮನ್ನ ಪ್ರೀತಿಸಿರುತ್ತಾರೆ, ಪ್ರೀತಿ, ಪ್ರೇಮದ , ವಿಶ್ವಾಸದ ಭಾರ ನಮ್ಮ ಮೇಲಿರುತ್ತದಲ್ಲ....

ನಮ್ಮ ಗೆಳೆಯರೊಬ್ಬರು ಹೇಳುತ್ತಿದ್ದರು. ನಾವು ಅತ್ಯಂತ ಪ್ರೀತಿಸಿರುತ್ತೇವಲ್ಲ.... ಅವರು ಸತ್ತಾಗ ನಾವೂ ಅಷ್ಟಷ್ಟೇಸಾವಿನತ್ತ ಸರಿಯುತ್ತಿರುತ್ತೇವೆ .....!!!!!! ನಿಜವಲ್ಲವೆ....?



ಸಾವಿನ ಮನೆಗಳಿಗೆ ಹೋಗಬೇಕು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು.ಹೆಣಹೊರಬೇಕು.....ನಿಶ್ಯಬ್ಧವಾಗಿ.

ಆಗ ನಮ್ಮೊಳಗಿನ ಕೊಳೆ ಅಷ್ಟಷ್ಟೇ ತೊಳೆದುಹೋಗ ತೊಡಗುತ್ತದೆ. ಸುತ್ತಲಿನ ಜನ ಆ ಕ್ಷಣದಲ್ಲಿ ನಮ್ಮವರೆನಿಸಿಕೊಳ್ಳುತ್ತಾರೆ......!!!!

ನಿಜ ನನಗಿದು ಮೊದಲ ಅನುಭವ.... ಅಲ್ಲಿನ ಮೌನ, ನೀರವತೆ, ನಿಶ್ಯಬ್ಧ , ಅಲ್ಲಿ ಸುಳಿದಾಡುವ ಭಾವನೆಗಳು,ದುಃಖ , ಎದೆಯಲ್ಲಿ ಏನೋ ಕಟ್ಟಿಕೊಂಡ ಹಾಗೆ, ಅನುಭವಿಸಲು ಆಗದಂತಾ ಸ್ಥಿತಿ ನಮ್ಮ ಒಳ ಅರಿವನ್ನು ಕೆದಕುತ್ತದೆ...



ಸಾವು ಎಲ್ಲರಿಗೂ ಬರುವುದು ನಿಶ್ಚಿತವೆನಿಸಿದರೂ ತನಗೆ ಮಾತ್ರ ಬಾರದೆಂಬ ಉನ್ಮಾದದಿಂದ ವರ್ತಿಸುವ ಮಾನವನಿಗೆ ಅಲ್ಪವಾದರೂ ಭ್ರಮೆ ಹರಿದರೆ ಸಾವಿನ ಮನೆಯಲ್ಲೊಂದು ಬದುಕು ಹರಡುವುದು ಖಂಡಿತ.



ಏನೆಲ್ಲಾ ಮಾಡಿದರೂ....ಏನೆಲ್ಲಾ ಕೂಡಿಟ್ಟುಕೊಂಡರೂ, ಯಾರನ್ನೆಲ್ಲಾ ಕಾಡಿದರೂ ಅಮರರಾಗಲಾದೀತೇ....? ನಾಲ್ಕು ಜನರ ಹೆಗಲ ಮೇಲೆ ಹೋಗಲೇ ಬೇಕು....ಹೋಗುವಾಗ ನಾಲ್ವರ ಕಣ್ಣಲ್ಲಿ ಕಂಬನಿ ಮಿಡಿದರೆ ..... ಇನ್ನಷ್ಟು ದಿನ ನಿಮ್ಮೊಂದಿಗಿನ ಹರುಷ ನಮ್ಮದಾಗಬಾರದಿತ್ತೆ....ಎಂಬ ಶ್ರದ್ಧಾಶ್ರುವುಕ್ಕಿದರೆ ಸಾವು ಕೂಡಾ ಅರ್ಥಪೂರ್ಣ....





ಮಾವ ಹಾಗೆ ಬದುಕಿದ್ದರು.ವೃತ್ತಿಯಲ್ಲಿ ಶಿಕ್ಷಕರಾಗಿದ್ದರು....

ಸ್ವಾಭಿಮಾನಿ...ಅಂತಃಕರುಣಿ... ಅಜಾತ ಶತ್ರು ಅವರು. ಎಲ್ಲರನ್ನೂ ಪ್ರೀತಿಸುತ್ತಿದ್ದರು ಮತ್ತು ಎಲ್ಲರೂ ಅವರನ್ನು ಪ್ರೀತಿಸಿದರು. ಹೆಂಡತಿ,ಮಕ್ಕಳು, ಮೊಮ್ಮಕ್ಕಳೂ ,ಸೊಸೆಯಂದಿರು,ಬಂಧುಮಿತ್ರರೂ, ಶಿಷ್ಯಂದಿರು ಎಲ್ಲರೂ ಹನಿಗಣ್ಣಾದರು....ಅವರ ವಿದಾಯಕ್ಕೆ.....



ಶಿಶಿರನ ಪ್ರಶ್ನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ..ಐಶುವಿಗೆ ಸ್ವಲ್ಪ ಅರ್ಥವಾಗುತ್ತದೆ......

ಅಜ್ಜ ಸತ್ತದ್ದು ಏಕೆ.....? ಇನ್ನು ಬರಲ್ವ....?

ವಯಸ್ಸಾದವರೆಲ್ಲಾ ಸಾಯಬೇಕಾ...? ಅಪ್ಪ ... ನೀನೂ ಸಾಯುತ್ತೀಯಾ.....? ನಾನು ಸಾಯುತ್ತೇನಾ...?

ಇಲ್ಲಪ್ಪಾ ವಯಸ್ಸಾದ ಮೇಲೂ ನೀನು ಸಾಯಬೇಡ ಆಯ್ತಾ....ಅಪ್ಪಾ....

ಅಜ್ಜ ಆಕಾಶದಲ್ಲಿ ಸ್ಟಾರ್ ಆಗಿದ್ದಾನಲ್ವಾ.... ? ನಾನು ಕರೆದರೆ ಅವನಿಗೆ ಕೇಳಿಸುತ್ತಾ....? ನಾನು ಅವನಿಗೆ ಕಾಣಿಸ್ತಾ ಇದ್ದೇನಾ...?

ಅಜ್ಜ ದೇವರಾಗಿದ್ದಾನಾ..? ನಮಗೆಲ್ಲಾ ಒಳ್ಳೆದಾಗಲೀ ಅಂತಾ ಹೇಳ್ತಾ ಇದ್ದಾನಾ...?ಈ ದೊಡ್ಡ ಸ್ಟಾರ್ ಅಜ್ಜನೆ ಇರಬೇಕು ....



ಅವನ ಪ್ರಶ್ನೆಗಳಿಗೆ ಉತ್ತರ ಹೇಗೆ ಕೊಡಲಿ....?''ಅಜ್ಜಿ ನೀನು ಬೇಜಾರು ಮಾಡ್ಕೋಬೇಡ ''ಅಂತ ಅಜ್ಜಿಗೆ ಫೋನಿನಲ್ಲಿ ಹೇಳುತ್ತಾನೆ....

ಮಕ್ಕಳಿಗೆ ಸಾವು

ಅನ್ನುವುದನ್ನ ಹೇಗೆ ವಿವರಿಸುವುದು...? ಪ್ರಶ್ನೆಗಳು ನನಗೂ ಕಾಡತೊಡಗಿವೆ.



ಮಾವನವರಿಗೊಂದಿಷ್ಟು ಅಕ್ಷರಾಂಜಲಿ .



ನಡೆಸಿದ್ದರವರು .....

ವರುಷಕ್ಕೂ ಮೊದಲೇ ತಯಾರಿ..

ಮುಚ್ಚಲು ಹೊದಿಕೆ,

ಉಡಲು ವಸ್ತ್ರ,

ಒಡೆಯಲು ಮಡಕೆ....

ಸಮಸ್ತ ಕಾರ್ಯಗಳಿಗೂ ಪೂರ್ವತಯಾರಿ...

ಮತ್ತೆ ಮರುಗದಿರಿ ಎಂಬ ಸಾಂತ್ವಾನ....

ಗಡುವು ಹಾಕಿದ್ದರು ಈ ಬಾರಿ...



ಬಂತಲ್ಲ ಹೃದಯ ಯಾತನೆ.

ಪ್ರಯಾಣಕ್ಕೆ ಸೂಚನೆ..

ಕಲ್ಪವೃಕ್ಷ ಕಮರಿತಲ್ಲ....

ಹಾಗೆ ಒರಗಿತಲ್ಲ...

ಕುಣಿಯುತ್ತ ಬಂದ ಅಂತಕ

ಮನಸ್ಸಿಗೀಗ ನಿಜ ಸೂತಕ.



ಬಡ ಮೇಷ್ಟ್ರು... ಔದಾರ್ಯಕ್ಕೇನು ಕೊರತೆ...

ಸಾಮಾಜಿಕ ಚಿಂತನೆ, ಸಾಂಸಾರಿಕ ಸುಖ...

ಸತ್ಯ, ಸತ್ವ, ಸಾತ್ವಿಕ ಬದುಕು...

ಜಪಿಸಿದ್ದು ಸ್ವಾಭಿಮಾನದ ಮಂತ್ರ..

ಹಂಚಿ ತಿನ್ನುವ ಸಿದ್ಧಾಂತ.



ಹೊರಿಸಿದ್ದಾರಲ್ಲ ನಮ್ಮ ಮೇಲೆ

ದೊಡ್ಡ ಭಾರ....... ಸಾಲದ್ದಲ್ಲ,...... ಇರಿ


ಪ್ರೀತಿ , ಪ್ರೇಮ, ವಿಶ್ವಾಸದ ಭಾಂಡವಿತ್ತು ,

ಮತ್ತೆ ಸುತ್ತ ಹಂಚಿರೆಂಬ ಸೂಚನೆಯಿತ್ತು...



ಇಲ್ಲಪ್ಪಾ... ಇಲ್ಲೇ ಕುಳಿತು

ಓದುತ್ತಿರುವರಲ್ಲ....

ಆರಾಮಕುರ್ಚಿಯ ಮೇಲೆ ಹಾಗೆ ಒರಗಿ.

ಅನ್ನಿಸುವುದೆಲ್ಲ ಇನ್ನು ಭ್ರಮೆ.

ಆತ್ಮವಿಶ್ವಾಸ, ಮಂದಹಾಸ,


ಇನ್ನೆಲ್ಲಿ ...?ಕಣ್ಣಲ್ಲಿ ಸದಾ ಕ್ಷಮೆ..



ತರಲಿಲ್ಲ ಹರುಷ ಹೊಸ ವರುಷ...

ಮರಳೀತು ಮತ್ತೆ ಮತ್ತೆ.....

ತೆರಳುವುದು ನೆನಪುಗಳ ಸುತ್ತೆ...

ಎಂಬತ್ತರ ಹುಟ್ಟುಹಬ್ಬದ ಸಂತಸಕ್ಕೆ

ವರುಷ ತುಂಬುವ ಮೊದಲೇ...

ತೆರಳಿದರು ಮರಳಲಾಗದ ಊರಿಗೆ.



ಶಿಶಿರ ಮತ್ತೆ ಓಡಿಬಂದ ...


''ಅಮ್ಮ , ಅಜ್ಜನಿಗೆ planets ಇವೆಯಾ ''?

ಉತ್ತರಿಸ ಬೇಕಿದೆ ಅವನ ಭಾಷೆಯಲ್ಲಿ....



[ ಭೂರಮೆಯ ಸುಮಾ ಮಾವನವರ ಬಗ್ಗೆ ವಿವರಿಸಿದ್ದಾರೆ.....ಅಲ್ಲಿ ನೋಡಿ.]

Wednesday, March 3, 2010

ಕುಡಿಯುವುದನ್ನು ಬಿಡುವುದು ಸುಲಭವೇ....?

ಕೆಲವು ದಿನಗಳ ಹಿಂದೆ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ.ಇಪ್ಪತ್ತೈದು ವರುಷ ಯಕ್ಷಗಾನದಧ್ಯಾಯ ಪೂರೈಸಿದ ಪ್ರತಿಭಾವಂತ ನಟನಿಗೆ ಬೆಳ್ಳಿಹಬ್ಬದ ಸಂಮಾನವಿತ್ತು.

ಸನ್ಮಾನಿತ ನಟ ಒಬ್ಬ ಪ್ರತಿಭಾವಂತ ಕಲಾವಿದ.ಆದರೆ ಅತೀವ ಮದ್ಯವ್ಯಸನಿ.ಈ ವಿಚಾರ ಕುಟುಂಬದವರಿಗೆ, ಅಭಿಮಾನಿಗಳಿಗೆ ತುಂಬಾ ಬೇಜಾರಿನ ಸಂಗತಿ.ಸನ್ಮಾನಿಸುವ ಹೊತ್ತಿನಲ್ಲಿ ಮುಖ್ಯವಾದ ವ್ಯಕ್ತಿಯೊಬ್ಬರಿಂದ ಈ ನಟನಿಗೆ ಮದ್ಯಪಾನ ಬಿಡಬೇಕೆನ್ನುವ ಒತ್ತಾಯ ಹೇರಲಾಯಿತು.ಕುಟುಂಬದವರ ಮತ್ತು ಸಭಾಸದರ ಸಮ್ಮುಖದಲ್ಲಿ.....!

ಈಗಾಗಲೇ ಸಾಕಷ್ಟು ಜನರಿಂದ, ಸಾಕಷ್ಟು ಪ್ರಸಂಗಗಳಲ್ಲಿ ಹೇಳಿಸಿಕೊಂಡಿದ್ದರೂ ಅದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ನಟ ತನ್ನ ಅಭ್ಯಾಸಕ್ಕೆ ದಾಸನಾಗಿದ್ದೂ ನಿಜ... ಉಳಿದವರು ಈ ವರ್ತನೆಯಿಂದ ಬೇಸರಗೊಂಡಿದ್ದೂ ನಿಜ...

ಹಾಗಾದರೆ ಹೇಳಿ ಕೇಳಿ ಮಾಡುವುದರಿಂದ, ಪಂಚಾಯ್ತಿ ಮಾಡಿಸುವುದರಿಂದ, ಸಭೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಹೇಳುವುದರಿಂದ ಒಬ್ಬ ವ್ಯಕ್ತಿಯ ಕುಡಿತ ಬಿಡಿಸುವುದು ಸಾಧ್ಯವೇ....?ಎಲ್ಲರೆದುರಿಗೆ ಹೇಳಿಬಿಟ್ಟರು ಎನ್ನುವ ಅವಮಾನಕ್ಕೀಡಾಗಿ ಮತ್ತೆ ಒಳ ಹೋಗಿ ಇನ್ನಷ್ಟು ಕುಡಿದಿರಲಿಕ್ಕೂ ಸಾಕು.....!


ಅದಷ್ಟು ಸುಲಭವಲ್ಲ..... ಒಮ್ಮೆ ಹಿಡಿಸಿಕೊಂಡ ಕುಡಿತವನ್ನು ಬಿಡುವುದು...!!


ಕುಡಿತ ಹಿಡಿಸಿಕೊಳ್ಳಲು ಸಾಕಷ್ಟು ಕಾರಣಗಳಿವೆ.ನಮಗೆಲ್ಲಾ ಗೊತ್ತಿದ್ದುದೆ... ಕುತೂಹಲ, ಅನುಕರಣೆ , ಅಪ್ರಬುದ್ಧತೆ ಜೊತೆಗೆ.. ಮಜಾ ಮಾಡುವ ಸ್ವಭಾವ...ಹೀಗೆ
ಕುಡಿಯುವುದಕ್ಕೂ, ಅದನ್ನು ಬಿಡದಿರಲಿಕ್ಕೂ ಇನ್ನಷ್ಟು ಕಾರಣಗಳಿವೆ.ಸಂತೋಷ , ದುಃಖ , ದುಡ್ಡು ಬಂದಿದ್ದು, ಕಳೆದಿದ್ದು, ಅವಮಾನ , ಸಮ್ಮಾನ ಹೀಗೆ.
ನಮ್ಮೂರಲ್ಲಿ ನಮ್ಮ ಮನೆಗೊಬ್ಬ ಕೆಲಸದಾಳು ಬರುತ್ತಿದ್ದ. ಆತ ಕುಡಿದುಕೊಂಡು ಬರುತ್ತಿರುವ ವೇಳೆಯಲ್ಲಿ ನಮ್ಮ ತಂದೆಗೆ ಎದುರಾಗಿಬಿಟ್ಟ ಎನ್ನುವ ಕಾರಣದಿಂದ ಅವಮಾನವಾದಂತಾಗಿ ಯಾವತ್ತೂ ಹೀಗಾಗಿರಲಿಲ್ಲ ಎನ್ನುತ್ತಾ ಅದನ್ನು ಮರೆಯಲು ಮತ್ತೆರಡು 'ಕೊಟ್ಟೆ ' ಗಂಟಲಿಗಿಳಿಸುತ್ತಿದ್ದ.......!! ಕಾರಣಗಳು ಸುಲಭವಾಗಿ ಸಿಗುತ್ತವೆ...!

ಜೊತೆಗೆ ಇಲ್ಲಿ ಗಮನಿಸುವ ಅಂಶವೆಂದರೆ,ಮದ್ಯಪಾನದಲ್ಲಿ ವಂಶವಾಹೀ ಕಾರಣಗಳೂ ಸೇರುತ್ತವೆ.ಮದ್ಯಪಾನಿಗಳ ಮಕ್ಕಳು ಕುಡಿತಕ್ಕೆ ಸಿಲುಕುವ ರಿಸ್ಕ್ ಫ್ಯಾಕ್ಟರ್ ಹೆಚ್ಚಿಗೆ ಇರುತ್ತದೆ.ಅಂದರೆ ಕುಡಿಯುವವರೆಲ್ಲರ ಮಕ್ಕಳೆಲ್ಲಾ ಕುಡುಕರಾಗುತ್ತಾರೆ ಎಂದಲ್ಲ.tendency ಹೆಚ್ಚಿಗೆ ಇರುತ್ತದೆ ಅಂತ. ಪರಿಸರ, ಸಂಸ್ಕಾರ, ಮಾರ್ಗದರ್ಶನ ಇಲ್ಲಿ ಹೆಚ್ಚಿನ ಪ್ರಭಾವ ಬೀರುತ್ತವೆ.
ಮದ್ಯಪಾನಿಗಳನೇಕರ ಮಕ್ಕಳು ಸಂಸ್ಕಾರವಂತರಾಗಿ ಇರುವುದನ್ನು ನಾನು ನೋಡಿದ್ದೇನೆ.

ಮದ್ಯಪಾನ ಅಥವಾ ಆಲ್ಕೊಹಾಲಿಸಂ ... ಇದು ಒಂದು ರೋಗ. ಜಾಡ್ಯ....

ಒಮ್ಮೆ ಕುಡಿತದ ವ್ಯಸನಕ್ಕೆ ಒಳಗಾದನೆಂದರೆ, ಆತನಿಗೆ ಮತ್ತೆ ಮತ್ತೆ ಕುಡಿಯಬೇಕೆನಿಸುತ್ತದೆ.
ಯಾರೇ ಏನೇ ಹೇಳಿದರೂ ಕುಡಿಯುವುದನ್ನು ನಿಲ್ಲಿಸಲು ಅಸಾಧ್ಯವಾಗುತ್ತದೆ.
ಕುಡಿಯುವುದನ್ನು ನಿಲ್ಲಿಸಿದರೂ ದೈಹಿಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ನಡುಕ, ಬೆವರುವುದು,ಉದ್ರೇಕ, ವಾಂತಿ ಬಂದಂತಾಗುವುದು..ಇತ್ಯಾದಿ..
ಕುಡಿತ ಅಭ್ಯಾಸವಾದಂತೆ ತೆಗೆದುಕೊಳ್ಳುವ ಆಲ್ಕೊಹಾಲಿನ ಪ್ರಮಾಣ ಕೂಡಾ ಹೆಚ್ಚು ಹೆಚ್ಚು ಬೇಕಾಗುತ್ತದೆ.ಇಲ್ಲದಿದ್ದರೆ ಕಿಕ್ ಸಾಕಾಗುವುದಿಲ್ಲ.

ಮನೆಯಲ್ಲಿ, ಹೊರಗಡೆ ಅನೇಕ ಆರ್ಥಿಕ, ಸಾಮಾಜಿಕ ತೊಂದರೆಗಳಿದ್ದರೂ ಕುಡಿಯುವುದನ್ನು ನಿಲ್ಲಿಸಲು ಸಾಧ್ಯವಾಗದಿರಲು ಕಾರಣವೇನೆಂದರೆ ಇದು ಒಂದು ರೋಗವಾಗಿ ಪರಿಣಮಿಸುವುದು. ಡಯಾಬಿಟಿಸ್, ಅಸ್ಥಮಾ ರೋಗಗಳಂತೆಯೇ ಮದ್ಯವ್ಯಸನ ಕೂಡಾ ಒಂದು ರೋಗ.. ವ್ಯತ್ಯಾಸವೆಂದರೆ ಇದು ಸ್ವಯಂಕೃತ ......!!!

ಆಲ್ಕೊಹೊಲಿಸಂ ಅಥವಾ ಮದ್ಯವ್ಯಸನವನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ..
ಆದರೆ ಉಪಶಮನಕ್ಕೆ ಚಿಕಿತ್ಸೆ ಇದೆ.ಹೇಗೆ ಸಕ್ಕರೆ ಕಾಯಿಲೆ ಉಲ್ಬಣಿಸದಂತೆ ಕಾಲಕಾಲಕ್ಕೆ ತಕ್ಕ ಆರೈಕೆ ಮಾಡಬೇಕೋ ಹಾಗೆಯೇ ಮದ್ಯಪಾನ ನಿಲ್ಲಿಸಿದ ವ್ಯಕ್ತಿಗಳಿಗೆ ಆರೈಕೆ, ಮಾರ್ಗದರ್ಶನ, ಮುತುವರ್ಜಿ ಬೇಕಾಗುತ್ತದೆ.

ದುರಂತವೆಂದರೆ ಮದ್ಯವ್ಯಸನಿಗಳನ್ನು ಕುಟುಂಬದವರಾಗಲೀ, ಸಮಾಜವಾಗಲೀ ಗೌರವದಿಂದ ಕಾಣುವುದಿಲ್ಲ.ಅದು ಕುಡಿಯುವುದನ್ನು ಬಿಟ್ಟ ನಂತರವೂ ಮುಂದುವರೆಯುತ್ತದೆ.ನಿರ್ಲಕ್ಷಕ್ಕೊಳಗಾಗುವುದರಿಂದಲೂ , ಅವಮಾನಕ್ಕೊಳಗಾಗುವುದರಿಂದಲೂ ಮನಸ್ಸು ಮತ್ತೆ ಮದಿರೆಯನ್ನೆ ಬಯಸುತ್ತದೆ.ಕ್ಷಣಕಾಲ ಚಿಂತೆ ಮರೆಯಲು.....!!!

ಮದ್ಯವ್ಯಸನ ಬಿಡಿಸಲು ಚಿಕಿತ್ಸಕ ಕೇಂದ್ರಗಳಿವೆ.. ಕುಡಿಯುವುದನ್ನು ಬಿಡುತ್ತೇನೆ ಎಂದು ಎಷ್ಟು ಗಟ್ಟಿ, ದೃಢ ನಿರ್ಧಾರ ಮಾಡಿಕೊಂಡರೂ ಅಸಹಾಯಕ ಕ್ಷಣ ಹೊಂಚುಹಾಕುತ್ತಲೇ ಇರುತ್ತದೆ... ಹಾಗಾಗಿ ಇಂತಹವರಿಗೆ ನುರಿತ ತಜ್ಞರ, ವೈದ್ಯರ ಅವಶ್ಯಕತೆಯಿದೆ. ಆಪ್ತ ಸಮಾಲೋಚನೆ ಬೇಕಾಗುತ್ತದೆ.

ಮತ್ತೆ ಯಾವಾಗ ಬೇಕಾದರೂ ಆತ ಮದ್ಯಪಾನದ ಸೆಳೆತಕ್ಕೊಳಗಾಗಬಹುದು. ಅದಾಗದಂತೆ ಒಮ್ಮೆ ಚಿಕಿತ್ಸೆ ನಡೆದ ನಂತರ ವ್ಯಕ್ತಿಯನ್ನು ಗೌರವಯುತವಾಗಿ ನೋಡಿಕೊಳ್ಳುವುದು ಮುಖ್ಯ. ಕುಡುಕ ಎಂಬ ಹಣೆಪಟ್ಟಿ ಕಟ್ಟದೆ ನೈತಿಕ ಬೆಂಬಲ, ಆತ್ಮವಿಶ್ವಾಸ ಮೂಡಿಸುವುದು ಪ್ರೀತಿವಿಶ್ವಾಸ ತೋರಿಸುವುದು ಅಗತ್ಯ.