Thursday, March 25, 2010

ಅಜ್ಜ ಸ್ಟಾರ್ ಆಗಿದ್ದಾನಲ್ವ ....?

ಶಿಶಿರ ಬಾಲ್ಕನಿಯಲ್ಲಿ ನಿಂತು ಆಕಾಶದಲ್ಲಿರುವ ನಕ್ಷತ್ರಗಳನ್ನೇ ದಿಟ್ಟಿಸುತ್ತಿದ್ದ.

''ಅಮ್ಮಾ,ಅಜ್ಜ ಸ್ಟಾರ್ ಆಗಿದ್ದಾನಲ್ವ...? ಈ ಬ್ರೈಟ್ ಸ್ಟಾರ್ ಅಜ್ಜನದೇ ಇರಬೇಕು... ''

ಅವನ ಅಜ್ಜ , ಅ೦ದರೆ ನಮ್ಮ ಮಾವ ತೀರಿಕೊಂಡು ತಿಂಗಳಿಗೆ ಬಂತು. ಶಿಶಿರನಿಗೆ ದಿನಾಲೂ ಅಜ್ಜನದೇ ನೆನಪು...

ಜೊತೆಗೆ ನೂರಾರು ಪ್ರಶ್ನೆಗಳು.

ಸಾವಿನ ಬಗೆಗಿನ ಪ್ರಶ್ನೆಗಳಿಗೆ ಉತ್ತರವೇ ದೊರಕುತ್ತಿಲ್ಲ....... ಬಹುಷಃ ಇಲ್ಲ.....

ಆರೋಗ್ಯವಾಗಿಯೇ ಇದ್ದ ಅಜ್ಜ ಹೀಗೆ ಏಕಾಏಕಿ ತೀರಿಕೊಂಡಿದ್ದು ಶಿಶಿರನಿಗೆ ನಂಬಲು ಸಾಧ್ಯವಾಗುತ್ತಿಲ್ಲ. ನಮಗೂ ಕೂಡಾ........

ನಮ್ಮ ಮಾವನವರು ಆರೋಗ್ಯವಾಗಿಯೇ ಇದ್ದವರು ಈಗೆರಡು ತಿಂಗಳಿನಿಂದ ಸ್ವಲ್ಪ ಅಸ್ವಸ್ತರಾಗಿದ್ದರೂ ಕೂಡಾ ನಾವೆಲ್ಲ ಹ್ನ.... ಅರಾಮಾಗ್ತಾರೆ.... ಅಂತಲೇ ಅಂದುಕೊಂಡಿದ್ದೆವು.

ಬಿಟ್ಟೆ ಹೋದರು. ನಮ್ಮನ್ನೆಲ್ಲಾ....

ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಸಾಯುವುದು ನಿಜವೇ ಆದರೂ ' ನಮ್ಮ ಪ್ರೀತಿಪಾತ್ರರು ನಮ್ಮನ್ನಗಲಿದಾಗ ಆಗುವ ನೋವು, ಸಂಕಟವೇ ಬೇರೆ.' ಏಕೆಂದರೆ ಅವರು ನಮ್ಮನ್ನ ಪ್ರೀತಿಸಿರುತ್ತಾರೆ, ಪ್ರೀತಿ, ಪ್ರೇಮದ , ವಿಶ್ವಾಸದ ಭಾರ ನಮ್ಮ ಮೇಲಿರುತ್ತದಲ್ಲ....

ನಮ್ಮ ಗೆಳೆಯರೊಬ್ಬರು ಹೇಳುತ್ತಿದ್ದರು. ನಾವು ಅತ್ಯಂತ ಪ್ರೀತಿಸಿರುತ್ತೇವಲ್ಲ.... ಅವರು ಸತ್ತಾಗ ನಾವೂ ಅಷ್ಟಷ್ಟೇಸಾವಿನತ್ತ ಸರಿಯುತ್ತಿರುತ್ತೇವೆ .....!!!!!! ನಿಜವಲ್ಲವೆ....?



ಸಾವಿನ ಮನೆಗಳಿಗೆ ಹೋಗಬೇಕು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು.ಹೆಣಹೊರಬೇಕು.....ನಿಶ್ಯಬ್ಧವಾಗಿ.

ಆಗ ನಮ್ಮೊಳಗಿನ ಕೊಳೆ ಅಷ್ಟಷ್ಟೇ ತೊಳೆದುಹೋಗ ತೊಡಗುತ್ತದೆ. ಸುತ್ತಲಿನ ಜನ ಆ ಕ್ಷಣದಲ್ಲಿ ನಮ್ಮವರೆನಿಸಿಕೊಳ್ಳುತ್ತಾರೆ......!!!!

ನಿಜ ನನಗಿದು ಮೊದಲ ಅನುಭವ.... ಅಲ್ಲಿನ ಮೌನ, ನೀರವತೆ, ನಿಶ್ಯಬ್ಧ , ಅಲ್ಲಿ ಸುಳಿದಾಡುವ ಭಾವನೆಗಳು,ದುಃಖ , ಎದೆಯಲ್ಲಿ ಏನೋ ಕಟ್ಟಿಕೊಂಡ ಹಾಗೆ, ಅನುಭವಿಸಲು ಆಗದಂತಾ ಸ್ಥಿತಿ ನಮ್ಮ ಒಳ ಅರಿವನ್ನು ಕೆದಕುತ್ತದೆ...



ಸಾವು ಎಲ್ಲರಿಗೂ ಬರುವುದು ನಿಶ್ಚಿತವೆನಿಸಿದರೂ ತನಗೆ ಮಾತ್ರ ಬಾರದೆಂಬ ಉನ್ಮಾದದಿಂದ ವರ್ತಿಸುವ ಮಾನವನಿಗೆ ಅಲ್ಪವಾದರೂ ಭ್ರಮೆ ಹರಿದರೆ ಸಾವಿನ ಮನೆಯಲ್ಲೊಂದು ಬದುಕು ಹರಡುವುದು ಖಂಡಿತ.



ಏನೆಲ್ಲಾ ಮಾಡಿದರೂ....ಏನೆಲ್ಲಾ ಕೂಡಿಟ್ಟುಕೊಂಡರೂ, ಯಾರನ್ನೆಲ್ಲಾ ಕಾಡಿದರೂ ಅಮರರಾಗಲಾದೀತೇ....? ನಾಲ್ಕು ಜನರ ಹೆಗಲ ಮೇಲೆ ಹೋಗಲೇ ಬೇಕು....ಹೋಗುವಾಗ ನಾಲ್ವರ ಕಣ್ಣಲ್ಲಿ ಕಂಬನಿ ಮಿಡಿದರೆ ..... ಇನ್ನಷ್ಟು ದಿನ ನಿಮ್ಮೊಂದಿಗಿನ ಹರುಷ ನಮ್ಮದಾಗಬಾರದಿತ್ತೆ....ಎಂಬ ಶ್ರದ್ಧಾಶ್ರುವುಕ್ಕಿದರೆ ಸಾವು ಕೂಡಾ ಅರ್ಥಪೂರ್ಣ....





ಮಾವ ಹಾಗೆ ಬದುಕಿದ್ದರು.ವೃತ್ತಿಯಲ್ಲಿ ಶಿಕ್ಷಕರಾಗಿದ್ದರು....

ಸ್ವಾಭಿಮಾನಿ...ಅಂತಃಕರುಣಿ... ಅಜಾತ ಶತ್ರು ಅವರು. ಎಲ್ಲರನ್ನೂ ಪ್ರೀತಿಸುತ್ತಿದ್ದರು ಮತ್ತು ಎಲ್ಲರೂ ಅವರನ್ನು ಪ್ರೀತಿಸಿದರು. ಹೆಂಡತಿ,ಮಕ್ಕಳು, ಮೊಮ್ಮಕ್ಕಳೂ ,ಸೊಸೆಯಂದಿರು,ಬಂಧುಮಿತ್ರರೂ, ಶಿಷ್ಯಂದಿರು ಎಲ್ಲರೂ ಹನಿಗಣ್ಣಾದರು....ಅವರ ವಿದಾಯಕ್ಕೆ.....



ಶಿಶಿರನ ಪ್ರಶ್ನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ..ಐಶುವಿಗೆ ಸ್ವಲ್ಪ ಅರ್ಥವಾಗುತ್ತದೆ......

ಅಜ್ಜ ಸತ್ತದ್ದು ಏಕೆ.....? ಇನ್ನು ಬರಲ್ವ....?

ವಯಸ್ಸಾದವರೆಲ್ಲಾ ಸಾಯಬೇಕಾ...? ಅಪ್ಪ ... ನೀನೂ ಸಾಯುತ್ತೀಯಾ.....? ನಾನು ಸಾಯುತ್ತೇನಾ...?

ಇಲ್ಲಪ್ಪಾ ವಯಸ್ಸಾದ ಮೇಲೂ ನೀನು ಸಾಯಬೇಡ ಆಯ್ತಾ....ಅಪ್ಪಾ....

ಅಜ್ಜ ಆಕಾಶದಲ್ಲಿ ಸ್ಟಾರ್ ಆಗಿದ್ದಾನಲ್ವಾ.... ? ನಾನು ಕರೆದರೆ ಅವನಿಗೆ ಕೇಳಿಸುತ್ತಾ....? ನಾನು ಅವನಿಗೆ ಕಾಣಿಸ್ತಾ ಇದ್ದೇನಾ...?

ಅಜ್ಜ ದೇವರಾಗಿದ್ದಾನಾ..? ನಮಗೆಲ್ಲಾ ಒಳ್ಳೆದಾಗಲೀ ಅಂತಾ ಹೇಳ್ತಾ ಇದ್ದಾನಾ...?ಈ ದೊಡ್ಡ ಸ್ಟಾರ್ ಅಜ್ಜನೆ ಇರಬೇಕು ....



ಅವನ ಪ್ರಶ್ನೆಗಳಿಗೆ ಉತ್ತರ ಹೇಗೆ ಕೊಡಲಿ....?''ಅಜ್ಜಿ ನೀನು ಬೇಜಾರು ಮಾಡ್ಕೋಬೇಡ ''ಅಂತ ಅಜ್ಜಿಗೆ ಫೋನಿನಲ್ಲಿ ಹೇಳುತ್ತಾನೆ....

ಮಕ್ಕಳಿಗೆ ಸಾವು

ಅನ್ನುವುದನ್ನ ಹೇಗೆ ವಿವರಿಸುವುದು...? ಪ್ರಶ್ನೆಗಳು ನನಗೂ ಕಾಡತೊಡಗಿವೆ.



ಮಾವನವರಿಗೊಂದಿಷ್ಟು ಅಕ್ಷರಾಂಜಲಿ .



ನಡೆಸಿದ್ದರವರು .....

ವರುಷಕ್ಕೂ ಮೊದಲೇ ತಯಾರಿ..

ಮುಚ್ಚಲು ಹೊದಿಕೆ,

ಉಡಲು ವಸ್ತ್ರ,

ಒಡೆಯಲು ಮಡಕೆ....

ಸಮಸ್ತ ಕಾರ್ಯಗಳಿಗೂ ಪೂರ್ವತಯಾರಿ...

ಮತ್ತೆ ಮರುಗದಿರಿ ಎಂಬ ಸಾಂತ್ವಾನ....

ಗಡುವು ಹಾಕಿದ್ದರು ಈ ಬಾರಿ...



ಬಂತಲ್ಲ ಹೃದಯ ಯಾತನೆ.

ಪ್ರಯಾಣಕ್ಕೆ ಸೂಚನೆ..

ಕಲ್ಪವೃಕ್ಷ ಕಮರಿತಲ್ಲ....

ಹಾಗೆ ಒರಗಿತಲ್ಲ...

ಕುಣಿಯುತ್ತ ಬಂದ ಅಂತಕ

ಮನಸ್ಸಿಗೀಗ ನಿಜ ಸೂತಕ.



ಬಡ ಮೇಷ್ಟ್ರು... ಔದಾರ್ಯಕ್ಕೇನು ಕೊರತೆ...

ಸಾಮಾಜಿಕ ಚಿಂತನೆ, ಸಾಂಸಾರಿಕ ಸುಖ...

ಸತ್ಯ, ಸತ್ವ, ಸಾತ್ವಿಕ ಬದುಕು...

ಜಪಿಸಿದ್ದು ಸ್ವಾಭಿಮಾನದ ಮಂತ್ರ..

ಹಂಚಿ ತಿನ್ನುವ ಸಿದ್ಧಾಂತ.



ಹೊರಿಸಿದ್ದಾರಲ್ಲ ನಮ್ಮ ಮೇಲೆ

ದೊಡ್ಡ ಭಾರ....... ಸಾಲದ್ದಲ್ಲ,...... ಇರಿ


ಪ್ರೀತಿ , ಪ್ರೇಮ, ವಿಶ್ವಾಸದ ಭಾಂಡವಿತ್ತು ,

ಮತ್ತೆ ಸುತ್ತ ಹಂಚಿರೆಂಬ ಸೂಚನೆಯಿತ್ತು...



ಇಲ್ಲಪ್ಪಾ... ಇಲ್ಲೇ ಕುಳಿತು

ಓದುತ್ತಿರುವರಲ್ಲ....

ಆರಾಮಕುರ್ಚಿಯ ಮೇಲೆ ಹಾಗೆ ಒರಗಿ.

ಅನ್ನಿಸುವುದೆಲ್ಲ ಇನ್ನು ಭ್ರಮೆ.

ಆತ್ಮವಿಶ್ವಾಸ, ಮಂದಹಾಸ,


ಇನ್ನೆಲ್ಲಿ ...?ಕಣ್ಣಲ್ಲಿ ಸದಾ ಕ್ಷಮೆ..



ತರಲಿಲ್ಲ ಹರುಷ ಹೊಸ ವರುಷ...

ಮರಳೀತು ಮತ್ತೆ ಮತ್ತೆ.....

ತೆರಳುವುದು ನೆನಪುಗಳ ಸುತ್ತೆ...

ಎಂಬತ್ತರ ಹುಟ್ಟುಹಬ್ಬದ ಸಂತಸಕ್ಕೆ

ವರುಷ ತುಂಬುವ ಮೊದಲೇ...

ತೆರಳಿದರು ಮರಳಲಾಗದ ಊರಿಗೆ.



ಶಿಶಿರ ಮತ್ತೆ ಓಡಿಬಂದ ...


''ಅಮ್ಮ , ಅಜ್ಜನಿಗೆ planets ಇವೆಯಾ ''?

ಉತ್ತರಿಸ ಬೇಕಿದೆ ಅವನ ಭಾಷೆಯಲ್ಲಿ....



[ ಭೂರಮೆಯ ಸುಮಾ ಮಾವನವರ ಬಗ್ಗೆ ವಿವರಿಸಿದ್ದಾರೆ.....ಅಲ್ಲಿ ನೋಡಿ.]

41 comments:

  1. ಮಾವನವರ ವ್ಯಕ್ತಿತ್ವ ಅಪರೂಪದ್ದೇ..ಅವರನ್ನು ಒ೦ದೇ ಸಾರಿ ಭೆಟ್ಟಿಯಾದವರೂ ಕೂಡಾ ಮರೆಯಲಾಗದ೦ತಹ ವ್ಯಕ್ತಿತ್ವ ಅವರದಾಗಿತ್ತು.ನಿಸರ್ಗದ ನಿಯಮ ತಪ್ಪುವುದಿಲ್ಲ.ಈಗ ಅವರಿಲ್ಲ ನಿಜ..ಆದರೆ ಎಲ್ಲರ ಮನದಲ್ಲಿ ಅವರು ಶಾಶ್ವತವಾಗಿ ನೆಲಿಸಿದ್ದಾರೆ.

    ನಿಜ.. ಮಕ್ಕಳಿಗೆ ಸಾವಿನ ಬಗ್ಗೆ ತಿಳಿಸುವುದು ತು೦ಬಾ ಕಷ್ಟ.

    ReplyDelete
  2. ವಿಜಯಶ್ರೀ ಮೇಡಂ,
    ತುಂಬಾ ಹೃದಯ ಸ್ಪರ್ಶಿ ಲೇಖನ , ಕವನ...... ಅವರ ಅಗಲಿಕೆ ಭರಿಸುವ ಶಕ್ತಿ ಕೊಡಲಿ ದೇವರು ನಿಮಗೆ..... ಅವರ ಜೊತೆ ನಿಮ್ಮ ಆತ್ಮೀಯ ಸಂಭಂಧ ತುಂಬಾ ಖುಷಿ ನೀಡಿತು...... ಶಿಶಿರನ ಪ್ರಶ್ನೆಗೆ ನನ್ನಲ್ಲೂಉತ್ತರವಿಲ್ಲ.....

    ReplyDelete
  3. ವಿಜಯಶ್ರೀಯವರೇ, ಮಕ್ಕಳ ಪ್ರಶ್ನೆ ಸಾವಿನ ಬಗ್ಗೆ...ವಿವರಣೆ..ಗೊಂದಲಗಳಿಗೆ ತಳ್ಳುತ್ತೆ ನಮ್ಮನ್ನ,,,ನಿಮ್ಮ ಮಗನ ಸಂಶಯಗಳಿಗೆ ಉತ್ತರಿಸುವುದೂ ನಿಮಗೆ ಕಷ್ಟ ಆಗಿರಬೇಕು...

    ReplyDelete
  4. ಚುಕ್ಕಿಚಿತ್ತಾರ....

    ನಿಜ ನಮ್ಮ ಪ್ರೀತಿ ಪಾತ್ರರು ನಾವಿರುವ ತನಕ ಇರಬೇಕು..

    ನಿಮ್ಮ ಲೇಖನ ಓದಿ ನನ್ನ ಪ್ರೀತಿಯ ಅಜ್ಜ ನೆನಪಾದ...

    ಅಂಥಹ ಸಾತ್ವಿಕ ಜೀವನ ನಡೆಸುವ ಹಿರಿಯರಿಗೆ ತಮ್ಮ ಸಾವಿನ ಪೂರ್ವ ಸೂಚನೆ ಇದ್ದಿರುತ್ತದಾ ?

    ಸಾವಿನ ಮನೆಯ ಮೌನದ ಶಬ್ಧ...
    ಆ ಕರ್ಕಶ
    ಆ ಅಳಲು ಯಾರಿಗೂ ಬೇಡ...

    ತುಂಬಾ ಹೃದಯ ಸ್ಪರ್ಷಿಯಾಗಿ ಬರೆದಿದ್ದೀರಿ....

    ReplyDelete
  5. ಮಕ್ಕಳು ಕೇಳುವ ಎಸ್ಟೋ ಪ್ರಶ್ನೆಗಳಿಗೆ ಉತ್ತರ ಕೊಡೋದು ತುಂಬಾ ಕಷ್ಟ..ಅದರಲ್ಲೂ ಇಂತ ಪ್ರಶ್ನೆಗಳಿಗೆ ಏನು ಅಂತ ಹೇಳೋದು..ಪ್ರೀತಿ..ಸ್ನೇಹ..ನೆನಪು ಕೊನೆತನಕ...!
    ನಿಮ್ಮವ,
    ರಾಘು.

    ReplyDelete
  6. ಚುಕ್ಕಿಚಿತ್ತಾರ....
    ಹೃದಯ ಸ್ಪರ್ಷಿಸುವ ಲೇಖನ....

    ReplyDelete
  7. ವಿಜಯಶ್ರೀ ಅವರೇ, ಎಂತಹ ಆದರ್ಶ ವ್ಯಕ್ತಿತ್ವ..ಅವರ ಆತ್ಮಕ್ಕೆ ಶಾಂತಿ ಸಿಗಲಿ.'ಭೂರಮೆ'ಯಲ್ಲಿ ಕೂಡ ಓದಿದೆ..ಓದಿ ಸ್ವಲ್ಪ ಹೊತ್ತು ಅಳು ಬಂತು..
    ನನ್ನ ತಂದೆಯ ಹೆಸರು ನಾರಾಯಣ ಭಟ್, ಅವರು ಕೂಡ ಮೇಸ್ಟ್ರು ಆಗಿದ್ದವರು..ಚೌತಿ ಹಬ್ಬ ಕಳೆದು ೪ ದಿನಕ್ಕೆ ಎದೆನೋವು ಎಂದು ಆಸ್ಪತ್ರೆಗೆ ಹೋದವರು ಒಂದೇ ದಿನ ಇದ್ದರು.ನನಗೆ ಅವರನ್ನು ನೋಡಲಾಗಲಿಲ್ಲ..

    ಶಿಶಿರನಿಗೆ ಸಮಾಧಾನ ಮಾಡಿ, ನಿದಾನದಲ್ಲಿ ಮರೆಯುವಂತೆ ಮಾಡಿ..ಅಷ್ಟೇ ನನಗೆ ಹೇಳಲು ಸಾಧ್ಯ..

    ReplyDelete
  8. ಬದುಕೆಂಬ ನಾವೆಯಲ್ಲಿ ಸಹ ಪ್ರಯಾಣಿಕರನ್ನು ದಡಕ್ಕೆ ತಲುಪಿಸಿ ಹೋದವರೇ ಧನ್ಯರು.
    ವರ್ಣಿಸಲಾರದ ಶೂನ್ಯ ಆವರಿಸುವುದರಿಂದ ಮನೆ/ಮನಸ್ಸು ಸೂತಕದಿಂದ ಕದಡಿರುತ್ತದಲ್ಲವೇ?
    ತುಂಬಾ ಉತ್ತಮ ಬರವಣಿಗೆ...

    ReplyDelete
  9. Most heart touching.
    ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ...
    ಪುಟ್ಟ ಮಕ್ಕಳ ದೊಡ್ಡ ಪ್ರಶ್ನೆಗೆ ಉತ್ತರಿಸುವುದು ಕಷ್ಟ.

    ReplyDelete
  10. ಮನಮುಕ್ತಾ....
    ಮಾವನವರ ಔನ್ನತ್ಯವೇ ಅ೦ತಹದ್ದು...
    ಸೊಸೆಯ೦ದಿರನ್ನು ಮಕ್ಕಳ೦ತೆಯೆ ನೋಡಿಕೊ೦ಡರು.ಬೇರೆಯವರ ಮನೆಯ ಹೆಣ್ಣ್ಮಕ್ಕಳನ್ನು ನಮ್ಮನೆಗೆ ತ೦ದು ಅವರನ್ನು ನೋಯಿಸ್ಬಾರ್ದು....
    ಅವರ ವಿಚಾರ ಹಾಗಿತ್ತು. ನಾವು ಅವರನ್ನು ತು೦ಬಾ ಮಿಸ್ ಮಾಡಿಕೊಳ್ತಾ ಇದ್ದೀವೆ....ತು೦ಬಾ.

    ReplyDelete
  11. ದಿನಕರ...
    ಅರಾ೦ ಆಗಿ ಓಡಾಡಿಕೊ೦ಡು ಕ್ರಿಯಾಶೀಲರಾಗಿ ಇರುವವರನ್ನು ಕ೦ಡರೆ ಆ ಯಮನಿಗೆ ಪ್ರೀತಿ.
    ಮೊಮ್ಮಕ್ಕಳಿಗೆ ಅಜ್ಜನ ಒಡನಾಟ ತು೦ಬಾ ಇತ್ತು....
    ನಿಮ್ಮೆಲ್ಲರ ಸಾ೦ತ್ವನದಿ೦ದ ಮನಸ್ಸಿಗೆಶ್ಟೊ ಸಮಾಧಾನ.
    ವ೦ದನೆಗಳು.

    ReplyDelete
  12. ಜಲನಯನ.. ಸರ್.
    ಮಕ್ಕಳ ಪ್ರಶ್ನೆಗಳು ನಮ್ಮದೂ ಕೂಡ....
    ಸಾವಿನದ್ದು ಸದಾ ಕ್ರೌರ್ಯದ ಮುಖವೆ...
    ನಾಲ್ಕಾರು ವರುಶಗಳಿ೦ದ ನೆಲ ಹಿಡಿದು ದಿನಾಲೂ ಇ೦ಚಿ೦ಚೆ ಸಾಯುವವರ ಹತ್ತಿರ ಸುಳಿಯದ ಸಾವು ಒಮ್ಮೆಗೆ ಸಿಕ್ಕಿದವರನ್ನು ಹಿಡಿದು ಕೊ೦ಡು ಸೆಳೆದೊಯ್ಯುತ್ತದೆ....!!
    ವ೦ದನೆಗಳು.

    ReplyDelete
  13. ಚುಕ್ಕಿ ಚಿತ್ತಾರ ....ತುಂಬಾ ಹೃದಯಸ್ಪರ್ಶಿ ಲೇಖನ. ನೀವು ಹೇಳಿದ್ದು ನಿಜ. ಈ ಸಾವಿನ ಮರ್ಮವನ್ನು ತಿಳಿದವರ್ಯಾರೂ ಇಲ್ಲ. ಎಲ್ಲರೂ ಸಾಯಲೇಬೇಕು. ಆದರೂ ನಮ್ಮ ಪ್ರೀತಿ ಪಾತ್ರರು ತೀರಿಕೊಂಡಾಗ ಆಗುವ ದು:ಖವನ್ನು ಭರಿಸುವುದು ತುಂಬಾ ಕಷ್ಟ. ಸಾತ್ವಿಕ ಮುಖಭಾವವಿರುವ ನಿಮ್ಮ ಮಾವನವರಿಗೆ ನಾನೂ ಕೈ ಮುಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ.

    ReplyDelete
  14. ಪ್ರಕಾಶಣ್ಣ..
    ಅವರಿಗೆ ಅನ್ನಿಸಿತ್ತೇನೋ....ಆಗಾಗ ಹೇಳುತ್ತಿದ್ದರು..
    ನನ್ನನ್ನು ಸ೦ತೋಷದಿ೦ದ ಬೀಳ್ಕೊಡಬೇಕು...
    ನೀವ್ಯಾರೂ ದು:ಖ ಪಡಬಾರದು.... ಸಮಾಧಾನ ತ೦ದ್ಕೋಬೇಕು....ಅ೦ತ.

    ಅವರು ಈ ಬಗ್ಗೆ ಚಿ೦ತಿಸಿ ಒ೦ದು ವರ್ಶಕ್ಕೂ ಮೊದಲೇ ಅ೦ತ್ಯಕ್ರಿಯೆಗೆ ಬೇಕಾಗುವ ಎಲ್ಲಾ ವಸ್ತುಗಳನ್ನೂ ರೆಡಿ ಮಾಡಿಟ್ಟಿದ್ದರು...
    ಈ ತರದ ವ್ಯಕ್ತಿಗಳು ಅಪರೂಪವಲ್ಲವೇ....?
    ನಿಮ್ಮ ಪ್ರತಿಕ್ರಿಯೆಗೆ ವ೦ದನೆಗಳು.

    ReplyDelete
  15. ರಾಘು...
    ಶಿಶಿರ ಹೇಳುತ್ತಿದ್ದಾನೆ.” ಅಮ್ಮಾ ನಾನು ದೊಡ್ಡವನಾದ ಮೇಲೆ ಆಶ್ಟ್ರೋನಾಟ್ ಆಗಿ ಅಜ್ಜನ ನಕ್ಷತ್ರಕ್ಕೆ ಹೋಗಿ ಅಜ್ಜ ನೀನು ಸತ್ತಿದ್ದು ಯಾಕೆ ಅ೦ತ ಕೇಳ್ಕೊ೦ಡು ಬರ್ತೀನಿ ” ಅ೦ತ ...
    ಅಜ್ಜ ಸತ್ತಿದ್ದು ತಪ್ಪು ಅನ್ನುತ್ತಾನೆ.. ಬೇಕ೦ತಲೇ ಸತ್ತಿದ್ದೇನೋ ಎ೦ಬ೦ತೆ....

    ನನಗೆ ಉತ್ತರಿಸಲು ಕಷ್ಟವಾಗುತ್ತದೆ....
    ಪ್ರೀತಿ..ಸ್ನೇಹದ ನೆನಪು ಕೊನೆತನಕ...

    ReplyDelete
  16. ತಮ್ಮ, ಸುಮಾರವರ ಮತ್ತು ಸುಧಾಕಿರಣರ ಬ್ಲೊಗನಲ್ಲಿರುವ -ಶ್ರೀಯುತರ ಅಗಲಿಕೆಯ ನುಡಿನಮನಗಳು ಮನವನ್ನ ಕಲುಕಿದ್ದಲ್ಲದೇ ಅವರ ಪರಿಚಯವನ್ನೂ ಮಾಡಿ ಕೊಟ್ಟವು. ಅ೦ಥಾ ಹಿರಿಚೇತನ ಮತ್ತೆ ಹುಟ್ಟಿ ಬರಲಿ ಎ೦ಬುದೇ ನನ್ನ ಆಶಯ. ಆ ಚೆತನ ನಕ್ಷತ್ರವಾಗಿ ಕತ್ತಲೆಯ ದಾದಿ ದೀವಿಗೆಯಾಗಲಿ, ಶಿಶಿರನ೦ತಾ ಪುಟ್ಟರಿಗೆ ಮಿನುಗುವ ನಕ್ಷತವಾಗಿ, ಕೆಣುಕುವ ಪ್ರಶ್ನೇಗಳಿ೦ದ ಜ್ಞಾನ ದೀವಿಗೆಯಾಗಲಿ ಎ೦ದು ಹಾರೈಸುತ್ತೆನೆ. ಮಕ್ಕಳ ಪ್ರಶ್ನೇಗಳೇ ಹಾಗೆ! ಉತ್ತರಕ್ಕಾಗಿ ತಡಕಾಡಬೇಕು. ತಮ್ಮೆಲ್ಲಾ ಕುಟು೦ಬಕ್ಕೆ ಅವರ ಅಗುಲುವಿಕೆಯ ದುಃಖ ತಡೆವ ಶಕ್ತಿ ಕೊಡಲೆ೦ದು ಹಾರೈಸುವೆ.

    ReplyDelete
  17. ಸವಿಗನಸು..
    ಮಾವನವರು ಹ್ರುದಯವ೦ತರಾಗಿದ್ದರು...
    ಮಾತಿನಲ್ಲಿದ್ದದ್ದನ್ನು ಆಚರಣೆಯಲ್ಲೂ ಇಟ್ಟಿದ್ದರು....ಅದು ವಿಶೇಷ...

    ReplyDelete
  18. ವಿಜಯಶ್ರೀ ಮೇಡಮ್,

    ನಿಮ್ಮ ಮಾವನವರ ಆತ್ಮಕ್ಕೆ ಶಾಂತಿ ಸಿಗಲಿ. ಅಂಥ ವ್ಯಕ್ತಿತ್ವದವರು ಹೆಚ್ಚುದಿನ ಇರಬೇಕೆನ್ನುವ ಆಸೆಯನ್ನು ಪ್ರಕೃತಿ ಒಪ್ಪುವುದಿಲ್ಲ. ನಿಮ್ಮ ಈ ಹೃದಯಸ್ಪರ್ಶಿ ಲೇಖನ ಓದಿ ಕಳೆದುಕೊಂಡ ತಂಗಿಯ ನೆನಪಾಯಿತು. ಅವಳು ಕೂಡ ಆಕಾಶದಲ್ಲಿ ಸ್ಟಾರ್ ಆಗಿರಬಹುದು. ಮತ್ತೆ ಶಿಶರನ ಪ್ರಶ್ನೆಗೆ ಮೌನವೇ ಉತ್ತರವೆಂದು ನನ್ನ ಭಾವನೆ.

    ReplyDelete
  19. 'ಚುಕ್ಕಿಚಿತ್ತಾರ' ಅವ್ರೆ..,

    ಹೌದು ಇದು ಹೃದಯವಂತರ ಹೃದಯಸ್ಪರ್ಶ ಲೇಖನ..

    ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http://manasinamane.blogspot.com

    ReplyDelete
  20. ವನಿತಾ...
    ನಿಜ ಸಾವಿಲ್ಲದ ಮನೆ ಎಲ್ಲಿದೆ....?
    ನಾವು ಕಳೆದುಕೊ೦ಡದ್ದನ್ನು ಬೇರೆಯವರ ವ್ಯಕ್ತಿತ್ವದಲ್ಲಿ ಕಾಣುತ್ತೇವೆ...!ಮನಸ್ಸಿಗೆ ಸಮಾಧಾನಪಟ್ಟುಕೊಳ್ಳುತ್ತೇವೆ.
    ಅದೇಅಲ್ಲವೆ ಜೀವನ.....?
    ಸಾವು ಸನಿಹದಲ್ಲಿ ಸುಳಿದಾಡುತ್ತಲೇ ಇರುತ್ತದೆ....ಪಕ್ಕನೆ ಸೆಳೆದೊಯ್ಯುತ್ತದೆ.

    ReplyDelete
  21. ಶಿವರಾಮ ಭಟ್...
    ಹೌದು.. ಅವರು ಎಲ್ಲ ಜವಾಬ್ಧಾರಿಗಳನ್ನೂ ಮುಗಿಸಿದ್ದರು...
    ಕಾಲನ ಕರೆಯನ್ನು ಹ್ರುತ್ಪೂರ್ವಕವಾಗಿ ನಿರೀಕ್ಶಿಸುತ್ತಿದ್ದರು...
    ಸ೦ತ್ರುಪ್ತಭಾವ ಅವರಲ್ಲಿತ್ತು...
    ನಿಮ್ಮೆಲ್ಲರ ಸಾ೦ತ್ವಾನ ಸ್ವಲ್ಪ ಸಮಾಧಾನ ಕೊಡುತ್ತಿದೆ..
    ವ೦ದನೆಗಳು.

    [ನಿಮ್ಮ ಪ್ರೊಫೈಲ್ನಲ್ಲಿ ಬ್ಲಾಗ್ ಲಿ೦ಕ್ ಕಾಣಿಸುತ್ತಿಲ್ಲವಲ್ಲ....?]

    ReplyDelete
  22. ವಿಜಯಶ್ರೀ ಅವರೆ,

    ಭೂರಮೆಯಲ್ಲೂ ಓದಿದೆ. ತುಂಬಾ ಮೇರು ವ್ಯಕ್ತಿತ್ವವಿರುವವರು ಎಂದು ತಿಳಿಯಿತು. ಇಂತಹ ಉದಾತ್ತ ಗುಣವನ್ನು ಹೊಂದಿದವರೇ ಬಹು ಬೇಗ ಮುಕ್ತಿ ಪಡೆಯುತ್ತಾರೇನೋ!! ನಿಮ್ಮ ದುಃಖದ ತೀವ್ರತೆಯನ್ನು ಅರಿಯಬಲ್ಲೆ. ನಾನೂ ನನ್ನ ಮೆಚ್ಚಿನ ಅಜ್ಜಿಯನ್ನು ಅಚಾನಕ್ಕಾಗಿ ಕಳೆದುಕೊಂಡು ತುಂಬಾ ಬೇಸರಪಟ್ಟಿದ್ದೆ. ಕಾಲವೇ ಎಲ್ಲ ನೋವಿಗೂ ದೊಡ್ಡ ಮುಲಾಮು. ನಿಮ್ಮನ್ನು ನೀವು ಸಂತೈಸಿಕೊಂಡು, ಶಿಶಿರನನ್ನೂ ಸಮಾಧಾನಿಸಿ.

    ಅವರ ಆತ್ಮಕ್ಕೆ ಶಾಂತಿಸಿಗಲೆಂದು ಪ್ರಾರ್ಥಿಸುವೆ.

    ReplyDelete
  23. ಸುಬ್ರಹ್ಮಣ್ಯ....
    ನಿಜ ಮದುವೆಗೋ..ಮಸಣಕೋ ಹೋಗೆ೦ದ ಕಡೆಗೋಡು..
    ಸಾವಿನ ಮನೆಯಲ್ಲಿ ಮನಸ್ಸು ದುರ್ಭಲವಾಗಿರುತ್ತೆ... ದೇವರನ್ನು ನ೦ಬದಿರುವವನು ಕೂಡಾ ದೇವರೇಕಾಪಾಡು..ಅನ್ನುವ ಪರಿಸ್ತಿತಿ..
    ಅವರ ಜೀವನ, ನೆನಪು ನಮಗೆ ದಾರಿದೀಪ...

    ReplyDelete
  24. ಓ ಮನಸೇ,
    ಸಾವು ಬರುತ್ತದೆ೦ದು ಮೊದಲೇ ಗೊತ್ತಾಗುವ೦ತಿದ್ದಿದ್ದರೆ..
    ಆ ಸಾವಿನೊ೦ದಿಗೆ ಈಗ ಬೇಡ ಸ್ವಲ್ಪ ದಿನ ಬಿಟ್ಟುಬಾ..ಅನ್ನುವ೦ತಿದ್ದಿದ್ದರೆ...ಚನ್ನಾಗಿರುತ್ತಿತ್ತು.
    ಅದರ ಮರ್ಮ ಗೊತ್ತಾಗುವುದೇ ಇಲ್ಲ. ನಿಜ..

    ReplyDelete
  25. ಸೀತಾರಾ೦ ಸರ್..
    ನಿಜ ಅವರು ಇದ್ದಾಗಲೂ ನಕ್ಷತ್ರದ೦ತೆ ಸುತ್ತಲಿನವರಿಗೆ ಜ್ನಾನದ ಬೆಳಕಿತ್ತವರು..
    ಶಿಶಿರನ ಪ್ರಶ್ನೆಗಳಿಗೆ ಉತ್ತರಿಸಲು ಅಜ್ಜ ಇರಬೇಕಿತ್ತು...!
    ನಿಮ್ಮ ಸಮಾಧಾನದ ಮಾತುಗಳಿಗೆ ವ೦ದನೆಗಳು.

    ReplyDelete
  26. ಶಿವು ಸರ್..
    ನಿಜ ಸತ್ತವರು ಆಕಾಶದಲ್ಲಿ ಸ್ಟಾರೇ ಆಗುತ್ತಾರೆ..
    ದಿನಾ ನಮ್ಮನ್ನ ನೋಡುತ್ತಿರುತ್ತಾರೆ...
    ಈ ಕಲ್ಪನೆ ಚ೦ದ ಅಲ್ಲವೇ...
    ನಿಜ.. ಒಬ್ಬರ ದು:ಖಕ್ಕಿ೦ತಾ ಇನ್ನೊಬ್ಬರ ದು:ಖ ಹೆಚ್ಚು ಅನ್ನುವುದನ್ನು ನಿಮ್ಮ ಪ್ರತಿಕ್ರಿಯೆಯಿ೦ದ ಅರ್ಥವಾಯಿತು..

    ReplyDelete
  27. ಗುರು-ದೆಸೆ
    ನಿಜ ನಿಮ್ಮ ಮಾತು...

    ReplyDelete
  28. ತೇಜಸ್ವಿನಿ..
    ಕಾಲವೆ ಮುಲಾಮು ಮನಸ್ಸಿನ ಸಮಾಧಾನಕ್ಕೆ...ನಿಜ.. ಕಾಲನ ಕರೆಗೆ ಓಗೊಟ್ಟವರ ಪ್ರೀತಿ.... ನೆನಪನ್ನು ಸಾಯಿಸದು...
    ಇದ್ದಿದ್ದರೆ ಇನ್ನಷ್ಟು ದಿನ ಬೇಕಿತ್ತು...

    ReplyDelete
  29. ATTIGE NEENU BAREDA BHAVANAATMAKA MAATU NANNA KANNALLI HANIGALANNU UDURISIDAVU.MAREYADA APPANIGE BAREDA KAAVYA THORE CHENNAGI HARIDIDE.

    ReplyDelete
  30. ವಿಜಯಶ್ರೀ,
    ಓದುತ್ತಿದ್ದಂತೆ ಎದೆ ಭಾರವಾಯಿತು. ಅವರು ಇದ್ದಾಗಲೂ ಸಹ star ಎಂದೆನಿಸಿತು.

    ReplyDelete
  31. ವಿಜಯಶ್ರೀ ಆತ್ಮೀಯರ ಅಗಲಿಕೆ,ಶಿಶಿರನ ಮುಗ್ಧ ಪ್ರಶ್ನೆ ಎಲ್ಲ ಮಿಳಿತವಾಗಿ ನಿಮ್ಮ ಲೇಖನ ಮನಸ್ಸು ತಟ್ಟುತ್ತದೆ..

    ReplyDelete
  32. ವಿಜಯಶ್ರೀಯವರೆ ...
    ಸುದ್ದಿ ತಿಳಿದು ಬೇಸರವಾಯಿತು .. ಅವರ ವ್ಯಕ್ತಿತ್ವನ್ನು ಪರಿಚಯಿಸುವ ನಿಮ್ಮ ಕವನ ನಿಜಕ್ಕು ತೊರೆದ ಜೀವಕ್ಕೆ ಒಂದು ಭಾವಶ್ರದ್ದಾಂಜಲಿಯಂತಿದೆ ..

    ReplyDelete
  33. A star is born and will shine forever.. we need to make our hearts like the sky to see all those starts shining... yede tumbi bantu nimma barahavannu odidaaga...

    ReplyDelete
  34. ಬಾವ..
    ಸುನಾಥ್ ಕಾಕ..
    ದೇಸಾಯಿಯವರೇ..
    ಶ್ರೀಧರ್..
    ರಮೇಶ್..
    ಪ್ರತಿಕ್ರಿಯಿಸಿದ ಎಲ್ಲರಿಗೂ ವ೦ದನೆಗಳು..

    ReplyDelete
  35. vijayashri madam....

    hrudhaya sparshi aagittu baraha... yenu helalu thochuvudhilla... dhukavannu mareyuva shakthi nimage sigali....

    ReplyDelete
  36. ಹುಟ್ಟು ಸಾವು. ಇದುವರೆಗೂ ಯಾರಿಂದಲೂ ಬಿಡಿಸಲಾಗದ ಒಗಟುಗಳು ಇವು. ಅದರಲ್ಲೂ ಮಕ್ಕಳು ಕೇಳುವ ಇನ್ನೂ ಒಗಟಾದ ಪ್ರಶ್ನೆಗಳಿಗೆ ಕೆಲವೊಮ್ಮೆ ಉತ್ತರಿಸಲೂ ಅಸಾಧ್ಯ. ಯಾಕಪ್ಪಾ ಹೀಗೆ ಪ್ರಶ್ನೆ ಕೇಳ್ತವೆ ಅಂತ ಅನ್ನಿಸಿದ್ರೂ ಪುಟ್ಟ ಮಕ್ಕಳ ಪ್ರಶ್ನೆಗಳು ನಮ್ಮನ್ನು ಗಾಢವಾದ ಚಿಂತನೆಗಳಿಗೆ ತಳ್ಳಿಬಿಡುತ್ತವೆ.

    ReplyDelete
  37. ನಿಮ್ಮ ಮಾವನವರ ಬಗ್ಗೆ ಸುಮಾ ರವರ ಭೂರಮೆಗೆ ಮೊದಲು ಬರೆದೆ, ನಿಮ್ಮ ಮಾವನವರ ರೀತಿಯಲ್ಲೇ ಮೂರು ವರ್ಷಗಳ ಹಿಂದೆ ನನ್ನ ಅಜ್ಜನವರನ್ನು ಕಳೆದುಕೊಂಡ ವ್ಯಕ್ತಿ ನಾನು, ಇಲ್ಲಿ ನಿಮ್ಮ ಮಗು ಚಿಕ್ಕದು ಆದರೆ ನಾನು ದೊಡ್ಡವ--ಇಬ್ರೂ ಗತಿಸಿದ ಅಜ್ಜಂದಿರ ಬಗ್ಗೆ ಹುಡುಕಿದವರೇ, ಜೀವನವೇ ಹೀಗೆ, ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಊರಲ್ಲಿ ಇದ್ದ ನಡುವಯಸ್ಸಿನವರೆಲ್ಲ ಒಬ್ಬೊಬ್ಬರೇ ತೀರಿಹೊದಾಗಲೂ ನನಗೆ ಬಹಳ ಬೇಸರವಾಗುತ್ತಿತ್ತು. ಹಿಂದೊಮ್ಮೆ ಅವರೆಲ್ಲರ ಪ್ರೀತಿಯ ಮಾತು, ನಡೆ-ನುಡಿ ಅನುಭವಿಸಿದ್ದ ಮನಸ್ಸು ಕಳೆದುಕೊಳ್ಳುವ ಆ ಮನಗಳ-ವ್ಯಕ್ತಿಗಳ ಬಗ್ಗೆ ಬಹಳ ಚಿಂತಿಸುತ್ತಿತ್ತು, ಆದರೆ ಹುಟ್ಟಿದ ಪ್ರತಿ ಜೀವಿಗೆ ಸಾವು ಅನಿವಾರ್ಯ ! || ಜಾತಸ್ಯ ಮರಣಂ ಧ್ರುವಂ || ಇದನ್ನು ತಿಳಿದು ಅನುಭವಿಸಬೇಕಷ್ಟೇ. ಯಾರ ಬಗೆಗೂ ಕೆಟ್ಟದಾಗಿ ಆಡಿಕೊಳ್ಳಬಾರದು,ನಮಗೆ ನೋವಾದರೂ ಸಹಿಸಿ ನಡೆಯಬೇಕು, ನನ್ನಜ್ಜ ತೀರಿದಾಗ ಊರಿಗೆ ಹೊರಟಾಗ ಬಸ್ಸಿನಲ್ಲಿ ಸಿಕ್ಕ ಪರಿಚಿತ ಶ್ರೀಮಂತನೊಬ್ಬ ಸ್ವಲ್ಪ ಗತ್ತಿನ ಮಾತುಗಳನ್ನಾಡಿದ, ನನ್ನ ಮನಸ್ಸಿಗೆ ಸ್ವಲ್ಪ ನೋವೂ ಆಯಿತು, ಒಂದೇ ವರ್ಷದಲ್ಲಿ ಆತ ತನ್ನ 50 ವರ್ಷದ ಹೆಂಡತಿಯನ್ನು ಕಳೆದುಕೊಂಡ, ಮಕ್ಕಳಿನ್ನೂ ನೆಲೆನಿಂತಿಲ್ಲ;ಮದುವೆ ಆಗಿಲ್ಲ, ಆಗ ಅವನಿಗೆ ಅರ್ಥವಾಗಿರಬಹುದು ಜೀವನವೆಂದರೆ ಕೇವಲ ದುಡ್ಡಿನ ಹಂದರವಲ್ಲ, ಅಲ್ಲಿ ಹೃದಯಗಳೂ ಇವೆ ಎಂದು. ಈ ವಿಷಯದಲ್ಲಿ ನಿಮ್ಮ ಮಾವ ತುಂಬಾ ಸುಗುಣವಂತರು-ಶ್ರೇಷ್ಠರು,ಅಂಥವರು ಮತ್ತೆ ಹುಟ್ಟಿಬರಲಿ.

    ReplyDelete
  38. hrudaya sparshi lekhana madam..
    shishirana prashnege uttara nijakku kasta..

    ReplyDelete
  39. ವಿಜಯಶ್ರೀ ಮೇಡಂ,
    ಒಂದು ಕಥೆ ಬರೆದಿದ್ದೇನೆ............ ಸಮಯವಿದ್ದರೆ ಬಂದು ಓದಿ...........

    ReplyDelete
  40. 'ಹುಟ್ಟಿದವರೆಲ್ಲ ಸಾಯಲೇ ಬೇಕು' ಅನ್ನುವ ಸತ್ಯದ ಅರಿವಿದ್ದರೂ ಅದನ್ನ ಜೀರ್ಣಿಸಿಕೊಳ್ಳುವುದಕ್ಕೆ ಬಹಳ ಕಷ್ಟ! ಮನಸ್ಸಿನ ತುಡಿತವನ್ನ ಹೃದಯ ಸ್ಪರ್ಶಿಯಾಗಿ ಬರೆದಿದ್ದೀರ,ಚೆನ್ನಾಗಿದೆ.

    ReplyDelete
  41. ಚುಕ್ಕಿ ಚಿತ್ತಾರ
    ಭಾವಪೂರ್ಣ ನಮನಗಳನೆ ಮಾವನವರಿಗೆ ಸಲ್ಲಿಸಿದ್ದಿರಾ
    ಹಿರಿಯರು ಅಗಲಿದಾಗ ಮನಸ್ಸಿಗೆ ಆಗುವ ನೋವು ಬಹಳ ದೊಡ್ಡದು
    ಅಗಲಿದ ನಿಮ್ಮ ಮಾವನವರಿಗೆ ನಮ್ಮ ಭಾವಪೂರ್ಣ ನಮನಗಳು

    ReplyDelete