Thursday, July 7, 2011

ಮಾನಸಿಕ ಖಿನ್ನತೆ. ಭಾಗ - ೧

ಈ ಮೊದಲು ನಾನು  ಖಿನ್ನತೆ ಯ ಬಗ್ಗೆ ಚೂರು ಪಾರು ಬರೆದಿದ್ದೆ.ಆ ಪೋಸ್ಟಿನಲ್ಲಿ ಒಂದು ಬಗೆಯನ್ನಷ್ಟೇ ವಿವರಿಸಿದ್ದೆ.
ಯಾರಿಗಾದರೂ ಖಿನ್ನತೆಯ [depression] ಸಮಸ್ಯೆ ಇದ್ದಲ್ಲಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ..? ಅವರು ಮೆಂಟಲ್ ಕೇಸು ಕಣ್ರೀ .. ಸ್ವಲ್ಪ ಹಾಗೆ.  ಜಾಸ್ತಿ ಮಾತಾಡ್ಸಕ್ಕೆ ಹೋಗಬೇಡಿ.  ಯಾವಾಗ ಹೇಗೆ ಅನ್ನೋದು ಗೊತ್ತಾಗಲ್ಲ.   ಈ ರೀತಿಯಲ್ಲಿ ನಮ್ಮ ವಿಚಾರ ಸಾಗುತ್ತದೆ.  ಖಿನ್ನತೆ ಅಂದರೆ ಹುಚ್ಚುತನವಲ್ಲ.ಡಿಪ್ರೆಶನ್ ಇರುವವರೆಲ್ಲ ಹುಚ್ಚರಲ್ಲ.


ಖಿನ್ನತೆಯಲ್ಲಿ ಅನೇಕ ವಿಧಗಳಿವೆ.
* ಮೇಜರ್ ಡಿಪ್ರೆಶನ್,
*  ಮಾದರಿಗೆ ಸರಿ ಹೊಂದದ ಎಟಿಪಿಕಲ್ ಡಿಪ್ರೆಶನ್,
* ಈ ಮೊದಲು ವಿವರಿಸಿದ ಡಿಸ್ಥೀಮಿಯ,
* ಮನೋ ವಿಕಾರತೆಯಿಂದ ಕೂಡಿದ ಸೈಕೊಟಿಕ್ ಡಿಪ್ರೆಶನ್,
* ಋತುಮಾನಕ್ಕೆ ತಕ್ಕಂತೆ  ಕಾಣಿಸಿಕೊಳ್ಳುವ  ಸೀಜನಲ್ ಆಫೆಕ್ಟಿವ್ ಡಿಸಾರ್ಡರ್,
*  ಬಾಳಂತಿ ಸನ್ನಿ ಎಂಬುದಾಗಿ ಪ್ರಚಲಿತವಿರುವ ಪೋಸ್ಟ್ ಪಾರ್ಟಂ ಡಿಪ್ರೆಶನ್ ಹಾಗೂ
*  ಬುದ್ದಿ ವಿಕಲ್ಪತೆಯಿಂದ ಕೂಡಿದ ಮ್ಯಾನಿಕ್ ಡಿಪ್ರೆಶನ್ ಅಥವಾ ಬೈ ಪೋಲಾರ್ ಡಿಪ್ರೆಶನ್.


ಡಿಪ್ರೆಶನ್ ಎಂದರೆ ಏನು ಮತ್ತು ಅದರ ಗುಣ ಲಕ್ಷಣಗಳೇನು..?

ಡಿಪ್ರೆಶನ್ ಎಂದರೆ,  ದಿನ ನಿತ್ಯ ಜೀವನಕ್ಕೆ ತೊಂದರೆ ಕೊಡುವ ದೀರ್ಘ ಕಾಲಿಕ ಮತ್ತು ಬದಲಾವಣೆಯಿಲ್ಲದ ಋಣಾತ್ಮಕ ಆಲೋಚನೆಗಳಿಂದ ಕೂಡಿದ ಮನಸ್ಥಿತಿ.

ಗುಣ ಲಕ್ಷಣಗಳೆಂದರೆ,

ಅನಾಸಕ್ತಿ - ಮೊದಲು ಇಷ್ಟ ಪಟ್ಟು ತೊಡಗಿಸಿ ಕೊಳ್ಳುತ್ತಿದ್ದ  ವಿಚಾರಗಳ ಬಗೆಗೆ ಆಸಕ್ತಿ ಹಿಮ್ಮುಖವಾಗುವುದು.



ತಪ್ಪಿತಸ್ಥ ಮನಸ್ಸು- ತನ್ನಿಂದ ಬೇರೆಯವರಿಗೆ ತೊಂದರೆ ಆಗುತ್ತಿದೆಯೇನೋ ಅಥವಾ ಯಾವುದೋ ತಪ್ಪು ಮಾಡುತ್ತಿದ್ದೇನೆ ಅನ್ನುವ ಆಲೋಚನೆಗಳು.

ಅಸಾಮರ್ಥ್ಯ-  ತನ್ನಿಂದ ಯಾವ ಕೆಲಸವೂ ಆಗದು, ಎಷ್ಟೇ ಚಿಕ್ಕ,ಸರಳ ಕೆಲಸ ಮಾಡುವಾಗಲೂ ಕೂಡಾ ನಿರುತ್ಸಾಹಿಗಳಾಗಿರುವುದು.


                                
ಒಂಟಿತನ - ಈ ಡಿಪ್ರೆಶನ್ನಿಗೆ ಒಂಟಿತನವೂ ಕಾರಣವಾಗಿರಬಹುದು ಮತ್ತು ಡಿಪ್ರೆಶನ್ ಆವರಿಸಿಕೊಂಡ ಮೇಲೆ ಒಂಟಿತನ ಅನುಭವಿಸಬಹುದು. ಉದಾಹರಣೆಗೆ, ಎಲ್ಲರೂ ಮಾತನಾಡುತ್ತಾ ಖುಷಿಯಾಗಿರುವಾಗ ಒಬ್ಬರೇ  ಸುಮ್ಮನೆ ಮೂಲೆಯಲ್ಲೋ, ಕೋಣೆಯಲ್ಲೋ ನಿರಾಸಕ್ತಿಯಿಂದ ಕುಳಿತುಕೊಂಡಿರುವುದು.ಒಬ್ಬರೇ ಒಂಟಿಯಾಗಿರುವುದಕ್ಕೂ, ಮನಸ್ಸಿನಲ್ಲೇ ಒಂಟಿತನವನ್ನು ಅನುಭವಿಸುವುದಕ್ಕೂ ವ್ಯತ್ಯಾಸವಿದೆ. ಹಾಸ್ಯ ಮಾಡುತ್ತಾ ಎಲ್ಲರೂ ನಗುತ್ತಿದ್ದರೂ ಖಿನ್ನತೆ ಇರುವವರು ಪ್ರತಿಕ್ರಿಯಿಸದೆ  ಒಂಟಿತನವನ್ನು ಅನುಭವಿಸುತ್ತಾರೆ.

ಹಸಿವು - ಕೆಲವರು ಆಹಾರವನ್ನೇ ಸರಿಯಾಗಿ ಸೇವಿಸುವುದಿಲ್ಲ. ಅಥವಾ ಪೌಷ್ಟಿಕಾಂಶದ ಕೊರತೆಯೂ ಕೆಲವು ಡಿಪ್ರೆಶನ್ನಿಗೆ ಕಾರಣವಾಗುತ್ತದೆ. ಮತ್ತೆ ಕೆಲವರು ಹೊಟ್ಟೆಬಾಕತನವನ್ನು ತೋರಿಸುತ್ತಾರೆ.ಈ ಬಗ್ಗೆ ವಿವರಣೆಗೆ  ನನ್ನ್.ಈ ಪೋಸ್ಟಿನಲ್ಲಿ ನೋಡಬಹುದು.

ನಿದ್ರೆಯಲ್ಲಿನ ಬದಲಾವಣೆ- ನಿದ್ರಾ ಹೀನತೆ [ insomnia ]  ಅಥವಾ ಅತಿನಿದ್ರೆ [ hypersomnia ] ಕಾಡಬಹುದು.

 ದೈಹಿಕ ಚಟುವಟಿಕೆಗಳು- ಕೆಲವೊಮ್ಮೆ ಅತಿಯಾದ ಚಟುವಟಿಕೆಯನ್ನೂ, ಕೆಲವೊಮ್ಮೆ ನಿಧಾನಪ್ರವೃತ್ತಿಯನ್ನೂ ಕಾಣಬಹುದು.

ಏಕಾಗ್ರತೆಯಲ್ಲಿನ ಅಸಾಮರ್ಥ್ಯ- ವಸ್ತು,ವಿಷಯ ಗಳನ್ನು ಗ್ರಹಿಸುವಲ್ಲಿ, ನಿರ್ಧಾರ ತೆಗೆದುಕೊಳ್ಳುವಲ್ಲಿ, ಸಮಸ್ಯೆಗಳನ್ನು ಬಗೆಹರಿಸುವಲ್ಲಿ, ಮತ್ತು ನೆನಪಿನ ಶಕ್ತಿ ಕೂಡ ಕುಂಟಿತಗೊಳ್ಳಬಹುದು.ದೈಹಿಕ ಅಶಕ್ತತೆ ಕಾಣಿಸಿಕೊಳ್ಳಬಹುದು.

  ಕೆಲವೊಮ್ಮೆ ಅಸ್ಥಿರ, ಚಂಚಲ ಮನಸ್ಥಿತಿಯನ್ನೂ ಕಾಣಬಹುದು. ಬೇಗನೆ ಕಿರಿಕಿರಿಗೊಳಗಾಗುತ್ತಾರೆ.ಸುಮ್ಮನೆ ಸಿಟ್ಟಿಗೇಳುವುದು,
ಅನಗತ್ಯ ವಾದಕ್ಕಿಳಿಯಬಹುದು.

ಕೆಲವೊಮ್ಮೆ ಯಾವಾಗಲೂ ತಲೆನೋವು, ಬೆನ್ನುನೋವು, ಹೊಟ್ಟೆನೋವು, ಬೇಧಿ, ಮಲಬದ್ಧತೆ, ಸಂದುನೋವುಗಳು ಮುಂತಾದ ದೈಹಿಕ ಕಾಯಿಲೆಗಳನ್ನು ಅನುಭವಿಸಬಹುದು.  ವೈದ್ಯರಿಗೆ ಯಾವ ದೈಹಿಕ ತೊಂದರೆಯೂ ಕಾಣದಿರಬಹುದು.

ಹೆಚ್ಚಿನದಾಗಿ ಮಾನಸಿಕ ಖಿನ್ನತೆಯಿರುವವರು ಪ್ರಪಂಚದ ಬಗ್ಗೆ ಒಂದು ಋಣಾತ್ಮಕ ಮನೋಭಾವನೆಯನ್ನು ತೋರಿಸುತ್ತಾರೆ. ಅತೀ  ಕಾಳಜಿ,  ಅತೀ   ನಿರ್ಲಕ್ಷ್ಯ,  ಭವಿಷ್ಯದ  ಬಗೆಗೆ ಭಯ,ಗೊಂದಲ ಹೆಚ್ಚಾಗಿ ತೋರ್ಪಡಿಸುತ್ತಾರೆ.
ಪ್ರತಿಯೊಬ್ಬರೂ ನಮ್ಮ ಜೀವಮಾನದ ಒಂದಲ್ಲಾ ಒಂದು ಸನ್ನಿವೇಶದಲ್ಲಿ ಖಿನ್ನತೆಗೆ ಒಳಗಾಗಿಯೇ ಆಗುತ್ತೇವೆ.ಆದರೆ ಬಹುಬೇಗ ಮಾಮೂಲಿನ ಜೀವನ ನಡೆಸಲು ಶುರು ಮಾಡುತ್ತೇವೆ. ಕೆಲವೊಮ್ಮೆ ನೆನಪು ಮಾಡಿಕೊ೦ಡರೂ, ನಂತರ ನಿಧಾನಕ್ಕೆ ಮರೆತು ಬಿಡುತ್ತೇವೆ. ತೀವ್ರತೆ ಕಡಿಮೆಯಾಗ ತೊಡಗುತ್ತದೆ. ಆದರೆ  ದಿನದ  ಹೆಚ್ಚಿನ  ಭಾಗ  ಖಿನ್ನತೆಯಲ್ಲಿಯೇ ಇದ್ದರೆ ಮತ್ತು ತೀವ್ರತೆ ಮೊದಲಿದ್ದಂತೆಯೇ ಮುಂದುವರೆದುಕೊಂಡು ಹೋಗುತ್ತಿದ್ದರೆ  ಅಂತವರಿಗೆ   ತಜ್ಞರ  ಜರೂರತ್ತಿದೆ.

ಹಾಗಾದರೆ ಈ ಮಾನಸಿಕ  ಖಿನ್ನತೆಗೆ ಕಾರಣಗಳೇನು..?ಇದಕ್ಕೆ ಮುಖ್ಯ ಕಾರಣಗಳೆಂದರೆ,   

೧. ವಂಶಪಾರಂಪರ್ಯವಾಗಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನದಾಗಿ ಸಂಬಂಧಗಳಲ್ಲಿನ ಮದುವೆಯಾದರೆ ಅವರ  ಮಕ್ಕಳಲ್ಲಿ ಈ ಪ್ರವೃತ್ತಿ ಹೆಚ್ಚು. ಹತ್ತಿರದ ಸಂಬಂಧಿಗಳಲ್ಲಿ ಉದಾಹರಣೆಗೆ, ತಂದೆ ಅಥವಾ ತಾಯಿ, ಅಜ್ಜ ಅಜ್ಜಿ ಇವರುಗಳು ಖಿನ್ನತೆಯಿಂದ ಬಳಲುತ್ತಿದ್ದರೆ; ಅದು ಮುಂದಿನ ಸಂತತಿಗೆ  ವರ್ಗಾವಣೆಯಾಗುತ್ತದೆ.

೨.ನರಚೋದಕಗಳ ಅಸಮರ್ಪಕ ಸ್ರವಿಸುವಿಕೆ- ನಮ್ಮ ಎಲ್ಲ ಮಾನಸಿಕ ಕ್ರಿಯೆಗಳೂ ಕೆಲವು ರಾಸಾಯನಿಕ ವಸ್ತುಗಳಿಂದ ನಿರ್ವಹಿಸಲ್ಪಡುತ್ತಿರುತ್ತದೆ.ಈ ರಾಸಾಯನಿಕಗಳ ಸ್ರಾವದಲ್ಲಿ ಏರು ಪೇರು ಆದಾಗ  ಮೆದುಳಿನ ನರ ಕೋಶಗಳಿಗೆ ಸಮರ್ಪಕ ಸೂಚನೆಗಳು ಸಿಗದೇ ಕ್ರಿಯೆಯಲ್ಲಿ ವ್ಯತ್ಯಾಸವಾಗುತ್ತದೆ. ಕನೆಕ್ಷನ್ ತಪ್ಪಿ ಹೋಗಿರಬಹುದು. ರಾಂಗ್ ಕನೆಕ್ಷನ್ ಆಗಬಹುದು.  ಕೆಲವೊಮ್ಮೆ ಯಾವುದೋ ಸ್ವಿಚ್ ಒತ್ತಿದರೆ ಯಾವುದೋ ಲೈಟ್ ಹೊತ್ತಿಕೊಳ್ಳಬಹುದು.! ಎಲ್ಲಿಯೋ ಶಾಕ್ ಹೊಡೆಯಬಹುದು..!

೩.ಜೀವನದಲ್ಲಾಗುವ ಸಹಿಸಲಾಗದ ಆಘಾತ.- ಪ್ರೀತಿ  ಪಾತ್ರರ ಅಗಲುವಿಕೆ, ವ್ಯಾಪಾರ ವ್ಯವಹಾರದಲ್ಲಿ ಸೋಲು, ಅತಿಯಾದ ಕೆಲಸದ ಒತ್ತಡ, ಅತಿಯಾದ ನಿರೀಕ್ಷೆ ಇವುಗಳೆಲ್ಲ ಖಿನ್ನತೆಗೆ ಕಾರಣವಾಗುತ್ತವೆ.

 ಇದರ ಮುಖ್ಯ ಪರಿಣಾಮಗಳೇನು..?

ಸಾಮಾಜಿಕವಾಗಿ ಸುಖ ಜೀವನ ನಡೆಸಲು ಕಷ್ಟವಾಗುತ್ತದೆ. ಕೆಲಸ, ಕುಟುಂಬ, ಮಕ್ಕಳನ್ನು ನಿರ್ವಹಿಸುವುದರಲ್ಲಿ ಅಸಮರ್ಥತೆ ತೋರುತ್ತದೆ.

ಈ ನಡುವೆ ನನ್ನ ಆಪ್ತ ಗೆಳತಿಯೊಬ್ಬಳು ಈ ಮಾನಸಿಕ ಖಿನ್ನತೆಯ ಪರಿಣಾಮವಾಗಿ ನೇಣಿಗೆ  ಶರಣಾದಳು. ಡಿಪ್ರೆಶನ್ ನ  ಮುಖ್ಯ ಪರಿಣಾಮಗಳಲ್ಲಿ ಈ ಆತ್ಮ ಹತ್ಯೆಯೂ ಒಂದು.ಪ್ರಪಂಚದಲ್ಲಿ ಶೇಕಡಾ ನಾಲ್ಕು ಜನ ಈ ಮೇಜರ್  ಡಿಪ್ರೆಶನ್ ಗೊಳಗಾದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಶೇಕಡಾ ಅರವತ್ತರಿಂದ ಅರವತ್ತೈದು ಜನ ಡಿಪ್ರೆಶನ್ ಅಥವಾ ಉಳಿದ  ಮಾನಸಿಕ ಸಮಸ್ಯೆಗೊಳಗಾದವರೇ  ಆಗಿರುತ್ತಾರೆ !  ಈ ಆತ್ಮಹತ್ಯಾ ಮನೋಭಾವನೆ  ಸಾಮಾನ್ಯ ಜನರಲ್ಲಿ ಕಾಣಿಸಿಕೊಳ್ಳುವುದಕ್ಕಿಂತಲೂ ಖಿನ್ನತೆಗೊಳಗಾದವರಲ್ಲಿ ೨೫ ಪಟ್ಟು ಹೆಚ್ಚಿಗೆ ಕಾಣಿಸಿಕೊಳ್ಳುತ್ತದೆ. ಈ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯನ್ನು ಸೂಕ್ತ ಔಷಧಗಳಿಂದ, ಆಪ್ತ ಸಮಾಲೋಚನೆಯಿಂದ ಸಾಧ್ಯವಾದಷ್ಟು ಮುಂದಕ್ಕೆ ಹಾಕಬಹುದು.ಸಹೃದಯ ಸಹಕಾರದಿಂದ  ಕೆಲವರಿಗೆ ಉತ್ತಮ ಫಲಿತಾಂಶಗಳೂ ಲಭ್ಯ.
ಆದರೆ ಈ ರೀತಿ ಯೋಚನೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ, ಅಥವಾ ಅದಕ್ಕೆ ಮುನ್ಸೂಚನೆಯಾಗಿ ಯಾವುದಾದರೂ ಕ್ರಿಯೆ ನಡೆಯುತ್ತಿದ್ದರೆ ತಕ್ಷಣವೇ ಮಾನಸಿಕ ತಜ್ಞರನ್ನು ಕಾಣಲೇ ಬೇಕು.ಪ್ರಾರಂಭದ ಹಂತದಲ್ಲಿ  ಉತ್ತಮ ಫಲಿತಾಂಶಗಳೇ ದೊರಕುತ್ತದೆ.

ಆದರೆ ಒಮ್ಮೆ ಆತ್ಮಹತ್ಯೆಗೆ ಪ್ರಯತ್ನ ಮಾಡಿದರೆಂದರೆ,  ಹೇಗೋ ಉಳಿದರೂ ಕೂಡಾ ಅವರು ತಮ್ಮ ಅಂತ್ಯವನ್ನು ಆತ್ಮಹತ್ಯೆಯಲ್ಲಿಯೇ  ಪೂರ್ಣ  ಮಾಡಿ ಕೊಳ್ಳುತ್ತಾರೆ. ಹಾಗಾಗಿ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳುವುದು ಅವಶ್ಯ.ಯಾವ ವಿಚಾರಗಳಿ೦ದ ಪ್ರಚೋದನೆಗೊಳಗಾಗುವರೆ೦ಬ ಸಣ್ಣ ಸುಳಿವು ಸಿಕ್ಕರೂ ಸಹಾ ಅ೦ತಹವುಗಳಿ೦ದ ದೂರವಿರಿಸುವುದು ಉತ್ತಮ.
ಖಿನ್ನತೆಗೊಳಗಾದವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ..ಅದು  ಅದರ ತೀವ್ರತೆಯನ್ನು ಆಧರಿಸಿರುತ್ತದೆ.

ಮತ್ತೆ ಕೆಲವರು ಬೇರೆಯವರ ಮೇಲೆ ಹಲ್ಲೆ ನಡೆಸಲೂ ಬಹುದು. ಸೈಕೊಟಿಕ್ ಅಥವಾ ಮ್ಯಾನಿಕ್ ಡಿಪ್ರೆಶನ್ನಿನ ವ್ಯಕ್ತಿಗಳು ಈ ನಡವಳಿಕೆ ತೋರಿಸಬಹುದು.

ಮೊದಲೇ ಹೇಳಿದ೦ತೆ ನನ್ನ ಆತ್ಮೀಯ ಗೆಳತಿಯೊಬ್ಬಳು ಕೆಲದಿನಗಳ ಹಿ೦ದೆ ನೇಣು ಹಾಕಿಕೊ೦ಡು ಮೃತಪಟ್ಟಳು.ಆಕೆಗೆ ಡಿಪ್ರೆಶನ್ನಿಗೆ ಕಾರಣವಾದದ್ದು ಕಾಯಿಲೆಯಿ೦ದ ನರಳಿ  ತೀರಿಕೊ೦ಡ  ಮಗಳ ವಿಚಾರ. ಹೊರಗಿನವರಿಗೆ ಒ೦ಚೂರೂ  ಡಿಪ್ರೆಶನ್ನಿನ  ಸುಳಿವೇ ಸಿಗದಷ್ಟು ಜೀವನೋತ್ಸಾಹ ಕಾಣಿಸುತ್ತಿತ್ತು ಆಕೆಯಲ್ಲಿ.  ಆದರೆ ಒಳಗಿನ ಪರಿಸರವೇ ಬೇರೆ ನೋಡಿ.ಯಾವುದು ಆ ಗಳಿಗೆಯಲ್ಲಿ ಪ್ರಚೋದಿಸಿತೊ ಅ೦ತೂ ಈಗಿಲ್ಲ ಆಕೆ. ಗೊತ್ತೇ ಆಗದ೦ತೆ ಒಳಗೊಳಗೇ ಕಾಡುವ, ಬಲಿ  ತೆಗೆದುಕೊಳ್ಳುವ ಮಾರಿ  ಇದು.

[ಈ ಮೊದಲು”ಈಪೋಸ್ಟಿನಲ್ಲಿ ’ಕೊಟ್ಟ ಲಿ೦ಕ್ ತಪ್ಪಾಗಿತ್ತು ಈಗ ಸರಿಪಡಿಸಿದ್ದೇನೆ.]
[ ಚಿತ್ರಕೃಪೆ ಅ೦ತರ್ಜಾಲ]              
[ಮು೦ದುವರೆಯುವುದು]           

16 comments:

  1. ವಿಜಯಶ್ರೀ ಬಹಳ ಉಪಯುಕ್ತ ಮತ್ತು ಅವಶ್ಯಕ ಮೊದಲ ಸಾಲಿನೊಂದಿಗೆ -ಖಿನ್ನರೆಲ್ಲಾ ಹುಚ್ಚರಲ್ಲ- ಎನ್ನೋ ಮಾತು ಹೇಳುತ್ತಾ ಖಿನ್ನತೆ ವಿವರಗಳನ್ನು ತಿಳಿಸಿದ್ದೀರ.
    ಖಿನ್ನತೆಗೆ ಪ್ರಮುಖ ಕಾರಣ ಸೆರಟೋನಿನ್ ಎಂಬ ಜೀವರಾಸಾಯನಿಕ ಸಂಯುಕ್ತ ಎನ್ನುವುದು ಬಹುಪಾಲು ಖಚಿತ. ನರಕೋಶಿಕೆಗಳ ಕಾರ್ಯಕ್ಷಮತೆ ಮತ್ತು ಇತರೆ ಅಂಗಾಂಗ ಕಾರ್ಯಕ್ಷಮತೆಗೆ ಇದು ಬಹೋಪಯೋಗಿ. ಅನುವಂಶೀಯ ಕಾರಣ ಸೆರಟೋನಿನ್ ಕೊರೆತ ದೇಹದಲ್ಲಾಗಬಹುದು, ಇತರೆ ಕಾರನಗಳಿಂದಲೂ.. ಎಲ್ಲದರ ಸ್ಥೂಲ ಪರಿಣಾಮಗಳನ್ನು ವಿವರವಾಗಿ ತಿಳಿಸಿದ್ದೀರಿ. ಉಪಯುಕ್ತ ಲೇಖನ.

    ReplyDelete
  2. ಜಲನಯನ ಸರ್..
    ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ ವ೦ದನೆಗಳು.

    ReplyDelete
  3. ವಿಜಯಶ್ರೀ,
    ಉಪಯುಕ್ತ ಮನೋವೈಜ್ಞಾನಿಕ ಲೇಖನವನ್ನು ಬರೆದಿರುವಿರಿ. ವಿವಿಧ ಮನೋರೋಗಗಳ ಬಗೆಗೆ ಶಾಸ್ತ್ರೀಯ ಜ್ಞಾನವಿಲ್ಲದ ನಮ್ಮಂತಹ ಸಾಮಾನ್ಯರಿಗೆ ಇಂತಹ ಲೇಖನಗಳಿಂದ ತುಂಬ ಅನುಕೂಲವಾಗುತ್ತಲಿದೆ.

    ReplyDelete
  4. ಮನಮುಕ್ತಾ
    ಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು.

    ReplyDelete
  5. ಕಾಕ..
    ಮಾನಸಿಕ ಸಮಸ್ಯೆಗಳು ಅ೦ದರೆ ಅದು ಹುಚ್ಚು ಅ೦ತಲೆ ಹೆಚ್ಚಿನ ಜನ ತಿಳಿಯುವ ಸ೦ದರ್ಭದಲ್ಲಿ ಎಲ್ಲವೂ ಹಾಗೆಯೇ ಅಲ್ಲ ಎನ್ನುವಲ್ಲಿ ನನ್ನದೊ೦ದು ಚಿಕ್ಕ ಪ್ರಯತ್ನ..
    ತಮ್ಮ ಪ್ರೋತ್ಸಾಹವೇ ಹೆಚ್ಚಿನ ಪ್ರೇರಣೆ..
    ಧನ್ಯವಾದಗಳು.

    ReplyDelete
  6. ತುಂಬಾ ಒಳ್ಳೆ ಮಾಹಿತಿ ಧನ್ಯವಾದಗಳು

    ReplyDelete
  7. ಚೆನ್ನಾಗಿದೆ ಲೇಖನ.. ಇಷ್ಟ ಆಯ್ತು

    ReplyDelete
  8. good info madam and eagerly waiting for further wiritings

    ReplyDelete
  9. ಉತ್ತಮ ಮಾಹಿತಿ ಲೇಖನ ಮೇಡ೦. ನನ್ನ ಮನೋವೈದ್ಯ ಮಿತ್ರರೊಬ್ಬರು ತಿಳಿಸುವ ಪ್ರಕಾರ ಶೇ.೯೦ ರಷ್ಟು ಜನರಲ್ಲಿ ಮನೋರೋಗ ವಿರುವುದ೦ತೆ. ಆದರೆ ಎಲ್ಲವೂ ಕ್ಲಿನಿಕ್ ಗೆ ಬ೦ದು ವಾಸಿ ಮಾಡಿಕೊಳ್ಳುವ ರೋಗವಲ್ಲ. ಹಾಗೆಯೇ ಅದರ ಇರುವಿಕೆಯೂ ಬಹಿರ೦ಗದಲ್ಲಿ ಕಾಣಿಸುವುದೇ ಇಲ್ಲ ಎನ್ನುತ್ತಾರೆ. ಮತ್ತಷ್ಟು ಉತ್ತಮ ಲೇಖನಗಳು ನಿಮ್ಮ ಲೇಖನಿಯಿ೦ದ ಹರಿದು ಬರಲಿ. ಅಭಿನ೦ದನೆಗಳು.

    ಅನ೦ತ್

    ReplyDelete
  10. vijayashreeyavare,
    olleya,vupayukta
    lekhanakkaagi dhanyavaadagalu.

    ReplyDelete
  11. ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ
    ಮನಸು,
    ಆಶಾ,
    ದೇಸಾಯಿ ಸರ್
    ಅನಂತ್ ಸರ್
    ಕಲರವ ಮೇಡ೦
    ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

    ReplyDelete
  12. ವಿಜಯಶ್ರೀಯವರೇ,

    ನಿಮ್ಮ ಲೇಖನ ಸರಳವಾದ ಶೈಲಿಯಲ್ಲಿ ಉಪಯುಕ್ತ ಮಾಹಿತಿ ಒದಗಿಸುತ್ತಿದೆ.

    ವೃತ್ತಿಯಲ್ಲಿ ನಾನೂ 'ಮನಃ ಶಾಸ್ತ್ರಜ್ಞ'ಳೆ೦ದು ಕರೆಯಲ್ಪಡುವವಳು! ಒಳ್ಳೆಯ ಲೇಖನಕ್ಕೆ ಧನ್ಯವಾದ :)

    ~ಸುಷ್ಮ

    ReplyDelete
  13. ಮಾಹಿತಿ ಉಪಯುಕ್ತ. ತಾವು ವೈದ್ಯರೇ?

    ReplyDelete
  14. ಸುಷ್ಮಅವರೇ..
    ನನ್ನ ಬ್ಲಾಗಿಗೆ ಸ್ವಾಗತ..
    ನೀವು ಮಾನಸಿಕ ತಜ್ನರೆ೦ದು ತಿಳಿದು ಸ೦ತೋಶವಾಯಿತು.
    ಆಗಾಗ ಭೇಟಿ ಕೊಟ್ಟು ನನ್ನ ಬರಹಗಳಲ್ಲಿ ತಪ್ಪುಗಳೇನಾದರೂ ಇದ್ದರೆ ಎಚ್ಚರಿಸಿ.

    ReplyDelete
  15. ಸೀತಾರಾಮ್ ಸರ್
    ನಾನು ಮನೋವಿಜ್ನಾನವನ್ನು ಅಭ್ಯಾಸ ಮಾಡಿದ್ದೀನೆಯೇ ಹೊರತೂ ವೈದ್ಯಳಲ್ಲ..

    ReplyDelete