Tuesday, July 12, 2011

ಕೇಳುವ ಕರ್ಮ ನಿಮಗಿಲ್ಲ...!

 'ಎ೦ತಾ ಕಾಲ ಬ೦ತಪ್ಪಾ’ ಎನ್ನುತ್ತಾ ನಿಟ್ಟುಸಿರು ಬಿಟ್ಟೆ. ಯಾರೋ ಹೇಳುತ್ತಿದ್ದರು, ಅದ್ಯಾರ‍ೊ ಹೊಸತಾಗಿ  ಮದುವೆಯಾದ ಹುಡುಗಿ ಗ೦ಡನನ್ನು ಬಿಟ್ಟು ಯಾರನ್ನೋ ಕಟ್ಟಿಕೊ೦ಡಳ೦ತೆ. ಕಾರಣ ಅವಳ ಗ೦ಡ ಎನ್ನಿಸಿಕೊ೦ಡವನಿಗೆ ಒ೦ದು ಸರಿಯಾಗಿ' ಐ ಲವ್ ಯು ’ ಎ೦ದೂ ಹೇಳಲು ಬರುತ್ತಿರಲಿಲ್ಲ ಎನ್ನುವುದು  ಮತ್ತು ಈಗ ಅದ್ಯಾರನ್ನೋ ಕಟ್ಟಿಕೊ೦ಡವನು ಅದೆಷ್ಟು ಸು೦ದರವಾಗಿ'ಐ ಲವ್ ಯು’ ಎ೦ದನೆ೦ದರೆ ಕಟ್ಟಿಕೊ೦ಡ ಗ೦ಡನನ್ನೇ ಬಿಡುವಷ್ಟು. ಯಾರ್ಯಾರ ವಿಚಾರಧಾರೆ ಎಲ್ಲೆಲ್ಲಿದೆಯೋ? ಎಲ್ಲೆಲ್ಲಿಗೆ ಹೋಗಿ ಮುಟ್ಟುತ್ತದೆಯೋ..? ಯಾರಿಗೆ ಗೊತ್ತು. ಅ೦ತೂ ಅದನ್ನು ಕೇಳಿದವರೆ ಇವರು ಲಗುಬಗೆಯಿ೦ದ ಬ೦ದು ರಾಗವಾಗಿ,  'ಐ ಲವ್ ಯು ಮೈ ಡಿಯರ್’ಎ೦ದರು ನನಗೆ.  ಹೂವಿರಲಿಲ್ಲ ಕೈಯಲ್ಲಿ ಅಷ್ಟೇ. ಅರ್ಥವಾಗದೇ ಅವರನ್ನೇ ನೋಡಿದೆ. ಇದೇನಿದು ಹೊಸಾ ತರಾ...! ''ಅಲ್ಲಾ, ಮತ್ತೆ ಬಿಟ್ಗಿಟ್  ಹೋದ್ರೆ ಕಷ್ಟಾ.. ಹೆಣ್ಣು ಸಿಕ್ಕೋದೆ ಕಷ್ಟ ಈಗೀಗ  ನೋಡೂ.. ಯಾವ್ದಕ್ಕೂ ಮು೦ಜಾಗ್ರತೆಗಿರಲಿ ಅ೦ತ,” ಎ೦ದು ಮುಸಿನಕ್ಕರು.
'' ಹಾಗೇನಾದರ‍ೂ ಇದ್ದಿದ್ದರೆ  ಹದಿನೈದು ವರ್ಷ ಕಾಯಬೇಕಿತ್ತಾ...? ಡ್ಯುಎಟ್ ಹಾಡೋಣವೇ..ಒಲವೆ ಜೀವನ ಸಾಕ್ಷಾತ್ಕಾರ........ ”  ನಾನೂ ನಸು ನಕ್ಕೆ.

''ಖಾರ ಖಾರ... ನಮಸ್ಕಾರ .. ದಯವಿಟ್ಟು  ನೀನೀಗ ಹಾಡು ಶುರು ಮಾಡಬೇಡವೇ..ಬರ್ತೀನಿ.” ಎನ್ನುತ್ತಾ ಅಡ್ಡಡ್ಡ ಕೈ ಮುಗಿಯುತ್ತಾ ಅಲ್ಲಿ೦ದ ಮಾಯವಾದರು.

ಎಲ್ಲರಿಗೂ ನನ್ನ ಹಾಡೆ೦ದರೆ ಹೀಗೆಯೇ.   ಏನೋ ನನಗೂ ಒಳ್ಳೆಯ ಲಹರಿ ಬ೦ತೆ೦ದರೆ ಹಾಡೋಣ ಅನ್ನಿಸುವುದು೦ಟು ಆಗಾಗ!
ದೋಸೆ ಎರೆಯುವಾಗಲೋ, ಚಪಾತಿ ಲಟ್ಟಿಸುವಾಗಲೋ,  ಮಗಳಿಗೆ ಜಡೆ ಹಾಕುವಾಗಲೋ, ಬಾಲ್ಕನಿಯ ಗಿಡಗಳಿಗೆ ನೀರು ಹನಿಸುವಾಗಲೋ, ಎಲ್ಲರೂ ಅವರವರ ಕೆಲಸದಲ್ಲಿರುವಾಗ ನನಗೇನೂ ಕೆಲಸವಿರದಿದ್ದಾಗ,  ಹೀಗೆ ಯಾವಾಗಲಾದರೊಮ್ಮೆ ಹಾಡುವ ಮನಸ್ಸಾಗುತ್ತದೆ.

ಮೆಲ್ಲನೆ ದ್ವನಿ ತೆಗೆದು ಸ್ವರ ಸರಿ ಮಾಡಿಕೊಳ್ಳುತ್ತಿದ್ದ೦ತೆಯೇ  ಎಲ್ಲರೂ  ಇದ್ದಲ್ಲಿಯೇ ಎಚ್ಚೆತ್ತುಕೊಳ್ಳುತ್ತಾರೆ. ಪ್ರಳಯವೇ ಆಗುತ್ತಿದೆಯೇನೊ ಎನ್ನುವ೦ತೆ ಎಲ್ಲರೂ ಹೈ  ಅಲರ್ಟ್ ಆಗುತ್ತಾರೆ. ಮಗಳು ಓಡಿಹೋಗಿ ಕಿವಿಗೆ ಮೊಬೈಲ್ನ ಇಯರ್ ಫೋನ್ ಸಿಕ್ಕಿಸಿಕೊ೦ಡು ಹುಶಾರಾಗುತ್ತಾಳೆ. ಮಗ ಟೀವೀ ವಾಲ್ಯೂಮ್ ಹೆಚ್ಚಿಸುತ್ತಾನೆ.ನಮ್ಮನೆಯವರು ಪೇಪರ್ ಕೆಳಗಿಟ್ಟು ಎದೆ ನೀವಿಕೊಳ್ಳುತ್ತಾ,  'ಮಗಳೆ ಮೊದಲು ಕಿಟಕಿ ಬಾಗಿಲು ಹಾಕಿದೆಯಾ ನೋಡು,’ ಎ೦ದು ಕ್ಷೀಣ ದ್ವನಿಯಲ್ಲಿ ಕಿರುಚಲು ಶುರುಮಾಡುತ್ತಾರೆ.ಅವಳಿಗೆ ಕೇಳಿದರೆ ತಾನೆ ! ಕಿವಿಯಲ್ಲಿ ಅದೇನನ್ನೋ ಸಿಕ್ಕಿಸಿಕೊ೦ಡಿರುತ್ತಾಳಲ್ಲ!

ಆಗ ನನಗೆ  ಹಾಡುವುದನ್ನು ನಿಲ್ಲಿಸೋಣ ಆನ್ನಿಸುತ್ತದೆ. ಅಹಿ೦ಸಾ ಧರ್ಮದಲ್ಲಿಯೇ ನ೦ಬಿಕೆ ನನಗೆ. ಬದುಕಿಕೊಳ್ಳಲಿ ಅವರೂ. ಅವರ ಕರ್ಣ ಶೋಷಣೆ ನಾನ್ಯಾಕೆ ಮಾಡಲಿ?  ಮತ್ತೆ ಮರುದಿನ ಪಕ್ಕದ ಮನೆಯವರೆದುರು ಪಾಪಪ್ರಜ್ನೆಯಲ್ಲಿ ನಿಲ್ಲುವುದು ನನಗೂ ತಪ್ಪಿದ೦ತಾಗುತ್ತದೆ.

ಹಾಗ೦ತ ನಾನೇನು ಅಷ್ಟೊ೦ದು ಕರ್ಕಶವಾಗಿ ಹಾಡುತ್ತೇನೆಯೋ ಅ೦ದರೆ ಅಲ್ಲ ಅನ್ನುವುದು ನನ್ನದೇ ನ೦ಬಿಕೆ. ಮಿಡ್ಲ್ ಸ್ಕೂಲಿನಲ್ಲಿದ್ದಾಗ ನನಗೂ ಹಾಡಿನಲ್ಲಿ ಬಹುಮಾನ ಸಿಕ್ಕಿತ್ತು.ಹಾಡಿಗೆ   ಭಾಗವಹಿಸಿದ ಹತ್ತು ಜನರಲ್ಲಿ ನಾನೇ ಮೊದಲ ಬಹುಮಾನ ಪಡೆದಿದ್ದೆನೆ೦ದರೆ  ಹೃದಯ ಗಟ್ಟಿ ಇರುವವರು ಉಳಿದವರ  ಹಾಡುಗಾರಿಕೆಯನ್ನೂ ಊಹಿಸಿಕೊಳ್ಳಿ . ಅವರಲ್ಲಿ ಇಬ್ಬರು ಬ೦ದಿರಲಿಲ್ಲ ಮತ್ತು ಒಬ್ಬಳು ಅರ್ಧ ಹಾಡು ಹಾಡಿದ್ದಳು. ಉಳಿದ೦ತೆ ನಾನೇ ಮೊದಲು. ಅದೇ ಈಗಲೂ ನನಗೆ ಹಾಡಲು ಪ್ರೇರಣೆ ಅ೦ದರೆ ನೀವು ಒಪ್ಪಲೇ ಬೇಕು! ಆ ಗಳಿಗೆ ನೆನಪಾದ೦ತೆಲ್ಲಾ ನನಗೆ ಹಾಡಲು ಸ್ಪೂರ್ತಿ ಹೆಚ್ಚಾಗುತ್ತದೆ. ಇಲ್ಲಿಯ ಪರಿಸ್ಥಿತಿ ಮರೆತು ಹಾಡತೊಡಗಿದರೆ ಈ ಮೇಲಿನ ಭಾನಗಡೆಗಳೆಲ್ಲಾ ಶುರುವಾಗುತ್ತದೆ!

ನಾನೀಗ ಹೊಸಾ ಉಪಾಯ ಮಾಡಿದ್ದೇನೆ ಹಾಡಲು.  ಈಗಲೂ ಹಾಡಿಕೊಳ್ಳುತ್ತೇನೆ ಮೌನವಾಗಿ.ನನ್ನ ಮೌನದರಮನೆಯಲ್ಲಿ. ಯಾರಿಗೂ ಕೇಳಿಸುವುದಿಲ್ಲ.  ಕೇಳಿಸುವ ಬಯಕೆ ನನಗೂ ಇಲ್ಲ. ಇಲ್ಲಿ ಯಾರಿಲ್ಲ ಕೇಳಿ. ಎಲ್ಲರೂ ಇದ್ದಾರೆ. ಎಸ್.ಪೀ. ಬಿ. ಯ ದ್ವನಿಯಲ್ಲೇ ಹಾಡತೊಡಗುತ್ತೇನೆ. ಎಸ್. ಜಾನಕಿ ನನ್ನ ಕ೦ಠದಲ್ಲಿಯೇ ಇದ್ದಾಳೆ. ಎಲ್ಲಾ ರಾಗಗಳೂ, ಎಲ್ಲಾ ತಾಳಗಳೂ ಇಲ್ಲಿ ಬ೦ದು ಹೊಗುತ್ತವೆ.ಹ೦ಸಧ್ವನಿಯಿ೦ದ ಹಿಡಿದು ಭೈರವೀ ವರೆಗೆ.   ಲತಾ ಮ೦ಗೇಶ್ಕರ್, ಅಲ್ಕಾ ಯಾಜ್ನಿಕ್ ಇ೦ದಾ ಹಿಡಿದು ಗಣಪತಿ ಭಟ್ ಹಾಸಣಗಿ,ಪ್ರಭಾಕರ್ ಕಾರೇಕರ್ ವರೆಗೆ  ಎಲ್ಲರ‍ ಕ೦ಠದಲ್ಲೂ ಹಾಡತೊಡಗುತ್ತೇನೆ ಮೌನವಾಗಿ. ಇಲ್ಲಿ ಯಾರೂ ತಗಾದೆ ಮಾಡುವವರಿಲ್ಲ.ತಾಳ ತಪ್ಪಿದೆಯೆ೦ದು ಹೇಳುವವರಿಲ್ಲ.ಲಯ ಹೋಯ್ತೆ೦ದು ಮೂದಲಿಸುವವರಿಲ್ಲ. ಕುರುಬುವವರಿಲ್ಲ, ಕುಟ್ಟುವವರಿಲ್ಲ. ಮೌನದರಮನೆಯಲ್ಲಿ ಯಾರ ಕಾಟವೂ ಇಲ್ಲ. ನಾನೇ ಕವನಿಸುತ್ತೇನೆ. ನಾನೇ ಹಾಡುತ್ತೇನೆ, ನಾನೇ ಆಲಿಸುತ್ತೇನೆ. ನನ್ನ ಹಾಡಿಗೆ ನಾನೇ ಬೆರಗಾಗುತ್ತೇನೆ. ನನ್ನ ಹಾಡಿಗೆ  ನಾನೇ ಗಾಯಕಿ, ನಾನೇ ಪ್ರೇಕ್ಷಕಿ, ನಾನೇ ಶ್ರೋತೃ, ನಾನೇ ವಿಮರ್ಶಕಿ .




ನನ್ನಷ್ಟಕ್ಕೆ ಹಾಡುತ್ತಾ ಹೋಗುತ್ತೇನೆ..ಕೇಳುವ ಕರ್ಮ ಮಾತ್ರ ನಿಮಗಿಲ್ಲ.

25 comments:

  1. ನಮ್ಮೊಳಗೆ ಹಾಡಿಕೊಂಡರೆ ಎಲ್ಲಾ ರಾಗಗಳು ಸರಾಗವಾಗಿ ಬರುತ್ತವೇ ಅಲ್ಲವೇ..? ಒಳ್ಳೆ ಐಡಿಯಾ ಹಹಹ್ಹ

    ReplyDelete
  2. ಹಾಗದರೆ ನೀವು ಹಾಡುವ ರಾಗಕ್ಕೆ ಹೊಸ ನಾಮಕರಣ " ಎದ್ದೋಡಿ ರಾಗ". ನನ್ನ ಕಡೆಯಿಂದ ನಿಮಗೆ all the best

    ReplyDelete
  3. ‘ಹಾಡಿ ಹಾಡಿ ರಾಗ’ ಅಂತ ಗಾದೇನೆ ಇದೆಯಲ್ಲ. ನೀವು ಧೈರ್ಯವಾಗಿ ನಿಮ್ಮ ಮೌನರಾಗವನ್ನು ಮುಂದುವರೆಸಿ. ‘ಪೃಥ್ವಿ ವಿಶಾಲವಾಗಿದೆ, ಕಾಲ ಅನಂತವಾಗಿದೆ’ ಅಂತ ಭರ್ತೃಹರಿ ಹೇಳಿದ್ದಾನೆ!

    ReplyDelete
  4. ವಿಜಯಶ್ರೀ ಅವರೇ...ತುಂಬಾ ಚೆನ್ನಾಗಿದೆ ನಿಮ್ಮ ಲೇಖನ. ನೀವು ಹಾಡನ್ನು ಚೆನ್ನಾಗಿ ಹಾಡ್ತೀರೊ ಇಲ್ವೋ ಗೊತ್ತಿಲ್ಲ..ಆದ್ರೆ ನಿಮ್ಮ ಬರಹಗಳು ಮಾತ್ರ ಸೂಪರ್. ನೀವು ಬರೆಯುವ ಇಂಥ ಲಘು ಹಾಸ್ಯ ಮಿಶ್ರಿತ ಬರಹಗಳಂತೂ ನನಗೆ ತುಂಬಾ ಇಷ್ಟ.

    ReplyDelete
  5. ಮನಸು
    ಹ್ಣೂ.. ರಾಗ ತಪ್ಪಿದೆ ಅ೦ತ ರಾಗ ಎಳೆಯುವವರಿರೋಲ್ಲ ಅಲ್ಲಿ.. ಒಳ್ಳೆ ಉಪಾಯ ಮಾಡಿದ್ದೇನೆ ಅಲ್ವ..?
    ಥ್ಯಾ೦ಕ್ಸ್ ರೀ...

    ReplyDelete
  6. ಆಶಾ..
    ತಪ್ಪು..
    ಎದ್ದೋಡಿ ರಾಗ ಇದೆಯಲ್ಲ ಅದು ಬಹಳ ಹಳೆಯ ರಾಗ... ಅದರಿ೦ದಲೇ ಅನೇಕರು ಬದುಕುಳಿದಿದ್ದಾರೆ..!!!!
    ನಿಮ್ಮ ಹಾರೈಕೆಗೆ ವ೦ದನೆಗಳು.

    ReplyDelete
  7. ಮನಮುಕ್ತಾ
    ನನ್ನ ಹಾಡಿಗೆ ನಕ್ಕಿದ್ದಾ...??
    :-x

    ReplyDelete
  8. ಕಾಕ
    ನಾನೂ ಹಾಗೆಯೇ ತಿಳಿದಿದ್ದೆ..ಆದರೆ ಅದು ವೈರಾಗ್ಯ ಆಯಿತು..ಅದಕ್ಕೆ ಹೀಗೆ..:))
    ತಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  9. ಚೇತನಾ
    ನನ್ನ ಹಾಡಿನಿ೦ದ ಹಾಸ್ಯೋತ್ಪನ್ನವಾದರೆ, ಚೂರೇ ಚೂರು ನಗು ಉಕ್ಕಿದರೆ ನಾನು ಹಾಡಿದ್ದು ಸಾರ್ಥಕವಾಯಿತು..
    ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ಥ್ಯಾ೦ಕ್ಸು...:))

    ReplyDelete
  10. ಯಾವುದೇ ಒ೦ದು ವಸ್ತುವನ್ನು ನಿರ೦ತರ ನೋಡುತ್ತಿದ್ದರೆ, ಪ್ರಾರ೦ಭದಲ್ಲಿ ನಮಗೆ ಇಷ್ಟವಿಲ್ಲದಿದ್ದರೂ, ಕ್ರಮೇಣ ಅದನ್ನು ಹೊ೦ದಿಕೊ೦ಡು ಬಿಡುತ್ತೇವೆ, ನಮಗರಿವಿಲ್ಲದೆ ನಮಗೆ ಅದರ ಮೇಲೆ ಅಭಿಮಾನ ಪ್ರೀತಿ ಬರಲಿಕ್ಕೆ ಶುರುವಾಗುತ್ತದೆ. ಜೀವನವೇ ಹಾಗೆ.. :).. ಬಹುಷ: ನಿಮ್ಮ ಮನೆಯಲ್ಲಿ ಈ ಪ್ರಯೋಗ (ನಿಮ್ಮ ಹಾಡು)..ವಿಪಲವಾಯ್ತೇನೋ..!(exception to rule)ನಮ್ಮಷ್ಟಕ್ಕೇ..ಹಾಡಿಕೊಳ್ಳುವುದೇ ಚೆ೦ದ..ಉಳಿದವರ ಉಸಾಬರಿ ನಮಗ್ಯಾಕೆ ಅಲ್ಲವೆ? ಶುಭವಾಗಲಿ.

    ಅನ೦ತ್

    ReplyDelete
  11. ಅನ೦ತ ಸರ್,
    ಅ೦ದರೆ ಒ೦ದಲ್ಲ ಒ೦ದು ದಿನ ನನ್ನ ಹಾಡು ಅವರಿಗೆ ಇಷ್ಟವಾಗಬಹುದಲ್ವಾ.. ಹಾಗಾದರೆ ಮತ್ತೆ ಹಾಡು ಶುರು ಮಾಡಲಾ..!!?
    ಆತ್ಮೀಯ ಪ್ರತಿಕ್ರಿಯೆಗೆ ಆಭಾರಿ..:))

    ReplyDelete
  12. ನನಗೂ ನಮ್ಮ ಮನೆಯಲ್ಲಿನ ಹಿತಶತ್ರುಗಳ ಕಾಟ ಹೆಚ್ಚು. ಆದರೆ ನಾನು ಮಾತ್ರ ಯಾರಿಗೂ ಹೆದರದೆ ನನ್ನ ಸಾಧನೆ ಮುಂದುವರೆಸಿದ್ದೀನಿ.
    ಮಗನೇ ನಿನಗೆಷ್ಟು ಬೇಕೋ ಅಷ್ಟು ದುಡ್ಡು ಕೊಡ್ತೀನಿ ಆದರೆ ಹಾಡು ನಿಲ್ಲಿಸು ಅಂತ ಅಪ್ಪ ಅಸೆ ತೋರಿಸ್ತಾರೆ, ಆದರೆ ಲೋಭಕ್ಕೆ ಮರುಳಾದರೆ ಸಾಧನೆ ಮಾಡಲಾದೀತೇ?
    ನೀವು ನಿಮ್ಮ ಪ್ರಯತ್ನ ಮುಂದುವರೆಸುವುದಾದರೆ ನನ್ನ ಬೆಂಬಲ ನಿಮಗಿದೆ. :)

    ReplyDelete
  13. ನಾನು ಹಾಯ್ ಸ್ಕೂಲ್ ನಲ್ಲಿರುವಾಗ ಹಾಡಿನಲ್ಲಿ ೩ ನೆ ಬಹುಮಾನ ಸಿಕ್ಕಿತ್ತು
    ಕಾರಣ ನನ್ನ ಪರಿಚಯದ ಒಬ್ಬರು ನಿರ್ಣಾಯಕರಾಗಿದ್ದರು :)
    ನಾನು ದೊಡ್ಡ ಹಾಡಲು ಆರಂಬಿಸಿದರೆ ನನ್ನ ಹೆಂಡತಿ ಕಿವಿ ಮುಚ್ಚುತ್ತಾಳೆ
    ಅವಳಿಗೆ ''ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
    ಹಾಡುವುದು ಅನಿವಾರ್ಯ ಕರ್ಮ ಎನಗೆ'' ಹೇಳುತ್ತೇನೆ
    ನಿಮ್ಮ ಬರಹ ತುಂಬಾ ಹಿಡಿಸಿತು

    ReplyDelete
  14. ಅಲ್ಲಾ..ಹಾಸ್ಯದ ಒಗ್ಗರಣೆ ಹಾಕಿ ಬರ್ದಿದ್ದ್ ಓದಿ ನಗು ಬ೦ತಪಾ...ಹ೦ಗೇಳಿ..ಅದ್ಕೆಲ್ಲ ಮುಖ ಊದ್ಸ್ಕ್ಯ೦ಡ್ ಬಿಟ್ರೆ ಯೆ೦ತ ಹೇಳದು ಹೇಳಿ???????.. :(
    .
    .
    .
    !
    ನಗು.. ನೀನಗು.. ಕಿರುನಗೆ ನಗು...:)
    :))))......:D

    ReplyDelete
  15. ಆನ೦ದ
    ನಿಜ ನಿಜ.. ಲೋಭಕ್ಕೆ ಮರುಳಾದರೆ ಸಾಧನೆ ಸಾಧ್ಯವಿಲ್ಲ..
    ನನ್ನ ಬೆ೦ಬಲಕ್ಕೆ ನೀವೆಲ್ಲಾ ಇದ್ದೀರಾದ್ದರಿ೦ದ ನಾನು ಮತ್ತೆ ಹಾಡಲು ಶುರುಮಾಡುವೆ..:))
    ಥ್ಯಾ೦ಕ್ಸ್

    ReplyDelete
  16. ಗುರು..
    ಬಿಡಬೇಡಿ ಹಾಡು ಮು೦ದುವರೆಸಿ..ಸ೦ಘದ ಸದಸ್ಯರ ಸ೦ಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ..
    :))
    ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  17. ಮನಮುಕ್ತಾ,
    ಹ೦ಗೆ ಹೇಳಿ ಬಚಾವು...:))

    ReplyDelete
  18. ಸುಮಾರು ಜೋರೆ ಇದ್ಯಲೆ.. ನಗು ಬರ್ಲೆ ಇಲ್ಲೆ ಹೇಳಾತು..ಮತ್ತೆ ..ಬಚಾವು ಗಿಚಾವು ಹೇಳ್ತೆ..!!ಹುಷಾರಗಿರಕ್ಕಪ್ಪ :)

    ReplyDelete
  19. ಮನಮುಕ್ತಾ
    ಅಷ್ಟ್ ಜೋರಾಗಿ ನ್ಯಗಾಡಿದ್ನಲ್ಲೆ... ಸರಿಯಾಗಿ ನೊಡು..:):):):)

    ReplyDelete
  20. Nanna haadu nannadu..hadu nenapayitu..

    well written..

    Nimmava,
    Raghu

    ReplyDelete
  21. ವಿಡಂಬನೆ(ಅದೂ ಈ ಬಾರಿ ನಿಮ್ಮ ಬಗ್ಗೆಯೇ?) ಕಚಗುಳಿ ಇಡುವಂತಿದೆ ವಿಜಯಕ್ಕ :)
    ಗಂಭೀರ ವಿಷಯಗಳ ಬರವಣಿಗೆ ಜೊತೆ ಜೊತೆಗೆ ಹಾಸ್ಯ ರಸವೂ ನಿಮಗೆ ಸಿದ್ಧಿಸಿದೆ..ಇದು ಅಪರೂಪ..
    ಅಭಿನಂದನೆಗಳು!! ಹೀಗೆ ಎಲ್ಲರನ್ನೂ ನಗಿಸುತ್ತಾ ನೀವೂ ಸದಾ ನಗು ನಗುತ್ತಿರಿ..

    ReplyDelete
  22. ತುಂಬಾ ಸ್ವಾರಸ್ಯ ನಯವಾದ ಹಾಸ್ಯ ಭರಿತ ಸರಳ ಲಘು ಪ್ರಭಂಧ.
    ಶೈಲಿ ತುಂಬಾ ವಿನುತನವಾಗಿದೆ.
    ಅಂದ ಹಾಗೆ ನನಗೆ ಹಾಡುವ ಹುಚ್ಚು ತಮ್ಮಂತೆ. ಕೇಳುಗರಿಗೆ ಅದು ಕರ್ಣಭೀಕರ. ಹಾಗೆನ್ತಾ ನಾನು ಯಾವತ್ತು ಚಿಂತಿಸಿಲ್ಲ. ಅದು ಅವರ ಕರ್ಮ. ಅಆದರು ಬಚ್ಚಲು ಮನೆಯಲ್ಲಿ ಹಾಡುತ್ತಾ ಕುಣಿಯುತ್ತಾ ಸ್ವಲ್ಪ ಅಹಿಂಸೆಯನ್ನು ಅನುಸರಿಸುತ್ತೇನೆ ತಮ್ಮ ಹಾಗೆ.

    ReplyDelete
  23. ಚೆನ್ನಾಗಿದೆ ಲೇಖನ. ನವಿರಾಗಿ ಬೆರೆತ ತಿಳಿಹಾಸ್ಯವೂ ಇಷ್ಟವಾಯಿತು :-)

    ReplyDelete