ಕೆಲವು ದಿನಗಳ ಹಿಂದೆ ಊರಿಗೆ ಹೋಗಿದ್ದಾಗ ಈ ವಿಷಯ ಚರ್ಚೆಯಲ್ಲಿತ್ತು.ಪರಿಚಯದ ಮಧ್ಯ ವಯಸ್ಸಿನ ಹೆಣ್ಣು ಮಗಳೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು ಎಂಬುದಾಗಿ.
ಆಕೆ ಜೀವನದಲ್ಲಿ ಅಪಾರ ಕಷ್ಟವನ್ನು ಉಂಡಾಕೆ.ಮದುವೆಯಾಗಿ ಕೈಲೊಂದು ಕೂಸು ಬರುವ ಹೊತ್ತಿಗೆ ವೈಧವ್ಯವೂ ಜೊತೆಯಾಗಿತ್ತು.ಜೀವನವನ್ನು ಎದುರಿಸಲು ಆಕೆ ಪಟ್ಟ ಪಾಡು ಲೆಕ್ಕವಿಲ್ಲದಷ್ಟು.ನರ್ಸ್ ಟ್ರೈನಿಂಗ್ ಮಾಡಿಕೊಂಡ ಆಕೆ ಹಳ್ಳಿಗಳಲ್ಲಿ ಸೇವೆ ಸಲ್ಲಿಸುವ ಬಾಯಮ್ಮ ಆದಳು.ಮಗ ಮಾವನ ಮನೆಯಲ್ಲಿ ಬೆಳೆಯುತ್ತಿದ್ದ.ಅನೇಕ ವರ್ಷಗಳಿಂದ ಆಕೆಗೆ ಒಂಟಿತನವೇ ಜೊತೆ.ದಿನವಿಡೀ ಕರ್ತವ್ಯದ ನಿಮಿತ್ಯ ಹಳ್ಳಿಗಳಲ್ಲಿ ಸುತ್ತಾಟ.ಕಷ್ಟ ಸುಖ ಹೇಳಿಕೊಳ್ಳಲು ಯಾರೂ ಇಲ್ಲ.... ಬಗ್ಗಿದವರ ಮೇಲೆ ಇನ್ನೊಂದು ಗುದ್ದು ಎಂಬಂತೆ ಸೌಮ್ಯ ಸ್ವಭಾವದ ಇವಳ ಮೇಲೆ ಕೆಲಸದ ಒತ್ತಡ .ವಿನಾಕಾರಣ ಮೇಲಧಿಕಾರಿಗಳ ಸಿಡಿಮಿಡಿ.
ಬಹುಷಃ ಈ ಸಮಯದಲ್ಲಿಯೇ ಆಕೆಯ ಮಾನಸಿಕ ಸ್ಥಿತಿ ಹತೋಟಿ ಕಳೆದು ಕೊಳ್ಳಲು ಶುರುವಾಗಿರಬಹುದು.ಹತ್ತಿರದಿಂದ ಗಮನಿಸುವವರು ಯಾರೂ ಇಲ್ಲವಾದ್ದರಿಂದ ಬೂದಿ ಮುಚ್ಚಿದ ಕೆಂಡದಂತೆ ಅದು ಆಕೆಯನ್ನು ಸುಡುತ್ತಿತ್ತು ಅನ್ನಿಸುತ್ತದೆ.ಮಾನಸಿಕವಾಗಿ ತುಂಬಾ ನೊಂದಾಕೆ ಎಂಬ ಭಾವದಿಂದ ಬಿಂಬಿತಳಾದ ಆಕೆಯ ಕೆಲವು ಅಸಂಬದ್ದತೆಗಳು ತವರಿನವರಿಗಾಗಲೀ,ಬಂಧುಗಳಿಗಾಗಲೀ ಸುಳಿವೇ ಸಿಗಲಿಲ್ಲ.ಆಕೆಯ ಕಷ್ಟಕ್ಕೆ ತವರಿನವರ ಸಹಾಯ ,ಬೆಂಬಲ ಸದಾ ಇರುತ್ತಿತ್ತು ಕೂಡಾ.ಮಗ ದೊಡ್ಡವನಾಗಿ ಒಳ್ಳೆಯ ರೀತಿಯಲ್ಲಿ ಸ್ವಂತ ಉದ್ಯೋಗ ಮಾಡಿಕೊಂಡಿದ್ದರೂ ಆಕೆಯು ಯೋಚಿಸುತ್ತಿದ್ದ ರೀತಿಯೇ ಬೇರೆ.ತಂದೆಯಿಲ್ಲದ ಮಗನಿಗೆ ಮದುವೆಯಾಗುವುದೋ ಇಲ್ಲವೊ....? ತನ್ನ ಸ್ಥಿತಿಯನ್ನು ನೋಡಿ ಸಂಬಂಧ ಬೆಳೆಸುವವರಾರು...? ಹೀಗೆ ನಾನಾತರದ ನಕಾರಾತ್ಮಕ ಯೋಚನೆಗಳು. ಆಗಾಗ ಹೇಳುತ್ತಿದ್ದಳಂತೆ.
ವಯಸ್ಸಿನ ನಿಮಿತ್ಯ ಸೊಂಟನೋವು ಶುರುವಾಗಿ ಸೊಂಟದ ನರದ ಆಪರೇಶನ್ ಕೂಡಾ ಆಗಿತ್ತು.ದೈಹಿಕ ತೊಂದರೆಯ ಜೊತೆಗೆ ತನ್ನ ಬಗೆಗೆ ಬೆಳೆಸಿಕೊಂಡ ಕೀಳರಿಮೆಯೂ ಸೇರಿಕೊಂಡು ಆಕೆ ಅದೇನು ನಿರ್ಧಾರ ತೆಗೆದುಕೊಂಡಳೋ...... ಒಂದು ದುರದೃಷ್ಟದ ಮುಂಜಾನೆ ಬಾವಿಗೆ ಬಿದ್ದು ಜೀವ ತೆಗೆದುಕೊಂಡಳು.
ಜೀವನವಿಡೀ ಕಷ್ಟ ಸಹಿಸಿಕೊಂಡ ಆಕೆ ಹೀಗೇಕೆ ಮಾಡಿದಳು...? ಹುಡುಕಲು ಹೊರಟವರಿಗೆ ತನ್ನ ಸಾವಿಗೆ ಯಾರೂ ಕಾರಣರಲ್ಲವೆಂದು ಬರೆದಿಟ್ಟ ಪತ್ರ ಸಿಕ್ಕರೂ ಮೊದಲು ಕಾಣಿಸಿದ್ದು ಮನೆ ತುಂಬಾ ತರತರದ ವಸ್ತುಗಳ ರಾಶಿ.ಬೇಕಾದ್ದಕ್ಕಿಂತಾ ಸಧ್ಯದ ಪರಿಸ್ಥಿತಿಯಲ್ಲಿ ಅಪ್ರಸ್ತುತವಾದವುಗಳೇ ಆಗಿತ್ತು.ಪೆಟ್ಟಿಗೆ ತುಂಬಾ ನೂರಾರು ಸೋಪುಗಳು,ನೆರಿಗೆ ಮುರಿಯದ [ಬಳಸದ]ಐವತ್ತರವತ್ತು ಸೀರೆಗಳು,ಲೆಕ್ಕವಿಲ್ಲದಷ್ಟು ಪಾತ್ರೆಪರಡಿಗಳು..
ಜೀವವಿಲ್ಲದ ಈ ವಸ್ತುಗಳೇ ಆಕೆಯ ಸಂಗಾತಿಗಳೇನೋ ಎಂಬಂತೆ....!!
ನನಗನ್ನಿಸಿದ ಪ್ರಕಾರ ಇದೊಂದು ಮಾನಸಿಕ ಖಾಯಿಲೆಯ ಪರಿಣಾಮ.ಇದು ಹೆಚ್ಚಾಗಿ ಡಿಸ್ಥಿಮಿಯಾ ಎನ್ನುವ ಮಾನಸಿಕ ಖಿನ್ನತೆಯ ಲಕ್ಷಣಗಳನ್ನು ಹೊಂದಿದೆ.
ಏನಿದು ....?ಡಿಸ್ಥಿಮಿಯ ...!!!
ಡಿಸ್ಥಿಮಿಯ ..ಇದು ತೀವ್ರತೆ ಕಡಿಮೆ ಇರುವ,ಬಹುಕಾಲದಿಂದ ಕಾಡುತ್ತಿರುವ ಮಾನಸಿಕ ಖಿನ್ನತೆ[ಮೈಲ್ಡ್ ಕ್ರೋನಿಕ್ ಡಿಪ್ರೆಶನ್]
ಸುಲಭವಾಗಿ ಹೇಳುವದಾದರೆ ಮನಸ್ಸಿನ ಕೆಟ್ಟ ಸ್ಥಿತಿ.
ಇದು ಮಾನಸಿಕ ಖಿನ್ನತೆಗಳ ಫಲಕದ ಅಡಿಯಲ್ಲಿಯೇ ಕಾಣಿಸಿಕೊಂಡರೂ ತೀವ್ರತೆ ಕಡಿಮೆ ಇರುವ ಕಾರಣ ಸಾಮಾನ್ಯರ ಗಮನಕ್ಕೆ ಸುಲಭವಾಗಿ ನಿಲುಕಲಾರದು.
ಈ ಕಾಯಿಲೆ ಯಾವ ಕಾರಣದಿಂದ ಬರಬಹುದೆಂಬುದು ನಿಖರವಾಗಿ ತಿಳಿದಿಲ್ಲವಾದರೂ ಮೆದುಳಿನಲ್ಲಿ ಸ್ರವಿಸುವ,ಉದ್ವೇಗ ನಿಯಂತ್ರಿಸುವ ರಾಸಾಯನಿಕ serotonin ನ ಅಸ್ಥವ್ಯಸ್ತತೆಯೇ ಕಾರಣ ಎಂಬುದು ಕೆಲವರ ಅಂಬೋಣ .
ಆನುವಂಶಿಕವಾಗಿ ಬರುವ ಸಾಧ್ಯತೆ ಪ್ರತಿಶತ ೫೦ ಕ್ಕೂ ಹೆಚ್ಚು.ಪ್ರತಿಶತ ೩ ಜನರು ಪ್ರತಿವರ್ಷವೂ ಈ ಕಾಯಿಲೆಗೆ ಈಡಾಗುತ್ತಿದ್ದಾರೆ.ಪ್ರೀತಿಪಾತ್ರರಾದವರ ಅಗಲಿಕೆ,ಸಾವು,ಘೋರವಾದಂತಹಾ ನೋಟ,ಅವಮಾನ,ಒಂಟಿತನ ಇವುಗಳಿಂದ ಚೇತರಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಈ ಡಿಸ್ಥಿಮಿಯಾ ಆವರಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ನಿರಾಶಾವಾದ,ನಿರಾಸಕ್ತಿ,ಏಕಾಗ್ರತೆಯ ಕೊರತೆ,ಸ್ವಂತಿಕೆಯ ಕೊರತೆ,ನಿರ್ಧಾರ ತೆಗೆದುಕೊಳ್ಳುವಲ್ಲಿನ ಅಸಾಮರ್ಥ್ಯ,ನಿಶ್ಯಕ್ತಿ,ನಿದ್ರಾಹೀನತೆ ಅಥವಾ ಅತಿನಿದ್ರೆ,ಹಸಿವಾಗದಿರುವಿಕೆ ಅಥವಾ ಅತಿ ಹಸಿವು ಇವು ಈ ಖಿನ್ನತೆಯ ಮುಖ್ಯ ಲಕ್ಷಣಗಳಾಗಿರುತ್ತವೆ.
ಎಷ್ಟೋ ಸಲ ನಾವು ಅನೇಕ ಕಾರಣಗಳಿಂದ ಖಿನ್ನರಾಗುತ್ತೇವೆ.ಪರಿಸ್ಥಿತಿಗನುಸಾರವಾಗಿ.... ನಾಲ್ಕಾರು ದಿನಗಳು ಕಳೆದಂತೆ ಅದು ತನ್ನಿಂತಾನೆ ಮರೆಯಾಗಿ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇವೆ.ಎಲ್ಲರ ಜೀವನದಲ್ಲಿ ಇದು ಸಹಜವೆಂಬಂತೆ ನಡೆದುಕೊಂಡು ಹೋಗುತ್ತಿರುತ್ತದೆ.ಆದರೆ ಈ ಡಿಸ್ತಿಮಿಯಾ ಇರುವವರಲ್ಲಿ ಖಿನ್ನತೆ ೨ ವರ್ಷಗಳಿಗೂ ಮುಂದುವರೆಯುತ್ತದೆ. ವ್ಯಕಿಗೆ ಅದರ ಅರಿವೇ ಆಗುವುದಿಲ್ಲ. ಗಂಡಸರಿಗಿಂತಾ ಹೆಂಗಸರಲ್ಲಿ ಈ ಕಾಯಿಲೆಯ ಪ್ರಮಾಣ ೨-೩ ಪಟ್ಟು ಹೆಚ್ಚು.ಇದು ಹರಯದಲ್ಲಿ ಅಥವಾ ಮಧ್ಯವಯಸ್ಸಿನಲ್ಲಿ ಶುರುವಾಗುತ್ತದೆ.ಈ ವ್ಯಕ್ತಿಗಳು ಸಂತೋಷವನ್ನು ಅನುಭವಿಸಲಾರರು. ನಿರಾಶಾವಾದತ್ತ ಮುಖ ಮಾಡಿಕೊಳ್ಳುವ ಇವರು ಸದಾ ಅಂತರ್ಮುಖಿಗಳಾಗಿರುತ್ತಾರೆ. ಉಳಿದವರೂ ಅವರು ಇರುವುದೇ ಹಾಗೆ ಅಂದುಕೊಂಡು ಬಿಟ್ಟಿರುತ್ತಾರೆ. ಮೊದಲಿನಿಂದ ಅವರು ಹಾಗೇ ಅನ್ನುವ ಅಭಿಪ್ರಾಯವಿರುತ್ತದೆ. ಆದರೆ ಒಳಗಿನ ಕೆಂಡ ಅಹಿತಕರ ಘಟನೆಗಳಲ್ಲಿ ಪರ್ಯವಸಾನಗೊಳ್ಳುವ ಸಾಧ್ಯತೆಗಳಿರುತ್ತದೆ.
ಹಾಗಾಗಿ ಯಾವುದೇ ವ್ಯಕ್ತಿ ಎರಡು ವಾರಗಳಿಗಿಂತಲೂ ಹೆಚ್ಚಿನ ಕಾಲಾವಧಿಯಲ್ಲಿ ಖಿನ್ನತೆ ಅನುಭವಿಸುತ್ತಿದ್ದರೆ ಅವರನ್ನು ಸೂಕ್ಷ್ಮವಾಗಿ ಗಮನಿಸಿ ವೈದ್ಯರಲ್ಲಿ ತಪಾಸಿಸುವುದೊಳಿತು.
ಖಿನ್ನತೆಯನ್ನು ಹೋಗಲಾಡಿಸಲು ದಾರಿಯಿದೆಯೇ......?
ಸಾಕಷ್ಟು ಮಾರ್ಗಗಳಿವೆ.ಕೆಲವರಿಗೆ ಮಾತ್ರೆ ಔಷಧಿಗಳು ಬೇಕಾಗಬಹುದು.ಆದರೆ ಸೈಕೋಥೆರಪಿ ತುಂಬಾ ಪ್ರಯೋಜನಕಾರಿ.ಕಾಗ್ನಿಟಿವ್ ಥೆರಪಿ [ಆಪ್ತ ಸಮಾಲೋಚನೆಯ ಮೂಲಕ ಅರಿವು,ತಿಳುವಳಿಕೆ ಮೂಡಿಸುವುದು],ಬಿಹೇವಿಯರ್ ಥೆರಪಿ [ಜನರೊಂದಿಗೆ ವ್ಯವಹರಿಸುವಲ್ಲಿ ಧನಾತ್ಮಕ ಚಿಂತನೆ]ಕೂಡಾ ಪ್ರಯೋಜನಕಾರಿ. ಔಷಧಿಗಳೊಂದಿಗೆ ಥೆರಪಿಯೂ ಸೇರಿದರೆ ಉತ್ತಮ ಫಲಿತಾಂಶ ದೊರೆಯುವುದರಲ್ಲಿ ಸಂಶಯವಿಲ್ಲ.
ವ್ಯಕಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಮೊದಲ ಹಂತದಲ್ಲಿಯೇ ಚಿಕಿತ್ಸೆಯನ್ನು ಪ್ರಾರಂಭ ಮಾಡಿದರೆ ಖಿನ್ನತೆಯನ್ನು ಕೊನೆಗಾಣಿಸಬಹುದು ಮತ್ತು ನಂತರದಲ್ಲಿ ಆಗುವ ಅವಗಢಗಳನ್ನೂ ತಡೆಯಬಹುದು.
ವಂದನೆಗಳು.
ತುಂಬಾ ಉಪಯುಕ್ತವಾದ ಮಾಹಿತಿ...
ReplyDeleteಖಿನ್ನತೆಯಲ್ಲಿ ಬಗೆಬಗೆಯ ಪ್ರಕಾರಗಳಿರಬಹುದಲ್ಲವೆ...?
ನಮ್ಮ ಪರಿಚಯದವರೊಬ್ಬರಿಗೆ ಇದು ಇತ್ತು...
ಅವರನ್ನು ಅದರಿಂದ ಹೊರತರಲು..
ಅವರ ಮನೆಯವರಿಗೆ ಬಹಳ ಕಷ್ಟವಾಯಿತು...
ಅವರ ಮನೆಯವರೆಲ್ಲ ಡಾಕ್ಟರ್ ಆಗಿದ್ದರು
ಹಾಗಾಗಿ ಸುಲಭವಾಯಿತು..
ಹಳ್ಳಿಗಳಲ್ಲಿ ಹೀಗಾಗಿಬಿಟ್ಟರೆ ಬಹಳ ಕಷ್ಟವಲ್ಲವೆ...?
ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು..
ಪ್ರಕಾಶಣ್ಣ. ಡಿಪ್ರೆಶನ್ ನಲ್ಲಿ ಮೇಜರ್ ಡಿಪ್ರೆಶನ್, ಎಟಿಪಿಕಲ್ ಡಿಪ್ರೆಶನ್ ,ಸೈಕೊಟಿಕ್ ,ಸೀಜ಼ನಲ್ ಅಫ಼ೆಕ್ಟಿವ್ ಡಿಸಾರ್ಡರ್, ಪೋಸ್ಟ್ ಪಾರ್ಟಮ್ ಡಿಪ್ರೆಶನ್,ಮ್ಯಾನಿಕ್ ಡಿಪ್ರೆಶನ್ ಹೀಗೆ ಅನೇಕ ವಿಧಗಳಿವೆ. ಹಳ್ಳಿಗಳಲ್ಲಿ ಈ ಬಗ್ಗೆ ತಿಳುವಳಿಕೆ ಕಡಿಮೆ ಜೊತೆಗೆ ಮಾನಸಿಕ ತಜ್ನರನ್ನು ಕಾಣುವುದು ಎ೦ದರೆ ಹುಚ್ಚು ಹಿಡಿದವರಿಗೆ ಮಾತ್ರ ಎ೦ಬ ಪೂರ್ವಾಗ್ರಹ. ಭೂತ, ದೆವ್ವ ಎ೦ಬ ಭ್ರಮೆ ಕೂಡಾ. ಮೊದಲ ಹ೦ತದಲ್ಲಿದ್ದಾಗ ಎಲ್ಲಾ ರೀತಿಯ ಖಿನ್ನತೆಗಳಿಗೂ ಪರಿಹಾರ ಸಾಧ್ಯ.
ReplyDeleteಒಂದು ಒಳ್ಳೆಯ ಬ್ಲಾಗು ಮತ್ತು ಒಳ್ಳೆಯ ವಿಚಾರ ಗಳು. :) :) :)
ReplyDeleteಆತ್ಮೀಯ
ReplyDeleteಉತ್ತಮ ಹಾಗೂ ತುಂಬಾ ನಿಖರವಾದ ಮಾಹಿತಿಯುಕ್ತ ಬರಹ ಇದಾಗಿದೆ. ಅಭಿನಂದನೆಗಳು
ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಒಂದಲ್ಲ ಒಂದು ತರದ ಮಾನಸಿಕ ಖಿನ್ನತೆ ಇರುತ್ತೆ ಅಲ್ವ? ಅಂಥವರಿಗೆ ನಾನು ಈ ತರದ ಪ್ರಾಬ್ಲಮ್ಗೆ ಬಿಲ್ತೈದ್ದಿನಿ ಅಂತ ಅವರಿಗೆ ಅನ್ನಿಸುದಿಲ್ವ? ಅದರ ಬಗ್ಗೆ ಒಮ್ಮೆನು ಅವರು ಯೋಚನೆ ಮಾಡೋದಿಲ್ವಾ ? ಪ್ರತಿಯೊಂದಕ್ಕೂ ಸೋಲುಶನ್ ಇದೆ ಅಂತ ಗೊತ್ತಿದ್ರು ಯಾಕೆ ಹಾಗೆ ಮಡ್ಕೊಲ್ಲ್ತಾರೆ.
ReplyDeleteಸಾವಿನ ವಿಷಯ ಕೇಳಿದ್ರೆ ಯಾ ಓದಿದ್ದರೆ ಏನೋ ಒಂಥರಾ ಬೇಜಾರ್ ಆಗುತ್ತೆ.. ಹಿಗಲ್ಲ ಹೀಗೆ ಆಗಿದ್ದರೆ ಚೆನ್ನಾಗಿರುತ್ತೆ ಅಂತ ಅನ್ನಿಸುತ್ತೆ..
ಅದು ಬೇರೆ ಇವತ್ತು ಆಫೀಸೆನಿಂದ ಮನೆಗೆ ಬರುವಾಗ ನಾನು ಇರುವ ಬಸ್ಸು ಮತ್ತೆ ಇನ್ನೊಂದು ಬಸ್ಸಿನ ಮದ್ಯೆ ಯುವಕ ಸಿಕ್ಕಿಬಿದ್ದಿದ್ದ. ನಮ್ಮ ಬಸ್ಸಿನ ಡ್ರೈವರ್ ಬಸ್ಸನ್ನ ಕೂಡಲೇ ನಿಲ್ಲಿಸಿದ, ಆದರೆ ಯುವಕ ಎರಡುಬಸ್ಸುಗಳ ಮದ್ಯೆನೆ ಇದ್ದ. ನಂತರ ಡ್ರೈವರ್ ಅವನ ಕೂಗಾಟದ ನಡುವೇನೆ ಬಸ್ಸನ್ನ ಮುಂದೆ ತಂದ. ಯುವಕನನ್ನ ಕೂಡಲೇ ಹಾಸ್ಪಿಟಲ್ ಗೆ ಕರ್ಕೊಂಡು ಹೋದ್ರು. ಇದನ್ನ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ, ಯವಕನ ಕೂಗು ಇನ್ನು ನನ್ನ ಕಿವಿನಲ್ಲಿ ಕೆಲ್ಸ್ಥ ಇದೆ... ಏನೋ ಒಂದು ತರದ ಹೆದರಿಕೆ... ನಾನೆ ಆ ಸ್ಥಿತಿನಲ್ಲಿ ಇದ್ದಿದ್ರೆ ಏನ್ ಆಗ್ತಾ ಇತ್ತೋ ಎನ್ನೋ ಭಯ!.. ಮನಸ್ಸು ಹೇಗೆಲ್ಲಾ ನೆಡ್ಕೊಲ್ಲುತ್ತೆ ಅಲ್ವ?
ಮನಸ್ಸಿಗೆ ಸ್ಪಂದಿಸುವ ಈ ನಿಮ್ಮ article ಚೆನ್ನಾಗಿದೆ...
ನಿಮ್ಮವ,
ರಾಘು.
ಹಳ್ಳಿಗಳಲ್ಲಿ ಅರಿವಿನ ಕೊರತೆ, ಪಟ್ಟಣಗಳಲ್ಲಿ ಅರಿತುಕೊಳ್ಳುವವರಿಗೆ ಕೊರತೆ, ಒಟ್ಟಿನಲ್ಲಿ ಮಾನಸಿಕ ಅಸ್ವಸ್ತತೆಯ ಕುರಿತು ಅರಿವು ಹಾಗು ನಿವಾರಣೆ ನಿಧಾನವಾಗಿ ಸಾಗಿದೆ.
ReplyDeleteಮಾನಸಿಕವಾಗಿ ಅಸ್ವಸ್ತ ಜನರ ಬಗ್ಗೆ ಕೀಳಾಗಿ ವರ್ತಿಸುವುದು ಕಡಿಮೆಯಾದರೆ ಪರಿಹಾರ ಕ೦ಡುಕೊಳ್ಳುವವರ ಸ೦ಖ್ಯೆ ಗಣನೀಯವಾಗಿ ಹೆಚ್ಚಬಹುದು. ಜನರಲ್ಲಿ ಸಮಸ್ಯೆಗಳ ಅರಿವು ಹಾಗು ಕಳಕಳಿಯ ಭಾವನೆ ಬ೦ದರೆ ಮಾತ್ರ ಅದು ಸಾಧ್ಯ. ನಿಮ್ಮ ಬರಹ ಮಾಹಿತಿಪೂರ್ಣವಾಗಿದೆ.ಬರೆಯುತ್ತಾ ಇರಿ.
ರಾಘು ಅವರೆ....ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪ್ರತಿಶತ ೬೦ ಜನರು ಈ ಡಿಪ್ರೆಶನ್ನಿ೦ದಲೇ ಬಳಲುತ್ತಿರುವುದ೦ತೆ. ಕೆಲವರಿಗೆ ತಮ್ಮಲ್ಲೇನೋ ಬದಲಾವಣೆ ಆಗುತ್ತಿದೆ ಅನ್ನುವುದು ಗೊತ್ತಾಗಿ ಸರಿ ಮಾಡಿಕೊಳ್ಳುವಲ್ಲಿ ಸಫಲರಾಗುತ್ತಾರೆ. ಮತ್ತೆ ಕೆಲವರು ಡಿಪ್ರೆಶನ್ನಲ್ಲಿದ್ದಾಗ ನಡೆದುಕೊ೦ಡದ್ದನ್ನೆಲ್ಲಾ ಮರೆತು ತಾನು ಹಾಗೆ ಮಾಡೇ ಇಲ್ಲ ,ನನಗೇನೂ ಆಗೇ ಇಲ್ಲ ಹಾಗೂ ಉಳಿದವರೇ ಸರಿ ಇಲ್ಲ ಎ೦ದು ಸಾಧಿಸುತ್ತಾರೆ.
ReplyDeleteರಾಘು ಅವರೆ.. ನಮಗೆ ಪ್ರಪ೦ಚಕ್ಕೂ ನಮಗೂ ಇರುವ ವ್ಯತ್ಯಾಸ ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದರೆ ಖಿನ್ನತೆಯ ತೀವ್ರತೆ ಹೆಚ್ಚಾದವರಲ್ಲಿ ವ್ಯತ್ಯಾಸ ಗೊತ್ತಾಗುವುದು ಕಷ್ಟವಾಗುತ್ತದೆ. ಅವರಲ್ಲಿ ಅಸಹಾಯಕತೆ,ನಿರಾಶೆ ಹಾಗೂ ತಮ್ಮನ್ನೇ ಕೊ೦ದುಕೊಳ್ಳುವ ಪ್ರವ್ರುತ್ತಿ ಹೆಚ್ಚಾಗುತ್ತದೆ.
ಮನಮುಕ್ತಾ ಅವರೆ... ನಿಮ್ಮ ಮಾತು ನಿಜ. ಮಾನಸಿಕ ಸಮಸ್ಯೆಗಳು ಉಳಿದ ದೈಹಿಕ ಸಮಸ್ಯೆಗಳ೦ತೆ ಸರಳವಲ್ಲ. ಮನೆಯವರೊ೦ದೆ ಅಲ್ಲದೇ ಸಮೂಹದ ಸಹಾಯವೂ ಇಲ್ಲಿ ಮುಖ್ಯ.
ನಿಮ್ಮ ಧನಾತ್ಮಕ ಸ್ಪ೦ಧನೆಗಳಿಗೆ ಧನ್ಯವಾದಗಳು.
ಇಲ್ಲಿ ಐಶ್ವರ್ಯ ಎ೦ದು ತಪ್ಪಾಗಿದೆ. ಹೇಗೆ೦ದು ತಿಳಿಯುತ್ತಿಲ್ಲ. ಅದು ಚುಕ್ಕಿ ಚಿತ್ತಾರ ಕಳುಹಿಸಿದ ಪ್ರತಿಕ್ರಿಯೆಯಾಗಿದೆ.
ReplyDeleteಬಾಲು ಹಾಗು ಲೋದ್ಯಾಶಿ ಅವರೆ....ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteವಿಜಯಶ್ರಿಯವರೆ,
ReplyDeleteಇಂತದೊಂದು ಕಾಯಿಲೆಯಿದೆಯೆಂದು ನನಗೆ ಗೊತ್ತೇ ಇರಲಿಲ್ಲ. ಈ ಲೇಖನದಿಂದ ಅನೇಕ ವಿಚಾರಗಳನ್ನು ತಿಳಿದುಕೊಂಡ ಹಾಗೆ ಆಯ್ತು.
ಧನ್ಯವಾದಗಳು.
ವಿಜಯಶ್ರೀ,
ReplyDeleteಮನೋವಿಜ್ಞಾನಕ್ಕೆ ಸಂಬಂಧಿಸಿದ ನಿಮ್ಮ ಲೇಖನಗಳು, ವಿವಿಧ ಮಾಹಿತಿಗಳನ್ನು ಸರಳ ರೂಪದಲ್ಲಿ ನಮಗೆಲ್ಲರಿಗೂ ತಿಳಿಸಿ ಕೊಡುತ್ತಿವೆ. ನಿಮಗೆ ಧನ್ಯವಾದಗಳು.
ಸುನಾಥ್ ಸರ್. ನಿಮ್ಮ ಪ್ರೋತ್ಸಾಹದ ನುಡಿಗಳು ನನ್ನ ಉತ್ಸಾಹವನ್ನು ಇನ್ನೂ ಹೆಚ್ಚಿಸುತ್ತಿವೆ. ಧನ್ಯವಾದಗಳು.
ReplyDeleteಶಿವು ಅವರೆ....
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮ್ಮ ಲೇಖನ ತುಂಬ ಉಪಯುಕ್ತವಾಗಿದೆ ..ತುಂಬ ಚೆನ್ನಾಗಿ ವಿವರಣೆ ನೀಡಿದ್ದೀರಾ..ನಿಮ್ಮ ಬರವಣಿಗೆ ಇಷ್ಟವಾಯಿತು ಮೇಡಂ .. :)
ReplyDeleteಸುಮಾ
ವಿಜಯಶ್ರೀ ಅವರೆ,
ReplyDeleteತುಂಬಾ ಉತ್ತಮ ಲೇಖನ. ಮಾನಸಿಕ ಅಸ್ವಸ್ಥತೆಯ ಕುರಿತು ಸವಿವರವಾಗಿ ತಿಳಿಸಿದ್ದೀರಿ. ಜೊತೆಗೆ ಪರಿಹಾರವೂ ಇರುವುದು ತುಂಬಾ ಸಂತೋಷವಾಯಿತು. ಇಂತಹ ಲೇಖನಗಳಿಗಾಗಿ ಬರುತ್ತಲಿರುವೆ. ಬರೆಯುತ್ತಲಿರಿ.
ಸ್ನೊವೈಟ್ ನ ಸುಮ ಹಾಗೂ ತೇಜಸ್ವಿನಿ ಅವರೆ.....
ReplyDeleteನನ್ನ ಬರಹವನ್ನು ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು.
ಉತ್ತಮ ನಿರೂಪಣೆ.
ReplyDeleteಮಾನಸಿಕ ಖಿನ್ನತೆಗೆ ಪರಿಸರ ಬದಲಾವಣೆ ದಿವ್ಯೌಷಧಿ. ನಿಮ್ಮ ಮನೆಯಲ್ಲಿ ಐಶ್ವರ್ಯಾ ಅನ್ನುವವರು ತಮ್ಮ ಈ ಮೇಲ್ ಲಾಗ್ ಇನ್ ಆಗಿದ್ದರೆ ಈ ರೀತಿ ಆಗಬಹುದು.
ನೀವು ಐಶ್ವರ್ಯಾ ಅನ್ನುವ ಹೆಸರಿನಲ್ಲಿ ಪ್ರತಿಕ್ರಿಯೆ ನೀಡಿದ್ದೀರಿ!!
ವಿಜಯಶ್ರೀ ಏನಿದು ಸರಣಿಯರೂಪದಲ್ಲಿ ಬರ್ತಿದೆ...ವಿಷಯ ಚನ್ನಾಗಿ ಸಂಗ್ರಹಿಸುವುದರ ಜೊತೆಗೆ ಸರಳವಾಗಿ ವಿವರಣೆ ನೀಡ್ತಿದ್ದೀರಿ...ಮೌಢ್ಯ ಹೋಗಲಾಡಿಸುವಲ್ಲಿ ಸರ್ಕಾರದ ಪಾತ್ರ ಏನೂ ಕಾಣುತ್ತಿಲ್ಲ ಅದೇ ದುರದೃಷ್ಟಕರ
ReplyDelete