Tuesday, November 10, 2009

ಮಕ್ಕಳೆಂಬ ಕೌತುಕಗಳು

ನನಗಿಬ್ಬರು ಮಕ್ಕಳು . ಮಗಳು ಐಶ್ವರ್ಯ ದೊಡ್ಡವಳು. ಮಗ ಶಿಶಿರ ಐದು ವರುಷದವನು .
ನನ್ನ ಮಗ ತುಂಟ . ಅವನಿಗೆ ಏನನ್ನೇ ಹೊಸತು ತಂದು ಕೊಟ್ಟರೂ ಅದನ್ನು ತಕ್ಷಣ ಉಪಯೋಗಿಸುವುದಿಲ್ಲ.ಅತ್ತ ತಿರುಗಿಸಿ ಇತ್ತ ತಿರುಗಿಸಿ ನೋಡುತ್ತಾ ತನ್ನಲ್ಲಿಯೇ ಹೆಮ್ಮೆಪಟ್ಟುಕೊಳ್ಳುತ್ತಿರುತ್ತಾನೆ.ಬಂದವರಿಗೆಲ್ಲಾ ' ನೋಡು ಹೊಸಾದು 'ಎಂದು ತೋರಿಸುತ್ತಾ ಇರುತ್ತಾನೆ.ಹೊಸತನ್ನು ಹಾಗೆಯೇ ಉಳಿಸಿಕೊಳ್ಳುವ ಯತ್ನ ಅವನದು.ಹೊಸ ಪೆನ್ಸಿಲ್ ,ಪುಸ್ತಕ ,ಶೂ ಹೀಗೆ ಏನೇ ತೆಗೆಸಿ ಕೊಟ್ಟರೂ ಅದನ್ನು ತಕ್ಷಣ ಬಳಸಲು ಒಪ್ಪುವುದಿಲ್ಲ.ಪೆನ್ಸಿಲ್ ಕೆತ್ತಿದರೆ ಚಿಕ್ಕದಾಗಿ ಖಾಲಿಯಾಗುವುದೆಂದು ಕೆತ್ತುವಂತೆಯೇ ಇಲ್ಲ.ನೋಟ್ ಪುಸ್ತಕ ಬರೆದರೆ ಹಳತಾಗುವುದೆಂದು ಬರೆಯದೇ ಹಾಗೆಯೇ ಇಟ್ಟುಕೊಳ್ಳುತ್ತಾನೆ.ಚಪ್ಪಲಿ ಹೊರಗಡೆಗೆ ಹಾಕಿಕೊಂಡು ಹೋದರೆ ಗಲೀಜಾಗುತ್ತದೆಂದು ಹಾಲ್ ನ ಮೂಲೆಯಲ್ಲಿ ಇಟ್ಟಿರುತ್ತಾನೆ ಜೋಪಾನವಾಗಿ.ಎಲ್ಲರೂ'' ಜಿಪುಣ ಕಣೋ ನೀನು ''ಎನ್ನುತ್ತಿರುತ್ತಾರೆ.ನನಗೆ ಮಾತ್ರಾ ಹಾಗನ್ನಿಸುವುದಿಲ್ಲ . ಒಮ್ಮೆ ಉಪಯೋಗಿಸಲು ಶುರು ಮಾಡಿದ ಅಂದರೆ ಸ್ವಲ್ಪ ಹೊತ್ತಿನಲ್ಲಿಯೇ ಆಟಿಕೆಗಳ ಒಂದೊಂದು ಭಾಗವೂ ಒಂದೊಂದು ದಿಕ್ಕಿಗೆ ದೇಶಾಂತರ ಹೊರಟು ಬಿಡುತ್ತವೆ . ಆರಿಸಲು ಪೊರಕೆಯೇ ಬೇಕು.

ನಾನು ,ನನ್ನ ಮಗಳು ಐಶು ಶಿಶಿರನೊಂದಿಗೆ ಕಣ್ಣ ಮುಚ್ಚಾಲೆ ಆಡುತ್ತಿರುತ್ತೇವೆ.ಒಮ್ಮೆ ಐಶು ಕಳ್ಳಿಯಾಗಿದ್ದಳು . ನಾನು, ಶಿಶಿರ ಬಾತ್ ರೂಮಿನಲ್ಲಿ ಅಡಗಿ ಕೊಂಡೆವು .ಐಶು ಹುಡುಕುತ್ತಾ ಬಂದಳು.ಶಿಶಿರ ' ನಾವು ಬಾತ್ ರೂಮಿನಲ್ಲಿ ಅಡಗಿ ಕೊಂಡಿಲ್ಲ 'ಎಂದು ದೊಡ್ಡದಾಗಿ ಹೇಳಿದ . ಐಶು ನಮ್ಮಿಬ್ಬರನ್ನು ಔಟ್ ಮಾಡಿದಳು.

ಶಿಶಿರನ ಕಥೆ ಒಂದಲ್ಲ , ಎರಡಲ್ಲ . ಒಂದಿನ ಪಾತ್ರೆ ತೊಳೆಯುವ ವಿಂ ಬಾರ್ ತೆಗೆದುಕೊಂಡು ಬಕೆಟ್ಟಿನಲ್ಲಿ ನೀರಿನೊಂದಿಗೆ ಕದಡುತ್ತಿದ್ದ.ಬರುತ್ತಿರುವ ನೊರೆಯೊಂದಿಗೆ ಐಸ್ಕ್ರೀಂ ಎಂದು ಆಟವಾಡುತ್ತಿದ್ದ . ನಾನು ಕೂಗಿದೆ, '' ಶಿಶಿರಾ ವಿಂ ಬಾರ್ ಮುಟ್ಬೇಡ .ಆಡಿದ್ದು ಸಾಕು ಬಾ ಇಲ್ಲಿ.. ಶಿಶಿರ ಕೈ ಸರಿಯಾಗಿ ತೊಳೆಯದೇ ಹಾಗೇ ಬಂದ.

ನಾನು ಬುದ್ಧಿ ಮಾತು ಹೇಳಲಾರಂಬಿಸಿದೆ....''ಪುಟ್ಟಾ ವಿಂ ಬಾರ್ ಜೊತೆಗೆಲ್ಲಾ ಆಟ ಆಡಬಾರದು . ಅದನ್ನ ಮುಟ್ಟಿದರೆ ನಿನ್ನ ಮೆತ್ತಗಿನ ಪುಟಾಣಿ ಕೈ ಒರಟಾಗಿ ಹೋಗತ್ತೆ. ಸರಿಯಾಗಿ ಕೈ ತೊಳದಿಲ್ಲ ನೋಡು.ಹೊಟ್ಟೆಗೆ ಹೋದ್ರೆ ವಿಷ ಗೊತ್ತಾ.. ಆಮೇಲೆ ಹೊಟ್ಟೆನೋವು, ವಾಂತಿ........ಮುಂದುವರೆಸುತ್ತಲಿದ್ದೆ.

ಶಿಶಿರ ಒಂದೇ ಮಾತಲ್ಲಿ ನನ್ನ ಬಾಯಿ ಮುಚ್ಚಿಸಿದ.'' ಅಮ್ಮಾ , ನಮ್ಮನೆಯಲ್ಲಿ ಪಾತ್ರೇನ ವಿಷ ಹಾಕಿ ತೊಳಿತಾರಾ........?


ಇನ್ನೊಮ್ಮೆ ನಾವೆಲ್ಲಾ ದಕ್ಷಿಣ ಭಾರತದ ಕಡೆ ಪ್ರವಾಸ ಹೋಗಿದ್ದೆವು . ತಂಜಾವೋರು ನೋಡಿಕೊಂಡು ಹೋಟಲಿನಲ್ಲಿ ಊಟ ಮಾಡಿಕೊಂಡು ಹೊರಟೆವು. ದಾರಿಯಲ್ಲಿ ನಮ್ಮ ವಾಹನ ನಿಲ್ಲಿಸಿ ಎಲ್ಲರಿಗೂ ಐಸ್ಕ್ರೀಂ ಕೊಡಿಸಲಾಯಿತು.ಎಲ್ಲರೂ ತಿನ್ನತೊಡಗಿದರು . ಶಿಶಿರ ಮಾತ್ರಾ ಮನೆಗೆ ಹೋದಮೇಲೆ ತಿನ್ನುತ್ತೇನೆಂದ..........!ಎಲ್ಲರೂ ನಕ್ಕರು.

ಮಕ್ಕಳು ಯಾವ ರೀತಿ ಆಲೋಚಿಸುವರೆಂಬುದು ಗೊತ್ತೇ ಆಗುವುದಿಲ್ಲ.ನನಗಂತೂ ದಿನ ದಿನವೂ ವಿಸ್ಮಯವಾಗಿಯೇ ಕಾಣಿಸುವುದು.ಅವರ ಛೇಸ್ಟೆಗಳು ಹೊಸತನ್ನ ನಮಗೂ ಕಲಿಸುತ್ತವೆ.

ಅದು ಸುಮಾರು ಅಮೆರಿಕಾದ w.t.c.ಕಟ್ಟಡ ವಿಧ್ವಂಸಗೊಂಡ ವರ್ಷ .ಎಲ್ಲರ ಬಾಯಲ್ಲೂ ಬಿನ್ ಲಾಡೆನ್ ,ಜಾರ್ಜ್ ಬುಷ್ ಎನ್ನುವ ಹೆಸರುಗಳೇ ನಲಿದಾಡುತ್ತಿದ್ದವು.
ಐಶು , ನನ್ನ ಮಗಳು ಚಿಕ್ಕವಳಿದ್ದಾಗ ತುಂಬಾ ಚೂಟಿ.ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಕೇಳುವ ಪ್ರಶ್ನೆಗಳಿಗೆ ಅನೇಕಕ್ಕೆ ನನ್ನಲ್ಲಿ ಉತ್ತರವಿರುತ್ತಿರಲಿಲ್ಲ. ಒಂದಿನ ರಾತ್ರಿ ಮಲಗಿದ್ದೆವು .ಸಮಯ ಹನ್ನೊಂದು ದಾಟಿತ್ತು.ನನಗೆ ನಿದ್ದೆಯ ಜೋಂಪು ಹತ್ತ ತೊಡಗಿತ್ತು .ಐಶು 'ಅಮ್ಮಾ.......'ಎಂದು ಕರೆದಳು. ಕಣ್ಣು ಮುಚ್ಚಿಕೊಂಡೇ ಊ.....ಗುಟ್ಟಿದೆ . ''ನಿದ್ದೆ ಬರ್ತಾ ಇಲ್ಲಾ........''ರಾಗವೆಳೆದಳು.ನಾನು ''ರಾಮರಾಮ ಹೇಳ್ತಾ ಮಲಗು..ನಿದ್ದೆ ಬರತ್ತೆ .''ಎಂದು ತಿರುಗಿ ಮಲಗಿದೆ.ನನ್ನವರಿಗಿನ್ನೂ ನಿದ್ರೆ ಬಂದಿರಲಿಲ್ಲಾಂತ ಕಾಣಿಸುತ್ತೆ, '' ಪುಟ್ಟಾ......ಪಕ್ಕದ್ಮನೆ ವೆಂಕಟೇಶ ,ಪಕ್ಕದ್ಮನೆ ವೆಂಕಟೇಶ.... ಅಂದ್ರೂ ನಿದ್ರೆ ಬರತ್ತೆ ಪುಟ್ಟಾ....''ಎಂದರು ನನ್ನನ್ನು ಛೇಡಿಸಲು. ಐಶು ತಕ್ಷಣ ''ಬಿನ್ ಲಾಡೆನ್, ಬಿನ್ ಲಾಡೆನ್.........ಎನ್ನಲು ಶುರು ಮಾಡಬೇಕೆ.....!!ನಮ್ಮಿಬ್ಬರಿಗೂ ನಗುವೋ ನಗು . ನಿದ್ದೆ ಹಾರಿಯೇ ಹೋಯ್ತು.

ಮಕ್ಕಳ ಪ್ರತೀ ನಡವಳಿಕೆಯೂ ಹೊಸತಲ್ಲವೇ...? ಕೌತುಕವಲ್ಲವೇ .....? ನಿಮಗೂ ಈ ರೀತಿಯ ಅನುಭವಗಳಾಗಿರಬಹುದಲ್ಲವೇ.....?

15 comments:

  1. ವಾವ್... ಮಕ್ಕಳ ಜೊತೆಗಿನ ಅನುಭವ ಹಂಚಿಕೊಂಡಿದ್ದಕ್ಕೆ ಫುಲ್ ಖುಷಿ ಆಯಿತು. ಮಕ್ಕಳು ಯಾವಾಗಲು ಹಾಗೇನೆ ಏನ್ ಥಿಂಕ್ ಮಾಡ್ತಾರೆ ಅಂತ ಹೇಳೋದು ತುಂಬಾ ಕಷ್ಟ. ಹೊಸ ಹೊಸ ಐಡಿಯಾಗಳು ಯಾವಾಗಲು ಜೊತೆಯಲ್ಲಿ ಹಿಡ್ಕೊಂಡೆ ತಿರ್ಗಾಡ್ತಾರೆ. ಐಶ್ವರ್ಯಳ ಪ್ರಶ್ನೆಗಳು ಅಂತು ಸಕತ್ಆಗಿ ಇದೆ... ಹ್ಹ ಹ್ಹ ಹ್ಹ ಹ್ಹ... ಹಿಂದೊಮ್ಮೆ 'ಸುಂದರ ಚಂದಿರ' ಅಂತ ಒಂದು ಮಗುನ ಮನಸಲ್ಲಿ ಇಟ್ಟುಕೊಂಡು ಅದರ ಜೊತೆಗೇನೆ ಇದ್ದರೆ ಏನ್ ಅಂದುಕೊಳ್ತಿವಿ ಅಂತ ಕವನ ಬರ್ದಿದ್ದೆ... ಇವತ್ತು ನಿಮ್ಮ ಬರಹ ಹೊಸ ಕವನಕ್ಕೆ ಆರಂಭ ಆಗಬಹುದೇನೋ..!! :)
    ನನಗೆ ಮಕ್ಕಳಂದ್ರೆ ತುಂಬಾ ಇಷ್ಟ.. ಒಂದು ಮಗು ಇದ್ರೆ ಆ ದಿನ ಟೈಮ್ ಹೋಗಿದ್ದೆ ಗೊತ್ತಾಗಲ್ಲ...
    ಇವತ್ತು ಆಫೀಸೆನಿಂದ ಬೇಗ ಮನೆಗೆ ಬಂದಿದ್ದಕ್ಕೆ.. ಅದಕ್ಕೆ ಸರಿಯಾಗಿ ನಿಮ್ಮ article.... ಮನಸ್ಸು ಫುಲ್ ಫ್ರೆಶ್!

    ನಿಮ್ಮವ,
    ರಾಘು.

    ReplyDelete
  2. ನನಗಿನ್ನು ಮಕ್ಕಳಿಲ್ಲ, ಆದ್ರೆ, ಮಕ್ಳ ಆಟ ಚೆನ್ನಾಗಿ ಗೊತ್ತಗಿದೆ.
    ನನಗೆ ನಾಕು ಅಳಿಯಂದಿರು(ಅಕ್ಕರ ಮಕ್ಳಳು). ಇನ್ನೂ ಚಿಕ್ಕವರು.
    ಅದ್ರಲ್ಲಿ ಕೊನೆಯನ್ಮಂತೂ, ನಾವು ಮನೆಗೆ ಹೋದಾಗ, ಪುಸ್ತಕ ಹಿಡಿದು ಕೂರ್ತಾನೆ, ಯಾವಾಗ್ಲೂ ಒದ್ತಾನೆ ಇರ್ತಾನೆ ಅನ್ನೋ ತರ ನಟಿಸ್ತಾನೆ, ಇನ್ನೂ ಐದು ವರ್ಷ ವಯಸ್ಸು

    ಮಕ್ಳ ಆಟವನ್ನ ಹಂಚಿಕೊಂಡದಕ್ಕೆ ಧನ್ಯವಾದಗಳು

    ReplyDelete
  3. ಚಿತ್ರ ಮೇಡಂ....ಇದೇನಪ್ಪಾ ಇಷ್ಟೊಂದು ಜನ ನನ್ನ ಬ್ಲಾಗ್ ಸ್ನೇಹಿತೆಯರ ಹೆಸರು ಚಿತ್ರ ಅಂತ ಇದ್ಯಲ್ಲಾ ಅನ್ನೋ ಯೋಚನೇಲೇ ನಿಮ್ಮ ಬ್ಲಾಗ್ ಗೆ ಪ್ರತಿಕ್ರಿಯೆ ನೀಡ್ತಾ ಇದ್ದೇನೆ.
    ಮಕ್ಕಳ ಪ್ರಶ್ನೆಗಳು...ಓಫ್...ಕೆಲವೊಮ್ಮೆ ಬೆವರಿಳಿಸಿದರೆ ಮತ್ತೊಮ್ಮೆ ತಲೆ ಕೂದಲು ಕಿತ್ಕೋ ಬೇಕು ಅನ್ನಿಸುತ್ತೆ... ನನ್ನ ಮಗಳು (೯ ವಯಸ್ಸು) ನಿನ್ನೆ ಬಂದು ನನ್ನ ಹೆಸರಿನ ಅರ್ಥ ಏನು?? ಅನ್ನೋದೇ..?? !! ನಾನು ಹೇಳ್ದೆ...ಸುರಯ್ಯಾ ನೂರ್ ಫಾತಿಮಾ ..ಇದರಲ್ಲಿ ಸುರಯ್ಯಾ ..morning star ಅಂತ, ನೂರ್ ಅಂದ್ರೆ ಪ್ರಭೆ..ಬೆಳಕು ಇತ್ಯಾದಿ...ಫಾತಿಮ ..ಪೈಗಂಬರರ ಮಗಳ ಹೆಸರು...ಎಂದೆ,..ಅದಕ್ಕೆ ಅವಳು ಅದರ ಅರ್ಥ ಏನು ?? ಎನ್ನೋದೇ..?? ಅದಕ್ಕೆ ಏನು ಹೇಳೋದು..?? ಅದು ಹೆಸರಮ್ಮ ಎಂದೆ...ಮತ್ತೆ ನನ್ನ ಹೆಸರಿನ ಎರಡು ಭಾಗಕ್ಕೆ ಅರ್ಥ ಇದೆ ಮೂರನೇದಕ್ಕೆ ಯಾಕಿಲ್ಲ ??...ಮಕ್ಕಳ ಕ್ಯೂರಿಯಾಸಿಟಿ ನಮ್ಮನ್ನ ಈ ವಯಸ್ಸಲ್ಲೂ ತಿಳ್ಕೊಳ್ಳೋದು ಇದೆ ನವೂನೂ ಅನ್ನೋ ಯೋಚನೆಗೆ ತಳ್ಳುತ್ತೆ...

    ReplyDelete
  4. ಮಕ್ಕಳ ಮುಗ್ಧತೆ ಯಾರಿಗಿಷ್ಟವಾಗುವುದಿಲ್ಲ .....ಹೇಳಿ.

    ನನ್ನ ಮಾವನವರು ಯಾವಾಗಲೂ ಹೇಳುತ್ತಿರುತ್ತಾರೆ.ಮಕ್ಕಳಿ೦ದ ಪಡೆಯುವ ಸ೦ತೋಷದ ಋಣವನ್ನು ತೀರಿಸಲು ಸಾಧ್ಯವಿಲ್ಲ ಎ೦ದು.

    ಸತ್ಯದ ಮಾತಲ್ಲವೇ......?


    ನನ್ನ ಜೊತೆ ನಿಮ್ಮ ಅನುಭವಗಳನ್ನು ಹ೦ಚಿಕೊ೦ಡಿದ್ದಕ್ಕೆ.....

    ರಾಘು, ಲೋದ್ಯಾಶಿ ಹಾಗೂ ಜಲನಯನ ಅವರೆ.....

    ವ೦ದನೆಗಳು.

    ReplyDelete
  5. ಲೇಖನ ತುಂಬಾ ಚೆನ್ನಾಗಿದೆ. ನಿಮ್ಮ ಶೈಲಿಯೂ ತುಂಬಾ ಇಷ್ಟವಾಯಿತು! ನನ್ನ ಮಗಳು ಈಗ ತಾನೇ ಮಾತು ಕಲಿಯುತ್ತಿದ್ದಾಳೆ, ಏನೇನು ಪ್ರಶ್ನೆಗಳನ್ನೆದುರಿಸಬೇಕೋ ಎಂದು ಯೋಚಿಸಿ ಕಂಗಾಲಾಗುತ್ತಿದ್ದೇನೆ!

    ReplyDelete
  6. ವಿಜಯಶ್ರೀ
    ಮಕ್ಕಳ ಬಗೆಗಿನ ಲೇಖನ ಓದಿ ತುಂಬಾ ಖುಷಿಯಾಯಿತು.
    ನನಗೆ ಮಕ್ಕಳ ಚೇಷ್ತೆಯೆಂದರೆ ತುಂಬಾ ಇಷ್ಟ
    ತುಂಬಾ ನಗು ಬಂತು ಮಕ್ಕಳ ಮಾತು ಕೇಳಿ

    ReplyDelete
  7. ಸುಪ್ತವರ್ಣ...... ಅವರೆ..


    ನಿಮ್ಮದು ದಟ್ಟವರ್ಣ......


    ನಿಮ್ಮ ಕಥೆಗಳನ್ನು ಓದಿ ನನಗೆ ಹಿ೦ದೂಸ್ತಾನಿ ಸ೦ಗೀತದ೦ತೆ ವಿಲ೦ಬಿತ್ ನಲ್ಲಿ ಶುರುವಾದ ನಗು ದ್ರುತ್ ನಲ್ಲಿ ಕೊನೆಯಾಯಿತು. ಅಲ್ಲದೆ ಒಬ್ಬಳೇ ಓಡಾಡುವಾಗ ಕೂಡಾ ವಿಲ೦ಬಿತ್ ಸೀನ್ ಇರುತ್ತದೆ. ನನ್ನ ಶೈಲಿ ಇಷ್ಟವಾಯಿತೆ.....!? ಥ್ಯಾ೦ಕ್ಸ್.

    ಗುರು ಅವರೆ .....

    ನನ್ನ ಮಕ್ಕಳ ಮಾತು ನಗು ತರಿಸಿತೇ..... ?
    ಕೆಲವೊಮ್ಮೆ ನನಗೆ ಅಳು ತರಿಸುತ್ತದೆ.
    ಬರಹ ಇಷ್ಟಪಟ್ಟಿದ್ದಕ್ಕೆ ವ೦ದನೆಗಳು.

    ReplyDelete
  8. ಚುಕ್ಕಿ,
    ನಿಮ್ಮ ಮಕ್ಕಳ ಮಕ್ಕಳಾಟದ ವರ್ಣನೆ ಓದಿ ನನ್ನ ಮನಸ್ಸು ಉಲ್ಲಾಸದಿಂದ ತುಂಬಿತು.
    ನಿಮಗೆ ಆ ಸಮಯದಲ್ಲಿ ತೊಂದರೆ ಆಗಿರಬಹುದು. ಆದರೆ ನೆನೆದಾಗ ಖುಶಿಯೇ ಆಗುತ್ತದೆ, ಅಲ್ಲವೆ?

    ReplyDelete
  9. ಹ್ಹಾ ಹ್ಹಾ ಹ್ಹಾ...
    ಶಿಶಿರನ ಕಥೆಗಳು ತುಂಬಾ ಚನ್ನಾಗಿವೆ.. ಒಂದು ಕಡೆ ಮುಗ್ದನಾಗಿ, ಇನ್ನೊಂದು ಕಡೆ ಅತಿ ಬುದ್ದಿವಂತನಾಗಿ ಉತ್ತರಿಸಿದ್ದಾನೆ.
    ಶಿಶಿರನ ಕಥೆಗಳು ಇನ್ನು ಇದ್ದಾರೆ ಹೇಳಿ :)

    ReplyDelete
  10. ಸುನಾಥ್ ಸರ್.. ಇಲ್ಲಿ ಬರೆದಿದ್ದನ್ನ ನನ್ನ ಮಗನಿಗೆ ಓದಿ ಹೇಳಿದೆ. ಅವನ ತು೦ಟತನ ಅವನಿಗೇ ಮೆಚ್ಚುಗೆಯಾಗಿದೆ. ನಾನೇನು ಬರೆಯಲು ಕುಳಿತರೂ ನನ್ನ ಕಥೇನಾ... ಅಮ್ಮಾ ಎ೦ದು ಕೇಳುತ್ತಾನೆ.


    ಶಿವಪ್ರಕಾಶ್... ನಿಮ್ಮ ಅಬಿಪ್ರಾಯಗಳಿಗೆ ಧನ್ಯವಾದಗಳು.

    ReplyDelete
  11. ಸೂಪರ್ ಶಿಶಿರ್, ಕೂಲ್ ಕೂಲ್ ಐಶ್ವರ್ಯ...... ನಿಮ್ಮ ಮಕ್ಕಳ ಆಟ ಕೇಳಿ ನಕ್ಕಿದ್ದೆ ನಕ್ಕಿದ್ದು..... ನಿಮ್ಮ ಪರಿಸ್ತಿತಿ ನೋಡಿ ಸಹ...... ಏನಾದರೂ ಅವರ ಮುಗ್ಧತೆ ಇಷ್ಟ ಆಯ್ತು......

    ReplyDelete
  12. ಮೋಗೆರ ಅವರೆ......
    ನನ್ನ ಮಕ್ಕಳ ಮಾತುಗಳಿ೦ದ ನೀವು ಖುಶಿ ಪಟ್ಟಿದ್ದಕ್ಕೆ ನನಗೂ ಸ೦ತೋಷವಾಯಿತು.
    ಧನ್ಯವಾದಗಳು.

    ReplyDelete
  13. ”ಮಕ್ಕಳ ಕೌತುಕಗಳು” ಓದಿ ಖುಶಿ ಆಯ್ತು.ಶಿಶಿರನ ಮತ್ತೂ ಕೆಲವು ಕೌತುಕಗಳು ನೆನಪಾದವು. ಮಕ್ಕಳಿ೦ದ ಸಿಗುವ ಖುಶಿ ಬೇರೆಲ್ಲೂ ಸಿಗದು ಅಲ್ವಾ? ಮಗುವಿನ ಕುರಿತು ಒ೦ದು ಜಾನಪದ ಹಾಡಿನ ತುಣುಕು ನೆನಪಾಯ್ತು.
    ಕೂಸು ಇದ್ದ ಮನೆಗೆ ಬೀಸಣಿಕೆ ಯಾತಕ
    ಕೂಸು ಕ೦ದಯ್ಯ ಒಳ ಹೊರಗ
    ಕೂಸು ಕ೦ದಯ್ಯ ಒಳ ಹೊರಗ ಆಡಿದರ
    ಬೀಸಣಿಕೆ ಗಾಳೀ ಸುಳಿದಾವ.

    ReplyDelete
  14. ಮೇಡಂ ,
    ನಿಮ್ಮ ಶಿಶಿರನ ಕಥೆಗಳು ತುಂಬ ಚೆನ್ನಾಗಿದೆ....ಬಹಳ ಖುಷಿ ತಂದಿತು :) :) ಮಕ್ಕಳ ಜೊತೆ ಎಷ್ಟು ಸಮಯ ಕಳೆದರೂ ಬೇಜಾರೆ ಆಗುವುದಿಲ್ಲ ಅಲ್ಲವಾ ಮೇಡಂ ? :) :)
    ಸುಮಾ

    ReplyDelete
  15. ಮನಮುಕ್ತಾ.... ಜನಪದ ಹಾಡಿನ ಸಾಲುಗಳು ಸತ್ಯವನ್ನೇ ಹೇಳುತ್ತವೆ.

    ಸ್ನೊವೈಟ್ ಸುಮಾ... ಮನೆಯಲ್ಲಿ ಮಕ್ಕಳಿದ್ದಾಗ ಬೇಜಾರು ಮಾಡಿಕೊಳ್ಳಲು ಪುರುಸೊತ್ತೇ ಸಿಗುವುದಿಲ್ಲಾ.....!

    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete