Sunday, April 11, 2010

ಒಳ್ಳೆಯತನ ಅಂದ್ರೇನು....? ಸುಮ್ನೆ ಹರಟಿದ್ದು...

ಒಳ್ಳೆಯವರು ಅಂದರೆ.. ನೈತಿಕವಾಗಿ, ಬೌದ್ಧಿಕವಾಗಿ ಮೇಲ್ಮಟ್ಟದಲ್ಲಿರುವ, ಪರೋಪಕಾರಿಯಾಗಿರುವ, ಮೌಲ್ಯಯುತ ವಿಚಾರಗಳಿರುವ,ಸಹನಶೀಲ, ನುಡಿದಂತೆ ನಡೆಯುವ,ಕರ್ತವ್ಯ ಶಾಲಿ .......,.......,.......,.......,ಇತ್ಯಾದಿ ಸಕಲ ಗುಣಗಳಿರುವ ವ್ಯಕ್ತಿಗಳು.. ಅನ್ನುವುದು ನನಗೆ ಮತ್ತು ನಿಮಗೆ ಹಾಗೂ ಎಲ್ಲರಿಗೂ ಗೊತ್ತು ಅಲ್ಲವೇ...?

ಆದರೆ ಈ ಒಳ್ಳೆಯ ಗುಣಗಳೆಲ್ಲವೂ ಒಬ್ಬನೇ ವ್ಯಕ್ತಿಯಲ್ಲಿ ಇರುತ್ತವೆಯೇ...?
ಒಂದೆರಡು ಗುಣಗಳು ಮಿಸ್ಸಾದರೆ ಆತ ಕೆಟ್ಟವನೇ....? ಛೇ... ಇಲ್ಲ..
ಹಾಗಂತ ಒಂದೋ ಎರಡೋ ಗುಣಗಳು, ಕೆಟ್ಟ ವ್ಯಕ್ತಿ ಎಂದು ಪ್ರತಿಬಿಮ್ಬಿತನಾದ ವ್ಯಕ್ತಿಯಲ್ಲಿ ಇದ್ದಾಕ್ಷಣ ಆತ ಒಳ್ಳೆಯವನೇ...?


ಒಳ್ಳೆಯ ತನ ಅನ್ನುವುದನ್ನು ಅಂದಾಜಿಸುವುದು ಹೇಗೆ...?
ಅದನ್ನು ಅಳೆಯುವ ಮಾನದಂಡ ಯಾವುದು...?ಸ್ಕೇಲ್ ಯಾವುದು...? [ಧೈರ್ಯವನ್ನಾದರೆ ಈಗೀಗ ಮೀಟರಿನಲ್ಲಿ ಅಳೆಯುತ್ತಾರೆ... ದರ್ಶನ್ ಸಿನಿಮಾಗಳಲ್ಲಿ....!!!!]


ಈ ತರದ ವಿಚಾರಗಳು ನನ್ನ ತಲೆ ತಿನ್ನುತ್ತವೆ ಆಗಾಗ..
ಬೆಳಿಗ್ಗೆ ಟೀ ಕಪ್ಪನ್ನು ಟೀಪಾಯ್ ಮೇಲಿಟ್ಟು ಪೇಪರಿನಲ್ಲಿ ತಲೆ ಹುದುಗಿಸಿ ಕೊಂಡಿದ್ದ ನನ್ನ ಪತಿದೇವರನ್ನು ಕರೆದೆ...


ರೀ..... ''

ಏನು ನಿನ್ನ ಸಮಸ್ಯೆ...? ''


ನಾ ಕರೆವ ಧಾಟಿಯಲ್ಲಿಯೇ ಇವರಿಗೆ ಸಮಸ್ಯೆಯೋ.. ಸಲ್ಲಾಪವೋ .... ಸಮಾಚಾರವೋ ಗೊತ್ತಾಗಿಬಿಡುತ್ತದೆ...!!ನನ್ನನ್ನ ಅಷ್ಟು ಚನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಇವರು......!!! ನನ್ನ ಈ'' ಒಳ್ಳೆಯತನ ''ದ ಸಮಸ್ಯೆಯನ್ನು ಇವರ ಮುಂದೆ ಸುರುವಿದೆ. [ಅರುಹಿದೆ ಇದರ ವುತ್ಪ್ರೆಕ್ಷಾಲಂಕಾರ--ಸುರುವಿದೆ...] ಅದು ಗುಪ್ಪೆಯಾಗಿ,ರಾಶಿಯಾಗಿ, ಗುಡ್ದವಾಗಿ ಅದರ ಹಿಂದಿರುವ ನಾನು ಕಾಣದೆ ಸಮಸ್ಯೆಯೊಂದೆ ಕಂಡು ಸಮಸ್ಯೆಯನ್ನೇ ಕಟ್ಟಿಕೊಂಡಿದ್ದೀನಾ ಎನ್ನುವ ಸಮಸ್ಯೆ ಏನಾದರೂ ನನ್ನವರಿಗೆ ಶುರುವಾಗಿದೆಯಾ... ಎನ್ನುವುದು ನನ್ನ ಇತ್ತೀಚಿನ ಸಮಸ್ಯೆಯಾಗಿದೆ...!!!!! ಇರಲಿ..


''ಒಳ್ಳೆಯವರು.. ಒಳ್ಳೆಯತನ... ಅಂದರೇನು..? ''

''ನಿನಗೆ ಗೊತ್ತಿಲ್ವಾ..? ''

''ಗೊತ್ತಾದಂತೆ ಅನ್ನಿಸುತ್ತೆ...ಆದರೂ ಸ್ವಲ್ಪ ಕನ್ಫ್ಯೂಜನ್ . ನೀವು ಹೇಳಿದ ಮೇಲೆ ಸರಿಯಾಗಿ ಅರ್ಥವಾಗತ್ತೆ...''

''ನೋಡೇ.. ಒಳ್ಳೆಯತನ ಅಂತ ಅಂದ್ರೆ ಅದು ನೋಡುವವರ , ಅನುಭವಿಸುವವರ ದೃಷ್ಟಿಯಲ್ಲಿ, ಅನುಭವದಲ್ಲಿ ಇರುತ್ತೆ...
ಎಲ್ಲರೂ ಎಲ್ಲ ವಿಚಾರಗಳಲ್ಲೂ , ಎಲ್ಲರಿಗೂ ಎಲ್ಲಾ ಸಮಯದಲ್ಲೂ ಒಳ್ಳೆಯವರಾಗಿ ಇರಬೇಕೆಂದಿಲ್ಲ...
ಕಳ್ಳನನ್ನು ಹಿಡಿದ ಪೋಲೀಸ್ ಜನರ ದೃಷ್ಟಿಯಲ್ಲಿ ಒಳ್ಳೆಯವ .. ಕಳ್ಳನ ದೃಷ್ಟಿಯಲ್ಲಿ ಕೆಟ್ಟವ..
ಇಲ್ಲಿ ಕರ್ತವ್ಯ ಪ್ರಜ್ಞೆ ಇದೆ..ಒಬ್ಬ ಕಳ್ಳನಿಂದ ಹಲವರಿಗೆ ಆಗುವ ತೊಂದರೆಯನ್ನು ಪರಿಗಣಿಸಿ ಆತ ಕೆಟ್ಟವನು ಎಂದು ತಿಳಿಯುತ್ತೇವೆ.... ''


''ಕಳ್ಳತನ ಕೆಟ್ಟದ್ದೇ...''

''ಇರು.. ಒಮ್ಮೆ ಅದೇ ಕಳ್ಳ ಸಹಕಳ್ಳರೊಡಗೂಡಿ ಯಾವುದೋ ಮನೆಗೆ ಡಕಾಯಿತಿಗೆ ಹೋದ ಎಂದಿಟ್ಟುಕೊಳ್ಳೋಣ. ಅಲ್ಲಿ ಎಲ್ಲವನ್ನೂ ದೋಚಿದ ಮೇಲೆ ಸಂಗಡಿಗನೊಬ್ಬ ಆ ಮನೆಯ ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದಾಗ ಈ ಕಳ್ಳ ತಡೆದ ಎಂದಿಟ್ಟುಕೊಳ್ಳೋಣ... ಆ ಹೆಂಗಸಿನ ದೃಷ್ಟಿಯಲ್ಲಿ ಈ ನಮ್ಮ 'ಕಳ್ಳ' ದೇವರೇ ಆಗುವುದಿಲ್ಲವೇ...? ಆಪದ್ರಕ್ಷಕ ಶ್ರೀ ಕೃಷ್ಣ ಪರಮಾತ್ಮನೇ ಆಗುವುದಿಲ್ಲವೇ..?''

''ಹೌದು..ಕೆಲಸದವಳು ಹೇಳಿದ್ದಳು .. ಅಕ್ಕ .....ಶ್ರೀರಾಮನಂತ ಒಳ್ಳೆ ಗಂಡನ್ನ ಕೊಡಪ್ಪಾ ಅಂತ ಮಾತ್ರಾ ಬೇಡಿ ಕೊಳ್ಳಬಾರದು.. ಬಸರೀ ಹೆಂಡತೀನ ನಡೂ ಕಾಡಲ್ಲಿ ಬಿಟ್ಟು ಬರ್ತಾನೆ..ಕೃಷ್ಣನ ತರದ ಗಂಡ ಸಿಕ್ಕಿದರೂ ಪರವಾಗಿಲ್ಲ.. ಯಾರಿಗೂ ಮೋಸ ಮಾಡದೆ ಕೊನೆ ಪಕ್ಷ ಬಾಡಿಗೆ ಮನೆನಾದ್ರೂ ಮಾಡಿ ಇಟ್ಟುಕೊಳ್ತಾನೆ .....!!! ಅಂತ. ''

''ಹೌದು .. ಇಲ್ಲಿ ಸನ್ನಿವೇಶ, ಸಮಯ, ಸಂದರ್ಭ , ಆವಶ್ಯಕತೆ ಎಲ್ಲ ಅಂಶಗಳೂ ಒಳಗೊಂಡಿರುತ್ತವೆ..
ಒಬ್ಬನಿಗೆ ಒಳ್ಳೆಯದಾದದ್ದು ಇನ್ನೊಬ್ಬನಿಗೆ ಕೆಟ್ಟದ್ದಾಗಿ ಪರಿಣಮಿಸಬಹುದು.. ''


''.........''

''ತರಕಾರಿ ಮಾರುವವರೊಂದಿಗೆ ಚೌಕಾಸೀ ಮಾಡುತ್ತೀರಲ್ಲ...ನೀವು ಹೆಂಗಸರು... ಐದು ರೂಪಾಯಿ ಆಲೂಗಡ್ಡೆಯನ್ನಮೂರೇ ರೂಪಾಯಿಗೆ ಆತ ಕೊಟ್ಟರೆ ಅವನು ಒಳ್ಳೆಯವನು.ಅವನ ಲಾಭ ಮುರಿದುಕೊಂಡ ನೀವು.... ಅವನಿಗೆ ಕೆಟ್ಟವರಾಗುತ್ತೀರಿ.... ಹೀಗೆ.''


''ಒಳ್ಳೆಯತನಕ್ಕೆ ನಾನಾ ತರದ ಮುಖಗಳಿವೆ... ಕೆಟ್ಟತನದಂತೆಯೇ......ನಾಣ್ಯದ ಎರಡು ಮುಖದಂತೆ ಯಾವುದು ಒಳ್ಳೆಯತನವೋ ಅದಕ್ಕೆ ಸಂಬಂಧಿಸಿದಂತೆ ತದ್ವಿರುದ್ಧ ಕೆಟ್ಟ ತನವೂ ಇರುತ್ತದೆ...ಆಲ್ವಾ......?''


''ಹೌದು... ಮತ್ತು ಒಳ್ಳೆಯತನ ''ಆ ಕ್ಷಣವನ್ನು 'ಅವಲಂಬಿಸಿರುತ್ತದೆ....''ನಮಗೆ ಸಹಾಯ ಬೇಕಿದ್ದಾಗ ಯಾರು ಆ ಕ್ಷಣದಲ್ಲಿ ಸಹಾಯ ಮಾಡುತ್ತಾರೋ ಅದು ಅವರ ಒಳ್ಳೆಯತನ... ಬೇರೆಯವರಿಗೆ ಅವರು ಕೆಟ್ಟವರೆ ಇದ್ದಿರಲೂ ಬಹುದು..
ಉದಾಹರಣೆಗೆ...ನೀನು ರಸ್ತೆಯಲ್ಲಿ ಹೋಗುತ್ತಿರುತ್ತೀಯ... ತಲೆಸುತ್ತು ಬಂದು ಬೀಳುತ್ತೀಯ ಅಂದುಕೋ .. ಅಲ್ಲಿ ಯಾರೋ ದಾರಿಹೋಕರೊಬ್ಬರು ನೀರು ತಂದು ಕುಡಿಸುತ್ತಾರೆ . ಸಂಬಂಧವೇ ಇರದ ಜನ ಸಹಾಯ ನೀಡುತ್ತಾರಲ್ಲಾ.. ಅದು ಆ ಕ್ಷಣದ ಸಾಮಾಜಿಕ,ನೈತಿಕ , ಮಾನವೀಯ ಪ್ರಜ್ಞೆ...''


''ಕೆಲವೊಮ್ಮೆ ನಮ್ಮ ಸ್ವಾರ್ಥಕ್ಕಾಗಿ ಕೂಡಾ ನಾವು ಒಳ್ಳೆಯವರಾಗಿರುತ್ತೇವೆ, ಮತ್ತು ಬೇರೆಯವರು ನಮಗಾಗಿ ಎಷ್ಟು ಖರ್ಚು ಮಾಡಲು ತಯಾರಿರುತ್ತಾರೆ ಅಲ್ಲದೆ ಅವರಿಂದ ಎಷ್ಟು ಲಾಭವಿದೆ ಎನ್ನುವುದರ ಮೇಲೂ ಇನ್ನೊಬ್ಬರ ಒಳ್ಳೆಯತನವನ್ನು ಅಳೆಯುತ್ತೇವೆ...ನಾವು......!!!!''

'' ಒಳ್ಳೆಯತನ ತೋರಿಸಲು ಕೆಲವೊಮ್ಮೆ ಸಮಯ ಕೂಡಾ ಇರಬೇಕಾಗುತ್ತೆ .... ಅನಿವಾರ್ಯ ಸಮಯಗಳನ್ನು ಬಿಟ್ಟು ಉಳಿದಂತೆ ನಾವು ನಮ್ಮ ಒಳ್ಳೆಯ ತನ ತೋರ್ಪಡಿಸಲು ಸಮಯ ಇದೆಯಾ.. ಇಲ್ಲವಾ ಅನ್ನುವುದನ್ನೂ ಅವಲೋಕಿಸುತ್ತೇವೆ..

''ಮತ್ತು ಕೆಲವೊಮ್ಮೆ ಗಿಲ್ಟ್ ಕಾಡದಿರಲು ಕೂಡಾ ನಾವು ಒಳ್ಳೆಯ ತನ ತೋರಿಸುತ್ತೇವೆ ... ''

'' ಅಂದರೆ ಒಳ್ಳೆಯತನ ಅನ್ನುವುದು... ಇರುವ ಬೇರೆಲ್ಲ ಗುಣಗಳಿಗಿಂತ ವ್ಯಕ್ತಿಯ ತತ್ ಕ್ಷಣದ ನಿರ್ಧಾರವನ್ನು, ಆತನ ಮಾನವೀಯ ಪ್ರಜ್ಞೆಯನ್ನು ಅವಲಂಬಿಸಿರುತ್ತದೆ.....ಗೊತ್ತಾಯ್ತಾ...? ''

''ಗೊತ್ತಾಯ್ತು.. ಮೊದಲೇ ಗೊತ್ತಿದ್ದರೂ ಹೀಗೆ ಸುಮ್ಮನೆ.........''

''ಈಗ ನೀನು ಇನ್ನೂ ಸುಮ್ಮನಿರದಿದ್ದರೆ... ನನ್ನ ಪೇಪರ್ ಓದುವ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದಕ್ಕಾಗಿ ಈ ಕ್ಷಣದಲ್ಲಿ ನಾನು ಕೆಟ್ಟವನಾಗ ಬೇಕಾಗುತ್ತದೆ.......!''


'' ಅಂದರೆನಿಮ್ಮ ಮಾತಿನರ್ಥ ನಾನು ಕೆಟ್ಟವಳು ಅಂತಾ ಅಲ್ವೇ....? ''

'' ಅದರ ಬಗ್ಗೆ ಹೇಳಬೇಕು ಅಂದರೆ .... ಈಗ ಈ ತಣಿದ ಟೀಯನ್ನು ಒಳಗೆ ತಗೊಂಡು ಹೋಗಿ ಹಾಗೇ ಬಿಸಿ ಮಾಡಿ ತರದೇ ಹೊಸತಾಗಿ ಟೀ ಮಾಡಿ ತಂದರೆ , ಕುಡಿದಾದ ಮೇಲೆ ನೀನು ಒಳ್ಳೆಯವಳೋ......,... ಎಂಬುದರ ಬಗ್ಗೆ ಆಲೋಚನೆ ಮಾಡುತ್ತೇನೆ.'' ಎನ್ನುತ್ತಾ ನನ್ನ ಪ್ರತಿಕ್ರಿಯೆಗೂ ಅವರಿಗೂ ಸಂಬಂಧವಿಲ್ಲವೇನೋ ಎಂಬಂತೆ ಪೇಪರಿನಲ್ಲಿ ಮುಖ ಮುಚ್ಚಿಕೊಂಡರು....




[ ಈ ಪೋಸ್ಟಿನಲ್ಲಿ ಸಾಕಷ್ಟು ದೋಷಗಳು ಕಾಣಿಸಿರ ಬಹುದು .. ಅದು ನೆಟ್ಟಿನ ತಪ್ಪು.... ನನ್ನದಲ್ಲ ..... ಇದನ್ನು ಓದಿ ಯಾರೂ ಈ ಕ್ಷಣದಲ್ಲಿ ನನ್ನ ಬಗ್ಗೆ ಕೆಟ್ಟವರಾಗದಿದ್ದರೆ ಸಾಕು...!!!!]

39 comments:

  1. ಕೃತ್ರಿಮತೆಯಿಲ್ಲದ ಸುಂದರ ಬರಹ.
    ಒಳ್ಳೆತನ-ಕೆಟ್ಟತನ ಸಂದರ್ಭ ಅನ್ನುವ ಮೂರನೆಯದರ ಜೊತೆಯಲ್ಲಿ ಅರ್ಥ ಪಡೆದುಕೊಳ್ಳುತ್ತದೆ ಅನ್ನುವ ನಿಮ್ಮ ಮಾತು ನಿಜ. ಸುಮ್ಮನೆ ಹರಟಿದ್ದೆ ಇಷ್ಟು ಚೆನ್ನಾಗಿದೆ.
    ಶಿವರಾಮ ಭಟ್

    ReplyDelete
  2. ಒಳ್ಳೆಯತನವನ್ನು ಮೀಟರ್ ಗಳಲ್ಲಿ ಅಳೆಯುತ್ತಾರೆ ಅಂಬ ವಾಕ್ಯವಂತೂ ಸಕತ್ ನಗು ತರಿಸಿತು. Irony , ಹಾಸ್ಯ ಮತ್ತು ಆಪ್ತ ಸಂಭಾಷಣೆಯ ಮೂಲಕ ಒಳ್ಳೆಯತನದ ಬಗೆಗೆ ಒಳ್ಳೆಯ ಲೇಖನವನ್ನು ಕೊಟ್ಟಿದ್ದಕ್ಕೆ ಒಳ್ಳೆಯ ಧನ್ಯವಾದಗಳು.

    ReplyDelete
  3. ಇಷ್ಟೆಲ್ಲಾ ಸತ್ವ ಇರುವ ವಿಚಾರಕ್ಕೆ ಸುಮ್ನೆ ಹರಟಿದ್ದು ಎ೦ದು ಬರೆದು ಹರಟೆಯ ದೃಷ್ಟಿಯಲ್ಲಿ ಕೆಟ್ಟವರಾಗಿದ್ದ೦ತು ನಿಜ!!
    ಇಲ್ಲಾ ಅ೦ದ್ರೆ, ನನ್ನ ದೃಷ್ಟಿಯಲ್ಲಿ..?!!ಏನೀಪ್ರಕಾರದಲ್ಲಿ ನಾನು ಹೇಳಿದ್ದನ್ನ ಇಲ್ಲಾ ಅ೦ದ್ರೇ..ಹಹಹಾ...ಒಟ್ಟಿನಲ್ಲಿ ಜಗತ್ತಿನಲ್ಲಿ ಯಾರೂ ಒಳ್ಳೆಯವನು ಅಥವಾ ಒಳ್ಳೆಯವಳು ಎ೦ದು ಬೆನ್ನು ತಟ್ಟಿಕೊಳ್ಳಲು ಸಾಧ್ಯವಿಲ್ಲ.ಒಳ್ಳೆಯದು ಕೆಟ್ಟದ್ದು ಎರಡೂ ನಮ್ಮ ನಮ್ಮ ನ೦ಬಿಕೆಯ ತಳಹದಿಯನ್ನು (bilief system) ಅವಲ೦ಬಿಸಿರುತ್ತದೆ.ಯಾವುದೇ ವಿಚಾರದಲ್ಲಿ ನ೦ಬುಗೆ ಧನಾತ್ಮಕವಾಗಿ ಬದಲಾದರೆ ಮೊದಲು ಕೆಟ್ಟದ್ದು ಎ೦ದಿದ್ದು ನ೦ತರದಲ್ಲಿ ಒಳ್ಳೆಯದು ಎನಿಸಬಹುದು.
    ಉತ್ತಮ ಹರಟೆ!!:)

    ReplyDelete
  4. ಹರಟೆ ಕೇವಲ ಹರಟೆಯಾಗಿ ಉಳಿದಿಲ್ಲ.!ಒಂದು ವೈಚಾರಿಕ ಲೇಖನವಾಗಿ ಮಾರ್ಪಾಡಾಗಿದೆ !.ಒಳ್ಳೆಯದು ಮತ್ತು ಕೆಟ್ಟದ್ದು ನೋಡುವವರ ದೃಷ್ಟಿಯನ್ನು ಅವಲಂಬಿಸಿರುತ್ತದೆ ಎನ್ನುವ ವಿಷಯವನ್ನು ಬಹಳ ಚೆನ್ನಾಗಿ ಮಂಡಿಸಿದ್ದೀರಿ !ವಾಮನಾಕರದ ವಿಷಯ ಬರಬರುತ್ತಾ ತ್ರಿವಿಕ್ರಮನಂತೆ ಬೆಳೆಯುತ್ತದೆ!ಒಳ್ಳೆಯ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು .

    ReplyDelete
  5. ಶ್ರೀರಾಮನಿಗಿಂತ ಶ್ರೀಕೃಷ್ಣನೇ ಹೆಚ್ಚಿಗೆ ಒಳ್ಳೆಯವನು ಎನ್ನುವ ಸಂದೇಶ ಒಳ್ಳೆಯತನದ ಅರ್ಥವನ್ನು ತೋರಿಸುತ್ತದೆ. ಹರಟೆಯ ರೀತಿಯಲ್ಲಿಯೇ ಉತ್ತಮ ವಿವೇಚನೆ ಮಾಡಿರುವಿರಿ.

    ReplyDelete
  6. ಈ ಒಳ್ಳೇದು ಕೆಟ್ಟದ್ದು ಅವರವರ ಚಾಳೀಸಿನಿಂದ ಅದು ಹೇಗೆ ಕಾಣುತ್ತದೆ ಅದರ ಮೇಲೆ ಅವಲಂಬಿತ ಆಗಿರುತ್ತದೆ ಅಲ್ವಾ

    ReplyDelete
  7. laghuvaagi bareda baraha tumbaa kaaditu.... eshtu nija alvaa.... yaarigo olleyadu maadiddu innobbarige kettaddaagatte..... sundara baraha..

    ReplyDelete
  8. ಒಳ್ಳೆಯವರು ಕೆಟ್ಟವರು ಎಂದು ವಿಂಗಡಿಸುವುದು ಕಷ್ಟದ ಮಾತೇ ಸರಿ. ಬಹಳ ಚೆನ್ನಾಗಿದೆ ಲೇಖನ.

    ReplyDelete
  9. ಒಳ್ಳೆಯತನದ ಬಗ್ಗೆ ಒಮ್ಮೆ ಯೋಚಿಸುವಂತೆ ಮಾಡುತ್ತದೆ ನಿಮ್ಮ ಲೇಖನ. ಚೆನ್ನಾಗಿದೆ.

    ...ಅದು ಗುಪ್ಪೆಯಾಗಿ,ರಾಶಿಯಾಗಿ, ಗುಡ್ದವಾಗಿ ಅದರ ಹಿಂದಿರುವ ನಾನು ಕಾಣದೆ ಸಮಸ್ಯೆಯೊಂದೆ ಕಂಡು ಸಮಸ್ಯೆಯನ್ನೇ ಕಟ್ಟಿಕೊಂಡಿದ್ದೀನಾ ಎನ್ನುವ ಸಮಸ್ಯೆ ಏನಾದರೂ ನನ್ನವರಿಗೆ ಶುರುವಾಗಿದೆಯಾ... ಎನ್ನುವುದು ನನ್ನ ಇತ್ತೀಚಿನ ಸಮಸ್ಯೆಯಾಗಿದೆ...!!!!!....

    ಎಂದಿದ್ದೀರಿ. ನಿಜವಾಗಿಯೂ ನನಗೂ ಈಗೀಗ ಹಾಗೇ ಅನ್ನಿಸತೊಡಗಿದೆ. :)

    ReplyDelete
  10. ತುಂಬಾ ಇಷ್ಟವಾಯ್ತು ನಿಮ್ಮಾ ಈ ಲೇಖನ. ನೀವು ಹೇಳಿದಂತೆ ಎಲ್ಲಾ ದೃಷ್ಟಿಯಲ್ಲಿಯೂ , ಎಲ್ಲರಲ್ಲಿಯೂ ಒಬ್ಬ ವ್ಯಕ್ತಿ ಒಳ್ಳೆಯವನಾಗಳು ಸಾದ್ಯವೇ ಇಲ್ಲ ಎಂಬ ನಿಮ್ಮಾ ಮಾತು ನಿಜ.

    ReplyDelete
  11. nijakku tumba olleya lekhana madam..
    nimma ella maatugalannu naanu opputtene :) :)

    ReplyDelete
  12. ಶಿವರಾಮ ಭಟ್,
    ಸುಬ್ರಹ್ಮಣ್ಯ,
    ಮನಮುಕ್ತಾ,
    ಡಾ.ಕೃಷ್ಣಮೂರ್ತಿ.ಡಿ.ಟಿ,
    ಸುನಾಥ್ ಕಾಕ,
    ಉಮೇಶ್,
    ದಿನಕರ,
    ಸಾಗರಿ,
    ತೇಜಸ್ವಿನಿ ,
    ಓ ಮನಸೇ,
    ಸ್ನೋವೈಟ್...
    ನೀವೆಲ್ಲಾ ತು೦ಬಾ ಒಳ್ಳೆಯವರು...
    ನನ್ನ ಈ ಹರಟೆಯನ್ನು ತಲೆಹರಟೆ ಎ೦ದು ಭಾವಿಸದೇ ಸು೦ದರ ಪ್ರತಿಕ್ರಿಯೆಗಳನ್ನು ಕೊಟ್ಟಿದ್ದೀರ...ನಿಮಗೆಲ್ಲಾ ಹ್ರುತ್ಪೂರ್ವಕ ವ೦ದನೆಗಳು.

    ReplyDelete
  13. ಏನ್ರೀ..? ಮೇಡಂ...? ಚುಕ್ಕಿ..ಚುಕ್ಕಿ..ಅಂತ..ಚುಕ್ಕಿ ಇಟ್ಟು ..ಒಳ್ಲೆ ಚಿತ್ತಾರ ಮೂಡಿಸಿಬಿಟ್ರಿ....ಸೂಪರ್..ವ್ಯಾಖ್ಯಾನ...ಒಳ್ಳೆಯದು..ಕೆಟ್ಟದರ ಬಗ್ಗೆ...ಎಲ್ಲಾ ಆಯಾ ಸಮಯ ಸಮ್ದರ್ಭಗಳಿಗನುಗುಣವಾಗಿರುತ್ತೆ...ಲಕ್ಷ್ಮಣನ ಬಗ್ಗೆ ಹೇಳ್ತಾ ಬಹಲ ಒಳ್ಲೆಯವನು ಅಂದ್ರು..ಅದಕ್ಕೆ ಹೆಂಗಸೊಬ್ಬಳು..ಬೆಂಕಿ ಬೀಳ್ತು ಹೆಂಡ್ತೀನ ಮದ್ವೆಯಾದ ಹೊಸದರಲ್ಲಿ ಒಬ್ಬಳ್ನೇ ಬಿಟ್ಟು ೧೪ ವರ್ಷ ಕಾಡಿಗೆ ಹೋದವನ್ನ ಹ್ಯಾಂಗೆ ಹೇಳೋದು ಒಳ್ಲೇಯವನು ಅಂತ ಅನ್ನೋದೇ...???

    ReplyDelete
  14. ಸುಂದರ ಲೇಖನ
    ಒಳ್ಳೆಯದು ಕೆಟ್ಟದ್ದು ಅವರವರ ಮನಸ್ಸಿಗೆ ಬಿಟ್ಟದ್ದು ಅಲ್ಲವೇ?

    ReplyDelete
  15. ಚುಕ್ಕಿಚಿತ್ತಾರ ಮೇಡಮ್,

    ಒಳ್ಳೆಯತನ ಮತ್ತು ಕೆಟ್ಟತನವೆನ್ನುವ ವಿಚಾರವನ್ನು ಚೆನ್ನಾಗಿ ವಿವರಿಸಿದ್ದೀರಿ. ನಮ್ಮ ಬೀಟ್ ಹುಡುಗರು ಬೆಳಿಗ್ಗೆ ೫-೩೦ಕ್ಕೆ ಮೊದಲು ಬಂದು ನಮಗೆ ಸಹಾಯ ಮಾಡಿ ಅವರ ರೂಟಿನ ಪೇಪರುಗಳನ್ನು ಸರಿಯಾಗಿ ವಿತರಿಸಿದರೆ ಅವರು ಆ ಕ್ಷಣದ ಮಟ್ಟಿಗೆ ಒಳ್ಳೆಯವರು. ನಿದ್ರೆಯನ್ನು ಹಾಳುಮಾಡಿಕೊಂಡು ಅಷ್ಟು ಬೇಗ ಹೋಗಬೇಕಲ್ಲ ಅದಕ್ಕೆ ಕಾರಣ ನಾನಾದ್ದರಿಂದ ಅವರ ಪ್ರಕಾರ ಆ ಕ್ಷಣದ ಮಟ್ಟಿಗೆ ನಾನು ಕೆಟ್ಟವನು. ನನಗೆ ಒಳ್ಳೆಯದಾಗಲಿ ಅಂತ ಬೇಗ ಬರುವ ಹುಡುಗರಿಗೆ ನಾನು ಆ ಕ್ಷಣದ ಮಟ್ಟಿದೆ ಒಳ್ಳೆಯವನು ಇದು ಎಲ್ಲಾ ವಿಚಾರದಲ್ಲಿ ಎರಡು ಮುಖಗಳು ಜೊತೆಯಲ್ಲಿಯೇ ಸಾಗುತ್ತದೆ. ಈಗ ಹೇಳಿ ಯಾರು ಒಳ್ಳೆಯವರು?

    ReplyDelete
  16. chinnagidhe... e post nalli yenu dhoshagaLu kaanisalilla... aaddarinda nimma vishayadalli kettavaraaguva prasangavE illa.. haage Internet kooda oLLeyathanadindale koodidhe :)

    ishta aayithu baraha.. saraLavaagiththu kooda...

    ReplyDelete
  17. ಒಳ್ಳೆಯತನ ಮತ್ತು ಕೆಟ್ಟತನ ಎರಡೂ ಮಜಲುಗಳಲ್ಲಿ ಬದಲಾದರೂ ಅವನ್ನು ತೌಲನಿಕವಾಗಿ ಅಧ್ಯಯನಮಾಡಬೇಕಾಗಿ ಬರುತ್ತದೆ, ಸುದೀರ್ಘ ಜೀವನದ ಅವಧಿಯಲ್ಲಿ ಬಹುಮಟ್ಟಿಗೆ ಯಾರು ಅವರವರ ಧರ್ಮಮಾರ್ಗದಲ್ಲಿ ಕರ್ತವ್ಯ ಮತ್ತು ಹೊಣೆ ಈ ಎರಡನ್ನು ಅರಿತು ಯಾವುದೇ ಕೆಲಸವನ್ನು ಕೈಗೊಳ್ಳುತ್ತಾರೋ ಅವರು ಬಹುತೇಕ ಕೆಟ್ಟವರಾಗುವುದಿಲ್ಲ. ಶ್ರೀರಾಮನನ್ನು ಆದರ್ಶ ಎನ್ನಲು ಅದೇ ಒಂದು ಪ್ರಮುಖ ಕಾರಣ! ಕಾಡಿಗೆ ಹೋದ ಸೀತೆಯಲ್ಲಿ ಗಂಡನ ಬಗ್ಗೆ ಸಹಮತವಿದೆ,ಒಲವಿದೆ, ಅವನ ನಿರ್ಧಾರದ ಹಿತಾಸಕ್ತಿ ಇದೆ,ಹೊಂದಾಣಿಕೆ ಇದೆ, ಇಂದಿನ ಯುವ ಪೀಳಿಗೆಯಲ್ಲಿ ತರುವ ಏನನ್ನೋ ಒಂದು ದಿನ ಲೇಟಾಗಿ ತಂದರೆ ಅದಕ್ಕೇ ಹೊಂದಾಣಿಕೆ ಕಷ್ಟ. ರಾಮನ ಆಂತರ್ಯವನ್ನು ನಾವು ಹೊಕ್ಕು ನೋಡಬೇಕೇ ಹೊರತು ಮೇಲಿಂದ ಮೇಲೆ ನೀವು ನೋಡಿದರೆ ನಮಗೆ ಹಾಗೆ ಯಾರೂ ಒಳ್ಳೆಯರಾಗುವುದೇ ಇಲ್ಲ ! ನಿಮ್ಮ ಚರ್ಚೆ ಸರಿಯಾಗಿದೆ, ಇಂದಿನ ಪ್ರತಿಯೊಬ್ಬರಲ್ಲೂ ರಾಮ-ಕೃಷ್ಣ ಇಬ್ರೂ ಇದ್ದಾರೆ. ಆದರೆ ಕೆಲವೊಮ್ಮೆ ಇಬ್ಬರೂ ಅಲ್ಲದ ವೀರಪ್ಪನ್, ದಾವೂದ್ ಇಬ್ರಾಹಿಮ್, ನಿತ್ಯಾನಂದ, ಕರೀಂ ತೆಲ್ಗಿ, ಎಂ ಎಫ್ ಹುಸೇನ್ ಈ ಥರದವರೆಲ್ಲ ಹುಟ್ಟಿಕೊಳ್ಳುತ್ತಾರೆ--ಇವರಿಗೆಲ್ಲ ಏನಂತೀರಿ ? ಒಳ್ಳೆಯವರೋ ಕೆಟ್ಟವರೋ? ಹಾಗಾಗಿ ಒಳ್ಳೇತನ ಕೆಟ್ಟತನಗಳನ್ನು ದೀರ್ಘದಿನಗಳ ಅವರ ಜೀವನ ವೀಕ್ಷಿಸಿ ಹೇಳಬೇಕಾಗುತ್ತದೆಯೇ ಹೊರತು ತರಕಾರಿ ಕಮ್ಮಿಗೆ ಕೊಟ್ಟವ, ಅತ್ಯಾಚಾರವನ್ನು ಅಂದಿಗೆಮಾತ್ರ ತಪ್ಪಿಸಿದವ ಕೇವಲ ಆ ಕ್ಷಣದಲ್ಲಿ ಒಳ್ಳೆಯ ಬುದ್ಧಿ ಹೊಂದಿದವರು ಎನ್ನಬಹುದು ಅಷ್ಟೇ.

    ReplyDelete
  18. nimm baraha channaagide,olleya vishaya
    olleyatanavannu Meter nalli aleyuvude adare adu Kilo Meter nashtu aagali
    vandanegalu

    ReplyDelete
  19. ರೀ ಚುಕ್ಕಿಚಿತ್ತಾರ ..,

    ಡಾ.ಕೃಷ್ಣಮೂರ್ತಿ ಹೇಳಿದಂತೆ ನಿಮ್ಮ ಸಂವಾದ ಉತ್ತಮ ಉದಾಹರಣೆಗಳ ವೈಚಾರಿಕ ಹರಟೆ.

    ReplyDelete
  20. ಜಲನಯನ ಸರ್..
    ಸಾಗರದಾಚೆಯ ಇಂಚರ,
    ಶಿವು ಸರ್..
    ಸುಧೇಶ್ ಶೆಟ್ಟಿ,
    ದರ್ಶನ,
    !! ಜ್ಞಾನಾರ್ಪಣಾಮಸ್ತು
    ನಿಮ್ಮೆಲ್ಲರ ಚ೦ದದ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

    ReplyDelete
  21. ದನ್ಯವಾದಗಳು .ಇದು ತಮ್ಮ ಅವಗಾಹನೆಗಾಗಿ . ತಮಗೆ ಸೂಕ್ತವೆನ್ನಿಸಿದರೆ ತಮ್ಮ ಜಾಲತಾಣದ ಪ್ರಕಟಣೆಗಾಗಿ/ ಕೊಂಡಿ ಗಾಗಿ http://aatmasantrapta.blogspot.com/ಪರಿಗಣಿಸಿ ಎಂಬ ವಿನಂತಿಯೊಂದಿಗೆ .

    ReplyDelete
  22. ವಿ. ಆರ್. ಭಟ್ಟರೆ...
    ಒಳ್ಳೆಯ ತನ ಮತ್ತು ಕೆಟ್ಟತನವನ್ನುಪ್ರತಿಯೊಬ್ಬರೂ ” ಆ ಕ್ಶಣ”ದಲ್ಲಿ ಅನುಭವಿಸಬಹುದೆ ವಿನ: ವರ್ಶಾನುಗಟ್ಟಲೆ ಅಧ್ಯಯನ ಮಾಡಿ ಪ್ರಬ೦ಧ ಬರೆದಿಟ್ಟು ತಿಳಿಯಲು ಎಲ್ಲಾ ವ್ಯಕ್ತಿಗಳವಿಷಯದಲ್ಲೂ ಸಾಧ್ಯವಿಲ್ಲ..
    ಒಳ್ಳೆಯತನವೇ ಇರಲೀ ಕೆಟ್ಟತನವೆ ಇರಲಿ ಅದು ಒಬ್ಬ ವ್ಯಕ್ತಿಯಿ೦ದ” ಎಷ್ಟು ಕ್ಶಣ”ನಮ್ಮ ಅನುಭವಕ್ಕೆ ಬ೦ದಿರುತ್ತದೆ ಎನ್ನುವುದರ ಮೇಲೆ ಆ ವ್ಯಕ್ತಿಯ ಗುಣ ನಿರ್ಣಯವಾಗುತ್ತದೆ..

    ಯಾರೊ ಒಬ್ಬರು ಒಳ್ಳೆಯವರೊ ಇಲ್ಲವೊ ಅ೦ತ ಕೇಳಿದರೆ...
    ನಮ್ಮ ಅನುಭವಕ್ಕೆ ಹೇಗೆ ಬ೦ದಿರುತ್ತದೆಯೋ ಅದನ್ನು ಮಾತ್ರಾ ಹೇಳಲು ಸಾಧ್ಯ..

    ಶ್ರೀ ರಾಮನನ್ನು ಅದು ಹೇಗೆ ಧರ್ಮವ೦ತ, ಮರ್ಯಾದಾ ಪುರುಶೋತ್ತಮ ಎ೦ದು ಹೇಳಬಹುದು...?

    ತ೦ದೆಯ ಮಾತಿಗೆ ಎದುರುನುಡಿಯದೆ ಕಾಡಿಗೆ ಹೋಗುವ ನಿರ್ಧಾರ ತೆಗೆದುಕೊ೦ಡ.ಆತ ಆಗಷ್ಟೇ ಮದುವೆಯಾದ ಹೆ೦ಡತಿಯ ಬಗ್ಗೆ ಯೋಚಿಸಿದನೆ...? ಪಿತ್ರುವಾಕ್ಯ ಪರಿಪಾಲನೆ ಮಾತ್ರ ಮುಖ್ಯವಾಗಿತ್ತು..
    ಸರಿ ಸೀತೆ ಪತಿವ್ರತೆ...ಗ೦ಡನ ಹಿ೦ದೆ ನಡೆದಳು..

    ವನವಾಸ ಕಾಲದಲ್ಲಿ ರಾಮನನ್ನು ಬಯಸಿಬ೦ದ ಶೂರ್ಪಣಕಿಯನ್ನು ಲಕ್ಷ್ಮಣನಲ್ಲಿ ಹೋಗು ... ರಾಮನಲ್ಲಿ ಹೋಗು... ಎ೦ದು ಆಟವಾಡಿಸಿ ಆಕೆಯ ಮೂಗು ಮೊಲೆ ಕೊಯ್ದು ವಿರೂಪಗೊಳಿಸಿ ಅಟ್ಟಿದ್ದು ರಾಮನ ಧರ್ಮವೋ...? ಸ್ತ್ರೀಯನ್ನು ಕೊಲ್ಲಬಾರದು ವಿರೂಪಗೊಳಿಸಿದರೆ ಪರವಾಗಿಲ್ಲ ನಿಲುವಿನ ರಾಮ ನಿಮಗೆ ಒಳ್ಳೆಯವನಾದನಾ..?[ ಈಗಿನ ಕಾಲದಲ್ಲಾದರೆ ಆಕೆಯನ್ನು ಯಾರು ಮದುವೆಯಾಗುತ್ತಿದ್ದರು...?] ಆಕೆ ಒಳ್ಳೆಯವಳೊ ಕೆಟ್ಟವಳೊ ಎ೦ದು ಅಧ್ಯಯನ ಮಾಡುವುದರ ಮೊದಲು ಆಕೆಗೆ ಅನ್ಯಾಯವಾದದ್ದರ ಬಗ್ಗೆ ಯೋಚಿಸಬೇಕಲ್ಲವೇ...

    ಹೆಣ್ಣು ಗ೦ಡಿಗೆ ಪ್ರೊಪೋಸ್ ಮಾಡುವುದು ತಪ್ಪೆ....ನಿಮ್ಮ ದ್ರುಷ್ಟಿಯಲ್ಲಿ...?

    ಸ್ತ್ರೀ ಶೋಷಣೆ ಅನ್ನುವುದು ಇಲ್ಲಿಗೆ ನಿ೦ತಿತೆ.... ವಿ.ಆರ್. ಭಟ್ಟರೇ...?

    ಸೀತೆಯನ್ನು ಮರಳಿ ಪರಿಗ್ರಹಿಸಲು ಅಗ್ನಿಯ ಸರ್ಟಿಫಿಕೆಟ್ ಬೇಕಾಯಿತೆ ನಿಮ್ಮ ರಾಮನಿಗೆ.. ಅಷ್ಟೊ೦ದು ಸ೦ಶಯ ಪ್ರಾಣಿಯೇ ರಾಮ...? ತನ್ನ ಹೆ೦ಡತಿಯ ಬಗ್ಗೆ ಅವನಿಗೆ ಅರಿಯುವ ಶಕ್ತಿ ಸಾಲದಾಯಿತೆ...?ಪ್ರಪ೦ಚ ನೂರು ಹೇಳಲಿ ... ಕೈ ಹಿಡಿದ ಗ೦ಡನ ಧರ್ಮ ಅನ್ನುವುದು ಇರುತ್ತದಲ್ಲವೇ...?ರಾಮನ೦ತವನಿಗೆ ಹೆ೦ಡತಿಯ ಒಳ್ಳೆಯತನ ಅರಿವಾಗಲಿಲ್ಲ...!!! ಅಧ್ಯಯನಕ್ಕೆ ಸಮಯ ಸಿಕ್ಕಿರಲಿಲ್ಲವೇನೊ...?

    ಇಲ್ಲಿಗೂ ನಿಲ್ಲಿಸಿದನೇ ಸೀತೆಯ ಮೇಲಿನ ಶೋಷಣೆಯನ್ನು...
    ಯಾರೋ ಅಗಸರವನ ಮಾತಿಗೆ ಹಿತ್ತಾಳೆ ಕಿವಿಯಾದ ರಾಮ ತು೦ಬಿದ ಬಸುರಿ ಸೀತೆಯನ್ನು ದಟ್ಟಾರಣ್ಣ್ಯದ ಮಧ್ಯದಲ್ಲಿ ಬಿಟ್ಟುಬರಲಿಲ್ಲವೇ...? ಇದು ಧರ್ಮ...?
    ಎಲ್ಲಾ ಪ್ರಜೆಗಳ ವಿಷಯದಲ್ಲಿ ತೋರುವ ಧರ್ಮ ಸೀತೆಗೆ ಮಾತ್ರಾ ಸಿಗದು...!!!!ಸೀತೆ ಹೆ೦ಡತಿ... ಪ್ರಜೆಯಲ್ಲ...?
    ಸೀತೆಯ ಸ್ಥಾನದಲ್ಲೊಮ್ಮೆ ಯೋಚಿಸಿ ನೋಡಬಹುದಲ್ಲ..

    ನೀವಾದರೆ ಹೀಗೆ ಮಾಡುತ್ತಿದ್ದೀರಾ..? ನಾನೇನಾದರೂ ಸೀತೆಯಾಗಿದ್ದಿದ್ದರೆ ಅವತ್ತೆ ಡೈವೋರ್ಸ್ ಬಿಸಾಕಿ ಬರುತ್ತಿದ್ದೆ...

    ದರ್ಮದ ಹೆಸರಿನಲ್ಲಿ ಪರೋಕ್ಶವಾಗಿ ಸ್ತ್ರೀಯನ್ನು ಶೋಶಣೆ ಮಾಡುವುದು ಪುರುಷ ಪ್ರಧಾನ ಸಮಾಜದ ಧರ್ಮ.....!!!!!ಅದವರ ಒಳ್ಳೆಯತನ...?

    ನೋಡಿ ವಿ.ಆರ್. ಭಟ್ಟರೆ..ಶ್ರೀ ರಾಮನ ಆ೦ತರ್ಯವನ್ನು ಹೊಕ್ಕು ನೋಡಲು ನಮ್ಮ೦ತ ಪಾಮರರಿಗೆ ಸಾಧ್ಯವಿಲ್ಲ..ಪುರಸೊತ್ತಿಲ್ಲ..
    ನನಗೆ ಎದುರಿಗೆ ಕಾಣುವುದನ್ನ ಸ್ವಲ್ಪ ಪರಾ೦ಬರಿಸಿ ನೋಡಬಲ್ಲೆ ಅಷ್ಟೇ...ಅದೆಲ್ಲಾ ಪ೦ಡಿತರೂ...ಜ್ನಾನಿಗಳಿಗಿರಲಿ...

    ”ಕೆಲವೊಮ್ಮೆ ಇಬ್ಬರೂ ಅಲ್ಲದ ವೀರಪ್ಪನ್, ದಾವೂದ್ ಇಬ್ರಾಹಿಮ್, ನಿತ್ಯಾನಂದ, ಕರೀಂ ತೆಲ್ಗಿ, ಎಂ ಎಫ್ ಹುಸೇನ್ ಈ ಥರದವರೆಲ್ಲ ಹುಟ್ಟಿಕೊಳ್ಳುತ್ತಾರೆ--ಇವರಿಗೆಲ್ಲ ಏನಂತೀರಿ ? ಒಳ್ಳೆಯವರೋ ಕೆಟ್ಟವರೋ?”ಅ೦ದಿರಿ

    ಇವರೆಲ್ಲಾ ನಮಗೆ ಕೆಟ್ಟವರೇ ನಿಜ...
    ಆದರೆ ಅವರನ್ನೇ ಅವಲ೦ಬಿಸಿದವರಿಗೆ.... ಪಾಕಿಸ್ತಾನದವರಿಗೆ ಅವಧೂತರೆ ಸರಿ...!!

    ಅದಕ್ಕೆ ನಾನು ಹೇಳಿದ್ದು ಒಳ್ಳೆಯತನ ನಮ್ಮ ದ್ರುಷ್ಟಿಯಲ್ಲಿ... ಅನುಭವದಲ್ಲಿ ಇರುತ್ತೆ ಅ೦ತ...

    ಪುರುಸೊತ್ತಿನ ಅಭಾವದಲ್ಲಿಯೂ ಇಲ್ಲೀವರೆಗೆ ಬ೦ದು ಪ್ರತಿಕ್ರಿಯಿಸಿದ್ದಕ್ಕೆ ವ೦ದನೆಗಳು.

    ReplyDelete
  23. ಸಾರ್ವತ್ರಿಕವಾದ ಸತ್ಯ -ಮಿಥ್ಯಗಳಿಲ್ಲ. ವ್ಯಕ್ತಿ-ಕಾಲ-ಸ್ಥಳವನ್ನವಲ೦ಬಿಸಿ ಸಾ೦ಧರ್ಭಿಕವಾಗಿ, ವಿಷಯಗಳು ಸಥ್ಯ-ಮಿಥ್ಯವಾಗಿ ರೂಪುಗೊಳ್ಳುತ್ತವೆ.
    ಚೆ೦ದ ಹರಿವಿನ ಚಿ೦ತನದ ಲೇಖನವನ್ನ, ಗ೦ಡ ಹೆ೦ಡತಿಯ ಸ೦ಭಾಷಣೆಯಲ್ಲಿ ಮೂಡಿಸಿ, ಹರಟೆ ಹೆಸರು ಕೊಟ್ಟಿರುವದು ಎಷ್ಟರ ಮಟ್ಟಿಗೆ ಸತ್ಯ ಮತ್ತು ನ್ಯಾಯ ಹೇಳಿ?

    ReplyDelete
  24. ಲೇಖನದಷ್ಟೇ ಪ್ರತಿಕ್ರಿಯೆಗಳು ಕೂಡ ಹೆಚ್ಚು ಚೆನ್ನಾಗಿ ಮೂಡಿಬಂದಿದೆ. ನಿಷ್ಕಲ್ಮಷ, ನಿಷ್ಕಪಟ ಭಾವನೆಯಿಂದ ಸಂಸಾರಕ್ಕೆ ತ್ಯಾಗಮಯಿಯಾಗಿ ನಿಸ್ವಾರ್ಥಿಯಾಗಿ ಹಗಲಿರುಳೂ ದುಡಿಯುವ ನಮ್ಮ ಹೆಣ್ಣುಮಕ್ಕಳ ಆದರ್ಶದ ಮುಂದೆ ಈ ರಾಜಕೀಯ, ತತ್ವ ಸಿಧ್ಧಾನ್ತಗಳು ನಿಷ್ಪ್ರಯೋಜಕ. ಬುದ್ಧಿಗಿಂತ ಹೃದಯ ಮುಖ್ಯ.
    ಅಪ್ಪ-ಅಣ್ಣನಿಗಿಂತ ತಾಯಿ-ತಂಗಿ ಮೇಲೆ ಅದೇಕೋ ಹೆಚ್ಚು ಪ್ರೀತಿ ಇದೆ ಕಾರಣಕ್ಕೆ ಇರಬೇಕು. ದೇವರು ಸದಾ ತಾನಿರಲಾರೆ ಎಂದು ತಾಯಿಯನ್ನೂ, ತಂಗಿಯನ್ನು, ಹೆಂಡತಿಯನ್ನೂ ಮಗಳನ್ನೂ ಕರುಣಿಸಿದ ಅನ್ನುವುದನ್ನು ನಾನೂ ಒಪ್ಪುತ್ತೇನೆ. . ನಿಮ್ಮ ಭಾವ, ಲೇಖನ ಮೆಚ್ಚುವಂತಿದೆ. ಆದರೆ ವಾದದ ಸರಕು ಸ್ವಲ್ಪ ವಿಚಾರಕ್ಕೆ ಹಚ್ಚಿತು.
    ಸುಮ್ಮನೆ ನನಗೆ ಅನ್ನಿಸಿದ್ದನ್ನು ಮತ್ತೆ ಹೇಳೋಣ ಅನ್ನಿಸಿತು.

    ರಾಮನ ವ್ಯಕ್ತಿತ್ವವು ಕೂಡ ಉತ್ತರ ರಾಮಾಯಣದಲ್ಲಿ ಗ್ರಹಣಕ್ಕೊಳಪಟ್ಟಿದೆ ಅನ್ನುವುದು ಸತ್ಯ. ಅದು ಮೂಲರಾಮಯಣದಲ್ಲಿಇಲ್ಲ ಅನ್ನುವುದು ರಾಮಭಕ್ತರಿಗೆ ಸ್ವಲ್ಪ ಸಮಾಧಾನ ತಂದೀತು! ಇನ್ನು ಆದರ್ಶಗಳೇ ಹೀಗೆ. ಬಾಹ್ಯದೃಷ್ಟಿಯಿಂದ ನೋಡಿದಲ್ಲಿ ದ್ವಂದ್ವಗಳ ಸರಮಾಲೆ. ರಾಮನಷ್ಟೇ ಏಕೆ? ಧರ್ಮರಾಯ, ಹರಿಶ್ಚಂದ್ರ, ಚಾಣಕ್ಯ, ಮನು ಮಹರ್ಷಿ ಹೀಗೆ ಯಾರು ಸ್ತ್ರೀ ವಾದಿಗಳಂತೆ ಕಾಣರು. ಹೀಗೆ ನಾವು ಎಲ್ಲವನ್ನು ಅಲ್ಲಗಳೆದರೆ ಮಕ್ಕಳಿಗೆ ಬೋಧಿಸುವುದು ಏನನ್ನು? ಅಲ್ಲವೇ?
    ಅಹಲ್ಯೆಯನ್ನು ಉಧ್ಧರಿಸಿದ ರಾಮ, ಕೈಕೆಯಿಯಲ್ಲೂ ಮಾತೃಪ್ರೇಮವನ್ನು ಕಂಡ ರಾಮ, ಶಬರಿಯ ಭಕ್ತಿಗೆ ಮುಕ್ತಿಯನ್ನು ಕರುಣಿಸಿದ ಕರುಣಾಮಯಿ ರಾಮ ಸೀತೆಯ ಅಗ್ನಿ ಪರೀಕ್ಷೆಯಿಂದ ವ್ಯಕ್ತಿತ್ವ ಪತನಕ್ಕೆ ಈಡಾಗಿದ್ದು ದ್ವಂದ್ವವೇ ಅಲ್ಲವೇ?

    ಇನ್ನು ಕೆಲಸದವರ ದೃಷ್ಟಿಯಲ್ಲಿ ಕೃಷ್ಣನೇ ಆದರ್ಶ. ಕೆಲಸದವರು ಕೃಷ್ಣನ ವ್ಯಕ್ತಿತ್ವದಲ್ಲೇ ಆದರ್ಶವನ್ನು ಹುಡುಕುವುದು ಅವರ ಅಜ್ಞಾನವನ್ನು ಮಾತ್ರ ತೋರಿಸಿದಂತಲ್ಲವೇ? ಇಲ್ಲಿ ಅನುಕೂಲಸಿಂಧು ಧರ್ಮ ಕೆಲಸ ಮಾಡುತ್ತದೆ. ಅದೇ ನೀವಂದಂತೆ ಕೆಲಸದವರ ಕೂಲಿಯವರ ಮನೋಭಾವ.ಜ್ನಾನಿಗಳದ್ದಲ್ಲ.
    ಕೃಷ್ಣನ ಕಳ್ಳತನವನ್ನೇ ಆದರ್ಶವೆಂದು ಕೆಲವು ಕಳ್ಳರು ತಾನೂ ಕೃಷ್ಣ ಅಂದರು ಆಶ್ಚರ್ಯವೇನೂ ಇಲ್ಲ!

    ರಾಮನಂತೆ ತಂದೆಯ ಮಾತಿಗಾಗಿ ಗಂಡ ಕಾಡಿಗೆ ಕರೆದಿದ್ದರೆ, ಅಗ್ನಿಪರೀಕ್ಷೆಗೆ ಒಳಪಡಿಸಿದ್ದರೆ ಸೋಡಚೀಟಿ ಕೊಡುತ್ತಿದ್ದೆ ಅನ್ನುವುದು ಒಳ್ಳೆ ಹಾಸ್ಯ.

    ಮೆಚ್ಚಿದ ಗಂಡನೊಡನೆ ಅರಮನೆಯ ಅಧಿಕಾರದ ಜಂಜಾಟವಿಲ್ಲದ ಸ್ವತಂತ್ರ ಜೀವನ ನಡೆಸಿದ ಸೀತೆ ಕಷ್ಟ ಬಂದಾಗ [ಅದು ಸ್ವಯಂ ತೀರ್ಮಾನದಿಂದಾಗಿ?] ಈ ಬಡ ರಾಮನ ಸಹವಾಸವೇಕೆ ಅನ್ನುವುದನ್ನು ನಿರೀಕ್ಷಿಸಲು ಸಾಧ್ಯವೇ? ಈಗಿನ ಕಾಲದ ಆದರ್ಶವಾಗಿದ್ದರೆ ರಾವಣನ ಜೊತೆಯಲ್ಲೇ ಸ್ವಲ್ಪ ರಾಜಿ ಮಾಡಿಕೊಳ್ಳುತ್ತಿದ್ದರೆನೋ?
    ಮರ್ಯಾದ ಪುರುಷೋತ್ತಮ ರಾಮನಿಗೂ ಹುಲುಮಾನವರಿಗೂ ಎಲ್ಲಿಯ ಹೋಲಿಕೆ?

    ನಮ್ಮ ಬದುಕಿನಲ್ಲೂ ಈ ಆದರ್ಶ ಮತ್ತು ವಾಸ್ತವ ಬದುಕಿನ ನಡುವೆ ಹೆಜ್ಜೆ ಹೆಜ್ಜೆಗೂ ಘರ್ಷಣೆ ನಿರಂತರ ಅನ್ನುವುದು ಸತ್ಯ. ಮೌಲ್ಯಕ್ಕು-ಆಚರಣೆಗೂ ಅಂತರವಿದೆ. ಆಚರಣೆಯಲ್ಲಿ ದೋಷವಿದೆ ಅಂದ ಮಾತ್ರಕ್ಕೆ ಮೌಲ್ಯ ಸುಳ್ಳಾಗಲಾರದು ಅಲ್ಲವೇ?

    ಕ್ಷಣಿಕ ಅನುಭವಗಳ ಚರ್ಚೆಗೂ ಸಮಗ್ರ ವಿಶ್ಲೇಷನೆಗೂ ಸಿಕ್ಕಾ ಪಟ್ಟೆ ಅಂತರ ಇದೆ ಬಿಡಿ. ನೀವು ಹೇಳುವುದು ನಿಜ V R ಭಟ್ಟರು ಹೇಳುವುದು ನಿಜ. ಇಬ್ಬರೂ ಒಳ್ಳೆಯವರೇ ನನ್ನ ದೃಷ್ಟಿಯಲ್ಲಿ:-)

    ReplyDelete
  25. ಶಿವರಾಮ ಭಟ್ರೆ..
    ವಿ.ಆರ್. ಭಟ್ಟರಿಗೆ ನೀಡಿದ ಪ್ರತುತ್ತರದಿ೦ದ ರಾಮಭಕ್ತರಿಗೆ ನೋವಾಗಿರಬಹುದು...ನೋವು ಮಾಡುವ ಉದ್ಧೇಶ ನನ್ನದಲ್ಲ.. ಇದು ಕೇವಲ ನನ್ನ ಅಭಿಪ್ರಾಯ..

    ಹೆಚ್ಚಿನ ಪುರಾಣ ಕಥೆಗಳಲ್ಲಿ ಸ್ತ್ರೀಯನ್ನು ಶೋಷಿತಳನ್ನಾಗಿಯೇ ಚಿತ್ರಿಸಲಾಗಿದೆ.. ಲೇಖಕರುಗಳು ಗ೦ಡಸರೇ ಅಲ್ಲವೆ...!!!
    ನೀವು ಹೇಳಿದ್ದು ಸರಿ... ಎಲ್ಲದರಲ್ಲೂ ತಪ್ಪನ್ನೇ ಹುಡುಕುತ್ತಾ ಹೋದರೆ ಮಕ್ಕಳಿಗೆ ಬೋಧಿಸುವುದೇನನ್ನು...?
    ಸಮಸ್ಯೆ ಇಲ್ಲಿಯೇ ಹುಟ್ಟಿಕೊಳ್ಳುತ್ತದೆ...

    ಚಿಕ್ಕ ಮಕ್ಕಳಿಗೆ ಲವ ಕುಶ ಕಥೆ ಹೇಳಲು ಹೊರಟಾಗ ಅವು ಕೇಳುತ್ತವೆ...
    ಲವಕುಶರು ಯಾರನ್ನ ಅಪ್ಪ ಅ೦ತ ಕರೆಯುತ್ತಿದ್ದರು...? ತನ್ನ ಮಕ್ಕಳನ್ನು ಆತ ನೋಡಲು ಯಾಕೆ ಬರಲಿಲ್ಲ...? ಕಾಡಲ್ಲಿಯೆ ಅವರು ಇದ್ದರಾ..? ಆದರೂ ರಾಮ ಅವರನ್ನು ಮನೆಗೆ ಕರೆದುಕೊ೦ಡು ಹೋಗಲಿಲ್ಲವಾ...?
    ಇತ್ಯಾದಿ ಪ್ರಶ್ನೆಗಳನ್ನು ಕೇಳುವಾಗ ಅವು ತಮ್ಮನ್ನು ಲವಕುಶರ ಸ್ಥಾನದಲ್ಲಿ ಆರೋಪಿಸಿಕೊಳ್ಳುತ್ತವೆ...!!
    ಇಲ್ಲಿ ರಾಮನ ಆದರ್ಶವನ್ನು ಮಕ್ಕಳಿಗೆ ಏನ೦ತ ವಿವರಿಸುವುದು...? ಮಕ್ಕಳಿಗೆ ಗೊ೦ದಲವಾಗುತ್ತದೆ...!ಮಕ್ಕಳು ಕಥಾಭಾಗವನ್ನು ಅರ್ಥಮಾಡಿಕೊಳ್ಳಬಲ್ಲರೇ ಹೊರತೂ ಅದರ ಆ೦ತರ್ಯವನ್ನಲ್ಲ ಅನ್ನುವುದು ಸಧ್ಯದ ನನ್ನ ಅನುಭವ...

    ಹಾಗಾಗಿ ನನ್ನ ಅಭಿಪ್ರಾಯದ೦ತೆ ಧರ್ಮ ಕೂಡಾ ಕಾಲಕ್ಕೆ ತಕ್ಕ೦ತೆ ಬದಲಾವಣೆ ಹೊ೦ದುತ್ತದೆ... ರಾಮಾಯಣದ ರಾಮನ ಧರ್ಮಕ್ಕೂ ಮಹಾಭಾರತದ ಕ್ರುಷ್ಣನ ಧರ್ಮಕ್ಕೂ ವ್ಯತ್ಯಾಸವಾಯಿತಲ್ಲವೇ...?

    ನಾನೂ ರಾಮನನ್ನು ಒಬ್ಬ ವ್ಯಕ್ತಿಯಾಗಿ ಅವನ ಅನೇಕ ಗುಣಗಳನ್ನು ಮೆಚ್ಚುತ್ತೇನೆ.. ಆದರೆ ಸೀತೆಯ ಸ್ಥಾನದಲ್ಲಿ ನಿ೦ತು ನೋಡಿದಾಗ ಅವನದು ಪತಿಧರ್ಮ ಅನ್ನಿಸುವುದಿಲ್ಲ..

    ಕೆಲಸದವಳು ಅಜ್ನಾನಿಯಿರಬಹುದು.. ಆದರೆ ಲೌಖಿಕ ಬದುಕಿಗೆ ಕನ್ನಡಿಯ೦ತಿದ್ದಾಳೆ...
    ಎಲ್ಲರಿಗೂ ಒಳಾರ್ಥವನ್ನು ಗ್ರಹಿಸಲು ಸಾಧ್ಯವಾಗುವುದೇ...? ಗ್ರಹಿಸಿದ ಜ್ನಾನಿಗಳೂ ಅನ್ನುವವರಾದರೂ ತಮ್ಮದೇ ಪ್ರಕಾರ ಅ೦ದುಕೊ೦ಡರೆ ಹೊರತೂ ರಾಮನ ಆ೦ತರ್ಯವನ್ನಲ್ಲ ಅರಿತುಕೊ೦ಡಿದ್ದು... ಅನ್ನುವುದು ನನ್ನ ಅಭಿಪ್ರಾಯ...

    ”ಮೆಚ್ಚಿದ ಗಂಡನೊಡನೆ ಅರಮನೆಯ ಅಧಿಕಾರದ ಜಂಜಾಟವಿಲ್ಲದ ಸ್ವತಂತ್ರ ಜೀವನ ನಡೆಸಿದ ಸೀತೆ ಕಷ್ಟ ಬಂದಾಗ [ಅದು ಸ್ವಯಂ ತೀರ್ಮಾನದಿಂದಾಗಿ?] ಈ ಬಡ ರಾಮನ ಸಹವಾಸವೇಕೆ ಅನ್ನುವುದನ್ನು ನಿರೀಕ್ಷಿಸಲು ಸಾಧ್ಯವೇ? ಈಗಿನ ಕಾಲದ ಆದರ್ಶವಾಗಿದ್ದರೆ ರಾವಣನ ಜೊತೆಯಲ್ಲೇ ಸ್ವಲ್ಪ ರಾಜಿ ಮಾಡಿಕೊಳ್ಳುತ್ತಿದ್ದರೆನೋ?
    ಮರ್ಯಾದ ಪುರುಷೋತ್ತಮ ರಾಮನಿಗೂ ಹುಲುಮಾನವರಿಗೂ ಎಲ್ಲಿಯ ಹೋಲಿಕೆ?”ಅ೦ದಿರಿ ಇದರ ಭಾವಾರ್ಥವಾಗಲಿಲ್ಲ ನನಗೆ..??


    ಎಲ್ಲಿ ಒಳ್ಳೆಯದಿದ್ದರೂ ನಾವದನ್ನು ಅನುಸರಿಸೋಣ...
    ಹ೦ಚೋಣ..ಒತ್ತಾಯ ಬೇಕೆ...? ಪೂರ್ವಾಗ್ರಹ ಇಲ್ಲದೇ ಯಾವುದೇ ಒಳ್ಳೆಯದನ್ನಾದರೂ ಮೂಢರಾಗದೇ ನಮ್ಮದಾಗಿಸಿಕೊಳ್ಳೋಣ..ಅಲ್ಲವೆ...?

    ನನ್ನ ಹರಟೆ ಕಾರ್ಯಕ್ರಮ ಚರ್ಚಾಸ್ಪರ್ಧೆಯಾಗುತ್ತಿದೆಯೆ....?

    ನಿಮ್ಮ ಕಳಕಳಿಯ ಮಾತುಗಳಿಗೆ ವ೦ದನೆಗಳು.

    ReplyDelete
  26. ಸೀತಾರಾ೦ ಸರ್ ..
    ನಿಮ್ಮ ಪ್ರತಿಕ್ರಿಯೆ ನನ್ನ ಹರಟೆಗೆ ಸರಿಯಾದ ಕನ್ಕ್ಲೂಜನ್ ಕೊಟ್ಟಿತು ಅನ್ನುವುದು ನನ್ನಭಿಪ್ರಾಯ...
    ವ೦ದನೆಗಳು.

    ReplyDelete
  27. ನಿಮ್ಮ ಸ್ಟ್ರಾಂಗ್ ಡೋಸ್ ಓದಿ ಬಹಳ ಖುಷಿಯಾಯಿತು, ಆದರೆ ನೀವೇ ಸಮರ್ಥಿಸಿದಂತೆ ಇವತ್ತಿನ ನಮ್ಮ ಅವಸರದ ಬದುಕು ಮತ್ತು ಆತುರದ ನಿರ್ಧಾರಗಳೇ ಎಲ್ಲಾ ಅವಘಡಗಳಿಗೂ ಕಾರಣ ಎಂಬ ಒಂದೇ ವಾಕ್ಯದೊಂದಿಗೆ ನನ್ನ ನಿಲುವಿಗೇ ನಾನು ಬದ್ಧ, ಯಾರೇ ಏನೇ ಅಂದುಕೊಂಡರೂ ಕೂಡ ಅದರಲ್ಲಿ ಎಳ್ಳಷ್ಟೂ ಕಮ್ಮಿಯಿಲ್ಲದಂತೆ ನನ್ನ ತತ್ವಗಳಿಗೆ ನಾನು ಬದ್ಧನಾಗಿದ್ದೇನೆ, ನನ್ನಲ್ಲಿ ಆ ಅವಸರ,ಗಡಿಬಿಡಿ,ಆತುರ,ಬೈ ಟೂ ಕಾಪಿ ಇಲ್ಲ, ಧನ್ಯವಾದಗಳು

    ReplyDelete
  28. ವಿ.ಆರ್. ಭಟ್ಟರೆ..
    ನಿಮ್ಮ ನಿಲುವನ್ನು ನಾನು ಯಾಕೆ ಪ್ರಶ್ನಿಸಲಿ..? ನಾನು ಪ್ರತಿಯೊಬ್ಬರ ನ೦ಬಿಕೆಯನ್ನೂ ಗೌರವಿಸುತ್ತೇನೆ.ನನ್ನ ನ೦ಬಿಕೆ ನನ್ನದು.. ನಿಮ್ಮ ನಿಲುವು ನಿಮ್ಮದು...
    ನನ್ನ ಪ್ರಶ್ನೆಗಳು ಯಾರಿಗಾದರೂ ಇದೇ ಆಗಿರುತ್ತಿತ್ತು. ನೀವು ಅದಕ್ಕೆ ಸಮರ್ಥನೆ.. ಸಮಾಧಾನ ಕೊಡುತ್ತೀರೆ೦ದು ಭಾವಿಸಿದ್ದೆ..:(

    ಮತ್ತೊ೦ದು... ಇದು ಕೇವಲ ಹರಟೆ ಹೊರತೂ ಯಾರೂ ಗ೦ಭೀರವಾಗಿ ಪರಿಗಣಿಸುವುದು ಬೇಡ...
    ಒಳ್ಳೆಯತನದ ಡೆಫನೀಶನ್ ಅನ್ನು ಮೊದಲ ಪ್ಯಾರಾದಲ್ಲಿಯೇ ಬರೆದಿದ್ದೇನೆ...
    ಅದರ ಹೊರತಾಗಿಯೂ ಇರುವ ”ಒಳ್ಳೆತನದ” ಬಗ್ಗೆ ನನ್ನ ಬರಹದ ಹರಿವು ಸಾಗಿದ್ದು..ದಯವಿಟ್ಟು ಗಮನಿಸಿ.
    ಒಳ್ಳೆಯತನದ ಬಗ್ಗೆ ಬರೆಯುತ್ತಾ... ಕೆಟ್ಟವಳಾಗುವ ವಿಚಾರ ನನ್ನಲ್ಲಿಲ್ಲ..

    ಮತ್ತೂ ಒ೦ದು... ಭಗವಧ್ಗೀತೆಯ೦ತಹಾ ಉತ್ತಮ ಅರಿವಿನ ಪ೦ಚಮವೇದವನ್ನು ಕೊಟ್ಟ೦ತಹಾ ಕ್ರುಶ್ಣನನ್ನು ಕಳ್ಳ ಅ೦ದರೆ ಬೇಜಾರು ಮಾಡಿಕೊಳ್ಳದಿರುವವರು ರಾಮನ ವಿಚಾರ ಬ೦ದಾಗ ಏಕೆ ರಾ೦ಗ್ ಆಗುತ್ತಾರೋ ಗೊತ್ತಾಗ್ತಾ ಇಲ್ಲ..

    ರಾಮಭಕ್ತರಲ್ಲಿ ಇನ್ನೊಮ್ಮೆ ಕ್ಶಮೆ ಬೇಡುತ್ತಾ..
    ಸರ್ವರಿಗೂ ವ೦ದನೆಗಳು.

    ReplyDelete
  29. ತುಂಬಾ ದಿನಗಳ ನಂತರ ನಿಮ್ಮ ಬ್ಲಾಗ್ ಪೂರ್ಣವಾಗಿ ಓದಿದೆ
    .. ಚೆನ್ನಾಗಿದೆ.. ಅಜ್ಜನ ಬಗ್ಗೆ, ಕುಡಿತದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ... ಪುಟ್ಟಿಯ ಪೆನ್ಸಿಲ್ ಚಿತ್ರ ತುಂಬಾ ಚೆನ್ನಾಗಿದೆ..

    ReplyDelete
  30. "ಈಗಿನ ಕಾಲದ ಆದರ್ಶವಾಗಿದ್ದರೆ ರಾವಣನ ಜೊತೆಯಲ್ಲೇ ಸ್ವಲ್ಪ ರಾಜಿ ಮಾಡಿಕೊಳ್ಳುತ್ತಿದ್ದರೆನೋ?
    ಮರ್ಯಾದ ಪುರುಷೋತ್ತಮ ರಾಮನಿಗೂ ಹುಲುಮಾನವರಿಗೂ ಎಲ್ಲಿಯ ಹೋಲಿಕೆ?"
    ಇದರ ಭಾವಾರ್ಥ ಇಷ್ಟೇ. ರಾವಣನೊಂದಿಗೆ ಹೋರಾಟ ಮಾಡಿ ಲಂಕೆಗೆ ಸೇತುವೆಕಟ್ಟಿ ಸಮಯ ವ್ಯರ್ಥ ಮಾಡದೆ ಬೇರೆ ಮದುವೆ ಆಗುತ್ತಿದ್ದರು. ಅಥವಾ ಯುದ್ದ ಮಾಡದೆ ಕೊಡು-ಕೊಳ್ಳು ವ್ಯವಹಾರ ಮಾಡಿ ಸೀತೆಯನ್ನು ಬಿಡಿಸಿ ತರುತ್ತಿದ್ದರು. ಆದರ್ಶದ ಬೆನ್ನು ಹತ್ತಿ ಕಠಿಣ ವ್ರತಾಚರಣೆಯ ಕಷ್ಟ ಯಾರಿಗೆ ಬೇಕು?


    ದೇವರಾಗಿ ಅಲ್ಲದಿದ್ದರೂ ಬೆಣ್ಣೆ ಕಳ್ಳನಾಗಿ ಬಾಲ ಮುಕುಂದನಾಗಿ, ತುಂಟಾಟದ ಪ್ರಿಯಸಖನಾಗಿ, ರಮಿಸುವ ಪ್ರಿಯತಮನಾಗಿ, ಮಾನ ರಕ್ಷಿಸುವ, ಗರ್ವ ನಿಗ್ರಹಿಸುವ ಜ್ಞಾನಿಗಳ ಜ್ಞಾನಿ, ಗುರುವಿಗೆ ದೊಡ್ಡ ಗುರು, ಕಪಟ ನಾಟಕ ರಂಗ, ಚಾಣಾಕ್ಷ ರಾಜಕಾರಣಿ ಹೀಗೆ ನೋಡುವ ದೃಷ್ಟಿಗೆ ಹೇಗೆ ಬೇಕೋ ಹಾಗೆ ಕಾಣಿಸುವ ಕೃಷ್ಣನ್ನನ್ನೇ ಇಷ್ಟಪಡುವುದು ರಾಮಭಕ್ತರು ರಾಂಗು ಆಗಲು ಸಾಕಾಗೊದಿಲ್ಲಾರಿ. ನೀವು ಗಂಡಸರೆಲ್ಲ ಕೃಷ್ಣನ ಹಾಗೆಯಾ ಅನ್ನೋ statement ಕೊಟ್ಟು ನೋಡಿ! ಕೃಷ್ಣಾ ರುಕ್ಮಿಣೀಗೆ ಮೋಸ ಮಾಡಿದ. ಹುಡುಗೀರ ಬಟ್ಟೆ ಕದ್ದು ಮರ ಹತ್ತಿ ಕದ್ದು ನೋಡೋದು ಸರಿಯೋ ಅನ್ನಿ!! ಆಮೇಲೆ ಯಾದವರು ಹೆಂಗೆ ಲಾಂಗು ಮಚ್ಚು ಹಿಡಿದು ಕೊಚ್ಚಾಕ್ರೋ ಅನ್ನೋದು ಶುರು ಮಾಡ್ತಾರೆ ನೋಡಿ :-):-):-) ನೀವು ಇನ್ನೂ ಕೃಷ್ಣನ ಮೇಲೆ ಅವಹೇಳನಕಾರಿ statemente ಕೊಟ್ಟಿಲ್ಲ!!
    ಹೋಗ್ಲಿ ಕೃಷ್ಣನ ಜಾತಿ ವಿಷ್ಯ ಅದ್ರು ಎತ್ತಬಹುದಿತ್ತು.. .ನಾವಾದರು ಹೆಂಗೆ ಧುರವೀಳ್ಯ ಕೊಡೋದು ಹೇಳಿ?
    idu krishnane helkottiddu keetale budhdhi!!

    ReplyDelete
  31. ವಿಜಯಾ..

    ಮನೆಗೆ ಬಂದು ಕಂಪ್ಯೂಟರ್ ಶುರುಮಾಡಿ...
    ನಿಮ್ಮ ಹರಟೆ ಓದುವದರಲ್ಲಿ ಮಗ್ನನಾಗಿದ್ದೆ...

    ನಿಮಗೊಂದು ಅಭಿನಂದನೆ ಹೇಳಿ ಒಳ್ಳೆಯವನಾಗ ಬಯಸಿದೆ.....

    ಹೆಂಡತಿಯ ದೃಷ್ಟಿಯಲ್ಲಿ ಕೆಟ್ಟವನಾಗ ಬೇಕಾಯಿತು...
    ಅವಳ ಬಳಿ ಮಾತನಾಡದೆ ಇಲ್ಲಿ ಕುಳಿತ್ತಿದ್ದಕ್ಕೆ..

    ಹ್ಹೇ... ಹ್ಹೆ...! ಒಳ್ಳೆಯ ಹರಟೆ..

    ReplyDelete
  32. ಲೇಖನ ತುಂಬಾ ಚೆನ್ನಾಗಿದೆ.... ಎಲ್ಲರೂ ಒಳ್ಳೆಯವರೇ.... ಕೆಲವೊಮ್ಮೆ ಎಲ್ಲರೂ ಕೆಟ್ಟವರೆ..... ಚೆಂದವೆಂದು ನೋಡುವ ಕಣ್ಣಿಗೆ ಚೆಂದ... ಚೆಂದವಿಲ್ಲ ಎಂದು ನೋಡಿದರೆ ನಿಜಕ್ಕೂ ಚೆನ್ನಾಗಿರೋಲ್ಲ ಅಲ್ಲವೇ...? ಧನ್ಯವಾದಗಳು ನಾನು ನನ್ನ ಮನೆಯವರು ಈ ವಿಚಾರವಾಗಿ ನಿಮ್ಮ ತರಹವೇ ಚರ್ಚಿಸಿದ್ದು ನೆನಪಾಯಿತು... ಧನ್ಯವಾದಗಳು....

    ReplyDelete
  33. ಶ್ರೀರಾಮನ ಬಗೆಗಿನ ಚರ್ಚೆಗೆ ಸೀತಾರಾಮರು ಉತ್ತರಿಸಿದ್ದಾರೆ. ಒಳ್ಳೆಯತನ ಕೆಟ್ಟತನ ವ್ಯಕ್ತಿಗೆ ಭಿನ್ನವಾದಂತೆ ಕಾಲ, ಸ್ಥಳಗಳಿಗೂ ಭಿನ್ನವಾಗಿರುತ್ತದೆ. ರಾಮನ ಅಂದಿನ ನಡವಳಿಕೆ ಆಗಿನ ಸಮಾಜದಲ್ಲಿ ಒಳ್ಳೆಯತನ ಎನಿಸಿಕೊಂಡಿದ್ದು ಈಗ ಕೆಡುಕೆನಿಸಬಹುದು..

    ಕಳ್ಳತನ ಕೆಟ್ಟದ್ದಾ ಕೇಳಿದ್ದೀರಿ.. ಆದರೆ ಲೇಖನದಲ್ಲಿ ಅದಕ್ಕೆ ಪೂರಕವಾದ ಉತ್ತರ ನನಗೆ ಗೋಚರಿಸಿಲ್ಲ. ಕಳ್ಳತನವನ್ನು ಬಿಟ್ಟು ಕಳ್ಳನ ಬಗ್ಗೆ ಅಲ್ಲಿ ವಿವರಣೆ ಇದೆ. ಒಬ್ಬ ಕಳ್ಳ ಹೀಗೆ ಮಾಡಿದರೆ ಇಂಥವರ ದೃಷ್ಟಿಯಲ್ಲಿ ಕಳ್ಳ ಒಳ್ಳೆಯವನು ಎಂದಿದೆಯೇ ಹೊರತು ಕಳ್ಳತನದ ಬಗ್ಗೆ ಏನೂ ಹೇಳಲಿಲ್ಲ.

    ಮೇಲಿನದನ್ನು ಕಳ್ಳ ಒಳ್ಳೆಯವನೇ ಎಂದು ಪ್ರಶ್ನಿಸಿದ್ದರೆ ಸರಿಯಾಗಬಹುದೇನೋ. ಆದರೂ ಕಳ್ಳ, ಕದಿಯುವ ಗುಣ ಹೊಂದಿದ್ದರಿಂದ ಆತ ಕಳ್ಳ. ಕದಿಯುವ ಗುಣ ಗೌಣವೇ ಎಂದು ಮತ್ತೊಮ್ಮೆ ಪ್ರಶ್ನಿಸಿಕೊಳ್ಳಬೇಕು. ಅತ್ಯಾಚಾರ ತಡೆಯುವ ಅವನ ಗುಣ ಅವನು ಕಳ್ಳನಾದ್ದರಿಂದ ಬಂದಿದ್ದೇ?

    ಒಳ್ಳೆಯತನಕ್ಕೂ survivalಗೂ ಏನು ಸಂಬಂಧ ಅಂತ "The God Delusion" ಹೊತ್ತಿಗೆಯಲ್ಲಿ Richard Dawkins ಸೊಗಸಾಗಿ ವಿವರಿಸಿದ್ದಾರೆ.

    ReplyDelete
  34. ಪಾಲ..

    ”ಕಳ್ಳತನ ಕೆಟ್ಟದ್ದಾ ಕೇಳಿದ್ದೀರಿ..” ಎ೦ದು ಹೇಳಿದ್ದೀರಿ.

    ಇನ್ನೊಮ್ಮೆ ಓದಿ ”''ಕಳ್ಳತನ ಕೆಟ್ಟದ್ದೇ...''ಎ೦ದು ಗಟ್ಟಿಯಾಗಿ ಹೇಳಿದ್ದೇನೆ...:)
    ಇಲ್ಲಿ ಬರಹದ ಹರಿವು ಗ೦ಡ,ಹೆ೦ಡತಿ ಸ೦ಭಾಷಣೆಯಲ್ಲಿದ್ದ೦ತೆ ಸಾಗಿದ್ದರಿ೦ದ ಮಾತಾಡಿದ೦ತೆಯೆ ಬರೆದಿದ್ದೇನೆ. ಬಹುಷ: ''ಕಳ್ಳತನ ಕೆಟ್ಟದ್ದೇ ಹೌದು” ಎ೦ದು ಸ೦ಪೂರ್ಣವಾಕ್ಯ ಬರೆದಿದ್ದರೆ ಗೊ೦ದಲ ಇರುತ್ತಿರಲಿಲ್ಲವೇನೋ..:)


    ”ಒಬ್ಬ ಕಳ್ಳನಿಂದ ಹಲವರಿಗೆ ಆಗುವ ತೊಂದರೆಯನ್ನು ಪರಿಗಣಿಸಿ ಆತ ಕೆಟ್ಟವನು ಎಂದು ತಿಳಿಯುತ್ತೇವೆ....”

    ಎ೦ಬಲ್ಲಿ ಕಳ್ಳನ ಬಗೆಗಿನ ವಿವರಣೆ ಕೊಟ್ಟಿದ್ದೇನೆ. ವಿಚಾರ ಒಳ್ಳೆಯತನದ ಬಗೆಗಿದ್ದುದರಿ೦ದ ಕಳ್ಳನನ್ನು ಉದಾಹರಣೆಯಾಗಿ ಮಾತ್ರಾ ಬಳಸಿದ್ದೇನೆ.

    ಒಳ್ಳೆಯತನಕ್ಕೂ survivalಗೂ ಸ೦ಬ೦ಧವನ್ನು ಆಯಾ ಪರಿಸ್ಥಿತಿ, ’ಆ ಕ್ಷ್ಯಣ’ ಮಾತ್ರಾ ನಿರ್ಧರಿಸುತ್ತದೆ.''Kohlberg's theory of moral development '' ನಲ್ಲಿ ಕೊಹೆಲ್ಬರ್ಗ್ ಮನುಶ್ಯನ ನೈತಿಕತೆ ಅನೇಕ ಹ೦ತಗಳಲ್ಲಿ ಬದಲಾಗುವುದನ್ನು ವಿವರಿಸಿ ನಿರೂಪಿಸಿದ್ದಾನೆ.

    ವ೦ದನೆಗಳು.

    ReplyDelete
  35. ನೀವು ಸಂಭಾಷಣೆಯನ್ನು ಯಥಾವತ್ತಾಗಿ ಬರೆದಿದ್ದೀರ ಎಂದ ಮೇಲೆ ಏನೂ ಹೇಳಲಾಗುವುದಿಲ್ಲ. ಆದರೂ ನನ್ನ ಹಿಂದಿನ ಕಾಮೆಂಟು ನಿಮಗೆ ಗೊಂದಲ ತಂದಿರಬಹುದೆಂಬುದರಿಂದ....

    >>
    ''ಕಳ್ಳತನ ಕೆಟ್ಟದ್ದೇ...''

    ''ಇರು.. ಒಮ್ಮೆ ಅದೇ ಕಳ್ಳ ಸಹಕಳ್ಳರೊಡಗೂಡಿ ಯಾವುದೋ ಮನೆಗೆ ಡಕಾಯಿತಿಗೆ ಹೋದ ಎಂದಿಟ್ಟುಕೊಳ್ಳೋಣ. ಅಲ್ಲಿ ಎಲ್ಲವನ್ನೂ ದೋಚಿದ ಮೇಲೆ ಸಂಗಡಿಗನೊಬ್ಬ ಆ ಮನೆಯ ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದಾಗ ಈ ಕಳ್ಳ ತಡೆದ ಎಂದಿಟ್ಟುಕೊಳ್ಳೋಣ... ಆ ಹೆಂಗಸಿನ ದೃಷ್ಟಿಯಲ್ಲಿ ಈ ನಮ್ಮ 'ಕಳ್ಳ' ದೇವರೇ ಆಗುವುದಿಲ್ಲವೇ...? ಆಪದ್ರಕ್ಷಕ ಶ್ರೀ ಕೃಷ್ಣ ಪರಮಾತ್ಮನೇ ಆಗುವುದಿಲ್ಲವೇ..?'
    >>

    ನನಗೆ ಈ ಮೇಲಿನ ಪ್ರಶ್ನೋತ್ತರದಲ್ಲಿ ಪ್ರಶ್ನೆಗೆ ಸರಿಯಾದ ಉತ್ತರ ಎಂದು ಅನಿಸಿಲ್ಲ :)

    <<
    ಒಳ್ಳೆಯತನಕ್ಕೂ survivalಗೂ ಸ೦ಬ೦ಧವನ್ನು ಆಯಾ ಪರಿಸ್ಥಿತಿ, ’ಆ ಕ್ಷ್ಯಣ’ ಮಾತ್ರಾ ನಿರ್ಧರಿಸುತ್ತದೆ
    >>

    ಸರಿ ಅರ್ಥ ಆಗಲಿಲ್ಲ.. ವಿವರಿಸಿ ತಿಳಿಸಿದರೆ ತಿಳಿದುಕೊಳ್ಳುವ ಆಸೆಯಿದೆ..

    <<
    ''Kohlberg's theory of moral development '' ನಲ್ಲಿ ಕೊಹೆಲ್ಬರ್ಗ್ ಮನುಶ್ಯನ ನೈತಿಕತೆ ಅನೇಕ ಹ೦ತಗಳಲ್ಲಿ ಬದಲಾಗುವುದನ್ನು ವಿವರಿಸಿ ನಿರೂಪಿಸಿದ್ದಾನೆ.
    >>

    ಹೌದು, ಆದ್ರೆ ನಾನು ಹೇಳ್ತಾ ಇರ್ಬೇಕು ಅಂತಿದ್ದಿದ್ದು.. "roots of morality, why we are good?" ಬಗ್ಗೆ

    ReplyDelete
  36. ಪಾಲ

    ''ಇರು.. ಒಮ್ಮೆ ಅದೇ ಕಳ್ಳ ಸಹಕಳ್ಳರೊಡಗೂಡಿ ಯಾವುದೋ ಮನೆಗೆ ಡಕಾಯಿತಿಗೆ ಹೋದ ಎಂದಿಟ್ಟುಕೊಳ್ಳೋಣ. ಅಲ್ಲಿ ಎಲ್ಲವನ್ನೂ ದೋಚಿದ ಮೇಲೆ ಸಂಗಡಿಗನೊಬ್ಬ ಆ ಮನೆಯ ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದಾಗ ಈ ಕಳ್ಳ ತಡೆದ ಎಂದಿಟ್ಟುಕೊಳ್ಳೋಣ... ಆ ಹೆಂಗಸಿನ ದೃಷ್ಟಿಯಲ್ಲಿ ಈ ನಮ್ಮ 'ಕಳ್ಳ' ದೇವರೇ ಆಗುವುದಿಲ್ಲವೇ...? ಆಪದ್ರಕ್ಷಕ ಶ್ರೀ ಕೃಷ್ಣ ಪರಮಾತ್ಮನೇ ಆಗುವುದಿಲ್ಲವೇ..?'
    >>

    ನನಗೆ ಈ ಮೇಲಿನ ಪ್ರಶ್ನೋತ್ತರದಲ್ಲಿ ಪ್ರಶ್ನೆಗೆ ಸರಿಯಾದ ಉತ್ತರ ಎಂದು ಅನಿಸಿಲ್ಲ :)
    ಇಲ್ಲಿ ನಾನು ಹೌದು ಎನ್ನುವ ಉತ್ತರ ಕೊಟ್ಟು ಮು೦ದಿನ ಮಾತಾಡಿದ್ದೇನೆ.

    ಬರೆದದ್ದು ”ಆ ಹೆಂಗಸಿನ ದೃಷ್ಟಿಯಲ್ಲಿ ಈ ನಮ್ಮ 'ಕಳ್ಳ' ದೇವರೇ ಆಗುವುದಿಲ್ಲವೇ...? ಆಪದ್ರಕ್ಷಕ ಶ್ರೀ ಕೃಷ್ಣ ಪರಮಾತ್ಮನೇ ಆಗುವುದಿಲ್ಲವೇ..?'
    ಎನ್ನುವಲ್ಲಿ ಪ್ರಶ್ನೆಯಾದರೂ ಅದು ಮಾತಿನ ಓಟದಲ್ಲಿನ ಧಾಟಿ. ಉತ್ತರವನ್ನು ನಿರೀಕ್ಶಿಸಿದ್ದಲ್ಲ. ಬಹುಶ: ಇಲ್ಲಿ ನಾನು ತಕ್ಷಣದ ವಿಷಯ ಬದಲಾಯಿಸಿದ೦ತೆ ಭಾಸವಾಗುತ್ತದೆಯಾ... ನನಗೆ ಗೊತ್ತಾಗುತ್ತಿಲ್ಲ.
    ಇದು ಕೇವಲ ಹರಟೆಯ ಮಾತಾಡಿದ್ದು.

    ನೀವು ಉಲ್ಲೇಖಿಸಿದ ಪುಸ್ಥಕ ನಾನೋದಿಲ್ಲ. ಓದುತ್ತೇನೆ.

    why we are good?" ಎನ್ನುವುದು ಕೋಹೆಲ್ ಬರ್ಗ್ ನ ಥಿಯರಿಯಲ್ಲಿ ಆತ ವಿವರಿಸುತ್ತಾನೆ. ಅದನ್ನೆ ನಾನು ನಿಮಗೆ ಹೇಳಲು ಪ್ರಯತ್ನಿಸಿದ್ದು.

    ಒಳ್ಳೆಯತನಕ್ಕೂ survivalಗೂ ಸ೦ಬ೦ಧವನ್ನು ಆಯಾ ಪರಿಸ್ಥಿತಿ, ’ಆ ಕ್ಷ್ಯಣ’ ಮಾತ್ರಾ ನಿರ್ಧರಿಸುತ್ತದೆ ಎ೦ದು

    ಒಬ್ಬ ವ್ಯಕ್ತಿ ತನ್ನ ಹೆ೦ಡತಿಯ ಔಷಧಿಗಾಗಿ ಒ೦ದು ಮೆಡಿಕಲ್ ಸ್ಟೊರ್ ನಲ್ಲಿ ಔಷಧಿಗಳನ್ನು ಕದಿಯುತ್ತಾನೆ.ಆತ ವೃತ್ತಿಪರ ಕಳ್ಳನಲ್ಲ. ಆದರೆ ಅನಿವಾರ್ಯತೆ ಎದುರಾಗುತ್ತದೆ.ಹೆ೦ಡತಿಯನ್ನು ಉಳಿಸಿಕೊಳ್ಳುವುದೋ .. ಕಳ್ಳತನ ಮಾಡದೆ ಒಳ್ಳೆಯವನಾಗಿರುವುದೋ ಎನ್ನುವ ಸ೦ಧಿಗ್ಧತೆಯಲ್ಲಿ ಸಿಲುಕಿಕೊಳ್ಳುತ್ತಾನೆ. ಕಡೆಯಲ್ಲಿ ಕಳ್ಳತನವನ್ನು ಆರಿಸಿಕೊಳ್ಳುತ್ತಾನೆ. ಈ ಉದಾಹರಣೆಯೊ೦ದಿಗೆ ಮಾನಸಿಕ ಸ್ಥಿತಿಯ ಹ೦ತಗಳನ್ನು ವಿಶ್ಲೇಶಿಸುತ್ತಾ ಹೋಗುತ್ತಾನೆ. ಯಾವುದೇ ಸಮಸ್ಯೆಯಿಲ್ಲದಿದ್ದಾಗ ಪ್ರತಿಯೊಬ್ಬರೂ ಒಳ್ಳೆಯವರೆ.. ಘರ್ಶಣೆ ಎದುರಾದಾಗ ಅದನ್ನು ಹ್ಯಾ೦ಡಲ್ ಮಾಡುವಲ್ಲಿ ನಮ್ಮ ಒಳ್ಳೇತನದ ಅನಾವರಣ ಆಗುತ್ತದೆ೦ದು ನನ್ನ ಅಭಿಪ್ರಾಯ. ಕಾನೂನಿನ ವಿಚಾರ ಬೇರೆ.

    ನನ್ನ ಅಭಿಪ್ರಾಯ ಹೀಗಿದೆ.

    ಇದು ಸುಮ್ನೆ ಹರಟೆ ಅಷ್ಟೇ.. :)

    ReplyDelete
  37. ಧನ್ಯವಾದ ವಿವರಣೆಗೆ.. ಮೊದಲನೆಯದ್ದು ಮತ್ತೆ ಚರ್ಚಿಸೋದಿಲ್ಲ.. ನಾನು ಅರ್ಥ ಮಾಡಿಕೊಂಡಿದ್ದು ಬೇರೆ ತರ ಇರ್ಬಹುದು..

    ಇನ್ನು ನೀವು morality dilemmaದ ಬಗ್ಗೆ ವಿವರಿಸ್ತಾ ಇದೀರ. ಯಾವ್ಯಾವ ಕಂಡೀಷನಲ್ಲಿ ಯಾವ್ದು moral ಅಂತ.
    ಹಾಗಿದ್ದೇ ಒಂದು ಎಲ್ಲೋ ಓದಿದ ನೆನಪು..

    "ಒಂದು ಚಿಕ್ಕ train ಹೋಗ್ತಾ ಇದೆ. ಮುಂದ್ಗಡೆ ಹಳಿ ತಪ್ಪಿದೆ. ಅದಕ್ಕೂ ಮುಂಚೆ ಒನ್ದು junction ಇದೆ. ಚಾಲಕನಿಗೆ ಟ್ರೈನನ್ನು ಪಕ್ಕದ ಹಳಿಗೆ ಕೊಂಡು ಹೋಗುವ ಸಾಮರಥ್ಯ ಇದೆ ಅಂತಿಟ್ಕೊಳ್ಳೋಣ. ಚಾಲಕ ಹಳಿ ಬದಲಿಸಿ ಬೇರೆ ಹಳಿಯಲ್ಲಿ ಹೋಗಿ ಆಗುವ ಅನಾಹುತ ತಪ್ಪಿಸಬಹುದು.

    ಈಗ ಅದೇ ಇನ್ನೊಂದು ಹಳಿಯಲ್ಲಿ ಕೆಲಸಗಾರನೊಬ್ಬ ಟ್ರೈನಿನ ಹಳಿ ಬದಲಾಯಿಸುವ ಸೂಚನೆ ಇಲ್ಲದವನಾದಲ್ಲಿ ಚಾಲಕ ಏನು ಮಾಡಬಹುದು. ಅಮಾಯಕನೊಬ್ಬನ ಜೀವ ದೊಡ್ಡದಾ ಅಥವಾ ಕೆಲವೊಂದು ಮಂದಿ ಗಾಯಾಳುವಾಗುವುದು ದೊಡ್ಡದಾ?"

    ಈಗ ಮತ್ತೆ ಮೊದಲಿನ ಹಳಿ ಮೇಲೆ ದೊಡ್ಡ ಬಂಡೆ ಕಲ್ಲೊಂದಿದೆ. ಟ್ರೈನು ಮುಂದುವರಿದರೆ ಟ್ರೈನಿನಲ್ಲಿ ಕೆಲವರಾದರೂ ಸಾಯಬಹುದು.. ಹಳಿ ಬದಲಾಯಿಸಿದರೆ ಕೆಲಸದವ ಸಾಯ್ತಾನೆ. ಒಬ್ಬನ ಜೀವ ಉಳಿಸುವುದು ಮುಖ್ಯನಾ ಅಥ್ವಾ ಹಲವರದ್ದಾ?

    ಈಗ ಕೆಲ್ಸದವನ ಬಿಟ್ಟು ಆಲ್ಬರ್ಟ್ ಐನ್ಸ್ಟೀನ್ ಅಲ್ಲಿದ್ದಾನೆಂದುಕೊಂಡ್ರೆ.. ಅವನಂತಹ ಮೇಧಾವಿ ಮೇಲೆ ಗಾಡಿ ಓಡ್ಸೋದಾ ಅಥ್ವಾ, ಟ್ರೈನಿನಲ್ಲಿ ಕೆಲವರು ಸತ್ತು ಹೋದರೂ ತೊಂದರೆಯಿಲ್ವಾ :) ಈ ಥರ...


    ಆದ್ರೆ ನಾನು ಹೇಳೋಕೆ ಯತ್ನಿಸಿದ್ದು.. ನಾವ್ಯಾಕೆ ಒಳ್ಳೇಯವರಿರ್ಬೇಕು.. ಕೆಲವು ಬಗೆಯ ಹಕ್ಕಿಗಳ ಗುಂಪಿನಲ್ಲಿ ಇತರ ಹಕ್ಕಿಗಳು ಕಾಳನ್ನು ಹೆಕ್ಕಿ ತಿಂತಾ ಇದ್ರೂ ಒಂದು ಹಕ್ಕಿ ಮಾತ್ರ monitor ಮಾಡ್ತಾ, ಅಪಾಯದ ಸೂಚನೆ ಇದ್ರೆ ಇತರರಿಗೆ ತಿಳಿಸುತ್ತೆ? ಅದ್ಯಾಕೆ ಒಳ್ಳೇದಾಗುತ್ತೆ?

    ಮೊಸಳೆ ಬಾಯೊಳಗೆ ಹಕ್ಕಿ ಹೋಗಿ ಅದರ ಬಾಯಿ ಸ್ವಚ್ಛಗೊಳಿಸಿದ್ರೂ ಮೊಸಳೆ ಯಾಕೆ ಅದನ್ನ ತಿನ್ನದೇ ಬಿಡುತ್ತೆ. ಇಲ್ಲಿ ಮೊಸಳೆ ಯಾಕೆ ಹಕ್ಕಿಗೆ ಒಳ್ಳೇದಾಗಿರುತ್ತೆ.. :)

    ಹೀಗೆ moralityಯ ಕಲ್ಪನೆ ನಮ್ಮಲ್ಲಿ ಹೇಗೆ ಹುಟ್ಟಿತೆಂಬುದರ ಬಗ್ಗೆ ವಿವರ ಇದೆ ಅದ್ರಲ್ಲಿ..


    ಒಳ್ಳೆಯದು ಅಂದ್ರೇನು, ಒಳ್ಳೆಯದು ಎಲ್ಲಿಂದ ಹುಟ್ತು ಅನ್ನೋದು ಆ ಪುಸ್ತಕದಲ್ಲಿದೆ ಅಂತ ಪೂರಕ ಮಾಹಿತಿ ಕೊಟ್ಟೆ ಅಷ್ಟೆ.

    ಇಲ್ಲಿ survival "ಪಾಲನ" ಅಥ್ವಾ "ಚುಕ್ಕಿಚಿತ್ತಾರ ಮೇಡಂ" ನ survival ಅಲ್ಲ. ಒಂದು speciesನ survival.

    >>
    ಇದು ಸುಮ್ನೆ ಹರಟೆ ಅಷ್ಟೇ.. :)
    >>

    ನಾನೂ ಸ್ವಲ್ಪ ಹರಟಿದೆ ಅಷ್ಟೆ :)

    ReplyDelete
  38. ಪಾಲ..
    ನೀವು ತಿಳಿಸಿದ ಪುಸ್ತಕ ನಾನು ಓದಿಲ್ಲವಾದ್ದರಿ೦ದ ನನಗೆ ಅದರ ಬಗ್ಗೆ ಐಡಿಯಾ ಬರುತ್ತಿಲ್ಲ. ಅದರ ಬಗ್ಗೆ ನೀವೇ ಸ್ವಲ್ಪ ವಿವರಿಸಿದರೆ ಅನುಕೂಲ. ಮನುಶ್ಯರಲ್ಲದೇ ಉಳಿದ ಜೀವಿಗಳ ಬಗ್ಗೆ ಹೇಳುವುದಾದರೆ ಅದು ಬೇಸಿಕ್ ಇನ್ಸ್ಟಿ೦ಕ್ಟ್ ಇರಬಹುದು. ನೋಡಿ ಕಲಿತದ್ದು ಇರಬಹುದು. ಉಳಿದ ಕಾರಣಗಳೊ ಇರಬಹುದು.ಮನುಶ್ಯರಲ್ಲಿ ಈ ಬೇಸಿಕ್ ಇನ್ಸ್ಟಿ೦ಕ್ಟ್ ಹುಡುಕುವುದು ಕಷ್ಟ ಸಾಧ್ಯ. ಹುಟ್ಟುತ್ತಲೇ ಸ೦ಸ್ಕಾರ ಕೂಡಾ ಬೆಳೆದು ಬರುತ್ತದೆ.ಹಾಗಾಗಿ ಒಳ್ಳೆಯತನ ಮತ್ತು ಮೊರಾಲಿಟಿ ಇವುಗಳು ಜೊತೆಯಲ್ಲೆ ಬೆಸೆದುಕೊ೦ಡು ಇರುತ್ತವೆ ಅಲ್ಲವೆ..?ಆ ರೀತಿಯಲ್ಲಿ ನಾನು ಹೇಳಲು ಯತ್ನಿಸಿದ್ದು. ಬಹುಷ: ಅರ್ಥವಾಗುವ೦ತೆ ಹೇಳುವಲ್ಲಿ ನಾನು ಸೋತಿರಬಹುದು. ಇದರ ಹೊರತಾಗಿ ಬೇರೆಯೂ ಇರಬಹುದು.
    ನಿಮ್ಮ ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.

    ReplyDelete