Thursday, October 21, 2010

ಮರಿ ಹಾಕಿದ ನಾಯಿ ತನ್ನ ಮೊದಲ ಮರಿಯನ್ನು ತಿನ್ನುತ್ತದೆಯೇ...?

''ಮಕ್ಕಳೇ ... ಒಲೆ ಬದಿಗೆ ಹೋಗಬೇಡಿ. ಒಲೆ ಒಳಗೆ  ನಾಯಿ  ಮರಿ ಹಾಕಿದೆ...  ಹತ್ತಿರ ಹೋದವ್ರನ್ನ ಕಚ್ಚಿ ಬಿಡುತ್ತೆ.''
ಅಂಗಳದಲ್ಲಿ  ತೊಗರೊಲೆ  ಬದಿಗೆ   ಥ್ರೋಬಾಲ್ ಆಡುತ್ತಿದ್ದ ಕ್ಷಮಾ ಮತ್ತು ಪಾರ್ಥ ರನ್ನು ಕರೆದು ಅಜ್ಜ ಎಚ್ಚರಿಸಿದರು.ತೊಗರೊಲೆ ಅಂದರೆ ಅಡಿಕೆ ಬೇಯಿಸಲು ಉಪಯೋಗಿಸುವ ದೊಡ್ಡ ಒಲೆ.ನಾಯಿ ಒಲೆ ಒಳಗೆ, ಚೀಲದ ಸಂದು ಹೀಗೆ ಮರಿ ಹಾಕಲೊಂದು ಜಾಗ ಮಾಡಿಕೊಳ್ಳುತ್ತದೆ.
'' ಟಾಮಿ ಮರಿ ಹಾಕಿದೆಯಾ?  ನಾನು ನೋಡಬೇಕು... ತೋರಿಸು ಅಜ್ಜ...." ಕ್ಷಮಾ ಅಜ್ಜನಿಗೆ ಗಂಟು ಬಿದ್ದಳು.
''  ಹೇಳಿದ್ದೆ  ತಪ್ಪಾಯ್ತು. ನೋಡು ಮರಿ ಹಾಕಿದ ನಾಯಿಗೆ ಸಿಟ್ಟು ಜಾಸ್ತಿ. ಕಚ್ಚತ್ತೆ ಅಂದರೆ ಕೇಳಬೇಕು..ಇಲ್ಲ ನಾಯಿ ಕಚ್ಚಿದ್ದಕ್ಕೆ ಹೊಕ್ಕುಳ ಸುತ್ತ  ಹದಿನಾಲ್ಕು ಇಂಜಕ್ಷನ್ ಹಾಕಿಸ್ಕೋ ಬೇಕಾಗುತ್ತೆ.. ''
'' ದೂರದಿಂದ ನೋಡ್ತೇನೆ. ಟಾಮಿ ಪಾಪ ಏನೂ ಮಾಡಲ್ಲ, ಟಾಮಿ .. ಟಾಮಿ .. ಕ್ರು.. ಕ್ರು .. '' ಪಾರ್ಥ ಒಲೆಯಲ್ಲಿ ಬಗ್ಗಿ ನೋಡಿದ.
''  ಅಜ್ಜ ..    ಮೂರು ಮರಿ ಇದೆ.  ಕಣ್ಣು ಕೂಡಾ ಬಿಟ್ಟಿಲ್ಲ..'' ಬೆರಗಿನಿ೦ದ ತನ್ನ ಬಟ್ಟಲುಗಣ್ಣು ಅರಳಿಸುತ್ತಾ ಹೇಳಿದ.
''ನಾಕ್  ಹಾಕಿರ್ತೈತಿ....  ಮದಾಲಿನ್  ಮರೀನಾ ನಾಯೇ ತಿನ್ದ್ಬುಡ್ತೈತಿ. ಮೂರ್ ಉಳ್ಕಂಡ್  ಐತೆ ... '' ಕೆಲಸದ ಮಂಜ ವೀಳ್ಯದೆಲೆಗೆ ಸುಣ್ಣ ಸವರುತ್ತಾ ಹೇಳಿದ.
'' ಸುಳ್ಳು,  ಯಾವ್ದೂ ತನ್ನ ಮರೀನೆ ತಾನು ತಿನ್ನಲ್ಲಪ್ಪಾ.. ''  ಕ್ಷಮಾ ನಂಬಲು ತಯಾರಿಲ್ಲ.
''ಅಲ್ಲಾ .. ನಾ ನೋಡೀನಿ.. ಹೊದೊರ್ಸ ನಮ್ಮನೆ ನಾಯಿ ನಾ ನೋಡ್ ನೋಡ್ತಾ ಇದ್ದಂಗೆ ತಿಂದ ಬುಡ್ಲಾ.. ? ಮದಾಲಿನ್ ಮರೀನ್ ತಿನ್ನದ್ ಸುಳ್ಳಲ್ಲ... '' ಮ೦ಜ ವಾದಿಸಿದ.


''ಅಜ್ಜ ಹೌದಾ ..? ಮಂಜ ಹೇಳಿದ್ದು ನಿಜಾನ ...?''
''ಹಾಗಂತ ಹೇಳ್ತಾರೆ.. ಎಲ್ಲವೂ ತಿನ್ನತ್ತೆ ಅ೦ತ ಅಲ್ಲ.. ಹೋಗು ಮಹಡಿ ಮೇಲೆ ನಿನ್ನ ಅತ್ತೆ ಇದ್ದಾಳಲ್ಲ..ಅವಳನ್ನು ಕೇಳು.. ಸರಿಯಾಗಿ ವಿವರಿಸ್ತಾಳೆ. ''
''ಅತ್ತೆ .... ಅತ್ತೇ....  ವೀಣತ್ತೆ..'' ಮನೆ ಮೊಳಗುವಂತೆ ಕರೆಯುತ್ತಾ  ಮೆಟ್ಟಿಲುಗಳನ್ನು ಧಡ ಧಡ ಹತ್ತಿ ಬಂದರು ಕ್ಷಮಾ ಮತ್ತು ಪಾರ್ಥ.. ವೀಣಾ ಓದುತ್ತಾ  ಕುಳಿತಲ್ಲಿಗೆ.
ಮಕ್ಕಳು ತಮ್ಮ ಸಮಸ್ಯೆಯನ್ನು ಅತ್ತೆಯ ಮುಂದಿಟ್ಟರು. ''ಅತ್ತೇ, ನಾಯಿ ಮರಿ ಹಾಕಿದ ನಂತರ ತನ್ನ ಮರಿಗಳನ್ನೇ ತಿನ್ನುತ್ತಾ....? ಯಾಕೆ ತಿನ್ನುತ್ತೆ..? ಆಮೇಲೆ ಉಳಿದ ಮರಿಗಳನ್ನು ಯಾರಿಗೂ ಮುಟ್ಟಲು ಬಿಡದಂತೆ ಕಾಪಾಡುತ್ತದಲ್ಲ... ಯಾಕೆ ಹೀಗೆ....?
ಮಕ್ಕಳಿಬ್ಬರೂ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.
ವೀಣಾ ವಿವರಿಸಲು ತೊಡಗಿದಳು..'' ನೋಡಿ ..
ನೀವು ಹೈಸ್ಕೂಲ್ ಮಕ್ಕಳಲ್ಲವೇ, ನಿಮಗೆ ಅರ್ಥವಾಗುತ್ತದೆ ಈ ವಿಚಾರಗಳೆಲ್ಲ. 


ನಾಯಿ ಸೂಕ್ಷ್ಮ ಪ್ರಾಣಿ... ಅದಕ್ಕೆ ಹುಟ್ಟಿನಿಂದ ಬರುವ ಸಹಜ ಗುಣದ [basic instinct] ಜೊತೆಗೆ    ಹೇಳಿಕೊಟ್ಟಿದ್ದನ್ನು ಕಲಿಯುವ ಗುಣವಿದೆ. ಅದು ಕೆಲವನ್ನು ನೋಡಿಯೂ  ಅನುಸರಿಸಬಲ್ಲದು.ಅವು ಮರಿಯಾಗಿದ್ದಾಗಲೇ ಕಲಿಸುವಿಕೆ ಶುರು ಮಾಡಬೇಕಲ್ಲದೆ ಬೆಳೆದ ನಾಯಿಗಳಿಗೆ ಕಲಿಸುವುದು ಕಷ್ಟ.
ಈಗ ನಾಯಿ ತನ್ನ ಮರಿಯನ್ನು ಏಕೆ ತಿನ್ನುತ್ತದೆ....? ಪಟ್ಟಿ ಮಾಡೋಣ.



೧ . ನಾಯಿ ಮರಿ  ಹೊರಬರುವಾಗ ಮಾಸು ಚೀಲದ [ placenta ] ಸಮೇತ ಬರುತ್ತದೆ.ಪ್ರತಿ ಪ್ರಾಣಿಗೂ ತಾಯ್ತನ ಅನ್ನುವುದು ಸಹಜ ಗುಣ. ಅದು ಈ ಮಾಸುಚೀಲ ಅಥವಾ ನೀರ್ಮೊಟ್ಟೆಯನ್ನು ತನ್ನ ಹಲ್ಲುಗಳಿಂದ ಹರಿದು ಹೊಕ್ಕಳು ಬಳ್ಳಿಯನ್ನು ತುಂಡರಿಸಿ  ಮರಿಯನ್ನು ನೆಕ್ಕಲು ತೊಡಗುತ್ತದೆ.ಇದು ಮರಿಯ ಉಸಿರಾಟ ಕ್ರಿಯೆಯನ್ನು ಸರಾಗ ಗೊಳಿಸುತ್ತದೆ. ಮತ್ತು ಸಹಜವಾಗಿಯೇ ಎಲ್ಲಾ ಪ್ರಾಣಿಗಳೂ ತಮ್ಮ ಮಾಸನ್ನು ತಿನ್ನುತ್ತವೆ. ಮಾಸು ಕೀಳುವ ರಭಸದಲ್ಲಿ ಕೆಲವೊಮ್ಮೆ ಮರಿಗಳನ್ನೂ ಅಕಸ್ಮಾತ್ತಾಗಿ ತಿನ್ನುವ ಸಾಧ್ಯತೆಗಳಿವೆ.


೨.  ನಾಯಿ ಸುಮಾರಾಗಿ  ಮರಿ ಹಾಕುವ   ಒಂದು ದಿನ ಮುಂಚಿನಿಂದ ಆಹಾರವನ್ನು ಸರಿಯಾಗಿ ಸೇವಿಸುವುದಿಲ್ಲ. ತಿಂದಿದ್ದನ್ನು ಕಾರಿಕೊಳ್ಳುತ್ತದೆ.  ಹೆಚ್ಚಿನ ನಾಯಿಗಳದು ಕೋಪದ ಗುಣ.ತನಗೆ ನೋವಾದಾಗ, ನೋವಿಗೆ ಕಾರಣವಾದ  ವಸ್ತು ಅಥವಾ ಪ್ರಾಣಿಯ ಮೇಲೆ ಆಕ್ರಮಣ ಮಾಡುತ್ತದೆ. ಹೆರಿಗೆಯ ಸಮಯದಲ್ಲಾದ ನೋವಿನಿಂದ ಪ್ರಚೋದನೆಗೊಂಡ ನಾಯಿ ತನ್ನ ಮರಿಯನ್ನೇ ಕಚ್ಚುವ    ಸಾಧ್ಯತೆಗಳುಂಟು. ಮತ್ತು ಹಾಗೆಯೇ  ಮಾಂಸಹಾರಿ ಪ್ರಾಣಿಯಾದ್ದರಿಂದ ತಿನ್ನಲೂ ಬಹುದು.


೩. ಅಲ್ಲದೆ ಹೆರಿಗೆಯ ನಂತರ ತೀವ್ರವಾಗಿ ಹಸಿವೆಯಾಗುವುದೂ ಅಲ್ಲದೆ ನೋವಿನಿಂದ ಉಂಟಾದ ಕ್ರೋಧವೂ  ತನ್ನ ಮರಿಯನ್ನು ತಾನೇ ತಿನ್ನಲು ಕಾರಣವಿರಬಹುದು.ಏಕೆಂದರೆ ಮನುಷ್ಯರಂತೆ ಅವುಗಳಿಗೆ ವಿವೇಚನಾ ಶಕ್ತಿಯಿರುವುದಿಲ್ಲವಲ್ಲ.ಒಮ್ಮೆ ಹೊಟ್ಟೆ ತುಂಬಿದ ನಂತರ ಸಹಜ ತಾಯಿ ಭಾವದಿಂದ ಉಳಿದ ಮರಿಗಳನ್ನು ಕಾಪಾಡಬಹುದು. ಮತ್ತು ಆಗ ತನ್ನ ಮರಿಗಳನ್ನು  ಮುಟ್ಟಲು ಬಂದವರನ್ನು ಹೆದರಿಸುತ್ತದೆ.ಕೆಲವೊಮ್ಮೆ ಕಚ್ಚುತ್ತದೆ. ಅವುಗಳನ್ನು ಮೆತ್ತಗೆ ಕರೆಯುತ್ತಾ ವಿಶ್ವಾಸಕ್ಕೆ ತೆಗೆದುಕೊಂಡಾಗ ಅದು ನಮ್ಮನ್ನು ನಂಬುತ್ತದೆ.


ಮತ್ತು ಎಲ್ಲಾ ನಾಯಿಗಳೂ ಈ ರೀತಿ ತನ್ನ ಮರಿಯನ್ನು ತಾನೇ ತಿನ್ನುವುದಿಲ್ಲ. ಕೋಪದ ಪ್ರವೃತ್ತಿಯಿರುವ ನಾಯಿಗಳು ಹೀಗೆ ಮಾಡುತ್ತವೆ. [aggresive ness ] ಎಲ್ಲ  ನಾಯಿಗಳೂ  ಕಚ್ಚುವುದಿಲ್ಲವಲ್ಲ... ಹಾಗೇ.   ಅಲ್ಲದೆ ಪ್ರಾಣಿಗಳ ಕೆಲವು ನಡವಳಿಕೆಗಳು ಇನ್ನೂ ಅರ್ಥವಾಗದೆ ಇರುವಂತಹದ್ದು ಬೇಕಷ್ಟಿವೆ.     




 ಮತ್ತೆ ಅಲ್ಲಿಯೇ ಹೋಗಬೇಡಿ.. ಗೊತ್ತಾಯ್ತೆನ್ರೋ '' 
''ಸರಿ,   ಪೇರಳೆ ಮರಕ್ಕೆ ಹೋಗೋಣ '' ಎನ್ನುತ್ತಾ ಕ್ಷಮಾ ಪಾರ್ಥ  ಹೊರಗೆ  ನಡೆದರು.


 ಹೆಚ್ಚು ಕಡಿಮೆತಾಯಿಯ ಸಮಕ್ಕಿದೆ ಮರಿ. ಆದರೂ ತಾಯಿ ಪ್ರೀತಿ.

 ಪ್ರಾಣಿಗಳ ನಡವಳಿಕೆಗಳ ಅಧ್ಯಯನ ತು೦ಬಾ ಆಸಕ್ತಿ ದಾಯಕ. ಅವುಗಳ ವೈವಿಧ್ಯತೆಯನ್ನು, ವೈಚಿತ್ರ್ಯವನ್ನು  ಸೂಕ್ಷ್ಮವಾಗಿ ಗಮನಿಸಿಯೇ ಅರಿತುಕೊಳ್ಳಬೇಕು. ಮನುಷ್ಯರಂತೆ ಮಾತಾಡಬಲ್ಲವಾಗಿದ್ದರೆ ಒಮ್ಮೆ ಕೇಳಿ ನೋಡಬಹುದಿತ್ತು.. ಅಲ್ಲವೇ ?




[ ಈ ಬಗ್ಗೆ  ಇನ್ನೂ ಹೆಚ್ಚಿನ ಮಾಹಿತಿಯಿದ್ದವರು ದಯವಿಟ್ಟು ಹಂಚಿಕೊಳ್ಳಿ]

23 comments:

  1. gottiralilla.. edella nijana.. hats off!!!!! wonderful article

    ReplyDelete
  2. @ವಿಜಯಶ್ರೀ ,
    ಉತ್ತಮ ವಿವರಣೆ ,ಇದು ನಾಯಿ ಮಾತ್ರವಲ್ಲ ಬೆಕ್ಕುಗಳು ಮಾಡುವ ಸಾಮಾನ್ಯ ಪ್ರಕ್ರಿಯೆ.
    ಸಾಮನ್ಯವಾಗಿ ಪ್ರಾಣಿಗಳು ನಮ್ಮನ್ನ ತುಂಬಾಗಿ ಹಚ್ಚಿಕೊಂಡಿದ್ದರೆ ಹೆರಿಗೆ ಸಮಯದಲ್ಲಿ ಏನು ಮಾಡುವುದಿಲ್ಲ.
    ನನಗೆ ಬೆಕ್ಕೇ ಎಂದರೆ ತುಂಬಾ ಇಷ್ಟ ,ನಾ ಚಿಕ್ಕವನಾಗಿದ್ದಾಗ ನಮ್ಮನೆಯ ಬೆಕ್ಕು ನನ್ನ ಹಾಸಿಗೆ ಮೇಲೆ ಮಲಗುತ್ತಿತ್ತು ,ಹಾಗೆ ಹೆರಿಗೆ ಸಮಯದಲ್ಲಿ ಕಾಲ ಕೆಳಗೆ ಇರುತಿದ್ದ ಗೋಣಿ ಮೇಲೆ ಮರಿ ಹಾಕುತಿತ್ತು

    ReplyDelete
  3. ಮರಿ ಹಾಕಿದ ಮೇಲೆ ಸುಸ್ತು ಮತ್ತು ಹಸಿವಿನಿಂದ ತಮ್ಮ ಮರಿಗಳನ್ನು ತಿನ್ನುತ್ತವೆ ಅಂತ ಹೇಳುವುದನ್ನು ಕೇಳಿದ್ದೆ. ನಂಬಿಕೆ ಬಂದಿರಲಿಲ್ಲ. ಈಗ ಇದರ ಬಗ್ಗೆ ಗೊತ್ತಾಯಿತು.

    Thanks :)

    ReplyDelete
  4. ನಮ್ಮ ಮನೆಯಲ್ಲಿ ನಮ್ಮನೆಬೆಕ್ಕು (ಚಿಂಪು ) ಮರಿ ಹಾಕಿದಾಗ ಅಮ್ಮ ನಮ್ಮನ್ನೂ ಹಾಗೆ ಹೇಳ್ತಿದ್ರು.ಯಾಕೆ ಅಂತ ಗೊತ್ತಿರ್ಲಿಲ್ಲ.ಈಗ ಗೊತ್ತಾಯ್ತು ... :-) ಒಳ್ಳೆ ಲೇಖನ ವಿಜಯಕ್ಕ ...:-)

    ReplyDelete
  5. ಆಶ್ಚರ್ಯದ ವಿಷಯ. ಅಜ್ಜಿ ಮೊಮ್ಮಕ್ಕಳಿಗೆ ಹೇಳುವ ವಿಧಾನದಲ್ಲಿ ತುಂಬ ಚೆನ್ನಾಗಿ ವಿವರಿಸಿದ್ದೀರಿ.

    ReplyDelete
  6. tumbaa oLLEya vivarNe.... naanu keLidde idannellaa.....
    nimma drashTikona sari irabahudu....

    ReplyDelete
  7. Wov... full Phd madiro hagiddu.. mast vivarane...

    ReplyDelete
  8. ವಿಜಯಶ್ರೀ,
    ಮರಿ ಹಾಕಿದ ನಾಯಿ ಮಾಸು ಚೀಲ( ಜೊತೆಗೆ ಮರಿಯನ್ನೂ) ತಿನ್ನುವುದರಿ೦ದ ಅದಕ್ಕೆ ಮರಿಹಾಕುವ ಸ೦ಧರ್ಭದಲ್ಲಿ ಆದ ನೋವು ನಿವಾರಣೆಯಾಗುತ್ತದೆ ಎ೦ಬ ನ೦ಬಿಕೆಯೂ ಇದೆ.(ಎಲ್ಲ ಪ್ರಾಣಿಗಳಿಗೂ ಇದು ಅನ್ವಯಿಸುವುದಿಲ್ಲ ದನಕರುಗಳಿಗೆ ಮಾಸುಚೀಲ ತಿನ್ನುವುದರಿ೦ದ ಆರೋಗ್ಯಕ್ಕೆ ಒಳಿತಲ್ಲ ) ಮತ್ತೆ ಹಾಕಿದ ಮರಿಗಳಲ್ಲಿ ಯಾವುದಾದರೂ ಸರಿ ಇಲ್ಲ ಎ೦ದು ನಾಯಿಗೆ ಅನ್ನಿಸಿದ್ದಾದರೆ ಅದು ಆ ಮರಿಯನ್ನು ತಿನ್ನುತ್ತದೆ.ತನ್ನ ಹಾಲು ಸರಿ ಇರುವ ಮರಿಗಳಿಗೇ ಸಿಗಲೆ೦ದ೦ತೆ.ಮರಿಗಳ ಉಸಿರಾಟದ ಮೂಲಕ ಮರಿಯ ಸ್ಥಿತಿಯ ಬಗ್ಗೆ ತಾಯಿ ನಾಯಿಗೆ ತಿಳಿಯುತ್ತದೆ ಎನ್ನುವುದನ್ನು ಕೇಳಿದ್ದೇನೆ. ಆದರೆ ಇವೆಲ್ಲ ನಿಜವೋ ಅಲ್ಲವೋ ಗೊತ್ತಿಲ್ಲ.ಕೇಳಿದ್ದು ಅಷ್ಟೆ.
    ಒಳ್ಳೆಯ ಲೇಖನ. :)

    ReplyDelete
  9. ತನ್ನ ಮರಿಗಳನ್ನೇ ತಿನ್ನುವುದು ಕೇವಲ ನಾಯಿಗಳಷ್ಟೇ ಅಲ್ಲ ಬೆಕ್ಕುಗಳು ,ಹಿಮಕರಡಿ ,ತೋಳ ,ಇಲಿ ಕೆಲವು ಜಾತಿಯ ಅಳಿಲು, ಕೆಲವು ಜಾತಿಯ ಜೇಡ , ಕೆಲವು ಮೀನುಗಳು ಇತ್ಯಾದಿ ಅನೇಕ ಪ್ರಾಣಿಗಳಲ್ಲಿ ಕಂಡುಬರುತ್ತದೆ ಅಕ್ಕ . ಪ್ರಾಣಿಶಾಸ್ತ್ರಜ್ಞರು ಈ ಬಿಹೇವಿಯರಿಗೆ ನೀನು ಹೇಳಿದ ಕಾರಣಗಳನ್ನೇ ನೀಡುತ್ತಾರೆ . ಜೊತೆಗೆ ಇನ್ನೊಂದು ಅಂಶವೆಂದರೆ ಅವು ತಮ್ಮ ವೀಕೆಸ್ಟ್ ಮತ್ತು ರೋಗಿಷ್ಟ ಮರಿಗಳನ್ನು ತಿನ್ನುತ್ತವಂತೆ . ಪ್ರಾಕೃತಿಕವಾಗಿ ಇದು ಒಳ್ಳೆಯ ತಳಿ ಬೆಳವಣಿಗೆಗೆ ಸಹಕಾರಿ .
    ಕೆಲವು ವೇಳೆ ಮರಿಗಳಿಗೆ ಸಾಕಷ್ಟು ಆಹಾರ ಒದಗಿಸಲು ಕೂಡ ಹೀಗೆ ಮಾಡುವ ಸಾಧ್ಯತೆಯಿದೆ.

    ReplyDelete
  10. ನಾಯಿ ತನ್ನ ಮರಿಯನ್ನು ತಾನೇ ತಿನ್ನುವ ಬಗ್ಗೆ ತಿಳಿಯದು.ಆದರೆ ಆಗತಾನೆ ಹುಟ್ಟಿದ ಮರಿಯೊಂದು ನೀರಿನ ತೊಟ್ಟಿಯೊಂದರಲ್ಲಿ ಬಿದ್ದು ಸತ್ತಾಗ ಆ ತಾಯಿ ಪಟ್ಟ ವ್ಯಥೆ,ಮರಿಯನ್ನು ಬದುಕಿಸಲು ಅದು ಮತ್ತೆ ಮತ್ತೆ ಮಾಡಿದ ಪ್ರಯತ್ನ ,ವರುಷಗಳೇ ಉರುಳಿದರೂ ನನ್ನ ಕಣ್ಣಿಗೆ ಕಟ್ಟಿದಂತೆ ಇದೆ.

    ReplyDelete
  11. ವಿಜಯಶ್ರೀ ಮೇಡಮ್,

    ನನಗೂ ಈ ಅನುಭವವಾಗಿದೆ. ಬಾಲ್ಯದಲ್ಲಿ ಇಂಥ ಅನುಭವ ನನಗಾಗಿತ್ತು. ನಾಯಿಯ ಬಗೆಗಿನ ಮಾಹಿತಿಯೂ ಚೆನ್ನಾಗಿದೆ..

    ReplyDelete
  12. ಹೊಸ ವಿಚಾರ ತಿಳಿದ೦ತಾಯ್ತು..ವಿಜಯಶ್ರೀ ಅವರೆ. ಧನ್ಯವಾದಗಳು
    ಅನ೦ತ್

    ReplyDelete
  13. ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲು ಶುನಕೋಪಾಯವದು. ಬಾನಂತನದಲ್ಲಿ ನಾಯಿಗೆ ಅದು ಔಷಧಿ! ಹೊಟ್ಟೆ ಸರಿ ಇಲ್ಲದಿದ್ದರೆ ನಾಯಿ ಹುಲ್ಲು ತಿನ್ನುತ್ತದೆ.
    ಒಂದೇ ಮರಿ ಹಾಕುವ ಪ್ರಾಣಿಗಳಲ್ಲಿ ಈ ಪಧ್ಧತಿ ಇಲ್ಲ. ಅದಕ್ಕೆ ಇರಬೇಕು "ತಾಯಿ ದೃಷ್ಟಿ ಮತ್ತು ನಾಯಿ ದೃಷ್ಟಿ" ಹಸುಗೂಸಿಗೆ ತಾಗಬಾರದೆಂದು ಕಾಡಿಗೆ ಹಚ್ಚುವ ಪಧ್ಧತಿ ಶುರುವಾಗಿದ್ದು.
    ಕೆಟ್ಟ ಮಕ್ಕಳು ಹುಟ್ಟಬಹುದು ತಾಯಿ ಮಾತ್ರ ಕೆಟ್ಟವಳು ಇರಲಾರಳು ಅನ್ನುವ ಮಾತು ನಾಯಿ ವಿಷಯದಲ್ಲಿ ನಾಯಿ ಪಾಡಾಯಿತೇ? ನಾಯಿ ಮರಿಯಿದ್ದಾಗ ಚೆಂದ.

    ReplyDelete
  14. ವಿಜಯಶ್ರೀ,
    ಚಂದದ ಶೈಲಿಯಲ್ಲಿ ,ಉತ್ತಮ ಮಾಹಿತಿ . ಬಹಳಷ್ಟು ಪ್ರಾಣಿಗಳು ಹೀಗೆ ಮಾಡುತ್ತವೆ ಎಂದು ಓದಿದ್ದೇನೆ. ಪ್ರಾಣಿ ಶಾಸ್ತ್ರಜ್ಞರ ಪ್ರಕಾರ ತಮ್ಮ ಅತ್ಯಂತ ದುರ್ಬಲ ಮರಿಗಳನ್ನೂ ಹೀಗೆ ತಿನ್ನುತ್ತವೆ ಎಂದು ಓದಿದ್ದೇನೆ.
    ಕೆಲ ವರ್ಷಗಳ ಹಿಂದೆ , ನಮ್ಮನೆಯಲ್ಲಿ ಎಲ್ಲಿಂದಲೋ ಬೆಕ್ಕೊಂದು ಬಂದು ೪ ಮರಿ ಹಾಕಿತ್ತು. ಮರುದಿನ ನೋಡಿದಾಗ ಒಂದು ಮರಿಯನ್ನು ತಿಂದೇ ಬಿಟ್ಟಿತ್ತು. ಕೇಳಲು , ನೋಡಲು ನಮಗೆ ಹಿಂಸೆ ಎನಿಸಿದರೂ ,ಇದು ಕೇವಲ ಬಲಿಷ್ಠ ತಳಿಯನ್ನು ಮುಂದುವರೆಸುವ ಪ್ರಕೃತಿಯ ಸಹಜ ವಿಧಾನ ಎನಿಸುವುದಿಲ್ಲವೇ?

    ReplyDelete
  15. ನಾಯಿ ಮಗುವ ತಿನ್ನುವ ಕಾರಣಗಳಲ್ಲಿ ಮೂರನೇ ಕಾರಣ ತುಂಬಾ ಸಮಯದಲ್ಲಿ ನೆಡೆಯುತ್ತದ್ದೆ. ತುಂಬಾ ಉತ್ತಮ ವಿಚಾರ ವಿನಿಮಯ:)
    --

    ReplyDelete
  16. ವಿಜಯಶ್ರೀ ಹೊಸ ವಿಚಾರ ತಿಳಕೊಂಡೆ ಧನ್ಯವಾದಗಳು...

    ReplyDelete
  17. ವಿಜಯಶ್ರೀ..ಮಕ್ಕಳಿಗೆ ಜ್ಞಾನರ್ಜನೆ ದೊಡ್ಡವರಿಗೆ ಧೂಳನ್ನು ಒರೆಸೋ ಅಥವಾ ಕೆಲವರಿಗೆ ತಿಳಿಸೋ,,ಕುತೂಹಲಮೂಡಿಸೋ ಒಟ್ಟಿನಲ್ಲಿ ಬಹಳ ಇಂಟರೆಸ್ಟಿಂಗ್,,,ಲೇಖನ...ಹೌದು ಸುಮ ಹೇಳಿದ್ದು ನಿಮ್ಮ ಮಾತು ಸತ್ಯ...ಮರಿಹಾಕುವ ಪ್ರಕ್ರಿಯೆ ಬಹಳ ಆಯಾಸದಾಯಕ ಅದರಲ್ಲೂ ಕ್ಯಾನೈನ್ ಜಾತಿಗಳಲ್ಲಿ ಆಕ್ರೋಷಕ್ಕೂ ಎಡೆಮಾಡುತ್ತದಂತೆ...ಮರಿಗಳಲ್ಲಿ ದುರ್ಬಲ ಮತ್ತು ಬದುಕುಳಿಯುವ ಸಾಧ್ಯತೆ ಕಡಿಮೆ ಇರುವ ಮರಿಯನ್ನು ತಾಯಿ ತಿನ್ನುವುದು ತನ್ನ ಸತ್ತೇಹೋಗುವ ಮರಿಯ ಮೂಲಕ ತನ್ನ ನಿಶ್ಯಕ್ತಿ ನಿವಾರಣೆ, ಎರಡನೇ ಕಾರಣ ಅಪಾಯ ಎರಗುವ ಸೂಚನೆ..ದಿಕ್ಕು ತೋಚದೆ ಮಾಡುವ ಕ್ರಿಯೆ ಮೂರನೆಯದು..ಪ್ರಸವದ ತಕ್ಷಣದ ಕೆಲ ಕ್ಷಣಗಳು ಬುದ್ಧಿ ಮತ್ತು ದೃಷ್ಟಿ ಎರಡರಲ್ಲೂ ವ್ಯತ್ಯಯವಾಗುವುದು ಎನ್ನಲಾಗಿದೆ...
    ಮೀನಿನಲ್ಲಿ ಇದು ಸಾಮಾನ್ಯ....

    ReplyDelete
  18. chennagide, oLLe information... thanks

    ReplyDelete
  19. ಪ್ರಾಣಿ ಪ್ರಪ೦ಚದಲ್ಲಿ ನಡೆಯುವ ಅನೇಕ ವಿಧ್ಯಮಾನಗಳು ನಮಗೆ ಸೋಜಿಗದ ವಿಷಯವೇ...
    ಕೆಲವೊಮ್ಮೆ ಬಿಡಿಸಲಾಗದ ಕಗ್ಗ೦ಟೇ...
    ನನ್ನ ಲೇಖನಕ್ಕೆ ಪ್ರತಿಕ್ರಿಯಿಸಿ, ಮಾಹಿತಿಗಳನ್ನು ಹ೦ಚಿಕೊ೦ಡ ನಿಮ್ಮೆಲ್ಲರಿಗೂ ಧನ್ಯವಾದಗಳು.
    ವಾಣಿಶ್ರೀ,
    ವಿನಯ್,
    ವಿಕಾಸ್,
    ದಿವ್ಯಾ,
    ಸುನಾಥ್ ಕಾಕ,
    ದಿನಕರ,
    ಪ್ರವೀಣ್,
    ಮನಮುಕ್ತಾ,
    ಸುಮ,
    ಕೃಷ್ಣಮೂರ್ತಿ ಸರ್,
    ವನಿತಾ,
    ಶಿವು ಸರ್,
    ಅನಂತ ಸರ್,
    ಶಿವರಾ೦,
    ಚಿತ್ರಾ,
    ಶ್ರೀಕಾ೦ತ್,
    ದೇಸಾಯಿ ಸರ್,
    ಜಲನಯನ ಸರ್,
    ಸುಗುಣ
    ನಿಮಗೆಲ್ಲರಿಗೂ ಧನ್ಯವಾದಗಳು.

    ReplyDelete
  20. ನಾಯಿಯು ತನ್ನ ಮರಿಯನ್ನೇ ತಿನ್ನೋದನ್ನ ನಾನು ನೋಡಿದ್ದೇನೆ..
    ಅದರ ಹಿಂದೆ ಇಷ್ಟೊಂದು ವಿಷಯವಿದೆ ಎಂದು ತಿಳಿದಿರಲಿಲ್ಲ..

    ನನ್ನ 'ಮನಸಿನಮನೆ'ಗೂ ಬನ್ನಿ..

    ReplyDelete
  21. ನಾಯಿಹಾಗು ಬೆಕ್ಕುಗಳು ಮರಿಯನ್ನ ತಿನ್ನೋ ಬಗ್ಗೆ ಕೇಳಿದ್ದೆ, ನೋಡಿರಲಿಲ್ಲ ಹಾಗಾಗಿ ನಂಬಿಕೆಯು ಇರಲಿಲ್ಲ.

    ತಮ್ಮ ಮಾಹಿತಿ ಮತ್ತು ಪ್ರತಿಕ್ರಿಯೇಗಳಲ್ಲಿ ಸುಮಾ ಅಜ್ಯಾದ, ಚ್ತ್ರಾರವರು ಹೇಳಿದ ಮಾಹಿತಿ ತೀರಾ ಉಪಯುಕ್ತ ಮಾಹಿತಿ.
    ಧನ್ಯವಾದಗಳು.

    ReplyDelete
  22. ನನ್ನ ಗೆಳೆಯರೊಬ್ಬರ ಮನೆಯಲ್ಲಿ ಇತ್ತೀಚೆಗೆ ಬೆಕ್ಕೊಂದು ೩ ಮರಿ ಹಾಕಿತ್ತು. ಆದರೆ ೩ರೇ ದಿನದಲ್ಲಿ ಎಲ್ಲವನ್ನೂ ತಿಂದು ಮುಗಿಸಿತ್ತು. ಇದು ಆಕಸ್ಮಿಕವಾಗಿಯೋ ಅಥವಾ ಹಸಿವಿನಿಂದಲೋ ಅಥವಾ ಮರಿಯಲ್ಲಿ ನೂನ್ಯತೆಯಿದ್ದುದರಿಂದಲೋ ತಿಂದದ್ದಲ್ಲ ಎಂದು ಮೇಲ್ನೋಟಕ್ಕೆ ಕಾಣಿಸಿತು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅಂತರ್ಜಾಲ ಜಾಲಾಡಿದಾಗ ಗಮನಕ್ಕೆ ಬಂದ ಅಂಶ: "ಬೆಕ್ಕು ತಾನು ಮಕ್ಕಳನ್ನು ಪೋಷಿಸಲು ಅಸಮರ್ಥ ಎಂದು ಕಂಡುಕೊಂಡಾಗ ಮರಿಗಳನ್ನು ಕೊಲ್ಲುತ್ತದೆ. ತಿನ್ನುವುದು ತನ್ನ ಪರಿಸರವನ್ನು ಶುಚಿಯಾಗಿಸುವ ಒಂದು ಭಾಗ ಎಂದು." ಹಾಗೆಯೇ ನಾಲ್ಕೈದು ಮರಿಗಳನ್ನು ಹಾಕಿದಾಗ ಕೆಲವನ್ನು ತಿನ್ನುವುದು ಮುಂದೆ ಸಾಕಲು ಹೊರೆಯಾಗಬಾರದೆಂದಿರಬಹುದು.

    ನಾಯಿಯ ಗುಣದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ. ನೀವು ತಿಳಿಸಿದ ಕಾರಣಗಳೂ ಸಮಂಜಸವೆನಿಸಿತು. ಬರವಣಿಗೆಯ ಶೈಲಿ ಇಷ್ಟವಾಯಿತು.

    ReplyDelete