Friday, February 25, 2011

ಯುದ್ಧ....!!!!!!

ಅತ್ತಿತ್ತ ಹಾರಾಡಿ 
ಸುತ್ತ ಹೋರಾಡಿ
ಮೂಲೆ ಮೂಲೆಯ ಹುಡುಕಿ 
 ಕೈ ಬಡಿದು  ತೊಡೆ ತಟ್ಟಿ
 ಬಿಡದೆ  ಬೆನ್ನಟ್ಟಿ 
ಯುದ್ಧ ಗೆದ್ದಿದ್ದೇನೆ ನೋಡು..

ಕೈ ಬೀಸಿ  ಕುಣಿದಾಡಿ
ಅತ್ತಿತ್ತ ನೆಗೆದಾಡಿ 
ಕೈ ಸೆಳೆಸಿ ಕಾಲ್ ಉಳುಕಿ 
ಮುಡಿ ಬಿಚ್ಚಿ ಹಾರಾಡಿ 
ಒತ್ತರಿಸಿ ಬರುವ ಕೋಪಕ್ಕೆ 
ಜಜ್ಜಿ  ಕೆಡಹಿದ್ದೇನೆ ನೋಡು..

ಚಲುವೆ ಕೆನ್ನೆಯ ಬಳಸಿ 
ಮೋಹಿಸಿ ಮುದ್ದಿಟ್ಟ
ಕ್ರೂರ ರಾಕ್ಷಸನ 
ಕೈಕಾಲು ಮುರಿದಿಕ್ಕಿ
ರಕ್ತದೋಕುಳಿ ಹರಿಸಿ  
ಚಿತ್ರ ಬರೆದಿದ್ದೇನೆ ನೋಡು..

ಮಾಡು ಸುಖ ನಿದ್ರೆಯನು 
ಬಿಡು ದಾರಿ ಎನಗೀಗ 
ಮತ್ತೆ ಹೋಗಲೇ ಬೇಕು 
ಶತ್ರು ಸಂಹಾರಕ್ಕೆ 
ಹುಡುಕುತ್ತ ಹುಡುಕುತ್ತ 
ಮತ್ತೊಂದು ಸೊಳ್ಳೆಯನು.....!!!!!!!!!


Friday, February 11, 2011

ಇರುವೆ ಸತ್ತ ನಂತರ ಏನಾಗುತ್ತೆ..ಪ್ರೇತವಾಗುತ್ತಾ..?


 ಕೆಲಸದ ರುಕ್ಕಮ್ಮ ಸ್ವಲ್ಪ ಭಯಮಿಶ್ರಿತ ಧ್ವನಿಯಲ್ಲಿಯೇ ಹೇಳಿದಳು.'' ಅಕ್ಕ ನಿನ್ನೆ ನಮ್ಮನೆ ಹತ್ರ ದೆವ್ವ ಬಂದಿತ್ತು...! ''




 '' ಎನ್ಮಾಡ್ತೆ ?''
''ಅಕ್ಕೋ ಎನ್ಮಾಡ್ತೂ ಅಂತೀಯಾ.. ಮನೆ ಶೀಟ್  ಮೇಲೆಲ್ಲಾ ದಡ ಬಡ ದಡ  ಬಡ ಓಡಾಡ್ತಾ ಇತ್ತು..''
''ಬೆಕ್ಕಿರಬಹುದು  ...! ಇಲೀನೋ ಹೆಗ್ಗಣನೋ ಓಡಿಸ್ಕೊಂಡು    ಬಂದಿರಬಹುದೇನೋ...?    ನೀನೊಬ್ಳು  ಶಬ್ದ   ಆದರೆ   ಸಾಕು,   ದೆವ್ವ ಅಂತೀಯ...''
''ಇಲ್ಲಾಕ್ಕ, ಮಧ್ಯ ರಾತ್ರಿ ಹೊತ್ತಿಗೆ...ಏನ್ ಭಯ ಆಯ್ತೂನ್ತೀಯ ...
ನನ್ನೆಜ್ಮಾನ ಯಾವ್ ದೆವ್ವಕ್ಕೂ ಹೆದರದೆ ಇರೋವ್ನು ಈ ದೆವ್ವಕ್ಕೆ ಭಯ  ಬಿದ್ಬುಟ್ಟ. ಒಂತರಾ ಅಳ್ತಿತ್ತು.....    ಕಳೆದ ತಿಂಗಳು ಆ ವಟಾರದ ಮನೇಲಿ ಬಸುರೀ ಹೆಂಗಸು  ಸುಟ್ಕೊಂಡು ಸತ್ತೊದ್ಳಲ್ಲಾ ಅಕ್ಕಾ ಅದು ಕೊಲೆ ಅಂತೆ.  ಅದಕ್ಕೆ ಅವಳೇ ದೆವ್ವ ಆಗಿ ಅಲೀತಾ ಇರೋದಂತೆ.. ಆಮೇಲೆ...., ಹೇಗೋ ಧೈರ್ಯ ತಂದ್ಕೊಂಡು ಇನ್ನೊಂದ್ ಸಲ ಈ ಕಡೆ ಬಂದೇ ಅಂದ್ರೆ ನೋಡು  ಚಪ್ಲಿ ತಗೊಂಡ್ ಹೊಡೀತೀನಿ ಅಂದಕೂಡಲೇ ದೆವ್ವದ ಶಬ್ಧಾನೆ ಇಲ್ಲಾನ್ತೀನಿ....'' ಕಣ್ಣು ಬಾಯಿ ತಿರುಗಿಸಿ ಹೇಳುವುದನ್ನು ನೋಡಿ ನನಗೆ ನಗು ತಡೆಯಲಾಗಲಿಲ್ಲ...

''ಅಲ್ವೇ ಚಪ್ಲಿಗೆ ಹೆದರಿ ಹೊಯ್ತೇನೆ  ಭೂತ.....? ಅದು ಯಾವಾಗಲೂ ನಿಮ್ಮನೆಗೆ ಯಾಕೆ ಬರತ್ತೆ.. ಎದ್ರೀಗೆ ನಮ್ಮನೆ ಇಷ್ಟ್ ದೊಡ್ಡದಾಗಿ ಇದೆ.  ಒಂದಿನಾನೂ ನಮ್ಮನೆಗೆ ಬಂದಿಲ್ವಲ್ಲೇ...?   ಮುಂದಿನ ಸಲ ಬಂದಾಗ ನಮ್ಮನೆ ಅಡ್ರೆಸ್ ಕೊಡು ಅದಕ್ಕೆ.. ''ಎನ್ನುತ್ತಾ ನಕ್ಕೆ. 

''ಅಕ್ಕೋ ನೀನ್ಯಾವತ್ತೂ ನಗ್ತೀಯ.. ನಂಬದೆ ಇಲ್ಲ.. ಸುಳ್ಳಲ್ಲ ಅಕ್ಕಾ. '' ಎನ್ನುತ್ತಾ ನನ್ನನ್ನು ನಂಬಿಸಲು ಸಾಧ್ಯವಾಗದಿದ್ದಿದ್ದಕ್ಕೆ ಮತ್ತೇನೂ  ತೋಚದೆ   ಗೋಡೆ ಪಕ್ಕದಲ್ಲಿ ಹರಿಯುತ್ತಿದ್ದ ಇರುವೆಯೊಂದನ್ನು ಹೊಸಕಿ ಕೊಂದಳು...!
''ಅಯ್ಯೋ ರುಕ್ಕಮ್ಮ....! ಇರುವೆ ಕೊಂದ್ಯಲ್ಲೇ...! ಅದು ದೆವ್ವವಾಗಿ ಬಂದು ಕಾಡಿದರೆ ಎನ್ಕಥೆ...?''
 '' ಹೋಗಕ್ಕೋ.. ಇರುವೆ ಎಲ್ಲಾ ದೆವ್ವ ಆಗಲ್ಲಕ್ಕೋ ''
'' ಅಲ್ವೇ...    ಇರುವೆ ಯಾಕೆ ದೆವ್ವ ಆಗ್ಬಾರ್ದೂ..?   ಎಲ್ಲರಿಗೂ ಒಂದೇ ಅಲ್ವೇನೆ ಜೀವ..? ಅದು ಬಸರಿಯಾಗಿತ್ತಾ...? ಬಾಳ೦ತಿಯಾಗಿತ್ತಾ...? ಮಕ್ಕಳಿಗೆ ಅಂತ ಆಹಾರ ಹುಡುಕೋಕೆ ಬಂದಿತ್ತಾ ಅನ್ಯಾಯವಾಗಿ ಇರುವೆ ಕೊಂದ್ಯಲ್ಲೇ.    ಅದು ದೆವ್ವ ಆಗಿ ಕಾಡತ್ತೆ ಇರು.  ''
  ಪಾಪ ರುಕ್ಕಮ್ಮ ಯೋಚಿಸತೊಡಗಿದಳು..


ನಾನೂ ಯೋಚನೆಗೆ ಬಿದ್ದೆ....!  ಮನುಷ್ಯರು ಮಾತ್ರ ದೆವ್ವವಾಗುವುದೇ ...? ಇರುವೆ ಯಾಕಾಗಬಾರದು..?
ಅದು ಬಸುರಿಯೋ  ಬಾಳಂತಿಯೋ  ಆಗಿದ್ದು ಸತ್ತರೆ ಪ್ರೇತವಾಗಲಾರದೆ..? ಗೂಡಿನಲ್ಲಿ ಮೊಟ್ಟೆ, ಮರಿಗಳಿದ್ದು ಅವಕ್ಕೆ ಆಹಾರ ತೆಗೆದುಕೊಂಡು ಹೋಗಬೇಕಾದರೆ ನಮ್ಮ ಕಾಲಿಗೆ ಸಿಕ್ಕಿ ಸತ್ತರೆ ಅದು ದೆವ್ವವಾಗಿ ನಮ್ಮನ್ನು ಕಾಡಬಹುದೇ..?
ನಾಯಿ ಆಕ್ಸಿಡೆಂಟ್ ನಲ್ಲಿ ಸತ್ತರೆ ದೆವ್ವವೇನಾದರೂ ಆಗಬಹುದೇ..?  ಹಸು ಕರು ಹಾಕುವಾಗೇನಾದರೂ ತೊಂದರೆಯಾಗಿ ಬಳಲಿ ಸತ್ತಿದ್ದರೆ..?
ಮಾಂಸಾಹಾರ ಸೇವಿಸುವವರು ಅದೆಷ್ಟು ಪ್ರಾಣಿಗಳನ್ನು ಕೊಂದಿರುವುದಿಲ್ಲ.. ತಿಂದಿರುವುದಿಲ್ಲ.. ಅವೆಲ್ಲ ದೆವ್ವವೋ ಪ್ರೇತವೋ ಆಗಿ ಅವರುಗಳನ್ನು ಕಾಡಬಹುದೇ..?


ಅದೇ ಮನುಷ್ಯರಲ್ಲಿ ಅಕಾಲದಲ್ಲಿ, ಬಸುರಿಯೋ, ಬಾಳಂತಿಯೋ ಸತ್ತರೆ ಅವರುಗಳ  ಆತ್ಮ ಅತೃಪ್ತಿಯಿಂದ ಪ್ರೇತವೋ, ಪಿಶಾಚಿಯೋ, ದೆವ್ವವೋ ಮತ್ತಿನ್ನೇನೋ ಆಗಿ ಮನುಷ್ಯರಿಗೆ ಕಾಟ ಕೊಡುತ್ತವೆ ಅನ್ನುತ್ತಾರಲ್ಲ...! ಯಾಕೆ ಕಾಟ ಕೊಡಬೇಕು..?
ಇಷ್ಟು ದಿನ ಆದರೂ ನನಗೆ ಒಂದೂ ದೆವ್ವ ಕಾಣಿಸಿಲ್ಲ..

ಪ್ರಾಣಿಗಳಲ್ಲಿ ದೆವ್ವ, ಭೂತ ಕಾನ್ಸೆಪ್ಟ್ ಇಲ್ಲ ಅನ್ನೋಣವೇ...?  ಆತ್ಮ ಅನ್ನುವುದರ ಕಾನ್ಸೆಪ್ಟ್ ಎಲ್ಲರಿಗೂ   ಒಂದೇ ತಾನೇ..? ಹೇಳುವುದಿಲ್ಲವೇ ... ಪಾಪ ಮಾಡಿದವರು ಮುಂದಿನ ಜನ್ಮದಲ್ಲಿ ನಾಯಿಯೋ,ನರಿಯೋ ಆಗಿ ಹುಟ್ಟುತ್ತಾರೆಂದು...! ಅದೆಷ್ಟೋ ಜನ್ಮದ ಪುಣ್ಯದಿಂದಾಗಿ ಮನುಷ್ಯ ಜನ್ಮ ಸಿಕ್ಕಿತು ಎಂದು..
ಚರಾಚರ ಜೀವಿಗಳಲ್ಲೆಲ್ಲಾ ಇರುವುದು ನಾನೆ ಎ೦ದು ಶ್ರೀಕೃಷ್ಣನೇ  ಹೇಳಿದ್ದಾನೆ.. ಎಂದು ಬಲ್ಲವರು ಹೇಳುತ್ತಾರೆ..ಅಂದರೆ ಭೂತದಲ್ಲಿ, ಪಿಶಾಚಿಯಲ್ಲಿ,ಪ್ರೇತದಲ್ಲಿ,   .... ಯಾರಿದ್ದಾರೆ..? ಭೂತ  ಜೀವಿಯಲ್ಲವೇ..? ಸತ್ತ ಮೇಲೆ ಆಗುವುದು ಭೂತವೆಂದಾದರೆ ಅದು ನಿರ್ಜೀವ...  ಅಂದರೆ ಅದರಲ್ಲೂ ಇದ್ದದ್ದು ಶ್ರೀ ಕೃಷ್ಣನೇ ಆದಂತಾಯಿತಲ್ಲವೆ..? ಎಲ್ಲದರಲ್ಲೂ ಅವನೇ ಇದ್ದಾನೆ ಅಂದರೆ ಈ ಭೂತ ಯಾರು..?


ಆತ್ಮ ಕಾನ್ಸೆಪ್ಟ್ ಒಂದೇ ಅಂದರೆ ಭೂತ ಅನ್ನುವುದು ನಿಜ ಅನ್ನುವುದಾದರೆ, ಎಲ್ಲ ತರದ ಪ್ರಾಣಿಗಳೂ ಅಕಾಲದಲ್ಲಿ ಸತ್ತರೆ, ಅತೃಪ್ತಿಯಿಂದ ಸತ್ತರೆ ಪ್ರೇತವೇ ಆಗುತ್ತವೆಂದಾಯ್ತು ..ಇಲ್ಲ ಕೆಳಸ್ತರದ ಪ್ರಾಣಿಗಳು ಪ್ರೇತ  ಆಗೋಲ್ಲ ಅಂತಂದ್ರೆ  ಮನುಷ್ಯರಲ್ಲೂ ಪ್ರೇತ, ಪಿಶಾಚಿ ಎಲ್ಲಾ ಇಲ್ಲ ಅಂತಲೂ ಆಗಬಹುದು. 

ಪ್ರಾಣಿಗಳಲ್ಲಿ ಈ ತರದ್ದು ಇಲ್ಲ ಅಂದರೆ ಮನುಷ್ಯರಲ್ಲಿ ಮಾತ್ರ ಯಾಕಿರ ಬೇಕು..?ಮನುಷ್ಯನಿಗೆ ಯೋಚಿಸಲು ಬರುತ್ತೆ ಅಂತಲೇ ..?
ನರವ್ಯೂಹ ಬೆಳೆದಿದೆ ಅಂತಲೇ..? ಪ್ರಕೃತಿ ಮನುಷ್ಯನಿಗೆ ಯೋಚನಾ ಶಕ್ತಿ ಎನ್ನುವ ವರದೊಂದಿಗೆ ಭ್ರಮೆ, ಭಯ ಇತ್ಯಾದಿ   ಅಡ್ಡ ಪರಿಣಾಮವನ್ನೂ ಕೊಟ್ಟಿತೇ..?  

''ಗಿಲ್ಟ್ '' ಅನ್ನುವುದು ಮನುಷ್ಯನೊಬ್ಬನಲ್ಲೇ  ಬೆಳೆಯುವುದು..ಮತ್ತು ಬೆಳೆಸುವುದು ಜೊತೆಗೆ ಬಿಡಿಸಿಕೊಳ್ಳಲೆತ್ನಿಸುವುದು.   ತಪ್ಪಿತಸ್ತ ಮನೋಭಾವನೆಯೇ ಈ ರೀತಿಯ ಸಮಸ್ಯೆಗಳಿಗೆ   ದಾರಿ ಮಾಡಿಕೊಡುವುದಲ್ಲವೇ..?  ಈ ಭಾವನೆಗಳು  ಹುಟ್ಟುಟ್ಟುತ್ತಲೇ ಹಿರಿಯರಿ೦ದ ಮಕ್ಕಳಿಗೆ ಕಾಪಿ ಪೇಸ್ಟ್ ಆಗಿಬಿಟ್ಟಿರುತ್ತವೆ. ಏನೋ ತಪ್ಪು ಮಾಡಿದ್ದೇವೆಂದುಕೊಳ್ಳುವುದೂ, ಅದಕ್ಕೊಂದು ಶಾಂತಿ ಮಾಡಿಸುವುದು..ಹರಕೆ ಹೇಳಿಕೊಳ್ಳುವುದೂ .. ತಪ್ಪುಗಾಣಿಕೆ ಕಟ್ಟಿ  ತಪ್ಪಿತಸ್ತ ಮನೋಭಾವದಿಂದ ಬಿಡಿಸಿಕೊಳ್ಳಲೆತ್ನಿಸುವುದು..ಹೀಗೆ ನಾನಾ ತರದಲ್ಲಿ.   
ದೇವರು, ದೆವ್ವ ಎರಡೂ ವಿಚಾರ  ನಮ್ಮ ಮನಸಿನಲ್ಲೇ ಇರುವುದಲ್ಲವೇ..? ಅವೆಲ್ಲ ಕೆಲವೊಮ್ಮೆ ಉಪಯೋಗಕ್ಕೆ ಬರುತ್ತದೆ ಅನ್ನುವುದು ಹೌದಾದರೂ  ಅದಕ್ಕಾಗಿ ಮಾಡದ ತಪ್ಪನ್ನು ಊಹಿಸಿಕೊಂಡು ಕೊರಗುವುದ್ಯಾಕೆ..?


ಇವಿಷ್ಟನ್ನೂ ರುಕ್ಕಮ್ಮನಿಗೆ ಹೇಳಿ ಸಮಾಧಾನಿಸುವಷ್ಟರಲ್ಲಿ ಸಾಕುಬೇಕಾಯಿತು..ಇನ್ನೂ ಒಂದಷ್ಟು ನೀವೂ ಹೇಳಿ ಪುಣ್ಯ ಕಟ್ಟಿಕೊಳ್ಳಿ...!!!  

Thursday, February 10, 2011

ಹುಡುಕಾಟ ...!!!!!

ಮಹಾನ್ 
ಕಾವ್ಯವೊಂದರ
ರಚನೆಗೆ 
ಮನಸ್ಸು
ಮಾಡಿದ್ದೇನೆ.!
ಹಾಗಾಗಿ 
ಯಾರೂ 
ಬಳಸದ 
ಪದಗಳನ್ನು 
ಹುಡುಕಾಡುತ್ತಿದ್ದೇನೆ...!!!!