Tuesday, September 25, 2012

ಚಕ್ಕುಲಿ ಮಾಡಿ ನೋಡಿ..

ಚೌತಿ ಬರಲು ಎರಡು ವಾರಗಳಿರುವಂತೆಯೇ  ಊರಲ್ಲಿ  ಚಕ್ಕುಲಿ ಮಾಡಲು ತಯಾರಿ ಶುರುವಾಗುತ್ತದೆ. ಅಕ್ಕಿ ತೊಳೆದು ಆರಲು ಹಾಕಿ, ಕಾಳು, ಬೇಳೆಗಳನ್ನು ಹೊಂಬಣ್ಣ ಬರುವವರೆಗೆ ಹುರಿದು ಎಲ್ಲವನ್ನೂ ಡಬ್ಬ ತುಂಬಿ ಹಿಟ್ಟು ಮಾಡಿಸಿಕೊಂಡು ಬರಲು ಮನೆಯ ಗಂಡಸರ ಹೆಗಲಿಗೇರಿಸಿದರೆ ಅಲ್ಲಿಗೆ ಮೊದಲ  ಹಂತದ ಹಬ್ಬದ  ತಯಾರಿ ಶುರುವಾಯಿತೆಂದೇ ಲೆಕ್ಕ. ಹಬ್ಬ ಈಗ ಹೇಗೋ ಮುಗಿದಿದೆ. ಈಗ ಇವರ ವರಾತ ಶುರುವಾ..! ಎಂದುಕೊಳ್ಳುವಿರಿ  ನನಗೆ ಗೊತ್ತು. ಹಬ್ಬ ಮುಗಿದರೂ ಹಬ್ಬಕ್ಕೆ ಮಾಡಿದ ಚಕ್ಕುಲಿ ಡಬ್ಬದಲ್ಲಿ ಇರುತ್ತಲ್ಲ!     ಅದು ಖಾಲಿಯಾಗುವವರೆಗೂ ಹಬ್ಬ ಚಾಲ್ತಿಯಲ್ಲಿದೆ ಅಂತ  ತಿಳಿಯಬೇಕು!


ಎಲ್ಲ ಹೆಂಗಳೆಯರಿಗೂ   ತಾವು ಮಾಡಿದ ಚಕ್ಕುಲಿ ಸಪೂರಾಗಿ, ಗರಿಗರಿಯಾಗಿ ಇರಬೇಕೆಂಬ ಬಯಕೆ. ಅದಕ್ಕಾಗಿ ನಾನಾತರದಲ್ಲಿ ಹರಸಾಹಸವನ್ನೇ ಮಾಡುತ್ತಾರೆ. ಹಿಟ್ಟಿಗೆ ಎಣ್ಣೆ, ಬೆಣ್ಣೆ, ಹಾಲುನೀರು, ಯಾವ್ಯಾವುದೋ ಮರದ ಕಾಂಡದ ನೀರು, ಯಾವ್ಯಾವುದೋ ಬೇಳೆ ಕಾಳು  ಬೇಯಿಸಿ ಹಿಟ್ಟು ಮಾಡಿಕೊಳ್ಳುವುದೂ, ಅದು ಬಣ್ಣ ಗೆಟ್ಟು ಕರಿಮುಖನಿಗೆ ಕರಿ ಚಕ್ಕುಲಿಯಾಗಿ, ಗಟ್ಟಿ ಯಾಗಿ ಕೊನೆಗೆ ನಾಯಿ ಎಲುಬು ಕಡಿದಂತೆ, ಹಲ್ಲಿನಿಂದ  ಕಟ ಕಟ ಸದ್ದಿನೊಂದಿಗೆ  ಕಡಿಯುವಂತಾಗಿ ಅವಮಾನಗೊಳುವ  ಸಮಸ್ಯೆಗಳು ಹೆಂಗಳೆಯರಿಗೆ ಸಾವಿರಾರು.  ಚೂರೇ  ಚೂರು ಹದ ತಪ್ಪಿದರೂ ಗಟ್ಟಿಯಾಗೋ, ಮೆತ್ತಗಾಗೋ ಆಗಿ, ಈ ಸಲದ ಚಕ್ಕುಲಿಯೊಂದು ಹೀಗಾಗ್ಬಿಟ್ಟಿದೆ, ಅಂದುಕೊಳ್ಳುತ್ತಲೇ ಗಣೇಶನನ್ನು ನೋಡಲು  ಬಂದವರ ಮುಂದೆ ಚಕ್ಕುಲಿ, ಪಂಚಕಜ್ಜಾಯದ ತಟ್ಟೆ ಇಡಬೇಕಾದ ಅನಿವಾರ್ಯತೆ ಮತ್ತು ತಪ್ಪಿತಸ್ತ ಭಾವ!


ನಾವು ಚಿಕ್ಕವರಿರುವಾಗ ಹಬ್ಬದ ಮರುದಿನ ಗಣೇಶನನ್ನು ನೋಡಲು ಎಲ್ಲರ ಮನೆಗಳಿಗೆ ಹೋಗುವುದು ಸಾಮಾನ್ಯವಾಗಿತ್ತು  ಮತ್ತು ಅದು ಸಂತಸದ ವಿಷಯ. ಒಮ್ಮೆ ಯಾರದ್ದೋ ಮನೆಗೆ  ನಾನು ಗೆಳತಿಯ ಸಂಗಡ ಹೋಗಿದ್ದೆ. ಅಲ್ಲಿ  ಮಕ್ಕಳಿಗೆ ಅಂತ ಚಕ್ಕುಲಿಯನ್ನು ಎರಡು ಜಾಸ್ತಿನೇ ಇಟ್ಟಿದ್ದರು. ಲಗುಬಗೆಯಿಂದ ಚಕ್ಕುಲಿಯೊಂದನ್ನು ಬಾಯಿಗಿಟ್ಟು   ಕಚ್ಚಿದ್ದೆ ತಡ.. ನನ್ನ ಹಾಲುಹಲ್ಲು 'ಪಟಕ್' ಎಂದಿತು.ಅದೆಷ್ಟು ಗಟ್ಟಿಯಿತ್ತೆಂದರೆ ಎರಡು ಕಲ್ಲಿನ ಮದ್ಯೆ ಇಟ್ಟು  ಜಜ್ಜಿದರೂ ಮುರಿಯದಷ್ಟು. ಮೊದಲ ಹಲ್ಲು ಹೀಗೆ ಮುರಿದಿದ್ದು ನನಗೆ ಭಯವಾಯಿತು. ಮಾತೆ ಆಡದೇ ಸುಮ್ಮನೆ ಹೊರಗೆ ಬಂದು ಬಾಯಲ್ಲಿ ತುಂಬಿಕೊಂಡ ರಕ್ತ ಉಗುಳಿದ್ದೆ. ಮತ್ತೆ ಅಲ್ಲಿಂದ ಅವರ  ಪಕ್ಕದ ಮನೆಗೆ ಹೋದೆವು. ಅಲ್ಲಿಯ ಗಣೇಶ ಸುಂದರನಾಗಿದ್ದ. ದೊಡ್ಡ ಗಣೇಶ,ದೊಡ್ಡ ಹೊಟ್ಟೆ. ಮುರಿದ ಹಲ್ಲು ಮಾತ್ರಾ ಇನ್ನೂ  ಸುಂದರವಾಗಿ ಕಾಣುತ್ತಿತ್ತು. ಅದಕ್ಕೊಂದು ಉಂಗುರ ಬೇರೆ ಇತ್ತು! ನನಗೆ ಮೊದಲ ಮನೆಯವರು ಕೊಟ್ಟ ಚಕ್ಕುಲಿ ಮತ್ತು   ಮುರಿದ ಹಲ್ಲು ನೆನಪಾಯಿತು. ಹೀಗೆ ಎಲ್ಲರ ಮನೆ ಗಣೇಶನನ್ನೂ ನೋಡಿ ವಾಪಾಸು  ಬರುತ್ತಿರುವಾಗ ನನ್ನಮ್ಮ ಹೇಳಿದ  ಚಂದ್ರ ನಕ್ಕ ಕತೆ ನೆನಪಾಗುತ್ತಿತ್ತು. ಯಾಕೋ ಒಂದಕ್ಕೊಂದು ತಾಳೆಯೇ  ಆಗುತ್ತಿರಲಿಲ್ಲ.    ಅಂತಹಾ ವಿದ್ಯಾಬುದ್ಧಿ ಪ್ರಧಾಯಕ  ಗಣೇಶ, ತನ್ನ ಒಡೆದ ಹೊಟ್ಟೆಗೆ  ಅಶ್ವಿನೀ ದೇವತೆಗಳು ಹಾವು ಕಟ್ಟಿ ಸಕ್ಸಸ್ ಫುಲ್ಲಾಗಿ ಆಪರೇಷನ್ ಮಾಡಿದ್ದನ್ನು ಕಂಡು  ಚಂದ್ರ  ನಕ್ಕನೆಂದು, ಬುದ್ಧಿಯಿಲ್ಲದೆ ತನ್ನದೇ ಹಲ್ಲು ಮುರಿದು ಅವನೆಡೆಗೆ  ಒಗೆಯುತ್ತಾನೆಯೇ? ಅಷ್ಟೊಂದು ಬುದ್ಧಿಗೇಡಿಯೇ ಆ ದೇವರು.  ಅಲ್ಲವೇ ಅಲ್ಲ.  ಯಾವುದೋ ಭಕ್ತರ ಮುಲಾಜಿಗೆ ಸಿಕ್ಕು ಕಲ್ಲುಗಟ್ಟಿ  ಚಕ್ಕುಲಿ ತಿಂದು  ಈ ಪರಿಸ್ಥಿತಿಯನ್ನು ತಂದುಕೊಂಡಿದ್ದಾನೆ ಅನ್ನುವ ವಿಚಾರ ಆವತ್ತೇ ನನಗೆ ಮನದಟ್ಟಾಗಿತ್ತು. ಆಮೇಲಿಂದ  ಯಾರದ್ದೇ ಮನೆಗೆ ಹೋದರು ಚಕ್ಕುಲಿ ತಿನ್ನುವಾಗ ನನ್ನ ಹಲ್ಲಿನ ಸಾಮರ್ಥ್ಯವನ್ನೂ, ಚಕ್ಕುಲಿಯ ಗಟ್ಟೀ ತನವನ್ನೂ ಒಂದಕ್ಕೊಂದು ಹೋಲಿಸಿ ನಂತರ ಮುಂದಡಿಯಿಡುತ್ತೇನೆ!

ಅದಿರಲಿ, ಸಪೂರ,ಹೊಂಬಣ್ಣದ  ಗರಿಗರಿ  ಚಕ್ಕುಲಿ ಮಾಡುವ  ಸುಲಭ ವಿಧಾನವೊಂದನ್ನು ನಿಮಗೆ ಹೇಳುತ್ತೇನೆ.

ಕಡಲೆ ಬೇಳೆ  - 200 ಗ್ರಾಂ
ಉದ್ದಿನ ಬೇಳೆ - 100 ಗ್ರಾ
ಹೆಸರು ಬೇಳೆ - 100 ಗ್ರಾಂ
ಜೀರಿಗೆ           - ಎರಡು ಚಮಚ

  ಇವಿಷ್ಟನ್ನೂ ಬೇರೆ ಬೇರೆಯಾಗಿ ತೆಳು ಹೊಂಬಣ್ಣ ಬರುವ ವರೆಗೆ ಹುರಿದು ಬಿಸಿ ತಣಿದ ಮೇಲೆ ಮಿಕ್ಸಿಯಲ್ಲಿ ಪುಡಿ ಮಾಡಿ. ಸಾಣಿಗೆಯಿಂದ ಸಾಣಿಸಿ.

 ಅಕ್ಕಿಹಿಟ್ಟನ್ನು ಈಗ ಬಾಣಲೆಗೆ ಹಾಕಿ ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳಿ.

ನಾಲ್ಕು ಲೋಟ ಅಕ್ಕಿ ಹಿಟ್ಟಿಗೆ   ಒಂದು ಲೋಟ  ಬೇಳೆ  ಪುಡಿಯನ್ನು ಸೇರಿಸಿ ಮಿಕ್ಸ್ ಮಾಡಿಟ್ಟುಕೊಳ್ಳಿ. ಒಟ್ಟು ಐದು ಲೋಟ ಹಿಟ್ಟಾಯಿತು.
ಪಾತ್ರೆಯೊಂದಕ್ಕೆ ಐದು ಲೋಟ ನೀರು ಹಾಕಿ ಕುದಿಸಿ. ನೀರು ತೆಳುವಾಗಿ ಉಪ್ಪಾಗುವಷ್ಟು ಉಪ್ಪು ಸೇರಿಸಿ.  ಕುದಿದ   ನಂತರ ಒಂದು ಚಮಚ ಬಿಳಿ ಎಳ್ಳು, ಒಂದು ಚಮಚ ಓಮ ಸೇರಿಸಿ.  ಕುದಿಯುತ್ತಿರುವ ನೀರಿಗೆ ಹಿಟ್ಟು ಹಾಕಿ ಓಲೆ ಆರಿಸಿ. ನಂತರ ಚೆನ್ನಾಗಿ ಕದಡಿ ಸ್ವಲ್ಪ ಹೊತ್ತು ಮುಚ್ಚಿಟ್ಟು ಬಿಡಿ.  ಈಗ ನೀಟಾಗಿ ಉಂಡೆ ಮಾಡಿ  ಚಕ್ಕುಲಿ ಮಟ್ಟಿನೊಳಗೆ  ಹಾಕಿ, ಒತ್ತಿ ಚೆಂದಕ್ಕೆ ಚಕ್ಕುಲಿ ಸುತ್ತಿ ಎಣ್ಣೆಯಲ್ಲಿ ಕರಿಯಿರಿ. 
ಈಗ ಹೊಂಬಣ್ಣದ  ಚಕ್ಕುಲಿ ರೆಡಿ.





ನೆನಪಿನಲ್ಲಿಡಬೇಕಾದ ಅಂಶಗಳು.
*   ಸಮ ಸಮ ನೀರು ಹಾಕುವುದು ಮುಖ್ಯ. ಮತ್ತೆ ಹಿಟ್ಟು ಸೇರಿಸುವುದೂ, ನೀರು ಸೇರಿಸುವುದೂ ಮಾಡಿದಲ್ಲಿ ಗಟ್ಟಿ ಅಥವಾ ಮೆತ್ತಗಾಗುತ್ತದೆ.

* ಬೇಳೆಗಳ ಅನುಪಾತವನ್ನು ಬೇಕಾದರೆ ಅವರವರ ರುಚಿಗೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು, ಆದರೆ ನೀರು ಮಾತ್ರ ಎಲ್ಲಾ ತರದ ಹಿಟ್ಟಿಗೂ 1:1 ಅನುಪಾತದಲ್ಲಿರಬೇಕು.

*   ಒಲೆ  ಉರಿ ಹದವಾಗಿರಬೇಕು. ದೊಡ್ಡ ಉರಿ ಅಥವಾ ಚಿಕ್ಕ ಉರಿಯಾದರೆ  ಕರಟಿ ಹೊಗುತ್ತದೆ ಅಥವಾ ನಾರಾಗುತ್ತದೆ.

* ಹಿಟ್ಟಿಗೆ ಎಣ್ಣೆಯನ್ನೋ, ಬೆಣ್ಣೆಯನ್ನೋ  ಸೇರಿಸುವ ಅಗತ್ಯವಿಲ್ಲ. ಪರಿಮಳಕ್ಕೆ ಬೇಕಿದ್ದರೆ  ಒಂದು ಚಮಚ ತುಪ್ಪ ಸೇರಿಸಬಹುದು.

* ವಿಶೇಷ ಸೂಚನೆಯೆಂದರೆ ಎಣ್ಣೆಯಲ್ಲಿಯೇ ಕರಿಯಬೇಕು!


 ಮಾಡಿ ನೋಡಿ ಹೇಳಿ.ನನ್ನನ್ನುತಿನ್ನಲು  ಕರೆಯಿರಿ.  ಗಟ್ಟಿಯಾದರೆ ಮೊದಲೇ ಹೇಳಿ!  ಈ ಮೊದಲೇ ನಿಮಗೆ ಇನ್ನೂ ಉತ್ತಮ  ವಿಧಾನಗಳು ಗೊತ್ತಿದ್ದಿದ್ದರೆ  ಅದನ್ನೂ  ಹೇಳಿ..

ವಂದನೆಗಳು.

6 comments:

  1. ಇಷ್ಟೂ ಕಾಳಿನ ಪುಡಿಯೊಂದಿಗೆ ಚಕ್ಕುಲಿ ಮಾಡಿಲ್ಲ.. ನಾನು ಪ್ರಯತ್ನಿಸುವೆ.. ಥಾಂಕ್ಸ್ ವಿಜಯ

    ReplyDelete
  2. ಚಕ್ಕುಲಿ ತಯಾರಿಕೆಯ ವಿವರ ನೋಡಿ,ವಿಜಯಕ್ಕನ ಮನೆಗೊಮ್ಮೆ ಚಕ್ಕುಲಿ ತಿನ್ನಲು ಹೋಗಬೇಕೆನಿಸಿತು..

    ReplyDelete
  3. ಚುಕ್ಕಿ ಮೇಡಂ ಇಂದ ಚಿತ್ತಾರದ ಚಕ್ಕುಲಿ...ತುಂಬಾ ಚೆನ್ನಾಗಿದೆ ಲೇಖನ, ಚಕ್ಕುಲಿ ಮಾಡುವ ವಿಧಾನ..ಹಾಗು ಗಣಪ ತನ್ನ ದಂತವನ್ನು ಮುರಿದುಕೊಂಡ ಕಾಲ್ಪನಿಕ ರೀತಿ..ಹಾಗೆಯೇ ಪಟ್ಟಣದಾಚಿಗಿನ ಹಬ್ಬದ ಸಂಪ್ರದಾಯ...ಅದರ ಸಂಭ್ರಮ ಹಾಗೆ ಕಣ್ಣಿಗೆ ಬಂತು..ಧನ್ಯವಾದಗಳು ಮೇಡಂ

    ReplyDelete
  4. ಪ್ರಯತ್ನಿಸುತ್ತೇನೆ ಈ ಮಿಶ್ರಧಾನ್ಯದ ಪುಡಿಗಳ ಚಕ್ಕುಲಿ. ನಾನು ಮಾಡುವ ಸುಲಭ ವಿಧಾನ ಎಂದರೆ ಒಂದು ಲೋಟ ಉದ್ದಿನ ಬೇಳೆಯನ್ನು ಕೆಂಪಗಾಗುವಂತೆ ಹುರಿದು, ಮೂರು ಲೋಟ ನೀರು ಹಾಕಿ ಕುಕ್ಕರ ನಲ್ಲಿ ಬೇಯಿಸಿ ಚೆನ್ನಾಗಿ ಮಸೆದು ನಾಲ್ಕು ಲೋಟ ಅಕ್ಕಿ ಪುಡಿ ಸ್ವಲ್ಪ ಬಿಸಿ ಎಣ್ಣೆ ಉಪ್ಪು ಜೀರಿಗೆ ಅರಸಿನ ಬೆರೆಸಿ ಚೆನ್ನಗಿ ಕಲಸಿ ಒರಳಿನಲ್ಲಿ ಚಕ್ಕುಲಿ ಮಾಡಿ ಎಣ್ಣೆಯಲ್ಲಿ ಕರಿಯುವುದು. ಮೃದು ಚಕ್ಕುಲಿಗಳು ಸಿದ್ಧ :) :)

    ReplyDelete
  5. ಮೊದಲಿನ ಮೂರು ಪ್ಯಾರಾ ಅಸ್ಟೇ ನಾ ಓದಿದ್ದು...ಮುಂದಿಂದೆಲ್ಲಾ ನಂಗೊತ್ತಾಗಲ್ಲ...
    ಅದನ್ನು ಓದಿ ಅರ್ಥ ಮಾಡಿಕೊಂಡವರೆಲ್ರೂ ಮನೆಲ್ಲಿ ಮಾಡೋ ಪ್ರಯತ್ನ ಮಾಡಿ,ಚೆನಾಗಿದ್ರೆ ನಂಗೊಂದ್ ನಾಲ್ಕು ಪಾರ್ಸಲ್ ಮಾಡಿ ಹಾ ಹಾ.... ತಿನ್ನೋದ್ ಒಂದೇ ನಂಗ್ ಚೆನಾಗ್ ಗೊತ್ತು :)..
    ಅಕ್ಕಾ ಚಕ್ಲಿ ಪುರಾಣ ಛೋಲೋ ಇದ್ದು...ಬರಿತಾ ಇರು..

    ReplyDelete