Thursday, November 11, 2010

ಪೀಟಿಯೆಂಬ ಬಾಲ್ಯದ ಗೆಳೆಯ

ಬಾಲ್ಯ ...
ಈಗ ಅದೊಂದು ಸುಂದರ ಕನಸು. ಇತ್ತು.. ಈಗಿಲ್ಲ.
ಆಗಾಗ ಅದನ್ನು ನೆನೆಸಿಕೊಳ್ಳಲು ಎಷ್ಟೊಂದು ಸುಖ..!
ಬಾಲ್ಯವೆಂಬ ಮಧುರ  ನೆನಪುಗಳ ಕಣಜವನ್ನೊಮ್ಮೆ ಬಗ್ಗಿ ನೋಡಿದಾಗ  ಎಷ್ಟೆಲ್ಲಾ ಮನೋಹರ ದೃಶ್ಯಗಳು ಕಾಣಸಿಗುತ್ತವೆ !
ಅದೊಂದು ಕಲ್ಮಶವಿಲ್ಲದ ಜಗತ್ತು.
ಪ್ರಕೃತಿಯೊಂದಿಗಿನ ಪ್ರತಿ ಜೀವಿ ,ಪ್ರತಿ ವಸ್ತುವಿನೊಂದಿಗೂ ಜೀವ ಬೆಸೆದುಕೊಂಡಿರುವ ಕಾಲ.
ಕಣ್ಣುಗಳಲ್ಲಿ ಸದಾಕಾಲ ಮಿಂಚುವ ಬಣ್ಣಗಳು, ಕಲ್ಪನೆಗಳು,  ಕನಸುಗಳು.


ಹೌದು.. ನಮ್ಮ ನೆನಪಿನ ಸರಪಳಿಯಲ್ಲಿ  '' ಪೀಟಿ '' ಎಂಬ ಜೀವಿಯೂ ಒಂದು ಕೊಂಡಿಯಲ್ಲವೇ..?
ಈ ಹೆಸರೇ ಅಪ್ಯಾಯಮಾನ.ಕೆಲವೆಡೆ ಅದಕ್ಕೆ ''ಬಿರ್ಬಿಟ್ಟಿ'' ಎಂತಲೂ ಕರೆಯುತ್ತಾರೆ.
ಇಂಗ್ಲಿಷಿನಲ್ಲಿ'ಡ್ರ್ಯಾಗನ್ ಫ್ಲೈ ' ಎನ್ನುವ ಘೋರವಾದ ಹೆಸರಿನಿಂದ ಕರೆಯುತ್ತಾರೆ.
ಆಗೆಲ್ಲ ನಮಗೆ ರಜೆ ಬಂತೆಂದರೆ ಸಾಕು.ಆಟಕ್ಕೆ ತರಾವರೀ ವಸ್ತುಗಳು.
ಖಾಲೀ ಬೆಂಕಿ ಪೆಟ್ಟಿಗೆಯಲ್ಲಿ  ಹಿಡಿದಿಟ್ಟುಕೊಂಡಿರುವ ರೇಷ್ಮೆ ಹುಳು, ಮಣ್ಣು ಗುಬ್ಬಿ, ಎಲೆಕೀಟ ಹೀಗೆ ಅನೇಕ ಸಹಯಾತ್ರಿಗಳು.
ಆಗಾಗ ತೆಗೆದು ನೋಡಿ ಇದೆಯೋ ಇಲ್ಲವೋ ಎಂದು ಖಾತ್ರಿ ಪಡಿಸಿಕೊಳ್ಳುವುದು ಅಂದಿನ ಜವಾಬ್ದಾರೀ  ನಡವಳಿಕೆಗಳಲ್ಲಿ ಒಂದು.






ಮಧ್ಯಾನ್ಹದ ಮೇಲೆ ಕುಂಟಬಿಲ್ಲೆಯೋ, ಜೂಟಾಟವೋ  ಮತ್ಯಾವುದೋ ಆಟವಾಡುತ್ತಾ ಆಟದ ಜೊತೆ ಜೊತೆಗೆ ಅಂಗಳದಲ್ಲಿ ಬರಕಲಾದ ತುಳಸೀ ಗಿಡದ ಮೇಲೋ, ಒಣಕಲು ಕೊಂಬೆಯ ಮೇಲೋ,  ಬಟ್ಟೆ ಒಣ ಹಾಕುವ ನ್ಯಾಲೆಯ ಮೇಲೋ, ಮನೆ ಹಿಂದಿನ ದರೆಯಲ್ಲಿ ಬೆಳೆದುಕೊಂಡಿರುವ ಹುಲ್ಲು ಗಿಡದ ಮೇಲೋ ಕುಳಿತಿರುತ್ತಿದ್ದ ಪೀಟಿಗಳನ್ನು ಹಿಡಿಯುವುದೇ ಒಂದು ಮೋಜಿನ ಕೆಲಸ.
ಅಲ್ಲದೆ ಆಗ ಅದೊಂದು ಸಾಹಸದ ಕೆಲಸ ಕೂಡಾ ಆಗಿತ್ತು.ಧ್ಯಾನಸ್ತರಾಗಿ ಗಿಡದ ಮೇಲೆ ಕೂತಿರುತ್ತಿದ್ದ ಪೀಟಿಗಳನ್ನು ನಿಧಾನವಾಗಿ ಸದ್ದು ಮಾಡದೆ ಎರಡೇ ಬೆರಳುಗಳಿಂದ ರೆಕ್ಕೆಗಳನ್ನು ಜೋಡಿಸಿ ಹಿಡಿಯಬೇಕೆನ್ನುವ ಹೊತ್ತಿಗೆ ಬಾಲ ತಿರುವಿ ಜಾರಿಕೊಂಡು ಹಾರಿ ಮತ್ತೊಂದೆಡೆ ಕೂರುತ್ತಿದ್ದ ಇವುಗಳನ್ನು ಹಿಡಿಯಲು ಪ್ರೋಫೆಶನಲ್ಸೆ ಬೇಕಾಗಿತ್ತು.
ಹಾಗೆಲ್ಲ ಎಲ್ಲರಿಗೂ ಪೀಟಿ ಹಿಡಿಯಲು ಸಾಧ್ಯವೇ,,?ಈ ಕೆಲಸಕ್ಕೆ ಸ್ಪೆಶಲಿಷ್ಟರು ಅಣ್ಣಯ್ಯನೋ, ಬಾವಯ್ಯನೋ ಆಗಿರುತ್ತಿದ್ದುದು ಎಲ್ಲಾ ಕಡೆ ಸರ್ವೇ ಸಾಮಾನ್ಯ.


ಹೆಣ್ಣುಮಕ್ಕಳಿಗೆ ಈ ವಿಚಾರಗಳಲ್ಲಿ  ಕೆಲವು ಟೆಕ್ನಿಕಲ್ ಪ್ರಾಬ್ಲಂ ಇದ್ದಿದ್ದು ಸುಳ್ಳಲ್ಲ.
.''ಪೀಟಿ ಹಿಡಿಯಕ್ಕೆ ಹೋಗಿ ಫ್ರಾಕ್ ಹರಕ ಬೈಂದ ಮಳ್ಳು''
  ''ಪೀಟಿ ಹಿಡಿಯಕ್ಕೆ ಹೋಗಿ ಕಾದಿಗೇಲಿ ಬಿದ್ಗ ಬೈಂದ ಮಂಗ ''
ಎಂಬಿತ್ಯಾದೀ ಅವಹೇಳನಕಾರೀ ಮಾತುಗಳನ್ನು ಕೇಳುವುದು, ಅಮ್ಮನ ಹತ್ತಿರ ಬೈಸಿಕೊಳ್ಳುವುದೂ  ನಮಗೆ ಸುತರಾಂ ಇಷ್ಟವಿರಲಿಲ್ಲ.








ಅದೂ ಅಲ್ಲದೆ '' ಅದೆಂತ್ರಾ  ಪೀಟಿ ಹಿಡಿಯದು..?ಅದ್ನ ಸಾಯ್ಸೀರೆ ದೇವ್ರು ಶಾಪ ಕೊಡ್ತಾ ತಡೀರಿ. ಮುಂದಿನ ಜನ್ಮದಾಗೆ ಕಡಿಗೆ ನಿನ್ಗನೂ ಪೀಟಿಯಾಗೇ ಹುಟ್ಳಕ್ಕು.'' ಎನ್ನುವ ದೊಡ್ಡವರ ಮೊರಲ್ ಸೈನ್ಸ್ ಭಯ..


ಮತ್ತೂ ಏನಾದರೂ ಗ್ರಾಚಾರಕ್ಕಿಟ್ಟು ಕೊಂಡರೆ ತಪ್ಪಿಸಿಕೊಳ್ಳಲು ಉಪಾಯವೂ ಇತ್ತು.
'' ನಾ ಅಲ್ಲ ಬಾವಯ್ನೆ ಹಿಡ್ಕೋಟಿದಾ''ಎಂದು ಬಾವಯ್ಯನ ಮೇಲೆ ತಪ್ಪು ಹೊರಿಸಿದರೆ ಅಲ್ಲಿಗೆ ಆ ಕೇಸು ಮುಕ್ತಾಯವಾದಂತೆ.
ನೆಂಟರ ಮನೆ ಮಾಣೀಗೆ  ಬೈಯ್ಯುವ ಹಕ್ಕು ಇಲ್ಲ ಎನ್ನುವ ಅಲಿಖಿತ ಸ೦ವಿಧಾನ.!


ಚಿಟ್ಟೆ ಸುದ್ದಿಗೆ ಅಷ್ಟಾಗಿ ಹೋಗುತ್ತಿರಲಿಲ್ಲ ನಾವು.
ಚಿಟ್ಟೆ ನೋಡಲು ಸುಂದರವಾದರೂ ಆಡಲು ಸೂಕ್ಷ್ಮ.ರೆಕ್ಕೆ ಹಿಡಿದರೆ ಬಣ್ಣವೆಲ್ಲಾ ಕೈಗೆ ಮೆತ್ತಿಕೊಳ್ಳುತ್ತದೆ.
ಕೆಲವೊಮ್ಮೆ ರೆಕ್ಕೆಯೇ ಕಿತ್ತೂ ಬರುತ್ತದೆ.ಹಿಡಿಯೋಣವೆಂದರೂ  ಅದು ಕೂತಲ್ಲಿ ಕೂರದ ಚಂಚಲೆ.
ಆಡಿಕೊಳ್ಳುವುದಕ್ಕಿಂತ ಹಾಡಿಕೊಳ್ಳಲೇ  ಲೇಸು.ಪಾತರಗಿತ್ತಿ ಪಕ್ಕ ..ನೋಡೀದೆನ ಅಕ್ಕ ಎನ್ನುತ್ತಾ...








ಪೀಟಿ ಹಾಗಲ್ಲ.
ಪಾರದರ್ಶಕ ಬಣ್ಣದವು,ರೆಕ್ಕೆಗಳು ಗಡಸು, ಮಕ್ಕಳ ಕೈಗೆ ಸಿಕ್ಕಿದರೂ ಸುಮಾರಿಗೆ ಹಾನಿಗೊಳಗಾಗದು.
ಅದರ ಬಾಲದ ತುದಿಗೆ ಬಾಳೇ ಪಟ್ಟೇ  ದಾರ ಕಟ್ಟಿ ಒಂದು ತುದಿ ಕೈಯಲ್ಲಿ ಹಿಡಿದುಕೊಂಡು ಮೇಲಕ್ಕೆ  ಹಾರಿದಂತೆ ಕೆಳಕ್ಕೆ  ಜಗ್ಗುತ್ತಾ ಅದನ್ನು ಹಾರಿಸುತ್ತಿದ್ದಾರೆ ಹೆಲಿಕ್ಯಾಪ್ಟರ್ ನೇ ಹಾರಿಸುತ್ತಿದ್ದೀವೇನೋ ಎಂಬಂತಹಾ ಅನುಭೂತಿ ಉಂಟಾಗುತ್ತಿತ್ತು ನಮಗೆ...!
ಅದಕ್ಕೆ ನೋವಾಗುತ್ತದೆ, ಅದು ಹಿಂಸೆ ಅನ್ನುವ ವಿಚಾರಗಳೆಲ್ಲಾ ತಲೆಗೆ ಹೋಗುತ್ತಿದ್ದುದು ಆಮೇಲೆ.
ಮತ್ತು ಹೀಗೆ ಆಡುವಾಗ ಕೆಲ ತುಂಟ ಹುಡುಗರ ಕೈಯಲ್ಲಿ ಸಿಕ್ಕಿ ಅದು ಆಪರೇಶನ್ ಪೀಟಿಯಾಗಿ,   ಡಿಸೆಕ್ಷನ್ ಗೊಳಗಾಗಿ ಉಳಿದ ಸಂಭಾವಿತ ಹುಡುಗರ ಕೈಯ್ಯಲ್ಲಿ ಬೈಸಿಕೊಳ್ಳುವುದೂ, ' ಹೇಳ್ಕೊಡ್ತಿ  ತಡೀ '  ಎನ್ನುವ ಬ್ಲಾಕ್ ಮೇಲ್ ಗೊಳಗಾಗುವುದೂ, ಅದಕ್ಕೆ ಬೆಣ್ಣೆಕಡ್ಡಿ, ಗೋಲಿ , ಹಳೆ ಗ್ರೀಟಿಂಗ್ ಕಾರ್ಡು  ಇತ್ಯಾದಿ ರೂಪದಲ್ಲಿ ಲಂಚ ರುಶುವತ್ತುಗಳ ವ್ಯವಹಾರ ಕೂಡಾ ಇತ್ತು ಬಿಡಿ.




ಅದೆಲ್ಲ ನೆನಪಾದದ್ದು  ಎದುರಿನ ಸೈಟಿನಲ್ಲಿ ಪೀಟಿಗಳ ಹಾರಾಟ ಕಂಡಾಗ.ನನ್ನ ಮನಸ್ಸೂ ಕೆಲ ಕಾಲ ಬಾಲ್ಯದ ಕಡೆ ಹಾರಿದ್ದು ಸುಳ್ಳಲ್ಲ..








ವಂದನೆಗಳು.

33 comments:

  1. ನಮ್ಮ ಬಾಲ್ಯದ ದಿನಗಳನ್ನೆಲ್ಲ ನೆನಪು ಮಾಡಿದ್ದಕ್ಕೆ ಧನ್ಯವಾದಗಳು :) ನಾನು ಸಣ್ಣವನಿರುವಾಗ ಪೀಟಿಯ ರೆಕ್ಕೆ ಹಿಡಿಯದೆ ಸೀದಾ ಅದರ ಬಾಲವನ್ನೇ ಹಿಡಿಯುತ್ತಿದ್ದೆ... ಪೀಟಿ ಹಿಡಿದು ಅದು ಕೊಂಡಿಯಂತೆ ಬಗ್ಗಿ ನನ್ನ ಬೆರಳನ್ನು ಕಚ್ಚಿ ಹಿಡಿದದ್ದು ಇನ್ನು ನೆನಪಿದೆ :) ನೀಲಿ, ಹಸಿರು, ಕೆಂಪು ಹೀಗೆ ವಿಧವಿಧವಾದ ಬಣ್ಣದ ಬಾಲಗಳ ಪೀಟಿ ಈಗ ನೆನಪಷ್ಟೇ....

    ReplyDelete
  2. ವಿಜಯಶ್ರೀ,
    ಬಾಲ್ಯದ ಸವಿನೆನೆಪುಗಳಲ್ಲಿ ಅತಿ ಮಧುರ ನೆನಪುಗಳೆಂದರೆ, ಇಂತಹ ಕೀಟಗಳನ್ನು ಹಿಡಿಯುವದು, ಕಡ್ಡಿಪೆಟ್ಟಿಗೆಯಲ್ಲಿ ಇಟ್ಟುಕೊಳ್ಳುವದು ಇತ್ಯಾದಿ.
    ನಮ್ಮನ್ನೆಲ್ಲ ಮತ್ತೆ ’ಪೀಟಿ ಹಿಡಿಯಲು’ ಕರೆದೊಯ್ದ ನಿಮಗೆ ಅನೇಕ ಧನ್ಯವಾದಗಳು. ತುಂಬ ಸುಂದರವಾದ, ಆಪ್ತವಾದ ಲೇಖನ.

    ReplyDelete
  3. ಸುಂದರ ಲೇಖನ ಏರೋಪ್ಲೇನ್ ಚಿಟ್ಟೆ ಅಂತ ಕೆಲವುಕಡೆ ಕರಿತಾರೆ.ಇದು ನಮ್ಮ ಬಾಲ್ಯದ ದಿನಗಳ ಸಂಗಾತಿ ಬಾಲ್ಯದಲ್ಲಿ ಇದನ್ನು ಹಿಡಿಯಲು ಹೋಗಿ ಗಿಡಗಳ ಬುಡದಲ್ಲಿ ಹಾವು ಕಂಡು ಪೇರಿ ಕಿತ್ತ ಅನುಭವ ಮರೆಯಲಾಗದ್ದು . ಬಾಲ್ಯದ ನೆನಪು ತರಿಸುವ ಸುಂದರ ಚಿತ್ರಗಳ ನಿಮ್ಮ ಲೇಖನ ಇಷ್ಟವಾಯಿತು. ಥ್ಯಾಂಕ್ಸ್.

    ReplyDelete
  4. ಅದಕ್ಕೆ ದಾರ ಕಟ್ಟುತ್ತಿದ್ದ ಜ್ಞಾಪಕ!!

    ReplyDelete
  5. ಪೀಟಿಯನು ಹಿಡಿದು pity ಗೊಳಿಸುತ್ತಿದ್ದ ನೆನಪುಗಳನ್ನು ಗರಿಕೆದರಿಸಿದಿರಿ. ನಾವೆಲ್ಲ ಅದಕ್ಕೆ "ಕಲ್ಲೊಡ್ಡ" ಎನ್ನುತಿದ್ದೆವು. ಅದರ ರೆಕ್ಕೆಯನ್ನು ಹಿಡಿದು ಸಣ್ಣ ಸಣ್ಣ ಕಲ್ಲುಗಳನು ಅದರಿ೦ದ ಎತ್ತಿಸುವುದು, ನ೦ತರದಲ್ಲಿ ಅದರ ಬಾಲವನ್ನು ದಾರದಿ೦ದ ಬ೦ಧಿಸಿ ಅದಕ್ಕೊ೦ದು ಸಣ್ಣ ಕಲ್ಲು ಕಟ್ಟಿ ಹಾರಿಬಿಡುವುದು. ಬಾಲ್ಯದ ನೆನಪುಗಳು ಯಾವಾಗಲೂ ಮಧುರ. ನೆನಪಿಸಿದ್ದಕ್ಕೆ ನಿಮಗೆ ಧನ್ಯವಾದಗಳು.

    ಅನ೦ತ್

    ReplyDelete
  6. vijayashree maDam,
    naanu swalpa dinada hinde idara photo tegedadduu nenapaayitu....

    chennaagi nenapisidiri...

    ReplyDelete
  7. ಮುಗ್ಧ ಬಾಲ್ಯದ ನೆನಪುಗಳೇ ಮಧುರ... ಬಿರ್ಬಿಟ್ಟಿ ಹಿಡಿದು ಬೆಂಕಿ ಪೊಟ್ಟಣದಲ್ಲಿ ಇಟ್ಟು ಗುಂಯ್ ಅನ್ನೋ ರೇಡಿಯೋ ಮಾಡಿರುವ ಸಂಶೋಧನೆ ಕೂಡ ನಮ್ಮದಾಗಿತ್ತು.
    ಭಾರತದ ಸರಕಾರ ನಮಗೆ ಪೇಟೆಂಟ್ ಅರ್ಜಿ ಸಲ್ಲಿಸಲು ಬಿಡಲೇ ಇಲ್ಲ :-) ಹಾಗಾಗಿ ನೊಬೆಲ್ ಮಾರ್ಕೋನಿ ಪಾಲಾಯಿತು:-)
    ಪುಟ್ಟ ಬಣ್ಣದ ಕಾಗದ ದಾರ ಕಟ್ಟಿ ಬಿರ್ಬಿತ್ತಿಯ ಬಾಲಕ್ಕೆ ಶೃಂಗಾರ ಕೂಡ ಮಾಡಿದರೆ ಪರಮ ಖುಷಿ. ಎರಡು ಬಿರ್ಬಿತ್ತಿಗಳನ್ನು ವಿರುಧ್ಧ ದಿಕ್ಕಿಗೆ ಕಟ್ಟಿ ಕುಸ್ತಿಯನ್ನು ಏರ್ಪಡಿಸಿ ಕೊನೆಗೆ ಬಾಲ ತುಂಡಾಗಿ ಎರಡು ಹಾರಿಹೊದಾಗಲೇ ಪಂದ್ಯ ಮುಗಿಯುತ್ತಿತ್ತು.ಬಳಸಿದ ಭಾಷೆ ಬಾಲ್ಯ ಎಲ್ಲವು ನಮ್ಮ ಭಾಷೆ ಬಾಲ್ಯಕ್ಕೆ ಸಾಮ್ಯತೆ ಇದೇ. ಈಗ ಭತ್ತದ ಗದ್ದೆಗೆ ಹೋದರೆ ಬಿರ್ಬಿಟ್ಟಿಗಳ ದಂಡೇ ಸಿಗುತ್ತದೆ.
    ಶಿವರಾಂ

    ReplyDelete
  8. peetee hididu adara baalakke daara kattiddu nenapaytu! olle barha..

    ReplyDelete
  9. ಅಪ್ಪನ ಜೊತೆ ಗಾಡಿಯಲ್ಲಿ,
    ಹಟಮಾಡಿ ಮುಂದೆ ಕೂತಾಗ
    ಹಣೆಗೆ ಮುತ್ತಿಕ್ಕಿದ್ದು ಈ ಪೀಟೀ ಹುಳ

    ಅಣ್ಣನ ಜೊತೆ ಜಗಳ ಮಾಡಿ,
    ಏನು ಮಾಡಿದರೂ ಕೊಡದಿದ್ದಾಗ
    ಅಜ್ಜಿಯ ಹತ್ತಿರ ಪುಕಾರು ಹೇಳಿಸಿದ ಭಾರಿ ಭಾರಿ ಕುಳ

    ತುಂಬೆ ಗಿಡದ ಮೇಲೆ ಕುಳಿತಾಗ
    ಗಬಕ್ಕನೆ ಹಿಡಿದು,ಅಣ್ನನಿಗಿಂತ ನನ್ನ ಲೆಕ್ಕ ಹೆಚ್ಚಿಸಿದ್ದು
    ಇದೇ ಕೆಂಪು ಪೀಟೀ ಹುಳ






    ಕೊನೆಗೊಂದು ದಿನದೊಡ್ಡಪ್ಪ ಕರೆದು ,
    ದಾರ ಕಟ್ಟಿದರೆ ಅದಕ್ಕೆಷ್ಟು ನೋವು ಎಂದು
    ಹೇಳಿದಾಗ ,ಕಣ್ಣೀರು ಬಳ ಬಳ!!!!!!

    ReplyDelete
  10. ನಮ್ಮಲ್ಲಿ ಇದನ್ನ ಹೆಲಿಕ್ಯಾಪ್ಟರ್ ಚಿಟ್ಟೆ ಅಂತ ಹೇಳ್ತಿದ್ವಿ ...ನಂಗು ಇದರ ಅನುಭವ ತುಂಬಾನೆ ಇದೆ...ಚನ್ನಾಗಿದೆ ನೆನಪಿನ ಬರಹ

    ReplyDelete
  11. ನಾನು ಚಿಕ್ಕವನಿದ್ದಾಗೆ ಈ 'ಏರೋಪ್ಲೇನ್' ಹುಳದ ಜೊತೆ ಹನಿರು ಜೀರುಂಡೆಯನ್ನೂ ತುಂಬಾ ಕಾಡಿಸ್ತಿದ್ದೆ...

    http://www.dreamstime.com/shiny-green-beetle-thumb153117.jpg

    ನಮ್ಮ್ತ ಗೆಳೆಯರ ಸೈನ್ಯ ರಜದ ದಿನದಲ್ಲಿ ಬೇಳಗ್ಗೆ ೭ರ ಮೊದಲು ಗದ್ದೆ ಬಯಲಿಗೆ ಹೋಗಿ ಈಚಲು ಮರದಲ್ಲಿ ಜೀರುಂಡೆಗಾಗಿ ಹುಡುಕ್ತಿದ್ವಿ. ಸಿಕ್ಕರೆ ಅದನ್ನ ಬೆಂಕಿಪೊಟ್ಟದ ಒಳಗೆ 'ಸಾಕಿ', ಜಾಲಿ ಮರದ ಸೊಪ್ಪು 'ಊಟ' ಹಾಕುತ್ತಿದ್ದದ್ದು ನೆನಪು. ಅದರ ಹೊಟ್ಟೆಯ ಮೇಲಿರುವ ಗೆರೆಯಿಂದ ಅದು ಗಂಡೋ ಹೇಣ್ಣೋ ಹೇಳುವಷ್ಟು ಪರಿಣಿತರಾಗಿದ್ದೆವು. ಕೆಲವರು ಇದನ್ನು ೨-೫ ರೂ. ವರೆಗೆ ಮಾರಾಟ ಮಾಡುತ್ತಿದ್ದದ್ದೂ ಇತ್ತು.

    ಹಳೆಯ ನೆನಪುಗಳನ್ನು ನೆನಪಿಸಿದಕ್ಕೆ ಧನ್ಯವಾದಗಳು... :)

    ReplyDelete
  12. ಬಾಲ್ಯದಲ್ಲಿ ನಾವು ಈ "ರೆಕ್ಕೆ ವಿಮಾನ"ದ ಹಿಂದೆ ತಿರುಗಿ ದಾರ ಕಟ್ಟಿ ಆಡಿಸಿ ಆಮೇಲೆ ಬಿಡುತ್ತಿದ್ದೆವು. ಬೋರಾಣಿ ಎಂಬ ಹುಳುವನ್ನ್ ಹಿಡಿದು ಬೆಂಕಿ ಪೆತ್ತಿಕೆಯಲ್ಲಿತ್ತು ಅದಕ್ಕೆ ಬನ್ನಿ ಮತ್ತು ಹುಣಸೆ ಏಳಿ ತಿನ್ನಿಸಿ ಸಾಕುತ್ತಿದ್ದೆವು. ಇನ್ನು ಕಪ್ಪು ದಪ್ಪನೆಚರ್ಮದ ಸಣ್ಣ ಕೀಟ(ಹೆಸರು ಮರೆತಿದೆ ) ಅದಕ್ಕೆ ಬೆನ್ನಿಗೆ ಮೇಣ ಹಚ್ಚಿ ಅದಕ್ಕೆ ಮೇಲಿನಿಂದ ರಬ್ಬರ್ ಚೇಳು ಹಲ್ಲಿ ಅಂಟಿಸಿ ಮನೆಯಲ್ಲಿ ಓಡಾಡಲು ಬಿಟ್ಟು ಜನಗಳನ್ನ ಹೆದರಿಸಿದ್ದು ಉಂಟು. ಈಗಿನ ಮಕ್ಕಳಿಗೆ ಈ ಮೋಜುಗಳ ಪರಿಚಯವೇ ಇಲ್ಲ ಅಲ್ಲವೇ!
    ಬಾಲ್ಯ ನೆನಪಿಸಿದ ತಮ್ಮ ಲೇಖನಕ್ಕೆ ಜೈ ಹೋ!

    ReplyDelete
  13. ನಾನು ಹಿಡಿಯುತ್ತಿದ್ದೆ ಈ ಬಿಂಬಿಗಳ, ದಾರ ಕಟ್ಟಿ ಹಾರಿಸುತ್ತಿದ್ದೆ ಅದರೊಂದಿಗೆ ಹಾರುತ್ತಿದ್ದೆ :) ಸುಂದರವಾದ ಚಿತ್ರಗಳು ಹಾಗೆ ಲೇಖನ ಕೂಡ :)

    ReplyDelete
  14. Hmm onda sala perti hula kanmunde hari hotu idna odidaga.. novagtu heli hidile :)

    ReplyDelete
  15. ಮೇಡಮ್.

    ಡ್ರ್ಯಾಗನ್ ಪ್ಲೈಗೆ ಕನ್ನಡದಲ್ಲಿ ಪ್ರೀತಿಯಿಂದ ಪೀಟಿ ಎಂದು ಕರೆಯುವುದು ಎಷ್ಟು ಚೆನ್ನಾಗಿದೆಯಲ್ಲವೇ...ಅದರ ಫೋಟೊಗಳನ್ನು ತೆಗೆದಿದ್ದೇನೆ. ಅವು ನೋಡಲು ಅದೆಷ್ಟು ಚೆಂದ ಅಲ್ಲವೇ..ನಿಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್.

    ReplyDelete
  16. ನನ್ನೊ೦ದಿಗೆ ನಿಮ್ಮ ಪೀಟಿಯೊ೦ದಿಗಿನ ಬಾಲ್ಯದ ಅನುಭವವನ್ನು ಹೇಳಿಕೊ೦ಡಿದ್ದೀರಿ, ಹ೦ಚಿಕೊ೦ಡಿದ್ದೀರಿ. ಪರಸ್ಪರ ಮಾತಾಡಿದ ಅನುಭವ ಕೊಟ್ಟಿತು ನನಗೆ.ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ..

    ಮನಮುಕ್ತಾ ..
    ಥ್ಯಾ೦ಕ್ಸ್..

    ಶರತ್
    ಹೌದು ಅದು ಬಾಲ ಹಿಡಿದಾಗ ಕಚ್ಚುತ್ತೆ ಅ೦ತ ನಾವು ಬಿಟ್ಟುಬಿಡುತ್ತಿದ್ದೆವು..
    ಥ್ಯಾ೦ಕ್ಸ್.

    ಕಾಕ..
    ನನ್ನೊ೦ದಿಗೆ ಪೀಟಿ ಹಿಡಿಯಲು ಬ೦ದದ್ದು ಖುಶಿಯಾಯ್ತು..
    ನಿಮಗೆ ನನ್ನ ವ೦ದನೆಗಳು.

    ReplyDelete
  17. ಬಾಲು ಅವರೆ
    ನಿಮ್ಮ ಅನುಭವವನ್ನು ಹ೦ಚಿಕೊ೦ಡಿದ್ದೀರಿ ಧನ್ಯವಾದಗಳು.

    ಸುಬ್ರಮಣ್ಯ
    ಹೌದು..ಥ್ಯಾ೦ಕ್ಸ್

    ಅನಂತ ಸರ್
    ನನಗೂ ನೆನಪಾಯ್ತು.. ಕಲ್ಲೊಡ್ಡ ಅನ್ನುತ್ತಿರಲಿಲ್ಲ ಆದರೆ ಕಲ್ಲು ಹೆಕ್ಕಿಸುತ್ತಿದ್ದೆವು..ಥ್ಯಾ೦ಕ್ಸ್ ಸರ್..

    ReplyDelete
  18. ದಿನಕರ
    ..ಥ್ಯಾ೦ಕ್ಸ್

    ಶಿವರಾ೦
    ನಿಮಗೆ ನೋಬೆಲ್ ಬರದಿದ್ದುದಕ್ಕೆ ನನಗೂ ಭಾರೀ ಖೇದವಾಯ್ತು....... ನಿಮ್ಮ ಬಾಲ್ಯವನ್ನು ಹ೦ಚಿಕೊಡಿದ್ದಕ್ಕಾಗಿ ಥ್ಯಾ೦ಕ್ ಯೂ..

    ವಿನಾಯಕ ಕೆ.ಎಸ್
    ನನ್ನ ಬ್ಲಾಗಿಗೆ ಸ್ವಾಗತ..
    ಥ್ಯಾ೦ಕ್ಸ್

    ReplyDelete
  19. ವಿಜಯಶ್ರೀ,
    ನಮ್ಮನೆ ಗಾರ್ಡನ್ ನಲ್ಲಿ ಒಂದೊಂದು ಸಲ ' ಪೀಟಿ ' ಕಂಡಾಗೆಲ್ಲ ಹಳೆ ನೆನಪಾಗ್ತು. ಅಜ್ಜನ ಮನೇಲಿ ಬತ್ತದ ಗದ್ದೆ ನಡುವೆ ಓಡಾಡಕಾದ್ರೆ ಮರಿ ಪೀಟಿ ನ ನಂಗ ಹೆಣ್ಣು ಮಕ್ಕ ಹಿಡೀತಿದ್ಯ. ದೊಡ್ಡ ಪೀಟಿ ಹಿಡ್ಯ ಕೆಲಸ ಮಾತ್ರ ಗಂಡು ಹುಡುಗರದ್ದು. ಕಡಿಗೆ ಅದರ ಬಾಲಕ್ಕೆ ದಾರ ಕಟ್ಟಿ ಹಾರ್ಸದು .. ಒಂದೊಂದು ಸಲ ಎಲ್ಲಾ ಸೇರ್ಕ್ಯಂದು " ಪೀಟಿ ರೇಸ್ " ಮಾಡದೂ ಇತ್ತು. ಯಾರ ಪೀಟಿ ಎಷ್ಟು ದೂರ ಹಾರ್ತು ಹೇಳಿ !!!
    ನನ್ನ ಮಗಳಿಗೆ ಹೇಳಿದಾಗ ಅವಳಿಗೊಂಥರಾ ಥ್ರಿಲ್ ! ನಂಗೂ ಪೀಟಿ ಹಿಡ್ಯಕೆ ಹೇಳಿ ಕೊಡು ಹೇಳಿ ಬೆನ್ನು ಬೀಳ್ತ . ಆದ್ರೆ .. ಪೀಟಿ ಬೇಕಲೇ ?
    ನೆನಪು ಮಾಡಿದ್ದಕ್ಕೆ ಥ್ಯಾಂಕ್ಸ್ !

    ReplyDelete
  20. ಚಿನ್ಮಯ ಭಟ್
    ಚ೦ದದ ಕವನದ ಮೂಲಕ ಪೀಟಿಯೊ೦ದಿಗಿನ ಬವಣೆಯನ್ನು ಹ೦ಚಿಕೊಡಿದ್ದೀರಿ..:)
    ಥ್ಯಾ೦ಕ್ಸ್

    ReplyDelete
  21. ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ
    ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು.

    ReplyDelete
  22. ತೇಜಸ್ ಜೈನ್
    ನಿಮ್ಮ ಅನುಭವವನ್ನು ಹ೦ಚಿಕೊಡಿದ್ದೀರ ಥ್ಯಾ೦ಕ್ಸ್.

    ವಸಂತ್
    ಥ್ಯಾ೦ಕ್ಸ್


    Snow White

    :) ಥ್ಯಾ೦ಕ್ ಯೂ

    ReplyDelete
  23. ಸೀತಾರಾ೦ ಸರ್..

    ನಿಮ್ಮ ಕೀಟಗಳೊ೦ದಿಗಿನ ಬಾಲ್ಯ ಚೆನ್ನಾಗಿದೆ..
    ನಿಮ್ಮ ಎಲ್ಲಾ ಪ್ರತಿಕ್ರಿಯೆ.. ಪ್ರೊತ್ಸಾಹಗಳಿಗೂ ನನ್ನ ಅನ೦ತ ವ೦ದನೆಗಳು..



    Soumya. B

    ಥ್ಯಾ೦ಕ್ಸ್


    ಪ್ರವೀಣ್
    ವ೦ದನೆಗಳು...

    ReplyDelete
  24. ಚಿತ್ರಾ

    ಹೌದು..ನಿ೦ಗ್ಳ ಪೀಟಿ ರೇಸ್ ಚೊಲೊ ಇದ್ದು..
    ಮಕ್ಕ ಪೀಟಿ ಜೊತೀಗೆ ಚೊಲೊ ಆಡ್ತ್ವೆ...ಅವ್ಕೆ ಎ೦ತೆ೦ತಾ ಯೋಚ್ನೆ ಬತ್ತೊ ಅದನ್ನೆಲ್ಲಾ ಕಾರ್ಯಗತ ಮಾಡ್ದೆ ಬಿಡ್ತ್ವೆ ಇಲ್ಲೆ...
    ಥ್ಯಾ೦ಕ್ ಯೂ

    ReplyDelete
  25. ಇದಕ್ಕೆ ಪೀಟಿ ಎನ್ನುತಾರೆ ಎಂದು ನನಗೆ ಗೊತ್ತೇ ಇರಲಿಲ್ಲ ಮೇಡಂ. ನಿಮ್ಮ ಮಾಹಿತಿ ಪೂರ್ಣ ಚಿತ್ರ ಬರಹಕ್ಕೆ ಅನಂತ ನಮನಗಳು.

    ReplyDelete
  26. ಓಹ್ ! ತುಂಬ ಚೆನ್ನಾಗಿದೆ.

    ReplyDelete
  27. `ಪೀಟಿ'ಯೊ೦ದಿಗಿನ ನಿಮ್ಮ ಬಾಲ್ಯದ ಅನುಭವ ಬಹಳ ಚೆನ್ನಾಗಿದೆ. ನಾವು `ಕೋಲು ಚಿಟ್ಟೆ' ಅ೦ತಿದ್ವಿ!

    ReplyDelete
  28. marethe hogidda peetiyannu matte nenapisidakke thumba thanks... adara baalakke daara kattutiddudu, adannu hidiyalu prayathna paduttiddudu yellavu nenapaayithu...

    ReplyDelete
  29. ಗುಬ್ಬಚ್ಚಿ ಸತೀಶ್
    ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆಗೆ ವ೦ದನೆಗಳು.


    ಸುಬ್ರಹ್ಮಣ್ಯ..
    ಥ್ಯಾ೦ಕ್ಸ್.

    ಪ್ರಭಾಮಣಿಯವರೆ
    ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆಗೆ ವ೦ದನೆಗಳು.

    ReplyDelete