Sunday, June 5, 2011

ಹಲ್ಲು ನೋವಿನ ಕಥೆ- ವ್ಯಥೆ..!

ನನಗೆ ಎಷ್ಟೋ ಸಲ ಅನ್ನಿಸಿದೆ ಜ್ಞಾನ ಬಂದಿದೆ ಎಂದು...!  ಮತ್ತು ಆಗಾಗ ಅನ್ನಿಸುತ್ತಲೇ ಇರುತ್ತದೆ.  ಗಂಟಲ ದ್ವಾರದಿಂದ ತುಸುವೇ ಮುಂದೆ ಎರಡೂ ಪಕ್ಕದಲ್ಲಿರುವ ನಾಲ್ಕು ಹಲ್ಲುಗಳಲ್ಲಿ ಯಾವುದಾದರೂ ಒಂದು ಹಲ್ಲು ನೋವು ಶುರುವಾದಾಗ ತಟ್ಟನೆ ಗೋಚರವಾಗುತ್ತದೆ ಹಲ್ಲಿದೆ ಎಂಬುದರ ಜ್ಞಾನ.!
ಹದಿನೇಳರಿಂದ ಇಪ್ಪತೈದರ ನಡುವಿನ ವಯಸ್ಸಿನಲ್ಲಿ ಅದೇನೇನು ಕನಸು ಕಾಣುತ್ತ ಇರುವೆವೋ ಅದನ್ನೆಲ್ಲ ಒಮ್ಮೆಲೇ ಅಳಿಸಿ ಹಾಕುವಂತೆ ಈ ಜ್ಞಾನ ದಂತಗಳೆಂಬ ಹಲ್ಲುಗಳು ಮೂಡಲು ಶುರುವಾಗುತ್ತದಲ್ಲ;  ಆಗ ಗೊತ್ತಾಗುತ್ತದೆ ಹಲ್ಲಿನ ಮಹತ್ವ.. ಅಲ್ಲಿಯವರೆಗೆ ಸರಿಯಾಗಿ ಹಲ್ಲು ಸ್ವಚ್ಚ ಮಾಡಿಕೊಳ್ಳುವುದರ ಬಗ್ಗೆ ಯೋಚನೆ ಮಾಡದ ಎಲ್ಲರೂ ಜಾಗ್ರತರಾಗ ತೊಡಗಿಬಿಡುತ್ತಾರೆ! ಹಲ್ಲಿನ ಬಗ್ಗೆ ತ೦ತಾನೇ  ಸ್ವಲ್ಪ ಜ್ಞಾನ ಇಟ್ಟುಕೊಳ್ಳುತ್ತಾರೆ..!


ಹುಟ್ಟುವಾಗಲೇ ಸಾಕಷ್ಟು ಕಷ್ಟ ಕೊಡುತ್ತಲೇ ಬರುವ ಜ್ಞಾನ ದಂತಗಳೆಂಬ ಅನುಪಯೋಗಿ ವಸ್ತುಗಳಿಂದ  ಏನೇನು ಸಮಸ್ಯೆಯಾಗುತ್ತದೆಂಬುದನ್ನು ಅನುಭವಿಸಿಯೇ ಅರಿತುಕೊಳ್ಳಬೇಕು. ಹುಟ್ಟುವಾಗ ಸಿಕ್ಕಾಪಟ್ಟೆ ನೋವು ..ಕೆಲವಂತೂ ಹುಟ್ಟುವಾಗಲೇ ಹುಳುಕಾಗಿರುತ್ತವೆ. ಅಡ್ಡಾದಿಡ್ಡಿ ವಕ್ರ ಕೊಕ್ರವಾಗಿ ಹುಟ್ಟಿದರಂತೂ ಸರಿಯೇ ಸರಿ. ಮೇಲಿನ ದಂತಕ್ಕೆ ಅಥವಾ ಮೇಲ್ಪದರಕ್ಕೆ  ತಾಗಿ ಅಲ್ಲಿ ಹುಣ್ಣು ಮಾಡಿ ಬಾಯಿ ಬಾಯಿ ಬಿಡುವಂತೆ ಮಾಡಿಬಿಡುತ್ತದೆ  ಸಾಯಲಿ.
ವಸಡಿನಲ್ಲಿ ರಕ್ತ, ಬಾವು.. ನೋವು.ನೋವು ಬರುವುದಾದರೂ  ವರ್ಣಿಸುವುದು ಸಾಮಾನ್ಯರಿಗೆ ಸಾಧ್ಯವಿಲ್ಲ.  ಆ ಬದಿಯ ತಲೆ, ಕುತ್ತಿಗೆ, ಮೈಕೈ ಎಲ್ಲಾ ಚುಳುಚುಳು  ನೋವು ಶುರುವಾಗಿ  ನೋವಿನ ಮೂಲ ಯಾವುದು ಎನ್ನುವುದೇ ಗೊತ್ತಾಗದು. ಅಂತೂ   ಹುಟ್ಟುಟ್ಟುತ್ತಲೇ  ದಂತವೈದ್ಯರಿಗೆ ದುಡ್ಡು ಮಾಡಿ ಕೊಡಲು ತಯಾರಾಗಿ ಬಿಡುತ್ತದೆ  ಕರ್ಮ.

ಆಹಾರವನ್ನು ಜಗಿಯಲು ಒಂದು ಚೂರೂ ಸಹಾಯ ಮಾಡದಿದ್ದರೂ ಸರಿ ಅದರ ಶೇಖರಣೆ  ಜವಾಬ್ಧಾರಿ ಮಾತ್ರಾ ತನ್ನದೇ ಎಂಬಂತೆ  ಅಲ್ಲಲ್ಲಿ ತೂತು.!ಒಳ್ಳೆ 'ಕೊಟ್ಟ'ದಂತೆ.
  ಹಿಂದೆ ಪ್ಲೇಗ್ ಮಾರಿ ಬಂದಾಗ ಊರಿಗೆ ಊರೇ ಗುಳೆ ಹೊರಡುವ ಸಮಯದಲ್ಲಿ ತಮ್ಮಲ್ಲಿರುವ ಪಾತ್ರೆ ಪರಡಿ ಅಕ್ಕಿ ಇನ್ನಿತರೇ ಸಾಮಾನುಗಳನ್ನು  ನೆಲದಲ್ಲಿ 'ಕೊಟ್ಟ'  ಮಾಡಿ  ಅದರಲ್ಲಿ ಭದ್ರವಾಗಿ ಮುಚ್ಚಿಡುತ್ತಿದ್ದರು.  ನೆಲದಲ್ಲಿ ಒಂದು ಎರಡ್ಮೂರು ಅಡಿ ಆಳ ತೋಡಿ ಅದನ್ನು ಬಳಿದು ಚಂದ ಮಾಡಿ ವಸ್ತುಗಳನ್ನು ಅದರಲ್ಲಿ ಇಟ್ಟು ಮುಚ್ಚುತ್ತಿದ್ದರಂತೆ. ಒಂತರಾ ದೊಡ್ಡ ಹಂಡೆಯಾಕಾರದಲ್ಲಿ ಇರುತ್ತಿತ್ತು ಈ ಕೊಟ್ಟ. ಬಳಿಕ ಪ್ಲೇಗಿನ ತೀವ್ರತೆ ಕಡಿಮೆಯಾದಾಗ ವಾಪಾಸು ಊರಿಗೆ ಮರಳಿ ತಮ್ಮ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರಂತೆ. ಸ್ವಲ್ಪವೂ ಹಾಳಾಗಿರುತ್ತಿರಲಿಲ್ಲವಂತೆ.

ಈ ಹಲ್ಲಿನಲ್ಲೂ ಹಾಗೆಯೇ ಆಹಾರ ಪದಾರ್ಥ ಸೇರಿಕೊಂಡರೂ  ಗಡಿಬಿಡಿಯಲ್ಲಿ ತೆಗೆದು ಬಿಸಾಕಬೇಕಾದ ಅನಿವಾರ್ಯತೆ.ಮತ್ಯಾವಾಗಾದ್ರೂ ಉಪಯೋಗಕ್ಕೆ ಅಂತ ಇಟ್ಟು ಕೊಳ್ಳುವ ಹಾಗಿಲ್ಲ.!
ನೀವು  ಯಾವ ಟೂತ್ಪೆಷ್ಟನ್ನೇ ಬೇಕಾದರೂ ಬಳಸಿ ..  ಯಾವ ಸೊಂಟ ಮುರಿದ ಬ್ರಷ್ಯನ್ನೇ ಬಳಸಿ.. ಆ ಹಲ್ಲಿನ ವರೆಗೆ  ಬ್ರಶ್ಶು ತಾಗುವುದೇ ಇಲ್ಲ.  ತಿಪ್ಪರಲಾಗ ಹಾಕಿದರೂ ಯಾವ ನಮೂನೆ ಸರ್ಕಸ್ ಮಾಡಿದರೂ  ಜ್ಞಾನ ದಂತವನ್ನು ಚಕ ಮಕ ಮಾಡಲು ಸಾಧ್ಯವೇ ಇಲ್ಲ..!ಎದುರಿನ ಹಲ್ಲಿನ ನಗುವನ್ನು ಕಂಡು ಯಾರೂ ಮೋಸ ಹೋಗ ಬೇಡಿ..!!
ಹಲ್ಲಿನ ತೊಂದರೆ ಮಲೆ ನಾಡಿಗರಲ್ಲಿ ಹೆಚ್ಚು .ಸಿಹಿ ತಿನ್ನುವುದೊಂದು ಕಾರಣ ವಾದರೆ ತಾಂಬೂಲ ಇನ್ನೊಂದು ಕಾರಣ. ನೋಡಿ ಬೇಕಾದರೆ , ಮಲೆನಾಡಿನ ಜನ ಬಾಯಿ ಬಿಟ್ಟು ಹಲ್ಲು ತೋರಿಸಿ ನಗುವುದೇ ಇಲ್ಲ. ಸಿಕ್ಕಾಪಟ್ಟೆ ನಗು ಬಂತೆಂದರೆ ಆಕಾಶಕ್ಕೆ ಮುಖ ಮಾಡುತ್ತಾರೆ!  ಹವಳದಂತಹಾ ಹಲ್ಲಿನವರು!

ಹ್ಞು,ಇರಲಿ  ಈ ಹಲ್ಲಿನ  ಸಹವಾಸವೇ ಬೇಡ ಎ೦ದು ಹಲ್ಲು ಕೀಳಿಸಲು ದಂತ ವೈದ್ಯರ ಬಳಿಗೆ ಹೊದರೂ ಅಲ್ಲೂ ಏನು ಸುಖವಾಗಿ ಹಲ್ಲು ಕೀಳುವುದಿಲ್ಲ..  ಅವರ ಶಸ್ತ್ರಾಸ್ತ್ರಗಳನ್ನು ನೋಡಿದರೆ ನನಗೆ ಅಂಜಿಕೆ.
ನಾನು ಕೆಲವು ವರ್ಷಗಳ ಹಿಂದೆ ಹಲ್ಲು ಕೀಳಿಸಲು ಮೊದಲ ಸಲ ಒಬ್ಬ ಲೇಡಿ ಡಾಕ್ಟ್ರ ಹತ್ರ ಹೋಗಿದ್ದೆ.   ಆ ಪುಣ್ಯಾತ್ಗಿತ್ತಿ ಸುಮಾರು ಅರ್ಧ ಗಂಟೆಗೂಡಿ ನನ್ನ ಹಲ್ಲು ಕಿತ್ತದ್ದು  ವರ್ಣನೆಗೆ ನಿಲುಕದ  ಇತಿಹಾಸ ...!!!..   ಬಾಯಿ ಹರಿದೇ ಹೋಗುವುದರಲ್ಲಿತ್ತು.! ಅಹಿಂಸಾ ವಾದಿಯೇನೋ ಎಂಬಂತೆ ಸಾಕಷ್ಟು ಹಿಂಸೆ ಮಾಡಿದಳಾ ತಾಯಿ.
ಆಮೇಲಾಮೇಲೆ   ನನಗೆ ಹಲ್ಲಿನ ಸುದ್ದಿಯೆತ್ತಿದರೆ ಎಚ್ಚರ ತಪ್ಪುವಂತೆ ಆಗುತ್ತಿತ್ತು.
ನಾನು ಬಿಟ್ಟರೂ ಹಲ್ಲು ಬಿಡದು.. ಹಲ್ಲಿನ ನೋವು ಬಿಡದು ಸ್ವಾಮಿ. ಯಾವ ನೋವು ಬಂದರೂ ಹಲ್ಲು ನೋವೊಂದು ಬರುವುದು ಬೇಡ  ಎನ್ನುವ ಗೋಳಾಟ..   ಮತ್ತೆ ಬೇರೆ ಕಡೆ  ನೋವು ಬಂದಾಗ ಪುನಃ 'ಈ ನೋವೊಂದು ಬಿಟ್ಟು ಯಾವ ನೋವಾದರೂ ಅನುಭವಿಸಿಯೇನು' ಎನ್ನುವ ಪ್ರಲಾಪ..!

ಮತ್ತೆ ಕೆಲ ದಿನಗಳ ನಂತರ  ಇನ್ನೊಂದು ಬದಿಯ  ಹಲ್ಲು ನೋವು ಶುರುವಾಯಿತು.. ಈ ಸಲ ಆ ಲೇಡಿ  ಡಾಕ್ಟ್ರ ಹತ್ತಿರ ಹೋಗಲಿಲ್ಲ, ಬೇರೊಬ್ಬ ಜಂಟಲ್ ಮ್ಯಾನ್  ಡಾಕ್ಟ್ರ  ಹತ್ತಿರ ಮುಖಕ್ಕೆ ಕೈ ಒತ್ತಿ ಹಿಡಿದು ಹೆದರುತ್ತಲೇ ಹೋದೆ. ಪರವಾಗಿಲ್ಲ ಇವರು..!

 ಮರಗಟ್ಟುವ ಇಂಜಕ್ಷನ್ ನೀಡಿ  ಕೆಲ  ನಿಮಿಷ ಆದ ಮೇಲೆ  ಬಾಯಿ ಕಳಸಿ ಹಲ್ಲನ್ನು ಅವರ ಚಿಮ್ಮಟಿಗೆಯಿಂದ ಅಲುಗಾಡಿಸಿದರು..'ಈಗ ಹಲ್ಲು ಕೀಳಲೇ? ' ಅಂದರು. ನಾನು ಬಾಯಿ ಕಳೆದು ಕೊಂಡೇ' ಊಂ,'ಅಂದೆ. 'ಕಿತ್ತಿದ್ದಾಯ್ತು.'ಎಂದು ನಕ್ಕರು ಡಾಕ್ಟ್ರು.   'ವಾವ್' ನನಗೆ ಆದ ಖುಷಿ ಎಷ್ಟೆಂದರೆ ಈಗಿಂದೀಗಲೇ  ಎಲ್ಲಾ ಹಲ್ಲುಗಳನ್ನೂ ಕೀಳಿಸಿ ಬಿಡೋಣ ಅನ್ನುವಷ್ಟು.! 
ಅಲ್ಲವೇ ಮತ್ತೆ..! ಅರ್ಧ ಗಂಟೆ ನಿರೀಕ್ಷೆಯಲ್ಲಿದ್ದವಳಿಗೆ ಅರ್ಧ ನಿಮಿಷದಲ್ಲಿ ಹಲ್ಲು ಕಿತ್ತಾಯ್ತು ಎಂದರೆ ಸಂತೋಷ ಆಗದಿರುತ್ತದೆಯೇ...? 

ಇದರಿಂದ ನನಗೆ ತಿಳಿದ ನೀತಿಯೆಂದರೆ 'ಹಲ್ಲುದುರಿಸುವ ಕಲೆ ಹೆಂಗಸರಿಗಿಂತ  ಗಂಡಸರಿಗೆ ಸಿದ್ಧಿಸಿರುತ್ತದೆ.' ಎನ್ನುವುದು...!
42 comments:

 1. ನಿಜಕ್ಕೂ ಹಲ್ಲು ನೋವು ಯಾರಿಗೂ ಬೇಡ ಹಹಹ... ಹಲ್ಲು ನೆನಪಿಗೆ ಬಂದರೆ ಮೂರ್ಚೆ ಬೀಳುವವರೂ ಇದ್ದಾರೆ ಹಹಹ.... ಆ ಡಾಕ್ಟರ್ ನೀವು ಹೇಳಿದಂತೆ ಅಹಿಂಸಾವಾದಿ ಇರಬೇಕು...

  ReplyDelete
 2. ನಿಮ್ಮ "ನೀತಿ ಕತೆ" ಚೆನ್ನಾಗಿತ್ತು. ಗಂಡಸರಿಗೆ ಇಲ್ಲಾದರೂ ಮುಂದಾಳತ್ವ ಸಿಕ್ಕಿತಲ್ಲಾ , ಅದೇ ಸಂತೋಷ ..:)

  ReplyDelete
 3. ಹಲ್ಲು ನೋವಿನ ವಿಷಯವೆಂದ್ರೆ ಎನೋ ಒಂತರ ವಿಚಿತ್ರ ರೋಮಂಚನ ... ಹಲ್ಲಿನ ಶುರುವಿಗೆ ವಿಲನ್ ಆಗಿ ಕಂಡ್ರು ಮತ್ತೆ ಎನೋ ದನ್ಯತಾಭಾವನೆ... ನನ್ನ ಹಲ್ಲು ನೋವಿನ ವಿಚಿತ್ರ ಪರದಾಟ ನೆನಪಿಗೆ ಬಂತು

  ReplyDelete
 4. ಹಲ್ಲು ನೋವಿನ ವಿಷಯವೆಂದ್ರೆ ಎನೋ ಒಂತರ ವಿಚಿತ್ರ ರೋಮಂಚನ ... ಹಲ್ಲಿನ ಶುರುವಿಗೆ ವಿಲನ್ ಆಗಿ ಕಂಡ್ರು ಮತ್ತೆ ಎನೋ ದನ್ಯತಾಭಾವನೆ... ನನ್ನ ಹಲ್ಲು ನೋವಿನ ವಿಚಿತ್ರ ಪರದಾಟ ನೆನಪಿಗೆ ಬಂತು

  ReplyDelete
 5. yavudo apavaada giraaki hattira hogi halludurisodu gandasarige sai enno tamma abhipraya naanu oppolla. haa heegiddaru irabahudu-gandasara hallu udrisoke hengasaru sai haage hengasara hallu udurisoke gandasaru sai. nanna danta vaidyaru hennu mattu nanna maneyavara vaidyaru gandasaru. adeno ganda -hendati ibbaru Dentists -naanu hodaaga hendati iddaddu munde nanage avre khaayam haage nanna hendati hodaaga gand iddaru avalige avare khaayam. naanu hodaaga ganda iddare swalpa tadeeri nimma doctranne kharitini entaare-alle mele mane irodarinda.

  olle hallu puraana

  ReplyDelete
 6. Sadya iduvaregu nanage hallu novu bandilla...So "ಹಲ್ಲು ನೋವೊಂದು ಬರುವುದು ಬೇಡ....!!" antha bereyavaru anubhavisuvudu node andukondiddene...

  ReplyDelete
 7. ಬೇಡದ ಜಾಗದಲ್ಲಿ ಹಲ್ಲು ಇದ್ದರೆ ತೊಂದರೆ. "ನೀನು ಹಲ್ಕಟ್ಶಿದ್ದಿಯ?" . ಅಂದರೆ ಜನ ತಪ್ಪು ತಿಳಿದುಕೊಳ್ಳುತ್ತಾರೆ.
  ಹಲ್ಕಟ್ಟು ಡಾಕ್ಟರ್ ತುಂಬಾ ಹಣ ಮಾಡುತ್ತಾರೆ. ಹೆಂಗಸರೂ ಸ್ವಲ್ಪ ತಡವಾಗಿಯಾದರೂ ಉದುರಿಸುವುದು ಖಂಡಿತ.
  ಚೆನ್ನಾಗಿದೆ ಬರಹ

  ReplyDelete
 8. ಹಲ್ಲುನೋವಿನ ವಿಷಯದಲ್ಲಿ ನಿಮ್ಮ ವಿವರಣೆ ಅತ್ಯಂತ ಸರಿಯಾಗಿದೆ ಹಾಗು ಗಂಡಸರೇ ಕರುಣಾಳುಗಳು ಎನ್ನ್ನುವ ನಿರ್ಣಯವೂ ಯೋಗ್ಯವಾದದ್ದೇ!

  ReplyDelete
 9. chennagide nimma baraha. "danta sangati bale fajeeti". anubhava ide heegaagi helodu

  ReplyDelete
 10. ಹಲ್ಲು ನೋವು ಬಲ್ಲವರೇ ಬಲ್ಲರು....ಹ್ಹಾ ಹ್ಹಾ ಹ್ಹಾ ಚೆನ್ನಾಗಿದೆ ನಿಮ್ಮ ಹಲ್ಲು ನೋವಿನ ಪುರಾಣ...

  ReplyDelete
 11. ಸ್ವಾರಸ್ಯಕರವಾದ ದ೦ತ ಕಥೆ! ದ೦ತ ಭಗ್ನವೂ ಒ೦ದು ರೋಚಕವಾದ ವಿಷಯ ಎ೦ದು ಅತ್ತ್ಯುತ್ತಮವಾಗಿ ನಿರೂಪಿಸಿದಿರಿ. ಅಭಿನ೦ದನೆಗಳು.

  ಅನ೦ತ್

  ReplyDelete
 12. ಐದು ಹಲ್ಲುಗಳನ್ನು ಕಳೆದುಕೊಂಡರೂ ಒಮ್ಮೆಯೂ ನನಗೆ ಹಲ್ಲುನೋವು ಬಂದಿಲ್ಲ!!!

  ReplyDelete
 13. ಹ್ಹ ಹ್ಹ ಚೆನ್ನಾಗಿದೆ. ಹಲ್ಲುದುರಿಸುವುದರಲ್ಲಿ ಗಂಡಸರೇ ಮೇಲು ಎಂದು ತಿಳಿದ ಮೇಲೆ ಮದುವೆಯಾಗಲು ಧೈರ್ಯ ಬರುತ್ತಿದೆ :)

  ReplyDelete
 14. ಹಾ ಹಾ ಹಾ ವಿಜಿ ,
  ಚೆನಾಗಿದೆ ಹಲ್ಲು ಪುರಾಣ ! ದೇವರ ದಯೆಯಿಂದ , ನನಗೆ ಇನ್ನೂ ಹಲ್ಲು ನೋವಿನ ಅನುಭವ ಆಗಿಲ್ಲವಾದರೂ ,ಮನೆಯಲ್ಲಿ ಕೆನ್ನೆ ಒತ್ತಿ ಹಿಡಿದು ಒದ್ದಾಡುವವರ ಸಂಕಟ ನೋಡಿದ್ದೇನೆ. ಅಮ್ಮ ಅಂತೂ .. " ಹೆರಿಗೆ ನೋವು ಬಿಟ್ಟರೆ ಹಲ್ಲು ನೋವೆ " ಎಂದು ಗೋಳಾಡುತ್ತಿದ್ದುದು ನೆನಪಿದೆ. ಹೆರಿಗೆ ನೋವನ್ನು ಕಂಡಿದ್ದರಿಂದ .. ಹಲ್ಲು ನೋವನ್ನು ಊಹಿಸಿಕೊಳ್ಳಬಲ್ಲೆ. ಹೀಗಾಗಿ .. ನಿನ್ನ ಜೊತೆ ನಾನೂ ಪ್ರಾರ್ಥಿಸಲೇ? "ಹಲ್ಲು ನೋವೊಂದು ಬರುವುದು ಬೇಡ , ದೇವರೇ " ಎಂದು ?

  ReplyDelete
 15. ತುಂಬಾ ಚೆನ್ನಾಗಿದೆ... ನೋವಲ್ಲ, ಬರಹ.
  ಗಂಡು ಡಾಕ್ಟ್ರ ಹತ್ರಾನೇ ಹೋಗ್ಬೇಕು... ಆದ್ರೂ ಹೆಣ್ಣು ಡಾಕ್ಟ್ರು ನೋಡಕ್ಕೆ ಭಾಳ್ ಚಂದ ಇದ್ರೆ ನೋವು ಗೊತ್ತಾಗಲ್ವೇನೋ ಅಂತ ಒಂದು ಡೌಟು :)

  ReplyDelete
 16. To quote Ogden Nash,
  (http://tinyurl.com/dentalnash)

  "some tortures are physical and some are mental, but the one that is both is dental"
  -ಇದು ನನ್ನ ಅನುಭವದ ಮಾತೂ ಸಹ ಹೌದು!

  ReplyDelete
 17. ಹೌದು ಮೇಡಮ್. ನನಗೆ ವಿಸ್ಡಂ ಟೀತ್ ಬಂದಿದೆಯೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಹಲ್ಲು ಕೀಳಿಸಿದ ಅನುಭವವಾಗಿದೆ. ಡಾ| ಸಂಜಯ್ ನಾಯಕ್ ಎಂಬ ರಾಷ್ಟ್ರಪ್ರಶಸ್ತಿ ವಿಜೇತ ವೈದ್ಯರು ನನ್ನ ಹಲ್ಲು ಕಿತ್ತಾಗ ನಿಮ್ಮದೇ ಅನುಭವವಾಗಿತ್ತು. ಅದಕ್ಕೇನು ರಾಷ್ಟ್ರಪ್ರಶಸ್ತಿ ಬೇಕಿಲ್ಲದಿದ್ದರೂ ವೈದ್ಯರು ನುರಿತವರಾಗಿದ್ದರೆ ಸರಿ. ಮತ್ತೆ ಹಲ್ಲು ನೋವು ಅಂದ್ರೆ ದೇವ್ರೆ ಕಾಪಾಡಬೇಕು!

  ReplyDelete
 18. ಮನಸು..
  ಆತ್ಮೀಯ ಪ್ರತಿಕ್ರಿಯೆಗೆ ಥ್ಯಾ೦ಕ್ಸ್..

  ReplyDelete
 19. ಸುಬ್ರಹ್ಮಣ್ಯ..
  ಈ ವಿಚಾರದಲ್ಲೂ ಗ೦ಡಸರಿಗೇ ಕ್ರೆಡಿಟ್ಟು...:)
  ವಿಶ್ವಾಸಕ್ಕೆ ವ೦ದನೆಗಳು.

  ReplyDelete
 20. ಆಶಾ..
  ನಿಜ ವಿಚಿತ್ರ ರೋಮಂಚನ...
  ರೋಮ ರೋಮವೂ ನೋವು..:)
  ಥ್ಯಾ೦ಕ್ಸ್

  ReplyDelete
 21. ಸೀತಾರಾ೦ ಸರ್..
  ನಿಮ್ಮ ಅನುಭವಕ್ಕೆ ನನ್ನ ಸ೦ಪೂರ್ಣ ಗೌರವವಿದೆ..ಅಪವಾದ ಹೀಗೂ ಇರುತ್ತದೆ!

  ನಿಮ್ಮ ಪ್ರತಿಕ್ರಿಯೆಗಳಿಗೆ ಆಭಾರಿಯಾಗಿದ್ದೇನೆ...:)

  ReplyDelete
 22. ಕವಿತಾ..
  ಪುಣ್ಯವ೦ತರು ನೀವು.. ಬಾರದೇಇರಲಿ ನೋವು..
  ವ೦ದನೆಗಳು.

  ReplyDelete
 23. ಶಿವರಾಮ
  ಹಲ್ಕಟ್ಟೂ ಡಾಕ್ಟ್ರಿಗೆ ಒ೦ದು ಸುತ್ತಿಗೆ, ಒ೦ದ್ ಚಿಮಟ ಎರಡಿದ್ರೆ ಸಾಕು.. ಕಡಿಮೆ ಬ೦ಡವಾಳ ..ಜಾಸ್ತಿ ದುಡ್ಡು.

  ಥ್ಯಾ೦ಕ್ಸ್

  ReplyDelete
 24. ಸುನಾಥ್ ಕಾಕ..

  ತಮ್ಮ ಆಲೋಚನೆಗಳು ಎಷ್ಟೊ೦ದು ಧನಾತ್ಮಕ!

  ಧನ್ಯವಾದಗಳು ಕಾಕ..:)

  ReplyDelete
 25. ದೇಸಾಯರೆ..
  ನಿಮ್ಮ ಪ್ರತಿಕ್ರಿಯೆಗೆ ವ೦ದನೆಗಳು.

  ReplyDelete
 26. ಶಶಿ ಜೋಇಸ್
  ಸ್ವಾಗತ ಮತ್ತು ಪ್ರತಿಕ್ರಿಯೆಗೆ ವ೦ದನೆಗಳು.

  ReplyDelete
 27. ಅನ೦ತ್ ಸರ್
  ದ೦ತವಿರುವವರಿಗೆ ನೋವು ಒಮ್ಮೆಯಾದರೂ ಬ೦ದೇ ಬರುವುದು.. ಹಲ್ಲಿರುವುದೇ ನೋವು ಬರಲು.. ಎನ್ನುವುದು ಅನೇಕರ ಅನುಭವ..

  ವ೦ದನೆಗಳು.

  ReplyDelete
 28. ಸುಬ್ರಮಣ್ಯ ಮಾಚಿಕೊಪ್ಪ
  ಐದು ಹಲ್ಲುಗಳು ಮುರುದಿದ್ದು ಹೇಗೆ ಎನ್ನುವುದರ ವಿವರ ಕೊಟ್ಟಿಲ್ಲ ನೀವು!!!

  ಥ್ಯಾ೦ಕ್ಸ್..:)

  ReplyDelete
 29. ಆನಂದ
  ಧೈರ್ಯವಾಗಿ ಮದುವೆಯಾಗಬಹುದು..
  ಆದರೆ ಯಾವುದೇ ಅಪವಾದದ ಹುಡುಗಿ ಸಿಕ್ಕದಿರಲಿ!

  ಧನ್ಯವಾದಗಳು..:)

  ReplyDelete
 30. ಚಿತ್ರಾ
  ಈಗ ಬರದಿದ್ದರೂ ಮು೦ದೆ ಬ೦ದೀತು ಎನ್ನುವುದರ ಎಚ್ಚರಿಕೆಯಿ೦ದ ದೇವರಲ್ಲಿ ಪ್ರಾರ್ಥನೆ ಮಾಡುವ ವಿಚಾರ ಒಳ್ಳೆಯದೇ..:))

  ಥ್ಯಾ೦ಕ್ಸ್

  ReplyDelete
 31. ಸಿದ್ಧಾರ್ಥ
  ಹುಶಾರು..
  ಹೆಣ್ಣು ಡಾಕ್ಟೃ ಚ೦ದ ಅ೦ತ ಹಲ್ಲು ಕೀಳಿಸಲು ಹೋದ್ರೆ ಮರಗಟ್ಟುವ ಇ೦ಜಕ್ಶನ್ ಇಲ್ಲದೇ ಹಲ್ಲುದುರಿಸುವ ಸಾಧ್ಯತೆಗಳಿವೆ...!
  ಥ್ಯಾ೦ಕ್ಸ್

  ReplyDelete
 32. ದುರಹಂಕಾರಿ ಅವರೇ..
  ತಮಗೆ ಚಿತ್ತಾರದರಮನೆಗೆ ಸ್ವಾಗತ.
  ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ ವ೦ದನೆಗಳು.

  ReplyDelete
 33. ಗುಬ್ಬಚ್ಚಿ ಸತೀಶ್
  ನಿಜ ಹಲ್ಲು ಕೀಳಲು ವೈದ್ಯರು ಕುಶಲಕರ್ಮಿಗಳೇ ಆಗಿರಬೇಕಾಗಿರುವುದು ಅವಶ್ಯ..
  ಪ್ರಶಸ್ತಿಯ ನೋಡಿಕೊ೦ಡು ಹಲ್ಲು ನೋವು ಕಡಿಮೆಯಾಗಬಲ್ಲದೇ..?
  ವ೦ದನೆಗಳು.

  ReplyDelete
 34. ನಿಮ್ಮ ಈ ಲೇಖನ ನಕ್ಕು ನಗಿಸಿತು. ನನ್ನದು ಡಿಟ್ಟೋ ಅದೇ ಅನುಭವ. ಹೊಸ ಡಾಕ್ಟರ್ ಹತ್ತಿರ ಹಲ್ಲು ತೆಗೆಸಲು ಹೋಗಿದ್ದೆ.ಡಾಕ್ಟರ್ ಅದೇನು ಮಾಡಿದರೋ ಗೊತ್ತಿಲ್ಲ... ನನಗೆ ಹಲ್ಲು ತೆಗೆದಿದ್ದೆ ಗೊತ್ತಿಲ್ಲ. ಡಾಕ್ಟರ್ ಹಲ್ಲು ತೆಗೆದು ಆಯಿತು ಎ೦ದಾಗ ನ೦ಬಲಿಕ್ಕೆ ಆಗಲಿಲ್ಲ. ಡಾಕ್ಟರ್ ಹಲ್ಲನ್ನು ತೋರಿಸಿದ ಮೇಲೆಯೇ ನ೦ಬಿಕೆ ಬ೦ದಿದ್ದು. ಈಗ ನಾನು ಅವರ ಕಾಯ೦ ಗಿರಾಕಿ :)

  ನಕ್ಕು ನಗಿಸಿದ್ದಕ್ಕೆ ಥ್ಯಾಂಕ್ಸ್ :)

  ReplyDelete
 35. ಸುಧೇಶ್..

  :))

  ಥ್ಯಾ೦ಕ್ಸ್

  ReplyDelete
 36. Madam.. really superb! Wisdom teeth ಕೊಡುವ ನೋವಿನ ಬಗ್ಗೆ ಅದ್ಭುತವಾಗಿ ವಿವರಣೆ ನೀಡಿದ್ದೀರ.. ನಾನೂ ಒಂದೆರಡು ವರ್ಷಗಳ ಕೆಳಗೆ ಇದರಿಂದ ಬಹಳ ಪರದಾಡಿದ್ದೆ! ತಿಂಗಳಿಗೆರಡು ಸಲ ವೈದ್ಯರಿಗೆ ೨೦೦ ರುಪಾಯಿ ಕುಕ್ಕದೇ ಬೇರೆ ವಿಧಿಯಿರಲಿಲ್ಲ! ಕೊನೆಗೆ ಇನ್ನೊಮ್ಮೆ ನೋವು ಬಂದರೆ ಹಲ್ಲು ಕೀಳಬೇಕೆಂದಿದ್ದರು. ನನ್ನ ಪುಣ್ಯಕ್ಕೆ ಅದೇ ಕೊನೆ.. ಮತ್ತೆ ನೋವೇ ಬರಲಿಲ್ಲ. ಈಗ ಸಂಪೂರ್ಣ ಬೆಳೆದು ಸದ್ದಿಲ್ಲದೇ ಕೂತಿದೆ!

  ReplyDelete
 37. Pradeep

  ಆತ್ಮೀಯ ಪ್ರತಿಕ್ರಿಯೆಗೆ ಥ್ಯಾ೦ಕ್ಸ್..

  ReplyDelete
 38. ನಮ್ಮ ದೇಶದಲ್ಲಿ ಇಬ್ಬರಲ್ಲಿ ಒಬ್ಬರಿಗೆ ಹಲ್ಲಿನ,ಬಾಯಿಯ ಸಮಸ್ಯೆಗಳಿವೆಯಂತೆ
  ಸಾಧಾರಣವಾಗಿ ಹಲ್ಲಿನ ಸಮಸ್ಯೆ ತೀವ್ರ ಹಂತಕೆ ಬರುವ ಮೊದಲೇ ಪರಿಹರಿಸುವುದೊಳಿತು ಎನ್ನುತ್ತಾರೆ ತಜ್ಞರು ಇಲ್ಲದೆ ಹೋದರೆ ಅದು ಇತರ ಹಲ್ಲಿನ ಮೇಲೂ ಪ್ರಭಾವ ಬೀರಬಹುದು

  ಒಮ್ಮೆ ನನ್ನ ಹಲ್ಲು ಕಿತ್ತಿದ್ದು ಲೇಡಿ ಡಾಕ್ಟರ್ರೇ ಸ್ವಲ್ಪವೂ ನೋವಾಗಲಿಲ್ಲ ಇಷ್ಟು ಸುಲಭವಾಗಿ ಬಂತಾ ಎಂದು ನಾನೂ ಅಶ್ಚರ್ಯಪಟ್ಟಿದ್ದೆ,ಇದು ಅವರ ಪರಿಣಿತಿ ನಮ್ಮ ಸಮಸ್ಯೆಯ ಮೇಲೆ ಅವಲಂಬಿಸಿದೆ

  ಹಲ್ಲು ಕೀಳುವಾಗಿನ ನೋವಿಗಿಂತಾ ರೋಗಗ್ರಸ್ತ ಹಲ್ಲೇ ಹೆಚ್ಚು ಯಾತನೆ ನೀಡುತ್ತದೆ ಅದೂ ಹಲವು ದಿನ.ವೈದ್ಯರ ಉಪಕರಣಗಳನ್ನು ನಾವು ನೋಡಿಯೇ ಹೆಚ್ಚು ಹೆದರಿಬಿಡುತ್ತೇವೆ.ಒಮ್ಮೊಮ್ಮೆ ಅಸ್ಪತ್ರೆಯ ಆ ಶಾಂತ ವಾತಾವರಣದಲ್ಲಿ ವೈದ್ಯರ ಸೂಜಿ-ಸಿರಿಂಜ್ ಸಹ ಕೆಲವರಿಗೆ ಭಯ ಉಂಟುಮಾಡಬಲ್ಲದು

  ಕೆಲವು ದೇಶಗಳಲ್ಲಿ ಅನೆಸ್ತೇಶಿಯಾ ಕಂಡು ಹಿಡಿವ ಮೊದಲು ದಂತ ವೈದ್ಯ ಎಂದರೆ ಹಾರಿಬಲ್ ಆಗಿದ್ದನಂತೆ. ಒಮ್ಮೆ ಕಲ್ಪಿಸಿಕೊಳ್ಳಿ ನೊಡೋಣ ಹೇಗಿರಬಹುದು ಆಗಿನ ಅನೆಸ್ತೇಶಿಯಾ ಇಲ್ಲದ ಹಲ್ಲು ಕೀಳುವ ಪ್ರಕ್ರಿಯೆ

  ReplyDelete
 39. ದರ್ಶನ
  ನಿಜ ಹಲ್ಲು ಕೀಳಲು ಸೂಕ್ಶ್ಮ ಪರಿಣಿತಿ ಅವಶ್ಯ.. ಮತ್ತು ಸಮಸ್ಯೆಯನ್ನೂ ಅವಲ೦ಬಿಸಿದೆ..
  ಆತ್ಮೀಯ ಪ್ರತಿಕ್ರಿಯೆಗೆ ಥ್ಯಾ೦ಕ್ಸ್..

  ReplyDelete
 40. ಅಲ್ಲ ಮೇಡಮ್, ಲೇಡಿ ಡಾಕ್ಟರ್ ಇನ್ನೂ ಚನ್ನಾಗಿಯೇ ಕಿತ್ತುತಾರೆ.. ಅವರು ಹಲ್ಲು ಕಿತ್ತುತಾ ಇದ್ರೆ, ಗೊತ್ತಾಗೋದೇ ಇಲ್ಲ.. (*Conditions apply)

  ReplyDelete