ಅಯ್ಯೋ ... ನವೆಂಬರ್ ಕಳೆದು, ಡಿಸೆಂಬರ್ ಕೂಡಾ ಮುಗಿಯುತ್ತಿದೆ , ಇನ್ನೂ ಕನ್ನಡ ಕನ್ನಡ ಎಂದು ಗೋಳಿಡುವುದನ್ನು ನಿಲ್ಲಿಸಿಲ್ಲವೆನ್ರೀ ....ಅಂದರೆ ಹುಷಾರ್ ... ಜಗಳ ಮಾಡಿಬಿಡುತ್ತೇನೆ....!!
ನೋಡಿ ಇವರೇ... ನನ್ನ ಮಕ್ಕಳಿಗೆ ದಿನಾಲೂ ರಾತ್ರೆ ಮಲಗುವಾಗ ಕಥೆ ಕೇಳುವ ಅಭ್ಯಾಸ. ಶಿಶಿರನಂತೂ,'' ಅಮ್ಮಾ ಇವತ್ತು ಬರೀಮೂರು ಕಥೆ ಹೇಳಿದರೆ ಸಾಕು, '' ಎನ್ನುತ್ತಾನೆ.....!ಈ ಮಕ್ಕಳಿಗೆ ಕಥೆ ಹೇಳಲು ಸಾಕಷ್ಟು ಪ್ರಾಕ್ಟೀಸ್ ಬೇಕಾಗುವುದು. ಹಗ್ಗದ ಮೇಲೆ ನಡೆದ ಹಾಗೆ.ಶುರು ಮಾಡಿದ ಕಥೆಯನ್ನು ಪೂರಾ ಕೇಳಿದ ಮೇಲೆ , 'ಇದು ಬೇಡ , ಬೇರೆಯದು ಹೇಳು... ' ಎನ್ನುತ್ತಾರೆ.ನಿನ್ನೆ ಹೇಳಿದ ಕಥೆಯನ್ನೇ ಮತ್ತೆ ಹೇಳುವುದಾದರೆ , ಸ್ವರ , ಧಾಟಿ ,ಕಥೆಯ ಶೈಲಿಯ ಸಂಯೋಜನೆಯಲ್ಲಿ ಚೂರೂ ಮುಕ್ಕಾಗದ ರೀತಿಯಲ್ಲಿಯೇ ಹೇಳಬೇಕು. ಸ್ವಲ್ಪ ವ್ಯತ್ಯಾಸವಾದರೂ ,'ನೀನು ಸುಳ್ಳು ಸುಳ್ಳೇ ಕಥೆ ಹೇಳುತ್ತೀಯ , ' ಎಂಬ ಆರೋಪ ಬೇರೆ.
ಕೆಲವೊಮ್ಮೆ ಕಥೆ ಹೇಳೀ ಹೇಳೀ ನನಗೆ ಬೇಸರ ಬಂದು ನನ್ನವರಿಗೆ ಈ ಮಧುರ ಶಿಕ್ಷೆಯನ್ನು ವರ್ಗಾಯಿಸುತ್ತೇನೆ. ಮಕ್ಕಳಿಗೆ ಅಪ್ಪನಕಥೆಯ ವಿಶೇಷತೆಯೇ ಬೇರೆ.......!!!!
ಅಪ್ಪನ ಕಥೆಯಲ್ಲಿ ಬರುವ ಕರ್ಣನ ಕೈಯಲ್ಲಿ A.K. 47 ಇರುತ್ತದೆ... ಅರ್ಜುನ ಸ್ಟೇನ್ ಗನ್ ನಿಂದ ಡಗ...ಡಗ ....ಡಗ..... ಶೂಟ್ ಮಾಡುತ್ತಿರುತ್ತಾನೆ.
ಘತೊತ್ಕಜನ ಬಾಯಿಯಿಂದಂತೂ ಬಾಂಬುಗಳ ಸುರಿಮಳೆ.... !!!
ಭೀಮ ಬಕಾಸುರನಿಗೆ ಒಯ್ಯುವ ಬಂಡಿಯಲ್ಲಿ ಗೋಬಿಮಂಚೂರಿ , ಕಾಶ್ಮೀರಿ ಪುಲಾವ್ , ಟೊಮ್ಯಾಟೋ ಸೂಪ್, ಪಾನಿಪೂರಿ ಇನ್ನಿತರಚಾಟ್ಸ್ ಮತ್ತು ಕೊನೆಯಲ್ಲಿ ಚಾಸ್ [ಮಜ್ಜಿಗೆ] ಇರುತ್ತವಲ್ಲಾ....!
ಗೀತೋಪದೇಶದ ಕೃಷ್ಣ '' worry ಮಾಡ್ಕೋಬೇಡ, ಹೇಳೋದ್ ಸ್ವಲ್ಪ ಕೇಳ್ರಾಜಾ.. ಅನ್ನುತ್ತಾನೆ ಅರ್ಜುನನಿಗೆ.. !
ಕರಡಿ u.p.s. ಮಾರಲು ಹೊರಡುತ್ತದೆ. ಬೆಕ್ಕಿಗೆ ವಿಸಿಟಿಂಗ್ ಕಾರ್ಡ್ ಕೊಡುವುದು. ಕೊಟೇಶನ್ ರೆಡಿ ಮಾಡುವುದು ಮತ್ತು ಬಿಲ್ಕೊಡುವುದು .
ಮಕ್ಕಳಿಗೆ ಅಪ್ಪನ ಕಥೆ ಕೇಳಲು ಮಜಾ ಬರುತ್ತದೆ. ಆದರೆ ಪೂರಾ ಕೇಳಿದ ಮೇಲೆ ಶಿಶಿರನಿಗೆ ಸಂಶಯ ಉಂಟಾಗಿ , 'ಅಮ್ಮಾ ನೀನು ಸರಿಯಾಗಿ ಹೇಳು '... ಎಂದು ನನ್ನ ಕಡೆ ತಿರುಗುತ್ತಾನೆ.ಐಶು ಹೇಳಿಟ್ಟಿದ್ದಾಳೆ , ಪುರಾಣದ ಕಥೆಯಲ್ಲಿ ಬಿಲ್ಲು , ಬಾಣ ಮಾತ್ರ ಇತ್ತು ಅಂತ. ಸಮಸ್ಯೆ ಮತ್ತೆ ನನ್ನ ಸುತ್ತಲೇ ಸುತ್ತ ತೊಡಗುತ್ತದೆ.
ನನ್ನ ಸರಕೆಲ್ಲಾ ಖರ್ಚಾದ ಕಾರಣ ಇದಕ್ಕೊಂದು ಪರಿಹಾರ ಕಾಣಿಸಲು ಹೊಸ ಕಥೆಗಳ ಅನ್ವೇಷಣೆಗೆ ಹೊರಟೆ ಪುಸ್ತಕದಂಗಡಿಗೆ.
ಹತ್ತಿರದಲ್ಲಿರುವ ಅಂಗಡಿಯಲ್ಲಿ ದೊರಕುವ ಪುಸ್ತಕಗಳು ನನ್ನಲ್ಲಿಯೂ ಇರುವುದರಿಂದ , ಬೇರೊಂದು ಮಿನಿ ಮಾಲ್ ಗೆ ಹೋದೆ .. ಬುದ್ಧಿವಂತಳಂತೆ....
ಸಣ್ಣ ಪುಟ್ಟ ವಸ್ತುಗಳನ್ನು ಆಯ್ಕೆ ಮಾಡಿಕೊಂಡು , ಪುಸ್ತಕಗಳೇನಾದರೂ ಇವೆಯಾ ಅಂತ ಕಣ್ಣು ಹಾಯಿಸಿದೆ .. ಪಕ್ಕದ ಸ್ಟ್ಯಾಂಡಿನಲ್ಲಿ ಅರ್ಧ ಇಂಚು ದಪ್ಪದ ರಟ್ಟಿನ ಇಂಗ್ಲೀಷ್ ಪುಸ್ತಕಗಳು ಕಣ್ಣು ಕುಕ್ಕುತ್ತಿದ್ದವು . '' ಕನ್ನಡ ಕಥೆ ಪುಸ್ತಕಗಳು ಎಲ್ಲಿವೆ ...?'' ಅಂತ ಕೇಳಿದಾಗ ಆ ಸೇಲ್ಸ್ ಬಾಯ್ ನನ್ನ ವಿಚಿತ್ರವಾಗಿ ನೋಡಿದ .
''ಇಂಗ್ಲೀಶ್ ಬುಕ್ಸ್ ತಗೊಳ್ಳಿ ಮೇಡಂ ... ಯಾವುದು ಕೊಡಲಿ ....? ''
''ಕನ್ನಡ ಪುಸ್ತಕಗಳು ಇಲ್ವೇನ್ರೀ....?''
''ಇಲ್ಲ ಮೇಡಂ ''
''ಯಾಕಿಟ್ಟಿಲ್ಲ....''? ತರ್ಸಿ ...
ಕಾರಣಗಳು ಸಾವಿರಾರು
''ಇಲ್ಲ ಮೇಡಂ, ಕನ್ನಡ ಪುಸ್ತಕ ಯಾರೂ ಕೇಳಲ್ಲ ,
ಖರ್ಚಾಗಲ್ಲ,
ಪುಬ್ಲಿಶರ್ಸ್ ಕಳಿಸಿ ಕೊಡಲ್ಲ ,''
''ಅರೆ... ನೀವು ಆರ್ಡರ್ ಕೊಟ್ರೆ ಯಾಕೆ ಕಳ್ಸಿ ಕೊಡೋಲ್ಲಾರೀ.....?
ಇಲ್ಲ ಮೇಡಂ , ಅವ್ರು rack ಕೊಡೊಲ್ಲಾ ಮೇಡಂ ....
ನನಗೆ ಸಿಟ್ಟಿನಿಂದ ಮೂರ್ಚೆ ಬರುವುದೊಂದೇ ಬಾಕಿ.
'' ಇದೂ ಒಂದು ಕಾರಣಾ ಏನ್ರೀ.... ? ಏನ್ ಹೇಳ್ತಾ ಇದೀರಾ ... ಇದೆ rack ನಲ್ಲೆ ಇಡಬಹುದಲ್ಲಾ.....ನಾನು ಯಾವ ಮಹಾ ಪುಸ್ತಕಗಳನ್ನು ಕೇಳಿದೆ... ? ಮಕ್ಕಳ ಕಥೆ ಪುಸ್ತಕವಪ್ಪಾ ... ಅದೇ ತರದ ಇಂಗ್ಲೀಶ್ ಪುಸ್ತಕ ಇಟ್ಟಿದ್ದೀರಲ್ರೀ...ಇದು ಯಾವ ರಾಜ್ಯಾರೀ ಕನ್ನಡ ಯಾರೂ ಕೇಳಲ್ಲ ಅನ್ನೋದಕ್ಕೆ..ಬೆಂಗಳೂರೇನು ಅಮೆರಿಕಾದಲ್ಲಿದೆಯಾ....? ಸ್ವಲ್ಪಾ ಆದರೂ ಅಭಿಮಾನ ಬೇಡ್ವಾ... ಇಲ್ಲೇ ವ್ಯಾಪಾರ ಮಾಡ್ತೀರ . ಕನ್ನಡದೊರೆಯೇ ಬೇಕು ಇವೆಲ್ಲ ವಸ್ತು ಖರೀದಿಸಲಿಕ್ಕೆ ....... ಅಮೇರಿಕಾದವರು ಬರುತ್ತಾರಾ.. ಇಂಗ್ಲೀಶ್ ಪುಸ್ತಕ ಕೊಂಡೊಯ್ಯೋದಕ್ಕೆ... ? ''
'' ಮೇಡಂ ತರ್ಸಿ ಕೊಡ್ತೀವಿ ಮೇಡಂ, ಇಂಗ್ಲೀಶ್ ಪುಸ್ತಕ ಚೆನ್ನಾಗಿದೆ ನೋಡಿ , ಮೇಡಂ ''
ಅಂಗಡಿಯಿಂದ ಹೊರಬಂದೆ. ಈ ಇಂಗ್ಲೀಶ್ ಕಥೆ ಪುಸ್ತಕ ಕೊಂಡು ನಾನು ಓದಿಕೊಂಡು ಅದನ್ನು ಕನ್ನಡಕ್ಕೆ ಭಾಷಾಂತರಿಸಿ ಮಕ್ಕಳಿಗೆ ಕತೆ ಹೇಳಬೇಕೇ.... ನಾನು ....? ಆಗದು ... ಆಗದು ... ಕನ್ನಡ ಪುಸ್ತಕವೇ ಬೇಕು....
ಬೆಂಗಳೂರಿಗೆ ಕನ್ನಡ ಅಲರ್ಜಿಯಾ......ಗೊತ್ತಾಗುತ್ತಿಲ್ಲಾ. ಕರುನಾಡಿನ ರಾಜಧಾನಿಯಲ್ಲಿ ಕನ್ನಡಕ್ಕೆ ಇಂತಾ ಅವಸ್ತೆ.ಕನ್ನಡ ಮಾತಾಡುವವರನ್ನು ಕಂಡರೆ ಅಸಡ್ಡೆ. ಕನ್ನಡದಲ್ಲಿ ಸಾಹಿತ್ಯ ರಚನಾಕಾರರಿಗೆ ಬರವಿಲ್ಲ . ಸಾಹಿತ್ಯಾಸಕ್ತರಿಗೂ .... ಕನ್ನಡ ಪುಸ್ತಕ ಮಾರಾಟ ಮಳಿಗೆಗಳ ಕೊರತೆ ಇದೆ ಅಷ್ಟೇ.
ಮತ್ತೆರಡು ಅಂತದೆ ಕುಲಮಳ್ಳಾದ ಮಿನಿ ಮಾಲಿಗೆ ಹೋದೆ .. ನೋಡೋಣ ಇಲ್ಲಿ ಹೇಗೆ ಅಂತಾ .....ಅಲ್ಲೂ ಹಾಗೆಯೇ..
ನನಗೆ ಭಾಷಾಂಧತೆ ಏನಿಲ್ಲ. ಯಾವ ಭಾಷೆಯೇ ಇರಲಿ ,ಮಕ್ಕಳಿಗೆ ಮಾತೃಭಾಷೆಯಲ್ಲಿ ಭಾವನೆ ಅರ್ಥವಾಗುವಷ್ಟು ಚೆನ್ನಾಗಿ ಬೇರೆ ಭಾಷೆಯಲ್ಲಿ ಆಗುವುದಿಲ್ಲ.
ಇಂಗ್ಲೀಶ್ ಒಂದು ತರಾ ಮಾಯಾವೀ ಭಾಷೆ. ಬೆಂಗಳೂರಿಗರಿಗೆ ಅಡಿಕ್ಷನ್. ರಾಜ್ಯದ ಉಳಿದ ಭಾಗಗಳಲ್ಲಿ ಈ ಚಟ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ. ಹೊರನಾಡಿನಲ್ಲಿ ನೆಲೆಸಿರುವ ಎಷ್ಟೋ ಕನ್ನಡದ ಮಂದಿ ಕನ್ನಡದ ಕಂಪನ್ನ , ಪೆಂಪನ್ನ ನೆನೆಸಿಕೊಳ್ಳುತ್ತಾರೆ.
ಮತ್ತೆ ಮರುವಾರ ಅದೇ ಅಂಗಡಿಗೆ ಹೋದೆ . ಬೆನ್ನು ಬಿಡದ ಬೇತಾಳದಂತೆ.
ಕನ್ನಡ ಪುಸ್ತಕ ಇರಲಿಲ್ಲ .ಮುಂದೆ ಮೂರು ಸಾರಿ ಹೋದಾಗಲೂ ಇದೆ ಕಥೆ.ಈ ಸಲ ಮತ್ತೆ ಚೆನ್ನಾಗಿ ಜಗಳ ಮಾಡಿದೆ . ಏನೇನು ಮಾತಾಡಿದೆನೋ... ನೆನಪಿಲ್ಲ ಅಷ್ಟು ಜೋರು ಜಗಳ..
ಅವನು ಪುಸ್ತಕವನ್ನೇ ಇಡದಿದ್ದಿದ್ದರೆ ನನಗೆ ಸಮಸ್ಯೆ ಏನಿರಲಿಲ್ಲ . ಇಂಗ್ಲೀಶ್ ಪುಸ್ತಕ ಇಡುವವನಿಗೆ ಕನ್ನಡ ಪುಸ್ತಕ ಇಟ್ಟರೆ ಆಗುವುದೇನು ಅನ್ನುವುದು ನನ್ನ ಪ್ರಶ್ನೆ. ಕೊಳ್ಳುವವರು ನಾವಿದ್ದೆವಲ್ಲಾ....ಪುಕ್ಕಟೆ ಕೊಡಿ ಅಂತ ಕೇಳಿದೆನಾ..? ಯಾವುದಾದರೂ ಮಾರುವುದು ತಾನೇ.
ಈ ಸಲ ನನ್ನವರೂ ನನ್ನ ಜಗಳಕ್ಕೆ ಜೊತೆಯಾಗಿದ್ದರು.
''ಇನ್ನು ನಿಮ್ಮ ಅಂಗಡಿಗೆ ಯಾವ ಕಾರಣಕ್ಕೂ ಬರುವುದಿಲ್ಲ , '' ಎಂದು ಪ್ರತಿಜ್ಞೆ ಮಾಡಿಯೇ ಹೊರಬಂದೆ .ಮಕ್ಕಳಿಗೆಂದು ಆಯ್ದುಕೊಂಡ ಚಾಕೊಲೆಟ್ ಸಹಾ ಅಲ್ಲೇ ಬಿಸಾಕಿ.....
ದಾರಿಯಲ್ಲಿ ನನ್ನವರಿಂದ ಅವಾರ್ಡ್ ಸಿಕ್ಕಿತು.. '' ಪರವಾಗಿಲ್ಲ ಕಣೆ ನೀನು , ಚೆನ್ನಾಗಿ ಜಗಳ ಮಾಡಿದೆ.. ನನ್ನೊಂದಿಗೆ ಮಾತ್ರಾ ಜಗಳ ಮಾಡುವುದು ಅಂದುಕೊಂಡಿದ್ದೆ, '' ಡ್ರೈವ್ ಮಾಡುತ್ತಿರುವವರ ಮುಖಭಾವ ಗೊತ್ತಾಗಲಿಲ್ಲ. ಮೀಸೆಯಡಿಯಲ್ಲಿ ತುಂಟನಗು ಇದ್ದಿರಲೇ ಬೇಕು.....!
ಸಾಧ್ಯವಾದರೆ ಪ್ರಪಂಚದ ಎಲ್ಲಾ ಭಾಷೆಗಳನ್ನೂ ಕಲಿಯೋಣ. ಎಲ್ಲಾ ತಾಯಂದಿರಿಗೂ ಮಗುವಾಗೋಣ . ಆದರೆ ಹೆತ್ತಮ್ಮನನ್ನು ಮರೆಯುವುದು ಎಷ್ಟು ಸರಿ. ಬೇರೆ ಭಾಷೆಗಳನ್ನು ಗೌರವಿಸೋಣ . ಮಾತೃ ಭಾಷೆಯನ್ನು ಬೆಳೆಸೋಣ. ಅಲ್ಲವೇ....?
ಅದೇ ಸಿಟ್ಟಿನಿಂದ ಈ ಸಲದ ಪುಸ್ತಕ ಪ್ರದರ್ಶನಕ್ಕೆ ಹೋದವಳು ನಾಲ್ಕು ಪುಸ್ತಕ ಹೆಚ್ಚಿಗೆ ಖರೀದಿ ಮಾಡಿದ್ದೇನೆ.....!!
ಆ ಪುಸ್ತಕಗಳಿಗೆ ಬೈಂಡ್ ಮಾಡುವಾಗ ಇದೆಲ್ಲಾ ನೆನಪಾಗಿ ಮತ್ತೆ ಸಿಟ್ಟು ಬಂತು..... ಅಷ್ಟೇ..
ನಾನು ಮತ್ತೆ ಬೇರೆ ಅಂಗಡಿಗಳಿಗೆ ಹೋಗುತ್ತೇನೆ.
ಕನ್ನಡ ಪುಸ್ತಕ ಕೇಳುತ್ತೇನೆ.
ಇರದಿದ್ದಲ್ಲಿ ಜಗಳ ಮಾಡಿ ಕಿರಿಕಿರಿ ಮಾಡುತ್ತೇನೆ.ಈ ತರದ ಅಂಗಡಿಗಳು ಒಂದಲ್ಲ ಒಂದು ದಿನ ಅರಿತುಕೊಳ್ಳಬಹುದು.
ಬಲ್ಲವರು ಕನ್ನಡಕ್ಕಾಗಿ ಕಹಳೆ ಊದುತ್ತಾರೆ.....
ನಾನು.... ಜಗಳ ಮಾಡುತ್ತೇನೆ.....!!!
ಯಾರಿದ್ದೀರಾ......? ನನ್ನ ಸಿಟ್ಟಿಗೆ ತುಪ್ಪ ಹೊಯ್ಯುವವರು......!
..
ನಿಮ್ಮನೆಗೆ ಬಂದು, ನೀವು ಮಕ್ಕಳಿಗೆ ಕಥೆ ಹೇಳುವಾಗ ಕದ್ದು ಕೇಳ್ಬೇಕನ್ನಿಸುತ್ತಿದೆ :)
ReplyDeleteಮುಂದಿನ ಸಲ ಆ ರೀತಿಯ ಅಂಗಡಿಗಳಿಗೇನಾದ್ರೂ ಹೋದ್ರೆ ಕ.ರ.ವೇ ಗೊಂದು ಮಾತು ತಿಳಿಸ್ತೀನಿ ಅಂತ ಹೆದರಿಸಿ :) ( ಸಾಮ... ದಂಡ, ಎಲ್ಲಾ ಪ್ರಯೋಗ ಮಾಡಿನೋಡೋಣ, ಒಂದಾದ್ರೂ ಕ್ಲಿಕ್ಕಾಗಬಹುದು)
ವಿಜಯ,
ReplyDeleteಓದುತ್ತಿರುವಾಗ ಕನ್ನಡದ ಅಭಿಮಾನ ನಮ್ಮನ್ನೆಲ್ಲ ಇನ್ನಷ್ಟು ಹುರಿದುಂಬಿಸಿತು....
ನಿಮ್ಮ ಸಿಟ್ಟಿಗೆ ತುಪ್ಪ ಹೊಯ್ಯುವವರ ಜೊತೆ ನಾವು ಇದ್ದೇವೆ......
"ಕನ್ನಡ ಯಾರೂ ಕೇಳಲ್ಲ ಅನ್ನೋದಕ್ಕೆ..ಬೆಂಗಳೂರೇನು ಅಮೆರಿಕಾದಲ್ಲಿದೆಯಾ....?" ಸಖತ್ತಾಗಿದೆ ಈ ಮಾತು.....
ಉತ್ತಮ ಬರಹ......
ಕರ್ನಾಟಕದಲ್ಲೇ ಕನ್ನಡ ಕೇಳಿದರೆ ನಿಮ್ಮನ್ನು ಭಾಷಾಂಧರು ಅಥವಾ ಸಂಕುಚಿತರು ಎಂಬುವಂತೆ ನೋಡಿ ತಾವೇ ವಿಶ್ವಮಾನವರು ಎಂದು ತೋರಿಸಿಕೊಳ್ಳುವ ಕನ್ನಡಿಗರೂ ಇದ್ದಾರೆ ಎಚ್ಚರ!
ReplyDeleteಅವರು ಪುಸ್ತಕ ಇಟ್ಟಿಲ್ಲ ಅಂತ ಯಾರೂ ಕೇಳಲ್ಲ, ಯಾರೂ ಕೇಳಲ್ಲ ಅಂತ ಅವನೂ ಇಡಲ್ಲ!
ಅಯ್ಯೊ ಆನ೦ದ ಅವರೆ....
ReplyDeleteನನ್ನವರು ನನ್ನ ಜಗಳದ ಜೊತೆ ಸೇರಿಕೊ೦ಡರು ಅ೦ತ ಬರೆದಿದ್ದೆನಲ್ಲಾ .... ಅವರು ಹಾಗೆ ಹೇಳಿದ್ದು. ಕ.ರ. ವೇ . ಗೆ ಕ೦ಪ್ಲೇ೦ಟ್ ಕೊಟ್ರೆ ಏನ್ಮಾಡ್ತಾರೆ ಗೊತ್ತಾ೦ತ . ಆಮೇಲೆ ಕ.ರ.ವೇ ಗೊತ್ತಾ ಅ೦ತಾನೂ ಕೇಳಿದ್ವಿ.....!!!
ನಿಮ್ಮ ಪ್ರೋತ್ಸಾಹಕ್ಕೆ ವ೦ದನೆಗಳು.
ಸವಿಗನಸಿನ ಮಹೇಶ್..
ನಿಮಗೆ ಅ೦ದರೆ ಪರದೇಶದಲ್ಲಿರುವವರಿಗೆ ತಾಯ್ನಾಡ ಮಹತ್ವ ಇಲ್ಲಿಯವರಿಗಿ೦ತಾ ಚೆನ್ನಾಗಿ ಗೊತ್ತಿರುತ್ತದೆ...ನಿಮಗೆ ನಮಸ್ತೆ...
ವಿಕಾಸ್ ಅವರೇ...
ನಿಜಾ ಕಣ್ರೀ....
ಆದರೂ ಪ್ರಯತ್ನ ಮಾಡಿ ನೋಡೋಣ...
ವ೦ದನೆಗಳು.
ವಿಜಯಶ್ರೀ,
ReplyDeleteಕನ್ನಡಕ್ಕಾಗಿ ಜಗಳವಾಡಿದ ನಿಮಗೆ ನನ್ನ ಅಭಿನಂದನೆಗಳು.
ನಿಮ್ಮ ಮನೆಯವರು ಕತೆ ಹೇಳುವ ಶೈಲಿಯನ್ನು ಓದಿ, ನನಗೂ ಅವರ ಕತೆಗಳನ್ನೇ ಕೇಳುವ ಆಸೆ ಆಗುತ್ತಿದೆ!
ನಾನು ಇದ್ದೀನಿ ತುಪ್ಪ ತರ್ತೀನಿ ಬಿಡಿ... ಎಂತಾ ಜನ ಅವರು ಕನ್ನಡ ಮಾರಾಟವಾಗುವುದಿಲ್ಲವೇ..? ಎಷ್ಟೋ ಜನ ಕೊಳ್ಳುವವರು ಇದ್ದಾರೆ ಇವರು ಅಂಗಡಿಯಲ್ಲಿ ಇಟ್ಟರೆ ತಾನೆ ಬಂದುಹೋಗುವವರಿಗೆ ಕಾಣುವುದು, ಒಂದು ದಿನ ನೋಡ್ತಾರೆ, ಎರಡು ದಿನ ನೋಡ್ತಾರೆ ಮೂರನೇ ದಿನ ಕೊಳ್ತಾರೆ... ನಮ್ಮಂತವರು ಕಂಡ ಕೂಡಲೇ ಕೊಳ್ಳುತ್ತೇವೆ. ನಮ್ಮ ಬೆಂಗಳೂರು ಅಮೇರಿಕೆಯಾಗದಿರಲಿಂದು ಬೇಡುತ್ತೇನೆ. ನೀವು ಒಳ್ಳೆ ಕೆಲಸ ಮಾಡಿದಿರಿ.
ReplyDeleteಪ್ರಪ೦ಚದ ಎಲ್ಲಾ ಭಾಷೆಗಳನ್ನೂ ಕಲಿಯೊಣ ಎಲ್ಲಾ ಮಕ್ಕಳಿಗೂ ತಾಯಾಗೋಣ ...
ReplyDeleteಆದರೆ ಹೆತ್ತಮ್ಮನನ್ನು ಮರೆಯುವುದು ಸರಿಯೆ?.....ತು೦ಬಾ ಅರ್ಥ ತು೦ಬಿದ ವಾಕ್ಯ.
ಕನ್ನಡದ ನೆಲದಲ್ಲಿ ಕನ್ನಡಕ್ಕೆ ಎ೦ಥಾ ಪರಿಸ್ಥಿತಿ..ಬೇಸರವೆನಿಸುತ್ತದೆ.
ಮತ್ತೆ ತುಪ್ಪ ಸುರಿಯಲು ನಮ್ಮೆಲ್ಲರ ಕೈಗಳೂ ಸಿದ್ಧವಾಗಿವೆ
ನಿಜ ಮೇಡಂ ನಿಮ್ಮ ಮಾತು ,ಕೆಲವು ಕಡೆ ಹುಡುಕಿದರೂ ಕನ್ನಡ ಪುಸ್ತಕಗಳು ಸಿಗುವುದು ಕಷ್ಟ.. ನಿಮ್ಮ ಜೊತೆ ನಾನು ಇದ್ದೇನೆ .. :)
ReplyDeleteನಿಮ್ಮ ಮಕ್ಕಳ ಹಾಗೆ ನಾನು ನಮ್ಮ ಅಜ್ಜಿಯನ್ನು ಯಾವಾಗಲು ಕಥೆಗಾಗಿ ಕಾಡುತಿದ್ದೆ.. :)
ವಿಜಯಶ್ರೀ ಮೇಡಂ,
ReplyDeleteನಿಮ್ಮ ಮಾತಿನಲ್ಲಿ ಸತ್ಯವಿದೆ.... ನಿಜ ... ನಿಜ.... ಕನ್ನಡಕ್ಕಾಗಿ, ಜಗಳವಾದಲೇ ಬೇಕಾದ ಪರಿಸ್ತಿತಿ ಬಂದಿದೆ ಈಗ...... ಈಗೀಗ ಮಂಗಳೂರು ಸಹ ಬೆಂಗಳೂರಾಗುತ್ತಿದೆ.... ಕನ್ನಡ ಪುಸ್ತಕ ವಿರಳವಾಗುತ್ತಿದೆ...... ನಿಮ್ಮ ಮನೆಯವರ ಆದುನಿಕ ಪುರಾಣದ ಕಥೆಯನ್ನ ಒಮ್ಮೆ ನಮಗೂ ಕೇಳಿಸಿ.....ಬರೆಯಿರಿ.....
ಸುನಾಥ್ ಕಾಕಾ
ReplyDeleteನನ್ನವರು ಹಾಗೆ, ಸ್ವಲ್ಪ ಹಾಸ್ಯ ಪ್ರವ್ರುತ್ತಿಯವರು.
ನಿಮ್ಮ ಪ್ರೋತ್ಸಾಹಕ್ಕೆ ವ೦ದನೆಗಳು.
ಮನಸು..
ನಿಮ್ಮ ತುಪ್ಪದಿ೦ದ ಕನ್ನಡದ ನ೦ದಾದೀಪ ಹೆಚ್ಚು ಪ್ರಕಾಶ ಬೀರಲಿ....
ವ೦ದನೆಗಳು.
ಮನಮುಕ್ತಾ..
ಕನ್ನಡ ನಾಡಿನಿ೦ದ ಹೊರಗಿರುವ ಕನ್ನಡಿಗರಿಗೆ ತವರು ಪ್ರೀತಿ ಹೆಚ್ಚು...
ದೀಪಕ್ಕೆ ಇನ್ನಶ್ಟು ಬೆಳಕು ಸೇರಿತು..
ನಮಸ್ತೆ...
ಸ್ನೋವೈಟ್ ...
ನಿಮ್ಮೆಲ್ಲರ ಹಾರೈಕೆಯಿ೦ದ ಕನ್ನಡ ದೀಪಕ್ಕೆ ಶಕ್ತಿ ಹೆಚ್ಚಾಗಲಿ..
ವ೦ದನೆಗಳು.
ದಿನಕರ್ ಸರ್ ..
ಮ೦ಗಳೂರಲ್ಲೂ ಇದೇ ಕಥೆಯೆ...
ಇದೇ ಉಪಾಯ ಮಾಡಿನೋಡಿ ಅಲ್ಲೂ.
ವ೦ದನೆಗಳು.
ನನ್ನವರ ಕಥೆ ಹೇಳುವ ಶೈಲಿ ಮೆಚ್ಚಿದ್ದಕ್ಕಾಗಿ ಅವರು ಎಲ್ಲರಿಗೂ ವ೦ದನೆ ತಿಳಿಸಿದ್ದಾರೆ.
ಮೊದಲಿಗೆ ನಿಮ್ಮವರು ಹೇಳುವ ಕಥೆಗಳು ಸೂಪರ್ ಆಗಿದವೇ.. ಹ್ಹ ಹ್ಹ ಹ್ಹ..
ReplyDeleteಕರ್ಣನ ಕೈಯಲ್ಲಿ AK-47.. super concept :)
ನಿಜ ಮೇಡಂ. ಕರ್ನಾಟಕದ ಬಹಳಷ್ಟು ಪುಸ್ತಕ ಅಂಗಡಿಗಳಲ್ಲಿ ಕನ್ನಡದ ಪುಸ್ತಕಗಳು ಸಿಗುತ್ತಿಲ್ಲ.
ನಾನು ಮೈಸೂರಿನಲ್ಲಿದ್ದಾಗ ಕನ್ನಡದ ಶುಭಾಶಯ ಪತ್ರಗಳನ್ನು (Greeting Cards) ಹುಡುಕಲು ಹರಸಾಹಸ ಮಾಡಿದ್ದೆ. ಅಂತು ಯಾವುದೋ ಒಂದು ಅಂಗಡಿಯಲ್ಲಿ ಸಿಕ್ಕಿತು.
ನಾವೆಲ್ಲರೂ ಸೇರಿ ಹೋರಾಟ ಮಾಡೋಣ... :)
ಶಿವಪ್ರಕಾಶ್
ReplyDeleteಕರ್ಣ ದುಷ್ಟರ ಪಕ್ಷವಲ್ಲವೇ...
ಉಗ್ರರ ಕೈಯಲ್ಲಿ A.K.47 ಇರುತ್ತದಲ್ಲ.
ಕನ್ನಡದ ಬಗ್ಗೆ ನಿಮಗೂ ಕಹಿ ಅನುಭವ ಆಗಿದೆ ಅ೦ತಾಯ್ತು. ಕನ್ನಡದ ದೀಪ ಹಚ್ಚಲು ಎಲ್ಲರೂ ಹೋರಾಡೋಣ. ವ೦ದನೆಗಳು.
ನಿಮ್ಮ ಮನೆಯವರ ಕಥಾಮಾಲಿಕೆ ಆಸಕ್ತಿಕರವಾಗಿದೆ ಅದನ್ನು ಕಥಾವಾಹಿನಿಯಾಗಿ ಬ್ಲೊಗ್-ನಲ್ಲೇಕೆ ಪರಿಚಯಿಸಬಾರದು?
ReplyDeleteಒಳ್ಳೇ ಪ್ರಸ೦ಗ. ಬೊ೦ಬೆಮನೆ, ಬಾಲಮಿತ್ರ, ಚ೦ದಮಾಮ ತರಿಸಿ. ನಿರ೦ತರವಾಗಿ ಕಥೆ ಹೇಳಬಹುದು.
ಸೀತಾರಾಮ್ ಸರ್.
ReplyDeleteನೋಡಿ ... ಮರೆತಿದ್ದೆ. ಚಿಕ್ಕ೦ದಿನಲ್ಲಿ ಓದಿದ ಪುಸ್ತಕಗಳನ್ನು.
ನೆನಪಿಸಿದ್ದಕ್ಕೆ ಥ್ಯಾ೦ಕ್ಸ್.. ಈಗಲೂ ಸಿಗುತ್ತವೆಯಾ ಆ ಪುಸ್ತಕಗಳೂ...?ಚ೦ದಾದಾರರಾಗಬೇಕೇನೋ...
ವ೦ದನೆಗಳು.
ಚಂದಾಮಾಮ ಮತ್ತು ಬಾಲಮಂಗಳ ನಮ್ಮನೇಲಿ ಇನ್ನೂ ತರಿಸ್ತೀವಿ :)
ReplyDeleteಚಂದಾದಾರರಾಗಬೇಕಿಂದಿದ್ದಲ್ಲಿ
ಇಲ್ಲಿ ನೋಡಿ.
ಥ್ಯಾ೦ಕ್ಸ್ ಆನ೦ದ.
ReplyDeleteಮತ್ತೆ ನನ್ನರಮನೆಗೆ ಬ೦ದು ಮಾಹಿತಿ ಕೊಟ್ಟಿದ್ದಕ್ಕೆ.
ಪರವಾಗಿಲ್ಲ...ನಿಮ್ಮದು ಸಾತ್ವಿಕ ಸಿಟ್ಟೇ...ಮಂಗಳೂರಿನ ಗ್ರೀಟಿಂಗ್ಸ್ ಅಂಗಡಿಯಲ್ಲಿ ಹೀಗೇ ನಾನೂ ಕನ್ನಡ ಗ್ರೀಟಿಂಗ್ಸಿಗಾಗಿ ಪದೇ ಪದೇ ಅವರ ತಲೆ ತಿಂದಿದ್ದೇನೆ...ಆದರೂ ಇಂದೂ ಅಲ್ಲಿ ಕನ್ನಡ ಗ್ರೀಟಿಂಗ್ಸ್ ಸಿಗೋದಿಲ್ಲ ಎನ್ನೋದು ಬೇರೆ ಮಾತು
ReplyDeleteಅಯ್ಯೋ ಏನು ಕೇಳ್ತಿರಾ ನೀವು.. ಈಗಿನ ಟೀನೇಜ್‌ನವರು "I am reading Chetan Bhagat's book yaar " ಎಂದು ಹೆಮ್ಮೆಯಿಂದ ಬೀಗುವಾಗ ಅವರ ಹೆತ್ತವರಿಗೂ ಅದೇನೋ ಹೆಮ್ಮೆ (ದೇಶಕಾಗಿ ಪ್ರಾಣ ತೆತ್ತ ಇನ್ನೋರ್ವ ಭಗತ್ ಸಿಂಗ್ ಮಾತ್ರ ತಪ್ಪಿಯೂ ನೆನಪಾಗುವುದಿಲ್ಲ ಬಿಡಿ!) ಭಗತ್ ಅವರ ಕಾದಂಬರಿಗಳು ಚೆನ್ನಾಗಿಲ್ಲ ಎಂದಲ್ಲ. ಇದನ್ನೇ ಅವರು ಕನ್ನಡದಲ್ಲಿ ಬರೆದಿದ್ದರೆ ದೇವರಾಣೆ ಇಷ್ಟೊಂದು ಮನ್ನಣೆ ಸಿಗುತ್ತಿರಲಿಲ್ಲ. ಅವರ ಪುಸ್ತಕ ಇಂಗ್ಲೀಷಿಗೆ ಭಾಷಾಂತರವೂ ಆಗುತ್ತಿರಲಿಲ್ಲ.
ReplyDeleteವೇಣು ವಿನೋದ್,
ReplyDeleteಸಾತ್ವಿಕ ಸಿಟ್ಟಿಗೆ ಬೆಲೆಯಿಲ್ಲ ಇಲ್ಲಿ ಅನ್ನಿಸುತ್ತೆ. ಕನ್ನಡ ಬೇಕು ಅ೦ತ ಅ೦ದ್ರೆ ಕತ್ತಿ, ಕೊಡಲಿ, ಮಚ್ಚು ಹಿಡಿಯಬೇಕಾಗುವುದೋ ಏನೋ .....ಇನ್ನು ಮು೦ದೆ.
ನಿಮ್ಮ ಮ೦ಗಳೂರಿಗೂ ಬೆ೦ಗಳೂರಿ೦ದಲೇ ಗ್ರೀಟಿ೦ಗ್ಸ್ ಕಳಿಸಲ್ಪಡುತ್ತಾ ಅ೦ತಾ...
ಪ್ರತಿಕ್ರಿಯೆಗೆ ವ೦ದನೆಗಳು.
ತೇಜಸ್ವಿನಿ,
ಹೀಗೇ ಆಗುತ್ತಾ ಬ೦ದ್ರೆ ಕೆಲವೇ ವರ್ಷಗಳಲ್ಲಿ ಬೆ೦ಗಳೂರಲ್ಲಿ ಕನ್ನಡ ಅನ್ನುವುದು ’delete'ಆಗಿಬಿಡಬಹುದಲ್ವೇ....?
ನಿಮ್ಮ ಪ್ರತಿಕ್ರಿಯೆಗೆ ವ೦ದನೆಗಳು.
ನಿಮ್ಮ ಸಿಟ್ಟಿಗೆ ತುಪ್ಪ ಹೊಯ್ಯುವವರ ಜೊತೆ ನಾವು ಇದ್ದೇವೆ. ಉತ್ತಮ ಬರಹ.
ReplyDeleteಮೇಡಮ್,
ReplyDeleteನಿಮ್ಮ ತುಪ್ಪ ಹಾಕಲು ನಾನೂ ಇದ್ದೇನೆ. ಜೊತೆಗೆ ನಾನು ನಿಮ್ಮ ಹಾಗೆ ಗಲಾಟೆ ಮಾಡದೆ ಬರಲಾರೆ. ಚೆನ್ನಾಗಿ ದಬಾಯಿಸಿಯೇ ಬರುವುದು.
ಮತ್ತೆ ಮಕ್ಕಳ ಕತೆಯನ್ನು ಹೇಳುವುದು ಒಂದು ಕಲೆ. ನೀವು ಸಾಂಪ್ರಾಧಾಯಿಕ ಶೈಲಿಯಲ್ಲಿ ಹೇಳಿದರೆ ನಿಮ್ಮವರೆ ವಿಭಿನ್ನ ಆಧುನಿಕ ಶೈಲಿಯಲ್ಲಿ ಹೇಳುತ್ತಾರೆ ಅನ್ನಿಸುತ್ತೆ. ಅದು ಚೆನ್ನಾಗಿರುತ್ತದೆ. ಆದ್ರೂ ಎಷ್ಟು ಅಂತ ನೀವು ಹೇಳಲು ಸಾಧ್ಯ.
ನಾನೊಂದು ಮದುವೆಗೆ ಹೋದಾಗ ಅಲ್ಲಿನ ನನ್ನ ಗೆಳೆಯರಿಗೆ ಕತೆ ಹೇಳಿ ಅಂತ ಮಕ್ಕಳು ದುಂಬಾಲು ಬಿದ್ದಿದ್ದರು. ಅವರು ಎಷ್ಟು ಹೇಳಿದರೂ ಮಕ್ಕಳಿಗೆ ಸಮಾಧಾನವಾಗುತ್ತಿರಲಿಲ್ಲ.
ಕೊನೆಗೆ ನನ್ನ ತಲೆಗೆ ಕಟ್ಟಿದರು. ನಾನು ಫೋಟೊ ತೆಗೆಯುವ ಕೆಲಸದಲ್ಲಿದ್ದೆನಲ್ಲ. ನಾನು ಒಂದು ಆಧುನಿಕ ಟ್ರಾಫಿಕ್ ಕತೆಯನ್ನು ಹೇಳಿದೆನಲ್ಲ. ಎಲ್ಲರೂ ಕಣ್ಣು ಬಾಯಿ ಬಿಟ್ಟು ಕೇಳುತ್ತಿದ್ದರು. ಕತೆ ಮುಗಿಯಲಿಲ್ಲ. ಒಂದೇ ತರ ಮುಂದುವರಿಯಿತು. ಕೊನೆಗೆ ಊಟದ ಸಮಯವಾಯಿತೆಂದು ಹೋದ ಮಕ್ಕಳು ಮತ್ತೆ ನನ್ನ ಬಳಿ ಕತೆ ಕೇಳಲು ಬರಲೇ ಇಲ್ಲ. ಮತ್ತೊಮ್ಮೆ ಸಿಕ್ಕಾಗ ಕತೆ ಮುಂದುವರಿಸಲೇ ಅಂದೆ ಅಷ್ಟೇ. ಅಲ್ಲಿಂದ ಎಲ್ಲರೂ ಓಡಿಬಿಟ್ಟರು.
ನೀವೊಮ್ಮೆ ಪ್ರಯತ್ನಿಸಿ[ತಮಾಷೆಗೆ ಹೇಳಿದೆ]
ಉತ್ತಮ ಬರಹಕ್ಕಾಗಿ ಧನ್ಯವಾದಗಳು.
Nisha..
ReplyDeleteand
Shivu sir ...
Thanks for your comments
ತುಂಬಾ ಚೆನ್ನಾಗಿದೆ ವಿಜಯಕ್ಕ, ನಿನ್ನ ಸಿಟ್ಟು ಅರ್ಥಪೂರ್ಣವಾಗಿತ್ತು ಮತ್ತೆ ಮಕ್ಕಳಿಗೆ ಹೇಳಿದ ಕಥೆ ತುಂಬಾ ಚೆನ್ನಾಗಿತ್ತು.
ReplyDeleteತು೦ಬಾ ಚೆನ್ನಾಗಿದೆ ನಿಮ್ಮ ಬರಹದ ಶೈಲಿ...
ReplyDeleteಬೆ೦ಗಳೂರಿಗೆ ಯಾವ ಗರ ಬಡಿದಿದೆಯೋ... ಆ ಗರ ಬಿಡಿಸಲು ಯಾರು ಬರಬೇಕೋ ಗೊತ್ತಿಲ್ಲ.... :(
ಈಗೀಗ ಕೆಲವು ಮಾಲ್ ಗಳಲ್ಲಿ ಕನ್ನಡದ ಪುಸ್ತಕಗಳು ಮತ್ತು ಕನ್ನಡ ಸಿನಿಮಾದ ಸಿ.ಡಿ.ಗಳು ಕಾಣಸಿಗುತ್ತವೆ.. ಆದರೆ ಅದು ತು೦ಬಾ ಕಡಿಮೆ...