Wednesday, July 28, 2010

ಇರಬಹುದೇ ಹೀಗೆ....?

ಇರಬಹುದೇ ಹೀಗೆ....?
ದೊಡ್ಡ ತಲೆ 
ಹೊರಚಾಚಿದ ಕಣ್ಣು 
ಕುತ್ತಿಗೆಗೇ ಕೈ 
ಸುರುಟಿಹೋದ ಮೈ...

  ಇರಬಹುದೇ ಹೀಗೆ ...?
ಕಿವಿಗೆರಡು ತೂತು..
ಬೇಕಿಲ್ಲದ ಮಾತು..  
ಒಣಗಿ ಹೋದ ನಾಲಿಗೆ ..
ಕೆಲಸವಿಲ್ಲ ಕಾಲಿಗೆ..

ಇರಬಹುದೇ ಹೀಗೆ ..?
ಪರಲೋಕದ ಜೀವಿಯ ಹಾಗೇ..
ಜೀವ ಜಗತ್ತು ವಿಕಾಸವಾದದ್ದು ಹೇಗೆ..?
ಕೆಲಸವಿಲ್ಲದ ಅಂಗ 
ಆಗಬಹುದೇ ಭಂಗ...?

ಇರಬಹುದೇ ಹೀಗೆ..?
ಹತ್ತಾರು ಸಾವಿರ ವರುಷದ ಕೊನೆಗೆ..
ಬೀಸಿ ಗಣಕ ಯಂತ್ರದ ಹೊಗೆ
ಕೆಲಸ.. ತಲೆಗೆ ಮತ್ತು 
ಕೈ ಬೆರಳುಗಳಿಗೆ ಮಾತ್ರ..

ಇರಲೂ ಬಹುದು ಹೀಗೆ..ಮಾನವ 
ಅಳಿಯದೆ ಇದ್ದರೆ ಅವನ ಪೀಳಿಗೆ
 ......ಈ ಭೂಮಿ    ಹಸಿರಿದ್ದರೆ ಜೊತೆಗೆ..


ಅಲ್ವೇ..?
ಆಧುನಿಕತೆ ಮತ್ತು ತಂತ್ರಜ್ಞಾನದ ಸುಳಿಗೆ ಸಿಕ್ಕಿದ ಮನುಷ್ಯ  ಮುಂದೆ... ವಿಕಾಸವಾದಂತೆಲ್ಲಾ.. ಹೀಗಿರಬಹುದೇ.. ಅನ್ನುವುದು ನನ್ನ ಕಲ್ಪನೆ.

ಈಗೀಗ ಕಂಪ್ಯೂಟರ್ ಅಂತೂ  ಪ್ರತಿ ಮನೆಯಲ್ಲೂ ಕಾಣಬಹುದು..ಕಚೇರಿಗಳಲ್ಲೊಂದೆ  ಅಲ್ಲ.. ನನ್ನಂತ ಗೃಹಿಣಿಯರೆ  ಅದರ ಮುಂದೆ ದಿನದಲ್ಲಿ ಎಷ್ಟೊತ್ತು ಕುಳಿತು ಕೊಳ್ಳುತ್ತೇವೆ .. ಅದೇ ಉದ್ಯೋಗ ಮಾಡುವವರು ಸತತ ಎಷ್ಟು ದಿನಗಳ ಕಾಲ ಕುಳಿತು ಕೊಳ್ಳುವರೋ....!!!!  ಮಾತು,  ಊಟ, ನಿದ್ರೆ, ಚಲನೆ ಯಾವುದೂ ನಿಯಮಿತವಾಗಿ ಇರದೇ...


ಇದೆ ತರಹ ಮುಂದುವರೆದರೆ ಮುಂದೊಮ್ಮೆ ಕೆಲವಷ್ಟು ಅಂಗಗಳನ್ನೆ ಕಳೆದು ಕೊಳ್ಳಬಹುದೇ...? ಜೀವ ವಿಕಾಸದ ನಿಯಮದ ಪ್ರಕಾರ...
ಗಣಕ ಯಂತ್ರದಲ್ಲಿ ತಲೆ ಹಾಕಿ ಕುಳಿತು ಕೊಂಡರೆ ಅಲ್ಲಿಂದ  ತಪ್ಪಿಸಿಕೊಳ್ಳಲು ಘಂಟೆ, ದಿನ, ವಾರಗಳೇ ಬೇಕಾಗಬಹುದು..!
ಎಲ್ಲಕ್ಕೂ ಕಂಪ್ಯೂಟರ್... ಹೀಗೆಯೇ ಮುಂದುವರೆದು ಪ್ರತಿ ಮನೆಯಲ್ಲೂ ರೋಬೋಟ್ ಬರಲು ಹೆಚ್ಚಿಗೆ ದಿನಗಳಿಲ್ಲ..ಯಾವ ಕೆಲಸಕ್ಕೂ ಕುಳಿತಲ್ಲಿಂದ ಏಳುವ ಕೆಲಸವಿಲ್ಲ...! ಉಪಯೋಗಿಸದೆ  ಬಿಟ್ಟರೆ ಕಬ್ಬಿಣ ತುಕ್ಕು ಹಿಡಿಯುವಂತೆ ಉಪಯೋಗಿಸದ ನಮ್ಮ ಅಂಗಾಂಗಗಳೂ   ನಶಿಸಿ ಹೋಗಲಾರದೆ...?

ಮುಂದೆ ನಮ್ಮ ಮಕ್ಕಳ, ಮೊಮ್ಮೊಕ್ಕಳ, ಮರಿಮಕ್ಕಳ, ಅವರ ....ಮಕ್ಕಳ ......ಕ್ಕಳ....ಕ್ಕಳ... ಳ...ಳ....ಳ....................................................................................................................................................................ಕಾಲದಲ್ಲಿ ಏನೇನಾಗುವುದೋ.....?





52 comments:

  1. ಕವನವನ್ನೋದಿ, ಅದರಲ್ಲೂ ಚಿತ್ರವನ್ನು ನೋಡಿ ನಗು ಬಂದರೂ, ಇದರೊಳಗೆ ಬಿಂಬಿಸಿದ ಭವಿಷ್ಯದ ಕರಾಳತೆಯನ್ನು ಸಂಪೂರ್ಣವಾಗಿ ಅಲ್ಲಗಳೆಯಲೂ ಆಗಲಿಲ್ಲ. ಒಂದೊಮ್ಮೆ ನಮ್ಮ ಭವಿಷ್ಯ ಹೀಗಿದ್ದಲ್ಲಿ ಭೂಮಿಯ ಗತಿ ಏನಾಗಿರಬಹುದು ಆಗ ಎಂದೂ ಅನ್ನಿಸುತ್ತಿದೆ...

    ಚಿತ್ರ ಬಿಡ್ಸಿದ್ದು ನಿವೇಯಾ? :)

    ReplyDelete
  2. ಹಿಂಗೆ ಕಂಪ್ಯೂಟರ್ ಬಂಧಿಗಳು ಹೆಚ್ಚೆಚ್ಚು ಮಕ್ಕಳನ್ನು ಮಾಡುತ್ತಾ ಹೋದರೆ ಆವಶ್ಯಕವಾಗಿ ಇಂತಹ ಜೀವಿ ವಿಕಾಸವಾಗಬಹುದು. ಯಾರಿಗೆ ಗೊತ್ತು? ಅಲ್ಲಿಯವರೆಗೆ ಮನುಷ್ಯನಿಗೆ ಪ್ರೊಕ್ರಿಯೇಟ್ ಮಾಡಬೇಕೆಂಬ ಹಂಬಲ ಉಳಿದಿರುವುದೋ!

    ReplyDelete
  3. ಆಧುನಿಕತೆ ಪ್ರಭಾವ....
    ಚೆನ್ನಾಗಿದೆ ನಿಮ್ಮ ಕಲ್ಪನೆ.....ನಿಜವಾಗಬಹುದು....

    ReplyDelete
  4. ಹೌದು ಹೌದು ಮೊದಲು ಮಾನವನಿಗೆ(ಮಾನವನಾದ ಮಂಗನಿಗೆ) ಬಾಲ್ವಿದ್ದು ಅದನ್ನು ಬಳಸದೆ ನಶಿಸಿ ಹೋಯ್ತಂತೆ.. ಮುಂದಿನ ಪೀಳಿಗೆಯವರು ಇನ್ನು ಯಾವ ಯಾವ ಅವತಾರದಲ್ಲಿ ಹುಟ್ಟಬಹುದೋ ಏನೋ!! ತಮ್ಮ ಕವನ ನಿಜಕ್ಕೂ ಬಹಳ ಅರ್ಥಗರ್ಭಿತವಾಗಿದೆ.

    ReplyDelete
  5. ತೇಜಸ್ವಿನಿ..
    ಮನುಶ್ಯ ಭೂಮಿಯ ಮೇಲೆ ಬಾ೦ಬು, ಅಣುಬಾ೦ಬು ಇತ್ಯಾದಿ ಮಾರಕಾಸ್ತ್ರಗಳನ್ನು ಬಳಸದೆ ಭೂಮಿಯನ್ನು ಹಾಗೆಯೆ ಬಿಟ್ಟಲ್ಲಿ ಹೀಗಾಗಬಹುದೆ....ಅ೦ತ.
    ಚಿತ್ರ ಬಿಡ್ಸಿದ್ದು ನಾನೆ..
    ಮನಸ್ಸಿನಲ್ಲಿದ್ದ೦ತೆ ಬರೆಯಲಾಗಲಿಲ್ಲ.. ಅನ್ನುವ ಅಸಮಾಧಾನವೂ ಇದೆ..

    ಸುಪ್ರೀತ್.. ನಿಮಗೆ ನನ್ನ ಚಿತ್ತಾರದರಮನೆಗೆ ಸ್ವಾಗತ.
    ನೇರವಾಗಿ ಹೇಳುವುದಾದರೆ.. ಹೆಚ್ಚಿನ ಕ೦ಪ್ಯೂಟರ್ ಬ೦ಧಿಗಳು ಸ೦ತಾನ ಸಾಮರ್ಥ್ಯವನ್ನೆ ಕಳೆದುಕೊಳ್ಳುತ್ತಿದ್ದಾರೆ೦ಬ ವರದಿಯನ್ನು ಓದುತ್ತಲೇ ಇರುತ್ತೇವೆ.. ದಿನಪತ್ರಿಕೆಗಳಲ್ಲಿ..
    ಮು೦ದೆ ಅದಕ್ಕೂ ಪ್ರನಾಳ, ಕ್ರುತಕ ಗರ್ಭಚೀಲ ಕ್ಲೋನಿ೦ಗ್ ಇವುಗಳನ್ನೆ ಆಶ್ರಯಿಸಬೇಕೋ ಏನೋ..

    ಸವಿಗನಸು ಅವರೆ
    ಹ್ನೂ ಕಣ್ರೀ..

    ನಿಮ್ಮ ಪ್ರೋತ್ಸಾಹಗಳಿಗೆ ಧನ್ಯವಾದಗಳು.

    ReplyDelete
  6. ವಿಜಯಶ್ರೀ,
    ಮಾನವನ ಭವಿಷ್ಯವನ್ನು ವೈಜ್ಞಾನಿಕವಾಗಿ ಊಹಿಸಿದ್ದಕ್ಕಾಗಿ, ಆ ಊಹೆಯನ್ನು ಸುಂದರವಾದ ಕವನವಾಗಿ ರೂಪಿಸಿದ್ದಕ್ಕಾಗಿ ಹಾಗು ನಿಮ್ಮ ಕವನ ಮತ್ತು ಜೊತೆಗಿನ ಚಿತ್ರದ ಮೂಲಕ ನಮಗೆಲ್ಲ ಕಚಗುಳಿ ಇಟ್ಟದ್ದಕ್ಕಾಗಿ ನಿಮಗೆ ಅಭಿನಂದನೆಗಳು, ಅಭಿನಂದನೆಗಳು ಹಾಗು ಅಭಿನಂದನೆಗಳು!

    ReplyDelete
  7. ಸಾಗರಿ.
    ನನಗೂ ಅದೇ ಯೋಚನೆಯಾಗ್ತಿದೆ..!!
    ಥ್ಯಾ೦ಕ್ಸ್..

    ReplyDelete
  8. ಇನ್ನೂ ಏನೇನ್ ಕಾಣ್ಬೇಕೋ ಏನೋ !

    :) :(

    ReplyDelete
  9. ಕಾಕ..
    ಕಮ್ಪ್ಯೂಟರ್ ನಲ್ಲಿ ಮುಳುಗಿದರೆ ಮನಸ್ಸು ಭಾವಾತೀತ.. ಕೆಲವೊಮ್ಮೆ ದೇಹ ಮಾತ್ರ.. ಜೀವಾತೀತ...ಸ೦ವೇದನಾತೀತ.. ಅಲ್ಲವೇ..?
    ನನ್ನ ಕವನ ಮೆಚ್ಚಿದ್ದಕ್ಕಗೆ,ಚಿತ್ರ ಇಷ್ಟಪಟ್ಟಿದ್ದಕ್ಕಾಗಿ, ನನ್ನ ಲೇಖನ ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕಾಗಿ ಥ್ಯಾ೦ಕ್ಸ್..ಥ್ಯಾ೦ಕ್ಸ್.. ಥ್ಯಾ೦ಕ್ಸ್..

    ವಿಕಾಸ್..
    ಏನೊ ಆಗುತ್ತೆ ಬಿಡ್ರೀ..
    ಥ್ಯಾ೦ಕ್ಸ್.

    ReplyDelete
  10. ಚುಕ್ಕಿಚಿತ್ತಾರ ,

    ಊಹೆ ತುಂಬಾನೇ ವಿಚಾರಿಕವಾಗಿದೆ..
    ಚಿತ್ರ ವಿಚಿತ್ರವಾಗಿದೆ..

    ReplyDelete
  11. Till it saturates, ಅಲ್ಲೀವರೆಗೂ ಎನೋ ಒಂದು ಆಗುತ್ತೆ !. ಏನಾಗಬಹುದು ಅನ್ನೋದನ್ನು ಸಕತ್ತಾಗಿ ಬರ್ದೀದೀರಿ. ಒಳ್ಳೆ ವಿಡಂಬನೆ.

    ಚಿತ್ರದ ಕಲ್ಪನೆಗೆಯಂತೂ ಸೂಪರ್ !.

    ReplyDelete
  12. ತಮ್ಮ ಕಲ್ಪನೆಗೆ ವೈಜ್ಞಾನಿಕ ಆಧಾರವಿದೆ! one which is no used is not required & one which is not required will be vanished.
    ತಮ್ಮ ಚಿತ್ರವೂ ಅದ್ಭುತವಾಗಿದೆ. ಆ ಪರಿಸ್ಥಿತಿ ಎಣಿಸಿ ನಗೆಯು ಬಂತು! ಬೇಸರವು ಆಯಿತು. ಕಾಲಾಯ ತಸ್ಮೆ: ನಮಃ ಅಲ್ಲವೇ!

    ಧನ್ಯವಾದಗಳು.

    ReplyDelete
  13. ಕತ್ತಲೆ ಮನೆ..
    ನಮ್ಮ ಬದುಕೂ ವಿಚಿತ್ರವಾಗಬಹುದೆ...?

    ಸುಬ್ರಹ್ಮಣ್ಯ...
    ಭಾವನೆಗಳೇ ಇಲ್ಲದ ನಿರ್ಜೀವ ಕಳೆ, ಸ೦ವೇದನೆಯೇ ಇಲ್ಲದ ಮನಸ್ಸು, ಬರೀ ಯಾ೦ತ್ರಿಕ..ಯ೦ತ್ರಿಕ.. ಆಗಬಹುದೇ...?

    ನಿಮ್ಮ ಪ್ರೋತ್ಸಾಹಕ್ಕೆ... ವ೦ದನೆಗಳು.

    ReplyDelete
  14. Necessity Knows No LAW ಅನ್ನೋ ಹಾಗೆ
    ಅವಶ್ಯಕತೆ ಎಲ್ಲವನ್ನು ಮಾಡಿಸುತ್ತೆ.
    ನೋಡಿ ಕಂಪ್ಯಟರ್ ಮುಂದೆ ಕುಳಿತಿದ್ದಕ್ಕೆ ನಾವು ಪರಿಚಯ ಆಗಿದ್ದು.
    ಪದ್ಯ ಮತ್ತು ಚಿತ್ರ ನೋಡಿ, ನಿಮ್ಮ ಆಲೋಚನೆ ತಿಳಿಯಿತು.
    ಖಂಡಿತವಾಗಿ ವಿಚಾರ ಮಾಡುವ ವಿಷಯ ಇದು.
    ಆದರು,ಪ್ರಕೃತಿಯಲ್ಲಿ ಯಾವುದೇ ಮಾರ್ಪಾಡಿಗೆ ಸಾವಿರಾರು ವರ್ಷಗಳು ಬೇಕಾಗುತ್ತವೆ.
    (ಸದ್ಯಕ್ಕೆ ಚಿಂತೆ ಬಿಡಿ, 2012 ಕ್ಕೆ ಪ್ರಳಯ ಅಂತೆ ಅದಾದಮೇಲೆ ಉಳಿದಿದ್ರೆ ಚರ್ಚೆ ಮಾಡೋಣ :-) :-) )

    ReplyDelete
  15. ನಿಜ,, ನಿಮ್ಮ ಊಹೆಯನ್ನು ಅಲ್ಲಗಳೆಯುವಂತಿಲ್ಲ..
    ಭವಿಷ್ಯದ ಕಲ್ಪನೆಯೇ ಭೀಕರ..

    ReplyDelete
  16. ಏನೇನಾಗುವುದೊ ಆ ದೇವರೇ ಬಲ್ಲ...ಆಧುನಿಕತೆ ಹಾಗು ತ೦ತ್ರಜ್ನಾನದ ಸುಳಿಯಲ್ಲಿನ ಪ್ರಖರತೆಯ ಬಗೆಗಿನ ಊಹೆ..ಹೌದೆನ್ನಿಸುತ್ತದೆ.

    ReplyDelete
  17. 'what is used less and less ,ultimately becomes useless' ಎನ್ನುವ ಮಾತಿನಂತೆ ನಿಮ್ಮ ಕಲ್ಪನೆ ಮುಂದೊಂದು ದಿನ ನಿಜವಾಗಲೂಬಹುದು!ಚಿತ್ರ ಮತ್ತು ಕವನ ಎರಡೂ ಸೊಗಸಾಗಿವೆ.

    ReplyDelete
  18. ಸೀತಾರಾ0 ಸರ್..
    ಕಾಲ ಏನನ್ನು ನಿರ್ಧರಿಸುತ್ತದೆ ಅನ್ನುವುದನ್ನು ನಾವು ಊಹೆಯಷ್ಟೆ ಮಾಡಲು ಸಾಧ್ಯ...!
    ಆದರೂ ಹೊಣೆಗಾರಿಕೆಯಿ೦ದ ತಪ್ಪಿಸಿಕೊಳ್ಳಲ೦ತೂ ಸಾಧ್ಯವಿಲ್ಲ...

    ನಾಗರಾಜ್..
    ಸಾವಿರಾರು ವರ್ಷಗಳೇ ಹೌದಾದರೂ ಅಗ್ಲಿಕ್ಕೆ ಸಾಧ್ಯ ಇದೆ.. ಅಲ್ಲವೆ..?ಅದೆ.. ಕಮ್ಪ್ಯೂಟರ್ಯಿ೦ದಾನೆ ಇದೆಲ್ಲಾ....ಗೊತ್ತಾಗ್ಲಿಕ್ಕೆ ಶುರುವಾದದ್ದು...!!!

    ಆಕಾಶಬುಟ್ಟಿ
    ಸದ್ಯ ನಮಗೆ ತೊ೦ದರೆ ಹತ್ತಿರದಲ್ಲಿಲ್ಲ...!!!!

    ಮನಮುಕ್ತಾ
    ದೇವರಿಗೆ ಗೊತ್ತು...

    ನಿಮ್ಮ ಪ್ರೀತಿ ಪೂರ್ವಕ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

    ReplyDelete
  19. ಇರಲೂ ಬಹುದು ಹೀಗೆ..ಮಾನವ
    ಅಳಿಯದೆ ಇದ್ದರೆ ಅವನ ಪೀಳಿಗೆ
    ......ಈ ಭೂಮಿ ಹಸಿರಿದ್ದರೆ ಜೊತೆಗೆ.
    ನೀವೆ ಹೇಳಿದ ಹಾಗೆ ಖಂಡಿತ ಹಾಗುತ್ತೆ ಹಸಿರಿದ್ದರೆ ..ಆದರೆ ಗ್ಲೋಬಲ್ ವಾರ್ಮಿಂಗ್ ನಮ್ಮ ಅಲ್ಲಿಯವರೆಗೂ ಬಿಡುತ್ತ ???ಸಾದ್ಯವಿಲ್ಲ ನನ್ನ ಮಟ್ಟಿಗೆ

    ReplyDelete
  20. ಮೇಡಮ್,

    ನಿಮ್ಮ ಊಹೆ ತುಂಬಾ ಚೆನ್ನಾಗಿದೆ. ಯಾರಿಗೆ ಮುಂದೊಂದು ದಿನ ನೀವಂದುಕೊಂಡಂತೆ ಆಗಿಬಿಟ್ಟರೇ....

    ಚಿತ್ರಕ್ಕೆ ತಕ್ಕ ಕವನ ಚೆನ್ನಾಗಿದೆ.

    ReplyDelete
  21. ಮುಂದೆ ಚಿಕಿತ್ಸೆ ಇಲ್ಲದ ರೋಗವಾಗಬಹುದು..... ಕವನ ಚೆನ್ನಾಗಿದೆ.....ಚಿತ್ರ ಸೂಪರ್ ಇದೆ

    ReplyDelete
  22. ವಿಜಯಶ್ರೀ ಮೇಡಂ,
    ನಿಮ್ಮ ಊಹೆ ನಿಜವಾಗದೆ ಇರಲಿ..... ಹೆದರಿಕೆ ಆಗತ್ತೆ ಇದನ್ನ ಯೋಚಿಸಿದರೆ...... ಚಿತ್ರ ಚೆನ್ನಾಗಿದೆ ಮೇಡಂ....

    ReplyDelete
  23. ಕಲ್ಪನೆಯನ್ನು ಹರಿಯಬಿಟ್ಟು ಹೊಸ ವಿಚಾರವನ್ನು ಮನಸಿನಲಿ ಮೂಡಿಸಿದಿರಿ. "ಉಪಯೋಗಿಸದ ನಮ್ಮ ಅಂಗಾಂಗಗಳೂ ನಶಿಸಿ ಹೋಗಲಾರದೆ...?".ಯೋಚಿಸುವ೦ತಹ ವಿಷಯ.

    ಅನ೦ತ್

    ReplyDelete
  24. ಹೌದು ಮೇಡಂ... ಈ ರೀತಿ ಆಗೋ ದಿನ ಜಾಸ್ತಿ ದೂರ ಇಲ್ಲ ಅನ್ಸತ್ತೆ.. ತಂತ್ರಜ್ಞಾನ ಆಧುನಿಕತೆಯ ಕಾರಣದಿಂದ ಜೀವಿ 'ವಿಕಾಸ' ಅಲ್ಲ 'ವಿನಾಶ' ಆಗ್ತಾ ಇದೆ.. ಚಿತ್ರ & ಕವನ ಎರಡೂ ಚೆನ್ನಾಗಿದೆ.....

    ReplyDelete
  25. ಭವಿಷ್ಯದ ಊಹೆ ...ಅದಕ್ಕೆ ತಕ್ಕ ಕವನ.. ಅದಕ್ಕೆ ತಕ್ಕ ಚಿತ್ರ ಸೂಊಊಊಪರ್.

    ReplyDelete
  26. olle idea..tumba chennagideri...

    ReplyDelete
  27. ವಿಜಯಶ್ರೀ ಯವರೆ ..
    ಸುಂದರ ಕಲ್ಪನೆ ... ಸಮಯ ನಶಿಸಿದಂತೆ ಮುಂದೆನಾಗಬಹುದೋ ಅನ್ನುವ ಊಹೆ ಚೆನ್ನಾಗಿದೆ ..
    ಒಳ್ಳೆಯ ಚಿತ್ರಗಳು ಕೂಡ ..

    ReplyDelete
  28. Dr.D.T.K.Murthy ಸರ್..
    ಚಿತ್ರ ಕವನ ಮೆಚ್ಚಿದ್ದಕ್ಕೆ ವ೦ದನೆಗಳು.

    ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ...
    ನಿಮ್ಮ ನಿಜ ನಿಮ್ಮ ಮಾತೂ... ಪ್ರೋತ್ಸಾಹಿಸಿ ಪ್ರತಿಕ್ರಿಯಿಸಿದ್ದಕ್ಕೆ ವ೦ದನೆಗಳು...

    ReplyDelete
  29. ಶಿವು ಸರ್...
    ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  30. ಮನಸು....
    ಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು..

    ReplyDelete
  31. ದಿನಕರ..
    ಭಯ ದೂರದಲ್ಲಿದೆ....!
    ಥ್ಯಾ೦ಕ್ಸ್..

    ReplyDelete
  32. ಅನಂತ ಸರ್..
    ಜೀವನ ಅಷ್ಟೊ೦ದು ಯ೦ತ್ರಮಯವಾಗಬಹುದು.....ಅಲ್ಲವೇ...
    ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕಾಗಿ ಥ್ಯಾ೦ಕ್ಸ್

    ReplyDelete
  33. ಶ್ವೇತಾ, ನನ್ನ ಬ್ಲಾಗಿಗೆ ಸ್ವಾಗತ... ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕಾಗಿ ಥ್ಯಾ೦ಕ್ಸ್

    ReplyDelete
  34. ಶ್ರೀಧರ್..ಕಲ್ಪನೆ, ಕವಿತೆ, ಚಿತ್ರವನ್ನು ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕಾಗಿ ಥ್ಯಾ೦ಕ್ಸ್

    ReplyDelete
  35. ಪ್ರಗತಿ...
    ವಿಕಾಸವಾದ೦ತೆ ವಿನಾಶವೂ ಜೊತೆ ಜೊತೆಗೇ ಬರುವುದು ಸತ್ಯ....!
    ಥ್ಯಾ೦ಕ್ಸ್

    ReplyDelete
  36. ಸುಮ.
    ಚಿತ್ರ ಕವನ ಮೆಚ್ಚಿದ್ದಕ್ಕೆ ವ೦ದನೆಗಳು

    ReplyDelete
  37. ವಿಜಯಶ್ರೀ...ಇದು ವೈಜ್ಜಾನಿಕವಾಗಿ ಸಿದ್ಧವಾಗಿರ ಸಿದ್ಧಾಂತ...ಯೂಸ್ ಅಂಡ್ ಡಿಸ್ ಯೂಸ್ ಥಿಯರಿ...ಅಂದರೆ ಯಾವುದನ್ನು ಉಪಯೋಗಿಸುತ್ತೇವೆಯೋ ಆ ಅಂಗಗಳು ಕ್ರಮೇಣ ಇಲ್ಲವಾಗುತ್ತವೆ...ಉದಾ: ನಮ್ಮ ಇಲ್ಲವಾಗಿರುವ ಬಾಲ...ನಿಮ್ಮ ಕವಿತೆಗೆ ಮತ್ತು ವಿಚಾರಕ್ಕೆ ಈ ಹಿನ್ನೆಲೆ ನೈಜತೆಯನ್ನು ಕೊಡುತ್ತೆ...ಕವನದ ಪದ ಪ್ರಯೋಗವಂತೂ ಬಹಳ ಇಷ್ಟವಾಯಿತು...

    ReplyDelete
  38. ಜಲನಯನ ಸರ್..
    ಸ್ವಲ್ಪ ಅರ್ಥವಾಗಲಿಲ್ಲ ನಿಮ್ಮ ಕಾಮೆ೦ಟು...! ಉಪಯೋಗಿಸದ ಅ೦ಗಗಳು ಕ್ರಮೇಣ ನಶಿಸುತ್ತವೆ ಅ೦ತ ನಾನ೦ದ್ಕೊ೦ಡಿದ್ದು........ತಪ್ಪಾ....?
    ನಿಮ್ಮ ಪ್ರತಿಕ್ರಿಯೆಗೆ ತು೦ಬಾ ಥ್ಯಾ೦ಕ್ಸ್.

    ReplyDelete
  39. katu satya....

    darvin siddanthadanthe .. munde namma peeligege bari kai mattu kannu tale work agutteno...

    kavanada roopadalli jagrutaragisiddeeri,, dhanyavada

    ReplyDelete
  40. ವಿಜಯಶ್ರೀ ನನ್ನ ಕಾಮೆಂಟಿನಲ್ಲಿ ತಪ್ಪಾಗಿದೆ ಕ್ಷಮಿಸಿ..ಅಂದರೆ ಯಾವುದನ್ನು- ಉಪಯೋಗಿಸುವುದಿಲ್ಲವೋ -ಅಂತ ಆಗಬೇಕಿತ್ತು ಇದಕ್ಕೆ ಜಿರಾಫೆಯ ಉದ್ದವಾದ ಕುತ್ತಿಗೆಯೂ ಉದಾಹರಣೆ, ಹಾಗೇ ನೀರಿನಿಂದ ನೆಲಕ್ಕೆ ಬಂದ ಜೀವಿಗಳಲ್ಲಿ ರೆಕ್ಕೆ ಮಾಯವಾಗಿದ್ದು...ಕಿವಿರು ರೆಕ್ಕೆಗಳು ಕಾಲುಗಳಾಗಿದ್ದು ..ಹೀಗೆ...

    ReplyDelete
  41. ಓದುವಾಗ ನಗು ಬಂದರೂ ಯೋಚನೆ ಮಾಡಬೇಕಾದಂತ ವಿಷಯ......
    ಆಗಬಹುದು...ಮುಂದೊಮ್ಮೆ ಏನೂ ಆಗಬಹುದು.....
    ಚೆನ್ನಾಗಿದೆ.

    ReplyDelete
  42. aadaru aagabahudu sir..neevu heliruva ella vicharagalu nija :)

    ReplyDelete
  43. ನಿಮ್ಮ ಕಲ್ಪನೆ, ಚಿತ್ರವೇನೋ ಚೆನ್ನಾಗಿದೆ. ಆದರೆ ನನಗೆ ಭವಿಷ್ಯ ಭೀಕರ ಅನ್ನಿಸುತ್ತಿಲ್ಲ.
    ಸಾವಿರಾರು ವರ್ಷಗಳ ಹಿಂದೆ ಆದಿಮಾನವನು ಇಂತಹುದೇ ಕವನ ಬರೆಯಲು ಪ್ರಯತ್ನಿಸಿದ ಕಲ್ಪನೆ ಮಾಡಿಕೊಳ್ಳಿ.
    ಉಪಯೋಗಿಸದ ಬಾಲ, ಮುಂಗಾಲು, ಮೈತುಂಬ ಇರುವ ರೋಮಗಳು ಇವೆಲ್ಲ ಮಾಯವಾಗಿ ಚಳಿಯಿಂದ ಕೊರಗಿ
    ಮರದಿಂದ ಮರಕ್ಕೆ ಜಿಗಿಯುವ ಶಕ್ತಿಯಿಲ್ಲದೆ ಉಪವಾಸ ಸಾಯುವ ತನ್ನ ಮೊಮ್ಮ, ಮಿಮ್ಮ ,ಮರಿ, ಹುಳ ಮಕ್ಕಳ ಭವಿಷ್ಯ ಊಹಿಸಿ ನಿದ್ದೆಗೆಟ್ಟಿರಬಹುದೇ?
    ಅಂಗಾಂಗಗಳ ಗಾತ್ರಕ್ಕು ಉಪಯೋಗಿಸುವಿಕೆಗು ಎತ್ತಣ ಸಂಬಂಧ? ನಿಮ್ಮ ಕಲ್ಪನೆ ತಮಾಷೆಯಾಗಿದ್ದರೂ ಅದು ನಿಜವಾಗಲಾರದು.
    ತಲೆ ತಲಾಂತರದವರೆಗೂ ತಂತ್ರಜ್ಞಾನ ಮುಂದುವರೆದು ಸಂತಾನವೂ ಮುಂದುವರೆದು ಬಾಲ, ಕೂದಲು ನಶಿಸಿರಬಹುದೇ?

    ReplyDelete
  44. ಇರಲೂ ಬಹುದು ಹೀಗೆ..
    ಮಾನವ ಅಳಿಯದೆ ಇದ್ದರೆ
    ಅವನ ಪೀಳಿಗೆ ......
    ಈ ಭೂಮಿ ಹಸಿರಿದ್ದರೆ ಜೊತೆಗೆ..

    ನಿಮ್ಮ ಕವನ ಚನ್ನಾಗಿದೆ ಅದರಲ್ಲು ಕೊನೆಯ ಸಾಲುಗಳು ಅರ್ಥಪೂರ್ಣವಾಗಿವೆ.

    ReplyDelete
  45. ಕಂಪ್ಯೂಟರಿನಿಂದಲೇ ಮಕ್ಕಳನ್ನು ಡೌನ್ ಲೋಡ್ ಮಾಡೋ ದಿನಗಳು ದೂರವಿಲ್ಲ ಕಣ್ರೀ... ಚುಕ್ಕಿಗಳೇ ಚಿತ್ತಾರರೇ...

    ReplyDelete
  46. ಪ್ರವೀಣ್..
    ಥ್ಯಾ೦ಕ್ಸ್..ನಿಮ್ಮ ಪ್ರತಿಕ್ರಿಯೆಗೆ..

    ಜಲನಯನ ಸರ್..
    ಮತ್ತಷ್ಟು ಉದಾಹರಣೆಗಳ ಮೂಲಕ ತಿಳಿಸಿದ್ದಕ್ಕೆ ವ೦ದನೆಗಳು.

    ಮನದಾಳದಿಂದ.........
    ನಿಮ್ಮ ಆದರ ಪೂರ್ವಕ ಪ್ರತಿಕ್ರಿಯೆಗೆ ಥ್ಯಾ೦ಕ್ಸ್.

    ಸುಮ..
    ಧನ್ಯವಾದಗಳು..ಪ್ರೀತಿಪೂರ್ವಕ ಕಾಮೆ೦ಟಿಗೆ..

    ReplyDelete
  47. ಶಿವರಾ೦..
    ಇದು ಭವಿಶ್ಯದ ಭೀಕರತೆಯ ಪ್ರಶ್ನೆಯಲ್ಲ..
    ಆದಿಮಾನವ ಕವಿತೆ ಗಿವಿತೆ ಬರೆದಿಟ್ಟಿದ್ದು ಸಿಕ್ಕಿಲ್ಲವಾದರೂ... ಆತನ ಕಲ್ಪನೆಯ ಸಾಕಾರ ಇ೦ದಿನ ವಿಶ್ವವಲ್ಲವೇ..?ಮಾನಸಿಕ ವಿಕಾಸವಾದ ಹಾಗೆ ದೈಹಿಕ ಬದಲಾವಣೆಗಳೂ ಆಗಿವೆ.. ಆಗುತ್ತಿದೆ .. ಆಗಲೂ ಬಹುದು ಇನ್ನು ಮು೦ದೆ....!!!
    ಯಾವುದಕ್ಕೂ ಸಧ್ಯಕ್ಕೆ ಇದು ತಲೆಬಿಸಿ ಮಾಡಿಕೊಳ್ಳಲೇ ಬೇಕಾದ್ದೇನಲ್ಲ...
    ಮನುಷ್ಯ ಈಗ ವಿಮಾನದಲ್ಲಿ ಹಾರಾಡುವವನು ಮು೦ದೆ ರೆಕ್ಕೆ ಬೆಳೆಸಿಕೊ೦ಡು ಸ್ವಯ೦ ಹಾರಾಡತೊಡಗಿದರೆ ತ೦ತ್ರಜ್ನಾನವೋ ಮತ್ಯ೦ತೋ... ಲಾಭವೇ ಸರಿ..

    ಹಾಗಾಗಿ.. ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ನಿಮಗೆ ಧನ್ಯವಾದ ಹೇಳಲು ಈ ಕ೦ಪ್ಯುಟ್ರೆ ಹೆಲ್ಪ್ ಮಾಡುತ್ತಿದೆ...
    !!!!!!!

    ReplyDelete
  48. ಅನ್ವೇಷಿ...
    ಅಸತ್ಯದವರೆ...!
    ನಿಜಕ್ಕೂ ನೆಟ್ ಮದುವೆ ಮಾಡಿಕೊ೦ಡವರಿಗೆ ಅದೇ ಗತಿ ಬರಬಹುದೇ......ಆ ಕಾಲಕ್ಕೆ.....!!!!!!

    ReplyDelete
  49. ಹರೀಶ್ ...
    ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  50. ಕವನದ ಜೊತೆ ಸಣ್ಣ ಲೇಖನವನ್ನು ಬರೆದುದು ತು೦ಬಾ ಚೆನ್ನಾಗಿ ಬ೦ತು.... :)

    ReplyDelete
  51. ಮಾನವ ಭವಿಷ್ಯದ ಊಹನೆ ತುಂಬಾ ಚೆನ್ನಾಗಿದೆ..ಕೆಲವೊಮ್ಮೆ ಅದರ ಬಗ್ಗೆ ಆಲೋಚನೆ ಮಾಡಿದ್ರೆ ಹೀಗೂ ಆಗಬಹುದು ಅನ್ನಿಸುತ್ತೆ..ತುಂಬಾ ಚೆನ್ನಾಗಿದೆ.. ಲೇಖನವು ಚೆನ್ನಾಗಿದೆ..

    ReplyDelete
  52. ಸರಿಯಾಗಿ ಹೇಳಿದಿರಿ ಮೇಡಮ್... ಆ ಚಿತ್ರದಲ್ಲಿ ಅನ್ಯ ಲೋಕದ ಜೀವಿಯಂತಿರುವ ಮನುಷ್ಯನ ಚಿತ್ರವಂತೂ ಭಯ ಹುಟ್ಟಿಸುವಂತಿದೆ!

    ReplyDelete