Sunday, December 12, 2010

ಮನಸ್ಸು ಇಲ್ಲದ ಮಾರ್ಗ.

ಇದೊಂದು ಮನಶ್ಯಾಸ್ತ್ರಕ್ಕೆ ಸಂಬಂಧಪಟ್ಟ ಪುಸ್ತಕ.  ಡಾ.ಮೀನಗುಂಡಿ ಸುಬ್ರಹ್ಮಣ್ಯ ಅವರ ಕೃತಿ.


ಸೈಕಾಲಜಿಸ್ಟ್ ಏನೋ ಮಾಡಿ ತಮ್ಮ ''ಮನಸ್ಸನ್ನು '' ಸರಿ ಮಾಡಿ ಬಿಡುತ್ತಾನೆ.ಬದಲಾಯಿಸುತ್ತಾನೆ. ಇದರಿಂದಾಗಿ ತಮ್ಮ ''ಮನಸ್ಸಿನಲ್ಲಿ''ಮತ್ತು ದೇಹದಲ್ಲಾಗುವ ನಕಾರಾತ್ಮಕ ಅನುಭವಗಳು ನಿಲ್ಲುತ್ತವೆ ಎಂಬ ನಿರೀಕ್ಷೆ ಇಟ್ಟುಕೊಂಡು ಅವರ ಬಳಿ ಹೋದ ಮಾನಸಿಕ ಸಮಸ್ಯಾ ವ್ಯಕ್ತಿಗಳಿಗೆ ಅವರು ತೋರಿಸಿದ ''ಮನಸ್ಸು'' ಇಲ್ಲದ ಮಾರ್ಗದ  ಬಗೆಗೆ ಬರೆದ ಪುಸ್ತಕದ ಕುರಿತು ನಿಮ್ಮಲ್ಲೊಂದಿಷ್ಟು ಹೇಳಿಕೊಳ್ಳೋಣ ಅಂತ ...


 ಈ ಪುಸ್ತಕದಲ್ಲಿ   ಸ್ವತಹ ಸೈಕೊಥೆರಪಿಷ್ಟರಾದ ಲೇಖಕರು     ಮನುಷ್ಯನ ಮಾನಸಿಕ ಸ್ಥಿತಿ, ಕಾರಣಗಳು, ಲಕ್ಷಣಗಳು, ಅದರ ಅವ್ಯವಸ್ತೆ, ಅದು ಮುಂದುವರೆಯುವ ರೀತಿ, ಪರಿಣಾಮ [ ಅವರ ಮೇಲೆ ಮತ್ತು ಸಾಮಾಜಿಕವಾಗಿ] ಇವುಗಳನ್ನು ಸೂಕ್ತವಾಗಿ ವಿವರಿಸುತ್ತಾ ಸಮರ್ಪಕವಾದ ಉದಾಹರಣೆಗಳೊಂದಿಗೆ ಸಾಮಾನ್ಯರಿಗೂ ಅರ್ಥವಾಗುವಂತೆ ತುಂಬಾ ಸರಳವಾಗಿ ವಿಶ್ಲೇಷಿಸಿದ್ದಾರೆ.


ಮನೋರೋಗ ಎಂದರೇನು ? ಅವುಗಳ ಬಗೆಗಳು, ಮನೋರೋಗದ ಬಗೆಗೆ ಜನರ ಪೂರ್ವಾಗ್ರಹಗಳೂ, ಮನೋ ಚಿಕಿತ್ಸಕರ ಬಗೆಗೆ ಸಾಮಾನ್ಯರ ಅಭಿಪ್ರಾಯಗಳೂ, ಮನೋಚಿಕಿತ್ಸಕರ ಜವಾಬ್ಧಾರಿ ಇವುಗಳ ಕುರಿತಾಗಿ ಆಕರ್ಷಕವಾಗಿ ಹಾಸ್ಯಭರಿತವಾಗಿ ವಿವರಿಸಿದ್ದಾರೆ.


ಉದಾಹರಣೆಗಳೊಂದಿಗೆ ಅವುಗಳನ್ನು' ಹ್ಯಾಂಡಲ್ ' ಮಾಡಿದ ರೀತಿಯನ್ನು ಓದುತ್ತಿದ್ದರೆ ವೈಜ್ಞಾನಿಕ ಕಾದಂಬರಿಯೊಂದನ್ನು ಓದುತ್ತಿರುವ ಅನುಭವವಾಗುತ್ತದೆ. ಸೈಕೋ ಥೆರಪಿಸ್ಟ್ ಗೆ  ಇರಬೇಕಾದ ಸಮಯಪ್ರಜ್ಞೆಯನ್ನು ಸೂಕ್ಷ್ಮವಾಗಿ ತೋರಿಸುತ್ತಾರೆ.


ಈ ಮನಶ್ಯಾಸ್ತ್ರದ ಸಂಬಂಧವಾಗಿ ಕೆಲಸಮಾಡಿದ ಅನೇಕ ಜನ ಮನಶ್ಯಾಸ್ತ್ರಜ್ನರನ್ನು ಪರಿಚಯಿಸಿದ್ದಾರೆ. ಕೆಲವು  ಮನೋಚಿಕಿತ್ಸೆಯ ವಿಧಾನಗಳನ್ನೂ   ಪರಿಚಯಿಸಿದ್ದಾರೆ.
ಟ್ರಾನ್ಸಾಕ್ಷನಲ್ ಅನಾಲಿಸಿಸ್ [ ಸಂವಾದ  ವಿಶ್ಲೇಷಣೆ ]  ಮತ್ತು  ಅದರ ಕರ್ತೃ  ಎರಿಕ್ ಬರ್ನ್ ಬಗೆಗೆ, ಗೆಸ್ಟಾಲ್ಟ್ ಥಿಯರಿಯ ಬಗೆಗೆ, ಅವುಗಳನ್ನು  ಮನೋಚಿಕಿತ್ಸೆಯಲ್ಲಿ  ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಸರಳವಾಗಿ ಹೇಳಲಾಗಿದೆ. ಮನುಷ್ಯರಾಡುವ  ಆಟಗಳು, ಈಗೋ ಸ್ಟೇಟ್ ಗಳ ಬಳಸುವಿಕೆ ಇವುಗಳನ್ನು ಓದುತ್ತಾ ಹೋದಂತೆ ನಮ್ಮಲ್ಲೇ ನಾವು ಅನೇಕ ವಿಚಾರಗಳನ್ನು, ಬದಲಾವಣೆಗಳನ್ನೂ   ಗುರುತಿಸಿಕೊಳ್ಳಬಹುದಾಗಿದೆ.


ಪೂರಕ, ಮಾರಕ ಮತ್ತು ಅವ್ಯಕ್ತ ಸಂವಾದಗಳನ್ನು ನಾವು ಹೇಗೆ ನಡೆಸುತ್ತೇವೆ..?  ನಮ್ಮ ಅವಶ್ಯಕತೆಗಳೇನು? ಸಿಹಿ ಘಾತ, ಕಹಿಘಾತ ಇವುಗಳನ್ನು ಹೇಗೆ ಪಡೆಯುತ್ತೇವೆ? ನಾವು ಹೇಗೆ ಕಾರಣಗಳನ್ನು ಹುಡುಕುತ್ತಿರುತ್ತೇವೆ.? ಹೇಗೆ ಜವಾಬ್ಧಾರಿಯನ್ನು'' ಮನಸ್ಸಿನ'' ಮೇಲೆ ಹಾಕುತ್ತೇವೆ. ? ಹೇಗೆ ಬದಲಾಗುವುದನ್ನು ತಪ್ಪಿಸಿಕೊಳ್ಳುತ್ತೇವೆ? ನಮ್ಮ ಮನೋವ್ಯಾಪಾರವೇನು?  ಮನಸ್ಸಿನ ಹರಿಕಥೆಯೇನು?ಈ ರೀತಿಯ ಅನೇಕ ಪ್ರಶ್ನೆಗಳಿಗೆ ನಮಗಿಲ್ಲಿ ಉತ್ತರ ದೊರಕುತ್ತದೆ.


''ಮನಸ್ಸು'' ಬದಲಾಗಲು ಸಾಧ್ಯವಿದೆ ಎಂದಾದರೆ ನಮ್ಮ ''ಮನಸ್ಸನ್ನು'' ಯಾರು ಬದಲಾಯಿಸಬೇಕು? ನಾವೆಯೇ ಅಥವಾ ಥೆರಪಿಷ್ಟರೆ ?


ಎಂದು ಪ್ರಶ್ನಿಸುವ ಲೇಖಕರು ಉತ್ತರವನ್ನು  ನಮ್ಮಿಂದಲೇ ಪಡೆಯುತ್ತಾರೆ.  ಯಾವುದನ್ನೂ ಒಪ್ಪಲೇ ಬೇಕೆನ್ನುವ ನಿಭಂಧನೆ ಇಲ್ಲ. ಅದನ್ನೂ ತಮ್ಮ ಥೆರಪಿಯಲ್ಲಿ ವಿವರಿಸುತ್ತಾರೆ.


ತುಂಬಾ ಸುಂದರವಾದ, ಉತ್ಕೃಷ್ಟವಾದ, ಸಂಪತ್ಭರಿತವಾದ ಪುಸ್ತಕವಿದು. ಈ ಪುಸ್ತಕ ನನಗೆ ಎಷ್ಟು  ಉತ್ತೇಜನ ಕೊಟ್ಟಿತೆಂದರೆ ಬಿಎಸ್ಸಿ ಯಲ್ಲಿ  ಪಿ. ಸಿ. ಎಂ. ಓದಿದ ನನಗೆ ಸ್ನಾತಕೋತ್ತರ ಅಭ್ಯಾಸಕ್ಕೆ ಮನಶ್ಯಾಸ್ತ್ರವನ್ನೇ ಆಯ್ದುಕೊಳ್ಳುವಂತೆ ಮಾಡಿತು. ಮನಸ್ಸಿನ ಮತ್ತಷ್ಟು ಮನೋವ್ಯಾಪಾರವನ್ನು ತಿಳಿಯಬೇಕೆನ್ನುವ ಹಂಬಲ ಹುಟ್ಟಿಸಿತು.


ಆಸಕ್ತರು ಖಂಡಿತಾ''ಮನಸ್ಸು ಇಲ್ಲದ ಮಾರ್ಗ '' ಓದಿ. ಆ ಬಗ್ಗೆ ''ಮನಸ್ಸು'' ಮಾಡಿ....!! ಇಂತಹಾ ಅತ್ಯುತ್ತಮ ಕೃತಿಯನ್ನು ಕನ್ನಡಕ್ಕೆ ಕೊಟ್ಟ ಮೀನಗುಂಡಿ ಸುಬ್ರಹ್ಮಣ್ಯ ಅವರಿಗೆ ನನ್ನ ಅನಂತಾನಂತ ವಂದನೆಗಳು.

14 comments:

  1. ವಿಜಯಶ್ರೀ,

    ನಿಜ.... ತುಂಬಾ ಉತ್ತಮ ಪುಸ್ತಕವಿದು. ಬಹಳ ಹಿಂದೆ ಓದಿದ್ದೆ... ಈಗ ಮತ್ತೆ ಓದಬೇಕೆಂದಿನಿಸಿದೆ. ಇತ್ತೀಚಿಗೆ ಅವರ "ಮಡದಿ ಮತ್ತೊಬ್ಬ ಚೆಲುವಗೆ" ಪುಸ್ತಕವನ್ನು ಓದಿದೆ. ಅದೂ ತುಂಬಾ ಚೆನ್ನಾಗಿದೆ. ಓದಿರದಿದ್ದರೆ ತಪ್ಪದೇ ಓದಿ.

    ಧನ್ಯವಾದ.

    ReplyDelete
  2. ಒಳ್ಳೆ ಪುಸ್ತಕದ ಬಗ್ಗೆ ತಿಳಿಸಿಕೊಟ್ಟಿದ್ದೀರ ಧನ್ಯವಾದಗಳು. ಖಂಡಿತ "ಮನಸ್ಸು ಇಲ್ಲದ ಮಾರ್ಗ" ಓದಲು ಮನಸ್ಸು ಮಾಡುವೆ..

    ReplyDelete
  3. ಒಳ್ಳೆ ಪುಸ್ತಕದ ಬಗ್ಗೆ ತಿಳಿಸಿಕೊಟ್ಟಿದ್ದೀರ.
    ತುಂಬಾ ಚೆನ್ನಾಗಿದೆ.
    ಧನ್ಯವಾದಗಳು.

    ReplyDelete
  4. ನಿಮ್ಮ ಈ ಲೇಖನ ದಲ್ಲಿ ಆ ಪುಸ್ತಕದ ವಿಶೇಷತೆಯನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದೀರಾ. ನನಗೂ ಕೂಡ ಸೈಕಾಲಜೀ ಬಗ್ಗೆ ಆಸಕ್ತಿ ಇದೆ. ಈ ಲೇಖನವನ್ನು ಓದಿದ ನಂತರ ಆ ಬುಕ್ ಓದುವ ಮನಸ್ಸಾಗುತ್ತಿದೆ. ಹತ್ತಿರದ ಬುಕ್ ಸ್ಟಾಲ್ ನಲ್ಲಿ ಇಂದೇ ವಿಚಾರಿಸುವೆ.

    ReplyDelete
  5. khanDita oduve...

    oLLeya pustaka parichaya maaDiddakke dhanyavaada...

    ReplyDelete
  6. ಮನಸ್ಸು ಇಲ್ಲದ ಮಾರ್ಗ ಹಾಗು ಮಡದಿ ಮತ್ತೊಬ್ಬ ಚೆಲುವಗೆ ಪುಸ್ತಕಗಳನ್ನು ಓದಿದ್ದೇನೆ. ತಿಳಿಯಾದ ಶೈಲಿಯಲ್ಲಿ ತಿಳಿಸಿ ಕೊಟ್ಟಿದ್ದಾರೆ. ಬ್ಲಾಗ್-ಸ್ನೇಹಿತರಿಗಾಗಿ ಇಲ್ಲಿ ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  7. ಮಾಹಿತಿಗಾಗಿ ಧನ್ಯವಾದಗಳು ವಿಜಯಶ್ರೀ ಅವರೆ.

    ಅನ೦ತ್

    ReplyDelete
  8. ವಿಜಯಾ...

    ನಾವು ಕಾಲೇಜುದಿನಗಳಲ್ಲಿ ಮನಶ್ಯಾಸ್ತ್ರವನ್ನು ನಮ್ಮ ಕುತೂಹಲಕ್ಕಾಗಿ ಅಭ್ಯಾಸ ಮಾಡಿದ್ದೆವು..

    ಈ ಮನಸ್ಸು ಎಷ್ಟು ವಿಚಿತ್ರ...

    ಈಗ ಇಲ್ಲಿರುವದು ಮತ್ತೊಂದು ಕ್ಷಣದಲ್ಲಿ ಮತ್ತೆಲ್ಲೋ ಇರುತ್ತದೆ..

    ಹೊಸ ಪುಸ್ತಕ ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು,,..
    ನಾನೂ ಸಹ ಓದ ಬೇಕು ಇದನ್ನು..

    ReplyDelete
  9. ಅವರ 'ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ?'ಎನ್ನುವ ಪುಸ್ತಕ ಕೂಡ ಉತ್ತಮ ಪುಸ್ತಕ.ಅವರ ಮೂರೂ ಕೃತಿಗಳನ್ನೂ ಓದಿದ್ದೇನೆ.ಎಲ್ಲರೂ ಓದಬೇಕಾದಂತಹ ಕೃತಿಗಳಿವು.ಪುಸ್ತಗಳನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

    ReplyDelete
  10. ಮನುಷ್ಯನ ಮಾನಸಿಕ ಸ್ಥಿತಿ ಮತ್ತು ಆ ಸ್ಥಿತಿಯಲ್ಲಿ ಆತ ಮಾಡುವ ಕೃತ್ಯ. ಹಾಗೂ ಮನುಷ್ಯ ಆಯ್ಕೆಮಾಡಿಕೊಳ್ಳುವ ಕೆಲಸ,ಎದುರಾಗಬಹುದಾದ ಸಮಸ್ಯೆ,ಆ ಕ್ಷಣದಲ್ಲಿ ಆತನ ಮಾನಸಿಕ ಸ್ಥಿತಿ ಹಾಗೂ ಆತ ತೆಗೆದುಕೊಳ್ಳುವ ನಿರ್ದಾರ ಅಥವಾ ಕ್ರಮ.ಮತ್ತೂ; ಅವನ ಸಾಧನೆ.! ಇಂತಹುದರ ಬಗ್ಗೆ ಹೆಚ್ಚಿನ ಕುತೂಹಲ ನನಗೆ.!! ಒಳ್ಳೆಯ ಪುಸ್ತಕ ಇರಬಹುದು. ಖಂಡಿತವಾಗಿಯೂ ಒಮ್ಮೆ ಓದಿ ನೋಡುತ್ತೇನೆ. ಪುಸ್ತಕ ಪರಿಚಯ ಮಾಡಿದ್ದಕ್ಕ್ಕೆ ಧನ್ಯವಾದಗಳು.!

    ReplyDelete
  11. ವಿಜಯಶ್ರೀ ಪುಸ್ತಕ ಮತ್ತು ಲೇಖಕರ ಪರಿಚಯ ಮಸ್ತಕಕ್ಕೆ ಕಳುಹಿಸಿದ ನಿಮ್ಮ ಮೂರೂ ಬ್ಲಾಗ್ ಪೋಸ್ಟ್ ತುಂಬಾ ಉಪಯುಕ್ತ..ಮಾಹಿತಿಪೂರ್ಣ...ಈ ಬಾರಿ ಬಂದಾಗ ಕೊಳ್ಳುತ್ತೇನೆ...
    ಹೌದು ವಿಜ್ಞಾನ ಪರಿಚಯದ ಪ್ರಯತ್ನಗಳೇ ವಿರಳವಾಗಿರುವಾಗ ಇಂತಹ ಲೇಖಕರ ಕೊಡುಗೆ ಅಮೂಲ್ಯ...ಧನ್ಯವಾದ ತಿಳಿಸಿದ್ದಕ್ಕೆ.

    ReplyDelete
  12. ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು.

    ReplyDelete