ಈಗೊಂದೆರಡು ಮೂರು ದಿನದಿಂದ ಚಳಿ ಯಾವ ಪರಿ ಬಿದ್ದಿದೆಯೆಂದರೆ ಹಳೆ ನೋವುಗಳೆಲ್ಲ ಮರುಕಳಿಸಿ ಬಿಟ್ಟಿವೆ.ಚಿಕ್ಕವರಿರುವಾಗ ಆಡುವಾಗ, ಓಡುವಾಗ, ನಡೆಯುವಾಗ ಬಿದ್ದಿದ್ದರದ್ದು, ಜಪ್ಪಿಸಿಕೊಂಡಿದ್ದು, ಜಜ್ಜಿಕೊಂಡಿದ್ದು, ಇನ್ಜಕ್ಷನ್ನು ತಗೊಂಡಿದ್ದರದ್ದು ಎಲ್ಲದರ ನೋವೂ ಈ ಚಳಿಯಲ್ಲಿ ಹೊಸತಾಗಿ ಬಂದಂತೆ ನಗು ನಗುತ್ತಿದೆ. ಎಲ್ಲಾದರೂ ಹೊಡ್ಚಲು ಹಾಕಿಕೊಂಡು ಕೂರೋಣ ಅನ್ನಿಸುತ್ತಿರುವುದು ನೋವಿನ ವಿಶೇಷ.
ಊರಲ್ಲಾಗಿದ್ದರೆ ಅಡಿಕೆ ಬೇಯಿಸುವ ಒಲೆ ಬುಡ ಬಿಡುವುದು ಬೇಡವಾಗಿತ್ತು.ಧಗ ಧಗ ಉರಿಯುವ ಬೆಂಕಿಯನ್ನು ನೋಡುತ್ತಾ , ಅದರ ಉರಿವ ಪರಿಗೆ ಬೆರಗಾಗುತ್ತಾ, ಕೊಳ್ಳಿ ನುರಿಯುತ್ತಾ,ಕುಂಟೆ ಸರಿಸುತ್ತಾ, ಒಲೆ ಬುಡ ಕೆದಕುತ್ತ, ಹಾಳೆ ಭಾಗ ಹಾಕುತ್ತಾ, ಅಡಿಕೆ ಬೇಯುವಾಗಿನ ತೊಗರಿನ ಕಂಪನ್ನು ಆಸ್ವಾದಿಸುತ್ತಾ ಚಳಿ ಕಾಯಿಸ ಬಹುದಾಗಿತ್ತು.
ನನಗದೇ ನೆನಪಾಗುತ್ತಿದೆ.ಸಣ್ಣವರಿರುವಾಗ ನಾವು ರಾತ್ರಿ ಅಪ್ಪಯ್ಯ ಒಲೆ ಬೆಂಕಿ ಒಟ್ಟಿ ಅಡಿಕೆ ಬೇಯಿಸುವ ಹಂಡೆಯಲ್ಲಿ ದೊಡ್ಡ ಜಾಲರಿ ಸೌಟಿನಿಂದ ಅಡಿಕೆಗಳನ್ನು ಕೌಚಿ ಮಗುಚಿ ಮಾಡುತ್ತಿದ್ದರೆ ನಾನು ನನ್ನಕ್ಕ ಅಂದಿನ ಶಾಲಾ ವಿಧ್ಯಮಾನಗಳನ್ನು ಹಂಚಿಕೊಳ್ಳುತ್ತಾ ಚಳಿ ಕಾಯಿಸುತ್ತಿದ್ದೆವು.ಗೋಣೀ ಚೀಲವೋ, ಮೆಟ್ಟುಗತ್ತಿ ಮಣೆಯೋ ಯಾವುದಾದರೊಂದು ಸುಖಾಸನ.
ಮಲೆನಾಡಿನಲ್ಲಿ ಚಳಿ ಬಹಳ. ಆಗೆಲ್ಲಾ ಬೇಸಿಗೆಯಲ್ಲೂ ಒಂದು ಕಂಬಳಿ ಹೊದೆಯುವಷ್ಟು ಚಳಿ ಇರುತ್ತಿತ್ತು. ಒಲೆ ಮುಂದೆ ನಮ್ಮಿಬ್ಬರ ಜೊತೆ ಒಂದು ಪಕ್ಕದಲ್ಲಿ ನಾಯಿ 'ಜೂಲ' ಮತ್ತು ಇನ್ನೊಂದು ಪಕ್ಕದಲ್ಲಿ ಬೆಕ್ಕು 'ಸಿದ್ದಿ' ಖಾಯಂ ಹಕ್ಕುದಾರರು. ಚಳಿಯಲ್ಲಿ ಅವಕ್ಕೆ ಜಗಳಕ್ಕಿಂತಲೂ ಒಲೆಯೇ ಮುಖ್ಯವಾಗಿತ್ತು.ಆಗಾಗ ಜೂಲ ಮಾತ್ರಾ ಕಿವಿ ನಿಗುರಿಸಿ ಬೆಕ್ಕಿನ ಕಡೆ ಒಮ್ಮೆ ಮತ್ತು ನಮ್ಮ ಕಡೆ ಒಮ್ಮೆ ನೋಡುವ ಕೆಲಸ ಮಾಡುತ್ತಿತ್ತು. ಸಿದ್ದಿ ಮಾತ್ರಾ ರಾಣಿಯಂತೆ ನಮಗೊರಗಿ ಪವಡಿಸುತ್ತಿತ್ತು. ಎಷ್ಟಾದರೂ ಜಾತಿ ವೈಷಮ್ಯ ಇದ್ದೇ ಇರುತ್ತದೆ. ತನ್ನ ಬುದ್ಧಿ ಗೊತ್ತಾಗಿ ಹೋಯಿತೇನೋ ಒಡತಿಯರಿಗೆ ಎನ್ನುವಂತೆ ಜೂಲ ಆಗಾಗ ಮುಖ ಹುಳ್ಳಗೆ ಬೇರೆ ಮಾಡುತ್ತಿತ್ತು.
ಅಣ್ಣಂದಿರಿಗೆ ಸುಲಿದ ಅಡಿಕೆಯ ಸಿಪ್ಪೆಗಳನ್ನು ಒಗೆಯುವ ಕೆಲಸ ಮತ್ತು ರಾತ್ರಿ ಪಾಳಿಯ ಅಡಿಕೆ ಸುಲಿಯುವವರಿಗೆ ಹಸಿ ಅಡಿಕೆ ರಾಶಿ ಮಾಡುವ ಕೆಲಸ. ಅವಿಷ್ಟು ಮಾಡಿ ಅವರೂ 'ಸರ್ಕಳ್ರೆ' ಎನ್ನುತ್ತಾ ನಮ್ಮ ಜೊತೆಗೂಡುತ್ತಿದ್ದರು. ಆ ಬೆಂಕಿಗೆ ಮುಖ ವೋಡ್ಡಿದರೂ ಬೆನ್ನಿಗೆ ಚಳಿ ಬಿಡದು. ಮತ್ತೆ ಸ್ವಲ್ಪ ಹೊತ್ತು ಬಿಟ್ಟು ಬೆನ್ನು ಕಾಯಿಸಿಕೊಳ್ಳುವುದು.ಮುಂಬಾಗ ಸೆಖೆ, ಬೆನ್ನಿಗೆ ಚಳಿ. ಸ್ವೆಟರ್ ಬೇರೆ ಇರುತ್ತಿತ್ತು. ಅಪ್ಪಯ್ಯ ಮಾತ್ರಾ ಬನೀನನ್ನೂ ಹಾಕಿಕೊಳ್ಳದೆ ಹೆಗಲ ಮೇಲೆ ಟವೆಲ್ ಮಾತ್ರಾ ಹಾಕಿಕೊಂಡು ಬರಿ ಮೈಯಲ್ಲೇ ಅಡಿಕೆ ಬೇಯಿಸುವ ಕೆಲಸ ಮಾಡುತ್ತಿದ್ದ.''ಚಳಿ ಆಗ್ತಲ್ಯನ ಅಪ್ಯ '' ಅಂದರೆ,''ಕೆಲಸ ಮಾಡ್ತಾ ಇದ್ರೆ ಚಳಿಯೆಲ್ಲಾ ನೆಗ್ದು ಬಿದ್ ಹೋಗ್ತು , ಪುಟ್ಟ ಪುಟ್ಟ ಕೈಯಲ್ಲಿ ನಿನ್ಗನೂ ಕೆಲಸ ಮಾಡಿದ್ರೆ ಚಳಿ ಹತ್ರನೂ ಸುಳೀತಲ್ಲೇ'' ಎನ್ನುತ್ತಿದ್ದುದು ಈಗ ನೆನಪಿನಲ್ಲಿ ಸುಳಿಯುತ್ತಿದೆ.
'ಬೆಂಕಿ ನೆಗ್ಯಾಡ್ತಾ ಇದ್ದು ನೋಡು' ಎಂದು ನನ್ನ ಎರಡನೇ ಅಣ್ಣ ತೋರಿಸುತ್ತಿದ್ದ. ದೊಡ್ಡ ದೊಡ್ಡ ಕುಂಟೆಯ ಇದ್ದಿಲಾದ ಭಾಗದಲ್ಲಿ ಕೆಲವೊಮ್ಮೆ ಹೊಳೆಯುವ ಮಣಿಗಳ ಸಾಲಿನಂತೆ ಕೆಂಡ ಉರಿಯುತ್ತಿತ್ತು. ಅದನ್ನು ನನಗೆ ವರ್ಣಿಸಲು ಕಷ್ಟವಾಗುತ್ತಿದೆ.ಅದನ್ನು ನೋಡುತ್ತಿದ್ದರೆ ಬೆಂಕಿ ನಕ್ಕಂತೆ ಭಾಸವಾಗುತ್ತಿತ್ತು.!
ಕೆಲವೊಮ್ಮೆ ಯಾರ ಮನೆಯಲ್ಲಾದರೂ ಮುಂಚೆಯೇ ಆಲೆ ಮನೆ ಶುರು ಆದರೆ ಕಬ್ಬು ತಂದು ಕೊಡುತ್ತಿದ್ದರು.ಕಬ್ಬುಸಿಗಿದು ತಿನ್ನುವ ಕೆಲಸವೂ ಒಲೆ ಮುಂದಿನ ಅಧ್ಯಾಯದಲ್ಲಿ ಸೇರಿಕೊಳ್ಳುತ್ತಿತ್ತು. ನನಗೆ ಕಬ್ಬು ತುಂಬಾ ಇಷ್ಟ. 'ಒಂದು ಹಲ್ಲು ಇರುವ ವರೆಗೂ ಕಬ್ಬು ತಿನ್ನುತ್ತೇನೆ ' ಎಂದು ನಾನಾದರೂ ಆಗ ಘನಘೋರ ಪ್ರತಿಜ್ಞೆಯನ್ನೇ ಮಾಡಿದ್ದೆ. ಈಗ ಪ್ರತಿಜ್ಞೆಯನ್ನು ಮುರಿದಿದ್ದೇನೆ.....!!
ಈಗ ಸ್ವೆಟರ್ ಹಾಕಿಕೊಂಡು ಗಣಕ ಯಂತ್ರದ ಕೀಲಿ ಮಣೆಯ ಮೇಲೆ ಕುಟ್ಟುತ್ತಿದ್ದರೆ ಏಳುವುದಕ್ಕೆ ಮನಸ್ಸು ಬಾರದು. ಚಳಿ ಅಷ್ಟಿದೆ. ಚಳಿ ದೇಶದವರೆಲ್ಲ ಹೇಗಿರುತ್ತಾರಪ್ಪ...? ಅಕ್ಷರ ದೋಷವಾಗಿದ್ದರೆ ನೀವೇ ಸರಿ ಮಾಡಿಕೊಳ್ಳಿ. ಸರಿ ಮಾಡಲೂ ಚಳಿ.....! ನಾನು ಅಡಿಕೆ ಒಲೆಯ ಬೆಂಕಿ ಕಾಯಿಸುವ ಕನಸು ಕಾಣುತ್ತಾ ಮನಸನ್ನು ಬೆಚ್ಚಗೆ ಮಾಡಿಕೊಳ್ಳುತ್ತೇನೆ.
ಅಡಿಕೆ ಒಲೆಯ ಬೆಂಕಿಯ ನೆನಪು ಅದೆಷ್ಟು ಸಿಹಿ..ಲೇಖನ ಚೆನ್ನಾಗಿದೆ.
ReplyDeleteಮೈಕೊರೆಯುವ ಈ ಚಳಿಯಲ್ಲಿ ನಿಮ್ಮ ನೆನಪುಗಳನ್ನು ಓದುತ್ತಿದ್ದಂತೆ,ಚಳಿ ಓಡಿ ಹೋಯಿತು!
ReplyDeleteವಿಜಯಶ್ರಿ,
ReplyDeleteನಿಮ್ಮ ನೆನಪುಗಳು ನನ್ನದು ಸಹ.ಅದ್ರೆ ಈಗ ಒಲೆಗೆ ಹಾಕೊ ಕುಂಟೆ ಒಟ್ಟು ಮಾಡೊದೆ ತಲೆಬಿಸಿ.ಆದ್ರೆ ನಾನೂ ಅಡಿಕೆ ಒಲೆ ಮುಂದೆ ಕೂತು ಚಳಿ ಕಾಯಿಸಲು ಕಾಯ್ತಾ ಇದ್ದೆ.(ನಮ್ಮ ತೋಟದಲ್ಲಿ ಸದ್ಯಕ್ಕೆ ಅಡಿಕೆ ಸಸಿ)
ಕುಸುಮಾ ಹೆಗಡೆ
ವಿಜಯಶ್ರೀ ನನಗೆ ಮಂಡ್ಯದ ವಿ.ಸಿ.ಫಾರಂ ನಲ್ಲಿನ ನಮ್ಮ ವಾಸದ ಸಮಯದ ನೆನಪು..ಬಂತು ನಿಮ್ಮ ಈ ಲೇಖನ ನೋಡಿ..ನಾವು ರಸ ತೆಗೆದ ಕಬ್ಬಿನ ಸಿಪ್ಪೆಯನ್ನು ಕ್ಯಾಂಪ್ ಫೈರ್ ಗೆ ಮತ್ತೆ ನೀರು ಕಾಯಿಸಲು ಉಪಯೋಗಿಸಿತ್ತಿದ್ದೆವು...
ReplyDeleteಅದರ ಪ್ರಖರತೆ ಜೋರಿರ್ತಿತ್ತು...
ಚಳಿಗಾಲದ ಅಧಿವೇಶನದಲ್ಲಿ 'ಬೆಂಕಿ ನೆಗ್ಯಾಡ್ತಾ ಇದ್ದು ನೋಡು'..ಬೆಚ್ಚಗಾಗಿಸಿತು ನಿಮ್ಮ ಲೇಖನ. "ಹೊಡ್ಚಲು ಹಾಕಿಕೊಂಡು"...ಎ೦ದರೆ ಹೊದ್ಕೊ೦ಡು ಅ೦ತಾನಾ.. ವಿಜಯಶ್ರೀ ಅವರೆ..?
ReplyDeleteಶುಭಾಶಯಗಳು
ಅನ೦ತ್
ಹ್ಹ ಹ ಹ್ಹ ..ರಾಶಿ ಚೋಲೋ ಇದ್ದು ಹೊಡ್ಸುಳು, ಅಡ್ಕೆ ಕೊಯ್ಲಿನ ಬೆಂಕಿ ಕಾಸ ಕಥೆ. ನಾವೆಲ್ಲ ಹಾಗೆ ಹೊಡ್ಸಿಲಿನ ಮುಂದೆ ಕೂತು "ಶೀತ ಶೀತ ನಡುಕ, ಶೀತೆ ಗಂಡ ಮುದುಕ" ಅಂತ ಹಾಡ್ತಾ ಊರು ಕೇರಿ ಕಥೆ ಕೊಚ್ಚುತ್ತಾ ಕುಳಿತುಕೊಳ್ಳುತ್ತಿದ್ದುದು ನೆನಪಾಯ್ತು. ಒಂದು ಚೆಂದದ ಲೇಖನದೊಂದಿಗೆ ಹಳೆಯ ಕೆಲ ನೆನಪುಗಳನ್ನು ಮೆಲುಕು ಹಾಕಿಸಿದಿರಿ.ಧನ್ಯವಾದಗಳು.
ReplyDeleteಹ್ಹ ಹ ಹ್ಹ ..ರಾಶಿ ಚೋಲೋ ಇದ್ದು ಹೊಡ್ಸುಳು, ಅಡ್ಕೆ ಕೊಯ್ಲಿನ ಬೆಂಕಿ ಕಾಸ ಕಥೆ. ನಾವೆಲ್ಲ ಹಾಗೆ ಹೊಡ್ಸಿಲಿನ ಮುಂದೆ ಕೂತು "ಶೀತ ಶೀತ ನಡುಕ, ಶೀತೆ ಗಂಡ ಮುದುಕ" ಅಂತ ಹಾಡ್ತಾ ಊರು ಕೇರಿ ಕಥೆ ಕೊಚ್ಚುತ್ತಾ ಕುಳಿತುಕೊಳ್ಳುತ್ತಿದ್ದುದು ನೆನಪಾಯ್ತು. ಒಂದು ಚೆಂದದ ಲೇಖನದೊಂದಿಗೆ ಹಳೆಯ ಕೆಲ ನೆನಪುಗಳನ್ನು ಮೆಲುಕು ಹಾಕಿಸಿದಿರಿ.ಧನ್ಯವಾದಗಳು.
ReplyDeleteನಾರಾಯಣ್ ಭಟ್ ಸರ್
ReplyDeleteಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು.
ಕಾಕ..
ಪ್ರೀತಿಪೂರ್ವಕ ಪ್ರೋತ್ಸಾಹಕ್ಕೆ ಧನ್ಯವಾದಗಳು.
ವನ್ಯ..
ನನ್ನ ಚಿತ್ತಾರದರಮನೆಗೆ ಸ್ವಾಗತ. ಥ್ಯಾ೦ಕ್ಸ್
ಜಲನಯನ ಸರ್
ReplyDeleteಕ್ಯಾ೦ಪ್ ಫೈರ್ ನೆನಪಾಯಿತೆ.?
ವ೦ದನೆಗಳು.
ಅನ೦ತ ಸರ್..
ಹೊಡ್ಚಲು ಅ೦ದರೆ ಕ್ಯಾ೦ಪ್ ಫೈರ್ ಅ೦ತ.
ಹಳ್ಳಿಯಲ್ಲಿ ಹೊಡ್ಚಲು ನಗರದಲ್ಲಿ ಕ್ಯಾ೦ಪ್ ಫೈರ್...:)
ವ೦ದನೆಗಳು.
ಓ ಮನಸೇ, ನೀನೇಕೆ ಹೀಗೆ...?
ಹೌದು.. ಹಳೆ ಕಥೆ ಈಗ್ಲೂ ನವೀಕರಿಸಿಕೊಳ್ಳಕ್ಕು.. ಆದ್ರೆ ಊರಿಗೆ ಹೋಪ್ಲೆ ಪುರ್ಸೊತ್ತಿಲ್ಲೆ ಈಗ...:)
ಥ್ಯಾ೦ಕ್ಸ್
ತುಂಬಾ ಚೆನ್ನಾಗಿದ್ದು ಸವಿ ಸವಿ ನೆನಪುಗಳ ಲೇಖನ. ನಂಗೂ ನನ್ನ ಹಳೆಯ ನೆನಪುಗಳು ಮರುಕಳಿಸಿ ಬೆಚ್ಚಗಿನ ಅನುಭವ ಆಯ್ತು... ಧನ್ಯವಾದ.
ReplyDeleteನಿಮ್ಮ ಲೇಖನ ಓದಿ, ನಾನು ನನ್ನ ಅಮ್ಮನ ಮನೆಯ ಅಡಿಕೆ ಒಲೆಯ ಬಳಿ ಹೊರಟುಹೋಗಿದ್ದೆ :)ತುಂಬಾ ಚೆನ್ನಾಗಿದೆ ..
ReplyDeleteಅಡಿಕೆ ಕೊಯ್ಲಿನಲಿ ಹಳ್ಳಿಗಾಡಿನ ಸಂಜೆಯ ಹೊತ್ತು ಬಹುಪಾಲು ಒಲೆ ಮುಂದೆ ಕಳೆದುಹೋಗುತ್ತದೆ.ಬೆಚ್ಚನೆ ಬೆಂಕಿ ತೋಡಿಹಾಕಿದ ಅಡಿಕೆಯ ಪರಿಮಳ. ವ್ಹಾ ! ಅದರ ಮಜವೇ ಬೇರೆ.
ReplyDeleteವಿಜಯಶ್ರೀ,
ReplyDeleteಛೆ, ಎಂಥಾ ಕೆಲಸ ಮಾಡಿದ್ಯೇ? ಬೇಕಾಗಿತ್ತಾ ನಿಂಗೆ ' ಹೊಡಸಲು ' ಬೆಂಕಿ ಕಾಯ್ಸದು , ಎಲ್ಲಾ ನೆನಪು ಮಾಡದು ? ಛೀ, ಇಲ್ಲಿ ಈ ಸುಟ್ ಫ್ಲಾಟ್ ನಲ್ಲಿ ಎಷ್ಟು ಚಳಿ ಆದ್ರೂವ ಸ್ವೆಟರ್ , ಸ್ಕಾರ್ಫ್ , ಸಾಕ್ಸ್ ಹಾಕಿ, ಕಿಡಕಿ ಎಲ್ಲಾ ಬಂದ್ ಮಾಡಿದರೂ ಬೆಚ್ಚಗಾಗ್ತಿಲ್ಲೇ ಹೇಳಿ ನಡುಗ್ತಾ ಕೂತ್ಗಂಡಿದ್ರೆ , ನೀ ಒಬ್ಬಳು ಬೆಂಕಿ ಕಾಯಸ ನೆನಪು ಮಾಡಿಟ್ಟಿದ್ದೆ .
ನಮ್ಮನೇಲಿ ತೋಟ ಎಲ್ಲಾ ಇತ್ತಿಲ್ಲೇ. ಹೊಡಸಲು ಇತ್ತಿಲ್ಲೇ . ಆದ್ರೆ, ಚಳಿಗಾಲದಲ್ಲಿ , ಸಂಜೆ ಹೊತ್ತಿಗೆ ಹಿತ್ತಿಲಲ್ಲಿ ಕಸ, ಒಣಗಿದ ಹುಲ್ಲು , ಎಲೆ ಎಲ್ಲಾ ಒಟ್ಟು ಮಾಡಿ ಬೆಂಕಿ ಹಾಕಿ ಸುತ್ತ ನಿಂತು ಕಾಯಿಸ್ತಿದ್ಯ ! ಅಜ್ಜನ ಮನೆಗೆ ಆಲೆ ಮನೆ ಹೊತ್ತಿಗೆ ಹೋದ್ರೆ , ಬೆಂಕಿ ಕಾಯಸ ಮಜಾನೆ ಬೇರೆ ಇರ್ತಿತ್ತು .
ಹ್ಮ್ಮ್ ಈಗ ಬರೀ ನೆನಪು ಮಾಡ್ಕ್ಯಳದೆಯ. ಚಂದ ಬರದ್ದೆ.
ಅಲ್ಲಿ ಅಷ್ಟು ಬೆಚ್ಚಗೆ ಕುಳಿತವರೇ ನೀವು ಹೀಗೆ ಬರೆದರೆ, ನಾವು ಇಲ್ಲಿ -೧೪ ಸೆ. ಛಳಿಯಲ್ಲಿದ್ದವರು ಏನು ಮಾಡಬೇಕು?ಕಿಟಕಿಯಿಂದ ಹೊರ ನೋಡಿದರೆ ಎರಡು ಅಡಿ ಹಿಮ!.
ReplyDeleteಜಗತ್ತಿನ ಎಷ್ಟು ದೇಶ ಸುತ್ತಾಕಿದರೂ ನಮ್ಮೂರೇ ಚಂದ ಅಂತ ಪ್ರತಿ ಬಾರಿ ಊರಿಗೆ ಹಿಂತಿರುಗುವಾಗಲೂ ಅಂದು ಕೊಳ್ಳುತ್ತೇನೆ.
howdu adike ole edru chali kaayiso majave bere. olle barha. haleya dinagalu nenapaadavu..
ReplyDeleteಇಲ್ಲಿ ಈಗ ಚಳಿ ೯ ಸೆ ಇದ್ದು...ನಿನ್ನ ಲೇಖನ ಓದಿ ಚಳಿ ಇನ್ನು ಜಾಸ್ತಿ ಆದಂಗೆ ಅನ್ನಿಸ್ತಿದ್ದು. ತಡೆ ಸ್ವಲ್ಪ ಬಿಸಿಲಿಗದ್ರು ಹೋಗಿ ನಿತ್ಗತ್ತಿ...
ReplyDeleteಚಳಿ ಹೆಚ್ಚಾಗಿ ಅಕ್ಷರದೋಶ ಏನಾದರೂ ಇದ್ದರೆ ನೀವೇ ಸರಿಮಾಡಿಕೊಳ್ಳಿ ಎ೦ದಿದ್ದೆನಲ್ಲವೇ. ”ಹೊಡ್ಚಲು”ಹೇಳುವಲ್ಲಿ ನನಗೆ ಸ್ವಲ್ಪ ಗೊ೦ದಲವಿದೆ. ಓ ಮನಸೆ.. ಮತ್ತು ಚಿತ್ರಾ ”ಹೊಡಸಲು” ಅ೦ತ ಬಳಸಿದ್ದಕ್ಕೆ ಅದೇ ಸರಿ ಅನ್ನಿಸುತ್ತಿದೆ. ಈಗೀಗ ಬಳಕೆ ತಪ್ಪಿಹೋಗಿದ್ದಕ್ಕೆ ಗೊ೦ದಲವಾಯ್ತು. ”ಹೊಡ್ಚಲು” ಕೂಡಾ ಸರಿ ಇರಬಹುದು. ಭಾಷೆ ಗ್ರಾಮ್ಯೀಕರಣ ಗೊ೦ಡಾಗ ಯಾವುದು ಸರಿ ಯಾವುದು ತಪ್ಪು ಅ೦ದಾಜೇ ಸಿಗದು ನೋಡೀ...
ReplyDeleteತೇಜಸ್ವಿನಿ,
ಆಶಾ,
ಜಗದೀಶ್,
ಚಿತ್ರಾ
ಬಾಲು ಸಾಯಿಮನೆ,
ವಿನಾಯಕ ಕೆ.ಎಸ್,
ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಆಭಾರಿ.
ಮತ್ತು
ಚೈತ್ರ..ವಿದ್ಯಾ,ನಿಮಗೆ ಚಿತ್ತಾರದರಮನೆಗೆ ಸ್ವಾಗತ.ಧನ್ಯವಾದಗಳು.
ಚಳಿಯನ್ನು ಓಡಿಸುವಂತಹ ಆಪ್ತ ಬರಹ, ಚೆನ್ನಾಗಿತ್ತು.
ReplyDeleteವಿಜಯಶ್ರೀ ಮೇಡಮ್,
ReplyDelete"ಸರ್ಕೊಳ್ರೋ" ಅಂತ ನಮ್ಮ ಬೀಟ್ ಹುಡುಗರ ಪಕ್ಕ ನಾನು ಮುಂಜಾನೆ ಐದು ಗಂಟೆಗೆ ಅವರು ಪೇಪರು ತರಗೆಲೆ ಇತ್ಯಾದಿಗಳಿಂದ ಹಾಕಿದ ಬೆಂಕಿಯಲ್ಲಿ ಕಾಯಿಸಿಕೊಳ್ಳುತ್ತಿದ್ದೇನೆ.
ಬೆಂಗಳೂರಿನಲ್ಲಿ ಒಂದೆರಡು ದಿನದಿಂದ ಚಳಿ ಹೆಚ್ಚಾಗಿರುವುದರಿಂದ ಮುಂಜಾನೆ ನಾಲ್ಕುವರೆಗೆ ಪೇಪರಿ ವಿತರಣೆಗೆ ಹೋಗುವಾಗ ನಡುಕ ಹುಟ್ಟಿಸುತ್ತದೆ. ನಮ್ಮ ಹುಡುಗರು ದಿನವೂ ಬೆಳಿಗ್ಗೆ ಬೆಂಕಿ ಹಾಕುತ್ತಾರೆ.
ಈ ಚಳಿಯಲ್ಲಿ ನಿಮ್ಮ ಲೇಖನವನ್ನು ಓದುವಾಗ ಅದೆಲ್ಲಾ ನೆನಪಾಯಿತು. ಚೆನ್ನಾಗಿದೆ ಲೇಖನ.
ವಿಜಯಾ...
ReplyDeleteಸಂಜೆಯ ಛಳಿಯಲ್ಲಿ.. ಬೆಚ್ಚಗೆ ಮೈ ಕಾಸುತ್ತ...
ಕೆಂಪಜ್ಜಿಯ ಕಥೆಗಳು ನೆನಪಾದವು..
ಮಧ್ಯದಲ್ಲಿ ಪಕ್ಕದ ಮನೆಯ..
ಮೀಸೆ ಮಂಜಣ್ಣನ ಹಾಸ್ಯ ಚಟಾಕಿಗಳು..
ಅಡಿಕೆ ಸುಲಿಯುವವರ ಹರಟೆಗಳು..
ವಾಹ್ !
ಬಹಳ ಚಂದದ ನೆನಪುಗಳು..
ನನ್ನ ಕೆಂಪಜ್ಜಿ ಹೇಳಿದ ಕಥೆ ನೆನಪಾಗುತ್ತಿದೆ..
ಒಮ್ಮೆ ಸಿರ್ಸಿಗೆ ಗಾಂಧಿ ತಾತ ಬಂದಿದ್ದನಂತೆ..
ಅವನ ಜೊತೆ ನೆಹರೂ ಕೂಡ ಬರುತ್ತಾನೆ ಅಂತ ಸುದ್ಧಿಯಾಗಿತ್ತು..
ಇರಿ ...
ನನ್ನ ಬ್ಲಾಗಿನಲ್ಲೇ ಬರೆಯುವೆ..
ಬಹಳ ಸುಂದರ ನೆನಪು ಮಾಡಿದ್ದಕ್ಕೆ ಧನ್ಯವಾದಗಳು..
ನಿಜವಾಗಿಯೂ ಊರಿಗೆ ಹೊಗಿ ಬ೦ದಷ್ಟೆ ಕುಶಿ ಆತು....
ReplyDeleteನಾನೆ೦ತೂ ಈ ಚಳಿಗಾಲವ ಸಿಕ್ಕಾಪಟ್ಟೆ ಮಿಸ್ ಮಾಡ್ಕ್ಯತ್ತಾ ಇದ್ದಿ....
ಅಡ್ಕೆ ಬೇಯಿಸ ಹ೦ಡೆಯಿ೦ದ ಬರ ಉಗಿ, ಬೆ೦ಕಿ, ತೋಟಗಾವಲು,ಆ ಹಶಿ ಅಡ್ಕೆ ಸಿಪ್ಪೆ ರಾಶಿ, ಅದ್ರ ಮೇಲೆ ಹಾರ ನೊರಜು,, ಅಬ್ಬಬ್ಬ ಹೇಳಲೆ ಹೋದ್ರೆ ಮುಗಿಯದೇ ಅಲ್ಲಾ ಅಲ್ದ??
ನೆನೆಪಿಸಿದ್ದಕ್ಕೆ ದನ್ಯವಾದಗಳು
ನಾನೀಗ ಸದ್ಯಕ್ಕೆ ಅಮೇರಿಕಾ ವಾಸಿ. ಇಲ್ಲಿನ ಕೊರೆಯುವ ಚಳಿಯಲ್ಲಿ ಪ್ರತಿಬಾರಿ ಅಡ್ಡಾಡುವಾಗಲೂ ಅಡಿಕೆ ಒಲೆಯ ಮುಂದೆ ಕುಳಿತು ಚಳಿ ಕಾಯಿಸಿದ್ದು ನೆನಪಾಗುತ್ತೆ.
ReplyDeleteನನ್ನ ರೂಂಮೇಟ್ ಗೆ ಆಗಾಗ ಅ ಸುಖದ ಬಗ್ಗೆ ಹೇಳ್ತಾನೇ ಇರ್ತೀನಿ. ಹಳೆಯದೆನ್ನೆಲ್ಲ ಮತ್ತೆ ನೆನಪು ಮಾಡಿದಿರಿ. feeling nostalgic now :(
baalyada nenapugala madhura lekhana. ellara baalyavannu kenaki nenapu marukalisuvante chitrisiddiraa...
ReplyDelete