Tuesday, November 2, 2010

ಹಬ್ಬದ ವಿಶೇಷ ...?

ಬಂದೇ ಬಿಟ್ಟಿತಲ್ಲ.. ದೀಪಗಳ ಹಬ್ಬ, ಒಡಲೊಳಗಿನ  ಅ೦ದಕಾರವನ್ನು  ಹೊಡೆದೋಡಿಸುವ ಬೆಳಕಿನ ಹಬ್ಬ , ಅರಿವಿನ ಹಬ್ಬ,   ಸೊಬಗಿನ ದೀಪಾವಳಿ ಹಬ್ಬ..!


ವಿಶೇಷ ಏನೆಂದರೆ ಎರಡಿವೆ. ಮೊದಲನೆಯದು ಹಬ್ಬವನ್ನು ಈ ಸಲ ಬೆಂಗಳೂರಲ್ಲೇ ಆಚರಿಸುತ್ತೇವೆ...!  ಅದು ವಿಶೇಷವಾ...? ಎಂದು ಹುಬ್ಬೇರಿಸಬೇಡಿ. ನಾನಾ ತರದ ಕಾರಣಗಳಿಂದ ಊರಿಗೆ ಹೋಗಲು ಆಗದೆ ಇದ್ದುದರಿಂದ  ನಾವು ಇಲ್ಲಿಯೇ  ''ಶೇಷ''.   ಹಬ್ಬವಾದ್ದರಿಂದ'' ವಿ '' ಹಚ್ಚಲಾಗಿದೆ.


ಊರಲ್ಲಿ ಹಬ್ಬದ ಹಿಂದಿನ ದಿನ ನಡೆಸುವ ತಯಾರಿಯನ್ನು ನಾನಿಲ್ಲೇ ನೆನೆಸಿಕೊಳ್ಳುತ್ತೇನೆ....!

ಭೂರೆ ಹಬ್ಬದ ಹಿಂದಿನ ದಿನ ಮನೆ ಮಾರನ್ನು, ತೊಳೆದು ಬೆಳಗಿ, ಬಾಗಿಲಿಗೆ, ಗೋಡೆಗೆ, ಸ್ನಾನದ ಹಂಡೆಗೆ ಎಲ್ಲಾಕಡೆ ಕೆಮ್ಮಣ್ಣು ಹಚ್ಚಿ, ಶೇಡಿ ಬರೆಯುವುದರಿ೦ದ ಹಿಡಿದು , ಊರಿಗೆ ನಾನೇನಾದರೂ ಹೋಗಿದ್ದಿದ್ದರೆ ಶೇಡೀ ಬರೆಯುವ ಕೆಲಸ ನನಗೇ ಕೊಟ್ಟು ಗೌರವಿಸುವುದರಿಂದ   ಹಿಡಿದು .... ಹಂಡೆಗೆ  ಊರೆಲ್ಲಾ ಸುತ್ತಿ ಹರ್ಕೊಂಡು ಬಂದ ಕೈಯಿಂಡ್ಲೆ ಕಾಯಿ ಬಳ್ಳಿಯನ್ನು ಸುತ್ತಿ, ಹೊಸ ನೀರು ತುಂಬಿ, ಆಮೇಲೆ ಭೂರೆ ದಿನ ಬೆಳಗಾಗಿ ಮುಂಜಾವಿನಲ್ಲೇ  ಆಯಿ ಭೂರೆ ನೀರು ತುಂಬಿ ಪೂಜೆ ಮಾಡುವಾಗ ' ಜಾಗಟೆ  ಬಡಿಲಕ್ಕು ಎದ್ಕಳ್ರೆ' ಎಂದು ಕರೆದು ಎಬ್ಬಿಸುವುದರಿಂದ ಹಿಡಿದು..  ಆಮೇಲೆ ತಲೆಗೆ ಎಣ್ಣೆ ಹಾಕಿ ಕೊಟ್ಟ ಕಾಯಿಸುಳಿ, ಸಕ್ರೆ ತಿಂದು ಸ್ನಾನ ಮಾಡಿ ಕಡುಬಿನ ಊಟ ಮಾಡಿದ್ರೆ ಭೂರೆ ಊಟ ಮುಗೀತು.ನನ್ನ ತವರು ಮನೆ ಒಂಟಿ ಮನೆ. ಉಳಿದ ಮನೆಗಳೆಲ್ಲಾ ದೂರ..   ಮತ್ತು ಸದಾಕಾಲ ನಾಯಿಕಾವಲು ಇರುವುದರಿಂದ ಭೂರೆಗಳುವಿಗೆ ಅವಕಾಶವಿಲ್ಲ...!  




ಮತ್ತು ಮರುದಿನ ಅಮಾವಾಸ್ಯೆಯ ದಿನ ಹಿತ್ತಲೆಲ್ಲಾ ಅಲೆದು  ಚಂಡುಹೂ ಕೊಯ್ದು  ಗೋವಿನ ಕೊರಳಿಗೆ ಒಪ್ಪುವಂತೆ ಅದರ ದಂಡೆಗಳನ್ನು ಮಾಡಿ  ಜೋಡಿಸಿಡುವದು ಮನಸ್ಸಿಗೊಪ್ಪುವ ಕೆಲಸ. ದೀಪಾವಳಿ ಹಬ್ಬದ ದಿನ ಮಾತ್ರಾ ತುಂಬಾ ಸಂಭ್ರಮದ ದಿನ.ಎಲ್ಲರೂ  ಬೆಳಗ್ಗೆ ಬೇಗೆದ್ದು,
ಸೂರ್ಯ ಹುಟ್ಟುಟ್ಟುತ್ತಲೇ ಗೋಪೂಜೆಯೂ ಮುಗಿಯ ಬೇಕೆನ್ನುವುದು ಅಪ್ಪಯ್ಯನ ಸಂಪ್ರದಾಯ. ಅದೇ ಚಂದ ಎನ್ನುವುದು ಅವನ ಧೋರಣೆ. 
ಮಕ್ಕಳು  ಮೊಮ್ಮಕ್ಕಳೆಲ್ಲಾ ಬೇಗೆದ್ದು  ಪೂಜೆಯ ನಂತರ ಹುಲ್ಲುದೇವರ [ಹುಲಿದೇವರ] ಬನಕ್ಕೆ ಹೋಗಿ  ಅಲ್ಲಿ ಹಣ್ಣು ಕಾಯಿ ಪೂಜೆ ಮಾಡಿ ಪಟಾಕಿ ಹೊಡೆದು ಮನೆಗೆ ಬಂದು  ತುಳಸಿ ಮುಂದೆ ಸುತ್ತ ಮುತ್ತಲಿನ ಭೂತ, ಚೌಡಿ ಗಳಿಗೆಲ್ಲಾ ಕಾಯಿ ಒಡೆದು ಅಪ್ಪಯ್ಯ ಅವರನ್ನೆಲ್ಲಾ ಸರಿ ಮಾಡಿಟ್ಟುಕೊಳ್ಳುವುದನ್ನೂ ನೆನೆಸಿಕೊಳ್ಳುವುದಕ್ಕೆ ಹಿತ. 

ಆಮೇಲೆ ಬೆಳಗಿನ ತಿಂಡಿ ಸವತೆ ಕಾಯಿ ತೆಳ್ಳವು ತಿನ್ನದೂ ಅಂದ್ರೆ  ಅದರ ಸುಖ  ತಿಂದೇ ತಿಳಿಯಬೇಕು..!  ಆಮೇಲೆಲ್ಲಾ ಹೋಳಿಗೆ ಮಾಡುವುದೂ,  ಸೊಂಪಾಗಿ ಹಬ್ಬದೂಟ ಉಂಡು ಒಂದು ನ್ಯಾಪ್ ತೆಗೆಯುವುದು.  ಸಾಯಂಕಾಲ   ಎಲ್ಲ ಕಡೆ ಕೈಹಿಂಡ್ಲೆ ಕಾಯಿ ಅರ್ಧ ಮಾಡಿ ಅದಕ್ಕೆ ಸೂಡಿ ಸಿಕ್ಕಿಸಿ ದೀಪ ಹಚ್ಚಿಟ್ಟು ಹಬ್ಬ ಕಳಿಸುವುದೊಂದು  ಆಯಿಯ ಕೆಲಸ. ಮೊಮ್ಮೊಕ್ಕಳದು  ಜನ್ಗಟೆ  ಹೊಡೆದು ಸಾಂಪ್ರದಾಯಿಕ ಸ್ಲೋಗನ್ನುಗಳಾದ 'ದಿಪ್ ದಿಪ್ ದೀವಾಳ್ಗ್ಯೋ ಹಬ್ಬಕ್ಕೊಂದ್ ಹೋಳಿಗ್ಯೋ.. ಜೊತೆಗೆ ತುಂಟು ಮಕ್ಕಳ ಬಾಯಲ್ಲಿ ಹಬ್ಬಕ್ಕೊಂದ್ ಹರ್ಕ್ ಹೋಳಿಗ್ಯೋ.. ಎನ್ನುತ್ತಾ ಹಬ್ಬ ಕಳಿಸುವುದು ವಾಡಿಕೆ.ಇಲ್ಲಿಗೆ  ಹಬ್ಬ ನಮ್ಮ ಕಡೆಯಿಂದ ಮುಗಿದಂತೆ.
ಮಧ್ಯ ರಾತ್ರೆ ಯಲ್ಲಿ  ಬರುವ ಹಬ್ಬ ಹಾಡುವುವರನ್ನು ಸುಧಾರಿಸುವುದು ಅತ್ತಿಗೆಯಂದಿರ ಕೆಲಸ..ಮಲಗಿದಲ್ಲಿಯೇ, ಅಥವಾ ಅಲ್ಲೇ ಕುಳಿತೋ ಬಾಗಿಲ ಮರೆಯಲ್ಲಿ ನಿಂತೋ  ತೂಕಡಿಸುತ್ತಾ ಹಬ್ಬ ಹಾಡುವವರ ಹಾಡುಗಳನ್ನು ಕೇಳುವುದು  ನಮ್ಮ ಕೆಲಸ..!




ಈ ಸಲ ಹೀಗೆ ಹಬ್ಬವನ್ನು ನೆನೆಸುವುದೇ ವಿಶೇಷ. ಎದುರಿಗೆ ಇರುವುದರಲ್ಲಿರದ ಸುಖ ಕಲ್ಪನೆಯಲ್ಲಿದೆ ಅಲ್ಲವೇ..?   ಸಂಭ್ರಮದ  ದೀಪಾವಳಿ ಕೆಟ್ಟದ್ದನ್ನು ನಾಶ ಮಾಡಲು ಜ್ಞಾನದ ದಾರಿ  ದೀಪ ಹಚ್ಚಲು ಪ್ರತಿ ವರ್ಷ ಬರುತ್ತಲೇ   ಇರುತ್ತದೆ.. ಅರಿವಿನ ನಡುಗೆ ಮಾತ್ರ ನಮ್ಮದಾಗಬೇಕಷ್ಟೇ.


ಇನ್ನೊಂದು..ಈ ವಿಶೇಷದಲ್ಲಿ ಮತ್ತೊಂದು ವಿಶೇಷ.

ದೀಪಾವಳೀ ಹಬ್ಬದ ಸಂಜೆ ಎಲ್ಲರೂ ದೀಪ ಹಚ್ಚಿಟ್ಟು ಕೈ ಮುಗಿದು  ಕೈ ವರೆಸಿಕೊಂಡರೆ ತಲವಾಟದ ರಾಘಣ್ಣ ಮಾತ್ರ ಬೇರೆ ಐಡಿಯಾ ಮಾಡಿದ್ದಾರೆ.  ರಾಘಣ್ಣ ಅಂದರೆ ಶ್ರೀಶ೦  ಬ್ಲಾಗಿನ ರಾಘವೇಂದ್ರ ಶರ್ಮ...!  

ಇವರದ್ದು ಹೊಸ ನಮೂನೆಯ ದೀಪ...!   ತಮ್ಮ ಜೀವನಾನುಭವ, ಜೇನು ಕೃಷಿ , ಅಡಿಕೆ ಕೃಷಿ ಇವುಗಳ ಸಾರವನ್ನೆಲ್ಲಾ ತೆಗೆದು   ಕಥೆ ಕಟ್ಟಿ, ಅದನ್ನೆಲ್ಲ ಸಂಗ್ರಹಿಸಿ ''ಕಟ್ಟು ಕಥೆಯ ಕಟ್ಟು''  ಮಾಡಿ ಅದನ್ನು ಪ್ರಕಟಿಸುತ್ತಿದ್ದಾರೆ ಪುಸ್ತಕವಾಗಿ. ದೀಪಾವಳಿ ಸಂಜೆಯನ್ನು ಹೀಗೆ ಅರ್ಥಪೂರ್ಣವಾಗಿಸುತ್ತಿದ್ದಾರೆ. ಇವರ ಜೇನು ಕೃಷಿಯ  ಸಿಹಿಯನ್ನು ಮೆಲ್ಲುತ್ತಾ ನಮಗೆ  ಜ್ಞಾನ ಕೃಷಿ   ಮಾಡಲೊಂದು ಅವಕಾಶ..!ಎಲ್ಲ ಕಡೆ ಸೋಸಿ ತಂದ ಜೇನು ಹನಿಗಳನ್ನು  ಪುಸ್ತಕ  ಪಾತ್ರೆಯಲ್ಲಿ  ಇಟ್ಟು ಕೊಡುತ್ತಿದ್ದಾರೆ ಸವಿಯಿರೆಂದು.   ಆಗಾಗ ಕೈ ಚೀಲದಿಂದ ತೆಗೆದು ಸವಿಯಬಹುದು. ತುಪ್ಪ ಸಕ್ರೆ ಪಾಕದಲ್ಲಿ ನೆನೆಸಿದ   ಹೋಳಿಗೆಯ ಸವಿದಂತೆ. ಗುಡ್ ಐಡಿಯಾ ...!


ಈ ಎರಡೂ ಸಂಬ್ರಮಕ್ಕೂ ನನ್ನದು ಗೈರು ಹಾಜರಿ  ಅನ್ನುವುದೇ ಶೇಷ. ರಾಘಣ್ಣನ ಕಾರ್ಯಕ್ರಮಕ್ಕೆ ನನ್ನ ಶುಭ ಹಾರೈಕೆಗಳನ್ನು ಇಲ್ಲಿಂದಲೇ ರವಾನಿಸುತ್ತಿದ್ದೇನೆ. ಹಾಗಾಗಿ ನೀವು ಹೋದವರು ಅಲ್ಲಿ ಏನೇನೆಲ್ಲ ನಡೆಯಿತು ?ಕಾರ್ಯಕ್ರಮ ಹೇಗಾಯ್ತು ? ಅನ್ನುವುದನ್ನು ನನಗೂ ಹೇಳುತ್ತೀರಲ್ಲವೇ..? 


ನಿಮಗೆಲ್ಲಾ ದೀಪಾವಳಿಯ ಶುಭ ಹಾರೈಕೆಗಳು.










19 comments:

  1. ದೀಪಾವಳಿ ಹಬ್ಬದ ಮೇಲುಕುಹಳು ತುಂಬಾನೆ ಚೆನ್ನಾಗಿ ಮೂಡೀ ಬಂದಿವೆ ... ಈ ಸಲದ ಹಬ್ಬ ಚೆನ್ನಾಗಾಗಲೇಂದು ಹಾರೈಸುತ್ತೆನೆ ..

    ದೀಪಾವಳಿಯ ಶುಭಾಷಯಗಳು ..

    ReplyDelete
  2. ನಿಮಗೆಲ್ಲರಿಗೂ ದೀಪಾವಳಿಯ ಶುಭಾಶಯಗಳು..

    ಊರಿನ ಹಬ್ಬ ನೆನಸಿಕೊಳ್ಳುತ್ತಾ..ನನ್ನ ದೀಪಾವಳಿ ಹಬ್ಬನೂ ಇಲ್ಲೇ..ಆಯಿ ಹೇಳ್ಕೊಟ್ಟಿದ್ದಷ್ಟು ಪದ್ದತಿ ಮಾಡಿ ಅದನ್ನೆಲ್ಲಾ ಮಕ್ಕಳಿಗೆ ಹೇಳುತ್ತಾ..ಹೋಳಿಗೆ ಮಾಡಿ ತಿನ್ನೋದು.. :)

    ReplyDelete
  3. ವಿಜಯಶ್ರೀ,

    ಈ ಸಲ ಮೊದಲ ಸಲ ನಮ್ಮ ದೀಪಾವಳಿಯೂ ಬೆಂಗಳೂರಿನಲ್ಲೇ ಆಗುತ್ತದೆ :) ಯಾವುದು ಶೇಷವಾಗುತ್ತದೆ, ಯಾವುದು ವಿಶೇಷವಾಗುತ್ತದೆ ಎನ್ನುವುದನ್ನು ಹಬ್ಬ ಕಳೆದ ಮೇಲೇ ಹೇಳುತ್ತೇನೆ :)

    ಶರ್ಮರ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಮಾತ್ರ ನನಗೂ ಶೇಷವಾಗುವುದರ ಬಗ್ಗೆ ತುಸು ಬೇಸರವಿದೆ. ಸಮಾರಂಭ ಚೆನ್ನಾಗಿ ಆಗಲೆಂದು ನಾನೂ ಇಲ್ಲಿಂದಲೇ ಹಾರೈಸುವೆ.

    ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

    ReplyDelete
  4. ದೀಪಾವಳಿಯ ಶುಭಾಶಯಗಳು..

    ReplyDelete
  5. ಕೊಟ್ಟಿಗೆಯಲ್ಲಿ ಇರುವ ದನದ ತಲೆ ಎಣಿಸಿ ಅಷ್ಟು ತೆಂಗಿನಕಾಯಿ ಹುಲಿಯಪ್ಪನಿಗೆ ನೈವೇದ್ಯ ಮಾಡುವುದು ನಮ್ಮ ಪಧ್ಧತಿ.
    ನರಕ ಚತುರ್ದಶಿ ಚೆನ್ನಾಗಿ ಕವರ್ ಆತು. ಅಮಾವಾಸ್ಯೆ ದಿನ ಲಕ್ಷ್ಮಿ ಪೂಜೆ..ಅಂಗಡಿ ಗೆ ಹೋಗಿ .ಮಂಡಕ್ಕಿ ಖಾರ ತಿನ್ನುದು..
    ಹಬ್ಬದ ಪಾಡ್ಯದ ದಿನ ಕುಲದೇವರನ್ನು ಕಾಣುವುದು. ಹೊಸ ಮಕ್ಕಳು ಹೆತ್ತವರಿಗೆ ಮತ್ತು ಹೊಸ ಜೋಡಿಗೆ ಅದು ಖಡ್ಡಾಯ.
    ಬಿದಿಗೆಯ ದಿನ ಕೋಟೆ ಹಬ್ಬ. ಊರಿನ ಪೈಲ್ವಾನರೆಲ್ಲ ತಾಖತ್ ಪ್ರದರ್ಶಿಸುವ ಪ್ರೋಗ್ರಾಮು. ಹುಡುಗರು ಬೇರೆ ಬೇರೆ ಆಟ ಆಡಿ ಮಜಾ ಮಾಡಿ ಕೊನೆಗೆ ತೆಂಗಿನಕಾಯಿ ಚೂರಿನ ಪ್ರಸಾದ ತಿಂದು
    ಕತ್ತಲಾದ ಮೇಲೆ ಮನೆಗೆ ವಾಪಸ್.
    ಅಂತು ಕಂಪ್ಯೂಟರ್ನಲ್ಲೇ ತ್ರಿಶಂಕು ದೀಪಾವಳಿ...
    ಪಟಾಕಿ ಸುಡೂದು... ಹೊಸ ಬಟ್ಟೆ ಹಾಕುದು... ಸಿಹಿ ತಿಂಡಿ ತಿನ್ನುದು ಬೆಂಗಳೂರಲ್ಲಿ

    ReplyDelete
  6. ದೀಪಾವಳಿಗೆ ಶುಭ ಹಾರೈಕೆಗಳು.

    ReplyDelete
  7. ವಿಜಯಶ್ರೀ ಅವರೆ ದೀಪಾವಳಿಹಬ್ಬದ ಶುಭಾಶಯಗಳು. ನಿಮ್ಮ ಕಡೆ ಆಚರಿಸುತ್ತಿದ್ದ ದೀಪಾವಳಿ ಅದರ ನೆನಪು ಹಂಚಿಕೊಂಡಿದ್ದಕ್ಕೆ ಧನ್ಯೋಸ್ಮಿ

    ReplyDelete
  8. ದೀಪಾವಳಿ ಹಬ್ಬದ ಶುಭಾಶಯಗಳು ವಿಜಯಶ್ರೀ ಅವರೆ. "ಅ೦ಧಕಾರವನ್ನು ಓಡಿಸುವ ಅರಿವಿನ ಹಬ್ಬ". ವಿಶ್ಲೇಷಣೆ ಇಷ್ಟ ಆಯ್ತು.

    ವ೦ದನೆಗಳು
    ಅನ೦ತ್

    ReplyDelete
  9. ದೀವಳಿಗೆ ಹಬ್ಬದ ಶುಭಾಶಯಗಳು.ಬೆಳಕಿನ ಹಬ್ಬದ ಆಚರಣೆ ಬಗ್ಗೆ ಒಂದು ನೋಟ ಚೆನ್ನಾಗಿದೆ.

    ReplyDelete
  10. ನಂಗ್ಳದ್ದೂ ಹಬ್ಬ ಇಲ್ಲೇಯ ಈ ಸಲ... ನಮ್ಮನಿಗೆ ಬನ್ನಿ ಎಲ್ಲ ಸೇರಿ ಹಬ್ಬ ಮಾಡನ :) ಅಜ್ಜನ ಮನೇಲಿ ಭೂರ್ಗಳ ಹಾಯಕ್ಕೆ ಹೋಗಿದ್ದು, ಕಾವಲು ಕಾದಿದ್ದು ಎಲ್ಲ ನೆನಪಾತು ನಿನ್ನ ಬರಹ ಓದಿ :)

    ReplyDelete
  11. ಮೇಡಮ್,
    ನಿಮ್ಮೂರಿನ ದೀಪಾವಳಿಯ ನೆನಪುಗಳು ನಾವು ಜೊತೆಯಲ್ಲಿದ್ದೇ ಅನುಭವಿಸುವಂತೆ ಭಾಸವಾಗುತ್ತದೆ..ರಾಘವೇಂದ್ರ ಶರ್ಮರವರೆ ಕಟ್ಟು ಕತೆಗಳ ಕಟ್ಟು ಪುಸ್ತಕಕ್ಕೆ ನನ್ನ ಕಡೆಯಿಂದಲೂ ಶುಭಹಾರೈಕೆಗಳು.

    ReplyDelete
  12. ನಿಮಗೂ ಹಬ್ಬದ ಶುಭ ಹಾರೈಕೆಗಳು ...ನಿಮ್ಮ ಹಬ್ಬದ ಆಚರಣೆ ನಮ್ಮ ಆಚರಣೆಗಿಂತ ವಿಬಿನ್ನ ತುಂಬಾ ಇಷ್ಟವಾಯಿತು.ನಮ್ಮಲಿ ಹಬ್ಬದ ಮುಂಜಾವು ಹೊಲಗಳಲ್ಲಿ ಸಿಗುವ ಹೂವು,ಧಾನ್ಯದ ತೆನೆಗಳು ತಂದು ಬಾಗಿಲ ಬಳಿ ಇಟ್ಟು ಪೂಜೆ ಸಲ್ಲಿಸುವುದು ವಿಶೇಷ .ನಂತರ ರಾತ್ರಿ ದೆವೆರಮ್ಮ ದೇವಿಗೆ ದೀಪ ಬೆಳಗಿ ಸಿಹಿ ತಿನ್ನುವುದು ವಾಡಿಕೆ.....ಚನ್ನಾಗಿದೆ ಬರಹ

    ReplyDelete
  13. ವಿಜಯಶ್ರೀ,
    ನಿಮ್ಮ ‘ವಿಶೇಷ’ ದೀಪಾವಳಿ ಹಬ್ಬಕ್ಕೆ ನನ್ನ ವಿಶೇಷ ಶುಭಾಶಯಗಳು!

    ReplyDelete
  14. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

    ReplyDelete
  15. ದೀಪಾವಳಿಯ ಹಾರ್ದಿಕ ಶುಭಾಶಯಗಳು

    ReplyDelete
  16. ವಿಜಯಶ್ರೀ ನಿಮ್ಮೆಲ್ಲರಿಗೆ ಹಾರ್ದಿಕ ಶುಭಕಾಮನೆಗಳು...ದೀಪಾವಳಿ ಸಕಲವನ್ನೂ ಮತ್ತೂ ಪ್ರಖರಗೊಳಿಸಿ ಹೊಸ ಬೆಳಕನ್ನು ನಿಮ್ಮಲ್ಲಿಗೆ ತರಲಿ ಎಂದು ಹಾರೈಸುತ್ತೇನೆ.

    ReplyDelete
  17. ಪ್ರತಿಕ್ರಿಯಿಸಿ ಹಾರೈಸಿದ ಎಲ್ಲರಿಗೂ ಧನ್ಯವಾದಗಳು.

    ReplyDelete
  18. ಹನಿಹನಿಸೇರಿ ಹಳ್ಳವಾಗುವುದಂತೆ
    ತೆನೆತೆನೆಸೇರಿ ಬಳ್ಳವಾಗುವುದಂತೆ
    ಅಂತೆ
    ಚುಕ್ಕಿ ಚುಕ್ಕಿ ಸೇರಿ ಚಿತ್ತಾರವಾಗಿದೆಯಂತೆ ನಿಮ್ಮ ಬ್ಲಾಗಿನಲ್ಲಿ
    ನಿಮ್ಮ ಬ್ಲಾಗಿಗೆ ಮೊದಲ ವರ್ಷದ ಶುಭಾಷಯಗಳು
    ದೀಪಾವಳಿ ಶುಭಾಶಯಗಳು

    ReplyDelete
  19. ತುಂಬಾ ಚೆನ್ನಾಗಿ ಹಬ್ಬದ ಆಚರಣೆಯನ್ನ ಮೆಲುಕಾಡಿಸಿದ್ದಿರಾ...
    ನಮ್ಮ ಬಾಲ್ಯ ನೆನಪಾಯಿತು. ಅದು ಈಗ ಇಲ್ಲ. ಎಲ್ಲಾ ಸಪ್ಪೆ! ಸಿಹಿತಿಂದು ಟಿವಿ ಮುಂದೆ ಕೂಡುವದು ಅಷ್ಟೆ.
    ದೀಪಾವಳಿ ಶುಭಾಶಯಗಳು.
    ರಾಘಣ್ಣನ ಪುಸ್ತಕಕ್ಕೆ ಜೈ ಹೋ!

    ReplyDelete