Saturday, April 24, 2010

ನಾಗೇಶ ಹಂದಿ ಹಿಡಿದದ್ದು

ನಮ್ಮ ಊರಿನಿಂದ ಸ್ವಲ್ಪ ದೂರದಲ್ಲಿ ನಮ್ಮದೊಂದಷ್ಟು ಜಮೀನಿದೆ. ಹೊಸದಾಗಿ ತೋಟ ಹಾಕಿಸಿದ್ದು. ದೂರದ್ದಾದ್ದರಿಂದ ನೋಡಿಕೊಳ್ಳಲು ಒಂದು 'ಜನ' ಬಿಟ್ಟಿದ್ದೇವೆ.'ಜನ 'ಅಂದರೆ ನಾಗೇಶ ಮತ್ತು ಅವನ ಫ್ಯಾಮಿಲಿ....!ಅವನದ್ದೂ ಅರ್ಧ ಎಕರೆ ತೋಟ ಪಕ್ಕದಲ್ಲಿಯೇ ಇದೆ. ಒಳ್ಳೆಯವನು . ನಮ್ಮ ತೋಟದ ಎಲ್ಲಾ ಜವಾಬ್ಧಾರಿ ಅವನದೇ...ಅಂದರೆ ಯಾವ ಕೆಲಸ ಮಾಡುವುದಾದರೂ ಅವನೇ ಗುತ್ತಿಗೆ ಹಿಡಿಯುತ್ತಾನೆ. ಆಳು ಜನರ ವ್ಯವಸ್ತೆ, ಹಣಕಾಸಿನ ಮಾತುಕತೆ ಎಲ್ಲಾ ಅವನದೇ ಜವಾಬ್ಧಾರಿ.. ತೋಟಕ್ಕೆ ಬಂದ ದನ ಹೊಡೆದು ಓಡಿಸುವುದರಿಂದ ಹಿಡಿದು.

ತನ್ನದೇ ತೋಟ ಎಂಬಷ್ಟು ಶ್ರದ್ಧೆಯಿಂದ ಕೆಲಸ ಮಾಡುತ್ತಾನೆ ಪಾಪ.... ಹಾಗಾಗಿ ತೋಟದ ಸೂಪರ್ ವೈಸರ್ ಎಂತಲೂ ಹೇಳಬಹುದು... ಅಲ್ಲದೆ ನಾವಿಲ್ಲದಿದ್ದಾಗ ತೋಟದ ಯಜಮಾನ ಅವನೇ....!! ನನ್ನವರು ಅವನನ್ನು ಮ್ಯಾನೇಜರ್, ಕೆಲವೊಮ್ಮೆಸಿ.ಇ.ಓ.ಎಂತೆಲ್ಲಾ ಕರೆಯುವುದೂ ಉಂಟು.....!!!!!

ಪಾಪದವ ಮತ್ತು ಒಂತರಾ ಹುಂಬ ..

ಅವನದ್ದೊಂದು ಎಂ 80 ಇತ್ತು. ಅದನ್ನು ಹತ್ತಿ ಹೊರಟನೆಂದರೆ ಮನೆ ಸೇರುತ್ತಾನಾ ಎಂದು ಸಂಶಯ ಪಡಬೇಕಾದ್ದು ನೋಡುವವರ ಧರ್ಮ.

ಒಂದಿನಾ ನಮ್ಮ ಬಾವನವರನ್ನು' ಇಲ್ಲಪ್ಪಾ ನಿನ್ನ ಗಾಡಿಯಲ್ಲಿ ಹತ್ತಲು ಭಯ' ಎಂದರೂ ಕೇಳದೆ ಒತ್ತಾಯ ಮಾಡಿ ಜೊತೆಗೆ ಇನ್ನೊಬ್ಬರನ್ನೂ ಕೂರಿಸಿ ಕೊಂಡು ತ್ರಿಬ್ಬಲ್ ರೈಡ್ ಮಾಡಿದ ಹೊಡೆತಕ್ಕೆ ಸ್ವಲ್ಪ ದೂರ ಹೋಗುವಷ್ಟರಲ್ಲಿಯೇ ಅದು ವಿಮಾನದಂತೆ ಟೇಕಾಫ್ ಆಗಿ ಹಿಂದಿದ್ದ ಇಬ್ಬರೂ ನೆಲಕ್ಕೆ ಕಾಲು ಕೊಟ್ಟು ಹೇಗೋ ಬಚಾವಾದ ಕಥೆ ನೆನಪಿಡುವನ್ತದ್ದು.


ಹೋದಲ್ಲೆಲ್ಲಾ ಒಂದಲ್ಲ ಒಂದು ಆಕ್ಸಿಡೆಂಟ್ ಮಾಡಿಕೊಳ್ಳದಿದ್ದರೆ ಅವನ ಗಾಡಿಗೆ ಮರ್ಯಾದೆಯೇ ಇಲ್ಲ. ಒಮ್ಮೆ ನಿಂತ ಲಾರಿಗೆ ಹೋಗಿ ಗುದ್ದಿ ಕುದುರೆಯಂತೆ ಹಾರಿ ಬಿದ್ದಿದ್ದ .
ಇನ್ನೊಮ್ಮೆ ಅಡ್ಡರಸ್ತೆಯಿಂದ ಹಾರನ್ ಕೂಡಾ ಮಾಡದೆ, ಎಡ ಬಲ ನೋಡದೆ ಸೀದಾ ಮೇನ್ ರೋಡಿಗೆ ನುಗ್ಗಿ ಎದುರಿಗೆ ಬರುತ್ತಿದ್ದ ರಿಕ್ಷಾಕ್ಕೆ ಗುದ್ದಿದ್ದ.. ಹೆಚ್ಚಿಗೆ ವೇಗ ಇರಲಿಲ್ಲವಾದ್ದರಿಂದ ಕೈಕಾಲು ಮುರಿತದಿಂದ ಬಚಾವಾದರೂ ಎಲ್ಲರೂ ಸೇರಿ ಗುದ್ದಿದ್ದರ ಪರಿಣಾಮವಾಗಿ ಮೈ ಕೈ ಊದಿ ಎರಡು ದಿನ ಆಸ್ಪತ್ರೆಯಲ್ಲಿ ರೆಷ್ಟು ತಗೊಂಡು ಬಂದಿದ್ದು ನಿಜ. ಊರಿಗೆ ಬಂದು'' ಎಂತಾಆಯಿಲ್ಲೇ...''ಎನ್ನುತ್ತಾ ಮತ್ತೆ ರೆಡಿಯಾದದ್ದೂ ಸುಳ್ಳಲ್ಲ..

ಒಮ್ಮೆ ತೋಟದಲ್ಲಿ ಮೀಟು ಕಡಿಯುವಾಗ ಬದಿಯಲ್ಲೇ ಹರಿದು ಹೋಗುತ್ತಿದ್ದ ನಾಗರ ಹಾವೊಂದನ್ನು ಗುದ್ದಲಿಯಿಂದ ನೋಡದೆ ಕಡಿದು ಬಿಟ್ಟಿದ್ದ.ಅದು ತಲೆ ಬಾಲ ಬೇರೆಯಾಗಿ, ತಲೆಯ ಭಾಗ ಜೀವ ಸಂಕಟದಿಂದ ಒಂದು ಏಡಿ ಕುಣಿಯನ್ನು ಹೊಕ್ಕು ಬಿಟ್ಟಿತ್ತು.ಉಳಿದ ಉದ್ದದ ಬಾಲದ ಭಾಗ ತೋಟದ ಬಣ್ಣದ ಮೇಲೆ ಬಿದ್ದಿತ್ತು.
ಎಲ್ಲಾ ಅಕ್ಕಪಕ್ಕದವರು ....'' ಹಾವಿನ ದ್ವೇಷ ಹನ್ನೆರಡು ವರುಷ ... ಮನೆ ಮಾಡಲ್ಲೆಲ್ಲಾ ಸರ್ಪಿನ ಹಾವೇ ಕಾಣಸಿ ಕೊಳ್ಳತ್...ಎಂತಾಅಂದ್ರೂ ತಪ್ಪಾಗಿ ಹೋಯಿತೇ... ಮಕ್ಳು ಮರಿ ಇರುವವ ನೀನ'' ಅಂದರು. ಇವನ ಹೆಂಡತಿ ಶಾರದೆಯಂತೂ ಹಾವು ನಾಗೇಶನಿಗೆ ಕಡಿದಿದೆಯೇನೋ ಎಂಬಂತೆ ಮೂರ್ಚೆ ಹೋಗಿದ್ದೂ ಆಯ್ತು.

ಆಮೇಲೆ ಇವನಿಗೆ ಹೆದರಿಕೆಯಾಗಿ ಸರ್ಪಸಂಸ್ಕಾರ ಮಾಡಿಸಲು ಪಕ್ಕದ ಹಳ್ಳಿಯ ಜೋಯಿಸರ ಹತ್ತಿರ ಹೋದ. ಜೋಯಿಸರು '
'ಬರೀಬಾಲ ಮಾತ್ರದಿಂದ ಸರ್ಪ ಸಂಸ್ಕಾರ ಮಾಡಲು ಸಾಧ್ಯವಿಲ್ಲ ... ತಲೆ ಭಾಗ ಜೀವ ಇದ್ದರೆ ಮತ್ತೆ ಪಾಪ ಹೆಚ್ಚು ಸುತ್ತಿ ಕೊಳ್ಳುತ್ತೆ... ತಲೆಹುಡುಕಿ ಸಂಸ್ಕಾರ ಮಾಡು ...'' ಎಂದರು


ಹಾವಿನ ಸ್ಪೆಷಲಿಸ್ಟ್ ರ ಹತ್ತಿರ ಬಾಲ ತುಂಡಾದ ಹಾವು ಬದುಕಿರುತ್ತದೋ ಇಲ್ಲವೋ ಪ್ರಶ್ನಿಸಿ ಬದುಕಿರಲು ಸಾಧ್ಯವೇ ಇಲ್ಲ ಎಂಬ ಸಮಾಧಾನದೊಂದಿಗೆ ಧೈರ್ಯವಾಗಿ ಇಂವ ಬಂದು ಏಡಿ ಕುಣಿಯನ್ನು ಸುಮಾರು ಆರೇಳು ಅಡಿಗಳಾಗುವಷ್ಟು ಅಗೆದ. ಕಡೆಗೆ ಸತ್ತ ಹಾವಿನ ತಲೆ ಸಿಕ್ಕಿತು. ಎರಡನ್ನೂ ಸೇರಿಸಿ ಸುಬ್ರಹ್ಮಣ್ಯಕ್ಕೆ ತಪ್ಪುಗಾಣಿಕೆಯಿತ್ತು... ಅದಕ್ಕೆ ಒಂದು ಸಂಸ್ಕಾರ ಅಂತ ಮಾಡಿಯಾಯಿತು...

ಹೀಗೆ ಇವನು ಮಾಡಿಕೊಳ್ಳುವ ಭಾನಗಡೆ ಒಂದೆರಡಲ್ಲ.

ಒಮ್ಮೆ ಇವನ ನಾಲ್ಕಾರು ಸ್ನೇಹಿತರೊಂದಿಗೆ ಹಂದಿ ಬೇಟೆಗೆ ಅಂತ ಊರ ಹಿಂದಿನ ಕಾಡಿಗೆ ಹೋದ. ಹೊಟ್ಟೆಗೆ ಸ್ವಲ್ಪ ಔಷಧಿ ಬೇರೆ ..... ಶಕ್ತಿ ...ಧೈರ್ಯಕ್ಕೆ... ಇರಲಿ ಅಂತ ...
ಎಲ್ಲರೂ ಯಥಾನ್ಶಕ್ತಿ ಕುಡಿದಿದ್ದರು...ಹಂದಿಯೊಂದನ್ನು ಬಿಟ್ಟು..

ಅಲ್ಲಿ ಕೋವಿ ಇದ್ದದ್ದು ಇವನ ಸ್ನೇಹಿತ ಗಿಡ್ಡ ನಾಯಕನಹತ್ತಿರ .. ಅವನಿಗೆ ಮೂವತೈದಕ್ಕೆ ಚಾಳೀಸು ಬಂದಿತ್ತು....!!!!ಹಗಲೇ ಸುಮಾರಾಗಿ ಕಣ್ಣು ಕಾಣಿಸುವವ ರಾತ್ರಿ ಹೇಗಿರಬೇಡ....? ಹಂದಿ ಹೊಡೆಯುವವ ಅವನೇ....
ಕೋವಿ ಅವನದಾದ್ದರಿಂದ ಗುರಿ ಇಡುವ ನೈತಿಕ ಹಕ್ಕು ಅವನದೇ ಅಲ್ಲವೇ...?

ಎಲ್ಲರೂ ಪ್ಲಾನ್ ಮಾಡಿ ಕೊಂಡರು..ಬೆಟ್ಟದಲ್ಲಿ ಮರಗಿಡಗಳ ನಡುವಿನಲ್ಲಿ ಒಂದು ಜಾಗವನ್ನು ಆಯ್ದು ಕೊಂಡು, ಅಲ್ಲಿ ಗಿಡ್ದನಾಯಕ ಕೋವಿ ಮತ್ತು ಗುರಿಯೊಂದಿಗೆ ಸಜ್ಜಾಗಿರಬೇಕು... ಮತ್ತು ನಾಲ್ಕು ಜನ ಹಂದಿಯನ್ನು ಆ ಸ್ಪಾಟಿಗೆ ಓಡಿಸಿಕೊಂಡು ಬರಬೇಕು.. ಅಲ್ಲದೆ ಗುಂಡು ತಗುಲಿದ ಹಂದಿಯನ್ನು ತಪ್ಪಿಸಿಕೊಂಡು ಹೋಗದಂತೆ ಹಿಡಿದು ಅದುಮಲು ನಾಗೇಶ....!!
ಪ್ರಾಜೆಕ್ಟ್ ರೆಡಿಯಾಯಿತು.


ಆ ಕಡೆಯಿಂದ ಸ್ಪಾಟಿಗೆ ಹಂದಿಯನ್ನು ಬೆದರಿಸಿಕೊಂಡು, ಓಡಿಸಿಕೊಂಡು ಬಂದರು.
ಗಿಡ್ಡನಾಯಕ ರೆಡಿಯಾಗಿದ್ದ... ಹೊಟ್ಟೆಯಲ್ಲಿ ಹಾಕಿಕೊಂಡ ಥರ್ಟಿ, ಸಿಕ್ಸ್ಟಿ +,+,+,+ ಕೂಡಾ ಕೆಲಸ ಮಾಡಲಾರಮ್ಬಿಸಿತ್ತು .
ನಾಗೇಶನಿಗೆ ಉತ್ಸಾಹ ಹೆಚ್ಚಾಗಿ ಕಬ್ಬಡ್ಡಿ ಆಡುವವರಂತೆ ಅತ್ತ ಇತ್ತ ಹಾರುತ್ತಿದ್ದ... ಯಾವುದೇ ಕಾರಣಕ್ಕೂ ಹಂದಿ ತಪ್ಪಿಸಿಕೊಂಡು ಹೋಗಬಾರದು ಮತ್ತು ಗುಂಡು ತಾಗಿದ ನಂತರ ಹಂದಿ ಹಾರಿ ಬೀಳುವುದು ತನ್ನ ಕೈಗೆ .......ಕ್ರಿಕೆಟ್ ಬಾಲ್ ಹಿಡಿದ ಹಾಗೇ ಹಿಡಿಯುವುದು ..... ಅನ್ನುವ ಲಾಜಿಕ್ಕು...!!

ಹಂದಿ ಓಡುತ್ತಾ ಬಂತು... ಬಂತು... ಬಂತು... ಬಂದೆ ಬಿಟ್ಟಿತು...........!!!!
ಡಂ.... ಡಾಮ್... ಡಮಾರ್ ...
ಗಿಡ್ದನಾಯಕನ ಕೋವಿಯಿಂದ ಗುಂಡು ಪಾಸಾಯ್ತು..
ಗುಂಡು ಪಾಸಾಗಿದ್ದಿದ್ದು ನಿಜ..
ಹಂದಿಯೂ ಬದಿಗೆ ಹಾರಿ ಪಾಸಾಗಿದ್ದುದು ಅದಕ್ಕಿಂತಲೂ ನಿಜ...!!
ಹಂದಿಯನ್ನು ಹಿಡಿಯುವವನು ಎಲ್ಲಿ ಹೋದ ಎಂದು ಎಲ್ಲರೂ ನಾಗೇಶನನ್ನು ಹುಡುಕಿದರು.. ಪಾಪ ಪೊದೆಯ ಸಂದಿಯಲ್ಲಿ ನರಳುವ ಶಬ್ದ ಕೇಳಿ ನೋಡಿದರೆ... ಕಾಲು ಪೂರ ರಕ್ತವಾದ ನಾಗೇಶ ಬಿದ್ದಿದ್ದ..

'
' ಎಂತ ಮಾರಾಯ ''ಎಂದು ಎಲ್ಲರೂ ನೋಡಿದರೆ ... ಗುಂಡು ಬಿದ್ದಿದ್ದು ಹಂದಿಗಲ್ಲ.. ನಾಗೇಶನ ಕಬಡ್ಡಿಯ ತೊನೆದಾಟದಿಂದಾಗಿ ಹಗಲುಗುರುಡ ಗಿಡ್ದನಾಯಕನ ಕಣ್ಣಿಗೆ ನಾಗೇಶನೇ ಹಂದಿಯಂತೆ ತೋರಿ ಗುರಿಯಿಟ್ಟಿದ್ದ...ಒಂದು ಗುಂಡು ಕಾಲಿಗೆ ಬಿದ್ದಿತ್ತು..ಗುರಿಕಾರನ ಸಾಮರ್ಥ್ಯದ ದೆಸೆಯಿಂದ ಇನ್ನೊಂದು ಗುಂಡು ಸರಿಯಾಗಿ ''ಎದೆಗೆ''ಬಿದ್ದಿತ್ತು.....!!!

ಹೆದರುವ ಅಗತ್ಯವಿಲ್ಲ....!!
.ನಾಗೇಶನ ಗ್ರಾಚಾರ ಸರಿಯಿತ್ತು.......!!!!!!
ಇವನೇನು ಮಾಡಿದ್ದಾ ಅಂದರೆ....... ಎಡದ ಜೇಬಿನಲ್ಲಿ ಸುಣ್ಣದಂಡೆ ಇಟ್ಟುಕೊಂಡಿದ್ದ.. ಗುಂಡು ಸರಿಯಾಗಿ ಸುಣ್ಣದಂಡೆಗೆ ಬಿದ್ದಿತ್ತು... ಸಧ್ಯ.. ಇಲ್ಲದಿದ್ದರೆ ಈ ವರ್ತಮಾನ ಹೇಳಲು ನಾಗೇಶ ಭೂತವಾಗಿರುತ್ತಿದ್ದ..
ಎಲ್ಲರೂ ಪ್ರಾಣ ಕಾಪಾಡಿದ ಸುಣ್ಣದಂಡೆಯನ್ನು ಕೊಂಡಾಡಿದ್ದೆ ಕೊಂಡಾಡಿದ್ದು.

ಪ್ರತೀ ಸಾರಿ ಊರಿಗೆ ಹೋದಾಗಲೂ ಒಂದಲ್ಲ ಒಂದು ನಾಗೇಶನ ಕಥೆ ಇದ್ದೇ ಇರುತ್ತದೆ...ಇಷ್ಟೆಲ್ಲಾ ಭಾನಗಡೆ ಮಾಡಿಕೊಂಡರೂ ಮತ್ತೆ ಮರುದಿನ ರೆಡಿ ಹೊಸ ಕಥೆಗೆ..........!!!!!

ವಂದನೆಗಳು.

24 comments:

 1. ನಿಮ್ಮೂರ ನಾಗೇಶನ ಬಾನಗಡೆಯ ಬರಹ ಚೆನ್ನಾಗಿದೆ. ಹಂದಿ ಹಿಡಿಯುವ ಪ್ರಸಂಗ ಓದುವಾಗ ಸಿನೆಮಾ ನೋಡಿದಂತೆಯೇ ಆಯ್ತು. ನಿಮ್ಮ ನಿರೂಪಣೆ ಇಷ್ಟವಾಯ್ತು. ಪೂರ್ವ ನಿರ್ದಾರಿತ ಕೆಲಸದ ನಿಮಿತ್ತ blog ಗೆ ರಜಾ ಹಾಕುತ್ತಿರುವಿರೆಂದಿರಿ. ಯಶಸ್ಸು ಸಿಗಲಿ.

  ReplyDelete
 2. ಚುಕ್ಕಿ ಚಿತ್ತಾರಾ...

  ಹ್ಹಾ..ಹ್ಹಾ... ಹ್ಹೊ..ಹ್ಹೊ...

  ಮಸ್ತ್ ಇದ್ದಾನೆ "ನಾಗೇಶ".. !!

  ಬಹಳ ಇಷ್ಟವಾಗಿಬಿಟ್ಟಿದ್ದಾನೆ..
  ಇವನ ಸಾಹಸ ಇನ್ನಷ್ಟು ಬರಲಿ...

  ಇನ್ನೂ ನಗು ತಡಿಯಲಿಕ್ಕೆ ಆಗ್ತಾ ಇಲ್ಲ...

  ನಮ್ಮನ್ನೆಲ್ಲ ನಗಿಸಿದ್ದಕ್ಕೆ ಥ್ಯಾಂಕ್ಸು.....

  ReplyDelete
 3. ಚುಕ್ಕಿ-ಚಿತ್ತಾರ,
  ಹಳ್ಳಿ ಜೀವನ ಅಳು-ಕಾಳು ಅವರ ನಡೆ-ನುಡಿ ಪ್ರಾಮಾಣಿಕತೆ ಸ್ವಾಮಿನಿಷ್ಠೆ ಮುಗ್ಧತೆ ಪ್ರೀತಿ ಎಲ್ಲ ಕಣ್ಣುಮುಂದೆ
  ಚಲನ ಚಿತ್ರದಂತೆ ಹಾಡು ಹೋಯಿತು. ನಿಮ್ಮ ಬರವಣಿಗೆಯಲ್ಲಿ ತಿಳಿಹಾಸ್ಯ ನೈಜ ಚಿತ್ರಣ ತುಂಬಾ ಇಷ್ಟವಾಯಿತು.
  ನಿಮ್ಮ ನೆನಪು ಕೂಡ ಶ್ರೀಮಂತವಾಗಿದೆ. ಕಷ್ಟ ಪಟ್ಟು ದುಡಿದು ಹೊಟ್ಟೆ ತುಂಬಾ ತಿಂದು ನಾಳಿನ ಚಿಂತೆಯಿಲ್ಲದೆ ನೆಮ್ಮದಿಯಲ್ಲಿ ಬದುಕುವ
  ನಾಗೆಶನಂತಹವರಿಂದ ಹಳ್ಳಿ ಜೀವನ ವರ್ಣರಂಜಿತ! ಬ್ಲಾಗೂರಲ್ಲಿ ಕೆಲಸ ತಾತ್ಕಾಲಿಕ ಸ್ತಗಿತವಾದರೂ ಊರಿಗೆ ಬರುತ್ತಿರಿ. ನಮ್ಮ ಬ್ಲಾಗೂರ ಮನೆಗಳಿಗೆ ಬಂದು ಒಂದೆರಡು ನಾಗೇಶನ ಕಥೆ, ಸೊಗಸಾದ ಬದುಕಿನ ಕ್ಷಣಗಳು, ಕಷ್ಟ ಸುಖ, ತಮಾಷೆ, ಶಿಶಿರನ ಕಥೆಗಳು ಎಲ್ಲ ಹೇಳಿ ಹೋಗಿ...
  ಅದಿಲ್ಲವೆಂದರೆ ನಮ್ಮೊಂದಿಗೆ ಜಗಳವಾಡಿದರು ಪರವಾಗಿಲ್ಲ... !!
  ಶಿವರಾಮ ಭಟ್

  ReplyDelete
 4. ಚುಕ್ಕಿ ಚಿತ್ತಾರ ಅವರಿಗೆ ನಮಸ್ಕಾರಗಳು .ನಾಗೇಶನ ಹಂದಿಯ ಬೇಟೆ ಕಥೆ ಓದಿ ತೇಜಸ್ವಿಯವರ ಪರಿಸರದ ಕಥೆಗಳು ನೆನಪಿಗೆ ಬಂತು.ನವಿರು ಹಾಸ್ಯದ ಬರಹ ತುಂಬಾ ಸೊಗಸಾಗಿ ಬಂದಿದೆ.ನೀವು ಇನ್ನು ಕೆಲವು ತಿಂಗಳು ಬ್ಲಾಗಿಗೆ ಬರೆಯುವುದಿಲ್ಲ ಎನ್ನುವುದನ್ನು ಓದಿ ಮನಸ್ಸು ಭಾರವಾಗಿದೆ.ಆದಷ್ಟೂ ಬೇಗ ನಿಮ್ಮ ಕಮಿಟ್ ಮೆಂಟ್ಸ್ ಎಲ್ಲಾ ಮುಗಿಸಿ ಮತ್ತೆ ಬರೆಯುವಂತಾಗಲಿ ಎಂಬುದೇ ನನ್ನ ಹಾರೈಕೆ .ಕಡೆ ಪಕ್ಷ ನಮ್ಮ ಬ್ಲಾಗಿಗಾದರೂ ಬರುತ್ತಿರಿ .

  ReplyDelete
 5. ಸಧ್ಯ!!ಭಾನಗಡಿ ನಾಗೇಶನ ಪ್ರಾಣ ಉಳಿಯಿತಲ್ಲ... ಇ೦ತಹ ಶೂರರು(ತಾವೇ ಹೇಳಿಕೊಳ್ಳುವುದು)ಅನೇಕರಿರುತ್ತಾರೆ
  ಅವರಿಗೆ ತಮ್ಮ ಪ್ಲಾನೇ ಸರಿ...ಅಲ್ಲಾ ಕಾಡು ಹ೦ದಿಯನ್ನು ಹಿಡಿಯುವುದು ಸುಲಬವೆ? ಅವನೊಟ್ಟಿಗಿದ್ದ ಸ೦ಗಡಿಗರೂ ಭಾರೀನೇ ಶೂರರಾಗಿದ್ರು ಅನ್ಸತ್ತೆ.
  ಹಾಕಿಕೊ೦ಡ ಸ೦ಕಲ್ಪ ಸುಗಮವಾಗಿ ಗುರಿ ತಲುಪಲಿ...ಶುಭಹಾರೈಕೆಗಳು.ಚಿತ್ತಾರದರಮನೆಗೆ ಚಿತ್ತಾರ ಮಾಡಲು ಮತ್ತೆ ಮರಳಿರಿ.

  ReplyDelete
 6. ಚುಕ್ಕಿಚಿತ್ತಾರ,

  ನಿಮ್ಮ ನಾಗೇಶನ ಕತೆ ಓದಿ ನಗು ಬಂತು. ಇಂಥವರು ಇರುವುದರಿಂದಲೇ ಎಲ್ಲಾ ಬಾನಗಡಿಗಳೂ ಆಗುವುದು ಅಲ್ಲವೇ...ಉತ್ತಮ ನಿರೂಪಣೆಯೊಂದಿಗೆ ಅವನ ಬಾನಗಡಿಗಳನ್ನು ಹೇಳಿದ್ದೀರಿ...

  ಧನ್ಯವಾದಗಳು.

  ReplyDelete
 7. ಸರಳ ನಿರೂಪಣೆಯಿಂದ, ಹಾಸ್ಯವನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ. ತುಂಬಾ ನಗು ಬಂತು :) ನಾಗೇಶನ ಮತ್ತಷ್ಟೂ ಬಾನಗಡಿಗಳು ಆದಷ್ಟು ಬೇಗ ಬರಲಿ. ನಿಮ್ಮ ಸಂಕಲ್ಪಗಳು ಒಳ್ಳೆಯರೀತಿಯಲ್ಲಿ ಬಹು ಬೇಗ ಮುಗಿದು ನೀವು ಮತ್ತೆ ಬ್ಲಾಗೂರಿಗೆ ಬೇಗ ಬರುವಂತಾಗಲಿ :)

  ಶುಭಹಾರೈಕೆಗಳು ಎಲ್ಲಾ ಉತ್ತಮ ಸಂಕಲ್ಪಗಳಿಗೂ :)

  ReplyDelete
 8. naageshana kathe chennagide...tumba nagu bantu.... blog prapancha bidadiri... aagomme eegomme bareyuttaliri

  ReplyDelete
 9. ಹಾಹಾ ಹಾ ..
  ನಾಗೇಶನ ಕಥೆ !!! ಒಳ್ಳೆ ಮಜಾ ಇದೆ . ಅವನ ಇತರ ಭಾನಗಡೆಗಳನ್ನೂ ಓದಲು ಕಾಯುತ್ತೇವೆ, ಬೇಗ ಬಂದು ಮುಂದುವರೆಸಿ.

  ReplyDelete
 10. ನಗಿಸಿದ್ದಕ್ಕೆ ಥ್ಯಾಂಕ್ಯು. All the best...ನಿಮ್ಮ ಸಂಕಲ್ಪಗಳು ಸಿದ್ದಿಸಲಿ ಮತ್ತು ಯಶಸ್ವಿಯಾಗಲಿ. ಪುನಃ ಬನ್ನಿ.

  ReplyDelete
 11. ಚೆಂದವಾದ ನಿರೂಪಣೆ
  ನಗು ಮೂಡಿಸಿದ್ದಕ್ಕೆ ಥ್ಯಾಂಕ್ಸ್
  ಹೋಗಿ, ಬೇಗ ಬನ್ನಿ ಬ್ಲಾಗೂರಿಗೆ. ಒಳ್ಳೆಯದಾಗಲಿ.

  ReplyDelete
 12. ನಾಗೇಶನ ಪ್ರಸಂಗಗಳು ಸಕತ್ತಾಗಿವೆ. ಬೇಗನೇ ನೀವು ಬ್ಲಾ^ಗಿಗೆ ಮರಳುವದನ್ನು ಕಾಯುತ್ತಿರುತ್ತೇನೆ.

  ReplyDelete
 13. ಓ ಮನಸೇ, ನೀನೇಕೆ ಹೀಗೆ...
  ಬರಹ ಮೆಚ್ಚಿದ್ದಕ್ಕೆ,
  ನಿಮ್ಮ ಆತ್ಮೀಯ ಪ್ರತಿಕ್ರಿಯೆಗಳಿಗೆ, ಹಾರೈಕೆಗಳಿಗೆ ಧನ್ಯವಾದಗಳು.

  ಸಿಮೆಂಟು ಮರಳಿನ ಮಧ್ಯೆಯ ಪ್ರಕಾಶಣ್ಣ..
  ನಾಗೇಶನ ಕಥೆಗಳು ಇನ್ನೂ ಇವೆ..
  ಅವು ಮುಗಿಯುವವೇ ಅಲ್ಲ..
  ನಕ್ಕಿದ್ದಕ್ಕೆ ಧನ್ಯವಾದಗಳು.

  ಶಿವರಾಮ ಭಟ್
  ಹಳ್ಳಿಯ ಜೀವನ ಚ೦ದ.. ಹಳ್ಳಿಯವರ ಮುಗ್ಧತೆ ಮತ್ತೂ ಚ೦ದ..
  ಬರುತ್ತೇನೆ ಬಿಡಿ... ಜಗಳ ಮಾಡಲು ಯಾವಾಗಲೂ ನಾನು ರೆಡಿ......!!!!!!
  ಚ೦ದದ ಪ್ರತಿಕ್ರಿಯೆಗೆ, ಹಾರೈಕೆಗೆ ಧನ್ಯವಾದಗಳು.

  ಡಾ.ಕೃಷ್ಣಮೂರ್ತಿ.ಡಿ.ಟಿ
  ನಾಗೇಶನಕಥೆ ಇಷ್ಟವಾಗಿದ್ದಕ್ಕೆ, ಮನತು೦ಬಿದ ಹಾರೈಕೆಗೆ ಹ್ರುತ್ಪೂರ್ವಕ ವ೦ದನೆಗಳು.

  ಮನಮುಕ್ತಾ..
  ಹಳ್ಳಿಯವರ ಬದುಕೇ ಹಾಗೆ..
  ನಾಳಿನ ಚಿ೦ತೆ ನಾರಾಯಣನಿಗೆ..
  ಅಕ್ಕರೆಯ ಪ್ರತಿಕ್ರಿಯೆಗೆ, ಹಾರೈಕೆಗೆ ವ೦ದನೆಗಳು.

  ಶಿವು ಸರ್..
  ಭಾನಗಡೆ ಕಥೆ ಮೆಚ್ಚಿದ್ದಕ್ಕೆ, ಸು೦ದರಪ್ರತಿಕ್ರಿಯೆಗೆ ವ೦ದನೆಗಳು.

  ತೇಜಸ್ವಿನಿ..
  ನಕ್ಕಿದ್ದಕ್ಕೆ, ತು೦ಬು ಹ್ರುದಯದ ಹಾರೈಕೆಗೆ ಧನ್ಯವಾದಗಳು.

  ಮನಸು..
  ಸಮಯವಿದ್ದಾಗ ಖ೦ಡಿತಾ ಬರುವೆ..
  ನಕ್ಕಿದ್ದಕ್ಕೆ, ಹಾರೈಕೆಗೆ ಥ್ಯಾ೦ಕ್ಸ್..

  ಚಿತ್ರಾ..
  ನಾಗೇಶನ ಕಥೆ ಮಜಾ ಕೊಡುತ್ತದೆ...
  ನಿಮ್ಮ ಪ್ರತಿಕ್ರಿಯೆಗೆ, ಹಾರೈಕೆಗೆ ಧನ್ಯವಾದಗಳು.

  ಸುಬ್ರಹ್ಮಣ್ಯ...
  ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ, ಹಾರೈಕೆಗೆ ವ೦ದನೆಗಳು.
  [ ಸಗ್ಗದ ಸಿರಿಯೊ೦ದು ಇಳಿದು ಬ೦ದು ನಿಮ್ಮನೆಯಲ್ಲಿ ತೂಗುತ್ತಿದೆಯೆ..? ಮೊದಲೆಲ್ಲೊ ಹೇಳಿದ್ದ ನೆನಪು..]

  ಪೆನ್ನು ಪೇಪರಿನವರೆ..
  ನಿಮ್ಮ ಚ೦ದದ ಪ್ರತಿಕ್ರಿಯೆಗೆ, ಹಾರೈಕೆಗೆ ಧನ್ಯವಾದಗಳು.

  ಸುನಾಥ್ ಕಾಕ..
  ನಕ್ಕಿದ್ದಕ್ಕೆ,ಬರಹ ಮೆಚ್ಚಿದ್ದಕ್ಕೆ, ನಿಮ್ಮ ಹ್ರುತ್ಪೂರ್ವಕ ಹಾರೈಕೆಗೆ ವ೦ದನೆಗಳು.

  ReplyDelete
 14. ಸರಳ ನಿರೂಪಣೆಯ ನಾಗೇಶನ ಹಾಸ್ಯಪ್ರಸ೦ಗ ನಮ್ಮನ್ನು ನಗಿಸಿ ಬಿಟ್ಟಿತು!
  ನಿಮ್ಮ ಚಿತ್ತಾರದ ಮನೆ ಸು೦ದರವಾಗಿ ಬರಲಿ ಎ೦ದು ಹಾರೈಸುವೆ.

  ReplyDelete
 15. thumba chennagitturi nagEshana prasangaLu... laghu haasyadhondhige naviraagi niroopisiddeeri... aadashtu bEga blogoorige hindurigi banni :)

  ReplyDelete
 16. ಪ್ರಾಣಿಗಳು ಓಡಾಡುವ ಜಾಗದಲ್ಲಿ ಸಂಜೆ ಕೋವಿ ಕಟ್ಟಿ-ಬೆಳಿಗ್ಗೆ ಮುಂಚೆಯೇ ಯಾವುದಾದರೂ ಪ್ರಾಣಿ ಬಿದ್ದಿದೆಯೋ ಎಂದು ನೋಡಲು ಹೋದಾಗ-ಕಾಲಿಗೆ ಕೋಲು,ಕೋಲಿಗೆ ಕೋವಿ ಟ್ರಿಗರ್ ಗೆ ಕಟ್ಟಿದ ದಾರ ತಾಗಿ ಈಡಾಗಿ-ಕಡ್ಲೆ ಕಾಳು ಗಾತ್ರದ ಚರೆ(ಗುಂಡು)ಯೊಂದು ಹಣೆಗೆ ತಾಗಿ-ಬೆಕ್ಕಿನಂತೆ (ಇನ್ಫ್ಲುಯೆನ್ಸ್ ಗೆ ನನಗೆ ಚೆನ್ನಾಗಿ ಪರಿಚಯವಿರುವವರನ್ನು ಕರೆದುಕೊಂಡು) ಬಂದು ಆ ಗುಂಡು ತೆಗೆಸಿಕೊಂಡು ಹೋದ ವ್ಯಕ್ತಿ ಜ್ಞಾಪಕಕ್ಕೆ ಬಂತು!!!

  ReplyDelete
 17. ಚುಕ್ಕಿಚಿತ್ತಾರ,
  ನಿಮ್ಮೀ ಕವನ ಹಾಸ್ಯದಾದಿಯಲ್ಲಿದೆ..
  ನಿಮ್ಮ ಕೆಲಸಕ್ಕೆ " .."

  ReplyDelete
 18. istella aadaru enoo haagadavarante iruva nimma naagesha avaru nijakku great :) :)

  ReplyDelete
 19. ಅಲ್ಲ್ರೀ................ಈ ತಾರಾ ನಗಿಸೋದ ನಿಮ್ಮ ನಾಗೇಶ!
  ಅಬ್ಬಬ್ಬಾ ಹೊಟ್ಟೆ ಹುಣ್ಣಾಗಿ ಹೋಯ್ತು ನೋಡಿ
  ಹೀಗೆ ಅವನ ಕತೆಗಳು ಬರ್ತಾ ಇರಲಿ
  ನೀವು ಕೈಗೊಂಡ ಕಾರ್ಯಗಳು BEGA ಕೈಗೂಡಿ ಮತ್ತೆ ಬ್ಲಾಗೂರಿಗೆ ಬನ್ನಿ
  ಅಲ್ಲಿ ವರೆಗೂ ನಾವೆಲ್ಲಾ ನಿಮ್ಮನೆ ಬಗಲಲ್ಲೇ ಕಾಯ್ತಾ ಇರ್ತೇವೆ.

  ReplyDelete
 20. ವಿಜಯಶ್ರೀ, ಊರಿಗೆ ಪಯಣ, ಹಳ್ಳಿಯ ವಾಸ, ಮತ್ತೆ ಆ ಮಣ್ಣಿನ ಸೊಗಡಿನ ಕಥೆಗಳನ್ನು ನಿಮ್ಮ ಅಲ್ಪ ವಿರಾಮದ ನಂತರ ಮುಂದುವರೆಸಿ.
  ಹಳ್ಳಿಯ ಘಟನೆಯನ್ನು ಕಣ್ಣಿಗೆ ಕಟ್ಟಿದಂತೆ ಹಾಸ್ಯಮಾಯವಾಗಿ ವಿವವರಿಸಿದ್ದೀರಿ. ಅಂದ ಹಾಗೆ ಹಂದಿಯನ್ನು ಹಿಡಿಯೋಕೆ ಹೋದದ್ದು ಯಾಕೆ...?? ತೋಟದಲ್ಲಿ ಅವುಗಳ ಉಪಟಳ ಜಾಸ್ತಿಯಿತ್ತು ಅಂತಲೇ..? ಹಹಹ ಅಂತೂ ಬಚಾವು ನಾಗೇಶಪ್ಪ...

  ReplyDelete
 21. hhaa... hhaaa...ನಗು ತಡೆಯಲು ಆಗುತ್ತಿಲ್ಲ..... ನಾನು ನನ್ನ ಬ್ಲಾಗ್ ನಲ್ಲಿ ಗಣಪತಿ ಎಂಬುವವನ ಆವಾಂತರ ಬರೆದಾಗ ನೀವು ನಿಮ್ಮ ಕಾಮೆಂಟ್ ನಲ್ಲಿ ಈ ನಾಗೇಶನ ವಿಷಯ ತಿಳಿಸಿದ್ದೀರಿ...... ಇಷ್ಟೆಲ್ಲಾ ಕಾಯಿಸಿ ಈಗ ಬರೆದಿದ್ದೀರಿ........... ಕ್ಷಮೆ ಇರಲಿ, ತಡವಾಗಿ ಬಂದದ್ದಕ್ಕೆ...... ಕೆಲಸ ಒತ್ತಡ ಇದೆ.... ಹಾಗಾಗಿತಡವಾಯಿತು.....

  ReplyDelete
 22. ಚೆನ್ನಾಗಿದೆ ಮೇಡಮ್

  ReplyDelete
 23. tumbaa chennagide nimma lekhana...odi nagu tadeyalaagalilla....thanks....

  ReplyDelete