Friday, May 17, 2013

ಕರಡಿ ಸೊಪ್ಪಿನ ಸ್ಪೆಷಾಲಿಟಿ..!

ಸೊಪ್ಪುಗಳಲ್ಲಿ ತಯಾರಿಸುವ ಅಡುಗೆಯಲ್ಲಿನ  ವೈವಿಧ್ಯತೆಯನ್ನು  ಸವಿಯಲು  ನೀವು ನಮ್ಮ  ಮಲೆನಾಡಿನ ಕಡೆ ಬರಬೇಕು. ಕಾಡಿನಲ್ಲಿ, ಮನೆಯ ಹಿತ್ತಲಿನಲ್ಲಿ, ತೋಟದಲ್ಲಿ  ಬೆಳೆಯುವ  ಸೊಪ್ಪುಗಳಾದ  ಕೆಸವಿನ ಸೊಪ್ಪು , ಚೋಗತೆ ಸೊಪ್ಪು, ಎಲವರಿಗೆ ಸೊಪ್ಪು, ಕಾಕಮಟ್ಲೆ ಸೊಪ್ಪು, ದಾಳಿಂಬೆ ಸೊಪ್ಪು, ಹೊನಗೆನೆ ಸೊಪ್ಪು,   ಸ್ವಾರ್ಲೆ ಸೊಪ್ಪು,ಸಾಂಬಾರ್ ಸೊಪ್ಪು, ಬೀಪಿ ಸೊಪ್ಪು, ಒಂದೆಲಗ, ಸೂಜ್ಮೆಣಸಿನ ಕುಡಿ, ಬಸಳೆ ಸೊಪ್ಪು, ಕೆಂಪು ಹರಿವೆ ಸೊಪ್ಪು, ನುಗ್ಗೆ ಸೊಪ್ಪು, ಗಂಧದ ಸೊಪ್ಪು, ಕರಡಿ ಸೊಪ್ಪು .. ಹೀಗೆ  ತರ  ತರದ ಸೊಪ್ಪುಗಳನ್ನು ಬಳಸಿ   ಸಾಂಬಾರು, ಸಾರು, ಪಲ್ಯ, ಚಟ್ನೆ, ಕಟ್ನೆ, ತಂಬುಳಿ ತರದ ಅನೇಕ ರೀತಿಯ  ಪದಾರ್ಥಗಳನ್ನು ತಯಾರಿಸುತ್ತಾರೆ. ಜೊತೆಗೆ ಪತ್ರೊಡೆ, ಆಂಬೊಡೆ,  ಬೋಂಡ ತರದ ತಿನಿಸುಗಳನ್ನೂ ಮಾಡುತ್ತಾರೆ.

ಉಳಿದೆಲ್ಲ ಬಗೆಯ ಸೊಪ್ಪುಗಳ ಮಾಹಿತಿ ಸರ್ವೇ ಸಾಧಾರಣವಾಗಿ ಸಿಕ್ಕರೂ ''ಕರಡಿ ಸೊಪ್ಪು'' ಎಲ್ಲಾ ಕಡೆ  ಅಷ್ಟೊಂದು ಪ್ರಚಾರದಲ್ಲಿಲ್ಲ ಅನ್ನುವುದು ನನ್ನ ಅಭಿಪ್ರಾಯ.   ಸಿರಸಿ, ಸಿದ್ದಾಪುರ ವಲಯದಲ್ಲಿರುವವರಿಗೆ    ಈ ಸೊಪ್ಪಿನ ಬಳಕೆ ಮಾಡುವುದು ಗೊತ್ತು ಹೊರತೂ  ಉಳಿದ ಕಡೆಯ ಜನರಿಗೆ ಈ ಸೊಪ್ಪಿನ ಪರಿಚಯ ಅಷ್ಟಾಗಿ ಇಲ್ಲ ಅನಿಸುತ್ತದೆ. ನಮ್ಮ ಕಡೆ  ಕೆಲಸಕ್ಕೆ ಬರುವ ಹೆಂಗಸರಿಂದ ಈ ಸೊಪ್ಪಿನ ಬಗೆಗೆ ತಿಳಿದ ನನ್ನಮ್ಮ ಇದರ ಅಡುಗೆಗಳನ್ನು ಮಾಡುತ್ತಿದ್ದಳು.  ನಾನು ಅನೇಕರನ್ನು  ಕೇಳಿದೆ. ಎಲ್ಲರೂ    ಇದ್ಯಾವ 'ಕರಡಿ ಸೊಪ್ಪು' ಎಂದು ಆಶ್ಚರ್ಯ ಪಡುತ್ತಾರೆ. ಗೊತ್ತಿಲ್ಲದವರೇ ಹೆಚ್ಚು.  ನೋಡಲು  ಕಾಡು ಮಲ್ಲಿಗೆಯ ಸೊಪ್ಪಿನಂತೆ ಕಾಣಿಸುತ್ತದೆ. ಚಿಕ್ಕ ಪೊದೆಯಾಗಿ  ಬೆಳೆಯುತ್ತದೆ. ಚಿಕ್ಕ ಚಿಕ್ಕ ಕಾಯಿಗಳೂ ಬಿಡುತ್ತವಂತೆ. ಇದರ ಹೂ ಮತ್ತು ಕಾಯಿಯನ್ನು ನಾನು ನೋಡಿಲ್ಲ.

 ಕರಡಿ ಸೊಪ್ಪು


 ಈ ಸೊಪ್ಪಿನಿಂದ ತಯಾರಿಸಬಹುದಾದ ಪದಾರ್ಥಗಳು.
೧. ಕರಡಿ ಸೊಪ್ಪಿನ  ಚಟ್ನೆ.

ವಿಧಾನ :-

 ಹತ್ತು ಹದಿನೈದು ಎಲೆಗಳನ್ನು ಚನ್ನಾಗಿ ತೊಳೆದು ಕಂದು  ಬಣ್ಣ ಬರುವಂತೆ ಎಣ್ಣೆ ಹಾಕಿ ಹುರಿಯಬೇಕು.
 ಅರ್ಧ ಚಮಚ ಜೀರಿಗೆ
 ಅರ್ಧ ಚಮಚ ಸಾಸಿವೆ
ಅರ್ಧ ಚಮಚ ಬೋಳ್ಕಾಳು [ ಮೆಣಸಿನ ಕಾಳು ]
 ಎಂಟರಿಂದ ಹತ್ತು ಬ್ಯಾಡಗಿ ಮೆಣಸು,
ಇವನ್ನು ಸಹಾ ಬೇರೆಯಾಗಿ ಹುರಿದುಕೊಂಡು  ಅದಕ್ಕೆ ಒಂದು ಕಪ್ ಕೊಬ್ಬರಿ ತುರಿ + ಹುರಿದ ಸೊಪ್ಪು + ಸ್ವಲ್ಪ ಬೆಲ್ಲ+ ಒಂದು ಸುಲಿದ ಅಡಿಕೆ ಗಾತ್ರದ ಹುಣಸೆ ಹಣ್ಣು+ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಬೇಕಿದ್ದರೆ ಮೇಲೊಂದು ಸಾಸಿವೆ ಒಗ್ಗರಣೆ ಕೊಡಿ.  ಅನ್ನದ ಜೊತೆ ಕೊಬ್ಬರಿ ಎಣ್ಣೆಯೊಂದಿಗೆ   ಕಲೆಸಿಕೊಂಡು ತಿನ್ನಲು ಬಲು ರುಚಿ.



೨.  ಕರಡಿ ಸೊಪ್ಪಿನ ಹುಳಿ [ಸಾಂಬಾರು]

ವಿಧಾನ:-
 ತೊಗರಿ ಬೇಳೆ -ಎರಡು ಕಪ್
 ಸೊಪ್ಪು-  ಹದಿನೈದಿಪ್ಪತ್ತು
ಬಾಳೆ ಕಾಯಿ [ಅಥವಾ ಆಲೂಗಡ್ಡೆ ] - ಎರಡು
ತೆಂಗಿನ ತುರಿ -ಒಂದು ಕಪ್
 ಹುಣಸೆ ಹಣ್ಣು -ಸ್ವಲ್ಪ
ಬೆಲ್ಲ - ಒಂದು ಚಮಚ
ಸಾಂಬಾರಪುಡಿ  - ಮೂರು  ಚಮಚ
 ಉಪ್ಪು

ಬೇಳೆ  ಬೇಯಿಸಿಕೊಂಡು ಅದಕ್ಕೆ ಬಾಳೇ ಕಾಯಿಯ ಹೋಳುಗಳನ್ನು  ಮತ್ತು  ಸೊಪ್ಪನ್ನು  ಹಾಕಿ ಉಪ್ಪು, ಬೆಲ್ಲ ಹಾಕಿ  ಬೇಯಿಸಿ.   ಸೊಪ್ಪನ್ನು ಹೆಚ್ಚಿಯೂ ಹಾಕಬಹುದು.  ಹಾಗೆಯೂ ಹಾಕಬಹುದು. ತೆಂಗಿನ ತುರಿ  ಮತ್ತು ಸಾಂಬಾರ ಪುಡಿಯನ್ನು ಹುಣಸೆ ಹಣ್ಣಿನೊಂದಿಗೆ  ರುಬ್ಬಿ ಅದಕ್ಕೆ ಸೇರಿಸಿ ಚೆನ್ನಾಗಿ ಕುದಿಸಿ. ಸಾಂಬಾರು ದಪ್ಪಗಿರಲಿ.ಉಪ್ಪು, ಹುಳಿ, ಖಾರ  ಸ್ವಲ್ಪ ಹೆಚ್ಚಾಗಿ ಬೇಕಾಗುತ್ತದೆ.  ಮಾಮೂಲಿ ತರಕಾರಿಗಳನ್ನು ಬಳಸಿ ಮಾಡುವ ಹುಳಿಗೆ ಹಾಕುವದಕ್ಕಿಂತಲೂ ಒಂದೂವರೆ ಪಟ್ಟು ಹೆಚ್ಚು ಬೇಕು. ಅನ್ನದ ಜೊತೆ ತುಪ್ಪದೊಂದಿಗೆ ಕಲೆಸಿ ತಿಂದರೆ ನಾಲಿಗೆಗೆ  ಹಿತವಾಗಿರುತ್ತದೆ.




೩ . ಕರಡಿ ಸೊಪ್ಪಿನ ತಂಬುಳಿ

ಮಾಡುವ ವಿಧಾನ - 


ಸೊಪ್ಪನ್ನು ಚೆನ್ನಾಗಿ ತೊಳೆದುಕೊಂಡು ಚೆನ್ನಾಗಿ ಹುರಿದುಕೊಳ್ಳಬೇಕು. ಅದಕ್ಕೆ ಅರ್ಧ ಚಮಚ ಕಾಳು ಮೆಣಸು+ ಅರ್ಧ ಚಮಚ ಜೀರಿಗೆ  ಹುರಿದು ಸೇರಿಸಿ. ಅದಕ್ಕೆ   ಉಪ್ಪು+ಸ್ವಲ್ಪ ಕಾಯಿತುರಿ + ಚೂರು ಬೆಲ್ಲ ಹಾಕಿ ಮಿಕ್ಸಿಯಲ್ಲಿ ರುಬ್ಬಿ. ನಂತರ ಕಡೆದ ಮಜ್ಜಿಗೆ ಸೇರಿಸಿ ಕುಡಿಯುವಷ್ಟು ತೆಳ್ಳಗೆ ಮಾಡಿ. ತುಪ್ಪದಲ್ಲಿ ಜೀರಿಗೆ ಒಗ್ಗರಣೆ ಕೊಡಿ. ಅನ್ನಕ್ಕೆಕಲೆಸಿ ಉಣ್ಣ ಬಹುದು. ಹಾಗೆಯೂ ಕುಡಿಯ  ಬಹುದು. 

 ೪. ಕರಡಿ ಸೊಪ್ಪಿನ ಬೋಂಡ 

ಮಾಡುವ ವಿಧಾನ :-

  ಒಂದು ಕಪ್ ಕಡಲೆ ಹಿಟ್ಟಿಗೆ  ರುಚಿಗೆ ತಕ್ಕಷ್ಟು ಉಪ್ಪು + ಒಮ + ರುಬ್ಬಿದ ಕಾಯಿ ತುರಿ  ನಾಲ್ಕು ಚಮಚ + ಸ್ವಲ್ಪ ಲಿಂಬೆ ಹುಳಿ+ ಮೆಣಸಿನ ಪುಡಿ  ಹಾಕಿಕೊಂಡು ನೀರು ಹಾಕಿ ದಪ್ಪಗೆ ಬೋಂಡ   ಹಿಟ್ಟನ್ನು ಕಲೆಸಿಕೊಳ್ಳಿ. ಒಂದೊಂದೇ ಎಲೆಯನ್ನು ಹಿಟ್ಟಿನಲ್ಲಿ  ಅದ್ದಿ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ. ನಂತರ ಕಾಯಿ ಚಟ್ನಿಯೊಂದಿಗೆ ಸವಿಯಿರಿ. 





ತಂಬುಳಿ ಕುಡಿದ ನಂತರ ಅಥವಾ  ಚಟ್ನಿಯನ್ನು,ಸಾಂಬಾರನ್ನು  ಅನ್ನಕ್ಕೆ ಕಲೆಸಿ ತಿಂದ ನಂತರ ನೀರು ಕುಡಿಯಲು ಹೋದೀರಾ ಜೋಕೆ .. ಬಾಯಿ ಕಹಿ ಕಹಿಯಾಗುತ್ತದೆ.  ಉಣ್ಣುವಾಗ  ಕಹಿ ಗೋಚರಿಸುವುದಿಲ್ಲ. ನೀರು ಕುಡಿದರೆ ಮಾತ್ರ ಕಹಿಯ ಅನುಭವವಾಗುತ್ತದೆ.  ಇದು ಅದರ ಸ್ಪೆಷಾಲಿಟಿ.

ಉಪಯೋಗ - ಇದು ಮೂಲತ: ಕಹಿ ಗುಣವನ್ನು ಹೊಂದಿರುವುದರಿಂದ ಮೈ ನಂಜನ್ನು ಕಡಿಮೆ ಮಾಡುತ್ತದಂತೆ. ಡಯಾಬಿಟೀಸ್ ಇರುವವರಿಗೆ ಒಳ್ಳೆಯದಂತೆ. ವರ್ಷಕ್ಕೊಮ್ಮೆಯಾದರೂ ಬಳಸಿದರೆ ಆರೋಗ್ಯವಂತೆ..


ಇದರ ಬಗ್ಗೆ ಹೆಚ್ಚಿನ ಮಾಹಿತಿ ಇರುವವರು ಹಂಚಿಕೊಳ್ಳಿ.  

 ವಂದನೆಗಳು.