Monday, June 18, 2012

ನನಗ್ಯಾಕೆ ಈ ನೇಮಿಚಂದ್ರ ಇಷ್ಟೊಂದು ಕಾಡುತ್ತಾರೆ?

  ಈ ನೇಮಿಚಂದ್ರ ಇಷ್ಟೊಂದು ಕಾಡುತ್ತಾರೆ ಅಂತ ಗೊತ್ತಾಗಿದ್ದೇ  ಅವರ ಪೆರುವಿನ ಪವಿತ್ರ ಕಣಿವೆಯಲ್ಲಿ ಅನ್ನುವ ಪ್ರವಾಸ ಕಥನವನ್ನು ಓದಿದಾಗಲಿಂದ.    ಸುಧಾದಲ್ಲಿ ಧಾರಾವಾಹಿಯಾಗಿ ಪ್ರಕಟಿಸುತ್ತಿರುವಾಗಲೂ ಓದಿದ್ದೆ.. ಆದರೆ  ಈಗ ಪುಸ್ತಕ ರೂಪದಲ್ಲಿ ಒಂದೇ ಸಲ ಮುಕ್ಕಿದಂತೆ ಓದಿದ್ದೇನೆ. ಅವರು ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡು ಹಾರಿದ್ದು, ದೇಶ ದೇಶ ಸುತ್ತಿದ್ದು, ಅಲ್ಲಿ ಸೋವಿಯಲ್ಲಿ  ಅಮೂಲ್ಯವಾದ ಅನುಭವಗಳನ್ನು ಇನ್ನಿಲ್ಲದಂತೆ ಚೀಲದಲ್ಲಿ ತುರುಕಿಕೊಂಡಿದ್ದು, ಅದನ್ನು  ಒಂದೂ ಕೊಂಡಿ ತಪ್ಪದಂತೆ ಮತ್ತೆ ಚೀಲದಿಂದ  ತೆಗೆದು ಬರಹಕ್ಕೆ ಭಟ್ಟಿ ಇಳಿಸಿದ್ದು ,,,,  ಇವೆಲ್ಲವೂ ನನಗಂತೂ ರೋಚಕವಾಗಿ ಮನಸ್ಸಿನಾಳಕ್ಕೆ ಇಳಿಯುತ್ತದೆ. ಸುಧಾದಲ್ಲಿ   ಅವರ ಇಡಾಸ್ಕಡರ್ ಕುರಿತಾದ ಲೇಖನವನ್ನು ಸಹಾ  ಇನ್ನಿಲ್ಲದ ಕುತೂಹಲದಿಂದ ಓದಿದ್ದೆ. ಈಗೀಗ  ಕನಸಿನಲ್ಲಿಯೂ ಕೂಡಾ ಪೆರುವಿನ ಬೀದಿಗಳೇ, ಪರ್ವತಗಳೇ  ಕಾಣಿಸುತ್ತಿವೆ.  ತಕ್ಷಣ   ಪೆರುವಿಗೇ ಹೊರಟು  ಬಿಡೋಣ ಅನ್ನಿಸಿಬಿಡುತ್ತದೆ.


ಪ್ರತೀ ಸಲ ಅವರ ಪುಸ್ತಕ ಕೈಗೆತ್ತಿಕೊಳ್ಳುವಾಗ ನಾನೂ ಅವರ ಜೊತೆ ಕೈ ಚೀಲದಂತೆ ಹೊರಟು  ಬಿಡುತ್ತೇನೆ ಮನಸ್ಸಿನಲ್ಲಿಯೇ.. ಅಷ್ಟೊಂದು ತಾದಾತ್ಮ್ಯ ಭಾವವನ್ನು ಮೂಡಿಸುತ್ತದೆ ಅವರ ವಿಚಾರಗಳು  ಮತ್ತು ಅದನ್ನು  ಅವರು ಮಂಡಿಸುವ ಬಗೆ. ಅವರು ಭಯವಿಲ್ಲದೆ ಮುಂದೆ ಮುಂದೆ ಹೋಗುತ್ತಿದ್ದರೆ  ನನಗೆ ಮಾತ್ರಾ ಭಯ ಶುರುವಾಗುತ್ತದೆ. ಎರಡೆರಡು ತಿಂಗಳು ಅದು ಹೇಗೆ ಆರೋಗ್ಯವನ್ನು ಕಾಪಾಡಿಕೊಂಡರೋ.. ? ಹೇಗೆ ಮುಂಚಿತವಾಗಿ ಪ್ಲಾನೇ ಮಾಡಲು ಅವಕಾಶ ಸಿಗದ  ಸ್ಥಳಗಳಿಗೆಲ್ಲ ಹೋಗಿಬಂದರೋ,  ಆಹಾರವನ್ನು ಹೊಂದಿಸಿಕೊಂಡರೋ ..? ಆಶ್ಚರ್ಯದ ಜೊತೆ ನನಗೆ ಭಯ ಆಗುತ್ತದೆ.  ಅತ್ಯಂತ ಕಡಿಮೆ ಬೆಲೆಯಲ್ಲಿ ಶ್ರೀಮಂತ ಅನುಭವಗಳನ್ನೆಲ್ಲಾ ಬಿಟ್ಟೂ ಬಿಡದೇ ಎಲ್ಲವನ್ನೂ ಮೂಟೆ ಕಟ್ಟಿ ತಂದು ಸುರಿದರೆ ಒಮ್ಮೆಲೇ ಭ್ರಾಂತಿಯೇ  ಆಗುತ್ತದೆ. ಅದೂ ಒಬ್ಬ ಹೆಣ್ಣು  ಮಗಳು  ಎಲ್ಲಾ ತರದ ಕಷ್ಟಗಳಿಗೂ ಹೊಂದಿಕೊಳ್ಳುತ್ತಾ ಕೇವಲ ಕನಸನೊಂದೆ ಬೆನ್ನಟ್ಟಿ ಹೋಗಿ ಕದ್ದು ತರುವುದಿದೆಯಲ್ಲ..! ಅದು ರೋಮಾಂಚನವನ್ನು ಉಂಟು ಮಾಡುತ್ತದೆ.


ನಾವು ಎಲ್ಲಿ ಪ್ರವಾಸ ಹೋಗಬೇಕಾದರೂ ಮುಂಚಿತವಾಗಿ ತೆಗೆದುಕೊಳ್ಳುವ ಮುಂಜಾಗ್ರತೆಯೇ ಎಲ್ಲಕ್ಕಿಂತ ಭಾರವಾಗಿರುತ್ತದೆ..!  ಯಾವ ತರದ ರೂಮು ಬೇಕು..? ಯಾವ ಹೋಟೆಲಲ್ಲಿ ಯಾವ ತರದ ತಿನಿಸು ಸಿಗುತ್ತದೆ..? ಎಲ್ಲಿ ಏನು ನೋಡಲು ಸಿಗುತ್ತದೆ..? ಯಾವ ಸಮಯಕ್ಕೆ ಎಲ್ಲಿಗೆ ಹೋಗುವುದು? ಎಲ್ಲಿ ನಿಂತ್ಕೋ ಬೇಕು ಎಲ್ಲಿ ಕೂತ್ಕೋ ಬೇಕು ? ಎನ್ನುವುದರ ಪಟ್ಟಿಯನ್ನು  'ಅ' ದಿಂದ 'ಳ' ವರೆಗೆ ಮೊದಲೇ  ತೀರ್ಮಾನಿಸಿ ಬರೆದುಕೊಂಡು, ಅದರ ಪ್ರಕಾರ ಚಾಚೂ ತಪ್ಪದೆ ಹಾಕಿಕೊಂಡ ಬಟ್ಟೆಯ  ಇಸ್ತ್ರಿ ಮುರಿಯದಂತೆ, ಮುಖದ  ಮೇಕಪ್ಪು ಸರಿಯದಂತೆ, ಚಪ್ಪಲಿಗೆ  ಚೂರೂ  ನೋವಾಗದಂತೆ   ಹೋಗಿ ಬರುವ ಪ್ರವಾಸದ ಅನುಭವಗಳಿಗೂ,    ಹೋದಲ್ಲೆಲ್ಲಾ  ಸಿಕ್ಕಷ್ಟೂ  ಅನುಭವಗಳನ್ನು ಕೊಳ್ಳೆ ಹೊಡೆಯುವ ನೇಮಿಚಂದ್ರರ ಕಡಿಮೆ ಖರ್ಚಿನ ಶ್ರೀಮಂತ  ಪ್ರವಾಸ ಕಥನಕ್ಕೂ  ಎಲ್ಲಿಂದೆಲ್ಲಿಯ ಹೋಲಿಕೆ ..?  ಆ ಪೂರ್ಣ ಚಂದ್ರನಿಗೂ ಭೂಮಿಗೂ ಇರುವಷ್ಟು ಅಂತರ ..!!

  ಆಕೆಗೊಂದು ದೀರ್ಘ ಪ್ರಣಾಮ...

Tuesday, June 12, 2012

ಕಾಯುವ ಸಹನೆಯೂ ಇಲ್ಲ ಮತ್ತು ಧೈರ್ಯವೂ ಇಲ್ಲ..!

ಬಸ್ಸಿಗಾಗಿ ಕಾದು  ಕಾದು  ಸುಸ್ತಾಯಿತು. ಬೇಗ ಬೇಗ ಕೆಲಸ ಮುಗಿಸಿ ಇರುವ ಸ್ವಲ್ಪ  ಸಮಯದಲ್ಲಿ ಏನೋ ತರಲು  ಎಲ್ಲೋ  ಹೋಗಬೇಕಿತ್ತು. ಆಟೋ ಒಂದೂ ಸಿಗಲಿಲ್ಲ.  ಮೀಟರಿನ ಮೇಲೆ ಇಷ್ಟು ಎಕ್ಸಟ್ರಾ ಕೊಟ್ಟು   ಅವರನ್ನು ಓಲೈಸಿ ಹೋಗುವುದಕ್ಕಿಂತ ಬಸ್ಸೇ ಮೇಲು ಅಂದುಕೊಂಡು, ಆಟೋದವರ ಸೊಕ್ಕಿಳಿಸಲು   ಬಸ್ ಸ್ಟ್ಯಾಂಡ್ ಗೆ ಬಂದು ನೋಡಿದರೆ ನನಗೆ ಬೇಕಾದ ಬಸ್ಸೊಂದು ಬಿಟ್ಟು ಯಾವ್ಯಾವುದೋ ಎಲ್ಲೆಲ್ಲಿಗೋ ಹೋಗುವ ಬಸ್ಸುಗಳೆಲ್ಲ ಬರುತ್ತಿದ್ದವು ಹೋಗುತ್ತಿದ್ದವು. ಸುಮಾರು ಹೊತ್ತಾಯಿತು. ಸಮಯ ನೋಡಿಕೊಂಡೆ. ಬಸ್ ಸ್ಟ್ಯಾಂಡಿಗೆ  ಬಂದು ಇನ್ನೂ ಐದು ನಿಮಿಷವಾಗಿತ್ತು. ಥೋ,  ಅಷ್ಟರಲ್ಲಿ ನನಗೆ ಐದಾರು ಘಂಟೆಯೇ ಆದಂತಾಗಿತ್ತು.  ಕಾಯಲು ಸಹನೆಯೇ ಸಾಲುತ್ತಿಲ್ಲ ಈ ನಡುವೆ. ಇವರು ಆಟೋದಲ್ಲಿ  ಹೋಗು  ಅಂದರೂ ಕೇಳದೆ ಬಸ್ಸಿನಲ್ಲೇ ಹೋಗುತ್ತೇನೆ ಅಂತ ಜುಟ್ಟು  ಹಾರಿಸಿಕೊಂಡು ಬಂದಿದ್ದಕ್ಕೆ ಯಾಕೋ ಮರ್ಯಾದೆಯೇ ಸಿಗುತ್ತಿಲ್ಲ..!

ಶಾಲೆ ಕಾಲೇಜುಗಳಿಗೆ ಹೋಗುವಾಗ ಅದೆಷ್ಟು ಹೊತ್ತು ಬಸ್ಸಿಗಾಗಿ ಕಾಯುತ್ತಿದ್ದೆವು. ಬರೆದರೆ ದೊಡ್ಡ ಇತಿಹಾಸ ಪುಸ್ತಕವೇ  ಆಗುತ್ತದೆ.
ನಮ್ಮೂರಿಗೆ ಸಾಕಷ್ಟು ಬಸ್ಸುಗಳಿದ್ದರೂ  ಒಂದೂ ಸಮಯಕ್ಕೆ ಸರಿಯಾಗಿ ಬರುವ ನಿಷ್ಠೆ ತೋರುತ್ತಿರಲಿಲ್ಲ. ಕಟ್ ರೂಟು ಬೇರೆ. ಪ್ರತಿಯೊಬ್ಬರೂ ಮತ್ತೊಬ್ಬರನ್ನು  ''ಇವತ್ತು ಐದು ಘಂಟೆ ಹಂಸಗಾರು  ಬಸ್ಸು ಎಷ್ಟೊತ್ತಿಗೆ ಬರುತ್ತದೆ?'' ಎಂದೇ ಕೇಳುವುದು ರೂಢಿಯಾಗಿ ಹೋಗಿತ್ತು. ಆರು ಘಂಟೆ ಆರೂವರೆ, ಏಳು  ಹೀಗೆ ಬಸ್ಸಿನ ಸಮಯ ವ್ಯತ್ಯಾಸವಾಗುತ್ತಿತ್ತು. ಆ ಬಸ್ಸು ಕೆಲವೊಮ್ಮೆ ಬರುತ್ತಲೇ ಇರಲಿಲ್ಲ.  ಕುಮುಟಾದಿಂದ ಬರುವ ಬಸ್ಸು ಮಧ್ಯದಲ್ಲಿ ಎಲ್ಲಾದರೂ ಕೆಟ್ಟು ನಿಂತು ದೊಡ್ಡವರು ತಮ್ಮ  ಕವಳದ  ಬಾಯಿಯಲ್ಲಿ ''ಬಸ್ಸು ಇವತ್ತು ಅಲ್ಲೆಲ್ಲೋ ಬಾಳೆಬರೆ  ಘಾಟೀಲಿ  ಕರ ಹಾಕಿದ್ದಡಾ'' ಎಂದು ಆಕಾಶಕ್ಕೆ ಮಳೆಗರೆಯುತ್ತಿದ್ದರು.ಅದು  ಬಿಟ್ಟರೆ ಮತ್ತೆ ರಾತ್ರಿ ಒಂಬತ್ತರ ವರದಕ್ಕೆ ಕಾಯಬೇಕಿತ್ತು.ಹೆಚ್ಚಾಗಿ ಸಾಗರದ ಬಸ್ ಸ್ಟ್ಯಾಂಡ್ ನಲ್ಲಿ ಬಂಗಾರಿ ಭಟ್ಟರ ಮನೆ ಹೊರಗೆ ನಿಲ್ಲಲು  ಸ್ವಲ್ಪ ಜಾಗವಿತ್ತು. ಅಲ್ಲಿ ನಾವೆಲ್ಲಾ ಹೆಣ್ಣು ಮಕ್ಕಳು ನಿತ್ಕೊಂಡು ಕೂತ್ಕೊಂಡು ಬಸ್ ಸ್ಟ್ಯಾಂಡ್  ಕಾಯ್ಕೊಂಡು ಇರುತ್ತಿದ್ದೆವು.  ನೀರು ಪಾರು ಬೇಕಾದ್ರೆ ಅವ್ರ ಮನೆಯಲ್ಲೇ ಕೇಳಿ ಕುಡಿಯುವುದು. ಸೇವಾಸಾಗರಕ್ಕೆ ಹೋಗುವ ಚಿಳ್ಳೆ  ಪಿಳ್ಳೆಗಳಿಂದ  ಹಿಡಿದು ಕಾಲೇಜು ಕನ್ಯೆಯರ ವರೆಗೆ ಎಲ್ಲರೂ ಅಲ್ಲೇ  ಝಾಂಡಾ  ಊರುವುದು. ಅಜ್ಜಿ ಮನೆ ಅಂತ ಒಂದಿತ್ತು. ಅಲ್ಲೂ ಕೆಲವರು ಇರುತ್ತಿದ್ದರು.  ಇಲ್ಲಾ ಅಂದರೆ ಪೈ ಅಣ್ಣನ ಅಂಗಡಿ. ನಮ್ಮ ಶಾಲೆ ಕಾಲೇಜುಗಳ ಮಂಗಾಟ, ಕಕ್ರತನ, ಇನ್ನಿತರೇ ಕೆಲಸಕ್ಕೆ ಬರುವ, ಬಾರದ ಸುದ್ದಿಗಳೆಲ್ಲ ವಿನಿಮಯವಾಗುತ್ತಿದ್ದು ಅಲ್ಲೇ.  ಹೊತ್ತು ಕಳೆಯಲು ಹುಂಡಿ ಪದ, ಚುಕ್ಕಿ ಆಟ.ಕೆಲ ಸ್ಕೂಲ್ ಮಕ್ಕಳು ಪಾಪ ಅಲ್ಲೇ ತಮ್ಮ ಹೋಂ ವರ್ಕ್ ಮಾಡಿಕೊಳ್ಳುತ್ತಿದ್ದರು.ನಾನಂತೂ ಎಷ್ಟೊಂದು ಸಾಯಿಸುತೆ, ಉಷಾ ನವರತ್ನರಾಮ್ ತರದವರು ಬರೆದ ಪ್ರೇಮ ಕಾದಂಬರಿಗಳನ್ನೆಲ್ಲಾ ಅಲ್ಲೇ ಓದಿ ಅಲ್ಲೇ  ಮರೆಯುತ್ತಿದ್ದೆನೋ ಏನೋ..!  ಬಸ್ ಸ್ಟ್ಯಾಂಡಿನಲ್ಲಿ   ಲೈನ್ ಹೊಡೆಯುವ ಹುಡುಗರು ಬಂಗಾರಿ ಭಟ್ಟರ ಮನೆ  ಬಾಗಿಲಿಗೆ ಕಣ್ಣೋಟ ಎಸೆಯುತ್ತಾ, ಕ್ರಾಪು ತೀಡುತ್ತಾ ಪ್ಯಾಂಟು ಜೋಬಿನಲ್ಲೊಂದು ಕೈ ಹಾಕಿಕೊಂಡು ಬಸ್  ಸ್ಟ್ಯಾಂಡಿನಲ್ಲಿ ಮೇಲೆ ಕೆಳಗೆ ಓಡಾಡುತ್ತಿದ್ದರು. ಕೆಲ ತುಂಟ ಹುಡುಗಿಯರು ಕಣ್ಣು ಗೋಲಿಯನ್ನು  ಮೂಗಿನ ಪಕ್ಕಕ್ಕೆ ತಂದು ವಚ್ಗಣ್ಣು  ಮಾಡಿ  ಹೆದರಿಸುತ್ತಿದ್ದರು. ಅಂತೂ ನಮಗೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ.ಮಧ್ಯಾಹ್ನ ತಿಂದ ಒಣಕಲು ದೋಸೆಯೋ, ಅಥವಾ ಉಪ್ಪಿಟ್ಟೋ   ಹೊರತೂ ಹಸಿವಾದರೂ ನಾವ್ಯಾರೂ ಹಾಗೆಲ್ಲಾ ಹೋಟೆಲಿಗೆ ಹೋಗುತ್ತಿರಲಿಲ್ಲ.  ಯಾವಾಗಲಾದರೂ   ನಿಂಬೆ ಹುಳಿ  ಪೆಪ್ಪರಮೆಂಟು ಇಲ್ಲ  ಯಾರಾದರೂ ಉಪ್ಪಿಗೆ ಹಾಕಿದ ನೆಲ್ಲಿಕಾಯಿಗಳನ್ನು ಕೊಟ್ಟರೆ  ಬಾಯಲ್ಲಿ ಅಡಗಿಸಿ ಇಟ್ಟುಕೊಳ್ಳುವುದು. ಅಪರೂಪಕ್ಕೊಮ್ಮೆ ಐಸ್ ಕ್ಯಾಂಡಿಯನ್ನು ತಿನ್ನುತ್ತಿದ್ದೆವು. ಅಂತೂ ಬಸ್ಸು ಬರುವವರೆಗೆ ಅಲ್ಲೇ ಜೋತು ಬಿದ್ದಿರುತ್ತಿದ್ದೆವು. ನಮ್ಮೂರ ಬಸ್ಸಿಗೆ ಬರುವ ಗಂಡು ಮಕ್ಕಳೆಲ್ಲ ಬೇರೆ ಬಸ್ಸಿಗೆ ಹೋಗಿ ಮೂರು ಮೈಲು ನಡೆದುಕೊಂಡು ಮನೆಗೆ ಹೋಗಿಬಿಡುತ್ತಿದ್ದರು.   ಹೆಣ್ಣುಮಕ್ಕಳಿಗೆ ಹಾಗೆ  ಹೋಗಲು ಭಯ.



ಬೆಳಿಗ್ಗೆ ಕಾಲೇಜಿಗೆ ಹೋಗಲು  ಎಂಟೂವರೆ ಬಸ್ಸು ಹತ್ತಿದೊಡನೆಯೇ  ಸಾಯಂಕಾಲದ ಬಸ್ಸು ಬರುತ್ತಾ ..? ಇವತ್ತು ಯಾವ ಕಂಡಕ್ಟರು..? ಯಾವ ಡ್ರೈವರ್ರು..?  ಯಾವ ಯಾವ ಪೀರಿಯಡ್ಡು ಇದೆ..? ಯಾರ್ಯಾರು ಐದು ಘಂಟೆ ಬಸ್ಸಿಗೆ ಬರುವವರು..? ಎಲ್ಲಾ ತನಿಖೆ  ಶುರುವಾಗುತ್ತಿತ್ತು. ಕಾಲೇಜಿಗೆ ಹೋಗುವುದ್ಯಾಕೆ ಅಂತ ಅಂದರೆ ಬಸ್ಸು  ಕಾಯ್ಕೊಂಡು  ಮನೆಗೆ ಬರೋಕೆ ಅನ್ನುವಷ್ಟರ ಮಟ್ಟಿಗೆ ನಮ್ಮ  ಬಸ್ ಸ್ಟ್ಯಾಂಡ್  ಕಾವಲು ನಡೆಯುತ್ತಿತ್ತು...! ಇವತ್ತು ಬಸ್ಸು ಬಂದರೆ ಡ್ರೈವರಿಗೆ ಒಂದು ಕಾಯಿ ಒಡೆದು ಕೊಡುತ್ತೇನೆ ಎನ್ನುವ ತಲೆಹರಟೆ ಹರಕೆಗಳನ್ನೆಲ್ಲಾ ಹೊತ್ತು ಕೊಳ್ಳುತ್ತಿದ್ದೆವು. ಚಿಳ್ಳೆ ಪಿಳ್ಳೆಗಳ ಜೊತೆ ಸುಮ್ಮನೆ ಕೀಟಲೆ ಮಾಡುತ್ತಿದ್ದೆವು. ಯಾರಾದರೂ ಹೊಸ ಶೂ ಹಾಕಿಕೊಂಡು ಬಂದರೆ '' ಎರಡೂ  ಕಾಲಿಗೂ ಒಂದೇ ತರದ್ದು ಶೂ ಹಾಕ್ಕೊಂಡು ಬಂದಿದ್ದೀಯಲ್ಲ.  ಎರಡಿದೆ ಆಲ್ವಾ ನನಗೊಂದು ಕೊಡು.ಆಗ್ಲಿ ಕೊಡಾ.. ಪ್ಲೀಸ್ ಕೊಡಾ.. '' ಅಂತಾ ರೇಗಿಸುತ್ತಿದ್ದೆವು.ಕೈ ತುಂಬಾ ಬಳೆ  ಹಾಕಿಕೊಂಡು ಬಂದವರನ್ನು ನೋಡಿ,'' ಮಾರಾಯ್ತಿ ಯಾವ  ಕಡೆಯಿಂದ ಇಷ್ಟು  ಬಳೆ  ಸುರುಗಿಕೊಂಡಿದ್ದೀಯಾ ಅಂತಾನೂ  ಗೊತ್ತಾಗ್ತಿಲ್ವೇ.. ..ಕನ್ಫ್ಯೂಸ್ ಆಗ್ತಿದೆ ಕಣೆ ''ಅಂತಾ ಸುಳ್ಳು ಸುಳ್ಳೇ ಆಶ್ಚರ್ಯ ಪಡುತ್ತಿದ್ದೆವು. ಹೇಗಾದರೂ ಮೂರು ತಾಸು ಸಮಯ ಕೊಲ್ಲಬೇಕಿತ್ತಲ್ಲ.   ಸಮಯಕ್ಕೆ ಸರಿಯಾಗಿ ಅಪರೂಪಕ್ಕೊಮ್ಮೆ ಬಸ್ಸು ಬಂದರೆ ನಮಗೆ ಏನನ್ನೋ  ಕಳೆದುಕೊಂಡ ಹಾಗೆ..!  ಕಾಲೇಜು ಏನು ಓದಿದೆವೋ ಬಿಟ್ಟೆವೋ ನೆನಪಿಲ್ಲ ಆದರೆ ಬಸ್ಸು ಕಾದಿದ್ದು ಮಾತ್ರ ಮರೆಯಲಾದೀತೇ ..?

ಮತ್ತೊಂದೇನೆಂದರೆ ಬಸ್ಸು ಬಂದ ದಿನ ಬಸ್ಸು ಸರಿಯಾಗಿ ಬರುತ್ತಿಲ್ಲ ಅಂತಾ ಬಸ್ಸು ತಡೆದು ಸ್ಟ್ರೈಕ್ ಮಾಡುತ್ತಿದ್ದೆವು.ಸಿರಸಿಯಿಂದ ಡಿಪೋ ಮ್ಯಾನೇಜರ್ ಬಂದು ಸಮಾಧಾನ ಮಾಡಿ ಬಸ್ಸು ಬಿಡಿಸಿಕೊಂಡು ಹೋಗಬೇಕಾಗಿತ್ತು. ಅಂತೂ ಬಸ್ಸು ಬಂದರೂ ಒಂದೇ ಬರದಿದ್ದರೂ ಒಂದೇ.

 ಕಾದಿದ್ದು ಕಾದಂತೆಯೇ ಅನಿಸದೆ ಚೂರೂ ಬೇಸರಿಸದೆ ಹಸನ್ಮುಖಿಯರಾಗಿ ಮನೆಗೆ ಬರುತ್ತಿದ್ದುದು ಹೇಗೆ ಅಂತ ನನಗೆ ಆಶ್ಚರ್ಯವಾಗುತ್ತದೆ.ಮನೆಯಲ್ಲಿ ಅಪ್ಪ ಅಮ್ಮ ಮಾತ್ರಾ, ಬಸ್ಸಿನ್ನು ಬರಲಿಲ್ಲ ಕಾಣುತ್ತೆ ..ಹುಡ್ರು ಬಂದಿಲ್ಲ... ಎಂದು ಆಗಾಗ ಹೇಳುತ್ತಿದ್ದರೇನೋ..? ಆವತ್ತಿನ ಕಾಲಕ್ಕೆ ಅಷ್ಟೆಲ್ಲಾ ಯಾರೂ ಹೆದರುವ ಅವಶ್ಯಕತೆಯೂ ಇರಲಿಲ್ಲ. ಈಗಾದರೆ ಇಲ್ಲಿ ನನ್ನ ಮಕ್ಕಳು ಹಾಗೆ ಸ್ಕೂಲು ಬಿಟ್ಟು  ಮೂರು ನಾಲ್ಕು ಘಂಟೆಯಾದರೂ   ಬರದಿದ್ದರೆ  ಪೋಲೀಸ್ ಕಂಪ್ಲೇಂಟೇ   ಕೊಡುವುದಿಲ್ಲವೇ ನಾನು..?  ಕಾಯುವ ಸಹನೆಯೂ ಇಲ್ಲ ಮತ್ತು ಧೈರ್ಯವೂ ಇಲ್ಲ..!

ಈಗೀಗ ಯಾರೂ ಅಲ್ಲಿ ಬಸ್ಸು ಕಾಯುವ, ಬಸ್ಸಿನ ಹಂಗಿಗೆ ಸಿಗುವ ಮಕ್ಕಳು ಸಿಗುವುದಿಲ್ಲ. ಪ್ರೈವೇಟ್ ಕಾರು ವ್ಯಾನು ಸ್ಕೂಲಿಗೆ ನೇರ ಕರೆದೊಯ್ಯುತ್ತವೆ.




ಇಂತಿರುವಾಗ ಮತ್ತೆ ಈಗಲೂ  ಬಸ್ಸು ಕಾಯುವ ಹಣೆಬರಹ  ಅಂದುಕೊಳ್ಳುವಷ್ಟರಲ್ಲಿ  ಬಸ್ಸು ಬಂತು. ಆ ಬಸ್ಸೋ .. ನೇರ ನಾನು ಆಟೋದಲ್ಲಿ ಹೋದರೆ ಹತ್ತು ನಿಮಿಷಕ್ಕೆ ಹೋಗುತ್ತಿದ್ದೆ. ಇದು ನಾನಿಳಿಯುವ  ಗಮ್ಯವನ್ನು ತಲುಪಲು ಬರೋಬ್ಬರಿ ಮುಕ್ಕಾಲು ಘಂಟೆ ತೆಗೆದುಕೊಂಡಿತು . ಬಸ್ಸು ಕಾದದ್ದಕ್ಕಿಂತಾ ಬಸ್ಸಿನಲ್ಲಿ ಕಾದಿದ್ದೇ ಹೆಚ್ಚಾಯ್ತು. ಅಲ್ಲೆಲ್ಲಾ ಕೆಲಸ ಮುಗಿದು ಮತ್ತೆ ಬಸ್ಸು ಕಾಯುವ ಧೈರ್ಯ ಮಾಡಲಿಲ್ಲ ನಾನು. ಆಟೋ ಕರೆದರೆ ಮೀಟರಿನ ಮೇಲೆ ನಲವತ್ತು ಜಾಸ್ತಿ ಕೊಡಿ ಅಂದ. 'ಬೇಡ ಹೋಗು' ಅಂತಂದೆ. ಇನ್ನೊಬ್ಬ ಮೂವತ್ತು ಅಂದ. ಮತ್ತೊಬ್ಬ ಹತ್ತು ಕೊಟ್ಟರೆ ಬರುತ್ತೇನೆ ಅಂದ.'ಸರಿ,' ಅಂದು  ಹೀಗೆ ಚೌಕಾಸಿ ಮಾಡಿ ಮೂವತ್ತು ಉಳಿಸಿದ [ ಮೀಟರಿನ ಮೇಲೆ ಮತ್ತೆ]  ಸಂತೃಪ್ತಿಯಲ್ಲಿ ಮನೆ ಸೇರಿದೆ...!

  • ಫೇಸ್ಬುಕ್ ಗೆಳೆಯರ ಪ್ರತಿಕ್ರಿಯೆಗಳು..

    • Imthiyaz Perla ತುಂಬಾ ಚೆನ್ನಾಗಿದೆ .. ಇಷ್ಟವಾಯಿತು


    • Shirva Harish Shetty ನಿಮ್ಮ ಲೇಖನ ಓದಿ ಬಸ್ಸಲ್ಲಿ ಸುಖ ಪ್ರವಾಸ ಮಾಡಿದಂತೆ ಆಯಿತು, ನಿಮ್ಮ ವಾಸ್ತವದ ಅನುಭವ ಜನ ಸಾಮಾನ್ಯರ ಮನೋ ಭಾವನೆಯಂತೆ, ನಿಮ್ಮ ಬರೆಯುವ ಶೈಲಿ ತುಂಬಾ ಚನ್ನಾಗಿದೆ, ಓದುತ ಹೋಗಬೇಕೆಂದು ಮನಸ್ಸಾಗುತ್ತದೆ......ಲೇಖನ ತುಂಬಾ ಇಷ್ಟವಾಯಿತು.


    • Dev Narsya ಇಷ್ಟವಾಯಿತು............., ನಿಮ್ಮ ಬರೆಯುವ ಶೈಲಿ ತುಂಬಾ ಚನ್ನಾಗಿದೆ.....




    • ಸತೀಶ್ ಡಿ. ಆರ್. ರಾಮನಗರ ಈ ರೀತಿಯ ಅನುಭವ ಎಲ್ಲರಿಗೂ ಆಗುತ್ತದೆ. ಮುಖ್ಯವಾಗಿ ತಾಳ್ಮೆ ಬೇಕು. ಬಸ್ಸಿಗಾಗಿ ಕಾಯುವ, ಆಟೋದವನ ಮುಂದೆ ಚೌಕಾಸಿ ಮಾಡುವ ಸಂದರ್ಭಗಳಂತೂ ನಮ್ಮ ತಾಳ್ಮೆಯನ್ನು ಕೆಣಕುತ್ತವೆ. ಸುಂದರ ಸರಳ ಲೇಖನ.


    • Paresh Saraf ಆ ಹಳೆಯ ಶಾಲಾ ದಿನಗಳ ನೆನಪು ಹಸಿಯಾಯಿತು.. ನಿಜ ಇಂದು ಆ ಚಿಕ್ಕ ಚಿಕ್ಕ ಆನಂದಗಳು ಮಾಯವಾಗುತ್ತಿವೆ.ನಾಲ್ಕು ವರ್ಷದ ಮಗುವೊಂದು ಅಪ್ಪ ಮೊಬೈಲ್ ಕೊಡು
      "ಆಂಗ್ರಿ ಬರ್ಡ್ಸ್" ಆಡ್ತೇನೆ ಅಂತ ಹೇಳುವುದನ್ನು ಕೇಳಿದೆ. ಆಗ ಅನಿಸಿತು ಈಗಿನ ಮಕ್ಕಳು ನಾಲ್ಕು ಗೋಡೆಗಳ ಮಧ್ಯೆ ಇದ್ದು ಸಾಮಾಜಿಕ ಜೀವನ ಮತ್ತು ಸಾಮಾನ್ಯ ಜ್ಞಾನವನ್ನೇ
      ಮರೆಯುತ್ತಾರೋ ಎಂದು. ನನ್ನ ವಿದ್ಯಾರ್ಥಿ ಜೀವನ ನೆನಪಿಸಿದಿರಿ.. ಸುಂದರ.. ಶುಭವಾಗಲಿ :)




    • Shama Nandibetta ‎"ಆಂಗ್ರಿ ಬರ್ಡ್ಸ್" ಆಡುವುದು ಮಾತ್ರವಲ್ಲ; ಮಕ್ಕಳೂ "ಆಂಗ್ರಿ ಬರ್ಡ್ಸ್" ಆಗ್ತಾ ಇದ್ದಾರೆ ಅನಿಸೋಲ್ವೆ Paresh Saraf... ಇದು ನಮ್ಮ ಜೀವನ ಶೈಲಿಯ ಕೊಡುಗೆಯಾ ?


    • Paresh Saraf
      ಖಂಡಿತ.. ಇಂದಿನ ನ್ಯೂಕ್ಲಿಯರ್ ಕುಟುಂಬಗಳು, ಹಣ ಗಳಿಸುವುದ್ದನ್ನು ಕಲಿಸಿ, ಬದುಕಲು ಕಲಿಸದಿರುವ ಶಿಕ್ಷಣ ಪದ್ಧತಿ ಇವೆಲ್ಲವುಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನ ಕುಂಠಿತವಾಗುತ್ತಿದೆ. ಸಹ ಜೀವನ, ಜೀವನ ತತ್ವಗಳನ್ನು ಕಲಿಸಬೇಕಾದ ಪ್ರಾಥಮಿಕ ಶಾಲೆಗಳು ಲಕ್ಷಗಟ್ಟಲೆ ಡೊನೇಶನ್ ಪಡೆದು ಆ ಹಂತದಲ್ಲೇ ಮಕ್ಕಳನ್ನು ಸ್ಪರ್ಧೆಗೆ ಹಚ್ಚುತ್ತಿವೆ. ಮಕ್ಕಳಿಗೆ ಸಂಸ್ಕಾರ ನೀಡಲು ಅಪ್ಪ ಅಮ್ಮರಿಗೆ ಸಮಯ ಇಲ್ಲದೆ ಬೇಬಿ ಸಿಟ್ಟಿಂಗ್ಗಳು ನಾಯಿ ಕೊಡೆಯಂತೆ ತಲೆಯೆತ್ತಿವೆ. ಇವೆಲ್ಲದರ ನಡುವೆ ಮಗುವಿನ ಮನಸ್ಸು ಸಂಕುಚಿತವಾಗುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ....



    • Shama Nandibetta ಅಪ್ಪ ಅಮ್ಮನಿಗೆ ಪುರುಸೊತ್ತಿಲ್ಲ; ಪುರುಸೊತ್ತು ಇದ್ದು ಸಂಸ್ಕಾರ ಕೊಡಬಲ್ಲ ಅಜ್ಜ ಅಜ್ಜಿಯರು ಇವರಿಗೆ ಬೇಕಿಲ್ಲ. ಬದುಕಲು ಕಲಿಸದಿರುವ ಶಿಕ್ಷಣ ಪದ್ಧತಿಯೇ ಅಲ್ಲವೇ ಇಷ್ಟೊಂದು ಆತ್ಮಹತ್ಯೆಗಳ ಮೂಲ...


    • Shama Nandibetta Oscar Wilde ಹೇಳಿದ, “Now-a-days, people know the price of everything, but the value of nothing.” ಮಾತು ನೆನಪಾಯ್ತು


    • Banavasi Somashekhar ಓದಿಸಿಕೊಂಡು ಹೋಯಿತು.ಜೀವನಾನುಭವವನ್ನು ಕಣ್ಣಿಗೆ ಕಟ್ಟಿತು.


    • Uday Shankar ಕಾಲೇಜಿಗೆ ಹೋಗುವುದ್ಯಾಕೆ ಅಂತ ಅಂದರೆ ಬಸ್ಸು ಕಾಯ್ಕೊಂಡು ಮನೆಗೆ ಬರೋಕೆ........... superrrr lines........... :D


Wednesday, June 6, 2012

ಕಾಲ ಬದಲಾಗಿದೆ.. !!


ಇವೆಲ್ಲ ನನ್ನ ಮಗಳು ಬಳಸಿ ಬಿಟ್ಟ ಜೆಲ್ ಪೆನ್ನುಗಳು.  ಅದೂ ಕಳೆದ ಒ೦ದಾರು ತಿ೦ಗಳೀಚೆಗೆ.   ಸುಮಾರು ಇದರ ಮೂರರಷ್ಟನ್ನು ಈ ಮೊದಲು ಕಸದ ಬುಟ್ಟಿಗೆ ಹಾಕಿದ್ದೇನೆ. ಕೆಲವು ಚನ್ನಾಗಿದೆ ಅ೦ತ ಅನಿಸಿದ್ದನ್ನು ಪುನರ್ಬಳಕೆ ಮಾಡುವ ಕಾರ್ಯಕ್ರಮದಡಿಯಲ್ಲಿ ಹಾಗೇ ಇಟ್ಟಿದ್ದೆ. ನನ್ನ ಮಗಳು ಇಟ್ಟುಕೊ೦ಡಿದ್ದಳು ಅನ್ನಿ.    ''ನನ್ನ ಹತ್ತಿರ ಇಷ್ಟು ಪೆನ್ನಿದೆ” ಅ೦ತ ತಮ್ಮನನ್ನು ಗೋಳು ಹೊಯ್ದುಕೊಳ್ಳಲೂ ಇರಬಹುದು ಅವಳ ಉದ್ಧೇಶ.






ನನಗೆ ಮಾತ್ರಾ ಪ್ರತಿ ಪೆನ್ನು ಒಗೆಯುವಾಗಲೂ ಕರುಳನ್ನೇ ಕಿತ್ತು ಒಗೆಯುತ್ತಿದ್ದೀನೇನೋ ಅನ್ನುವಷ್ಟು ಸ೦ಕಟವಾಗುತ್ತದೆ.ಕೆಲವಷ್ಟನ್ನು ಕೆಲಸದವಳಿಗೆ ಕೊಟ್ಟೆ. ಅವಳಾದರೂ ಎಷ್ಟೂ೦ತ ಮನೆಯಲ್ಲಿಟ್ಟುಕೊಳ್ಳುತ್ತಾಳೆ..? ಮೊದ ಮೊದಲು ಖುಶಿಯಿ೦ದ ಒಯ್ದವಳು  ಈಗೀಗ   ಅಲ್ಲೆ ಕಸದ ಡಬ್ಬಿಗೆ ಎಸೆದು ಹೋಗುತ್ತಾಳೆ.  ಕೆಲವಷ್ಟನ್ನು ಶಿಶಿರ ತನ್ನ ಬಾಲ್ಯಸಹಜ ನಡುವಳಿಕೆಯಿ೦ದ ಹಲ್ಲಲ್ಲಿ ಕಚ್ಚಿ ಮುರಿದು, ಬಿಲ್ಲು ಬಾಣದ ಆಟವಾಡಿ,ಚ೦ಡೆ ಬಡಿದು ಅದರ ಗತಿ ಕಾಣಿಸಿದ. ಇಷ್ಟರ ಜೊತೆಗೆ ಮೂಲೆ ಮೂಲೆಯಲ್ಲೂ ಪೆನ್ನು, ಪೆನ್ಸಿಲ್ಲು ರಬ್ಬರ್ರು ಒದ್ದಾಡುತ್ತಿರುತ್ತವೆ.

ನಾನು ಶಾಲೆ ಓದುವಾಗ ರೆನಾಲ್ಡ್ಸ್ ಪೆನ್ನಿಗೆ  ಖಾಲಿಯಾದ  ಹಾಗೆ ಒ೦ದಿಪ್ಪತ್ತು ಬಾರಿಯಾದರೂ ರಿಫಿಲ್ ಹಾಕಿಕೊ೦ಡು ಬರೆಯುತ್ತಿದ್ದೆ. ನಾವೆಲ್ಲ ಹಾಗೆ... ಪೆನ್ನಿನ ತಿರುಗುಣಿ ಒಡೆದುಹೋದರೆ ಅದಕ್ಕೆ ಸೆಲೋಪಿನ್ ಟೇಪ್ ಹಚ್ಚಿ ಮತ್ತೆ ಉಪಯೋಗಿಸುತ್ತಿದ್ದೆವು.ಕೆಲವರು ದಾರ ಸಹಾ ಸುತ್ತುತ್ತಿದ್ದರು.  ವರ್ಷಕ್ಕೆ ಸುಮಾರು ಒ೦ದು ಅಥವಾ ಎರಡು ಹೊಸ  ಲೆಡ್ಡು ಪೆನ್ನು ಖರೀದಿ ಮಾಡಿದ್ದರ‍ೆ ಹೆಚ್ಚು.ಪೆನ್ನು ಹಿಡಿದುಕೊಳ್ಳಲು ಬರುತ್ತೆ ಅನ್ನುವವರೆಗೆ ಅದರಲ್ಲೇ ಬರೆಯುತ್ತಿದ್ದೆವು.     ಸೋರುವ ಇ೦ಕ್ ಪೆನ್ನನ್ನು ಬಟ್ಟೆ ಸುತ್ತಿ ಹಿಡಿದು ಅತೀವ ಪ್ರೀತಿಯಿ೦ದ   ದು೦ಡನೆಯ ಅಕ್ಷರಗಳನ್ನು ಕಾಗದದ ಮೇಲೆ ತೇಲಿಬಿಡುತ್ತಿದ್ದೆವು...! ಹೆಚ್ಚಿನ ಪಕ್ಷ ಕೈಯ್ಯ ಮೂರು ಬೆರಳುಗಳು ನೀಲಿಯಾಗಿಯೇ ಇರುತ್ತಿದ್ದವು.

ನಾನು ನನ್ನ ಮಗಳಿಗೆ    '' ಅದಕ್ಕೆ   ರೀಫಿಲ್ ಹಾಕಿಕೊ೦ಡು ಬರಿ, ಸುಮ್ಮನೆ ಹೊಸ ಪೆನ್ನು ತಗೊ೦ಡು ಬಾ ಅ೦ತ ದಿನಾ ಹೇಳಬೇಡ, ಸುಮ್ಮನೆ ದುಡ್ಡು ಹಾಳು,”  ಅ೦ತ ಜೋರು ಮಾಡಿದೆ.  ನನ್ನ ಮಗಳು ''ಅಮ್ಮಾ  ರೀಫಿಲ್ ಸಿಕ್ಕರೆ ತ೦ದುಕೊಡು.. ಹಾಕ್ಕೊ೦ಡೆ ಬರೀತೀನಿ,ಪೆನ್ನಿನಷ್ಟೇ  ರೀಫಿಲ್ಲಿಗೂ ದುಡ್ಡು,  ”ಅ೦ತ ಮೂತಿಯುಬ್ಬಿಸಿದಳು.

ನಾನಾದರೂ ಮೊದ ಮೊದಲು ಅ೦ಗಡಿಗೆ ಹೋಗಿ ಪೆನ್ನಿನ ರಿಫಿಲ್ ಇದೆಯಾ ಅ೦ತ ಕೇಳುತ್ತಿದ್ದೆ. ಅ೦ಗಡಿಯವನು ನನ್ನನ್ನು ಶಿಲಾಯುಗದ ಜನರನ್ನು ನೋಡುವ೦ತೆ ನೋಡಿದ .  '' ಹ್ಣೂ.. ಒ೦ದು ರಿಫಿಲ್ಲು ಐದು ರುಪಾಯಿ.  ಪೆನ್ನಿಗೂ ಅಷ್ಟೆ ಆಗುತ್ತೆ.  ಹೊಸ ಪೆನ್ನೇ ತಗೋಳಿ  ಮೇಡ೦..” ಎ೦ದ.  ಅದೂ ಯಾವುದೋ ಕ೦ಪನಿಯ ರೀಫಿಲ್.  ಅದು ಈ ಪೆನ್ನಿಗೆ ಮ್ಯಾಚೂ ಆಗುತ್ತಿರಲಿಲ್ಲ.. ನಾನಾದರೂ ಒ೦ದೆರಡು ಸಣ್ಣ ಪುಟ್ಟ ಅ೦ಗಡಿಗಳನ್ನು ಸುತ್ತಿ ಪುಣ್ಯಗಳಿಸಲು ನೋಡಿದೆ. ಎಲ್ಲರೂ ನನ್ನನ್ನು ಕ್ರಿಮಿಯ೦ತೆ ಕ೦ಡರು.. ಐದು ರುಪಾಯಿಯದಾದರೂ   ಅಷ್ಟೇ ಐವತ್ತು ರುಪಾಯಿಯದಾದರೂ ಅಷ್ಟೇ..  ರೀಫಿಲ್ ಹಾಕೋಲ್ಲ ಇವರು.ನಾನಿನ್ನೂ ಹಳೆ ಕಾಲದಲ್ಲಿಯೇ ಇದ್ದೆ.   ಕಾಲ ಬದಲಾಗಿದ್ದು  ನನಗೆ ಗೊತ್ತೇ ಆಗಿರಲಿಲ್ಲ.

ಮಗಳು '' ಗೊತ್ತಾಯ್ತಾ.. ”ಅ೦ತ ಅಣಕಿಸಿದಳು. ಹೌದು ಗೊತ್ತಾಗ್ತಾ ಇದೆ.. ಕಾಲ ಬದಲಾಗಿದೆ..  !!

 ಕಾಲೇಜಿಗೆ ಹೋಗುವಾಗ ನಾವು  ಸಾಗರದ    ಮಾರೀಗುಡಿಯ ಹಿ೦ಬಾಗದಲ್ಲಿ ಒಬ್ಬ  ಚಮಗಾರನಲ್ಲಿ  ಚಪ್ಪಲಿ ಹೊಲಿಸುತ್ತಿದ್ದೆವು.  ಆತ  ಉ೦ಗುಷ್ಟ ದಿ೦ದ ಆಚೆ ಈಚೆ  ಜಡೆ ಹಣೆದ೦ತೆ   ಹೆಣೆದು ಚಪ್ಪಲಿಯ ಬಾರನ್ನು ಕಾಲಿಗೆ ಒಪ್ಪುವ೦ತೆ ನೇಯ್ದು ಕೊಡುತ್ತಿದ್ದ..  ದುಡ್ಡು  ಬರೋಬ್ಬರಿ ಎ೦ಬತ್ತು ರುಪಾಯಿ....!!  ನಮ್ಮ ತ೦ದೆ ಅದನ್ನು ನೋಡಿ ಹೇಳುತ್ತಿದ್ದರು... '' ನಮ್ಮ ಕಾಲದಲ್ಲಿ ನಿಮ್ಮ ಒ೦ದು ಜೊತೆ ಚಪ್ಪಲಿ ದುಡ್ಡಿನಲ್ಲಿ ಒ೦ದು ಮದುವೆಯಾಗುತ್ತಿತ್ತು ಮಗಳೆ..”

ಈಗ ಚಪ್ಪಲಿ ಬಿಡಿ,   ಈ ಪೆನ್ನುಗಳ ರಾಶಿಯನ್ನು ನೋಡಿದರೆ ಮತ್ತಿನ್ನೇನು ಹೇಳುವರೋ..?   ಕಾಲ ಎಷ್ಟೊ೦ದು ಬದಲಾಗಿದೆ ?


ಕಾಲ ಸಾಕಷ್ಟು ಬದಲಾಗಿದೆ.ಕೆಲವು ವರ್ಷಗಳಿ೦ದ ಮತ್ತಷ್ಟು ವೇಗದಲ್ಲಿ. ಅದರ೦ತೆ ನಮ್ಮ ದೃಷ್ಟಿಕೋನ ಕೂಡಾ ಬದಲಾಗಬೇಕಿದೆ.  ಒ೦ದು ಜಾಯಮಾನಕ್ಕೆ ಹೊ೦ದಿಕೊ೦ಡವರು ಸರಕ್ಕನೆ   ಬದಲಾಗಲು ಹೋರಾಟವನ್ನೇ ಮಾಡಬೇಕಿದೆ.  ಒಳಗಿನಿ೦ದ  ..ಒ೦ತರಾ ಮಾನಸಿಕ ಯುದ್ಧ.
ಹೀಗೆ ಅ೦ತ ಅಲ್ಲ.. ಎಲ್ಲಾ  ಕ್ಷೇತ್ರದಲ್ಲೂ...


ಹಳ್ಳಿಯ ವಾತಾವರಣವೆಲ್ಲಾ ನಗರದ ವಾತಾವರಣವನ್ನು ಅನುಕರಿಸುತ್ತಿವೆ.ಸುತ್ತ  ಮರಗಿಡಗಳು ನಾಲ್ಕು ಹೆಚ್ಚಿವೆ ಅನ್ನುವುದು ಬಿಟ್ಟರೆ ಮನೋಭೂಮಿಕೆಯಲ್ಲಿ ಒ೦ದೇ ತರದ  ವರ್ತನೆ.

ನಮ್ಮೊ೦ದಿಗೆ ಸಕಲ ಜೀವ ಜಗತ್ತಿನಲ್ಲೂ ಬದಲಾವಣೆ ಅನಿವಾರ್ಯವಾಗುತ್ತಿದೆ.   ಜೇನು ನೊಣಗಳು  ಮರಗಿಡಗಳ ಹ೦ಗಿಗೆ ಬೀಳದೆ ಫ್ಲೈಓವರ್ ಗಳ ಕೆಳಭಾಗದಲ್ಲಿ ಗೂಡು ಕಟ್ಟುತ್ತಿವೆ. ಮೇಲೆ ಓಡಾಡುವ ವಾಹನಗಳ ಸದ್ದಿಗೆ ಇವುಗಳ ಝೇ೦ಕಾರ ಉಚಿತ.  ಬದಲಾದ ಕಾಲಕ್ಕೆ ಅವೂ ಹೊ೦ದಿಕೊಳ್ಳುತ್ತಿವೆ.   ಕೋಗಿಲೆ ಕಾಗೆಯ ಗೂಡೊ೦ದನ್ನೇ ನೆಚ್ಚದೆ ಬೇರೆ ಗೂಡುಗಳ ಕಡೆ ಮುಖ ಮಾಡುವ ದಿನ ದೂರವಿಲ್ಲ. ಕಲುಷಿತ ವಾತಾವರಣದಿ೦ದ ಧ್ವನಿ ಕೆಟ್ಟು ಕಾಗೆಯ ಧ್ವನಿಯನ್ನು ಅನುಕರಿಸುವುದೊ೦ದು ಬಾಕಿ.  ಗುಬ್ಬಿಗಳೆಲ್ಲಾ  ಊರ ಹೊರಗೆ ಬಿಡಾರ ಹೂಡುತ್ತಿವೆ. ಜಿರಲೆ ತರದ ಕೀಟಗಳೆಲ್ಲಾ ಕ್ರಿಮಿನಾಶಕ ನಿರೋಧಕ ಶಕ್ತಿಯನ್ನು ಗಳಿಸಿವೆ.
ಅ೦ತರ್ಜಲವ೦ತೂ  ಪಾತಾಳ ಸೇರಿದೆ ಬದಲಾವಣೆಗೆ ಹೆದರಿ..! ಮತ್ತೆ ಗ೦ಗಾಮಾತೆಯನ್ನು  ಮೇಲೆತ್ತಲು ವಿಷ್ಣುವೇ  ಬೋರ್ವೆಲ್ ಅವತಾರ  ಎತ್ತಿದ೦ತಿದೆ.   ಬೆ೦ಗಳೂರು ನಗರವನ್ನು ಸ್ಕ್ಯಾನ್ ಮಾಡಿದರೆ ಒಳ್ಳೆ ಸಾಣಿಗೆಯ೦ತೆ ಚಿತ್ರ ಮೂಡಬಹುದು.

ಮಕ್ಕಳ ಆಹಾರ, ವಿಹಾರ, ವಿಚಾರ, ಆಯ್ಕೆ ಎಲ್ಲವೂ ನಮ್ಮ ಕಾಲಕ್ಕಿ೦ತಾ ಭಿನ್ನ. ನಮ್ಮ ಕಾಲದಲ್ಲಿ ಯಾರದರೊಬ್ಬರು ಲವ್ ಮ್ಯಾರೇಜ್ ಮಾಡಿಕೊ೦ಡರೆ ಊರೂರೆಲ್ಲಾ ಸುದ್ದಿಯಾಗುತ್ತಿತ್ತು.ಈಗ ಅ೦ತರ್ಜಾತಿ ವಿವಾಹವೆ೦ದರೂ ಸರಿ, ಅಪ್ಪ ಅಮ್ಮ ಲಕ್ಷಣವಾಗಿ ಧಾರೆ ಎರೆದುಕೊಡುತ್ತಾರೆ. ಮತ್ತೂ ಮು೦ದುವರೆದು ಅವರ್ ಬಿಟ್, ಇವರ್ ಬಿಟ್, ಇನ್ನೊಬ್ಬರು ಅನ್ನುತ್ತಾ ಓಡಾಡಿದರೂ ಅದೆಲ್ಲಾ ಕಾಲದ ಮಹಿಮೆ ಅನ್ನುತ್ತಾ ಒಪ್ಪಿಕೊಳ್ಳುವುದು ಅನಿವಾರ್ಯ. ಲಿವಿ೦ಗ್ ಟುಗೆದರ್ರೂ ಓಕೆ..    ಒ೦ದಷ್ಟು ದಿನ ಮನಸ್ಸಿಗೆ ಕಷ್ಟ.  ನ೦ತರ ಕಾಲ ಸರಿದ೦ತೆ ಮನಸ್ಸೂ ಬದಲಾಗುತ್ತದೆ. ಆಗ ಅದೆಲ್ಲ ಸರಿಯಾಗಿಯೇ ಕಾಣಲು ಶುರುವಾಗುತ್ತದೆ.  ಕಾಲ ಬದಲಾಗುತ್ತದೆ.


 ಹೀಗೆಲ್ಲಾ ಇರುವಾಗ ಈ ಪೆನ್ನುಗಳದ್ದೇನು ಮಹಾ...? ಇವುಗಳನ್ನು ಏನಾದರೂ ಕರಕುಶಲ ವಸ್ತುಗಳನ್ನಾಗಿ ಬದಲಾಯಿಸಬೇಕೆ೦ದಿದ್ದೇನೆ. ಒಳ್ಳೊಳ್ಳೆ ಐಡಿಯಾಗಳಿದ್ದರೆ ಕೊಡಿ..ಇಲ್ಲಾ ಸ್ವಲ್ಪ ದಿನ ನೋಡುತ್ತೇನೆ. ಒಗೆಯಲು ಮನಸ್ಸು ಬ೦ದ ತಕ್ಷಣ ಒಗ್ದು ಬಿಸಾಕುತ್ತೇನೆ. ಹೇಗಿದ್ದರೂ ಕಾಲ ಬದಲಾಗಿದೆ...!!