Monday, January 31, 2011

ಗಾಂಧೀ ತಾತನ ಮನೆ

ಮೊನ್ನೆ  ನಟರಾಜ್ [ನನ್ನವರು] ಅಹಮದಾಬಾದಿಗೆ ಹೋಗಿದ್ದರು.  ಅಲ್ಲಿ ಸಬರಮತಿ ಆಶ್ರಮಕ್ಕೆ ಭೇಟಿ  ಕೊಟ್ಟು ಕೆಲ  ನೆನಹುಗಳನ್ನು ತಂದಿದ್ದಾರೆ..
ನೋಡಿ ನೀವೂನೂ ....ಗಾಂಧೀ ಅಜ್ಜನ ಮನೆಯನ್ನು.

ಸಬರಮತಿ ಆಶ್ರಮಕ್ಕೆ ಸ್ವಾಗತ
ಆಶ್ರಮದ   ಮುಖ್ಯ ದ್ವಾರದಲ್ಲಿ 


ಮಾಡಬಾರದ್ದು .....೧.೨.೩.
   
ಗಾಂಧೀಜಿ ಮತ್ತು ಕಸ್ತೂರಬಾ 


ಗಾಂಧಿ ಮಹಾತ್ಮನ ಹಸ್ತಾಕ್ಷರ 
 

ಗಾಂಧೀಜಿ  ನೆಲೆಸಿದ ಮನೆ 

ಆಶ್ರಮದ ಆವರಣ ಸಬರಮತಿ ನದಿ 
 
ಆಶ್ರಮದಲ್ಲಿ ನಟರಾಜ್ ಗಾಂಧೀಜಿ ಕುಳಿತುಕೊಳ್ಳುತ್ತಿದ್ದ ಸ್ಥಳ. ಸಂದರ್ಶಕರನ್ನು ಭೇಟಿಯಾಗುತ್ತಿದ್ದ ಕೊಠಡಿ. ಅವರು ಬಳಸುತ್ತಿದ್ದ ಗಾದಿ, ಮೇಜು, ಮಣೆ ಮತ್ತು ಚರಕವನ್ನು ಕಾಣಬಹುದು.


ಕಸ್ತೂರಬಾ ಅಡುಗೆ ಮಾಡುತ್ತಿದ್ದ ಸ್ಥಳ.


 ಅಗಲಿದ ಮಹಾತ್ಮ ........
ಈ ಚಿತ್ರವನ್ನೂ... ಇಂದಿನ ಪರಿಸ್ಥಿತಿಯನ್ನೂ ಹೋಲಿಸಿದರೆ   ಮಹಾತ್ಮನ ಧ್ಯೇಯೋದ್ದೇಶಗಳೆಲ್ಲ  ಸುಟ್ಟು ಭಸ್ಮವಾಗುತ್ತಿರುವಂತಿದೆಯಲ್ಲವೇ..?

ಮೇರಾ  ಭಾರತ್ ಮಹಾನ್ ...

Monday, January 24, 2011

ಆಲೆ ಮನೆ

   ಈ ಸಮಯದಲ್ಲಿ ನೀವೇನಾದರೂ ಮಲೆನಾಡಿನ ಕಡೆ ಹೋದರೆ ಅಲ್ಲೆಲ್ಲಾದರೂ  ನಿಮಗೆ  ಕಬ್ಬಿನ ರಸದ ಸುವಾಸನೆ,ಬೆಲ್ಲದ ನರುಗಂಪು   ಗಾಳಿಯಲ್ಲಿ  ತೇಲಿ ಬಂದು ನಿಮ್ಮ ನಾಸಾಗ್ರಗಳಲ್ಲಿ ಪ್ರವೇಶಿಸಿ ಮನಸ್ಸಿಗೆ ಆನಂದಾನುಭೂತಿಯನ್ನು ಕರುಣಿಸಿತೆಂದರೆ  ಹತ್ತಿರದಲ್ಲೆಲ್ಲೋ  ಆಲೆ ಮನೆ ಇರುವ ಸಾಧ್ಯತೆ ಇದ್ದೇ ಇದೆ  ಎಂದರ್ಥ. 

ಆಲೆಮನೆ ಅದೊಂದು ಹಬ್ಬ. ಊರಕಡೆ ಯಾರ ಮನೆಯಲ್ಲಾದರೂ ಆಲೆಮನೆ ಶುರುವಾಯಿತೆಂದರೆ ಬಂಧು ಬಳಗದವರನ್ನು, ಪರಿಚಯಸ್ತರನ್ನು ಕರೆದು ಹಬ್ಬದ ರೀತಿಯಲ್ಲಿ ಸಂಭ್ರಮಿಸುವುದು ಈಗಲೂ ಇದೆ.  ಆಲೆಮನೆಯಲ್ಲಿ ಹಾಲು ಬೆಲ್ಲದ ಜೊತೆಗೆ ಮಂಡಕ್ಕಿ ಕಂಬಳ, ಬೋಂಡದಾ  ಕಂಬಳ ಇತ್ಯಾದಿಗಳನ್ನೂ ಉತ್ಸಾಹೀ ಯುವಕರು  ಹಮ್ಮಿಕೊಳ್ಳುವುದುಂಟು ಕೆಲವೆಡೆ..


ಈಗೆಲ್ಲಾ ಆಲೆಮನೆಗಳಲ್ಲಿ ಆಧುನಿಕ ಯಂತ್ರಗಳನ್ನು ಬಳಸಿ ಕೆಲಸವನ್ನು ಸುಲಭೀಕರಿಸಿ ಕೊಳ್ಳಲಾಗುತ್ತಿದೆ.ಆದರೆ ಕೋಣ ಕಟ್ಟಿ ''ಆಲೆಕಣೆ  '' ತಿರುಗಿಸುವ ಆ ಒರಿಜಿನಲ್ ಆಲೆಮನೆ ಮಾತ್ರಾ ಒಂದು ರೀತಿಯ ಆಹ್ಲಾದ ಉಂಟುಮಾಡುತ್ತದೆ. ಒಂದು ಊರಿಗೆ ಕಣೇ ಬಂತೆಂದರೆ ಆ ಊರವರೆಲ್ಲರಿಗೂ ಆಲೆಮನೆಯ ಸಂಭ್ರಮ.ಈಗೀಗ  ಕೋಣ ಸಾಕುವವರೂ ಕಡಿಮೆಯಾಗಿದ್ದಾರೆ. ಮತ್ತು ಕೋಣ ಕಟ್ಟಿದರೆ ಬಿಸಿಲಿನಲ್ಲಿ ಕೊಣಕ್ಕೆ ಆಯಾಸವಾಗುತ್ತದೆಂಬ ಕಾರಣಕ್ಕೆ ಸಂಜೆ ತಂಪು ಹೊತ್ತಿನಲ್ಲಿಯೇ ಕೆಲಸ ಮಾಡಬೇಕು. ರಾತ್ರಿಯಿಡೀ ಕೆಲಸ. ಕ್ರಷರ್ ನದು ಆ ತೊಂದರೆ ಇಲ್ಲ..


ಆಲೆ ಮನೆಯ ಕೆಲವು ಫೋಟೋಗಳು 

 
 ಕಬ್ಬಿನ ಗದ್ದೆ ..  


ಕೋಣ ಕಟ್ಟಿದ ಆಲೆ ಕಣೆ   

''ಹೊಯ್ ''ಎನ್ನುತ್ತಾ ಕೋಣ ಹೊಡೆಯುವುದು..ನೋಡುವುದು ಮಜವಾಗಿರುತ್ತದೆ. ಆಲೆ ಮನೆಗೆ ಹೋದರೆ ಸ್ವಲ್ಪ ಸಮಯ ಕೋಣ ಹೊಡೆದು ಚಟ ತೀರಿಸಿಕೊಳ್ಳುವವರೂ ಇದ್ದಾರೆ. 
 ಕಬ್ಬಿನ ರಸ ಬಾನಿಗೆ ಬಂದು ಬೀಳುವುದು 
 ಆಲೆ ಒಲೆ, ಕೊಪ್ಪರಿಗೆ  ಮತ್ತು ಬೆಲ್ಲದ ಪಾಕ  ನೋಡುತ್ತಿರುವುದು .

ಬೆಲ್ಲ ಪಾಕ ಬಂದಿದೆಯಾ ನೋಡಲು ಆಲೆಮನೆ ಗಳಲ್ಲಿ ಕೆಲ ಸ್ಪೆಶಲಿಷ್ಟರೂ ಇರುತ್ತಾರೆ.ಇಲ್ಲದಿದ್ದಲ್ಲಿ ಬೆಲ್ಲ ಅ೦ಟಾಗಿ ಬಿಡುವ, ಹೊತ್ತಿಹೋಗುವ ಪ್ರಸಂಗಗಳೂ ಇಲ್ಲದಿಲ್ಲ. ಬೃಹದಾಕಾರದ  ಆಲೆ ಒಲೆಗೆ ಸಾಕಷ್ಟು ಬೆಂಕಿ ಹಾಕಲು ದೊಡ್ಡ ದೊಡ್ಡ ಕುಂಟೆಗಳನ್ನು ಬಳಸುತ್ತಾರೆ.
 
 ಕೊಪ್ಪರಿಗೆಯಲ್ಲಿ  ನೊರೆ ಬೆಲ್ಲ ಪಾಕದ ಮರಿಗೆ 

ಹದವಾಗಿ  ಪಾಕ ಬಂದ ಬೆಲ್ಲವನ್ನು ಈ ಮರಿಗೆಗೆ ಬಗ್ಗಿಸುತ್ತಾರೆ.ಸಧ್ಯ ಮರಿಗೆ ಕಾಲಿಯಿದೆ. ಬೆಲ್ಲವನ್ನೆಲ್ಲಾ ಡಬ್ಬಗಳಿಗೆ ತುಂಬಿದ್ದಾರೆ.

 ಆಲೆ ಮನೆಯಲ್ಲಿ ಕಬ್ಬಿನ ಹಾಲು ಕುಡಿಯುವುದು, ನೊರೆ ಬೆಲ್ಲ ನೆಕ್ಕುವುದು ಅಲ್ಲಿಗೆ ಹೋದವರ ಖಾಯಂ ಕೆಲಸ. ಮಾವಿನ ಮಿಡಿ ಉಪ್ಪಿನಕಾಯಿ ಜೊತೆಗೆ,ಶುಂಟಿ ರಸದ ಜೊತೆಗೆ  ಹಾಲು ಕುಡಿಯುವುದು ಕೆಲವರ ಖಯಾಲಿ.

Friday, January 21, 2011

ಇಕೆಬಾನ

ಪ್ರಿಯೆ
ನಿನ್ನ ನಾಸಿಕ ಸಂಪಿಗೆ
ಕಣ್ಣು ಕೌಳಿ
ಕೆನ್ನೆ ಕೇದಗೆ
ಕಿವಿ ದಾಸವಾಳ
ದಾಲಿಂಬರದ ಹಲ್ಲು 
ಮುಂಗುರುಳು  ನುಲಿಕುಡಿ
ಶಂಖದ  ಕೊರಳು
ದೇಹ  ಕಡೆದಿಟ್ಟ ಬಾಳೆ ದಿಂಡು
ಎಂದೆಲ್ಲ ಹೇಳುವ ಬದಲು
ನೀ ಇಕೆಬಾನ ಎನ್ನಲೇ......????


[ ಇಕೆಬಾನ = ಜಪಾನಿ ಹೂ ಜೋಡಿಸುವ  ಕಲೆ
ಕಣ್ಣು ಕೌಳಿ = ಕೌಳಿ ಎನ್ನುವುದು ಕಪ್ಪುದ್ರಾಕ್ಷೀ ತರದ ಹಣ್ಣು.
ನುಲಿಕುಡಿ =ಟೆ೦ಡ್ರಿಲ್.. ಬಳ್ಳಿಗಳು ಹಬ್ಬುವಾಗ ಕೊಮ್ಬೆಯನ್ನು ಸುರುಳಿಯಾಕಾರದ ನುಲಿಕುಡಿಗಳಿ೦ದ ಬಳಸಿ ಹಿಡಿಯುತ್ತವೆ]

Thursday, January 13, 2011

ಚುಟುಕು ಕುಟುಕು.

 ಸ್ಯಾಡಿಸಂ  

ಮೋಡ ಬಿಕ್ಕಿ ಬಿಕ್ಕಿ ಅತ್ತು
ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತು
ಭೂಮಿ ಮೋಡದ ಕಣ್ಣೀರು ನುಂಗಿ
ಗಹಿ ಗಹಿಸಿ ನಕ್ಕಿತು...!ಅಸ್ತಿತ್ವ ಬೆಳೆಸಿಕೊಂಡಿತು..!

ಪ್ರಲಾಪ...!

''ಚಿರೋಟಿಯಂತ ಕೆನ್ನೆಯವಳೇ
ಕೊಯ್ದಿಟ್ಟ ಮೈಸೂರ್ ಪಾಕಿನಂತ ಹಲ್ಲಿನವಳೇ..
ಹೊತ್ತಿ ಹೋದ  ಪೇಣಿಯಂತ ವೇಣಿಯವಳೇ..
ಚಕ್ಕುಲಿಯಂತ ಮುಂಗುರುಳಿನವಳೇ..
ಕ್ಯಾರೆಟ್ ಹಲ್ವದಂತಹ ತುಟಿಯವಳೇ
ನೀನು  ವೀಳ್ಯದೆಲೆಯಂತಹಾ ಕಣ್ಣುಗಳಿಂದ ನೋಡಿ
ಮುಗುಳುನಕ್ಕಾಗ ನೀರ್ಗೊಜ್ಜು ಕುಡಿದಂತೆ ಅಮಲೇರಿತು..! ''
ಎಂದು ಅಡುಗೆ ಭಟ್ಟನ ಮಗ ಪ್ರಲಾಪಿಸುತ್ತಿದ್ದ..

 ಕ್ರೌರ್ಯ..

 ಏನಿದೇನಿದು ..?
 ಪದ ಪ್ರಾಸವಿಲ್ಲ
ವ್ಯಾಕರಣ ಬಳಸಿಲ್ಲ
ಛಂದಸ್ಸಿನ ಚಂದವಿಲ್ಲ
ಪ್ರತಿಮಾ ವಿಶೇಷವಿಲ್ಲ
ವ್ಯುತ್ಪತ್ತಿ  ಸಾಲದು
ಭಾವುಕತೆ ಕೊಂಚ ಜಾಸ್ತಿಯಾಯ್ತು
ಪಂಚ್ ಇಲ್ಲ ಪನ್ ಇಲ್ಲ
ರೋಮಾಂಚನ ಇಲ್ಲವೇ ಇಲ್ಲ
ಎಂದೆಲ್ಲಾ ಹಾಡಿ ಹೊಗಳಿ
ಕವಿತೆಯೊಂದರ
ಕೊಲೆಮಾಡಿದ
ವಿಮರ್ಶಕ..!

ಸರ್ವರಿಗೂ ಸಂಕ್ರಮಣದ ಹಾರ್ದಿಕ ಶುಭಾಶಯಗಳು 

Monday, January 10, 2011

ಕವಿತೆ


ಅವಿತಿಟ್ಟುಕೊಳ್ಳಲಾರದೆ
 ಕಲ್ಪನಾ ಸಾಗರದಲೆಯೊಂದು  
ಬಂದು ಮಾನಸ  ದಡಕ್ಕಪ್ಪಳಿಸಿ 
ಹೆಜ್ಜೆ ಗುರುತನೊಂದುಳಿಸಿ  ಕವಿತೆಯಾಯ್ತು
ಭಾವಾ೦ಭುದಿಯಲಿ  ತೇಲಿ ತೇಲಿ 
ಛ೦ದಸ್ಸಿನ ಚಂದವಿರದಿದ್ದರೂ 
ವ್ಯಾಕರಣದ ಹಂಗಿರದಿದ್ದರೂ 
ಮನಕ್ಕೊಪ್ಪುವ   ಭಾವಗೀತೆಯಾಯ್ತು 

ದಡವನಪ್ಪಿದ್ದು ಲವಣವೋ ಹವಳವೋ 
ಮರಳೋ ಹರಳೋ ಶಂಖವೋ  ಶೃ೦ಖಲೆಯೊ 
 ತಬ್ಬಿದವನಿಗೆ  ಗೊತ್ತು
ಅಂದವೋ ಅನುಬಂಧವೋ 
ಚಂದವೋ ಸ್ವಚ್ಚಂದವೋ ಸ್ಮೃತಿಯೋ  ವಿಸ್ಮೃತಿಯೋ 
ಸವಿದವನಿಗೆ ಗೊತ್ತು

ಕಲ್ಪನೆಗಿದೆಯೇ  ಎಲ್ಲೆ
ಹೃದಯ ಪಲುಕಿದಂತೆಲ್ಲಾ
ತೆರೆಯಾಗಿ ಅಲೆಯಾಗಿ ದಿಬ್ಬಣದಂತೆ
ಮೆರವಣಿಗೆ ಹೊರಡುವುದರ  ಪರಿಗೆ
ಬೆರಗಾಗಿ ಮೈಮರೆವಾಗಿ 
ಚಲಿಸಲಾಗದೆ ಹಾಗೇ ಶಿಲೆಯಾದೆನಲ್ಲಿಯೇ ..!