Showing posts with label ಪುಸ್ತಕ-ಪ್ರೀತಿ. Show all posts
Showing posts with label ಪುಸ್ತಕ-ಪ್ರೀತಿ. Show all posts

Monday, June 18, 2012

ನನಗ್ಯಾಕೆ ಈ ನೇಮಿಚಂದ್ರ ಇಷ್ಟೊಂದು ಕಾಡುತ್ತಾರೆ?

  ಈ ನೇಮಿಚಂದ್ರ ಇಷ್ಟೊಂದು ಕಾಡುತ್ತಾರೆ ಅಂತ ಗೊತ್ತಾಗಿದ್ದೇ  ಅವರ ಪೆರುವಿನ ಪವಿತ್ರ ಕಣಿವೆಯಲ್ಲಿ ಅನ್ನುವ ಪ್ರವಾಸ ಕಥನವನ್ನು ಓದಿದಾಗಲಿಂದ.    ಸುಧಾದಲ್ಲಿ ಧಾರಾವಾಹಿಯಾಗಿ ಪ್ರಕಟಿಸುತ್ತಿರುವಾಗಲೂ ಓದಿದ್ದೆ.. ಆದರೆ  ಈಗ ಪುಸ್ತಕ ರೂಪದಲ್ಲಿ ಒಂದೇ ಸಲ ಮುಕ್ಕಿದಂತೆ ಓದಿದ್ದೇನೆ. ಅವರು ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡು ಹಾರಿದ್ದು, ದೇಶ ದೇಶ ಸುತ್ತಿದ್ದು, ಅಲ್ಲಿ ಸೋವಿಯಲ್ಲಿ  ಅಮೂಲ್ಯವಾದ ಅನುಭವಗಳನ್ನು ಇನ್ನಿಲ್ಲದಂತೆ ಚೀಲದಲ್ಲಿ ತುರುಕಿಕೊಂಡಿದ್ದು, ಅದನ್ನು  ಒಂದೂ ಕೊಂಡಿ ತಪ್ಪದಂತೆ ಮತ್ತೆ ಚೀಲದಿಂದ  ತೆಗೆದು ಬರಹಕ್ಕೆ ಭಟ್ಟಿ ಇಳಿಸಿದ್ದು ,,,,  ಇವೆಲ್ಲವೂ ನನಗಂತೂ ರೋಚಕವಾಗಿ ಮನಸ್ಸಿನಾಳಕ್ಕೆ ಇಳಿಯುತ್ತದೆ. ಸುಧಾದಲ್ಲಿ   ಅವರ ಇಡಾಸ್ಕಡರ್ ಕುರಿತಾದ ಲೇಖನವನ್ನು ಸಹಾ  ಇನ್ನಿಲ್ಲದ ಕುತೂಹಲದಿಂದ ಓದಿದ್ದೆ. ಈಗೀಗ  ಕನಸಿನಲ್ಲಿಯೂ ಕೂಡಾ ಪೆರುವಿನ ಬೀದಿಗಳೇ, ಪರ್ವತಗಳೇ  ಕಾಣಿಸುತ್ತಿವೆ.  ತಕ್ಷಣ   ಪೆರುವಿಗೇ ಹೊರಟು  ಬಿಡೋಣ ಅನ್ನಿಸಿಬಿಡುತ್ತದೆ.


ಪ್ರತೀ ಸಲ ಅವರ ಪುಸ್ತಕ ಕೈಗೆತ್ತಿಕೊಳ್ಳುವಾಗ ನಾನೂ ಅವರ ಜೊತೆ ಕೈ ಚೀಲದಂತೆ ಹೊರಟು  ಬಿಡುತ್ತೇನೆ ಮನಸ್ಸಿನಲ್ಲಿಯೇ.. ಅಷ್ಟೊಂದು ತಾದಾತ್ಮ್ಯ ಭಾವವನ್ನು ಮೂಡಿಸುತ್ತದೆ ಅವರ ವಿಚಾರಗಳು  ಮತ್ತು ಅದನ್ನು  ಅವರು ಮಂಡಿಸುವ ಬಗೆ. ಅವರು ಭಯವಿಲ್ಲದೆ ಮುಂದೆ ಮುಂದೆ ಹೋಗುತ್ತಿದ್ದರೆ  ನನಗೆ ಮಾತ್ರಾ ಭಯ ಶುರುವಾಗುತ್ತದೆ. ಎರಡೆರಡು ತಿಂಗಳು ಅದು ಹೇಗೆ ಆರೋಗ್ಯವನ್ನು ಕಾಪಾಡಿಕೊಂಡರೋ.. ? ಹೇಗೆ ಮುಂಚಿತವಾಗಿ ಪ್ಲಾನೇ ಮಾಡಲು ಅವಕಾಶ ಸಿಗದ  ಸ್ಥಳಗಳಿಗೆಲ್ಲ ಹೋಗಿಬಂದರೋ,  ಆಹಾರವನ್ನು ಹೊಂದಿಸಿಕೊಂಡರೋ ..? ಆಶ್ಚರ್ಯದ ಜೊತೆ ನನಗೆ ಭಯ ಆಗುತ್ತದೆ.  ಅತ್ಯಂತ ಕಡಿಮೆ ಬೆಲೆಯಲ್ಲಿ ಶ್ರೀಮಂತ ಅನುಭವಗಳನ್ನೆಲ್ಲಾ ಬಿಟ್ಟೂ ಬಿಡದೇ ಎಲ್ಲವನ್ನೂ ಮೂಟೆ ಕಟ್ಟಿ ತಂದು ಸುರಿದರೆ ಒಮ್ಮೆಲೇ ಭ್ರಾಂತಿಯೇ  ಆಗುತ್ತದೆ. ಅದೂ ಒಬ್ಬ ಹೆಣ್ಣು  ಮಗಳು  ಎಲ್ಲಾ ತರದ ಕಷ್ಟಗಳಿಗೂ ಹೊಂದಿಕೊಳ್ಳುತ್ತಾ ಕೇವಲ ಕನಸನೊಂದೆ ಬೆನ್ನಟ್ಟಿ ಹೋಗಿ ಕದ್ದು ತರುವುದಿದೆಯಲ್ಲ..! ಅದು ರೋಮಾಂಚನವನ್ನು ಉಂಟು ಮಾಡುತ್ತದೆ.


ನಾವು ಎಲ್ಲಿ ಪ್ರವಾಸ ಹೋಗಬೇಕಾದರೂ ಮುಂಚಿತವಾಗಿ ತೆಗೆದುಕೊಳ್ಳುವ ಮುಂಜಾಗ್ರತೆಯೇ ಎಲ್ಲಕ್ಕಿಂತ ಭಾರವಾಗಿರುತ್ತದೆ..!  ಯಾವ ತರದ ರೂಮು ಬೇಕು..? ಯಾವ ಹೋಟೆಲಲ್ಲಿ ಯಾವ ತರದ ತಿನಿಸು ಸಿಗುತ್ತದೆ..? ಎಲ್ಲಿ ಏನು ನೋಡಲು ಸಿಗುತ್ತದೆ..? ಯಾವ ಸಮಯಕ್ಕೆ ಎಲ್ಲಿಗೆ ಹೋಗುವುದು? ಎಲ್ಲಿ ನಿಂತ್ಕೋ ಬೇಕು ಎಲ್ಲಿ ಕೂತ್ಕೋ ಬೇಕು ? ಎನ್ನುವುದರ ಪಟ್ಟಿಯನ್ನು  'ಅ' ದಿಂದ 'ಳ' ವರೆಗೆ ಮೊದಲೇ  ತೀರ್ಮಾನಿಸಿ ಬರೆದುಕೊಂಡು, ಅದರ ಪ್ರಕಾರ ಚಾಚೂ ತಪ್ಪದೆ ಹಾಕಿಕೊಂಡ ಬಟ್ಟೆಯ  ಇಸ್ತ್ರಿ ಮುರಿಯದಂತೆ, ಮುಖದ  ಮೇಕಪ್ಪು ಸರಿಯದಂತೆ, ಚಪ್ಪಲಿಗೆ  ಚೂರೂ  ನೋವಾಗದಂತೆ   ಹೋಗಿ ಬರುವ ಪ್ರವಾಸದ ಅನುಭವಗಳಿಗೂ,    ಹೋದಲ್ಲೆಲ್ಲಾ  ಸಿಕ್ಕಷ್ಟೂ  ಅನುಭವಗಳನ್ನು ಕೊಳ್ಳೆ ಹೊಡೆಯುವ ನೇಮಿಚಂದ್ರರ ಕಡಿಮೆ ಖರ್ಚಿನ ಶ್ರೀಮಂತ  ಪ್ರವಾಸ ಕಥನಕ್ಕೂ  ಎಲ್ಲಿಂದೆಲ್ಲಿಯ ಹೋಲಿಕೆ ..?  ಆ ಪೂರ್ಣ ಚಂದ್ರನಿಗೂ ಭೂಮಿಗೂ ಇರುವಷ್ಟು ಅಂತರ ..!!

  ಆಕೆಗೊಂದು ದೀರ್ಘ ಪ್ರಣಾಮ...

Saturday, May 21, 2011

ಚಿಲಿಯ ಕಲಿಗಳು

ಈ ಸಲ ಊರಿಂದ ಬರುತ್ತಿದ್ದಂತೆ  ನಟರಾಜ್   ಪುಸ್ತಕವೊಂದರಿಂದಲೇ ಸ್ವಾಗತಿಸಿದರು...! ಆಶ್ಚರ್ಯ ...! ಏಕೆಂದರೆ ಸಮಯವಿದ್ದಾಗಲೆಲ್ಲಾ ದಿನಪತ್ರಿಕೆ.. ಬ್ಯುಸಿನೆಸ್ ಮ್ಯಾಗಜೀನ್ ಗಳಲ್ಲೇ ಮುಖ ಹುದುಗಿಸಿಕೊಳ್ಳುವ  ಇವರು ಕಥೆ, ಕಾದಂಬರಿ ಇತ್ಯಾದಿಗಳನ್ನು ಮುಟ್ಟಿಯೂ ನೋಡುವುದಿಲ್ಲ. 
ಊಟ, ತಿಂಡಿ  ಹೊತ್ತಿನಲ್ಲಿ, ಕೂತಲ್ಲಿ ನಿಂತಲ್ಲಿ ಇವರದ್ದು ಆ ಪುಸ್ತಕದ್ದೇ ಕಥೆ.. ಇವರ  ಬೈರಿಗೆ ಮೆದುಳನ್ನು  ಕೊರೆದು ಕೊರೆದು ಹಾಕಿತು.ಈ ಪುಸ್ತಕದಲ್ಲಿ ಬರುವ ಬೈರಿಗೆಯಂತೆ..! ಇವರ ತಮ್ಮ ತಂದುಕೊಟ್ಟ ಪುಸ್ತಕ ಓದಿ ಇವರು ಸಿಕ್ಕಾಪಟ್ಟೆ ಪ್ರಭಾವಿತರಾಗಿ ಬಿಟ್ಟಿದ್ದರು. 'ಓದಿದ್ಯನೆ..'    'ಓದಿದ್ಯನೆ..'ಬಿಡುವ ಜಾತಿಯೇ ಅಲ್ಲ.   ನನಗೋ ಮನೆಯನ್ನೆಲ್ಲಾ ಒಮ್ಮೆ ಕ್ಲೀನ್ ಮಾಡುವ ಗಡಿಬಿಡಿ.. 

ಅಂತೂ ಪುಸ್ತಕ ಹಿಡಿದು ಕೂತವಳು ಈ ಪ್ರಪಂಚಕ್ಕೆ ವಾಪಾಸು ಕಾಲಿಟ್ಟಿದ್ದು ಪೂರಾ ಎಲ್ಲರನ್ನೂ ಪಾತಾಳದಿಂದ ಎತ್ತಿ ತಂದ ಮೇಲೆಯೇ..
ಈಗ್ಗೆ ಕೆಲ ತಿಂಗಳ ಮೊದಲು ಟೀವೀ ನ್ಯೂಸ್ ನಲ್ಲಿ ಈ ಕಾರ್ಯಾಚರಣೆಯನ್ನು  ನೋಡಿ 'ಒಹ್ ' ಎಂದು ಉದ್ಘರಿಸಿದ್ದು ಆಮೇಲೆ ಮರೆತಿದ್ದು  ಎಲ್ಲಾ ನೆನಪಾಯಿತು..

ಅದು ''ಚಿಲಿ ಗಣಿ ಸುಖಾಂತ''

ಅದು ದುರಂತವಾಗದಂತೆ ತಡೆಯುವಲ್ಲಿ ಯಾರ್ಯಾರು , ಹೇಗ್ಹೇಗೆ, ಎಷ್ಟೆಷ್ಟು ರೀತಿಯಲ್ಲಿ ಶ್ರಮಿಸಿದರು ಎಂಬುದನ್ನೇ ಕನ್ನಡದಲ್ಲಿ ''ಚಿಲಿಯ ಕಲಿಗಳು'' ಎಂಬ ಪುಸ್ತಕವಾಗಿಸಿ  ನಮ್ಮನ್ನು ರೋಮಾಂಚಿತಗೊಳಿಸಿದವರು 'ಸರೋಜಾ ಪ್ರಕಾಶ್ ರವರು.' 

ದಕ್ಷಿಣ ಅಮೆರಿಕಾದ ಮೆಣಸಿನ ಕಾಯಿ ಆಕಾರದ ಚಿಲಿ ದೇಶದಲ್ಲಿ ನಡೆದ ಐತಿಹಾಸಿಕ ಘಟನೆಯಾದ ಚಿನ್ನಮತ್ತು ತಾಮ್ರದ ಅದಿರನ್ನು ತೆಗೆಯುವ ಸ್ಯಾನ್ ಯೋಸೆ   ಗಣಿಯಲ್ಲಿನ ಭೂ ಕುಸಿತದಿಂದಾಗಿ 2300 ಅಡಿ ಆಳದಲ್ಲಿ  ಸಿಕ್ಕಿ ಹಾಕಿಕೊಂಡ ಮೂವತ್ಮೂರು ಜನ  ಕಾರ್ಮಿಕರನ್ನು  ಅರವತ್ತೊಂಬತ್ತು ದಿನಗಳಲ್ಲಿ ಹೇಗೆ ಸುರಕ್ಷಿತವಾಗಿ ರಕ್ಷಿಸಿದರು? ಅದಕ್ಕೆ ಎಷ್ಟು ಜನ ಶ್ರಮಿಸಿದರು? ಬಳಕೆಯಾದ ಯಂತ್ರಗಳಾವುವು? ವಿಜ್ಞಾನವನ್ನು ಎಷ್ಟು ವ್ಯವಸ್ತಿತವಾಗಿ ಬಳಸಲಾಯಿತು? ಸರಕಾರ ಹೇಗೆ ಸ್ಪಂದಿಸಿತು? ಮಾಧ್ಯಮಗಳು, ಸೇವಾ ಸಂಸ್ಥೆಗಳೂ, ಕಾರ್ಮಿಕರ ಬಂಧುಗಳೂ  ಹೇಗೆ ಕಾರ್ಯಾಚರಣೆ ಮುಗಿಯುವ ವರೆಗೂ ಕಾದರು?  ವಿಶ್ವ ಹೇಗೆ ಪ್ರತಿಕ್ರಿಯಿಸಿತು..?  ಗಣಿಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಹೇಗೆ ಸುರಕ್ಷಿತವಾಗಿ ಕಾಯ್ದಿಡಲಾಯಿತು?
ಈ ಮುಂತಾದ  ಎಲ್ಲ ಪ್ರಶ್ನೆಗಳಿಗೆ  ಸವಿವರವಾಗಿ, ಸರಳವಾಗಿ  ಉತ್ತರಿಸುತ್ತಾ  ಹೋಗುತ್ತಾರೆ ಲೇಖಕಿ.

8.1 c.m ಅಗಲ ಕೊಳವೆಯಲ್ಲಿ 33 ಜನರಿಗೆ ಎರಡು ತಿಂಗಳ ಕಾಲ ಅಗತ್ಯವಿರುವ ಸಾಮಗ್ರಿಗಳನ್ನು ಕಳಿಸಲಾಯಿತು. ಐದು ನೂರಕ್ಕೂ ಹೆಚ್ಚು ಮಂದಿ ತಂತ್ರಜ್ಞರು ಹಗಲಿರುಳೂ ಶ್ರಮಿಸಿದರು.ಕಾರ್ಯಪಡೆಗಳು ಅಂತರ್ಜಾಲದ ಮುಖಾಂತರ ವಿಶ್ವದ ಹಲವಾರು ಪರಿಣತ ತಂತ್ರಜ್ಞರ ಸಹಾಯ, ಸಲಹೆ ಪಡೆದುಕೊಂಡಿತು.ಕಾರ್ಯಪಡೆಯ ಬಳಿ ಭೂ ವಿಜ್ಞಾನಿಗಳ, ಡ್ರಿಲ್ಲರುಗಳ, ಮನೋವಿಜ್ಞಾನಿಗಳ, ವೈದ್ಯರ, ಸಬ್ಮರಿನ್  ತಂತ್ರಜ್ಞರ  ಹೀಗೆ ಅನೇಕ ತಜ್ಞರಿದ್ದರು.
ಮೂರು ಬೃಹತ್ ಬೈರಿಗೆಗಳ ಸಹಯೋಗದಲ್ಲಿ ಮೂರು ಗೇಣು ಅಗಲದ,  ಪಾತಾಳಕ್ಕೆ ಕೊರೆದ ಕಿಂಡಿಯಲ್ಲಿ ಎಂಟಡಿ ಎತ್ತರದ ಸಿಲಿಂಡರಿನಾಕೃತಿಯ  ಪಂಜರ 'ಫೀನಿಕ್ಸ್'  ನ ಮುಖಾಂತರ ಗಂಟೆಗೊಬ್ಬರಂತೆ 33 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲಾಯಿತು.ವಿಜ್ಞಾನದ ಸದುಪಯೋಗದ ಮಹತ್ವಪ್ರಪಂಚಕ್ಕೆ ತಿಳಿಯಿತು.
ಕಾರ್ಮಿಕರು ಗಣಿಯಲ್ಲಿ ಸಿಲುಕಿದ ಸುದ್ದಿ ತಿಳಿಯುತ್ತಿದ್ದಂತೆ ಧಾವಿಸಿದ ಬಂಧುಗಳಿಗೆ ಉಳಿಯಲು  'ಆಶಾ ಶಿಬಿರ' ವನ್ನು ರಚಿಸಲಾಯಿತು.....ಮಕ್ಕಳಿಗಾಗಿ ಅಲ್ಲಿಯೇ ಶಾಲೆ.. ಇತರೆ ಚಟುವಟಿಕೆಗಳಿಗೆ ಅನುಕೂಲತೆಗಳು..ಹೀಗೆ....

ಬರೆದರೆ ಇಡೀ ಪುಸ್ತಕವನ್ನೂ ಬರೆಯುತ್ತಲೇ ಇರಬೇಕಾಗುತ್ತದೆ.  ಅಷ್ಟೊಂದು ವಿಚಾರಗಳಿವೆ..ಎಲ್ಲವೂ ಮುಖ್ಯವಾಗಿಯೇ ಕಾಣಿಸುತ್ತದೆ. 
ಓದುವಾಗ ಆಗಾಗ ಉಮ್ಮಳಿಸಿ ಬರುತ್ತದೆ. ಕಣ್ಣು ಹನಿಗೂಡುತ್ತದೆ.
ಒಂದು ಘಟನೆ -
ಬೈರಿಗೆಗಳ ಮೊಲಕ ಕೊರೆಯುತ್ತಾ ಹೋದಂತೆ ಗಣಿಕುಸಿತದ ಹದಿನೇಳನೆ ದಿನ ಗಣಿಯಲ್ಲಿ  ಸಿಲುಕಿಕೊಂಡ ಕಾರ್ಮಿಕರ ಇರುವು ತಿಳಿಯುತ್ತದೆ. ತಂತಿಯ ಮೂಲಕ ಫೋನ್ ಒಂದನ್ನು 700 m  ಪಾತಾಳಕ್ಕೆ ಇಳಿ ಬಿಡಲಾಗುತ್ತದೆ.ಇತ್ತಕಡೆ  ಗಣಿ ಸಚಿವ ಗೋಲ್ಬೋರ್ನ್  ಅವರೇ ಮಾತಾಡುತ್ತಾರೆ. ಅತ್ತಕಡೆ ಮುಖ್ಯಸ್ಥ ಊರ್ಜುವಾ ..
'ಹೇಗಿದ್ದೀರಾ ಎಲ್ಲಾ' ಎನ್ನುವ ಪ್ರಶ್ನೆಗೆ 'ನಾವೆಲ್ಲಾ ಕ್ಷೇಮವಾಗಿದ್ದೇವೆ. ರಕ್ಷಣೆಗಾಗಿ ಕಾಯುತ್ತಿದ್ದೇವೆ.. ' ಸಚಿವರು  ಮತ್ತೊಂದು ಮಾತಾಡುವ ಮುನ್ನವೇ 'ಸರ್ ಒಂದು ಕ್ಷಣ ನಿಲ್ಲಿ'  ಎನ್ನುತ್ತಾನೆ ಊರ್ಜುವಾ. ಅವಾಕ್ಕಾದ ಸಚಿವರು ಯೋಚಿಸುವಷ್ಟರಲ್ಲಿಯೇ ಚಿಲಿಯ 'ರಾಷ್ಟ್ರಗೀತೆ' ವೃಂದಗಾನದಲ್ಲಿ ಕೇಳಿಸ ತೊಡಗುತ್ತದೆ.!
ಪಾತಾಳದಲ್ಲಿದ್ದ ಎಲ್ಲ ಮೂವತ್ಮೂರು ಜನರೂ ಒಕ್ಕೊರಲಿನಿಂದ ರಾಷ್ಟ್ರಗೀತೆಯನ್ನು ಹಾಡುತ್ತಿದ್ದರು.
 ನೆರೆದಿದ್ದವರ  ಕಣ್ಣು ಮಂಜಾಗಿತ್ತು.
ಓದುತ್ತಾ ಹೋದಂತೆ ನನಗೂ ಮನಸ್ಸು ಆರ್ದ್ರವಾಯಿತು.ಎಂತಾ ದೇಶಾಭಿಮಾನ..!

ನಿಜಕ್ಕೂ ಚಿಲಿಯ ಕಲಿಗಳೇ ಅವರು.
ಅನಿವಾರ್ಯವಾಗಿ ಎಂಬಂತೆ ಓದಲು ಕುಳಿತವಳು ಈಗ ಭಾವನೆಗಳನ್ನು  ತಡೆದುಕೊಳ್ಳಲಾರದೆ  ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಇಂತಾ   ಅಪರೂಪದ ಪುಸ್ತಕವೊಂದನ್ನು ಬರೆದು ಲೋಕಾರ್ಪಣೆಗೈದ ಸರೋಜಾ ಪ್ರಕಾಶ್ ನಿಜಕ್ಕೂ ಅಭಿನಂದನಾರ್ಹರು.

Sunday, December 12, 2010

ಮನಸ್ಸು ಇಲ್ಲದ ಮಾರ್ಗ.

ಇದೊಂದು ಮನಶ್ಯಾಸ್ತ್ರಕ್ಕೆ ಸಂಬಂಧಪಟ್ಟ ಪುಸ್ತಕ.  ಡಾ.ಮೀನಗುಂಡಿ ಸುಬ್ರಹ್ಮಣ್ಯ ಅವರ ಕೃತಿ.


ಸೈಕಾಲಜಿಸ್ಟ್ ಏನೋ ಮಾಡಿ ತಮ್ಮ ''ಮನಸ್ಸನ್ನು '' ಸರಿ ಮಾಡಿ ಬಿಡುತ್ತಾನೆ.ಬದಲಾಯಿಸುತ್ತಾನೆ. ಇದರಿಂದಾಗಿ ತಮ್ಮ ''ಮನಸ್ಸಿನಲ್ಲಿ''ಮತ್ತು ದೇಹದಲ್ಲಾಗುವ ನಕಾರಾತ್ಮಕ ಅನುಭವಗಳು ನಿಲ್ಲುತ್ತವೆ ಎಂಬ ನಿರೀಕ್ಷೆ ಇಟ್ಟುಕೊಂಡು ಅವರ ಬಳಿ ಹೋದ ಮಾನಸಿಕ ಸಮಸ್ಯಾ ವ್ಯಕ್ತಿಗಳಿಗೆ ಅವರು ತೋರಿಸಿದ ''ಮನಸ್ಸು'' ಇಲ್ಲದ ಮಾರ್ಗದ  ಬಗೆಗೆ ಬರೆದ ಪುಸ್ತಕದ ಕುರಿತು ನಿಮ್ಮಲ್ಲೊಂದಿಷ್ಟು ಹೇಳಿಕೊಳ್ಳೋಣ ಅಂತ ...


 ಈ ಪುಸ್ತಕದಲ್ಲಿ   ಸ್ವತಹ ಸೈಕೊಥೆರಪಿಷ್ಟರಾದ ಲೇಖಕರು     ಮನುಷ್ಯನ ಮಾನಸಿಕ ಸ್ಥಿತಿ, ಕಾರಣಗಳು, ಲಕ್ಷಣಗಳು, ಅದರ ಅವ್ಯವಸ್ತೆ, ಅದು ಮುಂದುವರೆಯುವ ರೀತಿ, ಪರಿಣಾಮ [ ಅವರ ಮೇಲೆ ಮತ್ತು ಸಾಮಾಜಿಕವಾಗಿ] ಇವುಗಳನ್ನು ಸೂಕ್ತವಾಗಿ ವಿವರಿಸುತ್ತಾ ಸಮರ್ಪಕವಾದ ಉದಾಹರಣೆಗಳೊಂದಿಗೆ ಸಾಮಾನ್ಯರಿಗೂ ಅರ್ಥವಾಗುವಂತೆ ತುಂಬಾ ಸರಳವಾಗಿ ವಿಶ್ಲೇಷಿಸಿದ್ದಾರೆ.


ಮನೋರೋಗ ಎಂದರೇನು ? ಅವುಗಳ ಬಗೆಗಳು, ಮನೋರೋಗದ ಬಗೆಗೆ ಜನರ ಪೂರ್ವಾಗ್ರಹಗಳೂ, ಮನೋ ಚಿಕಿತ್ಸಕರ ಬಗೆಗೆ ಸಾಮಾನ್ಯರ ಅಭಿಪ್ರಾಯಗಳೂ, ಮನೋಚಿಕಿತ್ಸಕರ ಜವಾಬ್ಧಾರಿ ಇವುಗಳ ಕುರಿತಾಗಿ ಆಕರ್ಷಕವಾಗಿ ಹಾಸ್ಯಭರಿತವಾಗಿ ವಿವರಿಸಿದ್ದಾರೆ.


ಉದಾಹರಣೆಗಳೊಂದಿಗೆ ಅವುಗಳನ್ನು' ಹ್ಯಾಂಡಲ್ ' ಮಾಡಿದ ರೀತಿಯನ್ನು ಓದುತ್ತಿದ್ದರೆ ವೈಜ್ಞಾನಿಕ ಕಾದಂಬರಿಯೊಂದನ್ನು ಓದುತ್ತಿರುವ ಅನುಭವವಾಗುತ್ತದೆ. ಸೈಕೋ ಥೆರಪಿಸ್ಟ್ ಗೆ  ಇರಬೇಕಾದ ಸಮಯಪ್ರಜ್ಞೆಯನ್ನು ಸೂಕ್ಷ್ಮವಾಗಿ ತೋರಿಸುತ್ತಾರೆ.


ಈ ಮನಶ್ಯಾಸ್ತ್ರದ ಸಂಬಂಧವಾಗಿ ಕೆಲಸಮಾಡಿದ ಅನೇಕ ಜನ ಮನಶ್ಯಾಸ್ತ್ರಜ್ನರನ್ನು ಪರಿಚಯಿಸಿದ್ದಾರೆ. ಕೆಲವು  ಮನೋಚಿಕಿತ್ಸೆಯ ವಿಧಾನಗಳನ್ನೂ   ಪರಿಚಯಿಸಿದ್ದಾರೆ.
ಟ್ರಾನ್ಸಾಕ್ಷನಲ್ ಅನಾಲಿಸಿಸ್ [ ಸಂವಾದ  ವಿಶ್ಲೇಷಣೆ ]  ಮತ್ತು  ಅದರ ಕರ್ತೃ  ಎರಿಕ್ ಬರ್ನ್ ಬಗೆಗೆ, ಗೆಸ್ಟಾಲ್ಟ್ ಥಿಯರಿಯ ಬಗೆಗೆ, ಅವುಗಳನ್ನು  ಮನೋಚಿಕಿತ್ಸೆಯಲ್ಲಿ  ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಸರಳವಾಗಿ ಹೇಳಲಾಗಿದೆ. ಮನುಷ್ಯರಾಡುವ  ಆಟಗಳು, ಈಗೋ ಸ್ಟೇಟ್ ಗಳ ಬಳಸುವಿಕೆ ಇವುಗಳನ್ನು ಓದುತ್ತಾ ಹೋದಂತೆ ನಮ್ಮಲ್ಲೇ ನಾವು ಅನೇಕ ವಿಚಾರಗಳನ್ನು, ಬದಲಾವಣೆಗಳನ್ನೂ   ಗುರುತಿಸಿಕೊಳ್ಳಬಹುದಾಗಿದೆ.


ಪೂರಕ, ಮಾರಕ ಮತ್ತು ಅವ್ಯಕ್ತ ಸಂವಾದಗಳನ್ನು ನಾವು ಹೇಗೆ ನಡೆಸುತ್ತೇವೆ..?  ನಮ್ಮ ಅವಶ್ಯಕತೆಗಳೇನು? ಸಿಹಿ ಘಾತ, ಕಹಿಘಾತ ಇವುಗಳನ್ನು ಹೇಗೆ ಪಡೆಯುತ್ತೇವೆ? ನಾವು ಹೇಗೆ ಕಾರಣಗಳನ್ನು ಹುಡುಕುತ್ತಿರುತ್ತೇವೆ.? ಹೇಗೆ ಜವಾಬ್ಧಾರಿಯನ್ನು'' ಮನಸ್ಸಿನ'' ಮೇಲೆ ಹಾಕುತ್ತೇವೆ. ? ಹೇಗೆ ಬದಲಾಗುವುದನ್ನು ತಪ್ಪಿಸಿಕೊಳ್ಳುತ್ತೇವೆ? ನಮ್ಮ ಮನೋವ್ಯಾಪಾರವೇನು?  ಮನಸ್ಸಿನ ಹರಿಕಥೆಯೇನು?ಈ ರೀತಿಯ ಅನೇಕ ಪ್ರಶ್ನೆಗಳಿಗೆ ನಮಗಿಲ್ಲಿ ಉತ್ತರ ದೊರಕುತ್ತದೆ.


''ಮನಸ್ಸು'' ಬದಲಾಗಲು ಸಾಧ್ಯವಿದೆ ಎಂದಾದರೆ ನಮ್ಮ ''ಮನಸ್ಸನ್ನು'' ಯಾರು ಬದಲಾಯಿಸಬೇಕು? ನಾವೆಯೇ ಅಥವಾ ಥೆರಪಿಷ್ಟರೆ ?


ಎಂದು ಪ್ರಶ್ನಿಸುವ ಲೇಖಕರು ಉತ್ತರವನ್ನು  ನಮ್ಮಿಂದಲೇ ಪಡೆಯುತ್ತಾರೆ.  ಯಾವುದನ್ನೂ ಒಪ್ಪಲೇ ಬೇಕೆನ್ನುವ ನಿಭಂಧನೆ ಇಲ್ಲ. ಅದನ್ನೂ ತಮ್ಮ ಥೆರಪಿಯಲ್ಲಿ ವಿವರಿಸುತ್ತಾರೆ.


ತುಂಬಾ ಸುಂದರವಾದ, ಉತ್ಕೃಷ್ಟವಾದ, ಸಂಪತ್ಭರಿತವಾದ ಪುಸ್ತಕವಿದು. ಈ ಪುಸ್ತಕ ನನಗೆ ಎಷ್ಟು  ಉತ್ತೇಜನ ಕೊಟ್ಟಿತೆಂದರೆ ಬಿಎಸ್ಸಿ ಯಲ್ಲಿ  ಪಿ. ಸಿ. ಎಂ. ಓದಿದ ನನಗೆ ಸ್ನಾತಕೋತ್ತರ ಅಭ್ಯಾಸಕ್ಕೆ ಮನಶ್ಯಾಸ್ತ್ರವನ್ನೇ ಆಯ್ದುಕೊಳ್ಳುವಂತೆ ಮಾಡಿತು. ಮನಸ್ಸಿನ ಮತ್ತಷ್ಟು ಮನೋವ್ಯಾಪಾರವನ್ನು ತಿಳಿಯಬೇಕೆನ್ನುವ ಹಂಬಲ ಹುಟ್ಟಿಸಿತು.


ಆಸಕ್ತರು ಖಂಡಿತಾ''ಮನಸ್ಸು ಇಲ್ಲದ ಮಾರ್ಗ '' ಓದಿ. ಆ ಬಗ್ಗೆ ''ಮನಸ್ಸು'' ಮಾಡಿ....!! ಇಂತಹಾ ಅತ್ಯುತ್ತಮ ಕೃತಿಯನ್ನು ಕನ್ನಡಕ್ಕೆ ಕೊಟ್ಟ ಮೀನಗುಂಡಿ ಸುಬ್ರಹ್ಮಣ್ಯ ಅವರಿಗೆ ನನ್ನ ಅನಂತಾನಂತ ವಂದನೆಗಳು.

Wednesday, November 24, 2010

ದುರ್ಗಾಸ್ತಮಾನ

ಈ ನಡುವೆ ನಾನು ಸುಮಾರು ಮುನ್ನೂರು ವರ್ಷಗಳಿಗೂ ಹಿ೦ದೆ ಹೋಗಿದ್ದೆ. 
ಇದ್ಯಾವ ಪೂರ್ವಜನ್ಮದ ಕಥೆ, ಯಾವ ಟೀವೀ ಚಾನಲ್ ನವರ ಕಾರ್ಯಕ್ರಮ ಎ೦ಬ ಸ೦ದೇಹ ನಿಮ್ಮನ್ನಾವರಿಸಬಹುದು. 
ಅದ್ಯಾವುದೂ ಅಲ್ಲ. ಈಗ್ಗೆ ಒ೦ದು ವಾರದಿ೦ದ ತ.ರಾ. ಸುಬ್ಬರಾಯರು ಬರೆದ ''ದುರ್ಗಾಸ್ತಮಾನ''  ಎನ್ನುವ ಕಾದ೦ಬರಿಯಲ್ಲಿ ಕಳೆದುಹೋಗಿದ್ದೆ.
ಅದರ ಪ್ರಭಾವ ಹಾಗಿತ್ತು.


''  ಚಿತ್ರದುರ್ಗದ ಜನರಿಗೆ ಚಿತ್ರದುರ್ಗವೆ೦ದರೆ ಒ೦ದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ; ತಮ್ಮ ಕರುಳಿಗೆ ಹೊ೦ದಿಕೊ೦ಡು ಬೆಳೆದ ಜೀವ೦ತ ವಸ್ತು. ಮದಕರಿ ನಾಯಕನಾದರೂ ಅಷ್ಟೆ- ಇತಿಹಾಸದ ಇದ್ದುಹೋದ ಒಬ್ಬ ಅರಸನಲ್ಲ, ತಮ್ಮ ಜೀವ೦ತ ಆಪ್ತನೆ೦ಟ.   
'  ಚಿತ್ರದುರ್ಗ - ಮದಕರಿನಾಯಕ 'ಎನ್ನುವುದು ಬೇರೆ ಬೇರೆಯಲ್ಲ, ಒ೦ದೇ ಅನ್ನುವ ಅವಿನಾಭಾವ; ದುರ್ಗ ಎ೦ದರೆ ಮದಕರಿ, ಮದಕರಿ ಎ೦ದರೆ ದುರ್ಗ ........’

ಹೀ ಗೆ ಮುನ್ನುಡಿಯನ್ನು ಶುರುಮಾಡುವ ತ.ರಾ.ಸು. ಅವರು ಈ ಐತಿಹಾಸಿಕ ಕಾದ೦ಬರಿಯಲ್ಲಿ  ಚಿತ್ರದುರ್ಗವನ್ನಾಳಿದ ನಾಯಕ ವ೦ಶದ ಕೊನೆಯ ದೊರೆ  ದುರ೦ತನಾಯಕ ಮದಕರಿನಾಯಕನ ಆಳ್ವಿಕೆಯ ಅಷ್ಟೂ ಚಿತ್ರಣವನ್ನೂ ಕಣ್ಣಿಗೆ ಕಟ್ಟುವ೦ತೆ ನಿರೂಪಿಸಿದ್ದಾರೆ.  
ಆತ ಕಾಮಗೇತೀ ವ೦ಶಸ್ತನಾದರೂ ಕೂಡಾ ದೊರೆಯ ಮಗನಲ್ಲ.ಈ ವ೦ಶದ ಮೂಲ ಪುರುಷ ಚಿತ್ರ ನಾಯಕ. ಮಧಿಸಿದ ಆನೆಯೊ೦ದನ್ನು ಎದುರಿಸಿ ಹಿಡಿತಕ್ಕೆ ತ೦ದ ಕಾರಣ ಆತನನ್ನ' ಮದಕರಿ' ಎ೦ಬುದಾಗಿ ಕರೆಯುತ್ತಿದ್ದರು.ಚಿತ್ರನಾಯಕನ ಹೆಸರಿ೦ದ ಚಿತ್ರದುರ್ಗ ಎನ್ನುವ ಹೆಸರು ಬ೦ತು. ಈತನು ಯುದ್ಧದಲ್ಲಿ ಸಾವನ್ನಪ್ಪುತ್ತಾನೆ. ಹಾಗೆಯೇ ಮಕ್ಕಳಿಲ್ಲದ ಈತನ ಮಗನೂ ಕೂಡಾ.


ಕಾಮಗೇತೀ ವ೦ಶದ  ಜಾನಕಲ್ಲಿನ ದಳವಾಯಿ ಬರಮಣ್ಣನಾಯಕನ ಮಗ ಚಿಕ್ಕ ಮದಕರಿ ರಾಜೇ೦ದ್ರ.  ಈತ ಹನ್ನೆರಡು ವರುಷದವನಾಗಿದ್ದಾಗಲೇ  ರಾಜ ಮಾತೆ ಓಬವ್ವ ನಾಗತಿ  ವಾರಸುದಾರರಿಲ್ಲದ  ರಾಜ್ಯಕ್ಕೆಈತನೆ ಸೂಕ್ತ ವಾರಸುದಾರನೆ೦ದರಿತು ಪಟ್ಟಕಟ್ಟುತ್ತಾಳೆ.
ಲೇಖಕರು  ಆತನ ಶೌರ್ಯ, ಸಾಹಸ, ಪ್ರಜ್ಞಾವಂತಿಕೆ, ಮನುಷ್ಯತ್ವ  ಇವೆಲ್ಲವನ್ನೂ ಸೂಕ್ಷ್ಮವಾಗಿ  ಹೆಣೆದಿದ್ದಾರೆ.ದುರ್ಗದ ಬಗೆಗಿನ ಭಕ್ತಿ, ರಾಜಕೀಯ ಪ್ರಕ್ರಿಯೆಗಳೂ, ಆಡಿದ ಮಾತು ತಪ್ಪದಿರುವ ನೇರವ೦ತಿಕೆ. ಪ್ರಜೆಗಳ ಬಗೆಗಿರುವ ಪ್ರೀತಿ, ಧರ್ಮ ಸಹಿಷ್ಣುತೆ, ಜವಾಬ್ಧಾರಿಗಳನ್ನು ತು೦ಬಾ ಜಾಣ್ಮೆಯಿ೦ದ ವಿವರಿಸಿದ್ದಾರೆ. 
ಕಾದ೦ಬರಿ ಓದುತ್ತಾ ಹೋದ೦ತೆ ನಾವು ಆತ್ಮಸ್ಥರಾಗಿ  ಅದರ ಪಾತ್ರಗಳಲ್ಲಿ ಸೇರಿಹೋಗುತ್ತೇವೆ. 
ಪ್ರತಿ ಘಟನೆಯನ್ನೂ, ಮಾತುಗಳನ್ನೂ ಎಲ್ಲಿಯೂ ಕೊರತೆ ತೋರದ೦ತೆ ಜೋಡಿಸಿದ್ದಾರೆ.
ಪಕ್ಕದಲ್ಲಿಯೇ ನಿ೦ತು ಎಲ್ಲವನ್ನೂ ಅವಲೋಕಿಸಿ ಬರೆದಿದ್ದಾರೇನೊ ಎನ್ನುವ೦ತೆ ಪ್ರತಿ ಪದವನ್ನೂ  ಸೂಕ್ಷ್ಮವಾಗಿ   ಕೆತ್ತಿದ್ದಾರೆ. 
ಎಲ್ಲಿಯೂ ಭಾಷೆಯ ಉತ್ಪ್ರೇಕ್ಷೆಯಿಲ್ಲ. ಎಲ್ಲ ವರ್ಗದ ಓದುಗರಿಗೂ ಕುತೂಹಲ ಹುಟ್ಟಿಸುವ೦ತೆ, ವೈಭವೀಕರಣವಿಲ್ಲದೇ ಸರಳವಾಗಿ ಘಟನೆಗಳನ್ನು ಉಲ್ಲೇಖಿಸಿದ್ದಾರೆ.
 ಮದಕರಿಯ೦ತಹಾ ವೀರನೊಬ್ಬ ಹೇಗೆ ಯುದ್ಧದಲ್ಲಿ ನಾಶವಾಗುತ್ತಾನೆ,? ಒಳತ೦ತ್ರಗಳಿಗೆ ಬಲಿಯಾಗುತ್ತಾನೆ,?ಎನ್ನುವುದನ್ನು ವಿಸ್ತಾರವಾಗಿ ತೆರೆದಿಡುತ್ತಾ ಹೋಗುತ್ತಾರೆ.ಹೈದರಾಲಿಯ ಕುತ೦ತ್ರಗಳಿಗೆ ಬಲಿಯಾಗಿ ಜೀವ ಕಳೆದುಕೊಳ್ಳುವ ಸನ್ನಿವೇಶವ೦ತೂ ಓದುಗರಲ್ಲಿ ಭಾವೋದ್ವೇಗವನ್ನು ಉ೦ಟುಮಾಡುತ್ತದೆ.ಪಾತ್ರಗಳಲ್ಲಿರುವ ಜೀವ೦ತಿಕೆ ಎಲ್ಲಿಯೂ ನಿಲ್ಲದ೦ತೆ ಓದಿಸಿಕೊ೦ಡು ಹೋಗುತ್ತದೆ.


ಅನೇಕ ಆಕರ ಗ್ರ೦ಥಗಳನ್ನು ಅಭ್ಯಸಿಸಿ ಬರೆದ  ಒ೦ದು  ಮೇರುಕೃತಿ ಈ ದುರ್ಗಾಸ್ತಮಾನ. 
ಮದಕರಿಯ ಜೀವಾರ್ಪಣೆಯೊ೦ದಿಗೆ ದುರ್ಗಾಸ್ತಮಾನವಾದರೂ ಈ ಕೃತಿಯಿ೦ದಾಗಿ  ಗ೦ಡು ಪಾಳೇಯಗಾರರ ನಾಡು  ಚಿತ್ರದುರ್ಗದ  ಮದಕರಿ ಮತ್ತೆ ಜನಮಾನಸದಲ್ಲಿ ಉದಯಿಸಿದ್ದಾನೆ೦ದರೆ ಉತ್ಪ್ರೇಕ್ಷೆಯಾಗಲಾರದೇನೋ..


ತ.ರಾ.ಸು ಅವರು ದುರ್ಗದ ಬಗೆಗೆ ಇನ್ನೂ ಅನೇಕ ಕಾದ೦ಬರಿಗಳನ್ನು ರಚಿಸಿದ್ದಾರೆ. ಪ್ರತಿಯೊ೦ದೂ ಉತ್ಕೃಷ್ಟ ಕೃತಿಯೇ.
 
ಇದು ಅವರ ಕಾದ೦ಬರಿಯ ಬಗೆಗಿನ ವಿಮರ್ಶೆಯಲ್ಲ.  ಬರೆಯುತ್ತಾ ಹೋದರೆ ಸಾವಿರ ಇದೆ. 
  ಓದಿ ನನಗಿಷ್ಟವಾಯ್ತು. ನನ್ನ ಸಂತೋಷವನ್ನು  ನಿಮ್ಮೊ೦ದಿಗೆ ಹ೦ಚಿಕೊ೦ಡು ಅದನ್ನು ಇನ್ನಷ್ಟು ಹಿಗ್ಗಿಸಿಕೊಳ್ಳುವ ಪ್ರಯತ್ನ ಇದು.


ವ೦ದನೆಗಳು.