ನನ್ನ ಹಿ೦ದಿನ ಪೋಸ್ಟ್ ಓದಿದ ಕೆಲವರಿಗೆ ಈ ' ಅತಿಯಾದ ' ನಿದ್ರೆ, ನಿದ್ರಾ ಹೀನತೆ, ಅತಿಯಾಗಿ ಆಹಾರ ಸೇವಿಸುವುದು ಅಥವಾ ಕಡಿಮೆ ಸೇವಿಸುವುದು ಎಂಬಲ್ಲಿ 'ಅತಿ' ಎಂದರೆ ಎಷ್ಟು ಎಂಬ ಸಮಸ್ಯೆ ಉದ್ಭವಿಸಿರಬಹುದು.
ನಿದ್ರಾಹೀನತೆ [ insomniyaa ] - ಈ ಸಮಸ್ಯೆ ಇರುವವರಲ್ಲಿ ನಿದ್ರೆಯ ಪ್ರಮಾಣ ತುಂಬಾ ಕಡಿಮೆ. ಕಡಿಮೆ ಎಂದರೆ ಒಂದೆರಡು ಘಂಟೆಗಳ ಕಾಲವಲ್ಲ.
ನಿದ್ರೆಯಲ್ಲಿ ಹಂತಗಳು ಬದಲಾಗುತ್ತಾ ಇರುತ್ತವೆ. ನಿದ್ರೆಯ ಹಂತಗಳು ನಾಲ್ಕು.ಸುಮಾರು 90 ರಿಂದ 110 ನಿಮಿಷಗಳ ಚಕ್ರ ಇದು.
೧ - ಮೊದಲನೆಯದು ಜೋಂಪು ಬರುವಿಕೆ. ಇದನ್ನು ಥೀಟಾ ತರಂಗಗಳು ಎನ್ನುತ್ತಾರೆ.
೨ - ಎರಡನೆಯ ಹಂತದಲ್ಲಿ ಕಣ್ಣು ಗೋಳದ ಚಲನೆ ಇರದು ಮತ್ತು ಶ್ವಾಸೋಚ್ವಾಸ ಧೀರ್ಘವಾಗಿರದೇ ಚಿಕ್ಕದಾಗಿರುತ್ತದೆ.ದೇಹದ ಉಷ್ಣತೆಯಲ್ಲಿ ಇಳಿಮುಖವಾಗುತ್ತದೆ.
೩ - ೪ - ಮೂರು ಮತ್ತು ನಾಲ್ಕನೆಯ ಹಂತದಲ್ಲಿ ನಿದ್ರೆ ಗಾಢವಾಗುತ್ತಾ ಹೋಗುತ್ತದೆ. ರಕ್ತದೊತ್ತಡ ಕಡಿಮೆಯಾಗುತ್ತದೆ ಮತ್ತು ಶ್ವಾಸೋಚ್ಚಾಸ ಕ್ರಿಯೆ ನಿಧಾನವಾಗುತ್ತಾ ಹೋಗುತ್ತದೆ.ಈ ಹಂತವನ್ನು ಡೆಲ್ಟಾ ತರಂಗಗಳು ಎನ್ನುತ್ತಾರೆ. ಈ ಹಂತದಲ್ಲಿ ನಿದ್ರಿಸುತ್ತಿರುವ ವ್ಯಕ್ತಿಗಳನ್ನು ಎಬ್ಬಿಸುವುದು ಸ್ವಲ್ಪ ಕಷ್ಟ.
೧,೨,೩,೪ ಹಂತಗಳ ಜೊತೆಗೆ ಇನ್ನೊಂದು ಹಂತವಿದೆ. ಅನಿಯಂತ್ರಿತ ಕಣ್ಣುಗಳ ಚಲನೆಯಲ್ಲಿರುವ ನಿದ್ರಾ ಹಂತ ಅಂದರೆ REM sleep [ rapid eye movement].ನಾಲ್ಕರ ಹಂತದ ನಂತರ ಮತ್ತೆ ಮೂರು, ಎರಡು, ಒಂದು ನಂತರ REM ಹಂತಕ್ಕೆ ಬರುವುದು. ಈ ಹಂತದಲ್ಲಿ ಮೆದುಳು ತುಂಬಾ ಕ್ರಿಯಾಶೀಲವಾಗಿರುತ್ತದೆ ಮತ್ತು ಕನಸುಗಳು ಬೀಳುತ್ತವೆ ಅಲ್ಲದೆ ಬಿದ್ದ ಕನಸುಗಳು ನೆನಪಲ್ಲುಳಿಯುತ್ತವೆ. ಇದು ಮೊದಲ ಹಂತದ ನಿದ್ರೆಯ ನಂತರ ಕಾಣಿಸಿಕೊಳ್ಳುತ್ತದೆ ಮತ್ತು REM ಮುಗಿದಮೇಲೆ ಮೊದಲ ಹಂತದಿಂದ ನಿದ್ರೆ ಮುಂದುವರೆಯುವುದು. ಕೆಲವೊಮ್ಮೆ ಎರಡನೆಯ ಹಂತ ಸಹಾ ಶುರುವಾಗಬಹುದು. ರಾತ್ರಿಯ ಮೊದಲ ಜಾವಗಳಲ್ಲಿ ಕಡಿಮೆ ಸಮಯ ತೆಗೆದುಕೊಳ್ಳುವ ಇದು ಬೆಳಗಿನ ಜಾವದಲ್ಲಿ ಹೆಚ್ಚು ಸಮಯ ತೆಗೆದು ಕೊಳ್ಳುತ್ತದೆ. .ಪ್ರತಿ ರಾತ್ರಿ ಸುಮಾರು ಮೂರರಿಂದ ಐದು ಸಲ ಈ ಅವಸ್ಥೆಗೆ ನಾವು ಜಾರುತ್ತೇವೆ.ವಯಸ್ಸಾದವರಲ್ಲಿ ಈ ಅವಸ್ಥೆ ಹೆಚ್ಚು ಸಮಯ ಇರುತ್ತದೆ.
ಬಾಲ್ಯದಿಂದ ವೃದ್ದಾಪ್ಯದ ವರೆಗೂ ನಿದ್ರೆಯ ಪ್ರಮಾಣ ಇಳಿಮುಖವಾಗುತ್ತದೆ. ಒಬ್ಬ ವಯಸ್ಕನಿಗೆ ದಿನಕ್ಕೆ ಏಳರಿಂದ ಎಂಟು ಘಂಟೆಗಳ ನಿದ್ರೆ ಬೇಕಾಗುತ್ತದೆ. ಕೊಂಚ ಹೆಚ್ಚು ಕಡಿಮೆ ಇರಬಹುದು. ಆದರೆ 'ನಿದ್ರಾಹೀನತೆ' ಇರುವವರಲ್ಲಿ ಆತ ಸಂಪೂರ್ಣವಾಗಿ ನಿದ್ರೆಯ ಎಲ್ಲಾ ಹಂತಗಳನ್ನೂ ಕ್ರಮಿಸಲು ಅಸಮರ್ಥನಾಗುತ್ತಾನೆ. ಮೊದಲ ಹಂತದಲ್ಲಿಯೇ ಇದ್ದು ಹೊರಳಾಡುತ್ತಾ ಇರುತ್ತಾನೆ. ಪದೇ ಪದೇ ಎಚ್ಚರವಾಗುತ್ತದೆ. ಡೆಲ್ಟಾ ತರಂಗಗಳ ಹಂತ ಅಥವಾ ಗಾಢ ನಿದ್ರೆಯ ಅವಸ್ಥೆಯನ್ನು ತಲುಪಲು ಸಾಧ್ಯವಾಗದಿದ್ದಾಗ ಮೆದುಳಿನ ಕ್ರಿಯಾಶೀಲತೆಯಲ್ಲಿ ವ್ಯತ್ಯಾಸವಾಗುತ್ತದೆ. ಅದು ತಿಂಗಳಾನುಗಟ್ಟಲೆ ಮುಂದುವರೆದರೆ ಮೆದುಳಿನಲ್ಲಿ ಬಿಡುಗಡೆಯಾಗುವ ರಾಸಾಯನಿಕಗಳಲ್ಲಿ ವ್ಯತ್ಯಾಸವಾಗಿ ಮಾನಸಿಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.
ನಿದ್ರಾ ಹೀನತೆಯಿರುವವರಿಗೆ ಬೇಗ ನಿದ್ರೆ ಬರದು ಮತ್ತು ಬೇಗ ಎಚ್ಚರಾಗುತ್ತದೆ.ಎಷ್ಟೊತ್ತಿಗೂ ನಿದ್ರೆ ಗೆಟ್ಟವರಂತೆ, ಜಡತ್ವದಿಂದ ಇರುತ್ತಾರೆ. ಏಕಾಗ್ರತೆ ಇರದು. ಸದಾ ಕಿರಿಕಿರಿ ಆದಂತೆನಿಸುತ್ತದೆ. ಕೆಲಸದ ಒತ್ತಡ, ಅನಾರೋಗ್ಯ, ನೋವು ಇವುಗಳಿಂದ ಸರಿಯಾಗಿ ನಿದ್ರಿಸಲಾಗದಿದ್ದಾಗ ಸಮಸ್ಯೆಗಳು ಶುರುವಾಗುತ್ತದೆ.ಇದಕ್ಕೆ ಜೊತೆಗೂಡಿ ಡಿಪ್ರೆಶನ್, ಡಯಾಬಿಟೀಸ್, ರಕ್ತದೊತ್ತಡ ಕೂಡಾ ಬರುವ ಸಾಧ್ಯತೆಗಳು ಇವೆ.
ಅತಿನಿದ್ರೆ ಅಥವಾ ಹೈಪರ್ಸೋಮ್ನಿಯ - ಈ ಸಮಸ್ಯೆ ಇರುವ ವ್ಯಕ್ತಿಗಳು ರಾತ್ರೆಯಿಡೀ ನಿದ್ರಿಸಿದರೂ ಮತ್ತೆ ಮತ್ತೆ ಹಗಲಿನಲ್ಲಿಯೂ ಗಾಢ ನಿದ್ರೆಗೆ ಜಾರುತ್ತಿರುತ್ತಾರೆ. ನಿದ್ರೆಯಿಂದ ಎಬ್ಬಿಸುವುದು ತುಂಬಾ ಕಷ್ಟ. ಕೆಲಸ ಮಾಡುತ್ತಾ ಮಾಡುತ್ತಾ ಇರುವಾಗಲೇ, ಊಟ ಮಾಡುತ್ತಾ ಇರುವಾಗಲೇ.. [ ಓದುತ್ತಿರುವಾಗ ನಿದ್ರೆ ಮಾಡುವವರನ್ನು ಹೊರತು ಪಡಿಸಿ...:) ] ಮಾತನಾಡುತ್ತಾ ಆಡುತ್ತಲೇ, ಕೂತಲ್ಲಿ, ನಿಂತಲ್ಲಿ ನಿದ್ರೆ ಮಾಡತೊಡಗುತ್ತಾರೆ. ನಿದ್ರೆಯ ನಂತರದ ಉಲ್ಲಾಸ ಇರುವುದಿಲ್ಲ. ಉದ್ವೇಗ, ಕಿರಿಕಿರಿ, ಅಸಹನೆ, ಅಶಕ್ತತೆ, ಹಸಿವಿಲ್ಲದಿರುವುದು, ನಿಧಾನ ಪ್ರವೃತ್ತಿ ಮುಖ್ಯ ಲಕ್ಷಣಗಳು.ಮೆದುಳಿನ ಮೇಲೆ ಬಿದ್ದ ಪೆಟ್ಟು, ಅಥವಾ ಕೆಲವು ಔಷಧಗಳ ಅಡ್ಡ ಪರಿಣಾಮಗಳು ಇದಕ್ಕೆ ಕಾರಣವಾಗಬಹುದು.
ಡಿಪ್ರೆಶನ್ ಇದ್ದವರಲ್ಲಿ ಇನ್ಸೋಮ್ನಿಯಾ ಅಥವಾ ಹೈಪರ್ಸೋಮ್ನಿಯ ಯಾವುದಾರೂ ಲಕ್ಷಣಗಳು ಕಾಣಿಸಬಹುದು.
ಇನ್ಸೋಮ್ನಿಯಾ ಸೂಕ್ತ ಔಷಧಗಳಿಂದ ಗುಣವಾಗಬಹುದು. ಆದರೆ ಹೈಪೆರ್ಸೋಮ್ನಿಯ ಜೀವಮಾನವಿಡೀ ಕಾಡುತ್ತದಂತೆ.
ಪ್ರತಿಯೊಂದಕ್ಕೂ ಅದರದ್ದೇ ಆದ ಮಾನದಂಡವಿದೆ. ಬಿ.ಪಿ. ಶುಗರ್ರು, ಎಲ್ಲದಕ್ಕೂ ಇಂತಿಷ್ಟೇ ಪ್ರಮಾಣದಲ್ಲಿರಬೇಕೆಂಬ ಪ್ರಕೃತಿ ನಿಯಮದಂತೆ ನಿದ್ರೆ, ಆಹಾರಸೇವನೆ, ಚಟುವಟಿಕೆಗಳು ಎಲ್ಲಕ್ಕೂ ನಿಯಮ ಮೀರುವಂತಿಲ್ಲ. ಮೀರಿದರೆ ಅದು ಕಾಯಿಲೆಯಾಗುತ್ತದೆ.