Saturday, April 6, 2013

ಮತ್ತದೇ ಹಾಡು ಅದೇ ರಾಗ..

ನಮ್ಮ ಮನೆ ಎದುರಿಗೆ ಎಳನೀರಪ್ಪನ ಮನೆ. ಮನೆಯೆಂದರೆ ಎದುರಿನ ಸೈಟಿನಲ್ಲೊಂದು ಶೆಡ್ಡು. ದಿನಾಲೂ ಬೆಳಗ್ಗೆ  ಇಂತಾ ಹೊತ್ತು ಎಂಬುದಿಲ್ಲ, ಸೈಕಲ್ಲಿನ ಮೇಲೆ ಎಂಟರಿಂದ ಹತ್ತು ಎಳನೀರಿಟ್ಟು ಕೊಂಡು, ಏಳ್ ನೀರ್  ... ಎಂದು  ತಾರಕದಲ್ಲಿ ಕೂಗುತ್ತಾ ಶುರುಮಾಡಿ ಮಂದ್ರದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಾನೆ.. ಆದರೆ ಕೊನೆಯಲ್ಲಿ  ಶಬ್ದ ಸೈಲೆಂಟಾಗಿ ನಿಶ್ಯಬ್ಧವಾಗುತ್ತದೆ.  ಸೈಕಲ್ಲಿನಲ್ಲಿರುವ ಎಳನೀರು ಕಾಯಿಗಳನ್ನು ನೋಡಿದಮೇಲೆ  'ಏಳ್ ನೀ.....' ಎಂದು ಕೂಗುತ್ತಿದ್ದಾನೆಂಬುದು  ಸ್ಪಷ್ಟವಾಗುತ್ತದೆ.
ಎಳನೀರಪ್ಪನಿಗೆ ವಯಸ್ಸು ಸುಮಾರು ಅರವತ್ತರ ಮೇಲಾಗಿರಬಹುದು. ಮದುವೆಯಾದ ಮಗ ಇದ್ದಾನೆ. ಸೊಸೆ ಮಾತ್ರಾ ಮಗನನ್ನು ಬಿಟ್ಟು ಹೋಗಿದ್ದಾಳೆ.  ಎಳನೀರಪ್ಪನ ಹೆಂಡತಿ ಗಾರ್ಮೆಂಟ್ಸ್ ಗೆಲ್ಲೋ ಹೋಗುತ್ತಾಳೆ.ಅವಳಿಗೂ ಸುಮಾರೇ  ವಯಸ್ಸಾಗಿರಬಹುದು.  ದಿನಾಲೂ ಬೆಳಗಾಯಿತೆಂದರೆ ಕಿವಿಗೆ ಕಡ್ಡಿ ಹಾಕುತ್ತಾ ಹೆಗಲ ಮೇಲಿನ ಟವೆಲ್ಲಿನಿಂದ ಆಗಾಗ ಮುಖ ಉಜ್ಜುತ್ತಾ ಕೂತಿರುವ ಎಳನೀರಪ್ಪನ ದರ್ಶನ ನಮಗೆ. ಬೆಳ ಬೆಳಗ್ಗೆ ಅವನ ಹೆಂಡತಿ ತಿಂಡಿ ಮಾಡಿ ಮನೆ ಕೆಲಸ ಪೂರೈಸಿ ಅವನಿಗಷ್ಟು ತಿಂಡಿ ಕೊಟ್ಟು ತಾನೂ ತಿಂದು ಡಬ್ಬಿ ತೆಗೆದುಕೊಂಡು ಹೋಗುವ ವರೆಗೂ ಹೀಗೆಯೇ ಹಲ್ಲು ಕುಕ್ಕುತ್ತಲೋ, ಕಾಲು ನೀವುತ್ತಲೋ ಕುಳಿತಿರುವ ದುಡಿಯುವ ಗಂಡು  ಎಳನೀರಪ್ಪ ಅದ್ಯಾವಾಗಲೋ ಹೋಗಿ ಒಂದಷ್ಟು ಕಾಯಿಗಳನ್ನು ಸೈಕಲ್ಲಿಗೆ ನೇತು ಹಾಕಿಕೊಂಡು ಬರುತ್ತಾನೆ. ಮನೆ ಮುಂದೆಯೇ ನಾಲ್ಕಾರು ಬಾರಿ ಕೂಗಿ ಕೂಗಿ ಪ್ರಚಾರ ಮಾಡುತ್ತಾನೆ.

ಆವತ್ತು  ಬೆಳಗಿನ ಟೀ  ಸಮಯ, ಮಕ್ಕಳಿಗೆ ರಜೆಯಿದ್ದಿದ್ದರಿಂದ ಮಕ್ಕಳಿನ್ನೂ   ಎದ್ದಿರಲಿಲ್ಲ. ಮನೆಯೊಳಗೆ  ಬೆಳಗ್ಗೆಯೇ ಅದೆಂಥಾ ಸೆಖೆ!  ಫ್ಯಾನಿನ ಕೆಳಗೆ ಕುಳಿತರೆ ಟೀ  ಆರಿ ಹೋಗುತ್ತದೆಂದು ಕಿಟಕಿಯ ಪಕ್ಕದಲ್ಲಿ ನಿಂತು  ತೆಳುವಾಗಿ ಬೀಸುವ ಗಾಳಿಯನ್ನು ಆಸ್ವಾದಿಸುತ್ತಾ  ಟೀ  ಹೀರುತ್ತಿದ್ದೆ.  ಕಿಟಕಿಯಲ್ಲಿ ಹೊರಗೆ ನೋಡಿದಾಗ ನಮ್ಮ ಎಳನೀರಪ್ಪನ ಹೆಂಡತಿ ಲಕ್ಷಣವಾಗಿ ತಲೆಸ್ನಾನ ಮಾಡಿ ತಲೆಗೊಂದು ಬಟ್ಟೆ ಸುತ್ತಿಕೊಂಡು ಊದಿನ  ಕಡ್ಡಿಯಿಂದ  ಹೊಸಲಿನ ಮೇಲಿರುವ ಯಾವುದೋ ದೇವರನ್ನು ಪೂಜಿಸುತ್ತಿದ್ದುದು ಕಾಣಿಸಿತು. ಎಳನೀರಪ್ಪ ಯಥಾಪ್ರಕಾರ ಕಿವಿಗೆ ಕಡ್ಡಿ ಹಾಕುತ್ತಾ ಕುಳಿತಿದ್ದ. ಆ ಮನೆಗೆ ಆತ ಬಾಡಿಗೆಗೆ ಬಂದ  ಹೊಸತು. ನನಗಾದರೋ ಮಕ್ಕಳನ್ನು ಶಾಲೆಗೆ  ಕಳಿಸುವ ಬೆಳಗಿನ ಧಾವಂತವಿರಲಿಲ್ಲ.  ನೋಡುತ್ತಾ ನಿಂತೆ.

ಪೂಜೆ ಮಾಡಿ ಎಳನೀರಪ್ಪನ ಮಡದಿ   ಒಳಗಿನಿಂದ  ಹರಿವಾಣದಲ್ಲಿ ಒಡೆದ ತೆ೦ಗಿನ ಕಾಯಿ, ಹೂ ಮತ್ತೆ೦ತದೋ ಪ್ರಸಾದವನ್ನು ಇಟ್ಟುಕೊ೦ಡು ಬ೦ದು ಗ೦ಡನ ಕೈಲಿ ಕೊಟ್ಟು ಕಾಲಿಗೆ ಭಕ್ತಿಯಿ೦ದ  ನಮಸ್ಕರಿಸಿದಳು.  ಎಳನೀರಪ್ಪ ಕೈಯಲ್ಲಿದ್ದ ಕಡ್ಡಿ ಒರೆಸಿ ಪಕ್ಕಕ್ಕಿಟ್ಟು , ಅವಳ ಹಣೆಗೆ ಕು೦ಕುಮ ಹಚ್ಚಿ  ಹೆರಳಿಗೆ  ಹೂ ಮುಡಿಸಿದ.ಮೇಲು ನಕ್ಕ.  ಪ್ರೀತಿಗೆ ಬಡತನವೇನೂ ಸಿರಿತನವೇನೂ..? ನೋಡುತ್ತಿದ್ದ ನನಗೆ ಮನಸ್ಸು ಮುದವಾಯಿತು. ಅವಳ ಮುಖದಲ್ಲಿ ಅದೆ೦ತದೋ ಕಳೆ.  ಎಳನೀರಪ್ಪ ಪ್ರಸಾದವನ್ನ ತಾನೊ೦ಚೂರು ಬಾಯಿಗೆ ಹಾಕಿಕೊ೦ಡು  ಅವಳಿಗೊ೦ಚೂರು ಕೈಗೆ ಹಾಕಿದ.  ಕುಕ್ಕರುಗಾಲಿನಲ್ಲಿ ಕುಳಿತು ಎರಡೂ ಕೈಗಳಲ್ಲಿ ಪ್ರಸಾದವನ್ನು  ಕಣ್ಣಿಗೊತ್ತಿಕೊ೦ಡು ಬಾಯಿಗೆ ಹಾಕಿಕೊ೦ಡಳು.  ನನಗೆಲ್ಲೊ  ''ಬಡವನಾದರೆ ಏನು ಪ್ರಿಯೆ ಕೈತುತ್ತೂ  ತಿನಿಸುವೆ ”  ಎ೦ದು ರಾಜು ಅನ೦ತ ಸ್ವಾಮಿ ಹಾಡಿದ೦ತಾಯ್ತು.

ಕೆಲಸದವಳು ಬಂದಾಗ ಈ ವಿಚಾರ ಹೇಳಿದೆ..'ಪಾಪ ಕಣೆ,' ಅಂತಾ ಎಕ್ಸ್ಟ್ರಾ ಸೇರಿಸಿದೆ.  ಅವಳು ಕೇಳಿದ್ದೇ  ಮುಸಿ ಮುಸಿ ನಕ್ಕಳು. ''ಅಕ್ಕೋ ಅವ್ನ ಸುದ್ದಿ ಯಾಕೆ, ಎರಡು ಹೆಂಡ್ರಂತೆ ಅವನಿಗೆ.  ಇಲ್ಲೋಬ್ಳು,  ಊರಲ್ಲೋಬ್ಳು  ಇಲ್ಲಿ ಜಗಳ ಮಾಡ್ಕೊಂಡು ಅಲ್ಲಿಗೆ, ಅಲ್ಲಿ ಜಗಳ ಮಾಡ್ಕೊಂಡು ಇಲ್ಲಿಗೆ ಹೋಗ್ತಾನೆ ಇರತ್ತೆ ಸವಾರಿ.  ಸಾಯಂಕಾಲ ನೋಡು ಗೊತ್ತಾಗತ್ತೆ,''  ಅಂತ ಮತ್ತಷ್ಟು ನಕ್ಕಳು.

ಏನೋ  ನನಗೆ ನನ್ನ ಕೆಲಸದಲ್ಲಿ ಅವತ್ತು  ಮರೆತು ಹೊಯಿತು.  

ಮತ್ತೆ ಒಂದೆರಡು ದಿನ ಕಳೆದು ಒಂದಿನ ರಾತ್ರೆ ಸಿಕ್ಕಾಪಟ್ಟೆ ಸೆಖೆ, ಮಳೆ ಬರುತ್ತೇನೋ ಅನ್ನುವಂತೆ  ಆಗಾಗ ಮಿಂಚು, ಗುಡುಗು, ಹೊರಗಡೆ ಒಂದೇ ಸಮನೆ  ಬೀದಿ ನಾಯಿಗಳ ಕೂಗಾಟ.    
ಸೆಖೆ ಅಂದರೆ ಯಮಸೆಖೆ, ಫ್ಯಾನ್ ಹಾಕಿದರೆ ಅದೂ ಬಿಸಿ ಗಾಳಿ. ಕಣ್ಣು ತೆರೆದು ಕುಳಿತರೆ ಕಣ್ಣನೀರ   ಪಸೆಯಷ್ಟೂ ಆವಿಯಾಗಿ  ಬಿಡುವುದೇನೋ ಎಂಬಂತೆ ಕಣ್ಣು ಉರಿ. ಕಿಟಕಿಯ ಬಾಗಿಲು ತೆರೆದು ಸ್ವಲ್ಪ ಗಾಳಿಗೆ ಮುಖವೊಡ್ಡಲು ಪ್ರಯತ್ನಿಸಿದೆ.  ಬೀದಿಯಲ್ಲಿ ಕರೆಂಟು ಕೂಡಾ ಹೋಗಿತ್ತು.  ಮಳೆ ಬರುವ ಲಕ್ಷಣಗಳಿದ್ದುದರಿಂದ ಆಕಾಶವೂ   ಕಪ್ಪು  ಕಾರ್ಗತ್ತಲು.
ಎದುರಿನ ಶೆಡ್ಡಿನಲ್ಲಿ ಇಬ್ಬರು ಜೋರಾಗಿ ಬೈದುಕೊಳ್ಳುವ ಶಬ್ಧ.. ಯಾರೆಂದು ತಿಳಿಯಲಿಲ್ಲ.  ಮಿಂಚು ಹೊಡೆದಾಗ  ಪಕ್ಕನೆ ಎಳನೀರಪ್ಪನ ಮುಖ ಕಾಣಿಸಿತು. ಅವನ ಹೆಂಡತಿಯ ಜುಟ್ಟು ಹಿಡಿದು ರಪ ರಪ ಬಡಿಯುತ್ತಿದ್ದ.  ಯಾವುದೋ ಕೇಳಲಾಗದ ಭಾಷೆಯಲ್ಲಿ ಬೈಯ್ಯುತ್ತಿದ್ದ. ಚೆನ್ನಾಗಿ ಕುಡಿದಿದ್ದನೆಂದು  ತೋರುತ್ತದೆ.  ತೂರಾಡುತ್ತಿದ್ದರೂ ಸಮಾ  ಬಡಿಯುತ್ತಿದ್ದ. ಅಷ್ಟೊತ್ತಿಗೆ ಅವನ ಮಗ ಶೆಡ್ ಒಳಗಿನಿಂದ ಬಂದವನೇ ತಾಯಿಯನ್ನು ಬಿಡಿಸಿ ಅಪ್ಪನಿಗೆ ಮುಖ ಮೂತಿ ನೋಡದೆ ಭಾರಿಸಲು ಶುರು ಮಾಡಿದ. ಅಂತೂ ತಪ್ಪಿಸಿಕೊಂಡ ಎಳನೀರಪ್ಪನ ಹೆಂಡತಿ ಆಚೆ ಕುಕ್ಕರಿಸಿ ಸುಧಾರಿಸಿಕೊಳ್ಳುತ್ತಿದ್ದವಳು   ಕೆಲ ನಿಮಿಷ ಬಿಟ್ಟು ಒಳ ಹೋಗಿ ಬಿಂದಿಗೆಯಲ್ಲಷ್ಟು ನೀರು ತಂದು ಅವನಿಗೆ ಎರಚಿದಳು. ಮಗ ಹೊಡೆಯುತ್ತಲೇ ಇದ್ದ.

ಎಳನೀರಪ್ಪನ ಹೆಂಡತಿ ತಾನು  ಹೊಡೆಸಿಕೊಂಡರೂ ಈಗ,  ''ಸಾಕು ಬಿಡೋ ಸಾಕು ಬಿಡೋ,''ಎಂದು ಮಗನನ್ನು ತಡೆಯಲು ಬಂದಳು. ಮಗ ಕೇಳದಿದ್ದಾಗ ''ನಿನ್ನ ದಮ್ಮಯ್ಯ ಬಿಟ್ಬಿಡೋ ಹೊಡಿಬೇಡ,'' ಎಂದು ಅಂಗಲಾಚ ತೊಡಗಿದಳು. ನೋಡುತ್ತಿದ್ದ ನಮಗೆ ಸಂಕಟವಾಯಿತು.

ಮತ್ತೆ ಬೆಳಿಗ್ಗೆ ಏನೂ ಆಗಲೇ ಇಲ್ಲವೆಂಬಂತೆ ಎಳನೀರಪ್ಪ ಕಾಲು ನೀವಿಕೊಳ್ಳುತ್ತಾ  ಕುಳಿತಿದ್ದ. ಹೆಂಡತಿ ತಿಂಡಿ ಕಟ್ಟುತ್ತಿದ್ದಳು...ಮತ್ತದೇ ಹಾಡು ಅದೇ ರಾಗ..  ಸಂಜೆಯಾಗುತ್ತಲೂ ಅದೇ ತಾಳ..!

ಎಷ್ಟು ಕಾನೂನುಗಳು ಬಂದರೂ, ಎಷ್ಟು ಮಹಿಳಾ ದಿನಾಚರಣೆಗಳು ಆಚರಿಸಿಕೊಂಡರೂ ಕುಡುಕ ಗಂಡನ ಹೆಂಡತಿ ಹೀಗೆಯೇ ಇರುತ್ತಾಳೆ, ಹೆಂಡದಂಗಡಿ ಇರುವ  ತನಕ.  ...!!


Wednesday, April 3, 2013

ಬೇರಿನಲ್ಲೇನಿದೆ ಮಹಾ..!!

ಬಸ್ಸಿಳಿದು ಮನೆಗೆ ಬರುವ ದಾರಿಯಲ್ಲಿ  ಅಪ್ಪಯ್ಯನ ಜೊತೆ ಹೆಜ್ಜೆ ಹಾಕುವುದೆಂದರೆ ಅದು ಓಟಕ್ಕೆ ಸಮ.ದಾಪುಗಾಲಿಡುತ್ತಾ ಹೋಗುತ್ತಿರುವ  ಅಪ್ಪಯ್ಯನನ್ನು  ರಸ್ತೆಯ ಪಕ್ಕದ ಇಳಿಜಾರಿನ ದರೆಯಲ್ಲಿ ಚಾಚಿಕೊಂಡಿರುವ ಒಣ  ಮರದ ಬೇರೊಂದು ತಡೆದು ನಿಲ್ಲಿಸಿಬಿಡುತ್ತಿತ್ತು.    ನಾನು  ಓಡುತ್ತಾ  ಬಂದು ''ಯಂತಾ ಅಪ್ಯಾ ...'' ಎನ್ನುವ ಹೊತ್ತಿಗೆ ಅಪ್ಪಯ್ಯನ ತಲೆಯಲ್ಲೊಂದು ಆಕಾರ ಕುಣಿಯುತ್ತಿರುತ್ತಿತ್ತು. ''ಈ ಬೇರು ನೋಡಿದ್ಯಾ..  ಯಂತ್ ಕಂಡಂಗೆ  ಕಾಣ್ತು  ಹೇಳು ನೋಣ.....'' ಎನ್ನುತ್ತಾ ನಮ್ಮ ಕಲಾಪ್ರಜ್ನೆಗೆ ಸವಾಲು ಹಾಕುತ್ತಿದ್ದ. ಬೇರಿಗೆ ಮೊದಲ ಸಾಮ್ಯತೆ ಹಾವಾಗಿದ್ದರಿಂದ ''ಹಾವು ಮಾಡ್ಳಕ್ಕನಾ ಇದ್ರಲ್ಲಿ,?'' ಎನ್ನುತ್ತಾ  ನಾನೂ  ಅದರ ಹಾವ ಭಾವ ಪರಿಶೀಲಿಸುತ್ತಿದ್ದೆ. ''ಆನೆ ಸೊಂಡ್ಲಿದ್ದಂಗೆ ಇಲ್ಯನೇ,'' ಎನ್ನುತ್ತಾ ಅಪ್ಪಯ್ಯ  ''ಬಾ ಹೋಪನ''ಎನ್ನುತ್ತಾ ಕರೆದೊಯ್ಯುತ್ತಿದ್ದ. ಸಾಯಂಕಾಲದ ಹೊತ್ತಿಗೋ, ಮರುದಿನವೋ ಕತ್ತಿ  ತಂದು ಅದನ್ನು ನಿಧಾನಕ್ಕೆ ಬಿಡಿಸಿಕೊಂಡು ಮನೆಗೆ ತಂದು ಬಿಸಿನೀರಲ್ಲಿ ನೆನೆಸಿಟ್ಟು ಅದರ ತೊಗಟೆ ಬಿಡಿಸುವ ಯತ್ನದಲ್ಲಿರುತ್ತಿದ್ದ.ಅದನ್ನು ಒಣಗಿಸಿ ಅದನ್ನು ತಿದ್ದಿ ತೀಡಿ,  ಮರಳು ಪೇಪರ್ ಹಾಕಿ ಉಜ್ಜಿ, ಅದಕ್ಕೆ ಪಾಲಿಷ್  ಹಾಕಿ  ಅದರ ಅಸ್ಪಷ್ಟ ರೂಪಕ್ಕೊಂದು  ಸುಂದರ ರೂಪವನ್ನು ತೆರೆದಿಡುತ್ತಿದ್ದ. 

 ಅಪ್ಪಯ್ಯನ ಈ ಕಾಷ್ಠ ಶಿಲ್ಪದ ಪ್ರೇಮ ಬೆಳೆಯಲು ಪ್ರಾರಂಭವಾಗಿದ್ದು ಸುಮಾರು ಅವನ ಮಧ್ಯ ವಯಸ್ಸಿನ ನಂತರ.  ನಮಗೆಲ್ಲಾ ಪಾಠ ಕಲಿಸಿದ ನಮ್ಮೂರ ಪ್ರಾಥಮಿಕ ಶಾಲೆಯ ಮೇಷ್ಟರು   ಈ ರೀತಿಯ ಬೇರು ನಾರುಗಳ ಶಿಲ್ಪಗಳನ್ನು ಮಾಡುವ ಹವ್ಯಾಸದವರಾಗಿದ್ದರು. ಅಪ್ಪಯ್ಯನಿಗೆ ಯಾವುದನ್ನಾದರೂ ಮಾಡಬೇಕೆಂದು  ತಲೆಗೆ ಹೊಕ್ಕಿತೆಂದರೆ ಶತಾಯ ಗತಾಯ ಅದನ್ನು ಮಾಡಿಯೇ ಸಿದ್ಧ..  ಹೀಗೆ ಸುಮ್ಮನೆ ಯಾವುದೋ ಬೇರೊಂದನ್ನು ತಂದು ಅದನ್ನು ಕೆತ್ತಿ ಹಾವಿನ ರೂಪ ಕೊಟ್ಟ.  ಅಲ್ಲಿಂದ  ದಿನಗಳೆದಂತೆ ಅಪ್ಪಯ್ಯನ ಆಸಕ್ತಿ ಹೆಚ್ಚಾಗುತ್ತಲೇ ಹೊಯಿತು. ಒಂದಾದ ಮೇಲೊಂದರಂತೆ , ಕಂಡ ಕಂಡ ಒಣ ಮರಗಳನ್ನೆಲ್ಲಾ ಪರಿಶೀಲಿಸಿ ಬೇರು ಹುಡುಕುವುದೂ,   ಅದಕ್ಕೊಂದು ರೂಪ ಕೊಡುವುದೂ ನಿತ್ಯದ ಕೆಲಸವಾಯಿತು. ಅದಕ್ಕೆಂದೇ ಚಿಕ್ಕ ದೊಡ್ಡ ಚಾಣ, ಉಳಿ, ಈ ತರದ ಹತಾರಗಳನ್ನೆಲ್ಲಾ ಕೊಂಡು ತಂದು  ಮಧ್ಯ ರಾತ್ರಿಯ ವರೆಗೂ ಕೆತ್ತಿ ಉಜ್ಜಿ  ತಿರುಗಿಸಿ ಮುರುಗಿಸಿ ನೋಡುತ್ತಾ ಮನಸ್ಸಿನಲ್ಲಿಯೇ ಸಮಾಧಾನ ಪಡುತ್ತಿದ್ದ.    ನಾವೂ ಅಪ್ಪಯ್ಯನ ಪಕ್ಕ ಕುಕ್ಕರುಗಾಲಲ್ಲಿ  ಕುಳಿತುಕೊಂಡು  ಈ ಕೆಲಸಗಳನ್ನೆಲ್ಲಾ ನೋಡುತ್ತಿದ್ದೆವು. ಮೊದಮೊದಲಿಗೆ ಅದೇನು ಆಕಾರ ತಳೆಯುತ್ತದೆ ಅನ್ನುವುದು ನಮ್ಮ ಕಲ್ಪನೆಗೆ ನಿಲುಕುತ್ತಿರಲಿಲ್ಲ.  ಇದು ಅದರ ಹಾಗೆ ಕಾಣುತ್ತೆ, ಇದರ ಹಾಗೆ ಕಾಣುತ್ತೆ ಅನ್ನುತ್ತಾ ಸುಳ್ಳು ಸುಳ್ಳೇ  ಲೆಕ್ಕಾಚಾರ  ಹಾಕುತ್ತಿದ್ದೆವು.ಕೊನೆ ಕೊನೆಗೆ ರೂಪ ಸ್ಪಷ್ಟವಾಗುತ್ತಾ ಬಂದಂತೆ 'ಹೌದಲ್ವಾ, ನಮಗೆ ಗೊತ್ತೇ ಆಗ್ಲಿಲ್ಲ 'ಅನ್ನುತ್ತಾ ಪೆಚ್ಚುನಗು ಬೀರುತ್ತಿದ್ದೆವು.   ಕಲಾವಿದನಿಗಷ್ಟೇ ಗೊತ್ತು ಕಲೆಯ ಮರ್ಮ..!  ಸುಮ್ಮನೇ  ನೋಡಿದರೆ ಈ ಬೇರಿನಲ್ಲೇನಿದೆ  ಮಹಾ ಅನ್ನಿಸಿಬಿಡುತ್ತೆ..  ಬೇರು ಹುಡುಕಿದ್ದು, ಅದಕ್ಕೆ  ಸಂಸ್ಕಾರ ಕೊಟ್ಟಿದ್ದು,    ಕೊನೆಗೆ  ಕಲ್ಪನೆಗೆ ತಕ್ಕ ರೂಪು ತಾಳಲು ಮಾಡಿದ  ಶತಪ್ರಯತ್ನ,  ಇವೆಲ್ಲದರ ಕಥೆ  ಅಪ್ಪಯ್ಯನ ಬಾಯಲ್ಲೇ ಕೇಳಲು  ಚಂದ!


ಕೆಲವು ರೂಪಾಂತರಗೊಂಡ  ಬೇರುಗಳು 

 ಹಾವುಗಳು  ಮತ್ತು ಮುಂಗುಸಿ .. 


 ಆನೆ ಮುಖ 

 ಕೆಂಬೂತ ಮತ್ತು ನವಿಲು 

 ಕ್ರಿಕೆಟ್ ಬೌಲರ್ 

 ಪೀರ್ ಸಾಬ್  ಮತ್ತು ಮಹಮ್ಮದ್ ಸಾಬ್ 

 ನರ್ತಕಿ 


    ಅಪ್ಪಯ್ಯ ಮತ್ತು ಅವನ  ಕಾಷ್ಠ ಶಿಲ್ಪಗಳನ್ನು ಒತ್ತಾಯಪೂರ್ವಕವಾಗಿ ಚಿತ್ರಿಸಿದ್ದು.. [ ಈಗ ಯಂಗೆ ಪುರ್ಸೋತ್ತಿಲ್ಲೇ,  ಕಡಿಗೆ  ಫೋಟೋ ತೆಗಿಲಕ್ಕು  ಎನ್ನುವ ಅಪ್ಪಯ್ಯನನ್ನು ಹಿಡಿದು ಕೂರಿಸಿದ್ದು  ಹೀಗೆ ...:)   ] 


ಈಗೀಗ ಈ ಬೇರುಕೆತ್ತುವ ಕೆಲಸ  ಸ್ವಲ್ಪ ಕಡಿಮೆಯಾಗಿದೆ. ವಯಸ್ಸಿನ ಕಾರಣದಿಂದ ಹಾಗೂ ಆರೋಗ್ಯದ ಕಾರಣದಿಂದ ತುಂಬಾ ಹೊತ್ತು ಕುಳಿತುಕೊಳ್ಳಲು ಕಷ್ಟ .  ಆದರೂ  ಊರಿಗೆ  ಹೋದಾಗೆಲ್ಲಾ, ''ಇದೊಂದು ಹೊಸಾದು ನೋಡಿದ್ಯನೇ,'' ಅನ್ನುತ್ತಾ ಹೊಸದೊಂದು ಆಕೃತಿಯನ್ನು ತೋರಿಸುತ್ತಾನೆ ಅಪ್ಪಯ್ಯ..!

ವಂದನೆಗಳು

 .