Tuesday, November 30, 2010

ಬ್ಲಾಗಿನ ಎಲ್ಲೆಯನ್ನೂ ಮೀರಿ.

ಚಿತ್ತಾರದೂರಿನ ಬಂಧುಗಳೇ ..

ನನ್ನ ಬ್ಲಾಗಿನ ಚಟುವಟಿಕೆಗಳನ್ನು ಸದಾ ಪ್ರೋತ್ಸಾಹಿಸುವವರು ನೀವು. 
ನನ್ನ ಸಂತೋಷವನ್ನಿಷ್ಟು ನಿಮ್ಮಲ್ಲಿ ಹಂಚಿಕೊಳ್ಳುವಾಸೆ.
ಚುಕ್ಕಿಚಿತ್ತಾರ ಬ್ಲಾಗ್ ತನ್ನ ಎಲ್ಲೆಯನ್ನು ವಿಸ್ತರಿಸಿ  ಉದಯವಾಣಿ ಪತ್ರಿಕೆಯಲ್ಲಿ ಕಾಣಿಸಿಕೊಂಡಿದೆ.
ಬರೆಯುವುದನ್ನು  ಬ್ಲಾಗಿನಲ್ಲಿಯೇ ಕಲಿತವಳು ನಾನು.ಅಲ್ಲಿಯವರೆಗೆ ನೆಟ್ಟಗೆ ಪತ್ರ ಬರೆಯುವುದೂ ಗೊತ್ತಿರಲಿಲ್ಲ. ಬರೆದದ್ದು ಏನು ಎನ್ನುವುದರ ಬಗ್ಗೆ ಸಂಶೋಧನೆಯೇ ಬೇಕಾಗುತ್ತಿತ್ತು ಈ ಮೊದಲು. ಬರೀ ಚಿತ್ರ ಬರೆಯುವುದೂ, ಪುಸ್ತಕಗಳನ್ನು   ಓದುವುದೂ, ಅದೂ ಇದೂ ಕಸೂತಿ ಕೈಗಾರಿಕೆ ಮಾಡುವುದರಲ್ಲೇ ನನ್ನ ಕೆಲಸ ಸೀಮಿತವಾಗಿತ್ತು.ನಾನು ಬರೆದದ್ದರ ಬಗ್ಗೆ ನನಗೆ ಭರವಸೆಯಿರಲಿಲ್ಲ.   ನನ್ನ ಬ್ಲಾಗಿನ ಬರಹಗಳನ್ನು ಓದಿ, ಬರೆಯಲು ಹೆಚ್ಚಿನ ಉತ್ಸಾಹ ತುಂಬಿದವರು ನೀವು..
ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.




ಇನ್ನೊ೦ದು ಸಂತೋಷದ ಸಂಗತಿಯೆಂದರೆ ವಿಜಯಕರ್ನಾಟಕ ಪತ್ರಿಕೆಯ ಲವಲವಿಕೆಯಲ್ಲಿ ನಾನು ಬರೆದ ಲೇಖನವೊಂದು ಪ್ರಕಟವಾದದ್ದು.ದಿನಾಂಕ 29-11-2010   ರಂದು ಪ್ರಕಟಣೆಗೊಂಡ  ''ಮಲೆನಾಡಿನಲ್ಲಿ ಈಗ ಯಂತ್ರಗಳದ್ದೆ ಸದ್ದು ಎನ್ನುವ ಲೇಖನ''.   ನನಗೆ ಬರೆಯುವಲ್ಲಿ ಹೆಚ್ಚಿನ ಆತ್ಮವಿಶ್ವಾಸ ತಂದುಕೊಟ್ಟಿದೆ.  ಕೇವಲ ಬ್ಲಾಗಿಗೆ ಸೀಮಿತವಾದ ನನ್ನ ಬರಹ ಪತ್ರಿಕೆಯೊಂದರಲ್ಲಿ ಕಾಣಿಸಿಕೊಳ್ಳಲು ಕಾರಣ ಶ್ರೀಶಂ ಬ್ಲಾಗಿನ ರಾಘವೇಂದ್ರ ಶರ್ಮರು.ಲೇಖನದ ಸಂಸ್ಕರಣೆ ಮತ್ತು ಮಾಧ್ಯಮದ ಸಂಸ್ಕಾರ ಎರಡೂ ಹೇಳಿಕೊಟ್ಟು ಪತ್ರಿಕೆಗೆ ಕಳುಹಿಸಲು ಪ್ರೇರಣೆ ಕೊಟ್ಟಿದ್ದು ರಾಘಣ್ಣ. ಅವರಿಗೆ ನನ್ನ ಹೃತ್ಪೂರ್ವಕ ನಮನಗಳು.
http://www.vijaykarnatakaepaper.com/pdf/2010/11/29/20101129l_003101001.pdf


ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರ ಸದಾ ಇರಲಿ. ನಿಮ್ಮೆಲ್ಲರ ಪ್ರೀತಿಗೆ, ವಿಶ್ವಾಸಕ್ಕೆ, ಆತ್ಮೀಯತೆಗೆ ಸದಾ ಋಣಿ.

ವಂದನೆಗಳು.


Wednesday, November 24, 2010

ದುರ್ಗಾಸ್ತಮಾನ

ಈ ನಡುವೆ ನಾನು ಸುಮಾರು ಮುನ್ನೂರು ವರ್ಷಗಳಿಗೂ ಹಿ೦ದೆ ಹೋಗಿದ್ದೆ. 
ಇದ್ಯಾವ ಪೂರ್ವಜನ್ಮದ ಕಥೆ, ಯಾವ ಟೀವೀ ಚಾನಲ್ ನವರ ಕಾರ್ಯಕ್ರಮ ಎ೦ಬ ಸ೦ದೇಹ ನಿಮ್ಮನ್ನಾವರಿಸಬಹುದು. 
ಅದ್ಯಾವುದೂ ಅಲ್ಲ. ಈಗ್ಗೆ ಒ೦ದು ವಾರದಿ೦ದ ತ.ರಾ. ಸುಬ್ಬರಾಯರು ಬರೆದ ''ದುರ್ಗಾಸ್ತಮಾನ''  ಎನ್ನುವ ಕಾದ೦ಬರಿಯಲ್ಲಿ ಕಳೆದುಹೋಗಿದ್ದೆ.
ಅದರ ಪ್ರಭಾವ ಹಾಗಿತ್ತು.


''  ಚಿತ್ರದುರ್ಗದ ಜನರಿಗೆ ಚಿತ್ರದುರ್ಗವೆ೦ದರೆ ಒ೦ದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ; ತಮ್ಮ ಕರುಳಿಗೆ ಹೊ೦ದಿಕೊ೦ಡು ಬೆಳೆದ ಜೀವ೦ತ ವಸ್ತು. ಮದಕರಿ ನಾಯಕನಾದರೂ ಅಷ್ಟೆ- ಇತಿಹಾಸದ ಇದ್ದುಹೋದ ಒಬ್ಬ ಅರಸನಲ್ಲ, ತಮ್ಮ ಜೀವ೦ತ ಆಪ್ತನೆ೦ಟ.   
'  ಚಿತ್ರದುರ್ಗ - ಮದಕರಿನಾಯಕ 'ಎನ್ನುವುದು ಬೇರೆ ಬೇರೆಯಲ್ಲ, ಒ೦ದೇ ಅನ್ನುವ ಅವಿನಾಭಾವ; ದುರ್ಗ ಎ೦ದರೆ ಮದಕರಿ, ಮದಕರಿ ಎ೦ದರೆ ದುರ್ಗ ........’

ಹೀ ಗೆ ಮುನ್ನುಡಿಯನ್ನು ಶುರುಮಾಡುವ ತ.ರಾ.ಸು. ಅವರು ಈ ಐತಿಹಾಸಿಕ ಕಾದ೦ಬರಿಯಲ್ಲಿ  ಚಿತ್ರದುರ್ಗವನ್ನಾಳಿದ ನಾಯಕ ವ೦ಶದ ಕೊನೆಯ ದೊರೆ  ದುರ೦ತನಾಯಕ ಮದಕರಿನಾಯಕನ ಆಳ್ವಿಕೆಯ ಅಷ್ಟೂ ಚಿತ್ರಣವನ್ನೂ ಕಣ್ಣಿಗೆ ಕಟ್ಟುವ೦ತೆ ನಿರೂಪಿಸಿದ್ದಾರೆ.  
ಆತ ಕಾಮಗೇತೀ ವ೦ಶಸ್ತನಾದರೂ ಕೂಡಾ ದೊರೆಯ ಮಗನಲ್ಲ.ಈ ವ೦ಶದ ಮೂಲ ಪುರುಷ ಚಿತ್ರ ನಾಯಕ. ಮಧಿಸಿದ ಆನೆಯೊ೦ದನ್ನು ಎದುರಿಸಿ ಹಿಡಿತಕ್ಕೆ ತ೦ದ ಕಾರಣ ಆತನನ್ನ' ಮದಕರಿ' ಎ೦ಬುದಾಗಿ ಕರೆಯುತ್ತಿದ್ದರು.ಚಿತ್ರನಾಯಕನ ಹೆಸರಿ೦ದ ಚಿತ್ರದುರ್ಗ ಎನ್ನುವ ಹೆಸರು ಬ೦ತು. ಈತನು ಯುದ್ಧದಲ್ಲಿ ಸಾವನ್ನಪ್ಪುತ್ತಾನೆ. ಹಾಗೆಯೇ ಮಕ್ಕಳಿಲ್ಲದ ಈತನ ಮಗನೂ ಕೂಡಾ.


ಕಾಮಗೇತೀ ವ೦ಶದ  ಜಾನಕಲ್ಲಿನ ದಳವಾಯಿ ಬರಮಣ್ಣನಾಯಕನ ಮಗ ಚಿಕ್ಕ ಮದಕರಿ ರಾಜೇ೦ದ್ರ.  ಈತ ಹನ್ನೆರಡು ವರುಷದವನಾಗಿದ್ದಾಗಲೇ  ರಾಜ ಮಾತೆ ಓಬವ್ವ ನಾಗತಿ  ವಾರಸುದಾರರಿಲ್ಲದ  ರಾಜ್ಯಕ್ಕೆಈತನೆ ಸೂಕ್ತ ವಾರಸುದಾರನೆ೦ದರಿತು ಪಟ್ಟಕಟ್ಟುತ್ತಾಳೆ.
ಲೇಖಕರು  ಆತನ ಶೌರ್ಯ, ಸಾಹಸ, ಪ್ರಜ್ಞಾವಂತಿಕೆ, ಮನುಷ್ಯತ್ವ  ಇವೆಲ್ಲವನ್ನೂ ಸೂಕ್ಷ್ಮವಾಗಿ  ಹೆಣೆದಿದ್ದಾರೆ.ದುರ್ಗದ ಬಗೆಗಿನ ಭಕ್ತಿ, ರಾಜಕೀಯ ಪ್ರಕ್ರಿಯೆಗಳೂ, ಆಡಿದ ಮಾತು ತಪ್ಪದಿರುವ ನೇರವ೦ತಿಕೆ. ಪ್ರಜೆಗಳ ಬಗೆಗಿರುವ ಪ್ರೀತಿ, ಧರ್ಮ ಸಹಿಷ್ಣುತೆ, ಜವಾಬ್ಧಾರಿಗಳನ್ನು ತು೦ಬಾ ಜಾಣ್ಮೆಯಿ೦ದ ವಿವರಿಸಿದ್ದಾರೆ. 
ಕಾದ೦ಬರಿ ಓದುತ್ತಾ ಹೋದ೦ತೆ ನಾವು ಆತ್ಮಸ್ಥರಾಗಿ  ಅದರ ಪಾತ್ರಗಳಲ್ಲಿ ಸೇರಿಹೋಗುತ್ತೇವೆ. 
ಪ್ರತಿ ಘಟನೆಯನ್ನೂ, ಮಾತುಗಳನ್ನೂ ಎಲ್ಲಿಯೂ ಕೊರತೆ ತೋರದ೦ತೆ ಜೋಡಿಸಿದ್ದಾರೆ.
ಪಕ್ಕದಲ್ಲಿಯೇ ನಿ೦ತು ಎಲ್ಲವನ್ನೂ ಅವಲೋಕಿಸಿ ಬರೆದಿದ್ದಾರೇನೊ ಎನ್ನುವ೦ತೆ ಪ್ರತಿ ಪದವನ್ನೂ  ಸೂಕ್ಷ್ಮವಾಗಿ   ಕೆತ್ತಿದ್ದಾರೆ. 
ಎಲ್ಲಿಯೂ ಭಾಷೆಯ ಉತ್ಪ್ರೇಕ್ಷೆಯಿಲ್ಲ. ಎಲ್ಲ ವರ್ಗದ ಓದುಗರಿಗೂ ಕುತೂಹಲ ಹುಟ್ಟಿಸುವ೦ತೆ, ವೈಭವೀಕರಣವಿಲ್ಲದೇ ಸರಳವಾಗಿ ಘಟನೆಗಳನ್ನು ಉಲ್ಲೇಖಿಸಿದ್ದಾರೆ.
 ಮದಕರಿಯ೦ತಹಾ ವೀರನೊಬ್ಬ ಹೇಗೆ ಯುದ್ಧದಲ್ಲಿ ನಾಶವಾಗುತ್ತಾನೆ,? ಒಳತ೦ತ್ರಗಳಿಗೆ ಬಲಿಯಾಗುತ್ತಾನೆ,?ಎನ್ನುವುದನ್ನು ವಿಸ್ತಾರವಾಗಿ ತೆರೆದಿಡುತ್ತಾ ಹೋಗುತ್ತಾರೆ.ಹೈದರಾಲಿಯ ಕುತ೦ತ್ರಗಳಿಗೆ ಬಲಿಯಾಗಿ ಜೀವ ಕಳೆದುಕೊಳ್ಳುವ ಸನ್ನಿವೇಶವ೦ತೂ ಓದುಗರಲ್ಲಿ ಭಾವೋದ್ವೇಗವನ್ನು ಉ೦ಟುಮಾಡುತ್ತದೆ.ಪಾತ್ರಗಳಲ್ಲಿರುವ ಜೀವ೦ತಿಕೆ ಎಲ್ಲಿಯೂ ನಿಲ್ಲದ೦ತೆ ಓದಿಸಿಕೊ೦ಡು ಹೋಗುತ್ತದೆ.


ಅನೇಕ ಆಕರ ಗ್ರ೦ಥಗಳನ್ನು ಅಭ್ಯಸಿಸಿ ಬರೆದ  ಒ೦ದು  ಮೇರುಕೃತಿ ಈ ದುರ್ಗಾಸ್ತಮಾನ. 
ಮದಕರಿಯ ಜೀವಾರ್ಪಣೆಯೊ೦ದಿಗೆ ದುರ್ಗಾಸ್ತಮಾನವಾದರೂ ಈ ಕೃತಿಯಿ೦ದಾಗಿ  ಗ೦ಡು ಪಾಳೇಯಗಾರರ ನಾಡು  ಚಿತ್ರದುರ್ಗದ  ಮದಕರಿ ಮತ್ತೆ ಜನಮಾನಸದಲ್ಲಿ ಉದಯಿಸಿದ್ದಾನೆ೦ದರೆ ಉತ್ಪ್ರೇಕ್ಷೆಯಾಗಲಾರದೇನೋ..


ತ.ರಾ.ಸು ಅವರು ದುರ್ಗದ ಬಗೆಗೆ ಇನ್ನೂ ಅನೇಕ ಕಾದ೦ಬರಿಗಳನ್ನು ರಚಿಸಿದ್ದಾರೆ. ಪ್ರತಿಯೊ೦ದೂ ಉತ್ಕೃಷ್ಟ ಕೃತಿಯೇ.
 
ಇದು ಅವರ ಕಾದ೦ಬರಿಯ ಬಗೆಗಿನ ವಿಮರ್ಶೆಯಲ್ಲ.  ಬರೆಯುತ್ತಾ ಹೋದರೆ ಸಾವಿರ ಇದೆ. 
  ಓದಿ ನನಗಿಷ್ಟವಾಯ್ತು. ನನ್ನ ಸಂತೋಷವನ್ನು  ನಿಮ್ಮೊ೦ದಿಗೆ ಹ೦ಚಿಕೊ೦ಡು ಅದನ್ನು ಇನ್ನಷ್ಟು ಹಿಗ್ಗಿಸಿಕೊಳ್ಳುವ ಪ್ರಯತ್ನ ಇದು.


ವ೦ದನೆಗಳು.

Thursday, November 11, 2010

ಪೀಟಿಯೆಂಬ ಬಾಲ್ಯದ ಗೆಳೆಯ

ಬಾಲ್ಯ ...
ಈಗ ಅದೊಂದು ಸುಂದರ ಕನಸು. ಇತ್ತು.. ಈಗಿಲ್ಲ.
ಆಗಾಗ ಅದನ್ನು ನೆನೆಸಿಕೊಳ್ಳಲು ಎಷ್ಟೊಂದು ಸುಖ..!
ಬಾಲ್ಯವೆಂಬ ಮಧುರ  ನೆನಪುಗಳ ಕಣಜವನ್ನೊಮ್ಮೆ ಬಗ್ಗಿ ನೋಡಿದಾಗ  ಎಷ್ಟೆಲ್ಲಾ ಮನೋಹರ ದೃಶ್ಯಗಳು ಕಾಣಸಿಗುತ್ತವೆ !
ಅದೊಂದು ಕಲ್ಮಶವಿಲ್ಲದ ಜಗತ್ತು.
ಪ್ರಕೃತಿಯೊಂದಿಗಿನ ಪ್ರತಿ ಜೀವಿ ,ಪ್ರತಿ ವಸ್ತುವಿನೊಂದಿಗೂ ಜೀವ ಬೆಸೆದುಕೊಂಡಿರುವ ಕಾಲ.
ಕಣ್ಣುಗಳಲ್ಲಿ ಸದಾಕಾಲ ಮಿಂಚುವ ಬಣ್ಣಗಳು, ಕಲ್ಪನೆಗಳು,  ಕನಸುಗಳು.


ಹೌದು.. ನಮ್ಮ ನೆನಪಿನ ಸರಪಳಿಯಲ್ಲಿ  '' ಪೀಟಿ '' ಎಂಬ ಜೀವಿಯೂ ಒಂದು ಕೊಂಡಿಯಲ್ಲವೇ..?
ಈ ಹೆಸರೇ ಅಪ್ಯಾಯಮಾನ.ಕೆಲವೆಡೆ ಅದಕ್ಕೆ ''ಬಿರ್ಬಿಟ್ಟಿ'' ಎಂತಲೂ ಕರೆಯುತ್ತಾರೆ.
ಇಂಗ್ಲಿಷಿನಲ್ಲಿ'ಡ್ರ್ಯಾಗನ್ ಫ್ಲೈ ' ಎನ್ನುವ ಘೋರವಾದ ಹೆಸರಿನಿಂದ ಕರೆಯುತ್ತಾರೆ.
ಆಗೆಲ್ಲ ನಮಗೆ ರಜೆ ಬಂತೆಂದರೆ ಸಾಕು.ಆಟಕ್ಕೆ ತರಾವರೀ ವಸ್ತುಗಳು.
ಖಾಲೀ ಬೆಂಕಿ ಪೆಟ್ಟಿಗೆಯಲ್ಲಿ  ಹಿಡಿದಿಟ್ಟುಕೊಂಡಿರುವ ರೇಷ್ಮೆ ಹುಳು, ಮಣ್ಣು ಗುಬ್ಬಿ, ಎಲೆಕೀಟ ಹೀಗೆ ಅನೇಕ ಸಹಯಾತ್ರಿಗಳು.
ಆಗಾಗ ತೆಗೆದು ನೋಡಿ ಇದೆಯೋ ಇಲ್ಲವೋ ಎಂದು ಖಾತ್ರಿ ಪಡಿಸಿಕೊಳ್ಳುವುದು ಅಂದಿನ ಜವಾಬ್ದಾರೀ  ನಡವಳಿಕೆಗಳಲ್ಲಿ ಒಂದು.






ಮಧ್ಯಾನ್ಹದ ಮೇಲೆ ಕುಂಟಬಿಲ್ಲೆಯೋ, ಜೂಟಾಟವೋ  ಮತ್ಯಾವುದೋ ಆಟವಾಡುತ್ತಾ ಆಟದ ಜೊತೆ ಜೊತೆಗೆ ಅಂಗಳದಲ್ಲಿ ಬರಕಲಾದ ತುಳಸೀ ಗಿಡದ ಮೇಲೋ, ಒಣಕಲು ಕೊಂಬೆಯ ಮೇಲೋ,  ಬಟ್ಟೆ ಒಣ ಹಾಕುವ ನ್ಯಾಲೆಯ ಮೇಲೋ, ಮನೆ ಹಿಂದಿನ ದರೆಯಲ್ಲಿ ಬೆಳೆದುಕೊಂಡಿರುವ ಹುಲ್ಲು ಗಿಡದ ಮೇಲೋ ಕುಳಿತಿರುತ್ತಿದ್ದ ಪೀಟಿಗಳನ್ನು ಹಿಡಿಯುವುದೇ ಒಂದು ಮೋಜಿನ ಕೆಲಸ.
ಅಲ್ಲದೆ ಆಗ ಅದೊಂದು ಸಾಹಸದ ಕೆಲಸ ಕೂಡಾ ಆಗಿತ್ತು.ಧ್ಯಾನಸ್ತರಾಗಿ ಗಿಡದ ಮೇಲೆ ಕೂತಿರುತ್ತಿದ್ದ ಪೀಟಿಗಳನ್ನು ನಿಧಾನವಾಗಿ ಸದ್ದು ಮಾಡದೆ ಎರಡೇ ಬೆರಳುಗಳಿಂದ ರೆಕ್ಕೆಗಳನ್ನು ಜೋಡಿಸಿ ಹಿಡಿಯಬೇಕೆನ್ನುವ ಹೊತ್ತಿಗೆ ಬಾಲ ತಿರುವಿ ಜಾರಿಕೊಂಡು ಹಾರಿ ಮತ್ತೊಂದೆಡೆ ಕೂರುತ್ತಿದ್ದ ಇವುಗಳನ್ನು ಹಿಡಿಯಲು ಪ್ರೋಫೆಶನಲ್ಸೆ ಬೇಕಾಗಿತ್ತು.
ಹಾಗೆಲ್ಲ ಎಲ್ಲರಿಗೂ ಪೀಟಿ ಹಿಡಿಯಲು ಸಾಧ್ಯವೇ,,?ಈ ಕೆಲಸಕ್ಕೆ ಸ್ಪೆಶಲಿಷ್ಟರು ಅಣ್ಣಯ್ಯನೋ, ಬಾವಯ್ಯನೋ ಆಗಿರುತ್ತಿದ್ದುದು ಎಲ್ಲಾ ಕಡೆ ಸರ್ವೇ ಸಾಮಾನ್ಯ.


ಹೆಣ್ಣುಮಕ್ಕಳಿಗೆ ಈ ವಿಚಾರಗಳಲ್ಲಿ  ಕೆಲವು ಟೆಕ್ನಿಕಲ್ ಪ್ರಾಬ್ಲಂ ಇದ್ದಿದ್ದು ಸುಳ್ಳಲ್ಲ.
.''ಪೀಟಿ ಹಿಡಿಯಕ್ಕೆ ಹೋಗಿ ಫ್ರಾಕ್ ಹರಕ ಬೈಂದ ಮಳ್ಳು''
  ''ಪೀಟಿ ಹಿಡಿಯಕ್ಕೆ ಹೋಗಿ ಕಾದಿಗೇಲಿ ಬಿದ್ಗ ಬೈಂದ ಮಂಗ ''
ಎಂಬಿತ್ಯಾದೀ ಅವಹೇಳನಕಾರೀ ಮಾತುಗಳನ್ನು ಕೇಳುವುದು, ಅಮ್ಮನ ಹತ್ತಿರ ಬೈಸಿಕೊಳ್ಳುವುದೂ  ನಮಗೆ ಸುತರಾಂ ಇಷ್ಟವಿರಲಿಲ್ಲ.








ಅದೂ ಅಲ್ಲದೆ '' ಅದೆಂತ್ರಾ  ಪೀಟಿ ಹಿಡಿಯದು..?ಅದ್ನ ಸಾಯ್ಸೀರೆ ದೇವ್ರು ಶಾಪ ಕೊಡ್ತಾ ತಡೀರಿ. ಮುಂದಿನ ಜನ್ಮದಾಗೆ ಕಡಿಗೆ ನಿನ್ಗನೂ ಪೀಟಿಯಾಗೇ ಹುಟ್ಳಕ್ಕು.'' ಎನ್ನುವ ದೊಡ್ಡವರ ಮೊರಲ್ ಸೈನ್ಸ್ ಭಯ..


ಮತ್ತೂ ಏನಾದರೂ ಗ್ರಾಚಾರಕ್ಕಿಟ್ಟು ಕೊಂಡರೆ ತಪ್ಪಿಸಿಕೊಳ್ಳಲು ಉಪಾಯವೂ ಇತ್ತು.
'' ನಾ ಅಲ್ಲ ಬಾವಯ್ನೆ ಹಿಡ್ಕೋಟಿದಾ''ಎಂದು ಬಾವಯ್ಯನ ಮೇಲೆ ತಪ್ಪು ಹೊರಿಸಿದರೆ ಅಲ್ಲಿಗೆ ಆ ಕೇಸು ಮುಕ್ತಾಯವಾದಂತೆ.
ನೆಂಟರ ಮನೆ ಮಾಣೀಗೆ  ಬೈಯ್ಯುವ ಹಕ್ಕು ಇಲ್ಲ ಎನ್ನುವ ಅಲಿಖಿತ ಸ೦ವಿಧಾನ.!


ಚಿಟ್ಟೆ ಸುದ್ದಿಗೆ ಅಷ್ಟಾಗಿ ಹೋಗುತ್ತಿರಲಿಲ್ಲ ನಾವು.
ಚಿಟ್ಟೆ ನೋಡಲು ಸುಂದರವಾದರೂ ಆಡಲು ಸೂಕ್ಷ್ಮ.ರೆಕ್ಕೆ ಹಿಡಿದರೆ ಬಣ್ಣವೆಲ್ಲಾ ಕೈಗೆ ಮೆತ್ತಿಕೊಳ್ಳುತ್ತದೆ.
ಕೆಲವೊಮ್ಮೆ ರೆಕ್ಕೆಯೇ ಕಿತ್ತೂ ಬರುತ್ತದೆ.ಹಿಡಿಯೋಣವೆಂದರೂ  ಅದು ಕೂತಲ್ಲಿ ಕೂರದ ಚಂಚಲೆ.
ಆಡಿಕೊಳ್ಳುವುದಕ್ಕಿಂತ ಹಾಡಿಕೊಳ್ಳಲೇ  ಲೇಸು.ಪಾತರಗಿತ್ತಿ ಪಕ್ಕ ..ನೋಡೀದೆನ ಅಕ್ಕ ಎನ್ನುತ್ತಾ...








ಪೀಟಿ ಹಾಗಲ್ಲ.
ಪಾರದರ್ಶಕ ಬಣ್ಣದವು,ರೆಕ್ಕೆಗಳು ಗಡಸು, ಮಕ್ಕಳ ಕೈಗೆ ಸಿಕ್ಕಿದರೂ ಸುಮಾರಿಗೆ ಹಾನಿಗೊಳಗಾಗದು.
ಅದರ ಬಾಲದ ತುದಿಗೆ ಬಾಳೇ ಪಟ್ಟೇ  ದಾರ ಕಟ್ಟಿ ಒಂದು ತುದಿ ಕೈಯಲ್ಲಿ ಹಿಡಿದುಕೊಂಡು ಮೇಲಕ್ಕೆ  ಹಾರಿದಂತೆ ಕೆಳಕ್ಕೆ  ಜಗ್ಗುತ್ತಾ ಅದನ್ನು ಹಾರಿಸುತ್ತಿದ್ದಾರೆ ಹೆಲಿಕ್ಯಾಪ್ಟರ್ ನೇ ಹಾರಿಸುತ್ತಿದ್ದೀವೇನೋ ಎಂಬಂತಹಾ ಅನುಭೂತಿ ಉಂಟಾಗುತ್ತಿತ್ತು ನಮಗೆ...!
ಅದಕ್ಕೆ ನೋವಾಗುತ್ತದೆ, ಅದು ಹಿಂಸೆ ಅನ್ನುವ ವಿಚಾರಗಳೆಲ್ಲಾ ತಲೆಗೆ ಹೋಗುತ್ತಿದ್ದುದು ಆಮೇಲೆ.
ಮತ್ತು ಹೀಗೆ ಆಡುವಾಗ ಕೆಲ ತುಂಟ ಹುಡುಗರ ಕೈಯಲ್ಲಿ ಸಿಕ್ಕಿ ಅದು ಆಪರೇಶನ್ ಪೀಟಿಯಾಗಿ,   ಡಿಸೆಕ್ಷನ್ ಗೊಳಗಾಗಿ ಉಳಿದ ಸಂಭಾವಿತ ಹುಡುಗರ ಕೈಯ್ಯಲ್ಲಿ ಬೈಸಿಕೊಳ್ಳುವುದೂ, ' ಹೇಳ್ಕೊಡ್ತಿ  ತಡೀ '  ಎನ್ನುವ ಬ್ಲಾಕ್ ಮೇಲ್ ಗೊಳಗಾಗುವುದೂ, ಅದಕ್ಕೆ ಬೆಣ್ಣೆಕಡ್ಡಿ, ಗೋಲಿ , ಹಳೆ ಗ್ರೀಟಿಂಗ್ ಕಾರ್ಡು  ಇತ್ಯಾದಿ ರೂಪದಲ್ಲಿ ಲಂಚ ರುಶುವತ್ತುಗಳ ವ್ಯವಹಾರ ಕೂಡಾ ಇತ್ತು ಬಿಡಿ.




ಅದೆಲ್ಲ ನೆನಪಾದದ್ದು  ಎದುರಿನ ಸೈಟಿನಲ್ಲಿ ಪೀಟಿಗಳ ಹಾರಾಟ ಕಂಡಾಗ.ನನ್ನ ಮನಸ್ಸೂ ಕೆಲ ಕಾಲ ಬಾಲ್ಯದ ಕಡೆ ಹಾರಿದ್ದು ಸುಳ್ಳಲ್ಲ..








ವಂದನೆಗಳು.

Monday, November 8, 2010

ಇವರ್ಯಾರು...?

ಇದು ಕೆಲವು ತಿಂಗಳುಗಳ ಹಿ೦ದೆ ಬರೆದ ಚಿತ್ರ. ಜೆಲ್ ಇಂಕ್ ಪೆನ್ ನಲ್ಲಿ.  ಕೆಲವು ಓರೆ ಕೋರೆ ಗೆರೆಗಳಿದ್ದರೂ ಕೂಡಾ ನನಗೇ ತೃಪ್ತಿ ತಂದ ಚಿತ್ರ. ಕೆಲವೇ ನಿಮಿಷಗಳಲ್ಲಿ  ಒಂದೇ ಹಂತದಲ್ಲಿ ಬರೆದಿದ್ದು. ಇವರ್ಯಾರು  ಎಂದು ನಿಮಗೆ ಸುಲಭವಾಗಿ  ಗುರುತಿಸಲು ಸಾಧ್ಯವೇ...? ಸಾಧ್ಯವಾದಲ್ಲಿ ಬರೆದದ್ದು, ಮತ್ತು ಹೆಮ್ಮೆ ಪಟ್ಟಿದ್ದು ಸಾರ್ಥಕ....!!!



Tuesday, November 2, 2010

ಹಬ್ಬದ ವಿಶೇಷ ...?

ಬಂದೇ ಬಿಟ್ಟಿತಲ್ಲ.. ದೀಪಗಳ ಹಬ್ಬ, ಒಡಲೊಳಗಿನ  ಅ೦ದಕಾರವನ್ನು  ಹೊಡೆದೋಡಿಸುವ ಬೆಳಕಿನ ಹಬ್ಬ , ಅರಿವಿನ ಹಬ್ಬ,   ಸೊಬಗಿನ ದೀಪಾವಳಿ ಹಬ್ಬ..!


ವಿಶೇಷ ಏನೆಂದರೆ ಎರಡಿವೆ. ಮೊದಲನೆಯದು ಹಬ್ಬವನ್ನು ಈ ಸಲ ಬೆಂಗಳೂರಲ್ಲೇ ಆಚರಿಸುತ್ತೇವೆ...!  ಅದು ವಿಶೇಷವಾ...? ಎಂದು ಹುಬ್ಬೇರಿಸಬೇಡಿ. ನಾನಾ ತರದ ಕಾರಣಗಳಿಂದ ಊರಿಗೆ ಹೋಗಲು ಆಗದೆ ಇದ್ದುದರಿಂದ  ನಾವು ಇಲ್ಲಿಯೇ  ''ಶೇಷ''.   ಹಬ್ಬವಾದ್ದರಿಂದ'' ವಿ '' ಹಚ್ಚಲಾಗಿದೆ.


ಊರಲ್ಲಿ ಹಬ್ಬದ ಹಿಂದಿನ ದಿನ ನಡೆಸುವ ತಯಾರಿಯನ್ನು ನಾನಿಲ್ಲೇ ನೆನೆಸಿಕೊಳ್ಳುತ್ತೇನೆ....!

ಭೂರೆ ಹಬ್ಬದ ಹಿಂದಿನ ದಿನ ಮನೆ ಮಾರನ್ನು, ತೊಳೆದು ಬೆಳಗಿ, ಬಾಗಿಲಿಗೆ, ಗೋಡೆಗೆ, ಸ್ನಾನದ ಹಂಡೆಗೆ ಎಲ್ಲಾಕಡೆ ಕೆಮ್ಮಣ್ಣು ಹಚ್ಚಿ, ಶೇಡಿ ಬರೆಯುವುದರಿ೦ದ ಹಿಡಿದು , ಊರಿಗೆ ನಾನೇನಾದರೂ ಹೋಗಿದ್ದಿದ್ದರೆ ಶೇಡೀ ಬರೆಯುವ ಕೆಲಸ ನನಗೇ ಕೊಟ್ಟು ಗೌರವಿಸುವುದರಿಂದ   ಹಿಡಿದು .... ಹಂಡೆಗೆ  ಊರೆಲ್ಲಾ ಸುತ್ತಿ ಹರ್ಕೊಂಡು ಬಂದ ಕೈಯಿಂಡ್ಲೆ ಕಾಯಿ ಬಳ್ಳಿಯನ್ನು ಸುತ್ತಿ, ಹೊಸ ನೀರು ತುಂಬಿ, ಆಮೇಲೆ ಭೂರೆ ದಿನ ಬೆಳಗಾಗಿ ಮುಂಜಾವಿನಲ್ಲೇ  ಆಯಿ ಭೂರೆ ನೀರು ತುಂಬಿ ಪೂಜೆ ಮಾಡುವಾಗ ' ಜಾಗಟೆ  ಬಡಿಲಕ್ಕು ಎದ್ಕಳ್ರೆ' ಎಂದು ಕರೆದು ಎಬ್ಬಿಸುವುದರಿಂದ ಹಿಡಿದು..  ಆಮೇಲೆ ತಲೆಗೆ ಎಣ್ಣೆ ಹಾಕಿ ಕೊಟ್ಟ ಕಾಯಿಸುಳಿ, ಸಕ್ರೆ ತಿಂದು ಸ್ನಾನ ಮಾಡಿ ಕಡುಬಿನ ಊಟ ಮಾಡಿದ್ರೆ ಭೂರೆ ಊಟ ಮುಗೀತು.ನನ್ನ ತವರು ಮನೆ ಒಂಟಿ ಮನೆ. ಉಳಿದ ಮನೆಗಳೆಲ್ಲಾ ದೂರ..   ಮತ್ತು ಸದಾಕಾಲ ನಾಯಿಕಾವಲು ಇರುವುದರಿಂದ ಭೂರೆಗಳುವಿಗೆ ಅವಕಾಶವಿಲ್ಲ...!  




ಮತ್ತು ಮರುದಿನ ಅಮಾವಾಸ್ಯೆಯ ದಿನ ಹಿತ್ತಲೆಲ್ಲಾ ಅಲೆದು  ಚಂಡುಹೂ ಕೊಯ್ದು  ಗೋವಿನ ಕೊರಳಿಗೆ ಒಪ್ಪುವಂತೆ ಅದರ ದಂಡೆಗಳನ್ನು ಮಾಡಿ  ಜೋಡಿಸಿಡುವದು ಮನಸ್ಸಿಗೊಪ್ಪುವ ಕೆಲಸ. ದೀಪಾವಳಿ ಹಬ್ಬದ ದಿನ ಮಾತ್ರಾ ತುಂಬಾ ಸಂಭ್ರಮದ ದಿನ.ಎಲ್ಲರೂ  ಬೆಳಗ್ಗೆ ಬೇಗೆದ್ದು,
ಸೂರ್ಯ ಹುಟ್ಟುಟ್ಟುತ್ತಲೇ ಗೋಪೂಜೆಯೂ ಮುಗಿಯ ಬೇಕೆನ್ನುವುದು ಅಪ್ಪಯ್ಯನ ಸಂಪ್ರದಾಯ. ಅದೇ ಚಂದ ಎನ್ನುವುದು ಅವನ ಧೋರಣೆ. 
ಮಕ್ಕಳು  ಮೊಮ್ಮಕ್ಕಳೆಲ್ಲಾ ಬೇಗೆದ್ದು  ಪೂಜೆಯ ನಂತರ ಹುಲ್ಲುದೇವರ [ಹುಲಿದೇವರ] ಬನಕ್ಕೆ ಹೋಗಿ  ಅಲ್ಲಿ ಹಣ್ಣು ಕಾಯಿ ಪೂಜೆ ಮಾಡಿ ಪಟಾಕಿ ಹೊಡೆದು ಮನೆಗೆ ಬಂದು  ತುಳಸಿ ಮುಂದೆ ಸುತ್ತ ಮುತ್ತಲಿನ ಭೂತ, ಚೌಡಿ ಗಳಿಗೆಲ್ಲಾ ಕಾಯಿ ಒಡೆದು ಅಪ್ಪಯ್ಯ ಅವರನ್ನೆಲ್ಲಾ ಸರಿ ಮಾಡಿಟ್ಟುಕೊಳ್ಳುವುದನ್ನೂ ನೆನೆಸಿಕೊಳ್ಳುವುದಕ್ಕೆ ಹಿತ. 

ಆಮೇಲೆ ಬೆಳಗಿನ ತಿಂಡಿ ಸವತೆ ಕಾಯಿ ತೆಳ್ಳವು ತಿನ್ನದೂ ಅಂದ್ರೆ  ಅದರ ಸುಖ  ತಿಂದೇ ತಿಳಿಯಬೇಕು..!  ಆಮೇಲೆಲ್ಲಾ ಹೋಳಿಗೆ ಮಾಡುವುದೂ,  ಸೊಂಪಾಗಿ ಹಬ್ಬದೂಟ ಉಂಡು ಒಂದು ನ್ಯಾಪ್ ತೆಗೆಯುವುದು.  ಸಾಯಂಕಾಲ   ಎಲ್ಲ ಕಡೆ ಕೈಹಿಂಡ್ಲೆ ಕಾಯಿ ಅರ್ಧ ಮಾಡಿ ಅದಕ್ಕೆ ಸೂಡಿ ಸಿಕ್ಕಿಸಿ ದೀಪ ಹಚ್ಚಿಟ್ಟು ಹಬ್ಬ ಕಳಿಸುವುದೊಂದು  ಆಯಿಯ ಕೆಲಸ. ಮೊಮ್ಮೊಕ್ಕಳದು  ಜನ್ಗಟೆ  ಹೊಡೆದು ಸಾಂಪ್ರದಾಯಿಕ ಸ್ಲೋಗನ್ನುಗಳಾದ 'ದಿಪ್ ದಿಪ್ ದೀವಾಳ್ಗ್ಯೋ ಹಬ್ಬಕ್ಕೊಂದ್ ಹೋಳಿಗ್ಯೋ.. ಜೊತೆಗೆ ತುಂಟು ಮಕ್ಕಳ ಬಾಯಲ್ಲಿ ಹಬ್ಬಕ್ಕೊಂದ್ ಹರ್ಕ್ ಹೋಳಿಗ್ಯೋ.. ಎನ್ನುತ್ತಾ ಹಬ್ಬ ಕಳಿಸುವುದು ವಾಡಿಕೆ.ಇಲ್ಲಿಗೆ  ಹಬ್ಬ ನಮ್ಮ ಕಡೆಯಿಂದ ಮುಗಿದಂತೆ.
ಮಧ್ಯ ರಾತ್ರೆ ಯಲ್ಲಿ  ಬರುವ ಹಬ್ಬ ಹಾಡುವುವರನ್ನು ಸುಧಾರಿಸುವುದು ಅತ್ತಿಗೆಯಂದಿರ ಕೆಲಸ..ಮಲಗಿದಲ್ಲಿಯೇ, ಅಥವಾ ಅಲ್ಲೇ ಕುಳಿತೋ ಬಾಗಿಲ ಮರೆಯಲ್ಲಿ ನಿಂತೋ  ತೂಕಡಿಸುತ್ತಾ ಹಬ್ಬ ಹಾಡುವವರ ಹಾಡುಗಳನ್ನು ಕೇಳುವುದು  ನಮ್ಮ ಕೆಲಸ..!




ಈ ಸಲ ಹೀಗೆ ಹಬ್ಬವನ್ನು ನೆನೆಸುವುದೇ ವಿಶೇಷ. ಎದುರಿಗೆ ಇರುವುದರಲ್ಲಿರದ ಸುಖ ಕಲ್ಪನೆಯಲ್ಲಿದೆ ಅಲ್ಲವೇ..?   ಸಂಭ್ರಮದ  ದೀಪಾವಳಿ ಕೆಟ್ಟದ್ದನ್ನು ನಾಶ ಮಾಡಲು ಜ್ಞಾನದ ದಾರಿ  ದೀಪ ಹಚ್ಚಲು ಪ್ರತಿ ವರ್ಷ ಬರುತ್ತಲೇ   ಇರುತ್ತದೆ.. ಅರಿವಿನ ನಡುಗೆ ಮಾತ್ರ ನಮ್ಮದಾಗಬೇಕಷ್ಟೇ.


ಇನ್ನೊಂದು..ಈ ವಿಶೇಷದಲ್ಲಿ ಮತ್ತೊಂದು ವಿಶೇಷ.

ದೀಪಾವಳೀ ಹಬ್ಬದ ಸಂಜೆ ಎಲ್ಲರೂ ದೀಪ ಹಚ್ಚಿಟ್ಟು ಕೈ ಮುಗಿದು  ಕೈ ವರೆಸಿಕೊಂಡರೆ ತಲವಾಟದ ರಾಘಣ್ಣ ಮಾತ್ರ ಬೇರೆ ಐಡಿಯಾ ಮಾಡಿದ್ದಾರೆ.  ರಾಘಣ್ಣ ಅಂದರೆ ಶ್ರೀಶ೦  ಬ್ಲಾಗಿನ ರಾಘವೇಂದ್ರ ಶರ್ಮ...!  

ಇವರದ್ದು ಹೊಸ ನಮೂನೆಯ ದೀಪ...!   ತಮ್ಮ ಜೀವನಾನುಭವ, ಜೇನು ಕೃಷಿ , ಅಡಿಕೆ ಕೃಷಿ ಇವುಗಳ ಸಾರವನ್ನೆಲ್ಲಾ ತೆಗೆದು   ಕಥೆ ಕಟ್ಟಿ, ಅದನ್ನೆಲ್ಲ ಸಂಗ್ರಹಿಸಿ ''ಕಟ್ಟು ಕಥೆಯ ಕಟ್ಟು''  ಮಾಡಿ ಅದನ್ನು ಪ್ರಕಟಿಸುತ್ತಿದ್ದಾರೆ ಪುಸ್ತಕವಾಗಿ. ದೀಪಾವಳಿ ಸಂಜೆಯನ್ನು ಹೀಗೆ ಅರ್ಥಪೂರ್ಣವಾಗಿಸುತ್ತಿದ್ದಾರೆ. ಇವರ ಜೇನು ಕೃಷಿಯ  ಸಿಹಿಯನ್ನು ಮೆಲ್ಲುತ್ತಾ ನಮಗೆ  ಜ್ಞಾನ ಕೃಷಿ   ಮಾಡಲೊಂದು ಅವಕಾಶ..!ಎಲ್ಲ ಕಡೆ ಸೋಸಿ ತಂದ ಜೇನು ಹನಿಗಳನ್ನು  ಪುಸ್ತಕ  ಪಾತ್ರೆಯಲ್ಲಿ  ಇಟ್ಟು ಕೊಡುತ್ತಿದ್ದಾರೆ ಸವಿಯಿರೆಂದು.   ಆಗಾಗ ಕೈ ಚೀಲದಿಂದ ತೆಗೆದು ಸವಿಯಬಹುದು. ತುಪ್ಪ ಸಕ್ರೆ ಪಾಕದಲ್ಲಿ ನೆನೆಸಿದ   ಹೋಳಿಗೆಯ ಸವಿದಂತೆ. ಗುಡ್ ಐಡಿಯಾ ...!


ಈ ಎರಡೂ ಸಂಬ್ರಮಕ್ಕೂ ನನ್ನದು ಗೈರು ಹಾಜರಿ  ಅನ್ನುವುದೇ ಶೇಷ. ರಾಘಣ್ಣನ ಕಾರ್ಯಕ್ರಮಕ್ಕೆ ನನ್ನ ಶುಭ ಹಾರೈಕೆಗಳನ್ನು ಇಲ್ಲಿಂದಲೇ ರವಾನಿಸುತ್ತಿದ್ದೇನೆ. ಹಾಗಾಗಿ ನೀವು ಹೋದವರು ಅಲ್ಲಿ ಏನೇನೆಲ್ಲ ನಡೆಯಿತು ?ಕಾರ್ಯಕ್ರಮ ಹೇಗಾಯ್ತು ? ಅನ್ನುವುದನ್ನು ನನಗೂ ಹೇಳುತ್ತೀರಲ್ಲವೇ..? 


ನಿಮಗೆಲ್ಲಾ ದೀಪಾವಳಿಯ ಶುಭ ಹಾರೈಕೆಗಳು.