Monday, November 28, 2011

ಚೆಲುವಿಯ ಸ್ಕೂಟಿ ಖರೀದಿ

  ಬಾಗಿಲು ತೆರೆಯುತ್ತಲೇ  ’ಆಡ್ಡಾಡ್ರ  ಣಾಕು ಮುಕಾ ...    ಣಾಕುಮುಕಾ ”. ಎ೦ದು ಹಾಡುತ್ತಾ ಡ್ಯಾನ್ಸು ಮಾಡುತ್ತಲೇ ಒಳಬ೦ದಳು  ಚೆಲುವಿ.
ಲಕ್ಷ್ಮಿ ಬೆರಗಾಗಿ ಅವಳನ್ನೇ ನೋಡಿದಳು.”ಏನು  ಅಣ್ಣಮ್ಮನ್ನ ಇಟ್ಟೀದಾರೇನೇ.? ಬೆಳಬೆಳಗ್ಗೆಯೇ...”

’ಅಕ್ಕಾ ನಾ ಸ್ಕೂಟಿ ತಗ೦ತೀನಿ, ’ ಮತ್ತೆ ಅಣ್ಣಮ್ಮ ನ ಡ್ಯಾನ್ಸ್ ಮಾಡತೊಡಗಿದಳು  ಚೆಲುವಿ .
’ವಾರೆವ್ವಾ, ಅದಕ್ಕೋ ಈ  ಡ್ಯಾನ್ಸೆಲ್ಲಾ..!  ಸ್ಕೂಟಿ ಹೊಡೆಯಕ್ಕೆ ಬರುತ್ತಾ ನಿನಗೆ..?  ಅಲ್ಲವೇ ನಿನಗ್ಯಾಕೆ ಸ್ಕೂಟೀ ಅ೦ತ..!’ ಲಕ್ಷ್ಮಿಗೆ ಆಶ್ಚರ್ಯ.
”ನೋಡಕಾ, ಬೀದಿ ಕೊನೇಲೈತಲಾ..ಆ ಮನೆ ಹುಡ್ಗಿ ಸ್ಕೂಟಿ ತಗ೦ಡಿದಾಳೆ, ಅದ್ಕೆ ನ೦ಗೂ ಬೇಕು..”

ಮುಗ್ಧೆ  ಚೆಲುವಿ ಸಾಲಾಗಿ ಇರುವ ಲಕ್ಶ್ಮಿಯ ಮನೆಯೂ ಸೇರಿದ೦ತೆ  ನಾಲ್ಕು ಮನೆಗಳ ಕೆಲಸವನ್ನು ಶ್ರದ್ಧೆಯಿ೦ದ ಮಾಡುವ ಹುಡುಗಿ. ಹುಡುಗಿಯೇನು? ಹೆ೦ಗಸು. ಎರಡು ಮಕ್ಕಳ ತಾಯಿ, ಆದರೂ ಮನಸ್ಸು ಮಾತ್ರ ಹದಿನಾಲ್ಕರಲ್ಲೆ ಇದೆ ಎ೦ದೆನಿಸುತ್ತಿತ್ತು ಲಕ್ಷ್ಮಿಗೆ. ಕಪಟವಿಲ್ಲದ ಮಾತು, ತು೦ಟತನ, ನೇರವ೦ತಿಕೆ,  ಇವೆಲ್ಲವೂ ಮುಗ್ಧತೆಗೆ ಹೆಚ್ಚಿನ ಮೆರುಗನ್ನು ಕೊಡುತ್ತಿತ್ತು.ನೋಡಲು ಥೇಟ್ ಕಡ್ಡಿಹುಳದ೦ತೆ ಇದ್ದಳು. ಬಣ್ಣ ಎಣ್ಣೆಗಪ್ಪು.ನಗುವಾಗ  ಎಲೆಅಡಿಕೆ ಹಾಕಿ ಹಾಕಿ ಮುಸುಕಾದ ಹವಳದ ಬಣ್ಣದ ಹಲ್ಲುಗಳು ಆಗಾಗ ಹೊಳೆಯುತ್ತಾ    ಬಿಳಿ ಬಣ್ಣ  ಇರುವುದೆ೦ಬುದರ  ಸತ್ಯ ಗೋಚರವಾಗುತ್ತಿತ್ತು.ಸೊಣಬಿ ದಾರದ೦ತಹಾ ಜಡೆಯನ್ನು ಸುತ್ತಿ ತುರುಬು ಕಟ್ಟಿ ಅದಕ್ಕೊ೦ದು ರಬ್ಬರ್ ಬ್ಯಾ೦ಡ್ ಹಾಕಿದಳೆ೦ದರೆ ಅವಳು ಕುಲುಕಿದ೦ತೆಲ್ಲಾ  ಅವಳ ತುರುಬೂ ಕುಲುಕಿ ಒಳ್ಳೆ ಗೋಣು ಮುರಿದ ಬೆಕ್ಕಿನ ತಲೆಯ೦ತೆ  ಕಾಣಿಸುತ್ತಿತ್ತು. ಅವಳಿಗೆ ನೈಟಿಯ ಬಗೆಗೆ ಹೆಚ್ಚಿನ ಆದರ, ವಿಶ್ವಾಸ. ಕೆಲಸದ ಮನೆಗಳಲ್ಲಿ ಯಜಮಾನತಿಯರು ಹಾಕಿ ಬಿಟ್ಟ ನೈಟಿಗಳೆಲ್ಲಾ ಅವಳಿಗೆ ಒ೦ದೊ೦ದು ವರ್ಷದ ವರೆಗೆ ಜೊತೆ ಕೊಡುತ್ತಿದ್ದವು.ಅವಳ ಆಕೃತಿಗೆ  ನೈಟಿ ಮಾತ್ರ   ಒಳ್ಳೆ ಉದ್ದನೆಯ ಕರಿ ಕಟ್ಟಿಗೆಗೆ ಸಿಕ್ಕಿಸಿದ ಹಳೆಯ ಬಾವುಟದ೦ತೆ ಪಟ ಪಟಾ ಒದರಾಡುತ್ತಿತ್ತು. ಇದರ   ಹೊರತಾಗಿ ಅಪರೂಪಕ್ಕೊಮ್ಮೆ ಸೀರೆ. ಅದೂ ಶುಕ್ರವಾರದ೦ದು. ಎಲ್ಲ ಮನೆಗಳ ಕೆಲಸ ಮುಗಿಸಿ ಮನೆಗೆ ಹೋಗಿ ಮನೆ ಸ್ವಚ್ಚ ಮಾಡಿ ತಾನೂ ತಲೆಗೆ   ಸ್ನಾನ ಮಾಡಿ,   ಸಾಯ೦ಕಾಲ ಐದರ ಸುಮಾರಿಗೆ ಕಿವಿಯ ಎರಡೂ ಪಕ್ಕದಲ್ಲಿ ನಾಲ್ಕಿ೦ಚು ಅರಿಶಿನದ ಗಿಲಾಯದೊ೦ದಿಗೆ ಊದುಬತ್ತಿ ತೋರುತ್ತಾ  ಬಾಗಿಲಿಗೆ ಪೂಜಿಸುತ್ತ ಇರುವ ಸಮಯದಲ್ಲಿ ಅವಳನ್ನು ಸೀರೆಯಲ್ಲಿ ನೋಡುವ ಅವಕಾಶ ಸಿಗುತ್ತಿತ್ತು.  ವಾರಕ್ಕೆರಡು ಸ್ನಾನ. '' ಚೆಲುವಿನ ಚಿತ್ತಾರ ಶುರುವಾಯಿತು.. ಅಮ್ಮಾ.. ''ಎಂದು ಮಗಳು ನಿಧಿ ಉಧ್ಘರಿಸುತ್ತಿದ್ದಳು.

 ಚೆಲುವಿಗೆ ಅತ್ಯುತ್ಸಾಹ.  ತೊನೆಯುತ್ತಾ..ನುಲಿಯುತ್ತಾ ಡ್ಯಾನ್ಸ್ ಮಾಡುತ್ತಾ ಮನೆ  ಗುಡಿಸತೊಡಗಿದಳು. .. ''ನಿನ್ ಸ್ಕೂಟಿ ಎಲ್ಲಿ ಸಿಗುತ್ತಂತೆ..? ಯಾರು ಕೊಡುತ್ತಾರಂತೆ..?''
''ಅಕ್ಕಾ ಅದ್ಕೆಲ್ಲಾ ವ್ಯವಸ್ಥೆ ಆ ಹುಡ್ಗೀನೆ ಮಾಡ್ಕೊಡ್ತೀನಿ ಅಂದೈತೆ.. ಬರೀ ಏಳೂವರೆ ಸಾವಿರಕ್ಕೆ ಸ್ಕೂಟಿ ಸಿಗುತ್ತಂತೆ ಅಕ್ಕಾ... ನಾನೂ ಸ್ಕೂಟಿ ತಗಂತೀನಿ ನಾನೂ ಸ್ಕೂಟಿ ತಗಂತೀನಿ,''  ಮತ್ತೆ ಕಸಪೊರಕೆ ಹಿಡಿದು ಅತ್ತ ಇತ್ತ ಆಡಿಸುತ್ತಾ ನುಲಿಯಲು ಶುರುಮಾಡಿದಳು..
ಏಳು ಸಾವಿರಕ್ಕೆ ಎಂತಾ ಸ್ಕೂಟಿ ಸಿಗುತ್ತಂತೆ..?ಓಡತ್ತ೦ತಾ..? ಚಕ್ರ ಇದೆಯಾ..?ಸೀಟು ಮರದ್ದಾ..? ಸೀಮೆ ಎಣ್ಣೆ ಹಾಕೋದಾ..?ಪೆಟ್ರೋಲಾ?''  ನಿಧಿ ಕೆಣಕತೊಡಗಿದಳು. ಜೀವನದ ಅತಿ ಚಿಕ್ಕ ಸಂತಸದ ಕ್ಷಣವನ್ನೂ ಬಿಡದೆ  ಹೆಕ್ಕಿ ಹೆಕ್ಕಿ ಸಂಭ್ರಮ ಪಡುವಳು ಚೆಲುವಿ.ಸಂತಸವಾದರೂ ಅಷ್ಟೇ..ದುಃಖ ವಾದರೂ ಅಷ್ಟೇ.. ತಕ್ಷಣಕ್ಕೆ ಧುಮ್ಮಿಕ್ಕಿ ಬಿಡುತ್ತದೆ. ಒಮ್ಮೆ ಯಾವುದೋ ಬೀದಿಯಂಚಿನ ನಾಯಿಮರಿಯೊಂದನ್ನು ತಂದು ಸಾಕಿಕೊಂಡಿದ್ದಳು.ಅದಕ್ಕೆ ಸೇವೆಯೆಂದರೆ ಏನು ಕಥೆ...? ಈ ಲೋಕದ್ದೆ ಅಲ್ಲ ಅನ್ನುವಷ್ಟರ ಮಟ್ಟಿಗೆ ಸಾಕಿಯೇ ಸಾಕಿದಳು.
 ಲಕ್ಷ್ಮಿಯ ಮಗ ಚಿನ್ನು, ನಾಯಿಯೊಡನೆ ಆಡಲು ದಿನಾ ಅವಳ ಶೆಡ್ಡಿನ ಕಡೆ ಓಡುತ್ತಿದ್ದ.. ಬೈದರೂ ಕೇಳದೆ ಇಬ್ಬರೂ ನಾಯಿಯನ್ನು ಜೋಪಾನ ಮಾಡಿದ್ದೆ ಮಾಡಿದ್ದು.ಚಿನ್ನು  ಲಕ್ಷ್ಮಿಯನ್ನು ಕಾಡಿ ಬೇಡಿ  ಬಿಸ್ಕೇಟು,ಬ್ರೆಡ್ಡು ಎಲ್ಲಾ ತೆಗೆದುಕೊಂಡು ಹೋಗಿ  ಆ  ನಾಯಿಗೆ ಹಾಕತೊಡಗಿದ. ಒಂದಿನ ಅದು ಗೆಳತಿಯನ್ನು ಹುಡುಕಿಕೊಂಡು ಎಲ್ಲಿಗೋ  ಹೋಯ್ತು. ಎರಡು ದಿನ ಪತ್ತೆಯಿಲ್ಲ.    ಚೆಲುವಿ, ಚಿನ್ನು  ಇಬ್ಬರೂ ಗೊಳೋ ಎಂದು ಅತ್ತರು. ಮತ್ತೆ ಎರಡು ದಿನ ಕಳೆದ ನಂತರ ನಾಯಿ ಹಾಜರು.. 'ನಾಯಿ ಸಿಕ್ಕೈತೆ,' ಎಂದು ಕುಣಿದಾಟ, ಹಾರಾಟ ಮತ್ತೆ ಶುರುವಾಯಿತು.   ನಾಯಿ ಬುದ್ದಿ,.. ಅದು ಮತ್ತೆ ಓಡಿಹೋಯಿತು. ಈ ಸಲ ನೆಟಿಗೆ ಮುರಿದು ಶಾಪ ಹಾಕಿದಳು.. ''ಇಷ್ಟು ದಿನಾ ಸಾಕಿದೀನಿ.. ಅನ್ನ ಹಾಕಿದೀನಿ..  ಇನ್ನು ಬಂದ್ರೆ ನೋಡು.. ಒದ್ದು ಓಡುಸ್ತೀನಿ..'' ಲೆಕ್ಕ ಹಾಕಿ ಬೈಯ್ಯತೊಡಗಿದಳು.
ಮತ್ತೊಮ್ಮೆ ಹೀಗಾಗಿತ್ತು. ಪಾಪ ಓದು ಬರಹ ಬಾರದ ಇವಳು ಪಕ್ಕದ ಮನೆಯಾಕೆಯಲ್ಲಿ ಚೀಟಿ ಹಣ ಕಟ್ಟುತ್ತಿದ್ದಳು. ಅದೇನಾಯ್ತೋ ಇವಳ ಚೀಟಿ ಹಣ ಕೊಡೋಲ್ಲ ಅನ್ನಲಿಕ್ಕೆ ಶುರುಮಾಡಿದಳಂತೆ ಪಕ್ಕದ ಮನೆಯಾಕೆ. . ಗೊಳೋ ಅನ್ನುತ್ತಾ ಬಂದಳು. ''ಪೋಲಿಸ್ ಗೆ ಕಂಪ್ಲೇಂಟ್ ಕೊಡ್ತೀನಿ ಅನ್ನು ನೋಡೋಣ'' ಎಂದು ಲಕ್ಷ್ಮಿ ಉಪದೇಶ ಮಾಡಿದಳು ಇವಳ  ರಗಳೆ ತಾಳಲಾರದೆ.  ಸೀದಾ ಹೋದಳು  ಚೀಟಿಯಮ್ಮನ ಮನೆ ಬಾಗಿಲಿಗೆ ; ಕೈಲೊಂದು   ಕವರ್ರು ಹಿಡಿದು.. ''ಏ.. ದುಡ್ಡು ಕೊಡ್ತೀಯಾ ..? ನಿನ್ ಮನೆ ಬಾಗ್ಲಾಗೆ ಬಿದ್ದು ಸಾಯಲ..? ನನ್ನ ಸಾವಿಗೆ ನೀನೆ ಕಾರಣ ಅಂತ ಕೆಲಸ ಮಾಡೋರ ಮನೆಲೆಲ್ಲಾ ಬರದು ಮಡ್ಗಿವ್ನಿ.. ಇದನ ಪೋಲಿಸರಿಗೆ ಅಂತ ಬರ್ದಿವ್ನಿ.ಈಗ ಕೊಟ್ಟು ಬರ್ತೀನಿ..  ನಂ ದುಡ್ಡು ಕೊಟ್ಟೆ ಬಚಾವು,'' ಎಂದು ಕೂಗು ಹಾಕಿದಳಂತೆ..  ಅಂತೂ ದುಡ್ಡು ವಸೂಲು  ಮಾಡಿಯೇ  ಬಿಟ್ಟಳು.  ಇವಳೇನಾದರೂ ಒಂದಕ್ಷರ ಕಲಿತಿದ್ದಿದ್ದರೆ ಹಿಡಿಯುವುದೇ ಕಷ್ಟ ಆಗುತ್ತಿತ್ತು ಎಂದು ಎಷ್ಟೋ ಸಲ ಅನಿಸುತ್ತಿತ್ತು ಲಕ್ಷ್ಮಿಗೆ.
ಲಾಲಾ..ಲಾಲಾಲಾ... ದೇವ್ರೇ.. ಇವಳ ಕುಣಿತಕ್ಕೆ ಬ್ರೇಕೇ ಇಲ್ಲ.
ನಿಧಿ ಕೇಳಿದಳು,'' ಏ ಚೆಲುವಿ ಸ್ಕೂಟೀನ ಇದೇ ನೈಟಿ ಹಾಕ್ಕೊಂಡೆ ಬಿಡ್ತೀಯಾ...? ನನ್ನ   ಹಳೆ  ಜೀನ್ಸ್ ಇದೆ ಕೊಡ್ಲಾ...?''  ಅಣಕಿಸಿದಳು
''ಅಕ್ಕೋ,   ಈ ನಿಧಿ ಹತ್ರ ನನ್ ಸುದ್ದೀಗೆ ಬರಬೇಡಾ ಅಂತ ಹೇಳಕ್ಕೋ..   ನಾನೂ ಚೂಡಿದಾರ ಹೊಲಿಸ್ಕೊಂಡು ಸ್ಕೂಟಿ ಬಿಡದನ್ನ ಆವಾಗ ನೋಡ್ಬೋದಂತೆ ನಿಧೀ ...'' .ಮೂತಿ ತಿರುವಿದಳು.ದರ ಬರ ಕಸ ಎಳೆದಾಡತೊಡಗಿದಳು.

 ***

ಯಾವುದೋ ಗಾಡಿ ಸೋವಿಯಲ್ಲಿ ಸಿಗುತ್ತಂತೆ ಅನ್ನುವ ಸುದ್ದಿ ಸಿಕ್ಕು     ಅದನ್ನು  ತರಲು ಹೋಗಬೇಕೆಂದು ಗಡಿ ಬಿಡಿಯಲ್ಲಿ ಕೆಲಸ ಮುಗಿಸಿ ಓಡಿದ್ದಳು ಚೆಲುವಿ.ನಾಲ್ಕು ದಿನದಿಂದ ಸ್ಕೂಟಿ ಕೊಡಿಸುವ ಗೆಳತಿಯ ಸ್ಕೂಟಿಯನ್ನೇ ಹಿಡಿದು ಪ್ರಾಕ್ಟೀಸ್ ಮಾಡತೊಡಗಿದ್ದಳು.  ''ಅಮ್ಮಾ,  ಮ್ಯಾಟನೀ ಷೋ, ಫಸ್ಟ್ ಷೋ  ನಡೀತಿದೆ ಚೆಲುವೀದು'' ಎಂದು ನಿಧಿ ಹಲ್ಲು  ಕಿರಿದಳು.

ಮರುದಿನ ಬಾಗಿಲು ತೆಗೆಯುತ್ತಿದ್ದಂತೆಯೇ.. ಕಣ್ಣಲ್ಲಿ ನೀರು ಹಾಕುತ್ತಾ ಮುಸು ಮುಸು ಮಾಡುತ್ತಾ ಒಳಗೆ ಬಂದಳು ಚೆಲುವಿ.. ,ಏನಾಯ್ತೂ... ಸ್ಕೂಟಿ ತಂದ್ಯಾ..? ಕೇಳಿದಳು ಲಕ್ಷ್ಮಿ.
''ಆ ಸ್ಕೂಟಿ ಗ್ಯಾರೆಜವ್ನ ಮುಖ ಒಡ್ದ ಹೋಗ್ಲಿ.. ಅವನ್ ಗ್ಯಾರೇಜ್ ಮುಚ್ಚಿ ಹೋಗ್ಲಿ.. ನಾಕ್ಕಾಸ್ ಇಲ್ದೆ ಪರ್ದಾಡ್ಲಿ..'' ನೆಟಿಕೆ ಮುರಿ ಮುರಿದು ಬೈಯ್ಯತೊಡಗಿದಳು ಚೆಲುವಿ..
''ಸರಿಯಾಗಿ ಹೇಳು..'' ಗದರಿದಳು ಲಕ್ಷ್ಮಿ.

''ಅಕ್ಕೋ, ನಾನ್ ಹೋಗೋವಷ್ಟರಲ್ಲಿ ಆ ಸ್ಕೂಟಿನ್ನ ಬೇರೆ  ಯಾರಿಗೋ ಮಾರ್ಬುಟ್ಟವನಂತೆ ಅವ್ನ ಮುಖಕ್ಕೆ.. ನಾನೇನ್ ದುಡ್ಡು ಕೊಡ್ತಿರ್ಲಿಲ್ವಾ..? ಆಸೆ ಪಟ್ಕೊಂಡು ಹೋಗಿದ್ದೆ.. '' ಹೋ ಎಂದು ಗೋಳಾಡತೊಡಗಿದಳು.

''ಅದಕ್ಕ್ಯಾಕಿಷ್ಟು ರಾಧ್ಧಾಂತ ಮಾಡ್ತೀಯ..? ಇನ್ಯಾವ್ದಾದ್ರೂ ಸಿಕ್ಕುತ್ತೆ ಬಿಡು. ಅದೊಂದೆನಾ..? ನೀನು ಅಡ್ವಾನ್ಸ್ ಕೊಟ್ಟು ಬರೋದಲ್ವಾ..? ನೀನು ಬರ್ತೀಯ ಸ್ಕೂಟಿ ಖರೀದಿ ಮಾಡಕ್ಕೆ ಅಂತ ಅವನಿಗೆ ಗ್ಯಾರಂಟೀ ಬೇಡ್ವ..?ನಿನ್ನೇ ಕಾಯ್ಕೊಂಡಿರಕ್ಕೆ ಆಗುತ್ತಾ..? ''ಸಮಾಧಾನಿಸಲು ಪ್ರಯತ್ನಿಸಿದಳು ಲಕ್ಷ್ಮಿ.
''ಅಕ್ಕೋ ನಾನ್ಯಾವತ್ತೂ ಮಾತಿಗೆ ತಪ್ಪೊಳೆ ಅಲ್ಲ..ವಿಚಾರ ಮಾಡೋದು ಬ್ಯಾಡ್ವಾ..? ಅವನಿಗೆ ನ್ಯಾಯಾ ನೀತಿ ಐತಾ..? ''ವಾದಕ್ಕೆ ಶುರು ಮಾಡಿದಳು.

''ಅದು ನನಗೆ ಗೊತ್ತು..ನಿನಗೆ ಗೊತ್ತು.  ಅವನಿಗೆ ಹೇಗೆ ಗೊತ್ತಾಗುತ್ತೆ.. ? ಅದು ಸಿಗದೆ ಇದ್ದಿದ್ದೆ ಒಳ್ಳೆದಾಯ್ತು ಬಿಡು.. ಯಾರಿಗೆ ಯಾವ್ದು ಸಿಗಬೇಕು ಅಂತ ಇರುತ್ತೋ ಅದೇ ಸಿಗೋದು.. ಒಂದೊಮ್ಮೆ ಆ ಗಾಡಿ ಸಿಕ್ಕಿದರೂ ನೀನು ಏನಾದರೂ ಎಡವಟ್ಟು ಮಾಡಿಕೊಂಡೇ ಮಾಡಿಕೊಳ್ಳುತ್ತಿದ್ದೆ.. ಮಕ್ಳು ಮರಿ ಇಲ್ವೇನೆ ನಿಂಗೆ.  ದೇವ್ರೇ ತಪ್ಸಿದಾನೆ ಸುಮ್ನಿರು.  ಪಾತ್ರೆ ತೊಳಿ.. ಈಗ. ''  ದಿನದ ಹೆಚ್ಚಿನ ಭಾಗ ಇವಳ ಸಮಸ್ಯೆ ಸರಿ  ಮಾಡುವುದರಲ್ಲೇ ಕಳೆದುಹೋಗುತ್ತಿತ್ತು ಲಕ್ಷ್ಮಿಗೆ.

ಈ ಮಾತು ಒಳ್ಳೆಯ ಪರಿಣಾಮವನ್ನೇ ಬೀರಿದಂತೆನಿಸಿತು.. ಕಣ್ಣೊರೆಸಿಕೊಂಡು, ''ಹೌದಾಕ್ಕಾ.. ಹಂಗೈತಾ..?  '' ಎನ್ನುತ್ತಾ ಕೆಲಸಕ್ಕೆ ಶುರುಮಾಡಿದಳು. ತನ್ನ ವೇದಾಂತದ ಬಗ್ಗೆ ತನಗೇ ಹೆಮ್ಮೆಯಾಯಿತು ಲಕ್ಷ್ಮಿಗೆ...!

***

ಮರುವಾರ ಮತ್ತೊಂದು ಗ್ಯಾರೆಜಲ್ಲಿ  ಹಳೆ ಸ್ಕೂಟಿಯನ್ನು ಖರೀದಿ ಮಾಡಿಕೊಂಡು ಬಂದೆ ಬಿಟ್ಟಳು ಚೆಲುವಿ.ಏಳು ಸಾವಿರವಂತೆ.  ಲೈಸೆನ್ಸ್ ಇಲ್ಲ.. ಮತ್ತೆಂತಾ    ಸುಡುಗಾಡೂ ಮಾಡಿಸಿಕೊಳ್ಳಲಿಲ್ಲ. ಮನಸ್ಸಿಗೆ ಅನ್ನಿಸಿದ್ದನ್ನು ಮಾಡಿಯೇ ಬಿಡಬೇಕೆನ್ನುವ ಅವಳ ಪ್ರಾಮಾಣಿಕ ತವಕಕ್ಕೆ   ಮೆಚ್ಚಲೇ ಬೇಕು.  ದಿನಾ ಒಂದು ರೌಂಡ್ ಸ್ಕೂಟಿಯಲ್ಲಿ ಸುತ್ತಾಟ.ಈಗೀಗ ಅದೂ ಇಲ್ಲ. ಪೇರಳೆ ಮರದ  ಬುಡದಲ್ಲಿ  ಚಳಿ ಕಾಯಿಸುತ್ತಾ ಗೊಬ್ಬೆ ಕಟ್ಟಿಕೊಂಡು, ಧೂಳು ಹೊದ್ದುಕೊಂಡು, ಬಂದೇ ಬರುತಾದ ಕಾಲ ಎನ್ನುತ್ತಾ  ಮಿರುಗುತ್ತಾ ನಿಂತಿದೆ.Friday, October 14, 2011

ಅಲ್ಲಿಂದ ಇಲ್ಲಿಗೆ.... ಇಲ್ಲಿಂದ ಎಲ್ಲೆಲ್ಲಿಗೋ..!!

  


ನಾನು ಈಸಲ ಬೇಸಿಗೆ ರಜೆ ಪ್ರಯುಕ್ತ ಊರಿಗೆ ಹೋಗಿದ್ದೆನಲ್ಲ. ಪ್ರತಿ ದಿನ ಹೆಚ್ಚು ಕಡಿಮೆ ಮದುವೆ,  ಉಪನಯನ, ಚೌಲ, ಹೀಗೆ ದಿನಾಲೂ ಕಾರ್ಯದ ಮನೆ ತಿರುಗಿದ್ದೇ ತಿರುಗಿದ್ದು.ನನಗೆ ಅದೆಲ್ಲ ಸಿಕ್ಕುವುದು ಅಪರೂಪ ಈಗೀಗ. ಸಿಕ್ಕಾಗ ಬಿಡಬಾರದು ಹಳೆಯ ಗೆಳತಿಯರು,ಪರಿಚಯದವರು, ನೆಂಟರಿಷ್ಟರು ಸಿಗುತ್ತಾರೆನ್ನುವ ಮನೋಭಾವದಲ್ಲಿ ಎಲ್ಲದಕ್ಕೂ ಭಾಗವಹಿಸುವ ತವಕ ನನ್ನದು.
ಒಂದೆರಡಕ್ಕೆ ನನ್ನ ಜೊತೆ ಮಕ್ಕಳೂ ಬಂದವರು,  ಮತ್ತೆ ಇಂತವರ ಮನೆಯ... ಇದು ಇದೆ ಬನ್ನಿ ಹೋಗೋಣ ಎಂದರೆ.. ''ಅಮ್ಮ ನಿನಗೆ ಯಾವ ಯ್ಯಾಂಗಲ್ಲಲ್ಲಿ ಕೈ ಮುಗೀ ಬೇಕು ಹೇಳು.. ನಿನ್ಮನೆ ಕಾರ್ಯದ ಮನೆಗೆ ಮಾತ್ರಾ ಕರಿಯಡ''ಎಂದರು. ನನ್ನ ಮಗಳು ’ಕಾರ್ಯದ ಮನೆ  ’ ಎನ್ನುವ ಶಬ್ಧವನ್ನು ಉರುಹೊಡೆದು ಇಟ್ಟುಕೊ೦ಡಿದ್ದಾಳೆ. ಅದು ಅವಳಿಗೆ ಸೋಜಿಗದ ಶಬ್ಧ.  ''ಯಂತಾತು ನಿಂಗಕ್ಕೆ.. ಅಲ್ಲಿ ಎಷ್ಟ್ ಜನ ಪರಿಚಯ ಆಗ್ತು ಗೊತ್ತಿದ್ದಾ..? ಹುಡ್ರನ್ನ ಕರ್ಕ ಬರ್ಲ್ಯನೆ ಕೇಳ್ತಾ.   ಸುಮ್ನೆ ಬನ್ನಿ.''.ಅಂದರೆ, ”ನಿನಗೊಂದು ಅಲ್ಲಿ ಯಾರ್ಯಾರೋ ಸಿಗ್ತಿರ್ತ.   .  ಮೆಗಾ ಸೀರಿಯಲ್ ತರಾ  ಮಾತಾಡ್ತಾ  ಇರ್ತಿ.  ಒಳ್ಳೆ ಬ್ಲಾಕ್ ಎಂಡ್  ವೈಟ್ ಸಿನ್ಮಾ ಡೈಲಾಗ್ಸ್  ಇದ್ದಂಗಿರ್ತು ನಿಂಗಳ ಡೈಲಾಗ್ಸು.  ಅದ್ನ ಕೇಳಕ್ಕೆ ನಾವ್  ಬತ್ವಲ್ಲೇ.   ಕಡೀಗೆ ಮನೆಗೆ ಬರಕಿದ್ರೆ , ಮತ್ತೆ ಹಂಗಾರೆ ನಮ್ಮನಿಗೆ ಬರ್ರೆ.. ಒಂದ್ಸಲಾ.  ಎನ್ನುವ ಬೋರಿಂಗ್ ಕ್ಲೈಮಾಕ್ಸು'' ಎಂದು ನನ್ನ ಮುಖಕ್ಕೆ ತಿವಿದರು.

 ಅದೂ ಸತ್ಯ. ಅವರಿಗೆ ದಿನನಿತ್ಯ ಶಹರದ ಜನಜ೦ಗುಳಿಯ ನಡುವೆ ಒಡನಾಡಿ ಆಡಿ ಬೇಸರ. ಮಲ್ಲೇಶ್ವರ೦ ಯೆಯ್ತ್ ಕ್ರಾಸ್ ಗೆ ಒಮ್ಮೆ ಹೋಗಿ ಬ೦ದರೆ ಜಾತ್ರೆಗೆ ಹೋಗಿ ಬ೦ದ ಅನುಭವ ನೀಡುತ್ತದೆ. ಮತ್ತೆ ಇಲ್ಲೂ ಅದೇ ತರ ಗಿಜಿಗುಡುವ ಜನ ಅವರಿಗೆ ಬೇಡ.  ಅರಾಮಾಗಿ ಅಜ್ಜನ ಮನೆಯಲ್ಲಿ ಮಕ್ಕಳೊ೦ದಿಗೆ ವಿಶಾಲವಾದ ಜಾಗದಲ್ಲಿ ಸ್ವೇಚ್ಚೆಯಿ೦ದ ಆಡಿಕೊ೦ಡಿರಲು ಅವಕ್ಕೆ ಇಷ್ಟ.  ಮರಗಿಡಗಳ ನಡುವೆ ನಾಯಿ,ಬೆಕ್ಕು, ದನಕರು, ಚಿಲಿಪಿಲಿಗುಟ್ಟುವ ಹಕ್ಕಿಗಳು ಇವುಗಳ ಜೊತೆ ತಮ್ಮದೇ ಭಾಷೆಯಲ್ಲಿ ಸ೦ವಹಿಸುತ್ತಾರೆ. ಶಿಶಿರ ಅ೦ತೂ ಎಲ್ಲಿಗೆ ಬಾ ಎ೦ದು ಕರೆದರೂ 'ನಾಯಿ ಕರಿಯನನ್ನೂ ಕರೆದುಕೊ೦ಡು ಹೋಗೋಣವಾ,' ಎ೦ದು ಕೇಳುತ್ತಾನೆ.  ಮಾವನಿಗೆ ಹೇಳಿದ್ದಾನೆ ತನಗೊ೦ದು ಪುಟ್ಟೀಕರ ಮತ್ತು ಅದರ ಅಮ್ಮ ಬೇಕೇ ಬೇಕೆ೦ದು. ಬೆ೦ಗಳೂರಿಗೆ ಮರಳುವಾಗ ಕೊಡುತ್ತೇನೆ೦ದು ಮಾವ ಮಾತುಕೊಟ್ಟಿದ್ದ. ದನ ಕರು ಎಲ್ಲ ಎಲ್ಲಿ ಕಟ್ಟಿಹಾಕುತ್ತೀಯೆ೦ದು ಕೇಳಿದ್ದಕ್ಕೆ ಅಪ್ಪನ ಕಾರುಶೆಡ್ಡಿನಲ್ಲಿ ಮತ್ತು ಅಪ್ಪಅಮ್ಮ ಕೊಟ್ಟಿಗೆ ಚಾಕರಿ ಮಾಡುತ್ತಾರೆಂದು ನಿರ್ಧಾಕ್ಷಿಣ್ಯವಾಗಿ ನಮಗೆ ಕೆಲಸ ಕೊಟ್ಟು,  ಅಕ್ಕಚ್ಚು, ನೀರು ಐಶು ಕೊಡುತ್ತಾಳೆ ಮತ್ತು ತಾನೇ ಹುಲ್ಲು ಹಾಕುತ್ತೇನೆ೦ದು ಎಲ್ಲರಿಗೂ ಕೆಲಸ ಬೇರೆ ಹ೦ಚಿ   ಐಶುವನ್ನು ನೇರವಾಗಿ ಮೂರನೇ ಮಹಾಯುದ್ಧಕ್ಕೆ ಆಹ್ವಾನಿಸಿದ್ದ.   '' ಏ.., ಹೋಗೆಲೋ ನೀನೆ ಅಕ್ಕಚ್ಚು ನೀರು  ಕೊಟ್ಟುಕೋ  ಬೇಕಿದ್ದರೆ, ” ಎ೦ದು ಅವಳು ಜಗಳ  ತೆಗೆದು   ಅವನನ್ನು ಅಟ್ಟಿಸಿಕೊ೦ಡು ಹೊರಟಳು.  ನಾವೇನೋ ಈ ಶತಮಾನದ ಯುದ್ಧವನ್ನು ನಮ್ಮನೆಯಲ್ಲಿಯೇ  ನೋಡಬೇಕಾದೀತೇನೋ ಎ೦ದು ಹಿ೦ದೆಯೇ ಹಿ೦ಬಾಲಿಸಿಕೊ೦ಡು ಬ೦ದರೆ ಇಬ್ಬರೂ ಮಾವನ  ಮಕ್ಕಳ  ಜೊತೆಗೆ ಅ೦ಗಳದ ತುದಿಯಲ್ಲಿ ಬೆಳೆದಿರುವ ಚದುರ೦ಗದ ಗಿಡದ ಮೇಲೆ ಮೊದ್ದಾಗಿ ಮಲಗಿರುವ ಓತಿಕ್ಯಾತವೊ೦ದನ್ನು    ನೋಡುವುದರಲ್ಲಿ     ತಲ್ಲೀನರಾಗಿದ್ದರು.    ಮಕ್ಕಳದು ಪ್ರತಿಯೊ೦ದನ್ನೂ ಶೋಧಿಸಿ, ಕೆದಕಿ ವಿವರವನ್ನು ಪಡೆಯುವ ಗುಣ. ಕಣ್ಣಿಗೆ ಕ೦ಡಿದ್ದನ್ನೆಲ್ಲಾ 'ನಮ್ಮನೇಲಿ  ಸಾಕೋಣ' ಅನ್ನುತ್ತಾನೆ ನನ್ನ ಮಗ.ಓತಿಕ್ಯಾತವನ್ನೂ ಸಾಕೋಣ ಅ೦ದರೆ ಕಷ್ಟ ಎ೦ದುಕೊ೦ಡು 'ಅದು ಸಾಕುಪ್ರಾಣಿ ಅಲ್ಲ ಕಣೊ,' ಎ೦ದು ಐಶು ಮುನ್ನೆಚ್ಚರಿಕೆಯಿಂದ  ವಿವರಣೆ ಕೊಡುತ್ತಿದ್ದಳು. ಹಿಂದೊಮ್ಮೆ ಹಾಗೆಯೇ ಆಗಿತ್ತು. ಅವನು ಸುಮಾರು  ಮೂರು ವರ್ಷ ಇದ್ದಾಗ ''ಬಾಲ ಗಣೇಶ ''  ಸೀಡಿ ನೋಡಿ ನೋಡಿ   ನಮ್ಮನೆಯಲ್ಲೂ  ಇಲಿ ಸಾಕೋಣ ಎಂದಿದ್ದ. ''ಗಣೇಶನಿಗಾದರೆ ಇಲಿ ಇದೆ ನನಗೂ ಬೇಕು,'' ಎಂದು ಅಪ್ಪನ ಜೀವ ತಿಂದು ಸಾಕು ಬೇಕು ಮಾಡಿದ್ದ. ಐಶು ''ಜೊತೆಗೆ ಬೆಕ್ಕನ್ನೂ ಸಾಕೋಣ; ಆಮೇಲೆ ಇಲಿ ಹಿಡಿಯಲು ಬೇಕಾಗುತ್ತದೆ, ''ಎಂದು ಕೆಣಕಿ,   ಇಲ್ಲದ ಇಲಿ ಮತ್ತು ಬೆಕ್ಕಿನ ವಿಷಯವಾಗಿ ಸುಮಾರು ಹೊತ್ತು ಮನೆ ರಣಾಂಗಣವಾಗಿತ್ತು.ಅದನ್ನೇ ನೆನೆದು  ರಾಜೀ ಪಂಚಾಯ್ತಿಕೆ ಮಾಡಲು ನಾನು ಸಡಗರದಿಂದ ಬಂದದ್ದೆ ಬಂತು, ಅದಕ್ಕೆ ಅವಕಾಶವನ್ನೇ ಕೊಡದೆ ಓತಿಕ್ಯಾತ ಮುಗುಳ್ನಗುತ್ತಾ ಕುಳಿತಿತ್ತು.ಮಕ್ಕಳಿಗೆ  ಹಾರಲು, ಕುಣಿಯಲು, ಓಡಲು, ಬೀಳಲು ಸಾಕಷ್ಟು ಜಾಗವಿದೆ ಊರಲ್ಲಿ. ನೋಡ್ತಾ ನೋಡ್ತಾ ಎಷ್ಟೋ ವಿಸ್ಮಯಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತವೆ ಅವು. ವಾಪಾಸು  ಅಲ್ಲಿಂದ ಹೊರಡಿಸುವುದು ಬಲು ಕಷ್ಟದ ಕೆಲಸ. 

ಅಂತೆಯೇ ನನಗೂ ನೆಂಟರಿಷ್ಟರು, ಸಂಬಂಧಿಕರು ಬಳಗದವರನ್ನೆಲ್ಲಾ ಮಕ್ಕಳಿಗೆ  ಪರಿಚಯ ಮಾಡಿಸುವ ಹಂಬಲ. ಅಪ್ಪನ ಬಳಗ  ಅಮ್ಮನ  ಬಳಗ ಎಲ್ಲಾ ಪರಿಚಯ ಮಾಡಿಸಲೇ ಬೇಕೆಂದು ನಾನೂ ನನ್ನ ಸಣ್ಣ ಅತ್ತಿಗೆ ಸೇರಿ ದಿಢೀರ್   ನಿರ್ಧಾರ  ಮಾಡಿಯಾಯಿತು. ಎಲ್ಲಾ ನನ್ನ ಅಜ್ಜನ ಮನೆ ಸಿರ್ಸಿ  ಕಡೆ ಹೋಗುವುದು ಅಂತ.ಸಿರಸಿಯಲ್ಲಿ  ನಮ್ಮ ನೆಂಟರು ತುಂಬಾ ಇದ್ದಾರೆ.
  ಅಣ್ಣನ ಕಾರು ಮತ್ತು ಅವನದೇ ಸಾರಥ್ಯವೂ ಒದಗಿತು.[ ನನ್ನ ಪತಿರಾಯರು ಮೊದಲೇ ಬೆಂಗಳೂರಿಗೆ ಬಂದು ಬಿಟ್ಟಿದ್ದರಲ್ಲ! ]  ತವರಿನಲ್ಲಿ ತಂಗಿಯಂದಿರ ಮಾತಿಗೆ ಬೆಲೆ ಜಾಸ್ತಿ..! ಬೆಳಿಗ್ಗೆ ಒಂಬತ್ತಕ್ಕೆಲ್ಲಾ ತೀರ್ಮಾನಿಸಿ  ಅರ್ಧ ಗಂಟೆಯಲ್ಲಿ ಎಲ್ಲಾ ಮಕ್ಕಳು ಮಂದಿಯೆಲ್ಲಾ 'ನ ಭೂತೋ ನ ಭವಿಷ್ಯತಿ' ಎಂಬಂತೆ  ತಯಾರಾಗಿ ಹೊರಟೆವು.

ಒಟ್ಟು ಒಂದೂವರೆ ದಿನದಲ್ಲಿ ಒಂಬತ್ತು ನೆಂಟರ ಮನೆಗೆ ಭೇಟಿ  ಕೊಟ್ಟು ಅದರಲ್ಲಿ ಒಂದು ಅರ್ಧ ಘಂಟೆ ನನ್ನ ತಾಯಿಯವರಿಗೆ  ಡಾಕ್ಟರ್  ಚೆಕಪ್ಪೂ ಮತ್ತು ಬನವಾಸಿಯ ಮಧುಕೇಶ್ವರನ ದರ್ಶನವನ್ನೂ ಮುಗಿಸಿಬಂದಿದ್ದೆವೆಂದರೆ ನೀವೇ ಊಹಿಸಿ ನಾವೆಷ್ಟು ಹುಶಾರಿದ್ದೇವೆ ಅಂತ. ಎಲ್ಲಾ ಕಡೆ ಪ್ರಕೃತಿ ಸಾನ್ನಿಧ್ಯ ಜೊತೆಗೆ ಇದ್ದುದರಿಂದ ಮಕ್ಕಳಿಗೆ ಪ್ರತಿ ಮನೆಯೂ ಆಪ್ಯಾಯಮಾನವಾಗಿಯೇ ಇತ್ತು ಅನ್ನುವುದು ಗಮನಿಸಿದ ವಿಚಾರ. 

ಹೋದ ನೆಂಟರ ಮನೆಗಳಲ್ಲೆಲ್ಲಾ ಮನೆ ಜನ  ಎಲ್ಲರೂ ಇದ್ದು ಎಲ್ಲೂ ನಮಗೆ ಡಿಸ್ ಅಪಾಯಿಂಟ್ ಮೆಂಟ್ ಆಗಲಿಲ್ಲ.ಅರ್ಧ ಘಂಟೆ ಅಂದರೆ ಒಂದು ನಿಮಿಷ ಹೆಚ್ಚಿಲ್ಲ ಕಡಿಮೆಯಿಲ್ಲ, ಸಮಯವನ್ನು ಅದು ಹೇಗೆ ನಿಭಾಯಿಸಿದ್ದೆವೆಂದರೆ ನನಗೆ ನನ್ನ ದೇಶವೇ ಮರೆತು ಹೋಗುವಷ್ಟು!  ನಾನು ಈ ದೇಶದಲ್ಲೇ ಹುಟ್ಟಿದ್ದು ಹೌದೋ ಅಥವಾ ನಾವು ಬೇರೆ ದೇಶದಲ್ಲಿದ್ದೇವೋ ಎಂದು ನನಗೆ ಅನುಮಾನ ಬರಲು ಶುರುವಾಯಿತು. ಈಗಲೂ ನೆನಸಿಕೊಂಡರೆ ಅನುಮಾನ ಪರಿಹಾರವೇ ಆದಂತೆನಿಸುವುದಿಲ್ಲ.
ಸುಶೀಲ   ಚಿಕ್ಕಮ್ಮನ ಕೈಗಾರಿಕೆ.

  ಅತಿಥಿ ಸತ್ಕಾರದ ಶೈಲಿಯಲ್ಲಿ ಸಾಗರ ಕಡೆಯವರಿಗಿಂತ ಸಿರಸಿಯ ಕಡೆ ಸ್ವಲ್ಪ ಭಿನ್ನ.ಮನೆ ದಣಕಲು ದಾಟುತ್ತಿರುವಂತೆ ಮೂಲೆ ಮೂಲೆಗಳಿಂದ ಸ್ವಾಗತದ ಧ್ವನಿ ಕೇಳಿ ಬರುತ್ತದೆ.'' ತಂಗೀ ಅಂದಿ, ಮಗಾ ಅಂದಿ, ಕೂಸೇ ಅಂದಿ,   ಅತ್ತೆ  ಅಂದಿ, ಮಾವ ಅಂದಿ,  ಇತ್ಯಾದಿತ್ಯಾದಿ ಅಂದೀ.....  ಎನ್ನುವ ಕರೆ  ಅಲೆಯಲೆಯಾಗಿ   ಕೇಳಿ ಬರತೊಡಗುತ್ತದೆ. ನನ್ನಜ್ಜನ ಮನೆ  ವಿಶೇಷತೆ ಎಂದರೆ    ಒಂದೇ ಮಾಡಿನಡಿ ಒಂಬತ್ತು ಮನೆಗಳಿವೆ.


 ನನ್ನಜ್ಜನ ಮನೆ,  ಇಡೀ ಊರಿಗೆ ಒಂದೇ ಜಗಲಿ

ಒಂದೇ ಕೋಳು. ಅಲ್ಲಿಗೆ ಹೋದೆವೆಂದರೆ ಆಚೀಚೆ ಮನೆಯವರಾದಿಯಾಗಿ ಎಲ್ಲರೂ ಮಾತನಾಡಿಸುವವರೇ.. ಎಲ್ಲರಿಗೂ 'ಹ್ಞೂ ಅಂದಿ,ಹ್ಞೂ ಅಂದಿ, ' ಎಂದು ಹೇಳುವಷ್ಟರಲ್ಲಿ ಒಂದು ಒಪ್ಪತ್ತೆ ಆಗಿಹೋಗುತ್ತಿತ್ತು. ಮಳೆ ನಿಂತ ಮೇಲೆ ಹನಿಯೊಂದು ಮೂಡುವಂತೆ ಆಗಾಗ ಕಂಡವರೆಲ್ಲಾ   'ತಂಗೀ ಅಂದಿ,' ಎನ್ನುವ ಪ್ರಕ್ರಿಯೆ ಮುಂದುವರೆಯುತ್ತಲೇ ಇರುತ್ತದೆ.   ಪ್ರತಿಯೊಬ್ಬರೂ, ಪ್ರತಿಯೊಬ್ಬರನ್ನೂ ಹೀಗೆಯೇ ಸಂಬಂಧಗಳನ್ನು ಆರೋಪಿಸಿಯೇ ಕರೆಯುವುದರಿಂದ ಚಿಕ್ಕ ಮಕ್ಕಳಾದಿಯಾಗಿ  ಎಲ್ಲರಿಗೂ  'ಯಾರು ಹೇಗೆ ನೆಂಟರು,' ಅನ್ನುವ ಮೂಲಜ್ಞಾನ ತಾನಾಗಿಯೇ ಒದಗಿಬಿಡುತ್ತದೆ! ನನ್ನ ಮಾವನ ಮೊಮ್ಮಗಳು ಮೇಧಿನಿ ಪುಟ್ಟ ಸೂಜು ಮೆಣಸಿನಕಾಯಿ, ಎಲ್ಲರನ್ನೂ ದೊಡ್ದವರಂತೆಯೇ ಕರೆದು ಗೊತ್ತಿಲ್ಲದವರನ್ನು 'ನೀನು ಅಕ್ಕನಾ ? ಅತ್ತಿಗೆಯಾ..?' ಎಂದು ಗೊತ್ತುಮಾಡಿಕೊಂಡು ಮುದ್ದಾಗಿ  ಮಾತನಾಡಿಸಿದ್ದು ಎಲ್ಲರಿಗೂ ಹರುಷವುಕ್ಕಿಸಿತು ಜೊತೆಗೆ,   ನನಗೆ ಸ್ವಲ್ಪ ಆಲೋಚನೆಗೆ ಹಚ್ಚಿತು.

ಶಹರಗಳಲ್ಲಿ ವಾಸಿಸುವ ಮಕ್ಕಳಿಗೆ ನಿಜಕ್ಕೂ  ಸಂಬಂಧಗಳ ಪ್ರಾಮುಖ್ಯತೆಯನ್ನು  ಡೆಮೋ  ಮಾಡಿಯೇ ತೋರಿಸಬೇಕಾಗಿ ಬರುತ್ತದೆ ಇನ್ನು ಮುಂದೆ.    ಮನೆಗೊಂದೇ ಮಗು ಕಾನ್ಸೆಪ್ಟಿನಡಿಯಲ್ಲಿ ಸಂಬಂಧಗಳು ಹೇಗೆ ಗೊತ್ತಾಗಬೇಕು..?
ಮೊದಲೆಲ್ಲಾ ಅಜ್ಜನ ಮನೆಗೆ ಹೋದರೆ ಒಂದು ಇಪ್ಪತೈದರಿಂದ ಮೂವತ್ತು ಮಕ್ಕಳು ನಮಗೆ ಆಟಕ್ಕೆ  ಸಿಗುತ್ತಿದ್ದರು. ಈಗ ಇಡೀ ಒಂಬತ್ತು ಮನೆ ಊರಿಗೆ ಒಂದೋ ಎರಡೋ ಮಕ್ಕಳು ! ಮನೆ ಮಕ್ಕಳೆಲ್ಲಾ ಊರು ಬಿಟ್ಟು ಶಹರ ಸೇರಿದುದರ ಪರಿಣಾಮ. ಅಜ್ಜ ಅಜ್ಜಿ ಮಾತ್ರ ಊರಲ್ಲಿ.  ಶ್ರೀಶಂ ಬ್ಲಾಗಿನ ರಾಘಣ್ಣ ಹೇಳಿದಂತೆ ಊರಲ್ಲಿ ಈಗ ಅಡಿಗೆ ಮನೆಲೊಂದು ಕೆಮ್ಮು, ಹೊರಗೆ ಜಗಲಿಯಲ್ಲೊಂದು  ಕೆಮ್ಮು !


  ಸಿರ್ಸಿ ಕಡೆಯ  ಇನ್ನೊಂದು ವಿಶೇಷತೆಯೆಂದರೆ, ಅತಿಥಿಗಳು ಬಂದಾಗ ಅವರಿಗೆ ಕೈಕಾಲು ತೊಳೆಯಲು ನೀರು ತಂದಿಟ್ಟು   ನಮಸ್ಕರಿಸಿ ಹೋಗುವ  ಪರಿಪಾಟ. ಮೊದಲೆಲ್ಲ ಗಮನಕ್ಕೆ ಬರುತ್ತಿರಲಿಲ್ಲ.   ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸುವ ಈ  ಕ್ರಮ ಎಷ್ಟೊಂದು ಮಹತ್ವ ಪೂರ್ಣವಾಗಿದೆ.!ಸಂಬಂಧಗಳನ್ನು ಗುರುತಿಸುವ, ಗೌರವಿಸುವ,  ಬೆಸೆಯುವ, ಬೆಳೆಸುವ, ಉಳಿಸುವ ಈ ಸಂಸ್ಕಾರ ಎಷ್ಟೊಂದು ಅರ್ಥಪೂರ್ಣ!   ಪೇಟೆ ಸೇರಿದ ಮಂದಿಯೆಲ್ಲಾ ಈ ಪದ್ಧತಿಯನ್ನು ಉಳಿಸಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ.  ಇಲ್ಲಿಯ ಧಾವ೦ತದ ಬದುಕಿನಲ್ಲಿ ಅದನ್ನೆಲ್ಲಾ ಅನುಸರಿಸಲು ಸಮಯ ಮತ್ತು ಅವಕಾಶ ಸಿಗದೇ   ಅಳಿವಿನಂಚಿಗೆ  ತಲುಪಲು ಹೆಚ್ಚು ಸಮಯ ಬೇಕಿಲ್ಲ. ಆ ಪದ್ಧತಿಗಳೆಲ್ಲಾ ನನಗೆ ಈಗ ಯಾಕೋ  ಆಪ್ಯಾಯಮಾನವಾಗುತ್ತಿವೆ. ಕಳೆದು ಹೋಗಿ ಬಿಡುತ್ತದೆ ಅನ್ನುವುದರ ಬಗೆಗೆ ಹೆಚ್ಚು ಪ್ರೀತಿ..  ನನ್ನ ಮಕ್ಕಳಿಗೆ ಇದೆಲ್ಲಾ ಹೊಸತಾದರೂ ಇಷ್ಟವಾಯಿತು.  


ಅಜ್ಜನ ಮನೆಯಲ್ಲಿ ಅತ್ತೆ ಊಟಕ್ಕೆ ಅನ್ನಕ್ಕೆ ಕಲೆಸಿಕೊಳ್ಳಲು ಬರೀ ಐದೇ ತರದ ಪದಾರ್ಥ ಮಾಡಿದ್ದಳು! ಇನ್ನೂ ಒಂದು ಪದಾರ್ಥ ಕಡಿಮೆಯಾಯಿತೆಂದು ಬೇಜಾರು ಮಾಡಿಕೊಂಡಳು ಜೊತೆಗೆ.! ಉಳಿದಂತೆ ಮೂರು ಸ್ವೀಟು.. ಸ್ವಲ್ಪ ಹಪ್ಪಳ, ಬಜೆ .....ಇತ್ಯಾದಿ..  ಇದೆಲ್ಲಾ ನಟರಾಜ್ ಗೆ ಫೋನಿನಲ್ಲಿ ಹೇಳಿ ಹೊಟ್ಟೆ ಉರಿಸೋಣವೆಂದರೆ ''ಓಹೋ ನೀನು ಈಗ ಜೀರೋ  ಸೈಜ್ಹಾಗಿ ಬರುತ್ತಿದ್ದೀಯ ಅನ್ನು...  ಸೊನ್ನೆಯ ಆಕಾರದಲ್ಲಿ..! '' ಎಂದು ನಕ್ಕರು. 


 ಬನವಾಸಿ ಮಧುಕೇಶ್ವರನ ಸನ್ನಿಧಿಯಲ್ಲಿ..

ಅಮ್ಮ ಅಣ್ಣನೊಂದಿಗೆ  ನಾನೂ ನನ್ನ ಮಗಳೂ ..

ಹೋಗುವಾಗ ಬರುವಾಗ  ದಾರಿಯಲ್ಲಿ ವಿಶಾಲವಾದ ಹಸಿರು  ಗದ್ದೆಗಳನ್ನು ನೋಡುವ  ಅವಕಾಶ ಮಾತ್ರಾ ಸಿಗಲಿಲ್ಲ. ಎಲ್ಲಾ ಕಡೆ  ಭತ್ತ ಕೊಯ್ದು  ಬೆತ್ತಲಾಗಿತ್ತು  ಭೂಮಿ. ಅಲ್ಲಲ್ಲಿ ಹಚ್ಚೆ ಹಾಕಿದಂತೆ ಕಬ್ಬಿನಗದ್ದೆಗಳು ಆಲೆಮನೆಗೆ ಕಾದಿದ್ದವು. 
ದಾರಿಯಲ್ಲೇ ಅದೆಷ್ಟು ಮಾತುಗಳು ಖರ್ಚಾದವು ..! ಒಂದಾದರೂ ಕೆಲಸಕ್ಕೆ ಬರುವಂಥದಲ್ಲ.    ಹಳ್ಳಿಯಿಂದ  ದಿಲ್ಲಿಯವರೆಗೆ, ಕೊನೆಕೊಯ್ಲಿನಿಂದ ರಿಸಿಶನ್ನಿನ ವರೆಗೆ,   ದೇವಸ್ಥಾನದಿಂದ ಪಾಕಿಸ್ತಾನದ ವರೆಗೆ,  ಹೀಗೆ ಒಂದಕ್ಕೊಂದು ತಾಳ ತಂತುಗಳಿಲ್ಲದೆ ಮಾತುಗಳು ರಸ್ತೆಯುದ್ದಕ್ಕೂ ಚೆಲ್ಲಾಡಿದವು. 
ಒಂದು ವಿಚಾರ ಹೇಳಿ ನನ್ನ ಅಣ್ಣ ನನ್ನ ತಲೆ ತಿಂದ..  ನಾನೂ ಹೋದಲ್ಲೆಲ್ಲಾ ದೊಡ್ಡದಾಗಿ    ಕಂಡ ಕಂಡಿದ್ದೆಲ್ಲಾ  ಫೋಟೋ ತೆಗೆಯುತ್ತಾ   ಫೋಸ್ ಕೊಡುತ್ತಿದ್ದೇನಲ್ಲಾ.   ''ಏ ಮಾರಾಯ್ತಿ.. ದೃಶ್ಯವನ್ನೂ ಶ್ರವ್ಯವನ್ನೂ  ರೆಕಾರ್ಡ್ ಮಾಡುವ ಟೆಕ್ನಾಲಜಿ  ಗೊತ್ತು ನಮಗೆ;   ಅದೇ ವಾಸನೆಯನ್ನು ರೆಕಾರ್ಡ್ ಮಾಡಲು ಸಾಧ್ಯವಾ..? ರುಚಿಯನ್ನು ರೆಕಾರ್ಡ್ ಮಾಡ್ಲಿಕ್ಕಾಗುತ್ತ..? ಟಚ್ ಫೀಲಿಂಗನ್ನು ಹಿಡಿದಿಡಲು  ಆಗತ್ತಾ..? !!! ''
  
 
ಹೀಗೆ ಮಾತು ಸಾಗುತ್ತಾ ಸಾಗುತ್ತಾ..ಇದೆಲ್ಲಾ ಟೆಕ್ನಾಲಜಿ   ನಮ್ಮ ಉಪನಿಷತ್ತುಗಳಲ್ಲಿ ಇರಬಹುದೆಂದೂ, ಜಪಾನಿನವರೋ, ಜರ್ಮನಿಯವರೋ ಅದನ್ನು ಅರ್ಥೈಸಿ ಪ್ರಾಡಕ್ಟ್  ತಯಾರಿಸುತ್ತಾರೆಂದೂ,  ಕಡೆಗೆ ಚೀನಾದವರು ಅದನ್ನು ಕದ್ದು ನಮಗೆ ಸೋವಿಯಲ್ಲಿ ಮಾರಬಹುದೆಂದೂ, ಆಗ ನಾವು ಅದನ್ನು ಖರೀದಿಸಬಹುದೆಂದೂ  ಊಹಿಸಿ ಅಲ್ಲಿಗೆ ಆ ತಲೆನೋವು ಕಡಿಮೆ ಮಾಡಿಕೊಂಡೆವು..!!!!

ಎಲ್ಲಿಂದಲೋ ಶುರುವಾದ ಮಾತು ಎಲ್ಲೆಲ್ಲಿಗೋ ಹೋಯಿತು.  ಅಂತೂ ಮುಗಿಸಿದೆ.. ಈಗಿನ ಮಾತನ್ನು..!!!
ವಂದನೆಗಳು.

Saturday, September 24, 2011

ಮತ್ತೆ ಬಂತು ಚಿತ್ತಾರದರಮನೆಯಲ್ಲಿ ಹುಟ್ಟಿದ ಹಬ್ಬ..!

  ಎರಡು ಹೆಜ್ಜೆ ಮುಂದಿಟ್ಟಿದ್ದೇನೆ..

ತುಂಬಾ ಚಿಕ್ಕದು ನನ್ನ ಅಕ್ಷರ ಪ್ರಪಂಚ.  ಇಲ್ಲಿಯ ವರೆಗೆ ನಾನು ಪೋಸ್ಟಿಸಿದ್ದು; ಅದು  ಯಾವ ಪ್ರಾಕಾರ  ಅನ್ನುವುದು ಕೆಲವೊಮ್ಮೆ ನನಗೆ ಗೊಂದಲ ಉಂಟಾಗುತ್ತದೆ.  ನಾನು ಬರೆದಿದ್ದು ಕಥೆಯೋ ಕವನವೋ, ಕಾದಂಬರಿಯೋ, ಹಾಸ್ಯವೋ, ಹರಟೆಯೋ, ಅಂತೂ ನಾನು ಅದನ್ನು ಏನೆಂಬುದಾಗಿ  ತಿಳಿದುಕೊಂಡಿದ್ದೇನೆ ಎನ್ನುವುದನ್ನು ಕಥೆ, ಹರಟೆ, ಕವನ ಎನ್ನುವ ಲೇಬಲ್ ಹಚ್ಚಿ ನಿಮಗೆ ತಿಳಿಸಿದ್ದೇನೆ.ಸಹ ಬ್ಲಾಗಿಗರಿಂದಲೇ ನಾನು ಬರೆಯುವುದನ್ನು ಕಲಿತಿದ್ದು.  ಸಾಹಿತ್ಯ ಅದು, ಇದು, ಮಣ್ಣು ಮಸಿ ಎನ್ನುವ ತೀರಾ ಗೋಜಿಗೆ ಹೋಗುವವಳೇನೂ ನಾನಲ್ಲ.. ಆದರೆ ಬಾಲ್ಯದಿಂದಲೂ  ವಿಪರೀತ  ಓದುವ ಹುಚ್ಚು. ಪಾಠದ ಪುಸ್ತಕಕ್ಕಿಂತ ಬೊಂಬೆಮನೆ, ಚಂದಮಾಮ,  ಬಾಲಮಿತ್ರ, ಮಯೂರ, ತುಷಾರ, ತರಂಗ, ವಾರಪತ್ರಿಕೆ, ಪ್ರಜಾಮತ, ಲೆಕ್ಕವಿಲ್ಲದಷ್ಟು ಕಾದಂಬರಿಗಳು, ವಿಧ ವಿಧ ಪುಸ್ತಕಗಳು   ಹೀಗೆ ಕಾಲಕ್ಕೆ ತಕ್ಕಂತೆ ವಯಸ್ಸಿಗನುಗುಣವಾಗಿ ಪುಸ್ತಕಗಳ ಸಂತೆಯೇ ನನ್ನೆದುರು. 


ಆದರೆ ಈಗೀಗ ಓದಲು ಸಮಯ ಸಾಲುತ್ತಿಲ್ಲ ಎನ್ನುವ ನೆವವಿದೆ..! ಓದದಿದ್ದರೆ ಬರೆಯುವಾಗ ತಡವರಿಸುತ್ತದೆ,  ಮೊದಲೆಲ್ಲಾ ಬ್ಲಾಗು ವಾರಕ್ಕೊಮ್ಮೆ ಹೊಸ ಪೋಸ್ಟಿನಿಂದ ಕಂಗೊಳಿಸುತ್ತಿತ್ತು. ಈಗ ವಾರ ಮುಗಿದು ತಿಂಗಳು ಕಳೆದರೂ  ಬಾಗಿಲು ಬಳಿದು ರಂಗೋಲೆ ಇಡಲು ಸಾಧ್ಯವಾಗುತ್ತಿಲ್ಲ. ಆದರೂ ಚಿತ್ತಾರದರಮನೆಗೆ ಎರಡು ತುಂಬಿದ ಸಂಭ್ರಮ   ಸಡಗರದಿಂದ ಬರೆಯಲು ತೊಡಗಿದ್ದೇನೆ.ಏನು ಬರೆಯಲಿ? ಹೇಗೆ ಬರೆಯಲಿ?  ಎನ್ನುವ ಹುಡುಕಾಟದಲ್ಲಿಯೇ ಓಡಾಡುತ್ತಿದ್ದೇನೆ.ಚುನಾವಣೆ ಬಂದಾಗ ರಾಜಕಾರಣಿಗಳು ಎಲ್ಲಾ ತೋರಿಕೆಯ  ಕಾಮಗಾರಿಗಳನ್ನೂ ಮಾಡಿ ಮುಗಿಸಲು ಹವಣಿಸುವುದಿಲ್ಲವೇ..? ಹಾಗೆಯೇ.  ಬರೆಯಲು ಸುಮಾರು ವಿಷಯ, ವಿಶೇಷ ಇದ್ದರೂ....  ಬರೆಯಬೇಕು ಅಂದುಕೊಂಡ ವಿಚಾರವನ್ನು ಮತ್ಯಾರೋ ಬರೆದಿದ್ದಾರೆ, ಮತ್ತೆ ಅದನ್ನೇ ಬರೆಯುವುದೇನು ಅನ್ನುವ ಪಲಾಯನವಾದ ಕೂಡಾ ಇದೆ....!


ಎಲ್ಲರಿಗೂ ನನ್ನಂತೆ ಆಗುತ್ತಿದೆಯೇನೋ ?ಬ್ಲಾಗ್ ಬರೆಯುವವರ ಉತ್ಸಾಹ ಕಡಿಮೆಯಾದಂತಿದೆ,  ಮಾತಿಗೆ ಸಿಕ್ಕವರಲ್ಲಿ , ಏನ್ರೀ ಹೊಸಾ ಪೋಸ್ಟ್ ಇದೆಯಾ ? ..
ನಿಮ್ಮದಿದೆಯಾ..? ಎಂದು ಪುನಃ ಪ್ರಶ್ನಿಸಿ ಎರಡೂ ಕಡೆಗೂ ಇಲ್ಲಪ್ಪಾ .. ಎನ್ನುವ ಉತ್ತರದೊಂದಿಗೆ ಇವರು ನಮ್ಮೊಂದಿಗಿದ್ದಾರೆ ಎನ್ನುವ ಕೆಟ್ಟ ಸಮಾಧಾನ ಹೊಂದುವುದೇ ಆಗಿದೆ.ಇಲ್ಲ ಅಂದರೆ ಅವರೆಲ್ಲಾ  ಬರೆದು ಬಿಡುತ್ತಾರೆ ಅನ್ನುವ ಹುಳುಕಿಗಾದರೂ ನಾನೂ  ತಡಕಾಡಿ ಬರೆದುಬಿಡಬಹುದಿತ್ತು!

ಇರಲಿ, ನಾನು ತೀರ್ಮಾನಿಸಿದ್ದೇನೆಂದರೆ, ಮೂರು ತುಂಬುವುದರೊಳಗಾಗಿ ಇನ್ನೂ  ನಾಲ್ಕಾರು ಪೋಸ್ಟ್ ಹಾಕಿಬಿಡಬೇಕೆಂದು!
ಅರಮನೆಯನ್ನೇ ಕಟ್ಟಲು  ಹೋಗಿ   ಈಗ 'ಅರ' ಮನೆಯಾಗಿದೆ. ಆಕಾಶದೆತ್ತರಕ್ಕೆ ಕಟ್ಟ ಬೇಕೆಂಬ ಆಸೆ.. ಪುರಸೊತ್ತಿಲ್ಲ..!

ಒಂದಷ್ಟು ಮಳೆಯ ಫೋಟೋಗಳು ..
 ಚೌತಿಗೆ  ಊರಿಗೆ ಹೋದವಳು ಮಳೆಗಾಲದ ಅಬ್ಬರಾಟ  ಕಂಡು ಮರಳಿ  ಬಂದಿದ್ದೇನೆ. ಬಹಳ ದಿನಗಳೇ ಆಗಿತ್ತು. ನಿಜ ಮಳೆಗಾಲವನ್ನು ಅನುಭವಿಸದೆ. ನಾನು ಊರಿಗೆ ಕಾಲಿಟ್ಟಿದ್ದೆ ತಡ.. ಮಳೆ ಸುರಿಯಲು ಶುರುಮಾಡಿದ್ದು ಬರುವವರೆಗೂ ಹನಿ ಕಡಿಯಲಿಲ್ಲ.


 ಸೂರಂಚಿನ ನೀರಿನಲ್ಲಿ ಕಾಲು ತೊಳೆದುಕೊಳ್ಳುವುದು ಮಜಾ ಅಲ್ವೇ..?

 ಒಂದು  ದೊಡ್ಡ ಮಳೆ, ಹಾಗೆ ಚಿಕ್ಕ ಮಳೆ, ಮತ್ತೊಂದು ಸುಮಾರಿನ ಮಳೆ.  ಹೀಗೆ ಮಳೆ, ಮಳೆ, ಮಳೆ, ಹೇಳಲು ಹೊರಟರೆ ಮೂರು ಪೇಜು ಮಳೆಯೇ ಆಗಿಬಿಡುತ್ತದೆ...!  ಹೊರ ಹೋಗಲು ಆಗದಿದ್ದುದಕ್ಕೆ ಎಲ್ಲಾ ಮಳೆಯನ್ನೂ ಶಪಿಸುತ್ತಾ, ಕೆಲವರು ಹಳೆ ಕಾಲದ ಮಳೆಯನ್ನು ಹಾಡಿ ಹೊಗಳುತ್ತಾ  ಕುಳಿತು ಕೊಂಡದ್ದಾಯ್ತು. ನಾವು ಶಾಲೆಗೆ ಹೋಗುವಾಗಿನ ಕಾಲದ  ಮಳೆ ನಿಜಕ್ಕೂ ನಮಗೆ ಸಂತಸವನ್ನೇ ತರುತ್ತಿತ್ತು. ಶಾಲೆ ಬಿಟ್ಟ ತಕ್ಷಣ ಎಲ್ಲರೂ ಸರತಿಯ ಸಾಲಿನಲ್ಲಿ ಮಳೆ ನೀರು ಕಲೆಯುತ್ತಾ ಹೋಗುತ್ತಿದ್ದೆವು ರಸ್ತೆ ಪಕ್ಕದ ಕಾಲುವೆಯಲ್ಲಿ!   ಒಬ್ಬರಾದರೂ ರಸ್ತೆಯಲ್ಲಿ ಹೋಗುವವರಿಲ್ಲ.  ನೀರು ತುಂಬಿದ ಚಿಕ್ಕ ಚಿಕ್ಕ ಹೊಂಡದಲ್ಲಿ ಪಚ್ಚಂತ ಕಾಲಿಟ್ಟು ಕಾಲಿನ ಪಕ್ಕದಲ್ಲಿ ಮೂಡುವ ನೀರಿನ ರೆಕ್ಕೆಯನ್ನು ನೋಡಿ ಬೆರಗಾಗುತ್ತಿದ್ದೆವು. ನೀರು ಸ್ವಲ್ಪ ಎತ್ತರದಲ್ಲಿ ಬೀಳುವ ಜಾಗಕ್ಕೆ ದರಕಿನ ಕಡ್ಡಿಯನ್ನು ಹಿಡಿದು ಅದು ಕಡ್ಡಿಯ ಕವಲುಗಳಲ್ಲಿ ಹರಡಿಕೊಳ್ಳುವ ವಿನ್ಯಾಸಕ್ಕೆ  ಮುದಗೊಳ್ಳುತ್ತಿದ್ದೆವು. ಅಪ್ಪಿ ತಪ್ಪಿ ಬಿಸಿಲು ಬಿದ್ದಾಗ ಮೂಡುವ ಕಾಮನಬಿಲ್ಲು ರೋಮಾಂಚನ ಮೂಡಿಸುತ್ತಿತ್ತು.ಮುಂದೆ ಹೋಗುವವರಿಗೆ  ಹಿಂದಿನ ಹುಡುಗರು  ತಮಗೆ ಮುಂದೆ ಬಿಡಲಿಲ್ಲ ಎನ್ನುವ ಸಂಕಟಕ್ಕೆ ನೀರು ಚಿಮ್ಮಿ ಮೈ ಎಲ್ಲ ಒದ್ದೆ ಮಾಡುವುದು.  ನೀರಿನಲ್ಲಿ ಹೋಗುತ್ತಾ ಹೋಗುತ್ತಾ    ಪಾದಗಳನ್ನ ನೋಡಿಕೊಳ್ಳುತ್ತಾ ಅದರ ಗುಲಾಬಿ ಬಿಳುಪಿಗೆ ಮೈ ಮರೆಯುತ್ತಿದ್ದೆವು.ಮನೆಗೆ ಬಂದು  ನುಣ್ಣನೆಯ ನೆಲಕ್ಕೆಕಾಲು  ತೀಡಿ  ಚೀಕ್, ಚೀಕ್  ಎನ್ನುವ ಶಬ್ದ ಹೊರಡಿಸುವುದು,  ಜೋರು ಮಳೆ ಬರಲೆಂದು ದೇವರಿಗೆ ಒಂದು ಕಟ್ಟು ದೂರ್ವೆ ಹರಕೆ ಮಾಡಿಕೊಳ್ಳುವುದು ಇತ್ತು. ಶಾಲೆಗೆ ರಜೆ ಕೊಡುತ್ತಾರೆಂದು. ರಜೆ ಕೊಟ್ಟರೆ ಮತ್ತೆ ಶಾಲೆ ಯಾವತ್ತು ಶುರುವಾಗತ್ತಪ್ಪಾ ಮನೇಲಿ ಬೇಜಾರು,  ಅನ್ನುವ ವೇದನೆ.
 


 ಒಂದೇ ಒಂದಾದರೂ ಮಳೆಯ ಫೋಟೋ ಚನ್ನಾಗಿ ತೆಗೆಯಲಾಗಲಿಲ್ಲ. ನನ್ನವರಲ್ಲಿ ದುಃಖ ತೋಡಿಕೊಂಡರೆ,'' ಮಳೆಯನ್ನು ಅಲುಗಾಡದಂತೆ ನಿಲ್ಲಿಸಿ ಫೋಟೋ ಹೊಡಿ, ಮಳೆ ನಿಂತಿದ್ದಾಗ ಹೊಡಿ,'' ಎನ್ನುವ ಸಲಹೆಯನ್ನೆಲ್ಲಾ ಕೊಟ್ಟರು.

 ಮೋಜಿಗೆ   ಎಲ್ಲಾ ಚನ್ನಾಗಿತ್ತು ಆಗ. ಬೆಂಗಳೂರಲ್ಲಿ ಮಳೆ ಬಂದರೂ ಬೇಸರ, ಬರದಿದ್ದರೂ ಚಿಂತೆ, ಮಕ್ಕಳಿಗೆ ನೀರು ಆಡಲು  ಟೆರೆಸೆ  ಗತಿ.ಮನೆಯಲ್ಲಿಯೇ ಕುಳಿತು ಟೈಮ್ ಪಾಸ್ ಮಾಡಲು ಮಾಡಿದ  ಕಜ್ಜಾಯವೆಲ್ಲಾ  ಮೆಂದಿದ್ದಾಯ್ತು. ನನ್ನವರು, '' ಹೀಗೆ ಆದರೆ ಮತ್ತೆ ಕೂತವರನ್ನು ಎಬ್ಬಿಸಲು ಯಾವುದಾದರೂ ಮಿನಿ ಕ್ರೈನ್ ಬಾಡಿಗೆಗೆ ಸಿಗುತ್ತಾ ಕೇಳಬೇಕು''  ಎಂದು ನನ್ನನ್ನು ಉದ್ದೇಶಿಸಿಯೇ ಹೇಳಿದರು..!  ಎಲ್ಲರೆದುರು ಯಾಕೆ ಅಂತ  ನಾನೂ ಸುಮ್ಮನಾದೆ..!


ನನ್ನವರ ಊರಿಗೆ ಹೋಗುವಾಗ ಲಾಂಚಲ್ಲಿ ಹೋಗಬೇಕು.. ಅಲ್ಲೂ ಮಳೆ.ಮಳೆ. ಶರಾವತಿ ಕೂಡಾ ಅಬ್ಬರಿಸುತ್ತಿದ್ದಳು.


ಮನೆ ಒಳಗಿನಿಂದಲೇ ಕಂಡ ಕಂಡದ್ದನ್ನೆಲ್ಲ ಫೋಟೋ ತೆಗೆದಿದ್ದಾಯ್ತು.. ಹೊತ್ತು ಹೋಗದೆ.

ಅಂತೂ ಹಬ್ಬಕ್ಕೆ ಸುಲಭದ  ಕೆಲಸ ಹಮ್ಮಿಕೊಂಡು ಸಂಭ್ರಮಿಸುತ್ತಿದ್ದೇನೆ.  ಈ ಸಲ ಮಳೆಯ ಹೆಳೆಯೊಂದಿಗೆ ಚಿತ್ತಾರದರಮನೆಯಲ್ಲಿ ಹುಟ್ಟು ಹಬ್ಬ..!!Tuesday, August 16, 2011

ಮೊಂಬತ್ತಿ ..


''ಅಮ್ಮಾ ಭ್ರಷ್ಟಾಚಾರ ಅಂದರೇನು..?'' ಮೊಂಬತ್ತಿ ಉರಿಯುವುದನ್ನೇ ತದೇಕವಾಗಿ ನೋಡುತ್ತಾ ಕುಳಿತ ನನ್ನ ಮಗ ಕೇಳಿದ. 
ನಿನ್ನೆ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ  ಆಂದೋಲನಕ್ಕೆ  ಬೆಂಬಲ ಸೂಚಿಸಿ ರಾತ್ರಿ   ಎಂಟರಿಂದ  ಒಂಬತ್ತರ  ವರೆಗೆ  ಮನೆಯ ದೀಪಗಳನ್ನೆಲ್ಲಾ ಆರಿಸಿದ್ದೆವಲ್ಲಾ .. ಅವನಿಗೆ ಅದು ಆಶ್ಚರ್ಯದ  ಸಂಗತಿಯಾಗಿತ್ತು.ಅವನಿಗೆ ನಾನು ವಿವರಿಸಿ ಹೇಳಿದ್ದು ಎಷ್ಟರ ಮಟ್ಟಿಗೆ ಅರ್ಥವಾಯಿತೋ ಗೊತ್ತಾಗಲಿಲ್ಲ. ಕತ್ತಲೆ ಅನ್ನುವುದು ಅವನಿಗೆ ಭಯ ಮೂಡಿಸಿದ್ದು ನಿಜ.  ಆಚೆ ಈಚೆ ಹಾರುವ ಹಾಗಿಲ್ಲ. ಮನಸ್ಸಿಗೆ ಬಂದ ಹಾಗೆ ಕುಣಿಯುವ ಹಾಗಿಲ್ಲ. ಬರೀ ಮೋಂಬತ್ತಿಯ ಬೆಳಕಿನಲ್ಲಿ ತನ್ನದ್ಯಾವುದೋ ಪುಸ್ತಕ  ತೆಗೆದು  ಬರೆಯುವುದು,  ಚಿತ್ರ ಬಿಡಿಸುವುದು ಮಾಡತೊಡಗಿದ. ನಮ್ಮಲ್ಲಿ ಯು.ಪಿ. ಎಸ್ ಇರುವುದರಿಂದ ಪವರ್ ಕಟ್ ಇದ್ದಾಗ ಕೂಡಾ ಅದರ ಅನುಭವ ಆಗುವುದೇ ಇಲ್ಲ.   ಇದು ಒಂತರಾ ಹೊಸ ಅನುಭವ ಮಕ್ಕಳಿಗೆ. ಆದರೆ ಇದರ ಹಿಂದಿನ ಉದ್ದೇಶ ಅವರಿಗೆ ಸ್ವಲ್ಪ ಯೋಚಿಸುವಂತೆ ಮಾಡಿತ್ತೆನಿಸುತ್ತದೆ.ಈಗ ಈ ವಯಸ್ಸಿನಲ್ಲಿ ಅವರಿಗೆ ಏನೂ ಅರ್ಥವಾಗದಿದ್ದರೂ ಕೂಡಾ ಅವರದ್ದೇ ಆದ ಜೀವನ ನಡೆಸುವಾಗ, ನಿರ್ಧಾರ ತೆಗೆದುಕೊಳ್ಳುವಾಗ ಈ ಸಂಗತಿ ನೆನಪಾಗಬಹುದೆಂಬ ಭರವಸೆ ನನಗೆ.ಭ್ರಷ್ಟಾಚಾರದ ವಿರುದ್ಧ  ಈ ವಯಸ್ಸಿನಲ್ಲಿ ಒಂದು ಚಿಕ್ಕದಾಗಿ ಸಂಚಲನೆ ಶುರುವಾದರೂ ಸಾಕು.
ಕತ್ತಲೆಯಲ್ಲಿದ್ದಾಗ ಬೆಳಕಿನ ಮಹತ್ವ ಗೊತ್ತಾಗುತ್ತದೆ.ಕತ್ತಲೆ ಮನದೊಳಕ್ಕೆ ತೆರೆದುಕೊಳ್ಳಲು   ಸಹಕಾರಿಯಾಗುತ್ತದೆ. ಅದು ಕತ್ತಲೆಯ ಇನ್ನೊಂದು ಮುಖ. ಬಾಹ್ಯಾಕರ್ಷಣೆಗಳು ಕತ್ತಲಲ್ಲಿ ಕಳೆದುಹೋಗಿ ಚಿಂತನೆಗಳು  ಮನದೊಳಕ್ಕೆ ಬೆಳಕು ಬೀರತೊಡಗುತ್ತದೆ. ಬಹುಷಃ ನಮಗೂ ಈಗ ಅದೇ ಆಗುತ್ತಿರುವುದು.ಈ ಭ್ರಷ್ಟಾಚಾರ, ಲಂಚ, ಶೋಷಣೆ ಇವುಗಳ ಕತ್ತಲೆಯ ಕೂಪದಲ್ಲಿದ್ದಾಗ  ಇದರ ಮುಕ್ತಿಗಾಗಿ ಒದ್ದಾಡುತ್ತೇವೆ. ದೂರದ ಬೆಳಕಿಗಾಗಿ ಕೈ ಚಾಚುತ್ತೇವೆ. ಕೈ  ಚಾಚಿದಂತೆಲ್ಲಾ ಸಿಗದೇ ದೂರ ಓಡುವ ಚುಕ್ಕೆಯನ್ನು ಹಿಂಬಾಲಿಸ ತೊಡಗುತ್ತೇವೆ.
ಸಿಗುತ್ತದೆ ಎನ್ನುವ ಚಿಕ್ಕದೊಂದು  ಆಶಾವಾದದಿಂದ. ಖಂಡಿತಾ ಸಿಗುತ್ತದೆ. ಮನಸ್ಸಿಗೆ ಹಾಕಿದ ಕರ್ಫ್ಯೂ ತೆಗೆದಾಗ! ಜೈ  ಅಣ್ಣಾ.. 


Tuesday, July 26, 2011

ನಿದ್ರೆಯ ತೊಂದರೆಗಳು.

ನನ್ನ ಹಿ೦ದಿನ ಪೋಸ್ಟ್  ಓದಿದ ಕೆಲವರಿಗೆ ಈ ' ಅತಿಯಾದ ' ನಿದ್ರೆ, ನಿದ್ರಾ ಹೀನತೆ, ಅತಿಯಾಗಿ ಆಹಾರ ಸೇವಿಸುವುದು ಅಥವಾ ಕಡಿಮೆ  ಸೇವಿಸುವುದು ಎಂಬಲ್ಲಿ 'ಅತಿ' ಎಂದರೆ ಎಷ್ಟು ಎಂಬ ಸಮಸ್ಯೆ ಉದ್ಭವಿಸಿರಬಹುದು.
ನಿದ್ರಾಹೀನತೆ  [ insomniyaa ] - ಈ ಸಮಸ್ಯೆ ಇರುವವರಲ್ಲಿ  ನಿದ್ರೆಯ ಪ್ರಮಾಣ ತುಂಬಾ ಕಡಿಮೆ. ಕಡಿಮೆ ಎಂದರೆ ಒಂದೆರಡು ಘಂಟೆಗಳ ಕಾಲವಲ್ಲ. 

ನಿದ್ರೆಯಲ್ಲಿ  ಹಂತಗಳು ಬದಲಾಗುತ್ತಾ ಇರುತ್ತವೆ. ನಿದ್ರೆಯ ಹಂತಗಳು ನಾಲ್ಕು.ಸುಮಾರು 90 ರಿಂದ 110 ನಿಮಿಷಗಳ ಚಕ್ರ ಇದು.
೧   -  ಮೊದಲನೆಯದು ಜೋಂಪು ಬರುವಿಕೆ.  ಇದನ್ನು ಥೀಟಾ  ತರಂಗಗಳು ಎನ್ನುತ್ತಾರೆ. 
 ೨ -  ಎರಡನೆಯ ಹಂತದಲ್ಲಿ  ಕಣ್ಣು ಗೋಳದ ಚಲನೆ ಇರದು ಮತ್ತು ಶ್ವಾಸೋಚ್ವಾಸ  ಧೀರ್ಘವಾಗಿರದೇ  ಚಿಕ್ಕದಾಗಿರುತ್ತದೆ.ದೇಹದ ಉಷ್ಣತೆಯಲ್ಲಿ ಇಳಿಮುಖವಾಗುತ್ತದೆ.
೩ - ೪ - ಮೂರು ಮತ್ತು ನಾಲ್ಕನೆಯ ಹಂತದಲ್ಲಿ ನಿದ್ರೆ ಗಾಢವಾಗುತ್ತಾ  ಹೋಗುತ್ತದೆ.   ರಕ್ತದೊತ್ತಡ ಕಡಿಮೆಯಾಗುತ್ತದೆ  ಮತ್ತು ಶ್ವಾಸೋಚ್ಚಾಸ ಕ್ರಿಯೆ ನಿಧಾನವಾಗುತ್ತಾ ಹೋಗುತ್ತದೆ.ಈ ಹಂತವನ್ನು ಡೆಲ್ಟಾ ತರಂಗಗಳು ಎನ್ನುತ್ತಾರೆ. ಈ ಹಂತದಲ್ಲಿ ನಿದ್ರಿಸುತ್ತಿರುವ  ವ್ಯಕ್ತಿಗಳನ್ನು ಎಬ್ಬಿಸುವುದು ಸ್ವಲ್ಪ ಕಷ್ಟ.
೧,೨,೩,೪ ಹಂತಗಳ ಜೊತೆಗೆ ಇನ್ನೊಂದು ಹಂತವಿದೆ.  ಅನಿಯಂತ್ರಿತ ಕಣ್ಣುಗಳ ಚಲನೆಯಲ್ಲಿರುವ ನಿದ್ರಾ ಹಂತ ಅಂದರೆ REM sleep [  rapid eye movement].ನಾಲ್ಕರ ಹಂತದ ನಂತರ ಮತ್ತೆ ಮೂರು, ಎರಡು, ಒಂದು ನಂತರ REM   ಹಂತಕ್ಕೆ ಬರುವುದು.   ಈ ಹಂತದಲ್ಲಿ ಮೆದುಳು ತುಂಬಾ ಕ್ರಿಯಾಶೀಲವಾಗಿರುತ್ತದೆ   ಮತ್ತು ಕನಸುಗಳು   ಬೀಳುತ್ತವೆ   ಅಲ್ಲದೆ   ಬಿದ್ದ ಕನಸುಗಳು ನೆನಪಲ್ಲುಳಿಯುತ್ತವೆ.  ಇದು ಮೊದಲ ಹಂತದ ನಿದ್ರೆಯ ನಂತರ ಕಾಣಿಸಿಕೊಳ್ಳುತ್ತದೆ ಮತ್ತು REM ಮುಗಿದಮೇಲೆ  ಮೊದಲ  ಹಂತದಿಂದ  ನಿದ್ರೆ ಮುಂದುವರೆಯುವುದು.    ಕೆಲವೊಮ್ಮೆ ಎರಡನೆಯ ಹಂತ ಸಹಾ ಶುರುವಾಗಬಹುದು. ರಾತ್ರಿಯ ಮೊದಲ ಜಾವಗಳಲ್ಲಿ ಕಡಿಮೆ ಸಮಯ ತೆಗೆದುಕೊಳ್ಳುವ ಇದು ಬೆಳಗಿನ ಜಾವದಲ್ಲಿ ಹೆಚ್ಚು ಸಮಯ ತೆಗೆದು ಕೊಳ್ಳುತ್ತದೆ. .ಪ್ರತಿ ರಾತ್ರಿ  ಸುಮಾರು ಮೂರರಿಂದ ಐದು ಸಲ ಈ ಅವಸ್ಥೆಗೆ ನಾವು ಜಾರುತ್ತೇವೆ.ವಯಸ್ಸಾದವರಲ್ಲಿ ಈ  ಅವಸ್ಥೆ  ಹೆಚ್ಚು ಸಮಯ ಇರುತ್ತದೆ.

ಬಾಲ್ಯದಿಂದ ವೃದ್ದಾಪ್ಯದ ವರೆಗೂ ನಿದ್ರೆಯ ಪ್ರಮಾಣ ಇಳಿಮುಖವಾಗುತ್ತದೆ. ಒಬ್ಬ ವಯಸ್ಕನಿಗೆ ದಿನಕ್ಕೆ ಏಳರಿಂದ ಎಂಟು ಘಂಟೆಗಳ ನಿದ್ರೆ ಬೇಕಾಗುತ್ತದೆ. ಕೊಂಚ ಹೆಚ್ಚು ಕಡಿಮೆ ಇರಬಹುದು. ಆದರೆ 'ನಿದ್ರಾಹೀನತೆ' ಇರುವವರಲ್ಲಿ  ಆತ ಸಂಪೂರ್ಣವಾಗಿ  ನಿದ್ರೆಯ ಎಲ್ಲಾ ಹಂತಗಳನ್ನೂ ಕ್ರಮಿಸಲು ಅಸಮರ್ಥನಾಗುತ್ತಾನೆ. ಮೊದಲ ಹಂತದಲ್ಲಿಯೇ   ಇದ್ದು ಹೊರಳಾಡುತ್ತಾ ಇರುತ್ತಾನೆ. ಪದೇ ಪದೇ ಎಚ್ಚರವಾಗುತ್ತದೆ. ಡೆಲ್ಟಾ ತರಂಗಗಳ ಹಂತ ಅಥವಾ ಗಾಢ ನಿದ್ರೆಯ ಅವಸ್ಥೆಯನ್ನು ತಲುಪಲು ಸಾಧ್ಯವಾಗದಿದ್ದಾಗ ಮೆದುಳಿನ ಕ್ರಿಯಾಶೀಲತೆಯಲ್ಲಿ ವ್ಯತ್ಯಾಸವಾಗುತ್ತದೆ.  ಅದು ತಿಂಗಳಾನುಗಟ್ಟಲೆ ಮುಂದುವರೆದರೆ ಮೆದುಳಿನಲ್ಲಿ ಬಿಡುಗಡೆಯಾಗುವ ರಾಸಾಯನಿಕಗಳಲ್ಲಿ ವ್ಯತ್ಯಾಸವಾಗಿ ಮಾನಸಿಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

ನಿದ್ರಾ ಹೀನತೆಯಿರುವವರಿಗೆ ಬೇಗ ನಿದ್ರೆ ಬರದು ಮತ್ತು ಬೇಗ ಎಚ್ಚರಾಗುತ್ತದೆ.ಎಷ್ಟೊತ್ತಿಗೂ ನಿದ್ರೆ ಗೆಟ್ಟವರಂತೆ, ಜಡತ್ವದಿಂದ ಇರುತ್ತಾರೆ. ಏಕಾಗ್ರತೆ ಇರದು. ಸದಾ ಕಿರಿಕಿರಿ ಆದಂತೆನಿಸುತ್ತದೆ. ಕೆಲಸದ ಒತ್ತಡ, ಅನಾರೋಗ್ಯ, ನೋವು ಇವುಗಳಿಂದ ಸರಿಯಾಗಿ ನಿದ್ರಿಸಲಾಗದಿದ್ದಾಗ ಸಮಸ್ಯೆಗಳು ಶುರುವಾಗುತ್ತದೆ.ಇದಕ್ಕೆ ಜೊತೆಗೂಡಿ ಡಿಪ್ರೆಶನ್, ಡಯಾಬಿಟೀಸ್, ರಕ್ತದೊತ್ತಡ ಕೂಡಾ ಬರುವ ಸಾಧ್ಯತೆಗಳು ಇವೆ.

 ಅತಿನಿದ್ರೆ ಅಥವಾ ಹೈಪರ್ಸೋಮ್ನಿಯ - ಈ ಸಮಸ್ಯೆ ಇರುವ ವ್ಯಕ್ತಿಗಳು ರಾತ್ರೆಯಿಡೀ ನಿದ್ರಿಸಿದರೂ ಮತ್ತೆ ಮತ್ತೆ ಹಗಲಿನಲ್ಲಿಯೂ ಗಾಢ ನಿದ್ರೆಗೆ ಜಾರುತ್ತಿರುತ್ತಾರೆ. ನಿದ್ರೆಯಿಂದ ಎಬ್ಬಿಸುವುದು ತುಂಬಾ ಕಷ್ಟ. ಕೆಲಸ ಮಾಡುತ್ತಾ ಮಾಡುತ್ತಾ ಇರುವಾಗಲೇ, ಊಟ  ಮಾಡುತ್ತಾ ಇರುವಾಗಲೇ.. [ ಓದುತ್ತಿರುವಾಗ ನಿದ್ರೆ ಮಾಡುವವರನ್ನು ಹೊರತು ಪಡಿಸಿ...:) ] ಮಾತನಾಡುತ್ತಾ ಆಡುತ್ತಲೇ, ಕೂತಲ್ಲಿ,  ನಿಂತಲ್ಲಿ    ನಿದ್ರೆ ಮಾಡತೊಡಗುತ್ತಾರೆ. ನಿದ್ರೆಯ ನಂತರದ ಉಲ್ಲಾಸ ಇರುವುದಿಲ್ಲ. ಉದ್ವೇಗ, ಕಿರಿಕಿರಿ, ಅಸಹನೆ, ಅಶಕ್ತತೆ, ಹಸಿವಿಲ್ಲದಿರುವುದು, ನಿಧಾನ ಪ್ರವೃತ್ತಿ ಮುಖ್ಯ ಲಕ್ಷಣಗಳು.ಮೆದುಳಿನ ಮೇಲೆ ಬಿದ್ದ ಪೆಟ್ಟು, ಅಥವಾ ಕೆಲವು ಔಷಧಗಳ ಅಡ್ಡ ಪರಿಣಾಮಗಳು ಇದಕ್ಕೆ ಕಾರಣವಾಗಬಹುದು.

ಡಿಪ್ರೆಶನ್  ಇದ್ದವರಲ್ಲಿ ಇನ್ಸೋಮ್ನಿಯಾ ಅಥವಾ ಹೈಪರ್ಸೋಮ್ನಿಯ ಯಾವುದಾರೂ  ಲಕ್ಷಣಗಳು ಕಾಣಿಸಬಹುದು.
ಇನ್ಸೋಮ್ನಿಯಾ  ಸೂಕ್ತ ಔಷಧಗಳಿಂದ ಗುಣವಾಗಬಹುದು. ಆದರೆ ಹೈಪೆರ್ಸೋಮ್ನಿಯ ಜೀವಮಾನವಿಡೀ ಕಾಡುತ್ತದಂತೆ.

ಪ್ರತಿಯೊಂದಕ್ಕೂ ಅದರದ್ದೇ ಆದ ಮಾನದಂಡವಿದೆ. ಬಿ.ಪಿ. ಶುಗರ್ರು, ಎಲ್ಲದಕ್ಕೂ ಇಂತಿಷ್ಟೇ ಪ್ರಮಾಣದಲ್ಲಿರಬೇಕೆಂಬ ಪ್ರಕೃತಿ ನಿಯಮದಂತೆ ನಿದ್ರೆ, ಆಹಾರಸೇವನೆ, ಚಟುವಟಿಕೆಗಳು ಎಲ್ಲಕ್ಕೂ ನಿಯಮ ಮೀರುವಂತಿಲ್ಲ. ಮೀರಿದರೆ ಅದು ಕಾಯಿಲೆಯಾಗುತ್ತದೆ.

     

Tuesday, July 12, 2011

ಕೇಳುವ ಕರ್ಮ ನಿಮಗಿಲ್ಲ...!

 'ಎ೦ತಾ ಕಾಲ ಬ೦ತಪ್ಪಾ’ ಎನ್ನುತ್ತಾ ನಿಟ್ಟುಸಿರು ಬಿಟ್ಟೆ. ಯಾರೋ ಹೇಳುತ್ತಿದ್ದರು, ಅದ್ಯಾರ‍ೊ ಹೊಸತಾಗಿ  ಮದುವೆಯಾದ ಹುಡುಗಿ ಗ೦ಡನನ್ನು ಬಿಟ್ಟು ಯಾರನ್ನೋ ಕಟ್ಟಿಕೊ೦ಡಳ೦ತೆ. ಕಾರಣ ಅವಳ ಗ೦ಡ ಎನ್ನಿಸಿಕೊ೦ಡವನಿಗೆ ಒ೦ದು ಸರಿಯಾಗಿ' ಐ ಲವ್ ಯು ’ ಎ೦ದೂ ಹೇಳಲು ಬರುತ್ತಿರಲಿಲ್ಲ ಎನ್ನುವುದು  ಮತ್ತು ಈಗ ಅದ್ಯಾರನ್ನೋ ಕಟ್ಟಿಕೊ೦ಡವನು ಅದೆಷ್ಟು ಸು೦ದರವಾಗಿ'ಐ ಲವ್ ಯು’ ಎ೦ದನೆ೦ದರೆ ಕಟ್ಟಿಕೊ೦ಡ ಗ೦ಡನನ್ನೇ ಬಿಡುವಷ್ಟು. ಯಾರ್ಯಾರ ವಿಚಾರಧಾರೆ ಎಲ್ಲೆಲ್ಲಿದೆಯೋ? ಎಲ್ಲೆಲ್ಲಿಗೆ ಹೋಗಿ ಮುಟ್ಟುತ್ತದೆಯೋ..? ಯಾರಿಗೆ ಗೊತ್ತು. ಅ೦ತೂ ಅದನ್ನು ಕೇಳಿದವರೆ ಇವರು ಲಗುಬಗೆಯಿ೦ದ ಬ೦ದು ರಾಗವಾಗಿ,  'ಐ ಲವ್ ಯು ಮೈ ಡಿಯರ್’ಎ೦ದರು ನನಗೆ.  ಹೂವಿರಲಿಲ್ಲ ಕೈಯಲ್ಲಿ ಅಷ್ಟೇ. ಅರ್ಥವಾಗದೇ ಅವರನ್ನೇ ನೋಡಿದೆ. ಇದೇನಿದು ಹೊಸಾ ತರಾ...! ''ಅಲ್ಲಾ, ಮತ್ತೆ ಬಿಟ್ಗಿಟ್  ಹೋದ್ರೆ ಕಷ್ಟಾ.. ಹೆಣ್ಣು ಸಿಕ್ಕೋದೆ ಕಷ್ಟ ಈಗೀಗ  ನೋಡೂ.. ಯಾವ್ದಕ್ಕೂ ಮು೦ಜಾಗ್ರತೆಗಿರಲಿ ಅ೦ತ,” ಎ೦ದು ಮುಸಿನಕ್ಕರು.
'' ಹಾಗೇನಾದರ‍ೂ ಇದ್ದಿದ್ದರೆ  ಹದಿನೈದು ವರ್ಷ ಕಾಯಬೇಕಿತ್ತಾ...? ಡ್ಯುಎಟ್ ಹಾಡೋಣವೇ..ಒಲವೆ ಜೀವನ ಸಾಕ್ಷಾತ್ಕಾರ........ ”  ನಾನೂ ನಸು ನಕ್ಕೆ.

''ಖಾರ ಖಾರ... ನಮಸ್ಕಾರ .. ದಯವಿಟ್ಟು  ನೀನೀಗ ಹಾಡು ಶುರು ಮಾಡಬೇಡವೇ..ಬರ್ತೀನಿ.” ಎನ್ನುತ್ತಾ ಅಡ್ಡಡ್ಡ ಕೈ ಮುಗಿಯುತ್ತಾ ಅಲ್ಲಿ೦ದ ಮಾಯವಾದರು.

ಎಲ್ಲರಿಗೂ ನನ್ನ ಹಾಡೆ೦ದರೆ ಹೀಗೆಯೇ.   ಏನೋ ನನಗೂ ಒಳ್ಳೆಯ ಲಹರಿ ಬ೦ತೆ೦ದರೆ ಹಾಡೋಣ ಅನ್ನಿಸುವುದು೦ಟು ಆಗಾಗ!
ದೋಸೆ ಎರೆಯುವಾಗಲೋ, ಚಪಾತಿ ಲಟ್ಟಿಸುವಾಗಲೋ,  ಮಗಳಿಗೆ ಜಡೆ ಹಾಕುವಾಗಲೋ, ಬಾಲ್ಕನಿಯ ಗಿಡಗಳಿಗೆ ನೀರು ಹನಿಸುವಾಗಲೋ, ಎಲ್ಲರೂ ಅವರವರ ಕೆಲಸದಲ್ಲಿರುವಾಗ ನನಗೇನೂ ಕೆಲಸವಿರದಿದ್ದಾಗ,  ಹೀಗೆ ಯಾವಾಗಲಾದರೊಮ್ಮೆ ಹಾಡುವ ಮನಸ್ಸಾಗುತ್ತದೆ.

ಮೆಲ್ಲನೆ ದ್ವನಿ ತೆಗೆದು ಸ್ವರ ಸರಿ ಮಾಡಿಕೊಳ್ಳುತ್ತಿದ್ದ೦ತೆಯೇ  ಎಲ್ಲರೂ  ಇದ್ದಲ್ಲಿಯೇ ಎಚ್ಚೆತ್ತುಕೊಳ್ಳುತ್ತಾರೆ. ಪ್ರಳಯವೇ ಆಗುತ್ತಿದೆಯೇನೊ ಎನ್ನುವ೦ತೆ ಎಲ್ಲರೂ ಹೈ  ಅಲರ್ಟ್ ಆಗುತ್ತಾರೆ. ಮಗಳು ಓಡಿಹೋಗಿ ಕಿವಿಗೆ ಮೊಬೈಲ್ನ ಇಯರ್ ಫೋನ್ ಸಿಕ್ಕಿಸಿಕೊ೦ಡು ಹುಶಾರಾಗುತ್ತಾಳೆ. ಮಗ ಟೀವೀ ವಾಲ್ಯೂಮ್ ಹೆಚ್ಚಿಸುತ್ತಾನೆ.ನಮ್ಮನೆಯವರು ಪೇಪರ್ ಕೆಳಗಿಟ್ಟು ಎದೆ ನೀವಿಕೊಳ್ಳುತ್ತಾ,  'ಮಗಳೆ ಮೊದಲು ಕಿಟಕಿ ಬಾಗಿಲು ಹಾಕಿದೆಯಾ ನೋಡು,’ ಎ೦ದು ಕ್ಷೀಣ ದ್ವನಿಯಲ್ಲಿ ಕಿರುಚಲು ಶುರುಮಾಡುತ್ತಾರೆ.ಅವಳಿಗೆ ಕೇಳಿದರೆ ತಾನೆ ! ಕಿವಿಯಲ್ಲಿ ಅದೇನನ್ನೋ ಸಿಕ್ಕಿಸಿಕೊ೦ಡಿರುತ್ತಾಳಲ್ಲ!

ಆಗ ನನಗೆ  ಹಾಡುವುದನ್ನು ನಿಲ್ಲಿಸೋಣ ಆನ್ನಿಸುತ್ತದೆ. ಅಹಿ೦ಸಾ ಧರ್ಮದಲ್ಲಿಯೇ ನ೦ಬಿಕೆ ನನಗೆ. ಬದುಕಿಕೊಳ್ಳಲಿ ಅವರೂ. ಅವರ ಕರ್ಣ ಶೋಷಣೆ ನಾನ್ಯಾಕೆ ಮಾಡಲಿ?  ಮತ್ತೆ ಮರುದಿನ ಪಕ್ಕದ ಮನೆಯವರೆದುರು ಪಾಪಪ್ರಜ್ನೆಯಲ್ಲಿ ನಿಲ್ಲುವುದು ನನಗೂ ತಪ್ಪಿದ೦ತಾಗುತ್ತದೆ.

ಹಾಗ೦ತ ನಾನೇನು ಅಷ್ಟೊ೦ದು ಕರ್ಕಶವಾಗಿ ಹಾಡುತ್ತೇನೆಯೋ ಅ೦ದರೆ ಅಲ್ಲ ಅನ್ನುವುದು ನನ್ನದೇ ನ೦ಬಿಕೆ. ಮಿಡ್ಲ್ ಸ್ಕೂಲಿನಲ್ಲಿದ್ದಾಗ ನನಗೂ ಹಾಡಿನಲ್ಲಿ ಬಹುಮಾನ ಸಿಕ್ಕಿತ್ತು.ಹಾಡಿಗೆ   ಭಾಗವಹಿಸಿದ ಹತ್ತು ಜನರಲ್ಲಿ ನಾನೇ ಮೊದಲ ಬಹುಮಾನ ಪಡೆದಿದ್ದೆನೆ೦ದರೆ  ಹೃದಯ ಗಟ್ಟಿ ಇರುವವರು ಉಳಿದವರ  ಹಾಡುಗಾರಿಕೆಯನ್ನೂ ಊಹಿಸಿಕೊಳ್ಳಿ . ಅವರಲ್ಲಿ ಇಬ್ಬರು ಬ೦ದಿರಲಿಲ್ಲ ಮತ್ತು ಒಬ್ಬಳು ಅರ್ಧ ಹಾಡು ಹಾಡಿದ್ದಳು. ಉಳಿದ೦ತೆ ನಾನೇ ಮೊದಲು. ಅದೇ ಈಗಲೂ ನನಗೆ ಹಾಡಲು ಪ್ರೇರಣೆ ಅ೦ದರೆ ನೀವು ಒಪ್ಪಲೇ ಬೇಕು! ಆ ಗಳಿಗೆ ನೆನಪಾದ೦ತೆಲ್ಲಾ ನನಗೆ ಹಾಡಲು ಸ್ಪೂರ್ತಿ ಹೆಚ್ಚಾಗುತ್ತದೆ. ಇಲ್ಲಿಯ ಪರಿಸ್ಥಿತಿ ಮರೆತು ಹಾಡತೊಡಗಿದರೆ ಈ ಮೇಲಿನ ಭಾನಗಡೆಗಳೆಲ್ಲಾ ಶುರುವಾಗುತ್ತದೆ!

ನಾನೀಗ ಹೊಸಾ ಉಪಾಯ ಮಾಡಿದ್ದೇನೆ ಹಾಡಲು.  ಈಗಲೂ ಹಾಡಿಕೊಳ್ಳುತ್ತೇನೆ ಮೌನವಾಗಿ.ನನ್ನ ಮೌನದರಮನೆಯಲ್ಲಿ. ಯಾರಿಗೂ ಕೇಳಿಸುವುದಿಲ್ಲ.  ಕೇಳಿಸುವ ಬಯಕೆ ನನಗೂ ಇಲ್ಲ. ಇಲ್ಲಿ ಯಾರಿಲ್ಲ ಕೇಳಿ. ಎಲ್ಲರೂ ಇದ್ದಾರೆ. ಎಸ್.ಪೀ. ಬಿ. ಯ ದ್ವನಿಯಲ್ಲೇ ಹಾಡತೊಡಗುತ್ತೇನೆ. ಎಸ್. ಜಾನಕಿ ನನ್ನ ಕ೦ಠದಲ್ಲಿಯೇ ಇದ್ದಾಳೆ. ಎಲ್ಲಾ ರಾಗಗಳೂ, ಎಲ್ಲಾ ತಾಳಗಳೂ ಇಲ್ಲಿ ಬ೦ದು ಹೊಗುತ್ತವೆ.ಹ೦ಸಧ್ವನಿಯಿ೦ದ ಹಿಡಿದು ಭೈರವೀ ವರೆಗೆ.   ಲತಾ ಮ೦ಗೇಶ್ಕರ್, ಅಲ್ಕಾ ಯಾಜ್ನಿಕ್ ಇ೦ದಾ ಹಿಡಿದು ಗಣಪತಿ ಭಟ್ ಹಾಸಣಗಿ,ಪ್ರಭಾಕರ್ ಕಾರೇಕರ್ ವರೆಗೆ  ಎಲ್ಲರ‍ ಕ೦ಠದಲ್ಲೂ ಹಾಡತೊಡಗುತ್ತೇನೆ ಮೌನವಾಗಿ. ಇಲ್ಲಿ ಯಾರೂ ತಗಾದೆ ಮಾಡುವವರಿಲ್ಲ.ತಾಳ ತಪ್ಪಿದೆಯೆ೦ದು ಹೇಳುವವರಿಲ್ಲ.ಲಯ ಹೋಯ್ತೆ೦ದು ಮೂದಲಿಸುವವರಿಲ್ಲ. ಕುರುಬುವವರಿಲ್ಲ, ಕುಟ್ಟುವವರಿಲ್ಲ. ಮೌನದರಮನೆಯಲ್ಲಿ ಯಾರ ಕಾಟವೂ ಇಲ್ಲ. ನಾನೇ ಕವನಿಸುತ್ತೇನೆ. ನಾನೇ ಹಾಡುತ್ತೇನೆ, ನಾನೇ ಆಲಿಸುತ್ತೇನೆ. ನನ್ನ ಹಾಡಿಗೆ ನಾನೇ ಬೆರಗಾಗುತ್ತೇನೆ. ನನ್ನ ಹಾಡಿಗೆ  ನಾನೇ ಗಾಯಕಿ, ನಾನೇ ಪ್ರೇಕ್ಷಕಿ, ನಾನೇ ಶ್ರೋತೃ, ನಾನೇ ವಿಮರ್ಶಕಿ .
ನನ್ನಷ್ಟಕ್ಕೆ ಹಾಡುತ್ತಾ ಹೋಗುತ್ತೇನೆ..ಕೇಳುವ ಕರ್ಮ ಮಾತ್ರ ನಿಮಗಿಲ್ಲ.

Thursday, July 7, 2011

ಮಾನಸಿಕ ಖಿನ್ನತೆ. ಭಾಗ - ೧

ಈ ಮೊದಲು ನಾನು  ಖಿನ್ನತೆ ಯ ಬಗ್ಗೆ ಚೂರು ಪಾರು ಬರೆದಿದ್ದೆ.ಆ ಪೋಸ್ಟಿನಲ್ಲಿ ಒಂದು ಬಗೆಯನ್ನಷ್ಟೇ ವಿವರಿಸಿದ್ದೆ.
ಯಾರಿಗಾದರೂ ಖಿನ್ನತೆಯ [depression] ಸಮಸ್ಯೆ ಇದ್ದಲ್ಲಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ..? ಅವರು ಮೆಂಟಲ್ ಕೇಸು ಕಣ್ರೀ .. ಸ್ವಲ್ಪ ಹಾಗೆ.  ಜಾಸ್ತಿ ಮಾತಾಡ್ಸಕ್ಕೆ ಹೋಗಬೇಡಿ.  ಯಾವಾಗ ಹೇಗೆ ಅನ್ನೋದು ಗೊತ್ತಾಗಲ್ಲ.   ಈ ರೀತಿಯಲ್ಲಿ ನಮ್ಮ ವಿಚಾರ ಸಾಗುತ್ತದೆ.  ಖಿನ್ನತೆ ಅಂದರೆ ಹುಚ್ಚುತನವಲ್ಲ.ಡಿಪ್ರೆಶನ್ ಇರುವವರೆಲ್ಲ ಹುಚ್ಚರಲ್ಲ.


ಖಿನ್ನತೆಯಲ್ಲಿ ಅನೇಕ ವಿಧಗಳಿವೆ.
* ಮೇಜರ್ ಡಿಪ್ರೆಶನ್,
*  ಮಾದರಿಗೆ ಸರಿ ಹೊಂದದ ಎಟಿಪಿಕಲ್ ಡಿಪ್ರೆಶನ್,
* ಈ ಮೊದಲು ವಿವರಿಸಿದ ಡಿಸ್ಥೀಮಿಯ,
* ಮನೋ ವಿಕಾರತೆಯಿಂದ ಕೂಡಿದ ಸೈಕೊಟಿಕ್ ಡಿಪ್ರೆಶನ್,
* ಋತುಮಾನಕ್ಕೆ ತಕ್ಕಂತೆ  ಕಾಣಿಸಿಕೊಳ್ಳುವ  ಸೀಜನಲ್ ಆಫೆಕ್ಟಿವ್ ಡಿಸಾರ್ಡರ್,
*  ಬಾಳಂತಿ ಸನ್ನಿ ಎಂಬುದಾಗಿ ಪ್ರಚಲಿತವಿರುವ ಪೋಸ್ಟ್ ಪಾರ್ಟಂ ಡಿಪ್ರೆಶನ್ ಹಾಗೂ
*  ಬುದ್ದಿ ವಿಕಲ್ಪತೆಯಿಂದ ಕೂಡಿದ ಮ್ಯಾನಿಕ್ ಡಿಪ್ರೆಶನ್ ಅಥವಾ ಬೈ ಪೋಲಾರ್ ಡಿಪ್ರೆಶನ್.


ಡಿಪ್ರೆಶನ್ ಎಂದರೆ ಏನು ಮತ್ತು ಅದರ ಗುಣ ಲಕ್ಷಣಗಳೇನು..?

ಡಿಪ್ರೆಶನ್ ಎಂದರೆ,  ದಿನ ನಿತ್ಯ ಜೀವನಕ್ಕೆ ತೊಂದರೆ ಕೊಡುವ ದೀರ್ಘ ಕಾಲಿಕ ಮತ್ತು ಬದಲಾವಣೆಯಿಲ್ಲದ ಋಣಾತ್ಮಕ ಆಲೋಚನೆಗಳಿಂದ ಕೂಡಿದ ಮನಸ್ಥಿತಿ.

ಗುಣ ಲಕ್ಷಣಗಳೆಂದರೆ,

ಅನಾಸಕ್ತಿ - ಮೊದಲು ಇಷ್ಟ ಪಟ್ಟು ತೊಡಗಿಸಿ ಕೊಳ್ಳುತ್ತಿದ್ದ  ವಿಚಾರಗಳ ಬಗೆಗೆ ಆಸಕ್ತಿ ಹಿಮ್ಮುಖವಾಗುವುದು.ತಪ್ಪಿತಸ್ಥ ಮನಸ್ಸು- ತನ್ನಿಂದ ಬೇರೆಯವರಿಗೆ ತೊಂದರೆ ಆಗುತ್ತಿದೆಯೇನೋ ಅಥವಾ ಯಾವುದೋ ತಪ್ಪು ಮಾಡುತ್ತಿದ್ದೇನೆ ಅನ್ನುವ ಆಲೋಚನೆಗಳು.

ಅಸಾಮರ್ಥ್ಯ-  ತನ್ನಿಂದ ಯಾವ ಕೆಲಸವೂ ಆಗದು, ಎಷ್ಟೇ ಚಿಕ್ಕ,ಸರಳ ಕೆಲಸ ಮಾಡುವಾಗಲೂ ಕೂಡಾ ನಿರುತ್ಸಾಹಿಗಳಾಗಿರುವುದು.


                                
ಒಂಟಿತನ - ಈ ಡಿಪ್ರೆಶನ್ನಿಗೆ ಒಂಟಿತನವೂ ಕಾರಣವಾಗಿರಬಹುದು ಮತ್ತು ಡಿಪ್ರೆಶನ್ ಆವರಿಸಿಕೊಂಡ ಮೇಲೆ ಒಂಟಿತನ ಅನುಭವಿಸಬಹುದು. ಉದಾಹರಣೆಗೆ, ಎಲ್ಲರೂ ಮಾತನಾಡುತ್ತಾ ಖುಷಿಯಾಗಿರುವಾಗ ಒಬ್ಬರೇ  ಸುಮ್ಮನೆ ಮೂಲೆಯಲ್ಲೋ, ಕೋಣೆಯಲ್ಲೋ ನಿರಾಸಕ್ತಿಯಿಂದ ಕುಳಿತುಕೊಂಡಿರುವುದು.ಒಬ್ಬರೇ ಒಂಟಿಯಾಗಿರುವುದಕ್ಕೂ, ಮನಸ್ಸಿನಲ್ಲೇ ಒಂಟಿತನವನ್ನು ಅನುಭವಿಸುವುದಕ್ಕೂ ವ್ಯತ್ಯಾಸವಿದೆ. ಹಾಸ್ಯ ಮಾಡುತ್ತಾ ಎಲ್ಲರೂ ನಗುತ್ತಿದ್ದರೂ ಖಿನ್ನತೆ ಇರುವವರು ಪ್ರತಿಕ್ರಿಯಿಸದೆ  ಒಂಟಿತನವನ್ನು ಅನುಭವಿಸುತ್ತಾರೆ.

ಹಸಿವು - ಕೆಲವರು ಆಹಾರವನ್ನೇ ಸರಿಯಾಗಿ ಸೇವಿಸುವುದಿಲ್ಲ. ಅಥವಾ ಪೌಷ್ಟಿಕಾಂಶದ ಕೊರತೆಯೂ ಕೆಲವು ಡಿಪ್ರೆಶನ್ನಿಗೆ ಕಾರಣವಾಗುತ್ತದೆ. ಮತ್ತೆ ಕೆಲವರು ಹೊಟ್ಟೆಬಾಕತನವನ್ನು ತೋರಿಸುತ್ತಾರೆ.ಈ ಬಗ್ಗೆ ವಿವರಣೆಗೆ  ನನ್ನ್.ಈ ಪೋಸ್ಟಿನಲ್ಲಿ ನೋಡಬಹುದು.

ನಿದ್ರೆಯಲ್ಲಿನ ಬದಲಾವಣೆ- ನಿದ್ರಾ ಹೀನತೆ [ insomnia ]  ಅಥವಾ ಅತಿನಿದ್ರೆ [ hypersomnia ] ಕಾಡಬಹುದು.

 ದೈಹಿಕ ಚಟುವಟಿಕೆಗಳು- ಕೆಲವೊಮ್ಮೆ ಅತಿಯಾದ ಚಟುವಟಿಕೆಯನ್ನೂ, ಕೆಲವೊಮ್ಮೆ ನಿಧಾನಪ್ರವೃತ್ತಿಯನ್ನೂ ಕಾಣಬಹುದು.

ಏಕಾಗ್ರತೆಯಲ್ಲಿನ ಅಸಾಮರ್ಥ್ಯ- ವಸ್ತು,ವಿಷಯ ಗಳನ್ನು ಗ್ರಹಿಸುವಲ್ಲಿ, ನಿರ್ಧಾರ ತೆಗೆದುಕೊಳ್ಳುವಲ್ಲಿ, ಸಮಸ್ಯೆಗಳನ್ನು ಬಗೆಹರಿಸುವಲ್ಲಿ, ಮತ್ತು ನೆನಪಿನ ಶಕ್ತಿ ಕೂಡ ಕುಂಟಿತಗೊಳ್ಳಬಹುದು.ದೈಹಿಕ ಅಶಕ್ತತೆ ಕಾಣಿಸಿಕೊಳ್ಳಬಹುದು.

  ಕೆಲವೊಮ್ಮೆ ಅಸ್ಥಿರ, ಚಂಚಲ ಮನಸ್ಥಿತಿಯನ್ನೂ ಕಾಣಬಹುದು. ಬೇಗನೆ ಕಿರಿಕಿರಿಗೊಳಗಾಗುತ್ತಾರೆ.ಸುಮ್ಮನೆ ಸಿಟ್ಟಿಗೇಳುವುದು,
ಅನಗತ್ಯ ವಾದಕ್ಕಿಳಿಯಬಹುದು.

ಕೆಲವೊಮ್ಮೆ ಯಾವಾಗಲೂ ತಲೆನೋವು, ಬೆನ್ನುನೋವು, ಹೊಟ್ಟೆನೋವು, ಬೇಧಿ, ಮಲಬದ್ಧತೆ, ಸಂದುನೋವುಗಳು ಮುಂತಾದ ದೈಹಿಕ ಕಾಯಿಲೆಗಳನ್ನು ಅನುಭವಿಸಬಹುದು.  ವೈದ್ಯರಿಗೆ ಯಾವ ದೈಹಿಕ ತೊಂದರೆಯೂ ಕಾಣದಿರಬಹುದು.

ಹೆಚ್ಚಿನದಾಗಿ ಮಾನಸಿಕ ಖಿನ್ನತೆಯಿರುವವರು ಪ್ರಪಂಚದ ಬಗ್ಗೆ ಒಂದು ಋಣಾತ್ಮಕ ಮನೋಭಾವನೆಯನ್ನು ತೋರಿಸುತ್ತಾರೆ. ಅತೀ  ಕಾಳಜಿ,  ಅತೀ   ನಿರ್ಲಕ್ಷ್ಯ,  ಭವಿಷ್ಯದ  ಬಗೆಗೆ ಭಯ,ಗೊಂದಲ ಹೆಚ್ಚಾಗಿ ತೋರ್ಪಡಿಸುತ್ತಾರೆ.
ಪ್ರತಿಯೊಬ್ಬರೂ ನಮ್ಮ ಜೀವಮಾನದ ಒಂದಲ್ಲಾ ಒಂದು ಸನ್ನಿವೇಶದಲ್ಲಿ ಖಿನ್ನತೆಗೆ ಒಳಗಾಗಿಯೇ ಆಗುತ್ತೇವೆ.ಆದರೆ ಬಹುಬೇಗ ಮಾಮೂಲಿನ ಜೀವನ ನಡೆಸಲು ಶುರು ಮಾಡುತ್ತೇವೆ. ಕೆಲವೊಮ್ಮೆ ನೆನಪು ಮಾಡಿಕೊ೦ಡರೂ, ನಂತರ ನಿಧಾನಕ್ಕೆ ಮರೆತು ಬಿಡುತ್ತೇವೆ. ತೀವ್ರತೆ ಕಡಿಮೆಯಾಗ ತೊಡಗುತ್ತದೆ. ಆದರೆ  ದಿನದ  ಹೆಚ್ಚಿನ  ಭಾಗ  ಖಿನ್ನತೆಯಲ್ಲಿಯೇ ಇದ್ದರೆ ಮತ್ತು ತೀವ್ರತೆ ಮೊದಲಿದ್ದಂತೆಯೇ ಮುಂದುವರೆದುಕೊಂಡು ಹೋಗುತ್ತಿದ್ದರೆ  ಅಂತವರಿಗೆ   ತಜ್ಞರ  ಜರೂರತ್ತಿದೆ.

ಹಾಗಾದರೆ ಈ ಮಾನಸಿಕ  ಖಿನ್ನತೆಗೆ ಕಾರಣಗಳೇನು..?ಇದಕ್ಕೆ ಮುಖ್ಯ ಕಾರಣಗಳೆಂದರೆ,   

೧. ವಂಶಪಾರಂಪರ್ಯವಾಗಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನದಾಗಿ ಸಂಬಂಧಗಳಲ್ಲಿನ ಮದುವೆಯಾದರೆ ಅವರ  ಮಕ್ಕಳಲ್ಲಿ ಈ ಪ್ರವೃತ್ತಿ ಹೆಚ್ಚು. ಹತ್ತಿರದ ಸಂಬಂಧಿಗಳಲ್ಲಿ ಉದಾಹರಣೆಗೆ, ತಂದೆ ಅಥವಾ ತಾಯಿ, ಅಜ್ಜ ಅಜ್ಜಿ ಇವರುಗಳು ಖಿನ್ನತೆಯಿಂದ ಬಳಲುತ್ತಿದ್ದರೆ; ಅದು ಮುಂದಿನ ಸಂತತಿಗೆ  ವರ್ಗಾವಣೆಯಾಗುತ್ತದೆ.

೨.ನರಚೋದಕಗಳ ಅಸಮರ್ಪಕ ಸ್ರವಿಸುವಿಕೆ- ನಮ್ಮ ಎಲ್ಲ ಮಾನಸಿಕ ಕ್ರಿಯೆಗಳೂ ಕೆಲವು ರಾಸಾಯನಿಕ ವಸ್ತುಗಳಿಂದ ನಿರ್ವಹಿಸಲ್ಪಡುತ್ತಿರುತ್ತದೆ.ಈ ರಾಸಾಯನಿಕಗಳ ಸ್ರಾವದಲ್ಲಿ ಏರು ಪೇರು ಆದಾಗ  ಮೆದುಳಿನ ನರ ಕೋಶಗಳಿಗೆ ಸಮರ್ಪಕ ಸೂಚನೆಗಳು ಸಿಗದೇ ಕ್ರಿಯೆಯಲ್ಲಿ ವ್ಯತ್ಯಾಸವಾಗುತ್ತದೆ. ಕನೆಕ್ಷನ್ ತಪ್ಪಿ ಹೋಗಿರಬಹುದು. ರಾಂಗ್ ಕನೆಕ್ಷನ್ ಆಗಬಹುದು.  ಕೆಲವೊಮ್ಮೆ ಯಾವುದೋ ಸ್ವಿಚ್ ಒತ್ತಿದರೆ ಯಾವುದೋ ಲೈಟ್ ಹೊತ್ತಿಕೊಳ್ಳಬಹುದು.! ಎಲ್ಲಿಯೋ ಶಾಕ್ ಹೊಡೆಯಬಹುದು..!

೩.ಜೀವನದಲ್ಲಾಗುವ ಸಹಿಸಲಾಗದ ಆಘಾತ.- ಪ್ರೀತಿ  ಪಾತ್ರರ ಅಗಲುವಿಕೆ, ವ್ಯಾಪಾರ ವ್ಯವಹಾರದಲ್ಲಿ ಸೋಲು, ಅತಿಯಾದ ಕೆಲಸದ ಒತ್ತಡ, ಅತಿಯಾದ ನಿರೀಕ್ಷೆ ಇವುಗಳೆಲ್ಲ ಖಿನ್ನತೆಗೆ ಕಾರಣವಾಗುತ್ತವೆ.

 ಇದರ ಮುಖ್ಯ ಪರಿಣಾಮಗಳೇನು..?

ಸಾಮಾಜಿಕವಾಗಿ ಸುಖ ಜೀವನ ನಡೆಸಲು ಕಷ್ಟವಾಗುತ್ತದೆ. ಕೆಲಸ, ಕುಟುಂಬ, ಮಕ್ಕಳನ್ನು ನಿರ್ವಹಿಸುವುದರಲ್ಲಿ ಅಸಮರ್ಥತೆ ತೋರುತ್ತದೆ.

ಈ ನಡುವೆ ನನ್ನ ಆಪ್ತ ಗೆಳತಿಯೊಬ್ಬಳು ಈ ಮಾನಸಿಕ ಖಿನ್ನತೆಯ ಪರಿಣಾಮವಾಗಿ ನೇಣಿಗೆ  ಶರಣಾದಳು. ಡಿಪ್ರೆಶನ್ ನ  ಮುಖ್ಯ ಪರಿಣಾಮಗಳಲ್ಲಿ ಈ ಆತ್ಮ ಹತ್ಯೆಯೂ ಒಂದು.ಪ್ರಪಂಚದಲ್ಲಿ ಶೇಕಡಾ ನಾಲ್ಕು ಜನ ಈ ಮೇಜರ್  ಡಿಪ್ರೆಶನ್ ಗೊಳಗಾದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಶೇಕಡಾ ಅರವತ್ತರಿಂದ ಅರವತ್ತೈದು ಜನ ಡಿಪ್ರೆಶನ್ ಅಥವಾ ಉಳಿದ  ಮಾನಸಿಕ ಸಮಸ್ಯೆಗೊಳಗಾದವರೇ  ಆಗಿರುತ್ತಾರೆ !  ಈ ಆತ್ಮಹತ್ಯಾ ಮನೋಭಾವನೆ  ಸಾಮಾನ್ಯ ಜನರಲ್ಲಿ ಕಾಣಿಸಿಕೊಳ್ಳುವುದಕ್ಕಿಂತಲೂ ಖಿನ್ನತೆಗೊಳಗಾದವರಲ್ಲಿ ೨೫ ಪಟ್ಟು ಹೆಚ್ಚಿಗೆ ಕಾಣಿಸಿಕೊಳ್ಳುತ್ತದೆ. ಈ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯನ್ನು ಸೂಕ್ತ ಔಷಧಗಳಿಂದ, ಆಪ್ತ ಸಮಾಲೋಚನೆಯಿಂದ ಸಾಧ್ಯವಾದಷ್ಟು ಮುಂದಕ್ಕೆ ಹಾಕಬಹುದು.ಸಹೃದಯ ಸಹಕಾರದಿಂದ  ಕೆಲವರಿಗೆ ಉತ್ತಮ ಫಲಿತಾಂಶಗಳೂ ಲಭ್ಯ.
ಆದರೆ ಈ ರೀತಿ ಯೋಚನೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ, ಅಥವಾ ಅದಕ್ಕೆ ಮುನ್ಸೂಚನೆಯಾಗಿ ಯಾವುದಾದರೂ ಕ್ರಿಯೆ ನಡೆಯುತ್ತಿದ್ದರೆ ತಕ್ಷಣವೇ ಮಾನಸಿಕ ತಜ್ಞರನ್ನು ಕಾಣಲೇ ಬೇಕು.ಪ್ರಾರಂಭದ ಹಂತದಲ್ಲಿ  ಉತ್ತಮ ಫಲಿತಾಂಶಗಳೇ ದೊರಕುತ್ತದೆ.

ಆದರೆ ಒಮ್ಮೆ ಆತ್ಮಹತ್ಯೆಗೆ ಪ್ರಯತ್ನ ಮಾಡಿದರೆಂದರೆ,  ಹೇಗೋ ಉಳಿದರೂ ಕೂಡಾ ಅವರು ತಮ್ಮ ಅಂತ್ಯವನ್ನು ಆತ್ಮಹತ್ಯೆಯಲ್ಲಿಯೇ  ಪೂರ್ಣ  ಮಾಡಿ ಕೊಳ್ಳುತ್ತಾರೆ. ಹಾಗಾಗಿ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳುವುದು ಅವಶ್ಯ.ಯಾವ ವಿಚಾರಗಳಿ೦ದ ಪ್ರಚೋದನೆಗೊಳಗಾಗುವರೆ೦ಬ ಸಣ್ಣ ಸುಳಿವು ಸಿಕ್ಕರೂ ಸಹಾ ಅ೦ತಹವುಗಳಿ೦ದ ದೂರವಿರಿಸುವುದು ಉತ್ತಮ.
ಖಿನ್ನತೆಗೊಳಗಾದವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ..ಅದು  ಅದರ ತೀವ್ರತೆಯನ್ನು ಆಧರಿಸಿರುತ್ತದೆ.

ಮತ್ತೆ ಕೆಲವರು ಬೇರೆಯವರ ಮೇಲೆ ಹಲ್ಲೆ ನಡೆಸಲೂ ಬಹುದು. ಸೈಕೊಟಿಕ್ ಅಥವಾ ಮ್ಯಾನಿಕ್ ಡಿಪ್ರೆಶನ್ನಿನ ವ್ಯಕ್ತಿಗಳು ಈ ನಡವಳಿಕೆ ತೋರಿಸಬಹುದು.

ಮೊದಲೇ ಹೇಳಿದ೦ತೆ ನನ್ನ ಆತ್ಮೀಯ ಗೆಳತಿಯೊಬ್ಬಳು ಕೆಲದಿನಗಳ ಹಿ೦ದೆ ನೇಣು ಹಾಕಿಕೊ೦ಡು ಮೃತಪಟ್ಟಳು.ಆಕೆಗೆ ಡಿಪ್ರೆಶನ್ನಿಗೆ ಕಾರಣವಾದದ್ದು ಕಾಯಿಲೆಯಿ೦ದ ನರಳಿ  ತೀರಿಕೊ೦ಡ  ಮಗಳ ವಿಚಾರ. ಹೊರಗಿನವರಿಗೆ ಒ೦ಚೂರೂ  ಡಿಪ್ರೆಶನ್ನಿನ  ಸುಳಿವೇ ಸಿಗದಷ್ಟು ಜೀವನೋತ್ಸಾಹ ಕಾಣಿಸುತ್ತಿತ್ತು ಆಕೆಯಲ್ಲಿ.  ಆದರೆ ಒಳಗಿನ ಪರಿಸರವೇ ಬೇರೆ ನೋಡಿ.ಯಾವುದು ಆ ಗಳಿಗೆಯಲ್ಲಿ ಪ್ರಚೋದಿಸಿತೊ ಅ೦ತೂ ಈಗಿಲ್ಲ ಆಕೆ. ಗೊತ್ತೇ ಆಗದ೦ತೆ ಒಳಗೊಳಗೇ ಕಾಡುವ, ಬಲಿ  ತೆಗೆದುಕೊಳ್ಳುವ ಮಾರಿ  ಇದು.

[ಈ ಮೊದಲು”ಈಪೋಸ್ಟಿನಲ್ಲಿ ’ಕೊಟ್ಟ ಲಿ೦ಕ್ ತಪ್ಪಾಗಿತ್ತು ಈಗ ಸರಿಪಡಿಸಿದ್ದೇನೆ.]
[ ಚಿತ್ರಕೃಪೆ ಅ೦ತರ್ಜಾಲ]              
[ಮು೦ದುವರೆಯುವುದು]