ನನಗೆ ಯಾವತ್ತೂ ಚಪ್ಪಲಿ ತಗೊಳ್ಳೋಕೆ ಹೋದಾಗ ಇಲ್ಲದ ಸಮಸ್ಯೆ ವಕ್ಕರಿಸಿ ಬಿಡುತ್ತೆ. ಯಾವ ಚಪ್ಪಲಿ ತಗೊಳ್ಳೋದು,ಅದು ಹೇಗಿದ್ದರೆ ಚೆನ್ನ, ಯಾವ ಅಂಗಡಿಯಲ್ಲಿ ಒಳ್ಳೆ ಚಪ್ಪಲಿ ಸಿಗುತ್ತೆ.. ಹೀಗೆ. ಹುಡುಕಿ ಹುಡುಕಿ ಕೊನೆಗೆ ಯಾವುದೋ ಒಂದು ಹಿಡಿದುಕೊಂಡು ಬರುವುದು. ನನಗೋ ಹೆಚ್ಚು ಎತ್ತರವಿಲ್ಲದ, ಲೈಟ್ ವೆಯಿಟ್ ಇರುವ ಮೆತ್ತನೆಯ ಚಪ್ಪಲಿ ಬೇಕು.ನನ್ನ ಮಟ್ಟಿಗೆ ಚಪ್ಪಲಿ ಯಾವುದು ಸರಿ ಅನ್ನುವುದನ್ನು ಹುಡುಕುವುದೂ ಒಂದು ಪ್ರಾಜೆಕ್ಟೇ . ಚಪ್ಪಲಿ ಅಂಗಡಿಗಳಲ್ಲಿನ ಶೋಕೇಸ್ ಅನ್ನು ಥರ ಥರದ ವಿನ್ಯಾಸವಿರುವ ಚಪ್ಪಲಿಗಳಿಂದ ಅಲಂಕರಿಸಿದ್ದು ನೋಡಿ ಮರುಳಾಗಿ ಒಳ ಹೋಗುವುದು, ಊಹ್ಞೂ .. ನನಗೆ ಬೇಕಾದ ರೀತಿಯದು ಇಲ್ಲ.. ವಾಪಾಸು ಬರುವುದು . ಅದೆಷ್ಟು ಥರದ ಬ್ರಾಂಡುಗಳೂ, ವೆರೈಟಿಗಳೂ ಇದ್ದರೂ ನನಗೆ ಒಂದಿಲ್ಲೊಂದು ಸಮಸ್ಯೆ. ಎಲ್ಲವೂ ಸರಿ ಎನ್ನುವ ಹೊತ್ತಿಗೆ ಅದರ ಡಿಸೈನ್ ಸರಿ ಇಲ್ಲ ಅಂತ ಅನಿಸುವುದು. ಅದೂ ಸರಿ ಇದೆ ಅಂದ್ಕೊಳ್ಳಿ ಚಪ್ಪಲಿಗೆ ರೇಟ್ ಜಾಸ್ತಿ ! ನನ್ನವರಂತೂ,'' ನಿನಗೆ ಚಪ್ಪಲಿ ಮಾಡಲು ಆ ಬ್ರಹ್ಮನೇ ಬರಬೇಕು,'' ಎಂದು ತೀರ್ಪು ಕೊಟ್ಟಾಗಿದೆ ಯಾವತ್ತೋ.
ಕೊನೆಗೆ ಅಷ್ಟೆಲ್ಲಾ ಕೊಟ್ಟು ತಂದರೂ ಏನೋ ತೊಂದರೆ. ಹಿಂದೆಲ್ಲಾನಮ್ಮೂರಲ್ಲಿ ಸಿಗುತ್ತಿದ್ದ ಚಪ್ಪಲಿ ಕಾಲನ್ನು ಕಚ್ಚುತ್ತಿತ್ತು. ಅದರ ಕ್ವಾಲಿಟಿ ಯಾವ ತರದ್ದು ಇರುತ್ತಿತ್ತೋ ಏನೋ.. ? ಹೊಸ ಚಪ್ಪಲಿ ಕಾಲು ಕಚ್ಚಿದೆ ಎನ್ನುವ ಮಾತುಗಳು ಸಾಮಾನ್ಯವಾಗಿತ್ತು. ನಾನು ಮಾತ್ರ ಹಾಗೆ ಹೇಳುತ್ತಿರಲಿಲ್ಲ.. ಕಾಲನ್ನು ಚಪ್ಪಲಿ ಕಚ್ಚಿದೆ ಅಂದರೆ ನೀನೂ ಹಿಡಿದು ಕಚ್ಚು ಎಂದು ಉತ್ತರ ಶತ:ಸ್ಸಿದ್ಧವಾಗಿರುತ್ತಿತ್ತು ಅಣ್ಣಂದಿರಿಂದ!
ಒಮ್ಮೆ ಹಾಗೆ ಹೀಗೆ ಎಲ್ಲಾ ಲೆಕ್ಕಾಚಾರ ಮಾಡುವ ಹೊತ್ತಿಗೆ ಸಾವಿರದ ತೊಂಬತ್ತಾರು ಗುಣದ ಒಂದು ಭಯಂಕರ ಚಂದದ ಚಪ್ಪಲಿ ಸಿಕ್ಕಿಬಿಡ್ತು ಹೇಳಾಯ್ತು. ನಾನು ಹೇಳುವ ಫೀಚರ್ಸು, ಕ್ಯಾರೆಕ್ಟರ್ಸು ಎಲ್ಲಾ ಇರುವ ಚಪ್ಪಲಿ. ಸಾವಿರದೆಂಟು ನೂರು ಕೊಟ್ಟು ತಂದಾಯ್ತು .. ನಾನೂ ಹಾಕಿಕೊಂಡು ಜಂಬದಿಂದ ನಡೆದಿದ್ದೂ ನಡೆದಿದ್ದೂ ....ಅಪರೂಪಕ್ಕೆ ಒಂದು ಜೊತೆ ಒಳ್ಳೆ ಚಪ್ಪಲಿ ಸಿಕ್ಕಿದೆಯೆಂದು.
ಕಾಲೇಜಿಗೆ ಹೋಗುವಾಗ ನೂರು ರುಪಾಯಿಗೆ ಚಪ್ಪಲಿ ಹೊಲಿಸುತ್ತಿದ್ದೆವು. ನಾನು ಪ್ರತೀ ಸಾರಿ ಅದೇ ನೆನಪಿನಲ್ಲಿ ಅಂಗಡಿ ಒಳಗೆ ಹೋಗುವುದು. ಈಗ ನೂರು ರೂಪಾಯಿಗೆ ಒಂದು ಬಾರೂ ಬರೋಲ್ಲ ನೆಟ್ಟಗೆ. ಬರಲು ಮಳ್ಳೆ ..? ನಾವೆಲ್ಲಾ ಆಗ ಹವಾಯಿ ಥರದ ಚಪ್ಪಲಿಗಳನ್ನೆಲ್ಲಾ ಹಾಕಿಕೊಂಡು ಮೆರೆದಾಡುತ್ತಿದ್ದೆವಪ್ಪ.ಹೆಚ್ಚಿನ ಎಲ್ಲರೂ ಹಾಗೆ. ಈಗ ಹವಾಯಿಯನ್ನು ಯಾರಾದರೂ ಮನೆಯಿಂದ ಹೊರಗೆ ಹಾಕಿಕೊಂಡು ಹೋಗುತ್ತಾರ?
ಒಮ್ಮೆ ನನ್ನ ಕಾಲಿಗೆ ಸ್ವಲ್ಪ ಪೆಟ್ಟಾಗಿತ್ತು. ಡಾಕ್ಟರು ಕಾಲಿಗೆ ಕ್ರೇಪ್ ಬ್ಯಾಂಡೇಜ್ ಸುತ್ತಿ ಓಡಾಡಲು ಹೇಳಿದ್ದರು. ಪೆಟ್ಟು ಮಾಡಿಕೊಂಡ ಮರು ದಿನವೇ ನನ್ನ ಮಗಳ ಡಾನ್ಸ್ ಪ್ರೋಗ್ರಾಮೊಂದಿತ್ತು. ನನ್ನ ಚಪ್ಪಲಿ ಹಾಕಲು ಬಾರದೆ, ಅದಕ್ಕೆ ನಾನು ಹೊಸಾ ಹವಾಯಿ ಚಪ್ಪಲಿ ಖರೀದಿ ಮಾಡಿ ಅದನ್ನು ಗುಟ್ಟಾಗಿ[!] ಹಾಕಿಕೊಂಡು ಹೋದೆ ಅನ್ನಿ. ಹವಾಯಿ ಯಾರು ಗಮನಿಸುತ್ತಾರೆ ಅಂತ ನನ್ನ ಭಾವನೆ, ಅಲ್ಲಿ ನನ್ನ ಗೆಳತಿಯೊಬ್ಬಳು ಅಪರೂಪಕ್ಕೆ ಸಿಕ್ಕವಳಿಗೆ ನನ್ನ ಹವಾಯಿಯೇ ಕಾಣಿಸ ಬೇಕೇ. ''ಏ ಹೊಸಾ ಹವಾಯಿ ಅಂತ ಹಾಕ್ಕೋ ಬಂದ್ಯಾ ''ಅಂತ ನನ್ನ ಸತ್ಯ ನಾಶ ಮಾಡಿದ್ದಳು.
ಕಾಲೇಜಿಗೆ ಹೋಗುವ ಸಮಯದಲ್ಲಿ ನಾವು ಬರೀ ಚಪ್ಪಲಿ ಅಂತ ಒಂದು ಹೆಸರಿಟ್ಟು ಕರೆಯುತ್ತಲೇ ಇರಲಿಲ್ಲ. ಹೊಸ ಚಪ್ಪಲಿ ಹಾಕಿಕೊಂಡು ಬಂದವರಿಗೆ ' ಹೊಸ ಚಪ್ಪಲಿ, ಮೆಟ್ಟು, ಜೋಡು, ಎಕ್ಕಡ, ಪಾದರಕ್ಷೆ , ಪಾದುಕೆ ಹಾಕಿಕೊಂಡು ಬಂದಿದ್ದೀಯ' ಅಂತ 'ಸಮಾನಾರ್ಥ' ವತ್ತಾಗಿ ಕೂಗುತ್ತಿದ್ದೆವು. ಪಾದುಕೆ ಅನ್ನುತ್ತಿದ್ದ ಹಾಗೆ ನೆನಪಿಗೆ ಬಂತು, ರಾಮಾಯಣದಲ್ಲಿ ರಾಮ ವನವಾಸಕ್ಕೆ ಹೊರಟಾಗ ಭರತ ಬಂದು ದಾರಿ ಮಧ್ಯದಲ್ಲಿಯೆ ರಾಮನ ಪಾದುಕೆಗಳನ್ನು ಒಯ್ದಿದ್ದನಲ್ಲ.. ಅದನ್ನು ಓದುವಾಗ ನನಗಂತೂ ರಾಮನ ಬಗ್ಗೆ ಭಾರೀ ಪಶ್ಚಾತ್ತಾಪ ಆಗುತ್ತಿತ್ತು.. ಬದಲಿಗೆ ಬೇರೆ ಪಾದುಕೆ ಇತ್ತೋ ಇಲ್ಲ ಪೂರಾ ಅರಣ್ಯ ಬರಿಗಾಲಲ್ಲಿ ಸುತ್ತಿದನಾ..? ಅನ್ನುವ ಅನುಮಾನ ಯಾವಾಗಲೂ ಕಾಡುತ್ತದೆ ನನ್ನ, ಕೆಲವೊಮ್ಮೆ ಭರತನ ಮೇಲೆ ಸಿಟ್ಟು ಬಂದಿದ್ದೂ ಇದೆ..! ಅಲ್ಲ, ಸುಮಾರು ಏಳನೇ ಕ್ಲಾಸ್ ವರೆಗೆ ಚಪ್ಪಲಿ ಮೆಟ್ಟದೆಯೇ ಶಾಲೆಗೇ ಓಡಾಡುತ್ತಿದ್ದೆವು.. ಹೊಸಾ ಚಪ್ಪಲಿ ಕೊಡಿಸಿದಾಗ ಅದನ್ನು ಮರುದಿನವೇ ಶಾಲೆಗೇ ಹಾಕಿಕೊಂಡು ಹೋಗಿ ಅಲ್ಲಿಯೇ ಮರೆತು ಬಿಟ್ಟು ಬಂದು ಮರುದಿನ ಅದನ್ನು ತರಲು ಭಕ್ತಿಯಿಂದ ಬರಿಗಾಲಿನಲ್ಲಿ ಹೋಗುತ್ತಿದ್ದೆವು ... ಬಿಡಿ ಅದ್ನ ...
ರಜೆಯಲ್ಲಿ ಊರಿಗೆ ಹೋದಾಗ ನನ್ನ ಸಾವಿರದೆಂಟುನೂರರ ಚಪ್ಪಲಿ ಕಾರಿನಿಂದ ಲಾಂಚಿಗೆ ದಾಟುವಾಗ ನೀರಿಗೆ ಸಿಕ್ಕು ಅದರ ಬಾರು ಮೆಲ್ಲಗೆ ಸೋಲ್ ಗೂ ನನಗೂ ಯಾವ 'ಅಂಟಿ'ನ ನಂಟೂ ಇಲ್ಲ ಅನ್ನುತ್ತಾ ಕಿತ್ತು ಬಂತು! ನನಗೆ ಬೇರೆ ಗತಿಯಿರದೆ ಅಲ್ಲೇ ಪೇಟೆಯಲ್ಲಿ ಅರ್ಜಂಟಿಗೆ ಒಂದು ಜೊತೆ ಚಪ್ಪಲಿ ಕೊಳ್ಳುವ ಅನಿವಾರ್ಯ ಉಂಟಾಯಿತು. ಚಪ್ಪಲಿಯ ಬೆಲೆ ನೂರಾ ಐವತ್ತು! ನಾನು ನಯಾ ಪೈಸೆ ಚೌಕಾಸಿ ಮಾಡದಿದ್ದರೂ ಚಪ್ಪಲಿ ಅಂಗಡಿಯವ ನೂರ ಮೂವತ್ತಕ್ಕೆ ಕೊಟ್ಟ ..!!! ನನ್ನ ಲೆಕ್ಕದಲ್ಲಿ ಬೆಂಗಳೂರಿಗೆ ಮರಳುವ ವರೆಗೆ ಏನೋ ಸರಿ ಇದ್ದರಾಯಿತೆನ್ನುವುದು. ದರ ಕೇಳಿದವರೆಲ್ಲ ಒಂದು ವಾರ ಬಾಳಿಕೆ ಬಂದರೆ ಹೆಚ್ಚೆಂದರು.
ಊರಲ್ಲೆಲ್ಲಾ ನೂರಾ ಮೂವತ್ತು ರೂಪಾಯಿ ಚಪ್ಪಲಿ ಮೆಟ್ಟಿಯೇ ಸುಮಾರು ಕಡೆ ಓಡಾಡಿದೆ. ನಮ್ಮೂರ ಹತ್ತಿರದ ಜಲಪಾತವೊಂದನ್ನು ನೋಡಲು ಅದೇ ನೂರಮೂವತ್ತರ ಚಪ್ಪಲಿ ಹಾಕಿಕೊಂಡು ಹೋಗಿ ಬಂದೆ! ಚಪ್ಪಲಿ ಹರೀಲಿಲ್ಲ. ಕಲ್ಲುಗಳ ಮೇಲೆಲ್ಲಾ ಕಾಲಿಟ್ಟು, ಗುಡ್ಡ ಹತ್ತಿ ನಡೆದರೂ ಜಾರಿಸಲಿಲ್ಲ ನನ್ನ ನೂರಾ ಮೂವತ್ತು ರುಪಾಯಿ ಚಪ್ಪಲಿ. ನಾನಂತೂ ನನ್ನ ಈ ಮಿರಾಕಲ್ ನೂರಾಮೂವತ್ತು ರೂಪಾಯಿ ಚಪ್ಪಲಿಯ ಬಗ್ಗೆ ಹೇಳಿದ್ದೆ ಹೇಳಿದ್ದು. ಹೊಗಳಿದ್ದೇ ಹೊಗಳಿದ್ದು. ಎಲ್ಲರಿಗೂ ಕೇಳಿ ಕೇಳಿ ಸಾಕಾಯಿತು! ಎಲ್ಲರಿಗೂ ಇವಳ್ಮನೆ ನೂರಾ ಮೂವತ್ತು ರೂಪಾಯಿ ಚಪ್ಪಲಿ ಸುದ್ದಿ ಸಾಕಪ್ಪಾ ಎಂದುಕೊಂಡು ಓಡಾಡತೊಡಗುವಷ್ಟು ರಗಳೆಯಾಯಿತು.
ಅದೇ ಚಪ್ಪಲಿ ಮೆಟ್ಟಿಕೊಂಡು ಬೆಂಗಳೂರಿಗೆ ಬಂದೆ. ಸಾವಿರದೆಂಟು ನೂರರ ಚಪ್ಪಲಿಯನ್ನು ಸರಿ ಮಾಡಿಸಿದ್ದೂ ಆಯಿತು.
ನನಗೆ ಆಗಾಗ ಬಸ್ಸಿಗೆ ಹೋಗುವ ಚಟ. ಕೆಲವು ಸಲ ಆಟೋದಷ್ಟೇ ದುಡ್ಡು ಬಸ್ಸಿಗೂ ಆಗಿ ಬಿಡುತ್ತದೆ, ಆದರೂ ನನಗೆ ಬಸ್ಸಿನ ಪ್ರಯಾಣ ಒಂಥರಾ ಖುಷಿ. ಈ ನಡುವೆ ಈ ಬಸ್ಸಿನ ಪ್ರಯಾಣಕ್ಕೆ ನನ್ನ ಜೊತೆ ಈ ನೂರಾ ಮೂವತ್ತು ರುಪಾಯಿ ಚಪ್ಪಲಿಗಳ ಜೊತೆ. ಹೇಗಿದ್ದರೂ ಬಸ್ಸಿನ ರಶ್ಶಿನಲ್ಲಿ ಕಿತ್ತು ಹೋದರೂ ಕೊಟ್ಟಿದ್ದು ನೂರಾ ಮೂವತ್ತು ತಾನೇ ಅಂತ. ಬೆಳಗಿನ ಸಮಯದಲ್ಲಿ ಜನ ಸಾಗರದಿಂದ ತುಂಬಿರುವ ಬಿ ಟಿ ಎಸ್ ಬಸ್ಸಿನಲ್ಲಿ ನಿಲ್ಲಲೂ ಜಾಗವಿರದು. ಅಂತಾದ್ದರಲ್ಲಿ ಈ ನೂರಾ ಮೂವತ್ತು ರೂಪಾಯಿ ಚಪ್ಪಲಿ ಮೆಟ್ಟಿಕೊಂಡು ನಾನು ಬಸ್ಸು ಹತ್ತಿ ನಿಲ್ಲಲು ಹರ ಸಾಹಸ ಮಾಡುತ್ತೇನೆ. ಆ ಕಡೆ ಈ ಕಡೆ ತೂರಾಡಿ ನನ್ನ ನೂರಾ ಮೂವತ್ತು ರುಪಾಯಿ ಚಪ್ಪಲಿಗೆ ಒಂದು ಜಾಗ ಮಾಡಿಕೊಂಡು ನಿಲ್ಲುವಷ್ಟರ ಹೊತ್ತಿಗೆ ಹಗಲಿನಲ್ಲೂ ನಕ್ಷತ್ರಗಳು ಕಾಣಿಸ ತೊಡಗುತ್ತವೆ. ಆ ಕಂಡಕ್ಟರ್ ಪುಣ್ಯಾತ್ಮ ಆ ಬಾಗಿಲಿಂದ ಈ ಬಾಗಿಲಿಗೆ ಈ ಬಾಗಿಲಿಂದ ಆ ಬಾಗಿಲಿಗೆ ಓಡುತ್ತಾ ಮಧ್ಯೆ ಮಧ್ಯೆ ಜಾಗ ಮಾಡಿಕೊಂಡು ಟಿಕೆಟ್ ಟಿಕೆಟ್ , ಪಾಸು ತೋರ್ಸಿ ಅನ್ನುತ್ತಾ ಓಡಾಡುತ್ತ ಇರುವುದು ನನಗೆ ಮಜ್ಜಿಗೆ ಕಡೆಯುವ ಕಡಗೊಲಿಗೆ ಕಟ್ಟಿರುವ ಹಗ್ಗದಂತೆ ಭಾಸವಾಗುತ್ತದೆ. ಆ ಕಡೆಯಿಂದ ಈಕಡೆ ಈ ಕಡೆಯಿಂದ ಆಕಡೆ ಈ ಬಸ್ ಸಮುದ್ರದ ಮಥನ ಮಾಡುವನೇನೋ ಅನ್ನುವಂತೆ ತಿರುಗುತ್ತಿರುತ್ತಾನೆ. 'ಮುಂದೆ ಹೋಗ್ರೀ ಯಾರಲ್ಲಿ ಕಂಬ ಹಿಡ್ಕೊಂಡಿರೋರು' ಎನ್ನುತ್ತಾ ಕಂಬದಲ್ಲಿ ಉಗ್ರ ನರಸಿಂಹನನ್ನು ಬಚ್ಚಿಟ್ಟವನಂತೆ ಆಡುತ್ತಾನೆ. ಆಗಾಗ ಚಿಲ್ಲರೆಗಾಗಿ ಅವನು ಚೀಲವನ್ನು ಹುಡುಕುವ ಸದ್ದು ವಾಸುಕಿಯೇ ಫೂತ್ಕರಿಸಿದಂತಾಗುತ್ತದೆ. ನಾನಂತೂ ಬಸ್ಸಿನ ರಾಡಿಗೆ ಜೋತಾಡುತ್ತಾ ' ಜೋತಾಡ್ ಜೋತಾಡು ಮೆಲ್ಲಗೆ ' ಎನ್ನುತ್ತಾ ನನ್ನನ್ನೇ ಸಂತೈಸಿ ಕೊಳ್ಳುತ್ತಿರುತ್ತೇನೆ. ಕೆಲವು ಸಲ ನನ್ನ ನೂರ ಮೂವತ್ತು ರುಪಾಯಿ ಚಪ್ಪಲಿಯ ಅರ್ಧ ಭಾಗದಲ್ಲಿ ಯಾರದ್ದೋ ಪಾದ ಇರುತ್ತದೆ..!! 'ಯಾರೂ ಕೈ ಬಿಟ್ಟರೂ ನೀ ಕಾಲು ಬಿಡಬೇಡ' ಅನ್ನುತ್ತಾ ಆಜ್ಞಾಪೂರ್ವಕ ವಿನಂತಿಯನ್ನು ಮಾಡುತ್ತಿರುತ್ತೇನೆ ಚಪ್ಪಲಿಗೆ!
ಅಂತಾ ರಶ್ಶಿನಲ್ಲೂ ಎಂತೆಂತಹ ವೈವಿದ್ಯಮಯ ದೃಶ್ಯಗಳೂ, ಮನೋ ವ್ಯಾಪಾರಗಳು ಕಾಣ ಸಿಗುತ್ತವೆ. ಮೊಬೈಲ್ ಕಿವಿಗೆ ಸಿಕ್ಕಿಸಿಕೊಂಡು ಬಿಲ್ಡಿಂಗುಗಳ ನಡುವೆ ಕಾಣದ ದಿಗಂತವನ್ನು ದಿಟ್ಟಿಸುತ್ತಾ ಕುಳಿತ ಚೆಲುವೆ, ಕಾಲೇಜಿನಲ್ಲಿ ಸಿಗುವ ಗೆಳತಿಗೋ ಗೆಳೆಯನಿಗೋ ಮೆಸೇಜ್ ಮಾಡುವ ಕಾಲೇಜು ಕುವರಿ, ನಿಂತಿದ್ದರೂ ಮೊಬೈಲ್ ನಲ್ಲಿ ದರ್ಶನ್ ಫೋಟೋ ಕಲೆಕ್ಷನ್ ನೋಡುತ್ತಾ ಮನದಲ್ಲೇ ನಾಚುತ್ತಾ ಮುದಗೊಳ್ಳುತ್ತಿರುವವಳೊಬ್ಬಳು, ಸೀಟು ಸಿಕ್ಕಾಕ್ಷಣ ಕುಳಿತಲ್ಲೇ ಹನುಮಾನ್ ಚಾಲೀಸ ಓದುವ ಮದುವೆಯಾಗದ ಹೆಣ್ಣು ಮಗಳೊಬ್ಬಳು , ಲಲಿತ ಸಹಸ್ರ ನಾಮವೋ ಮತ್ತಿನ್ನೇನೋ ಗೊಣಗುತ್ತಾ ಕೂತಿರುವ ಕೆಲ ಹೆಂಗಸರು, ನಿನ್ನೆಯ ಧಾರಾವಾಹಿಯ ಕಥೆಯನ್ನು ವಿಮರ್ಶೆಗೊಳಪಡಿಸುತ್ತಿರುವ ಮತ್ತೆ ಕೆಲವರು, ಮತ್ತು ಇದನ್ನೆಲ್ಲಾ ಗಮನಿಸುತ್ತಾ ಮನಸ್ಸಲ್ಲೇ ನಗುವ ನನ್ನಂತವರೂ, ಜೊತೆಗೆ ಇವರೆಲ್ಲರ ನಡುವೆ ಸಮುದ್ರ ಮಥನ ಮಾಡುವ ವಾಸುಕಿಯ ತೆರದಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡುವ ಕಂಡಕ್ಟರು.. ಎಷ್ಟೋ ಸಲ ಇಳಿಯುವವರಿಂದ, ಹತ್ತುವವರಿಂದ ನನ್ನ ನೂರಾ ಮೂವತ್ತರ ಚಪ್ಪಲಿಯ ಮೇಲಾಗುವ ಘಾತಗಳು ಎಣಿಸಲಸದಳ.ಯಾರಾದರೂ ಸೀಟಿನಿಂದ ಎದ್ದರೆ ಆ ಸೀಟು ಹಿಡಿದು ಕುಳಿತುಕೊಳ್ಳುವ ಭರದಲ್ಲಿ ಕೆಲವರಿಂದ ನನ್ನ ಚಪ್ಪಲಿಯ ಮೇಲೆ ಆಗುವ ಅತ್ಯಾಚಾರವನ್ನು ಹೇಗೆ ವರ್ಣಿಸಲಿ ? ಆದರೂ ಅದು 'ಬಿಡೆನು ನಿನ್ನ ಪಾದ' ಎನ್ನುತ್ತಾ ನನ್ನ ಕಾಲಿಗೆ ಕಚ್ಚಿಕೊಂಡೆ ಇರುತ್ತದೆ..! ಇಲ್ಲಿಯ ವರೆಗೂ ಬಾರು ತುಂಡಾಗಿಲ್ಲ!! ಕೆಲವೊಮ್ಮೆ ಯಕಶ್ಚಿತ ಎನ್ನುವ ವಸ್ತುಗಳೂ ಎಷ್ಟೊಂದು ಮಹತ್ವ ಪಡೆದುಕೊಂಡು ಬಿಡುತ್ತವೆ!
ನಾನು ಹೆಣ್ಣು ಮಕ್ಕಳ ಸಂತೆಯಲ್ಲಿಯೇ ಕಳೆದು ಹೋಗುವುದರಿಂದ ಅಲ್ಲಿಯ ವಿದ್ಯಮಾನಗಳು ಮಾತ್ರಾ ನನ್ನ ಗಮನಕ್ಕೆ ಬರುತ್ತಿರುತ್ತವೆ.
ತಂತಮ್ಮ ಜಾಗ ಬರುತ್ತಲೂ ಜನರು ಮರಕತ ಮಣಿಗಳಂತೆ ಬಸ್ಸಿನಿಂದ ಉದುರುದುರಿ ಹೋಗುತ್ತಿರುವುದನ್ನು ನೋಡುತ್ತಾ ನಿಧಾನ ಉಸಿರು ಎಳೆದುಕೊಳ್ಳುತ್ತೇನೆ. ಇಲ್ಲಿ ಪಿಕ್ ಪಾಕೆಟ್ ಮಾಡುವವರನ್ನು, ಮೈ ಕೈ ತಾಗಿಸುವ ಕಾಮಣ್ಣರನ್ನು [ಕೆಲವೊಮ್ಮೆ ಕಂಡಕ್ಟರ್ ಸಹಿತ ] ಬೇಕಿದ್ದರೆ ಹಾಲಾಹಲಕ್ಕೆ ಹೋಲಿಸೋಣ.
ಅಂತೂ ನನ್ನ ಸ್ಟಾಪು ಬರುವ ಹೊತ್ತಿಗೆ ನಾನು ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಮೆತ್ತಗಾಗಿರುತ್ತೇನೆ. ನನ್ನ ನೂರಾ ಮೂವತ್ತು ರುಪಾಯಿ ಚಪ್ಪಲಿ ಮೆಟ್ಟಿಕೊಂಡ ಕಾಲು ಗಮ್ಯದತ್ತ ತೂರಾಡುತ್ತ ನಡೆಯಲಾರಂಬಿಸುತ್ತದೆ. ಪ್ರತೀ ಸಲ ಬಸ್ಸು ಹತ್ತಿ ಇಳಿಯುವ ವರೆಗೆ ಹೊಸದೊಂದು ಜನ್ಮ ಎತ್ತಿ ಬಂದಂತೆ ಭಾಸವಾಗುತ್ತದೆ..!!
ವಂದನೆಗಳು.