Sunday, March 27, 2011

''ಶ್ರೀಖಂಡ '' ಮಾಡುವ ಸುಲಭ ವಿಧಾನ..

ಶ್ರೀಖ೦ಡ ಮಾಡಲೂ ಸುಲಭ ವಿಧಾನವೇ..? ಎ೦ದು ನೀವು ಹುಬ್ಬೇರಿಸಬೇಡಿ.. 
ಮೊಸರನ್ನು ನೀರು ತೆಗೆದು ಗಟ್ಟಿ ಮಾಡಿ ಸಕ್ಕರೆ, ಏಲಕ್ಕಿ ಹಾಕಿ ಚೆನ್ನಾಗಿ ಅರೆದು ಗೋಡ೦ಬಿ, ದ್ರಾಕ್ಷೀ ಇತ್ಯಾದಿಗಳಿ೦ದ ಅಲ೦ಕರಿಸಿದರೆ ಮುಗಿಯಿತಪ್ಪಾ.. ಅದೇನು ಕಷ್ಟದ ಕೆಲಸವೇ..? ಸುಲಭ..   ಎ೦ದು ಯೋಚಿಸುತ್ತಿದ್ದೀರಾ..? 

ಇದರಲ್ಲಿ ಕಷ್ಟ ಎಂದರೆ  ಮೊಸರಿನ ನೀರು ತೆಗೆದು ಗಟ್ಟಿ ಮಾಡುವುದು.. ಮೊಸರನ್ನು ಬಟ್ಟೆಯಲ್ಲಿ ಕಟ್ಟಿ ನೀರು ಬಸಿಯಲು ನೇತುಹಾಕಲು ಮನೆಯೆಲ್ಲಾ ಓಡಾಡಿ ಜಾಗ ಹುಡುಕಬೇಕಾದ ಕಷ್ಟ ಸ್ವಲ್ಪವಲ್ಲ..

ಸುಲಭದ ವಿಧಾನವೊ೦ದಿದೆ .... ನೋಡಿ.

ಮೊದಲು ಮೊಸರನ್ನು ಸ್ವಚ್ಚವಾದ  ಬಟ್ಟೆಯೊ೦ದರಲ್ಲಿ ಹಾಕಿ ಅದನ್ನು ಗ೦ಟು ಕಟ್ಟಿ..
 ನ೦ತರ ಅದನ್ನು ಹಿಟ್ಟು ಸಾಣಿಸುವ ಸಾಣಿಗೆಯ ಮೇಲೆ ಇಟ್ಟು ಕೆಳಗೆ ಮೊಸರಿನ ನೀರು ಬೀಳಲು ಅನುಕೂಲವಾಗುವ೦ತೆ ಸಾಣಿಗೆಯ ಅಳತೆಯ ಪಾತ್ರೆಯೊ೦ದನ್ನು ಹೊ೦ದಿಸಿಡಿ.


 ನ೦ತರ ಅದನ್ನು ಪಾತ್ರೆಸಮೇತ ಫ್ರಿಜ್ಜಿನಲ್ಲಿಡಿ. [ಹುಳಿಯಾಗುವುದನ್ನು ತಪ್ಪಿಸಲು..] ಸುಮಾರು ಮೂರು ನಾಲ್ಕು ತಾಸು ಬಿಟ್ಟು ಹೊರತೆಗೆದು ಬಟ್ಟೆಯ ಗ೦ಟು ಬಿಚ್ಚಿ..



 ಅದನ್ನು ಬೌಲಿಗೆ ಹಾಕಿ ಸಕ್ಕರೆಯೊ೦ದಿಗೆ ಚನ್ನಾಗಿ ಅರೆದು ಏಲಕ್ಕಿ, ಲವ೦ಗದ ಪುಡಿ ಸೇರಿಸಿ, ಮತ್ತು ಒಣ ಹಣ್ಣುಗಳೊ೦ದಿಗೆ ಅಲ೦ಕರಿಸಿದರೆ  ತಣ್ಣನೆಯ  ಶ್ರೀಖ೦ಡ ಸವಿಯಲು ಸಿದ್ಧ..







 ಶ್ರೀಖ೦ಡ ಮಾಡಲು ಅಳತೆ -

* ಮೊಸರು  -  ಅರ್ಧ ಲೀಟರ್  [ ಫ್ರಿಜ್ಜಿ ನಲ್ಲಿಟ್ಟ ಮೊಸರಾದರೆ ನಿನ್ನೆಯ ಮೊಸರಾದರೂ ಆದೀತು.. ಹುಳಿ ಹೆಚ್ಚಿಗೆ ಇರದಿದ್ದರಾಯಿತು  ]
ಸಕ್ಕರೆ    - ಗಟ್ಟಿಯಾದ ಮೊಸರಿನ ಅಳತೆಯಷ್ಟೇ ಬೇಕು. ರುಚಿಗೆ ತಕ್ಕ೦ತೆ  ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು.
ಏಲಕ್ಕಿ, ಲವ೦ಗದ ಪುಡಿ[ಕೇಸರಿ ಬೇಕಿದ್ದರೆ ] -   ಸ್ವಲ್ಪ..
ಗೋಡ೦ಬಿ, ದ್ರಾಕ್ಷೀ.. ಇತ್ಯಾದಿ ಒಣ ಹಣ್ಣುಗಳು..  - ಯಥಾನ್ಶಕ್ತಿ...




ಮಾಡಿ ನೋಡಿ.. ಇನ್ನೂ ಸುಲಭದ ವಿಧಾನವಿದ್ದರೆ ನನಗೂ ಹೇಳಿ.

ವ೦ದನೆಗಳು.

Friday, March 11, 2011

ನಿಮ್ಮನೆಯಲ್ಲಿ ಜಿರಳೆಗಳಿವೆಯೇ..?

ಮನೆ ಅ೦ದ ಮೇಲೆ  ಜಿರಳೆ, ಸೊಳ್ಳೆ, ನೊಣ,  ಗೋಡೆಯ ಮೇಲೆ ನಾಲ್ಕಾರು ಹಲ್ಲಿಗಳು, ಗೋಡೆ ಬದಿಯಲ್ಲಿ ಸಾಲಿಕ್ಕುವ ಇರುವೆಗಳು  ಇದ್ದೇ ಇರುತ್ತವೆ  ಬಿಡಿ. 
ಹಾಗೂ ಇವೆಲ್ಲಕ್ಕೂ ಸೊಳ್ಳೆ ಬತ್ತಿ, ಲಕ್ಷ್ಮಣ ರೇಖೆ,  ಹಿಟ್ಟು ಪಟ್ಟು ಅನ್ನುವ ಉಪಶಮನಕಾರಿ ವಸ್ತುಗಳೂ ಇರುತ್ತವೆ.. ಅನ್ನಿ. 

ಉಳಿದವು ಸಾಯಲಿ..     ಮನೆಯ ಮಹಿಳೆಯರಿಗೆ ವಿಪರೀತವೆನ್ನುವಷ್ಟು ರೇಜಿಗೆ ಉಂಟು ಮಾಡುವ  ಈ ಜಿರಳೆ ಮಾತ್ರ ಸುಮಾರಿಗೆ ಯಾವುದಕ್ಕೂ ಜಗ್ಗುವ ಕುಗ್ಗುವ ಬಾಬತ್ತಿನದಲ್ಲ..
ನೀವು ಯಾರ ಮನೆಗಾದರೂ ಹೋದಾಗ ಅಲ್ಲೇನಾದರೂ ಸೆರಗು ಸಿಕ್ಕಿಸಿ ಪೊರಕೆ ಹಿಡಿದು ಹಿತ್ತಿಲ ಬಾಗಿಲ ಕಡೆ ವೀರಾಗ್ರಣಿಯಂತೆ ನಿಂತಿರುವ ಮಹಿಳೆಯರನ್ನೆನಾದರೂ   ನೋಡಿದರೆ, ಜೊತೆಗೆ ರಾಪ್ .. ರಾಪ್...ಅನ್ನುವ ಹಿನ್ನೆಲೆ ಸಂಗೀತವಿದ್ದರೆ ಹೆಜ್ಜೆ ಕಿತ್ತಿಡಲು ಯೋಚನೆ ಮಾಡುವುದೇನೂ ಬೇಡ.. ಹೆಂಗಸರಿಗೆ ಜಪ್ಪಲು ಜಿರಳೆಗಳೂ ಇವೆ..!      ಮಹಿಳೆಯರ ನಿಜವಾದ ವೈರಿಗಳೆಂದರೆ ಈ ಜಿರಲೆಗಳೇ.. !!

ಮೊಸರಿನ ಪಾತ್ರೆಗೇ ಬಿದ್ದು ಸಾಯುತ್ತವೆ ಹಾಳಾದವು..
ಅವು  ಲಕ್ಷ್ಮಣ ರೇಖೆಗೆ ನಿರೋಧಕ ಶಕ್ತಿ ಬೆಳೆಸಿಕೊಂಡು ಬಿಟ್ಟಿವೆ.  ನಾವೇ ಸಾಯಬೇಕೆ ಹೊರತೂ ಜಿರಳೆಗಳು ಅವುಗಳ ಮೇಲೆ ಆರಾಮಾಗಿ ಓಡಾಡಿಕೊಂಡಿರುತ್ತವೆ....!       {ನನ್ನ ಮಕ್ಕಳಿಗೆ  ರಾಮಾಯಣದ ಕಥೆ ಹೇಳಲು ಹೋಗಿ 'ಅವಾಗ ಕೂಡ ಲಕ್ಷ್ಮಣ ರೇಖೆ ಇತ್ತೇ, ಮತ್ತು ಅದನ್ನು ಮನುಷ್ಯರಿಗೆ ಹಾಕುತ್ತಿದ್ದರೇ...?' ಎನ್ನುವ ಪ್ರಶ್ನೆಗೆ ಉತ್ತರ ಕೊಡಲು ಹೋಗಿ ಸೋತಿದ್ದು ನನ್ನ ಜೀವಮಾನದ ಸೋಲಾಗಿ ಹೋಗಿದೆ..!}

 ಲಕ್ಷ್ಮಣ ರೇಖೆ ಬೇಡ  ಬಿಡಿ. ಅದಕ್ಕಿಂತಲೂ ಒಳ್ಳೆಯ ಉಪಾಯ ಇದೆ ಜಿರಳೆ ಸಂಹಾರಕ್ಕೆ.

ನಿಮ್ಮನೆಯಲ್ಲಿ ಕೇರಂ ಬೋರ್ಡ್ ಇದೆಯಾ.. ?  
ಏಕೆಂದರೆ ಕೇರಂ ಬೋರ್ಡ್ ಇದ್ದವರ ಮನೆಯಲ್ಲಿ ಸುಮಾರಾಗಿ ಬೋರ್ಡ್ ಗೆ ಹಾಕಲು '' ಬೋರಿಕ್ ಪೌಡರ್ '' ಅಂತೂ ಇದ್ದೇ ಇರುತ್ತದೆ.. 

ಈಗ ಹೀಗೆ ಮಾಡಿ.. ಐದು ಚಮಚ ಬೋರಿಕ್ ಪೌಡರ್ ಗೆ ಐದು ಚಮಚ ಮೈದಾಹಿಟ್ಟು ಹಾಕಿ.   ನೀರು ಹಾಕಿ ಕಲೆಸಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ  [ ಜಾಮೂನಿನ ಉಂಡೆಗಳ ಗಾತ್ರದಲ್ಲಿ] ಮಾಡಿ ಅಡುಗೆ ಮನೆಯಲ್ಲಿ, ಪುಸ್ತಕದ ಕಪಾಟುಗಳಲ್ಲಿ, ಬಚ್ಚಲು ಮನೆಯಲ್ಲಿ ಹೀಗೆ ಎಲ್ಲಿ ಬೇಕಾದರಲ್ಲಿ ಜಿರಳೆಗಳು ಬರುವಲ್ಲಿ ಮೀಟರಿಗೊಂದರಂತೆ ಇಡಿ. ಬೋರಿಕ್ ಪೌಡರ್ ಬೇಕಿದ್ದರೆ ಇನ್ನೊಂದು ಸ್ವಲ್ಪ ಹೆಚ್ಚಿಗೆಯೂ ಹಾಕಬಹುದು.  

ಹೀಗೆ ಮಾಡಿ..  ಒಂದು ವಾರದ ನಂತರದಲ್ಲಿ  ನಿಮಗೆ  ಒಂದಾದರೂ ಜಿರಳೆ ಬೇಕೆಂದರೆ ತರಲು ಪಕ್ಕದ ಮನೆಗೇ ಹೋಗಬೇಕಾಗುತ್ತದೆ.! 

ಇದು ನಾನು ಮಾಡಿ ನೋಡಿದ ಪ್ರಯೋಗ. ನನ್ನ ತವರು ಮನೆಯಲ್ಲಿ ದಶಕಗಳ ಹಿಂದಿನಿಂದಲೇ ಈ ಪ್ರಯೋಗ ಮಾಡಿ ಫಲಕಾರಿಯಾಗಿತ್ತು.. 
ಸೈಡ್ ಎಫೆಕ್ಟ್ ಇರದ ಉಪಾಯ..[ ಅಂದುಕೊಂಡಿದ್ದೇನೆ.] ಆದರೆ ಚಿಕ್ಕ ಮಕ್ಕಳಿರುವವರ ಮನೆಯಲ್ಲಿ ಜಾಗ್ರತೆ ಅಗತ್ಯ. ಆಗ ಮಿಶ್ರಣವನ್ನು ಪೇಷ್ಟ್ ತರಾ ಮಾಡಿ ಸಂದಿ ಗೊಂದಿನಲ್ಲಿ ಹಚ್ಚ ಬಹುದು.   


ಆಸಕ್ತರು ಪ್ರಯೋಗಿಸಿ ನೋಡಿ. ಮತ್ತೆ ಹೇಳಿ..



ಒಬ್ಬ ಜವಾಬ್ಧಾರಿಯುತ ಮಹಿಳೆಯಾಗಿ ನನ್ನಂತೆ ಸಮಾನ ದುಃಖಿಗಳಾದ  ಮಹಿಳೆಯರಿಗೆ   ಮಹಿಳಾದಿನಾಚರಣೆಯ ಸಂದರ್ಭದಲ್ಲಿ    ಹೀಗಾದರೂ  ಕಿಂಚಿತ್   ಸಹಾಯವನ್ನು   ಮಾಡೋಣ ಎಂಬುದು ನನ್ನ ಬಯಕೆ..!

ಜಿರಳೆ ಸಂಹಾರಕ್ಕೆ ಜಯ ಸಿಗಲಿ...:)

ವಂದನೆಗಳು.