Thursday, July 11, 2013

ನಂಬಿದ್ರೆ ನಂಬಿ ಬಿಟ್ರೆ ಬಿಡಿ ... ಇದು ಜಿಲೇಬೀನೆ.
ಸತ್ಯವನ್ನೇ ನುಡಿಯುತ್ತೇನೆ. ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ.. ಇದು ಜಿಲೇಬಿ...!!!!  ಹಾಗಂತ ಹೇಳುವ ಪರಿಸ್ಥಿತಿ ಆಗಿಹೋಯ್ತು  ಹೀಗೊಮ್ಮೆ ನನ್ನ ಅಡುಗೆ ಪ್ರಯೋಗಕ್ಕೆ ಒಳಗಾಗಿ. 

ಊರಿಗೆ ಹೋದಾಗ ಹೀಗೆ ಸುಮ್ಮನೆ ಅದು ಇದು ಮಾತನಾಡುವ ಸಮಯದಲ್ಲಿ ಜಿಲೇಬಿ ವಿಚಾರ ಬಂದಿತ್ತು.   ಮತ್ತು ಅದನ್ನು ಮಾಡುವ ವೀರೋಚಿತ ಆಲೋಚನೆಯೂ ಹೊರ ಹೊಮ್ಮಿತು.  ಈ ಸಲ ಉಳಿದಿದ್ದು ಕಡಿಮೆ ಮತ್ತು ಬರೀ ಮದುವೆ ಮನೆ ಸೀಜನ್ನೇ  ಆಗಿ  ಊರಲ್ಲಿ ಅದು ನಮ್ಮ ಪ್ರಯೋಗಕ್ಕೆ ಒಳಗಾಗಲೇ ಇಲ್ಲ. ಅದೂ ಅಲ್ಲದೆ ಆ ಥರಾ ಮದ್ವೆ ಮನೆಗಳಲ್ಲಿ  ಸ್ವೀಟುಗಳನ್ನು  ತಿಂದೂ ತಿಂದೂ , ನೋಡೀ ನೋಡೀ, ನಾಲಗೆ ಕೆಟ್ಟುಹೋಗಿ   ಹೊಸ ಪ್ರಯೋಗ ಮಾಡಲು ಆಗ ಮನಸ್ಸೂ ನೆರವಾಗಲಿಲ್ಲ. ಆದರೂ ಸ್ಕೆಚ್ ಹಾಕಿದ್ದು ಹಾಗೆಯೇ  ಮನದಲ್ಲಿ   ಉಳಿದುಕೊಂಡಿತ್ತು. ಹಿಂತಿರುಗಿದ ಮೇಲೆ ಒಂದು ಶುಭ ಮುಂಜಾನೆ ಯಾಕೋ ಇದ್ದಕ್ಕಿದ್ದಂತೆ ಜಿಲೇಬಿಯ  ನೆನಪಾಗಿ ನನ್ನ ಸಾಮರ್ಥ್ಯವನ್ನು ಒರೆ ಹಚ್ಚುವ ಕಾಲ ಕೂಡಿ ಬಂತು. ಮಕ್ಕಳನ್ನೆಲ್ಲಾ ಶಾಲೆಗೇ ಕಳಿಸಿದವಳು  ನೆಟ್ ಮುಂದೆ ಕುಳಿತು ಅಲ್ಲಿ ಇಲ್ಲಿ ಜಾಲಾಡಿ ಅಂತೂ ಯೂ ಟ್ಯೂಬ್ ನ ಸಹಾಯದಿಂದ ಜಿಲೇಬಿ ಮಾಡಲು ಏನೇನು, ಎಷ್ಟೆಷ್ಟು ಬೇಕು ಅನ್ನುವ ಲಿಸ್ಟ್ ತಗೊಂಡು ಮೊದಲನೇ ಹೆಜ್ಜೆ ಇಟ್ಟೆ. ಮೈದಾಹಿಟ್ಟು, ಅರಿಶಿನ, ಸ್ವಲ್ಪ ಮಜ್ಜಿಗೆ  ಬೆರೆಸಿ ಕಲೆಸಿ ಹಿಟ್ಟನ್ನು ಹುಳಿ  ಬರಲು ಇಪ್ಪತ್ನಾಲ್ಕು ಘಂಟೆ ಬಿಡಬೇಕು ಅಂತ ಇತ್ತು. ಹಾಗೆಯೇ  ಮಿಕ್ಸ್ ರೆಡಿ ಮಾಡಿದವಳಿಗೆ ಸುಮಾರು ಎರಡು ಘಂಟೆ ಕಳಿಯುವ   ಹೊತ್ತಿಗೆ ಎಷ್ಟೊತ್ತಿಗೆ ಇಪ್ಪತ್ನಾಲ್ಕು ಘಂಟೆ ಆಗುತ್ತದೋ ಎನ್ನುವ ಯೋಚನೆ ನಿಮಿಷ ನಿಮಿಷಕ್ಕೂ ಬರಲು ತೊಡಗಿತು. ಯಾವುದಾದರೂ ತಲೆಗೆ ಹಾಕಿಕೊಂಡರೆ ಅದು ಮುಗಿಯುವ ವರೆಗೆ ಒಂಥರಾ ರೆಸ್ಟ್ ಲೆಸ್ ನೆಸ್ ...     ಅಂತೂ ಸಾಯಂಕಾಲದ ಹೊತ್ತಿಗೆ ಏನಾದರಾಗಲಿ ಸ್ವಲ್ಪ ಜಿಲೇಬಿ  ಮಾಡಿ ನೋಡೋಣ ಅನ್ನುವ ಆತುರ ಶುರು.ಎಲ್ಲಾ ಸರಿ  ಸಕ್ಕರೆ ಪಾಕ ಮಾಡಿಟ್ಟುಕೊಂಡು ನೋಡ್ತೇನೆ ಎಣ್ಣೆ ಸ್ವಲ್ಪವೇ ಇದೆ ..!! ನಮ್ಮನೆಯಲ್ಲಿ ಕರಿಯುವ ಪದಾರ್ಥಗಳು ಸಾಮಾನ್ಯವಾಗಿ ಕಡಿಮೆಯಾದ್ದರಿಂದ ಒಮ್ಮೊಮ್ಮೆ ಹೀಗೆಲ್ಲಾ ಎಡವಟ್ಟು ಆಗಿ ಬಿಡುತ್ತದೆ. ಮೊದಲನೇ ಅಪಶಕುನ ಹೀಗಾಯ್ತು. ಹತ್ತಿರದ  ಒಂದೆರಡು ಅಂಗಡಿಗಳಿಗೆ ಫೋನ್ ಮಾಡಿ ಕೇಳಿದ್ರೆ  ನಾನು ಬಳಸುವ ಬ್ರಾಂಡಿನ ಎಣ್ಣೆ ಇರಲಿಲ್ಲ.ಹೀಗೆ  ಎಣ್ಣೆ ಹತ್ತಿರದಲ್ಲೆಲ್ಲೂ ಸಿಗದ ಕಾರಣ ಯಾವಾಗಲೂ ತರುವ ದೂರದ  ಅಂಗಡಿಯನ್ನೇ ಆಶ್ರಯಿಸುವಂತಾಯ್ತು. ಅಷ್ಟೊತ್ತಿಗೆ ಆಫೀಸಿನಿಂದ ಬಂದ  ನನ್ನವರ ಕೈ ಕಾಲು ಹಿಡಿದು ಅವರ ಜೊತೆ ನಾನೇ  ಖುದ್ದು  ಹೋಗಿ ಎಣ್ಣೆಯೊಂದಿಗೆ ಮತ್ತೊಂದಿಷ್ಟು ಸಾಮಾನುಗಳನ್ನೂ ತಂದಾಯ್ತು.

ಈಗ ಎರಡನೇ ಹಂತಕ್ಕೆ ಪ್ರವೇಶ ..!   ಬಂದವಳೇ   ಒಂದು ಹಾಲು ಕವರ್ ನ ಒಂದು ಮೂಲೆಯ  ತುದಿಯನ್ನು ಸ್ವಲ್ಪವೇ ಕತ್ತರಿಸಿ ಜಿಲೇಬಿ ಹಿಟ್ಟನ್ನು ಅದರಲ್ಲಿ ತುಂಬಿ ಎಣ್ಣೆಗೆ ಬಿಡಲು ಸಿದ್ಧ ಮಾಡಿಕೊಂಡೆ. ಫ್ಲಾಟ್ ಪ್ಯಾನ್ ಗೆ ಎಣ್ಣೆ ಹುಯ್ದು ಎಣ್ಣೆ ಕಾದ ನಂತರ ಭಾರೀ ಪ್ರೊಫೆಶನಲ್ ಥರಾ  ಜಿಲೇಬಿ ಹಿಟ್ಟು  ತುಂಬಿದ ಹಾಲು ಕವರನ್ನು ಹಿಡಿದು ಎಣ್ಣೆಯಲ್ಲಿ ನಿಧಾನಕ್ಕೆ  [ ಹಾಗಂತ ನಾನಂದುಕೊಂಡಿದ್ದು]    ಹಿಟ್ಟನ್ನು ಬಿಡ ತೊಡಗಿದೆ. ಎರಡು ಸುತ್ತು  ಸುತ್ತಿ ಮಧ್ಯ  ಒಂದು ಗೆರೆ ಥರ ಹಾಕಬೇಕು ಅನ್ನುವುದು ನೋಡಿ, ಓದಿ ಕಲಿತ ಅನುಭವ .. ! ಕಾರ್ಯಕ್ರಮಗಳಲ್ಲಿ ಜಿಲೇಬಿ ಮಾಡುವವರನ್ನು ನೋಡಿ 'ಓ ಜಿಲೇಬಿ  ಬಿಡುವುದು  ಭಾರೀ ಸುಲಭ,'  ಅನ್ಕೊಂಡಿದ್ದೆ. ಪಾಕ ಒಂದು ಸರಿ ಹದ ಬರಬೇಕು,  ಅಂತ ಯಾರೋ ಹೇಳಿದ್ದು ಕೇಳಿಸಿಕೊಂಡಿದ್ದೆ. ಯಾವುದಾದರೂ ಕಾರ್ಯದ ಮನೆಯಲ್ಲಿ ಜಿಲೇಬಿ ಹದ ಸರಿ ಇಲ್ಲದಿದ್ದರೆ 'ಎಲ್ಲಾ ಪಾಸು,   ಜಿಲೇಬಿ ಮಾತ್ರಾ ಫೇಲು,'   ಅಂತ ಯಾರೂ ಕೇಳದಿದ್ದರೂ ನನ್ನ ಅಮೂಲ್ಯ ಕಾಮೆಂಟನ್ನು  ಹೊತ್ಹಾಕುತ್ತಿದ್ದೆ.
 ಮೊದಲ ಸಲ ಎಣ್ಣೆಗೆ ಜಿಲೇಬಿ ಹಿಟ್ಟು ಬಿಡುತ್ತಿದ್ದಂತೆ,   ಎರಡು  ಸುತ್ತು  ಹೋಗಲಿ,  ಜಿಲೇಬಿ ಎಣ್ಣೆಯಲ್ಲಿ ಮುಳುಗೇಳುತ್ತಾ ಸುನಾಮಿಯಲ್ಲಿ ಸಿಕ್ಕ ಬಾಳೇ ಎಲೆಯಂತೆ ಛಿದ್ರ ಛಿದ್ರ ವಾದಂತೆ ತೋರತೊಡಗಿತು. ಬಿಟ್ಟ ಕಣ್ಣುಗಳಿಂದ ನೋಡುತ್ತಾ ಇರುವಷ್ಟರಲ್ಲಿ ಅದು ಬೆಂದಿರ ಬಹುದೆಂಬ ಸೂಕ್ಷ್ಮ ತಲೆಗೆ ಬಂದು ಅಂತೂ ಇಂತೂ ಅಷ್ಟಾ ವಕ್ರನ೦ತಿದ್ದ ಆಕಾರವೊಂದು ಪಾಕಕ್ಕೆ ವರ್ಗಾವಣೆಯಾಯಿತು. ಸಕ್ಕರೆ ಪಾಕದಲ್ಲಿ ಅದ್ದಿ ಅದನ್ನು ಹೊರಗೆ ತೆಗೆದಿಟ್ಟು ಮತ್ತೆ ನನ್ನ ಎರಡನೆಯ  ಪ್ರಯತ್ನಕ್ಕೆ ತಯಾರಾದೆ. ಈ ಸಲ ಹಿಟ್ಟು  ಎಣ್ಣೆಗೆ  ಬೀಳುತ್ತಿದ್ದಂತೆ ಜಿಲೇಬಿಯ  ಎಳೆ   ಪ್ಯಾನಿನ ಸುತ್ತಲೂ ಓಡಿ  ತನ್ನಷ್ಟಕ್ಕೆ ಒಂದೇ ಒಂದು ಸುತ್ತು ಆಯಿತು.  ಹಿಟ್ಟು ಒತ್ತುತ್ತಾ ಇರುವಾಗಲೇ  ನನ್ನನ್ನು  ನೋಡಿದ್ದಿದ್ದರೆ   ಕಾಳಿಂಗನ ಜುಟ್ಟು[?] ಹಿಡಿದುಕೊಂಡ ಕೃಷ್ಣನಂತೆ ಕಾಣುತ್ತಿದ್ದೆನೇನೋ...! ಇದೂ ಒಂದು ಆಯಿತು.  ಈಗ ಇನ್ನೊಮ್ಮೆ , ಮಗದೊಮ್ಮೆ . ಯಾವತ್ತೂ ನಾನು ಅಷ್ಟೆಲ್ಲಾ ಸುಲಭಕ್ಕೆ ಸೋಲೋಪ್ಪಿಕೊಳ್ಳುವವಳೇ ಅಲ್ಲ. ಮೂರನೇ ಸಲ ಭಾರೀ ಗಮನ ಇಟ್ಟು ಎರಡು ಸುತ್ತು ಬಿಟ್ಟು ಮಧ್ಯ ಗೆರೆ ಎಳೆಯುವ ಹೊತ್ತಿಗೆ ನಾನು ಬಿಟ್ಟಿದ್ದೆಲ್ಲೋ ಗೆರೆ ಬಿದ್ದಿದ್ದೆಲ್ಲೋ ಆಗಿ ಅದೂ ಕೂಡಾ ನವ್ಯ  ಚಿತ್ರವಾಯಿತು.  ಮತ್ತೊಮ್ಮೆ ಎಲ್ಲಾ ಹಿಟ್ಟು ಮೇಲೆ ಮೇಲೆಯೇ ಬಿದ್ದು ಜಿಲೇಬಿ ಹೋಗಿ  ದೋಸೆ  ಥರಾ..!  ಅದನ್ನು ಹೊರ ತೆಗೆದವಳು ನಾನು ಬೇಜಾರು ಮಾಡಿಕೊಳ್ಳದೆ 'ಮಾಲ್ಪುವಾ ' ಥರಾ ಆಗಿದೆ ಎಂದು ಸಮಾಧಾನ ಪಟ್ಟುಕೊಂಡೆ. ಎಡಿಸನ್ ಬಲ್ಬ್ ಕಂಡು ಹಿಡಿಯುವ ಪ್ರಯತ್ನದಲ್ಲಿದ್ದಾಗ ಹೀಗೆಯೇ ಎಡವಟ್ಟಾಗಿ ಅದೆಷ್ಟು ಹೊಸ ಹೊಸ ವಸ್ತುಗಳ ಸಂಶೋಧನೆಗಳಾಗಿಲ್ಲ..!!  ಹೀಗೆ  ಜಿಲೇಬಿ ಬಿಡುವ ಕೌಶಲ್ಯ  ಪ್ರಯೋಗಗಳ ಮೇಲೆ ಪ್ರಯೋಗ  ನಡೆದು ಒಂದು ಹಂತಕ್ಕೆ ಬರುವ ಹೊತ್ತಿಗೆ  ಹಿಟ್ಟು ಖಾಲಿಯಾಯ್ತು..!  ಜಿಲೇಬಿ ಮಾಡೋದು ಏನ್ ಮಹಾ ಎನ್ನುವ ನನ್ನ ಅಹಂಕಾರವೂ ಕರಗಿ ಹೋಯ್ತು.  
ಇನ್ನು ಮೂರನೇ ಹಂತ,  ಸಕ್ಕರೆ ಪಾಕದಿಂದ ತೆಗೆದಿಟ್ಟ ಜಿಲೇಬಿ[?] ಎನ್ನುವ ವಸ್ತುವಿನ ರುಚಿ ನೋಡ ಬೇಡವೇ ? ಮೊದಲು ನನ್ನ ಮಗಳಿಗೆ ಕೊಟ್ಟೆ. ಅಮ್ಮ ಜಿಲೇಬಿ ಮಾಡುತ್ತಾಳೆ ಅಂತ ಕಾದು   ಕುಳಿತುಕೊಂಡಿದ್ದಳು. ತಿನ್ನಲು ಬಯಸಿ ಅಂತ ಏನೂ ಅಲ್ಲ, ಜಿಲೇಬಿ ಏನಾಗಬಹುದು ಎನ್ನುವ ಸಣ್ಣ ಅನುಮಾನದಲ್ಲಿ.  ಒಂದು  ಎಳೆ  ತಿಂದವಳೇ 'ಓ ಭಾರೀ ಚನಾಗಿದೆ,  ಆಸ್ಸಮ್,   ಸ್ವಲ್ಪ ಮೆತ್ತಗಿದೆ.''  ಎಂದವಳೇ 'ಜಿಲೇಬಿ ಆಲ್ವಾ' ಅಂತ ಮತ್ತೆ  ಕನ್ಫರ್ಮ್ ಮಾಡಿಕೊಂಡಳು..!  ಬಿಸಿಯಾಗಿದ್ದಾಗ ಏನೋ ಒಂದು ಥರಾ ರುಚಿ ಇತ್ತು.ನನ್ನ ಯಾವತ್ತಿನ ಪ್ರಯೋಗ ಪಶು ಯಾ  ನನ್ನ  ಎಲ್ಲಾ   ರುಚಿಗಳ ಫಲಾನುಭವಿಯಾದ   ಪತಿ ಮಹಾಶಯರು ಬಿಸಿ ಬಿಸಿಯಾದ ಜಿಲೇಬಿಯನ್ನು ಸವಿದು,  ''ಚನ್ನಾಗಿದೆ .  ಮೆತ್ತಗೆ ಚನ್ನಾಗಿದೆ.   ಈ ಥರದ್ದು ಏನೋ ಒಂದನ್ನು ಈ ಮೊದ್ಲು ತಿಂದ ನೆನಪು ಬರ್ತಾ ಇದೆ '' ಎಂದು ಇದನ್ನು ಕೊಂಡಾಡಿದರು. ಯಾವತ್ತೂ ನನ್ನ ಅಡುಗೆಯನ್ನು ತೆಗಳಿದವರೇ ಅಲ್ಲಪ್ಪ... ತಾಳಿದವನು ಬಾಳಿಯಾನು ಮತ್ತು ಸಹನೆಯೇ ಶಕ್ತಿ ಎನ್ನುವ ಎರಡು ನಾಣ್ಣುಡಿಗಳಲ್ಲಿ  ನನ್ನವರಿಗೆ ಅಪಾರ ನಂಬಿಕೆ..!!

ಇಷ್ಟಕ್ಕೆ ನಿಲ್ಲದೆ ಮರುದಿನ ಕೆಲಸದವಳ  ಮೇಲೂ ಇದರ ಪ್ರಯೋಗವಾಯಿತು. ಏನು ಅಂತ ಹೇಳಲಿಲ್ಲ.. ''ಏನಕಾ .. ಇದು ಏನೋ ಬೋಂಡ ಕರ್ದು  ಪಾಕಕ್ಕೆ ಹಾಕಿದಂಗೆ ಇದೆ..   ಏನಕ್ಕಾ ಇದು?  ಎಂದು ಮತ್ತೆ ಮತ್ತೆ ವಿಚಾರಿಸಿಕೊಂಡಳು. 'ಜಿಲೇಬಿ' ಎಂದು ಹೇಳಿದ್ದೇ  ತಡ ಹೊಟ್ಟೆ ಹಿಡಿದುಕೊಂಡು ನಕ್ಕಳು. ''ಇದ್ಯಾವ ಡಿಸೈನ್  ಅಕಾ'' ಅನ್ನುತ್ತಾ ಬಿದ್ದು ಬಿದ್ದು ನಕ್ಕಳು. ''ಅಕ್ಕನ  ಜಿಲೇಬಿ ಅಂತ ಊರೆಲ್ಲಾ ಹಬ್ಬಿಸಿದರೆ ಕೊಂದು ಬಿಡುತ್ತೇನೆ   ನೋಡು,'' ಎಂದು ಆವಾಜ್ ಹಾಕಿದೆ.

 ಅಷ್ಟೊತ್ತಿಗೆ  ಮಧ್ಯಾನ್ಹಕ್ಕೆ ಊಟಕ್ಕೆ ಶಿವ ಶಿವಾ .. ಅಂತ ನನ್ನ ಎರಡನೆಯ ಅಣ್ಣ ಮತ್ತು ಮೊದಲ ಅಣ್ಣನ ಮಗ ಇಬ್ಬರೂ ಬಂದರು.  ನನ್ನವರು '' ಜಿಲೇಬಿಗೆ ಮತ್ತಿಬ್ಬರ ಬಲಿ''  ಎಂದು ಮುಸಿ ಮುಸಿ ನಕ್ಕರು. ನನ್ನ ಅಣ್ಣನಂತೂ ಚೂರು ತಿಂದವನೇ ದಾಕ್ಷಿಣ್ಯವಿಲ್ಲದೆ ''ಹೈಟ್ ಆಫ್ ಟಾರ್ಚರ್''  ಎಂದ.   ಮುಖದ ಮೇಲೆ ಹೀಗೂ ಉಂಟೇ ಎನ್ನುವ ಲುಕ್ಕು...! ನಾನು ಸುಮ್ಮನೆ ನಕ್ಕೆ.   ಮದುವೆಗೂ   ಮೊದಲು ಅನೇಕ ಸಲ ಈ ರೂಪದ  ಹೀರೋಯಿಕ್   ಡೀಡ್ಸ್ ಗಳಿಗೆ ಬಲಿಪಶು ಆದವನೇ ಆದರೂ ಆಗ ಹೀಗೆ ಹೇಳಿದ್ದರೆ   ಬೇರೆನೇ  ಇತ್ತು.      ನನ್ನ  ಸೋದರಳಿಯ  ಮಾತ್ರ '' ಯಾವುದೋ ಒಂದು  ಯ್ಯಾಂಗಲ್ ನಿಂದ ಜಿಲೇಬಿ ಥರಾನೇ ಕಾಣ್ತಾ  ಇದೆ, ಸಕ್ಕರೆ ಪಾಕ ಚನ್ನಾಗಾಗಿದೆ ''  ಎಂದು ನನಗೆ ಸಮಾಧಾನ ಹೇಳಿದ.

ಇದನ್ನು ನೋಡಿದ ಮೇಲೂ ನೀವು, ''ನೀವು ಮಾಡಿದ್ದು  ಜಿಲೇಬಿನೇ  ಹೌದಾ '' ಅಂತ ಕೇಳ್ತೀರಂದ್ರೆ ..... ..... .....


ನಂಬಿದ್ರೆ ನಂಬಿ ಬಿಟ್ರೆ ಬಿಡಿ ...

[ಈ ವಾರದ ೧೮ /೦ ೭ / ೨ ೦ ೧ ೩  ರ  ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಿತ ]