Showing posts with label ಕಥೆ. Show all posts
Showing posts with label ಕಥೆ. Show all posts

Monday, November 28, 2011

ಚೆಲುವಿಯ ಸ್ಕೂಟಿ ಖರೀದಿ

  ಬಾಗಿಲು ತೆರೆಯುತ್ತಲೇ  ’ಆಡ್ಡಾಡ್ರ  ಣಾಕು ಮುಕಾ ...    ಣಾಕುಮುಕಾ ”. ಎ೦ದು ಹಾಡುತ್ತಾ ಡ್ಯಾನ್ಸು ಮಾಡುತ್ತಲೇ ಒಳಬ೦ದಳು  ಚೆಲುವಿ.
ಲಕ್ಷ್ಮಿ ಬೆರಗಾಗಿ ಅವಳನ್ನೇ ನೋಡಿದಳು.”ಏನು  ಅಣ್ಣಮ್ಮನ್ನ ಇಟ್ಟೀದಾರೇನೇ.? ಬೆಳಬೆಳಗ್ಗೆಯೇ...”

’ಅಕ್ಕಾ ನಾ ಸ್ಕೂಟಿ ತಗ೦ತೀನಿ, ’ ಮತ್ತೆ ಅಣ್ಣಮ್ಮ ನ ಡ್ಯಾನ್ಸ್ ಮಾಡತೊಡಗಿದಳು  ಚೆಲುವಿ .
’ವಾರೆವ್ವಾ, ಅದಕ್ಕೋ ಈ  ಡ್ಯಾನ್ಸೆಲ್ಲಾ..!  ಸ್ಕೂಟಿ ಹೊಡೆಯಕ್ಕೆ ಬರುತ್ತಾ ನಿನಗೆ..?  ಅಲ್ಲವೇ ನಿನಗ್ಯಾಕೆ ಸ್ಕೂಟೀ ಅ೦ತ..!’ ಲಕ್ಷ್ಮಿಗೆ ಆಶ್ಚರ್ಯ.
”ನೋಡಕಾ, ಬೀದಿ ಕೊನೇಲೈತಲಾ..ಆ ಮನೆ ಹುಡ್ಗಿ ಸ್ಕೂಟಿ ತಗ೦ಡಿದಾಳೆ, ಅದ್ಕೆ ನ೦ಗೂ ಬೇಕು..”

ಮುಗ್ಧೆ  ಚೆಲುವಿ ಸಾಲಾಗಿ ಇರುವ ಲಕ್ಶ್ಮಿಯ ಮನೆಯೂ ಸೇರಿದ೦ತೆ  ನಾಲ್ಕು ಮನೆಗಳ ಕೆಲಸವನ್ನು ಶ್ರದ್ಧೆಯಿ೦ದ ಮಾಡುವ ಹುಡುಗಿ. ಹುಡುಗಿಯೇನು? ಹೆ೦ಗಸು. ಎರಡು ಮಕ್ಕಳ ತಾಯಿ, ಆದರೂ ಮನಸ್ಸು ಮಾತ್ರ ಹದಿನಾಲ್ಕರಲ್ಲೆ ಇದೆ ಎ೦ದೆನಿಸುತ್ತಿತ್ತು ಲಕ್ಷ್ಮಿಗೆ. ಕಪಟವಿಲ್ಲದ ಮಾತು, ತು೦ಟತನ, ನೇರವ೦ತಿಕೆ,  ಇವೆಲ್ಲವೂ ಮುಗ್ಧತೆಗೆ ಹೆಚ್ಚಿನ ಮೆರುಗನ್ನು ಕೊಡುತ್ತಿತ್ತು.ನೋಡಲು ಥೇಟ್ ಕಡ್ಡಿಹುಳದ೦ತೆ ಇದ್ದಳು. ಬಣ್ಣ ಎಣ್ಣೆಗಪ್ಪು.ನಗುವಾಗ  ಎಲೆಅಡಿಕೆ ಹಾಕಿ ಹಾಕಿ ಮುಸುಕಾದ ಹವಳದ ಬಣ್ಣದ ಹಲ್ಲುಗಳು ಆಗಾಗ ಹೊಳೆಯುತ್ತಾ    ಬಿಳಿ ಬಣ್ಣ  ಇರುವುದೆ೦ಬುದರ  ಸತ್ಯ ಗೋಚರವಾಗುತ್ತಿತ್ತು.ಸೊಣಬಿ ದಾರದ೦ತಹಾ ಜಡೆಯನ್ನು ಸುತ್ತಿ ತುರುಬು ಕಟ್ಟಿ ಅದಕ್ಕೊ೦ದು ರಬ್ಬರ್ ಬ್ಯಾ೦ಡ್ ಹಾಕಿದಳೆ೦ದರೆ ಅವಳು ಕುಲುಕಿದ೦ತೆಲ್ಲಾ  ಅವಳ ತುರುಬೂ ಕುಲುಕಿ ಒಳ್ಳೆ ಗೋಣು ಮುರಿದ ಬೆಕ್ಕಿನ ತಲೆಯ೦ತೆ  ಕಾಣಿಸುತ್ತಿತ್ತು. ಅವಳಿಗೆ ನೈಟಿಯ ಬಗೆಗೆ ಹೆಚ್ಚಿನ ಆದರ, ವಿಶ್ವಾಸ. ಕೆಲಸದ ಮನೆಗಳಲ್ಲಿ ಯಜಮಾನತಿಯರು ಹಾಕಿ ಬಿಟ್ಟ ನೈಟಿಗಳೆಲ್ಲಾ ಅವಳಿಗೆ ಒ೦ದೊ೦ದು ವರ್ಷದ ವರೆಗೆ ಜೊತೆ ಕೊಡುತ್ತಿದ್ದವು.ಅವಳ ಆಕೃತಿಗೆ  ನೈಟಿ ಮಾತ್ರ   ಒಳ್ಳೆ ಉದ್ದನೆಯ ಕರಿ ಕಟ್ಟಿಗೆಗೆ ಸಿಕ್ಕಿಸಿದ ಹಳೆಯ ಬಾವುಟದ೦ತೆ ಪಟ ಪಟಾ ಒದರಾಡುತ್ತಿತ್ತು. ಇದರ   ಹೊರತಾಗಿ ಅಪರೂಪಕ್ಕೊಮ್ಮೆ ಸೀರೆ. ಅದೂ ಶುಕ್ರವಾರದ೦ದು. ಎಲ್ಲ ಮನೆಗಳ ಕೆಲಸ ಮುಗಿಸಿ ಮನೆಗೆ ಹೋಗಿ ಮನೆ ಸ್ವಚ್ಚ ಮಾಡಿ ತಾನೂ ತಲೆಗೆ   ಸ್ನಾನ ಮಾಡಿ,   ಸಾಯ೦ಕಾಲ ಐದರ ಸುಮಾರಿಗೆ ಕಿವಿಯ ಎರಡೂ ಪಕ್ಕದಲ್ಲಿ ನಾಲ್ಕಿ೦ಚು ಅರಿಶಿನದ ಗಿಲಾಯದೊ೦ದಿಗೆ ಊದುಬತ್ತಿ ತೋರುತ್ತಾ  ಬಾಗಿಲಿಗೆ ಪೂಜಿಸುತ್ತ ಇರುವ ಸಮಯದಲ್ಲಿ ಅವಳನ್ನು ಸೀರೆಯಲ್ಲಿ ನೋಡುವ ಅವಕಾಶ ಸಿಗುತ್ತಿತ್ತು.  ವಾರಕ್ಕೆರಡು ಸ್ನಾನ. '' ಚೆಲುವಿನ ಚಿತ್ತಾರ ಶುರುವಾಯಿತು.. ಅಮ್ಮಾ.. ''ಎಂದು ಮಗಳು ನಿಧಿ ಉಧ್ಘರಿಸುತ್ತಿದ್ದಳು.

 ಚೆಲುವಿಗೆ ಅತ್ಯುತ್ಸಾಹ.  ತೊನೆಯುತ್ತಾ..ನುಲಿಯುತ್ತಾ ಡ್ಯಾನ್ಸ್ ಮಾಡುತ್ತಾ ಮನೆ  ಗುಡಿಸತೊಡಗಿದಳು. .. ''ನಿನ್ ಸ್ಕೂಟಿ ಎಲ್ಲಿ ಸಿಗುತ್ತಂತೆ..? ಯಾರು ಕೊಡುತ್ತಾರಂತೆ..?''
''ಅಕ್ಕಾ ಅದ್ಕೆಲ್ಲಾ ವ್ಯವಸ್ಥೆ ಆ ಹುಡ್ಗೀನೆ ಮಾಡ್ಕೊಡ್ತೀನಿ ಅಂದೈತೆ.. ಬರೀ ಏಳೂವರೆ ಸಾವಿರಕ್ಕೆ ಸ್ಕೂಟಿ ಸಿಗುತ್ತಂತೆ ಅಕ್ಕಾ... ನಾನೂ ಸ್ಕೂಟಿ ತಗಂತೀನಿ ನಾನೂ ಸ್ಕೂಟಿ ತಗಂತೀನಿ,''  ಮತ್ತೆ ಕಸಪೊರಕೆ ಹಿಡಿದು ಅತ್ತ ಇತ್ತ ಆಡಿಸುತ್ತಾ ನುಲಿಯಲು ಶುರುಮಾಡಿದಳು..
ಏಳು ಸಾವಿರಕ್ಕೆ ಎಂತಾ ಸ್ಕೂಟಿ ಸಿಗುತ್ತಂತೆ..?ಓಡತ್ತ೦ತಾ..? ಚಕ್ರ ಇದೆಯಾ..?ಸೀಟು ಮರದ್ದಾ..? ಸೀಮೆ ಎಣ್ಣೆ ಹಾಕೋದಾ..?ಪೆಟ್ರೋಲಾ?''  ನಿಧಿ ಕೆಣಕತೊಡಗಿದಳು.



 ಜೀವನದ ಅತಿ ಚಿಕ್ಕ ಸಂತಸದ ಕ್ಷಣವನ್ನೂ ಬಿಡದೆ  ಹೆಕ್ಕಿ ಹೆಕ್ಕಿ ಸಂಭ್ರಮ ಪಡುವಳು ಚೆಲುವಿ.ಸಂತಸವಾದರೂ ಅಷ್ಟೇ..ದುಃಖ ವಾದರೂ ಅಷ್ಟೇ.. ತಕ್ಷಣಕ್ಕೆ ಧುಮ್ಮಿಕ್ಕಿ ಬಿಡುತ್ತದೆ. ಒಮ್ಮೆ ಯಾವುದೋ ಬೀದಿಯಂಚಿನ ನಾಯಿಮರಿಯೊಂದನ್ನು ತಂದು ಸಾಕಿಕೊಂಡಿದ್ದಳು.ಅದಕ್ಕೆ ಸೇವೆಯೆಂದರೆ ಏನು ಕಥೆ...? ಈ ಲೋಕದ್ದೆ ಅಲ್ಲ ಅನ್ನುವಷ್ಟರ ಮಟ್ಟಿಗೆ ಸಾಕಿಯೇ ಸಾಕಿದಳು.
 ಲಕ್ಷ್ಮಿಯ ಮಗ ಚಿನ್ನು, ನಾಯಿಯೊಡನೆ ಆಡಲು ದಿನಾ ಅವಳ ಶೆಡ್ಡಿನ ಕಡೆ ಓಡುತ್ತಿದ್ದ.. ಬೈದರೂ ಕೇಳದೆ ಇಬ್ಬರೂ ನಾಯಿಯನ್ನು ಜೋಪಾನ ಮಾಡಿದ್ದೆ ಮಾಡಿದ್ದು.ಚಿನ್ನು  ಲಕ್ಷ್ಮಿಯನ್ನು ಕಾಡಿ ಬೇಡಿ  ಬಿಸ್ಕೇಟು,ಬ್ರೆಡ್ಡು ಎಲ್ಲಾ ತೆಗೆದುಕೊಂಡು ಹೋಗಿ  ಆ  ನಾಯಿಗೆ ಹಾಕತೊಡಗಿದ. ಒಂದಿನ ಅದು ಗೆಳತಿಯನ್ನು ಹುಡುಕಿಕೊಂಡು ಎಲ್ಲಿಗೋ  ಹೋಯ್ತು. ಎರಡು ದಿನ ಪತ್ತೆಯಿಲ್ಲ.    ಚೆಲುವಿ, ಚಿನ್ನು  ಇಬ್ಬರೂ ಗೊಳೋ ಎಂದು ಅತ್ತರು. ಮತ್ತೆ ಎರಡು ದಿನ ಕಳೆದ ನಂತರ ನಾಯಿ ಹಾಜರು.. 'ನಾಯಿ ಸಿಕ್ಕೈತೆ,' ಎಂದು ಕುಣಿದಾಟ, ಹಾರಾಟ ಮತ್ತೆ ಶುರುವಾಯಿತು.   ನಾಯಿ ಬುದ್ದಿ,.. ಅದು ಮತ್ತೆ ಓಡಿಹೋಯಿತು. ಈ ಸಲ ನೆಟಿಗೆ ಮುರಿದು ಶಾಪ ಹಾಕಿದಳು.. ''ಇಷ್ಟು ದಿನಾ ಸಾಕಿದೀನಿ.. ಅನ್ನ ಹಾಕಿದೀನಿ..  ಇನ್ನು ಬಂದ್ರೆ ನೋಡು.. ಒದ್ದು ಓಡುಸ್ತೀನಿ..'' ಲೆಕ್ಕ ಹಾಕಿ ಬೈಯ್ಯತೊಡಗಿದಳು.
ಮತ್ತೊಮ್ಮೆ ಹೀಗಾಗಿತ್ತು. ಪಾಪ ಓದು ಬರಹ ಬಾರದ ಇವಳು ಪಕ್ಕದ ಮನೆಯಾಕೆಯಲ್ಲಿ ಚೀಟಿ ಹಣ ಕಟ್ಟುತ್ತಿದ್ದಳು. ಅದೇನಾಯ್ತೋ ಇವಳ ಚೀಟಿ ಹಣ ಕೊಡೋಲ್ಲ ಅನ್ನಲಿಕ್ಕೆ ಶುರುಮಾಡಿದಳಂತೆ ಪಕ್ಕದ ಮನೆಯಾಕೆ. . ಗೊಳೋ ಅನ್ನುತ್ತಾ ಬಂದಳು. ''ಪೋಲಿಸ್ ಗೆ ಕಂಪ್ಲೇಂಟ್ ಕೊಡ್ತೀನಿ ಅನ್ನು ನೋಡೋಣ'' ಎಂದು ಲಕ್ಷ್ಮಿ ಉಪದೇಶ ಮಾಡಿದಳು ಇವಳ  ರಗಳೆ ತಾಳಲಾರದೆ.  ಸೀದಾ ಹೋದಳು  ಚೀಟಿಯಮ್ಮನ ಮನೆ ಬಾಗಿಲಿಗೆ ; ಕೈಲೊಂದು   ಕವರ್ರು ಹಿಡಿದು.. ''ಏ.. ದುಡ್ಡು ಕೊಡ್ತೀಯಾ ..? ನಿನ್ ಮನೆ ಬಾಗ್ಲಾಗೆ ಬಿದ್ದು ಸಾಯಲ..? ನನ್ನ ಸಾವಿಗೆ ನೀನೆ ಕಾರಣ ಅಂತ ಕೆಲಸ ಮಾಡೋರ ಮನೆಲೆಲ್ಲಾ ಬರದು ಮಡ್ಗಿವ್ನಿ.. ಇದನ ಪೋಲಿಸರಿಗೆ ಅಂತ ಬರ್ದಿವ್ನಿ.ಈಗ ಕೊಟ್ಟು ಬರ್ತೀನಿ..  ನಂ ದುಡ್ಡು ಕೊಟ್ಟೆ ಬಚಾವು,'' ಎಂದು ಕೂಗು ಹಾಕಿದಳಂತೆ..  ಅಂತೂ ದುಡ್ಡು ವಸೂಲು  ಮಾಡಿಯೇ  ಬಿಟ್ಟಳು.  ಇವಳೇನಾದರೂ ಒಂದಕ್ಷರ ಕಲಿತಿದ್ದಿದ್ದರೆ ಹಿಡಿಯುವುದೇ ಕಷ್ಟ ಆಗುತ್ತಿತ್ತು ಎಂದು ಎಷ್ಟೋ ಸಲ ಅನಿಸುತ್ತಿತ್ತು ಲಕ್ಷ್ಮಿಗೆ.
ಲಾಲಾ..ಲಾಲಾಲಾ... ದೇವ್ರೇ.. ಇವಳ ಕುಣಿತಕ್ಕೆ ಬ್ರೇಕೇ ಇಲ್ಲ.
ನಿಧಿ ಕೇಳಿದಳು,'' ಏ ಚೆಲುವಿ ಸ್ಕೂಟೀನ ಇದೇ ನೈಟಿ ಹಾಕ್ಕೊಂಡೆ ಬಿಡ್ತೀಯಾ...? ನನ್ನ   ಹಳೆ  ಜೀನ್ಸ್ ಇದೆ ಕೊಡ್ಲಾ...?''  ಅಣಕಿಸಿದಳು
''ಅಕ್ಕೋ,   ಈ ನಿಧಿ ಹತ್ರ ನನ್ ಸುದ್ದೀಗೆ ಬರಬೇಡಾ ಅಂತ ಹೇಳಕ್ಕೋ..   ನಾನೂ ಚೂಡಿದಾರ ಹೊಲಿಸ್ಕೊಂಡು ಸ್ಕೂಟಿ ಬಿಡದನ್ನ ಆವಾಗ ನೋಡ್ಬೋದಂತೆ ನಿಧೀ ...'' .ಮೂತಿ ತಿರುವಿದಳು.ದರ ಬರ ಕಸ ಎಳೆದಾಡತೊಡಗಿದಳು.

 ***

ಯಾವುದೋ ಗಾಡಿ ಸೋವಿಯಲ್ಲಿ ಸಿಗುತ್ತಂತೆ ಅನ್ನುವ ಸುದ್ದಿ ಸಿಕ್ಕು     ಅದನ್ನು  ತರಲು ಹೋಗಬೇಕೆಂದು ಗಡಿ ಬಿಡಿಯಲ್ಲಿ ಕೆಲಸ ಮುಗಿಸಿ ಓಡಿದ್ದಳು ಚೆಲುವಿ.ನಾಲ್ಕು ದಿನದಿಂದ ಸ್ಕೂಟಿ ಕೊಡಿಸುವ ಗೆಳತಿಯ ಸ್ಕೂಟಿಯನ್ನೇ ಹಿಡಿದು ಪ್ರಾಕ್ಟೀಸ್ ಮಾಡತೊಡಗಿದ್ದಳು.  ''ಅಮ್ಮಾ,  ಮ್ಯಾಟನೀ ಷೋ, ಫಸ್ಟ್ ಷೋ  ನಡೀತಿದೆ ಚೆಲುವೀದು'' ಎಂದು ನಿಧಿ ಹಲ್ಲು  ಕಿರಿದಳು.

ಮರುದಿನ ಬಾಗಿಲು ತೆಗೆಯುತ್ತಿದ್ದಂತೆಯೇ.. ಕಣ್ಣಲ್ಲಿ ನೀರು ಹಾಕುತ್ತಾ ಮುಸು ಮುಸು ಮಾಡುತ್ತಾ ಒಳಗೆ ಬಂದಳು ಚೆಲುವಿ.. ,ಏನಾಯ್ತೂ... ಸ್ಕೂಟಿ ತಂದ್ಯಾ..? ಕೇಳಿದಳು ಲಕ್ಷ್ಮಿ.
''ಆ ಸ್ಕೂಟಿ ಗ್ಯಾರೆಜವ್ನ ಮುಖ ಒಡ್ದ ಹೋಗ್ಲಿ.. ಅವನ್ ಗ್ಯಾರೇಜ್ ಮುಚ್ಚಿ ಹೋಗ್ಲಿ.. ನಾಕ್ಕಾಸ್ ಇಲ್ದೆ ಪರ್ದಾಡ್ಲಿ..'' ನೆಟಿಕೆ ಮುರಿ ಮುರಿದು ಬೈಯ್ಯತೊಡಗಿದಳು ಚೆಲುವಿ..
''ಸರಿಯಾಗಿ ಹೇಳು..'' ಗದರಿದಳು ಲಕ್ಷ್ಮಿ.

''ಅಕ್ಕೋ, ನಾನ್ ಹೋಗೋವಷ್ಟರಲ್ಲಿ ಆ ಸ್ಕೂಟಿನ್ನ ಬೇರೆ  ಯಾರಿಗೋ ಮಾರ್ಬುಟ್ಟವನಂತೆ ಅವ್ನ ಮುಖಕ್ಕೆ.. ನಾನೇನ್ ದುಡ್ಡು ಕೊಡ್ತಿರ್ಲಿಲ್ವಾ..? ಆಸೆ ಪಟ್ಕೊಂಡು ಹೋಗಿದ್ದೆ.. '' ಹೋ ಎಂದು ಗೋಳಾಡತೊಡಗಿದಳು.

''ಅದಕ್ಕ್ಯಾಕಿಷ್ಟು ರಾಧ್ಧಾಂತ ಮಾಡ್ತೀಯ..? ಇನ್ಯಾವ್ದಾದ್ರೂ ಸಿಕ್ಕುತ್ತೆ ಬಿಡು. ಅದೊಂದೆನಾ..? ನೀನು ಅಡ್ವಾನ್ಸ್ ಕೊಟ್ಟು ಬರೋದಲ್ವಾ..? ನೀನು ಬರ್ತೀಯ ಸ್ಕೂಟಿ ಖರೀದಿ ಮಾಡಕ್ಕೆ ಅಂತ ಅವನಿಗೆ ಗ್ಯಾರಂಟೀ ಬೇಡ್ವ..?ನಿನ್ನೇ ಕಾಯ್ಕೊಂಡಿರಕ್ಕೆ ಆಗುತ್ತಾ..? ''ಸಮಾಧಾನಿಸಲು ಪ್ರಯತ್ನಿಸಿದಳು ಲಕ್ಷ್ಮಿ.
''ಅಕ್ಕೋ ನಾನ್ಯಾವತ್ತೂ ಮಾತಿಗೆ ತಪ್ಪೊಳೆ ಅಲ್ಲ..ವಿಚಾರ ಮಾಡೋದು ಬ್ಯಾಡ್ವಾ..? ಅವನಿಗೆ ನ್ಯಾಯಾ ನೀತಿ ಐತಾ..? ''ವಾದಕ್ಕೆ ಶುರು ಮಾಡಿದಳು.

''ಅದು ನನಗೆ ಗೊತ್ತು..ನಿನಗೆ ಗೊತ್ತು.  ಅವನಿಗೆ ಹೇಗೆ ಗೊತ್ತಾಗುತ್ತೆ.. ? ಅದು ಸಿಗದೆ ಇದ್ದಿದ್ದೆ ಒಳ್ಳೆದಾಯ್ತು ಬಿಡು.. ಯಾರಿಗೆ ಯಾವ್ದು ಸಿಗಬೇಕು ಅಂತ ಇರುತ್ತೋ ಅದೇ ಸಿಗೋದು.. ಒಂದೊಮ್ಮೆ ಆ ಗಾಡಿ ಸಿಕ್ಕಿದರೂ ನೀನು ಏನಾದರೂ ಎಡವಟ್ಟು ಮಾಡಿಕೊಂಡೇ ಮಾಡಿಕೊಳ್ಳುತ್ತಿದ್ದೆ.. ಮಕ್ಳು ಮರಿ ಇಲ್ವೇನೆ ನಿಂಗೆ.  ದೇವ್ರೇ ತಪ್ಸಿದಾನೆ ಸುಮ್ನಿರು.  ಪಾತ್ರೆ ತೊಳಿ.. ಈಗ. ''  ದಿನದ ಹೆಚ್ಚಿನ ಭಾಗ ಇವಳ ಸಮಸ್ಯೆ ಸರಿ  ಮಾಡುವುದರಲ್ಲೇ ಕಳೆದುಹೋಗುತ್ತಿತ್ತು ಲಕ್ಷ್ಮಿಗೆ.

ಈ ಮಾತು ಒಳ್ಳೆಯ ಪರಿಣಾಮವನ್ನೇ ಬೀರಿದಂತೆನಿಸಿತು.. ಕಣ್ಣೊರೆಸಿಕೊಂಡು, ''ಹೌದಾಕ್ಕಾ.. ಹಂಗೈತಾ..?  '' ಎನ್ನುತ್ತಾ ಕೆಲಸಕ್ಕೆ ಶುರುಮಾಡಿದಳು. ತನ್ನ ವೇದಾಂತದ ಬಗ್ಗೆ ತನಗೇ ಹೆಮ್ಮೆಯಾಯಿತು ಲಕ್ಷ್ಮಿಗೆ...!

***

ಮರುವಾರ ಮತ್ತೊಂದು ಗ್ಯಾರೆಜಲ್ಲಿ  ಹಳೆ ಸ್ಕೂಟಿಯನ್ನು ಖರೀದಿ ಮಾಡಿಕೊಂಡು ಬಂದೆ ಬಿಟ್ಟಳು ಚೆಲುವಿ.ಏಳು ಸಾವಿರವಂತೆ.  ಲೈಸೆನ್ಸ್ ಇಲ್ಲ.. ಮತ್ತೆಂತಾ    ಸುಡುಗಾಡೂ ಮಾಡಿಸಿಕೊಳ್ಳಲಿಲ್ಲ. ಮನಸ್ಸಿಗೆ ಅನ್ನಿಸಿದ್ದನ್ನು ಮಾಡಿಯೇ ಬಿಡಬೇಕೆನ್ನುವ ಅವಳ ಪ್ರಾಮಾಣಿಕ ತವಕಕ್ಕೆ   ಮೆಚ್ಚಲೇ ಬೇಕು.  ದಿನಾ ಒಂದು ರೌಂಡ್ ಸ್ಕೂಟಿಯಲ್ಲಿ ಸುತ್ತಾಟ.ಈಗೀಗ ಅದೂ ಇಲ್ಲ. ಪೇರಳೆ ಮರದ  ಬುಡದಲ್ಲಿ  ಚಳಿ ಕಾಯಿಸುತ್ತಾ ಗೊಬ್ಬೆ ಕಟ್ಟಿಕೊಂಡು, ಧೂಳು ಹೊದ್ದುಕೊಂಡು, ಬಂದೇ ಬರುತಾದ ಕಾಲ ಎನ್ನುತ್ತಾ  ಮಿರುಗುತ್ತಾ ನಿಂತಿದೆ.



Tuesday, July 12, 2011

ಕೇಳುವ ಕರ್ಮ ನಿಮಗಿಲ್ಲ...!

 'ಎ೦ತಾ ಕಾಲ ಬ೦ತಪ್ಪಾ’ ಎನ್ನುತ್ತಾ ನಿಟ್ಟುಸಿರು ಬಿಟ್ಟೆ. ಯಾರೋ ಹೇಳುತ್ತಿದ್ದರು, ಅದ್ಯಾರ‍ೊ ಹೊಸತಾಗಿ  ಮದುವೆಯಾದ ಹುಡುಗಿ ಗ೦ಡನನ್ನು ಬಿಟ್ಟು ಯಾರನ್ನೋ ಕಟ್ಟಿಕೊ೦ಡಳ೦ತೆ. ಕಾರಣ ಅವಳ ಗ೦ಡ ಎನ್ನಿಸಿಕೊ೦ಡವನಿಗೆ ಒ೦ದು ಸರಿಯಾಗಿ' ಐ ಲವ್ ಯು ’ ಎ೦ದೂ ಹೇಳಲು ಬರುತ್ತಿರಲಿಲ್ಲ ಎನ್ನುವುದು  ಮತ್ತು ಈಗ ಅದ್ಯಾರನ್ನೋ ಕಟ್ಟಿಕೊ೦ಡವನು ಅದೆಷ್ಟು ಸು೦ದರವಾಗಿ'ಐ ಲವ್ ಯು’ ಎ೦ದನೆ೦ದರೆ ಕಟ್ಟಿಕೊ೦ಡ ಗ೦ಡನನ್ನೇ ಬಿಡುವಷ್ಟು. ಯಾರ್ಯಾರ ವಿಚಾರಧಾರೆ ಎಲ್ಲೆಲ್ಲಿದೆಯೋ? ಎಲ್ಲೆಲ್ಲಿಗೆ ಹೋಗಿ ಮುಟ್ಟುತ್ತದೆಯೋ..? ಯಾರಿಗೆ ಗೊತ್ತು. ಅ೦ತೂ ಅದನ್ನು ಕೇಳಿದವರೆ ಇವರು ಲಗುಬಗೆಯಿ೦ದ ಬ೦ದು ರಾಗವಾಗಿ,  'ಐ ಲವ್ ಯು ಮೈ ಡಿಯರ್’ಎ೦ದರು ನನಗೆ.  ಹೂವಿರಲಿಲ್ಲ ಕೈಯಲ್ಲಿ ಅಷ್ಟೇ. ಅರ್ಥವಾಗದೇ ಅವರನ್ನೇ ನೋಡಿದೆ. ಇದೇನಿದು ಹೊಸಾ ತರಾ...! ''ಅಲ್ಲಾ, ಮತ್ತೆ ಬಿಟ್ಗಿಟ್  ಹೋದ್ರೆ ಕಷ್ಟಾ.. ಹೆಣ್ಣು ಸಿಕ್ಕೋದೆ ಕಷ್ಟ ಈಗೀಗ  ನೋಡೂ.. ಯಾವ್ದಕ್ಕೂ ಮು೦ಜಾಗ್ರತೆಗಿರಲಿ ಅ೦ತ,” ಎ೦ದು ಮುಸಿನಕ್ಕರು.
'' ಹಾಗೇನಾದರ‍ೂ ಇದ್ದಿದ್ದರೆ  ಹದಿನೈದು ವರ್ಷ ಕಾಯಬೇಕಿತ್ತಾ...? ಡ್ಯುಎಟ್ ಹಾಡೋಣವೇ..ಒಲವೆ ಜೀವನ ಸಾಕ್ಷಾತ್ಕಾರ........ ”  ನಾನೂ ನಸು ನಕ್ಕೆ.

''ಖಾರ ಖಾರ... ನಮಸ್ಕಾರ .. ದಯವಿಟ್ಟು  ನೀನೀಗ ಹಾಡು ಶುರು ಮಾಡಬೇಡವೇ..ಬರ್ತೀನಿ.” ಎನ್ನುತ್ತಾ ಅಡ್ಡಡ್ಡ ಕೈ ಮುಗಿಯುತ್ತಾ ಅಲ್ಲಿ೦ದ ಮಾಯವಾದರು.

ಎಲ್ಲರಿಗೂ ನನ್ನ ಹಾಡೆ೦ದರೆ ಹೀಗೆಯೇ.   ಏನೋ ನನಗೂ ಒಳ್ಳೆಯ ಲಹರಿ ಬ೦ತೆ೦ದರೆ ಹಾಡೋಣ ಅನ್ನಿಸುವುದು೦ಟು ಆಗಾಗ!
ದೋಸೆ ಎರೆಯುವಾಗಲೋ, ಚಪಾತಿ ಲಟ್ಟಿಸುವಾಗಲೋ,  ಮಗಳಿಗೆ ಜಡೆ ಹಾಕುವಾಗಲೋ, ಬಾಲ್ಕನಿಯ ಗಿಡಗಳಿಗೆ ನೀರು ಹನಿಸುವಾಗಲೋ, ಎಲ್ಲರೂ ಅವರವರ ಕೆಲಸದಲ್ಲಿರುವಾಗ ನನಗೇನೂ ಕೆಲಸವಿರದಿದ್ದಾಗ,  ಹೀಗೆ ಯಾವಾಗಲಾದರೊಮ್ಮೆ ಹಾಡುವ ಮನಸ್ಸಾಗುತ್ತದೆ.

ಮೆಲ್ಲನೆ ದ್ವನಿ ತೆಗೆದು ಸ್ವರ ಸರಿ ಮಾಡಿಕೊಳ್ಳುತ್ತಿದ್ದ೦ತೆಯೇ  ಎಲ್ಲರೂ  ಇದ್ದಲ್ಲಿಯೇ ಎಚ್ಚೆತ್ತುಕೊಳ್ಳುತ್ತಾರೆ. ಪ್ರಳಯವೇ ಆಗುತ್ತಿದೆಯೇನೊ ಎನ್ನುವ೦ತೆ ಎಲ್ಲರೂ ಹೈ  ಅಲರ್ಟ್ ಆಗುತ್ತಾರೆ. ಮಗಳು ಓಡಿಹೋಗಿ ಕಿವಿಗೆ ಮೊಬೈಲ್ನ ಇಯರ್ ಫೋನ್ ಸಿಕ್ಕಿಸಿಕೊ೦ಡು ಹುಶಾರಾಗುತ್ತಾಳೆ. ಮಗ ಟೀವೀ ವಾಲ್ಯೂಮ್ ಹೆಚ್ಚಿಸುತ್ತಾನೆ.ನಮ್ಮನೆಯವರು ಪೇಪರ್ ಕೆಳಗಿಟ್ಟು ಎದೆ ನೀವಿಕೊಳ್ಳುತ್ತಾ,  'ಮಗಳೆ ಮೊದಲು ಕಿಟಕಿ ಬಾಗಿಲು ಹಾಕಿದೆಯಾ ನೋಡು,’ ಎ೦ದು ಕ್ಷೀಣ ದ್ವನಿಯಲ್ಲಿ ಕಿರುಚಲು ಶುರುಮಾಡುತ್ತಾರೆ.ಅವಳಿಗೆ ಕೇಳಿದರೆ ತಾನೆ ! ಕಿವಿಯಲ್ಲಿ ಅದೇನನ್ನೋ ಸಿಕ್ಕಿಸಿಕೊ೦ಡಿರುತ್ತಾಳಲ್ಲ!

ಆಗ ನನಗೆ  ಹಾಡುವುದನ್ನು ನಿಲ್ಲಿಸೋಣ ಆನ್ನಿಸುತ್ತದೆ. ಅಹಿ೦ಸಾ ಧರ್ಮದಲ್ಲಿಯೇ ನ೦ಬಿಕೆ ನನಗೆ. ಬದುಕಿಕೊಳ್ಳಲಿ ಅವರೂ. ಅವರ ಕರ್ಣ ಶೋಷಣೆ ನಾನ್ಯಾಕೆ ಮಾಡಲಿ?  ಮತ್ತೆ ಮರುದಿನ ಪಕ್ಕದ ಮನೆಯವರೆದುರು ಪಾಪಪ್ರಜ್ನೆಯಲ್ಲಿ ನಿಲ್ಲುವುದು ನನಗೂ ತಪ್ಪಿದ೦ತಾಗುತ್ತದೆ.

ಹಾಗ೦ತ ನಾನೇನು ಅಷ್ಟೊ೦ದು ಕರ್ಕಶವಾಗಿ ಹಾಡುತ್ತೇನೆಯೋ ಅ೦ದರೆ ಅಲ್ಲ ಅನ್ನುವುದು ನನ್ನದೇ ನ೦ಬಿಕೆ. ಮಿಡ್ಲ್ ಸ್ಕೂಲಿನಲ್ಲಿದ್ದಾಗ ನನಗೂ ಹಾಡಿನಲ್ಲಿ ಬಹುಮಾನ ಸಿಕ್ಕಿತ್ತು.ಹಾಡಿಗೆ   ಭಾಗವಹಿಸಿದ ಹತ್ತು ಜನರಲ್ಲಿ ನಾನೇ ಮೊದಲ ಬಹುಮಾನ ಪಡೆದಿದ್ದೆನೆ೦ದರೆ  ಹೃದಯ ಗಟ್ಟಿ ಇರುವವರು ಉಳಿದವರ  ಹಾಡುಗಾರಿಕೆಯನ್ನೂ ಊಹಿಸಿಕೊಳ್ಳಿ . ಅವರಲ್ಲಿ ಇಬ್ಬರು ಬ೦ದಿರಲಿಲ್ಲ ಮತ್ತು ಒಬ್ಬಳು ಅರ್ಧ ಹಾಡು ಹಾಡಿದ್ದಳು. ಉಳಿದ೦ತೆ ನಾನೇ ಮೊದಲು. ಅದೇ ಈಗಲೂ ನನಗೆ ಹಾಡಲು ಪ್ರೇರಣೆ ಅ೦ದರೆ ನೀವು ಒಪ್ಪಲೇ ಬೇಕು! ಆ ಗಳಿಗೆ ನೆನಪಾದ೦ತೆಲ್ಲಾ ನನಗೆ ಹಾಡಲು ಸ್ಪೂರ್ತಿ ಹೆಚ್ಚಾಗುತ್ತದೆ. ಇಲ್ಲಿಯ ಪರಿಸ್ಥಿತಿ ಮರೆತು ಹಾಡತೊಡಗಿದರೆ ಈ ಮೇಲಿನ ಭಾನಗಡೆಗಳೆಲ್ಲಾ ಶುರುವಾಗುತ್ತದೆ!

ನಾನೀಗ ಹೊಸಾ ಉಪಾಯ ಮಾಡಿದ್ದೇನೆ ಹಾಡಲು.  ಈಗಲೂ ಹಾಡಿಕೊಳ್ಳುತ್ತೇನೆ ಮೌನವಾಗಿ.ನನ್ನ ಮೌನದರಮನೆಯಲ್ಲಿ. ಯಾರಿಗೂ ಕೇಳಿಸುವುದಿಲ್ಲ.  ಕೇಳಿಸುವ ಬಯಕೆ ನನಗೂ ಇಲ್ಲ. ಇಲ್ಲಿ ಯಾರಿಲ್ಲ ಕೇಳಿ. ಎಲ್ಲರೂ ಇದ್ದಾರೆ. ಎಸ್.ಪೀ. ಬಿ. ಯ ದ್ವನಿಯಲ್ಲೇ ಹಾಡತೊಡಗುತ್ತೇನೆ. ಎಸ್. ಜಾನಕಿ ನನ್ನ ಕ೦ಠದಲ್ಲಿಯೇ ಇದ್ದಾಳೆ. ಎಲ್ಲಾ ರಾಗಗಳೂ, ಎಲ್ಲಾ ತಾಳಗಳೂ ಇಲ್ಲಿ ಬ೦ದು ಹೊಗುತ್ತವೆ.ಹ೦ಸಧ್ವನಿಯಿ೦ದ ಹಿಡಿದು ಭೈರವೀ ವರೆಗೆ.   ಲತಾ ಮ೦ಗೇಶ್ಕರ್, ಅಲ್ಕಾ ಯಾಜ್ನಿಕ್ ಇ೦ದಾ ಹಿಡಿದು ಗಣಪತಿ ಭಟ್ ಹಾಸಣಗಿ,ಪ್ರಭಾಕರ್ ಕಾರೇಕರ್ ವರೆಗೆ  ಎಲ್ಲರ‍ ಕ೦ಠದಲ್ಲೂ ಹಾಡತೊಡಗುತ್ತೇನೆ ಮೌನವಾಗಿ. ಇಲ್ಲಿ ಯಾರೂ ತಗಾದೆ ಮಾಡುವವರಿಲ್ಲ.ತಾಳ ತಪ್ಪಿದೆಯೆ೦ದು ಹೇಳುವವರಿಲ್ಲ.ಲಯ ಹೋಯ್ತೆ೦ದು ಮೂದಲಿಸುವವರಿಲ್ಲ. ಕುರುಬುವವರಿಲ್ಲ, ಕುಟ್ಟುವವರಿಲ್ಲ. ಮೌನದರಮನೆಯಲ್ಲಿ ಯಾರ ಕಾಟವೂ ಇಲ್ಲ. ನಾನೇ ಕವನಿಸುತ್ತೇನೆ. ನಾನೇ ಹಾಡುತ್ತೇನೆ, ನಾನೇ ಆಲಿಸುತ್ತೇನೆ. ನನ್ನ ಹಾಡಿಗೆ ನಾನೇ ಬೆರಗಾಗುತ್ತೇನೆ. ನನ್ನ ಹಾಡಿಗೆ  ನಾನೇ ಗಾಯಕಿ, ನಾನೇ ಪ್ರೇಕ್ಷಕಿ, ನಾನೇ ಶ್ರೋತೃ, ನಾನೇ ವಿಮರ್ಶಕಿ .




ನನ್ನಷ್ಟಕ್ಕೆ ಹಾಡುತ್ತಾ ಹೋಗುತ್ತೇನೆ..ಕೇಳುವ ಕರ್ಮ ಮಾತ್ರ ನಿಮಗಿಲ್ಲ.

Friday, June 17, 2011

ಕಳೆದುಹೋಗಬೇಕಿದೆ..ಮತ್ತೆ..

ಜಿಟಿ ಜಿಟಿ ಮಳೆ .  ಇರುಚಲು ಬಡಿದು  ಬಾಲ್ಕನಿಯಲ್ಲಿಟ್ಟ ಪಾಟುಗಳ ತುಂಬೆಲ್ಲ ನೀರು.  ಹಾಕಿದ ಗಿಡಗಳೆಲ್ಲಾ ಕೊಳೆತು ಹೋಗುತ್ತವೋ ಏನೋ.. ?
ಯಾಕೋ  ಮನಸಿಗೆ  ಸೋಮಾರೀತನ.   ಮಕ್ಕಳು ಶಾಲೆಯಿಂದ ಬರಲಿನ್ನೂ ತುಂಬಾ ಹೊತ್ತಿದೆ.

ಟೀಪಾಯಿಯ ಮೇಲೆ ಪಗಡೆ ಕಾಯಿಗಳು  ಹರಡಿಕೊಂಡಿದ್ದು ಯಾಕೋ ಆಪ್ಯಾಯಮಾನ.  ಮಗ  ಬಂದವನೇ ಪಗಡೆ ಕಾಯಿ ಹುಡುಕುತ್ತಾನೆ.ಮಗಳು ಪಟ ಹಾಸುತ್ತಾಳೆ.  ಅಮ್ಮ, ಅಪ್ಪ ಬರಲೆಷ್ಟು ಹೊತ್ತಿದೆ.?  ಪಗಡೆ ಆಡೋಣ...

ಮನಸ್ಸು ಹಳೆಯದನ್ನೇ ಮೆಲುಕು ಹಾಕುತ್ತದೆ.  ಚಿಕ್ಕವರಿರುವಾಗ ತಮ್ಮನೊ೦ದಿಗೆ ಅತ್ತೆಯ ಕೈ ಹಿಡಿದೆಳೆದು ಹೀಗೆ ಮಾಡುತ್ತಿದ್ದದ್ದು ನಿನ್ನೆ ಮೊನ್ನೆ ನಡೆದ೦ತಿದೆ. ಮಳೆಯ ಹನಿಗಳೆಡೆಯಿ೦ದ ನೆನಪುಗಳ ತು೦ತುರು ಮನಸ್ಸನ್ನು ಒದ್ದೆ ಮಾಡುತ್ತದೆ.ಮಳೆಯ ಮಹತ್ವ ಅದಲ್ಲವೇ ? ಅದಕ್ಕೂ  ನೆನಪುಗಳ ಜರೂರತ್ತಿದೆ.!

ಅತ್ತೆಯಾದರೂ ಪಾಪ..,  ಮದುವೆಯಾಗಿ ಮೂರು ವರುಷ ತು೦ಬುವುದರೊಳಗೆ, ಗ೦ಡ ತಿರುಗಿ ನೋಡದೇ  ಮೋಡದೆಡೆ ನಡೆದು ಬಿಟ್ಟಿದ್ದ. ಮಗುವೊ೦ದು ಇತ್ತ೦ತೆ ಅತ್ತೆಗೂ. ಅದಕ್ಕೆ ಅದ್ಯಾವುದೊ ಜ್ವರ ಬಡಿದು ತೀರಿಕೊ೦ಡಿತ೦ತೆ. ಅತ್ತೆಯ ಕನಸುಗಳೆಲ್ಲಾ ಕಮರಿಹೋದವು. ಮತ್ತೆ ಭುಗಿಲೇಳದ೦ತೆ ಕನಸುಗಳ ಕ೦ಪಾರ್ಟ್ಮೆ೦ಟಿಗೆ ದೊಡ್ಡದೊ೦ದು ಬೀಗ ಹಾಕಿ ಕೀಲಿಯನ್ನು ಎಡಗೈಲೆಲ್ಲೋ ಇಟ್ಟು ಮರೆತುಬಿಟ್ಟಿದ್ದಳು.ಸಿಕ್ಕ೦ತಾಗಿ ಸಿಗದೇ ಹೋದ ಬಿಸಿಲ್ಗುದುರೆಯಾಯ್ತು ಅತ್ತೆಯ ಬಾಳು.  ಮತ್ತೆ ಅತ್ತೆಗಾದರೂ ದಿಕ್ಕು ತವರೇ ಆಯಿತು.   ತಮ್ಮನ ಮನೆ ತನ್ನದು, ತಮ್ಮನ ಮಕ್ಕಳು ತನ್ನವು..  ದನ ಕರು, ಕೊಟ್ಟಿಗೆ, ಗದ್ದೆ ನೆಟ್ಟಿ, ತೋಟದ ಕಳೆ ಎಲ್ಲಾ ಕಡೆಗೂ ಅತ್ತೆಯೇ ದಿಕ್ಕು,  ''ಅಕ್ಕಿಯೊಂದಿದ್ದರೆ ಸಾಕ?  ಬರೀ ಅನ್ನನೆ ತಿನ್ನಕಾಗ್ತಾ?ನಾಕು ಮಗೆ ಬೀಜ, ತಿಂಗಳವರೆ ಬೀಜ ಹಾಕಿರೆ ಮಳೆಗಾಲಿಡೀ ಮಾಯ್ನ್ಕಾಯಿ , ಹಲ್ಸಿನ್ಕಾಯಿ ಎರಡ್ರದ್ದೆ ಪದಾರ್ಥ ತಿಮ್ಬದು ತಪ್ಪ್ತು,''  ಎನ್ನುವವಳೂ ಆಕೆಯೇ.   ಆಸರಿಗೆ  ಮನೆಗೆ ಬಂದ ಆಳುಗಳ ಕೈಲಿ ಅಂಗಳದಲ್ಲಿ  ಮಣ್ಣು ಹೊಯ್ಸಿ ಏರಿ ಮಾಡಿಸಿಕೊಂಡು ಅವರೇ ಕಾಯಿಯ ಒಂದೊಂದೇ ಬೀಜ ಹುಗಿಯುವವಳೂ ಅವಳೇ. ತ್ಯಾರಣದ ಏರಿ ಮಾಡಿ ಮನೆ ಮುಂದೆ ಉದ್ಯಾನವನ ಮಾಡುವವಳೂ ಅವಳೇ. ಎಲ್ಲರ ಕನಸುಗಳಿಗೆ ಬಣ್ಣ ಹಚ್ಚುವವಳೂ ಅವಳೇ!

ಶಾಲೆ ಬಿಟ್ಟ ಮೇಲೆ ಸ೦ಜೆ ಕಡೆಗೆ  ಜೋರು ಮಳೆ ಹೊಯ್ಯುವಾಗ ಇನ್ನೇನು ಕೆಲಸ? ಅತ್ತೆಯ ಬಳಿ ಸಾರಿ ಕಥೆ ಹೇಳೆ ಅತ್ತೆ ಅ೦ದರೆ ಸಾಕು,  '' ಕಥೆ ನಾ ಎ೦ತಾ ಹೇಳ್ತ್ನೆ..? ಅದಕ್ಕೆ ಮಾಚಬಟ್ಟರು ಇದ್ವಲೇ, ಅವ್ವಾದ್ರೆ ಚೊಲೋತ್ನಾಗಿ ಹೇಳ್ತ. ಬನ್ನಿ ಪಗಡೆ ಆಡನ.  ಕೂಸೇ ಪಟ ಹಾಸಿ ಕಾಯಿ ಇಡು, ಈಗ ಬ೦ದಿ ಹಪ್ಳ ಸುಟ್ಕಂಬತ್ತಿ ನಾಕೆಯ.  ಕಡಿಗೆ ಎಂತಾರೂ  ತಿನ್ನಕ್ಕೊಡು ಹೇಳಿ ಅಮ್ಮಂಗೆ   ಗೋಳ್ಹೊಯ್ಯಡಿ. ಆ ಚಾಳಿ ಎಮ್ಮೆ ಕರಿಯಕ್ಕೆ ಹೊಯ್ದ.  ಆಗಿಂದ  ನಾಕ್ ಬಾರಿ ಆತು,  ಮೂರು ಸಲ ನಾ ನೋಡಿದ್ದಿ,  ಇನ್ನೆಷ್ಟು  ಬಾರೀ ನೋಡಕಾ ಏನ ? ಮತ್ತೆ  ದೋಸೆ ಅಕ್ಕಿ ಸೈತ ಬೀಸದಿದ್ದು,  ನಾ ಬರದು  ಒಂದೇ ಆಟಕ್ಕೆ  ಮತ್ತೆ ''

ಇಷ್ಟರ ಜೊತೆಗೆ ಮೊದಲೇ ಸುಟ್ಟು ಅಡಗಿಸಿಟ್ಟ  ಹಲಸಿನ ಬೇಳೆ, ಹಪ್ಪಳ  ಹಾಳೆ ತಟ್ಟೆಯಲ್ಲಿಟ್ಟುಕೊಂಡು ಬರುವ ಹೊತ್ತಿಗೆ ಅಕ್ಕ ತಮ್ಮನಲ್ಲಿ ಪಗಡೆ  ಕಾಯಿಯ ಬಣ್ಣಕ್ಕಾಗಿ ಜಗಳ.

'ನಂಗೆ ಕೆಂಪಿದು ಬೇಕು.' ತಮ್ಮನ ಹಕ್ಕು. 
'ಯಾವಾಗಲೂ ನಿಂಗೆ ಕೆಂಪಿ ಕಾಯಿ ಬೇಕಾ. ನಂಗೊತ್ತಿಲ್ಲೆ. ಇವತ್ತು ಕೆಂಪುಕಾಯಿ ನಾ ತಗತ್ತಿ.,  ಅತ್ತೆ ನೋಡೇ...'


ಜಗಳ ತಗಾದೆ ಮುಗಿದು ಅತ್ತೆಯ ಪ೦ಚಾಯ್ತಿಕೆ ನಡೆದು  ಅಂತೂ ಆಟ ಶುರು. ಅತ್ತೆಯ ಕೈಯ್ಯೋ ಕಯ್ಯಿ , ಅದು ಹೇಗೆ ಕವಡೆ ಪಳಗಿಸಿದ್ದಳೋ.    ಚಿತ್ತ, ನಾಕು , ಭಾರ ಬೇಕೆಂದಾಗಲೆಲ್ಲಾ ಒಚ್ಚಿ, ಮೂರು..  ಮೊದಲು ಕಾಯಿ ಇಳಿಸಿ  ಜುಗ ಕಟ್ಟುವುದು ಅವಳೇ. ಉಳಿದ  ಎಲ್ಲರ  ಕಾಯಿಯೂ ಆಗಾಗ ಮನೆಗೆ, 
ತಮ್ಮನದು ಬರೀ ಮೋಸ.  ಒಚ್ಚಿ ಬಿದ್ದರೆ ಮೆಲ್ಲ ಮಗಚಿಟ್ಟು 'ಭಾರ' ಮಾಡುವುದು,  ಹುಳ್ಳಗೆ ನಗುವುದು! ಚಿಮನೀ ಬುಡ್ಡಿಯ ದೀಪದ ಬೆಳಕಲ್ಲಿ ಹೌದೆಂದುಕೊಳ್ಳಬೇಕು!
ಅಂತೂ ಅತ್ತೆಯ ಕಾಯಿಯೇ ಮೊದಲು ತೆಗೆಯುವುದು.  ಅತ್ತೆಯೇ ಗೆಲ್ಲುವುದು.! ಜೀವನದ ಎಲ್ಲಾ ಪರೀಕ್ಷೆಗಳನ್ನೂ ಅನಿವಾರ್ಯವಾಗಿ ಎದುರಿಸಿದವಳು  ಅವಳು. ಗೆಲುವೋ, ಸೋಲೋ..? ಅರ್ಥವಾಗದ ವಯಸ್ಸುಅದು. ಅಪ್ಪ ಅಮ್ಮ ಆಗಾಗ ಹೇಳುತ್ತಿದ್ದುದು, ''ಪಾಪ ಇವಳ ಬಾಳು ಕಣ್ಣೀರಾದರೂ ಮೇಲೆ ಒಂಚೂರು ತೊಸ್ಕ್ಯತ್ಲಲ್ಲೇ, ಅವಳಿಗೆ ಹ್ಯಾಂಗೆ ಬೇಕಾ ಹಾಂಗೆ ಇರ್ಲಿ.''ಮಕ್ಕಳಿಗೆ  ಅದೆಲ್ಲಿ ಅರ್ಥವಾದೀತು?
’ಅತ್ತೇನೆ ಯಾವಾಗ್ಲೂ ಗೆಲ್ತಾ...’
'ಆಮೇಲೆ, ಒಂದ್ ಕೈ ಆಡಿಕೊಡೆ ಅತ್ತೆ ಒಚ್ಚಿ ಬೀಳ್ತೆ ಇಲ್ಲೇ..'
 'ಹುಗಿದ ಕಾಯಿ ತೆಗೆಯಲೇ ಆಗ್ತಿಲ್ಲೆ.. ಎರಡು ಬೀಳ್ಸಿಕೊಡು,' ಎನ್ನುತ್ತಾ ಅಕ್ಕ ತಮ್ಮನ ಗೋಳಾಟ..


''ಇನ್ ಸಾಕು. ಯಂಗೆ ಒಳಗೆ ಕೆಲಸ ಇದ್ದು. ನಿನ್ ಅಮ್ಮನೇ ದೋಸಿಗೆ ಬೀಸ್ತಾ ಇದ್ದ ಕಾಣ್ತು, ನಾ ಒಂಚೂರ್ ಕೈ ಹಾಕ್ತಿ. ನಿಂಗ ಇವತ್ತು ಶಾಲೆ ಬಿಟ್ ಬಂದವರು  ಮಗ್ಗಿ ಹೇಳಿದ್ರ. ?    ಬೇಗ ಬೇಗ ಬರ್ಕಂಡು ಓದ್ಕ್ಯ೦ಡು ಮಾಡ್ಕ್ಯಳಿ, ಅಪ್ಪ ಬಂದ್ರೆ ಬೈತ. ಸುಳ್ಳಲ್ಲ..ಮಾಚ್ ಭಟ್ರಿಗೆ  ಸಂಧ್ಯಾವನ್ನೇ  ಆತು ಕಾಣ್ತು. ಕಥೆ ಹೇಳ್ತ,  ಕೇಳ್ಳಕ್ಕು. ಬೇಗ್ ಬರ್ಕಂಡು ಮುಗ್ಸಿ.''
 ಆಯ್ತಪ್ಪಾ ...ಅದೂ ಮುಗಿಸಿಯಾಗುತ್ತಿತ್ತು.
ಈಗ ಮಾಚಭಟ್ಟರ ಸರದಿ.   ಅವರು ಸಹಾ ಜೀವನದಲ್ಲಿ ಸಾಕಷ್ಟು ಕಷ್ಟ ನುಂಗಿದವರೇ ಅಲ್ಲವೇ...? ಅವರ ಬಗ್ಗೆ ವಿವರ  ಯಾರಿಗ್ಗೊತ್ತು? ಮಗನೊಬ್ಬನಿದ್ದನಂತೆ, ಅವನ ಸಂಸಾರದೊಂದಿಗೆ  ಬೇರೆ ಮನೆ ಮಾಡಿಕೊಂಡು.

ಇವರಿಗೆ ಹೆಂಡತಿ ಸತ್ತು ಸುಮಾರು ವರ್ಷಗಳೇ ಆಗಿತ್ತೇನೋ.   ಅವರಿಗೂ ಎಪ್ಪತೈದರ ಮೇಲೆ ವಯಸ್ಸಾಗಿದ್ದಿರಬಹುದು.  ಮಳೆಗಾಲ ಶುರುವಿನಲ್ಲಿ  ಬಂದವರಿಗೆ ಮತ್ತೆ   ಚೌತಿಯ ಗಣಪತಿಯನ್ನು  ಮುಳುಗಿಸಿಯೇ ಹೋಗಬೇಕೆನ್ನುವುದು ಅಪ್ಪನ ಅಣತಿ.
ಅವರಿಗಾದರೂ ಮನೆಯಲ್ಲಿ ಕಾಯ್ದುಕೊಂಡಿರಲು ಯಾರಿದ್ದಾರೆ ? ಆದರೆ  ಆಗ ಅರ್ಥವಾಗದ ಅವರ ನಿಟ್ಟುಸಿರು ಈಗ ಅರಿವಿಗೆ ಬರುತ್ತದೆ.  ಅತ್ತೆಯ ಮದುವೆ ಮಾಡಿಸಿದ್ದು ಅವರೇ ಅಂತೆ.    'ಮಾಣಿ ಘನಾವ' ಎಂದು ಇಲ್ಲದ ತರಾತುರಿಯಲ್ಲಿ.   'ಯಾರ್ಯಾರ ಹಣೆ ಮೇಲೆ ಯಂತಾ ಬರದ್ದು  ಹೇಳದನ್ನ ಯಾರಿಗೆ ಓದಲಾಗ್ತು, ತಲೆ ಬಿಸಿ  ಮಾಡ್ಕ್ಯಳದು ಯಂತಕೆ ಭಟ್ರೇ,ನಮಗೆ ಶಿಕ್ಕಿದ್ದು ಇಷ್ಟೇಯ..' ಅಪ್ಪನ ಸಮಾಧಾನ.
 ಕಥೆ ಕೇಳುವವರಿಗೆ ಕಥೆಯಾದರೆ ಸಾಕು, ಊಟ ಮುಗಿಸಿ ಮಾಚಭಟ್ಟರ   ಒಂದು ಬದಿಗೆ ಅಕ್ಕ, ಇನ್ನೊಂದು ಬದಿಯಲ್ಲಿ ತಮ್ಮ ಆತು ಕುಳಿತರೆಂದರೆ ತಮ್ಮನಿಗೆ ಕಥೆ ಮುಗಿಯುವಷ್ಟರಲ್ಲಿಯೇ ತೊಡೆಮೇಲೆ ನಿದ್ದೆ.
ವೈವಿಧ್ಯಮಯ    ಕಥೆಗಳು ಅವು . ರಾಜಕುಮಾರಿಯನ್ನು  ಧುರುಳನೊಬ್ಬ  ಅಪಹರಿಸಿಕೊಂಡು ಹೋದದ್ದು..ಅವಳನ್ನು ಉಪಾಯವಾಗಿ ಶೂರನೊಬ್ಬ ಕರೆದುಕೊಂಡು ಬಂದಿದ್ದು, ಬರುವಾಗ  ಶತ್ರು ಬೆನ್ನಟ್ಟಿದ್ದು, ಪೊಟರೆಯೊಂದರಲ್ಲಿ ಇವರು  ಅಡಗಿಕೊಂಡಿದ್ದು. ಹೆಜ್ಜೆ ಗುರುತು, ವಾಸನೆ  ಕಂಡು ಹಿಡಿಯುವವರೊಂದಿಗೆ ಆತ ಇವರ ಪೊಟರೆಯನ್ನು ಗುರುತಿಸಿದ್ದು ಅಲ್ಲಿ ಈ ಮೊದಲು ವಾಸವಾಗಿದ್ದ ಭೂತವೊಂದು ಇವರಿಗೆ ಸಹಾಯಮಾಡಿದ್ದು.,  ಮಾಯದ ಕತ್ತಿಯಿಂದ ಹೋರಾಡಿದ್ದು.,

ಕಥೆ ತು೦ಬಾ ಉದ್ದ .ಉದ್ದ ... ಆಮೇಲೆ ಏನಾಯ್ತು..? ಕೇಳಿದಂತೆಲ್ಲಾ  ಒಂದಕ್ಕೆ ಇನ್ನೊಂದು ಕಥೆ  ಸೇರುವುದು, ಸರಕ್ಕೆ   ಮಣಿ ಸುರುಗಿದಂತೆ.  ಏಡಿ ಮನುಷ್ಯನ ಕಥೆ, ಕಪ್ಪೆ ರಾಣಿಯ ಕಥೆ, ಹುಲಿ ಬೆಟ್ಟದ ಕಥೆ,  ಮಂತ್ರವಾದಿಯ ಕಥೆ, ಭೂತದ ಕಥೆ  ಒಂದೇ ಎರಡೇ.. ಕಥೆಗಳ ಖಜಾನೆ.   ಕಥೆಯ ಪಾತ್ರಗಳಲ್ಲೆಲ್ಲಲ್ಲ ತೇಲಿ ಹೋಗುವ ಸುಖ ಮರೆಯುವುದಾದರೂ ಹೇಗೆ..?

 ಕಥೆ ಮುಗಿದ ಮೇಲೆ ಅತ್ತೆ ಮೆಲ್ಲನೆಬ್ಬಿಸಿ ಕರೆದುಕೊಂಡು ಹೋಗಿ ತನ್ನ  ಆ ಪಕ್ಕ ಈ ಪಕ್ಕ ಇಬ್ಬರನ್ನೂ ಮಲಗಿಸಿಕೊಂಡು ಕಥೆಯ ಭೂತ ಕನಸಿನಲ್ಲಿ ಬ೦ದರೆ ಹೆದರಬಾರದೆಂದು ಇಬ್ಬರ ಮೈ ಮೇಲೂ ಕೈ ಇಟ್ಟು ಕೊಂಡು ಮಲಗಿಸಿಕೊಳ್ಳುತ್ತಿರಲಿಲ್ಲವೇ?
ಅತ್ತೆ ಅಂದರೆ ಹಾಗೆ ಇರೋದು!

 ಮೋಡ ಕವಿದು ಕತ್ತಲೆ ಕವಿದಂತೆಲ್ಲ ನೆನಪುಗಳೆಲ್ಲ ಮಿಂಚು ಮಿಂಚು.. 
 ಹನಿದು ಕಣ್ಣೆಲ್ಲ ನೀರ್ಕಾಲುವೆ..! 

ಪಗಡೆಯ ಕಾಯಿಗಳನ್ನೆಲ್ಲ ಎತ್ತಿಡಲು ಹೋದರೆ ಕಾಯಿಗಳೆಲ್ಲಾ  ಅತ್ತೆಯ ಮುಖಗಳೇ ಆದವಲ್ಲ..! ಕುಣಿಯುತ್ತಾ ಕರೆಯುತ್ತಿರುವಳೇ ? ಪಗಡೆ ಆಡೋಣವೆಂದು....    ಪಟದ ಚೌಕಗಳೆಲ್ಲಾ ಮಾಚಭಟ್ಟರ ಕತೆಯ ಪಾತ್ರಗಳಾಗಿ ಹೊರಳಿ ಹೊರಳಿ ನೋಡುತ್ತಿವೆಯೇಕೆ..?

ಕಿರ್ರೋ .... ಕೀಕ್..ಕೀಕ್... ಕಿರ್ರೋ... ಕೀಕ್ ಕೀಕ್..

ಮಕ್ಕಳು ಬಂದರೇ? ಇಷ್ಟು ಬೇಗ ಸಮಯ ಕಳೆದು ಹೋಯಿತೇ...?

ಮತ್ತೆ ಯಾಕೋ ಕಳೆದುಹೊಗಬೇಕೆನಿಸುತ್ತಿದೆ.....!

Thursday, August 5, 2010

ಹೀಗೊ೦ದು ಆಕ್ಸಿಡೆ೦ಟ್ ......

ಗೆಳತಿ ತುಂಬಾ ಒತ್ತಾಯ ಮಾಡಿ ಕರೆದಿದ್ದಕ್ಕೆ ಹೊರಟಿದ್ದು...ಯಜಮಾನ್ರು , ಮಕ್ಕಳನ್ನ ಆಫೀಸಿಗೆ , ಶಾಲೆಗೇ ಅಂತ ಕಳಿಸಿ ಗಡಿಬಿಡಿಯಲ್ಲೇ ತಯಾರಾಗಿ ಹೊರಡುವ ಹೊತ್ತಿಗೆ ಘಂಟೆ ೯. ೩೦ ಆಗಿತ್ತು.. ಹತ್ತು ಘಂಟೆಗೆಲ್ಲಾ ಗೆಳತಿಯ ಮನೆಗೆ 
   ಬರುತ್ತೇನೆಂದು ಹೇಳಿದ್ದೆ..ಅಲ್ಲಿಂದ ಇಬ್ಬರೂ  ಸಿಟಿಗೆ  ಹೋಗುವ ಪ್ಲಾನ್...


'' ಆಟೋ .... ಆಟೋ....'' ಯಾರೂ ನಿಲ್ಲಿಸುತ್ತಲೇ ಇಲ್ಲ..
ಒಬ್ಬ ನಿಲ್ಲಿಸಿದ..'' ಫಸ್ಟ್ ಬ್ಲಾಕ್ ಬರ್ತೀರಾ.... ?''
''ವಿಜಯನಗರ ಬೇಕಾದ್ರೆ ಬರ್ತೀನಿ ''

ಇವನ ತಲೆ ! ವಿಜಯನಗರಕ್ಕೆ ಹೋಗಿ ನಾನೇನು ಮಾಡ್ಲಿ....?ಏನ್ ಆಟೋದವರಪ್ಪಾ.. ಕರೆದಲ್ಲಿಗೆ ಬರುವುದಿಲ್ಲ.  ಆಟೋ ಇಟ್ಟಿದ್ದಾದರೂ ಯಾಕೆ ಅಂತಾ.  ಸಾಲಾಗಿ ಆಟೋ ನಿಲ್ಲಿಸಿಕೊಂಡು ಆಟೋ ಸ್ಟಾಂಡ್ ನಲ್ಲೆ ಬೇಕಾದರೆ ಬೆಳಗಿನಿಂದ ಸಂಜೆ ತನಕ ನಿಂತ್ಕೊಂಡು ಏನ್ ಮಾಡ್ತಾರೋ ?  ಏನೋ ಸ್ವಲ್ಪ ಬಂನೀಪ್ಪಾ ಅಂತ ಕರೆದರೆ ಸೊಕ್ಕು ಮಾಡುತ್ತಾರೆ.  ಹಾಳಾಗ್ ಹೋಗ್ಲಿ.  ನಿಂಗೆ ಇಲ್ಲ ದುಡಿಮೆ. ಮನದಲ್ಲೇ ಬೈದು ಕೊಂಡೆ.  ರೋಡಿನ ಆ ಪಕ್ಕಕ್ಕಾದರೂ ಹೋದ್ರೆ ಆಟೋ ಸಿಗಬಹುದು.  ಅಂದುಕೊಂಡೆ ರಸ್ತೆ ದಾಟಲು ಅಣಿಯಾದೆ.

ಒಹ್ ! ಏನು ಟ್ರಾಫಿಕ್ಕು ? ಹೌದು ಪೀಕ್ ಅವರ್ ಆಲ್ವಾ.  ಒಂದರ ಹಿಂದೆ ಒಂದು ಬರುತ್ತಲೇ ಇರುತ್ತವೆ.  ಈ ಬದಿಯಿಂದ ಆಬದಿಗೆ ಹೋಗಲು ಐದು ನಿಮಿಷಾನೆ ಬೇಕು.


ರ್ರ್ರೂಯ್ ..ರ್ರೂಯ್.... ರ್ರೋಯ್ .. ಇಂತಾ  ಟ್ರಾಫಿಕ್ ನಲ್ಲೂ ಈಪಡ್ಡೆ  ಹುಡುಗರ ಬೈಕ್ ಬಿಡುವ  ಉತ್ಸಾಹ ಮಾತ್ರಾ...   ಸಾಕಪ್ಪಾ ಸಾಕು.  ಮೈ ಮೇಲೆ ಹತ್ತಿಸಿಕೊಂಡು ಹೋಗ್ತಾರೇನೋ ಅನ್ನುವ ಭಯ   ನನಗೆ ಯಾವಾಗಲೂ.


ಸುಮ್ಮನೆ ನಿಂತೆ. ಎದುರಿಗೆ'' ಶಾಂತಿ ನಿವಾಸ '' ಎನ್ನುವ ಹೋಟೆಲ್ ಬೋರ್ಡ್ ಕಾಣಿಸಿತು.  ಪಕ್ಕನೆ ನಗು ಬಂತು...!   ಮಗ, ಮಗಳು ಬೆಳಿಗ್ಗೆ ಜಗಳ ಆಡುತ್ತಿದ್ದುದು ನೆನಪಾಗಿ. ವ್ಯಾಜ್ಯ ನನ್ನವರೆಗೂ ಬಂದಿದ್ದರಿಂದಲೇ  ನಗು ಬಂದಿದ್ದು.
''ಅಮ್ಮಾ,   ಶಾಂತಿ ಎಂದರೆ ಹಿ....[he] ನಾ...? ಶಿ....[she] ನಾ....? ಮಗ ಸಮಸ್ಯೆ ಹೊತ್ತು ತಂದಿದ್ದ..
'' ಪುಟ್ಟಾ ಶಾಂತಿ ಎಂದರೆ she ಕಣೋ .  ಶಾಂತಿ ಅನ್ನುವುದು ಹುಡುಗಿಯರ ಹೆಸರು''
''ನೋಡು ಅಮ್ಮಾ...   ಅಕ್ಕ ಓಂ ಶಾಂತಿ , ಶಾಂತಿ , ಶಾಂತಿ ಹಿ ಅಂತ ಹೇಳ್ತಾ ಇದ್ದಾಳೆ.  ನಾನೆಷ್ಟು ಹೇಳಿದ್ರೂ ಶಿ ಅಂತ ಹೇಳ್ತಿಲ್ಲಮ್ಮಾ.....?''
 ಎಲ್ಲರೂ ಜೋರಾಗಿ ನಕ್ಕಿದ್ದೆವು.
ಮತ್ತೆ ಸುತ್ತ ಮುತ್ತ ನೋಡಿಕೊಂಡೆ ನಕ್ಕಿದ್ದು ಯಾರಾದ್ರೂ ನೋಡಿದ್ರಾ ಅಂತ.

ಟ್ರಾಫಿಕ್ ಸ್ವಲ್ಪ ಕಡಿಮೆಯಾಗತೊಡಗಿತು.  ಸ್ವಲ್ಪ ದೂರದಲ್ಲಿ ಟ್ರಕ್ ಒಂದು ಬರುತ್ತಿತ್ತು  ಅಷ್ಟೇ.
ಈಗಲೇ  ರಸ್ತೆ ದಾಟಿದರೆ ದಾಟಬೇಕು. ಇಲ್ಲಾಂದ್ರೆ ಮತ್ತೆ ಸಿಗ್ನಲ್ ಬಿಟ್ಟು ವಾಹನಗಳ ಪ್ರವಾಹವೇ ಹರಿಯ ತೊಡಗುತ್ತೆ.
ಲಗುಬಗೆಯಿಂದ ದಾಟತೊಡಗಿದೆ.
'ಶ್ಯೇ .....ಆ ಟ್ರಕ್ ನವನು ಏಕ್ದಂ ಸ್ಪೀಡ್ ತಗೊಳ್ಳೋದೇ...?   ಮೈ ಮೇಲೆ ಬಂದಹಾಗೆ ಬಂದ ನೋಡಿ. ಚಂಗನೆ ಪಕ್ಕಕ್ಕೆ ಹಾರಿಕೊಂಡೆ. ಸವರಿಕೊಂಡೇ ಹೋದಂತೆನಿಸಿತು ಒಮ್ಮೆ. ಅಲ್ಲೇ ಬದಿಯಲ್ಲಿ ಕುಕ್ಕರಿಸಿದೆ..!   ಕಿರ್ರೋಓಒ ಅಂತ ಬ್ರೇಕ್ ಶಬ್ದ.

ಸ್ವಲ್ಪ ಸುಧಾರಿಸಿಕೊಂಡು ನೋಡ್ತೇನೆ. ಜನ ಎಲ್ಲಾ ಬರ್ತಾ ಇದ್ದಾರೆ. ನನಗೇನೂ ಆಗಿಲ್ಲ ಸಧ್ಯ...!! ಮತ್ಯಾರದ್ದೋ ಮೈ ಮೇಲೆ ಟ್ರಕ್ ಹತ್ತಿಸಿದ್ದಾನೆ.  ಈ ಟ್ರಕ್ ಡ್ರೈವರ್ ಗಳಿಗಂತೂ ಪ್ರಜ್ಞೆಯೇ ಇರುವುದಿಲ್ಲ. ಕುಡಿದಿದ್ದನಿರಬೇಕು.
ಎಲ್ಲಾ ಜನ ಸೇರತೊಡಗಿದರು.

ನಾನು ನೋಡ್ತಲೇ ಇದ್ದೇ. ಅದ್ಯಾರೋ ಬ್ಯಾಗ್ ನಿಂದ   'ಮೊಬೈಲ್ ' ತೆಗೆದು  ಕಾಲ್ ಮಾಡತೊಡಗಿದ....!!! ಅರೆ, ನನ್ನ ಬ್ಯಾಗು...! ಓಹ್ ,  ಹಾರಿಕೊಳ್ಳುವ ರಭಸದಲ್ಲಿ ಕೈ ತಪ್ಪಿಬಿದ್ದು  ಹೋಗಿತ್ತಾ ?  ಛೇ,  ಎಂತಾ ಜನ ಇರುತ್ತಾರೆ ನೋಡಿ.  ಏನೋ ಅಯ್ಯೋ ಪಾಪ ಅಂತ ಬ್ಯಾಗ್ ಹೆಕ್ಕಿ ಕೊಡುವುದು ಬಿಟ್ಟು ಮೊಬೈಲ್ ತೆಗೆದು ಕಾಲ್ ಬೇರೆ ಮಾಡ್ತಿದ್ದಾನಲ್ರೀ....?


''ಓಯ್ .... ಸ್ವಾಮಿ .. ಕೊಡ್ರೀ ಇಲ್ಲಿ.. ನಂ ಬ್ಯಾಗನ ಮೊಬೈಲ್ನ... ಕೊಡ್ರೀ ಇಲ್ಲಿ.. ''

ಅಯ್ಯೋ.  ಪುಣ್ಯಾತ್ಮ ತಿರುಗಿಯೂ ನೋಡಲಿಲ್ಲ. ಅಥವಾ ಭಯದಲ್ಲಿ ನನಗೆ ಧ್ವನಿಯೇ ಹೊರಡುತ್ತಿಲ್ಲವೋ !  ಅರ್ಥವಾಗುತ್ತಿಲ್ಲ..ಶಾಕ್ ಆಗುವುದೆಂದರೆ ಇದೆ ತರಾ ಇರಬೇಕು....!!  ಮು೦ದೆ ಹೆಜ್ಜೆ ಕಿತ್ತಿಡಲೂ ಸಾಧ್ಯ ಆಗ್ತಾ ಇಲ್ಲ  ನನಗೆ.


ನಾನೂ ಈಗ ಆಕ್ಸಿಡೆಂಟ್ ಆದ ವ್ಯಕ್ತಿಯತ್ತ ನೋಡತೊಡಗಿದೆ. ಅದು ಹೆಂಗಸು, ಸುತ್ತ ಮುತ್ತಿಕೊಂಡ ಜನರ ನಡುವೆಯೇ ನನಗೆ ಕಾಣಿಸುತ್ತಿತ್ತು. ನನಗೊಂದು ತರಾ ಸಿಟ್ಟು ಬಂತು. ಎಲ್ಲಾ ಆ ಹೆಂಗಸಿನ ಸುತ್ತಲೇ ಇದ್ದಾರೆ ಹೊರತೂ ಆಘಾತಕ್ಕೊಳಗಾದ ನನ್ನನ್ನು ಯಾರೂ ಗಮನಿಸುತ್ತಲೇ ಇಲ್ಲ.   ಛೇ..
ಅಷ್ಟರಲ್ಲಿ ನಮ್ಮವರ ಕಾರ್ ಬರುತ್ತಿದ್ದುದು ಕಾಣಿಸಿತು..      


ಓಹ್ ... ಸಧ್ಯ  ಇಲ್ಲೆಲ್ಲೊ ಕೆಲಸದ ಪ್ರಯುಕ್ತ  ಬ೦ದಿರಬೇಕು. ಕೈ ಮಾಡಿದೆ. ..... ರೀ.... ರೀ.....
ಹ್ನಾ.. ನನ್ನನ್ನ ನೋಡುತ್ತಲೇ ಇಲ್ಲ......!!!!  ಸೀದಾ ಗು೦ಪಿನತ್ತಲೇ ನಡೆದರು..ಏನ್ ಇವ್ರು.  ಇಷ್ಟು ಎದುರಲ್ಲಿ ನಿ೦ತಿದ್ದರೂ ನೋಡದೇ ಅಲ್ಯಾಕೆ ಹೋದರು..?




 ನನಗೆ ಎಲ್ಲವೂ ನಿಚ್ಚಳವಾಗತೊಡಗಿತ್ತು. ನನ್ನವರು   ತಲೆ ಮೇಲೆ ಕೈ ಹೊತ್ತು ಕೊ೦ಡು  ಹೆ೦ಗಸಿನ ಬದಿಯಲ್ಲಿ  ಕೂತುಕೊ೦ಡಿದ್ದು ಕಾಣಿಸುತ್ತಿತ್ತು.  ಅರೆ... ಇವರ ಆಫೀಸಿನಲ್ಲಿ ಕೆಲಸ ಮಾಡುವವರಾರಾದರೂ ಇರಬಹುದಾ...?  ಇದ್ದರೂ ಇರಬಹುದು..
ಆದರೆ ಇವರ ಕಣ್ಣಲ್ಲಿ ನೀರೇಕೆ....? ಉಳಿದ ಜೊತೆಯವರು ಇವರನ್ನು ಸಮಾಧಾನಿಸುವುದ್ಯಾಕೆ....?  ಯಾವುದೋ ಸ೦ಬ೦ಧದ  ಎಳೆ ಬಿಗಿಯತೊಡಗಿತು..


ಅಷ್ಟೋತ್ತಿಗೆ ಅ೦ಬ್ಯುಲೆನ್ಸ್  ಬ೦ತು.. ಆ ಹೆ೦ಗಸಿನ ದೇಹವನ್ನು ಎತ್ತಿ ವಾಹನದಲ್ಲಿಡತೊಡಗಿದರು.. ಸುಮಾರು ನನ್ನದೇ  ವಯಸ್ಸಿನಾಕೆ. ನಾನು ಧರಿಸಿದ೦ತೆಯೇ  ಆಕೆಯೂ ಬಿಳೀ ಬಣ್ಣದ ಚೂಡೀದಾರ್  ಧರಿಸಿದ್ದಳು..ರಕ್ತ ಚೆಲ್ಲಾಡಿತ್ತು.
  ನನ್ನವರೇನಾದರೂ ನಾನು ಅ೦ತ ತಪ್ಪು ತಿಳಿದಿರಬಹುದೇ...?
ಅಥವಾ  ರವಿಚ೦ದ್ರನ್ ಸಿನಿಮಾಗಳಲ್ಲಿ ಇರುವ೦ತೆ ಇಬ್ಬಿಬ್ಬರು  ಹೆಂಡತಿಯರು ............!!!!! ಇಬ್ಬರಿಗೂ ಒ೦ದೆ ತರಾ ಡ್ರೆಸ್ಸು ಗಿಫ್ಟ್ ಕೊಡುವುದು..!!!  ಒಂದೇ ತರದ ವಸ್ತುಗಳನ್ನು ಕೊಡುವುದು.....!!!  ದೇವ್ರೆ.....  ಹಾಗೊ೦ದು ಆಗದಿರಲಿ. ಕಣ್ಕತ್ತಲೆ ಬ೦ದ೦ತಾಯ್ತು.


                                                                           




ವಾಹನವೊಂದರಲ್ಲಿದ್ದೆ.. ನನಗೆ ಅರಿವು ಮೂಡಿದಾಗ .
.ಅದೊಂದು ಅಂಬುಲೆನ್ಸ್ ತರಾನೆ ಇತ್ತು.  ಈ ಮೊದಲು ಆ ತರದ ಗಾಡಿಯಲ್ಲಿ ಹೋದ ಅನುಭವವಿಲ್ಲ.
ಅರೆ ನಾನ್ಯಾವಾಗ ಹತ್ತಿಕೊಂಡೆ  ಈ ವೆಹಿಕಲ್ಲನ್ನ.  ನೆನಪಿಗೆ ಬರ್ತಾ ಇಲ್ಲ.  ಓಹೋ ಬಹುಷಃ ಎಚ್ಚರ ತಪ್ಪಿತ್ತು ಅಂತ ಕಾಣುತ್ತೆ  ನನಗೆ.   ಯಾರೋ ಎತ್ತಿ ಮಲಗಿಸಿದ್ದಾರೆ..ಪಾಪ ಪುಣ್ಯ ಇದೆ  ಜನಕ್ಕೆ.


ಅದೇನದು..? ಒಹ್,  ಆಕ್ಸಿಡೆಂಟ್ ಆದ ಹೆಂಗಸಿನ ಬಾಡಿ ಅನ್ನಿಸುತ್ತೆ. ಸತ್ತ ದೇಹದ ಜೊತೆ ನನ್ನನ್ನೂ ಕರೆದೊಯ್ಯುತ್ತಿದ್ದಾರೆ.   ಮನುಷ್ಯತ್ವವಿಲ್ಲದ ಜನರು.  ಭಾವನೆಗಳಿಗೆ ಬೆಲೆಯಿಲ್ಲ  ಇಲ್ಲಿ. ಅಥವಾ ಬೇರೆ ವೆಹಿಕಲ್ ಯಾಕೆ  ಹೆಣಕ್ಕೆ ಅಂತ ಅಂಬುಲೆನ್ಸ್ ನಲ್ಲಿಯೇ ಕರೆದೊಯ್ಯುತ್ತಿದ್ದಾರ... ?
ನನಗೇನಾಗಿದೆ ಮಹಾ  ಅಂತ ಅಂಬುಲೆನ್ಸ್ ನಲ್ಲಿ ಕರೆದೊಯ್ಯುತ್ತಿದ್ದಾರೆ.. ? ಯಾವ ನೋವು, ಉರಿ ಏನೂ ಇಲ್ಲ.   ಮುಖಕ್ಕಷ್ಟು ನೀರು ಚುಮುಕಿಸಿದ್ದಿದ್ದರೆ ಎಚ್ಚರವಾಗುತ್ತಿತ್ತು.   ಅದನ್ನು ಬಿಟ್ಟು ಈ ಹೆಣದ ಜೊತೆ ನನ್ನನ್ನು ...... ಛೆ.


ಯೋಚನೆಗಳ ಮಹಾಪೂರ ಮನದೊಳಗೆ ಪ್ರವಹಿಸುತ್ತಿತ್ತು.  ಗಾಡಿಯ ಅಲುಗಾಟದಿಂದ ಹೆಣದ ಮೇಲೆ ಮುಚ್ಚಿದ್ದ  ವಸ್ತ್ರ ಸರಿಯಲು ತೊಡಗಿತ್ತು.  ಕೈ ಮೇಲಿನ ಬಟ್ಟೆ ತುಸು ಸರಿಯಿತು.  ವಾಚು ಕಾಣಿಸಿತು.
ಹ್ಞಾ ... ಇದು ನನ್ನ ವಾಚಿನಂತದ್ದೆ.
 ಬೆರಳಿನಲ್ಲಿದ್ದ ಉಂಗುರ ಪರೀಕ್ಷಿಸಿದೆ. ಹೌದು.  ಹೋದ ವರ್ಷ ಹುಟ್ಟುಹಬ್ಬಕ್ಕೆ ಕೊಟ್ಟ ಉಡುಗೊರೆ  ಇದೆ ತರದ ಉಂಗುರವಲ್ಲವೇ...?
ಹ್ಹಾ ..ವಿಧಿಯೇ..! ಅನಿಲ್ ಕಪೂರ್ ಸಿನಿಮಾ ನೆನಪಾಯ್ತು.   ಘರವಾಲೀ ಬಾಹರ್ವಾಲೀ .....
ಮನೆಯಲ್ಲೊಬ್ಬಳು.   ಹೊರಗಡೆ ಇನ್ನೊಬ್ಬಳು. ಇಷ್ಟು ದಿನವಾದರೂ ಒಂಚೂರೂ ಗೊತ್ತಾಗದೆ ಹೋಯ್ತೆ.
ಹೇ  ದೇವ್ರೇ...!  ಸತ್ತವಳು ಸತ್ತಳು ನನಗೆ ಗೊತ್ತು ಮಾಡಿಯೇ ಸಾಯಬೇಕೆ....?
ಮನೆಗೆ ಹೋದಮೇಲೆ ವಿಚಾರಿಸಿಕೊಳ್ಳುತ್ತೇನೆ ಯಾವುದಕ್ಕೂ.


ಅಯ್ಯೋ ಎಷ್ಟೊತ್ತು ಆಗೋಯ್ತು. ಮಕ್ಕಳು ಬೇರೆ ಮನೆಗೆ ಬಂದು ಕಾದಿರುತ್ತಾರೆ .. ಅಮ್ಮಾ ಎಲ್ಲಿ ಅಂತ ಗಾಬರಿಯಾಗುತ್ತಾರೆ.
ಅಂತ ಟೈಮ್ ನೋಡಿದೆ ಕೈಲಿದ್ದ ವಾಚನ್ನು.
ಹ್ಞಾ ...ವಾಚೆಲ್ಲಿ...?...?    ಕೈ ತಿರುಗಿಸಿ ನೋಡಿದೆ..
ಉಸಿರು ನಿಂತಂತಾಯ್ತು.. ಕೈಯೇ ಕಾಣುತ್ತಿಲ್ಲ...!!
 ಯಾಕೋ ಅನುಮಾನ ......  ದೆವ್ವ ಮೆಟ್ಟಿಕೊಂಡಿತೆ ..? ....ಪುಣ್ಯಾತ್ಗಿತ್ತಿ ಯಾರಿವಳು  ನೋಡೋಣ ಅಂತ ಮುಖದ ಮೇಲಿನ ವಸ್ತ್ರವನ್ನು ನಿಧಾನವಾಗಿ ಸರಿಸುತ್ತಿದ್ದಂತೆ.......
..........................................
.........ಮುಖ
ನೋಡಿದರೆ....
ನೋಡಿದರೆ  ...  ....................
ಅದು ನನ್ನ ಮುಖ.......!!!!!!
...........................
ಹ್ಹಾ...ಹ್ಹಾ...ಹ್ಹ..
ನನಗೆ ತೆಲುಗು ಲೇಖಕರೆಲ್ಲ ಒಮ್ಮೆಲೇ ನೆನಪಾದರು... ಯಂಡಮೂರಿ..ವಂಶಿ... ..... ....ಇತ್ಯಾದಿ..
ಇದು ನನ್ನ ಮೂರನೇದೋ  ನಾಲ್ಕನೇದೋ   ಆಯಾಮಾ......!!!
ಹ್ಹಾ....ಹ್ಹಾ....ಹ್ಹಾ...






''ಏ... ಏಳೇ... ಏಳು ಘಂಟೆಯಾಯ್ತು. ಅನ್ನಪೂರ್ಣೆಶ್ವರಿ  ತಾಯೀ... ಏಳು ಟೀ ಮಾಡೇ .....''

 ಸದಾಶಿವ ಮೈ ಅಲುಗಾಡಿಸಿ ಎಚ್ಚರಿಸುತ್ತಿದ್ದ...
ದಿಗ್ಗನೆದ್ದಳು   ಸುಧಾ..  ಏನೂ ಅರ್ಥವಾಗದೆ ತನ್ನ ಮೈಯನ್ನೆಲ್ಲಾ ನೋಡಿಕೊಂಡಳು... ಪಕ್ಕದಲ್ಲಿ ನೋಡಿದಳು. ಮಗ ತಲೆಕೆಳಗಾಗಿ  ಮಲಗಿದ್ದ..ಮಗಳು ಮಲಗಿದಲ್ಲೆ ಕಣ್ಣು ಬಿಟ್ಟು ನೋಡುತ್ತಿದ್ದಳು.

ಅರೆ   ಇಷ್ಟೊತ್ತೂ ಕನಸಿನಲ್ಲಿದ್ದೆನಾ...?
ಮುಖದಲ್ಲಿ ನಗು ಹೊಮ್ಮಿತು..
  .[ ಕಥೆ]                                                  

Monday, June 7, 2010

ಅಧುನಿಕ ಭಸ್ಮಾಸುರ ವಧೆ...

ಅರ್ಜಂಟಿನಲ್ಲಿ ನಿಮಗೊಂದು ಆಧುನಿಕ [ಅತ್ಯಾಧುನಿಕ...?] ಕಥೆಯೊಂದನ್ನು ಹೇಳಲು ಬಂದೆ.

ನಿಜ ಅಂದರೆ ಇದು ನನ್ನವರು ಮಕ್ಕಳಿಗೆ ಹೇಳಲು ಹೊರಟ ಕಥೆ....!ನನ್ನವರ ಕಥಾ ಶೈಲಿಯ ಬಗ್ಗೆ ಆಸಕ್ತರು ಇಲ್ಲಿ
ನೋಡಿ ತಿಳಿಯಬಹುದು.ನನ್ನವರ ಕಾನ್ಸೆಪ್ಟ್ ಗೆ ನನ್ನ ಸ್ಕ್ರಿಪ್ಟ್....!!



ಈಶ, ನಾಣಿ ಮತ್ತು ಬರಮು ಪರಮ ಮಿತ್ರರು. ಅವರಲ್ಲಿ ಈಶ ಮತ್ತು ನಾಣಿ ಸ್ವಲ್ಪ ಜಾಸ್ತಿಯೇ ಫ್ರೆಂಡ್ಸು.

ಈಶ ಸ್ವಲ್ಪ ಕೊಳಕ, ಅಲ್ಲದೆ ಅಧ್ಯಾತ್ಮ ಜೀವಿ. ಸನ್ ರೇಸ್ ನಿಂದ ಮೈಗೆ ಅಲರ್ಜಿಯಾಗುವುದೆಂದು ಅವನು ಯಾವಾಗಲೂ ಪರಿಹಾರಾರ್ಥವಾಗಿ ಮೈ ತುಂಬಾ ಬೂದಿಯನ್ನು ಬಳಿದು ಕೊಳ್ಳುತ್ತಾನೆ. ಪಾರ್ವತಿ, ಅವನ ವೈಫು ಯಾವಾಗಲೂ ಈ ವಿಚಾರದ [ವಿಕಾರದ] ಬಗ್ಗೆ ಅಬ್ಜೆಕ್ಟ್ ಮಾಡುತ್ತಲೇ ಇರುತ್ತಾಳೆ. ಆದರೆ ಪಾರ್ವತಿ ಅದರಲ್ಲೆಲ್ಲಾ ಭಾರೀ ನಾಜೂಕು.ಮೈತಾಲೀ ಮಿಟ್ಟಿ , ಕ್ರೀಮು, ಪೌಡರುಗಳನ್ನೇ ಬಳಸುತ್ತಾಳೆ.
''ಯಾವಾಗಲೂ ನ್ಯಾಚುರಲ್ ಆಗಿರವು ...ತೆಳತ್ತನೇ, '' ಎನ್ನುವುದು ಈಶನ ಸಮರ್ಥನೆ.

ಇಷ್ಟಾಯ್ತಾ.... ಈಶನಿಗೆ ದಿನಾಲೂ ಬೂದಿ ಒದಗಿಸಲು ಪಾರ್ವತಿಯೇ ಬೇಕು. ದಿನಾಲೂ ಸ್ಮಶಾನಕ್ಕೆ ಹೋಗಿ... ಐ ಮೀನ್ ಹರಿಶ್ಚಂದ್ರ ಘಾಟ್ ಗೆ ಹೋಗಿ ಹೆಣ ಸುಟ್ಟ ಬೂದಿಯನ್ನ ತಂದು ಘನವಸ್ತುಗಳಾವುವೂ ಇಲ್ಲದಂತೆ ಜರಡಿಯಾಡಿ ಹಚ್ಚಿಕೊಳ್ಳಲು ಯೋಗ್ಯವಾದ ಪೌಡರ್ ಮಾಡಿಕೊಡಬೇಕು.[ಎಲ್ಲಾ ಕಡೆ ಒಲೆ ಉರಿಸಲು ಗ್ಯಾಸ್ ಇರುವುದರಿಂದ ಒಲೆ ಬೂದಿ ಸಿಗದ ಕಾರಣ ಈ ಆಲ್ಟರ್ನೆಟ್ ಅಡ್ಜಸ್ಟ್ಮೆಂಟು ]

ಒಮ್ಮೆ ಏನಾಯ್ತೆಂದರೆ, ಪಾರ್ವತೀ ಈಶನಿಗೆ ಕೊಟ್ಟ ಬೂದಿಯಲ್ಲಿ ಅದ್ಯಾವುದೋ ಎಲುಬೋ ... ಎಂತದೋ ಇತ್ತಂತೆ.
ಸಾಣಿಗೆ ಎಲ್ಲಾದ್ರೂ ತೂತು ಬಿದ್ದಿತ್ತೋ ಏನೋ ಪಾಪ.... ಪಾರ್ವತಿಯ ಮೇಲೆ ಈಶ ಭಯಂಕರ ಸಿಟ್ಟು ಮಾಡಿದ.......!!!!!
ಪಾರ್ವತಿ ಕಾರಣ ಕೊಟ್ಟರೂ ಕೇಳದೆ ಪೌಡರ್ ಡಬ್ಬಿಯನ್ನ
ಎತ್ತಿ ರಪ್ಪೆಂದು..ನೆಲದ ಮೇಲೆ ಬೀಸಾಡಿದ....
ಆ ರಭಸಕ್ಕೆ ಅಲ್ಲೊಬ್ಬ ''ಮಗ'' ಹುಟ್ಟಿದ.....!!!!!!![ ಅತ್ಯಾದುನಿಕ ಕಾಲ ] ಅಯ್ಯಬ್ಬಾ......ಅವನ ರೂಪವೋ.....ಥೇಟ್ ರಾಕ್ಷಸಾಕಾರ...!!! ಕೂಗಿದ ಅಂದ್ರೆ ಬ್ರಹ್ಮಾಂಡ ನಡುಗಬೇಕು...[ಬೂದಿಯಿಂದಲೂ ಮಕ್ಕಳು ಹುಟ್ಟುವ, ಮೈ ಬೆವರ ಮಣ್ಣಿನಿಂದಲೂ ಮಕ್ಕಳು ಹುಟ್ಟುವ ತಲೆ ಕೂದಲಿ೦ದಲೂ ಹುಟ್ಟುವ ಅತ್ಯಾಧುನಿಕ ಟೆಕ್ನಾಲಜಿ......!!!!!!]

ಅಷ್ಟೊತ್ತಿಗೆ ಈಶನ ಸಿಟ್ಟು ಕಮ್ಮಿಯಾಗತೊಡಗಿತು. ಪರಿಸ್ಥಿತಿ ಅರ್ಥ ಆಯ್ತು.
ಆದರೂ ಹುಟ್ಟಿದ ಮಗನಿಗೆ ಸಂಸ್ಕಾರ ಕೊಡಬೇಕಲ್ಲ.. ಹೆಸರಿಟ್ಟ. ''ಭಸ್ಮಾಸುರ '' ಭಸ್ಮದಿಂದ ಹುಟ್ಟಿದವ ಎಂದು. ಮಾತು ಕಲಿಸಿದ. ಸಂಬಂಧ ತಿಳಿಸಿಕೊಟ್ಟ. ಮಾಡಲೊಂದು ಕೆಲಸ ಬೇರೆ ಕೊಟ್ಟ...
'' ಮಗನೆ.... ಇನ್ನು ಮೇಲಿಂದ ನನಗೆ ಮೈಗೆ ಹಚ್ಚಿಕೊಳ್ಳಲು ನೀನೆ ಬೂದಿ ವ್ಯವಸ್ಥೆ ಮಾಡು....''

ಸರಿ.. ಅಂತೆಯೇ ಮಗನ ಕೆಲಸ... ಬೂದಿ ತಂದು ಅಪ್ಪನಿಗೆ ಕೊಡುವುದು... ನಡೆಯುತ್ತಾ ಇತ್ತು.
ಹೀಗಿರಲೋಮ್ಮೆ ರಾಕ್ಷಸ ಮಗನಿಗೊಂದು ಯೋಚನೆ ಬಂತು.


'
ಎಲ್ಲರೂ ಹೈ ಫೈ ಮಾಡಿಕೊಂಡು ಅವರವರ ವೆಹಿಕಲ್ ನಲ್ಲಿ ಜುಮ್ಮಂತ ಓಡಾಡಿ ಕೊಂಡಿರುವಾಗ, ಸ್ವಂತ ಜಾಬ್ ಮಾಡುವಾಗ, ನಾನು ಮಾತ್ರ ಅಪ್ಪನಲ್ಲಿ ಬೂದಿ ಕೆಲಸ ಮಾಡಬೇಕೆ.? ಎಷ್ಟು ದಿನಾ ಅಂತ ಹೀಗೆ ಇರುವುದು ...?' ಅನ್ನುವ ಒಂದು ವಿಚಾರ ಮಾಡುತ್ತಾ ...ಇದಕ್ಕೆ '' ಏನಾದರೂ ಮಾಡಲೇ ಬೇಕು'' ಎಂದುಕೊಳ್ಳುತ್ತಾ ಒಂದು ಖತರ್ನಾಕ್ ಐಡಿಯ ಯೋಚಿಸಿಕೊಂಡು ಅಳುತ್ತಾ ...ಐ ಮೀನ್ ಅಳುವಂತೆ ನಟಿಸುತ್ತ ಈಶನಲ್ಲಿಗೆ ಬಂದ.


ಈಶ ಮಗ ಅಳುತ್ತಿದ್ದುದನ್ನು ನೋಡಿ ಕರಗಿ ಹೋದ.  ದಿನಾ ಬೂದಿಯನ್ನು ಸರಿಯಾಗಿ ಗಾಳಿಸಿ ತಂದು ಕೊಡುತ್ತಿದ್ದುದರಿಂದ ಅವನಿಗೆ ಮಗನ ಮೇಲೆ ಪ್ರೀತಿ ಬಹಳ.
'' ಮಗಾ ಎಂತಾತ... ಅಳದೆಂತಕಾ....? '' ಬಾಳಾ ವಾತ್ಸಲ್ಯದಿಂದ ವಿಚಾರಿಸಿದ.

''ಊಂ ........ಊಂ .... ಬೂದಿ ಎಲ್ಲೂ ಸಿಗ್ತೇ ಇಲ್ಲೇ.   ಅದ್ಕೆ ನೀ ನನಗೊಂದು ''ವರ'' ಕೊಡವೂ ....ಊಂ ...ಊಂ .. ''

''ಹ್ನೂ ... ಅಕ್ಕು ಮಾರಾಯಎಂತ 'ವರ ' ಕೊಡವು ಕೇಳಾ.  ಕೊಡ್ತಿ ಅದ್ಕಿನ್ನೆಂತು.   ಅಳದೊಂದ್ ನಿಲ್ಸು ಕೇಳಲಾಗ್ತಿಲ್ಲೇ...''

'' ಕೊಡವೂ ... ಮತ್ತೆ.. ಊಂ... ಊಂ.. ಕೇಳಿದ್ಮೇಲೆ ಇಲ್ಲೇ ಹೇಳಲಿಲ್ಲೇ....''

'' ಕೇಳು .. ಕೇಳು..ಅಳು ನಿಲ್ಸು.. ಕೇಳಲಾಗ್ತಿಲ್ಲೇ.''

''ಊಂ.... ಮತ್ತೆ.. ಮತ್ತೆ.. ನಾ ಯಾರ ತಲೆ ಮೇಲೆ ಕೈ ಇಟ್ರೂ ಅವು ಸುಟ್ಟ ಭಸ್ಮವಾಗವೂ.... ಊಂ.. ವರ ಕೊಡ್ತ್ಯಾ... ? ಇಲ್ದಿದ್ರೆ ನಿಂಗೆ ಬೂದಿ ಸಿಗ್ತೆ ಇಲ್ಲೇ. ''

ಅಷ್ಟರಲ್ಲಿ ಪಾರ್ವತಿ ಈ ಸಂವಾದವನ್ನು ಕೇಳುತ್ತಿದ್ದವಳು, ''ಅಯ್ಯೋ ಹಂಗೊಂದು ವರ ಕೊಡಡಿ.. ಅನರ್ಥ ಆಗಿ ಹೋಕೂ.....'' ಕೂಗಿದಳು ಅಡುಗೆಮನೆಯಿಂದಲೇ..

'' ಕೊಡ್ತೀ ಹೇಳಿದ್ಮೇಲೆ ಕೊಡದೆಯ.   ಆನ್ ಯಾವತ್ತಾದರೂ ಮಾತಿಗೆ ತಪ್ಪವ್ ನನೆ....? ನೀನೂ ಹಂಗೇ ಮಾಡ್ತೆ...''ಎಂದು ಹೇಳಿದವನೇ ಈಶ್ವರ ಉರುಫ್ ಈಶ ಭಸ್ಮಾಸುರನಿಗೆ '' ನೀ ಯಾರ ತಲೆ ಮೇಲೆ ಕೈ ಇಟ್ರೂ ಅವರು ಭಸ್ಮವಾಗಲೀ ...'' ಎಂದು ವರ ಕೊಟ್ಟೆ ಬಿಟ್ಟ.

ವರ ಸಿಕ್ಕಿದ್ದೇ ತಡ, ಭಸ್ಮಾಸುರ ಕಂಡ ಕಂಡವರ ತಲೆ ಮೇಲೆಲ್ಲಾ ಕೈ ಇಟ್ಟು ಅವರನ್ನೆಲ್ಲಾ ಬೂದಿ ಮಾಡಿದ. ಇವನ ಉಪಟಳ ದಿನಾ ದಿನಾ  ಹೆಚ್ಚಾಯ್ತು.

ಇಷ್ಟೇ ಆಗಿದ್ರೆ ಸಾಕಿತ್ತು. ಅವರಿವರ ಸೈಟು, ಫಾರಂ ಹೌಸು.. ಎಲ್ಲಾದರ ಮೇಲೂ ಕಣ್ಣು ಬಿದ್ದು ಅಲ್ಲಿಯ ದೊಡ್ ದೊಡ್ ಮನುಷ್ಯರನ್ನೆಲ್ಲಾ ಅಟ್ಟಿಸಿಕೊಂಡು ಹೊರಟ. ''ಎಲ್ಲಾರ್ನೂ ಭಸ್ಮಾ ಮಾಡ್ತೀ..... ಏನಂತ ತಿಳ್ಕೈಂದ... ನನ್ನ...ಹ್ಞಾ.... '' ಎನ್ನುತ್ತಾ ಅಲೆದಾಡಿದ.

ಎಲ್ಲಾರಿಗೂ ಭಯವಾಗತೊಡಗಿ ಎಲ್ಲಾ ಸೀದಾ ಈಶ್ವರನಲ್ಲಿಗೆ ಬಂದು 'ನಿಮ್ಮನೆ ಮಾಣಿ ಹಿಂಗಿನ್ಗಲ್ಲ ಮಾಡ್ತಿದ್ದ. ನೀ ಒಂಚೂರು ಬುದ್ಧಿ ಹೇಳದೆಯ...' ಹೇಳಿ ಹೇಳಿದರು ದೇವೇಂದ್ರ.   ಮತ್ತೆ ಅವನ ಫ್ರೆಂಡ್ಸ್ ಎಲ್ಲ.

ಅವತ್ತೇ ಭಸ್ಮಾಸುರ ಭಸ್ಮ ತಗಂಡು ಈಶ್ವರನ ಹತ್ರ ಬಂದಿದ್ದೆ ತಡ.


''
ಎಂತಾ ಮಾಣಿ, ಆನ್ ನಿಂಗೆ ವರ ಕೊಟ್ಟಿದ್ದು ಕಂಡ ಕಂಡವರ ತಲೆ ಮೇಲೆ ಕೈ ಇಡು ಹೇಳನಾ..? '' ಹೇಳಿ ಅವನಿಗೆ ಹೊಡೆಯಲು ಹೊರಟ.

ಭಸ್ಮಾಸುರ ಮೊದಲೇ ನೀಚ, ವರದ ಬಲ ಬೇರೆ...
''ಹ್ಹ...ಹ್ಹ..ಹ್ಹಾ... ನೀ ಯಂಗೆ ಎಂತಾ ಮಾಡಲೂ ಆಗ್ತಿಲ್ಲೆ.. ಹೊಡಿತ್ಯ... ಹೊಡಿ ನೋಡನ. ಆನ್ ನಿನ್ ತಲೆ ಮೇಲೇ ಕೈ ಇಡ್ತೀ.... ಹ್ಹ..ಹ್ಹ... ಹ್ಹಾ....''

ಶಿವ ಉರುಫ್ ಈಶನಿಗೆ ಈಗ ಭಯವಾಗತೊಡಗಿತು.. ತಾನು ಕೊಟ್ಟ ವರದ ಅನರ್ಥ ಹೀಗಾಗುತ್ತೆ ಅಂದು ಕೊಂಡಿರದ ಶಿವ ಓಡತೊಡಗಿದ.  ಬಿಟ್ಟಾನ ಭಸ್ಮಾಸುರ.   ಅವನೂ ಅಟ್ಟಿಸಿಕೊಂಡು ಬಂದ.

ಓಡಿದ..ಓಡಿದ.. ಶಿವನಿಗೆ ಏನ್ ಮಾಡಲೂ ತೋಚಲಿಲ್ಲ. ಪಾರ್ವತಿ ಮಾತಾದರೂ ಕೇಳಬೇಕಿತ್ತು.  ಪಕ್ಕನೆ ಆಪ್ತ ಮಿತ್ರ ನಾಣಿಯ ನೆನಪಾಯಿತು.ಅವನ ಮನೆ ಕಡೆ ಧಾವಿಸಿದ.


ನಾಣಿ ತನ್ನ ವೈಕುಂಠ ನಿವಾಸದಲ್ಲಿ ಬೆಳಿಗ್ಗೆ ಎದ್ದು ಲಕ್ಷ್ಮಿ ಮಾಡಿದ ದೋಸೆ , ಮಾವಿನ ಹಣ್ಣಿನ ರಸಾಯನ ತಿಂದು ಅದನ್ನೇ ಬಣ್ಣಿಸುತ್ತಾ ಸೋಫಾದ ಮೇಲೆ ಪೇಪರ್ ನೋಡುತ್ತಾ ಕುಳಿತಿದ್ದ. ''ಮಾವಿನ ಹಣ್ಣು ಚನ್ನಾಗಿತ್ತನೆ...? ರಸಾಯನ ಚನಾಗಾಗಿತ್ತು. ಸುಳ್ಳಲ್ಲಾ .... ಎಳ್ಳು ಬೀಸಿ ಹಾಕಿದ್ಯನೆ...? ''
''ಹೌದು ಕಾಯಿ, ಎಳ್ಳು ಎಲ್ಲಾ ಬೀಸಿ ಹಾಕಿದ್ದಿ. ನಾಳೆ ಇನ್ನಷ್ಟು ಹಣ್ಣು ತಗಂಡು ಬನ್ನಿ.  ಹುಡ್ರಲ್ಲ ತಿನ್ಕತ್ತ...''ಕಿಚನ್ನಿಂದ ಕೇಳಿ ಬಂತು.

ಬಾಗಿಲು ಬಡಿದ ಸದ್ದಾಯ್ತು..ದಬ.. ದಬ... ಸದ್ದು ಹೆಚ್ಚಾಯ್ತು. ನಾಣಿಯೇ ಎದ್ದು.. ಒಂದು ಕೈಯಲ್ಲಿ ಪೇಪರ್ ಹಿಡಿದುಕೊಂಡೆ ಬಾಗಿಲು ತೆರೆದ..

''ನಾಣಿ  ನಾರಾಯಣಾಶ್ರೀಮನ್ನಾರಾಯಣ  ಬಾವಯ್ಯಾ.   ನೀನೆ ಕಾಪಾಡವೂ.. ಎನ್ನ...'' ಎನ್ನುತ್ತಾ ತೆರೆದ ಬಾಗಿಲಿಂದ ನಾಣಿಯನ್ನ ದಬ್ಬಿಕೊಂಡೆ ಬಂದು ಸೋಫಾದಲ್ಲಿ ಕುಸಿದ..

''ಬಾಗ್ಲು ಹಾಕುಅವ ಬತ್ತಬಂದ್ ಬುಡ್ತಾ...ಬಾಗ್ಲು ಹಾಕು...''ಶಿವ ಅವಸರಿಸಿದ..

''ಎಂತಾತ ಮಾರಾಯ, ಮತ್ಯನ್ತಾ ಭಾನ್ಗಡೆ ಮಾಡ್ಕ್ಯಂಡು ಬೈನ್ದ್ಯಾ...?ಯಾರ್ ಬತ್ವಾ?   ಹೆದ್ರಡಾ ಹೇಳುನಾ ಇದ್ದಿ... ''

ಶಿವ ಎಲ್ಲವನ್ನೂ, ಹೀಗ್ ಹೀಗೆ , ಹೀಗ್ಹೀಗೆ ಅಂತ ಒಂದೇ ಉಸುರಿಗೆ ಹೇಳಿ ಮುಗಿಸಿದ.

''ಅಲ್ದಾ ಮಾರಾಯ. ನಿಂಗೆ ಖುಷಿಯಾದರೂ ಮಕ್ಕ ಹುಟ್ತಾ ... ಸಿಟ್ ಬಂದರೂ ಮಕ್ಕ ಹುಟ್ತಾ ....!! ಸ್ವಲ್ಪ ಜ್ಞಾನ ಬ್ಯಾಡ್ದನಾ....? ವರ ಗಿರ ಕೊಡಕಿದ್ರೆಅನಾಹುತ ಅನಾಹುತವೇ. ನೀ ನಮ್ಮನಿಗೆ ಬರದೇ ಇಂತದಕ್ಕೆಮತ್ಯಾವಾಗ್ಲೂ ಪುರ್ಸೋತ್ತಿರ್ತಲ್ಲೇ... '' ಎಂದು ನಾಣಿ ಚೆನ್ನಾಗಿ ಕ್ಲಾಸ್ ತಗೊಂಡ..

''ನೋಡಾ..... ಎಂತಾರೂ ಪರಿಹಾರ ಕೊಡಹಂಗಿದ್ರೆ ಕೊಡು. ಮೊದ್ಲೇ ತಲೆ ಕೆಟ್ಟೋಜು...... ನಿಂಗೆ ಆಗ್ತಾ ಹೇಳು... ಇಲ್ದಿದ್ರೆ ಬರಮು ಹತ್ರಾರೂ ಹೋಗದೆಯ...... ಒಳ್ಳೆ ಗೋಟಾವಳಿ ವ್ಯಾಪಾರಾಗೊಜು....''

'' ಸುಮ್ನಿರಾ ಸಾಕು... ಅವಂಗೆ ಮೂರ್ಹೊತ್ತೂ ಸೃಷ್ಟಿ ಕಾರ್ಯ ಮಾಡದೆಯಾ...ಕೆಲಸ. ಈಗಿತ್ಲಾಗಂತೂ ವಯಸ್ಸಾತು ಅವಂಗೆ. ನೋಡು ಅರುಳು ಮರುಳು ಆದಂಗೆ ಆಯ್ದು. ಒಂದು ಮಕ್ಕ ಸೈತ ಸರಿ ಹುಟ್ತ್ವಲ್ಲೇಕೆಲವರಿಗೆ ಒಂದೊಂದೇ ಸಲಕ್ಕೆ ಅವಳಿ, ತ್ರಿವಳಿ.   ಇಲ್ದಿದ್ದ್ರೆ ಸಯಾಮಿ.  ಮತ್ ಕೆಲವರಿಗೆ ಎಂತಾ ಮಾಡಿದರೂ ಮಕ್ಕಾನೆ ಅಗ್ತ್ವಲ್ಲೇ. ಅವನತ್ರ ಹೋಗ್ತ್ನಡಾ ಇಂವಕೇಳೆ ಲಕ್ಷ್ಮೀ,  ಶಿವ್ ಬಾವಯ್ಯನ ಮಾತ....''

''ಸರಿಯಾಹಂಗಾರೆ ನೀನೆ ಎಂತಾರೂ ಉಪಾಯ ಹೇಳು ಭಸ್ಮಾಸುರನಿಂದ ತಪ್ಸಿಗಮ್ಬಲೇ'' .....'' ಅಯ್ಯೋ ಬಾವ,   ಅಂವ ಬಂದನೋ ಮಾರಾಯ....''

ಭಸ್ಮಾಸುರ ಕರ್ಕಶವಾಗಿ ಶಿವನನ್ನು ಕರೆಯುತ್ತಾ , ಕೂಗುತ್ತಾ..ನಾರಾಯಣನ ಮನೆ ಕಡೆ ಬರುವುದು ಕಾಣಿಸಿತು. ಹೆಜ್ಜೆ ಸದ್ದು ಒಳ್ಳೆ ಭೂಕಂಪವನ್ನೇ ನೆನಪಿಸುತ್ತಿತ್ತು.

''ನೀ ಹೆದ್ರಡದಾ... ಬಾವ.  ನೀ ಇಲ್ಲಿ ಗೆಸ್ಟ್ ರೂಮಲ್ಲಿ ಬಾಗ್ಲು ಹಾಕ್ಯಂಡು ಸಂದಿಂದ ನೋಡ್ತಾ ಇರು ಕೀ ಹೋಲಿಂದ. ನಾ ಎಲ್ಲನೋಡ್ಕ್ಯತ್ತಿ. ಒಳ್ಳೆ ಬೋಳೆ ಶಂಕರನ ಸವಾಸಾತು ...'' ಎಂದವನೇ ಶಿವನನ್ನು ಗೆಸ್ಟ್ ರೂಮಿಗೆ ಕಳಿಸಿ ತಾನು ಬೆಡ್ ರೂಮಿನ ಒಳಹೋದ ನಾರಾಯ್ಣ.

ನಾರಾಯ್ಣ.  ಅವ ಮೊದ್ಲೇ ಮ್ಯಾನೇಜ್ಮೆಂಟ್ ಗುರೂ.   ಕ್ರೈಸಿಸ್ ಮ್ಯಾನೆಜ್ ಮಾಡಲು ಹೇಳಿಕೊಡಬೇಕೆ...?ಬಾಳಾ ಕಡೆ ಉಪದೇಶ ಕೊಟ್ಟು ಒಳ್ಳೆ ಒಳ್ಳೆ ಹೆಸರು ತಗೊಂಡವನು.

ಶಿವ ಕೀ ಹೋಲಿಂದ ನೋಡುತ್ತಿದ್ದ .
ಭಸ್ಮಾಸುರನ ಹೆಜ್ಜೆ ಸದ್ದು ಹತ್ತಿರವಾಗುತ್ತಿತ್ತು. ಆಗ ನಾರಾಯಣನ ಬೆಡ್ರೂಮಿನಿಂದ ಸುಂದರಿಯೊಬ್ಬಳು ಹೊರಬಂದಳು. ಅವಳು ಎಷ್ಟು ಸುಂದರವಾಗಿದ್ದಳೆಂದರೆ ಅವಳನ್ನು ನೋಡುತ್ತಿದ್ದ ಶಿವನಿಗೆ ಭಸ್ಮಾಸುರನ ಭಯವೇ ಮರೆತು ಹೋಯಿತು...!!ಇದ್ಯಾವ ಮೋಹಿನಿ ಅಂತ.... ಮತ್ತು ಈ ನಾಣಿ ಹೀಗೊಂದು ಸೆಟಪ್ ಬೇರೆ ಇಟ್ಕೊಂಡಿದ್ದಾನಾ....? ತಂಗಿ ಲಕ್ಶ್ಮಿ ಎಲ್ಲಿ ಹೋದಳು..?.ಹಿಂದ್ ಗಡೆ ಕಸ ಮುಸರೆ ಮಾಡಲೇ ಹೊಯ್ದ್ಲಾ..?ಇವ್ಳು ಯಾರಾಗಿಕ್ಕು...?ಅಂತೆಲ್ಲ ಆಲೋಚಿಸತೊಡಗಿದ ಶಿವ.

ಅಷ್ಟೊತ್ತಿಗೆ ಭಸ್ಮಾಸುರ ಬಾಗಿಲ ಬಳಿ ಬಂದು ಬಾಗಿಲನ್ನು ಒದ್ದ ಹೊಡೆತಕ್ಕೆ  ಸುಮಾರಿನ ಮನೆ ಬಾಗಿಲಾಗಿದ್ರೆ ಚೂರ್ ಚೂರ್ ಆಗಿರುತ್ತಿತ್ತು. ಅದು ನಾರಾಯಣನ ಮನೆ ಬಾಗಿಲಾದ್ದರಿಂದ ಗಟ್ಟಿ  ಇತ್ತು.

ಒಳ ಬಂದವನೇ ಭಸ್ಮಾಸುರ 'ಎಲ್ಹೊದ್ಯೋ ಅಪ್ಪಾ... ' ಎಂದು ಕೂಗಲು ಬಾಯಿ ತೆರೆದವನು ಹಾಗೆಯೇ ನಿಂತ. ಮೋಹಿನಿಯನ್ನು ನೋಡಿ ಅವನೂ ವಿಸ್ಮಯಗೊಂಡ. ತೆರೆದ ಬಾಯಿ   ಬಿಟ್ಟ ಕಣ್ಣು ಮುಚ್ಚದೆ.... !!!!!

ಅಷ್ಟೊತ್ತಿಗೆ....   ಒಳಗಡೆ ಸಿ.ಡಿ.ಪ್ಲೇಯರ್ ಹಾಡತೊಡಗಿತು.

ರಾ ..ರಾ..... ರಾ...ರಾ .... ಸರಸಕು ರಾರಾ....ರಾರಾ
... .........
ನನು ಒಕಸಾರಿ ಕನುಲಾರ ತಿಲಕಿನ್ಚರ...
ನಾ ವ್ಯಥಲಲ್ಲು ಮನಸಾರ ಆಲಿಂಚರ............. ......... ...... ........


ಮೋಹಿನಿ ಬಳುಕುತ್ತಾ, ನುಲಿಯುತ್ತಾ ನರ್ತಿಸ ತೊಡಗಿದಳು. ಅವಳನ್ನೇ ನೋಡುತ್ತಾ ಮೈ ಮರೆತಿದ್ದ ಭಸ್ಮಾಸುರ ತಾನೂ ಅವಳನ್ನೇ ಅನುಕರಿಸ ತೊಡಗಿದ. ತನ್ನನ್ನು ಸೋಲಿಸೆಂಬಂತೆ ಆಕೆಯೂ ಕಣ್ ಸನ್ನೆ ಮಾಡುತ್ತಾ, ಹುಬ್ಬು ಹಾರಿಸುತ್ತಾ ಕುಣಿಯತೊಡಗಿದಳು.
ಮೋಹಿನಿ ಮಾಡಿದಂತೆಯೇ ನರ್ತಿಸುತ್ತಾ .. ನರ್ತಿಸುತ್ತಾ... ಭಸ್ಮಾಸುರ ತನ್ನನ್ನೇ ಮರೆತುಬಿಟ್ಟ.ಲಲನೆ ಮಾಟವಾಗಿ ತನ್ನ ಕೈಗಳೆರಡನ್ನೂ ಮೇಲೆತ್ತುತ್ತಾ....... ಮೇಲೆತ್ತುತ್ತಾ.... ತನ್ನ ತಲೆಯ ಮೇಲಿರಿಸಿ ಕೊಂಡಳು.

.... ಅದನ್ನೇ ಮಾಡಿದ ಭಸ್ಮಾಸುರ......

ಎದುರಿಗೆ ದೊಡ್ಡದಾದ ಬೂದಿ ಗುಡ್ಡೆ  ಬಿತ್ತು.....!!!

ಮೋಹಿನಿ ತುಟಿಯಂಚಿನಲ್ಲಿ ನಕ್ಕು ಬೆಡ್ರೂಮಿನ ಕಡೆ ನಡೆಯ ತೊಡಗಿದಳು. ಒಮ್ಮೆಲೇ ಗೆಸ್ಟ್ ರೂಮಿನ ಬಾಗಿಲು ತೆರೆದ ಶಿವ ಹಾರಿ ಹೋಗಿ ಸುಂದರಿಯ ಕೈ ಹಿಡಿದು ಕೊಂಡ.

''ಯಾರೇ ನೀನು ಚೆಲುವೆ.... ನಿನ್ನಷ್ಟಕ್ಕೆ ನೀನೆ ಏಕೆ ನಗುವೇ....''

... ಬಿಡಲೇ, ಇದೂ ನಾನು ನಾಣಿ.  ಸ್ತ್ರೀವೇಶ ಹಾಕ್ಯ ಬೈಂದಿ.... ಲಕ್ಷ್ಮಿ ಒಳಗೆ ಬರ ಮೊದ್ಲು ಅವಳ ಸೀರೆ ಯಥಾಸ್ಥಾನಕ್ಕೆ ಸೇರಿಸಿದ್ನಾ ಬಚಾವೂಬಿಡು ಬಿಡು...'' ಎನ್ನುತ್ತಾ ಸೆರಗು ಬಿಡಿಸಿಕೊಂಡ ನಾಣಿ ಕೋಣೆಯ ಒಳಗೆ ಓಡಿದ..

''ಅಂತೂ ಒದಗಿದ ಸಂಕಷ್ಟ ಪರಿಹಾರಾತು ಮಾರಾಯ....'' ಎನ್ನುತ್ತಾ ಶಿವ ತನ್ನ ಮನೆ ಕೈಲಾಸನಿಲಯದ ಕಡೆ ನಡೆಯ ತೊಡಗಿದ .


ವಂದನೆಗಳು.

Saturday, April 24, 2010

ನಾಗೇಶ ಹಂದಿ ಹಿಡಿದದ್ದು

ನಮ್ಮ ಊರಿನಿಂದ ಸ್ವಲ್ಪ ದೂರದಲ್ಲಿ ನಮ್ಮದೊಂದಷ್ಟು ಜಮೀನಿದೆ. ಹೊಸದಾಗಿ ತೋಟ ಹಾಕಿಸಿದ್ದು. ದೂರದ್ದಾದ್ದರಿಂದ ನೋಡಿಕೊಳ್ಳಲು ಒಂದು 'ಜನ' ಬಿಟ್ಟಿದ್ದೇವೆ.'ಜನ 'ಅಂದರೆ ನಾಗೇಶ ಮತ್ತು ಅವನ ಫ್ಯಾಮಿಲಿ....!ಅವನದ್ದೂ ಅರ್ಧ ಎಕರೆ ತೋಟ ಪಕ್ಕದಲ್ಲಿಯೇ ಇದೆ. ಒಳ್ಳೆಯವನು . ನಮ್ಮ ತೋಟದ ಎಲ್ಲಾ ಜವಾಬ್ಧಾರಿ ಅವನದೇ...ಅಂದರೆ ಯಾವ ಕೆಲಸ ಮಾಡುವುದಾದರೂ ಅವನೇ ಗುತ್ತಿಗೆ ಹಿಡಿಯುತ್ತಾನೆ. ಆಳು ಜನರ ವ್ಯವಸ್ತೆ, ಹಣಕಾಸಿನ ಮಾತುಕತೆ ಎಲ್ಲಾ ಅವನದೇ ಜವಾಬ್ಧಾರಿ.. ತೋಟಕ್ಕೆ ಬಂದ ದನ ಹೊಡೆದು ಓಡಿಸುವುದರಿಂದ ಹಿಡಿದು.

ತನ್ನದೇ ತೋಟ ಎಂಬಷ್ಟು ಶ್ರದ್ಧೆಯಿಂದ ಕೆಲಸ ಮಾಡುತ್ತಾನೆ ಪಾಪ.... ಹಾಗಾಗಿ ತೋಟದ ಸೂಪರ್ ವೈಸರ್ ಎಂತಲೂ ಹೇಳಬಹುದು... ಅಲ್ಲದೆ ನಾವಿಲ್ಲದಿದ್ದಾಗ ತೋಟದ ಯಜಮಾನ ಅವನೇ....!! ನನ್ನವರು ಅವನನ್ನು ಮ್ಯಾನೇಜರ್, ಕೆಲವೊಮ್ಮೆಸಿ.ಇ.ಓ.ಎಂತೆಲ್ಲಾ ಕರೆಯುವುದೂ ಉಂಟು.....!!!!!

ಪಾಪದವ ಮತ್ತು ಒಂತರಾ ಹುಂಬ ..

ಅವನದ್ದೊಂದು ಎಂ 80 ಇತ್ತು. ಅದನ್ನು ಹತ್ತಿ ಹೊರಟನೆಂದರೆ ಮನೆ ಸೇರುತ್ತಾನಾ ಎಂದು ಸಂಶಯ ಪಡಬೇಕಾದ್ದು ನೋಡುವವರ ಧರ್ಮ.

ಒಂದಿನಾ ನಮ್ಮ ಬಾವನವರನ್ನು' ಇಲ್ಲಪ್ಪಾ ನಿನ್ನ ಗಾಡಿಯಲ್ಲಿ ಹತ್ತಲು ಭಯ' ಎಂದರೂ ಕೇಳದೆ ಒತ್ತಾಯ ಮಾಡಿ ಜೊತೆಗೆ ಇನ್ನೊಬ್ಬರನ್ನೂ ಕೂರಿಸಿ ಕೊಂಡು ತ್ರಿಬ್ಬಲ್ ರೈಡ್ ಮಾಡಿದ ಹೊಡೆತಕ್ಕೆ ಸ್ವಲ್ಪ ದೂರ ಹೋಗುವಷ್ಟರಲ್ಲಿಯೇ ಅದು ವಿಮಾನದಂತೆ ಟೇಕಾಫ್ ಆಗಿ ಹಿಂದಿದ್ದ ಇಬ್ಬರೂ ನೆಲಕ್ಕೆ ಕಾಲು ಕೊಟ್ಟು ಹೇಗೋ ಬಚಾವಾದ ಕಥೆ ನೆನಪಿಡುವನ್ತದ್ದು.


ಹೋದಲ್ಲೆಲ್ಲಾ ಒಂದಲ್ಲ ಒಂದು ಆಕ್ಸಿಡೆಂಟ್ ಮಾಡಿಕೊಳ್ಳದಿದ್ದರೆ ಅವನ ಗಾಡಿಗೆ ಮರ್ಯಾದೆಯೇ ಇಲ್ಲ. ಒಮ್ಮೆ ನಿಂತ ಲಾರಿಗೆ ಹೋಗಿ ಗುದ್ದಿ ಕುದುರೆಯಂತೆ ಹಾರಿ ಬಿದ್ದಿದ್ದ .
ಇನ್ನೊಮ್ಮೆ ಅಡ್ಡರಸ್ತೆಯಿಂದ ಹಾರನ್ ಕೂಡಾ ಮಾಡದೆ, ಎಡ ಬಲ ನೋಡದೆ ಸೀದಾ ಮೇನ್ ರೋಡಿಗೆ ನುಗ್ಗಿ ಎದುರಿಗೆ ಬರುತ್ತಿದ್ದ ರಿಕ್ಷಾಕ್ಕೆ ಗುದ್ದಿದ್ದ.. ಹೆಚ್ಚಿಗೆ ವೇಗ ಇರಲಿಲ್ಲವಾದ್ದರಿಂದ ಕೈಕಾಲು ಮುರಿತದಿಂದ ಬಚಾವಾದರೂ ಎಲ್ಲರೂ ಸೇರಿ ಗುದ್ದಿದ್ದರ ಪರಿಣಾಮವಾಗಿ ಮೈ ಕೈ ಊದಿ ಎರಡು ದಿನ ಆಸ್ಪತ್ರೆಯಲ್ಲಿ ರೆಷ್ಟು ತಗೊಂಡು ಬಂದಿದ್ದು ನಿಜ. ಊರಿಗೆ ಬಂದು'' ಎಂತಾಆಯಿಲ್ಲೇ...''ಎನ್ನುತ್ತಾ ಮತ್ತೆ ರೆಡಿಯಾದದ್ದೂ ಸುಳ್ಳಲ್ಲ..

ಒಮ್ಮೆ ತೋಟದಲ್ಲಿ ಮೀಟು ಕಡಿಯುವಾಗ ಬದಿಯಲ್ಲೇ ಹರಿದು ಹೋಗುತ್ತಿದ್ದ ನಾಗರ ಹಾವೊಂದನ್ನು ಗುದ್ದಲಿಯಿಂದ ನೋಡದೆ ಕಡಿದು ಬಿಟ್ಟಿದ್ದ.ಅದು ತಲೆ ಬಾಲ ಬೇರೆಯಾಗಿ, ತಲೆಯ ಭಾಗ ಜೀವ ಸಂಕಟದಿಂದ ಒಂದು ಏಡಿ ಕುಣಿಯನ್ನು ಹೊಕ್ಕು ಬಿಟ್ಟಿತ್ತು.ಉಳಿದ ಉದ್ದದ ಬಾಲದ ಭಾಗ ತೋಟದ ಬಣ್ಣದ ಮೇಲೆ ಬಿದ್ದಿತ್ತು.
ಎಲ್ಲಾ ಅಕ್ಕಪಕ್ಕದವರು ....'' ಹಾವಿನ ದ್ವೇಷ ಹನ್ನೆರಡು ವರುಷ ... ಮನೆ ಮಾಡಲ್ಲೆಲ್ಲಾ ಸರ್ಪಿನ ಹಾವೇ ಕಾಣಸಿ ಕೊಳ್ಳತ್...ಎಂತಾಅಂದ್ರೂ ತಪ್ಪಾಗಿ ಹೋಯಿತೇ... ಮಕ್ಳು ಮರಿ ಇರುವವ ನೀನ'' ಅಂದರು. ಇವನ ಹೆಂಡತಿ ಶಾರದೆಯಂತೂ ಹಾವು ನಾಗೇಶನಿಗೆ ಕಡಿದಿದೆಯೇನೋ ಎಂಬಂತೆ ಮೂರ್ಚೆ ಹೋಗಿದ್ದೂ ಆಯ್ತು.

ಆಮೇಲೆ ಇವನಿಗೆ ಹೆದರಿಕೆಯಾಗಿ ಸರ್ಪಸಂಸ್ಕಾರ ಮಾಡಿಸಲು ಪಕ್ಕದ ಹಳ್ಳಿಯ ಜೋಯಿಸರ ಹತ್ತಿರ ಹೋದ. ಜೋಯಿಸರು '
'ಬರೀಬಾಲ ಮಾತ್ರದಿಂದ ಸರ್ಪ ಸಂಸ್ಕಾರ ಮಾಡಲು ಸಾಧ್ಯವಿಲ್ಲ ... ತಲೆ ಭಾಗ ಜೀವ ಇದ್ದರೆ ಮತ್ತೆ ಪಾಪ ಹೆಚ್ಚು ಸುತ್ತಿ ಕೊಳ್ಳುತ್ತೆ... ತಲೆಹುಡುಕಿ ಸಂಸ್ಕಾರ ಮಾಡು ...'' ಎಂದರು


ಹಾವಿನ ಸ್ಪೆಷಲಿಸ್ಟ್ ರ ಹತ್ತಿರ ಬಾಲ ತುಂಡಾದ ಹಾವು ಬದುಕಿರುತ್ತದೋ ಇಲ್ಲವೋ ಪ್ರಶ್ನಿಸಿ ಬದುಕಿರಲು ಸಾಧ್ಯವೇ ಇಲ್ಲ ಎಂಬ ಸಮಾಧಾನದೊಂದಿಗೆ ಧೈರ್ಯವಾಗಿ ಇಂವ ಬಂದು ಏಡಿ ಕುಣಿಯನ್ನು ಸುಮಾರು ಆರೇಳು ಅಡಿಗಳಾಗುವಷ್ಟು ಅಗೆದ. ಕಡೆಗೆ ಸತ್ತ ಹಾವಿನ ತಲೆ ಸಿಕ್ಕಿತು. ಎರಡನ್ನೂ ಸೇರಿಸಿ ಸುಬ್ರಹ್ಮಣ್ಯಕ್ಕೆ ತಪ್ಪುಗಾಣಿಕೆಯಿತ್ತು... ಅದಕ್ಕೆ ಒಂದು ಸಂಸ್ಕಾರ ಅಂತ ಮಾಡಿಯಾಯಿತು...

ಹೀಗೆ ಇವನು ಮಾಡಿಕೊಳ್ಳುವ ಭಾನಗಡೆ ಒಂದೆರಡಲ್ಲ.

ಒಮ್ಮೆ ಇವನ ನಾಲ್ಕಾರು ಸ್ನೇಹಿತರೊಂದಿಗೆ ಹಂದಿ ಬೇಟೆಗೆ ಅಂತ ಊರ ಹಿಂದಿನ ಕಾಡಿಗೆ ಹೋದ. ಹೊಟ್ಟೆಗೆ ಸ್ವಲ್ಪ ಔಷಧಿ ಬೇರೆ ..... ಶಕ್ತಿ ...ಧೈರ್ಯಕ್ಕೆ... ಇರಲಿ ಅಂತ ...
ಎಲ್ಲರೂ ಯಥಾನ್ಶಕ್ತಿ ಕುಡಿದಿದ್ದರು...ಹಂದಿಯೊಂದನ್ನು ಬಿಟ್ಟು..

ಅಲ್ಲಿ ಕೋವಿ ಇದ್ದದ್ದು ಇವನ ಸ್ನೇಹಿತ ಗಿಡ್ಡ ನಾಯಕನಹತ್ತಿರ .. ಅವನಿಗೆ ಮೂವತೈದಕ್ಕೆ ಚಾಳೀಸು ಬಂದಿತ್ತು....!!!!ಹಗಲೇ ಸುಮಾರಾಗಿ ಕಣ್ಣು ಕಾಣಿಸುವವ ರಾತ್ರಿ ಹೇಗಿರಬೇಡ....? ಹಂದಿ ಹೊಡೆಯುವವ ಅವನೇ....
ಕೋವಿ ಅವನದಾದ್ದರಿಂದ ಗುರಿ ಇಡುವ ನೈತಿಕ ಹಕ್ಕು ಅವನದೇ ಅಲ್ಲವೇ...?

ಎಲ್ಲರೂ ಪ್ಲಾನ್ ಮಾಡಿ ಕೊಂಡರು..ಬೆಟ್ಟದಲ್ಲಿ ಮರಗಿಡಗಳ ನಡುವಿನಲ್ಲಿ ಒಂದು ಜಾಗವನ್ನು ಆಯ್ದು ಕೊಂಡು, ಅಲ್ಲಿ ಗಿಡ್ದನಾಯಕ ಕೋವಿ ಮತ್ತು ಗುರಿಯೊಂದಿಗೆ ಸಜ್ಜಾಗಿರಬೇಕು... ಮತ್ತು ನಾಲ್ಕು ಜನ ಹಂದಿಯನ್ನು ಆ ಸ್ಪಾಟಿಗೆ ಓಡಿಸಿಕೊಂಡು ಬರಬೇಕು.. ಅಲ್ಲದೆ ಗುಂಡು ತಗುಲಿದ ಹಂದಿಯನ್ನು ತಪ್ಪಿಸಿಕೊಂಡು ಹೋಗದಂತೆ ಹಿಡಿದು ಅದುಮಲು ನಾಗೇಶ....!!
ಪ್ರಾಜೆಕ್ಟ್ ರೆಡಿಯಾಯಿತು.


ಆ ಕಡೆಯಿಂದ ಸ್ಪಾಟಿಗೆ ಹಂದಿಯನ್ನು ಬೆದರಿಸಿಕೊಂಡು, ಓಡಿಸಿಕೊಂಡು ಬಂದರು.
ಗಿಡ್ಡನಾಯಕ ರೆಡಿಯಾಗಿದ್ದ... ಹೊಟ್ಟೆಯಲ್ಲಿ ಹಾಕಿಕೊಂಡ ಥರ್ಟಿ, ಸಿಕ್ಸ್ಟಿ +,+,+,+ ಕೂಡಾ ಕೆಲಸ ಮಾಡಲಾರಮ್ಬಿಸಿತ್ತು .
ನಾಗೇಶನಿಗೆ ಉತ್ಸಾಹ ಹೆಚ್ಚಾಗಿ ಕಬ್ಬಡ್ಡಿ ಆಡುವವರಂತೆ ಅತ್ತ ಇತ್ತ ಹಾರುತ್ತಿದ್ದ... ಯಾವುದೇ ಕಾರಣಕ್ಕೂ ಹಂದಿ ತಪ್ಪಿಸಿಕೊಂಡು ಹೋಗಬಾರದು ಮತ್ತು ಗುಂಡು ತಾಗಿದ ನಂತರ ಹಂದಿ ಹಾರಿ ಬೀಳುವುದು ತನ್ನ ಕೈಗೆ .......ಕ್ರಿಕೆಟ್ ಬಾಲ್ ಹಿಡಿದ ಹಾಗೇ ಹಿಡಿಯುವುದು ..... ಅನ್ನುವ ಲಾಜಿಕ್ಕು...!!

ಹಂದಿ ಓಡುತ್ತಾ ಬಂತು... ಬಂತು... ಬಂತು... ಬಂದೆ ಬಿಟ್ಟಿತು...........!!!!
ಡಂ.... ಡಾಮ್... ಡಮಾರ್ ...
ಗಿಡ್ದನಾಯಕನ ಕೋವಿಯಿಂದ ಗುಂಡು ಪಾಸಾಯ್ತು..
ಗುಂಡು ಪಾಸಾಗಿದ್ದಿದ್ದು ನಿಜ..
ಹಂದಿಯೂ ಬದಿಗೆ ಹಾರಿ ಪಾಸಾಗಿದ್ದುದು ಅದಕ್ಕಿಂತಲೂ ನಿಜ...!!
ಹಂದಿಯನ್ನು ಹಿಡಿಯುವವನು ಎಲ್ಲಿ ಹೋದ ಎಂದು ಎಲ್ಲರೂ ನಾಗೇಶನನ್ನು ಹುಡುಕಿದರು.. ಪಾಪ ಪೊದೆಯ ಸಂದಿಯಲ್ಲಿ ನರಳುವ ಶಬ್ದ ಕೇಳಿ ನೋಡಿದರೆ... ಕಾಲು ಪೂರ ರಕ್ತವಾದ ನಾಗೇಶ ಬಿದ್ದಿದ್ದ..

'
' ಎಂತ ಮಾರಾಯ ''ಎಂದು ಎಲ್ಲರೂ ನೋಡಿದರೆ ... ಗುಂಡು ಬಿದ್ದಿದ್ದು ಹಂದಿಗಲ್ಲ.. ನಾಗೇಶನ ಕಬಡ್ಡಿಯ ತೊನೆದಾಟದಿಂದಾಗಿ ಹಗಲುಗುರುಡ ಗಿಡ್ದನಾಯಕನ ಕಣ್ಣಿಗೆ ನಾಗೇಶನೇ ಹಂದಿಯಂತೆ ತೋರಿ ಗುರಿಯಿಟ್ಟಿದ್ದ...ಒಂದು ಗುಂಡು ಕಾಲಿಗೆ ಬಿದ್ದಿತ್ತು..ಗುರಿಕಾರನ ಸಾಮರ್ಥ್ಯದ ದೆಸೆಯಿಂದ ಇನ್ನೊಂದು ಗುಂಡು ಸರಿಯಾಗಿ ''ಎದೆಗೆ''ಬಿದ್ದಿತ್ತು.....!!!

ಹೆದರುವ ಅಗತ್ಯವಿಲ್ಲ....!!
.ನಾಗೇಶನ ಗ್ರಾಚಾರ ಸರಿಯಿತ್ತು.......!!!!!!
ಇವನೇನು ಮಾಡಿದ್ದಾ ಅಂದರೆ....... ಎಡದ ಜೇಬಿನಲ್ಲಿ ಸುಣ್ಣದಂಡೆ ಇಟ್ಟುಕೊಂಡಿದ್ದ.. ಗುಂಡು ಸರಿಯಾಗಿ ಸುಣ್ಣದಂಡೆಗೆ ಬಿದ್ದಿತ್ತು... ಸಧ್ಯ.. ಇಲ್ಲದಿದ್ದರೆ ಈ ವರ್ತಮಾನ ಹೇಳಲು ನಾಗೇಶ ಭೂತವಾಗಿರುತ್ತಿದ್ದ..
ಎಲ್ಲರೂ ಪ್ರಾಣ ಕಾಪಾಡಿದ ಸುಣ್ಣದಂಡೆಯನ್ನು ಕೊಂಡಾಡಿದ್ದೆ ಕೊಂಡಾಡಿದ್ದು.

ಪ್ರತೀ ಸಾರಿ ಊರಿಗೆ ಹೋದಾಗಲೂ ಒಂದಲ್ಲ ಒಂದು ನಾಗೇಶನ ಕಥೆ ಇದ್ದೇ ಇರುತ್ತದೆ...ಇಷ್ಟೆಲ್ಲಾ ಭಾನಗಡೆ ಮಾಡಿಕೊಂಡರೂ ಮತ್ತೆ ಮರುದಿನ ರೆಡಿ ಹೊಸ ಕಥೆಗೆ..........!!!!!

ವಂದನೆಗಳು.

Monday, November 23, 2009

ದತ್ತಾತ್ರೇಯನ ಅವಾಂತರಗಳು

ನಾನು ಬೆಂಗಳೂರಿಗೆ ಬಂದು ವರ್ಷವಾಗಿತ್ತಷ್ಟೆ . ನಾನು ಮತ್ತು ಸೂರಿ ದಾಸರಹಳ್ಳಿಯ ಹನುಮೇಗೌಡರ ವಠಾರದಲ್ಲಿ ವಾಸ್ತವ್ಯ ಹೂಡಿದ್ದೆವು. ಅದೊಂದು ಸುವ್ಯವಸ್ತಿತ ರೂಂ . ಕಿಚನ್,ಡೈನಿಂಗ್ ಹಾಲ್,ಬೆಡ್ರೂಮ್ ಅಲ್ಲದೆ ಸ್ಟೋರ್ ರೂಂ ಕೂಡಾ ಅದೊಂದೇ ರೂಮಿನಲ್ಲಿ ಸುಸಜ್ಜಿತಗೊಂಡಿತ್ತಾದ್ದರಿಂದ ಬೇಕಾದಾಗ ಬಯಸಿದ್ದು ಕೈ ಕಾಲಿಗೆ ಎಟಕುವ ಸೌಲಭ್ಯವಿತ್ತು.

ಈ ನಡುವೆ ನಮ್ಮಿಬ್ಬರಿಗೆ ಇನ್ನೋರ್ವನ ಜೊತೆ ರೂಂ ಹಂಚಿಕೊಳ್ಳುವ ಸೌಭಾಗ್ಯ ಒದಗಿಬಂತು. ಮೂರನೆಯವನಾಗಿ ದಾಖಲಾದವನೇ ಶ್ರೀಮಾನ್ ದತ್ತಾತ್ರೇಯ. ಅವನ ವ್ಯಕ್ತಿತ್ವವನ್ನು ಬಣ್ಣಿಸಲಸದಳ.....!! ಅವನ ಜಾಣ್ಮೆಗೆ ಅವನೇ ಸಾಟಿ....!ಅಂಥಾ ಉದ್ಯೋಗದ ಅಭಾವದ ಕಾಲದಲ್ಲಿಯೂ ದಿನಕ್ಕೊಂದು ಉದ್ಯೋಗ ಬದಲಿಸಬಲ್ಲ ಅಸಾಧ್ಯ ಚತುರ...!

ಆತ ನಮ್ಮ ರೂಮಿಗೆ ಎಂಟರಾದದ್ದೇ ಆದದ್ದು ..... ರೂಮಿನ ದಿಕ್ಕೇ ಬದಲಾಗಿ ಹೋಯಿತು.ರಾತ್ರಿ ಮಲಗುವಾಗ ನಾವೆಲ್ಲ ಒಂದೇ ದಿಕ್ಕಿಗೆ ತಲೆ ಹಾಕಿ ಮಲಗಿದರೆ ದತ್ತು ದಿನಕ್ಕೊಂದು ದಿಕ್ಕಿಗೆ ತಲೆ ಹಾಕಿರುತ್ತಿದ್ದ.ಅಂವ ಮಾತ್ರಾ ಗಡಿಯಾರದ ಘಂಟೆ ಮುಳ್ಳೇ......! ಮಲಗುವಾಗಲೂ ಹೆಚ್ಚೇನು ತ್ರಾಸಿರಲಿಲ್ಲ. ಕಿವಿಗೆ ಹತ್ತಿ, ತಲೆಗೆ ಯಕ್ಷಗಾನದ ಭಾಗವತರನ್ನು ನೆನಪಿಗೆ ತರುವಂತಾ ರುಮಾಲು, ಹೊದೆಯಲು ಎಂತಾ ಬೇಸಿಗೆಯಲ್ಲೂ ಎರಡೇ ಎರಡು ಬ್ಲಾಂಕೆಟ್ ಸಾಕಾಗಿತ್ತು !

ಅವನ ಬೆಳಗಿನ ದಿನಚರಿ ಮಾತ್ರಾ .......ಪುಣ್ಯಾತ್ಮ ಟೀ ಮಾಡಲು ಪಾತ್ರೆ ಒಲೆಯ ಮೇಲಿಟ್ಟು ಸ್ನಾನಕ್ಕೆ ಹೋದರೆ ಬರುವಷ್ಟರಲ್ಲಿ ಬ್ಲಾಕ್ ಟೀ (?) ಯನ್ನು ಪಾತ್ರೆಯಿಂದ ಉದುರಿಸ ಬೇಕಾಗುತ್ತಿತ್ತು. ಸ್ನಾನ ಮಾಡುವಾಗೇನಾದರೂ ನಲ್ಲಿಯಲ್ಲಿ ನೀರು ಬರುವುದು ನಿಂತು ಹೋದರೆ ನಲ್ಲಿಯನ್ನು ಆರಿಸದೇ ನೆಟ್ಟಗೆ ಆಫೀಸಿಗೆ ಹೋಗುವುದು ಅವನ ಜಾಯಮಾನ.
ಅಂದು ಅವನಿಗೆ ಸೆಕೆಂಡ್ ಶಿಫ್ಟಿನ ಕೆಲಸ . ನಾನು, ಸೂರಿ ಮೊದಲೇ ಮನೆ ಬಿಟ್ಟಿದ್ದೆವು . ನೀರು ಬರುವುದು ನಿಂತಿದ್ದ ನಲ್ಲಿಯನ್ನು ಆರಿಸದೇ ಇಂವ ಆಫೀಸಿಗೆ ನಡೆದ. ಸಾಯಂಕಾಲ ನಾವು ಬಂದು ನೋಡುವ ಹೊತ್ತಿಗೆ ರೂಂ ಮಿನಿ ಸ್ವಿಮ್ಮಿಂಗ್ ಫೂಲಾಗಿತ್ತು...... ಪಾತ್ರೆಗಳು, ಹಾಸಿಗೆ ವಸ್ತ್ರಗಳಿಗೆ ನೀರಿನಲ್ಲಿ ಈಜುವ ಸಂತೋಷ .... ನಮಗೆ ತಡೆಯಲಾರದ ಆಕ್ರೋಶ ..ಮನೆಗೆ ಬಂದವನಲ್ಲಿ ವಿಚಾರಿಸಿದರೆ ಅಂವ ಹ್ಹ .... ಎಂದು ನಕ್ಕ ...ಜಡ ಶಂಕ್ರ....!!! ಅಂದು ರಾತ್ರಿ ಒದ್ದೆ ಹಾಸಿಗೆ ಮೇಲೆ ನಿದ್ದೆ ಬಾರದೆ ಹೊರಳಾಡಿದ್ದು ಮಾತ್ರಾ ಇನ್ನೂ ಹಸಿಹಸಿ ....ನೆನಪು

ನಾವು ಅವನನ್ನು ಸುಧಾರಿಸಿಕೊಳ್ಳಬೇಕಿತ್ತೇ ಹೊರತೂ ಅವನಿಂದ ಸುಧಾರಣೆ ನಿರೀಕ್ಷಿಸುವಂತೆಯೇ ಇರಲಿಲ್ಲ .( ಆಗ ಸುಧಾರಿಸಿಕೊಂಡು ಅಭ್ಯಾಸ ಮಾಡಿಕೊಂಡಿದ್ದು ಮದುವೆಯಾದ ಮೇಲೆ ಉಪಯೋಗಕ್ಕೆ ಬಂತೆಂದು ಹೇಳಿ ಮಡದಿಯ ಕೆಂಗಣ್ಣಿಗೆ ಗುರಿಯಾದದ್ದು ......ಸುಳ್ಳಲ್ಲ.)

ಅವನು ಮಾಡದ ಕೆಲಸವಿಲ್ಲ . ಅದ್ಯಾವುದೋ ಸೊಳ್ಳೆ ನಿವಾರಕಗಳ ವಿತರಕ ಅಂಗಡಿಗೆ ಸೇಲ್ಸ್ ಮ್ಯಾನ್ ಆಗಿಸೇರಿ ನಾಲ್ಕು ದಿನಕ್ಕೆ ಅದನ್ನು ಬಿಟ್ಟ. ನಂತರ ಒಂದು ಪ್ಲಾಸ್ಟಿಕ್ ಕವರ್ ಗಳ ವಿತರಕ ಅಂಗಡಿಗೆ ಸೇರಿದ.ಇಲ್ಲೂ ಸೇಲ್ಸ್ ಮ್ಯಾನ್ ಕೆಲಸವೇ. ಅಂಗಡಿಗಳಿಗೆ ಕವರ್ ಮಾರಿ ಬರುವ ಕೆಲಸ.ಅಂಗಡಿಯವನೊಬ್ಬ ಸರಿಯಾಗಿ ಹಣ ಪಾವತಿ ಮಾಡಲಿಲ್ಲ.ದತ್ತು ಏನ್ ಸಾಮಾನ್ಯದವನೇ .... ? ನಿನ್ನ ಅಂಗಡಿ ವಸ್ತುಗಳನ್ನೆಲ್ಲ ಸೀಜ್ ಮಾಡುವೆನೆಂದು ಹೆದರಿಸಿದ . ಅಂಗಡಿಯವನಿಗೆ ಇದೇನು ಹೊಸದೇ...? ಆಯ್ತಪ್ಪಾ ತಗಂಡು ಹೋಗು ಎಂದು ತಾನೆ ಮೂಟೆಯಲ್ಲಿ ತುಂಬಿಕೊಟ್ಟ. ದತ್ತು ಗೆದ್ದ ಸಂಭ್ರಮದಲ್ಲಿ ರೂಮಿಗೆ ಬಂದು ನಮಗೆ ತೋರಿಸಿದ. ಅವು , ಒಂದು ಬೇಲೂರು ಶಿಲಾಬಾಲಿಕೆಯಂತಾ ಪೌಡರ್ ಡಬ್ಬ ಮತ್ತು ಹದಿನೈದು ಕೆಜಿ ಅಕ್ಕಿ . ಅಕ್ಕಿಯಾದರೂ ಎಂತಾ ಕ್ವಾಲಿಟಿ....! ಹುಳುಗಳ ಮಧ್ಯೆ ಅಕ್ಕಿಯನ್ನು ಹುಡುಕಬೇಕಿತ್ತು.

ಆ ಕೆಲಸವೂ ಹೆಚ್ಚು ದಿನ ಬಾಳಿಕೆ ಬರಲಿಲ್ಲ. ಈಗ ಸೇರಿದ್ದು ಒಂದು ಅಕ್ಕಿ ಮಿಲ್ . ನಂತರದ್ದೆ ಸ್ವಲ್ಪ ಇಂಟರೆಸ್ಟಿಂಗ್ ಸ್ಟೋರಿ. ಸೇರಿದ ಕೆಲವೇ ದಿನಗಳಲ್ಲಿ ಇವನನ್ನು ನೈಟ್ ಶಿಫ್ಟ್ ಗೆ ಹಾಕಿದರು. ರಾತ್ರಿ ಹತ್ತರಿಂದ ಬೆಳಿಗ್ಗೆ ಆರರ ವರೆಗೆ ಕೆಲಸ. ನಾಲ್ಕು ದಿನ ರಾತ್ರಿ ನಿದ್ದೆ ಗೆಟ್ಟು ಕೆಲಸ ಮಾಡಿದ . ಐದನೇ ದಿನದಿಂದ ತನ್ನ ಚಾಳಿ ಶುರುಮಾಡಿದ. ಕಳ್ಳತನದಲ್ಲಿ ಮಲಗಲು ವ್ಯವಸ್ತೆಯನ್ನು ತುಂಬಾ ವ್ಯವಸ್ತಿತವಾಗಿಯೇ ಮಾಡಿಕೊಂಡ.ಅಕ್ಕಿ ತುಂಬಲು ಬಳಸುವ ಎರಡು ಗೋಣಿಚೀಲ ತೆಗೆದು ಕೊಂಡು , ಒಂದರಲ್ಲಿ ಕಾಲನ್ನೂ, ಇನ್ನೊಂದರಲ್ಲಿ ತಲೆಯನ್ನೂ ತೂರಿಸಿಕೊಂಡು ಕ್ಯಾಪ್ಸೂಲ್ ತರದಲ್ಲಿ ಅಕ್ಕಿ ಮೂಟೆಗಳ ಸಂದಿಯಲ್ಲಿ ನಿದ್ದೆ ಹೊಡೆಯಲಾರಂಬಿಸಿದ. ಈ ಉಪಾಯ ಸುಮಾರು ದಿನ ನಡೆಯಿತು.

ಒಂದು ದಿನ ಇವನ ಗ್ರಾಚಾರಕ್ಕೆ... ಇನ್ಸ್ಪೆಕ್ಷನ್ನಿಗೆಂದು ಫ್ಯಾಕ್ಟರಿಯ ಜನರಲ್ ಮ್ಯಾನೇಜರ್ರೆ ಹಾಜರಿ ಪುಸ್ತಕ ಹಿಡಿದು ಬಂದರು. ಒಬ್ಬನ ಸುಳಿವಿಲ್ಲ . ಹುಡುಕಲು ಆಜ್ನೆಯಾಯಿತು.ಅಕ್ಕಿ ಮೂಟೆಗಳ ಸಂದಿಯಲ್ಲಿ ಗೊರಕೆ ಹೊಡೆಯುತ್ತಿದ್ದ ಕ್ಯಾಪ್ಸೂಲ್ ದತ್ತು ಸಿಕ್ಕಿ ಬಿದ್ದ . G.M. ತರಾಟೆಗೆ ತೆಗೆದು ಕೊಂಡರು. ಹುಷಾರಿರಲಿಲ್ಲ.....ಅದೂ ಇದೂ ಹೇಳಿ ಕಣ್ಣೀರುಗರೆದ. ವಾರ್ನ್ ಮಾಡಿ ಬಿಟ್ಟರು. ಈ ಸಲ ದತ್ತು ಬದುಕಿಕೊಂಡ.

ಆಮೇಲೆ ಕೆಲದಿನಗಳು ಸರಿಯಾಗೇ ಕೆಲಸ ಮಾಡಿದ . ನಾಯಿ ಬಾಲ ಯಾವತ್ತೂ ಡೊಂಕೆ ... ಅದಕ್ಕೆ ಅಪಚಾರ ಆಗಬಾರದಲ್ಲ.. ಈ ಸಲ ನಿದ್ದೆ ಮಾಡಲು ಹೊಸ ತಂತ್ರವೊಂದನ್ನು ಅಳವಡಿಸಿಕೊಂಡ.ಅಕ್ಕಿ ಮೂಟೆಗಳ ಸಾಗಣಿಕೆಗೆಂದು ಲಾರಿಗಳು ನಿಂತಿರುತ್ತಿದ್ದವಲ್ಲಾ... ಲಾರಿಯಲ್ಲಿ ಮಲಗಲು ಶುರು ಮಾಡಿದ .ದಿಕ್ಕು ದೆಸೆ ಇಲ್ಲದ ದತ್ತು ಸ್ಟೇರಿಂಗ್ ಕಡೆ ಕಾಲಿಡಬೇಕೋ ,ತಲೆಯಿಡಬೇಕೋ ಒಂದೂ ಯೋಚಿಸದೆ ಮಲಗಿ ಗೊರೆಯುವುದೊಂದೇ ಮಾಡಿದ. ಒಂದಿನ ನಿದ್ರೆಯ ಭರದಲ್ಲಿ ಇವನ ಕಾಲು ಲಾರಿಯ ಹಾರನ್ ಮೇಲೆ ಬಿತ್ತು. ಪೊಂ .......... ........ ......... ಹಾರನ್ ಹೊಡೆದು ಕೊಳ್ಳತೊಡಗಿತು. ದತ್ತುಗೆ ಎಚ್ಚರವಾಗಿ ಗಡಿಬಿಡಿಯಾಗಿ ಶಬ್ಧವನ್ನು ನಿಲ್ಲಿಸಲು ನೋಡಿದ. ಊಹೂ .... ಹಾರನ್ ಸ್ಟ್ರಕ್ ಆಗಿಬಿಟ್ಟಿತ್ತು .

ಸೆಕ್ಯುರಿಟಿಯವರೆಲ್ಲ ಅಲರ್ಟ್ ಆದರು.ಶಬ್ದ ಬರುತ್ತಿರುವ ಲಾರಿಯ ಸಮೀಪ ಬರತೊಡಗಿದರು.ದತ್ತುಗೆ ಭಯವಾಗತೊಡಗಿ ಗೊಂದಲದಲ್ಲಿ ಏನು ಮಾಡಬೇಕೆಂದು ತೋಚದೆ ಬೆಡ್ ಶೀಟ್ ಮುಚ್ಚಿಕೊಂಡು ಓಡತೊಡಗಿದ. ಹಾಗೆಯೇ ಸಿಕ್ಕುಬಿದ್ದ.ಯಾರೆಂದು ನೋಡುವುದಕ್ಕಿಂತ ಮೊದಲು ಗುದ್ದುಗಳು ಬಿದ್ದವು. ಅಯ್ಯಯ್ಯೋ.... ಬಿಡಿ ನಾನು ದತ್ತಾತ್ರೇಯ..... ಎಂದು ಗೋಳಿಟ್ಟ. ಈ ಸಲ ಯಾವ ತಂತ್ರವೂ ನಡೆಯಲಿಲ್ಲ. ಆನ್ ದಿ ಸ್ಪಾಟ್ .... ಸಸ್ಪೆಂಡ್ ಆಯಿತು.

ಮುಖ ಒಣಗಿಸಿಕೊಂಡು ರೂಮಿಗೆ ಬಂದು ಬಿದ್ದುಕೊಂಡ. ಎರಡು ದಿನ ರೂಮಿನಲ್ಲಿಯೇ ಇದ್ದುದನ್ನು ಕಂಡು ನಾವು ಕೇಳಿದೆವು . ಈ ಕಥೆಯೆಲ್ಲಾ ಹೇಳಿದ.ಸಿಕ್ಕಿಹಾಕಿಕೊಂಡೆ ....ಎಂದು ಪಶ್ಚಾತ್ತಾಪ ಪಟ್ಟ ಹೊರತೂ ಬುದ್ದಿ ಕಲಿತ ಮಾತಾಡಲಿಲ್ಲ.

ನಂತರ ಇನ್ನೊಂದು ಕಡೆ ಕೆಲಸಕ್ಕೆ ಸೇರಿ , ಅಲ್ಲಿ ಫ್ಯಾಕ್ಟರಿಯ ಪಾಸ್ ಬುಕ್ ಕದ್ದು , ಪೋಲೀಸ್ ಕಂಪ್ಲೇಂಟ್ ಆಗಿ, ಪೊಲೀಸರು ರೂಮಿನ ತನಕ ಬಂದದ್ದೂ ಆಯ್ತು. ನಮ್ಮ ರೂಂ ಓನರಿಗೆ ದತ್ತು ನಮ್ಮ ರೂಮಿನಲ್ಲಿರುವ ಬಗ್ಗೆ ಗೊತ್ತಿರಲಿಲ್ಲವಾದ್ದರಿಂದ ದತ್ತಾತ್ರೇಯ ಎನ್ನುವವರು ಯಾರೂ ಇಲ್ಲಿಲ್ಲ ಎಂದು ಕಳಿಸಿ ಬಿಟ್ಟ.ಸಧ್ಯ ಬಚಾವಾದ..!

ನಮಗೆ ಇವನ ಸಹವಾಸ ಸಾಕಾಗಿ ಹೋಗಿತ್ತು.ಅವನ ಕೈಚೀಲ,ಹಾಸಿಗೆ ಹೊರಗಿಟ್ಟು,'' ನಾವು ರೂಂ ಬದಲಾಯಿಸುತ್ತಿದ್ದೇವೆ ನಿನಗಿಲ್ಲಿ ಅವಕಾಶವಿಲ್ಲ . ''ಎಂದು ಕಳಿಸುವಷ್ಟರಲ್ಲಿ ಹೈರಾಣವಾಗಿದ್ದೆವು. ಜೀವನದಲ್ಲಿ ಗೊತ್ತು ಗುರಿಯಿಲ್ಲದೆ, ಸ್ಥಿರತೆಯಿಲ್ಲದೆ, ಹೋದಲ್ಲೆಲ್ಲಾ ಒಂದೊಂದು ಭಾನಗಡಿ ಮಾಡಿಕೊಳ್ಳುವ ದತ್ತಾತ್ರೇಯ ಅಲ್ಲಿ ಇಲ್ಲಿ ಕೆಲಸ ಮಾಡಿ ಯಾವುದೂ ಬರಕಾಸ್ತಾಗದೆ, ಊರು ಸೇರಿಕೊಂಡಿದ್ದಾನೆ.ಹುಟ್ಟು ಗುಣ ಸುಟ್ಟರೂ ಬಿಡ... ಎಂಬಂತೆ ಯಡವಟ್ಟು ಮಾತಾಡುತ್ತಾ , ಹುಚ್ಚನಂತೆ ಅಲ್ಲಿ ಇಲ್ಲಿ ಅಲೆಯುತ್ತಿದ್ದಾನೆ.

ಆದರೆ ಜೀವನದಲ್ಲಿ ಹೇಗಿರಬಾರದು ಎಂಬುದನ್ನು ಕಲಿಸಿದ ಆತ ನಿಜವಾಗೂ ನನ್ನ ಗುರು......!

(ಈ ಮೇಲೆ ಬರೆದಿದ್ದೆಲ್ಲ ನನ್ನವರು ನನಗೆ ಹೇಳಿದ ಅನುಭವ ಕಥನ.)