Monday, December 21, 2009

ನನ್ನ ಕನ್ನಡ ಪ್ರೇಮ....!!..?

ಅಯ್ಯೋ ... ನವೆಂಬರ್ ಕಳೆದು, ಡಿಸೆಂಬರ್ ಕೂಡಾ ಮುಗಿಯುತ್ತಿದೆ , ಇನ್ನೂ ಕನ್ನಡ ಕನ್ನಡ ಎಂದು ಗೋಳಿಡುವುದನ್ನು ನಿಲ್ಲಿಸಿಲ್ಲವೆನ್ರೀ ....ಅಂದರೆ ಹುಷಾರ್ ... ಜಗಳ ಮಾಡಿಬಿಡುತ್ತೇನೆ....!!

ನೋಡಿ ಇವರೇ... ನನ್ನ ಮಕ್ಕಳಿಗೆ ದಿನಾಲೂ ರಾತ್ರೆ ಮಲಗುವಾಗ ಕಥೆ ಕೇಳುವ ಅಭ್ಯಾಸ. ಶಿಶಿರನಂತೂ,'' ಅಮ್ಮಾ ಇವತ್ತು ಬರೀಮೂರು ಕಥೆ ಹೇಳಿದರೆ ಸಾಕು, '' ಎನ್ನುತ್ತಾನೆ.....! ಮಕ್ಕಳಿಗೆ ಕಥೆ ಹೇಳಲು ಸಾಕಷ್ಟು ಪ್ರಾಕ್ಟೀಸ್ ಬೇಕಾಗುವುದು. ಹಗ್ಗದ ಮೇಲೆ ನಡೆದ ಹಾಗೆ.ಶುರು ಮಾಡಿದ ಕಥೆಯನ್ನು ಪೂರಾ ಕೇಳಿದ ಮೇಲೆ , 'ಇದು ಬೇಡ , ಬೇರೆಯದು ಹೇಳು... ' ಎನ್ನುತ್ತಾರೆ.ನಿನ್ನೆ ಹೇಳಿದ ಕಥೆಯನ್ನೇ ಮತ್ತೆ ಹೇಳುವುದಾದರೆ , ಸ್ವರ , ಧಾಟಿ ,ಕಥೆಯ ಶೈಲಿ ಸಂಯೋಜನೆಯಲ್ಲಿ ಚೂರೂ ಮುಕ್ಕಾಗದ ರೀತಿಯಲ್ಲಿಯೇ ಹೇಳಬೇಕು. ಸ್ವಲ್ಪ ವ್ಯತ್ಯಾಸವಾದರೂ ,'ನೀನು ಸುಳ್ಳು ಸುಳ್ಳೇ ಕಥೆ ಹೇಳುತ್ತೀಯ , ' ಎಂಬ ಆರೋಪ ಬೇರೆ.

ಕೆಲವೊಮ್ಮೆ ಕಥೆ ಹೇಳೀ ಹೇಳೀ ನನಗೆ ಬೇಸರ ಬಂದು ನನ್ನವರಿಗೆ ಮಧುರ ಶಿಕ್ಷೆಯನ್ನು ವರ್ಗಾಯಿಸುತ್ತೇನೆ. ಮಕ್ಕಳಿಗೆ ಅಪ್ಪನಕಥೆಯ ವಿಶೇಷತೆಯೇ ಬೇರೆ.......!!!!

ಅಪ್ಪನ ಕಥೆಯಲ್ಲಿ ಬರುವ ಕರ್ಣನ ಕೈಯಲ್ಲಿ A.K. 47 ಇರುತ್ತದೆ... ಅರ್ಜುನ ಸ್ಟೇನ್ ಗನ್ ನಿಂದ ಡಗ...ಡಗ ....ಡಗ..... ಶೂಟ್ ಮಾಡುತ್ತಿರುತ್ತಾನೆ.
ಘತೊತ್ಕಜನ ಬಾಯಿಯಿಂದಂತೂ ಬಾಂಬುಗಳ ಸುರಿಮಳೆ.... !!!
ಭೀಮ ಬಕಾಸುರನಿಗೆ ಒಯ್ಯುವ ಬಂಡಿಯಲ್ಲಿ ಗೋಬಿಮಂಚೂರಿ , ಕಾಶ್ಮೀರಿ ಪುಲಾವ್ , ಟೊಮ್ಯಾಟೋ ಸೂಪ್, ಪಾನಿಪೂರಿ ಇನ್ನಿತರಚಾಟ್ಸ್ ಮತ್ತು ಕೊನೆಯಲ್ಲಿ ಚಾಸ್ [ಮಜ್ಜಿಗೆ] ಇರುತ್ತವಲ್ಲಾ....!
ಗೀತೋಪದೇಶದ ಕೃಷ್ಣ '' worry ಮಾಡ್ಕೋಬೇಡ, ಹೇಳೋದ್ ಸ್ವಲ್ಪ ಕೇಳ್ರಾಜಾ.. ಅನ್ನುತ್ತಾನೆ ಅರ್ಜುನನಿಗೆ.. !
ಕರಡಿ u.p.s. ಮಾರಲು ಹೊರಡುತ್ತದೆ. ಬೆಕ್ಕಿಗೆ ವಿಸಿಟಿಂಗ್ ಕಾರ್ಡ್ ಕೊಡುವುದು. ಕೊಟೇಶನ್ ರೆಡಿ ಮಾಡುವುದು ಮತ್ತು ಬಿಲ್ಕೊಡುವುದು .


ಮಕ್ಕಳಿಗೆ ಅಪ್ಪನ ಕಥೆ ಕೇಳಲು ಮಜಾ ಬರುತ್ತದೆ. ಆದರೆ ಪೂರಾ ಕೇಳಿದ ಮೇಲೆ ಶಿಶಿರನಿಗೆ ಸಂಶಯ ಉಂಟಾಗಿ , 'ಅಮ್ಮಾ ನೀನು ಸರಿಯಾಗಿ ಹೇಳು '... ಎಂದು ನನ್ನ ಕಡೆ ತಿರುಗುತ್ತಾನೆ.ಐಶು ಹೇಳಿಟ್ಟಿದ್ದಾಳೆ , ಪುರಾಣದ ಕಥೆಯಲ್ಲಿ ಬಿಲ್ಲು , ಬಾಣ ಮಾತ್ರ ಇತ್ತು ಅಂತ. ಸಮಸ್ಯೆ ಮತ್ತೆ ನನ್ನ ಸುತ್ತಲೇ ಸುತ್ತ ತೊಡಗುತ್ತದೆ.

ನನ್ನ ಸರಕೆಲ್ಲಾ ಖರ್ಚಾದ ಕಾರಣ ಇದಕ್ಕೊಂದು ಪರಿಹಾರ ಕಾಣಿಸಲು ಹೊಸ ಕಥೆಗಳ ಅನ್ವೇಷಣೆಗೆ ಹೊರಟೆ ಪುಸ್ತಕದಂಗಡಿಗೆ.
ಹತ್ತಿರದಲ್ಲಿರುವ ಅಂಗಡಿಯಲ್ಲಿ ದೊರಕುವ ಪುಸ್ತಕಗಳು ನನ್ನಲ್ಲಿಯೂ ಇರುವುದರಿಂದ , ಬೇರೊಂದು ಮಿನಿ ಮಾಲ್ ಗೆ ಹೋದೆ .. ಬುದ್ಧಿವಂತಳಂತೆ....
ಸಣ್ಣ ಪುಟ್ಟ ವಸ್ತುಗಳನ್ನು ಆಯ್ಕೆ ಮಾಡಿಕೊಂಡು , ಪುಸ್ತಕಗಳೇನಾದರೂ ಇವೆಯಾ ಅಂತ ಕಣ್ಣು ಹಾಯಿಸಿದೆ .. ಪಕ್ಕದ ಸ್ಟ್ಯಾಂಡಿನಲ್ಲಿ ಅರ್ಧ ಇಂಚು ದಪ್ಪದ ರಟ್ಟಿನ ಇಂಗ್ಲೀಷ್ ಪುಸ್ತಕಗಳು ಕಣ್ಣು ಕುಕ್ಕುತ್ತಿದ್ದವು . '' ಕನ್ನಡ ಕಥೆ ಪುಸ್ತಕಗಳು ಎಲ್ಲಿವೆ ...?'' ಅಂತ ಕೇಳಿದಾಗ ಸೇಲ್ಸ್ ಬಾಯ್ ನನ್ನ ವಿಚಿತ್ರವಾಗಿ ನೋಡಿದ .
''ಇಂಗ್ಲೀಶ್ ಬುಕ್ಸ್ ತಗೊಳ್ಳಿ ಮೇಡಂ ... ಯಾವುದು ಕೊಡಲಿ ....? ''
''ಕನ್ನಡ ಪುಸ್ತಕಗಳು ಇಲ್ವೇನ್ರೀ....?''
''ಇಲ್ಲ ಮೇಡಂ ''
''ಯಾಕಿಟ್ಟಿಲ್ಲ....''? ತರ್ಸಿ ...
ಕಾರಣಗಳು ಸಾವಿರಾರು
''ಇಲ್ಲ ಮೇಡಂ, ಕನ್ನಡ ಪುಸ್ತಕ ಯಾರೂ ಕೇಳಲ್ಲ ,
ಖರ್ಚಾಗಲ್ಲ,
ಪುಬ್ಲಿಶರ್ಸ್ ಕಳಿಸಿ ಕೊಡಲ್ಲ ,''
''ಅರೆ... ನೀವು ಆರ್ಡರ್ ಕೊಟ್ರೆ ಯಾಕೆ ಕಳ್ಸಿ ಕೊಡೋಲ್ಲಾರೀ.....?
ಇಲ್ಲ ಮೇಡಂ , ಅವ್ರು rack ಕೊಡೊಲ್ಲಾ ಮೇಡಂ ....
ನನಗೆ ಸಿಟ್ಟಿನಿಂದ ಮೂರ್ಚೆ ಬರುವುದೊಂದೇ ಬಾಕಿ.
'' ಇದೂ ಒಂದು ಕಾರಣಾ ಏನ್ರೀ.... ? ಏನ್ ಹೇಳ್ತಾ ಇದೀರಾ ... ಇದೆ rack ನಲ್ಲೆ ಇಡಬಹುದಲ್ಲಾ.....ನಾನು ಯಾವ ಮಹಾ ಪುಸ್ತಕಗಳನ್ನು ಕೇಳಿದೆ... ? ಮಕ್ಕಳ ಕಥೆ ಪುಸ್ತಕವಪ್ಪಾ ... ಅದೇ ತರದ ಇಂಗ್ಲೀಶ್ ಪುಸ್ತಕ ಇಟ್ಟಿದ್ದೀರಲ್ರೀ...ಇದು ಯಾವ ರಾಜ್ಯಾರೀ ಕನ್ನಡ ಯಾರೂ ಕೇಳಲ್ಲ ಅನ್ನೋದಕ್ಕೆ..ಬೆಂಗಳೂರೇನು ಅಮೆರಿಕಾದಲ್ಲಿದೆಯಾ....? ಸ್ವಲ್ಪಾ ಆದರೂ ಅಭಿಮಾನ ಬೇಡ್ವಾ... ಇಲ್ಲೇ ವ್ಯಾಪಾರ ಮಾಡ್ತೀರ . ಕನ್ನಡದೊರೆಯೇ ಬೇಕು ಇವೆಲ್ಲ ವಸ್ತು ಖರೀದಿಸಲಿಕ್ಕೆ ....... ಅಮೇರಿಕಾದವರು ಬರುತ್ತಾರಾ.. ಇಂಗ್ಲೀಶ್ ಪುಸ್ತಕ ಕೊಂಡೊಯ್ಯೋದಕ್ಕೆ... ? ''
'' ಮೇಡಂ ತರ್ಸಿ ಕೊಡ್ತೀವಿ ಮೇಡಂ, ಇಂಗ್ಲೀಶ್ ಪುಸ್ತಕ ಚೆನ್ನಾಗಿದೆ ನೋಡಿ , ಮೇಡಂ ''

ಅಂಗಡಿಯಿಂದ ಹೊರಬಂದೆ. ಇಂಗ್ಲೀಶ್ ಕಥೆ ಪುಸ್ತಕ ಕೊಂಡು ನಾನು ಓದಿಕೊಂಡು ಅದನ್ನು ಕನ್ನಡಕ್ಕೆ ಭಾಷಾಂತರಿಸಿ ಮಕ್ಕಳಿಗೆ ಕತೆ ಹೇಳಬೇಕೇ.... ನಾನು ....? ಆಗದು ... ಆಗದು ... ಕನ್ನಡ ಪುಸ್ತಕವೇ ಬೇಕು....
ಬೆಂಗಳೂರಿಗೆ ಕನ್ನಡ ಅಲರ್ಜಿಯಾ......ಗೊತ್ತಾಗುತ್ತಿಲ್ಲಾ. ಕರುನಾಡಿನ ರಾಜಧಾನಿಯಲ್ಲಿ ಕನ್ನಡಕ್ಕೆ ಇಂತಾ ಅವಸ್ತೆ.ಕನ್ನಡ ಮಾತಾಡುವವರನ್ನು ಕಂಡರೆ ಅಸಡ್ಡೆ. ಕನ್ನಡದಲ್ಲಿ ಸಾಹಿತ್ಯ ರಚನಾಕಾರರಿಗೆ ಬರವಿಲ್ಲ . ಸಾಹಿತ್ಯಾಸಕ್ತರಿಗೂ .... ಕನ್ನಡ ಪುಸ್ತಕ ಮಾರಾಟ ಮಳಿಗೆಗಳ ಕೊರತೆ ಇದೆ ಅಷ್ಟೇ.
ಮತ್ತೆರಡು ಅಂತದೆ ಕುಲಮಳ್ಳಾ ಮಿನಿ ಮಾಲಿಗೆ ಹೋದೆ .. ನೋಡೋಣ ಇಲ್ಲಿ ಹೇಗೆ ಅಂತಾ .....ಅಲ್ಲೂ ಹಾಗೆಯೇ..

ನನಗೆ ಭಾಷಾಂಧತೆ ಏನಿಲ್ಲ. ಯಾವ ಭಾಷೆಯೇ ಇರಲಿ ,ಮಕ್ಕಳಿಗೆ ಮಾತೃಭಾಷೆಯಲ್ಲಿ ಭಾವನೆ ಅರ್ಥವಾಗುವಷ್ಟು ಚೆನ್ನಾಗಿ ಬೇರೆ ಭಾಷೆಯಲ್ಲಿ ಆಗುವುದಿಲ್ಲ.
ಇಂಗ್ಲೀಶ್ ಒಂದು ತರಾ ಮಾಯಾವೀ ಭಾಷೆ. ಬೆಂಗಳೂರಿಗರಿಗೆ ಅಡಿಕ್ಷನ್. ರಾಜ್ಯದ ಉಳಿದ ಭಾಗಗಳಲ್ಲಿ ಚಟ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ. ಹೊರನಾಡಿನಲ್ಲಿ ನೆಲೆಸಿರುವ ಎಷ್ಟೋ ಕನ್ನಡದ ಮಂದಿ ಕನ್ನಡದ ಕಂಪನ್ನ , ಪೆಂಪನ್ನ ನೆನೆಸಿಕೊಳ್ಳುತ್ತಾರೆ.

ಮತ್ತೆ ಮರುವಾರ ಅದೇ ಅಂಗಡಿಗೆ ಹೋದೆ . ಬೆನ್ನು ಬಿಡದ ಬೇತಾಳದಂತೆ.

ಕನ್ನಡ ಪುಸ್ತಕ ಇರಲಿಲ್ಲ .ಮುಂದೆ ಮೂರು ಸಾರಿ ಹೋದಾಗಲೂ ಇದೆ ಕಥೆ. ಸಲ ಮತ್ತೆ ಚೆನ್ನಾಗಿ ಜಗಳ ಮಾಡಿದೆ . ಏನೇನು ಮಾತಾಡಿದೆನೋ... ನೆನಪಿಲ್ಲ ಅಷ್ಟು ಜೋರು ಜಗಳ..

ಅವನು ಪುಸ್ತಕವನ್ನೇ ಇಡದಿದ್ದಿದ್ದರೆ ನನಗೆ ಸಮಸ್ಯೆ ಏನಿರಲಿಲ್ಲ . ಇಂಗ್ಲೀಶ್ ಪುಸ್ತಕ ಇಡುವವನಿಗೆ ಕನ್ನಡ ಪುಸ್ತಕ ಇಟ್ಟರೆ ಆಗುವುದೇನು ಅನ್ನುವುದು ನನ್ನ ಪ್ರಶ್ನೆ. ಕೊಳ್ಳುವವರು ನಾವಿದ್ದೆವಲ್ಲಾ....ಪುಕ್ಕಟೆ ಕೊಡಿ ಅಂತ ಕೇಳಿದೆನಾ..? ಯಾವುದಾದರೂ ಮಾರುವುದು ತಾನೇ.

ಸಲ ನನ್ನವರೂ ನನ್ನ ಜಗಳಕ್ಕೆ ಜೊತೆಯಾಗಿದ್ದರು.
''ಇನ್ನು ನಿಮ್ಮ ಅಂಗಡಿಗೆ ಯಾವ ಕಾರಣಕ್ಕೂ ಬರುವುದಿಲ್ಲ , '' ಎಂದು ಪ್ರತಿಜ್ಞೆ ಮಾಡಿಯೇ ಹೊರಬಂದೆ .ಮಕ್ಕಳಿಗೆಂದು ಆಯ್ದುಕೊಂಡ ಚಾಕೊಲೆಟ್ ಸಹಾ ಅಲ್ಲೇ ಬಿಸಾಕಿ.....

ದಾರಿಯಲ್ಲಿ ನನ್ನವರಿಂದ ಅವಾರ್ಡ್ ಸಿಕ್ಕಿತು.. '' ಪರವಾಗಿಲ್ಲ ಕಣೆ ನೀನು , ಚೆನ್ನಾಗಿ ಜಗಳ ಮಾಡಿದೆ.. ನನ್ನೊಂದಿಗೆ ಮಾತ್ರಾ ಜಗಳ ಮಾಡುವುದು ಅಂದುಕೊಂಡಿದ್ದೆ, '' ಡ್ರೈವ್ ಮಾಡುತ್ತಿರುವವರ ಮುಖಭಾವ ಗೊತ್ತಾಗಲಿಲ್ಲ. ಮೀಸೆಯಡಿಯಲ್ಲಿ ತುಂಟನಗು ಇದ್ದಿರಲೇ ಬೇಕು.....!


ಸಾಧ್ಯವಾದರೆ ಪ್ರಪಂಚದ ಎಲ್ಲಾ ಭಾಷೆಗಳನ್ನೂ ಕಲಿಯೋಣ. ಎಲ್ಲಾ ತಾಯಂದಿರಿಗೂ ಮಗುವಾಗೋಣ . ಆದರೆ ಹೆತ್ತಮ್ಮನನ್ನು ಮರೆಯುವುದು ಎಷ್ಟು ಸರಿ. ಬೇರೆ ಭಾಷೆಗಳನ್ನು ಗೌರವಿಸೋಣ . ಮಾತೃ ಭಾಷೆಯನ್ನು ಬೆಳೆಸೋಣ. ಅಲ್ಲವೇ....?
ಅದೇ ಸಿಟ್ಟಿನಿಂದ ಈ ಸಲದ ಪುಸ್ತಕ ಪ್ರದರ್ಶನಕ್ಕೆ ಹೋದವಳು ನಾಲ್ಕು ಪುಸ್ತಕ ಹೆಚ್ಚಿಗೆ ಖರೀದಿ ಮಾಡಿದ್ದೇನೆ.....!!
ಆ ಪುಸ್ತಕಗಳಿಗೆ ಬೈಂಡ್ ಮಾಡುವಾಗ ಇದೆಲ್ಲಾ ನೆನಪಾಗಿ ಮತ್ತೆ ಸಿಟ್ಟು ಬಂತು..... ಅಷ್ಟೇ..

ನಾನು ಮತ್ತೆ ಬೇರೆ ಅಂಗಡಿಗಳಿಗೆ ಹೋಗುತ್ತೇನೆ.
ಕನ್ನಡ ಪುಸ್ತಕ ಕೇಳುತ್ತೇನೆ.
ಇರದಿದ್ದಲ್ಲಿ ಜಗಳ ಮಾಡಿ ಕಿರಿಕಿರಿ ಮಾಡುತ್ತೇನೆ. ತರದ ಅಂಗಡಿಗಳು ಒಂದಲ್ಲ ಒಂದು ದಿನ ಅರಿತುಕೊಳ್ಳಬಹುದು.
ಬಲ್ಲವರು ಕನ್ನಡಕ್ಕಾಗಿ ಕಹಳೆ ಊದುತ್ತಾರೆ.....
ನಾನು.... ಜಗಳ ಮಾಡುತ್ತೇನೆ.....!!!

ಯಾರಿದ್ದೀರಾ......? ನನ್ನ ಸಿಟ್ಟಿಗೆ ತುಪ್ಪ ಹೊಯ್ಯುವವರು......!
..

Wednesday, December 16, 2009

ಆಕಾಶವೇ ಮಿತಿಯೇ ......?

ಜಗತ್ತನ್ನು ಹೊಸ ದೃಷ್ಟಿಯಿಂದ ನೋಡುವುದು ...
ಹೊಸ ಹೊಳಹಿನೊಂದಿಗೆ ಹೊಸತರ ಸೃಷ್ಟಿ ...
ಪ್ರತಿಯೊಂದು ಕಡೆಯೂ ಹೊಸ ತನ ...!
ಇದು ಸೃಜನಶೀಲತೆಯಲ್ಲವೇ.......?
ಪ್ರಪಂಚದಲ್ಲಿ ಮನುಷ್ಯರಿಗೆ ಮಾತ್ರ ಒಲಿದಿರುವ ಕ್ರಿಯೇಟಿವಿಟಿ ಲೆಕ್ಕವಿಲ್ಲದಷ್ಟು ಹೊಸ ಆವಿಷ್ಕಾರಗಳಿಗೆ ಕಾರಣವಾಗಿದೆ. ವಿಜ್ಞಾನ ,ತಂತ್ರಜ್ಞಾನ, ಗಣಿತ, ಕಲೆ, ಸಾಹಿತ್ಯ,ವಾಸ್ತುಶಿಲ್ಪ , ವ್ಯಾಪಾರ ಹೀಗೆ ಜೀವನದ ಎಲ್ಲಾ ವಿಭಾಗಗಳಲ್ಲೂ ಮಾನವನ ಹೊಸತನ ದಿನೇ ದಿನೇ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದೆ.

ನಮ್ಮ ಮೆದುಳಿನಲ್ಲಿ ಕ್ರಿಯೇಟಿವಿಟಿ ಎಲ್ಲಿ ಹುಟ್ಟುತ್ತದೆ, ಗೊತ್ತೇ ....? ಮೆದುಳಿನ ಮುಂಬಾಗದಲ್ಲಿ . ಅದಕ್ಕೆ frontal lobe ಎನ್ನುತ್ತಾರೆ.ಜೊತೆಗೆ ಜಾಗ ನಿದ್ರೆ , ಮನಸ್ಥಿತಿ [mood] , ಖಿನ್ನತೆ ಮತ್ತು ಚಟಗಳು ಇವುಗಳಿಗೂ ಕಾರಣವಾಗಿದೆ.
ನೋಡಿ ಬೇಕಾದರೆ... ತುಂಬಾ ಕ್ರಿಯೇಟಿವ್ ಆಗಿರುವವರು ಮೂಡಿಗಳಾಗಿರುತ್ತಾರೆ.
ಉದಾ :ಪ್ರಸಿದ್ಧ ಭೌತಶಾಸ್ತ್ರಜ್ಞ ಅಇನ್ಸ್ಟೀನ್ . ಕೆಲವೊಮ್ಮೆ ಅವನಿಗೆ ತಾನ್ಯಾರು , ಎಲ್ಲಿಗೆ ಹೋಗುತ್ತಿದ್ದೇನೆ ಎನ್ನುವುದೇ ಮರೆತುಹೊಗುತ್ತಿತ್ತಂತೆ . ಆದರೆ ಅವನದು ಅದೆಂತಹಾ ಸೃಜನಶೀಲ ವ್ಯಕ್ತಿತ್ವ ಎನ್ನುವುದು ಲೋಕಕ್ಕೆಲ್ಲ ಪರಿಚಿತವಲ್ಲವೇ....?
ಆರ್ನೆಷ್ಟ್ ಹೆಮಿಂಗ್ವೆ .. ಆತ ಪ್ರಸಿದ್ಧ ಬರಹಗಾರ ಮತ್ತು ಕಲಾವಿದ , ಖಿನ್ನತೆಯಿಂದ ಬಳಲುತ್ತಿದ್ದು ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡನಂತೆ.
ಅನೇಕ ಕ್ರಿಯೇಟಿವ್ ವ್ಯಕ್ತಿಗಳು ತಮ್ಮ ಹುಚ್ಚುತನಕ್ಕೂ ಹೆಸರಾಗಿರುತ್ತಾರೆ. ಆರ್ಕಿಮಿಡಿಸ್ ಸಾಪೇಕ್ಷ ಸಾಂದ್ರತೆಯ ನಿಯಮ ಹೊಳೆದಾಕ್ಷಣ ಯುರೇಕಾ ....ಯುರೇಕಾ ....ಎನ್ನುತ್ತಾ ಸ್ನಾನಗೃಹದಿಂದ ಬೆತ್ತಲೆಯಾಗಿಯೇ ಬೀದಿಯಲ್ಲಿ ಓಡುತ್ತಾ ಅರಮನೆಗೆ ಹೋದ ಕತೆ ಗೊತ್ತಲ್ಲವೇ ...? ಕ್ರಿಯೇಟಿವಿಟಿ ಇರುವವರೆಲ್ಲಾ ಹೀಗೆಯೇ ಅಂತಲ್ಲ .. ...! ಜಾಗ ಹಾಗಿದೆ ಅಂತ...

ಸೃಜನಶೀಲತೆ ಆಥವಾ ಕ್ರಿಯೇಟಿವಿಟಿ ಅನ್ನುವುದು ಸೃಜನಶೀಲ ವ್ಯಕ್ತಿ , ಪರಿಸರ, ಕ್ರಿಯೆ ಮತ್ತು ಸೃಜನಶೀಲ ಉತ್ಪನ್ನ ಇವುಗಳಿಂದ ಕೂಡಿರುತ್ತದೆ.
ಒಬ್ಬ ವ್ಯಕ್ತಿ ಕ್ರಿಯೇಟಿವ್ ಆಗಿರಲು ಮಾಧ್ಯಮದಲ್ಲಿ ಹೆಚ್ಚಿನ ಬುದ್ಧಿಮತ್ತೆ ಅತ್ಯವಶ್ಯ.ಕ್ರಿಯೇಟಿವಿಟಿ ವಂಶದಲ್ಲಿ ಹರಿಯುತ್ತದೆ.ರೇಡಿಯಂ ಕಂಡುಹಿಡಿದ ಮೇರಿ ಕ್ಯೂರಿ ಮತ್ತು ಪೆಯರಿ ಕ್ಯೂರಿ ಮತ್ತು ಇವರ ಮಕ್ಕಳು ನೊಬೆಲ್ ಪುರಸ್ಕೃತರು.
ಸರ್ ಫ್ರಾಂಸಿಸ್ ಗ್ಯಾಲ್ಟನ್ ಎನ್ನುವವನು ಅನೇಕ ಪ್ರತಿಭಾಶಾಲಿಗಳ , ಪಂಡಿತರ ಜೀವನಚರಿತ್ರೆಗಳನ್ನು ಅಭ್ಯಾಸ ಮಾಡಿ ವಿಷಯವನ್ನು ಸ್ಪಷ್ಟ ಪಡಿಸಿದ್ದಾನೆ . Genius and productive creators ಬಗ್ಗೆ ಅಭ್ಯಾಸ ಮಾಡಿದ ಸ್ವತಹ ಗ್ಯಾಲ್ಟನ್ ಮತ್ತು ವಿಕಾಸವಾದದ ಚಾರ್ಲ್ಸ್ ಡಾರ್ವಿನ್ ಇಬ್ಬರೂ ರಕ್ತಸಂಬಂಧಿಗಳು.


ಸೃಜನಶೀಲತೆ ಎನ್ನುವುದು ಅಭ್ಯಾಸ ಮಾಡಿದಂತೆ ಹೆಚ್ಚುತ್ತಾ ಹೋಗುವುದು. ಉತ್ತಮ ರಿಸರ , ಪ್ರೇರಣೆ, ಬುದ್ಧಿಮತ್ತೆ, ಮತ್ತು ವ್ಯಕ್ತಿತ್ವ ಕ್ರಿಯೇಟಿವಿಟಿಯನ್ನು ಹೆಚ್ಚುಗೊಳಿಸಲು ಸಹಕರಿಸುತ್ತವೆ.

ಆಂತರಿಕ ಪ್ರೇರಣೆ , ಶಿಸ್ತು , ಸಂಯಮ , ಶ್ರದ್ಧೆ, ನಂಬಿಕೆ , ಉತ್ಕ್ರುಷ್ಟತೆಗೆ ಮೀಸಲಾದ ಜೀವನ ಶೈಲಿ , ಅಡತಡೆಗಳಿಗೆ ಹೆದರದೆ ಮುನ್ನುಗ್ಗುವ ಛಲ, ವಿಷಯದ ಬಗ್ಗೆ ಆಳವಾದ ಜ್ಞಾನ ,ಬದ್ಧತೆ ಗುಣಗಳೆಲ್ಲಾ ಸೃಜನಶೀಲ ವ್ಯಕ್ತಿಗಳಲ್ಲಿ ಅಡಕವಾಗಿರುತ್ತವೆ.


ಓಹೋ .. ಕೊರೆತ ಸಾಕು ಮಾಡಿ ವಿಷಯಕ್ಕೆ ಬನ್ನಿ ಅನ್ನುತ್ತೀರಾ.... ? ಕಳೆದ ಸಂಚಿಕೆ ಕೊನೆತುತ್ತು ಮರೆತಿಲ್ಲ ನಾನು.ಅದೂ ಕೂಡಾ ಸೃಜನಶೀಲತೆಗೊಂದು ಚಿಕ್ಕ ನಿದರ್ಶನ ಅನ್ನಲು ಇಷ್ಟೆಲ್ಲಾ ಪೀಠಿಕೆ ಅಷ್ಟೇ...

ಇದು ಒಂದು ಮದುವೆಯ ಆಹ್ವಾನ ಪತ್ರಿಕೆಯ ವಿನ್ಯಾಸವೆಂದರೆ ನಂಬುತ್ತೀರಾ....?
ಬಾಟಲಿಯ
ಕಾರ್ಕ್ ತೆಗೆದಾಗ ಸುರುಳಿ ಮಾಡಿದ ಕರೆಯೋಲೆಯಿತ್ತು. ಬಾಟಲಿಯ ಕುತ್ತಿಗೆಯಲ್ಲಿರುವ ಸಂಚಿಯಲ್ಲಿ ಸುಗಂಧ ಬೀರುವ ಗುಳಿಗೆಗಳು ಮತ್ತು ಮದುವೆ ನಡೆಯುವ ಸ್ಥಳದ ಮಾರ್ಗಸೂಚಿ .ಬಾಟಲಿಯ ಹೊರಮೈಗೆ ವಿವಾಹದ ವಿವರಗಳುಳ್ಳ ಲೇಬಲ್ ಅಂಟಿಸಿದ್ದಾರೆ. ಒಳಬಾಗದಲ್ಲಿ ಚೆಂದಕ್ಕೆ ಟಿಕಲಿಗಳು. ಎಷ್ಟು ಚೆನ್ನಾಗಿ concept workout ಮಾಡಿದ್ದಾರೆ ನೋಡಿ.. !

ಆಹ್ವಾನ ಪತ್ರಿಕೆಯೊಂದನ್ನು ಹೀಗೂ ಮಾಡಬಹುದು ಅನ್ನುವುದು ಇದನ್ನು ನೋಡಿದ ಮೇಲಷ್ಟೇ ನನಗರ್ಥವಾಯಿತು. ನನ್ನವರು ಮೊದಲು ಇದನ್ನು ತೋರಿಸಿದಾಗ ಏನೆಂದು ಗೊತ್ತಾಗದೆ ಬೇಸ್ತು ಬಿದ್ದಿದ್ದೆ ........! ನಿಮ್ಮ ಥರಾನೇ .......!!!

ಸೃಜನಶೀಲತೆಗೆ ಆಕಾಶವೇ ಮಿತಿಯಲ್ಲವೇ....? UNLIMITED CREATIVITY......!!!

ಕೊನೆತುತ್ತು : ಯಾರಿಗೂ ಫೋಟೋದಲ್ಲಿರುವುದು ಏನೆಂದು ಕಂಡುಹಿಡಿಯಲು ಸಾಧ್ಯವಾಗದಿದ್ದರೂ, ಸಾಕಷ್ಟು ತಲೆ ಕೆಡಿಸಿಕೊಂಡಿದಕ್ಕಾಗಿ ಯಾರಿಗೂ ಬೇಜಾರು ಮಾಡಬಾರದೆಂದು ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಗಿದೆ ......!!! ಬೇಕಷ್ಟು ಆಯ್ದುಕೊಳ್ಳಿ...!

Thursday, December 10, 2009

ಇದು ಶಂಕರಭಟ್ಟನ ಕ್ರಿಕೆಟ್ಟು...!

ನಮ್ಮನೆಯಲ್ಲಿ ಆಗಾಗ ಕೇರಂ ಆಡುತ್ತಿರುತ್ತೇವೆ . ಅ೦ದರೆ ವರ್ಷಕ್ಕೆರಡು ಮೂರು ಸಲ..!

ಹಾಗೆ ಹೇಳುವುದಾದರೆ ನಾವೆಲ್ಲಾ ಕೇರಂ ಆಟದಲ್ಲಿ ಶೂರರು.. .....ಆಡಲು ಶುರುಮಾಡಿದೆವೆಂದರೆ ಘಂಟೆಗಟ್ಟಲೆ ಆಡುತ್ತೇವೆ ...

ಒಂದೇ ಬೋರ್ಡನ್ನ..!!

ನಮ್ಮದೂ ಒಂದು ಸ್ಪೆಷಾಲಿಟಿ ಇದೆ ......?

ಪಾನುಗಳನ್ನು ಪೌಚಲ್ಲಿ ಬೀಳಿಸುವುದು .....ಎಲ್ಲರೂ ಆಡುತ್ತಾರೆ .ಅದೇನು ಮಹಾ.. ? ಹೇಗೆ ಹೊಡೆದರೂ ಪಾನು ಬೀಳದಂತೆ ಆಡುವುದು ವಿಶೇಷ ...!!! ಗೊತ್ತಾಯಿತೆ...? ನಾವು ಹಾಗೆ ಆಡುತ್ತೇವೆ. ಒಂದು ತರಾ ಕ್ಷೇಮ ಸಮಾಚಾರದ ಪತ್ರವಿದ್ದ ಹಾಗೆ..

ಪ್ರೀತಿಯ ............ಗೆ

ಇಲ್ಲಿ ನಾವೆಲ್ಲಾ ಕ್ಷೇಮ . ಅಲ್ಲಿ ನೀವೂ ಕೂಡಾ ಕ್ಷೇಮವೆಂದು ನಂಬಿದ್ದೇನೆ.ಇನ್ನೇನೂ ವಿಶೇಷಗಳಿಲ್ಲ . ಉಳಿದ ಸಮಾಚಾರಗಳು ಮುಂದಿನ ಪತ್ರದಲ್ಲಿ ಅಥವಾ ಸಿಕ್ಕಾಗ.

ಇಂತಿ ನಿನ್ನ ಪ್ರೀತಿಯ
.....................


ಮುಂದಿನ ಪತ್ರ ಸಹಾ ಹೀಗೆಯೇ .... ಸ್ವಾರಸ್ಯವಿಲ್ಲದ್ದು.

ಆದರೆ ನಾವು ಕಾಲೇಜಿನಲ್ಲಿದ್ದಾಗ ನೀರಸದಲ್ಲಿಯೇ ರಸ ಹುಡುಕುವ ಪ್ರಯತ್ನ ಮಾಡುತ್ತಿದ್ದೆವು. ತರಗತಿಗೆ ಹೋಗುವ ಅವಸರದಲ್ಲಿದ್ದಾಗ , ಬೇರೆ ಕ್ಲಾಸಿನ ಗೆಳತಿಯರು ಸಿಕ್ಕರೆ ಅವಸರದಲ್ಲೇ ಹೇಳುವುದು..

ಪ್ರೀತಿಯ ಗೆಳತಿ ರೇವತಿ ...

ನಾನು ಕ್ಷೇಮ . ನೀನು ಕ್ಷೇಮವೆಂದು ನಂಬಿದ್ದೇನೆ . ಸಮಾಚಾರ ಹೇಳಲು ಪುರಸೊತ್ತಿಲ್ಲ. ಉಳಿದ ಸಮಾಚಾರಗಳು ಇನ್ನೊಮ್ಮೆ ಸಿಕ್ಕಾಗ.

ಇಂತಿ ನಿನ್ನ ಪ್ರೀತಿಯ ಗೆಳತಿ

.............

ಎನ್ನುತ್ತಾ ಕ್ಲಾಸಿನೊಳಗೆ ಓಡುವುದು...ಕಿರುನಗುತ್ತಾ...ಹೀಗಿರುವಾಗ ಅಂದು ಮಧ್ಯಾಹ್ನದ ಮೇಲೆ ನಾನು, ಐಶು ಮತ್ತು ನನ್ನವರು ಕೇರಂ ಆಡಲು ಕುಳಿತೆವು.ಐಶು ಪಾನನ್ನೆಲ್ಲಾ ಜೋಡಿಸಿಡುತ್ತಿದ್ದಳು.ಶಿಶಿರ ಮಲಗಿದ್ದವನು ಎದ್ದು ಬಂದ.


''ನನ್ನನ್ನು ಮಾತ್ರಾ ಆಟಕ್ಕೆ ಸೇರಿಸಿ ಕೊಳ್ಲೋಲ್ಲಾ... ''ಅವನದು ಗಲಾಟೆ.
''ಸರಿ , ಇಲ್ಲಿ ಕುಳಿತುಕೋ.''
''ಬೇಡಾ, ನಾನು ಐಶು ಕುಳಿತಲ್ಲಿಯೇ ಕುಳಿತುಕೊಳ್ಳುವುದು , ಐಶು ನೀ ಏಳು ... '' ಪಾಪ.. ಅವಳನ್ನು ಎಬ್ಬಿಸಿ ತಾನು ಅವಳ ಜಾಗದಲ್ಲಿ ಕುಳಿತ ..
''ನಾನೇ ಪಷ್ಟು .....ಆಡುವುದು ..''ಸ್ಟ್ರೈಕರ್ ತಗೊಂಡ . ಶಿಶಿರ ಬಂದನೆಂದರೆ ನಿಯಮಗಳೆಲ್ಲ ಗಾಳಿಗೆ .....ಐಶುಗು ಗೊತ್ತು ಅದು . ಅವಳು ನಗುತ್ತಾ .. ''ಆಡು ಪುಟ್ಟಾ....''
''ನೋಡೀಗ ಅಷ್ಟೂ ಪಾನೂ ನಾನೇ ಬೀಳಿಸ್ತೀನಿ, '' ಎಲ್ಲೆಲ್ಲೋ ಸ್ಟ್ರೈಕರ್ ಇಟ್ಟು ಅಂತೂ ಹೊಡೆದ.ಕೂಗಿದ ,''ಬಿತ್ತೂ,''
ಏನು ಬಿದ್ದಿದ್ದು.. ಡ್ಯೂ....!!!ಸ್ಟ್ರೈಕರ್ ಪೌಚಲ್ಲಿ ಬಿದ್ದಿತ್ತು.
ಅದೆಲ್ಲ ಅವನಿಗೆ ಗೊತ್ತಿಲ್ಲ. ಸ್ಟ್ರೈಕರ್ ಆದರೂ ಬೀಳಲಿ, ಏನಾದರೂ ಬೀಳಲಿ.ಬೋರ್ಡ್ ಮೇಲಿದ್ದ ನಾಲ್ಕು ಪಾನುಗಳನ್ನು'' ಇವಿಷ್ಟು ನಂದು ''ಎನ್ನುತ್ತಾ ಎತ್ತಿಟ್ಟುಕೊಂಡ.ನಮಗೆ ನಗು. ಇವರು ಹೇಳಿದರು , '' ಮಾರಾಯ, ನಿಂದು ಶಂಕರಭಟ್ಟನ ಕ್ರಿಕೆಟ್ಟು,''

''ಏನು..ಅದು ?''


''ನಾವೆಲ್ಲ ಹೈಸ್ಕೂಲಿನಲ್ಲಿದ್ದಾಗ ಕ್ರಿಕೆಟ್ ಮ್ಯಾಚ್ ನಡೆಯುತ್ತಿತ್ತು. ನಮಗೂ ,ಪಕ್ಕದೂರಿಗೂ ನಡುವೆ.ಅಲ್ಲೊಬ್ಬ ಭಯಂಕರ ಆಟಗಾರ , ಬ್ಯಾಟ್ಸಮನ್ .. ಶಂಕರಭಟ್ಟ ಅಂತ. ನಮ್ಮದೆಲ್ಲ ಅಡಿಕೆ ಮರದ ಬ್ಯಾಟು . ಅವನದು ಕಂಪನಿ ಬ್ಯಾಟು ..ಕಾಲಿಗೆ ಶೂ ಮತ್ತೆ ಪ್ಯಾಡು..ನಮಗೆ ಅದೆಲ್ಲಾ ಇರಲಿಲ್ಲ. ನಮ್ಮದೇನಿದ್ದರೂ ಹವಾಯಿ ಚಪ್ಪಲು .ಅಂವ ಬ್ಯಾಟ್ ಬೀಸುತ್ತಾ ಬರುವ ರೀತಿಗೆ ಎಂತಹಾ ಎದುರಾಳಿ ತಂಡದವರೂ ಹೆದರಿ ನಡುಗಬೇಕು...! ಹಾಗೆ. ಬಂದು ನಿಂತವನು ಗಂಬೀರ ವದನನಾಗಿ ಮೈದಾನವನ್ನೆಲ್ಲ ವೀಕ್ಷಿಸಿ, ಕವಾಯಿತು ಮಾಡುತ್ತಿದ್ದ... ಬ್ಯಾಟು ಬೀಸಿ,ಕೂತು, ಎದ್ದು..... ಹಾಗೂ ಸೊಂಟ ತಿರುವಿ...! ಥೇಟ್ ಭಾರತ ತಂಡದ ಆಟಗಾರರಂತೆ.


ಎದುರಿಗೆ ಬೌಲರ್ ಓಡುತ್ತಾ ಬಂದು ಫಾಸ್ಟ್ ಬೌಲಿಂಗ್ ಮಾಡಿದ,
ಹೋ ....... ......... ......... ......... .......... .......... ...........
....ಬ್ಯಾಟ್ ಬೀಸಿದ ಹೊಡೆತಕ್ಕೆ,........ ಎಲ್ಲರೂ ದಂಗಾಗಿ ಮೈದಾನದ ಹೊರಗೆ ನೋಡಿದರು.
ಬಾಲು ಬಿದ್ದಿದ್ದೆಲ್ಲಿ ಗೊತ್ತೇ............?
ಎಲ್ಲೋ ಅಲ್ಲ .. ವಿಕೆಟ್ಟಿಗೆ ತಾಗಿ ಕಾಲು ಬುಡದಲ್ಲಿ... !!!!!!!!!
ಹಾಗಾಯ್ತು ಶಿಶಿರಾ...."
ಐಶು ಗೆ ನಗು ತಡೆಯಲಾಗಲಿಲ್ಲ.


ತುಂಬಾ ತಯಾರಿ ನಡೆಸಿ ನಂತರ ವಿಫಲರಾದರೆ ನನ್ನವರು ಯಾವಾಗಲೂ ಹೀಗೆ ಹೇಳುತ್ತಾರೆ ,
ಇದು ಶಂಕರಭಟ್ಟನ ಕ್ರಿಕೆಟ್ಟು.....


ಕೊನೆ ತುತ್ತು : ಇದು ಏನು ?


ಕಂಡು ಹಿಡಿದವರಿಗೆ ಆಕರ್ಷಕ ಬಹುಮಾನವಿದೆ.....!!!!!

Sunday, December 6, 2009

ಗೀಳು

ಅವಳಿಗೆ ಕಥೆ ಪುಸ್ತಕದ ಗೀಳು....
ಇವನಿಗೆ ಸಿನಿಮಾದ ಗೀಳು...
ಅದು ಏನು ಕಂಪ್ಯೂಟರಿನ ಗೀಳು ನಿನಗೆ ....
ಈ ರೀತಿಯ ಮಾತುಗಳನ್ನು ನಾವು ಕೇಳಿರುತ್ತೇವೆ ಹಾಗು ಆಡಿರುತ್ತೇವೆ.ಈ ಮೇಲಿನ ತರದವು ಅತಿರೇಕಕ್ಕೆ ಹೋದಾಗ ಅದು ಗೀಳು ರೋಗ ಎಂದು ಪರಿಗಣಿಸಲ್ಪಡುತ್ತದೆ.

ಗೀಳು ರೋಗ..... ಇದೊಂದು ಮಾನಸಿಕ ತೊಂದರೆ''ಪುನರಾವರ್ತನೆಗೊಳ್ಳುವ ಆಲೋಚನೆಗಳಿಂದ ಆತಂಕ . ಹುಟ್ಟುತ್ತದೆ. ಆತಂಕವನ್ನು ಹತ್ತಿಕ್ಕಲು , ಅದರಿಂದ ಬಿಡುಗಡೆಗೊಳ್ಳಲು ವ್ಯಕ್ತಿ ಪುನರಾವರ್ತಿತ ಕ್ರಿಯೆಯಲ್ಲಿ ತೊಡಗುತ್ತಾನೆ.'' ಇದು ಆತಂಕದಿಂದ ಹುಟ್ಟುವ ಖಾಯಿಲೆ [anxiety disorder]
ಉದಾ : ಪದೇ ಪದೇ ಕೈ ತೊಳೆಯುವುದು. ದೇವರ ಪೂಜೆ ಮಾಡುತ್ತಲೇ ಇರುವುದು , ಬಾಗಿಲ ಅಗಳೀ ಹಾಕಿದೆಯೋ ಇಲ್ಲವೋ ಎಂದು ಪದೇ ಪದೇ ಪರೀಕ್ಷಿಸುವುದು , ಹಿಂಸಿಸುವ ಆಲೋಚನೆಗಳು. ಲೈಂಗಿಕ ಅಸಂಬದ್ಧತೆಗಳು, ..ಇತ್ಯಾದಿ ...

ಈ ತೊಂದರೆ ಹೆಂಗಸರಿಗಿಂತಾ ಗಂಡಸರಲ್ಲಿ ದುಪ್ಪಟ್ಟು ಹೆಚ್ಚು ಕಾಣಿಸಿಕೊಳ್ಳುತ್ತದೆ.ಪ್ರತಿಶತ ೨ ರಿಂದ ೩ ಜನರಲ್ಲಿ ಈ ಖಾಯಿಲೆ ಕಾಣಿಸಿಕೊಳ್ಳುತ್ತದೆ . ಈ ಗೀಳು ತೊಂದರೆಗೆ ಮೆದುಳಿನ ಅಸಮರ್ಪಕ ಬೆಳವಣಿಗೆ, ನರ ಚೋದಕಗಳ ಸ್ರವಿಸುವಿಕೆಯಲ್ಲಿನ ಏರು ಪೇರು, ಜೀನ್ ಗಳಲ್ಲಿನ ಮಾರ್ಪಾಡು [Gene mutation] ಕಾರಣಗಳಾಗಬಹುದು . ಅನುವಂಶೀಯವಾಗಿಯೂ ಬರಬಹುದು.

ಸ್ವಚ್ಚತೆಯ ಗೀಳು : ಈ ವ್ಯಕ್ತಿಗಳು ಪದೇ ಪದೇ ಕೈ ತೊಳೆಯುತ್ತಲೇ ಇರುವರು.ಬಾಗಿಲ ಹಿಡಿಕೆ ಮುಟ್ಟಿದರೆ , ಕೈ ಚೀಲ ಮುಟ್ಟಿದರೆ, ಕಡೆಗೆ ತಮ್ಮದೇ ತಲೆ, ಕೈ, ಕಾಲು ಮುಟ್ಟಿಕೊಂಡರೂ ತಕ್ಷಣ ಹೋಗಿ ಕೈ ತೊಳೆಯುತ್ತಾರೆ.ಕೈ ತೊಳೆಯುವುದಾದರೂ ಹೇಗೆ..? ಒಮ್ಮೆ ತೊಳೆದದ್ದು ಸರಿಯಾಗಿಲ್ಲವೇನೋ ಎಂಬ ಅನುಮಾನ ಕಾಡಿ ಮತ್ತೆ ಸಾಬೂನು ,ಡೆಟ್ಟಾಲ್ ಇತ್ಯಾದಿಗಳನ್ನೆಲ್ಲಾ ಉಪಯೋಗಿಸಿ ಕೈ ತೊಳೆಯುವುದು. ಹೀಗೆಯೇ ಅರ್ಧ ತಾಸು ಕೈ ತೊಳೆಯುತ್ತಲೇ ಇರುವರು. ಯಾವಾಗಲೂ ಕೈ ತೊಳೆಯುತ್ತಲೇ ಇರುವುದರಿಂದ ಚರ್ಮ ಸುಲಿದು ಹುಣ್ಣುಗಳಾಗಬಹುದು [Dermatitis].

ಬಾಗಿಲ ಹಿಡಿಕೆಯಲ್ಲಿ ರೋಗಾಣುಗಳಿರುತ್ತವೆ .ಅದನ್ನು ಮುಟ್ಟಿ ಕೈ ತೊಳೆಯದೇ ಉಳಿದ ಕಡೆ ಮುಟ್ಟಿದರೆ ರೋಗಾಣುಗಳು ಹರಡುತ್ತವೆ. ಎಲ್ಲರಿಗೂ ರೋಗ ಬರುತ್ತದೆ ಎನ್ನುವುದು ಇವರ ಸಮರ್ಥನೆ.ಬಾರಿ ಬಾರಿಗೂ ಕೈ ತೊಳೆಯುವುದು ಇವರ ಆತಂಕ ನಿವಾರಣೆಗಾಗಿ....! ಈ ರೀತಿ ಅರ್ಥ ಹೀನವಾಗಿ ವರ್ತಿಸುವುದು ಅವರ ಗಮನದಲ್ಲೇ ಇದ್ದರೂ ಬಿಡಲಾರರು.

ಹಿಂಸೆಯಲ್ಲಿ : ಕೆಲವರಿಗೆ ಬೇರೆಯವರನ್ನು ಹಿಂಸಿಸಬೇಕೆನ್ನುವ ಆಲೋಚನೆಗಳು ಬರುತ್ತವೆ. ಆದರೆ ಇವರು ಹಿಂಸಾ ವಿನೋದಿಗಳಲ್ಲ. ಈ ರೀತಿ ಆಲೋಚನೆಗಳು ಬರುತ್ತವೆ ಎಂದು ಸ್ವತಹ ಆತಂಕಕ್ಕೊಳಗಾಗುತ್ತಾರೆ.

ವಸ್ತುಗಳ ಸಂಗ್ರಹ [compulsive hoarding] : ಇದು ಒಂದು ತರಹ ಅನುಪಯೋಗಿ ವಸ್ತುಗಳ ಮೇಲಿನ ಮೋಹ. ನಾವು ಯಾವ ವಸ್ತುಗಳನ್ನು ಕಸ ಎಂದು ತೊಟ್ಟಿಗೆ ಎಸೆಯುತ್ತೆವೋ ಅಂತಹಾ ವಸ್ತುಗಳೆಲ್ಲವೂ ಈ ವ್ಯಕ್ತಿಗೆ ಅತ್ಯಮೂಲ್ಯವಾದುದಾಗಿರುತ್ತದೆ.ಕೋಣೆಯ ತುಂಬಾ ಹಳೆ ಪೇಪರ್ ರಾಶಿ, ಗೋಣಿ ಚೀಲಗಳು, ಹರಕು ಬಟ್ಟೆ ,ಒಡಕು ಡಬ್ಬ ,ಹಣ್ಣುಗಳ ಸಿಪ್ಪೆ,ಹೀಗೆ ಎಲ್ಲಾ ರೀತಿಯ ಕಸಗಳನ್ನೂ ಕೂಡಿಟ್ಟುಕೊಂಡಿರುತ್ತಾರೆ.ಈ ಕೊಳಕುತನದಿಂದಾಗಿ ದುರ್ವಾಸನೆ ಮತ್ತು ಇಲಿಗಳ ಒಡನಾಟ ಸಾಕಷ್ಟಿರುತ್ತದೆ. ಯಾವಾಗಲಾದರೂ ಬೇಕಾಗಬಹುದು ಎಂಬ ದೂರದೃಷ್ಟಿ....! ಬೇರೆಯವರಿಂದ ಕಡ ತಂದ ವಸ್ತುಗಳನ್ನು ಹಿಂತಿರುಗಿಸಲಾರದ ವ್ಯಾಮೋಹ .. ಮತ್ತು ಕೆಲವೊಮ್ಮೆ ಕಳ್ಳತನದ ಸ್ವಭಾವ [kleptomania]ವನ್ನು ಸಹಾ ಹೊಂದಿರುತ್ತಾರೆ.ಯಾವುದೇ ಭಾವನಾತ್ಮಕ ಸಂಬಂಧವಿರದಿದ್ದರೂ ಕೂಡಾ ಹಾಳಾದ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿರುತ್ತಾರೆ. ಅವು ವಸ್ತುಗಳಾಗಲೀ,ಪ್ರಾಣಿಗಳಾಗಲೀ, ಹಣವಾದರೂ ಆಗಲಿ. ಅನಗತ್ಯ ಸಂಗ್ರಹ ಒಂದು ಗೀಳೇ......

ಲೈಂಗಿಕತೆಯಲ್ಲಿ ಗೀಳು [sexual obsessions] : ಈ ಗೀಳಿರುವವರಲ್ಲಿ ಅವರಿಗೆ ಯಾವ ವ್ಯಕ್ತಿಯೇ ಇರಲಿ, ಅಪರಿಚಿತರು,ಬಂಧುಗಳು, ಮಕ್ಕಳು, ಸಹವರ್ತಿಗಳು, ಪೋಷಕರು,ಅಲ್ಲದೆ ಪ್ರಾಣಿಗಳ ಜೊತೆಯಲ್ಲಿ ಕೂಡ ಲೈಂಗಿಕತೆಗೆ ಸಂಬಂಧಿಸಿದ ಅರ್ಥಹೀನ ಯೋಚನೆಗಳು ಪದೇ ಪದೇ ಬರ ತೊಡಗುತ್ತವೆ.ಇಂತಹಾ ಆಲೋಚನೆಗಳಿಂದ ಆತಂಕಕ್ಕೊಳಗಾಗಿ ಕೀಳರಿಮೆಯಿಂದ ತನ್ನನ್ನೇ ಟೀಕಿಸಿಕೊಳ್ಳತೊಡಗುತ್ತಾನೆ. ಸದಾ ಆತಂಕದಲ್ಲಿಯೇ ಇರುವುದರಿಂದ ಲೈಂಗಿಕ ಅಸಾಮರ್ಥ್ಯ ಕಾಣಿಸಿಕೊಳ್ಳುತ್ತದೆ. ಮತ್ತೆ ಆತಂಕ.....ತಾನೇನಾದರೂ ಸಲಿಂಗ ಕಾಮಿಯಿರಬಹುದೇ... ? ಸಂಗಾತಿಯೊಂದಿಗಿನ ನಿರಾಸಕ್ತಿ ಈ ರೀತಿಯ ಆಲೋಚನೆಗಳಿಗೆ ಕಾರಣವಾಗುತ್ತದೆ.
ಕೆಲವೊಮ್ಮೆ ಹೀಗೂ ಇರುತ್ತದೆ . ಈ ಗೀಳಿರುವವರು ಯಾವುದೇ ಹೆಂಗಸಿನೊಂದಿಗೆ ಹಸ್ತಲಾಘವ ಮಾಡಲು ಹಿಂಜರಿಯುತ್ತಾರೆ.ಕಾರಣ... ಇದರಿಂದ ಹೇಗಾದರೂ [?] ಆಕೆ ಗರ್ಭಿಣಿಯಾಗಿಬಿಟ್ಟರೆ........??? ಹೀಗೆಲ್ಲಾ ಆಗುವುದಿಲ್ಲ ಎನ್ನುವುದು ಗೊತ್ತಿದ್ದರೂ ಕೂಡ ತಮ್ಮ ಆಲೋಚನೆಯನ್ನು ಹತ್ತಿಕ್ಕಲಾರದವರಾಗುತ್ತಾರೆ.

ಈ ಗೀಳು ರೋಗದವರಿಗೆ ತಮ್ಮ ಆಲೋಚನೆಗಳೆಲ್ಲಾ ಅಸಂಬದ್ಧ ಎಂದು ಗೊತ್ತಾಗುತ್ತದೆ . ತಾವ್ಯಾಕೆ ಈ ರೀತಿ ವರ್ತಿಸುತ್ತೇವೆ ಎಂದು ಆತಂಕ ಪಡುತ್ತಲೇ ಮತ್ತೆ ಸಂಬಂಧಪಟ್ಟ ಕ್ರಿಯೆಯಲ್ಲಿ ತೊಡಗುತ್ತಾರೆ. ಮತ್ತೆ ಆತಂಕ..... ಮತ್ತೆ ಕ್ರಿಯೆ... ವರ್ತುಲದಲ್ಲಿ ಸಿಲುಕಿಕೊಳ್ಳುತ್ತಾರೆ.

ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಗೀಳುರೋಗ [obsessive compulsive disorder] ದವರಿಗೂ ಗೀಳು ವ್ಯಕ್ತಿತ್ವ [obsessive compulsive personality disorder] ದವರಿಗೂ ವ್ಯತ್ಯಾಸವಿದೆ.

ಗೀಳು ರೋಗದವರು ತಮ್ಮ ಆಲೋಚನೆಗಳು ಅರ್ಥವಿಲ್ಲದ್ದು ಎಂದು ಅರಿತಿರುತ್ತಾರೆ. ಆದರೆ ಅದನ್ನು
ಸರಿಪಡಿಸಿಕೊಳ್ಳಲಾರದವರಾಗಿರುತ್ತಾರೆ.

ಆದರೆ ಈ ಗೀಳು ವ್ಯಕ್ತಿತ್ವದವರದ್ದು ಮಾತ್ರಾ ಸ್ವಲ್ಪ ಕಷ್ಟವೇ .ಈ ವ್ಯಕ್ತಿಗಳು ಗೀಳು ರೋಗದ ಎಲ್ಲಾ ಲಕ್ಷಣಗಳನ್ನು ಹೊಂದಿದ್ದರೂ ಕೂಡಾ ಅದನ್ನು ಒಪ್ಪಿಕೊಳ್ಳಲಾರರು....!ಪ್ರತಿಯೊಂದರಲ್ಲೂ ಪರಿಪೂರ್ಣತೆ, ಅಚ್ಚುಕಟ್ಟುತನ ,ನಿಯಮ ಪರಿಪಾಲನೆ ಇವುಗಳನ್ನು ಅಗತ್ಯಕ್ಕಿಂತಲೂ ಹೆಚ್ಚು ನಿರೀಕ್ಷಿಸುತ್ತಾರೆ. ಹೀಗೇ ಇರಬೇಕು ಎಂಬ ಪೂರ್ವ ನಿರ್ಧಾರಿತರಾಗಿರುವ ಇವರು ಅದು ಸರಿಯಿಲ್ಲ ,ಇದು ಸರಿಯಿಲ್ಲ ಎಂಬ ಆತಂಕದಲ್ಲಿಯೇ ಯಾವಾಗಲೂ ಇರುತ್ತಾರೆ. ಅತಿ ನಿರೀಕ್ಷೆಯಿಂದ ಯಾವ ಕೆಲಸವನ್ನೂ ಪೂರೈಸಲು ಸಾಧ್ಯವಾಗುವುದಿಲ್ಲ.ಇದು ತಮ್ಮದೊಂದು ಖಾಯಿಲೆ ಎಂದು ಸುತರಾಂ ಒಪ್ಪಿಕೊಳ್ಳಲಾರರು. Perfectionist ಎಂಬ ಸ್ವಯಂ ಬಿರುದಿನಿಂದ ಕಂಗೊಳಿಸುತ್ತಿರುತ್ತಾರಲ್ಲ ....!!! ತಮ್ಮ ಕೆಲಸಗಳು ಎಷ್ಟು ಸರಿ ಎಂಬುದನ್ನೂ , ಕೈ ತೊಳೆಯದಿದ್ದರೆ ರೋಗ ಹೇಗೆ ಹರಡುತ್ತದೆ ಎನ್ನುವುದಕ್ಕೆ ಬೇಕಾದರೆ ಒಂದು ಘಂಟೆ ಉಪನ್ಯಾಸ ಕೊಡಬಲ್ಲರು . ದುಡ್ಡು ಕೂಡಿ ಇಡದಿದ್ದರೆ ಮುಂದೆ ಏನೇನು ಕಷ್ಟ ಅನುಭವಿಸ ಬೇಕಾಗುವುದೋ ಎಂಬ ಆತಂಕದಿಂದ ಖರ್ಚೇ [ಅತಿ ಮಿತ ] ಮಾಡದೆ ಕೂಡಿ ಇಡುತ್ತಲೇ ಹೋಗುವರು ....!!

ಒರಟುತನ , ಅತಿಯಾದ , ಅನಗತ್ಯ ನೈತಿಕ ಪ್ರದರ್ಶನ, ವಿರಾಮದಲ್ಲೂ ಅಗತ್ಯವಿಲ್ಲದಿದ್ದರೂ ಕೆಲಸ ಮಾಡುತ್ತಲೇ ಇರುವುದು ಇತರ ಲಕ್ಷಣಗಳು.ಅತಿ ನಿರೀಕ್ಷೆಯಿಂದ ಕೆಲವೊಮ್ಮೆ ಸಂಬಂಧಗಳೇ ಕಳಚಿಕೊಳ್ಳುವುವು. [ಗಂಡ ಹೆಂಡಿರಲ್ಲಿ,ತಂದೆ ಮಕ್ಕಳ ನಡುವೆ ]

ಸೈಕೋ ಥೆರಪಿ ಮತ್ತು ಔಷಧಿಗಳಿಂದ ಗೀಳನ್ನು ಹೋಗಲಾಡಿಸಬಹುದು . ಚಿಕಿತ್ಸೆ ಹೆಚ್ಚಿನ ಸಮಯವನ್ನು ಬೇಡಿದರೂ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯ. ಬಂಧುಗಳೂ ಮತ್ತು ಸಮಾಜದ ಸಹಾಯವಿದ್ದಲ್ಲಿ ಈ ಗೀಳಿನಿಂದ ಮುಕ್ತರಾಗಬಹುದು.

ಹಾಗಾಗಿ ನಮಗೇನಾದರೂ ಈ ರೀತಿಯ ವ್ಯಕ್ತಿಗಳು ಎದುರಾದಲ್ಲಿ ನಾವು ಕಿರಿಕಿರಿಗೊಳಗಾಗದೆ ಸುಮ್ಮನಿದ್ದು ಸೌಹಾರ್ಧತೆಯನ್ನು ಪ್ರದರ್ಶಿಸುವುದು ಒಳಿತು.

ಕೊನೆ ತುತ್ತು :ಅನಗತ್ಯವಾಗಿ ಪುಸ್ತಕಗಳ ಸಂಗ್ರಹ ಮತ್ತು ಒಂದೇ ಪುಸ್ತಕದ ಅನೇಕಪ್ರತಿಗಳನ್ನು ಕಾರಣವಿಲ್ಲದೆ ಸಂಗ್ರಹಿಸಿಟ್ಟುಕೊಳ್ಳುವುದನ್ನು Bibliomaniya ಎನ್ನುತ್ತಾರೆ.

Tuesday, December 1, 2009

ನಲ್ಲನಿಗೊಂದು ಎಸ್ಸೆಮ್ಮೆಸ್ಸು ......?

ಕಾಯುತ್ತಿದ್ದೇನೆ ...
ನಿನ್ನಲ್ಲೇ ಮನಸಿಟ್ಟು
ಬಾಗಿಲಿಗೆ ದೃಷ್ಟಿ ನೆಟ್ಟು ..
ನೆನೆಸುತ್ತಾ ...
ಮೊದಲ ನೋಟ..
ಕೊಡಿಸಿದಾ ಪಾನಿಪೂರಿ
ಮುಡಿಸಿದಾಮಲ್ಲಿಗೆಯ ಘಮ ...
ಉಣದೆ...
ತಿನದೇ..
ಒಲೆ ಹೊತ್ತಿಸದೆ
ದಾರಿ ಕಾಯುತ್ತಿದ್ದೇನೆ ಪ್ರಿಯಾ ....
ಬಾ
ಬೇಗ
ಆಫೀಸಿನಿಂದ....
ಕಟ್ಟಿಸಿಕೊಂಡು
ಸಾಲೆದೋಸೆ
ಹೋಟೆಲಿನಿಂದ.....!!!!!