''ಮಕ್ಕಳೇ ... ಒಲೆ ಬದಿಗೆ ಹೋಗಬೇಡಿ. ಒಲೆ ಒಳಗೆ ನಾಯಿ ಮರಿ ಹಾಕಿದೆ... ಹತ್ತಿರ ಹೋದವ್ರನ್ನ ಕಚ್ಚಿ ಬಿಡುತ್ತೆ.''
ಅಂಗಳದಲ್ಲಿ ತೊಗರೊಲೆ ಬದಿಗೆ ಥ್ರೋಬಾಲ್ ಆಡುತ್ತಿದ್ದ ಕ್ಷಮಾ ಮತ್ತು ಪಾರ್ಥ ರನ್ನು ಕರೆದು ಅಜ್ಜ ಎಚ್ಚರಿಸಿದರು.ತೊಗರೊಲೆ ಅಂದರೆ ಅಡಿಕೆ ಬೇಯಿಸಲು ಉಪಯೋಗಿಸುವ ದೊಡ್ಡ ಒಲೆ.ನಾಯಿ ಒಲೆ ಒಳಗೆ, ಚೀಲದ ಸಂದು ಹೀಗೆ ಮರಿ ಹಾಕಲೊಂದು ಜಾಗ ಮಾಡಿಕೊಳ್ಳುತ್ತದೆ.
'' ಟಾಮಿ ಮರಿ ಹಾಕಿದೆಯಾ? ನಾನು ನೋಡಬೇಕು... ತೋರಿಸು ಅಜ್ಜ...." ಕ್ಷಮಾ ಅಜ್ಜನಿಗೆ ಗಂಟು ಬಿದ್ದಳು.
'' ಹೇಳಿದ್ದೆ ತಪ್ಪಾಯ್ತು. ನೋಡು ಮರಿ ಹಾಕಿದ ನಾಯಿಗೆ ಸಿಟ್ಟು ಜಾಸ್ತಿ. ಕಚ್ಚತ್ತೆ ಅಂದರೆ ಕೇಳಬೇಕು..ಇಲ್ಲ ನಾಯಿ ಕಚ್ಚಿದ್ದಕ್ಕೆ ಹೊಕ್ಕುಳ ಸುತ್ತ ಹದಿನಾಲ್ಕು ಇಂಜಕ್ಷನ್ ಹಾಕಿಸ್ಕೋ ಬೇಕಾಗುತ್ತೆ.. ''
'' ದೂರದಿಂದ ನೋಡ್ತೇನೆ. ಟಾಮಿ ಪಾಪ ಏನೂ ಮಾಡಲ್ಲ, ಟಾಮಿ .. ಟಾಮಿ .. ಕ್ರು.. ಕ್ರು .. '' ಪಾರ್ಥ ಒಲೆಯಲ್ಲಿ ಬಗ್ಗಿ ನೋಡಿದ.
'' ಅಜ್ಜ .. ಮೂರು ಮರಿ ಇದೆ. ಕಣ್ಣು ಕೂಡಾ ಬಿಟ್ಟಿಲ್ಲ..'' ಬೆರಗಿನಿ೦ದ ತನ್ನ ಬಟ್ಟಲುಗಣ್ಣು ಅರಳಿಸುತ್ತಾ ಹೇಳಿದ.
''ನಾಕ್ ಹಾಕಿರ್ತೈತಿ.... ಮದಾಲಿನ್ ಮರೀನಾ ನಾಯೇ ತಿನ್ದ್ಬುಡ್ತೈತಿ. ಮೂರ್ ಉಳ್ಕಂಡ್ ಐತೆ ... '' ಕೆಲಸದ ಮಂಜ ವೀಳ್ಯದೆಲೆಗೆ ಸುಣ್ಣ ಸವರುತ್ತಾ ಹೇಳಿದ.
'' ಸುಳ್ಳು, ಯಾವ್ದೂ ತನ್ನ ಮರೀನೆ ತಾನು ತಿನ್ನಲ್ಲಪ್ಪಾ.. '' ಕ್ಷಮಾ ನಂಬಲು ತಯಾರಿಲ್ಲ.
''ಅಲ್ಲಾ .. ನಾ ನೋಡೀನಿ.. ಹೊದೊರ್ಸ ನಮ್ಮನೆ ನಾಯಿ ನಾ ನೋಡ್ ನೋಡ್ತಾ ಇದ್ದಂಗೆ ತಿಂದ ಬುಡ್ಲಾ.. ? ಮದಾಲಿನ್ ಮರೀನ್ ತಿನ್ನದ್ ಸುಳ್ಳಲ್ಲ... '' ಮ೦ಜ ವಾದಿಸಿದ.
''ಅಜ್ಜ ಹೌದಾ ..? ಮಂಜ ಹೇಳಿದ್ದು ನಿಜಾನ ...?''
''ಹಾಗಂತ ಹೇಳ್ತಾರೆ.. ಎಲ್ಲವೂ ತಿನ್ನತ್ತೆ ಅ೦ತ ಅಲ್ಲ.. ಹೋಗು ಮಹಡಿ ಮೇಲೆ ನಿನ್ನ ಅತ್ತೆ ಇದ್ದಾಳಲ್ಲ..ಅವಳನ್ನು ಕೇಳು.. ಸರಿಯಾಗಿ ವಿವರಿಸ್ತಾಳೆ. ''
''ಅತ್ತೆ .... ಅತ್ತೇ.... ವೀಣತ್ತೆ..'' ಮನೆ ಮೊಳಗುವಂತೆ ಕರೆಯುತ್ತಾ ಮೆಟ್ಟಿಲುಗಳನ್ನು ಧಡ ಧಡ ಹತ್ತಿ ಬಂದರು ಕ್ಷಮಾ ಮತ್ತು ಪಾರ್ಥ.. ವೀಣಾ ಓದುತ್ತಾ ಕುಳಿತಲ್ಲಿಗೆ.
ಮಕ್ಕಳು ತಮ್ಮ ಸಮಸ್ಯೆಯನ್ನು ಅತ್ತೆಯ ಮುಂದಿಟ್ಟರು. ''ಅತ್ತೇ, ನಾಯಿ ಮರಿ ಹಾಕಿದ ನಂತರ ತನ್ನ ಮರಿಗಳನ್ನೇ ತಿನ್ನುತ್ತಾ....? ಯಾಕೆ ತಿನ್ನುತ್ತೆ..? ಆಮೇಲೆ ಉಳಿದ ಮರಿಗಳನ್ನು ಯಾರಿಗೂ ಮುಟ್ಟಲು ಬಿಡದಂತೆ ಕಾಪಾಡುತ್ತದಲ್ಲ... ಯಾಕೆ ಹೀಗೆ....?
ಮಕ್ಕಳಿಬ್ಬರೂ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.
ವೀಣಾ ವಿವರಿಸಲು ತೊಡಗಿದಳು..'' ನೋಡಿ ..
ನೀವು ಹೈಸ್ಕೂಲ್ ಮಕ್ಕಳಲ್ಲವೇ, ನಿಮಗೆ ಅರ್ಥವಾಗುತ್ತದೆ ಈ ವಿಚಾರಗಳೆಲ್ಲ.
ನಾಯಿ ಸೂಕ್ಷ್ಮ ಪ್ರಾಣಿ... ಅದಕ್ಕೆ ಹುಟ್ಟಿನಿಂದ ಬರುವ ಸಹಜ ಗುಣದ [basic instinct] ಜೊತೆಗೆ ಹೇಳಿಕೊಟ್ಟಿದ್ದನ್ನು ಕಲಿಯುವ ಗುಣವಿದೆ. ಅದು ಕೆಲವನ್ನು ನೋಡಿಯೂ ಅನುಸರಿಸಬಲ್ಲದು.ಅವು ಮರಿಯಾಗಿದ್ದಾಗಲೇ ಕಲಿಸುವಿಕೆ ಶುರು ಮಾಡಬೇಕಲ್ಲದೆ ಬೆಳೆದ ನಾಯಿಗಳಿಗೆ ಕಲಿಸುವುದು ಕಷ್ಟ.
ಈಗ ನಾಯಿ ತನ್ನ ಮರಿಯನ್ನು ಏಕೆ ತಿನ್ನುತ್ತದೆ....? ಪಟ್ಟಿ ಮಾಡೋಣ.
೧ . ನಾಯಿ ಮರಿ ಹೊರಬರುವಾಗ ಮಾಸು ಚೀಲದ [ placenta ] ಸಮೇತ ಬರುತ್ತದೆ.ಪ್ರತಿ ಪ್ರಾಣಿಗೂ ತಾಯ್ತನ ಅನ್ನುವುದು ಸಹಜ ಗುಣ. ಅದು ಈ ಮಾಸುಚೀಲ ಅಥವಾ ನೀರ್ಮೊಟ್ಟೆಯನ್ನು ತನ್ನ ಹಲ್ಲುಗಳಿಂದ ಹರಿದು ಹೊಕ್ಕಳು ಬಳ್ಳಿಯನ್ನು ತುಂಡರಿಸಿ ಮರಿಯನ್ನು ನೆಕ್ಕಲು ತೊಡಗುತ್ತದೆ.ಇದು ಮರಿಯ ಉಸಿರಾಟ ಕ್ರಿಯೆಯನ್ನು ಸರಾಗ ಗೊಳಿಸುತ್ತದೆ. ಮತ್ತು ಸಹಜವಾಗಿಯೇ ಎಲ್ಲಾ ಪ್ರಾಣಿಗಳೂ ತಮ್ಮ ಮಾಸನ್ನು ತಿನ್ನುತ್ತವೆ. ಮಾಸು ಕೀಳುವ ರಭಸದಲ್ಲಿ ಕೆಲವೊಮ್ಮೆ ಮರಿಗಳನ್ನೂ ಅಕಸ್ಮಾತ್ತಾಗಿ ತಿನ್ನುವ ಸಾಧ್ಯತೆಗಳಿವೆ.
೨. ನಾಯಿ ಸುಮಾರಾಗಿ ಮರಿ ಹಾಕುವ ಒಂದು ದಿನ ಮುಂಚಿನಿಂದ ಆಹಾರವನ್ನು ಸರಿಯಾಗಿ ಸೇವಿಸುವುದಿಲ್ಲ. ತಿಂದಿದ್ದನ್ನು ಕಾರಿಕೊಳ್ಳುತ್ತದೆ. ಹೆಚ್ಚಿನ ನಾಯಿಗಳದು ಕೋಪದ ಗುಣ.ತನಗೆ ನೋವಾದಾಗ, ನೋವಿಗೆ ಕಾರಣವಾದ ವಸ್ತು ಅಥವಾ ಪ್ರಾಣಿಯ ಮೇಲೆ ಆಕ್ರಮಣ ಮಾಡುತ್ತದೆ. ಹೆರಿಗೆಯ ಸಮಯದಲ್ಲಾದ ನೋವಿನಿಂದ ಪ್ರಚೋದನೆಗೊಂಡ ನಾಯಿ ತನ್ನ ಮರಿಯನ್ನೇ ಕಚ್ಚುವ ಸಾಧ್ಯತೆಗಳುಂಟು. ಮತ್ತು ಹಾಗೆಯೇ ಮಾಂಸಹಾರಿ ಪ್ರಾಣಿಯಾದ್ದರಿಂದ ತಿನ್ನಲೂ ಬಹುದು.
೩. ಅಲ್ಲದೆ ಹೆರಿಗೆಯ ನಂತರ ತೀವ್ರವಾಗಿ ಹಸಿವೆಯಾಗುವುದೂ ಅಲ್ಲದೆ ನೋವಿನಿಂದ ಉಂಟಾದ ಕ್ರೋಧವೂ ತನ್ನ ಮರಿಯನ್ನು ತಾನೇ ತಿನ್ನಲು ಕಾರಣವಿರಬಹುದು.ಏಕೆಂದರೆ ಮನುಷ್ಯರಂತೆ ಅವುಗಳಿಗೆ ವಿವೇಚನಾ ಶಕ್ತಿಯಿರುವುದಿಲ್ಲವಲ್ಲ.ಒಮ್ಮೆ ಹೊಟ್ಟೆ ತುಂಬಿದ ನಂತರ ಸಹಜ ತಾಯಿ ಭಾವದಿಂದ ಉಳಿದ ಮರಿಗಳನ್ನು ಕಾಪಾಡಬಹುದು. ಮತ್ತು ಆಗ ತನ್ನ ಮರಿಗಳನ್ನು ಮುಟ್ಟಲು ಬಂದವರನ್ನು ಹೆದರಿಸುತ್ತದೆ.ಕೆಲವೊಮ್ಮೆ ಕಚ್ಚುತ್ತದೆ. ಅವುಗಳನ್ನು ಮೆತ್ತಗೆ ಕರೆಯುತ್ತಾ ವಿಶ್ವಾಸಕ್ಕೆ ತೆಗೆದುಕೊಂಡಾಗ ಅದು ನಮ್ಮನ್ನು ನಂಬುತ್ತದೆ.
ಮತ್ತು ಎಲ್ಲಾ ನಾಯಿಗಳೂ ಈ ರೀತಿ ತನ್ನ ಮರಿಯನ್ನು ತಾನೇ ತಿನ್ನುವುದಿಲ್ಲ. ಕೋಪದ ಪ್ರವೃತ್ತಿಯಿರುವ ನಾಯಿಗಳು ಹೀಗೆ ಮಾಡುತ್ತವೆ. [aggresive ness ] ಎಲ್ಲ ನಾಯಿಗಳೂ ಕಚ್ಚುವುದಿಲ್ಲವಲ್ಲ... ಹಾಗೇ. ಅಲ್ಲದೆ ಪ್ರಾಣಿಗಳ ಕೆಲವು ನಡವಳಿಕೆಗಳು ಇನ್ನೂ ಅರ್ಥವಾಗದೆ ಇರುವಂತಹದ್ದು ಬೇಕಷ್ಟಿವೆ.
ಮತ್ತೆ ಅಲ್ಲಿಯೇ ಹೋಗಬೇಡಿ.. ಗೊತ್ತಾಯ್ತೆನ್ರೋ ''
''ಸರಿ, ಪೇರಳೆ ಮರಕ್ಕೆ ಹೋಗೋಣ '' ಎನ್ನುತ್ತಾ ಕ್ಷಮಾ ಪಾರ್ಥ ಹೊರಗೆ ನಡೆದರು.
ಹೆಚ್ಚು ಕಡಿಮೆತಾಯಿಯ ಸಮಕ್ಕಿದೆ ಮರಿ. ಆದರೂ ತಾಯಿ ಪ್ರೀತಿ.
ಪ್ರಾಣಿಗಳ ನಡವಳಿಕೆಗಳ ಅಧ್ಯಯನ ತು೦ಬಾ ಆಸಕ್ತಿ ದಾಯಕ. ಅವುಗಳ ವೈವಿಧ್ಯತೆಯನ್ನು, ವೈಚಿತ್ರ್ಯವನ್ನು ಸೂಕ್ಷ್ಮವಾಗಿ ಗಮನಿಸಿಯೇ ಅರಿತುಕೊಳ್ಳಬೇಕು. ಮನುಷ್ಯರಂತೆ ಮಾತಾಡಬಲ್ಲವಾಗಿದ್ದರೆ ಒಮ್ಮೆ ಕೇಳಿ ನೋಡಬಹುದಿತ್ತು.. ಅಲ್ಲವೇ ?
[ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯಿದ್ದವರು ದಯವಿಟ್ಟು ಹಂಚಿಕೊಳ್ಳಿ]