ಈ ಸಲ ಊರಿಂದ ಬರುತ್ತಿದ್ದಂತೆ ನಟರಾಜ್ ಪುಸ್ತಕವೊಂದರಿಂದಲೇ ಸ್ವಾಗತಿಸಿದರು...! ಆಶ್ಚರ್ಯ ...! ಏಕೆಂದರೆ ಸಮಯವಿದ್ದಾಗಲೆಲ್ಲಾ ದಿನಪತ್ರಿಕೆ.. ಬ್ಯುಸಿನೆಸ್ ಮ್ಯಾಗಜೀನ್ ಗಳಲ್ಲೇ ಮುಖ ಹುದುಗಿಸಿಕೊಳ್ಳುವ ಇವರು ಕಥೆ, ಕಾದಂಬರಿ ಇತ್ಯಾದಿಗಳನ್ನು ಮುಟ್ಟಿಯೂ ನೋಡುವುದಿಲ್ಲ.
ಊಟ, ತಿಂಡಿ ಹೊತ್ತಿನಲ್ಲಿ, ಕೂತಲ್ಲಿ ನಿಂತಲ್ಲಿ ಇವರದ್ದು ಆ ಪುಸ್ತಕದ್ದೇ ಕಥೆ.. ಇವರ ಬೈರಿಗೆ ಮೆದುಳನ್ನು ಕೊರೆದು ಕೊರೆದು ಹಾಕಿತು.ಈ ಪುಸ್ತಕದಲ್ಲಿ ಬರುವ ಬೈರಿಗೆಯಂತೆ..! ಇವರ ತಮ್ಮ ತಂದುಕೊಟ್ಟ ಪುಸ್ತಕ ಓದಿ ಇವರು ಸಿಕ್ಕಾಪಟ್ಟೆ ಪ್ರಭಾವಿತರಾಗಿ ಬಿಟ್ಟಿದ್ದರು. 'ಓದಿದ್ಯನೆ..' 'ಓದಿದ್ಯನೆ..'ಬಿಡುವ ಜಾತಿಯೇ ಅಲ್ಲ. ನನಗೋ ಮನೆಯನ್ನೆಲ್ಲಾ ಒಮ್ಮೆ ಕ್ಲೀನ್ ಮಾಡುವ ಗಡಿಬಿಡಿ..
ಅಂತೂ ಪುಸ್ತಕ ಹಿಡಿದು ಕೂತವಳು ಈ ಪ್ರಪಂಚಕ್ಕೆ ವಾಪಾಸು ಕಾಲಿಟ್ಟಿದ್ದು ಪೂರಾ ಎಲ್ಲರನ್ನೂ ಪಾತಾಳದಿಂದ ಎತ್ತಿ ತಂದ ಮೇಲೆಯೇ..
ಈಗ್ಗೆ ಕೆಲ ತಿಂಗಳ ಮೊದಲು ಟೀವೀ ನ್ಯೂಸ್ ನಲ್ಲಿ ಈ ಕಾರ್ಯಾಚರಣೆಯನ್ನು ನೋಡಿ 'ಒಹ್ ' ಎಂದು ಉದ್ಘರಿಸಿದ್ದು ಆಮೇಲೆ ಮರೆತಿದ್ದು ಎಲ್ಲಾ ನೆನಪಾಯಿತು..
ಅದು ''ಚಿಲಿ ಗಣಿ ಸುಖಾಂತ''
ಅದು ದುರಂತವಾಗದಂತೆ ತಡೆಯುವಲ್ಲಿ ಯಾರ್ಯಾರು , ಹೇಗ್ಹೇಗೆ, ಎಷ್ಟೆಷ್ಟು ರೀತಿಯಲ್ಲಿ ಶ್ರಮಿಸಿದರು ಎಂಬುದನ್ನೇ ಕನ್ನಡದಲ್ಲಿ ''ಚಿಲಿಯ ಕಲಿಗಳು'' ಎಂಬ ಪುಸ್ತಕವಾಗಿಸಿ ನಮ್ಮನ್ನು ರೋಮಾಂಚಿತಗೊಳಿಸಿದವರು 'ಸರೋಜಾ ಪ್ರಕಾಶ್ ರವರು.'
ದಕ್ಷಿಣ ಅಮೆರಿಕಾದ ಮೆಣಸಿನ ಕಾಯಿ ಆಕಾರದ ಚಿಲಿ ದೇಶದಲ್ಲಿ ನಡೆದ ಐತಿಹಾಸಿಕ ಘಟನೆಯಾದ ಚಿನ್ನಮತ್ತು ತಾಮ್ರದ ಅದಿರನ್ನು ತೆಗೆಯುವ ಸ್ಯಾನ್ ಯೋಸೆ ಗಣಿಯಲ್ಲಿನ ಭೂ ಕುಸಿತದಿಂದಾಗಿ 2300 ಅಡಿ ಆಳದಲ್ಲಿ ಸಿಕ್ಕಿ ಹಾಕಿಕೊಂಡ ಮೂವತ್ಮೂರು ಜನ ಕಾರ್ಮಿಕರನ್ನು ಅರವತ್ತೊಂಬತ್ತು ದಿನಗಳಲ್ಲಿ ಹೇಗೆ ಸುರಕ್ಷಿತವಾಗಿ ರಕ್ಷಿಸಿದರು? ಅದಕ್ಕೆ ಎಷ್ಟು ಜನ ಶ್ರಮಿಸಿದರು? ಬಳಕೆಯಾದ ಯಂತ್ರಗಳಾವುವು? ವಿಜ್ಞಾನವನ್ನು ಎಷ್ಟು ವ್ಯವಸ್ತಿತವಾಗಿ ಬಳಸಲಾಯಿತು? ಸರಕಾರ ಹೇಗೆ ಸ್ಪಂದಿಸಿತು? ಮಾಧ್ಯಮಗಳು, ಸೇವಾ ಸಂಸ್ಥೆಗಳೂ, ಕಾರ್ಮಿಕರ ಬಂಧುಗಳೂ ಹೇಗೆ ಕಾರ್ಯಾಚರಣೆ ಮುಗಿಯುವ ವರೆಗೂ ಕಾದರು? ವಿಶ್ವ ಹೇಗೆ ಪ್ರತಿಕ್ರಿಯಿಸಿತು..? ಗಣಿಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಹೇಗೆ ಸುರಕ್ಷಿತವಾಗಿ ಕಾಯ್ದಿಡಲಾಯಿತು?
ಈ ಮುಂತಾದ ಎಲ್ಲ ಪ್ರಶ್ನೆಗಳಿಗೆ ಸವಿವರವಾಗಿ, ಸರಳವಾಗಿ ಉತ್ತರಿಸುತ್ತಾ ಹೋಗುತ್ತಾರೆ ಲೇಖಕಿ.8.1 c.m ಅಗಲ ಕೊಳವೆಯಲ್ಲಿ 33 ಜನರಿಗೆ ಎರಡು ತಿಂಗಳ ಕಾಲ ಅಗತ್ಯವಿರುವ ಸಾಮಗ್ರಿಗಳನ್ನು ಕಳಿಸಲಾಯಿತು. ಐದು ನೂರಕ್ಕೂ ಹೆಚ್ಚು ಮಂದಿ ತಂತ್ರಜ್ಞರು ಹಗಲಿರುಳೂ ಶ್ರಮಿಸಿದರು.ಕಾರ್ಯಪಡೆಗಳು ಅಂತರ್ಜಾಲದ ಮುಖಾಂತರ ವಿಶ್ವದ ಹಲವಾರು ಪರಿಣತ ತಂತ್ರಜ್ಞರ ಸಹಾಯ, ಸಲಹೆ ಪಡೆದುಕೊಂಡಿತು.ಕಾರ್ಯಪಡೆಯ ಬಳಿ ಭೂ ವಿಜ್ಞಾನಿಗಳ, ಡ್ರಿಲ್ಲರುಗಳ, ಮನೋವಿಜ್ಞಾನಿಗಳ, ವೈದ್ಯರ, ಸಬ್ಮರಿನ್ ತಂತ್ರಜ್ಞರ ಹೀಗೆ ಅನೇಕ ತಜ್ಞರಿದ್ದರು.
ಮೂರು ಬೃಹತ್ ಬೈರಿಗೆಗಳ ಸಹಯೋಗದಲ್ಲಿ ಮೂರು ಗೇಣು ಅಗಲದ, ಪಾತಾಳಕ್ಕೆ ಕೊರೆದ ಕಿಂಡಿಯಲ್ಲಿ ಎಂಟಡಿ ಎತ್ತರದ ಸಿಲಿಂಡರಿನಾಕೃತಿಯ ಪಂಜರ 'ಫೀನಿಕ್ಸ್' ನ ಮುಖಾಂತರ ಗಂಟೆಗೊಬ್ಬರಂತೆ 33 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲಾಯಿತು.ವಿಜ್ಞಾನದ ಸದುಪಯೋಗದ ಮಹತ್ವಪ್ರಪಂಚಕ್ಕೆ ತಿಳಿಯಿತು.
ಕಾರ್ಮಿಕರು ಗಣಿಯಲ್ಲಿ ಸಿಲುಕಿದ ಸುದ್ದಿ ತಿಳಿಯುತ್ತಿದ್ದಂತೆ ಧಾವಿಸಿದ ಬಂಧುಗಳಿಗೆ ಉಳಿಯಲು 'ಆಶಾ ಶಿಬಿರ' ವನ್ನು ರಚಿಸಲಾಯಿತು.....ಮಕ್ಕಳಿಗಾಗಿ ಅಲ್ಲಿಯೇ ಶಾಲೆ.. ಇತರೆ ಚಟುವಟಿಕೆಗಳಿಗೆ ಅನುಕೂಲತೆಗಳು..ಹೀಗೆ....
ಬರೆದರೆ ಇಡೀ ಪುಸ್ತಕವನ್ನೂ ಬರೆಯುತ್ತಲೇ ಇರಬೇಕಾಗುತ್ತದೆ. ಅಷ್ಟೊಂದು ವಿಚಾರಗಳಿವೆ..ಎಲ್ಲವೂ ಮುಖ್ಯವಾಗಿಯೇ ಕಾಣಿಸುತ್ತದೆ.
ಓದುವಾಗ ಆಗಾಗ ಉಮ್ಮಳಿಸಿ ಬರುತ್ತದೆ. ಕಣ್ಣು ಹನಿಗೂಡುತ್ತದೆ.
ಒಂದು ಘಟನೆ -
ಬೈರಿಗೆಗಳ ಮೊಲಕ ಕೊರೆಯುತ್ತಾ ಹೋದಂತೆ ಗಣಿಕುಸಿತದ ಹದಿನೇಳನೆ ದಿನ ಗಣಿಯಲ್ಲಿ ಸಿಲುಕಿಕೊಂಡ ಕಾರ್ಮಿಕರ ಇರುವು ತಿಳಿಯುತ್ತದೆ. ತಂತಿಯ ಮೂಲಕ ಫೋನ್ ಒಂದನ್ನು 700 m ಪಾತಾಳಕ್ಕೆ ಇಳಿ ಬಿಡಲಾಗುತ್ತದೆ.ಇತ್ತಕಡೆ ಗಣಿ ಸಚಿವ ಗೋಲ್ಬೋರ್ನ್ ಅವರೇ ಮಾತಾಡುತ್ತಾರೆ. ಅತ್ತಕಡೆ ಮುಖ್ಯಸ್ಥ ಊರ್ಜುವಾ ..
'ಹೇಗಿದ್ದೀರಾ ಎಲ್ಲಾ' ಎನ್ನುವ ಪ್ರಶ್ನೆಗೆ 'ನಾವೆಲ್ಲಾ ಕ್ಷೇಮವಾಗಿದ್ದೇವೆ. ರಕ್ಷಣೆಗಾಗಿ ಕಾಯುತ್ತಿದ್ದೇವೆ.. ' ಸಚಿವರು ಮತ್ತೊಂದು ಮಾತಾಡುವ ಮುನ್ನವೇ 'ಸರ್ ಒಂದು ಕ್ಷಣ ನಿಲ್ಲಿ' ಎನ್ನುತ್ತಾನೆ ಊರ್ಜುವಾ. ಅವಾಕ್ಕಾದ ಸಚಿವರು ಯೋಚಿಸುವಷ್ಟರಲ್ಲಿಯೇ ಚಿಲಿಯ 'ರಾಷ್ಟ್ರಗೀತೆ' ವೃಂದಗಾನದಲ್ಲಿ ಕೇಳಿಸ ತೊಡಗುತ್ತದೆ.!
ಪಾತಾಳದಲ್ಲಿದ್ದ ಎಲ್ಲ ಮೂವತ್ಮೂರು ಜನರೂ ಒಕ್ಕೊರಲಿನಿಂದ ರಾಷ್ಟ್ರಗೀತೆಯನ್ನು ಹಾಡುತ್ತಿದ್ದರು.
ನೆರೆದಿದ್ದವರ ಕಣ್ಣು ಮಂಜಾಗಿತ್ತು.
ಓದುತ್ತಾ ಹೋದಂತೆ ನನಗೂ ಮನಸ್ಸು ಆರ್ದ್ರವಾಯಿತು.ಎಂತಾ ದೇಶಾಭಿಮಾನ..!
ನಿಜಕ್ಕೂ ಚಿಲಿಯ ಕಲಿಗಳೇ ಅವರು.
ಅನಿವಾರ್ಯವಾಗಿ ಎಂಬಂತೆ ಓದಲು ಕುಳಿತವಳು ಈಗ ಭಾವನೆಗಳನ್ನು ತಡೆದುಕೊಳ್ಳಲಾರದೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಇಂತಾ ಅಪರೂಪದ ಪುಸ್ತಕವೊಂದನ್ನು ಬರೆದು ಲೋಕಾರ್ಪಣೆಗೈದ ಸರೋಜಾ ಪ್ರಕಾಶ್ ನಿಜಕ್ಕೂ ಅಭಿನಂದನಾರ್ಹರು.