Friday, October 14, 2011

ಅಲ್ಲಿಂದ ಇಲ್ಲಿಗೆ.... ಇಲ್ಲಿಂದ ಎಲ್ಲೆಲ್ಲಿಗೋ..!!

  


ನಾನು ಈಸಲ ಬೇಸಿಗೆ ರಜೆ ಪ್ರಯುಕ್ತ ಊರಿಗೆ ಹೋಗಿದ್ದೆನಲ್ಲ. ಪ್ರತಿ ದಿನ ಹೆಚ್ಚು ಕಡಿಮೆ ಮದುವೆ,  ಉಪನಯನ, ಚೌಲ, ಹೀಗೆ ದಿನಾಲೂ ಕಾರ್ಯದ ಮನೆ ತಿರುಗಿದ್ದೇ ತಿರುಗಿದ್ದು.ನನಗೆ ಅದೆಲ್ಲ ಸಿಕ್ಕುವುದು ಅಪರೂಪ ಈಗೀಗ. ಸಿಕ್ಕಾಗ ಬಿಡಬಾರದು ಹಳೆಯ ಗೆಳತಿಯರು,ಪರಿಚಯದವರು, ನೆಂಟರಿಷ್ಟರು ಸಿಗುತ್ತಾರೆನ್ನುವ ಮನೋಭಾವದಲ್ಲಿ ಎಲ್ಲದಕ್ಕೂ ಭಾಗವಹಿಸುವ ತವಕ ನನ್ನದು.
ಒಂದೆರಡಕ್ಕೆ ನನ್ನ ಜೊತೆ ಮಕ್ಕಳೂ ಬಂದವರು,  ಮತ್ತೆ ಇಂತವರ ಮನೆಯ... ಇದು ಇದೆ ಬನ್ನಿ ಹೋಗೋಣ ಎಂದರೆ.. ''ಅಮ್ಮ ನಿನಗೆ ಯಾವ ಯ್ಯಾಂಗಲ್ಲಲ್ಲಿ ಕೈ ಮುಗೀ ಬೇಕು ಹೇಳು.. ನಿನ್ಮನೆ ಕಾರ್ಯದ ಮನೆಗೆ ಮಾತ್ರಾ ಕರಿಯಡ''ಎಂದರು. ನನ್ನ ಮಗಳು ’ಕಾರ್ಯದ ಮನೆ  ’ ಎನ್ನುವ ಶಬ್ಧವನ್ನು ಉರುಹೊಡೆದು ಇಟ್ಟುಕೊ೦ಡಿದ್ದಾಳೆ. ಅದು ಅವಳಿಗೆ ಸೋಜಿಗದ ಶಬ್ಧ.  ''ಯಂತಾತು ನಿಂಗಕ್ಕೆ.. ಅಲ್ಲಿ ಎಷ್ಟ್ ಜನ ಪರಿಚಯ ಆಗ್ತು ಗೊತ್ತಿದ್ದಾ..? ಹುಡ್ರನ್ನ ಕರ್ಕ ಬರ್ಲ್ಯನೆ ಕೇಳ್ತಾ.   ಸುಮ್ನೆ ಬನ್ನಿ.''.ಅಂದರೆ, ”ನಿನಗೊಂದು ಅಲ್ಲಿ ಯಾರ್ಯಾರೋ ಸಿಗ್ತಿರ್ತ.   .  ಮೆಗಾ ಸೀರಿಯಲ್ ತರಾ  ಮಾತಾಡ್ತಾ  ಇರ್ತಿ.  ಒಳ್ಳೆ ಬ್ಲಾಕ್ ಎಂಡ್  ವೈಟ್ ಸಿನ್ಮಾ ಡೈಲಾಗ್ಸ್  ಇದ್ದಂಗಿರ್ತು ನಿಂಗಳ ಡೈಲಾಗ್ಸು.  ಅದ್ನ ಕೇಳಕ್ಕೆ ನಾವ್  ಬತ್ವಲ್ಲೇ.   ಕಡೀಗೆ ಮನೆಗೆ ಬರಕಿದ್ರೆ , ಮತ್ತೆ ಹಂಗಾರೆ ನಮ್ಮನಿಗೆ ಬರ್ರೆ.. ಒಂದ್ಸಲಾ.  ಎನ್ನುವ ಬೋರಿಂಗ್ ಕ್ಲೈಮಾಕ್ಸು'' ಎಂದು ನನ್ನ ಮುಖಕ್ಕೆ ತಿವಿದರು.

 ಅದೂ ಸತ್ಯ. ಅವರಿಗೆ ದಿನನಿತ್ಯ ಶಹರದ ಜನಜ೦ಗುಳಿಯ ನಡುವೆ ಒಡನಾಡಿ ಆಡಿ ಬೇಸರ. ಮಲ್ಲೇಶ್ವರ೦ ಯೆಯ್ತ್ ಕ್ರಾಸ್ ಗೆ ಒಮ್ಮೆ ಹೋಗಿ ಬ೦ದರೆ ಜಾತ್ರೆಗೆ ಹೋಗಿ ಬ೦ದ ಅನುಭವ ನೀಡುತ್ತದೆ. ಮತ್ತೆ ಇಲ್ಲೂ ಅದೇ ತರ ಗಿಜಿಗುಡುವ ಜನ ಅವರಿಗೆ ಬೇಡ.  ಅರಾಮಾಗಿ ಅಜ್ಜನ ಮನೆಯಲ್ಲಿ ಮಕ್ಕಳೊ೦ದಿಗೆ ವಿಶಾಲವಾದ ಜಾಗದಲ್ಲಿ ಸ್ವೇಚ್ಚೆಯಿ೦ದ ಆಡಿಕೊ೦ಡಿರಲು ಅವಕ್ಕೆ ಇಷ್ಟ.  ಮರಗಿಡಗಳ ನಡುವೆ ನಾಯಿ,ಬೆಕ್ಕು, ದನಕರು, ಚಿಲಿಪಿಲಿಗುಟ್ಟುವ ಹಕ್ಕಿಗಳು ಇವುಗಳ ಜೊತೆ ತಮ್ಮದೇ ಭಾಷೆಯಲ್ಲಿ ಸ೦ವಹಿಸುತ್ತಾರೆ. ಶಿಶಿರ ಅ೦ತೂ ಎಲ್ಲಿಗೆ ಬಾ ಎ೦ದು ಕರೆದರೂ 'ನಾಯಿ ಕರಿಯನನ್ನೂ ಕರೆದುಕೊ೦ಡು ಹೋಗೋಣವಾ,' ಎ೦ದು ಕೇಳುತ್ತಾನೆ.  ಮಾವನಿಗೆ ಹೇಳಿದ್ದಾನೆ ತನಗೊ೦ದು ಪುಟ್ಟೀಕರ ಮತ್ತು ಅದರ ಅಮ್ಮ ಬೇಕೇ ಬೇಕೆ೦ದು. ಬೆ೦ಗಳೂರಿಗೆ ಮರಳುವಾಗ ಕೊಡುತ್ತೇನೆ೦ದು ಮಾವ ಮಾತುಕೊಟ್ಟಿದ್ದ. ದನ ಕರು ಎಲ್ಲ ಎಲ್ಲಿ ಕಟ್ಟಿಹಾಕುತ್ತೀಯೆ೦ದು ಕೇಳಿದ್ದಕ್ಕೆ ಅಪ್ಪನ ಕಾರುಶೆಡ್ಡಿನಲ್ಲಿ ಮತ್ತು ಅಪ್ಪಅಮ್ಮ ಕೊಟ್ಟಿಗೆ ಚಾಕರಿ ಮಾಡುತ್ತಾರೆಂದು ನಿರ್ಧಾಕ್ಷಿಣ್ಯವಾಗಿ ನಮಗೆ ಕೆಲಸ ಕೊಟ್ಟು,  ಅಕ್ಕಚ್ಚು, ನೀರು ಐಶು ಕೊಡುತ್ತಾಳೆ ಮತ್ತು ತಾನೇ ಹುಲ್ಲು ಹಾಕುತ್ತೇನೆ೦ದು ಎಲ್ಲರಿಗೂ ಕೆಲಸ ಬೇರೆ ಹ೦ಚಿ   ಐಶುವನ್ನು ನೇರವಾಗಿ ಮೂರನೇ ಮಹಾಯುದ್ಧಕ್ಕೆ ಆಹ್ವಾನಿಸಿದ್ದ.   '' ಏ.., ಹೋಗೆಲೋ ನೀನೆ ಅಕ್ಕಚ್ಚು ನೀರು  ಕೊಟ್ಟುಕೋ  ಬೇಕಿದ್ದರೆ, ” ಎ೦ದು ಅವಳು ಜಗಳ  ತೆಗೆದು   ಅವನನ್ನು ಅಟ್ಟಿಸಿಕೊ೦ಡು ಹೊರಟಳು.  ನಾವೇನೋ ಈ ಶತಮಾನದ ಯುದ್ಧವನ್ನು ನಮ್ಮನೆಯಲ್ಲಿಯೇ  ನೋಡಬೇಕಾದೀತೇನೋ ಎ೦ದು ಹಿ೦ದೆಯೇ ಹಿ೦ಬಾಲಿಸಿಕೊ೦ಡು ಬ೦ದರೆ ಇಬ್ಬರೂ ಮಾವನ  ಮಕ್ಕಳ  ಜೊತೆಗೆ ಅ೦ಗಳದ ತುದಿಯಲ್ಲಿ ಬೆಳೆದಿರುವ ಚದುರ೦ಗದ ಗಿಡದ ಮೇಲೆ ಮೊದ್ದಾಗಿ ಮಲಗಿರುವ ಓತಿಕ್ಯಾತವೊ೦ದನ್ನು    ನೋಡುವುದರಲ್ಲಿ     ತಲ್ಲೀನರಾಗಿದ್ದರು.    ಮಕ್ಕಳದು ಪ್ರತಿಯೊ೦ದನ್ನೂ ಶೋಧಿಸಿ, ಕೆದಕಿ ವಿವರವನ್ನು ಪಡೆಯುವ ಗುಣ. ಕಣ್ಣಿಗೆ ಕ೦ಡಿದ್ದನ್ನೆಲ್ಲಾ 'ನಮ್ಮನೇಲಿ  ಸಾಕೋಣ' ಅನ್ನುತ್ತಾನೆ ನನ್ನ ಮಗ.ಓತಿಕ್ಯಾತವನ್ನೂ ಸಾಕೋಣ ಅ೦ದರೆ ಕಷ್ಟ ಎ೦ದುಕೊ೦ಡು 'ಅದು ಸಾಕುಪ್ರಾಣಿ ಅಲ್ಲ ಕಣೊ,' ಎ೦ದು ಐಶು ಮುನ್ನೆಚ್ಚರಿಕೆಯಿಂದ  ವಿವರಣೆ ಕೊಡುತ್ತಿದ್ದಳು. ಹಿಂದೊಮ್ಮೆ ಹಾಗೆಯೇ ಆಗಿತ್ತು. ಅವನು ಸುಮಾರು  ಮೂರು ವರ್ಷ ಇದ್ದಾಗ ''ಬಾಲ ಗಣೇಶ ''  ಸೀಡಿ ನೋಡಿ ನೋಡಿ   ನಮ್ಮನೆಯಲ್ಲೂ  ಇಲಿ ಸಾಕೋಣ ಎಂದಿದ್ದ. ''ಗಣೇಶನಿಗಾದರೆ ಇಲಿ ಇದೆ ನನಗೂ ಬೇಕು,'' ಎಂದು ಅಪ್ಪನ ಜೀವ ತಿಂದು ಸಾಕು ಬೇಕು ಮಾಡಿದ್ದ. ಐಶು ''ಜೊತೆಗೆ ಬೆಕ್ಕನ್ನೂ ಸಾಕೋಣ; ಆಮೇಲೆ ಇಲಿ ಹಿಡಿಯಲು ಬೇಕಾಗುತ್ತದೆ, ''ಎಂದು ಕೆಣಕಿ,   ಇಲ್ಲದ ಇಲಿ ಮತ್ತು ಬೆಕ್ಕಿನ ವಿಷಯವಾಗಿ ಸುಮಾರು ಹೊತ್ತು ಮನೆ ರಣಾಂಗಣವಾಗಿತ್ತು.ಅದನ್ನೇ ನೆನೆದು  ರಾಜೀ ಪಂಚಾಯ್ತಿಕೆ ಮಾಡಲು ನಾನು ಸಡಗರದಿಂದ ಬಂದದ್ದೆ ಬಂತು, ಅದಕ್ಕೆ ಅವಕಾಶವನ್ನೇ ಕೊಡದೆ ಓತಿಕ್ಯಾತ ಮುಗುಳ್ನಗುತ್ತಾ ಕುಳಿತಿತ್ತು.ಮಕ್ಕಳಿಗೆ  ಹಾರಲು, ಕುಣಿಯಲು, ಓಡಲು, ಬೀಳಲು ಸಾಕಷ್ಟು ಜಾಗವಿದೆ ಊರಲ್ಲಿ. ನೋಡ್ತಾ ನೋಡ್ತಾ ಎಷ್ಟೋ ವಿಸ್ಮಯಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತವೆ ಅವು. ವಾಪಾಸು  ಅಲ್ಲಿಂದ ಹೊರಡಿಸುವುದು ಬಲು ಕಷ್ಟದ ಕೆಲಸ. 

ಅಂತೆಯೇ ನನಗೂ ನೆಂಟರಿಷ್ಟರು, ಸಂಬಂಧಿಕರು ಬಳಗದವರನ್ನೆಲ್ಲಾ ಮಕ್ಕಳಿಗೆ  ಪರಿಚಯ ಮಾಡಿಸುವ ಹಂಬಲ. ಅಪ್ಪನ ಬಳಗ  ಅಮ್ಮನ  ಬಳಗ ಎಲ್ಲಾ ಪರಿಚಯ ಮಾಡಿಸಲೇ ಬೇಕೆಂದು ನಾನೂ ನನ್ನ ಸಣ್ಣ ಅತ್ತಿಗೆ ಸೇರಿ ದಿಢೀರ್   ನಿರ್ಧಾರ  ಮಾಡಿಯಾಯಿತು. ಎಲ್ಲಾ ನನ್ನ ಅಜ್ಜನ ಮನೆ ಸಿರ್ಸಿ  ಕಡೆ ಹೋಗುವುದು ಅಂತ.ಸಿರಸಿಯಲ್ಲಿ  ನಮ್ಮ ನೆಂಟರು ತುಂಬಾ ಇದ್ದಾರೆ.
  ಅಣ್ಣನ ಕಾರು ಮತ್ತು ಅವನದೇ ಸಾರಥ್ಯವೂ ಒದಗಿತು.[ ನನ್ನ ಪತಿರಾಯರು ಮೊದಲೇ ಬೆಂಗಳೂರಿಗೆ ಬಂದು ಬಿಟ್ಟಿದ್ದರಲ್ಲ! ]  ತವರಿನಲ್ಲಿ ತಂಗಿಯಂದಿರ ಮಾತಿಗೆ ಬೆಲೆ ಜಾಸ್ತಿ..! ಬೆಳಿಗ್ಗೆ ಒಂಬತ್ತಕ್ಕೆಲ್ಲಾ ತೀರ್ಮಾನಿಸಿ  ಅರ್ಧ ಗಂಟೆಯಲ್ಲಿ ಎಲ್ಲಾ ಮಕ್ಕಳು ಮಂದಿಯೆಲ್ಲಾ 'ನ ಭೂತೋ ನ ಭವಿಷ್ಯತಿ' ಎಂಬಂತೆ  ತಯಾರಾಗಿ ಹೊರಟೆವು.

ಒಟ್ಟು ಒಂದೂವರೆ ದಿನದಲ್ಲಿ ಒಂಬತ್ತು ನೆಂಟರ ಮನೆಗೆ ಭೇಟಿ  ಕೊಟ್ಟು ಅದರಲ್ಲಿ ಒಂದು ಅರ್ಧ ಘಂಟೆ ನನ್ನ ತಾಯಿಯವರಿಗೆ  ಡಾಕ್ಟರ್  ಚೆಕಪ್ಪೂ ಮತ್ತು ಬನವಾಸಿಯ ಮಧುಕೇಶ್ವರನ ದರ್ಶನವನ್ನೂ ಮುಗಿಸಿಬಂದಿದ್ದೆವೆಂದರೆ ನೀವೇ ಊಹಿಸಿ ನಾವೆಷ್ಟು ಹುಶಾರಿದ್ದೇವೆ ಅಂತ. ಎಲ್ಲಾ ಕಡೆ ಪ್ರಕೃತಿ ಸಾನ್ನಿಧ್ಯ ಜೊತೆಗೆ ಇದ್ದುದರಿಂದ ಮಕ್ಕಳಿಗೆ ಪ್ರತಿ ಮನೆಯೂ ಆಪ್ಯಾಯಮಾನವಾಗಿಯೇ ಇತ್ತು ಅನ್ನುವುದು ಗಮನಿಸಿದ ವಿಚಾರ. 

ಹೋದ ನೆಂಟರ ಮನೆಗಳಲ್ಲೆಲ್ಲಾ ಮನೆ ಜನ  ಎಲ್ಲರೂ ಇದ್ದು ಎಲ್ಲೂ ನಮಗೆ ಡಿಸ್ ಅಪಾಯಿಂಟ್ ಮೆಂಟ್ ಆಗಲಿಲ್ಲ.ಅರ್ಧ ಘಂಟೆ ಅಂದರೆ ಒಂದು ನಿಮಿಷ ಹೆಚ್ಚಿಲ್ಲ ಕಡಿಮೆಯಿಲ್ಲ, ಸಮಯವನ್ನು ಅದು ಹೇಗೆ ನಿಭಾಯಿಸಿದ್ದೆವೆಂದರೆ ನನಗೆ ನನ್ನ ದೇಶವೇ ಮರೆತು ಹೋಗುವಷ್ಟು!  ನಾನು ಈ ದೇಶದಲ್ಲೇ ಹುಟ್ಟಿದ್ದು ಹೌದೋ ಅಥವಾ ನಾವು ಬೇರೆ ದೇಶದಲ್ಲಿದ್ದೇವೋ ಎಂದು ನನಗೆ ಅನುಮಾನ ಬರಲು ಶುರುವಾಯಿತು. ಈಗಲೂ ನೆನಸಿಕೊಂಡರೆ ಅನುಮಾನ ಪರಿಹಾರವೇ ಆದಂತೆನಿಸುವುದಿಲ್ಲ.
ಸುಶೀಲ   ಚಿಕ್ಕಮ್ಮನ ಕೈಗಾರಿಕೆ.

  ಅತಿಥಿ ಸತ್ಕಾರದ ಶೈಲಿಯಲ್ಲಿ ಸಾಗರ ಕಡೆಯವರಿಗಿಂತ ಸಿರಸಿಯ ಕಡೆ ಸ್ವಲ್ಪ ಭಿನ್ನ.ಮನೆ ದಣಕಲು ದಾಟುತ್ತಿರುವಂತೆ ಮೂಲೆ ಮೂಲೆಗಳಿಂದ ಸ್ವಾಗತದ ಧ್ವನಿ ಕೇಳಿ ಬರುತ್ತದೆ.'' ತಂಗೀ ಅಂದಿ, ಮಗಾ ಅಂದಿ, ಕೂಸೇ ಅಂದಿ,   ಅತ್ತೆ  ಅಂದಿ, ಮಾವ ಅಂದಿ,  ಇತ್ಯಾದಿತ್ಯಾದಿ ಅಂದೀ.....  ಎನ್ನುವ ಕರೆ  ಅಲೆಯಲೆಯಾಗಿ   ಕೇಳಿ ಬರತೊಡಗುತ್ತದೆ. ನನ್ನಜ್ಜನ ಮನೆ  ವಿಶೇಷತೆ ಎಂದರೆ    ಒಂದೇ ಮಾಡಿನಡಿ ಒಂಬತ್ತು ಮನೆಗಳಿವೆ.


 ನನ್ನಜ್ಜನ ಮನೆ,  ಇಡೀ ಊರಿಗೆ ಒಂದೇ ಜಗಲಿ

ಒಂದೇ ಕೋಳು. ಅಲ್ಲಿಗೆ ಹೋದೆವೆಂದರೆ ಆಚೀಚೆ ಮನೆಯವರಾದಿಯಾಗಿ ಎಲ್ಲರೂ ಮಾತನಾಡಿಸುವವರೇ.. ಎಲ್ಲರಿಗೂ 'ಹ್ಞೂ ಅಂದಿ,ಹ್ಞೂ ಅಂದಿ, ' ಎಂದು ಹೇಳುವಷ್ಟರಲ್ಲಿ ಒಂದು ಒಪ್ಪತ್ತೆ ಆಗಿಹೋಗುತ್ತಿತ್ತು. ಮಳೆ ನಿಂತ ಮೇಲೆ ಹನಿಯೊಂದು ಮೂಡುವಂತೆ ಆಗಾಗ ಕಂಡವರೆಲ್ಲಾ   'ತಂಗೀ ಅಂದಿ,' ಎನ್ನುವ ಪ್ರಕ್ರಿಯೆ ಮುಂದುವರೆಯುತ್ತಲೇ ಇರುತ್ತದೆ.   ಪ್ರತಿಯೊಬ್ಬರೂ, ಪ್ರತಿಯೊಬ್ಬರನ್ನೂ ಹೀಗೆಯೇ ಸಂಬಂಧಗಳನ್ನು ಆರೋಪಿಸಿಯೇ ಕರೆಯುವುದರಿಂದ ಚಿಕ್ಕ ಮಕ್ಕಳಾದಿಯಾಗಿ  ಎಲ್ಲರಿಗೂ  'ಯಾರು ಹೇಗೆ ನೆಂಟರು,' ಅನ್ನುವ ಮೂಲಜ್ಞಾನ ತಾನಾಗಿಯೇ ಒದಗಿಬಿಡುತ್ತದೆ! ನನ್ನ ಮಾವನ ಮೊಮ್ಮಗಳು ಮೇಧಿನಿ ಪುಟ್ಟ ಸೂಜು ಮೆಣಸಿನಕಾಯಿ, ಎಲ್ಲರನ್ನೂ ದೊಡ್ದವರಂತೆಯೇ ಕರೆದು ಗೊತ್ತಿಲ್ಲದವರನ್ನು 'ನೀನು ಅಕ್ಕನಾ ? ಅತ್ತಿಗೆಯಾ..?' ಎಂದು ಗೊತ್ತುಮಾಡಿಕೊಂಡು ಮುದ್ದಾಗಿ  ಮಾತನಾಡಿಸಿದ್ದು ಎಲ್ಲರಿಗೂ ಹರುಷವುಕ್ಕಿಸಿತು ಜೊತೆಗೆ,   ನನಗೆ ಸ್ವಲ್ಪ ಆಲೋಚನೆಗೆ ಹಚ್ಚಿತು.

ಶಹರಗಳಲ್ಲಿ ವಾಸಿಸುವ ಮಕ್ಕಳಿಗೆ ನಿಜಕ್ಕೂ  ಸಂಬಂಧಗಳ ಪ್ರಾಮುಖ್ಯತೆಯನ್ನು  ಡೆಮೋ  ಮಾಡಿಯೇ ತೋರಿಸಬೇಕಾಗಿ ಬರುತ್ತದೆ ಇನ್ನು ಮುಂದೆ.    ಮನೆಗೊಂದೇ ಮಗು ಕಾನ್ಸೆಪ್ಟಿನಡಿಯಲ್ಲಿ ಸಂಬಂಧಗಳು ಹೇಗೆ ಗೊತ್ತಾಗಬೇಕು..?
ಮೊದಲೆಲ್ಲಾ ಅಜ್ಜನ ಮನೆಗೆ ಹೋದರೆ ಒಂದು ಇಪ್ಪತೈದರಿಂದ ಮೂವತ್ತು ಮಕ್ಕಳು ನಮಗೆ ಆಟಕ್ಕೆ  ಸಿಗುತ್ತಿದ್ದರು. ಈಗ ಇಡೀ ಒಂಬತ್ತು ಮನೆ ಊರಿಗೆ ಒಂದೋ ಎರಡೋ ಮಕ್ಕಳು ! ಮನೆ ಮಕ್ಕಳೆಲ್ಲಾ ಊರು ಬಿಟ್ಟು ಶಹರ ಸೇರಿದುದರ ಪರಿಣಾಮ. ಅಜ್ಜ ಅಜ್ಜಿ ಮಾತ್ರ ಊರಲ್ಲಿ.  ಶ್ರೀಶಂ ಬ್ಲಾಗಿನ ರಾಘಣ್ಣ ಹೇಳಿದಂತೆ ಊರಲ್ಲಿ ಈಗ ಅಡಿಗೆ ಮನೆಲೊಂದು ಕೆಮ್ಮು, ಹೊರಗೆ ಜಗಲಿಯಲ್ಲೊಂದು  ಕೆಮ್ಮು !


  ಸಿರ್ಸಿ ಕಡೆಯ  ಇನ್ನೊಂದು ವಿಶೇಷತೆಯೆಂದರೆ, ಅತಿಥಿಗಳು ಬಂದಾಗ ಅವರಿಗೆ ಕೈಕಾಲು ತೊಳೆಯಲು ನೀರು ತಂದಿಟ್ಟು   ನಮಸ್ಕರಿಸಿ ಹೋಗುವ  ಪರಿಪಾಟ. ಮೊದಲೆಲ್ಲ ಗಮನಕ್ಕೆ ಬರುತ್ತಿರಲಿಲ್ಲ.   ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸುವ ಈ  ಕ್ರಮ ಎಷ್ಟೊಂದು ಮಹತ್ವ ಪೂರ್ಣವಾಗಿದೆ.!ಸಂಬಂಧಗಳನ್ನು ಗುರುತಿಸುವ, ಗೌರವಿಸುವ,  ಬೆಸೆಯುವ, ಬೆಳೆಸುವ, ಉಳಿಸುವ ಈ ಸಂಸ್ಕಾರ ಎಷ್ಟೊಂದು ಅರ್ಥಪೂರ್ಣ!   ಪೇಟೆ ಸೇರಿದ ಮಂದಿಯೆಲ್ಲಾ ಈ ಪದ್ಧತಿಯನ್ನು ಉಳಿಸಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ.  ಇಲ್ಲಿಯ ಧಾವ೦ತದ ಬದುಕಿನಲ್ಲಿ ಅದನ್ನೆಲ್ಲಾ ಅನುಸರಿಸಲು ಸಮಯ ಮತ್ತು ಅವಕಾಶ ಸಿಗದೇ   ಅಳಿವಿನಂಚಿಗೆ  ತಲುಪಲು ಹೆಚ್ಚು ಸಮಯ ಬೇಕಿಲ್ಲ. ಆ ಪದ್ಧತಿಗಳೆಲ್ಲಾ ನನಗೆ ಈಗ ಯಾಕೋ  ಆಪ್ಯಾಯಮಾನವಾಗುತ್ತಿವೆ. ಕಳೆದು ಹೋಗಿ ಬಿಡುತ್ತದೆ ಅನ್ನುವುದರ ಬಗೆಗೆ ಹೆಚ್ಚು ಪ್ರೀತಿ..  ನನ್ನ ಮಕ್ಕಳಿಗೆ ಇದೆಲ್ಲಾ ಹೊಸತಾದರೂ ಇಷ್ಟವಾಯಿತು.  


ಅಜ್ಜನ ಮನೆಯಲ್ಲಿ ಅತ್ತೆ ಊಟಕ್ಕೆ ಅನ್ನಕ್ಕೆ ಕಲೆಸಿಕೊಳ್ಳಲು ಬರೀ ಐದೇ ತರದ ಪದಾರ್ಥ ಮಾಡಿದ್ದಳು! ಇನ್ನೂ ಒಂದು ಪದಾರ್ಥ ಕಡಿಮೆಯಾಯಿತೆಂದು ಬೇಜಾರು ಮಾಡಿಕೊಂಡಳು ಜೊತೆಗೆ.! ಉಳಿದಂತೆ ಮೂರು ಸ್ವೀಟು.. ಸ್ವಲ್ಪ ಹಪ್ಪಳ, ಬಜೆ .....ಇತ್ಯಾದಿ..  ಇದೆಲ್ಲಾ ನಟರಾಜ್ ಗೆ ಫೋನಿನಲ್ಲಿ ಹೇಳಿ ಹೊಟ್ಟೆ ಉರಿಸೋಣವೆಂದರೆ ''ಓಹೋ ನೀನು ಈಗ ಜೀರೋ  ಸೈಜ್ಹಾಗಿ ಬರುತ್ತಿದ್ದೀಯ ಅನ್ನು...  ಸೊನ್ನೆಯ ಆಕಾರದಲ್ಲಿ..! '' ಎಂದು ನಕ್ಕರು. 


 ಬನವಾಸಿ ಮಧುಕೇಶ್ವರನ ಸನ್ನಿಧಿಯಲ್ಲಿ..

ಅಮ್ಮ ಅಣ್ಣನೊಂದಿಗೆ  ನಾನೂ ನನ್ನ ಮಗಳೂ ..

ಹೋಗುವಾಗ ಬರುವಾಗ  ದಾರಿಯಲ್ಲಿ ವಿಶಾಲವಾದ ಹಸಿರು  ಗದ್ದೆಗಳನ್ನು ನೋಡುವ  ಅವಕಾಶ ಮಾತ್ರಾ ಸಿಗಲಿಲ್ಲ. ಎಲ್ಲಾ ಕಡೆ  ಭತ್ತ ಕೊಯ್ದು  ಬೆತ್ತಲಾಗಿತ್ತು  ಭೂಮಿ. ಅಲ್ಲಲ್ಲಿ ಹಚ್ಚೆ ಹಾಕಿದಂತೆ ಕಬ್ಬಿನಗದ್ದೆಗಳು ಆಲೆಮನೆಗೆ ಕಾದಿದ್ದವು. 
ದಾರಿಯಲ್ಲೇ ಅದೆಷ್ಟು ಮಾತುಗಳು ಖರ್ಚಾದವು ..! ಒಂದಾದರೂ ಕೆಲಸಕ್ಕೆ ಬರುವಂಥದಲ್ಲ.    ಹಳ್ಳಿಯಿಂದ  ದಿಲ್ಲಿಯವರೆಗೆ, ಕೊನೆಕೊಯ್ಲಿನಿಂದ ರಿಸಿಶನ್ನಿನ ವರೆಗೆ,   ದೇವಸ್ಥಾನದಿಂದ ಪಾಕಿಸ್ತಾನದ ವರೆಗೆ,  ಹೀಗೆ ಒಂದಕ್ಕೊಂದು ತಾಳ ತಂತುಗಳಿಲ್ಲದೆ ಮಾತುಗಳು ರಸ್ತೆಯುದ್ದಕ್ಕೂ ಚೆಲ್ಲಾಡಿದವು. 
ಒಂದು ವಿಚಾರ ಹೇಳಿ ನನ್ನ ಅಣ್ಣ ನನ್ನ ತಲೆ ತಿಂದ..  ನಾನೂ ಹೋದಲ್ಲೆಲ್ಲಾ ದೊಡ್ಡದಾಗಿ    ಕಂಡ ಕಂಡಿದ್ದೆಲ್ಲಾ  ಫೋಟೋ ತೆಗೆಯುತ್ತಾ   ಫೋಸ್ ಕೊಡುತ್ತಿದ್ದೇನಲ್ಲಾ.   ''ಏ ಮಾರಾಯ್ತಿ.. ದೃಶ್ಯವನ್ನೂ ಶ್ರವ್ಯವನ್ನೂ  ರೆಕಾರ್ಡ್ ಮಾಡುವ ಟೆಕ್ನಾಲಜಿ  ಗೊತ್ತು ನಮಗೆ;   ಅದೇ ವಾಸನೆಯನ್ನು ರೆಕಾರ್ಡ್ ಮಾಡಲು ಸಾಧ್ಯವಾ..? ರುಚಿಯನ್ನು ರೆಕಾರ್ಡ್ ಮಾಡ್ಲಿಕ್ಕಾಗುತ್ತ..? ಟಚ್ ಫೀಲಿಂಗನ್ನು ಹಿಡಿದಿಡಲು  ಆಗತ್ತಾ..? !!! ''
  
 
ಹೀಗೆ ಮಾತು ಸಾಗುತ್ತಾ ಸಾಗುತ್ತಾ..ಇದೆಲ್ಲಾ ಟೆಕ್ನಾಲಜಿ   ನಮ್ಮ ಉಪನಿಷತ್ತುಗಳಲ್ಲಿ ಇರಬಹುದೆಂದೂ, ಜಪಾನಿನವರೋ, ಜರ್ಮನಿಯವರೋ ಅದನ್ನು ಅರ್ಥೈಸಿ ಪ್ರಾಡಕ್ಟ್  ತಯಾರಿಸುತ್ತಾರೆಂದೂ,  ಕಡೆಗೆ ಚೀನಾದವರು ಅದನ್ನು ಕದ್ದು ನಮಗೆ ಸೋವಿಯಲ್ಲಿ ಮಾರಬಹುದೆಂದೂ, ಆಗ ನಾವು ಅದನ್ನು ಖರೀದಿಸಬಹುದೆಂದೂ  ಊಹಿಸಿ ಅಲ್ಲಿಗೆ ಆ ತಲೆನೋವು ಕಡಿಮೆ ಮಾಡಿಕೊಂಡೆವು..!!!!

ಎಲ್ಲಿಂದಲೋ ಶುರುವಾದ ಮಾತು ಎಲ್ಲೆಲ್ಲಿಗೋ ಹೋಯಿತು.  ಅಂತೂ ಮುಗಿಸಿದೆ.. ಈಗಿನ ಮಾತನ್ನು..!!!
ವಂದನೆಗಳು.