ನನ್ನ ತಂದೆಯವರ ಬಳಿ ಒಂದು ಹಳೆ ಸೈಕಲ್ ಇದೆ.ಸಾವಿರದೊ೦ಬೈನೂರಾ ಐವತ್ತೇಳನೆ ಇಸವಿಯಲ್ಲಿ ನೂರಾ ಐವತ್ತೈದು ರೂಪಾಯಿಗಳಿಗೆ ಅವರು ಚೌಕಾಸಿ ಮಾಡಿ ಖರೀದಿಸಿದ್ದು ಅದು. ಅದು ಎಷ್ಟು ಹಳೆಯದು ಎಂದು ಅವರಿಗೂ ಗೊತ್ತಿಲ್ಲ..! ಆವರು ಖರೀದಿಸಿದ್ದೇ ಸೆಕೆಂಡ್ ಹ್ಯಾಂಡ್ ಸೈಕಲ್ಲು.. ಈಗ ಅದರ ಬಹುತೇಕ ಎಲ್ಲಾ ಭಾಗಗಳನ್ನೂ ಬದಲಾಯಿಸಲಾಗಿದೆ.. ! ಎಲ್ಲಾ ಪಾರ್ಟ್ಸೂ ಒಟ್ಟಿಗೆ ಹಾಳಾಗದು.ಅಂತೆಯೇ ಹೊಸ ಬಿಡಿ ಭಾಗ ಜೋಡಿಸಿದಾಗ ಹಳೆ ಭಾಗದ ಹಳೆತನ ಮುಂದುವರೆದುಕೊಂಡು ಹೋಗುತ್ತಿರುತ್ತದೆ. ಅಂತೂ ಅಪ್ಪಯ್ಯನಿಗೆ [ನಮ್ಮ ತಂದೆ ] ವಯಸ್ಸು ಈಗ ಎಪ್ಪತ್ತೈದು ದಾಟಿದ ಹಾಗೆ ಅದಕ್ಕೂ ಐವತ್ತೊಂದೆರಡಾದರೂ ದಾಟಿದ್ದಿರಲೇ ಬೇಕು!
ಅಪ್ಪಯ್ಯ ಕಷ್ಟ ಜೀವಿ.. ಬಹು ಕಷ್ಟದ ಬಾಲ್ಯ . ಅಪ್ಪಯ್ಯನ ಬದುಕನ್ನು ಅವನೇ ಬದುಕಿದ್ದಾನೆ. ಕಿತ್ತಳೆ ಹಣ್ಣಿನ ಬುಟ್ಟಿಯನ್ನು ತಲೆ ಮೇಲೆ ಹೊತ್ತು ಹದಿನೈದು ಮೈಲಿ ದೂರದ ಸಂತೆಗೆ ಹೋಗಿ ಮಾರಿ ಸಿಕ್ಕ ಹಣದಲ್ಲಿ ದಿನಸಿ ತಂದು ಆವತ್ತಿನ ಊಟ ಉಣ್ಣುವ ಪರಿಸ್ಥಿತಿ ಇತ್ತಾಗ. ಪರಿಸ್ಥಿತಿ ಸ್ವಲ್ಪ ಸುಧಾರಿಸಿದಾಗ ಖರೀದಿಸಿದ ಸೈಕಲ್ಲು ಅವನ ಬಹುತೇಕ ಕಷ್ಟಗಳನ್ನು ತಾನೂ ಹಂಚಿಕೊಂಡಿದೆ. ಅದಕ್ಕಾಗಿಯೇ ಏನೋ ಅದರ ಮೇಲೆ ತೀವ್ರ ಅಭಿಮಾನ ಆಪ್ಪಯ್ಯನಿಗೆ. ಜೀವನದ ಕಷ್ಟದ ಸಮಯದಲ್ಲಿ ಜೊತೆ ಕೊಟ್ಟ ಯಾರೇ ಆಗಲಿ, ಅದು ಜೀವವೇ ಆಗಲೀ ಜಡವೇ ಆಗಲೀ ಅದರೆಡೆಗೊಂದು ಅಭಿಮಾನ ಕೊನೆವರೆಗೂ ಮನುಷ್ಯನಲ್ಲಿ ಬೇರೂರಿರುತ್ತದೆ.ಅದನ್ನು ಬಾರಿ ಬಾರಿಗೂ ವ್ಯಕ್ತ ಪಡಿಸಲೇ ಬೇಕೆಂದಿಲ್ಲ..
ಬಸ್ಸು, ಇನ್ನಿತರೇ ವಾಹನಾದಿ ಸೌಕರ್ಯಗಳಾದ ಮೇಲೆ ಅಪ್ಪಯ್ಯ ಅದನ್ನು ಚಲಾಯಿಸುವುದನ್ನು ಬಿಟ್ಟಿದ್ದಾನೆ. ಆದರೆ ಮನೆಗೆ ಬರುವ ನೆಂಟರ ಮಕ್ಕಳಾದಿಯಾಗಿ ಅನೇಕ ಜನರು ಸೈಕಲ್ ಹೊಡೆಯುವುದನ್ನು ಅಪ್ಪಯ್ಯನ ಸೈಕಲ್ಲಿನಲ್ಲಿಯೇ ಕಲಿತಿದ್ದಾರೆ. ದೂರದ ಊರಿಂದ ಕೂಲಿಗೆ ಬರುವ ಕೂಲಿಯಾಳುಗಳಿಗೂ ವಾರಕ್ಕೆ ಮೂರು, ನಾಲ್ಕು ದಿನ ದಾರಿ ಹಾಯಿಸುತ್ತಿದ್ದುದು ಅದರ ಚರಿತ್ರೆಯ ಪುಟಗಳಲ್ಲಿದೆ. ಈಗಲೂ ವರ್ಷಕ್ಕೊಮ್ಮೆ ಅದರ ಒವರ್ಹ್ವಾಲಿಂಗ್ ಮಾಡಿಸಿ ಜತನ ಮಾಡುತ್ತಿರುತ್ತಾನೆ.
ಅಪ್ಪಯ್ಯ ಎಷ್ಟೋ ಕಷ್ಟಗಳನ್ನು ಸೈಕಲ್ಲಿನ ಜೊತೆಯಲ್ಲಿಯೇ ಅನುಭವಿಸಿದ್ದಾನೆ. ಹೋರಾಡಿದ್ದಾನೆ, ಬಿದ್ದಿದ್ದಾನೆ, ಗೆದ್ದಿದ್ದಾನೆ.ಈಗ ಮನೆಯಲ್ಲಿ ಮೊಮ್ಮೊಕ್ಕಳದು ಚಿಕ್ಕ ಪುಟ್ಟ ಸೈಕಲ್ಲಿನಿಂದ ಹಿಡಿದು ಗೇರ್ ಸೈಕಲ್ಲಿನ ವರೆಗೆ ಇದೆ. ಆದರೆ ಅವ್ಯಾವುವೂ ಅಪ್ಪಯ್ಯನ ಸೈಕಲ್ಲಿನ ಯೋಗ್ಯತೆಗೆ ಬರವು. 'ಈಗಿನ ಹತ್ ಸೈಕಲ್ಲಿನ ಯೋಗ್ಯತೆ ಯನ್ ಒಂದ್ ಸೈಕಲ್ಲಿನ ಯೋಗ್ಯತಿಗೆ ಸರಿ ಬತಲೇ..' ಎಂದು ಆಗಾಗ ಸ್ವಗತದಲ್ಲಿ ಉದ್ಘರಿಸುತ್ತಿರುತ್ತಾನೆ.
'ಬರ್ ಬರ್ತಿದ್ದಂಗೆ ಹಾಳಾಕ್ಯಂಡೆ ಇರ್ತು... ಎಂತಾ ಸೈಕಲ್ ಮಾಡ್ತ್ವೆನ..' ಅಂಗಳದಲ್ಲಿ ಸೈಕಲ್ ಕಸರತ್ತು ನಡೆಸುವ ಮೊಮ್ಮೊಕ್ಕಳನ್ನು ಕಿಟಕಿಯಿಂದ ನೋಡುತ್ತಾ ತಾಂಬೂಲ ಮೆಲ್ಲುತ್ತಿರುತ್ತಾನೆ..
'ಬರ್ ಬರ್ತಿದ್ದಂಗೆ ಹಾಳಾಕ್ಯಂಡೆ ಇರ್ತು... ಎಂತಾ ಸೈಕಲ್ ಮಾಡ್ತ್ವೆನ..' ಅಂಗಳದಲ್ಲಿ ಸೈಕಲ್ ಕಸರತ್ತು ನಡೆಸುವ ಮೊಮ್ಮೊಕ್ಕಳನ್ನು ಕಿಟಕಿಯಿಂದ ನೋಡುತ್ತಾ ತಾಂಬೂಲ ಮೆಲ್ಲುತ್ತಿರುತ್ತಾನೆ..
ಅಪ್ಪಯ್ಯನ ಹಳೆ ಕಷ್ಟದ ಕಥೆಯಲ್ಲಿ ಸೈಕಲ್ಲಿನದು ಒಂದು ಪ್ರಮುಖ ಪಾತ್ರ. ಆಗ ಕಷ್ಟ ಪಟ್ಟಿದ್ದೆಲ್ಲವೂ ಈಗ ಅಪ್ಪಯ್ಯನದು ನೆನಪು ಅಷ್ಟೇ. ಅದು ಹಾಗೆಯೇ.. ಸುಖದ ಮೆಟ್ಟಿಲಿನಲ್ಲಿ ನಿಂತು ತಿರುಗಿ ನೋಡಿದಾಗ ಪಟ್ಟ ಕಷ್ಟ, ನೋವುಗಳೆಲ್ಲವೂ ಸುಖದ ನೋವುಗಳಾಗೆ ಕಾಣಿಸುತ್ತವೆ. ಜಯಿಸಿದ ಸಾರ್ಥಕ ಭಾವ ಅನ್ನುವುದು ಕಷ್ಟದ ಎಸೆನ್ಸ್ ಒಂದನ್ನು ಮಾತ್ರ ಉಳಿಸುತ್ತದೆ.
ಹೀಗಿದ್ದಾಗಲೂ ಒಮ್ಮೆ ಅಪ್ಪಯ್ಯನಿಗೆ ಆ ಸೈಕಲ್ಲನ್ನು ಮಾರುವ ಆಲೋಚನೆ ಬಂದು ಬಿಟ್ಟಿತ್ತು. ''ನಮಗಂತೂ ಇದು ಇನ್ನು ಉಪಯೋಗಿಲ್ಲೇ. . ಸುಮ್ನೆ ಮನೇಲಿ ತುಕ್ಕು ಹಿಡಿಸ ಬದ್ಲು ಹುಟ್ಟಿದಷ್ಟಕ್ಕೆ ಕೊಟ್ ಹಣದ್ರಾತು. ಲಾಭಕ್ಕಲ್ಲ, ಪುಗಸಟ್ಟೆ ಕೊಡದು ಬ್ಯಾಡ ಹೇಳಿ.. ಏನ್ ಹೇಳ್ತ್ಯ ಗಣಪಯ್ಯ ನೀನು..'' ಎಂದು ಅಪ್ಪಯ್ಯ ತನ್ನ ಸ್ನೇಹಿತನಲ್ಲಿ ವಿಷಯ ಪ್ರಸ್ತಾಪ ಮಾಡಿದ್ದು ಹೌದು. ಅಪ್ಪಯ್ಯನ ಕಷ್ಟ ಸುಖಗಳನ್ನೆಲ್ಲಾ ಕಣ್ಣಾರೆ ಕಂಡ ಆ ಸ್ನೇಹಿತ ಹೇಳಿದ್ದಿಷ್ಟು.'' ಹೌದೌದು.. ನಿಂಗೆ ಇದೊಂದು ಸೈಕಲ್ಲೂ ..ಮತ್ತೆ ಕೆಂಪಿ ದನಾನೂ ಮಾರ್ಕ್ಯಂಡೆ ಅರಮನೆ ಕಟ್ಸಕೂ ಅಂತ ವಿಚಾರಿದ್ದು ಕಾಣ್ತು'' ಎಂದು ಒಂದೇ ಮಾತಿನಲ್ಲಿ ಅಪ್ಪಯ್ಯನ
ವಿಚಾರಕ್ಕೆ ಕೊಡಲಿ ಏಟು ಹಾಕಿದ. ಅಪ್ಪಯ್ಯ ನಿಜಕ್ಕೂ ತಾನು ಈ ತರಾ ವಿಚಾರ ಮಾಡಿದೆನಲ್ಲಾ ಎಂದು ಭಾರೀ ಬೇಜಾರು ಮಾಡಿಕೊಂಡದ್ದು ನನಗಿನ್ನೂ ನೆನಪಿದೆ.
ಕೆಂಪಿ ದನವೂ ಅಷ್ಟೇ.ಅದು ನಮ್ಮನೆಯಲ್ಲೇ ಹುಟ್ಟಿದ ಕರು ದೊಡ್ಡದಾಗಿದ್ದು. ಬಹುಷಃ ನಮ್ಮೂರಲ್ಲಿ ಯಾರ ಮನೆಗೆ ಹೋದರು ಕೆಂಪಿ ಅನ್ನುವ ಹೆಸರಿನ ದನವೊಂದಿರುತ್ತದೆ. ದನಗಳಿಗೆ ಕೆಂಪಿ, ಗಂಗೆ, ಗೌರಿ, ಕಪಿಲೆ, ಬೆಳ್ಳಿ, ಈ ಹೆಸರುಗಳು ಮಾಮೂಲು. ಅದು ಹೇಗಿತ್ತಪ್ಪಾ ಅಂದ್ರೆ, ಗಾ೦ವಟೀ ದನ ಕುಳ್ಳಕ್ಕೆ, ಚಿಕ್ಕದಾಗಿ, ಮುದ್ದಾಗಿ ಇತ್ತು.ಬಣ್ಣ ಕೂಡಾ ಕೆಂಪೇ. ಕರು ಹಾಕಿದ ದಿನದಿಂದ ಹಾಲು ಕೊಡಲು ಶುರು ಮಾಡಿದರೆ ಮತ್ತೆ ಮೂರು ವರ್ಷಕ್ಕೆ ಮತ್ತೊಂದು ಕರು ಹಾಕುವ ಹಿಂದಿನ ದಿನದ ವರೆಗೂ ಒಂದು ದಿನವೂ ಬಿಟ್ಟದ್ದಿಲ್ಲ. ಕರು ಹಾಕಿದ ಶುರುವಿನಲ್ಲಿ ಕರುವಿಗೆ ಬಿಟ್ಟು ಅರ್ಧ ಲೀಟರಿನಷ್ಟು ಹಾಲು ಕೊಡುತ್ತಾ ಕೊನೆಯಲ್ಲಿ ಅರ್ಧ ಕಾಫೀ ಕಪ್ಪಿನ ಪ್ರಮಾಣಕ್ಕೆ ಇಳಿಯುತ್ತಿತ್ತು. ಅದನ್ನಾದರೂ ಆಯಿ ಎಲ್ಲದಕ್ಕೂ ಮೊದಲಾಗಿ ಕರೆದು ನೋಡುವವರ ಕಣ್ಣು ಬೀಳಬಾರದೆಂದು ಸೆರಗು ಮುಚ್ಚಿ ಅಡುಗೆ ಮನೆಗೆ ಒಯ್ಯುತ್ತಿದ್ದಳು. ಒಂದು ದಿನ ಒದ್ದಿದ್ದಿಲ್ಲ. ಹಾಯ್ದಿದ್ದಿಲ್ಲ. ದೇವರಿಗೆ ಹೂ ತಪ್ಪಿದರೂ ಕೆಂಪಿ ದನದ ಹಾಲು ತಪ್ಪದು. ಅದು ಇರುವ ವರೆಗೆ ದೊಡ್ದಹಬ್ಬದ ಗೋ ಪೂಜೆಗೆ ಬೇರೆ ದನಗಳಿಗೆ ಪ್ರವೇಶವಿರಲಿಲ್ಲ. ಕರು ಹಾಕಿದ ಹತ್ತು ದಿನ ಸೂತಕ ಎಂದು ದೇವರಿಗೆ ನೈವೇದ್ಯಕ್ಕೆ ಅದರ ಹಾಲಿರಲಿಲ್ಲ ಹೊರತಾಗಿ ಕಾಫೀ ಬಳಕೆಗೆ ಅದರದ್ದೇ ಹಾಲು. ಕರು ಹಾಕಿತು ಗಿಣ್ಣ ಸಿಗುವುದೆಂಬ ಭರವಸೆಯನ್ನೆಲ್ಲಾ ನಾವ್ಯಾರೂ ಇಟ್ಟು ಕೊಳ್ಳುವ ಹಾಗೆಯೇ ಇರಲಿಲ್ಲ.ಸಾರ್ವಕಾಲಿಕ ಹಾಲು ಸರಬರಾಜು ಹಾಗಾಗಿ ಗಿಣ್ಣವಾಗುವುದು ಹೇಗೆ..? ಈ ದನವೇ ಹೆಚ್ಚುಗಾರಿಕೆಗೆ ಕಾರಣವಾಗುವ ಬಗೆ ಹೇಗೆ ಎಂದರೆ ಎಷ್ಟೊತ್ತಿಗೆ ಹೋಗಿ ಹಾಲು ಕರೆದರೂ ಇದ್ದಷ್ಟನ್ನು ಕೊಡುವ ಪರಿ.ಬಂದ ನೆಂಟರಿಗೆ ಕಾಫೀ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಲು ಈ ದನವೇ ಕಾರಣ. ಉಳಿದಂತೆ ನಾಲ್ಕಾರು ದನಗಳು ಕೊಟ್ಟಿಗೆ ತುಂಬಾ ಇದ್ದವು ಕೂಡಾ. ಎಲ್ಲವೂ ಕಾಟು ದನಗಳೇ ಆದರೂ ಅದರಲ್ಲಿ ಎರಡು ಬರಡು, ಒಂದು ಇನ್ನೂ ಕರು ಹಾಕದ ಮಣಕ, ಇನ್ನೆರಡು ಚಾಳಿ. ಚಾಳಿ ಮಾಡುವ ದನಗಳೆಂದಾದರೂ ಹೇಗೆ, ಅರ್ಧ ಲೋಟ ಹಾಲು ಕರೆಯಲು ಆಯಿ ಇಪ್ಪತ್ತು ಬಾರಿ ಕೊಟ್ಟಿಗೆಗೂ ಮನೆಗೂ ಓಡಾಡಬೇಕಿತ್ತು.
ಹಾಗಾಗಿ ಈ ಎರಡು ಸಂಗತಿಗಳಲ್ಲಿ ಅಪ್ಪಯ್ಯನಿಗೆ ನಿಯತ್ತಿಗಿಂತಾ ಬೇರೆ ಯಾವುದೂ ಕಾಣಿಸಿಲ್ಲ. ತನ್ನ ಕಷ್ಟದ ಸಮಯದಲ್ಲಿ ಇವೆರಡೂ ತನ್ನ ಕೈ ಬಿಟ್ಟಿಲ್ಲ ಎನ್ನುವ ಸಮಾಧಾನ ಅವನಿಗೆ.ಎಷ್ಟೋ ದೊಡ್ಡ ದೊಡ್ಡ ಸಂಗತಿಗಳು ಇದ್ದರೂ ಕೂಡಾ ಕೆಲವೊಮ್ಮೆ ಚಿಕ್ಕ ಚಿಕ್ಕ ವಿಷಯಗಳಲ್ಲಿ ಸಿಗುವ ಸಾಂತ್ವಾನ ಹೆಚ್ಚಾಗಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ.
ಈಗ ಕೊಟ್ಟಿಗೆ ತು೦ಬಾ ದೊಡ್ಡ ಜಾತಿಯ ದನಗಳೇ ಇವೆ. ಬೇಕಷ್ಟು ಹಾಲು ಕೊಡುತ್ತವೆ. ಆದರೂ ಕಷ್ಟ ಪಟ್ಟು ಪಡೆದಿದ್ದರ ಸುಖ ಇದರಲ್ಲಿಲ್ಲ..! ಆಗ ಪ್ರತಿ ಕ್ಷಣವೂ ಅನುಭವಕ್ಕೆ ಬರುತ್ತಿತ್ತು.. ಕಷ್ಟದ್ದು.! ಸುಲಭವಾಗಿ ಸಿಕ್ಕುವುದರೆಡೆಗೆ ಯಾವಾಗಲೂ ತಾತ್ಸಾರವೇ ನಮಗೆ. ಮೊಸರು ತಾಡನೆಗೊಳಗಾಗಿ ಆಗಿ ಕೊನೆಯಲ್ಲಿ ಬೆಣ್ಣೆ ಸಿಗುವುದಿಲ್ಲವೇ..?ಹಾಗೆ..ಜೀವನ ಕೂಡ.. ಅಪ್ಪಯ್ಯನ ಪ್ರಕಾರ. ಸುಖದ ಬೆಲೆ ಗೊತ್ತಾಗಬೇಕಿದ್ದರೆ ಅದಕ್ಕಾಗಿ ಹಗಲಿರುಳೂ ಹಂಬಲಿಸ ಬೇಕು.
ಕೆಂಪಿ ದನ ಈಗಿಲ್ಲ.. ಆದರೆ ಸೈಕಲ್ಲು ಮಾತ್ರಾ ಅಪ್ಪಯ್ಯನ ಕಷ್ಟಗಳಿಗೆ ಸಾಕ್ಷಿಯಾಗಿ ಇನ್ನೂ ಬಳಕೆಯಲ್ಲಿದೆ.
ವಂದನೆಗಳು.