Sunday, November 11, 2012
Friday, November 2, 2012
ಬಾಳೆದಿಂಡಿನ ದೀಪಸ್ಟ್ಯಾಂಡ್..
ಕಾರ್ತಿಕ ಮಾಸದುದ್ದಕ್ಕೂನಡೆಯುವ ದೀಪೋತ್ಸವಕ್ಕೆ ದೀಪಾವಳಿಯೇ ನಾಂದಿ. ಮನೆಗಳಲ್ಲಿ, ದೇವಾಲಯಗಳಲ್ಲಿ, ಅಶ್ವತ್ಥ ಕಟ್ಟೆಯ ಸುತ್ತ, ಹೀಗೆ ಬಗೆ ಬಗೆಯಾಗಿ ದೀಪ ಬೆಳಗಿ ದೀಪೋತ್ಸವ ನಡೆಸುತ್ತಾರೆ. ಬಾನಂಗಳಕ್ಕೆ ಸೆಡ್ಡು ಹೊಡೆಯುವಂತೆ ಊರ ತುಂಬಾ ದೀಪಗಳ ಬಿತ್ತನೆ ಮಾಡುತ್ತಾರೆ. ದೀಪದಿಂದ ದೀಪ ಬೆಳಗುತ್ತಾರೆ. ಮೈ ಮನಗಳಲ್ಲೆಲ್ಲಾ ಬೆಳಕನ್ನೇ ತುಂಬಿಕೊಳ್ಳಲು ಹವಣಿಸುತ್ತಾರೆ. ದೀಪ ದಾನದ ಮೂಲಕ ಜ್ಞಾನದಾನದ ಸಂದೇಶವನ್ನು ಸಾರಲಾಗುತ್ತದೆ. ವರ್ಷಕ್ಕೆ ಮೂರು ದಿನದ ಮಟ್ಟಿಗೆ ಭೂಮಿಗಿಳಿದು ಬರುವ ಬಲೀಂದ್ರನಿಗೆ ದೀಪಾರಾಧನೆಯಿಂದ ಸ್ವಾಗತ ಮತ್ತು ಬೀಳ್ಕೊಡುಗೆ!
ಎಲ್ಲಾ ಕಡೆ ಹಣತೆಗೆ ಎಣ್ಣೆ ಹಾಕಿ ಬತ್ತಿ ಇಟ್ಟು ಅದಕ್ಕೆ ದೀಪ ಹಚ್ಚುವುದು ಸಾಮಾನ್ಯ. ಅದು ಸಾಂಪ್ರದಾಯಿಕ ಶೈಲಿಯಾದರೂ ಗಾಳಿ ಬಂದರೆ ದೀಪ ಆರಿ ಹೋಗುತ್ತದೆ. ತುಂಬಾ ಹೊತ್ತು ಉರಿಯುವಂತೆ ಮತ್ತು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಲು ಕೆಲವು ಸರಳ ಉಪಾಯಗಳು ಹಲವಾರಿವೆ. ಅವುಗಳ ಪೈಕಿ ಒಂದು ಬಾಳೆ ದಿಂಡಿನ ದೀಪಸ್ಟ್ಯಾಂಡ್. ಅದನ್ನು ತಯಾರಿಸುವುದು ಹೇಗೆ ? ಏನೆಲ್ಲ ವಸ್ತು ಬೇಕು ಎಂಬ ಬಗ್ಗೆ ತಿಳಿದುಕೊಳ್ಳೋಣ.
ಬಳಸುವ ವಸ್ತುಗಳು - ಸೂಕ್ತ ಅಳತೆಯ ಬಾಳೆ ದಿಂಡು, ಹಣತೆ ದೀಪ ಅಥವಾ ಮೊಂಬತ್ತಿ, ಚಿಕ್ಕ ಚಾಕು.
* ಮೊದಲು ಬಾಳೆ ದಿಂಡಿನ ಹೊರಗೆ ಇರುವ ಒಣಗಿದ ಮತ್ತು ಹಸಿರು ನಾರನ್ನು ಬಿಡಿಸಿ ಎಸೆದು ಒಳಗಿರುವ ಬಿಳಿ ನಾರನ್ನು ಮಾತ್ರ ಚಂದವಾಗಿ ಬಿಡಿಸಿಕೊಳ್ಳಿ.
* ಬಾಳೆ ದಿಂಡಿನ ಎರಡು ನಾರನ್ನು ಒಂದರೊಳಗೊಂದು ಹಾಕಿ ಕೊಳವೆಯಂತೆ ಮಾಡಿ.
* ನಾರಿನ ಮೇಲೆ ಬೇಕಿದ್ದರೆ ಚಿಕ್ಕ ಚಿಕ್ಕ ಕಿಂಡಿ ಅಥವಾ ವಿನ್ಯಾಸಗಳನ್ನು ಕೊರೆದು ನಮ್ಮ ಕಲಾತ್ಮಕತೆಯನ್ನು ಸಾದರಪಡಿಸಬಹುದು
* ನಾರಿನ ಮೇಲೆ ಬೇಕಿದ್ದರೆ ಚಿಕ್ಕ ಚಿಕ್ಕ ಕಿಂಡಿ ಅಥವಾ ವಿನ್ಯಾಸಗಳನ್ನು ಕೊರೆದು ನಮ್ಮ ಕಲಾತ್ಮಕತೆಯನ್ನು ಸಾದರಪಡಿಸಬಹುದು
* ಹಣತೆ ಅಥವಾ ಮೊಂಬತ್ತಿಯನ್ನು ಹಚ್ಚಿ ಮಧ್ಯದಲ್ಲಿ ಬರುವಂತೆ ಇಟ್ಟು ಬಾಳೆದಿಂಡಿನ ಕೊಳವೆಯನ್ನು ಕೌಚಿಡಿ.
ಈಗ ಸಾವಯವ ಕೊಳವೆ ದೀಪ ರೆಡಿ. ಬಾಳೆ ನಾರಿನ ಮೂಲಕ ಹೊರಬರುವ ಬೆಳಕು ನೋಡಲು ತುಂಬಾ ಆಕರ್ಷಕವಾಗಿರುತ್ತದೆ. ಡೂಮ್ ಲೈಟಿನಂತೆ ಶ್ರೀಮಂತವಾಗಿ ಕಂಗೊಳಿಸುತ್ತದೆ. ಗಾರ್ಡನ್ನಿನ ಹೂಗಿಡಗಳ ಪಕ್ಕದಲ್ಲಿ ಇಟ್ಟರೆ ನೋಡಲು ನಮ್ಮ ಮನೆಯಂಗಳವೀಗ ನಂದನದ ಅಂಗಳ !
ದೀಪಾವಳಿಯ ಹೊರತಾಗಿ ಮನೆಯ ವಿಶೇಷ ಕಾರ್ಯಕ್ರಮಗಳಲ್ಲೂ ಹೀಗೆಯೇ ದೀಪಗಳನ್ನು ಹಚ್ಚಿದರೆ ಸುಂದರ ಮತ್ತು ಎಣ್ಣೆ ಖಾಲಿಯಾಗುವವರೆಗೆ ದೀಪ ಆರುವ ಭಯವಿಲ್ಲ. ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೋಡಿ.
ಇದು ದೀಪಾವಳಿ ಸ್ಪೆಶಲ್ ದೀಪ.
ಈ ಲೇಖನ ದಿನಾಂಕ 03-11-2012 ರ ವಿಜಯಕರ್ನಾಟಕ ಪತ್ರಿಕೆಯ ವಿ.ಕೆ ಪ್ರಾಪರ್ಟಿಯಲ್ಲಿ ಪ್ರಕಟವಾಗಿದೆ.
Labels:
ತಿದ್ದಿ ...ತೀಡಿ..,
ಪ್ರಕೃತಿ...ಪಾಠ..,
ಸುತ್ತಾ ಮುತ್ತಾ
Subscribe to:
Posts (Atom)