Saturday, September 24, 2011

ಮತ್ತೆ ಬಂತು ಚಿತ್ತಾರದರಮನೆಯಲ್ಲಿ ಹುಟ್ಟಿದ ಹಬ್ಬ..!

  ಎರಡು ಹೆಜ್ಜೆ ಮುಂದಿಟ್ಟಿದ್ದೇನೆ..

ತುಂಬಾ ಚಿಕ್ಕದು ನನ್ನ ಅಕ್ಷರ ಪ್ರಪಂಚ.  ಇಲ್ಲಿಯ ವರೆಗೆ ನಾನು ಪೋಸ್ಟಿಸಿದ್ದು; ಅದು  ಯಾವ ಪ್ರಾಕಾರ  ಅನ್ನುವುದು ಕೆಲವೊಮ್ಮೆ ನನಗೆ ಗೊಂದಲ ಉಂಟಾಗುತ್ತದೆ.  ನಾನು ಬರೆದಿದ್ದು ಕಥೆಯೋ ಕವನವೋ, ಕಾದಂಬರಿಯೋ, ಹಾಸ್ಯವೋ, ಹರಟೆಯೋ, ಅಂತೂ ನಾನು ಅದನ್ನು ಏನೆಂಬುದಾಗಿ  ತಿಳಿದುಕೊಂಡಿದ್ದೇನೆ ಎನ್ನುವುದನ್ನು ಕಥೆ, ಹರಟೆ, ಕವನ ಎನ್ನುವ ಲೇಬಲ್ ಹಚ್ಚಿ ನಿಮಗೆ ತಿಳಿಸಿದ್ದೇನೆ.ಸಹ ಬ್ಲಾಗಿಗರಿಂದಲೇ ನಾನು ಬರೆಯುವುದನ್ನು ಕಲಿತಿದ್ದು.  ಸಾಹಿತ್ಯ ಅದು, ಇದು, ಮಣ್ಣು ಮಸಿ ಎನ್ನುವ ತೀರಾ ಗೋಜಿಗೆ ಹೋಗುವವಳೇನೂ ನಾನಲ್ಲ.. ಆದರೆ ಬಾಲ್ಯದಿಂದಲೂ  ವಿಪರೀತ  ಓದುವ ಹುಚ್ಚು. ಪಾಠದ ಪುಸ್ತಕಕ್ಕಿಂತ ಬೊಂಬೆಮನೆ, ಚಂದಮಾಮ,  ಬಾಲಮಿತ್ರ, ಮಯೂರ, ತುಷಾರ, ತರಂಗ, ವಾರಪತ್ರಿಕೆ, ಪ್ರಜಾಮತ, ಲೆಕ್ಕವಿಲ್ಲದಷ್ಟು ಕಾದಂಬರಿಗಳು, ವಿಧ ವಿಧ ಪುಸ್ತಕಗಳು   ಹೀಗೆ ಕಾಲಕ್ಕೆ ತಕ್ಕಂತೆ ವಯಸ್ಸಿಗನುಗುಣವಾಗಿ ಪುಸ್ತಕಗಳ ಸಂತೆಯೇ ನನ್ನೆದುರು. 


ಆದರೆ ಈಗೀಗ ಓದಲು ಸಮಯ ಸಾಲುತ್ತಿಲ್ಲ ಎನ್ನುವ ನೆವವಿದೆ..! ಓದದಿದ್ದರೆ ಬರೆಯುವಾಗ ತಡವರಿಸುತ್ತದೆ,  ಮೊದಲೆಲ್ಲಾ ಬ್ಲಾಗು ವಾರಕ್ಕೊಮ್ಮೆ ಹೊಸ ಪೋಸ್ಟಿನಿಂದ ಕಂಗೊಳಿಸುತ್ತಿತ್ತು. ಈಗ ವಾರ ಮುಗಿದು ತಿಂಗಳು ಕಳೆದರೂ  ಬಾಗಿಲು ಬಳಿದು ರಂಗೋಲೆ ಇಡಲು ಸಾಧ್ಯವಾಗುತ್ತಿಲ್ಲ. ಆದರೂ ಚಿತ್ತಾರದರಮನೆಗೆ ಎರಡು ತುಂಬಿದ ಸಂಭ್ರಮ   ಸಡಗರದಿಂದ ಬರೆಯಲು ತೊಡಗಿದ್ದೇನೆ.ಏನು ಬರೆಯಲಿ? ಹೇಗೆ ಬರೆಯಲಿ?  ಎನ್ನುವ ಹುಡುಕಾಟದಲ್ಲಿಯೇ ಓಡಾಡುತ್ತಿದ್ದೇನೆ.ಚುನಾವಣೆ ಬಂದಾಗ ರಾಜಕಾರಣಿಗಳು ಎಲ್ಲಾ ತೋರಿಕೆಯ  ಕಾಮಗಾರಿಗಳನ್ನೂ ಮಾಡಿ ಮುಗಿಸಲು ಹವಣಿಸುವುದಿಲ್ಲವೇ..? ಹಾಗೆಯೇ.  ಬರೆಯಲು ಸುಮಾರು ವಿಷಯ, ವಿಶೇಷ ಇದ್ದರೂ....  ಬರೆಯಬೇಕು ಅಂದುಕೊಂಡ ವಿಚಾರವನ್ನು ಮತ್ಯಾರೋ ಬರೆದಿದ್ದಾರೆ, ಮತ್ತೆ ಅದನ್ನೇ ಬರೆಯುವುದೇನು ಅನ್ನುವ ಪಲಾಯನವಾದ ಕೂಡಾ ಇದೆ....!


ಎಲ್ಲರಿಗೂ ನನ್ನಂತೆ ಆಗುತ್ತಿದೆಯೇನೋ ?ಬ್ಲಾಗ್ ಬರೆಯುವವರ ಉತ್ಸಾಹ ಕಡಿಮೆಯಾದಂತಿದೆ,  ಮಾತಿಗೆ ಸಿಕ್ಕವರಲ್ಲಿ , ಏನ್ರೀ ಹೊಸಾ ಪೋಸ್ಟ್ ಇದೆಯಾ ? ..
ನಿಮ್ಮದಿದೆಯಾ..? ಎಂದು ಪುನಃ ಪ್ರಶ್ನಿಸಿ ಎರಡೂ ಕಡೆಗೂ ಇಲ್ಲಪ್ಪಾ .. ಎನ್ನುವ ಉತ್ತರದೊಂದಿಗೆ ಇವರು ನಮ್ಮೊಂದಿಗಿದ್ದಾರೆ ಎನ್ನುವ ಕೆಟ್ಟ ಸಮಾಧಾನ ಹೊಂದುವುದೇ ಆಗಿದೆ.ಇಲ್ಲ ಅಂದರೆ ಅವರೆಲ್ಲಾ  ಬರೆದು ಬಿಡುತ್ತಾರೆ ಅನ್ನುವ ಹುಳುಕಿಗಾದರೂ ನಾನೂ  ತಡಕಾಡಿ ಬರೆದುಬಿಡಬಹುದಿತ್ತು!

ಇರಲಿ, ನಾನು ತೀರ್ಮಾನಿಸಿದ್ದೇನೆಂದರೆ, ಮೂರು ತುಂಬುವುದರೊಳಗಾಗಿ ಇನ್ನೂ  ನಾಲ್ಕಾರು ಪೋಸ್ಟ್ ಹಾಕಿಬಿಡಬೇಕೆಂದು!
ಅರಮನೆಯನ್ನೇ ಕಟ್ಟಲು  ಹೋಗಿ   ಈಗ 'ಅರ' ಮನೆಯಾಗಿದೆ. ಆಕಾಶದೆತ್ತರಕ್ಕೆ ಕಟ್ಟ ಬೇಕೆಂಬ ಆಸೆ.. ಪುರಸೊತ್ತಿಲ್ಲ..!

ಒಂದಷ್ಟು ಮಳೆಯ ಫೋಟೋಗಳು ..




 ಚೌತಿಗೆ  ಊರಿಗೆ ಹೋದವಳು ಮಳೆಗಾಲದ ಅಬ್ಬರಾಟ  ಕಂಡು ಮರಳಿ  ಬಂದಿದ್ದೇನೆ. ಬಹಳ ದಿನಗಳೇ ಆಗಿತ್ತು. ನಿಜ ಮಳೆಗಾಲವನ್ನು ಅನುಭವಿಸದೆ. ನಾನು ಊರಿಗೆ ಕಾಲಿಟ್ಟಿದ್ದೆ ತಡ.. ಮಳೆ ಸುರಿಯಲು ಶುರುಮಾಡಿದ್ದು ಬರುವವರೆಗೂ ಹನಿ ಕಡಿಯಲಿಲ್ಲ.


 ಸೂರಂಚಿನ ನೀರಿನಲ್ಲಿ ಕಾಲು ತೊಳೆದುಕೊಳ್ಳುವುದು ಮಜಾ ಅಲ್ವೇ..?

 ಒಂದು  ದೊಡ್ಡ ಮಳೆ, ಹಾಗೆ ಚಿಕ್ಕ ಮಳೆ, ಮತ್ತೊಂದು ಸುಮಾರಿನ ಮಳೆ.  ಹೀಗೆ ಮಳೆ, ಮಳೆ, ಮಳೆ, ಹೇಳಲು ಹೊರಟರೆ ಮೂರು ಪೇಜು ಮಳೆಯೇ ಆಗಿಬಿಡುತ್ತದೆ...!  ಹೊರ ಹೋಗಲು ಆಗದಿದ್ದುದಕ್ಕೆ ಎಲ್ಲಾ ಮಳೆಯನ್ನೂ ಶಪಿಸುತ್ತಾ, ಕೆಲವರು ಹಳೆ ಕಾಲದ ಮಳೆಯನ್ನು ಹಾಡಿ ಹೊಗಳುತ್ತಾ  ಕುಳಿತು ಕೊಂಡದ್ದಾಯ್ತು.



 ನಾವು ಶಾಲೆಗೆ ಹೋಗುವಾಗಿನ ಕಾಲದ  ಮಳೆ ನಿಜಕ್ಕೂ ನಮಗೆ ಸಂತಸವನ್ನೇ ತರುತ್ತಿತ್ತು. ಶಾಲೆ ಬಿಟ್ಟ ತಕ್ಷಣ ಎಲ್ಲರೂ ಸರತಿಯ ಸಾಲಿನಲ್ಲಿ ಮಳೆ ನೀರು ಕಲೆಯುತ್ತಾ ಹೋಗುತ್ತಿದ್ದೆವು ರಸ್ತೆ ಪಕ್ಕದ ಕಾಲುವೆಯಲ್ಲಿ!   ಒಬ್ಬರಾದರೂ ರಸ್ತೆಯಲ್ಲಿ ಹೋಗುವವರಿಲ್ಲ.  ನೀರು ತುಂಬಿದ ಚಿಕ್ಕ ಚಿಕ್ಕ ಹೊಂಡದಲ್ಲಿ ಪಚ್ಚಂತ ಕಾಲಿಟ್ಟು ಕಾಲಿನ ಪಕ್ಕದಲ್ಲಿ ಮೂಡುವ ನೀರಿನ ರೆಕ್ಕೆಯನ್ನು ನೋಡಿ ಬೆರಗಾಗುತ್ತಿದ್ದೆವು. ನೀರು ಸ್ವಲ್ಪ ಎತ್ತರದಲ್ಲಿ ಬೀಳುವ ಜಾಗಕ್ಕೆ ದರಕಿನ ಕಡ್ಡಿಯನ್ನು ಹಿಡಿದು ಅದು ಕಡ್ಡಿಯ ಕವಲುಗಳಲ್ಲಿ ಹರಡಿಕೊಳ್ಳುವ ವಿನ್ಯಾಸಕ್ಕೆ  ಮುದಗೊಳ್ಳುತ್ತಿದ್ದೆವು. ಅಪ್ಪಿ ತಪ್ಪಿ ಬಿಸಿಲು ಬಿದ್ದಾಗ ಮೂಡುವ ಕಾಮನಬಿಲ್ಲು ರೋಮಾಂಚನ ಮೂಡಿಸುತ್ತಿತ್ತು.



ಮುಂದೆ ಹೋಗುವವರಿಗೆ  ಹಿಂದಿನ ಹುಡುಗರು  ತಮಗೆ ಮುಂದೆ ಬಿಡಲಿಲ್ಲ ಎನ್ನುವ ಸಂಕಟಕ್ಕೆ ನೀರು ಚಿಮ್ಮಿ ಮೈ ಎಲ್ಲ ಒದ್ದೆ ಮಾಡುವುದು.  ನೀರಿನಲ್ಲಿ ಹೋಗುತ್ತಾ ಹೋಗುತ್ತಾ    ಪಾದಗಳನ್ನ ನೋಡಿಕೊಳ್ಳುತ್ತಾ ಅದರ ಗುಲಾಬಿ ಬಿಳುಪಿಗೆ ಮೈ ಮರೆಯುತ್ತಿದ್ದೆವು.ಮನೆಗೆ ಬಂದು  ನುಣ್ಣನೆಯ ನೆಲಕ್ಕೆಕಾಲು  ತೀಡಿ  ಚೀಕ್, ಚೀಕ್  ಎನ್ನುವ ಶಬ್ದ ಹೊರಡಿಸುವುದು,  ಜೋರು ಮಳೆ ಬರಲೆಂದು ದೇವರಿಗೆ ಒಂದು ಕಟ್ಟು ದೂರ್ವೆ ಹರಕೆ ಮಾಡಿಕೊಳ್ಳುವುದು ಇತ್ತು. ಶಾಲೆಗೆ ರಜೆ ಕೊಡುತ್ತಾರೆಂದು. ರಜೆ ಕೊಟ್ಟರೆ ಮತ್ತೆ ಶಾಲೆ ಯಾವತ್ತು ಶುರುವಾಗತ್ತಪ್ಪಾ ಮನೇಲಿ ಬೇಜಾರು,  ಅನ್ನುವ ವೇದನೆ.
 


 ಒಂದೇ ಒಂದಾದರೂ ಮಳೆಯ ಫೋಟೋ ಚನ್ನಾಗಿ ತೆಗೆಯಲಾಗಲಿಲ್ಲ. ನನ್ನವರಲ್ಲಿ ದುಃಖ ತೋಡಿಕೊಂಡರೆ,'' ಮಳೆಯನ್ನು ಅಲುಗಾಡದಂತೆ ನಿಲ್ಲಿಸಿ ಫೋಟೋ ಹೊಡಿ, ಮಳೆ ನಿಂತಿದ್ದಾಗ ಹೊಡಿ,'' ಎನ್ನುವ ಸಲಹೆಯನ್ನೆಲ್ಲಾ ಕೊಟ್ಟರು.

 ಮೋಜಿಗೆ   ಎಲ್ಲಾ ಚನ್ನಾಗಿತ್ತು ಆಗ. ಬೆಂಗಳೂರಲ್ಲಿ ಮಳೆ ಬಂದರೂ ಬೇಸರ, ಬರದಿದ್ದರೂ ಚಿಂತೆ, ಮಕ್ಕಳಿಗೆ ನೀರು ಆಡಲು  ಟೆರೆಸೆ  ಗತಿ.



ಮನೆಯಲ್ಲಿಯೇ ಕುಳಿತು ಟೈಮ್ ಪಾಸ್ ಮಾಡಲು ಮಾಡಿದ  ಕಜ್ಜಾಯವೆಲ್ಲಾ  ಮೆಂದಿದ್ದಾಯ್ತು. ನನ್ನವರು, '' ಹೀಗೆ ಆದರೆ ಮತ್ತೆ ಕೂತವರನ್ನು ಎಬ್ಬಿಸಲು ಯಾವುದಾದರೂ ಮಿನಿ ಕ್ರೈನ್ ಬಾಡಿಗೆಗೆ ಸಿಗುತ್ತಾ ಕೇಳಬೇಕು''  ಎಂದು ನನ್ನನ್ನು ಉದ್ದೇಶಿಸಿಯೇ ಹೇಳಿದರು..!  ಎಲ್ಲರೆದುರು ಯಾಕೆ ಅಂತ  ನಾನೂ ಸುಮ್ಮನಾದೆ..!


ನನ್ನವರ ಊರಿಗೆ ಹೋಗುವಾಗ ಲಾಂಚಲ್ಲಿ ಹೋಗಬೇಕು.. ಅಲ್ಲೂ ಮಳೆ.ಮಳೆ. ಶರಾವತಿ ಕೂಡಾ ಅಬ್ಬರಿಸುತ್ತಿದ್ದಳು.


ಮನೆ ಒಳಗಿನಿಂದಲೇ ಕಂಡ ಕಂಡದ್ದನ್ನೆಲ್ಲ ಫೋಟೋ ತೆಗೆದಿದ್ದಾಯ್ತು.. ಹೊತ್ತು ಹೋಗದೆ.

ಅಂತೂ ಹಬ್ಬಕ್ಕೆ ಸುಲಭದ  ಕೆಲಸ ಹಮ್ಮಿಕೊಂಡು ಸಂಭ್ರಮಿಸುತ್ತಿದ್ದೇನೆ.  ಈ ಸಲ ಮಳೆಯ ಹೆಳೆಯೊಂದಿಗೆ ಚಿತ್ತಾರದರಮನೆಯಲ್ಲಿ ಹುಟ್ಟು ಹಬ್ಬ..!!