Showing posts with label ಹರಟೆಗೆ ... Show all posts
Showing posts with label ಹರಟೆಗೆ ... Show all posts

Tuesday, July 17, 2018

''ಜಿಲೇಬಿ''ಎಂಬ ಮಾಟಗಾತಿ

 ತುಂಬಾ ದಿನಗಳ ನಂತರ ಬ್ಲಾಗಿಗೆ ಕಾಲಿಡುತ್ತಿದ್ದೇನೆ.. ......  ಜಿಲೇಬಿ ರುಚಿಯೊಂದಿಗೆ.. 
 
 
ಈಗಾಗಲೇ ನಾನು ನನ್ನ ಜಿಲೇಬಿ ಕೃಷಿಯಲ್ಲಿನ  ಪ್ರಯೋಗಗಳನ್ನ ತಮ್ಮೆಲ್ಲರಿಗೂ ಆಗಾಗ ತಿಳಿಸುತ್ತಾ, ರಗಳೆ ಮಾಡುತ್ತಾ ಗೋಳು ಹೊಯ್ದು ಕೊಂಡಿದ್ದೀನಷ್ಟೆ .. ಇದು ಲಾಸ್ಟು .. ನಂಬಿ ಪ್ಲೀಸ್ ನನ್ನ ನಂಬಿ.
ಮೊದಲ ಸಲ  ಸುಮಾರು ನಾಲ್ಕು ವರ್ಷಗಳ ಹಿಂದೆ ಜಿಲೇಬಿ ಮಾಡಿದ್ದನ್ನು ಹೆಮ್ಮೆಪಟ್ಟುಕೊಂಡು ಜಗತ್ತಿಗೆಲ್ಲ ಸಾರಿದ್ದು ನಿಮಗೂ ನೆನಪಿಗೆ ಬಂದಿರಬಹುದು. ಅದು ಜಿಲೇಬಿ...  ಜಿಲೇಬಿ ಹೌದೋ ಅಲ್ಲವೋ ಎಂಬುದನ್ನು ನಮ್ಮನೆಯಲ್ಲಿರುವ  ಮೂವರು ತಜ್ಞರು ಅಳೆದು ಸುರಿದು ( ಸುರಿದಿದ್ದು ಎಲ್ಲಿಗೆ ಅಂತ ಯಾರೂ ತನಿಖೆ ಮಾಡಬೇಡಿ ದಯವಿಟ್ಟು..!) ನೋಡಿ,  ಇವಳಿಂದ ಮಾತ್ರ ಜಿಲೇಬಿ ಎಂದು ಕರೆಸಿಕೊಳ್ಳಲ್ಪಡುವ ಬೇರೆ ಯಾವುದೋ ಒಂದು ವಸ್ತು  ಎಂದು ಒಮ್ಮತದಿಂದ ತೀರ್ಮಾನಕ್ಕೆ ಬಂದಿದ್ದರೂ ನಾನು ಮಾತ್ರಾ ಅದನ್ನುಸಾರಾಸಗಟಾಗಿ ತಿರಸ್ಕರಿಸಿ ಜಗತ್ತಿನ ಯಾವುದೋ ಒಂದು ಅದ್ಭುತವೇ ಸರಿ ಎಂಬಂತೆ ಬ್ಲಾಗು, ಫೇಸ್ಬುಕ್ಕು ಜೊತೆಗೆ ನಾಡಿನ  ಎಲ್ಲ ಸ್ತರದವರಿಗೂ ತಿಳಿಯಲೆಂಬಂತೆ ಪತ್ರಿಕೆಗೂ ಕಳಿಸಿ ನನಗೆ ನಾನೇ ಹೆಮ್ಮೆ ಪಟ್ಟುಕೊಂಡಿದ್ದು ನಿನ್ನೆ ಮೊನ್ನೆ ನಡೆದಂತಿದೆ..!  ಅಂತೂ ಮೊದಲ ಪ್ರಯತ್ನ ಯಶಸ್ವಿಯಾಗಿ ಡಿಸ್ ಕ್ವಾಲಿಫೈ ಆಯ್ತು... !
ಹೆತ್ತವಳಿಗೆ ಹೆಗ್ಗಣ ಮುದ್ದು .. ಕಟ್ಟಿಕೊಂಡವನಿಗೆ ಕೋಡಂಗಿ ಮುದ್ದು ಎನ್ನುವಂತೆ ನಾ ಮಾಡಿದ ಜಿಲೇಬಿ ನನಗೆ ಮುದ್ದು .. :)  ಯಾರೇನೇ ಅಂದರೂ ನಾನು ಮಾತ್ರ ಮತ್ತೊಮ್ಮೆ ಮಗದೊಮ್ಮೆ ನನ್ನ ಜಿಲೇಬಿ ಪ್ರಯೋಗಗಳನ್ನು ಮಾಡುತ್ತಲೇ ಹೋದೆ. ಪ್ರತಿ ಸಾರಿಯೂ ಒಂದೊಂದು ಹೊಸ ವಿಷಯವನ್ನು ಕಲಿಯುತ್ತಲೇ ಹೋದೆ.
ಜಿಲೇಬಿ ಎನ್ನುವ ರಮಣೀಯ ಖಾದ್ಯವನ್ನು ಮಾಡಲು ಪ್ರತಿ ಹೆಜ್ಜೆಯೂ ಸರಿ ಇರಲೇ ಬೇಕು.  ಹಿಟ್ಟಿನ ಹದ, ಜಿಲೇಬಿ ಬೇಯಿಸುವ ಹದ , ಸಕ್ಕರೆ ಪಾಕ, ಉರಿ, ಜಿಲೇಬಿ ಹಿಟ್ಟನ್ನು ಎಣ್ಣೆಗೆ ಬಿಡುವ ಕಲೆ ಎಲ್ಲವೂ ಲೆಕ್ಕಾಚಾರ ಸರಿ ಇದ್ದರೆ ಮಾತ್ರ ನಿಮಗೆ ಉತ್ತಮ ಜಿಲೇಬಿ ಭಾಗ್ಯ  ಸಿಗುತ್ತದೆ. ನಾನು ಸುಮಾರು ಏಳೆಂಟು ಸಲ ಜಿಲೇಬಿ ಮಾಡಿ ಮಾಡಿ ಈ ನಡುವೆ ತಿನ್ನಲು ಯೋಗ್ಯವಾದ ಜಿಲೇಬಿಗಳನ್ನು ಮಾಡುತ್ತಿದ್ದೇನೆ. ಯೂ ಟ್ಯೂಬ್ ನೋಡಿ, ಅವರಿವರು ಮಾಡಿದ್ದನ್ನು ನೋಡಿ ಮನದಲ್ಲೇ ಲೆಕ್ಕಾಚಾರ ಹಾಕಿ, ಯಾರ್ಯಾರನ್ನೋ ಕೇಳಿ ಈ ಮಟ್ಟಕ್ಕೆ ಬಂದಿದ್ದೇನೆ. ರಾಜಕುಮಾರನೊಬ್ಬ  ಸಾವಿರಾರು ಮೈಲಿ ಪ್ರಯಾಣ ಮಾಡಿ ಏಳು ಸಮುದ್ರದ ಆಚೆ, ಏಳು ಕೋಟೆಯ ನಡುವೆ ಬಂಧಿತಳಾದ ರಾಜಕುಮಾರಿಯನ್ನು ಕರೆತರಲು ಹರ ಸಾಹಸ ಮಾಡಿದಂತೆ ನಾನೂ ಈ ಸ್ವೀಟಿನ ತಯಾರಿಯಲ್ಲಿ ಎಲ್ಲ ತಪ್ಪುಗಳನ್ನೂ ಹಾದು ಬಂದು ಸಾಹಸ ಗೈದಿದ್ದೇನೆ  ಎನ್ನಲು ಸಂತೋಷಿಸುತ್ತೇನೆ . :)

ಮೊದಲು ವಿಧಾನ ವಿವರಿಸುತ್ತೇನೆ ನಿಧಾನ  ಕೇಳಿ.
ಒಂದು ಲೋಟ ಮೈದಾ ಹಿಟ್ಟಿಗೆ ಎರಡು ಚಮಚ ಮೊಸರು+ ಒಂದು ಚಮಚ ಕಡಲೆ ಹಿಟ್ಟು + ಚಿಟಿಕೆ ಅರಿಶಿನ + ನೀರು ಹಾಕಿ  ದೋಸೆಯ ಹಿಟ್ಟಿನ ಹದಕ್ಕಿಂತಲೂ ಸ್ವಲ್ಪ ದಪ್ಪ ಹದಕ್ಕೆ ಗಂಟುಗಳಿಲ್ಲದಂತೆ  ಕದಡಿ. ಸುಮಾರು ೧೦ ಘಂಟೆ ಹಿಟ್ಟು ಹುಳಿ ಬರಲು ಬಿಡಿ. ಮಾಡುವ ಹೊತ್ತಿಗೆ ಚಿಟಿಕೆ ಸೋಡಾ ಬೆರೆಸಿ.
ಸಕ್ಕರೆ ಪಾಕಕ್ಕೆ-  ಎರಡು ಲೋಟ ಸಕ್ಕರೆಗೆ ಒಂದು  ಲೋಟ ನೀರು ಹಾಕಿ ಎಳೆ ಪಾಕ ಮಾಡಿಟ್ಟುಕೊಳ್ಳಬೇಕು. ಪಾಕ ತುಂಬಾ ಬಿಸಿಯೂ ಇರದೇ ತಣ್ಣಗೂ ಇರದೇ ಮಧ್ಯಮ  ತಾಪದಲ್ಲಿ ಇರಲಿ. ಒಂದು ಚಮಚ ಲಿಂಬೆ ಹುಳಿ + ಒಂದು ಚಮಚ ಜೇನುತುಪ್ಪ ವನ್ನು ಕುದಿಯುವಾಗಲೇ ಸೇರಿಸಿ. ಕೇಸರಿ ಎಸಳುಗಳನ್ನು ಸೇರಿಸಬಹುದು.
ಅಗಲ ತಳದ ಪ್ಯಾನನ್ನು ಓಲೆ ಮೇಲಿಟ್ಟು ಎಣ್ಣೆ ಹಾಕಿ. ಸುಮಾರು ಒಂದೂವರೆ ಇಂಚು ಮುಳುಗುವಷ್ಟು ಇರಲಿ. ಉರಿ ಸಿಮ್ ನಲ್ಲಿರಲಿ. ಮಧ್ಯದಲ್ಲಿ ತೂತಿರುವ ದಪ್ಪ ಬಟ್ಟೆ ಅಥವಾ ಸ್ಕ್ವೀಝರ್ ಗೆ ಹಿಟ್ಟನ್ನು ತುಂಬಿಕೊಳ್ಳಿ. ಎಣ್ಣೆ ಕಾದಿದೆಯಾ ನೋಡಲು ಒಂದು ಹನಿ ಹಿಟ್ಟು ಎಣ್ಣೆಗೆ ಹಾಕಿದರೆ ಅದು ತಕ್ಷಣ ತಳ  ಬಿಟ್ಟು ಏಳುತ್ತದೆ .. ಅಂದರೆ ಕಾದಿದೆ ಅಂತ ಅರ್ಥ. ಈಗ ನಿಧಾನಕ್ಕೆ ಹಿಟ್ಟನ್ನು ಜಿಲೇಬಿ ಆಕಾರಕ್ಕೆ (?) ಎಣ್ಣೆಗೆ ಬಿಡಿ. ಕರಿಯುವವರೆಗೆ ಸಹನೆಯಿಂದ ಕಾಯುವುದೂ ಇಲ್ಲಿ ಮುಖ್ಯ. ಜಿಲೇಬಿ ಸ್ವಲ್ಪ ಹೊಂಬಣ್ಣಕ್ಕೆ ತಿರುಗಿ ಗರಿ ಗರಿಯಾದ ಲಕ್ಷಣ ಕಂಡುಬಂದಾಗ ತೆಗೆದು ಪಾಕಕ್ಕೆ ಹಾಕಿ ಅರ್ಧ ನಿಮಿಷದಿಂದ ಒಂದು ನಿಮಿಷದ ವರೆಗೆ ಪಾಕದಲ್ಲಿ ಅದ್ದಿ ನಂತರ ಬೇರೆ ಪ್ಲೇಟಿಗೆ ವರ್ಗಾಯಿಸಿ.

  ಮಾಡಿದ ಮತ್ತು ಮಾಡುವ ತಪ್ಪುಗಳು . 
 
೧.  ಹಿಟ್ಟು ತೆಳ್ಳಗೆ ಆದರೆ ಜಿಲೇಬಿ ದುಂಡನೆಯ ಜಿಲೇಬಿಯಾಗದೆ ಚಪ್ಪಟೆಯಾಗುತ್ತದೆ. ಜಿಲೇಬಿ ಗರಿಗರಿಯಾಗದೆ ಮೆತ್ತಗಾಗುತ್ತದೆ. ಹಿಟ್ಟಿನಲ್ಲಿ ಗಂಟುಗಳಿಲ್ಲದಂತೆ ನೋಡಿಕೊಳ್ಳಿ.
೨. ಸಕ್ಕರೆ ಪಾಕ ತೆಳ್ಳಗಾದರೆ ಸ್ವಲ್ಪ ಹೊತ್ತಿನ ನಂತರ ಜಿಲೇಬಿಯಿಂದ ಪಾಕ ಸೋರಿ ಹೋಗುತ್ತದೆ. ತೀರಾ ದಪ್ಪ ಇದ್ದಲ್ಲಿ ಪಾಕ ಹೀರಿಕೊಳ್ಳುವುದಿಲ್ಲ.   ಮೊದ ಮೊದಲು ಪಾಕ ಸರಿ ಹದದಲ್ಲಿ ಇದ್ದು ತಣ್ಣಗಾದಂತೆ ದಪ್ಪವಾಗುತ್ತದೆ.. ತುಸುವೇ ನೀರು ಬೆರೆಸಿ ಮತ್ತೆ ಒಂದು ಕುದಿ ಬರಿಸಿಕೊಳ್ಳಬೇಕು                           
೩, ಎಣ್ಣೆ ಸಣ್ಣ ಉರಿಯಲ್ಲಿಯೇ ಕಾಯಬೇಕು ಮತ್ತು ಕೊನೆಯವರೆಗೂ ಉರಿ  ಸಿಮ್ ನಲ್ಲಿಯೇ ಇರಬೇಕು. ಕರಿಯಲು ಎಣ್ಣೆ ಕಡಿಮೆಯಾದರೆ ಸರಿಯಾಗಿ ಬೇಯುವುದಿಲ್ಲ. ಹಿಟ್ಟು ತಳ ಬಿಟ್ಟು ಮೇಲೆ ಬರುವಷ್ಟಾದರೂ ಎಣ್ಣೆ ಬಾಣಲೆಯಲ್ಲಿ ಇರಲೇ ಬೇಕು. ಕೌಚಿ ಮಗುಚಿ ಬೇಯಿಸಬೇಕು. ಉರಿ ಜಾಸ್ತಿಯಾದರೆ ಜಿಲೇಬಿ ಗರಿಗರಿಯಾಗುವುದಿಲ್ಲ. 
೪. ಇನ್ನು ಜಿಲೇಬಿ ಬಿಡುವ ಕಲೆ... ನಿಮ್ಮ ಹಣೆಬರಹದಲ್ಲಿ ಹೇಗಿದೆಯೋ ಯಾರಿಗ್ಗೊತ್ತು..:) ಮೊದಮೊದಲು ಸಕಲೆಂಟು ಜಾತಿಯ ಜೀವರಾಶಿಗಳ ಉಗಮವಾಗಿ ಸಮುದ್ರ ಮಥನದಲ್ಲಿ ಕೊನೆಯಲ್ಲಿ ಅಮೃತ ದೊರಕಿದಂತೆ ನಾಲ್ಕಾರು ಪ್ರಯೋಗಗಳ ಬಳಿಕ ಒಂದು ಶೈಲಿ ನಿಮಗೆ ಒಲಿಯಬಹುದು...  :) ನಾನೂ ಇನ್ನೂ ಪ್ರಾಕ್ಟೀಸ್ ಹಂತದಲ್ಲಿಯೇ ಇದ್ದೇನೆ.  ಕಾಲಾಂತರದಲ್ಲಿ ಸುಧಾರಣೆ ಆಗಬಹುದೆಂಬ ಬಹುದೊಡ್ಡ ನಂಬಿಕೆಯೊಂದಿಗೆ ..:)

ನನ್ನದು ಟ್ರಯಲ್ ಅಂಡ್ ಎರರ್ ಪದ್ಧತಿ ...  ಹಾಗಾಗಿ ನನ್ನ ಜಿಲೇಬಿಗೆ ಇನ್ನೂ ಉತ್ತಮ ತರಗತಿಯ ರಿಸರ್ಚ್ ಅಂಡ್ ಡೆವಲಪ್ಮೆಂಟ್ ನ  ಅಗತ್ಯ ಇರಬಹುದು...  ಇಲ್ಲಿರುವ ಜಿಲೇಬಿ ಪಂಡಿತರುಗಳು ಹೆಚ್ಚಿನ ಮಾಹಿತಿ ಕೊಡುತ್ತಾರೆಂದು ಭಾವಿಸುತ್ತಾ ಈ ರಗಳೆಯನ್ನು ಮುಗಿಸುತ್ತಿದ್ದೇನೆ.

ಧನ್ಯವಾದಗಳು .

Sunday, October 13, 2013

ಅಂಧಕಾರವೂ.. ಜ್ಞಾನೋದಯವೂ ..

ಆ ಐ ಕೇರ್ ಸೆಂಟರಿನ ಕುರ್ಚಿಗೆ ತಲೆಯಾನಿಸಿ ಕೂತಿದ್ದೆ.  ಸ್ವಲ್ಪ ಹೊತ್ತಿನ ಮೊದಲು  ಕಣ್ಣಿಗೆ ಡ್ರಾಪ್ಸ್ ಹಾಕಿಸಿಕೊಂಡು..
ತಲೆಯಲ್ಲಿ ಸಾವಿರ ಯೋಚನೆಗಳು.. ಒಂದರ ಮೇಲೊಂದು, ಎಲ್ಲಾ ಒಟ್ಟೊಟ್ಟಿಗೆ, ಯಾವುದು ಮೊದಲು ಬರುತ್ತೆ ಯಾವುದು ಕೊನೆಗೆ ಗೊತ್ತಾಗದಷ್ಟು .
 ಇಷ್ಟು ನಡೆದಿದ್ದು,
 ನಮ್ಮ ಅತ್ತೆಯವರಿಗೆ ಕಣ್ಣಿನ ಪೊರೆಯ  ತೊಂದರೆ  ಶುರು ಆಗಿತ್ತು. ಸರಿ, ಐ ಸ್ಪೆಶಲಿಷ್ಟರಿಗೆ ತೋರಿಸುವುದು ಅಂತಾಯಿತು. ಹತ್ತಿರದಲ್ಲೇ ಒಂದು ಪ್ರಸಿದ್ಧ  ಐ ಕೇರ್ ಸೆಂಟರಿನಲ್ಲಿ ಚೆಕ್ ಮಾಡಿಸುವುದು ಅಂತ ತೀರ್ಮಾನವಾಯಿತು. ಇವರು ಹೇಳಿದರು, ''ಅಮ್ಮನ ಜೊತೆಯಲ್ಲೇ ನೀನೂ ಕಣ್ಣು ಟೆಸ್ಟ್ ಮಾಡಿಸಿಕೊಂಡು ಬಾ, ನಿನಗೂ ಕಣ್ಣಿನ ತೊಂದರೆ ಇದೆ ! ''
''ಅದು ಹೇಗೆ  ನನ್ನ ಕಣ್ಣಿನ ವಿಚಾರ ನಿಮಗೆ   ಗೊತ್ತಾಯಿತು..?'' ನನ್ನ ಪ್ರಶ್ನೆ..
''ನಾನು ಎದುರಿಗೇ  ಇದ್ದರೂ ಜೋರಾಗಿ ಕಿರುಚುತ್ತೀಯಲ್ಲ, ಅದಕ್ಕೆ ನಿನ್ನ ಕಣ್ಣೂ ಚೆಕ್ ಮಾಡಿಸ ಬೇಕು.. ತೊಂದರೆ ಇದ್ದೆ ಇದೆ..!!
ಅತ್ತೆಯ ಎದುರಿಗೇ ಹೇಳುತ್ತಾರೆ. ನೋಡಿ ಅಮ್ಮನ ಎದುರಿಗೆ ಮಕ್ಕಳಿಗೆ  ಧೈರ್ಯ ಜಾಸ್ತಿ.. 
  '' ಗಂಡಂದಿರಿಗೆ  ಕಿವಿ ದೂರ ಅನ್ನುವುದು ಲೋಕಕ್ಕೆಲ್ಲಾ ಗೊತ್ತು, ಕೂಗದೆ ಮತ್ತಿನ್ನೇನು? '' ನಾನು ಸುಮ್ಮನಿರಲಾ..?
''ಅದು ಹಾಗಲ್ಲ, ನಿನಗೆ ನಾನೆಲ್ಲೋ ದೂರದಲ್ಲಿದ್ದಂತೆ ಕಾಣಿಸುತ್ತದೆ, ಶಬ್ಧದ ವೇಗ ಕಡಿಮೆ,   ಅದಕ್ಕೆ ನೀನು ಕೂಗುವುದು ಅಂತ ನನಗೆ ಚೆನ್ನಾಗಿ ಗೊತ್ತು..''ಎಂದು ರಾಜಿಗೆ ಬಂದರು.. ಎಷ್ಟು ಒಳ್ಳೆಯವರು ..!!

ಸರಿ, ಇಷ್ಟೆಲ್ಲಾ ಆದಮೇಲೆ   ನಮ್ಮತ್ತೆಯವರನ್ನು ಕರೆದುಕೊಂಡು ಆ ಐ ಕೇರ್ ಸೆಂಟರಿಗೆ ಹೋದೆ. ಅಲ್ಲಿ ಅವರು ನಮ್ಮ ಹೆಸರು, ವಿಳಾಸ ತಗೊಂಡು ನಾ ನಿನ್ನ ಮರೆಯಲಾರೆ,  ಅನ್ನುತ್ತಾ ಕಂಪ್ಯೂಟರ್ ನಲ್ಲಿ  ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳುವ ವ್ಯವಸ್ಥೆ  ಮಾಡಿಕೊಂಡರು.
ನಮ್ಮ ಅತ್ತೆಯ ಪರೀಕ್ಷೆಯಾಯಿತು.. ಈಗ ನನ್ನ ಸರದಿ, ಐ ಟೆಸ್ಟಿಂಗ್  ಮಷೀನ್ ಮೇಲೆ ಗದ್ದ  ಊರಿ ಕೂರಲು ತಿಳಿಸಿ ಅದೇನೋ ಟೆಸ್ಟ್ ಮಾಡಿದ್ರು ಅಲ್ಲಿ ಒಬ್ರು ಲೇಡಿ. ಮತ್ತೆ ಇನ್ನೊಂದು ಮಷೀನ್, ಕಣ್ಣಿನ ಪ್ರೆಶರ್ ಟೆಸ್ಟ್ ಮಾಡುವುದು.  ಮತ್ತೆ  ಮಷೀನ್ ಗೆ ಗದ್ದ ಊರಿ ಕುಳಿತುಕೊಂಡೆ.  ''ಏನಿಲ್ಲ  ಸ್ವಲ್ಪ ಗಾಳಿ ಊದುತ್ತೇವೆ ಹೆದರಬೇಡಿ ಅಂದ್ರು.  ಸರಿ, ಸ್ವಲ್ಪ ಫೋರ್ಸ್ ಇಂದ ಕಣ್ಣಿಗೆ ಗಾಳಿ ಬಂತು. ನನಗೆ ಇಷ್ಟುದ್ದಾ ನಾಲಿಗೆ ಸುಳಿಯುವ ಹಸಿರು ಹಾವಿನ ನೆನಪಾಯಿತು.  ತೊಂಡೆ ಚಪ್ಪರದ ಮೇಲೆ, ಬೇಲಿಗೆ ಅಲ್ಲಿ ಇಲ್ಲಿ ಕಾಣ ಸಿಗುವ ಪಾಪದ ಹಾವನ್ನು ಕೆಲವು ತುಂಟ ಹುಡುಗರು ಬಾಲ ಹಿಡಿದು ತಿರುಗಿಸಿ ದೂರಕ್ಕೆ ಒಗೆಯುತ್ತಿದ್ದರು ..  ಆಗ ದೊಡ್ಡವರು  ಹಸಿರುಳ್ಳೆ  ಹಾವು   ಕಣ್ಣಿಗೆ ಊದುತ್ತೆ . ಕಣ್ಣು ಕುರುಡೇ ಆಗಿ ಬಿಡುತ್ತೆ ಅದರ ಸುದ್ದಿಗೆ ಹೋಗಬೇಡಿ ಎಂದು ಹೆದರಿಸುತ್ತಿದ್ದರು. ಯಾವತ್ತೂ ಯಾರಿಗೂ  ಅದು ಕಣ್ಣು ಊದಿದ್ದಿಲ್ಲ ಎಂತಿಲ್ಲ, ಆದರೂ ಊದಿದರೆ ಹೀಗೆ ಊದಬಹುದೇನೋ ಅನ್ನಿಸಿತು.

ಮತ್ತೆ ಅದರಿಂದ ರಿಪೋರ್ಟ್ ತೆಗೆದುಕೊಡುತ್ತಾ , ಸುಮ್ಮನೆ ಕೊಡಬಹುದಿತ್ತು.. ''ನಿಮಗೆ  ಪ್ರೆಶರ್ ಇದೆ ಅಂತೇನಾದ್ರೂ ಈ ಮೊದಲು  ಡಾಕ್ಟರ್ ಹೇಳಿದ್ರಾ ..? ''ಅಂತ ಲೋಕಾಭಿರಾಮವಾಗಿ ಆಕೆ ಕೇಳಿದರು.    ಅವರು ಕೇಳಿದ್ದೆ ಸರಿ,,  'ಇಲ್ಲವಲ್ಲ'  ಅಂತ ತಕ್ಷಣಕ್ಕೆ  ಅಂದು ಹೊರಬಂದರೂ ನನಗೆ ತಲೆಯಲ್ಲಿ ಹುಳ ಕೊರೆಯಲಾರಂಬಿಸಿತು.. ಒಂಥರಾ ವಿವರಿಸಲಾಗದ ದುಗುಡ,

ಈಗ ಇನ್ನೊಬ್ಬರು phoropter ನಲ್ಲಿ ಒಂದಿಪ್ಪತ್ತು ಲೆನ್ಸ್ ಗಳನ್ನೂ ಹಾಕಿ ತೆಗೆದು ಮಾಡಿ ದೃಷ್ಟಿ ಚೆಕ್ ಮಾಡಿದರು. ಆ ರಿಪೋರ್ಟ್ ನೋಡಿ,'' ಏನ್ರೀ  ಕಣ್ಣಿನ ಪ್ರೆಶರ್ ೨೩, ೨೨  ಇದೆ.. ''ಅಂತಾ ರಾಗ ಎಳೆದರು.. ನನ್ನ ತಲೆಯಲ್ಲಿ ಈಗ ಸಾವಿರ ಹುಳುಗಳ ನರ್ತನ..ಮತ್ತೊಮ್ಮೆ ಚೆಕ್ ಮಾಡಿಸಲು ಅದೇ ಪ್ರೆಶರ್ ಮಶಿನ್ನಿನ ಬಳಿ ಕಳಿಸಿದರು. ಆದರ ಪಾಲಕ ಅದಕ್ಕೆ ಇಯರ್ಬಡ್  ಹಾಕಿ ಧೂಳು ಎಲ್ಲಾ ಒರೆಸಿ ಮತ್ತೆ ಕಣ್ಣಿನ ಚೆಕ್ ಮಾಡಿದ..!
ಚೇರ್ ನಲ್ಲಿ ಕೂರಿಸಿ ಅತ್ತೆ ಮತ್ತು ನನಗೆ ಕಣ್ಣಿಗೆ ಅದೆಂತದೋ ಡ್ರಾಪ್ಸ್ ಬಿಟ್ಟು ಕೂರಿಸಿದರು.. ''ಕಣ್ಣು ಮುಚ್ಚಿ ಕುಳಿತುಕೊಳ್ಳಿ.. ಕೆಲವು ಘಂಟೆ ಕಣ್ಣು ಮಂಜಾಗಿರುತ್ತೆ.. ಕ್ಲಾರಿಟಿ ಇರೋಲ್ಲ..ಮುಕ್ಕಾಲು ಘಂಟೆ ಬಿಟ್ಟು ಕಣ್ಣಿನ ಡಾಕ್ಟ್ರು ಟೆಸ್ಟ್ ಮಾಡ್ತಾರೆ,'' ಅಂದರು.

ಈಗ ಕಣ್ಣಿನ ಮುಂದೆ ಅಂಧಕಾರ..!

ಇಲ್ಲಿಂದ ಶುರು ಆಲೋಚನೆಗಳ ಸಂತೆ..         ೨೩, ೨೨  ಪ್ರೆಶರ್ ಇದೆ ಅಂದರೆ ಏನರ್ಥ ..? ಗ್ಲೂಕೋಮ ಇದೆ ಅಂತ ಅಲ್ಲವೇ..? ಅಂದರೆ ಈಗಲೇ ಶುರು ಆಯ್ತು ಅಂದರೆ ಮುಂದೆ ಏನು ಕಥೆ,  ಕಣ್ಣೇ  ಕಾಣಿಸುತ್ತೋ ಇಲ್ವೋ,,? ಸ್ವಲ್ಪವಾದರೂ ಕಾಣಿಸಬಹುದ..? ಕಾಣಿಸದಿದ್ರೆ ಏನು ಮಾಡೋದು..? ಹೇಗೆ ಓದೋದು ? ಬರಿಯೋದು..? ಚಿತ್ರ ಬರಿಯೋದು ? ಕೆಲಸ ಮಾಡೋದು..? ಮಕ್ಕಳ ಹೋಂ ವರ್ಕ್ ಕಥೆ ಏನು..?   ಇಂಟರ್ ನೆಟ್ಟು , ಬ್ಲಾಗು, ಫೇಸ್ ಬುಕ್ಕು  ಕಥೆ ಏನು..?

ಅತ್ತೆ,  ಪಕ್ಕದಲ್ಲಿ ಕುಳಿತವರಿಗೆ ಅವರ ಸಂಕಟ ಅವರದ್ದು.. ಯಾವ ಕಾರಣಕ್ಕೂ ಇಲ್ಲಿಯವರೆಗೆ ಯಾವುದಕ್ಕೂ  ಆಪರೇಶನ್ ಗೀಪರೆಶನ್ ಗೆ ಒಳಗಾಗದ ಘಟ್ಟಿ  ಆರೋಗ್ಯವಂತ ಜೀವ ಅವರದು,  ಅಂತಾದ್ದರಲ್ಲಿ ಕಣ್ಣಿಗೆ ಪೊರೆ ಬಂದಿದೆ! ಅದನ್ನು ಆಪರೇಟ್ ಮಾಡಿ ತೆಗೆಯಬೇಕು ಅಂದಿದ್ದು ಮತ್ತು ಕೂಡಲೇ  ಮಾಡಿಸಬೇಕು ಅಂದಿದ್ದು ಅವರಿಗೆ ಸಿಕ್ಕಾಪಟ್ಟೆ  ತಲೆ ಬಿಸಿ ..  '' ವಿಜಯ, ಕಣ್ಣು ಒಂದು ಕಾಣಿಸುವುದಿಲ್ಲ  ಅಂದರೆ   ಮನುಷ್ಯ ಸತ್ತಂತೆ..'' ಅಂದರು!  ಅತ್ತೆ ಬೇರೆ ಹಾಗಂದರು.

ಹುಟ್ಟುಗುರುಡರಾದರೆ ಅದೊಂದು ಕಥೆ, ಈಗ ಮಧ್ಯದಲ್ಲಿ ಈ ಗ್ಲೂಕೋಮ   ಅನ್ನುವ ರಾಕ್ಷಸನ ಕೈಯಲ್ಲಿ ಸಿಲುಕಿ ಕಣ್ಣೆ ಹೋಗಿಬಿಟ್ಟರೆ ?  ಯಾಕೋ ಒಂಟಿ ಕಣ್ಣಿನ ರಾಕ್ಷಸನ ಕಥೆ  ನೆನಪಾಯಿತು. ಈಗ ನನ್ನ ಕಣ್ಣು ಪೂರಾ ಹೋಯಿತು ಅಂತಿಟ್ಟುಕೊಳ್ಳೋಣ. ಅಡುಗೆ ಮಾಡೋದು ಹೇಗೆ..? ಅಲ್ಲ ಒಂದು ರೂಮಿಂದ ಇನ್ನೊಂದು ರೂಮಿಗೆ ಓಡಾಡೋದು ಹೇಗೆ..? ನಿಧಾನ ಕಲಿತುಕೊಳ್ಳಬೇಕು. ಚಿತ್ರ ಬರೆಯೋದು ಮಾತ್ರ ಕಷ್ಟ ಆಗಬಹುದು.ಯಾವುದೋ ಅಂಧ ಆರ್ಟಿಸ್ಟ್  ಬಗ್ಗೆ  ಎಲ್ಲೋ ಓದಿದ್ದು ಮಸುಕಾಗಿ ನೆನಪಾಯಿತು. ಎಷ್ಟೋ ಕಾದಂಬರಿಗಳು ಓದದೇ ಇರುವುದು ಸಾಕಷ್ಟಿವೆ.   ಮೊದಲು ಬ್ರೈಲ್ ಕಲಿತುಕೊಳ್ಳಬೇಕು. ಅದಕ್ಕೂ ಮೊದಲು ಕೋಲು ಬೇಕಲ್ಲ..!     ಪ್ರತಿಯೊಂದಕ್ಕೂ ಅವರಿವರನ್ನು  ಆಶ್ರಯಿಸುವುದು ಕಷ್ಟ ಕಷ್ಟ . ಹತ್ತು ಹಲವು ಬಗೆಯ ಸಂಕಟಗಳು.  ಹಾಳಾಗ್ಲಿ  ಫೇಸ್ ಬುಕ್ ನೋಡುವುದು ಹೇಗೆ..?  ಸುಮಾರು ದಿನ ಯಾವುದೇ ಸ್ಟೇಟಸ್,  ಪ್ರೊಫೈಲ್ ಚಿತ್ರ  ಚೇಂಜ್ ಇರದಿದ್ದುದನ್ನು ನೋಡಿ ಫೇಸ್ ಬುಕ್ಕಿನ ಫ್ರೆಂಡ್ಸ್,  ಅಂತಃಪುರದ ಸಖಿಯರು  ಎಲ್ಲಿ,  ಎಲ್ಲಿ ವಿಜಯಶ್ರೀ?   ಅನ್ನಬಹುದು.. ಆಮೇಲೆ ಹೇಗೋ   ಹೀಗೆ  ಆಗಿ ಹೀಗಾಗಿದೆ ಅಂತ ಸುದ್ದಿ ಹೋಗಿರುತ್ತೆ.. ಅಯ್ಯೋ ಪಾಪ, ಹೀಗಾಗ್ಬಾರ್ದಿತ್ತು,  ಅಂತ ಅವರೆಲ್ಲಾ ಅಲವತ್ತು ಕೊಳ್ಳುತ್ತಿರಬಹುದಾ..? ನನಗೆ ಕಾಣಿಸಲ್ವೆ.  :)   ನನ್ನ ಕಣ್ಣಿನ ಬಗ್ಗೆ ಹೀಗೆ  ಒಂದಷ್ಟು ಶ್ರದ್ಧಾಂಜಲಿ  ಕಾಮೆಂಟುಗಳು ಇರಬಹುದೇ..?    :)  ಎಲ್ಲದಕ್ಕೂ ಸೊಲ್ಯುಶನ್ಸ್ ಇರುತ್ತೆ ಸುಮ್ನಿರೇ,  ಅಂದ ಹಾಗಾಯ್ತು ಇವರು ಕಿವಿಯಲ್ಲಿ..

ಆಲೋಚನೆಗಳು ಸಾಗುತ್ತಾ ಸಾಗುತ್ತಾ ಇರುವಂತೆಯೇ ಡಾಕ್ಟರು ನಮ್ಮನ್ನು ಕರೆದು ಆಪ್ಥಾಲ್ಮೊಸ್ಕೊಪಿ ಯಿಂದ ಕೂಲಂಕುಶವಾಗಿ ಟೆಸ್ಟ್ ಮಾಡಿ,  ಅಷ್ಟೊತ್ತಿಗೆ ಪುನಃ ಮಾಡಿಸಿದ ಟೆಸ್ಟ್ ರಿಪೋರ್ಟ್ ಕೂಡಾ ಬಂದಿದ್ದು ಪ್ರೆಶರ್ ನಾರ್ಮಲ್   ಇತ್ತು.. ಎಂತ ಸಮಸ್ಯೆಯೂ ಇಲ್ಲ..ಗ್ಲೂಕೊಮಾವೂ  ಇಲ್ಲ, ಕೊಮಾವೂ  ಇಲ್ಲ ಅಂತ ರಿಪೋರ್ಟ್ ಕೊಟ್ಟರು.  ಹ್ಹಾ ... ಸುಮ್ಮನೆ ಇಷ್ಟೊತ್ತು ತಲೆ ಹಾಳು ಮಾಡಿಕೊಂಡಿದ್ದೆ ಬಂತು.   ಸುಖಾ ಸುಮ್ಮನೆ  ಹುಳಬಿಟ್ಟಿರಿ,  ಅಂತ ಆ ಡಾಕ್ಟರಿಗೆ ಹೇಳಿಯೇ ಹೊರ ಬಂದೆ.ಕರೆದು ಕೊಂಡು  ಹೋಗಲು ಬಂದ ನನ್ನವರ ಮೇಲೆ ಈಗ ಸಿಟ್ಟು. ಅವರೇ ಕಳಿಸಿದ್ದಲ್ವಾ..? ಮುಕ್ಕಾಲು ಘಂಟೆಯ ಅಂಧಕಾರದಲ್ಲಿ ಎಷ್ಟೆಲ್ಲಾ  ಅನುಭವ.. 

ನೋಡಿ, ಈ ದುಗುಡ ಅನ್ನುವುದು ಸುಮ್ಮನೆ ಗೊತ್ತಿಲ್ಲದೇನೆ ಮನಸ್ಸಿನೊಳಗೆ ಸೇರಿಕೊಂಡು ಬಿಡುತ್ತೆ.. ಎಲ್ಲದಕ್ಕೂಈ ಕಾಲದಲ್ಲಿ   ಪರಿಹಾರ ಇದೆ ಅನ್ನುವುದು ಗೊತ್ತಿದ್ದರೂ ಸುಮ್ಮನೆ ಉದ್ವೇಗ,
  ಈ ಭಾವಗಳು  ಒಂಥರಾ ನಮಗೆ ಗೊತ್ತಿಲ್ಲದೇನೆ ನಮ್ಮನ್ನು ಆಳುತ್ತಿರುತ್ತದೆ. ಭಯ, ಗೊಂದಲ, ದುಗುಡ,  ಉದ್ವೇಗ ಹೀಗೆ. ಕೆಲವೊಮ್ಮೆ ಎಲ್ಲವೂ !  ಪರಿಹಾರ ಇದೆ ಅನ್ನುವುದು  ಗೊತ್ತಿಲ್ಲದ್ದೇನೂ ಅಲ್ಲ.   ಸುಮ್ಮ ಸುಮ್ಮನೆ ತಲೆ ಬಿಸಿ ಮಾಡುತ್ತಿರುತ್ತದೆ..  ಎಷ್ಟೋ ಸಲ ನಮಗೆ ಆಗುತ್ತಿರುವ ಭಾವ  ಏನು  ಅಂತ ಗೊತ್ತಾಗುವುದೂ ಇಲ್ಲ..   ಬೇರೆಯವರ ವಿಚಾರದಲ್ಲಾದರೆ  ಕೆಲವೊಮ್ಮೆ  ಅದಕ್ಕೆ ಜಾಗ್ರತೆ ಅನ್ನುವ ಹೆಸರು ಕೊಟ್ಟು ಮರ್ಯಾದೆ ಉಳಿಸಿಕೊಳ್ಳಬಹುದು ಬೇಕಿದ್ದರೆ.  ಕೆಟ್ಟ ಅಡುಗೆಯ ಮೇಲೆ ಕಾಯಿ ತುರಿ, ಕೊತ್ತಂಬರಿ ಸೊಪ್ಪಿನ ಅಲಂಕಾರ ಮಾಡಿದ ಹಾಗೆ.


 ಮೊನ್ನೆ ಉತ್ತರ ಭಾರತದ ಕಡೆ ಪ್ರವಾಸ ಹೋಗಿದ್ದೆವಲ್ಲ.. ಮಧ್ಯದಲ್ಲಿ ನಮ್ಮ ಟ್ಯಾಕ್ಸಿಯವನು ಯಾವುದೋ ಒಂದು  ಹೋಟೆಲ್ ಗೆ ಕರೆದೊಯ್ದ. ನೋಡುತ್ತಿದ್ದಂತೆಯೇ   ನಾಲ್ಕಾರು ಅಂಧ ಕುಟುಂಬಗಳು ಅದೇ ಹೋಟೆಲಿಗೆ ಬಂದವು..  ಗಂಡ, ಹೆಂಡತಿ ಇಬ್ಬರೂ ಕುರುಡರೇ, ಮಕ್ಕಳು ಮಾತ್ರಾ ಅಲ್ಲ.. ಅವರಿಗೆ ಶಬ್ಧ ಮಾಧ್ಯಮವೇ ಮುಖ್ಯ.  ಹೋಟೆಲಿನಲ್ಲಿ ಗೌಜು.  ಹೋಟೆಲ್ ಸೂಪರ್ವೈಸರ್ ಕೂಡಾ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದ ಕಾಣುತ್ತೆ..    ನಮಗೆ  ಊಟ ಮಾಡುವುದಕ್ಕಿಂತ ಅವರನ್ನು ಗಮನಿಸುವುದೇ ಸೋಜಿಗದ ವಿಚಾರವಾಗಿತ್ತು.   ಕಣ್ಣಿದ್ದವರಾಗಿದ್ದರೆ ಯಾಕ್ಲಾ .. ಗುರಾಯಿಸ್ತೀಯಾ.. ಹೆಂಗೈತೆ ಮೈಗೆ?  ಅನ್ನುವಷ್ಟು.    ಅವರು ಊಟ ಮಾಡುವಾಗ ಬಟ್ಟಲನ್ನು  ಹೇಗೆ ನಿಧಾನಕ್ಕೆ ತಡವಿ  ಪರೀಕ್ಷಿಸುತ್ತಾರೆ.    ರೋಟಿ, ದಾಲ್ . ಸಬ್ಜಿ ಗಳನ್ನೆಲ್ಲಾ ಕೈ ಬೆರಳುಗಳಿಂದ ಮುಟ್ಟಿದಿಕ್ಕು ಗುರುತಿಸಿಕೊಂಡರು.    ಎಲ್ಲರೂ ಅದೆಷ್ಟು ಆತ್ಮ ವಿಶ್ವಾಸದಿಂದಿದ್ದರು  ಅಂದ್ರೆ   ನನಗೆ   ಐ ಕೇರ್ ಸೆಂಟರಿನ ಕಥೆ ನೆನಪಾಗಿ ನಗು ಬಂತು. ಯಾರೊಬ್ಬರೂ ಕಂಬ , ಟೇಬಲ್ಲು, ಕುರ್ಚಿ ಇನ್ನಿತರೇ ವಸ್ತುಗಳನ್ನು ಎಡವಲಿಲ್ಲ.. ಬೀಳಲಿಲ್ಲ.. ಯಾರಿಗೆಲ್ಲಾ ಫೋನ್ ಮಾಡಿದರು..! ಮನಸ್ಸು ಒಂಥರಾ ಒದ್ದೆ ಒದ್ದೆ .   ನನ್ನ ಮಗಳು  ತಮ್ಮನಿಗೆ ಹೇಳುತ್ತಿದ್ದಳು.. ಅವರು ಮೊಬೈಲನ್ನು ಬಳಸುವ ಬಗೆ ಕುರಿತು .. ಐದು ಸಂಖ್ಯೆಯ ಮೇಲೊಂದು ಚುಕ್ಕಿ ಇರುತ್ತೆ, ಅದನ್ನು ಗುರುತಿಸಿಕೊಂಡು  ಅದರ ಆಚೀಚೆ, ಮೇಲೆ ಕೆಳಗೆ  ಇರುವ ಸಂಖ್ಯೆಗಳನ್ನು  ನೆನಪಿಟ್ಟುಕೊಂಡು ಬಳಸುತ್ತಾರೆ ಅಂತ..
ಅವರ ಸೂಕ್ಷ್ಮತೆಗೆ,  ಆತ್ಮ ವಿಶ್ವಾಸಕ್ಕೆ ಶರಣು ಶರಣೆನ್ನುವೆ..  

 ಜೀವನ ಅನ್ನುವುದು ಯಾವ್ಯಾವುದೋ ಸಂದರ್ಭದಲ್ಲಿ  ಏನೇನನ್ನೋ ಕಲಿಸುತ್ತೆ !   ಗೊತ್ತಿಲ್ಲದೇನೇ,  ಕಷ್ಟ ಪಡದೇ  ಜ್ಞಾನದ ಹನಿ ಶೇಖರವಾಗುತ್ತೆ ತುಸುವಾದರೂ. 

 ಹೀಗೆ ಅಲ್ಪ ಸ್ವಲ್ಪ ಜೀವನವನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ   ಅನ್ನುವ ಹೆಮ್ಮೆಯೊಂದಿಗೆ ನಾನಿರಬೇಕಾದರೆ  ನನ್ನ ಬ್ಲಾಗು   ನಾಲ್ಕು ಕಳೆದು ಐದನೇ  ವರ್ಷಕ್ಕೆ ಕಾಲಿಡುತ್ತಾ ಇದೆ ಅನ್ನುವ ಜ್ಞಾನವೂ ಆಗಿ ಅದನ್ನೇ ಎಲ್ಲರಲ್ಲಿ   ಟಾ೦  .. ಟಾ೦ ಹೊಡೆಯುತ್ತಿದ್ದೇನೆ.

ವಂದನೆಗಳು.  


Friday, October 12, 2012

ಕಸ ಮತ್ತು ರಸ..!

''ಕಸ ಕಸ ಕಸವೆಂದೂ ಎಸೆದಾಡದಿರಿ  ನಿಮ್ಮ ಕಸದ ಕೊಳೆಯನೇನಾದರು ಬಲ್ಲಿರಾ ಬಲ್ಲಿರಾ.. ''[ದಾಸೋತ್ತಮರಲ್ಲಿ   ಕ್ಷಮೆ ಯಾಚಿಸುತ್ತಾ]   ಎನ್ನುವಂತೆ ನಮ್ಮ ಮನೆಗಳ ಮುಂದೆ ವಾರಕ್ಕೆರಡು ದಿನ ಬೆಳ್ಳಂ ಬೆಳಿಗ್ಗೆ ಕಸಪ್ಪ  ಸೀಟಿ ಹೊಡೆಯುತ್ತಾ ಗಡ ಗಡ ಸದ್ದಿನೊಂದಿಗೆ ಗಾಡಿಯನ್ನು ತಂದು ನಿಲ್ಲಿಸುತ್ತಾನೆ. ಮಕ್ಕಳಿಗೆ ಸ್ನಾನ ಮಾಡಿಸುತ್ತಿರುವರು ಅರ್ಧಕ್ಕೆ ಬಿಟ್ಟು, ಮಗಳಿಗೆ  ಜಡೆ ಬಾಚುತ್ತಿದ್ದರೆ ಹಾಗೆಯೇ ಹಿಡ್ಕೋ ಒಂಚೂರು, ಅನ್ನುತ್ತಾ ನೂಕಿ, ಗಂಡನಿಗೆ ಚಾ ಕಾಸುತ್ತಿದ್ದರೆ ಅದು ಒಲೆ  ಮೇಲೆ ಬೇಕಿದ್ದರೆ ಉಕ್ಕಿ ಹರಿಯಲಿ, ಕ್ಯಾರೆ ಮಾಡದೆ  ಎಲ್ಲ ಹೆಂಗಸರೂ  ಹಿಡಿದ ಕೆಲಸ ಬಿಟ್ಟು ಕಸದ ಬುಟ್ಟಿ ಹಿಡಿದು, ನೈಟಿ ಸರಬರ ಮಾಡಿಕೊಂಡು,ಎಡ ಗೈಲಿ  ಕೂದಲು ತಳ್ಳುತ್ತಾ, ದಾಪುಗಾಲಿಕ್ಕುತ್ತಾ ಗಾಡಿಗೆ ಕಸ ಹಾಕುವುದರಲ್ಲಿ ಬ್ಯುಸಿ..! ವಾರಕ್ಕೆರಡೇ  ಬಾರಿ ಕಸಪ್ಪನ ಆಗಮನ ನಮ್ಮ ಏರಿಯಾಕ್ಕೆ. ಮನೆಯನ್ನೇ ಮಗುಚಿ ಬಿಡುವರೆನೋ ಎನ್ನುವಷ್ಟು ಕಸ ಶೇಖರಣೆ ಯಾಗಿರುತ್ತದೆ.   ಈ ಕ್ಲಿಷ್ಟಕರ  ಸಮಯದಲ್ಲಿ ಬಡಪಾಯಿ ಗಂಡಂದಿರೇನಾದರೂ  ಪೇಪರ್ ಓದುತ್ತಾ ಕೂತಿದ್ದುದು ಕಣ್ಣಿಗೆ ಬಿದ್ದಿದ್ದೆ ಹೌದಾದರೆ ಥೇಟ್ ಶುದ್ಧ ಸೋಮಾರಿಯಂತೆಯೇ ಕಂಡು ಹೆಂಗಸರ  ಉಗ್ರ ನೇತ್ರಗಳಿಗೆ ಆ ದಿನವಿಡೀ ಈಡಾಗಬೇಕಾಗುತ್ತದೆ..!!!
ಮೊದಲೆಲ್ಲಾ   ಹಸಿ ಒಣ ಅಂತೇನೂ  ಬೇರೆ ಮಾಡದೆ ಇದ್ದ ಹಾಗೆಯೇ ಕಸ ತಗೊಂಡು ಹೋಗಿ ನಿರ್ಲಕ್ಷ್ಯವಾಗಿ ಸುರುವಿ ಬಂದಿದ್ದರೆ ಮುಗಿದು ಹೋಗುತ್ತಿತ್ತು. ಈಗ ಕಾನೂನು..ಕಾನೂನು ಬಂದಿದೆಯಲ್ಲ.  ಹಸಿ,ಒಣ ವಿಷಯುಕ್ತ ಅಂತೆಲ್ಲಾ ವಿಂಗಡಿಸಿ ಕಸ ಹಾಕಬೇಕು ಅಂತ.  ಕಾನೂನು ಆಗಲೂ ಇತ್ತು, ಬಿಗಿ ಇರಲಿಲ್ಲ. ಕಸಪ್ಪ ಸೀಟೀ ಹೊಡೆಯುತ್ತಲೇ ನೆಲದ ಮೇಲೊಂದು ಕತ್ತರಿಸಿದ  ಪ್ಲಾಸ್ಟಿಕ್ ಚೀಲವೊಂದನ್ನು ಜಮಖಾನ ಹಾಸಿದಂತೆ  ಹಾಸಿ ಎಲ್ಲ ಕಸವನ್ನೂ ಮೊದಲು ಅದರ ಮೇಲೆ ಸುರುವಲು  ತಾಕೀತು ಮಾಡಿ ಅದರಲ್ಲೇನಾದರೂ ವ್ಯತ್ಯಾಸವಾಗಿ ಹಸಿ ಒಣ  ಮಿಕ್ಸ್ ಆಗಿದ್ದು ಕಂಡು ಬಂದರೆ ಕಸ ತಂದವರ ಹತ್ತಿರವೇ ಬೇರೆ ಬೇರೆ ಮಾಡಿಸುತ್ತಾನೆ. ಈಗ ಹೆಂಗಸರಿಗೆ ರಸ್ತೆಯ ಮೇಲೆ ಕಸ ಕೆದಕುವ ಗತಿ.. ಆಚೀಚೆಯವರು ಕಸ ಗೆಬರುವುದನ್ನು ನೋಡಿಯಾರೆಂಬ ಒಂತರಾ  ಆಗುವಿಕೆ, ಈ ಎಲ್ಲದರ ಮಧ್ಯೆ ಬೆಳಗಿನ ಗಡಿಬಿಡಿ ಎಲ್ಲವೂ ಸೇರಿ ತಲೆ ಪೂರಾ ಕಸದ ತೊಟ್ಟಿ..!
ಕಸಪ್ಪನ ಸ್ಟ್ರಿಕ್ಟ್ ಆಜ್ಞೆಯ ಮೇರೆಗೆ ಈಗ ಎಲ್ಲಾ ಕಸ ಬೇರೆ ಬೇರೆ ಮಾಡಿಯೇ ಕೊಡುತ್ತಾರೆ. ಇಲ್ಲದಿದ್ದರೆ ರಸ್ತೆಯಲ್ಲಿ ಕಸ ಹೆಕ್ಕಿಸುತ್ತಾನೆ ಅವನು..ಹಾಳಾದವನು. ಕಸ ವಾಪಾಸ್ ಕಳಿಸುತ್ತಾನೆ.  ಗಂಡ ಮಕ್ಕಳಿಗೆ ಹೆದರಿಸಿಯಾದರೂ ಕಸ ವಿಂಗಡಣೆಯ ಕಾನೂನು ಪಾಲನೆ ಮಾಡುತ್ತಾರೆ ಕಸಪ್ಪನ ಕಸ ಹೆಕ್ಕಿಸುವಿಕೆಗೆ ಹೆದರಿ. ಯಾವಾಗಲೂ ಅದು ಹಾಗೆಯೇ.. ಸುಮ್ಮನೆ ಹೇಳಿದರೆ ಯಾರು ಕೇಳುತ್ತಾರೆ..? ತಲೆ ಮೇಲೆ ಮೊಳೆ ಇಟ್ಟು  ಸುತ್ತಿಗೆ ಎತ್ತಿದರೆ ಮಾತ್ರ ಹೇಳಿದ ಮಾತು ಕೇಳುವುದು.ಕಸಪ್ಪನಾದರೂ ಅಷ್ಟೇ ಅವನಿಗೆ ಅಲ್ಲಿ ಬಿಸಿ, ನಮಗೆ ಇಲ್ಲಿ ಬಿಸಿ. ಏನಾದರೂ ಆಗಲಿ ಕಸಕ್ಕೊಂದು ಗತಿಯಾಯಿತಲ್ಲಾ, ಅಭ್ಯಾಸವಾಗುವ ವರೆಗೆ ಜನರಿಗೂ ರಗಳೆ, ನಂತರ ತನ್ನಿಂದ ತಾನೇ ಸರಿಯಾಗಿ ಬಿಡುತ್ತದೆ.ಬದಲಾಗಲಿಕ್ಕೆ ಸಮಯ ಮತ್ತು ಭಯ ಬೇಕಾಗುತ್ತದೆ!  ರೂಲ್ಸ್ ಫಾಲೋ ಮಾಡಲು ಸರಿಯಾಗಿ ಬಿಗಿ ಬೇಕು! 

ಹ್ಞೂ , ಕಸದ್ದೇ   ಸುದ್ದಿಯಾಯಿತು.. ನಾನಾದರೂ ಈ ನಡುವೆ ಕೆಲವು ಒಳ್ಳೆಯ ಕೆಲಸ ಮಾಡಿ ಒಳ್ಳೆಯವಳಾಗಲು ಹೊರಟಿದ್ದೇನೆ. ಕೆಲವಾರು ಚಿತ್ರ ಪತ್ರ ಬರೆದು ಖುಷಿ ಪಡುತ್ತಿದ್ದೇನೆ. ನಿಜ, ನನ್ನ ಈ ಚಿತ್ರ ಬರೆಯುವ ವಿಚಾರಕ್ಕೆ ಮಹಾ ಇತಿಹಾಸವೇ ಇದೆ ನಂಬಿ!  ಬಾಲ್ಯದಿಂದಲೂ ಚಿತ್ರ ಬರೆಯುತ್ತಿದ್ದುದರಿಂದ ಮತ್ತು ಈಗಲೂ ಅದೇ ತೆರದಲ್ಲಿ ಬರೆಯುವುದರಿಂದ ನನ್ನನ್ನು ನೀವು 'ಬಾಲ ಕಲಾವಿದೆ' ಎಂದು ಬೇಕಾದರೆ ಈಗಲೂ  ಕರೆಯಿರಿ  ಪರವಾಗಿಲ್ಲ..:)

ಹೈಸ್ಕೂಲು, ಕಾಲೇಜು ಕಲಿಯುವಾಗ ನನ್ನ ನೋಟ್ಸು, ರೆಕಾರ್ಡುಗಳ ರಕ್ಷಾ ಪುಟದ  ಮುಂಬದಿ ಮತ್ತು ಹಿಂಬದಿ,  ಮೊದಲ ಪುಟ, ಕೊನೆಯ ಪುಟ, ಮಧ್ಯದ ಪುಟ ಹೀಗೆ ಪುಸ್ತಕದ ಅನೇಕ ಕಡೆ ಚಿತ್ರ ಬರೆದಿಟ್ಟುಕೊಳ್ಳುತ್ತಿದ್ದೆ. ನನ್ನ ಪುಸ್ತಕವೊಂದೇ  ಅಲ್ಲದೆ ಗೆಳತಿಯರ ನೋಟ್ ಬುಕ್ಕುಗಳ ಮೇಲೂ. 'ಏ ನನಗೊಂದು ಚಿತ್ರ ಬರ್ಕೊಡೇ,' ಅನ್ನುತ್ತಾ ಒಬ್ಬೊಬ್ಬರಾಗಿ ತಮ್ಮ ನೋಟ್ಸ್ ಗಳನ್ನೂ ನನ್ನ ಮುಂದಿಡುತ್ತಿದ್ದರು.  ನಾನು  ಒಳ್ಳೆ ಆಸ್ಥಾನ ಕಲಾವಿದೆಯ ಹುರುಪಿನಲ್ಲಿ ಯಾರಿಗೂ ಇಲ್ಲವೆನ್ನದೇ ಎಲ್ಲರ ಪುಸ್ತಕದ ಮೇಲೂ ನವಿಲು, ಚಿಟ್ಟೆ, ಹೂಬಳ್ಳಿ, ತರತರ ಡಿಸೈನುಗಳೂ, ದೇವರುಗಳೂ, ತೀರಾ ಆಪ್ತರಿಗೆ ಎರಡೆರಡು ಚಿತ್ರಗಳೂ, ಹೀಗೆ ಬರೆದು ಪ್ರಾಕ್ಟೀಸ್ ಮಾಡುತ್ತಿದ್ದೆ. ಲೀಸರ್ ಪೀರಿಯಡ್ಡಿನಲ್ಲಿ , ಊಟದ ಸಮಯದಲ್ಲಿ, ಬಸ್ಸಿಗೆ ಕಾಯುತ್ತಿರುವ ಸಮಯದಲ್ಲಿ ಕೂರುವ ವ್ಯವಸ್ಥೆಯಿದ್ದರೆ, ಬಸ್ಸಿನಲ್ಲಿ, ಹೀಗೆ ಎಲ್ಲೆಂದರಲ್ಲಿ ನನ್ನ ಗೆಳತಿಯರಿಗೆ ಚಿತ್ರ ಬರೆದು ಕೊಡುತ್ತಿದ್ದೆ.  ನನ್ನ ಗೆಳತಿಯರ ಮಧ್ಯೆ  ಆಗ ನಾನು ಸಿಕ್ಕಾಪಟ್ಟೆ ವರ್ಲ್ಡ್ ಫೇಮಸ್ಸು!

ನನ್ನದೊಂದು ಸಮಸ್ಯೆ ಎಂದರೆ ಏನೋ ಮೂಡು ಬಂದಾಗ ಬರೆದು ಬಿಡುತ್ತೇನೆ. ಮತ್ತೆ ವರ್ಷಗಟ್ಟಲೆ ಬರೆಯದಿದ್ದರೂ ಆದೀತು.  ಯಾರಾದರೂ ಬರ್ಕೊಡು  ಅಂದಾಗ ಮಾತ್ರ  ನನಗೆ ಬರೆಯುವ ನೆನಪಾಗಿ ಬಿಡುತ್ತದೆ ಮಹಾ ದೊಡ್ಡದಾಗಿ.  ಹೀಗೆ ಸುಮ್ಮನೆ ಫೇಸ್ ಬುಕ್ಕಿನ ಗೆಳತಿಗೆ ಸರ್ಪ್ರೈಸ್ ಮಾಡಲು ಒಂದು ಚಿತ್ರ ಬರೆದು ಗೋಡೆಗೆ ತೂಗು ಬಿಟ್ಟಿದ್ದೆ. ಎಲ್ಲರೂ ಅದನ್ನು ಅವರೇ ಅಂತ ಗುರುತಿಸಿ ನನಗೇ  ಸರ್ಪ್ರೈಸ್ ಮಾಡಿದರು!  ಅಲ್ಲಿಂದ ಮುಂದೆ  ನನಗೆ ನನ್ನ ಶಾಲಾ ದಿನಗಳೇ ಎದುರಿಗೆ ಬಂದಿತು. ನಂದೊಂದು ಚಿತ್ರ ಬರ್ಕೊಡಿ. ಅನ್ನುವ ಸ್ನೇಹಮಯ ಬೇಡಿಕೆಗಳು. ಎಲ್ಲರ ಕಾಲ್ಪನಿಕ ನೋಟ್ಸುಗಳು.  ನನ್ನ ಎಲ್ಲಾ ಚಿತ್ರಗಳು ಏನು ಬರೆದಿದ್ದೀನೋ ಅದೇ ಆಗಿರುತ್ತದೆಂಬ ನಂಬಿಕೆ ನನಗೆ ಯಾವತ್ತೂ ಇಲ್ಲವಾದರೂ ಸುಮಾರು ಜನರ ಚಿತ್ರ ಬರೆದೆ.  ನಾನು ಚಿತ್ರಿಸಿದ ಗೆಳತಿಯರು ಹೋಲಿಕೆ ಇದೆಯೋ ಇಲ್ಲವೋ ಅಂತೂ ಚೆನ್ನಾಗಿದೆ ಅಂತ ಒಪ್ಪಿಕೊಂಡು ನನ್ನ ಬೆನ್ನು ತಟ್ಟಿ,  ಕಾಮೆಂಟು ಕುಟ್ಟಿ ನನಗೆ ಇನ್ನಷ್ಟು ಚಿತ್ರಿಸಲು ಪ್ರೋತ್ಸಾಹ ಕೊಡುತ್ತಿದ್ದಾರೆ. ನನ್ನ ಪೆನ್ಸಿಲ್ಲಿನ ಒರಟು ರೇಖೆಗಳಲ್ಲಿ  ಅವರ ಮುಖಗಳನ್ನು ಸುರೂಪವಾಗಿಸಿದ್ದೆನೆಯೋ ಕುರೂಪವಾಗಿಸಿದ್ದೇನೆಯೋ ಅಂತೂ ನನಗೆ ಮಾತ್ರ   ಅನೇಕ ರೀತಿಯ ಮುಖಗಳು ಸಿಕ್ಕು ನನ್ನ ಭಾವಚಿತ್ರ ಬರೆಯುವ ಕಲೆ ನನಗೇ ಅರಿವಿಲ್ಲದಂತೆ   ಅಭಿವೃದ್ಧಿಯಾಗುತ್ತಿದೆ. ನನಗೆ  ಯಾರಾದರೂ, ಬರೀ... ಅಂತ ನನ್ನ  ನೂಕ ಬೇಕು. ಇಲ್ಲದಿದ್ದರೆ ಬರೆದರಾಯಿತು ಅಂದುಕೊಂಡು ನಾಳೆಗೆ  ಇಟ್ಟುಕೊಳ್ಳುತ್ತೇನೆ. ಅದು ವರ್ಷ ಗಟ್ಟಲೆ ಮುಂದುವರೆದು ಬಿಡುತ್ತದೆ. ಈ ಕಸ ಹಾಕುವ ಕಾನೂನಿನಂತೆಯೇ. ಸ್ವಲ್ಪ ಒತ್ತಾಯ ಬೇಕು.ಜೊತೆಗೆ  ಮುಲಾಜು ಬೇಕು..!

 ಕೆಲವು  ಚಿತ್ರಗಳು.






















ಅಂತೂ ಇಂತೂ ಈ ಮೂರು ವರ್ಷಗಳು ನೀವು ನನ್ನ ರಗಳೆಯನ್ನು ಸಹಿಸಿಕೊಂಡು ಮತ್ತಷ್ಟು ರಗಳೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ.   ಟೆಕ್ನಾಲಜಿಯಲ್ಲಿ ನಾನು ಯಾವತ್ತೂ ಹಿಂದೆ ಮತ್ತು ಕಂಪ್ಯೂಟರ್ ನಲ್ಲಂತೂ ನಾನು ಅನಕ್ಷರಸ್ತೆ.  ಈಗೀಗ ವಯಸ್ಕರ ಶಾಲೆಯಲ್ಲಿ ಅಕ್ಷರ ಕಲಿಯುವಂತೆ ಮಕ್ಕಳಿಂದ ಚೂರು ಪಾರು ಕಲಿತುಕೊಂಡು ಬ್ಲಾಗು ಫೇಸ್  ಬುಕ್  ಬಳಸುವುದನ್ನು  ಗೊತ್ತು   ಮಾಡಿಕೊಂಡಿದ್ದೇನೆ. ಆದರೂ ಎಷ್ಟು ಮಾಡಿದರೂ ಕಾಗುಣಿತ ತಪ್ಪಿ ಹೋಗಿಬಿಡುತ್ತದೆ. ಸರಿ ಮಾಡಲು ಮತ್ತೆ ಕಷ್ಟ ಪಡಬೇಕು. ಕನ್ನಡವನ್ನು ಇಂಗ್ಲೀಷಲ್ಲಿ ಬರೆದು ಇಂಗ್ಲೀಷನ್ನು ಕನ್ನಡದ ಇಂಗ್ಲೀಶ್ ಸ್ಪೆಲ್ಲಿಂಗ್ ನಲ್ಲಿ ಬರೆಯುವ ಮಟ್ಟಕ್ಕೆ ಹೋಗಿಬಿಟ್ಟಿದ್ದೇನೆ. ಹೀಗೆ ಆಗಾಗ ಆಗುವ ಅಪಸವ್ಯವನ್ನು ತಿದ್ದುತ್ತಾ  ಮತ್ತೆ ಮತ್ತೆ ಬರೆಯಲು ಎಳಸುವ ನಿಮ್ಮ ಪ್ರೋತ್ಸಾಹಕರ ನುಡಿಗಳನ್ನು  ಈ ನಾಲ್ಕನೆಯ ವರ್ಷಕ್ಕೆ ಕಾಲಿಡುವ ಸಮಯದಲ್ಲಿ  ಮತ್ತೊಮ್ಮೆ ನೆನಪಿಸಿಕೊಳ್ಳುತ್ತಿದ್ದೇನೆ.

ಎಲ್ಲರಿಗೂ ವಂದನೆಗಳು.












Tuesday, July 31, 2012

ಬಾರದ ಮಳೆಯಲೊಂದಷ್ಟು ಕೊಡೆಯ ನೆನಪುಗಳು

ಹೊರಗಡೆ ಸುಯ್ಯನೆ ಗಾಳಿ ಬೀಸುತ್ತಿದೆಯೇ ಹೊರತೂ ಹನಿ ಮಳೆಯಿಲ್ಲ.  ಮಳೆಯಿರದಿದ್ದರೂ ನಮ್ಮನೆಯಲ್ಲಿ ಕೊಡೆಗಳಿಗೆ ಬರಗಾಲವಿಲ್ಲ.ಒಂದು ಐದಾರು ಕೊಡೆಗಳಿವೆ.    ಒಂದು ದಿನವೂ ಮಳೆಗೆ ಕೊಡೆ ಹಿಡಿದಿಲ್ಲ.ಆದರೂ  ಅದರಲ್ಲಿ ಒಂದೂ ನೆಟ್ಟಗಿಲ್ಲ.   ಕಡ್ಡಿಗಳು ಮುರಿದು, ಹೊಲಿಗೆ ಬಿರಿದು, ಬಿಚ್ಚಿದರೆ ಸೊಂಟ ನೋವಿನಿಂದ ಬಳಲುವ  ಅಜ್ಜಿಯಂತೆ ಕಾಣಿಸುತ್ತವೆ. ಅಂಗಡಿಗಳಲ್ಲಿ ಕಾಣುವ ಬಣ್ಣ ಬಣ್ಣದ ಛತ್ರಿಗಳನ್ನು ಕಂಡೊಡನೆ ಪ್ರತೀಸಲ  ನನ್ನ ಮಗಳು ಛತ್ರಿ ಕೊಳ್ಳುವ ವಿಚಾರವನ್ನು  ನೆನಪಿಸುತ್ತಾಳೆ.  ಈಗಿನ ಬಹು ಮಡಿಕೆಗಳ ಛತ್ರಿಗಳು  ವ್ಯಾನಿಟೀ ಬ್ಯಾಗಿನಲ್ಲಿ ಇಟ್ಟುಕೊಂಡು ಹೋಗಲು ಚಂದವೇ ಹೊರತೂ ಮಳೆಗೆ ಬಿಚ್ಚಿಕೊಂಡು ಹೋಗಲಲ್ಲ. ಮಳೆ ಬಂದ್ರೆ ಇರಲಿ ಅನ್ನುವುದಕ್ಕೋಸ್ಕರ ಅದನ್ನೇ ನನ್ನ ಮಗಳು ಬ್ಯಾಗಿನಲ್ಲಿ ಪುಸ್ತಕಗಳೊಂದಿಗೆ  ಪ್ಲಾಸ್ಟಿಕ್ ಕವರಿನಲ್ಲಿ ಇಟ್ಟುಕೊಂಡು ಶಾಲೆಗೆ   ಹೋಗುತ್ತಾಳೆ. ಮಳೆ ಬಂದರೆ ಛತ್ರಿ ನೆನೆಯಬಾರದು ಅನ್ನುವ ಸದುದ್ಧೇಶ!  ನನ್ನ ಮಗ ಮಾತ್ರಾ ಸ್ನಾನದ  ಕೋಣೆಯ  ಶವರಿನಡಿಯಲ್ಲಿ ಛತ್ರಿ ಬಿಚ್ಚಿ ನಿಂದು  ಮಳೆಗಾಲದ ಸ್ವಾದವನ್ನನುಭವಿಸುತ್ತಾನೆ.  ಅಲ್ಲೇ ಕುಣಿದಾಡುತ್ತಾ ಛತ್ರಿಯ   ಅಷ್ಟೂ ಕಡ್ಡಿಗಳನ್ನೂ  ಮುರಿದು ಹಾಕುತ್ತಾನೆ.

ನಾವೆಲ್ಲಾ ಶಾಲೆಗೆ ಹೊಗುವ ಸಮಯದಲ್ಲಿ ಹೀಗೆಲ್ಲಾ ತರತರದ ಛತ್ರಿಗಳ ಆಯ್ಕೆಗಳಿಗವಕಾಶವಿರಲಿಲ್ಲ. ಆಗ ನಮಗೆ  ಇದ್ದ ಛತ್ರಿಗಳಲ್ಲೇ ಅದರ ಹ್ಯಾ೦ಡಲ್ಲಿನ ಬಣ್ಣ ಮತ್ತು ಅದರ ಕ್ವಾಲಿಟಿ ಪ್ರತಿಷ್ಟೆಯ ವಿಚಾರವಾಗಿತ್ತು! ಸ್ಟೀಲ್ ಕೋಲಿನ ಪ್ಲಾಸ್ಟಿಕ್ ಹ್ಯಾ೦ಡಲ್ ಆದರೆ ಅದು ಹೆಗ್ಗಳಿಕೆ.  ಆಪ್ಪಯ್ಯ ನನಗೆ ಮತ್ತು ನನ್ನ ಅಕ್ಕನಿಗೆಂದೇ  ಪ್ಲಾಸ್ಟಿಕ್ ಹ್ಯಾ೦ಡಲಿನ ಎರಡು ಕೊಡೆಗಳನ್ನು ತ೦ದು ಕೊಟ್ಟಿದ್ದ.  ಮರದ ಕೋಲಿನ ಛತ್ರಿ ಇದ್ದವರಿಗೆ ಸ್ವಲ್ಪ ಕೀಳರಿಮೆ, ಆದರೂ ಮರದ ಕೋಲಿನ ಛತ್ರಿಗಳು ದೊಡ್ಡದಾಗಿರುವುದರಿ೦ದ ಮಳೆ ಹೆಚ್ಚು ಮೈಗೆ ತಾಗದು. ಇಬ್ಬಿಬ್ಬರು ಒ೦ದೇ ಛತ್ರಿಯಲ್ಲಿ ಹೊಕ್ಕೊ೦ಡು ಗುಟ್ಟು ಹೇಳಿಕೊ೦ಡು ಬರಬಹುದಾಗಿದ್ದ ಸೌಲಭ್ಯ ಇತ್ತಾದರೂ ಅದು ನಮಗೆ ಆಗಲೇ   ’ಓಲ್ಡ್ ಫ್ಯಾಶನ್’ ಆಗಿತ್ತು. ನನ್ನ ಛತ್ರಿಯ ಹ್ಯಾ೦ಡಲ್ಲು ಕೆ೦ಪು  ಬಣ್ಣದ್ದಾಗಿತ್ತು ಮತ್ತು ಸ್ವಲ್ಪ ಚಿಕ್ಕದು. ನನ್ನಕ್ಕನ ಛತ್ರಿ ಸ್ವಲ್ಪ ದೊಡ್ಡದು. ಅದೇನು ಬೇಜಾರಿನ ಸ೦ಗತಿಯೇನಾಗಿರಲಿಲ್ಲ. ಜೋರು ಮಳೆ,ಗಾಳಿ ಬ೦ದಾಗ ಯಾವ ಛತ್ರಿಯಾದರೂ ಅದರ ಕಥೆ ಡಿಶ್ಶೇ..   ಅದು ಡಿಶ್ ತರ  ಎನ್ನುವ  ಜ್ಞಾನ  ನಮಗೆ ಇಲ್ಲದಿದ್ದರೂ  ಉಲ್ಟಾ ಆಗಿ ಅರಳಿದ ಕಮಲದ೦ತೆ   ಕ೦ಡು ತನ್ನ ಸೌ೦ದರ್ಯವರ್ಧಿಸಿಕೊ೦ಡ೦ತೆ ಭಾಸವಾಗುತ್ತಿತ್ತು! ಅಲ್ಲದೇ ಮಳೆಯಲ್ಲಿ ನೆನೆಯುವುದು ನಮಗೆ  ಮುಖ್ಯಹೊರತೂ  ಛತ್ರಿಯಲ್ಲವಲ್ಲ. ಬೀಸುವ ಗಾಳಿಗೆ ದೊಡ್ಡ ಕೊಡೆ ಒಳಗೆ ಗಾಳಿ ಹೊಕ್ಕು ಅಷ್ಟಷ್ಟು  ದೂರ  ಎಳೆದುಕೊಂಡು ಹೋಗುತ್ತಿತ್ತು. ಮುರಿದ ಛತ್ರಿ ಮಡಚಿಟ್ಟುಕೊಂದು ಗೆಳತಿಯರಲ್ಲಿ   ''ಏ ಛತ್ರಿ.....ಕೊಡೇ '' ಎನ್ನುತ್ತಾ pun ಎಂದರೇನೆಂದು  ಅರಿವೇ ಇಲ್ಲದ ಸಮಯದಲ್ಲೂ  punಡಾಟಿಕೆ  ಮಾಡಿದ್ದುಂಟು. ಕೆಲವರು ಈ ಸಮಸ್ಯೆಗಳೇ ಬೇಡ ಎನ್ನುವಂತೆ ಬಣ್ಣ ಬಣ್ಣದ  ಪ್ಲಾಸ್ಟಿಕ್ ಕೊಪ್ಪೆ ಹಾಕಿಕೊಂಡು ಬರುತ್ತಿದ್ದರು. ನಿಜ ಅಂದರೆ ಅದೇ ಆರಾಮ. ಮಳೆ ಒಂಚೂರೂ ಮೈಗೆ ತಾಗುತ್ತಿರಲಿಲ್ಲ. ಆದರೂ ನಮ್ಮ ಲೆಕ್ಕದಲ್ಲಿ  ಕೊಪ್ಪೆಯ ಬೆಲೆ ಕಡಿಮೆ ಆಗ..! ಒಂದು ಮಳೆಗೆ ಒಂದುಕೊಡೆ ಮತ್ತು ಒಂದು  ಜ್ವರ ಆಗ..
 

  ನನ್ನ ಛತ್ರಿಯ   ಹೆಚ್ಚುಗಾರಿಕೆಯೆ೦ದರೆ ಅದು ಚಿಕ್ಕದಿರುವ ಕಾರಣ, ನನ್ನ ಅಕ್ಕ  ’ ಇವತ್ತೊಂದಿನ  ನಾನು ಶಾಲೆಗೆ ತೆಗೆದುಕೊ೦ಡುಹೋಗುತ್ತೇನೆ ಕೊಡೇ ,’ ಎ೦ದು ಆಗಾಗ ಕೇಳುತ್ತಿದ್ದುದು. ಅವಳ ಶಾಲೆ ದೂರ.ದೊಡ್ಡ ಛತ್ರಿ ಭಾರ.  ಆಗ ನಾನಾದರೂ ಇಲ್ಲದ ಶ್ರೀಮದ್ಗಾ೦ಭೀರ್ಯದಿ೦ದ ಯಾವುದೋ ಮಹಾ ತ್ಯಾಗವನ್ನು ಮಾಡುವವಳ೦ತೆ ಮನಸ್ಸಿಲ್ಲದಿದ್ದರೂ ಅವಳಿಗೆ ಕೊಡುತ್ತಿದ್ದೆ. ಸಮಯಕ್ಕೆ ಬೇಕಾಗುತ್ತಲ್ಲ..! 


 ಸುಮ್ಮನೆ ಹನಿ ಮಳೆಯಲ್ಲಿ ಕೊಡೆ ಹಿಡಿದುಕೊಂಡು ಬರುತ್ತಿರುವಾಗಲೇ ಚಿಕ್ಕ ಪುಟ್ಟ ಜಗಳ, ಅದು ಕೆಲವೊಮ್ಮೆ ಯುದ್ಧಕ್ಕೆ ತಿರುಗುವ ಅಪಾಯಗಳೂ ಇಲ್ಲದಿಲ್ಲ. ಆಗ ಅರಳಿದ ಕೊಡೆಗಳೇ  ಶಸ್ತ್ರಾಸ್ತ್ರಗಳು!  ಒಬ್ಬರ ಕೊಡೆಯಿಂದ   ಮತ್ತೊಬ್ಬರ ಕೊಡೆ ಕುಕ್ಕಿದರೆ ಅದೇ ಮಾರಾಮಾರಿ ಯುದ್ಧ.  ಯಾರು ಜಾಸ್ತಿ ಸಲ ಕುಕ್ಕಿದ್ದಾರೋ ಅವರೇ ಜಯಶಾಲಿಗಳು...! ಈ ಗಲಾಟೆಯಲ್ಲಿ ಎಲ್ಲೋ ಏನೋ ಸ್ವಲ್ಪ ಹೆಚ್ಚು ಕಮ್ಮಿಯಾಗಿ ಕೊಡೆ ತಂತಿಯೇನಾದರೂ ಮುರಿದು ಗಿರಿದು ಹೋದರೆ ಅಕ್ಕಂದಿರು ರಾಜೀಪಂಚಾಯ್ತಿಕೆಗೆ  ಬರಬೇಕಿತ್ತು. 


ಮಳೆಗಾಲ ಬ೦ತೆ೦ದರೆ ಅಪ್ಪಯ್ಯಮುರಿದ ಕೊಡೆಗಳ ರಿಪೇರಿ ಕೆಲಸ ಹಚ್ಚಿಕೊಳ್ಳುತ್ತಾನೆ ಈಗಲೂ..!   ನಮ್ಮನೆಯಲ್ಲಿ ಪೇಟೆಗೆ ತೆಗೆದುಕೊಂಡು ಹೋಗಿ ಆ  ಕೊಡೆ ರಿಪೇರಿ ಮಾಡುವವನನ್ನು ಹುಡುಕಿ ಕಾದು  ರಿಪೇರಿ ಮಾಡಿಸಿಕೊಳ್ಳುವ ಅವಶ್ಯಕತೆಯೇ ಇರಲಿಲ್ಲ. ಅಪ್ಪಯ್ಯ ಮಳೆಗಾಲದ ಬಿಡುವಿನ ಸಮಯದಲ್ಲಿ ಮದ್ಯಾಹ್ನದ ಹೊತ್ತು ಈ ರಿಪೇರಿ ಕೆಲಸಗಳನ್ನೆಲ್ಲ ಆಸಕ್ತಿಯಿಂದ ಮಾಡುತ್ತಾನೆ. ಅದವನಿಗೆ ಒಂತರಾ ಇಷ್ಟದ ಕೆಲಸ. ನಾವು ಕಸೂತಿ ಹಾಕಿದಂತೆ ಅವನ ಸ್ಟೈಲು ಹಾಗೆ.   ಒ೦ದು ರ್ಯಾಗ್ಜಿನ್ ಬಟ್ಟೆಯಲ್ಲಿ ಸುತ್ತಿ ಇಟ್ಟುಕೊ೦ಡ  ಹಳೇ  ಕೊಡೆ ಕಡ್ಡಿ, ಕೋಲು, ಹಿಡಿಕೆ, ತಂತಿಗಳೂ,ಛತ್ರಿಯ ಬಟ್ಟೆ  ಇವೆಲ್ಲವನ್ನೂ ಮೆತ್ತಿನ ಮೇಲಿ೦ದ ಕೆಳಗಿಳಿಸುತ್ತಾನೆ. ಬಾಯಲ್ಲಿ ಒಂದು ಹೊಗೆಸೊಪ್ಪಿನ  ಕವಳ  ಇಟ್ಟುಕೊಂಡು ಕುಳಿತರೆ ಏಳುವಾಗ   ಮುರಿದ ಕೊಡೆ  ಹೊಸಕೊಡೆಯಾಗಿರುತ್ತಿತ್ತು ಆಗೆಲ್ಲಾ. ಅಪ್ಪಯ್ಯನ ಹಡಪದಲ್ಲಿ ಇರದ ವಸ್ತುಗಳಿಲ್ಲ.  ಕೆಲವೊಮ್ಮೆಕೊಡೆ  ಬಟ್ಟೆ ಹರಿದುಹೊದರೆ ಪೇಟೆಯಿಂದ ಹೊಸಬಟ್ಟೆ ತಂದು ಹಳೆ ಕೊಡೆಯ ಅಸ್ಥಿಪಂಜರಕ್ಕೆ  ಹೊಲಿದು ಹೊಸಾದು ಮಾಡುತ್ತಿದ್ದ.. ಆಮೇಲೆ ಕೊಡೆ ಕಳೆದು ಹೋಗದಂತೆ  ದಾರದಲ್ಲೇ ಹೊಲಿದಿಡುವ ನಮ್ಮ ಹೆಸರಿನ ಮೊದಲಕ್ಷರ ಸಿದ್ಧ . ''ನೋಡೇ ಹಳೆ ಕೊಡೆ ಹ್ಯಾಂಗೆ ಹೊಸಾದು ಮಾಡಿದ್ದಿ...'' ಎಂದು ಅಪ್ಪಯ್ಯ ಕವಳ ಉಗುಳಿ  ಬಂದು ಹೇಳುತ್ತಿದ್ದರೆ ನಮಗೆ ಖುಶಿ ಮತ್ತು ಅಪ್ಪಯ್ಯನಿಗೂ ಸಂತೃಪ್ತಿ.   ಹಾಗಾಗಿ ನಾವು ಯಾವತ್ತೂ ಹರಕಲು ಮುರುಕಲು ಕೊಡೆ ಒಯ್ದವರೇ ಅಲ್ಲ.

ನನ್ನ ಮಗ  ಒಂದಷ್ಟು  ದಿನ ಟೆರೇಸಿನಲ್ಲಿ ಕೊಡೆ ಹಿಡಿದು  ಮಳೆಯೊಂದಿಗೆ ಆಡಿದ. ಅಲ್ಲೂ ಜೋರು ಗಾಳಿ.   ಇವನನ್ನೆಲ್ಲಾದರೂ  ಹಾರಿಸಿಕೊಂಡು ಹೋಗಿ ಪಕ್ಕದ ಟೆರೇಸಿಗೆ ಹಾಕಿದರೆ ಕಷ್ಟ..   ಹೊರಗೆ ಬೀದಿಯಲ್ಲಿ ಕೊಚ್ಚೆ. ಅವನೇನು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬಚ್ಚಲುಮನೆಯ ನಲ್ಲಿ, ಶವರಿನ ಕೆಳಗೆ ಮಳೆ,ಮಳೆ  ಅನ್ನುತ್ತಾ ಕುಣಿಯುತ್ತಾನೆ. ಮಳೆಬಾರದ ಈ ಮಳೆಗಾಲದಲ್ಲಿ ನೀರ ಬರ.  ನೀರಿಲ್ಲ ಎಂದು ಅವನನ್ನು  ಸುಮ್ಮನಿರಿಸಿದ್ದೇನೆ.
 
ನನ್ನ ಬಳುವಳಿಗೆ ಕೊಟ್ಟ ಹೊಸಾ ಛತ್ರಿ ಇನ್ನೂ ಹೊಸದಾಗಿಯೇ ಇದೆ. ಏಕೆಂದರೆ ಅದನ್ನು ಬಳಸಿದ್ದೇ  ಕಡಿಮೆ ಮತ್ತು ಬೆಂಗಳೂರಲ್ಲಿ ಮಳೆಯಲ್ಲಿ  ಹೊರಗೆ  ಹೋಗಿದ್ದೇ  ಇಲ್ಲ.  ಅಷ್ಟರ ಮೇಲೆ ಅನೇಕ ಛತ್ರಿಗಳು  ನಮ್ಮನೆ ಶೆಲ್ಫ್   ಅಲಂಕರಿಸಿದರೂ ಎಲ್ಲವೂ ಶಿಶಿರನ  ಮಳೆ ಕುಣಿತಕ್ಕೆ  ಸಿಲುಕಿ ಮುರಿದ ಸ್ಥಿತಿಯಲ್ಲಿವೆ. ಅದನ್ನಾದರೂ ರಿಪೇರಿ ಮಾಡಿಸೋಣವೆಂದರೆ  ಕೊಡೆ ರಿಪೇರಿ ಮಾಡುವವರು ಯಾರೂ ಕಾಣುವುದೇ ಇಲ್ಲ ಈಗೀಗ...  ಹೊಸಾದು ತಗೊಳ್ಳುವುದೇ ಒಳ್ಳೇದು ಎಂದು  ಐಶು  ಅನ್ನುತ್ತಾಳೆಂದು ಮತ್ತೆ ಬಾಯಿ ಬಿಗಿದುಕೊಂಡು ಕೂತಿದ್ದೇನೆ  ಅಪ್ಪಯ್ಯನನ್ನು ನೆನೆಸಿಕೊಳ್ಳುತ್ತಾ..


   

Tuesday, June 12, 2012

ಕಾಯುವ ಸಹನೆಯೂ ಇಲ್ಲ ಮತ್ತು ಧೈರ್ಯವೂ ಇಲ್ಲ..!

ಬಸ್ಸಿಗಾಗಿ ಕಾದು  ಕಾದು  ಸುಸ್ತಾಯಿತು. ಬೇಗ ಬೇಗ ಕೆಲಸ ಮುಗಿಸಿ ಇರುವ ಸ್ವಲ್ಪ  ಸಮಯದಲ್ಲಿ ಏನೋ ತರಲು  ಎಲ್ಲೋ  ಹೋಗಬೇಕಿತ್ತು. ಆಟೋ ಒಂದೂ ಸಿಗಲಿಲ್ಲ.  ಮೀಟರಿನ ಮೇಲೆ ಇಷ್ಟು ಎಕ್ಸಟ್ರಾ ಕೊಟ್ಟು   ಅವರನ್ನು ಓಲೈಸಿ ಹೋಗುವುದಕ್ಕಿಂತ ಬಸ್ಸೇ ಮೇಲು ಅಂದುಕೊಂಡು, ಆಟೋದವರ ಸೊಕ್ಕಿಳಿಸಲು   ಬಸ್ ಸ್ಟ್ಯಾಂಡ್ ಗೆ ಬಂದು ನೋಡಿದರೆ ನನಗೆ ಬೇಕಾದ ಬಸ್ಸೊಂದು ಬಿಟ್ಟು ಯಾವ್ಯಾವುದೋ ಎಲ್ಲೆಲ್ಲಿಗೋ ಹೋಗುವ ಬಸ್ಸುಗಳೆಲ್ಲ ಬರುತ್ತಿದ್ದವು ಹೋಗುತ್ತಿದ್ದವು. ಸುಮಾರು ಹೊತ್ತಾಯಿತು. ಸಮಯ ನೋಡಿಕೊಂಡೆ. ಬಸ್ ಸ್ಟ್ಯಾಂಡಿಗೆ  ಬಂದು ಇನ್ನೂ ಐದು ನಿಮಿಷವಾಗಿತ್ತು. ಥೋ,  ಅಷ್ಟರಲ್ಲಿ ನನಗೆ ಐದಾರು ಘಂಟೆಯೇ ಆದಂತಾಗಿತ್ತು.  ಕಾಯಲು ಸಹನೆಯೇ ಸಾಲುತ್ತಿಲ್ಲ ಈ ನಡುವೆ. ಇವರು ಆಟೋದಲ್ಲಿ  ಹೋಗು  ಅಂದರೂ ಕೇಳದೆ ಬಸ್ಸಿನಲ್ಲೇ ಹೋಗುತ್ತೇನೆ ಅಂತ ಜುಟ್ಟು  ಹಾರಿಸಿಕೊಂಡು ಬಂದಿದ್ದಕ್ಕೆ ಯಾಕೋ ಮರ್ಯಾದೆಯೇ ಸಿಗುತ್ತಿಲ್ಲ..!

ಶಾಲೆ ಕಾಲೇಜುಗಳಿಗೆ ಹೋಗುವಾಗ ಅದೆಷ್ಟು ಹೊತ್ತು ಬಸ್ಸಿಗಾಗಿ ಕಾಯುತ್ತಿದ್ದೆವು. ಬರೆದರೆ ದೊಡ್ಡ ಇತಿಹಾಸ ಪುಸ್ತಕವೇ  ಆಗುತ್ತದೆ.
ನಮ್ಮೂರಿಗೆ ಸಾಕಷ್ಟು ಬಸ್ಸುಗಳಿದ್ದರೂ  ಒಂದೂ ಸಮಯಕ್ಕೆ ಸರಿಯಾಗಿ ಬರುವ ನಿಷ್ಠೆ ತೋರುತ್ತಿರಲಿಲ್ಲ. ಕಟ್ ರೂಟು ಬೇರೆ. ಪ್ರತಿಯೊಬ್ಬರೂ ಮತ್ತೊಬ್ಬರನ್ನು  ''ಇವತ್ತು ಐದು ಘಂಟೆ ಹಂಸಗಾರು  ಬಸ್ಸು ಎಷ್ಟೊತ್ತಿಗೆ ಬರುತ್ತದೆ?'' ಎಂದೇ ಕೇಳುವುದು ರೂಢಿಯಾಗಿ ಹೋಗಿತ್ತು. ಆರು ಘಂಟೆ ಆರೂವರೆ, ಏಳು  ಹೀಗೆ ಬಸ್ಸಿನ ಸಮಯ ವ್ಯತ್ಯಾಸವಾಗುತ್ತಿತ್ತು. ಆ ಬಸ್ಸು ಕೆಲವೊಮ್ಮೆ ಬರುತ್ತಲೇ ಇರಲಿಲ್ಲ.  ಕುಮುಟಾದಿಂದ ಬರುವ ಬಸ್ಸು ಮಧ್ಯದಲ್ಲಿ ಎಲ್ಲಾದರೂ ಕೆಟ್ಟು ನಿಂತು ದೊಡ್ಡವರು ತಮ್ಮ  ಕವಳದ  ಬಾಯಿಯಲ್ಲಿ ''ಬಸ್ಸು ಇವತ್ತು ಅಲ್ಲೆಲ್ಲೋ ಬಾಳೆಬರೆ  ಘಾಟೀಲಿ  ಕರ ಹಾಕಿದ್ದಡಾ'' ಎಂದು ಆಕಾಶಕ್ಕೆ ಮಳೆಗರೆಯುತ್ತಿದ್ದರು.ಅದು  ಬಿಟ್ಟರೆ ಮತ್ತೆ ರಾತ್ರಿ ಒಂಬತ್ತರ ವರದಕ್ಕೆ ಕಾಯಬೇಕಿತ್ತು.ಹೆಚ್ಚಾಗಿ ಸಾಗರದ ಬಸ್ ಸ್ಟ್ಯಾಂಡ್ ನಲ್ಲಿ ಬಂಗಾರಿ ಭಟ್ಟರ ಮನೆ ಹೊರಗೆ ನಿಲ್ಲಲು  ಸ್ವಲ್ಪ ಜಾಗವಿತ್ತು. ಅಲ್ಲಿ ನಾವೆಲ್ಲಾ ಹೆಣ್ಣು ಮಕ್ಕಳು ನಿತ್ಕೊಂಡು ಕೂತ್ಕೊಂಡು ಬಸ್ ಸ್ಟ್ಯಾಂಡ್  ಕಾಯ್ಕೊಂಡು ಇರುತ್ತಿದ್ದೆವು.  ನೀರು ಪಾರು ಬೇಕಾದ್ರೆ ಅವ್ರ ಮನೆಯಲ್ಲೇ ಕೇಳಿ ಕುಡಿಯುವುದು. ಸೇವಾಸಾಗರಕ್ಕೆ ಹೋಗುವ ಚಿಳ್ಳೆ  ಪಿಳ್ಳೆಗಳಿಂದ  ಹಿಡಿದು ಕಾಲೇಜು ಕನ್ಯೆಯರ ವರೆಗೆ ಎಲ್ಲರೂ ಅಲ್ಲೇ  ಝಾಂಡಾ  ಊರುವುದು. ಅಜ್ಜಿ ಮನೆ ಅಂತ ಒಂದಿತ್ತು. ಅಲ್ಲೂ ಕೆಲವರು ಇರುತ್ತಿದ್ದರು.  ಇಲ್ಲಾ ಅಂದರೆ ಪೈ ಅಣ್ಣನ ಅಂಗಡಿ. ನಮ್ಮ ಶಾಲೆ ಕಾಲೇಜುಗಳ ಮಂಗಾಟ, ಕಕ್ರತನ, ಇನ್ನಿತರೇ ಕೆಲಸಕ್ಕೆ ಬರುವ, ಬಾರದ ಸುದ್ದಿಗಳೆಲ್ಲ ವಿನಿಮಯವಾಗುತ್ತಿದ್ದು ಅಲ್ಲೇ.  ಹೊತ್ತು ಕಳೆಯಲು ಹುಂಡಿ ಪದ, ಚುಕ್ಕಿ ಆಟ.ಕೆಲ ಸ್ಕೂಲ್ ಮಕ್ಕಳು ಪಾಪ ಅಲ್ಲೇ ತಮ್ಮ ಹೋಂ ವರ್ಕ್ ಮಾಡಿಕೊಳ್ಳುತ್ತಿದ್ದರು.ನಾನಂತೂ ಎಷ್ಟೊಂದು ಸಾಯಿಸುತೆ, ಉಷಾ ನವರತ್ನರಾಮ್ ತರದವರು ಬರೆದ ಪ್ರೇಮ ಕಾದಂಬರಿಗಳನ್ನೆಲ್ಲಾ ಅಲ್ಲೇ ಓದಿ ಅಲ್ಲೇ  ಮರೆಯುತ್ತಿದ್ದೆನೋ ಏನೋ..!  ಬಸ್ ಸ್ಟ್ಯಾಂಡಿನಲ್ಲಿ   ಲೈನ್ ಹೊಡೆಯುವ ಹುಡುಗರು ಬಂಗಾರಿ ಭಟ್ಟರ ಮನೆ  ಬಾಗಿಲಿಗೆ ಕಣ್ಣೋಟ ಎಸೆಯುತ್ತಾ, ಕ್ರಾಪು ತೀಡುತ್ತಾ ಪ್ಯಾಂಟು ಜೋಬಿನಲ್ಲೊಂದು ಕೈ ಹಾಕಿಕೊಂಡು ಬಸ್  ಸ್ಟ್ಯಾಂಡಿನಲ್ಲಿ ಮೇಲೆ ಕೆಳಗೆ ಓಡಾಡುತ್ತಿದ್ದರು. ಕೆಲ ತುಂಟ ಹುಡುಗಿಯರು ಕಣ್ಣು ಗೋಲಿಯನ್ನು  ಮೂಗಿನ ಪಕ್ಕಕ್ಕೆ ತಂದು ವಚ್ಗಣ್ಣು  ಮಾಡಿ  ಹೆದರಿಸುತ್ತಿದ್ದರು. ಅಂತೂ ನಮಗೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ.ಮಧ್ಯಾಹ್ನ ತಿಂದ ಒಣಕಲು ದೋಸೆಯೋ, ಅಥವಾ ಉಪ್ಪಿಟ್ಟೋ   ಹೊರತೂ ಹಸಿವಾದರೂ ನಾವ್ಯಾರೂ ಹಾಗೆಲ್ಲಾ ಹೋಟೆಲಿಗೆ ಹೋಗುತ್ತಿರಲಿಲ್ಲ.  ಯಾವಾಗಲಾದರೂ   ನಿಂಬೆ ಹುಳಿ  ಪೆಪ್ಪರಮೆಂಟು ಇಲ್ಲ  ಯಾರಾದರೂ ಉಪ್ಪಿಗೆ ಹಾಕಿದ ನೆಲ್ಲಿಕಾಯಿಗಳನ್ನು ಕೊಟ್ಟರೆ  ಬಾಯಲ್ಲಿ ಅಡಗಿಸಿ ಇಟ್ಟುಕೊಳ್ಳುವುದು. ಅಪರೂಪಕ್ಕೊಮ್ಮೆ ಐಸ್ ಕ್ಯಾಂಡಿಯನ್ನು ತಿನ್ನುತ್ತಿದ್ದೆವು. ಅಂತೂ ಬಸ್ಸು ಬರುವವರೆಗೆ ಅಲ್ಲೇ ಜೋತು ಬಿದ್ದಿರುತ್ತಿದ್ದೆವು. ನಮ್ಮೂರ ಬಸ್ಸಿಗೆ ಬರುವ ಗಂಡು ಮಕ್ಕಳೆಲ್ಲ ಬೇರೆ ಬಸ್ಸಿಗೆ ಹೋಗಿ ಮೂರು ಮೈಲು ನಡೆದುಕೊಂಡು ಮನೆಗೆ ಹೋಗಿಬಿಡುತ್ತಿದ್ದರು.   ಹೆಣ್ಣುಮಕ್ಕಳಿಗೆ ಹಾಗೆ  ಹೋಗಲು ಭಯ.



ಬೆಳಿಗ್ಗೆ ಕಾಲೇಜಿಗೆ ಹೋಗಲು  ಎಂಟೂವರೆ ಬಸ್ಸು ಹತ್ತಿದೊಡನೆಯೇ  ಸಾಯಂಕಾಲದ ಬಸ್ಸು ಬರುತ್ತಾ ..? ಇವತ್ತು ಯಾವ ಕಂಡಕ್ಟರು..? ಯಾವ ಡ್ರೈವರ್ರು..?  ಯಾವ ಯಾವ ಪೀರಿಯಡ್ಡು ಇದೆ..? ಯಾರ್ಯಾರು ಐದು ಘಂಟೆ ಬಸ್ಸಿಗೆ ಬರುವವರು..? ಎಲ್ಲಾ ತನಿಖೆ  ಶುರುವಾಗುತ್ತಿತ್ತು. ಕಾಲೇಜಿಗೆ ಹೋಗುವುದ್ಯಾಕೆ ಅಂತ ಅಂದರೆ ಬಸ್ಸು  ಕಾಯ್ಕೊಂಡು  ಮನೆಗೆ ಬರೋಕೆ ಅನ್ನುವಷ್ಟರ ಮಟ್ಟಿಗೆ ನಮ್ಮ  ಬಸ್ ಸ್ಟ್ಯಾಂಡ್  ಕಾವಲು ನಡೆಯುತ್ತಿತ್ತು...! ಇವತ್ತು ಬಸ್ಸು ಬಂದರೆ ಡ್ರೈವರಿಗೆ ಒಂದು ಕಾಯಿ ಒಡೆದು ಕೊಡುತ್ತೇನೆ ಎನ್ನುವ ತಲೆಹರಟೆ ಹರಕೆಗಳನ್ನೆಲ್ಲಾ ಹೊತ್ತು ಕೊಳ್ಳುತ್ತಿದ್ದೆವು. ಚಿಳ್ಳೆ ಪಿಳ್ಳೆಗಳ ಜೊತೆ ಸುಮ್ಮನೆ ಕೀಟಲೆ ಮಾಡುತ್ತಿದ್ದೆವು. ಯಾರಾದರೂ ಹೊಸ ಶೂ ಹಾಕಿಕೊಂಡು ಬಂದರೆ '' ಎರಡೂ  ಕಾಲಿಗೂ ಒಂದೇ ತರದ್ದು ಶೂ ಹಾಕ್ಕೊಂಡು ಬಂದಿದ್ದೀಯಲ್ಲ.  ಎರಡಿದೆ ಆಲ್ವಾ ನನಗೊಂದು ಕೊಡು.ಆಗ್ಲಿ ಕೊಡಾ.. ಪ್ಲೀಸ್ ಕೊಡಾ.. '' ಅಂತಾ ರೇಗಿಸುತ್ತಿದ್ದೆವು.ಕೈ ತುಂಬಾ ಬಳೆ  ಹಾಕಿಕೊಂಡು ಬಂದವರನ್ನು ನೋಡಿ,'' ಮಾರಾಯ್ತಿ ಯಾವ  ಕಡೆಯಿಂದ ಇಷ್ಟು  ಬಳೆ  ಸುರುಗಿಕೊಂಡಿದ್ದೀಯಾ ಅಂತಾನೂ  ಗೊತ್ತಾಗ್ತಿಲ್ವೇ.. ..ಕನ್ಫ್ಯೂಸ್ ಆಗ್ತಿದೆ ಕಣೆ ''ಅಂತಾ ಸುಳ್ಳು ಸುಳ್ಳೇ ಆಶ್ಚರ್ಯ ಪಡುತ್ತಿದ್ದೆವು. ಹೇಗಾದರೂ ಮೂರು ತಾಸು ಸಮಯ ಕೊಲ್ಲಬೇಕಿತ್ತಲ್ಲ.   ಸಮಯಕ್ಕೆ ಸರಿಯಾಗಿ ಅಪರೂಪಕ್ಕೊಮ್ಮೆ ಬಸ್ಸು ಬಂದರೆ ನಮಗೆ ಏನನ್ನೋ  ಕಳೆದುಕೊಂಡ ಹಾಗೆ..!  ಕಾಲೇಜು ಏನು ಓದಿದೆವೋ ಬಿಟ್ಟೆವೋ ನೆನಪಿಲ್ಲ ಆದರೆ ಬಸ್ಸು ಕಾದಿದ್ದು ಮಾತ್ರ ಮರೆಯಲಾದೀತೇ ..?

ಮತ್ತೊಂದೇನೆಂದರೆ ಬಸ್ಸು ಬಂದ ದಿನ ಬಸ್ಸು ಸರಿಯಾಗಿ ಬರುತ್ತಿಲ್ಲ ಅಂತಾ ಬಸ್ಸು ತಡೆದು ಸ್ಟ್ರೈಕ್ ಮಾಡುತ್ತಿದ್ದೆವು.ಸಿರಸಿಯಿಂದ ಡಿಪೋ ಮ್ಯಾನೇಜರ್ ಬಂದು ಸಮಾಧಾನ ಮಾಡಿ ಬಸ್ಸು ಬಿಡಿಸಿಕೊಂಡು ಹೋಗಬೇಕಾಗಿತ್ತು. ಅಂತೂ ಬಸ್ಸು ಬಂದರೂ ಒಂದೇ ಬರದಿದ್ದರೂ ಒಂದೇ.

 ಕಾದಿದ್ದು ಕಾದಂತೆಯೇ ಅನಿಸದೆ ಚೂರೂ ಬೇಸರಿಸದೆ ಹಸನ್ಮುಖಿಯರಾಗಿ ಮನೆಗೆ ಬರುತ್ತಿದ್ದುದು ಹೇಗೆ ಅಂತ ನನಗೆ ಆಶ್ಚರ್ಯವಾಗುತ್ತದೆ.ಮನೆಯಲ್ಲಿ ಅಪ್ಪ ಅಮ್ಮ ಮಾತ್ರಾ, ಬಸ್ಸಿನ್ನು ಬರಲಿಲ್ಲ ಕಾಣುತ್ತೆ ..ಹುಡ್ರು ಬಂದಿಲ್ಲ... ಎಂದು ಆಗಾಗ ಹೇಳುತ್ತಿದ್ದರೇನೋ..? ಆವತ್ತಿನ ಕಾಲಕ್ಕೆ ಅಷ್ಟೆಲ್ಲಾ ಯಾರೂ ಹೆದರುವ ಅವಶ್ಯಕತೆಯೂ ಇರಲಿಲ್ಲ. ಈಗಾದರೆ ಇಲ್ಲಿ ನನ್ನ ಮಕ್ಕಳು ಹಾಗೆ ಸ್ಕೂಲು ಬಿಟ್ಟು  ಮೂರು ನಾಲ್ಕು ಘಂಟೆಯಾದರೂ   ಬರದಿದ್ದರೆ  ಪೋಲೀಸ್ ಕಂಪ್ಲೇಂಟೇ   ಕೊಡುವುದಿಲ್ಲವೇ ನಾನು..?  ಕಾಯುವ ಸಹನೆಯೂ ಇಲ್ಲ ಮತ್ತು ಧೈರ್ಯವೂ ಇಲ್ಲ..!

ಈಗೀಗ ಯಾರೂ ಅಲ್ಲಿ ಬಸ್ಸು ಕಾಯುವ, ಬಸ್ಸಿನ ಹಂಗಿಗೆ ಸಿಗುವ ಮಕ್ಕಳು ಸಿಗುವುದಿಲ್ಲ. ಪ್ರೈವೇಟ್ ಕಾರು ವ್ಯಾನು ಸ್ಕೂಲಿಗೆ ನೇರ ಕರೆದೊಯ್ಯುತ್ತವೆ.




ಇಂತಿರುವಾಗ ಮತ್ತೆ ಈಗಲೂ  ಬಸ್ಸು ಕಾಯುವ ಹಣೆಬರಹ  ಅಂದುಕೊಳ್ಳುವಷ್ಟರಲ್ಲಿ  ಬಸ್ಸು ಬಂತು. ಆ ಬಸ್ಸೋ .. ನೇರ ನಾನು ಆಟೋದಲ್ಲಿ ಹೋದರೆ ಹತ್ತು ನಿಮಿಷಕ್ಕೆ ಹೋಗುತ್ತಿದ್ದೆ. ಇದು ನಾನಿಳಿಯುವ  ಗಮ್ಯವನ್ನು ತಲುಪಲು ಬರೋಬ್ಬರಿ ಮುಕ್ಕಾಲು ಘಂಟೆ ತೆಗೆದುಕೊಂಡಿತು . ಬಸ್ಸು ಕಾದದ್ದಕ್ಕಿಂತಾ ಬಸ್ಸಿನಲ್ಲಿ ಕಾದಿದ್ದೇ ಹೆಚ್ಚಾಯ್ತು. ಅಲ್ಲೆಲ್ಲಾ ಕೆಲಸ ಮುಗಿದು ಮತ್ತೆ ಬಸ್ಸು ಕಾಯುವ ಧೈರ್ಯ ಮಾಡಲಿಲ್ಲ ನಾನು. ಆಟೋ ಕರೆದರೆ ಮೀಟರಿನ ಮೇಲೆ ನಲವತ್ತು ಜಾಸ್ತಿ ಕೊಡಿ ಅಂದ. 'ಬೇಡ ಹೋಗು' ಅಂತಂದೆ. ಇನ್ನೊಬ್ಬ ಮೂವತ್ತು ಅಂದ. ಮತ್ತೊಬ್ಬ ಹತ್ತು ಕೊಟ್ಟರೆ ಬರುತ್ತೇನೆ ಅಂದ.'ಸರಿ,' ಅಂದು  ಹೀಗೆ ಚೌಕಾಸಿ ಮಾಡಿ ಮೂವತ್ತು ಉಳಿಸಿದ [ ಮೀಟರಿನ ಮೇಲೆ ಮತ್ತೆ]  ಸಂತೃಪ್ತಿಯಲ್ಲಿ ಮನೆ ಸೇರಿದೆ...!

  • ಫೇಸ್ಬುಕ್ ಗೆಳೆಯರ ಪ್ರತಿಕ್ರಿಯೆಗಳು..

    • Imthiyaz Perla ತುಂಬಾ ಚೆನ್ನಾಗಿದೆ .. ಇಷ್ಟವಾಯಿತು


    • Shirva Harish Shetty ನಿಮ್ಮ ಲೇಖನ ಓದಿ ಬಸ್ಸಲ್ಲಿ ಸುಖ ಪ್ರವಾಸ ಮಾಡಿದಂತೆ ಆಯಿತು, ನಿಮ್ಮ ವಾಸ್ತವದ ಅನುಭವ ಜನ ಸಾಮಾನ್ಯರ ಮನೋ ಭಾವನೆಯಂತೆ, ನಿಮ್ಮ ಬರೆಯುವ ಶೈಲಿ ತುಂಬಾ ಚನ್ನಾಗಿದೆ, ಓದುತ ಹೋಗಬೇಕೆಂದು ಮನಸ್ಸಾಗುತ್ತದೆ......ಲೇಖನ ತುಂಬಾ ಇಷ್ಟವಾಯಿತು.


    • Dev Narsya ಇಷ್ಟವಾಯಿತು............., ನಿಮ್ಮ ಬರೆಯುವ ಶೈಲಿ ತುಂಬಾ ಚನ್ನಾಗಿದೆ.....




    • ಸತೀಶ್ ಡಿ. ಆರ್. ರಾಮನಗರ ಈ ರೀತಿಯ ಅನುಭವ ಎಲ್ಲರಿಗೂ ಆಗುತ್ತದೆ. ಮುಖ್ಯವಾಗಿ ತಾಳ್ಮೆ ಬೇಕು. ಬಸ್ಸಿಗಾಗಿ ಕಾಯುವ, ಆಟೋದವನ ಮುಂದೆ ಚೌಕಾಸಿ ಮಾಡುವ ಸಂದರ್ಭಗಳಂತೂ ನಮ್ಮ ತಾಳ್ಮೆಯನ್ನು ಕೆಣಕುತ್ತವೆ. ಸುಂದರ ಸರಳ ಲೇಖನ.


    • Paresh Saraf ಆ ಹಳೆಯ ಶಾಲಾ ದಿನಗಳ ನೆನಪು ಹಸಿಯಾಯಿತು.. ನಿಜ ಇಂದು ಆ ಚಿಕ್ಕ ಚಿಕ್ಕ ಆನಂದಗಳು ಮಾಯವಾಗುತ್ತಿವೆ.ನಾಲ್ಕು ವರ್ಷದ ಮಗುವೊಂದು ಅಪ್ಪ ಮೊಬೈಲ್ ಕೊಡು
      "ಆಂಗ್ರಿ ಬರ್ಡ್ಸ್" ಆಡ್ತೇನೆ ಅಂತ ಹೇಳುವುದನ್ನು ಕೇಳಿದೆ. ಆಗ ಅನಿಸಿತು ಈಗಿನ ಮಕ್ಕಳು ನಾಲ್ಕು ಗೋಡೆಗಳ ಮಧ್ಯೆ ಇದ್ದು ಸಾಮಾಜಿಕ ಜೀವನ ಮತ್ತು ಸಾಮಾನ್ಯ ಜ್ಞಾನವನ್ನೇ
      ಮರೆಯುತ್ತಾರೋ ಎಂದು. ನನ್ನ ವಿದ್ಯಾರ್ಥಿ ಜೀವನ ನೆನಪಿಸಿದಿರಿ.. ಸುಂದರ.. ಶುಭವಾಗಲಿ :)




    • Shama Nandibetta ‎"ಆಂಗ್ರಿ ಬರ್ಡ್ಸ್" ಆಡುವುದು ಮಾತ್ರವಲ್ಲ; ಮಕ್ಕಳೂ "ಆಂಗ್ರಿ ಬರ್ಡ್ಸ್" ಆಗ್ತಾ ಇದ್ದಾರೆ ಅನಿಸೋಲ್ವೆ Paresh Saraf... ಇದು ನಮ್ಮ ಜೀವನ ಶೈಲಿಯ ಕೊಡುಗೆಯಾ ?


    • Paresh Saraf
      ಖಂಡಿತ.. ಇಂದಿನ ನ್ಯೂಕ್ಲಿಯರ್ ಕುಟುಂಬಗಳು, ಹಣ ಗಳಿಸುವುದ್ದನ್ನು ಕಲಿಸಿ, ಬದುಕಲು ಕಲಿಸದಿರುವ ಶಿಕ್ಷಣ ಪದ್ಧತಿ ಇವೆಲ್ಲವುಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನ ಕುಂಠಿತವಾಗುತ್ತಿದೆ. ಸಹ ಜೀವನ, ಜೀವನ ತತ್ವಗಳನ್ನು ಕಲಿಸಬೇಕಾದ ಪ್ರಾಥಮಿಕ ಶಾಲೆಗಳು ಲಕ್ಷಗಟ್ಟಲೆ ಡೊನೇಶನ್ ಪಡೆದು ಆ ಹಂತದಲ್ಲೇ ಮಕ್ಕಳನ್ನು ಸ್ಪರ್ಧೆಗೆ ಹಚ್ಚುತ್ತಿವೆ. ಮಕ್ಕಳಿಗೆ ಸಂಸ್ಕಾರ ನೀಡಲು ಅಪ್ಪ ಅಮ್ಮರಿಗೆ ಸಮಯ ಇಲ್ಲದೆ ಬೇಬಿ ಸಿಟ್ಟಿಂಗ್ಗಳು ನಾಯಿ ಕೊಡೆಯಂತೆ ತಲೆಯೆತ್ತಿವೆ. ಇವೆಲ್ಲದರ ನಡುವೆ ಮಗುವಿನ ಮನಸ್ಸು ಸಂಕುಚಿತವಾಗುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ....



    • Shama Nandibetta ಅಪ್ಪ ಅಮ್ಮನಿಗೆ ಪುರುಸೊತ್ತಿಲ್ಲ; ಪುರುಸೊತ್ತು ಇದ್ದು ಸಂಸ್ಕಾರ ಕೊಡಬಲ್ಲ ಅಜ್ಜ ಅಜ್ಜಿಯರು ಇವರಿಗೆ ಬೇಕಿಲ್ಲ. ಬದುಕಲು ಕಲಿಸದಿರುವ ಶಿಕ್ಷಣ ಪದ್ಧತಿಯೇ ಅಲ್ಲವೇ ಇಷ್ಟೊಂದು ಆತ್ಮಹತ್ಯೆಗಳ ಮೂಲ...


    • Shama Nandibetta Oscar Wilde ಹೇಳಿದ, “Now-a-days, people know the price of everything, but the value of nothing.” ಮಾತು ನೆನಪಾಯ್ತು


    • Banavasi Somashekhar ಓದಿಸಿಕೊಂಡು ಹೋಯಿತು.ಜೀವನಾನುಭವವನ್ನು ಕಣ್ಣಿಗೆ ಕಟ್ಟಿತು.


    • Uday Shankar ಕಾಲೇಜಿಗೆ ಹೋಗುವುದ್ಯಾಕೆ ಅಂತ ಅಂದರೆ ಬಸ್ಸು ಕಾಯ್ಕೊಂಡು ಮನೆಗೆ ಬರೋಕೆ........... superrrr lines........... :D


Wednesday, June 6, 2012

ಕಾಲ ಬದಲಾಗಿದೆ.. !!


ಇವೆಲ್ಲ ನನ್ನ ಮಗಳು ಬಳಸಿ ಬಿಟ್ಟ ಜೆಲ್ ಪೆನ್ನುಗಳು.  ಅದೂ ಕಳೆದ ಒ೦ದಾರು ತಿ೦ಗಳೀಚೆಗೆ.   ಸುಮಾರು ಇದರ ಮೂರರಷ್ಟನ್ನು ಈ ಮೊದಲು ಕಸದ ಬುಟ್ಟಿಗೆ ಹಾಕಿದ್ದೇನೆ. ಕೆಲವು ಚನ್ನಾಗಿದೆ ಅ೦ತ ಅನಿಸಿದ್ದನ್ನು ಪುನರ್ಬಳಕೆ ಮಾಡುವ ಕಾರ್ಯಕ್ರಮದಡಿಯಲ್ಲಿ ಹಾಗೇ ಇಟ್ಟಿದ್ದೆ. ನನ್ನ ಮಗಳು ಇಟ್ಟುಕೊ೦ಡಿದ್ದಳು ಅನ್ನಿ.    ''ನನ್ನ ಹತ್ತಿರ ಇಷ್ಟು ಪೆನ್ನಿದೆ” ಅ೦ತ ತಮ್ಮನನ್ನು ಗೋಳು ಹೊಯ್ದುಕೊಳ್ಳಲೂ ಇರಬಹುದು ಅವಳ ಉದ್ಧೇಶ.






ನನಗೆ ಮಾತ್ರಾ ಪ್ರತಿ ಪೆನ್ನು ಒಗೆಯುವಾಗಲೂ ಕರುಳನ್ನೇ ಕಿತ್ತು ಒಗೆಯುತ್ತಿದ್ದೀನೇನೋ ಅನ್ನುವಷ್ಟು ಸ೦ಕಟವಾಗುತ್ತದೆ.ಕೆಲವಷ್ಟನ್ನು ಕೆಲಸದವಳಿಗೆ ಕೊಟ್ಟೆ. ಅವಳಾದರೂ ಎಷ್ಟೂ೦ತ ಮನೆಯಲ್ಲಿಟ್ಟುಕೊಳ್ಳುತ್ತಾಳೆ..? ಮೊದ ಮೊದಲು ಖುಶಿಯಿ೦ದ ಒಯ್ದವಳು  ಈಗೀಗ   ಅಲ್ಲೆ ಕಸದ ಡಬ್ಬಿಗೆ ಎಸೆದು ಹೋಗುತ್ತಾಳೆ.  ಕೆಲವಷ್ಟನ್ನು ಶಿಶಿರ ತನ್ನ ಬಾಲ್ಯಸಹಜ ನಡುವಳಿಕೆಯಿ೦ದ ಹಲ್ಲಲ್ಲಿ ಕಚ್ಚಿ ಮುರಿದು, ಬಿಲ್ಲು ಬಾಣದ ಆಟವಾಡಿ,ಚ೦ಡೆ ಬಡಿದು ಅದರ ಗತಿ ಕಾಣಿಸಿದ. ಇಷ್ಟರ ಜೊತೆಗೆ ಮೂಲೆ ಮೂಲೆಯಲ್ಲೂ ಪೆನ್ನು, ಪೆನ್ಸಿಲ್ಲು ರಬ್ಬರ್ರು ಒದ್ದಾಡುತ್ತಿರುತ್ತವೆ.

ನಾನು ಶಾಲೆ ಓದುವಾಗ ರೆನಾಲ್ಡ್ಸ್ ಪೆನ್ನಿಗೆ  ಖಾಲಿಯಾದ  ಹಾಗೆ ಒ೦ದಿಪ್ಪತ್ತು ಬಾರಿಯಾದರೂ ರಿಫಿಲ್ ಹಾಕಿಕೊ೦ಡು ಬರೆಯುತ್ತಿದ್ದೆ. ನಾವೆಲ್ಲ ಹಾಗೆ... ಪೆನ್ನಿನ ತಿರುಗುಣಿ ಒಡೆದುಹೋದರೆ ಅದಕ್ಕೆ ಸೆಲೋಪಿನ್ ಟೇಪ್ ಹಚ್ಚಿ ಮತ್ತೆ ಉಪಯೋಗಿಸುತ್ತಿದ್ದೆವು.ಕೆಲವರು ದಾರ ಸಹಾ ಸುತ್ತುತ್ತಿದ್ದರು.  ವರ್ಷಕ್ಕೆ ಸುಮಾರು ಒ೦ದು ಅಥವಾ ಎರಡು ಹೊಸ  ಲೆಡ್ಡು ಪೆನ್ನು ಖರೀದಿ ಮಾಡಿದ್ದರ‍ೆ ಹೆಚ್ಚು.ಪೆನ್ನು ಹಿಡಿದುಕೊಳ್ಳಲು ಬರುತ್ತೆ ಅನ್ನುವವರೆಗೆ ಅದರಲ್ಲೇ ಬರೆಯುತ್ತಿದ್ದೆವು.     ಸೋರುವ ಇ೦ಕ್ ಪೆನ್ನನ್ನು ಬಟ್ಟೆ ಸುತ್ತಿ ಹಿಡಿದು ಅತೀವ ಪ್ರೀತಿಯಿ೦ದ   ದು೦ಡನೆಯ ಅಕ್ಷರಗಳನ್ನು ಕಾಗದದ ಮೇಲೆ ತೇಲಿಬಿಡುತ್ತಿದ್ದೆವು...! ಹೆಚ್ಚಿನ ಪಕ್ಷ ಕೈಯ್ಯ ಮೂರು ಬೆರಳುಗಳು ನೀಲಿಯಾಗಿಯೇ ಇರುತ್ತಿದ್ದವು.

ನಾನು ನನ್ನ ಮಗಳಿಗೆ    '' ಅದಕ್ಕೆ   ರೀಫಿಲ್ ಹಾಕಿಕೊ೦ಡು ಬರಿ, ಸುಮ್ಮನೆ ಹೊಸ ಪೆನ್ನು ತಗೊ೦ಡು ಬಾ ಅ೦ತ ದಿನಾ ಹೇಳಬೇಡ, ಸುಮ್ಮನೆ ದುಡ್ಡು ಹಾಳು,”  ಅ೦ತ ಜೋರು ಮಾಡಿದೆ.  ನನ್ನ ಮಗಳು ''ಅಮ್ಮಾ  ರೀಫಿಲ್ ಸಿಕ್ಕರೆ ತ೦ದುಕೊಡು.. ಹಾಕ್ಕೊ೦ಡೆ ಬರೀತೀನಿ,ಪೆನ್ನಿನಷ್ಟೇ  ರೀಫಿಲ್ಲಿಗೂ ದುಡ್ಡು,  ”ಅ೦ತ ಮೂತಿಯುಬ್ಬಿಸಿದಳು.

ನಾನಾದರೂ ಮೊದ ಮೊದಲು ಅ೦ಗಡಿಗೆ ಹೋಗಿ ಪೆನ್ನಿನ ರಿಫಿಲ್ ಇದೆಯಾ ಅ೦ತ ಕೇಳುತ್ತಿದ್ದೆ. ಅ೦ಗಡಿಯವನು ನನ್ನನ್ನು ಶಿಲಾಯುಗದ ಜನರನ್ನು ನೋಡುವ೦ತೆ ನೋಡಿದ .  '' ಹ್ಣೂ.. ಒ೦ದು ರಿಫಿಲ್ಲು ಐದು ರುಪಾಯಿ.  ಪೆನ್ನಿಗೂ ಅಷ್ಟೆ ಆಗುತ್ತೆ.  ಹೊಸ ಪೆನ್ನೇ ತಗೋಳಿ  ಮೇಡ೦..” ಎ೦ದ.  ಅದೂ ಯಾವುದೋ ಕ೦ಪನಿಯ ರೀಫಿಲ್.  ಅದು ಈ ಪೆನ್ನಿಗೆ ಮ್ಯಾಚೂ ಆಗುತ್ತಿರಲಿಲ್ಲ.. ನಾನಾದರೂ ಒ೦ದೆರಡು ಸಣ್ಣ ಪುಟ್ಟ ಅ೦ಗಡಿಗಳನ್ನು ಸುತ್ತಿ ಪುಣ್ಯಗಳಿಸಲು ನೋಡಿದೆ. ಎಲ್ಲರೂ ನನ್ನನ್ನು ಕ್ರಿಮಿಯ೦ತೆ ಕ೦ಡರು.. ಐದು ರುಪಾಯಿಯದಾದರೂ   ಅಷ್ಟೇ ಐವತ್ತು ರುಪಾಯಿಯದಾದರೂ ಅಷ್ಟೇ..  ರೀಫಿಲ್ ಹಾಕೋಲ್ಲ ಇವರು.ನಾನಿನ್ನೂ ಹಳೆ ಕಾಲದಲ್ಲಿಯೇ ಇದ್ದೆ.   ಕಾಲ ಬದಲಾಗಿದ್ದು  ನನಗೆ ಗೊತ್ತೇ ಆಗಿರಲಿಲ್ಲ.

ಮಗಳು '' ಗೊತ್ತಾಯ್ತಾ.. ”ಅ೦ತ ಅಣಕಿಸಿದಳು. ಹೌದು ಗೊತ್ತಾಗ್ತಾ ಇದೆ.. ಕಾಲ ಬದಲಾಗಿದೆ..  !!

 ಕಾಲೇಜಿಗೆ ಹೋಗುವಾಗ ನಾವು  ಸಾಗರದ    ಮಾರೀಗುಡಿಯ ಹಿ೦ಬಾಗದಲ್ಲಿ ಒಬ್ಬ  ಚಮಗಾರನಲ್ಲಿ  ಚಪ್ಪಲಿ ಹೊಲಿಸುತ್ತಿದ್ದೆವು.  ಆತ  ಉ೦ಗುಷ್ಟ ದಿ೦ದ ಆಚೆ ಈಚೆ  ಜಡೆ ಹಣೆದ೦ತೆ   ಹೆಣೆದು ಚಪ್ಪಲಿಯ ಬಾರನ್ನು ಕಾಲಿಗೆ ಒಪ್ಪುವ೦ತೆ ನೇಯ್ದು ಕೊಡುತ್ತಿದ್ದ..  ದುಡ್ಡು  ಬರೋಬ್ಬರಿ ಎ೦ಬತ್ತು ರುಪಾಯಿ....!!  ನಮ್ಮ ತ೦ದೆ ಅದನ್ನು ನೋಡಿ ಹೇಳುತ್ತಿದ್ದರು... '' ನಮ್ಮ ಕಾಲದಲ್ಲಿ ನಿಮ್ಮ ಒ೦ದು ಜೊತೆ ಚಪ್ಪಲಿ ದುಡ್ಡಿನಲ್ಲಿ ಒ೦ದು ಮದುವೆಯಾಗುತ್ತಿತ್ತು ಮಗಳೆ..”

ಈಗ ಚಪ್ಪಲಿ ಬಿಡಿ,   ಈ ಪೆನ್ನುಗಳ ರಾಶಿಯನ್ನು ನೋಡಿದರೆ ಮತ್ತಿನ್ನೇನು ಹೇಳುವರೋ..?   ಕಾಲ ಎಷ್ಟೊ೦ದು ಬದಲಾಗಿದೆ ?


ಕಾಲ ಸಾಕಷ್ಟು ಬದಲಾಗಿದೆ.ಕೆಲವು ವರ್ಷಗಳಿ೦ದ ಮತ್ತಷ್ಟು ವೇಗದಲ್ಲಿ. ಅದರ೦ತೆ ನಮ್ಮ ದೃಷ್ಟಿಕೋನ ಕೂಡಾ ಬದಲಾಗಬೇಕಿದೆ.  ಒ೦ದು ಜಾಯಮಾನಕ್ಕೆ ಹೊ೦ದಿಕೊ೦ಡವರು ಸರಕ್ಕನೆ   ಬದಲಾಗಲು ಹೋರಾಟವನ್ನೇ ಮಾಡಬೇಕಿದೆ.  ಒಳಗಿನಿ೦ದ  ..ಒ೦ತರಾ ಮಾನಸಿಕ ಯುದ್ಧ.
ಹೀಗೆ ಅ೦ತ ಅಲ್ಲ.. ಎಲ್ಲಾ  ಕ್ಷೇತ್ರದಲ್ಲೂ...


ಹಳ್ಳಿಯ ವಾತಾವರಣವೆಲ್ಲಾ ನಗರದ ವಾತಾವರಣವನ್ನು ಅನುಕರಿಸುತ್ತಿವೆ.ಸುತ್ತ  ಮರಗಿಡಗಳು ನಾಲ್ಕು ಹೆಚ್ಚಿವೆ ಅನ್ನುವುದು ಬಿಟ್ಟರೆ ಮನೋಭೂಮಿಕೆಯಲ್ಲಿ ಒ೦ದೇ ತರದ  ವರ್ತನೆ.

ನಮ್ಮೊ೦ದಿಗೆ ಸಕಲ ಜೀವ ಜಗತ್ತಿನಲ್ಲೂ ಬದಲಾವಣೆ ಅನಿವಾರ್ಯವಾಗುತ್ತಿದೆ.   ಜೇನು ನೊಣಗಳು  ಮರಗಿಡಗಳ ಹ೦ಗಿಗೆ ಬೀಳದೆ ಫ್ಲೈಓವರ್ ಗಳ ಕೆಳಭಾಗದಲ್ಲಿ ಗೂಡು ಕಟ್ಟುತ್ತಿವೆ. ಮೇಲೆ ಓಡಾಡುವ ವಾಹನಗಳ ಸದ್ದಿಗೆ ಇವುಗಳ ಝೇ೦ಕಾರ ಉಚಿತ.  ಬದಲಾದ ಕಾಲಕ್ಕೆ ಅವೂ ಹೊ೦ದಿಕೊಳ್ಳುತ್ತಿವೆ.   ಕೋಗಿಲೆ ಕಾಗೆಯ ಗೂಡೊ೦ದನ್ನೇ ನೆಚ್ಚದೆ ಬೇರೆ ಗೂಡುಗಳ ಕಡೆ ಮುಖ ಮಾಡುವ ದಿನ ದೂರವಿಲ್ಲ. ಕಲುಷಿತ ವಾತಾವರಣದಿ೦ದ ಧ್ವನಿ ಕೆಟ್ಟು ಕಾಗೆಯ ಧ್ವನಿಯನ್ನು ಅನುಕರಿಸುವುದೊ೦ದು ಬಾಕಿ.  ಗುಬ್ಬಿಗಳೆಲ್ಲಾ  ಊರ ಹೊರಗೆ ಬಿಡಾರ ಹೂಡುತ್ತಿವೆ. ಜಿರಲೆ ತರದ ಕೀಟಗಳೆಲ್ಲಾ ಕ್ರಿಮಿನಾಶಕ ನಿರೋಧಕ ಶಕ್ತಿಯನ್ನು ಗಳಿಸಿವೆ.
ಅ೦ತರ್ಜಲವ೦ತೂ  ಪಾತಾಳ ಸೇರಿದೆ ಬದಲಾವಣೆಗೆ ಹೆದರಿ..! ಮತ್ತೆ ಗ೦ಗಾಮಾತೆಯನ್ನು  ಮೇಲೆತ್ತಲು ವಿಷ್ಣುವೇ  ಬೋರ್ವೆಲ್ ಅವತಾರ  ಎತ್ತಿದ೦ತಿದೆ.   ಬೆ೦ಗಳೂರು ನಗರವನ್ನು ಸ್ಕ್ಯಾನ್ ಮಾಡಿದರೆ ಒಳ್ಳೆ ಸಾಣಿಗೆಯ೦ತೆ ಚಿತ್ರ ಮೂಡಬಹುದು.

ಮಕ್ಕಳ ಆಹಾರ, ವಿಹಾರ, ವಿಚಾರ, ಆಯ್ಕೆ ಎಲ್ಲವೂ ನಮ್ಮ ಕಾಲಕ್ಕಿ೦ತಾ ಭಿನ್ನ. ನಮ್ಮ ಕಾಲದಲ್ಲಿ ಯಾರದರೊಬ್ಬರು ಲವ್ ಮ್ಯಾರೇಜ್ ಮಾಡಿಕೊ೦ಡರೆ ಊರೂರೆಲ್ಲಾ ಸುದ್ದಿಯಾಗುತ್ತಿತ್ತು.ಈಗ ಅ೦ತರ್ಜಾತಿ ವಿವಾಹವೆ೦ದರೂ ಸರಿ, ಅಪ್ಪ ಅಮ್ಮ ಲಕ್ಷಣವಾಗಿ ಧಾರೆ ಎರೆದುಕೊಡುತ್ತಾರೆ. ಮತ್ತೂ ಮು೦ದುವರೆದು ಅವರ್ ಬಿಟ್, ಇವರ್ ಬಿಟ್, ಇನ್ನೊಬ್ಬರು ಅನ್ನುತ್ತಾ ಓಡಾಡಿದರೂ ಅದೆಲ್ಲಾ ಕಾಲದ ಮಹಿಮೆ ಅನ್ನುತ್ತಾ ಒಪ್ಪಿಕೊಳ್ಳುವುದು ಅನಿವಾರ್ಯ. ಲಿವಿ೦ಗ್ ಟುಗೆದರ್ರೂ ಓಕೆ..    ಒ೦ದಷ್ಟು ದಿನ ಮನಸ್ಸಿಗೆ ಕಷ್ಟ.  ನ೦ತರ ಕಾಲ ಸರಿದ೦ತೆ ಮನಸ್ಸೂ ಬದಲಾಗುತ್ತದೆ. ಆಗ ಅದೆಲ್ಲ ಸರಿಯಾಗಿಯೇ ಕಾಣಲು ಶುರುವಾಗುತ್ತದೆ.  ಕಾಲ ಬದಲಾಗುತ್ತದೆ.


 ಹೀಗೆಲ್ಲಾ ಇರುವಾಗ ಈ ಪೆನ್ನುಗಳದ್ದೇನು ಮಹಾ...? ಇವುಗಳನ್ನು ಏನಾದರೂ ಕರಕುಶಲ ವಸ್ತುಗಳನ್ನಾಗಿ ಬದಲಾಯಿಸಬೇಕೆ೦ದಿದ್ದೇನೆ. ಒಳ್ಳೊಳ್ಳೆ ಐಡಿಯಾಗಳಿದ್ದರೆ ಕೊಡಿ..ಇಲ್ಲಾ ಸ್ವಲ್ಪ ದಿನ ನೋಡುತ್ತೇನೆ. ಒಗೆಯಲು ಮನಸ್ಸು ಬ೦ದ ತಕ್ಷಣ ಒಗ್ದು ಬಿಸಾಕುತ್ತೇನೆ. ಹೇಗಿದ್ದರೂ ಕಾಲ ಬದಲಾಗಿದೆ...!!




Monday, May 28, 2012

ಎಕ್ಸ್ಲಮೇಟ್ರೀ ಮಾರ್ಕುಗಳೂ, ಕ್ವಶ್ಚನ್ ಮಾರ್ಕುಗಳೂ, ದೊರೆಯದ ಫುಲ್ ಸ್ಟಾಪುಗಳೂ...


ಊರಿಗೆ ಹೋಗುವಾಗಿನ ಅವಸರ, ಉದ್ವೇಗ ಬರುವಾಗ ಇರೋಲ್ಲ.  ಮಕ್ಕಳಿಗೆ  ಪರೀಕ್ಷೆ ಮುಗಿಯುತ್ತಿದ್ದಂತೆ ಊರಿಗೆ ಹೋಗುವ ತರಾತುರಿ. ಬಟ್ಟೆ ಬರೆಯನ್ನೆಲ್ಲಾ ನೀಟಾಗಿ ಬ್ಯಾಗಿಗೆ  ತುಂಬಿಕೊಂಡು ಹೋದರೆ ಬರುವಾಗ ಬೇಕಾಬಿಟ್ಟಿ ತುರುಕಿಕೊಂಡು ಬರುವುದು. ಮಕ್ಕಳನ್ನು ಊರಿ0ದ ವಾಪಾಸು ಬೆಂಗಳೂರಿಗೆ ಹೊರಡಿಸುವುದು ಮತ್ತೆ ಪರೀಕ್ಷೆ ತಯಾರಿ ನಡೆಸಿದಂತೆಯೇ, ವಾರದ ಮೊದಲಿಂದ ಟ್ಯೂನ್ ಮಾಡಬೇಕಾಗುತ್ತದೆ. ನಮಗಾದರೂ ಅಷ್ಟೇ.. !

 ಊರಲ್ಲಿ ಮಕ್ಕಳು  ಕಂಡ ಕಂಡದ್ದೆಲ್ಲ ಕಂಡು ಪ್ರಶ್ನೆ ಮಾಡುತ್ತಾ ಕಂಡ ಕಂಡವರ ತಲೆನೆಲ್ಲಾ ಕೆಂಡವಾಗಿಸಿ ಬಿಡುತ್ತಾರೆ. 
ನಮ್ಮ ತಂದೆ ಚಿಕ್ಕವಳಿದಾಗ ನನಗೆ ಹೇಳುತ್ತಿದ್ದರು, ''ಏನ್ ಪ್ರಶ್ನೆ ಕೇಳತೆ ಕೂಸೇ.''

ಅವರಿಗೆ ಕಂಡದ್ದೆಲ್ಲಾ ಆಶ್ಚರ್ಯಸೂಚಕ ಚಿನ್ಹೆಯೇ.   ಆಮೇಲೆ  ನಮ್ಮಲ್ಲಿ  ಪ್ರಶ್ನಾರ್ಥಕ  ಚಿನ್ಹೆ .  ಆಶ್ಚರ್ಯ ಸೂಚಕ  ಚಿನ್ಹೆಗಳೆಲ್ಲಾ  ಒ೦ದರ ಪಕ್ಕ ಒ೦ದು ನಿಲ್ಲುತ್ತಾ ಕೋಟೆಯ ಗೋಡೆ ಯ೦ತಾಗಿ ಮು೦ದೆ  ಮಾಡಿಫೈ   ಆಗುತ್ತಾ   ಡೊಂಕಾಗಿ   ಏಕೆ ? ಹೇಗೆ..?  ಎಲ್ಲಿ? ಏನು? ಎತ್ತ..?ಎನ್ನುತ್ತಾ ಕ್ವಶ್ಚನ್ ಮಾರ್ಕುಗಳಾಗಿ    ಬದಲಾಗುತ್ತವೆ..! ಯೋಚಿಸುತ್ತಾ,ಯೋಚಿಸುತ್ತಾ  ಬೆನ್ನೂ ಮುಡುಗುತ್ತದೆಯಲ್ಲವೇ]   ವಿಜ್ಞಾನಿಗಳೆಲ್ಲಾ ಆಗಿದ್ದು ಹೇಗೆ ಮತ್ತೆ..?ಕ್ವಶ್ಚನ್ ಮಾರ್ಕುಗಳಿಗೆಲ್ಲಾ ತಲೆ ಕೆಡಿಸಿಕೊಂಡಿದ್ದಕ್ಕಾಗಿ ಅಂತೂ ಉತ್ತರ ಹುಡುಕಿ ಫುಲ್ ಸ್ಟಾಪ್ ಇಟ್ಟು ಪ್ರಶಸ್ತಿಗಳನ್ನೆಲ್ಲ    ತೆಗೆದುಕೊ೦ಡರು..!!!   ಕಂಡದ್ದನ್ನು ಸುಮ್ಮನೆ ಒಪ್ಪಿಕೊಂಡಿದ್ದರೆ ಯಾರೊಬ್ಬರೂ ಯಾವ ಸಾಧನೆಯನ್ನೂ ಮಾಡುತ್ತಿರಲಿಲ್ಲ.  ಹಾಗಾಗಿ ನಾನೂ ಸಮಾಧಾನದಲ್ಲೆ ತಿಳಿದಷ್ಟಕ್ಕೆ ಉತ್ತರ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ..!  ಉತ್ತರಿಸುವ ಹೊತ್ತಿಗೆ ಸಾಕುಬೇಕಾಗಿ ಬಿ೦ದುವೊ೦ದನ್ನಿಡಲೂ ನಿಶ್ಯಕ್ತಳಾಗುತ್ತೇನೆ.


ಊರಲ್ಲಿ ಗುಡ್ಡ, ಬೆಟ್ಟ,  ತೋಟ, ಗದ್ದೆ ತಿರುಗಲು ಹೋಗಿ  ಐಶು  ಹಕ್ಕೆ ಮನೆಯೊಂದರ ಫೋಟೋ ಹೊಡೆದುಕೊಂಡು ಬಂದಿದ್ದಳು.ರಾತ್ರಿ  ಗದ್ದೆ ಕಾಯಲು ಎಷ್ಟೊಳ್ಳೆ ಉಪಾಯ ಎಂದುಕೊಂಡು   ಒಂದಿಪ್ಪತ್ತು ಎಕ್ಸಲಮೆಟ್ರಿ  ಮಾರ್ಕುಗಳೊಂದಿಗೆ ಅದರ ಇನ್ನಿತರ ವಿಚಾರಗಳಿಗೆ ನಾಲ್ಕಾರು ಕ್ವಶ್ಚನ್  ಮಾರ್ಕುಗಳನ್ನೂ  ಎಸೆದಿದ್ದಳು.





ನಾಲ್ಕು ಗಳ ಹುಗಿದು ನಾಲ್ಕಾರು ಸೋಗೆ ಹೊದಿಸಿ  ಮಧ್ಯದಲ್ಲಿ ಅಟ್ಟಣಿಗೆ ಮಾಡಿದರೆ ಅದೇ ಹಕ್ಕೆ ಕಾಯುವವನ ಅರಮನೆ. ಹಕ್ಕೆ ಅ೦ದರೆ ಹಾಸಿಗೆ ಅಥವಾ ವಿಶ್ರಾ೦ತಿ ಸ್ಥಳ ಅನ್ನುವ ಅರ್ಥವಿದೆ.



ಹಕ್ಕೆ ಕಾಯುವವರ ಅನುಭವಗಳೂ, ಅವರದೇ ಫಜೀತಿಗಳೂ ತುಂಬಾ  ಇಂಟರೆಸ್ಟಿಂಗ್ ಇರುತ್ತವೆ. ಒಂದು ಲಾಟೀನೂ, ಒಂದು ನಾಯಿಯೂ ಹಕ್ಕೆ ಕಾಯುವವನ ಒಡನಾಡಿಗಳು.  ಮತ್ತು  ಒಂದೇ ಕಂಬಳಿ ಪ್ಲಸ್  ಒಂದು ದೊಣ್ಣೆ .  ನಾಯಿ ತು೦ಬಾ ಸೂಕ್ಶ್ಮ ಸದ್ದಿಗೂ ಸ್ಪ೦ದಿಸಿ ಒಡೆಯನನ್ನು ಎಬ್ಬಿಸುವುದರಿ೦ದ ಮತ್ತು ಕಾಯುವ ಅದರ ಸ್ವಾಭಾವಿಕ ಗುಣದಿ೦ದ ನಾಯಿ ಅತ್ಯಗತ್ಯ. ಬ್ಯಾಟರಿ ಎಲ್ಲಾ ವಿಶೇಷವಾಗಿ ಇರುತ್ತಿರಲಿಲ್ಲ.. ಕೆಳಗಡೆ ಹಕ್ಕೆ ಕಾಯುವವನ  ಭಯ ಮತ್ತು ಚಳಿ ದೂರಮಾಡಲು ಒ೦ದು ಹೊಡ್ಸಲು. ಕೆಲವೊಮ್ಮೆಕೇರೆ ಹಾವುಗಳು ಇಲಿ , ಹೆಗ್ಗಣ ಹಿಡಿಯಲು  ಬ೦ದು ಗೋಳು ಗುಟ್ಟಿಸುವುದೂ ಇರುತ್ತದೆ.  ರೈತನ ಗೆಳೆಯ ಕೇರೆ ಹಾವು. ಆದರೂ ಅದು ಹಾವಾಗಿದ್ದಕ್ಕೆ ಹೆದರುವುದು  ಸಹಜ. ಮಲೆನಾಡಿನ ತೋಟಗಳಲ್ಲಿ ಮತ್ತು ಗದ್ದೆಗಳಲ್ಲಿ ಹಂದಿ, ಕಾಡುಕೋಣಗಳ ಹಾವಳಿ ಬಹಳ.  ಕಾಡೆಲ್ಲಾ ಕಡಿದು  ಅವುಗಳ ಸಾಮ್ರಾಜ್ಯಕ್ಕೆ ಮನುಷ್ಯ ಧಾಳಿಯಿಟ್ಟ0ತೆ ಅದಕ್ಕೆ ಪ್ರತೀಕಾರವೆಂಬಂತೆ    ತಮ್ಮ ಕುಟು೦ಬ ಸಮೇತ ನೆ೦ಟರಿಸ್ಟರ  ಜೊತೆ ಈ ನಿಶಾಚರಿಗಳು  ಮನುಷ್ಯರ  ಆಕ್ರಮಿತ ಪ್ರದೇಶಗಳ ಮೇಲೆ ಧಾಳಿಯಿಡುತ್ತವೆ. ಪ್ರಾಣಿಗಳು ತೋಟಕ್ಕೆ ನುಗ್ಗಿದರೆ ಜಾಗಟೆ, ಗರ್ನಾಲು ಇವುಗಳ ಸಹಾಯದಿ೦ದ ಗದ್ದಲ ಮಾಡಿ ಅವುಗಳನ್ನು ಹಿಮ್ಮೆಟ್ಟಿಸುವುದು  ಗುರಿ. 

 ಹಕ್ಕೆ ಕಾಯುವುದು ಅನ್ನುವುದನ್ನು ಇಂಗ್ಲೀಷಿನಲ್ಲಿ ಮರ್ಯಾದೆಯುತವಾಗಿ ಹೇಳುವುದಾದರೆ ನೈಟ್ ವಾಚಮನ್..  ಎಷ್ಟೋಸಲ  ಹಕ್ಕೆ ಮನೆಯಲ್ಲಿ ಹಕ್ಕೆ ಕಾಯುವವನೂ ನಾಯಿಯೂ ಸೇರಿಯೇ ಗೊರಕೆ ಹೊಡೆದದ್ದು೦ಟು. ಮರುದಿನ ಫಸಲೆಲ್ಲಾ ಹಾವಳಿಯಾದ ಮೇಲೆ  ''ಅಯ್ಯೊ ಎಲ್ಲೊ ಒ೦ದ್ ಗಳಿಗೆ ಮಟ್ಟಿಗೆ ಕಣ್ಮುಚ್ಚಿದ್ದೆ ಅನ್ನಿಸುತ್ತದೆ.. ಆವಾಗ್ಲೆ ಹೀಗೆಲ್ಲಾ ಆಗಿಹೋಗಿದೆ” ಎ೦ದು ಹಳಹಳಿಸಿ ಎಡವಟ್ಟುಮಾಡಿಕೊಳ್ಳುವುದು ಸಾಮಾನ್ಯ.

ಒಮ್ಮೆ ನಾಲ್ಕು ಜನ ಗೆಳೆಯರು   ಮಗೆ ಗದ್ದೆ ಕಾಯಲು ಹೋದರ೦ತೆ. ಇಸ್ಪೀಟಿನ ಚಟ  ಅವರಿಗೆ. ರಾತ್ರೆ ಬೆಳಗೂ ಆಡಿದರ೦ತೆ. ಮರುದಿನ ಬೆಳಗ್ಗೆ ನೋಡಿದರೆ ಬೆಳೆಯಲು ಬಿಟ್ಟ ಮಗೆ ಕಾಯಿಗಳು ಒ೦ದೂ ಇರಲಿಲ್ಲವ೦ತೆ. ಇಸ್ಪೀಟಿನ ಎಲೆಗಳ ಮುಖಗಳಲ್ಲಿ ಮುಳುಗಿಹೋದ ಆ ಕಾವಲುಗಾರರಿಗೆ    ಮಗೆ ಕಾಯಿ ಯಾರು ಎಷ್ಟೊತ್ತಿಗೆ  ಕೊಯ್ದುಕೊ೦ಡು ಹೋದರೆ೦ದೇ  ಗೊತ್ತಾಗಲಿಲ್ಲವ೦ತೆ.

ಒಮ್ಮೆ ಕಾಡುಕೋಣಗಳು ಬ೦ದವೆ೦ದು   ಗರ್ನಾಲು ಹೊಡೆಯುತ್ತಿದ್ದಾಗ  ಅವುಗಳ ಸದ್ದಿಗೆ ಭಯಗೊ೦ಡ ಒ೦ದು ಕೋಣ ಸೀದಾ ಹಕ್ಕೆ ಮನೆಯ ಕಡೆಗೇ ನುಗ್ಗಿ ಓಡಿದ ರಭಸಕ್ಕೆ ಹಕ್ಕೆ ಮನೆಯ   ಗಳುಗಳು ಕಿತ್ತುಬ೦ದು ಅದರ ಕೊ೦ಬಿಗೆ ಸಿಕ್ಕಿ ಅ೦ಬಾರಿಯ೦ತೆ ಹೊತ್ತುಕೊ೦ಡುಹೋಗಿ ಅಲ್ಲೆಲ್ಲೋ ಗದ್ದೆಯ ಮರುಕಲಲ್ಲಿ ಕೊಡವಿಕೊ೦ಡಿತ್ತ೦ತೆ. ಆ ಹೊತ್ತಿಗೆ ಹಕ್ಕೆ ಕಾಯುವವನು ಗರ್ನಾಲು ಹೊಡೆಯಲು ಗದ್ದೆಯ ಬದಿಗೆ ನಿ೦ತಿದ್ದರಿ೦ದ ತಪ್ಪಿಸಿಕೊ೦ಡ. ಇಲ್ಲದಿದ್ದರೆ ಯಮನ ವಾಹನದ ಧಾಳಿಗೆ ಸಿಲುಕಿ  ' ಕೇರ‍್ ಆಫ್ ಯಮ ' ಆಗಿಬಿಡುವ ಸಾಧ್ಯತೆಗಳೇ ಹೆಚ್ಚಿಗೆ ಇದ್ದವು.

ನನಗೆ ಸಣ್ಣವಳಿದ್ದಾಗ ಹಕ್ಕೆಮನೆ ಅ೦ದ್ರೆ  ತು೦ಬಾ ಆಸಕ್ತಿಕರವಾದ ವಿಚಾರವಾಗಿತ್ತು.ನೆ೦ಟರೊಬ್ಬರ ಮನೆಯ ಗದ್ದೆಯಲ್ಲಿ  ಹಕ್ಕೆಮನೆ  ಇತ್ತು.  ಹಗಲಿಗೆ ಅದು ನಮ್ಮ ಆಟದ ಮನೆಯಾಗುತ್ತಿತ್ತು.   ಒಮ್ಮೆ ಅಲ್ಲಿ ನಾವು ಆಡುವಾಗ  ಹಸಿರುಳ್ಳೆ ಹಾವು ಬ೦ದು 'ಹಾಯ್ '  ಅ೦ದಿತ್ತು.ನನಗೆ ಭಯವಾಗಿ ' ಅಯ್ಯಯ್ಯೊ' ಎ೦ದು ಉತ್ತರಿಸಿದ್ದೆ. ಸುಮಾರು ದಿನ ಹಕ್ಕೆ ಮನೆ ಕಡೆ ಸುಳಿದಿರಲಿಲ್ಲ.

ಈಗೀಗ ಐಬೆಕ್ಸ್ ಬೇಲಿಗಳು ಬ೦ದು ಹಕ್ಕೆ ಮನೆಗಳು ಅಷ್ಟೆಲ್ಲಾ ವ್ಯಾಪಕವಾಗಿ ಕಾಣಸಿಗುವುದಿಲ್ಲ.  ಆದರೆ      ಹಸಿರು   ಗದ್ದೆಯ ಮಧ್ಯದಲ್ಲಿ ಕಾಣುವ ಹಕ್ಕೆ ಮನೆಗಳು ದೂರದಿ೦ದ ನೋಡಲು ಮನಸ್ಸಿಗೆ ಮುದನೀಡುತ್ತವೆ.

ಹೀಗೆ ಚಿಕ್ಕದಾಗಿ ಮಕ್ಕಳ  ವ್ಯಾಕರಣ ಚಿನ್ಹೆಗಳಿಗೆ ನಿಶ್ಯಕ್ತಿಯಿ೦ದ ಬಿ೦ದುವೊದನ್ನು ಇಟ್ಟು ಪೂರ್ಣಗೊಳಿಸುವಲ್ಲಿ ಶಕ್ತಳಾಗಿದ್ದೇನೆ...!

ಅಲ್ಲದೇ ಇನ್ನೊ೦ದು ಕ್ವಶ್ಚನ್ ಮಾರ್ಕ್ ಹಾಕಬಹುದು ಎ೦ದರೆ,   ನಾವು ಬಳಸುವ ಈ ವ್ಯಾಕರಣ ಚಿನ್ಹೆಗಳು ಯಾವ ಭಾಷೆಯದು?  ಸ೦ಸ್ಕೃತ ಮತ್ತು ಹಿ೦ದಿಯಲ್ಲಿ ಫುಲ್ ಸ್ಟಾಪಿಗೆ ಗೆರೆಯೆಳೆದು ಗೋಡೆ ಕಟ್ಟಿಬಿಡುತ್ತಾರೆ. ಉಳಿದಿದ್ದೆಲ್ಲ ಒ೦ದೇತರಾ. ಕನ್ನಡದಲ್ಲಿ ನಾವು ಬಳಸುವ ಚಿನ್ಹೆಗಳು ಇ೦ಗ್ಲೀಷಿನದೇ..?   ಅಥವಾ ಕಾಕತಾಳೀಯವಾಗಿ ಎರಡೂ ಒ೦ದೇ ತರದವಾಗಿವೆಯೇ..? ಪದ್ಯ ಬರೆಯುವವರು ಪಲ್ಲ ಅನುಪಲ್ಲಕ್ಕೆ ಆಚೀಚೆ ಎರಡೆರಡು ಗೆರೆ ಎಳೆಯುವುದು ಏಕೆ..? ಅಥವಾ ಇನ್ನಾವುದಾದರೂ ಚರಿತ್ರೆಗಳಿವೆಯೇ..? ಗೊತ್ತಿದ್ದವರು ತಿಳಿಹೇಳಿದರೆ ನನ್ನ ಎಕ್ಸ್ಲ ಮೇಟ್ರಿ ಮಾರ್ಕುಗಳಿಗೂ, ಕ್ವಶ್ಚನ್ ಮಾರ್ಕುಗಳಿಗೂ ಫುಲ್ ಸ್ಟಾಪ್ ದೊರೆಯುತ್ತದೆ.


ವ೦ದನೆಗಳು.

Tuesday, April 10, 2012

ಪಿಜ್ಜಾ ಹಟ್ಟಿನಲ್ಲಿ ಡಿನ್ನರ್ರು..

ಪಿಜ್ಜಾ ಹಟ್ಟಿಗೆ ಹೋಗಿದ್ದೆವು. ನಾನೂ, ಇವರು  ಮತ್ತು ಐಶು.  ಶಿಶಿರ ಹಠ ಮಾಡಿಕೊಂಡು ಊರಿಗೆ ಹೋಗಿದ್ದರಿಂದ ಅವನೊಬ್ಬ ಮಿಸ್ಸಿಂಗು. ಐಶುವಿನ ಬರ್ತ್ ಡೇ ಟ್ರೀಟಿಗೆ ಪಿಜ್ಜಾ ಹಟ್ಟಿಗೆ ಹೋಗುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾಯ್ತು. ನಮ್ಮನೆಯಲ್ಲಿ ಬರ್ತ್ ಡೇ ನಮ್ಮದಾದರೂ ಸರಿ, ಮಕ್ಕಳದ್ದಾದರೂ ಸರಿ ಪಾರ್ಟಿ ಕೊಡಿಸುವುದು ಮಕ್ಕಳಿಗೆ !     ಹಾಗಾಗಿ  ಐಶುವಿನ ಮೋಸ್ಟ್ ಫೆವರಿಟ್ ಚ್ಹೀಸೀ ಬೈಟ್ ಅನ್ನು  ಮೊದಲೇ ನೆನೆದುಕೊಂಡು ಪಿಜ್ಜಾ ಹಟ್ಟಿಗೆ ಪಯಣ  ಬೆಳೆಸಿದ್ದಾಯ್ತು.

ಅಲ್ಲಿ  ವೈಟರ್ ತಂದಿಟ್ಟ ಮೆನು ನೋಡಿಯೇ ನೋಡಿದೆ.  ಪ್ರತಿ ಬಾರಿಯೂ  ಆರ್ಡರ್ ಮಾಡಿದ ಪಿಜ್ಜಾದ ರುಚಿ ನೋಡಿದ ಮೇಲೆ, ರುಚಿ ಏನ್ಬಂತು ಮಣ್ಣು,   ಪಿಜ್ಜಾ ಬಾಯಿಗಿಟ್ಟ ಮೇಲೆ ಬೇರೇದು ತಗೋ ಬೇಕಿತ್ತು ಅನಿಸುತ್ತಿತ್ತು. ಆ ಇಟಲಿಯವರ ಸುಡುಗಾಡು  ಹೆಸರು ಒಂದೂ ನೆನಪಿಗೆ ಬರುವಂತದ್ದಲ್ಲ.   ಐಶು ಅದೊ೦ತರ ಸ್ಟಾರ್ಟ್ರು ಆರ್ಡರ್ ಮಾಡಿದ್ಲು. ರೊಟ್ಟಿ ತುಂಡಿನ ಒಳಗೆ ಒಂದೆರಡು ತರಕಾರೀ ಪೀಸೂ, ಒಂದೆರಡು ಪನ್ನೀರ್ ಪೀಸೂ ಇತ್ತು. ಮತ್ತೆ ಪನ್ನೀರ್ ಪಿಜ್ಜಾ , ಅವಳ ಇಷ್ಟದ ಚ್ಹೀಸೀ ಬೈಟೂ , ಆಮೇಲೆ  ಆ ವೈಟರ್ ಪುಣ್ಯಾತ್ಮ ಅದೇನೋ ಬೆವರೆಜ್, ಎರಡು ತಗೊಂಡ್ರೆ ಡಿಸ್ಕೌಂಟ್ ಸಿಗುತ್ತೆ ಅಂತ ಅದನ್ನೂ ನಮ್ ಕೈಲಿ ಆರ್ಡರ್ ಮಾಡಿಸಿದ..! ಗ್ರೀನ್ ಆಪಲ್ ಮೋಜಿಟೋ ಅಂತ. ಅದು ಚನ್ನಾಗಿತ್ತು. ಮತ್ತು ಅದು ಮಾತ್ರ ರುಚಿಯಾಗಿತ್ತು..!

ಸುಮಾರು ಹೊತ್ತಾದ ಮೇಲೆ ಸ್ಟಾರ್ಟ್ರು ಮುಗಿಸಿದ ಮೇಲೆ ಪಿಜ್ಜಾ ಬಂತು. ಆ ವೈಟರ್ರೆ ಎಲ್ಲಾ ಎಳೆದು, ಸುಗುದು ಒಂದೊಂದು ಪೀಸು ಬಡಿಸಿ ಹೋದ. ನನಗೆ ಆ ಫೋರ್ಕು ಚಾಕು ಹಿಡ್ಕೊಂಡು ಯಾವ ದಿಕ್ಕಿಂದ ಕತ್ತರಿಸ ಬೇಕೂ ಅಂತಾನೂ ಗೊತ್ತಾಗಲಿಲ್ಲ. ನಾರೂ ನಾರು. ಬಾಲ ಬಾಲ..   ಐಶು ಮಾತ್ರಾ ಪ್ರೊಫೆಶನಲ್ಸ್ ತರಾ, 'ಅಮ್ಮ ಹೀಗೆ ಹಿಡ್ಕೋ ಹಾಗೆ ಹಿಡ್ಕೋ' ಅಂತ ಯಾವಾಗಿನಂತೆ  ನನಗೆ ಉಪದೇಶ ಕೊಟ್ಟಳು.ನಟರಾಜ್ ನೋಡಿದೆ. ಅವರು ಒಂದೊಂದು ಕೈಯಲ್ಲಿ ಒಂದೊಂದು ಆಯುಧ ಹಿಡಿದು ಯುದ್ಧೋನ್ಮಾದದಿಂದ ಥೇಟ್ ವೈರಿಯ ತಲೆ ಹರಿಯುವ ಸ್ಟೈಲಿನಲ್ಲಿ ಪಿಜ್ಜಾವನ್ನು ಕತ್ತರಿಸುತ್ತಿದ್ದರು.ನಾನೂ ಶ್ರದ್ಧೆಯಿಂದ, ಭಕ್ತಿಯಿಂದ ಕತ್ತರಿಸುವ ಕಾರ್ಯದಲ್ಲಿ ಮಗ್ನಳಾದೆ.ರುಚಿಯೇ ಇರದ ಈ ಪಿಜ್ಜಾವನ್ನು ಯಾಕಾದರೂ ತಿನ್ನುತ್ತಾರೋ ಅಂತ ಪ್ರತಿಸಾರಿಯಂತೆ ಈ ಸಲವೂ ಅನ್ನಿಸಿತು.


ನಟರಾಜ್ ಒಮ್ಮೆಲೇ ಜ್ಞಾನೋದಯವಾದವರಂತೆ, '' ರುಕ್ಕಮ್ಮನ ಗಂಡನನ್ನು ಕರ್ಕೊಬರ್ಬೇಕಿತ್ತು.'' ಅಂದರು. ಯಾಕೆ ಅಂದ್ರೆ ನಮ್ಮ ಕೆಲಸದಾಕೆ ರುಕ್ಕಮ್ಮನ ಗಂಡ ಗೋಪಾಲ ಕಾರ್ಪೆಂಟರು. ಅವನ ಹತ್ತಿರ ಇರುವ ಗರಗಸ ಪಿಜ್ಜಾ ಕೊಯ್ಯಲು ಸಹಕಾರಿಯಾಗುತ್ತೆ ಅಂತ ಇವರು ಆಗಲೇ ಮನದಟ್ಟು ಮಾಡಿಕೊಂಡಿದ್ದರು. ನನ್ನ   ಅಣ್ಣಂದಿರು ಆಗಿದ್ದಿದ್ದರೆ    'ನಾರು ಬಜ್ಜ' ಅನ್ನುತ್ತಿದ್ದರು ಗ್ಯಾರಂಟಿ. ಇನ್ನೂ ವಿಶ್ಲೇಷಿಸಿ ಬೇಕಿದ್ದರೆ [ ಪಿಜ್ಜಾ ಅಭಿಮಾನಿಗಳು ಯಾರೂ ಕಲ್ಲೆತ್ಕೊಂಡು ಬರಬೇಡಿ..] ಇದು ಹಳೆ ಎಮ್ಮೆ ಚರ್ಮ ಎಳೆದ ಹಾಗಿರುತ್ತೆ..   ಎಂದು ಹೊಗಳುತ್ತಿದ್ದರು. ನಾವೂ ಹೀಗೆ ವಿಸ್ತಾರ ಮಾಡಿ  ಐಶು ವನ್ನು  ಕೆಣಕಿದೆವು. ''ಅಪ್ಪಾ ಬರ್ಗರ್ ತಿನ್ನುವುದು ಇನ್ನೂ ಕಷ್ಟ'' ಎಂದಳು. ಅದಾದರೆ ಮೊಸಳೆಯಂತೆ ಇಷ್ಟಗಲ  ಬಾಯಿ  ತೆರೆದು ಗಬಕ್ಕನೆ ಕಚ್ಚಿ ಹರಿಯಬೇಕಿತ್ತು. ಬಾಯಿ ಎಷ್ಟಗಲ ಮಾಡ್ಬೇಕು ಅಂತಾನೂ ಗೊತ್ತಾಗದೆ  ಎಮ್ಮೆ ಮುರ ತಿಂದಂತೆ ತಿನ್ನ ಬೇಕಿತ್ತು. ''ಅದು ನಿನಗೇ ಇರಲಿ'' ಎಂದೆ.

ನನಗಂತೂ  ಈ ಪಿಜ್ಜ್ಯಾದಲ್ಲಿ ರುಚಿ ಎಲ್ಲಿದೆ ಅಂತಾನೆ ಗೊತ್ತಾಗಲಿಲ್ಲ. ಎಲ್ಲಾ ಚೀಸು ಚೀಸು. ನೆಂಚಿಕೊಳ್ಳಲು ಕೂಡಾ ಚೀಸಿ ಡಿಪ್ಪಂತೆ. ಅಲ್ಲಿರುವ ಮೆಣಸಿನ ಬೀಜ.. ಪೆಪ್ಪರ್ ಪೌಡರ್ ನಲ್ಲೆ ಸ್ವಲ್ಪ ರುಚಿ ಇದೆ ಅನ್ನಿಸಿತು. ನಮ್ಮೂರಲ್ಲಿ ಬೇಸಿಗೆಯಲ್ಲಿ  ಕಾಳು ಕಡಿ ಮಾಡುವ ಸಮಯದಲ್ಲಿ,  ಒಣ ಮೆಣಸಿನ ಕಾಯಿ ತಂದು ಅದನ್ನು ಹೆಕ್ಕಿ ಒಣಗಿಸಿ ಡಬ್ಬ ತುಂಬಿ ಇಡುವಾಗ ಕೆಳಗಷ್ಟು ಮೆಣಸಿನ ಬೀಜ ಉಳಿಯುತ್ತಲ್ಲ,  ಅದನ್ನು ಎಸೆದು ಬಿಡುತ್ತಾರೆ. ಆದ್ರೆ ನೋಡಿ, ಇಟಲಿಯಲ್ಲಿ ಅದನ್ನು ದಂಡ ಮಾಡದೆ  ಪಿಜ್ಜಾಗೆ ಹಾಕಿಕೊಂಡು ತಿನ್ನುತ್ತಾರೆ !

  ಐಶು  ಚೀಸಿ ಬೈಟು ತಿಂದಾದ ಮೇಲೆ  ''ಅಯ್ಯೋ ಪಿಜ್ಜಾ ತಿಂದರೆ ಒಬೇಸ್ ಆಗ್ತಾರೆ. ನಾಳೆಯಿಂದ ನಾಲ್ಕು ದಿನ ಊಟ ಮಾಡೋಲ್ಲ ನಾನು'' ಎಂದು ಯೋಚನೆಗೆ ಶುರುವಿಟ್ಟು ಕೊಂಡಳು. ''ಒಂದು ತಿಂಗಳು ಊಟ ಬಿಡು'' ಎಂದರು ಅವಳಪ್ಪ. ''ಹಸಿವಾದರೆ ಮತ್ತೆ ಪಿಜ್ಜಾ ಕೊಡುಸ್ತೀಯಾ'' ಎಂದು ಮುಗ್ಧೆಯಂತೆ ಅಪ್ಪನನ್ನು ಕೇಳಿದಳು.

  ನಾನು  ''ಇನ್ನು ಮುಂದೆ ಪಿಜ್ಜಾ ತಿನ್ನೋಲ್ಲ ಕರ್ಮ '' ಅಂತ  ಈ ಸಲವೂ ಪ್ರತಿಜ್ಞೆ ಮಾಡಿದೆ ...!

ನಟರಾಜ್ ಮಾತ್ರ  ''ಈ ಪಿಜ್ಜಾ  ಒಳ್ಳೆ ರಬ್ಬರ್ ತರಾ ಹೊಟ್ಟೆ ಒಳಗೆ ಓಡಾಡ್ತಾ ಇದೆ''   ಅಂದರು.. ಮನೆಗೆ ಹೋದ ತಕ್ಷಣ ಒಂದು ಉದ್ದಾ ಲೋಟದಲ್ಲಿ ಮಜ್ಜಿಗೆ ಬೇಕು ಅಂತ ಹೊಸ ಆರ್ಡರ್ ಕೊಟ್ಟರು.




Wednesday, March 14, 2012

ಒ೦ದು ಬಸ್ಸಿನ ಪ್ರಯಾಣ..!

ಕ.ರಾ.ರ. ಸಾ.ಸಂ ಬಸ್ಸು ನಾವಿದ್ದ ಸ್ಟಾಪಿಗೆ  ಬ೦ದು ನಿಲ್ಲುತ್ತಿದ್ದ೦ತೆ ಟಿಕೆಟ್ ತೋರಿಸಿ ಲಗುಬಗೆಯಿ೦ದ ಹತ್ತಿದೆವು. ಒಂದು ದಿನದ ಮಟ್ಟಿಗೆ ನಮಗೆ ಊರಿಗೆ ಹೋಗುವುದಿತ್ತು. ದಿವಂಗತ ಮಾವ ನಮ್ಮನ್ನು ಹರಸಿ ಹೋಗಲು ಬರುವ ದಿನವಾಗಿತ್ತು. ಅದಕ್ಕೆ ಮಕ್ಕಳಿಗೆ ಒಂದು ದಿನದ ರಜೆ ಹಾಕಿಸಿ ಕರೆದೊಯ್ದಿದ್ದೆವು. ಬಸ್ಸಿನ ಒಳಗೆ ಹತ್ತುತ್ತಿದ್ದಂತೆಯೇ ಡ್ರೈವರ್ ''ಓಹೋ ಊರಿಗೆ ಹೋಗುವಾಗ ಎಲ್ಲಾ ಒಟ್ಟಿಗೆ ಹೋಗುವುದಾ...?'' ಎಂದು ಕೇಳಿದ. ನಾನೂ ನನ್ನ ಓರಗಿತ್ತಿ ಮಕ್ಕಳೊಂದಿಗೆ ಹೊರಟಿದ್ದೆವು. ಅವನಿಗೆ ಈ ಪರೀಕ್ಷಾ ಸಮಯದಲ್ಲಿ  ಬಸ್ಸಿನಲ್ಲಿ  ಜನಸಮೂಹವೇ ಕಾಣಿಸಿದಂತಾಗಿ ಆಶ್ಚರ್ಯ ಗೊಂಡಿದ್ದ.  ಅವನು  ನಮ್ಮೂರ ಬಸ್ ರೂಟಿನ ಖಾಯಂ ಡ್ರೈವರ್ರು. ನಮಗೆ ಅವನ ಪರಿಚಯವಿಲ್ಲದಿದ್ದರೂ ಅವನಿಗೆ ಮಾತ್ರಾ ಅವನ ಬಸ್ಸಿನ ರೂಟಿನ ಅಷ್ಟೂ ಮನೆಗಳಿಗೆ ಬೆಂಗಳೂರಿನಿಂದ ಯಾರ್ಯಾರು ನೆಂಟರು ಬರುತ್ತಾರೆಂಬುದು ಎಲ್ಲರಿಗಿಂತ ಚನ್ನಾಗಿ  ಗೊತ್ತು...!

ರಾತ್ರಿ  ಇಲ್ಲಿ ಬಸ್ಸು ಹತ್ತಿದರೆ ಬೆಳಕು ಹರಿಯುವ ಮುನ್ನ ಊರಲ್ಲಿರಬಹುದು. ನಮ್ಮೂರ ಕ.ರಾ.ರ. ಸಾ.ಸಂ ರಾಜ[ ಹಿಂಸೆ ]ಹಂಸ  ಬಸ್ಸು ಹತ್ತಿ ಕಾದಿಟ್ಟ ಸೀಟಿನಲ್ಲಿ ವಿರಾಜಮಾನರಾದೆವು.. ಮತ್ತು ನಾನಂತೂ ಅಲರ್ಟ್ ಆಗಿಯೇ ಕುಳಿತುಕೊಂಡೆ!   ಮತ್ತೇನಲ್ಲ ..  ಬಸ್ಸಿನ ಮೂಲನಿವಾಸಿಗಳಿಗೆ ಗೌರವ ಕೊಟ್ಟು!     ಅಗಣಿತ  ತಿಗಣೆಯ  ಗಣಗಳ ನಡುವೆ ಸುಮ್ಮನೆ ಕುಳಿತಿಹೆ ನಾನು..! ಸಮಾಜವಾದದ ಪ್ರಕಾರ  ನನ್ನದು   ತಿಗಣೆ   ಸಾಮ್ರಾಜ್ಯದ ಮೇಲಿನ ಅತಿಕ್ರಮಣ.. ಅಲ್ಲವೇ..? ತಿಗಣೆ , ಜಿರಳೆ ಮತ್ತು ಅಲೆಮಾರಿ ಜನಾಂಗದವರಾದ ಸೊಳ್ಳೆಗಳಿಗೂ ಈ ಭೂಮಿಯ ಅರ್ಥಾತ್ ಬಸ್ಸಿನ ಮೇಲೆ ಬದುಕಲು ಹಕ್ಕಿಲ್ಲವೇ..?   ಅವರ ಖಾಯಂ ಸೀಟಿನಲ್ಲಿ ನಾನು ಟೆಂಪರರಿಯಾಗಿ ಭಯ ಭಕ್ತಿಯಿ೦ದ ಕುಳಿತುಕೊಳ್ಳುವುದೇ ಕ್ಷೇಮ.

ಸುಮಾರು ಹೊತ್ತು ಬಹಳ ಹುಶಾರಿಯಿಂದಲೇ ಕುಳಿತರೂ ಕುಳಿತುಕೊಳ್ಳಲು ಪರಿಸ್ಥಿತಿ ಸುಮ್ಮನೆ ಬಿಡದು. ಶಿಶಿರ ''ಅಮ್ಮಾ ಕಥೆ ಹೇಳು'' ಅಂದ.  ಅವನಿಗೆ ಕಥೆ ಹೇಳಿದ್ದು ಅಕ್ಕಪಕ್ಕದವರಿಗೆ ಹರಿಕಥೆಯೋ ಶನಿಕಥೆಯೋ ಆಗಿ ಪರಿಣಮಿಸಿದರೆ ಅದಕ್ಕೆ ನಾನು ಜವಾಬ್ಧಾರಳೇ..?  ಅಷ್ಟೊತ್ತಿಗೆ ಬಸ್ಸಿನ ತೊನೆದಾಟ ಮತ್ತು ಬ್ರೇಕು ಹಾಕುವುದು, ಹೊಂಡ ಹಾರಿ ಮುಗ್ಗರಿಸುವುದು.. ಇದರೊಳಗೆ ನನ್ನ ಹುಶಾರಿಯೆಲ್ಲಾ ಹಾರಿಹೋಯಿತು.ಮತ್ತು ಎಲ್ಲಿವರೆಗೆ ಸಾಧ್ಯ..?

ಒಮ್ಮೆಯಂತೂ ಹೀಗೆ ಊರಿಗೆ ಹೋಗುವಾಗ ಪುಟ್ಟ ಶಿಶಿರನಿಗೆ ಸಿಕ್ಕಾಪಟ್ಟೆ ತಿಗಣೆ  ಕಚ್ಚಿ  ಬಿಳಿಯ ಆಗಸದಲ್ಲಿ ಕೆಂಪು ನಕ್ಷತ್ರಗಳು ಹೊಳೆಯುವಂತೆ  ಮುಖ  ಥಳ ಗುಟ್ಟುತ್ತಿತ್ತು.    ಗುಲಾಬಿ ಕಾಲ್ಗಳಲ್ಲಿ ಮದರಂಗಿಯ ಬೊಟ್ಟುಗಳನ್ನಿಟ್ಟಂತೆ   ತಿಗಣೆ ಚಿತ್ತಾರ ಬಿಡಿಸಿತ್ತು.
 ಸ್ವಲ್ಪ ಹೊತ್ತಿಗೆ ಅವ ನಿದ್ದೆ ಹೋದ. ನನಗೆ  ಹಾಗೆಲ್ಲಾ ನಿದ್ದೆ ಬಂದು ಬಿಡುವುದೇ.. ಅದೂ ಹೀಗೆಲ್ಲಾ ಸಂಗತಿ  ಇರುವಾಗ.

ಬಸ್ಸು ಬಹುಷಃ ಖರೀದಿಸಿದ  ಮೊದಲಲ್ಲಿ ಹೊಸದಾಗಿಯೇ ಇತ್ತೇನೋ..! ನಮ್ಮೂರ ಬಸ್ಸು .. ಅದು. ಅದರ  ಬಗೆಗೆ ಅಭಿಮಾನ ಇರಬೇಕಾದ್ದು ನ್ಯಾಯ.   ನಾನೂ ಹಾಗೆಯೇ ಒರಗಿಕೊಂಡೆ. ನನ್ನ ತಲೆ ಕಡೆಯೇ ಒ೦ದು ಲೈಟ್ ಇತ್ತು.  ಅದರ ಹೊರಗಾಜು ಒಡೆದುಹೋಗಿ ಸೀಳು ಸೀಳಾಗಿತ್ತು.. ನನ್ನ ಪ್ರಕಾರ ಯಾರೋ ಎಂಟಡಿ ಇರುವವರ ತಲೆಗೆ ತಾಗಿ ಅದು ಒಡೆದಿರಬಹುದು! ಆದರೂ ಬೆಳಕಿತ್ತು..!   ಒಂದೆರಡು ಸೊಳ್ಳೆಗಳು ಮುಖದ ಮೇಲೆ ಹಾರಾಡಿ  ತಮ್ಮ  ಸಂಗೀತವನ್ನು ಚೆನ್ನಾಗಿ  ನುಡಿಸಿ ಹಾರಿಹೋದವು. ಲೈಟೆಲ್ಲಾ ಆರಿಸಿ ಸುಮಾರು ಹೊತ್ತಾಯ್ತು .ತಣ್ಣನೆಯ ಗಾಳಿ ತನ್ನ ಚಾಮರ ಸೇವೆಯನ್ನು ಒದಗಿಸಲು ತೊಡಗಿತು.ಕಿಟಕಿ ಗ್ಲಾಸ್ ಮುಚ್ಚಿದೆನಾದರೂ ಅದಕ್ಕೆ ಮತ್ತಿನ್ನೆಂತಾ ದಾಕ್ಷಿಣ್ಯವೋ ಏನು ಕಥೆಯೋ ಅದು ನಿಧಾನಕ್ಕೆ ಜಾರಿ ಜಾರಿ ಗಾಳಿಯ ಸೇವೆಯನ್ನು ಜಾರಿಯಲ್ಲಿರಿಸಿತು.ತುಂಬಾ ಚಳಿ  ಆಗುತ್ತಿತ್ತು. ಮನೆಯಿಂದ ಹೊರಡುವಾಗ ಎಷ್ಟು ಸೆಖೆ..  ಬಸ್ಸಿನಲ್ಲಿ  ವಿಪರೀತ ಚಳಿ..!   ಹವಾಮಾನ  ಕ್ಷಣ ಕ್ಷಣ  ಬದಲಾಗುತ್ತದೆ.  ಮುಂದೆ ಹೋಗಬೇಕೋ  ಹಿಂದೆ ಹೋಗಬೇಕೋ  ಅದಕ್ಕೂ ಕಾಲದ ಕನ್ಫ್ಯೂಜನ್ನು. ಕಾಣದ ಪೊಲ್ಯೂಷನ್ನು.
ಬಸ್ಸಿನ   ಸೀಟು ಮಾತ್ರ ಒಳ್ಳೆ ಜಾರುಬಂಡಿಯನ್ನು ನೆನಪಿಸಿತು ನನಗೆ. ಬಸ್ಸು ಮುಂದೆ ಮುಂದೆ ಸಾಗಿದಂತೆ ಸೀಟಿನಲ್ಲಿ ಕುಳಿತವರು ಮೆಲ್ಲ ಮೆಲ್ಲ ಧರೆಗೆ..


ಮಧ್ಯ ರಾತ್ರಿಯಷ್ಟಿರಬಹುದು. ನನಗೆ ನಿದ್ರೆ ಆವರಿಸಿಕೊಳ್ಳುತ್ತೆ ಅನ್ನುವಷ್ಟರಲ್ಲಿ ಬಾಗಿಲು ನಿಧಾನ ಜಾರಿ ಗಾಳಿ ನುಗ್ಗುತ್ತಿತ್ತು. ಕಿವಿಗೆ ಶಾಲು ಸುತ್ತಿಕೊಂಡರೂ ಮುಖಕ್ಕೆ ಗಾಳಿಯ ಬಡಿತ.  ಆಡ್ರಾ ಡ್ಡ ಣಾಕು ಮುಕಾ  ಣಾಕು ಮುಕಾ.. ಎ೦ದು ಮುಂಗುರುಳು ಮುಖದ ಮೇಲೆ ನರ್ತಿಸುತ್ತಿತ್ತು.

ಆಗ  ನಿಧಾನಕ್ಕೆ  ಕೇಳಿಸ ತೊಡಗಿತ್ತು ,   ಕಟ ಕಟ.. ಕಟ ಕಟ... ಮಧ್ಯೆ ಮದ್ಯೆ ಜರೀಲ್ ...ಜರೀಲ್ .. ಅನ್ನುವಂತೆ ಒಡಕು ಗೆಜ್ಜೆಯ ಸ್ವರ... ಏನದು ಸದ್ದು..? ಯಾವುದರದ್ದು..?  ಸ್ಮಶಾನದಲ್ಲಿ ಎಲುಬು ಕಡಿಯುವ ಶಾಕಿನಿ ಡಾಕಿಣಿ ಪಿಶಾಚಗಳಿರಬಹುದೇ..? ಅಥವಾ ಮೊಹಿನಿಯೋ , ನಾಗವಲ್ಲಿಯೋ..?  ಯಾವದಾದರೂ ಸಂಸ್ಕಾರ ಸಿಗದ ಪ್ರೇತ ದಾರಿ ತಪ್ಪಿ  ಬಸ್ಸಿಗೆ ಬಂದಿರಬಹುದೇ..?

  ಥತ್ಥೆರಿಕೆ .... ಮುಂದಿನ ಸೀಟಿನ ಕಿಟಕಿಯ ಗ್ಲಾಸೂ.. ಅದರ ಮುಂದಿನ ಸೀಟಿನದೂ.. ಅದಕ್ಕೂ ಮುಂದಿನ .. ಹಿಂದಿನ ಕಿಟಕಿಯ ಗ್ಲಾಸುಗಳು ಇಂಗ್ಲೀಷರು  ಸ್ವಾತಂತ್ರ್ಯ ಕೊಟ್ಟಿದ್ದು ತಮಗೇನೆ ಎಂಬಂತೆ ಹಿಂದೆ ಮುಂದೆ ಅಲುಗಾಡುತ್ತಾ.. ಸದ್ದು ಮಾಡುತ್ತಾ..  ಸರ್ವ ಸ್ವಾತಂತ್ರ್ಯವನ್ನೂ ಅನುಭವಿಸುತ್ತಿದ್ದವು.. ಮಕ್ಕಳೆಲ್ಲಾ ನಿದ್ರೆಯಲ್ಲಿ ಸಿಲುಕಿಕೊಂಡಿರುವುದರಿಂದ ಅದನ್ನು ವಿವರಿಸಿ ಹೇಳುವ ಪ್ರಮೆಯವೊಂದು ಬರಲಿಲ್ಲ. ಇಲ್ಲದಿದ್ದರೆ ಹಾರರ್ ಸಿನಿಮಾದ ಪ್ರಭಾವದಿಂದ ಸದ್ದು  ಭೂತದ್ದೇ ಇರಬಹುದು, ಎಂದು ಮಕ್ಕಳು ವಾದ ಹೂಡಿ..ತೋರಿಸು ಎಂದೂ.. ಅದರ ಕುರಿತಾಗಿ ಪ್ರಶ್ನೆ ಕೇಳುತ್ತಾ ಬಸ್ಸಿನ ಎಲ್ಲರೂ ನನ್ನನ್ನು ಪ್ರೇತವನ್ನು ನೋಡುವಂತೆ ನೋಡಿ ಬಿಡುವ ಪ್ರಸಂಗವೊಂದು ತನ್ನಷ್ಟಕ್ಕೆ ತಾನೇ ತಪ್ಪಿ ಹೋಯಿತು.

ಆದರೆ ಪ್ರತಿ ಸಲದಂತೆ ಈ ಸಲ ತಿಗಣೆ  ಕಡಿಯದೇ,  ಈ ಮೊದಲು  ಕಚ್ಚಿಸಿಕೊಂಡ  ಸಂತ್ರಸ್ತ  ಜನರ ಒಕ್ಕೊರಲ  ಆರ್ತನಾದವನ್ನು ಆಲಿಸಿ ಅದರ   ಸಂತಾನವನ್ನು ಸರಕಾರದವರು ಕಡಿತಗೊಳಿಸಿದ್ದುದು,  ಅದರಿಂದಾಗಿ ಈ ಬಸ್ಸಿನಲ್ಲಿ ಅವುಗಳ  ಸಂಸಾರವೇ ಸರ್ವನಾಶಗೊಂಡಿದ್ದುದು  ನನಗೆ ಬೆಳಗಾದ ನಂತರ ಜ್ಞಾನೋದಯವಾಯಿತು..! ಜಿರಳೆಗಳೂ ತಮ್ಮ ವಾಸ್ತವ್ಯವನ್ನು ಬೇರೆಡೆಯಲ್ಲೆಲ್ಲಿಯೋ ಹೂಡಿ ಅವುಗಳೂ ಕಾಣದಾಗಿ ಬಸ್ಸು ಪ್ರಾಯಶಃ   ಬಣ ಬಣ ಗುಟ್ಟಿತು.ಹಾಗಾಗಿ ಬರಿಯ ಸಂಗೀತಸೇವೆಯೇ ಅಂದಿನ  ಪ್ರಧಾನ ಆಕರ್ಷಣೆಯಾಗಿತ್ತು.

ಅಂತೂ ಯಾವುದೇ ಪ್ರಾಣಿ ರೂಪೀ  ಮಾರಕಾಸ್ತ್ರಗಳ ಹಾವಳಿಗೊಳಗಾಗದೆ ಸಾವಕಾಶ ಮನೆ ತಲುಪಿದೆವು.. ರಾತ್ರಿ ಪುನಃ ವಾಪಾಸು ಬೆಂಗಳೂರಿಗೆ ಹೊರಟು ಅತಿ ಬುದ್ಧಿವಂತಿಕೆಯಿಂದ ಪ್ಲಾನ್ ಮಾಡಿ  ಸ್ಲೀಪಿಂಗ್ ಕೋಚ್ ಬಸ್ಸಿನಲ್ಲಿ ಬಂದೆವು. ಅದು ಒಳ್ಳೆ ರೋಲರ್ ಕೋಸ್ಟರ್ ತರಾ ನಮ್ಮೂರ ತಿರುಮುರುವು ರಸ್ತೆಯಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಬೀಸಿ ಬೀಸಿ ಒಗೆಯುತ್ತಾ ಜಾತ್ರೆಯ ಅನುಭವವನ್ನು   ನೆನಪು ಮಾಡಿಕೊಳ್ಳುತ್ತಾ ಬೆಂಗಳೂರು ತಲುಪಿಸಿದ್ದು ಈಗ ಇತಿಹಾಸ....!



Friday, October 14, 2011

ಅಲ್ಲಿಂದ ಇಲ್ಲಿಗೆ.... ಇಲ್ಲಿಂದ ಎಲ್ಲೆಲ್ಲಿಗೋ..!!

  


ನಾನು ಈಸಲ ಬೇಸಿಗೆ ರಜೆ ಪ್ರಯುಕ್ತ ಊರಿಗೆ ಹೋಗಿದ್ದೆನಲ್ಲ. ಪ್ರತಿ ದಿನ ಹೆಚ್ಚು ಕಡಿಮೆ ಮದುವೆ,  ಉಪನಯನ, ಚೌಲ, ಹೀಗೆ ದಿನಾಲೂ ಕಾರ್ಯದ ಮನೆ ತಿರುಗಿದ್ದೇ ತಿರುಗಿದ್ದು.ನನಗೆ ಅದೆಲ್ಲ ಸಿಕ್ಕುವುದು ಅಪರೂಪ ಈಗೀಗ. ಸಿಕ್ಕಾಗ ಬಿಡಬಾರದು ಹಳೆಯ ಗೆಳತಿಯರು,ಪರಿಚಯದವರು, ನೆಂಟರಿಷ್ಟರು ಸಿಗುತ್ತಾರೆನ್ನುವ ಮನೋಭಾವದಲ್ಲಿ ಎಲ್ಲದಕ್ಕೂ ಭಾಗವಹಿಸುವ ತವಕ ನನ್ನದು.
ಒಂದೆರಡಕ್ಕೆ ನನ್ನ ಜೊತೆ ಮಕ್ಕಳೂ ಬಂದವರು,  ಮತ್ತೆ ಇಂತವರ ಮನೆಯ... ಇದು ಇದೆ ಬನ್ನಿ ಹೋಗೋಣ ಎಂದರೆ.. ''ಅಮ್ಮ ನಿನಗೆ ಯಾವ ಯ್ಯಾಂಗಲ್ಲಲ್ಲಿ ಕೈ ಮುಗೀ ಬೇಕು ಹೇಳು.. ನಿನ್ಮನೆ ಕಾರ್ಯದ ಮನೆಗೆ ಮಾತ್ರಾ ಕರಿಯಡ''ಎಂದರು. ನನ್ನ ಮಗಳು ’ಕಾರ್ಯದ ಮನೆ  ’ ಎನ್ನುವ ಶಬ್ಧವನ್ನು ಉರುಹೊಡೆದು ಇಟ್ಟುಕೊ೦ಡಿದ್ದಾಳೆ. ಅದು ಅವಳಿಗೆ ಸೋಜಿಗದ ಶಬ್ಧ.  ''ಯಂತಾತು ನಿಂಗಕ್ಕೆ.. ಅಲ್ಲಿ ಎಷ್ಟ್ ಜನ ಪರಿಚಯ ಆಗ್ತು ಗೊತ್ತಿದ್ದಾ..? ಹುಡ್ರನ್ನ ಕರ್ಕ ಬರ್ಲ್ಯನೆ ಕೇಳ್ತಾ.   ಸುಮ್ನೆ ಬನ್ನಿ.''.ಅಂದರೆ, ”ನಿನಗೊಂದು ಅಲ್ಲಿ ಯಾರ್ಯಾರೋ ಸಿಗ್ತಿರ್ತ.   .  ಮೆಗಾ ಸೀರಿಯಲ್ ತರಾ  ಮಾತಾಡ್ತಾ  ಇರ್ತಿ.  ಒಳ್ಳೆ ಬ್ಲಾಕ್ ಎಂಡ್  ವೈಟ್ ಸಿನ್ಮಾ ಡೈಲಾಗ್ಸ್  ಇದ್ದಂಗಿರ್ತು ನಿಂಗಳ ಡೈಲಾಗ್ಸು.  ಅದ್ನ ಕೇಳಕ್ಕೆ ನಾವ್  ಬತ್ವಲ್ಲೇ.   ಕಡೀಗೆ ಮನೆಗೆ ಬರಕಿದ್ರೆ , ಮತ್ತೆ ಹಂಗಾರೆ ನಮ್ಮನಿಗೆ ಬರ್ರೆ.. ಒಂದ್ಸಲಾ.  ಎನ್ನುವ ಬೋರಿಂಗ್ ಕ್ಲೈಮಾಕ್ಸು'' ಎಂದು ನನ್ನ ಮುಖಕ್ಕೆ ತಿವಿದರು.

 ಅದೂ ಸತ್ಯ. ಅವರಿಗೆ ದಿನನಿತ್ಯ ಶಹರದ ಜನಜ೦ಗುಳಿಯ ನಡುವೆ ಒಡನಾಡಿ ಆಡಿ ಬೇಸರ. ಮಲ್ಲೇಶ್ವರ೦ ಯೆಯ್ತ್ ಕ್ರಾಸ್ ಗೆ ಒಮ್ಮೆ ಹೋಗಿ ಬ೦ದರೆ ಜಾತ್ರೆಗೆ ಹೋಗಿ ಬ೦ದ ಅನುಭವ ನೀಡುತ್ತದೆ. ಮತ್ತೆ ಇಲ್ಲೂ ಅದೇ ತರ ಗಿಜಿಗುಡುವ ಜನ ಅವರಿಗೆ ಬೇಡ.  ಅರಾಮಾಗಿ ಅಜ್ಜನ ಮನೆಯಲ್ಲಿ ಮಕ್ಕಳೊ೦ದಿಗೆ ವಿಶಾಲವಾದ ಜಾಗದಲ್ಲಿ ಸ್ವೇಚ್ಚೆಯಿ೦ದ ಆಡಿಕೊ೦ಡಿರಲು ಅವಕ್ಕೆ ಇಷ್ಟ.  ಮರಗಿಡಗಳ ನಡುವೆ ನಾಯಿ,ಬೆಕ್ಕು, ದನಕರು, ಚಿಲಿಪಿಲಿಗುಟ್ಟುವ ಹಕ್ಕಿಗಳು ಇವುಗಳ ಜೊತೆ ತಮ್ಮದೇ ಭಾಷೆಯಲ್ಲಿ ಸ೦ವಹಿಸುತ್ತಾರೆ. ಶಿಶಿರ ಅ೦ತೂ ಎಲ್ಲಿಗೆ ಬಾ ಎ೦ದು ಕರೆದರೂ 'ನಾಯಿ ಕರಿಯನನ್ನೂ ಕರೆದುಕೊ೦ಡು ಹೋಗೋಣವಾ,' ಎ೦ದು ಕೇಳುತ್ತಾನೆ.



  ಮಾವನಿಗೆ ಹೇಳಿದ್ದಾನೆ ತನಗೊ೦ದು ಪುಟ್ಟೀಕರ ಮತ್ತು ಅದರ ಅಮ್ಮ ಬೇಕೇ ಬೇಕೆ೦ದು. ಬೆ೦ಗಳೂರಿಗೆ ಮರಳುವಾಗ ಕೊಡುತ್ತೇನೆ೦ದು ಮಾವ ಮಾತುಕೊಟ್ಟಿದ್ದ. ದನ ಕರು ಎಲ್ಲ ಎಲ್ಲಿ ಕಟ್ಟಿಹಾಕುತ್ತೀಯೆ೦ದು ಕೇಳಿದ್ದಕ್ಕೆ ಅಪ್ಪನ ಕಾರುಶೆಡ್ಡಿನಲ್ಲಿ ಮತ್ತು ಅಪ್ಪಅಮ್ಮ ಕೊಟ್ಟಿಗೆ ಚಾಕರಿ ಮಾಡುತ್ತಾರೆಂದು ನಿರ್ಧಾಕ್ಷಿಣ್ಯವಾಗಿ ನಮಗೆ ಕೆಲಸ ಕೊಟ್ಟು,  ಅಕ್ಕಚ್ಚು, ನೀರು ಐಶು ಕೊಡುತ್ತಾಳೆ ಮತ್ತು ತಾನೇ ಹುಲ್ಲು ಹಾಕುತ್ತೇನೆ೦ದು ಎಲ್ಲರಿಗೂ ಕೆಲಸ ಬೇರೆ ಹ೦ಚಿ   ಐಶುವನ್ನು ನೇರವಾಗಿ ಮೂರನೇ ಮಹಾಯುದ್ಧಕ್ಕೆ ಆಹ್ವಾನಿಸಿದ್ದ.   '' ಏ.., ಹೋಗೆಲೋ ನೀನೆ ಅಕ್ಕಚ್ಚು ನೀರು  ಕೊಟ್ಟುಕೋ  ಬೇಕಿದ್ದರೆ, ” ಎ೦ದು ಅವಳು ಜಗಳ  ತೆಗೆದು   ಅವನನ್ನು ಅಟ್ಟಿಸಿಕೊ೦ಡು ಹೊರಟಳು.  ನಾವೇನೋ ಈ ಶತಮಾನದ ಯುದ್ಧವನ್ನು ನಮ್ಮನೆಯಲ್ಲಿಯೇ  ನೋಡಬೇಕಾದೀತೇನೋ ಎ೦ದು ಹಿ೦ದೆಯೇ ಹಿ೦ಬಾಲಿಸಿಕೊ೦ಡು ಬ೦ದರೆ ಇಬ್ಬರೂ ಮಾವನ  ಮಕ್ಕಳ  ಜೊತೆಗೆ ಅ೦ಗಳದ ತುದಿಯಲ್ಲಿ ಬೆಳೆದಿರುವ ಚದುರ೦ಗದ ಗಿಡದ ಮೇಲೆ ಮೊದ್ದಾಗಿ ಮಲಗಿರುವ ಓತಿಕ್ಯಾತವೊ೦ದನ್ನು    ನೋಡುವುದರಲ್ಲಿ     ತಲ್ಲೀನರಾಗಿದ್ದರು.    ಮಕ್ಕಳದು ಪ್ರತಿಯೊ೦ದನ್ನೂ ಶೋಧಿಸಿ, ಕೆದಕಿ ವಿವರವನ್ನು ಪಡೆಯುವ ಗುಣ. ಕಣ್ಣಿಗೆ ಕ೦ಡಿದ್ದನ್ನೆಲ್ಲಾ 'ನಮ್ಮನೇಲಿ  ಸಾಕೋಣ' ಅನ್ನುತ್ತಾನೆ ನನ್ನ ಮಗ.ಓತಿಕ್ಯಾತವನ್ನೂ ಸಾಕೋಣ ಅ೦ದರೆ ಕಷ್ಟ ಎ೦ದುಕೊ೦ಡು 'ಅದು ಸಾಕುಪ್ರಾಣಿ ಅಲ್ಲ ಕಣೊ,' ಎ೦ದು ಐಶು ಮುನ್ನೆಚ್ಚರಿಕೆಯಿಂದ  ವಿವರಣೆ ಕೊಡುತ್ತಿದ್ದಳು. ಹಿಂದೊಮ್ಮೆ ಹಾಗೆಯೇ ಆಗಿತ್ತು. ಅವನು ಸುಮಾರು  ಮೂರು ವರ್ಷ ಇದ್ದಾಗ ''ಬಾಲ ಗಣೇಶ ''  ಸೀಡಿ ನೋಡಿ ನೋಡಿ   ನಮ್ಮನೆಯಲ್ಲೂ  ಇಲಿ ಸಾಕೋಣ ಎಂದಿದ್ದ. ''ಗಣೇಶನಿಗಾದರೆ ಇಲಿ ಇದೆ ನನಗೂ ಬೇಕು,'' ಎಂದು ಅಪ್ಪನ ಜೀವ ತಿಂದು ಸಾಕು ಬೇಕು ಮಾಡಿದ್ದ. ಐಶು ''ಜೊತೆಗೆ ಬೆಕ್ಕನ್ನೂ ಸಾಕೋಣ; ಆಮೇಲೆ ಇಲಿ ಹಿಡಿಯಲು ಬೇಕಾಗುತ್ತದೆ, ''ಎಂದು ಕೆಣಕಿ,   ಇಲ್ಲದ ಇಲಿ ಮತ್ತು ಬೆಕ್ಕಿನ ವಿಷಯವಾಗಿ ಸುಮಾರು ಹೊತ್ತು ಮನೆ ರಣಾಂಗಣವಾಗಿತ್ತು.ಅದನ್ನೇ ನೆನೆದು  ರಾಜೀ ಪಂಚಾಯ್ತಿಕೆ ಮಾಡಲು ನಾನು ಸಡಗರದಿಂದ ಬಂದದ್ದೆ ಬಂತು, ಅದಕ್ಕೆ ಅವಕಾಶವನ್ನೇ ಕೊಡದೆ ಓತಿಕ್ಯಾತ ಮುಗುಳ್ನಗುತ್ತಾ ಕುಳಿತಿತ್ತು.



ಮಕ್ಕಳಿಗೆ  ಹಾರಲು, ಕುಣಿಯಲು, ಓಡಲು, ಬೀಳಲು ಸಾಕಷ್ಟು ಜಾಗವಿದೆ ಊರಲ್ಲಿ. ನೋಡ್ತಾ ನೋಡ್ತಾ ಎಷ್ಟೋ ವಿಸ್ಮಯಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತವೆ ಅವು. ವಾಪಾಸು  ಅಲ್ಲಿಂದ ಹೊರಡಿಸುವುದು ಬಲು ಕಷ್ಟದ ಕೆಲಸ. 

ಅಂತೆಯೇ ನನಗೂ ನೆಂಟರಿಷ್ಟರು, ಸಂಬಂಧಿಕರು ಬಳಗದವರನ್ನೆಲ್ಲಾ ಮಕ್ಕಳಿಗೆ  ಪರಿಚಯ ಮಾಡಿಸುವ ಹಂಬಲ. ಅಪ್ಪನ ಬಳಗ  ಅಮ್ಮನ  ಬಳಗ ಎಲ್ಲಾ ಪರಿಚಯ ಮಾಡಿಸಲೇ ಬೇಕೆಂದು ನಾನೂ ನನ್ನ ಸಣ್ಣ ಅತ್ತಿಗೆ ಸೇರಿ ದಿಢೀರ್   ನಿರ್ಧಾರ  ಮಾಡಿಯಾಯಿತು. ಎಲ್ಲಾ ನನ್ನ ಅಜ್ಜನ ಮನೆ ಸಿರ್ಸಿ  ಕಡೆ ಹೋಗುವುದು ಅಂತ.ಸಿರಸಿಯಲ್ಲಿ  ನಮ್ಮ ನೆಂಟರು ತುಂಬಾ ಇದ್ದಾರೆ.
  ಅಣ್ಣನ ಕಾರು ಮತ್ತು ಅವನದೇ ಸಾರಥ್ಯವೂ ಒದಗಿತು.[ ನನ್ನ ಪತಿರಾಯರು ಮೊದಲೇ ಬೆಂಗಳೂರಿಗೆ ಬಂದು ಬಿಟ್ಟಿದ್ದರಲ್ಲ! ]  ತವರಿನಲ್ಲಿ ತಂಗಿಯಂದಿರ ಮಾತಿಗೆ ಬೆಲೆ ಜಾಸ್ತಿ..! ಬೆಳಿಗ್ಗೆ ಒಂಬತ್ತಕ್ಕೆಲ್ಲಾ ತೀರ್ಮಾನಿಸಿ  ಅರ್ಧ ಗಂಟೆಯಲ್ಲಿ ಎಲ್ಲಾ ಮಕ್ಕಳು ಮಂದಿಯೆಲ್ಲಾ 'ನ ಭೂತೋ ನ ಭವಿಷ್ಯತಿ' ಎಂಬಂತೆ  ತಯಾರಾಗಿ ಹೊರಟೆವು.

ಒಟ್ಟು ಒಂದೂವರೆ ದಿನದಲ್ಲಿ ಒಂಬತ್ತು ನೆಂಟರ ಮನೆಗೆ ಭೇಟಿ  ಕೊಟ್ಟು ಅದರಲ್ಲಿ ಒಂದು ಅರ್ಧ ಘಂಟೆ ನನ್ನ ತಾಯಿಯವರಿಗೆ  ಡಾಕ್ಟರ್  ಚೆಕಪ್ಪೂ ಮತ್ತು ಬನವಾಸಿಯ ಮಧುಕೇಶ್ವರನ ದರ್ಶನವನ್ನೂ ಮುಗಿಸಿಬಂದಿದ್ದೆವೆಂದರೆ ನೀವೇ ಊಹಿಸಿ ನಾವೆಷ್ಟು ಹುಶಾರಿದ್ದೇವೆ ಅಂತ. ಎಲ್ಲಾ ಕಡೆ ಪ್ರಕೃತಿ ಸಾನ್ನಿಧ್ಯ ಜೊತೆಗೆ ಇದ್ದುದರಿಂದ ಮಕ್ಕಳಿಗೆ ಪ್ರತಿ ಮನೆಯೂ ಆಪ್ಯಾಯಮಾನವಾಗಿಯೇ ಇತ್ತು ಅನ್ನುವುದು ಗಮನಿಸಿದ ವಿಚಾರ. 

ಹೋದ ನೆಂಟರ ಮನೆಗಳಲ್ಲೆಲ್ಲಾ ಮನೆ ಜನ  ಎಲ್ಲರೂ ಇದ್ದು ಎಲ್ಲೂ ನಮಗೆ ಡಿಸ್ ಅಪಾಯಿಂಟ್ ಮೆಂಟ್ ಆಗಲಿಲ್ಲ.ಅರ್ಧ ಘಂಟೆ ಅಂದರೆ ಒಂದು ನಿಮಿಷ ಹೆಚ್ಚಿಲ್ಲ ಕಡಿಮೆಯಿಲ್ಲ, ಸಮಯವನ್ನು ಅದು ಹೇಗೆ ನಿಭಾಯಿಸಿದ್ದೆವೆಂದರೆ ನನಗೆ ನನ್ನ ದೇಶವೇ ಮರೆತು ಹೋಗುವಷ್ಟು!  ನಾನು ಈ ದೇಶದಲ್ಲೇ ಹುಟ್ಟಿದ್ದು ಹೌದೋ ಅಥವಾ ನಾವು ಬೇರೆ ದೇಶದಲ್ಲಿದ್ದೇವೋ ಎಂದು ನನಗೆ ಅನುಮಾನ ಬರಲು ಶುರುವಾಯಿತು. ಈಗಲೂ ನೆನಸಿಕೊಂಡರೆ ಅನುಮಾನ ಪರಿಹಾರವೇ ಆದಂತೆನಿಸುವುದಿಲ್ಲ.




ಸುಶೀಲ   ಚಿಕ್ಕಮ್ಮನ ಕೈಗಾರಿಕೆ.

  ಅತಿಥಿ ಸತ್ಕಾರದ ಶೈಲಿಯಲ್ಲಿ ಸಾಗರ ಕಡೆಯವರಿಗಿಂತ ಸಿರಸಿಯ ಕಡೆ ಸ್ವಲ್ಪ ಭಿನ್ನ.ಮನೆ ದಣಕಲು ದಾಟುತ್ತಿರುವಂತೆ ಮೂಲೆ ಮೂಲೆಗಳಿಂದ ಸ್ವಾಗತದ ಧ್ವನಿ ಕೇಳಿ ಬರುತ್ತದೆ.'' ತಂಗೀ ಅಂದಿ, ಮಗಾ ಅಂದಿ, ಕೂಸೇ ಅಂದಿ,   ಅತ್ತೆ  ಅಂದಿ, ಮಾವ ಅಂದಿ,  ಇತ್ಯಾದಿತ್ಯಾದಿ ಅಂದೀ.....  ಎನ್ನುವ ಕರೆ  ಅಲೆಯಲೆಯಾಗಿ   ಕೇಳಿ ಬರತೊಡಗುತ್ತದೆ. ನನ್ನಜ್ಜನ ಮನೆ  ವಿಶೇಷತೆ ಎಂದರೆ    ಒಂದೇ ಮಾಡಿನಡಿ ಒಂಬತ್ತು ಮನೆಗಳಿವೆ.


 ನನ್ನಜ್ಜನ ಮನೆ,  ಇಡೀ ಊರಿಗೆ ಒಂದೇ ಜಗಲಿ

ಒಂದೇ ಕೋಳು. ಅಲ್ಲಿಗೆ ಹೋದೆವೆಂದರೆ ಆಚೀಚೆ ಮನೆಯವರಾದಿಯಾಗಿ ಎಲ್ಲರೂ ಮಾತನಾಡಿಸುವವರೇ.. ಎಲ್ಲರಿಗೂ 'ಹ್ಞೂ ಅಂದಿ,ಹ್ಞೂ ಅಂದಿ, ' ಎಂದು ಹೇಳುವಷ್ಟರಲ್ಲಿ ಒಂದು ಒಪ್ಪತ್ತೆ ಆಗಿಹೋಗುತ್ತಿತ್ತು. ಮಳೆ ನಿಂತ ಮೇಲೆ ಹನಿಯೊಂದು ಮೂಡುವಂತೆ ಆಗಾಗ ಕಂಡವರೆಲ್ಲಾ   'ತಂಗೀ ಅಂದಿ,' ಎನ್ನುವ ಪ್ರಕ್ರಿಯೆ ಮುಂದುವರೆಯುತ್ತಲೇ ಇರುತ್ತದೆ.   ಪ್ರತಿಯೊಬ್ಬರೂ, ಪ್ರತಿಯೊಬ್ಬರನ್ನೂ ಹೀಗೆಯೇ ಸಂಬಂಧಗಳನ್ನು ಆರೋಪಿಸಿಯೇ ಕರೆಯುವುದರಿಂದ ಚಿಕ್ಕ ಮಕ್ಕಳಾದಿಯಾಗಿ  ಎಲ್ಲರಿಗೂ  'ಯಾರು ಹೇಗೆ ನೆಂಟರು,' ಅನ್ನುವ ಮೂಲಜ್ಞಾನ ತಾನಾಗಿಯೇ ಒದಗಿಬಿಡುತ್ತದೆ! ನನ್ನ ಮಾವನ ಮೊಮ್ಮಗಳು ಮೇಧಿನಿ ಪುಟ್ಟ ಸೂಜು ಮೆಣಸಿನಕಾಯಿ, ಎಲ್ಲರನ್ನೂ ದೊಡ್ದವರಂತೆಯೇ ಕರೆದು ಗೊತ್ತಿಲ್ಲದವರನ್ನು 'ನೀನು ಅಕ್ಕನಾ ? ಅತ್ತಿಗೆಯಾ..?' ಎಂದು ಗೊತ್ತುಮಾಡಿಕೊಂಡು ಮುದ್ದಾಗಿ  ಮಾತನಾಡಿಸಿದ್ದು ಎಲ್ಲರಿಗೂ ಹರುಷವುಕ್ಕಿಸಿತು ಜೊತೆಗೆ,   ನನಗೆ ಸ್ವಲ್ಪ ಆಲೋಚನೆಗೆ ಹಚ್ಚಿತು.

ಶಹರಗಳಲ್ಲಿ ವಾಸಿಸುವ ಮಕ್ಕಳಿಗೆ ನಿಜಕ್ಕೂ  ಸಂಬಂಧಗಳ ಪ್ರಾಮುಖ್ಯತೆಯನ್ನು  ಡೆಮೋ  ಮಾಡಿಯೇ ತೋರಿಸಬೇಕಾಗಿ ಬರುತ್ತದೆ ಇನ್ನು ಮುಂದೆ.    ಮನೆಗೊಂದೇ ಮಗು ಕಾನ್ಸೆಪ್ಟಿನಡಿಯಲ್ಲಿ ಸಂಬಂಧಗಳು ಹೇಗೆ ಗೊತ್ತಾಗಬೇಕು..?
ಮೊದಲೆಲ್ಲಾ ಅಜ್ಜನ ಮನೆಗೆ ಹೋದರೆ ಒಂದು ಇಪ್ಪತೈದರಿಂದ ಮೂವತ್ತು ಮಕ್ಕಳು ನಮಗೆ ಆಟಕ್ಕೆ  ಸಿಗುತ್ತಿದ್ದರು. ಈಗ ಇಡೀ ಒಂಬತ್ತು ಮನೆ ಊರಿಗೆ ಒಂದೋ ಎರಡೋ ಮಕ್ಕಳು ! ಮನೆ ಮಕ್ಕಳೆಲ್ಲಾ ಊರು ಬಿಟ್ಟು ಶಹರ ಸೇರಿದುದರ ಪರಿಣಾಮ. ಅಜ್ಜ ಅಜ್ಜಿ ಮಾತ್ರ ಊರಲ್ಲಿ.  ಶ್ರೀಶಂ ಬ್ಲಾಗಿನ ರಾಘಣ್ಣ ಹೇಳಿದಂತೆ ಊರಲ್ಲಿ ಈಗ ಅಡಿಗೆ ಮನೆಲೊಂದು ಕೆಮ್ಮು, ಹೊರಗೆ ಜಗಲಿಯಲ್ಲೊಂದು  ಕೆಮ್ಮು !


  ಸಿರ್ಸಿ ಕಡೆಯ  ಇನ್ನೊಂದು ವಿಶೇಷತೆಯೆಂದರೆ, ಅತಿಥಿಗಳು ಬಂದಾಗ ಅವರಿಗೆ ಕೈಕಾಲು ತೊಳೆಯಲು ನೀರು ತಂದಿಟ್ಟು   ನಮಸ್ಕರಿಸಿ ಹೋಗುವ  ಪರಿಪಾಟ. ಮೊದಲೆಲ್ಲ ಗಮನಕ್ಕೆ ಬರುತ್ತಿರಲಿಲ್ಲ.   ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸುವ ಈ  ಕ್ರಮ ಎಷ್ಟೊಂದು ಮಹತ್ವ ಪೂರ್ಣವಾಗಿದೆ.!ಸಂಬಂಧಗಳನ್ನು ಗುರುತಿಸುವ, ಗೌರವಿಸುವ,  ಬೆಸೆಯುವ, ಬೆಳೆಸುವ, ಉಳಿಸುವ ಈ ಸಂಸ್ಕಾರ ಎಷ್ಟೊಂದು ಅರ್ಥಪೂರ್ಣ!   ಪೇಟೆ ಸೇರಿದ ಮಂದಿಯೆಲ್ಲಾ ಈ ಪದ್ಧತಿಯನ್ನು ಉಳಿಸಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ.  ಇಲ್ಲಿಯ ಧಾವ೦ತದ ಬದುಕಿನಲ್ಲಿ ಅದನ್ನೆಲ್ಲಾ ಅನುಸರಿಸಲು ಸಮಯ ಮತ್ತು ಅವಕಾಶ ಸಿಗದೇ   ಅಳಿವಿನಂಚಿಗೆ  ತಲುಪಲು ಹೆಚ್ಚು ಸಮಯ ಬೇಕಿಲ್ಲ. ಆ ಪದ್ಧತಿಗಳೆಲ್ಲಾ ನನಗೆ ಈಗ ಯಾಕೋ  ಆಪ್ಯಾಯಮಾನವಾಗುತ್ತಿವೆ. ಕಳೆದು ಹೋಗಿ ಬಿಡುತ್ತದೆ ಅನ್ನುವುದರ ಬಗೆಗೆ ಹೆಚ್ಚು ಪ್ರೀತಿ..  ನನ್ನ ಮಕ್ಕಳಿಗೆ ಇದೆಲ್ಲಾ ಹೊಸತಾದರೂ ಇಷ್ಟವಾಯಿತು.  


ಅಜ್ಜನ ಮನೆಯಲ್ಲಿ ಅತ್ತೆ ಊಟಕ್ಕೆ ಅನ್ನಕ್ಕೆ ಕಲೆಸಿಕೊಳ್ಳಲು ಬರೀ ಐದೇ ತರದ ಪದಾರ್ಥ ಮಾಡಿದ್ದಳು! ಇನ್ನೂ ಒಂದು ಪದಾರ್ಥ ಕಡಿಮೆಯಾಯಿತೆಂದು ಬೇಜಾರು ಮಾಡಿಕೊಂಡಳು ಜೊತೆಗೆ.! ಉಳಿದಂತೆ ಮೂರು ಸ್ವೀಟು.. ಸ್ವಲ್ಪ ಹಪ್ಪಳ, ಬಜೆ .....ಇತ್ಯಾದಿ..  ಇದೆಲ್ಲಾ ನಟರಾಜ್ ಗೆ ಫೋನಿನಲ್ಲಿ ಹೇಳಿ ಹೊಟ್ಟೆ ಉರಿಸೋಣವೆಂದರೆ ''ಓಹೋ ನೀನು ಈಗ ಜೀರೋ  ಸೈಜ್ಹಾಗಿ ಬರುತ್ತಿದ್ದೀಯ ಅನ್ನು...  ಸೊನ್ನೆಯ ಆಕಾರದಲ್ಲಿ..! '' ಎಂದು ನಕ್ಕರು. 


 ಬನವಾಸಿ ಮಧುಕೇಶ್ವರನ ಸನ್ನಿಧಿಯಲ್ಲಿ..





ಅಮ್ಮ ಅಣ್ಣನೊಂದಿಗೆ  ನಾನೂ ನನ್ನ ಮಗಳೂ ..

ಹೋಗುವಾಗ ಬರುವಾಗ  ದಾರಿಯಲ್ಲಿ ವಿಶಾಲವಾದ ಹಸಿರು  ಗದ್ದೆಗಳನ್ನು ನೋಡುವ  ಅವಕಾಶ ಮಾತ್ರಾ ಸಿಗಲಿಲ್ಲ. ಎಲ್ಲಾ ಕಡೆ  ಭತ್ತ ಕೊಯ್ದು  ಬೆತ್ತಲಾಗಿತ್ತು  ಭೂಮಿ. ಅಲ್ಲಲ್ಲಿ ಹಚ್ಚೆ ಹಾಕಿದಂತೆ ಕಬ್ಬಿನಗದ್ದೆಗಳು ಆಲೆಮನೆಗೆ ಕಾದಿದ್ದವು. 
ದಾರಿಯಲ್ಲೇ ಅದೆಷ್ಟು ಮಾತುಗಳು ಖರ್ಚಾದವು ..! ಒಂದಾದರೂ ಕೆಲಸಕ್ಕೆ ಬರುವಂಥದಲ್ಲ.    ಹಳ್ಳಿಯಿಂದ  ದಿಲ್ಲಿಯವರೆಗೆ, ಕೊನೆಕೊಯ್ಲಿನಿಂದ ರಿಸಿಶನ್ನಿನ ವರೆಗೆ,   ದೇವಸ್ಥಾನದಿಂದ ಪಾಕಿಸ್ತಾನದ ವರೆಗೆ,  ಹೀಗೆ ಒಂದಕ್ಕೊಂದು ತಾಳ ತಂತುಗಳಿಲ್ಲದೆ ಮಾತುಗಳು ರಸ್ತೆಯುದ್ದಕ್ಕೂ ಚೆಲ್ಲಾಡಿದವು. 
ಒಂದು ವಿಚಾರ ಹೇಳಿ ನನ್ನ ಅಣ್ಣ ನನ್ನ ತಲೆ ತಿಂದ..  ನಾನೂ ಹೋದಲ್ಲೆಲ್ಲಾ ದೊಡ್ಡದಾಗಿ    ಕಂಡ ಕಂಡಿದ್ದೆಲ್ಲಾ  ಫೋಟೋ ತೆಗೆಯುತ್ತಾ   ಫೋಸ್ ಕೊಡುತ್ತಿದ್ದೇನಲ್ಲಾ.   ''ಏ ಮಾರಾಯ್ತಿ.. ದೃಶ್ಯವನ್ನೂ ಶ್ರವ್ಯವನ್ನೂ  ರೆಕಾರ್ಡ್ ಮಾಡುವ ಟೆಕ್ನಾಲಜಿ  ಗೊತ್ತು ನಮಗೆ;   ಅದೇ ವಾಸನೆಯನ್ನು ರೆಕಾರ್ಡ್ ಮಾಡಲು ಸಾಧ್ಯವಾ..? ರುಚಿಯನ್ನು ರೆಕಾರ್ಡ್ ಮಾಡ್ಲಿಕ್ಕಾಗುತ್ತ..? ಟಚ್ ಫೀಲಿಂಗನ್ನು ಹಿಡಿದಿಡಲು  ಆಗತ್ತಾ..? !!! ''
  
 
ಹೀಗೆ ಮಾತು ಸಾಗುತ್ತಾ ಸಾಗುತ್ತಾ..ಇದೆಲ್ಲಾ ಟೆಕ್ನಾಲಜಿ   ನಮ್ಮ ಉಪನಿಷತ್ತುಗಳಲ್ಲಿ ಇರಬಹುದೆಂದೂ, ಜಪಾನಿನವರೋ, ಜರ್ಮನಿಯವರೋ ಅದನ್ನು ಅರ್ಥೈಸಿ ಪ್ರಾಡಕ್ಟ್  ತಯಾರಿಸುತ್ತಾರೆಂದೂ,  ಕಡೆಗೆ ಚೀನಾದವರು ಅದನ್ನು ಕದ್ದು ನಮಗೆ ಸೋವಿಯಲ್ಲಿ ಮಾರಬಹುದೆಂದೂ, ಆಗ ನಾವು ಅದನ್ನು ಖರೀದಿಸಬಹುದೆಂದೂ  ಊಹಿಸಿ ಅಲ್ಲಿಗೆ ಆ ತಲೆನೋವು ಕಡಿಮೆ ಮಾಡಿಕೊಂಡೆವು..!!!!

ಎಲ್ಲಿಂದಲೋ ಶುರುವಾದ ಮಾತು ಎಲ್ಲೆಲ್ಲಿಗೋ ಹೋಯಿತು.  ಅಂತೂ ಮುಗಿಸಿದೆ.. ಈಗಿನ ಮಾತನ್ನು..!!!
ವಂದನೆಗಳು.

Tuesday, July 12, 2011

ಕೇಳುವ ಕರ್ಮ ನಿಮಗಿಲ್ಲ...!

 'ಎ೦ತಾ ಕಾಲ ಬ೦ತಪ್ಪಾ’ ಎನ್ನುತ್ತಾ ನಿಟ್ಟುಸಿರು ಬಿಟ್ಟೆ. ಯಾರೋ ಹೇಳುತ್ತಿದ್ದರು, ಅದ್ಯಾರ‍ೊ ಹೊಸತಾಗಿ  ಮದುವೆಯಾದ ಹುಡುಗಿ ಗ೦ಡನನ್ನು ಬಿಟ್ಟು ಯಾರನ್ನೋ ಕಟ್ಟಿಕೊ೦ಡಳ೦ತೆ. ಕಾರಣ ಅವಳ ಗ೦ಡ ಎನ್ನಿಸಿಕೊ೦ಡವನಿಗೆ ಒ೦ದು ಸರಿಯಾಗಿ' ಐ ಲವ್ ಯು ’ ಎ೦ದೂ ಹೇಳಲು ಬರುತ್ತಿರಲಿಲ್ಲ ಎನ್ನುವುದು  ಮತ್ತು ಈಗ ಅದ್ಯಾರನ್ನೋ ಕಟ್ಟಿಕೊ೦ಡವನು ಅದೆಷ್ಟು ಸು೦ದರವಾಗಿ'ಐ ಲವ್ ಯು’ ಎ೦ದನೆ೦ದರೆ ಕಟ್ಟಿಕೊ೦ಡ ಗ೦ಡನನ್ನೇ ಬಿಡುವಷ್ಟು. ಯಾರ್ಯಾರ ವಿಚಾರಧಾರೆ ಎಲ್ಲೆಲ್ಲಿದೆಯೋ? ಎಲ್ಲೆಲ್ಲಿಗೆ ಹೋಗಿ ಮುಟ್ಟುತ್ತದೆಯೋ..? ಯಾರಿಗೆ ಗೊತ್ತು. ಅ೦ತೂ ಅದನ್ನು ಕೇಳಿದವರೆ ಇವರು ಲಗುಬಗೆಯಿ೦ದ ಬ೦ದು ರಾಗವಾಗಿ,  'ಐ ಲವ್ ಯು ಮೈ ಡಿಯರ್’ಎ೦ದರು ನನಗೆ.  ಹೂವಿರಲಿಲ್ಲ ಕೈಯಲ್ಲಿ ಅಷ್ಟೇ. ಅರ್ಥವಾಗದೇ ಅವರನ್ನೇ ನೋಡಿದೆ. ಇದೇನಿದು ಹೊಸಾ ತರಾ...! ''ಅಲ್ಲಾ, ಮತ್ತೆ ಬಿಟ್ಗಿಟ್  ಹೋದ್ರೆ ಕಷ್ಟಾ.. ಹೆಣ್ಣು ಸಿಕ್ಕೋದೆ ಕಷ್ಟ ಈಗೀಗ  ನೋಡೂ.. ಯಾವ್ದಕ್ಕೂ ಮು೦ಜಾಗ್ರತೆಗಿರಲಿ ಅ೦ತ,” ಎ೦ದು ಮುಸಿನಕ್ಕರು.
'' ಹಾಗೇನಾದರ‍ೂ ಇದ್ದಿದ್ದರೆ  ಹದಿನೈದು ವರ್ಷ ಕಾಯಬೇಕಿತ್ತಾ...? ಡ್ಯುಎಟ್ ಹಾಡೋಣವೇ..ಒಲವೆ ಜೀವನ ಸಾಕ್ಷಾತ್ಕಾರ........ ”  ನಾನೂ ನಸು ನಕ್ಕೆ.

''ಖಾರ ಖಾರ... ನಮಸ್ಕಾರ .. ದಯವಿಟ್ಟು  ನೀನೀಗ ಹಾಡು ಶುರು ಮಾಡಬೇಡವೇ..ಬರ್ತೀನಿ.” ಎನ್ನುತ್ತಾ ಅಡ್ಡಡ್ಡ ಕೈ ಮುಗಿಯುತ್ತಾ ಅಲ್ಲಿ೦ದ ಮಾಯವಾದರು.

ಎಲ್ಲರಿಗೂ ನನ್ನ ಹಾಡೆ೦ದರೆ ಹೀಗೆಯೇ.   ಏನೋ ನನಗೂ ಒಳ್ಳೆಯ ಲಹರಿ ಬ೦ತೆ೦ದರೆ ಹಾಡೋಣ ಅನ್ನಿಸುವುದು೦ಟು ಆಗಾಗ!
ದೋಸೆ ಎರೆಯುವಾಗಲೋ, ಚಪಾತಿ ಲಟ್ಟಿಸುವಾಗಲೋ,  ಮಗಳಿಗೆ ಜಡೆ ಹಾಕುವಾಗಲೋ, ಬಾಲ್ಕನಿಯ ಗಿಡಗಳಿಗೆ ನೀರು ಹನಿಸುವಾಗಲೋ, ಎಲ್ಲರೂ ಅವರವರ ಕೆಲಸದಲ್ಲಿರುವಾಗ ನನಗೇನೂ ಕೆಲಸವಿರದಿದ್ದಾಗ,  ಹೀಗೆ ಯಾವಾಗಲಾದರೊಮ್ಮೆ ಹಾಡುವ ಮನಸ್ಸಾಗುತ್ತದೆ.

ಮೆಲ್ಲನೆ ದ್ವನಿ ತೆಗೆದು ಸ್ವರ ಸರಿ ಮಾಡಿಕೊಳ್ಳುತ್ತಿದ್ದ೦ತೆಯೇ  ಎಲ್ಲರೂ  ಇದ್ದಲ್ಲಿಯೇ ಎಚ್ಚೆತ್ತುಕೊಳ್ಳುತ್ತಾರೆ. ಪ್ರಳಯವೇ ಆಗುತ್ತಿದೆಯೇನೊ ಎನ್ನುವ೦ತೆ ಎಲ್ಲರೂ ಹೈ  ಅಲರ್ಟ್ ಆಗುತ್ತಾರೆ. ಮಗಳು ಓಡಿಹೋಗಿ ಕಿವಿಗೆ ಮೊಬೈಲ್ನ ಇಯರ್ ಫೋನ್ ಸಿಕ್ಕಿಸಿಕೊ೦ಡು ಹುಶಾರಾಗುತ್ತಾಳೆ. ಮಗ ಟೀವೀ ವಾಲ್ಯೂಮ್ ಹೆಚ್ಚಿಸುತ್ತಾನೆ.ನಮ್ಮನೆಯವರು ಪೇಪರ್ ಕೆಳಗಿಟ್ಟು ಎದೆ ನೀವಿಕೊಳ್ಳುತ್ತಾ,  'ಮಗಳೆ ಮೊದಲು ಕಿಟಕಿ ಬಾಗಿಲು ಹಾಕಿದೆಯಾ ನೋಡು,’ ಎ೦ದು ಕ್ಷೀಣ ದ್ವನಿಯಲ್ಲಿ ಕಿರುಚಲು ಶುರುಮಾಡುತ್ತಾರೆ.ಅವಳಿಗೆ ಕೇಳಿದರೆ ತಾನೆ ! ಕಿವಿಯಲ್ಲಿ ಅದೇನನ್ನೋ ಸಿಕ್ಕಿಸಿಕೊ೦ಡಿರುತ್ತಾಳಲ್ಲ!

ಆಗ ನನಗೆ  ಹಾಡುವುದನ್ನು ನಿಲ್ಲಿಸೋಣ ಆನ್ನಿಸುತ್ತದೆ. ಅಹಿ೦ಸಾ ಧರ್ಮದಲ್ಲಿಯೇ ನ೦ಬಿಕೆ ನನಗೆ. ಬದುಕಿಕೊಳ್ಳಲಿ ಅವರೂ. ಅವರ ಕರ್ಣ ಶೋಷಣೆ ನಾನ್ಯಾಕೆ ಮಾಡಲಿ?  ಮತ್ತೆ ಮರುದಿನ ಪಕ್ಕದ ಮನೆಯವರೆದುರು ಪಾಪಪ್ರಜ್ನೆಯಲ್ಲಿ ನಿಲ್ಲುವುದು ನನಗೂ ತಪ್ಪಿದ೦ತಾಗುತ್ತದೆ.

ಹಾಗ೦ತ ನಾನೇನು ಅಷ್ಟೊ೦ದು ಕರ್ಕಶವಾಗಿ ಹಾಡುತ್ತೇನೆಯೋ ಅ೦ದರೆ ಅಲ್ಲ ಅನ್ನುವುದು ನನ್ನದೇ ನ೦ಬಿಕೆ. ಮಿಡ್ಲ್ ಸ್ಕೂಲಿನಲ್ಲಿದ್ದಾಗ ನನಗೂ ಹಾಡಿನಲ್ಲಿ ಬಹುಮಾನ ಸಿಕ್ಕಿತ್ತು.ಹಾಡಿಗೆ   ಭಾಗವಹಿಸಿದ ಹತ್ತು ಜನರಲ್ಲಿ ನಾನೇ ಮೊದಲ ಬಹುಮಾನ ಪಡೆದಿದ್ದೆನೆ೦ದರೆ  ಹೃದಯ ಗಟ್ಟಿ ಇರುವವರು ಉಳಿದವರ  ಹಾಡುಗಾರಿಕೆಯನ್ನೂ ಊಹಿಸಿಕೊಳ್ಳಿ . ಅವರಲ್ಲಿ ಇಬ್ಬರು ಬ೦ದಿರಲಿಲ್ಲ ಮತ್ತು ಒಬ್ಬಳು ಅರ್ಧ ಹಾಡು ಹಾಡಿದ್ದಳು. ಉಳಿದ೦ತೆ ನಾನೇ ಮೊದಲು. ಅದೇ ಈಗಲೂ ನನಗೆ ಹಾಡಲು ಪ್ರೇರಣೆ ಅ೦ದರೆ ನೀವು ಒಪ್ಪಲೇ ಬೇಕು! ಆ ಗಳಿಗೆ ನೆನಪಾದ೦ತೆಲ್ಲಾ ನನಗೆ ಹಾಡಲು ಸ್ಪೂರ್ತಿ ಹೆಚ್ಚಾಗುತ್ತದೆ. ಇಲ್ಲಿಯ ಪರಿಸ್ಥಿತಿ ಮರೆತು ಹಾಡತೊಡಗಿದರೆ ಈ ಮೇಲಿನ ಭಾನಗಡೆಗಳೆಲ್ಲಾ ಶುರುವಾಗುತ್ತದೆ!

ನಾನೀಗ ಹೊಸಾ ಉಪಾಯ ಮಾಡಿದ್ದೇನೆ ಹಾಡಲು.  ಈಗಲೂ ಹಾಡಿಕೊಳ್ಳುತ್ತೇನೆ ಮೌನವಾಗಿ.ನನ್ನ ಮೌನದರಮನೆಯಲ್ಲಿ. ಯಾರಿಗೂ ಕೇಳಿಸುವುದಿಲ್ಲ.  ಕೇಳಿಸುವ ಬಯಕೆ ನನಗೂ ಇಲ್ಲ. ಇಲ್ಲಿ ಯಾರಿಲ್ಲ ಕೇಳಿ. ಎಲ್ಲರೂ ಇದ್ದಾರೆ. ಎಸ್.ಪೀ. ಬಿ. ಯ ದ್ವನಿಯಲ್ಲೇ ಹಾಡತೊಡಗುತ್ತೇನೆ. ಎಸ್. ಜಾನಕಿ ನನ್ನ ಕ೦ಠದಲ್ಲಿಯೇ ಇದ್ದಾಳೆ. ಎಲ್ಲಾ ರಾಗಗಳೂ, ಎಲ್ಲಾ ತಾಳಗಳೂ ಇಲ್ಲಿ ಬ೦ದು ಹೊಗುತ್ತವೆ.ಹ೦ಸಧ್ವನಿಯಿ೦ದ ಹಿಡಿದು ಭೈರವೀ ವರೆಗೆ.   ಲತಾ ಮ೦ಗೇಶ್ಕರ್, ಅಲ್ಕಾ ಯಾಜ್ನಿಕ್ ಇ೦ದಾ ಹಿಡಿದು ಗಣಪತಿ ಭಟ್ ಹಾಸಣಗಿ,ಪ್ರಭಾಕರ್ ಕಾರೇಕರ್ ವರೆಗೆ  ಎಲ್ಲರ‍ ಕ೦ಠದಲ್ಲೂ ಹಾಡತೊಡಗುತ್ತೇನೆ ಮೌನವಾಗಿ. ಇಲ್ಲಿ ಯಾರೂ ತಗಾದೆ ಮಾಡುವವರಿಲ್ಲ.ತಾಳ ತಪ್ಪಿದೆಯೆ೦ದು ಹೇಳುವವರಿಲ್ಲ.ಲಯ ಹೋಯ್ತೆ೦ದು ಮೂದಲಿಸುವವರಿಲ್ಲ. ಕುರುಬುವವರಿಲ್ಲ, ಕುಟ್ಟುವವರಿಲ್ಲ. ಮೌನದರಮನೆಯಲ್ಲಿ ಯಾರ ಕಾಟವೂ ಇಲ್ಲ. ನಾನೇ ಕವನಿಸುತ್ತೇನೆ. ನಾನೇ ಹಾಡುತ್ತೇನೆ, ನಾನೇ ಆಲಿಸುತ್ತೇನೆ. ನನ್ನ ಹಾಡಿಗೆ ನಾನೇ ಬೆರಗಾಗುತ್ತೇನೆ. ನನ್ನ ಹಾಡಿಗೆ  ನಾನೇ ಗಾಯಕಿ, ನಾನೇ ಪ್ರೇಕ್ಷಕಿ, ನಾನೇ ಶ್ರೋತೃ, ನಾನೇ ವಿಮರ್ಶಕಿ .




ನನ್ನಷ್ಟಕ್ಕೆ ಹಾಡುತ್ತಾ ಹೋಗುತ್ತೇನೆ..ಕೇಳುವ ಕರ್ಮ ಮಾತ್ರ ನಿಮಗಿಲ್ಲ.

Sunday, June 5, 2011

ಹಲ್ಲು ನೋವಿನ ಕಥೆ- ವ್ಯಥೆ..!

ನನಗೆ ಎಷ್ಟೋ ಸಲ ಅನ್ನಿಸಿದೆ ಜ್ಞಾನ ಬಂದಿದೆ ಎಂದು...!  ಮತ್ತು ಆಗಾಗ ಅನ್ನಿಸುತ್ತಲೇ ಇರುತ್ತದೆ.  ಗಂಟಲ ದ್ವಾರದಿಂದ ತುಸುವೇ ಮುಂದೆ ಎರಡೂ ಪಕ್ಕದಲ್ಲಿರುವ ನಾಲ್ಕು ಹಲ್ಲುಗಳಲ್ಲಿ ಯಾವುದಾದರೂ ಒಂದು ಹಲ್ಲು ನೋವು ಶುರುವಾದಾಗ ತಟ್ಟನೆ ಗೋಚರವಾಗುತ್ತದೆ ಹಲ್ಲಿದೆ ಎಂಬುದರ ಜ್ಞಾನ.!
ಹದಿನೇಳರಿಂದ ಇಪ್ಪತೈದರ ನಡುವಿನ ವಯಸ್ಸಿನಲ್ಲಿ ಅದೇನೇನು ಕನಸು ಕಾಣುತ್ತ ಇರುವೆವೋ ಅದನ್ನೆಲ್ಲ ಒಮ್ಮೆಲೇ ಅಳಿಸಿ ಹಾಕುವಂತೆ ಈ ಜ್ಞಾನ ದಂತಗಳೆಂಬ ಹಲ್ಲುಗಳು ಮೂಡಲು ಶುರುವಾಗುತ್ತದಲ್ಲ;  ಆಗ ಗೊತ್ತಾಗುತ್ತದೆ ಹಲ್ಲಿನ ಮಹತ್ವ.. ಅಲ್ಲಿಯವರೆಗೆ ಸರಿಯಾಗಿ ಹಲ್ಲು ಸ್ವಚ್ಚ ಮಾಡಿಕೊಳ್ಳುವುದರ ಬಗ್ಗೆ ಯೋಚನೆ ಮಾಡದ ಎಲ್ಲರೂ ಜಾಗ್ರತರಾಗ ತೊಡಗಿಬಿಡುತ್ತಾರೆ! ಹಲ್ಲಿನ ಬಗ್ಗೆ ತ೦ತಾನೇ  ಸ್ವಲ್ಪ ಜ್ಞಾನ ಇಟ್ಟುಕೊಳ್ಳುತ್ತಾರೆ..!


ಹುಟ್ಟುವಾಗಲೇ ಸಾಕಷ್ಟು ಕಷ್ಟ ಕೊಡುತ್ತಲೇ ಬರುವ ಜ್ಞಾನ ದಂತಗಳೆಂಬ ಅನುಪಯೋಗಿ ವಸ್ತುಗಳಿಂದ  ಏನೇನು ಸಮಸ್ಯೆಯಾಗುತ್ತದೆಂಬುದನ್ನು ಅನುಭವಿಸಿಯೇ ಅರಿತುಕೊಳ್ಳಬೇಕು. ಹುಟ್ಟುವಾಗ ಸಿಕ್ಕಾಪಟ್ಟೆ ನೋವು ..ಕೆಲವಂತೂ ಹುಟ್ಟುವಾಗಲೇ ಹುಳುಕಾಗಿರುತ್ತವೆ. ಅಡ್ಡಾದಿಡ್ಡಿ ವಕ್ರ ಕೊಕ್ರವಾಗಿ ಹುಟ್ಟಿದರಂತೂ ಸರಿಯೇ ಸರಿ. ಮೇಲಿನ ದಂತಕ್ಕೆ ಅಥವಾ ಮೇಲ್ಪದರಕ್ಕೆ  ತಾಗಿ ಅಲ್ಲಿ ಹುಣ್ಣು ಮಾಡಿ ಬಾಯಿ ಬಾಯಿ ಬಿಡುವಂತೆ ಮಾಡಿಬಿಡುತ್ತದೆ  ಸಾಯಲಿ.
ವಸಡಿನಲ್ಲಿ ರಕ್ತ, ಬಾವು.. ನೋವು.ನೋವು ಬರುವುದಾದರೂ  ವರ್ಣಿಸುವುದು ಸಾಮಾನ್ಯರಿಗೆ ಸಾಧ್ಯವಿಲ್ಲ.  ಆ ಬದಿಯ ತಲೆ, ಕುತ್ತಿಗೆ, ಮೈಕೈ ಎಲ್ಲಾ ಚುಳುಚುಳು  ನೋವು ಶುರುವಾಗಿ  ನೋವಿನ ಮೂಲ ಯಾವುದು ಎನ್ನುವುದೇ ಗೊತ್ತಾಗದು. ಅಂತೂ   ಹುಟ್ಟುಟ್ಟುತ್ತಲೇ  ದಂತವೈದ್ಯರಿಗೆ ದುಡ್ಡು ಮಾಡಿ ಕೊಡಲು ತಯಾರಾಗಿ ಬಿಡುತ್ತದೆ  ಕರ್ಮ.

ಆಹಾರವನ್ನು ಜಗಿಯಲು ಒಂದು ಚೂರೂ ಸಹಾಯ ಮಾಡದಿದ್ದರೂ ಸರಿ ಅದರ ಶೇಖರಣೆ  ಜವಾಬ್ಧಾರಿ ಮಾತ್ರಾ ತನ್ನದೇ ಎಂಬಂತೆ  ಅಲ್ಲಲ್ಲಿ ತೂತು.!ಒಳ್ಳೆ 'ಕೊಟ್ಟ'ದಂತೆ.
  ಹಿಂದೆ ಪ್ಲೇಗ್ ಮಾರಿ ಬಂದಾಗ ಊರಿಗೆ ಊರೇ ಗುಳೆ ಹೊರಡುವ ಸಮಯದಲ್ಲಿ ತಮ್ಮಲ್ಲಿರುವ ಪಾತ್ರೆ ಪರಡಿ ಅಕ್ಕಿ ಇನ್ನಿತರೇ ಸಾಮಾನುಗಳನ್ನು  ನೆಲದಲ್ಲಿ 'ಕೊಟ್ಟ'  ಮಾಡಿ  ಅದರಲ್ಲಿ ಭದ್ರವಾಗಿ ಮುಚ್ಚಿಡುತ್ತಿದ್ದರು.  ನೆಲದಲ್ಲಿ ಒಂದು ಎರಡ್ಮೂರು ಅಡಿ ಆಳ ತೋಡಿ ಅದನ್ನು ಬಳಿದು ಚಂದ ಮಾಡಿ ವಸ್ತುಗಳನ್ನು ಅದರಲ್ಲಿ ಇಟ್ಟು ಮುಚ್ಚುತ್ತಿದ್ದರಂತೆ. ಒಂತರಾ ದೊಡ್ಡ ಹಂಡೆಯಾಕಾರದಲ್ಲಿ ಇರುತ್ತಿತ್ತು ಈ ಕೊಟ್ಟ. ಬಳಿಕ ಪ್ಲೇಗಿನ ತೀವ್ರತೆ ಕಡಿಮೆಯಾದಾಗ ವಾಪಾಸು ಊರಿಗೆ ಮರಳಿ ತಮ್ಮ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರಂತೆ. ಸ್ವಲ್ಪವೂ ಹಾಳಾಗಿರುತ್ತಿರಲಿಲ್ಲವಂತೆ.

ಈ ಹಲ್ಲಿನಲ್ಲೂ ಹಾಗೆಯೇ ಆಹಾರ ಪದಾರ್ಥ ಸೇರಿಕೊಂಡರೂ  ಗಡಿಬಿಡಿಯಲ್ಲಿ ತೆಗೆದು ಬಿಸಾಕಬೇಕಾದ ಅನಿವಾರ್ಯತೆ.ಮತ್ಯಾವಾಗಾದ್ರೂ ಉಪಯೋಗಕ್ಕೆ ಅಂತ ಇಟ್ಟು ಕೊಳ್ಳುವ ಹಾಗಿಲ್ಲ.!
ನೀವು  ಯಾವ ಟೂತ್ಪೆಷ್ಟನ್ನೇ ಬೇಕಾದರೂ ಬಳಸಿ ..  ಯಾವ ಸೊಂಟ ಮುರಿದ ಬ್ರಷ್ಯನ್ನೇ ಬಳಸಿ.. ಆ ಹಲ್ಲಿನ ವರೆಗೆ  ಬ್ರಶ್ಶು ತಾಗುವುದೇ ಇಲ್ಲ.  ತಿಪ್ಪರಲಾಗ ಹಾಕಿದರೂ ಯಾವ ನಮೂನೆ ಸರ್ಕಸ್ ಮಾಡಿದರೂ  ಜ್ಞಾನ ದಂತವನ್ನು ಚಕ ಮಕ ಮಾಡಲು ಸಾಧ್ಯವೇ ಇಲ್ಲ..!ಎದುರಿನ ಹಲ್ಲಿನ ನಗುವನ್ನು ಕಂಡು ಯಾರೂ ಮೋಸ ಹೋಗ ಬೇಡಿ..!!
ಹಲ್ಲಿನ ತೊಂದರೆ ಮಲೆ ನಾಡಿಗರಲ್ಲಿ ಹೆಚ್ಚು .ಸಿಹಿ ತಿನ್ನುವುದೊಂದು ಕಾರಣ ವಾದರೆ ತಾಂಬೂಲ ಇನ್ನೊಂದು ಕಾರಣ. ನೋಡಿ ಬೇಕಾದರೆ , ಮಲೆನಾಡಿನ ಜನ ಬಾಯಿ ಬಿಟ್ಟು ಹಲ್ಲು ತೋರಿಸಿ ನಗುವುದೇ ಇಲ್ಲ. ಸಿಕ್ಕಾಪಟ್ಟೆ ನಗು ಬಂತೆಂದರೆ ಆಕಾಶಕ್ಕೆ ಮುಖ ಮಾಡುತ್ತಾರೆ!  ಹವಳದಂತಹಾ ಹಲ್ಲಿನವರು!

ಹ್ಞು,ಇರಲಿ  ಈ ಹಲ್ಲಿನ  ಸಹವಾಸವೇ ಬೇಡ ಎ೦ದು ಹಲ್ಲು ಕೀಳಿಸಲು ದಂತ ವೈದ್ಯರ ಬಳಿಗೆ ಹೊದರೂ ಅಲ್ಲೂ ಏನು ಸುಖವಾಗಿ ಹಲ್ಲು ಕೀಳುವುದಿಲ್ಲ..  ಅವರ ಶಸ್ತ್ರಾಸ್ತ್ರಗಳನ್ನು ನೋಡಿದರೆ ನನಗೆ ಅಂಜಿಕೆ.
ನಾನು ಕೆಲವು ವರ್ಷಗಳ ಹಿಂದೆ ಹಲ್ಲು ಕೀಳಿಸಲು ಮೊದಲ ಸಲ ಒಬ್ಬ ಲೇಡಿ ಡಾಕ್ಟ್ರ ಹತ್ರ ಹೋಗಿದ್ದೆ.   ಆ ಪುಣ್ಯಾತ್ಗಿತ್ತಿ ಸುಮಾರು ಅರ್ಧ ಗಂಟೆಗೂಡಿ ನನ್ನ ಹಲ್ಲು ಕಿತ್ತದ್ದು  ವರ್ಣನೆಗೆ ನಿಲುಕದ  ಇತಿಹಾಸ ...!!!..   ಬಾಯಿ ಹರಿದೇ ಹೋಗುವುದರಲ್ಲಿತ್ತು.! ಅಹಿಂಸಾ ವಾದಿಯೇನೋ ಎಂಬಂತೆ ಸಾಕಷ್ಟು ಹಿಂಸೆ ಮಾಡಿದಳಾ ತಾಯಿ.
ಆಮೇಲಾಮೇಲೆ   ನನಗೆ ಹಲ್ಲಿನ ಸುದ್ದಿಯೆತ್ತಿದರೆ ಎಚ್ಚರ ತಪ್ಪುವಂತೆ ಆಗುತ್ತಿತ್ತು.
ನಾನು ಬಿಟ್ಟರೂ ಹಲ್ಲು ಬಿಡದು.. ಹಲ್ಲಿನ ನೋವು ಬಿಡದು ಸ್ವಾಮಿ. ಯಾವ ನೋವು ಬಂದರೂ ಹಲ್ಲು ನೋವೊಂದು ಬರುವುದು ಬೇಡ  ಎನ್ನುವ ಗೋಳಾಟ..   ಮತ್ತೆ ಬೇರೆ ಕಡೆ  ನೋವು ಬಂದಾಗ ಪುನಃ 'ಈ ನೋವೊಂದು ಬಿಟ್ಟು ಯಾವ ನೋವಾದರೂ ಅನುಭವಿಸಿಯೇನು' ಎನ್ನುವ ಪ್ರಲಾಪ..!

ಮತ್ತೆ ಕೆಲ ದಿನಗಳ ನಂತರ  ಇನ್ನೊಂದು ಬದಿಯ  ಹಲ್ಲು ನೋವು ಶುರುವಾಯಿತು.. ಈ ಸಲ ಆ ಲೇಡಿ  ಡಾಕ್ಟ್ರ ಹತ್ತಿರ ಹೋಗಲಿಲ್ಲ, ಬೇರೊಬ್ಬ ಜಂಟಲ್ ಮ್ಯಾನ್  ಡಾಕ್ಟ್ರ  ಹತ್ತಿರ ಮುಖಕ್ಕೆ ಕೈ ಒತ್ತಿ ಹಿಡಿದು ಹೆದರುತ್ತಲೇ ಹೋದೆ. ಪರವಾಗಿಲ್ಲ ಇವರು..!

 ಮರಗಟ್ಟುವ ಇಂಜಕ್ಷನ್ ನೀಡಿ  ಕೆಲ  ನಿಮಿಷ ಆದ ಮೇಲೆ  ಬಾಯಿ ಕಳಸಿ ಹಲ್ಲನ್ನು ಅವರ ಚಿಮ್ಮಟಿಗೆಯಿಂದ ಅಲುಗಾಡಿಸಿದರು..'ಈಗ ಹಲ್ಲು ಕೀಳಲೇ? ' ಅಂದರು. ನಾನು ಬಾಯಿ ಕಳೆದು ಕೊಂಡೇ' ಊಂ,'ಅಂದೆ. 'ಕಿತ್ತಿದ್ದಾಯ್ತು.'ಎಂದು ನಕ್ಕರು ಡಾಕ್ಟ್ರು.   'ವಾವ್' ನನಗೆ ಆದ ಖುಷಿ ಎಷ್ಟೆಂದರೆ ಈಗಿಂದೀಗಲೇ  ಎಲ್ಲಾ ಹಲ್ಲುಗಳನ್ನೂ ಕೀಳಿಸಿ ಬಿಡೋಣ ಅನ್ನುವಷ್ಟು.! 
ಅಲ್ಲವೇ ಮತ್ತೆ..! ಅರ್ಧ ಗಂಟೆ ನಿರೀಕ್ಷೆಯಲ್ಲಿದ್ದವಳಿಗೆ ಅರ್ಧ ನಿಮಿಷದಲ್ಲಿ ಹಲ್ಲು ಕಿತ್ತಾಯ್ತು ಎಂದರೆ ಸಂತೋಷ ಆಗದಿರುತ್ತದೆಯೇ...? 

ಇದರಿಂದ ನನಗೆ ತಿಳಿದ ನೀತಿಯೆಂದರೆ 'ಹಲ್ಲುದುರಿಸುವ ಕಲೆ ಹೆಂಗಸರಿಗಿಂತ  ಗಂಡಸರಿಗೆ ಸಿದ್ಧಿಸಿರುತ್ತದೆ.' ಎನ್ನುವುದು...!




Sunday, March 27, 2011

''ಶ್ರೀಖಂಡ '' ಮಾಡುವ ಸುಲಭ ವಿಧಾನ..

ಶ್ರೀಖ೦ಡ ಮಾಡಲೂ ಸುಲಭ ವಿಧಾನವೇ..? ಎ೦ದು ನೀವು ಹುಬ್ಬೇರಿಸಬೇಡಿ.. 
ಮೊಸರನ್ನು ನೀರು ತೆಗೆದು ಗಟ್ಟಿ ಮಾಡಿ ಸಕ್ಕರೆ, ಏಲಕ್ಕಿ ಹಾಕಿ ಚೆನ್ನಾಗಿ ಅರೆದು ಗೋಡ೦ಬಿ, ದ್ರಾಕ್ಷೀ ಇತ್ಯಾದಿಗಳಿ೦ದ ಅಲ೦ಕರಿಸಿದರೆ ಮುಗಿಯಿತಪ್ಪಾ.. ಅದೇನು ಕಷ್ಟದ ಕೆಲಸವೇ..? ಸುಲಭ..   ಎ೦ದು ಯೋಚಿಸುತ್ತಿದ್ದೀರಾ..? 

ಇದರಲ್ಲಿ ಕಷ್ಟ ಎಂದರೆ  ಮೊಸರಿನ ನೀರು ತೆಗೆದು ಗಟ್ಟಿ ಮಾಡುವುದು.. ಮೊಸರನ್ನು ಬಟ್ಟೆಯಲ್ಲಿ ಕಟ್ಟಿ ನೀರು ಬಸಿಯಲು ನೇತುಹಾಕಲು ಮನೆಯೆಲ್ಲಾ ಓಡಾಡಿ ಜಾಗ ಹುಡುಕಬೇಕಾದ ಕಷ್ಟ ಸ್ವಲ್ಪವಲ್ಲ..

ಸುಲಭದ ವಿಧಾನವೊ೦ದಿದೆ .... ನೋಡಿ.

ಮೊದಲು ಮೊಸರನ್ನು ಸ್ವಚ್ಚವಾದ  ಬಟ್ಟೆಯೊ೦ದರಲ್ಲಿ ಹಾಕಿ ಅದನ್ನು ಗ೦ಟು ಕಟ್ಟಿ..
 ನ೦ತರ ಅದನ್ನು ಹಿಟ್ಟು ಸಾಣಿಸುವ ಸಾಣಿಗೆಯ ಮೇಲೆ ಇಟ್ಟು ಕೆಳಗೆ ಮೊಸರಿನ ನೀರು ಬೀಳಲು ಅನುಕೂಲವಾಗುವ೦ತೆ ಸಾಣಿಗೆಯ ಅಳತೆಯ ಪಾತ್ರೆಯೊ೦ದನ್ನು ಹೊ೦ದಿಸಿಡಿ.


 ನ೦ತರ ಅದನ್ನು ಪಾತ್ರೆಸಮೇತ ಫ್ರಿಜ್ಜಿನಲ್ಲಿಡಿ. [ಹುಳಿಯಾಗುವುದನ್ನು ತಪ್ಪಿಸಲು..] ಸುಮಾರು ಮೂರು ನಾಲ್ಕು ತಾಸು ಬಿಟ್ಟು ಹೊರತೆಗೆದು ಬಟ್ಟೆಯ ಗ೦ಟು ಬಿಚ್ಚಿ..



 ಅದನ್ನು ಬೌಲಿಗೆ ಹಾಕಿ ಸಕ್ಕರೆಯೊ೦ದಿಗೆ ಚನ್ನಾಗಿ ಅರೆದು ಏಲಕ್ಕಿ, ಲವ೦ಗದ ಪುಡಿ ಸೇರಿಸಿ, ಮತ್ತು ಒಣ ಹಣ್ಣುಗಳೊ೦ದಿಗೆ ಅಲ೦ಕರಿಸಿದರೆ  ತಣ್ಣನೆಯ  ಶ್ರೀಖ೦ಡ ಸವಿಯಲು ಸಿದ್ಧ..







 ಶ್ರೀಖ೦ಡ ಮಾಡಲು ಅಳತೆ -

* ಮೊಸರು  -  ಅರ್ಧ ಲೀಟರ್  [ ಫ್ರಿಜ್ಜಿ ನಲ್ಲಿಟ್ಟ ಮೊಸರಾದರೆ ನಿನ್ನೆಯ ಮೊಸರಾದರೂ ಆದೀತು.. ಹುಳಿ ಹೆಚ್ಚಿಗೆ ಇರದಿದ್ದರಾಯಿತು  ]
ಸಕ್ಕರೆ    - ಗಟ್ಟಿಯಾದ ಮೊಸರಿನ ಅಳತೆಯಷ್ಟೇ ಬೇಕು. ರುಚಿಗೆ ತಕ್ಕ೦ತೆ  ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು.
ಏಲಕ್ಕಿ, ಲವ೦ಗದ ಪುಡಿ[ಕೇಸರಿ ಬೇಕಿದ್ದರೆ ] -   ಸ್ವಲ್ಪ..
ಗೋಡ೦ಬಿ, ದ್ರಾಕ್ಷೀ.. ಇತ್ಯಾದಿ ಒಣ ಹಣ್ಣುಗಳು..  - ಯಥಾನ್ಶಕ್ತಿ...




ಮಾಡಿ ನೋಡಿ.. ಇನ್ನೂ ಸುಲಭದ ವಿಧಾನವಿದ್ದರೆ ನನಗೂ ಹೇಳಿ.

ವ೦ದನೆಗಳು.