Tuesday, December 28, 2010

ನನಗೂ ಜ್ಞಾನೋದಯ ಆಯ್ತು....!!!!

ನಾನು  ಹೋಳಿಗೆ ಮಾಡಿದೆ....!! 

ಇದೇನ್ಮಹಾ..? ಹೋಳಿಗೆ ಎಲ್ಲರೂ ಮಾಡ್ತಾರೆ.ನಾನೂ ಮಾಡ್ತೇನೆ.ನಮ್ಮಮ್ಮನೂ ಮಾಡ್ತಾರೆ... ಅಂತ ಅಂದುಕೊಳ್ತೀರೇನೋ ?


ಈ ಮೊದಲೂ ಹೋಳಿಗೆಯನ್ನು ನಾನು  ಮಾಡಿದ್ದೆ .ಬೇರೆ ತರದ ಅಡುಗೆಯನ್ನೂ ಮಾಡ್ತೇನೆ.  ಚೆನ್ನಾಗಿ  ಇರುತ್ತದೆ  ಎಂದು ತಿ೦ದವರು ಹೇಳುತ್ತಾರೆ....!  ಅಂದರೆ ಸಾಂಬಾರು ಸಾಂಬಾರಿನಂತೆಯೇ, ಉಪ್ಪಿನಕಾಯಿ ಉಪ್ಪಿನಕಾಯಿಯಂತೆ, ನೀರ್ಗೊಜ್ಜು  ಅದರಂತೆಯೇ,ಪಾಯಸವಾಗದ ಕೇಸರೀಬಾತೂ,  ಪಾನಕ ಬರೀ ನೀರಾಗದೆ ಪಾನಕವಾಗಿಯೇ ಇರುತ್ತದೆಂದು ಉಳಿದವರು ಹೇಳಿದ್ದು ಹೌದು. 
ನೀವು  ಮಾಡಿದ ಅಡುಗೆಯ ರುಚಿ   ನಿಮಗೆ  ಗೊತ್ತಾಗುವುದಿಲ್ಲವೇ...? ಮತ್ತೆ ಪ್ರಶ್ನೆ  ಕೇಳಬೇಡಿ. ನಮ್ಮ ಮುಖ ನೋಡಿಕೊಳ್ಳಲು ನಮಗೆ ಕನ್ನಡಿ ಬೇಕು.
  


 ಈ ಸಲ ಹೋಳಿಗೆ ಮಾಡಿದೆ ....!!  ಮಾಡ್ತಾ ಮಾಡ್ತಾ ಮೈಮರೆತು ಹೋದೆ.  ಕರೆಕ್ಟಾಗಿ ನಲವತ್ತೊಂಬತ್ತು ಹೋಳಿಗೆ ಆಯ್ತು.ಜೊತೆಗೆ  ನನಗೂ ಜ್ಞಾನೋದಯ ಆಯ್ತು....!!!!


ಹೌದು...ಹೌದಪ್ಪಾ... ಲೈಫು ಇಷ್ಟೇನೆ..!
ಯಾರೋ ಕಣಕದಲ್ಲಿ ಹೂರಣ ತುಂಬಿ ಬಾಳೆ ಎಲೆ ಮೇಲಿಡುವರು . ಮತ್ಯಾರೋ ಅದನ್ನು ಚಂದಕ್ಕೆ, ಮನ ಬಂದಂತೆ ಲಟ್ಟಿಸುವರು. ಇನ್ಯಾರೋ ಬಿಸಿಕಾವಲಿಯ ಮೇಲೆ ಹಾಕಿ ಕೌಚಿ ಮಗುಚಿ ಮಾಡುವರು.ಹದವಾಗಿ ಬೇಯಿಸಿದರೆ ಹೋಳಿಗೆ ಸವಿಯಲು ಸಿದ್ಧ.
ಇಷ್ಟೇ ಜೀವನ.ಈ ಜೀವನ ಎಷ್ಟೊಂದು ಸಿಹಿಯಲ್ಲವೇ..? ಎಷ್ಟೊಂದು ರುಚಿಯಲ್ಲವೇ..?

ಮತ್ತೇನು ಕಷ್ಟ ..? 
ಕಷ್ಟ ಹೋಳಿಗೆಯ ಕ್ವಾಲಿಟಿಯ ಮೇಲೆ ಇರುವುದು ..ಸೃಷ್ಟಿಕರ್ತರ ಚಾತುರ್ಯದ ಮೇಲಿರುವುದು.. ಅನ್ನಿಸ್ತಾ ಇದೆ.  ಪ್ರಶ್ನೆಗಳು  ಅನೇಕ.


ಎಲ್ಲರ ಮನೆ ಹೋಳಿಗೆಯ ಹೂರಣವೂ ಸಮನಾಗಿ ಸಿಹಿ ಇರುವುದೇ..?
ಕಣಕ ಹದ ಬಂದಿತ್ತೆ..?
ಹೂರಣ ಹೊರ ಬರದಂತೆ ಕಣಕದಿಂದ ಒಂದೇ ಸಮನಾಗಿ ತುಂಬಿದ್ದರೆ..?
 ಲಟ್ಟಿಸುವಾಗ ನುರಿತವರ ಕೈಗೆ ಸಿಕ್ಕಿತ್ತೇ..? ಲಟ್ಟಣಿಗೆಯಿಂದ ಲಟ್ಟಿಸುವಾಗ ಹೂರಣವೇನಾದರೂ ಕಣಕದಿಂದ ಹೊರ ಬಂದಿತ್ತೆ..? ಕಣಕ ಲಟ್ಟಣಿಗೆಗೆ  ಮೆತ್ತಿಕೊಂಡಿತ್ತೆ..? ಆಕಾರ ಸರಿಯಾಗಿತ್ತೋ ಅಥವಾ ಯಾವ ದೇಶದ್ದೋ ನಕ್ಷೆಯನ್ನು   ಹೋಲುತ್ತಿತ್ತೋ..? ಬಾಳೆ ಎಲೆಯಿ೦ದ ತೆಗೆದು ಕಾವಲಿಗೆ ಹಾಕುವಾಗಲೇನಾದರೂ ಹರಿದು ಹೋಯಿತಾ...? ಕಾವಲಿ ಸೌಟಿನಿಂದ  ಮಗುಚಿ ಹಾಕುವವರು  ಮೊದಲ ಪದರ ಸರಿಯಾಗಿ ಬೆ೦ದ ನಂತರ ಮಗುಚಿದರೋ ಇಲ್ಲವೋ..?ಕಾವಲಿಗೆ ಸರಿಯಾಗಿ ಎಣ್ಣೆ ಹಚ್ಚಿಕೊಂಡಿದ್ದರೋ ಇಲ್ಲವೋ...? ಹೋಳಿಗೆ ಹತ್ತಿತೆ..?ಹರಿಯಿತೆ..?ಗ್ಯಾಸ್ ಖಾಲಿಯಾಗಿ ಬೆಂಕಿ ಆರಿ ಅರೆ ಬೆಂದಿತೆ..? ಎರಡೂ ಮಗ್ಗುಲು ಬೆಂದ ನಂತರವಷ್ಟೇ ಹೋಳಿಗೆಯನ್ನು ನಿಧಾನಕ್ಕೆ ಮಡಚಿ  ತೆಗೆದು ಬಿಳಿ ಬಟ್ಟೆಯ ಮೇಲೆ ಹಾಕಬೇಕು..? ಪೇಪರಿನ ಮೇಲೆ ಹಾಕಿದರೆ ಹೋಳಿಗೆಗೆ   ಪೇಪರ್ ವಾಸನೆ  ಹಿಡಿದುಕೊಳ್ಳುತ್ತದೆ  ಎಚ್ಚರ ಮುಖ್ಯ. ಇದೆಲ್ಲಾ ಸರಿಯಾಗಿ ಅನುಸರಿಸಿದರೆ ಚಂದದ, ರುಚಿಯಾದ ಹೋಳಿಗೆ ಲಭ್ಯ. 


ಅರ್ಥ ಆಗ್ತಾ ಇದೆ.  ಹಾಗೇ ನಮ್ಮ ಬದುಕೂ ಅಲ್ಲವೇ..?  ಪ್ರಕೃತಿ ಮತ್ತು ಪೋಷಣೆ ಸರಿಯಾಗಿದ್ದಲ್ಲಿ,ಒಂದಕ್ಕೊಂದು ಪೂರಕವಾಗಿದ್ದಲ್ಲಿ  ಮಾತ್ರ ಚಂದದ ಜೀವನ ಸಾಧ್ಯ.. 
ಯಾರೋ ಕಣಕದಲ್ಲಿ  ತುಂಬಿದ ಹೂರಣದ ಉಂಡೆಯಂತೆ ಮಗುವೊಂದನ್ನು  ಈ ಪ್ರಪಂಚದ ಬಾಳೆ ಎಲೆ ಮೇಲೆ ತಂದಿಡುವರು. ಅವರೊಂದಿಗೆ  ಮತ್ಯಾರೋ ಇನ್ಯಾರೋ ಸಮಾಜದ ಜನರು ಲಟ್ಟಿಸಿ ಸಂಸ್ಕಾರ ಕೊಟ್ಟು  ನಮ್ಮದಾದೊಂದು  ರೂಪ ಕೊಡುವರು . ಅದರಂತೆ ಕಷ್ಟ ನಷ್ಟಗಳ  ಕಾವಲಿಯ ಮೇಲೆ  ಸುತ್ತಲಿನ ಜನ   ಕೌಚಿ ಮಗುಚಿ ಹಾಕಿ ನಮ್ಮ ತನವನ್ನು ಪರೀಕ್ಷಿಸುವರು. ಚಂದದ ಹೊಂಬಣ್ಣ  ನೋಡಿ ಹಿರಿ ಹಿರಿ ಹಿಗ್ಗುವರು. ಮತ್ಯಾರೋ ಹೊತ್ತಿಸಿಕೊಂಡು,  ಹರಿದುಕೊಂಡು ಸಹಿಸಲಾರದೆ ಕುಗ್ಗುವರು. ಇದೆಲ್ಲದರ ಒಟ್ಟುರೂಪ  ನಾವು, ನಮ್ಮ ಜೀವನ.


ಅತ್ಯುತ್ತಮ  ವಂಶವಾಹಿಗಳು ,  ಉತ್ತಮ ಸಂಸ್ಕಾರ, ಯೋಗ್ಯ ಪರಿಸರ ಇದ್ದಲ್ಲಿ, ಸಿಕ್ಕಲ್ಲಿ ಮಗುವೊಂದು ಉತ್ತಮ ಮಾನವನಾಗಿ ಬೆಳೆಯುವುದು.
ಯಾವುದಾದರೊಂದು ಕೊರತೆಯಿದ್ದಲ್ಲಿ ಕೆಲವಷ್ಟಕ್ಕೆ ಸೀಮಿತವಾಗುವುದು.......

ಹೀಗೆ....ನಮ್ಮದೇನಿಲ್ಲ. ಎಲ್ಲಾ ನೇಚರ್  ಎಂಡ್  ನರ್ಚರ್.


 ಹೋಳಿಗೆ ಮಾಡ್ತಾ ಮಾಡ್ತಾ ಮಾಡ್ತಾ....... ಜ್ಞಾನೋದಯವಾದದ್ದು ಹೀಗೆ....!!!


ನನ್ನ ಕೊರ್ತಾ ತಾಳಲಾರದೆ ನಿಮಗೀಗ ಮೂರ್ಚೆ ಬರುವಂತಾಗಿರಬಹುದೇ..?ಯೋಚಿಸುತ್ತಿದ್ದೇನೆ. ಮಾಡಿದ ಹೋಳಿಗೆ ಮಿಕ್ಕಿದೆ.ತಿಂದೂ, ನೋಡೀ  ಬಾಯಿ ಮನಸ್ಸು ಸಿಹಿ ಮಾಡಿಕೊಳ್ಳಿ.





ಬರಲಿರುವ ಹೊಸ ವರುಷ  ೨೦೧೧ ನಿಮಗೆಲ್ಲರಿಗೂ  ಶುಭ ತರಲಿ.

[ವಿ. ಸೂ. ಅಕ್ಷಯ ಬಟ್ಟಲಲ್ಲಿ ಇದ್ದದ್ದು ನಾಲ್ಕೇ ಹೋಳಿಗೆ. ಮೊದಲು ಬಂದವರಿಗೆ ಆಧ್ಯತೆ...:-))  ]

Monday, December 20, 2010

ಅಡಿಕೆ ಒಲೆಯ ಬೆಂಕಿಯ ನೆನಪಲ್ಲಿ.

ಈಗೊಂದೆರಡು ಮೂರು ದಿನದಿಂದ ಚಳಿ ಯಾವ ಪರಿ ಬಿದ್ದಿದೆಯೆಂದರೆ ಹಳೆ ನೋವುಗಳೆಲ್ಲ ಮರುಕಳಿಸಿ ಬಿಟ್ಟಿವೆ.ಚಿಕ್ಕವರಿರುವಾಗ ಆಡುವಾಗ, ಓಡುವಾಗ, ನಡೆಯುವಾಗ ಬಿದ್ದಿದ್ದರದ್ದು, ಜಪ್ಪಿಸಿಕೊಂಡಿದ್ದು, ಜಜ್ಜಿಕೊಂಡಿದ್ದು, ಇನ್ಜಕ್ಷನ್ನು ತಗೊಂಡಿದ್ದರದ್ದು ಎಲ್ಲದರ ನೋವೂ ಈ ಚಳಿಯಲ್ಲಿ ಹೊಸತಾಗಿ ಬಂದಂತೆ ನಗು ನಗುತ್ತಿದೆ. ಎಲ್ಲಾದರೂ ಹೊಡ್ಚಲು ಹಾಕಿಕೊಂಡು ಕೂರೋಣ ಅನ್ನಿಸುತ್ತಿರುವುದು ನೋವಿನ ವಿಶೇಷ.



    ಊರಲ್ಲಾಗಿದ್ದರೆ ಅಡಿಕೆ ಬೇಯಿಸುವ ಒಲೆ ಬುಡ ಬಿಡುವುದು ಬೇಡವಾಗಿತ್ತು.ಧಗ ಧಗ ಉರಿಯುವ ಬೆಂಕಿಯನ್ನು ನೋಡುತ್ತಾ , ಅದರ ಉರಿವ ಪರಿಗೆ ಬೆರಗಾಗುತ್ತಾ, ಕೊಳ್ಳಿ ನುರಿಯುತ್ತಾ,ಕುಂಟೆ ಸರಿಸುತ್ತಾ,  ಒಲೆ ಬುಡ ಕೆದಕುತ್ತ,  ಹಾಳೆ ಭಾಗ ಹಾಕುತ್ತಾ, ಅಡಿಕೆ ಬೇಯುವಾಗಿನ ತೊಗರಿನ ಕಂಪನ್ನು ಆಸ್ವಾದಿಸುತ್ತಾ  ಚಳಿ ಕಾಯಿಸ ಬಹುದಾಗಿತ್ತು.


ನನಗದೇ ನೆನಪಾಗುತ್ತಿದೆ.ಸಣ್ಣವರಿರುವಾಗ ನಾವು  ರಾತ್ರಿ  ಅಪ್ಪಯ್ಯ ಒಲೆ ಬೆಂಕಿ ಒಟ್ಟಿ ಅಡಿಕೆ ಬೇಯಿಸುವ ಹಂಡೆಯಲ್ಲಿ  ದೊಡ್ಡ ಜಾಲರಿ ಸೌಟಿನಿಂದ ಅಡಿಕೆಗಳನ್ನು ಕೌಚಿ ಮಗುಚಿ ಮಾಡುತ್ತಿದ್ದರೆ ನಾನು ನನ್ನಕ್ಕ ಅಂದಿನ ಶಾಲಾ ವಿಧ್ಯಮಾನಗಳನ್ನು  ಹಂಚಿಕೊಳ್ಳುತ್ತಾ ಚಳಿ ಕಾಯಿಸುತ್ತಿದ್ದೆವು.ಗೋಣೀ ಚೀಲವೋ, ಮೆಟ್ಟುಗತ್ತಿ ಮಣೆಯೋ ಯಾವುದಾದರೊಂದು ಸುಖಾಸನ.


ಮಲೆನಾಡಿನಲ್ಲಿ ಚಳಿ ಬಹಳ. ಆಗೆಲ್ಲಾ ಬೇಸಿಗೆಯಲ್ಲೂ ಒಂದು ಕಂಬಳಿ ಹೊದೆಯುವಷ್ಟು ಚಳಿ ಇರುತ್ತಿತ್ತು.  ಒಲೆ ಮುಂದೆ ನಮ್ಮಿಬ್ಬರ ಜೊತೆ ಒಂದು ಪಕ್ಕದಲ್ಲಿ ನಾಯಿ 'ಜೂಲ' ಮತ್ತು  ಇನ್ನೊಂದು ಪಕ್ಕದಲ್ಲಿ  ಬೆಕ್ಕು 'ಸಿದ್ದಿ' ಖಾಯಂ ಹಕ್ಕುದಾರರು. ಚಳಿಯಲ್ಲಿ ಅವಕ್ಕೆ ಜಗಳಕ್ಕಿಂತಲೂ ಒಲೆಯೇ ಮುಖ್ಯವಾಗಿತ್ತು.ಆಗಾಗ ಜೂಲ ಮಾತ್ರಾ ಕಿವಿ ನಿಗುರಿಸಿ  ಬೆಕ್ಕಿನ ಕಡೆ ಒಮ್ಮೆ ಮತ್ತು ನಮ್ಮ ಕಡೆ ಒಮ್ಮೆ ನೋಡುವ ಕೆಲಸ ಮಾಡುತ್ತಿತ್ತು. ಸಿದ್ದಿ ಮಾತ್ರಾ ರಾಣಿಯಂತೆ ನಮಗೊರಗಿ ಪವಡಿಸುತ್ತಿತ್ತು.  ಎಷ್ಟಾದರೂ ಜಾತಿ ವೈಷಮ್ಯ ಇದ್ದೇ ಇರುತ್ತದೆ. ತನ್ನ ಬುದ್ಧಿ ಗೊತ್ತಾಗಿ ಹೋಯಿತೇನೋ ಒಡತಿಯರಿಗೆ  ಎನ್ನುವಂತೆ ಜೂಲ ಆಗಾಗ  ಮುಖ ಹುಳ್ಳಗೆ ಬೇರೆ ಮಾಡುತ್ತಿತ್ತು. 


ಅಣ್ಣಂದಿರಿಗೆ ಸುಲಿದ ಅಡಿಕೆಯ ಸಿಪ್ಪೆಗಳನ್ನು ಒಗೆಯುವ ಕೆಲಸ ಮತ್ತು ರಾತ್ರಿ ಪಾಳಿಯ ಅಡಿಕೆ ಸುಲಿಯುವವರಿಗೆ ಹಸಿ ಅಡಿಕೆ ರಾಶಿ ಮಾಡುವ ಕೆಲಸ. ಅವಿಷ್ಟು ಮಾಡಿ ಅವರೂ 'ಸರ್ಕಳ್ರೆ' ಎನ್ನುತ್ತಾ ನಮ್ಮ ಜೊತೆಗೂಡುತ್ತಿದ್ದರು. ಆ ಬೆಂಕಿಗೆ ಮುಖ ವೋಡ್ಡಿದರೂ ಬೆನ್ನಿಗೆ ಚಳಿ ಬಿಡದು. ಮತ್ತೆ ಸ್ವಲ್ಪ ಹೊತ್ತು ಬಿಟ್ಟು ಬೆನ್ನು ಕಾಯಿಸಿಕೊಳ್ಳುವುದು.ಮುಂಬಾಗ ಸೆಖೆ, ಬೆನ್ನಿಗೆ ಚಳಿ. ಸ್ವೆಟರ್ ಬೇರೆ ಇರುತ್ತಿತ್ತು.  ಅಪ್ಪಯ್ಯ ಮಾತ್ರಾ ಬನೀನನ್ನೂ ಹಾಕಿಕೊಳ್ಳದೆ ಹೆಗಲ ಮೇಲೆ ಟವೆಲ್ ಮಾತ್ರಾ ಹಾಕಿಕೊಂಡು  ಬರಿ ಮೈಯಲ್ಲೇ ಅಡಿಕೆ ಬೇಯಿಸುವ ಕೆಲಸ ಮಾಡುತ್ತಿದ್ದ.''ಚಳಿ ಆಗ್ತಲ್ಯನ ಅಪ್ಯ '' ಅಂದರೆ,''ಕೆಲಸ ಮಾಡ್ತಾ ಇದ್ರೆ ಚಳಿಯೆಲ್ಲಾ ನೆಗ್ದು ಬಿದ್ ಹೋಗ್ತು , ಪುಟ್ಟ ಪುಟ್ಟ ಕೈಯಲ್ಲಿ ನಿನ್ಗನೂ ಕೆಲಸ ಮಾಡಿದ್ರೆ  ಚಳಿ ಹತ್ರನೂ ಸುಳೀತಲ್ಲೇ'' ಎನ್ನುತ್ತಿದ್ದುದು ಈಗ ನೆನಪಿನಲ್ಲಿ ಸುಳಿಯುತ್ತಿದೆ. 

'ಬೆಂಕಿ ನೆಗ್ಯಾಡ್ತಾ ಇದ್ದು ನೋಡು' ಎಂದು ನನ್ನ ಎರಡನೇ ಅಣ್ಣ ತೋರಿಸುತ್ತಿದ್ದ. ದೊಡ್ಡ ದೊಡ್ಡ ಕುಂಟೆಯ ಇದ್ದಿಲಾದ ಭಾಗದಲ್ಲಿ ಕೆಲವೊಮ್ಮೆ ಹೊಳೆಯುವ ಮಣಿಗಳ ಸಾಲಿನಂತೆ ಕೆಂಡ ಉರಿಯುತ್ತಿತ್ತು. ಅದನ್ನು ನನಗೆ ವರ್ಣಿಸಲು ಕಷ್ಟವಾಗುತ್ತಿದೆ.ಅದನ್ನು  ನೋಡುತ್ತಿದ್ದರೆ  ಬೆಂಕಿ ನಕ್ಕಂತೆ ಭಾಸವಾಗುತ್ತಿತ್ತು.!


ಕೆಲವೊಮ್ಮೆ ಯಾರ ಮನೆಯಲ್ಲಾದರೂ ಮುಂಚೆಯೇ  ಆಲೆ ಮನೆ  ಶುರು ಆದರೆ ಕಬ್ಬು ತಂದು ಕೊಡುತ್ತಿದ್ದರು.ಕಬ್ಬುಸಿಗಿದು ತಿನ್ನುವ ಕೆಲಸವೂ ಒಲೆ ಮುಂದಿನ ಅಧ್ಯಾಯದಲ್ಲಿ ಸೇರಿಕೊಳ್ಳುತ್ತಿತ್ತು. ನನಗೆ ಕಬ್ಬು ತುಂಬಾ ಇಷ್ಟ. 'ಒಂದು ಹಲ್ಲು ಇರುವ ವರೆಗೂ ಕಬ್ಬು ತಿನ್ನುತ್ತೇನೆ ' ಎಂದು  ನಾನಾದರೂ ಆಗ ಘನಘೋರ  ಪ್ರತಿಜ್ಞೆಯನ್ನೇ  ಮಾಡಿದ್ದೆ. ಈಗ ಪ್ರತಿಜ್ಞೆಯನ್ನು  ಮುರಿದಿದ್ದೇನೆ.....!!


ಈಗ ಸ್ವೆಟರ್ ಹಾಕಿಕೊಂಡು   ಗಣಕ ಯಂತ್ರದ ಕೀಲಿ ಮಣೆಯ ಮೇಲೆ ಕುಟ್ಟುತ್ತಿದ್ದರೆ ಏಳುವುದಕ್ಕೆ ಮನಸ್ಸು ಬಾರದು. ಚಳಿ ಅಷ್ಟಿದೆ. ಚಳಿ ದೇಶದವರೆಲ್ಲ ಹೇಗಿರುತ್ತಾರಪ್ಪ...?  ಅಕ್ಷರ ದೋಷವಾಗಿದ್ದರೆ ನೀವೇ ಸರಿ ಮಾಡಿಕೊಳ್ಳಿ.  ಸರಿ ಮಾಡಲೂ ಚಳಿ.....! ನಾನು ಅಡಿಕೆ ಒಲೆಯ ಬೆಂಕಿ ಕಾಯಿಸುವ  ಕನಸು ಕಾಣುತ್ತಾ ಮನಸನ್ನು ಬೆಚ್ಚಗೆ ಮಾಡಿಕೊಳ್ಳುತ್ತೇನೆ.

Friday, December 17, 2010

ಇವುಗಳನ್ನೆಲ್ಲಾ ನೀವು ಎಲ್ಲಾದರೂ ನೋಡಿದ್ದೀರಾ..?

ಗಿಡಕ್ಕಷ್ಟು ನೀರ್ ಹಾಕಿ ಬತ್ತೆ.. ನೀವ್ ಅಲ್ಲಿ ಕೂಕಣಿ..

ದೈತ್ಯ ಚೇಳು ನೋಡಿದ್ರೆ ಭಯ ಆಗುತ್ತೆ.



 ಇವರು ಆದಿಮಾನವರು   ನಾಡಿಗೆ ಬಂದಿದ್ದಾರೆ ..ನಾಗರೀಕರಾಗಲು......!!!



ಹಾವಾಡಿಸುವವ ಹಾವನ್ನು ಮರೆತು ಇಲ್ಲೇ ಬಿಟ್ಟು ಹೋಗಿದ್ದಾನೆ...    ಬುಸ್ಸ್.....!!


 ಅಲ್ಲ ಮಾರ್ರೆ ... ಅಡಿಕಿತ್ತು  ಎಲಿಯಿಲ್ಲ..ಎಂತ ಮಾಡುದ್ ಹೇಳಿ ...



ಇವ್ರು ಹುಬ್ಬಳ್ಳಿ ಯಜಮಾನ್ರು ......   

ಇವುಗಳೆಲ್ಲಾ  ಕೊಡಚಾದ್ರಿ ತಪ್ಪಲಿನಲ್ಲಿರುವ ಸಿಂಹ ರೆಸಾರ್ಟ್ ನಲ್ಲಿ ನಿರ್ಮಿಸಲಾದ ಸಿಮೆಂಟಿನ ಶಿಲ್ಪಗಳು.ಕೊನೆಯ ಫೋಟೋದಲ್ಲಿ ನೇರಳೆ ಜುಬ್ಬದ ಆಸಾಮಿ ಮಾತ್ರ ಶಿಲ್ಪ.....!!!!

ವಂದನೆಗಳು.

Sunday, December 12, 2010

ಮನಸ್ಸು ಇಲ್ಲದ ಮಾರ್ಗ.

ಇದೊಂದು ಮನಶ್ಯಾಸ್ತ್ರಕ್ಕೆ ಸಂಬಂಧಪಟ್ಟ ಪುಸ್ತಕ.  ಡಾ.ಮೀನಗುಂಡಿ ಸುಬ್ರಹ್ಮಣ್ಯ ಅವರ ಕೃತಿ.


ಸೈಕಾಲಜಿಸ್ಟ್ ಏನೋ ಮಾಡಿ ತಮ್ಮ ''ಮನಸ್ಸನ್ನು '' ಸರಿ ಮಾಡಿ ಬಿಡುತ್ತಾನೆ.ಬದಲಾಯಿಸುತ್ತಾನೆ. ಇದರಿಂದಾಗಿ ತಮ್ಮ ''ಮನಸ್ಸಿನಲ್ಲಿ''ಮತ್ತು ದೇಹದಲ್ಲಾಗುವ ನಕಾರಾತ್ಮಕ ಅನುಭವಗಳು ನಿಲ್ಲುತ್ತವೆ ಎಂಬ ನಿರೀಕ್ಷೆ ಇಟ್ಟುಕೊಂಡು ಅವರ ಬಳಿ ಹೋದ ಮಾನಸಿಕ ಸಮಸ್ಯಾ ವ್ಯಕ್ತಿಗಳಿಗೆ ಅವರು ತೋರಿಸಿದ ''ಮನಸ್ಸು'' ಇಲ್ಲದ ಮಾರ್ಗದ  ಬಗೆಗೆ ಬರೆದ ಪುಸ್ತಕದ ಕುರಿತು ನಿಮ್ಮಲ್ಲೊಂದಿಷ್ಟು ಹೇಳಿಕೊಳ್ಳೋಣ ಅಂತ ...


 ಈ ಪುಸ್ತಕದಲ್ಲಿ   ಸ್ವತಹ ಸೈಕೊಥೆರಪಿಷ್ಟರಾದ ಲೇಖಕರು     ಮನುಷ್ಯನ ಮಾನಸಿಕ ಸ್ಥಿತಿ, ಕಾರಣಗಳು, ಲಕ್ಷಣಗಳು, ಅದರ ಅವ್ಯವಸ್ತೆ, ಅದು ಮುಂದುವರೆಯುವ ರೀತಿ, ಪರಿಣಾಮ [ ಅವರ ಮೇಲೆ ಮತ್ತು ಸಾಮಾಜಿಕವಾಗಿ] ಇವುಗಳನ್ನು ಸೂಕ್ತವಾಗಿ ವಿವರಿಸುತ್ತಾ ಸಮರ್ಪಕವಾದ ಉದಾಹರಣೆಗಳೊಂದಿಗೆ ಸಾಮಾನ್ಯರಿಗೂ ಅರ್ಥವಾಗುವಂತೆ ತುಂಬಾ ಸರಳವಾಗಿ ವಿಶ್ಲೇಷಿಸಿದ್ದಾರೆ.


ಮನೋರೋಗ ಎಂದರೇನು ? ಅವುಗಳ ಬಗೆಗಳು, ಮನೋರೋಗದ ಬಗೆಗೆ ಜನರ ಪೂರ್ವಾಗ್ರಹಗಳೂ, ಮನೋ ಚಿಕಿತ್ಸಕರ ಬಗೆಗೆ ಸಾಮಾನ್ಯರ ಅಭಿಪ್ರಾಯಗಳೂ, ಮನೋಚಿಕಿತ್ಸಕರ ಜವಾಬ್ಧಾರಿ ಇವುಗಳ ಕುರಿತಾಗಿ ಆಕರ್ಷಕವಾಗಿ ಹಾಸ್ಯಭರಿತವಾಗಿ ವಿವರಿಸಿದ್ದಾರೆ.


ಉದಾಹರಣೆಗಳೊಂದಿಗೆ ಅವುಗಳನ್ನು' ಹ್ಯಾಂಡಲ್ ' ಮಾಡಿದ ರೀತಿಯನ್ನು ಓದುತ್ತಿದ್ದರೆ ವೈಜ್ಞಾನಿಕ ಕಾದಂಬರಿಯೊಂದನ್ನು ಓದುತ್ತಿರುವ ಅನುಭವವಾಗುತ್ತದೆ. ಸೈಕೋ ಥೆರಪಿಸ್ಟ್ ಗೆ  ಇರಬೇಕಾದ ಸಮಯಪ್ರಜ್ಞೆಯನ್ನು ಸೂಕ್ಷ್ಮವಾಗಿ ತೋರಿಸುತ್ತಾರೆ.


ಈ ಮನಶ್ಯಾಸ್ತ್ರದ ಸಂಬಂಧವಾಗಿ ಕೆಲಸಮಾಡಿದ ಅನೇಕ ಜನ ಮನಶ್ಯಾಸ್ತ್ರಜ್ನರನ್ನು ಪರಿಚಯಿಸಿದ್ದಾರೆ. ಕೆಲವು  ಮನೋಚಿಕಿತ್ಸೆಯ ವಿಧಾನಗಳನ್ನೂ   ಪರಿಚಯಿಸಿದ್ದಾರೆ.
ಟ್ರಾನ್ಸಾಕ್ಷನಲ್ ಅನಾಲಿಸಿಸ್ [ ಸಂವಾದ  ವಿಶ್ಲೇಷಣೆ ]  ಮತ್ತು  ಅದರ ಕರ್ತೃ  ಎರಿಕ್ ಬರ್ನ್ ಬಗೆಗೆ, ಗೆಸ್ಟಾಲ್ಟ್ ಥಿಯರಿಯ ಬಗೆಗೆ, ಅವುಗಳನ್ನು  ಮನೋಚಿಕಿತ್ಸೆಯಲ್ಲಿ  ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಸರಳವಾಗಿ ಹೇಳಲಾಗಿದೆ. ಮನುಷ್ಯರಾಡುವ  ಆಟಗಳು, ಈಗೋ ಸ್ಟೇಟ್ ಗಳ ಬಳಸುವಿಕೆ ಇವುಗಳನ್ನು ಓದುತ್ತಾ ಹೋದಂತೆ ನಮ್ಮಲ್ಲೇ ನಾವು ಅನೇಕ ವಿಚಾರಗಳನ್ನು, ಬದಲಾವಣೆಗಳನ್ನೂ   ಗುರುತಿಸಿಕೊಳ್ಳಬಹುದಾಗಿದೆ.


ಪೂರಕ, ಮಾರಕ ಮತ್ತು ಅವ್ಯಕ್ತ ಸಂವಾದಗಳನ್ನು ನಾವು ಹೇಗೆ ನಡೆಸುತ್ತೇವೆ..?  ನಮ್ಮ ಅವಶ್ಯಕತೆಗಳೇನು? ಸಿಹಿ ಘಾತ, ಕಹಿಘಾತ ಇವುಗಳನ್ನು ಹೇಗೆ ಪಡೆಯುತ್ತೇವೆ? ನಾವು ಹೇಗೆ ಕಾರಣಗಳನ್ನು ಹುಡುಕುತ್ತಿರುತ್ತೇವೆ.? ಹೇಗೆ ಜವಾಬ್ಧಾರಿಯನ್ನು'' ಮನಸ್ಸಿನ'' ಮೇಲೆ ಹಾಕುತ್ತೇವೆ. ? ಹೇಗೆ ಬದಲಾಗುವುದನ್ನು ತಪ್ಪಿಸಿಕೊಳ್ಳುತ್ತೇವೆ? ನಮ್ಮ ಮನೋವ್ಯಾಪಾರವೇನು?  ಮನಸ್ಸಿನ ಹರಿಕಥೆಯೇನು?ಈ ರೀತಿಯ ಅನೇಕ ಪ್ರಶ್ನೆಗಳಿಗೆ ನಮಗಿಲ್ಲಿ ಉತ್ತರ ದೊರಕುತ್ತದೆ.


''ಮನಸ್ಸು'' ಬದಲಾಗಲು ಸಾಧ್ಯವಿದೆ ಎಂದಾದರೆ ನಮ್ಮ ''ಮನಸ್ಸನ್ನು'' ಯಾರು ಬದಲಾಯಿಸಬೇಕು? ನಾವೆಯೇ ಅಥವಾ ಥೆರಪಿಷ್ಟರೆ ?


ಎಂದು ಪ್ರಶ್ನಿಸುವ ಲೇಖಕರು ಉತ್ತರವನ್ನು  ನಮ್ಮಿಂದಲೇ ಪಡೆಯುತ್ತಾರೆ.  ಯಾವುದನ್ನೂ ಒಪ್ಪಲೇ ಬೇಕೆನ್ನುವ ನಿಭಂಧನೆ ಇಲ್ಲ. ಅದನ್ನೂ ತಮ್ಮ ಥೆರಪಿಯಲ್ಲಿ ವಿವರಿಸುತ್ತಾರೆ.


ತುಂಬಾ ಸುಂದರವಾದ, ಉತ್ಕೃಷ್ಟವಾದ, ಸಂಪತ್ಭರಿತವಾದ ಪುಸ್ತಕವಿದು. ಈ ಪುಸ್ತಕ ನನಗೆ ಎಷ್ಟು  ಉತ್ತೇಜನ ಕೊಟ್ಟಿತೆಂದರೆ ಬಿಎಸ್ಸಿ ಯಲ್ಲಿ  ಪಿ. ಸಿ. ಎಂ. ಓದಿದ ನನಗೆ ಸ್ನಾತಕೋತ್ತರ ಅಭ್ಯಾಸಕ್ಕೆ ಮನಶ್ಯಾಸ್ತ್ರವನ್ನೇ ಆಯ್ದುಕೊಳ್ಳುವಂತೆ ಮಾಡಿತು. ಮನಸ್ಸಿನ ಮತ್ತಷ್ಟು ಮನೋವ್ಯಾಪಾರವನ್ನು ತಿಳಿಯಬೇಕೆನ್ನುವ ಹಂಬಲ ಹುಟ್ಟಿಸಿತು.


ಆಸಕ್ತರು ಖಂಡಿತಾ''ಮನಸ್ಸು ಇಲ್ಲದ ಮಾರ್ಗ '' ಓದಿ. ಆ ಬಗ್ಗೆ ''ಮನಸ್ಸು'' ಮಾಡಿ....!! ಇಂತಹಾ ಅತ್ಯುತ್ತಮ ಕೃತಿಯನ್ನು ಕನ್ನಡಕ್ಕೆ ಕೊಟ್ಟ ಮೀನಗುಂಡಿ ಸುಬ್ರಹ್ಮಣ್ಯ ಅವರಿಗೆ ನನ್ನ ಅನಂತಾನಂತ ವಂದನೆಗಳು.

Monday, December 6, 2010

ಇಚ್ಚಿತ್ತ [schizophrenia]

ಸೋಮು  ಒಕ್ಕಾಲಿನಲ್ಲಿ  ಬಿಸಿಲಿನಲ್ಲಿ ನಿಂತಿದ್ದ. ''ಎಲ್ಲರೂ ನನ್ನ ಆಲೋಚನೆಗಳನ್ನು   ಕದಿಯುತ್ತಿದ್ದಾರೆ. ಪೇಪರ್ ನಲ್ಲೆಲ್ಲಾ ನನ್ನ ಸುದ್ದಿಯನ್ನೇ ಬರೆದಿದ್ದಾರೆ.ನೋಡು ಟೀವಿ ಯವರೆಲ್ಲಾ ನನ್ನ ವಿಷಯವನ್ನೇ ಒದರುತ್ತಿದ್ದಾರೆ. ನನ್ನ ಆಲೋಚನೆಗಳನ್ನೆಲ್ಲಾ ಯಾರೋ ಕಂಟ್ರೋಲ್ ಮಾಡ್ತಾ ಇದ್ದಾರೆ.  ಅವರನ್ನು ಆಚೆ ಕಳಿಸು.'' ಪದೇ ಪದೇ ಇದೇ ತರದ ಮಾತುಗಳನ್ನಾಡುತ್ತ ಮನೆಯಲ್ಲಿದ್ದವರ  ತಲೆ ತಿಂದಿದ್ದ. 

ಇದು 'ಇಚ್ಚಿತ್ತದ' ಲಕ್ಷಣ.  
ನಾವೆಲ್ಲಾ ಸಾಮಾನ್ಯವಾಗಿ ಈ ತರದ ವ್ಯಕ್ತಿಗಳಿಗೆ' ಹುಚ್ಚು ಹಿಡಿದಿದೆ ' ಎಂಬುದಾಗಿ ಒಂದೇ ಮಾತಿನಲ್ಲಿ ಹೇಳಿಬಿಡುತ್ತೇವೆ.

ಸ್ಚಿಜೋಫ್ರೆನಿಯ   ಅಥವಾ ಇಚ್ಚಿತ್ತ   
ಇದೊಂದು ಸಾಮಾನ್ಯವಾಗಿ ಗುರುತಿಸಬಹುದಾದ ಮಾನಸಿಕ ಖಾಯಿಲೆ.......      ಇದನ್ನು     'ಒಡೆದ ಮನ ' ಎಂದು ವರ್ಣಿಸಬಹುದು.  ಗ್ರಹಿಕೆ, ಆಲೋಚನೆ ಮತ್ತು ಭಾವನೆಗಳಲ್ಲಿ ಅಸ್ತವ್ಯಸ್ತ ವಾಗುವುದು,   ಒಂದಕ್ಕೊಂದು ಸಂಬಂಧವಿಲ್ಲದಿರುವುದು  ಇದರ  ಮುಖ್ಯ ಲಕ್ಷಣ.

 ಇಚ್ಚಿತ್ತದ ನಡವಳಿಕೆಯ  ಸಾಮಾನ್ಯ ಚಿನ್ಹೆಗಳು ಹೀಗಿವೆ.
*  ಅತಿಯಾದ ನಡವಳಿಕೆಗಳು... ಉದಾ .. ಹೆಚ್ಚೆಚ್ಚು ಮಾತು, ನಗು,  ಬೈಗುಳ. ಹಿಂಸಾವೃತ್ತಿ, ಉದ್ದೇಶವಿಲ್ಲದೆ  ಮಾಡಿದ್ದನ್ನೇ ಮಾಡುವುದು.

*   ಖಿನ್ನತೆಯಿ೦ದ ಕುಳಿತಿರುವುದು.ಸ್ವಂತದ ಮತ್ತು ಸುತ್ತಲಿನ  ಸ್ವಚ್ಚತೆಯ ಕಡೆ ಗಮನವಿಲ್ಲದಿರುವುದು.

*  ಅಸ್ತವ್ಯಸ್ತ  ಸ್ಥಿತಿಯಲ್ಲಿ ಘಂಟೆಗಟ್ಟಲೆ, ಕೆಲವೊಮ್ಮೆ ದಿನಗಟ್ಟಲೆ ಇರುವರು. ಉದಾ - ಒಂದೇ ಕಾಲಿನಲ್ಲಿ ನಿಂತುಕೊಂಡಿರುವುದು.ಸೂರ್ಯನ ಕಿರಣಗಳು ಕಣ್ಣು ಕುಕ್ಕುತ್ತಿದ್ದರೂ ಅವನೆಡೆಗೆ ದೃಷ್ಟಿಯಿಟ್ಟು ನೋಡುವುದೂ ...

*   ಋಣಾತ್ಮಕ ನಡವಳಿಕೆಗಳು. ಉದಾ ಕೈ ತೋರಿಸು ಎಂದರೆ ತೋರಿಸೊಲ್ಲ ಎಂದು ಕೈ ಬಚ್ಚಿಟ್ಟು ಕೊಳ್ಳುವುದು. ಬಾಯಿ ತೆರೆ ಎಂದರೆ ಬಾಯಿ ಬಿಗಿ ಹಿಡಿದು ಮುಚ್ಚಿಕೊಳ್ಳುವುದು.

*ಕೆಲವೊಮ್ಮೆ ಅನಪೇಕ್ಷಿತ ವಿಧೇಯತೆ. ಎಷ್ಟು ಹೊಡೆದರೂ ಹೊಡೆಸಿಕೊಳ್ಳುವುದು, ಹೇಳಿದಂತೆ ಮಾಡುವುದೂ, ಸೂಜಿಯಿಂದ ನಾಲಿಗೆಯನ್ನು ಚುಚ್ಚುತ್ತೆನೆಂದರೂ... ಸರಿ ಎಂದು ನಾಲಿಗೆಯನ್ನು ಹೊರಚಾಚುವರು.ಚುಚ್ಚಿದರೂ ನಾಲಿಗೆಯನ್ನು ಒಳಗೆಳೆದು ಕೊಳ್ಳಲಾರರು.

*ಬೇರೆಯವರು  ಆಡಿದ್ದನ್ನೇ ಪ್ರತಿದ್ವನಿ ಮಾಡುವುದು. ಬೇರೆಯವರ ಭಂಗಿಗಳನ್ನು ಅನುಕರಿಸುವುದು.

*  ಕೆಲವೇ ಪದಗಳನ್ನು ಮಾತನಾಡಿಕೊಳ್ಳುತ್ತಿರುವುದು.ಪುನರಾವರ್ತನೆ. ಹೊಂದಾಣಿಕೆ ಯಿಲ್ಲದ ಮಾತುಗಳು.

*  ಆಲೋಚನಾ ಗತಿಯಲ್ಲಿ ತಡೆಯಾಗುವುದು. [thought block]

*   ಆಲೋಚನಾ ವಿಷಯದಲ್ಲಿನ ಅಸಮಂಜಸತೆ ....

*   ಭ್ರಮೆ..  
 ಇದು ಸಾಮಾನ್ಯವಾಗಿ ಹೆಚ್ಚಿನ ಸ್ಚಿಜೊಪ್ರೆನಿಕ್  ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುವ ಲಕ್ಷಣ.  ಯಾರೋ ಆಲೋಚನೆಗಳನ್ನು ಕದಿಯುತ್ತಿದ್ದಾರೆನ್ನುವುದೂ, ಆಲೋಚಿಸುವುದನ್ನು ತಡೆಯುತ್ತಿದ್ದಾರೆನ್ನುವುದೂ, ದೂರದರ್ಶನದಲ್ಲಿ ಪ್ರಸಾರ ಮಾಡುತ್ತಿದ್ದಾರೆನ್ನುವುದೂ,  ಆಗದವರ್ಯಾರೋ ತನ್ನನ್ನು ಕೊಲ್ಲಲು ಬಯಸಿದ್ದಾರೆನ್ನುವುದೂ, ಯಾರೋ ಪಿತೂರಿ ಮಾಡುತ್ತಿದ್ದಾರೆನ್ನುವುದೂ , ಕಿವಿಯಲ್ಲಿ, ತಲೆಯಲ್ಲಿ, ಎದೆಯಲ್ಲಿ ಅಥವಾ ಹೊಟ್ಟೆಯಲ್ಲಿ  ಯಾರೋ ಇಬ್ಬರು ತನ್ನ ಬಗ್ಗೆ ಮಾತಾಡುತ್ತಾರೆನ್ನುವುದೂ.. ಇವರ ದೂರುಗಳಾಗಿರುತ್ತವೆ. ಸಂಶಯ ಪ್ರವೃತ್ತಿ ಹೆಚ್ಚು. ಸಂಗಾತಿಯ ನೈತಿಕತೆಯ ಬಗ್ಗೆ ಸಂಶಯ.
ರುಚಿ , ವಾಸನೆ, ದೃಷ್ಟಿ ಇವುಗಳಿಗೆ ಸಂಬಂಧ ಪಟ್ಟ ಭ್ರಮೆಗಳಿಗಿಂತಲೂ ಶ್ರವಣೆ೦ದ್ರಿಯಕ್ಕೆ ಸಂಬಂಧಿಸಿದ ಭ್ರಮೆಗಳು ಹೆಚ್ಚು.

*  ಭೌದ್ಧಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ ಅಸಮರ್ಪಕ ಹೊಂದಾಣಿಕೆ , ತನ್ನನ್ನೇ ಮರೆಯುವುದು..

* ನಿದ್ರಾಹೀನತೆ, ಜಡತೆ, ನೋವುಗಳು,  ಆಹಾರ ಸೇವನೆಯಲ್ಲಿ ಅಲಕ್ಷ್ಯ. 


ಇಚ್ಚಿತ್ತಕ್ಕೆ ಮುಖ್ಯ ಕಾರಣಗಳೆಂದರೆ,


*ಅತಿಯಾದ ಡೋಪಮೈನ್ ಎನ್ನುವ ನರಚೋದಕದ ಸ್ರವಿಸುವಿಕೆ,
* ಆನುವಂಶಿಕತೆ,
*ನರವ್ಯೂಹಗಳಲ್ಲಿನ ತೊಂದರೆ, ಮೆದುಳಿಗೆ ಪೆಟ್ಟು ಬಿದ್ದಿರುವುದು..ಇತ್ಯಾದಿ 

ಹದಿಹರೆಯದಲ್ಲಿ ಹೆಚ್ಚಾಗಿ ಇದು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಬಾಲ್ಯದಲ್ಲಿಯೂ, ವ್ರುದ್ದಾಪ್ಯದಲ್ಲಿಯೂ ಕಾಣಿಸಿಕೊಳ್ಳಬಹುದು.
 ಇದರಲ್ಲಿ ಅನೇಕ ವಿಧಗಳಿವೆ.
  ಇದರ ನಿವಾರಣೆಗೆ  ಔಷಧಗಳೇ ಬೇಕು. ಒಂದು ತಹಬದಿಗೆ ಬರಲು  ಆಸ್ಪತ್ರೆ ವಾಸವೂ ಬೇಕಾಗುತ್ತದೆ. 


 ಈ ರೋಗಿಗಳ ಬಗ್ಗೆ ಸಾಮಾಜಿಕ ಕಾಳಜಿ ಅತ್ಯಗತ್ಯ. ಹುಚ್ಚರೆಂದು ಕಲ್ಲು ಎಸೆಯುವುದು,  ಅವರನ್ನು ಕಟ್ಟಿ ಹಾಕುವುದೂ, ಥಳಿಸುವುದೂ ಖಂಡಿತಾ ಮಾಡಬಾರದು. ಆ ಸ್ತಿತಿಯಲ್ಲಿ ಅವರೊಬ್ಬ ವ್ಯಕ್ತಿಯಾಗಿರುವುದಿಲ್ಲ. ತಮ್ಮ ಬಗ್ಗೆ ಏನೇನೂ ಅರಿವಿರುವುದಿಲ್ಲ.ಸಮಾಜದ    ಸಹನೆ ಬೇಕು. ಕುಟುಂಬದವರ ಆರೈಕೆ, ಸಹಾಯ ,  ಸಾಂತ್ವಾನ , ತ್ಯಾಗ ಇವುಗಳಿಂದ ಇಚ್ಚಿತ್ತ ರೋಗಿಗಳು ತಮ್ಮ ಜೀವನವನ್ನು ಪುನಃ ರೂಪಿಸಿಕೊಳ್ಳಬಹುದಾಗಿದೆ.  




ವಂದನೆಗಳು.







Tuesday, November 30, 2010

ಬ್ಲಾಗಿನ ಎಲ್ಲೆಯನ್ನೂ ಮೀರಿ.

ಚಿತ್ತಾರದೂರಿನ ಬಂಧುಗಳೇ ..

ನನ್ನ ಬ್ಲಾಗಿನ ಚಟುವಟಿಕೆಗಳನ್ನು ಸದಾ ಪ್ರೋತ್ಸಾಹಿಸುವವರು ನೀವು. 
ನನ್ನ ಸಂತೋಷವನ್ನಿಷ್ಟು ನಿಮ್ಮಲ್ಲಿ ಹಂಚಿಕೊಳ್ಳುವಾಸೆ.
ಚುಕ್ಕಿಚಿತ್ತಾರ ಬ್ಲಾಗ್ ತನ್ನ ಎಲ್ಲೆಯನ್ನು ವಿಸ್ತರಿಸಿ  ಉದಯವಾಣಿ ಪತ್ರಿಕೆಯಲ್ಲಿ ಕಾಣಿಸಿಕೊಂಡಿದೆ.
ಬರೆಯುವುದನ್ನು  ಬ್ಲಾಗಿನಲ್ಲಿಯೇ ಕಲಿತವಳು ನಾನು.ಅಲ್ಲಿಯವರೆಗೆ ನೆಟ್ಟಗೆ ಪತ್ರ ಬರೆಯುವುದೂ ಗೊತ್ತಿರಲಿಲ್ಲ. ಬರೆದದ್ದು ಏನು ಎನ್ನುವುದರ ಬಗ್ಗೆ ಸಂಶೋಧನೆಯೇ ಬೇಕಾಗುತ್ತಿತ್ತು ಈ ಮೊದಲು. ಬರೀ ಚಿತ್ರ ಬರೆಯುವುದೂ, ಪುಸ್ತಕಗಳನ್ನು   ಓದುವುದೂ, ಅದೂ ಇದೂ ಕಸೂತಿ ಕೈಗಾರಿಕೆ ಮಾಡುವುದರಲ್ಲೇ ನನ್ನ ಕೆಲಸ ಸೀಮಿತವಾಗಿತ್ತು.ನಾನು ಬರೆದದ್ದರ ಬಗ್ಗೆ ನನಗೆ ಭರವಸೆಯಿರಲಿಲ್ಲ.   ನನ್ನ ಬ್ಲಾಗಿನ ಬರಹಗಳನ್ನು ಓದಿ, ಬರೆಯಲು ಹೆಚ್ಚಿನ ಉತ್ಸಾಹ ತುಂಬಿದವರು ನೀವು..
ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.




ಇನ್ನೊ೦ದು ಸಂತೋಷದ ಸಂಗತಿಯೆಂದರೆ ವಿಜಯಕರ್ನಾಟಕ ಪತ್ರಿಕೆಯ ಲವಲವಿಕೆಯಲ್ಲಿ ನಾನು ಬರೆದ ಲೇಖನವೊಂದು ಪ್ರಕಟವಾದದ್ದು.ದಿನಾಂಕ 29-11-2010   ರಂದು ಪ್ರಕಟಣೆಗೊಂಡ  ''ಮಲೆನಾಡಿನಲ್ಲಿ ಈಗ ಯಂತ್ರಗಳದ್ದೆ ಸದ್ದು ಎನ್ನುವ ಲೇಖನ''.   ನನಗೆ ಬರೆಯುವಲ್ಲಿ ಹೆಚ್ಚಿನ ಆತ್ಮವಿಶ್ವಾಸ ತಂದುಕೊಟ್ಟಿದೆ.  ಕೇವಲ ಬ್ಲಾಗಿಗೆ ಸೀಮಿತವಾದ ನನ್ನ ಬರಹ ಪತ್ರಿಕೆಯೊಂದರಲ್ಲಿ ಕಾಣಿಸಿಕೊಳ್ಳಲು ಕಾರಣ ಶ್ರೀಶಂ ಬ್ಲಾಗಿನ ರಾಘವೇಂದ್ರ ಶರ್ಮರು.ಲೇಖನದ ಸಂಸ್ಕರಣೆ ಮತ್ತು ಮಾಧ್ಯಮದ ಸಂಸ್ಕಾರ ಎರಡೂ ಹೇಳಿಕೊಟ್ಟು ಪತ್ರಿಕೆಗೆ ಕಳುಹಿಸಲು ಪ್ರೇರಣೆ ಕೊಟ್ಟಿದ್ದು ರಾಘಣ್ಣ. ಅವರಿಗೆ ನನ್ನ ಹೃತ್ಪೂರ್ವಕ ನಮನಗಳು.
http://www.vijaykarnatakaepaper.com/pdf/2010/11/29/20101129l_003101001.pdf


ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರ ಸದಾ ಇರಲಿ. ನಿಮ್ಮೆಲ್ಲರ ಪ್ರೀತಿಗೆ, ವಿಶ್ವಾಸಕ್ಕೆ, ಆತ್ಮೀಯತೆಗೆ ಸದಾ ಋಣಿ.

ವಂದನೆಗಳು.


Wednesday, November 24, 2010

ದುರ್ಗಾಸ್ತಮಾನ

ಈ ನಡುವೆ ನಾನು ಸುಮಾರು ಮುನ್ನೂರು ವರ್ಷಗಳಿಗೂ ಹಿ೦ದೆ ಹೋಗಿದ್ದೆ. 
ಇದ್ಯಾವ ಪೂರ್ವಜನ್ಮದ ಕಥೆ, ಯಾವ ಟೀವೀ ಚಾನಲ್ ನವರ ಕಾರ್ಯಕ್ರಮ ಎ೦ಬ ಸ೦ದೇಹ ನಿಮ್ಮನ್ನಾವರಿಸಬಹುದು. 
ಅದ್ಯಾವುದೂ ಅಲ್ಲ. ಈಗ್ಗೆ ಒ೦ದು ವಾರದಿ೦ದ ತ.ರಾ. ಸುಬ್ಬರಾಯರು ಬರೆದ ''ದುರ್ಗಾಸ್ತಮಾನ''  ಎನ್ನುವ ಕಾದ೦ಬರಿಯಲ್ಲಿ ಕಳೆದುಹೋಗಿದ್ದೆ.
ಅದರ ಪ್ರಭಾವ ಹಾಗಿತ್ತು.


''  ಚಿತ್ರದುರ್ಗದ ಜನರಿಗೆ ಚಿತ್ರದುರ್ಗವೆ೦ದರೆ ಒ೦ದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ; ತಮ್ಮ ಕರುಳಿಗೆ ಹೊ೦ದಿಕೊ೦ಡು ಬೆಳೆದ ಜೀವ೦ತ ವಸ್ತು. ಮದಕರಿ ನಾಯಕನಾದರೂ ಅಷ್ಟೆ- ಇತಿಹಾಸದ ಇದ್ದುಹೋದ ಒಬ್ಬ ಅರಸನಲ್ಲ, ತಮ್ಮ ಜೀವ೦ತ ಆಪ್ತನೆ೦ಟ.   
'  ಚಿತ್ರದುರ್ಗ - ಮದಕರಿನಾಯಕ 'ಎನ್ನುವುದು ಬೇರೆ ಬೇರೆಯಲ್ಲ, ಒ೦ದೇ ಅನ್ನುವ ಅವಿನಾಭಾವ; ದುರ್ಗ ಎ೦ದರೆ ಮದಕರಿ, ಮದಕರಿ ಎ೦ದರೆ ದುರ್ಗ ........’

ಹೀ ಗೆ ಮುನ್ನುಡಿಯನ್ನು ಶುರುಮಾಡುವ ತ.ರಾ.ಸು. ಅವರು ಈ ಐತಿಹಾಸಿಕ ಕಾದ೦ಬರಿಯಲ್ಲಿ  ಚಿತ್ರದುರ್ಗವನ್ನಾಳಿದ ನಾಯಕ ವ೦ಶದ ಕೊನೆಯ ದೊರೆ  ದುರ೦ತನಾಯಕ ಮದಕರಿನಾಯಕನ ಆಳ್ವಿಕೆಯ ಅಷ್ಟೂ ಚಿತ್ರಣವನ್ನೂ ಕಣ್ಣಿಗೆ ಕಟ್ಟುವ೦ತೆ ನಿರೂಪಿಸಿದ್ದಾರೆ.  
ಆತ ಕಾಮಗೇತೀ ವ೦ಶಸ್ತನಾದರೂ ಕೂಡಾ ದೊರೆಯ ಮಗನಲ್ಲ.ಈ ವ೦ಶದ ಮೂಲ ಪುರುಷ ಚಿತ್ರ ನಾಯಕ. ಮಧಿಸಿದ ಆನೆಯೊ೦ದನ್ನು ಎದುರಿಸಿ ಹಿಡಿತಕ್ಕೆ ತ೦ದ ಕಾರಣ ಆತನನ್ನ' ಮದಕರಿ' ಎ೦ಬುದಾಗಿ ಕರೆಯುತ್ತಿದ್ದರು.ಚಿತ್ರನಾಯಕನ ಹೆಸರಿ೦ದ ಚಿತ್ರದುರ್ಗ ಎನ್ನುವ ಹೆಸರು ಬ೦ತು. ಈತನು ಯುದ್ಧದಲ್ಲಿ ಸಾವನ್ನಪ್ಪುತ್ತಾನೆ. ಹಾಗೆಯೇ ಮಕ್ಕಳಿಲ್ಲದ ಈತನ ಮಗನೂ ಕೂಡಾ.


ಕಾಮಗೇತೀ ವ೦ಶದ  ಜಾನಕಲ್ಲಿನ ದಳವಾಯಿ ಬರಮಣ್ಣನಾಯಕನ ಮಗ ಚಿಕ್ಕ ಮದಕರಿ ರಾಜೇ೦ದ್ರ.  ಈತ ಹನ್ನೆರಡು ವರುಷದವನಾಗಿದ್ದಾಗಲೇ  ರಾಜ ಮಾತೆ ಓಬವ್ವ ನಾಗತಿ  ವಾರಸುದಾರರಿಲ್ಲದ  ರಾಜ್ಯಕ್ಕೆಈತನೆ ಸೂಕ್ತ ವಾರಸುದಾರನೆ೦ದರಿತು ಪಟ್ಟಕಟ್ಟುತ್ತಾಳೆ.
ಲೇಖಕರು  ಆತನ ಶೌರ್ಯ, ಸಾಹಸ, ಪ್ರಜ್ಞಾವಂತಿಕೆ, ಮನುಷ್ಯತ್ವ  ಇವೆಲ್ಲವನ್ನೂ ಸೂಕ್ಷ್ಮವಾಗಿ  ಹೆಣೆದಿದ್ದಾರೆ.ದುರ್ಗದ ಬಗೆಗಿನ ಭಕ್ತಿ, ರಾಜಕೀಯ ಪ್ರಕ್ರಿಯೆಗಳೂ, ಆಡಿದ ಮಾತು ತಪ್ಪದಿರುವ ನೇರವ೦ತಿಕೆ. ಪ್ರಜೆಗಳ ಬಗೆಗಿರುವ ಪ್ರೀತಿ, ಧರ್ಮ ಸಹಿಷ್ಣುತೆ, ಜವಾಬ್ಧಾರಿಗಳನ್ನು ತು೦ಬಾ ಜಾಣ್ಮೆಯಿ೦ದ ವಿವರಿಸಿದ್ದಾರೆ. 
ಕಾದ೦ಬರಿ ಓದುತ್ತಾ ಹೋದ೦ತೆ ನಾವು ಆತ್ಮಸ್ಥರಾಗಿ  ಅದರ ಪಾತ್ರಗಳಲ್ಲಿ ಸೇರಿಹೋಗುತ್ತೇವೆ. 
ಪ್ರತಿ ಘಟನೆಯನ್ನೂ, ಮಾತುಗಳನ್ನೂ ಎಲ್ಲಿಯೂ ಕೊರತೆ ತೋರದ೦ತೆ ಜೋಡಿಸಿದ್ದಾರೆ.
ಪಕ್ಕದಲ್ಲಿಯೇ ನಿ೦ತು ಎಲ್ಲವನ್ನೂ ಅವಲೋಕಿಸಿ ಬರೆದಿದ್ದಾರೇನೊ ಎನ್ನುವ೦ತೆ ಪ್ರತಿ ಪದವನ್ನೂ  ಸೂಕ್ಷ್ಮವಾಗಿ   ಕೆತ್ತಿದ್ದಾರೆ. 
ಎಲ್ಲಿಯೂ ಭಾಷೆಯ ಉತ್ಪ್ರೇಕ್ಷೆಯಿಲ್ಲ. ಎಲ್ಲ ವರ್ಗದ ಓದುಗರಿಗೂ ಕುತೂಹಲ ಹುಟ್ಟಿಸುವ೦ತೆ, ವೈಭವೀಕರಣವಿಲ್ಲದೇ ಸರಳವಾಗಿ ಘಟನೆಗಳನ್ನು ಉಲ್ಲೇಖಿಸಿದ್ದಾರೆ.
 ಮದಕರಿಯ೦ತಹಾ ವೀರನೊಬ್ಬ ಹೇಗೆ ಯುದ್ಧದಲ್ಲಿ ನಾಶವಾಗುತ್ತಾನೆ,? ಒಳತ೦ತ್ರಗಳಿಗೆ ಬಲಿಯಾಗುತ್ತಾನೆ,?ಎನ್ನುವುದನ್ನು ವಿಸ್ತಾರವಾಗಿ ತೆರೆದಿಡುತ್ತಾ ಹೋಗುತ್ತಾರೆ.ಹೈದರಾಲಿಯ ಕುತ೦ತ್ರಗಳಿಗೆ ಬಲಿಯಾಗಿ ಜೀವ ಕಳೆದುಕೊಳ್ಳುವ ಸನ್ನಿವೇಶವ೦ತೂ ಓದುಗರಲ್ಲಿ ಭಾವೋದ್ವೇಗವನ್ನು ಉ೦ಟುಮಾಡುತ್ತದೆ.ಪಾತ್ರಗಳಲ್ಲಿರುವ ಜೀವ೦ತಿಕೆ ಎಲ್ಲಿಯೂ ನಿಲ್ಲದ೦ತೆ ಓದಿಸಿಕೊ೦ಡು ಹೋಗುತ್ತದೆ.


ಅನೇಕ ಆಕರ ಗ್ರ೦ಥಗಳನ್ನು ಅಭ್ಯಸಿಸಿ ಬರೆದ  ಒ೦ದು  ಮೇರುಕೃತಿ ಈ ದುರ್ಗಾಸ್ತಮಾನ. 
ಮದಕರಿಯ ಜೀವಾರ್ಪಣೆಯೊ೦ದಿಗೆ ದುರ್ಗಾಸ್ತಮಾನವಾದರೂ ಈ ಕೃತಿಯಿ೦ದಾಗಿ  ಗ೦ಡು ಪಾಳೇಯಗಾರರ ನಾಡು  ಚಿತ್ರದುರ್ಗದ  ಮದಕರಿ ಮತ್ತೆ ಜನಮಾನಸದಲ್ಲಿ ಉದಯಿಸಿದ್ದಾನೆ೦ದರೆ ಉತ್ಪ್ರೇಕ್ಷೆಯಾಗಲಾರದೇನೋ..


ತ.ರಾ.ಸು ಅವರು ದುರ್ಗದ ಬಗೆಗೆ ಇನ್ನೂ ಅನೇಕ ಕಾದ೦ಬರಿಗಳನ್ನು ರಚಿಸಿದ್ದಾರೆ. ಪ್ರತಿಯೊ೦ದೂ ಉತ್ಕೃಷ್ಟ ಕೃತಿಯೇ.
 
ಇದು ಅವರ ಕಾದ೦ಬರಿಯ ಬಗೆಗಿನ ವಿಮರ್ಶೆಯಲ್ಲ.  ಬರೆಯುತ್ತಾ ಹೋದರೆ ಸಾವಿರ ಇದೆ. 
  ಓದಿ ನನಗಿಷ್ಟವಾಯ್ತು. ನನ್ನ ಸಂತೋಷವನ್ನು  ನಿಮ್ಮೊ೦ದಿಗೆ ಹ೦ಚಿಕೊ೦ಡು ಅದನ್ನು ಇನ್ನಷ್ಟು ಹಿಗ್ಗಿಸಿಕೊಳ್ಳುವ ಪ್ರಯತ್ನ ಇದು.


ವ೦ದನೆಗಳು.

Thursday, November 11, 2010

ಪೀಟಿಯೆಂಬ ಬಾಲ್ಯದ ಗೆಳೆಯ

ಬಾಲ್ಯ ...
ಈಗ ಅದೊಂದು ಸುಂದರ ಕನಸು. ಇತ್ತು.. ಈಗಿಲ್ಲ.
ಆಗಾಗ ಅದನ್ನು ನೆನೆಸಿಕೊಳ್ಳಲು ಎಷ್ಟೊಂದು ಸುಖ..!
ಬಾಲ್ಯವೆಂಬ ಮಧುರ  ನೆನಪುಗಳ ಕಣಜವನ್ನೊಮ್ಮೆ ಬಗ್ಗಿ ನೋಡಿದಾಗ  ಎಷ್ಟೆಲ್ಲಾ ಮನೋಹರ ದೃಶ್ಯಗಳು ಕಾಣಸಿಗುತ್ತವೆ !
ಅದೊಂದು ಕಲ್ಮಶವಿಲ್ಲದ ಜಗತ್ತು.
ಪ್ರಕೃತಿಯೊಂದಿಗಿನ ಪ್ರತಿ ಜೀವಿ ,ಪ್ರತಿ ವಸ್ತುವಿನೊಂದಿಗೂ ಜೀವ ಬೆಸೆದುಕೊಂಡಿರುವ ಕಾಲ.
ಕಣ್ಣುಗಳಲ್ಲಿ ಸದಾಕಾಲ ಮಿಂಚುವ ಬಣ್ಣಗಳು, ಕಲ್ಪನೆಗಳು,  ಕನಸುಗಳು.


ಹೌದು.. ನಮ್ಮ ನೆನಪಿನ ಸರಪಳಿಯಲ್ಲಿ  '' ಪೀಟಿ '' ಎಂಬ ಜೀವಿಯೂ ಒಂದು ಕೊಂಡಿಯಲ್ಲವೇ..?
ಈ ಹೆಸರೇ ಅಪ್ಯಾಯಮಾನ.ಕೆಲವೆಡೆ ಅದಕ್ಕೆ ''ಬಿರ್ಬಿಟ್ಟಿ'' ಎಂತಲೂ ಕರೆಯುತ್ತಾರೆ.
ಇಂಗ್ಲಿಷಿನಲ್ಲಿ'ಡ್ರ್ಯಾಗನ್ ಫ್ಲೈ ' ಎನ್ನುವ ಘೋರವಾದ ಹೆಸರಿನಿಂದ ಕರೆಯುತ್ತಾರೆ.
ಆಗೆಲ್ಲ ನಮಗೆ ರಜೆ ಬಂತೆಂದರೆ ಸಾಕು.ಆಟಕ್ಕೆ ತರಾವರೀ ವಸ್ತುಗಳು.
ಖಾಲೀ ಬೆಂಕಿ ಪೆಟ್ಟಿಗೆಯಲ್ಲಿ  ಹಿಡಿದಿಟ್ಟುಕೊಂಡಿರುವ ರೇಷ್ಮೆ ಹುಳು, ಮಣ್ಣು ಗುಬ್ಬಿ, ಎಲೆಕೀಟ ಹೀಗೆ ಅನೇಕ ಸಹಯಾತ್ರಿಗಳು.
ಆಗಾಗ ತೆಗೆದು ನೋಡಿ ಇದೆಯೋ ಇಲ್ಲವೋ ಎಂದು ಖಾತ್ರಿ ಪಡಿಸಿಕೊಳ್ಳುವುದು ಅಂದಿನ ಜವಾಬ್ದಾರೀ  ನಡವಳಿಕೆಗಳಲ್ಲಿ ಒಂದು.






ಮಧ್ಯಾನ್ಹದ ಮೇಲೆ ಕುಂಟಬಿಲ್ಲೆಯೋ, ಜೂಟಾಟವೋ  ಮತ್ಯಾವುದೋ ಆಟವಾಡುತ್ತಾ ಆಟದ ಜೊತೆ ಜೊತೆಗೆ ಅಂಗಳದಲ್ಲಿ ಬರಕಲಾದ ತುಳಸೀ ಗಿಡದ ಮೇಲೋ, ಒಣಕಲು ಕೊಂಬೆಯ ಮೇಲೋ,  ಬಟ್ಟೆ ಒಣ ಹಾಕುವ ನ್ಯಾಲೆಯ ಮೇಲೋ, ಮನೆ ಹಿಂದಿನ ದರೆಯಲ್ಲಿ ಬೆಳೆದುಕೊಂಡಿರುವ ಹುಲ್ಲು ಗಿಡದ ಮೇಲೋ ಕುಳಿತಿರುತ್ತಿದ್ದ ಪೀಟಿಗಳನ್ನು ಹಿಡಿಯುವುದೇ ಒಂದು ಮೋಜಿನ ಕೆಲಸ.
ಅಲ್ಲದೆ ಆಗ ಅದೊಂದು ಸಾಹಸದ ಕೆಲಸ ಕೂಡಾ ಆಗಿತ್ತು.ಧ್ಯಾನಸ್ತರಾಗಿ ಗಿಡದ ಮೇಲೆ ಕೂತಿರುತ್ತಿದ್ದ ಪೀಟಿಗಳನ್ನು ನಿಧಾನವಾಗಿ ಸದ್ದು ಮಾಡದೆ ಎರಡೇ ಬೆರಳುಗಳಿಂದ ರೆಕ್ಕೆಗಳನ್ನು ಜೋಡಿಸಿ ಹಿಡಿಯಬೇಕೆನ್ನುವ ಹೊತ್ತಿಗೆ ಬಾಲ ತಿರುವಿ ಜಾರಿಕೊಂಡು ಹಾರಿ ಮತ್ತೊಂದೆಡೆ ಕೂರುತ್ತಿದ್ದ ಇವುಗಳನ್ನು ಹಿಡಿಯಲು ಪ್ರೋಫೆಶನಲ್ಸೆ ಬೇಕಾಗಿತ್ತು.
ಹಾಗೆಲ್ಲ ಎಲ್ಲರಿಗೂ ಪೀಟಿ ಹಿಡಿಯಲು ಸಾಧ್ಯವೇ,,?ಈ ಕೆಲಸಕ್ಕೆ ಸ್ಪೆಶಲಿಷ್ಟರು ಅಣ್ಣಯ್ಯನೋ, ಬಾವಯ್ಯನೋ ಆಗಿರುತ್ತಿದ್ದುದು ಎಲ್ಲಾ ಕಡೆ ಸರ್ವೇ ಸಾಮಾನ್ಯ.


ಹೆಣ್ಣುಮಕ್ಕಳಿಗೆ ಈ ವಿಚಾರಗಳಲ್ಲಿ  ಕೆಲವು ಟೆಕ್ನಿಕಲ್ ಪ್ರಾಬ್ಲಂ ಇದ್ದಿದ್ದು ಸುಳ್ಳಲ್ಲ.
.''ಪೀಟಿ ಹಿಡಿಯಕ್ಕೆ ಹೋಗಿ ಫ್ರಾಕ್ ಹರಕ ಬೈಂದ ಮಳ್ಳು''
  ''ಪೀಟಿ ಹಿಡಿಯಕ್ಕೆ ಹೋಗಿ ಕಾದಿಗೇಲಿ ಬಿದ್ಗ ಬೈಂದ ಮಂಗ ''
ಎಂಬಿತ್ಯಾದೀ ಅವಹೇಳನಕಾರೀ ಮಾತುಗಳನ್ನು ಕೇಳುವುದು, ಅಮ್ಮನ ಹತ್ತಿರ ಬೈಸಿಕೊಳ್ಳುವುದೂ  ನಮಗೆ ಸುತರಾಂ ಇಷ್ಟವಿರಲಿಲ್ಲ.








ಅದೂ ಅಲ್ಲದೆ '' ಅದೆಂತ್ರಾ  ಪೀಟಿ ಹಿಡಿಯದು..?ಅದ್ನ ಸಾಯ್ಸೀರೆ ದೇವ್ರು ಶಾಪ ಕೊಡ್ತಾ ತಡೀರಿ. ಮುಂದಿನ ಜನ್ಮದಾಗೆ ಕಡಿಗೆ ನಿನ್ಗನೂ ಪೀಟಿಯಾಗೇ ಹುಟ್ಳಕ್ಕು.'' ಎನ್ನುವ ದೊಡ್ಡವರ ಮೊರಲ್ ಸೈನ್ಸ್ ಭಯ..


ಮತ್ತೂ ಏನಾದರೂ ಗ್ರಾಚಾರಕ್ಕಿಟ್ಟು ಕೊಂಡರೆ ತಪ್ಪಿಸಿಕೊಳ್ಳಲು ಉಪಾಯವೂ ಇತ್ತು.
'' ನಾ ಅಲ್ಲ ಬಾವಯ್ನೆ ಹಿಡ್ಕೋಟಿದಾ''ಎಂದು ಬಾವಯ್ಯನ ಮೇಲೆ ತಪ್ಪು ಹೊರಿಸಿದರೆ ಅಲ್ಲಿಗೆ ಆ ಕೇಸು ಮುಕ್ತಾಯವಾದಂತೆ.
ನೆಂಟರ ಮನೆ ಮಾಣೀಗೆ  ಬೈಯ್ಯುವ ಹಕ್ಕು ಇಲ್ಲ ಎನ್ನುವ ಅಲಿಖಿತ ಸ೦ವಿಧಾನ.!


ಚಿಟ್ಟೆ ಸುದ್ದಿಗೆ ಅಷ್ಟಾಗಿ ಹೋಗುತ್ತಿರಲಿಲ್ಲ ನಾವು.
ಚಿಟ್ಟೆ ನೋಡಲು ಸುಂದರವಾದರೂ ಆಡಲು ಸೂಕ್ಷ್ಮ.ರೆಕ್ಕೆ ಹಿಡಿದರೆ ಬಣ್ಣವೆಲ್ಲಾ ಕೈಗೆ ಮೆತ್ತಿಕೊಳ್ಳುತ್ತದೆ.
ಕೆಲವೊಮ್ಮೆ ರೆಕ್ಕೆಯೇ ಕಿತ್ತೂ ಬರುತ್ತದೆ.ಹಿಡಿಯೋಣವೆಂದರೂ  ಅದು ಕೂತಲ್ಲಿ ಕೂರದ ಚಂಚಲೆ.
ಆಡಿಕೊಳ್ಳುವುದಕ್ಕಿಂತ ಹಾಡಿಕೊಳ್ಳಲೇ  ಲೇಸು.ಪಾತರಗಿತ್ತಿ ಪಕ್ಕ ..ನೋಡೀದೆನ ಅಕ್ಕ ಎನ್ನುತ್ತಾ...








ಪೀಟಿ ಹಾಗಲ್ಲ.
ಪಾರದರ್ಶಕ ಬಣ್ಣದವು,ರೆಕ್ಕೆಗಳು ಗಡಸು, ಮಕ್ಕಳ ಕೈಗೆ ಸಿಕ್ಕಿದರೂ ಸುಮಾರಿಗೆ ಹಾನಿಗೊಳಗಾಗದು.
ಅದರ ಬಾಲದ ತುದಿಗೆ ಬಾಳೇ ಪಟ್ಟೇ  ದಾರ ಕಟ್ಟಿ ಒಂದು ತುದಿ ಕೈಯಲ್ಲಿ ಹಿಡಿದುಕೊಂಡು ಮೇಲಕ್ಕೆ  ಹಾರಿದಂತೆ ಕೆಳಕ್ಕೆ  ಜಗ್ಗುತ್ತಾ ಅದನ್ನು ಹಾರಿಸುತ್ತಿದ್ದಾರೆ ಹೆಲಿಕ್ಯಾಪ್ಟರ್ ನೇ ಹಾರಿಸುತ್ತಿದ್ದೀವೇನೋ ಎಂಬಂತಹಾ ಅನುಭೂತಿ ಉಂಟಾಗುತ್ತಿತ್ತು ನಮಗೆ...!
ಅದಕ್ಕೆ ನೋವಾಗುತ್ತದೆ, ಅದು ಹಿಂಸೆ ಅನ್ನುವ ವಿಚಾರಗಳೆಲ್ಲಾ ತಲೆಗೆ ಹೋಗುತ್ತಿದ್ದುದು ಆಮೇಲೆ.
ಮತ್ತು ಹೀಗೆ ಆಡುವಾಗ ಕೆಲ ತುಂಟ ಹುಡುಗರ ಕೈಯಲ್ಲಿ ಸಿಕ್ಕಿ ಅದು ಆಪರೇಶನ್ ಪೀಟಿಯಾಗಿ,   ಡಿಸೆಕ್ಷನ್ ಗೊಳಗಾಗಿ ಉಳಿದ ಸಂಭಾವಿತ ಹುಡುಗರ ಕೈಯ್ಯಲ್ಲಿ ಬೈಸಿಕೊಳ್ಳುವುದೂ, ' ಹೇಳ್ಕೊಡ್ತಿ  ತಡೀ '  ಎನ್ನುವ ಬ್ಲಾಕ್ ಮೇಲ್ ಗೊಳಗಾಗುವುದೂ, ಅದಕ್ಕೆ ಬೆಣ್ಣೆಕಡ್ಡಿ, ಗೋಲಿ , ಹಳೆ ಗ್ರೀಟಿಂಗ್ ಕಾರ್ಡು  ಇತ್ಯಾದಿ ರೂಪದಲ್ಲಿ ಲಂಚ ರುಶುವತ್ತುಗಳ ವ್ಯವಹಾರ ಕೂಡಾ ಇತ್ತು ಬಿಡಿ.




ಅದೆಲ್ಲ ನೆನಪಾದದ್ದು  ಎದುರಿನ ಸೈಟಿನಲ್ಲಿ ಪೀಟಿಗಳ ಹಾರಾಟ ಕಂಡಾಗ.ನನ್ನ ಮನಸ್ಸೂ ಕೆಲ ಕಾಲ ಬಾಲ್ಯದ ಕಡೆ ಹಾರಿದ್ದು ಸುಳ್ಳಲ್ಲ..








ವಂದನೆಗಳು.

Monday, November 8, 2010

ಇವರ್ಯಾರು...?

ಇದು ಕೆಲವು ತಿಂಗಳುಗಳ ಹಿ೦ದೆ ಬರೆದ ಚಿತ್ರ. ಜೆಲ್ ಇಂಕ್ ಪೆನ್ ನಲ್ಲಿ.  ಕೆಲವು ಓರೆ ಕೋರೆ ಗೆರೆಗಳಿದ್ದರೂ ಕೂಡಾ ನನಗೇ ತೃಪ್ತಿ ತಂದ ಚಿತ್ರ. ಕೆಲವೇ ನಿಮಿಷಗಳಲ್ಲಿ  ಒಂದೇ ಹಂತದಲ್ಲಿ ಬರೆದಿದ್ದು. ಇವರ್ಯಾರು  ಎಂದು ನಿಮಗೆ ಸುಲಭವಾಗಿ  ಗುರುತಿಸಲು ಸಾಧ್ಯವೇ...? ಸಾಧ್ಯವಾದಲ್ಲಿ ಬರೆದದ್ದು, ಮತ್ತು ಹೆಮ್ಮೆ ಪಟ್ಟಿದ್ದು ಸಾರ್ಥಕ....!!!



Tuesday, November 2, 2010

ಹಬ್ಬದ ವಿಶೇಷ ...?

ಬಂದೇ ಬಿಟ್ಟಿತಲ್ಲ.. ದೀಪಗಳ ಹಬ್ಬ, ಒಡಲೊಳಗಿನ  ಅ೦ದಕಾರವನ್ನು  ಹೊಡೆದೋಡಿಸುವ ಬೆಳಕಿನ ಹಬ್ಬ , ಅರಿವಿನ ಹಬ್ಬ,   ಸೊಬಗಿನ ದೀಪಾವಳಿ ಹಬ್ಬ..!


ವಿಶೇಷ ಏನೆಂದರೆ ಎರಡಿವೆ. ಮೊದಲನೆಯದು ಹಬ್ಬವನ್ನು ಈ ಸಲ ಬೆಂಗಳೂರಲ್ಲೇ ಆಚರಿಸುತ್ತೇವೆ...!  ಅದು ವಿಶೇಷವಾ...? ಎಂದು ಹುಬ್ಬೇರಿಸಬೇಡಿ. ನಾನಾ ತರದ ಕಾರಣಗಳಿಂದ ಊರಿಗೆ ಹೋಗಲು ಆಗದೆ ಇದ್ದುದರಿಂದ  ನಾವು ಇಲ್ಲಿಯೇ  ''ಶೇಷ''.   ಹಬ್ಬವಾದ್ದರಿಂದ'' ವಿ '' ಹಚ್ಚಲಾಗಿದೆ.


ಊರಲ್ಲಿ ಹಬ್ಬದ ಹಿಂದಿನ ದಿನ ನಡೆಸುವ ತಯಾರಿಯನ್ನು ನಾನಿಲ್ಲೇ ನೆನೆಸಿಕೊಳ್ಳುತ್ತೇನೆ....!

ಭೂರೆ ಹಬ್ಬದ ಹಿಂದಿನ ದಿನ ಮನೆ ಮಾರನ್ನು, ತೊಳೆದು ಬೆಳಗಿ, ಬಾಗಿಲಿಗೆ, ಗೋಡೆಗೆ, ಸ್ನಾನದ ಹಂಡೆಗೆ ಎಲ್ಲಾಕಡೆ ಕೆಮ್ಮಣ್ಣು ಹಚ್ಚಿ, ಶೇಡಿ ಬರೆಯುವುದರಿ೦ದ ಹಿಡಿದು , ಊರಿಗೆ ನಾನೇನಾದರೂ ಹೋಗಿದ್ದಿದ್ದರೆ ಶೇಡೀ ಬರೆಯುವ ಕೆಲಸ ನನಗೇ ಕೊಟ್ಟು ಗೌರವಿಸುವುದರಿಂದ   ಹಿಡಿದು .... ಹಂಡೆಗೆ  ಊರೆಲ್ಲಾ ಸುತ್ತಿ ಹರ್ಕೊಂಡು ಬಂದ ಕೈಯಿಂಡ್ಲೆ ಕಾಯಿ ಬಳ್ಳಿಯನ್ನು ಸುತ್ತಿ, ಹೊಸ ನೀರು ತುಂಬಿ, ಆಮೇಲೆ ಭೂರೆ ದಿನ ಬೆಳಗಾಗಿ ಮುಂಜಾವಿನಲ್ಲೇ  ಆಯಿ ಭೂರೆ ನೀರು ತುಂಬಿ ಪೂಜೆ ಮಾಡುವಾಗ ' ಜಾಗಟೆ  ಬಡಿಲಕ್ಕು ಎದ್ಕಳ್ರೆ' ಎಂದು ಕರೆದು ಎಬ್ಬಿಸುವುದರಿಂದ ಹಿಡಿದು..  ಆಮೇಲೆ ತಲೆಗೆ ಎಣ್ಣೆ ಹಾಕಿ ಕೊಟ್ಟ ಕಾಯಿಸುಳಿ, ಸಕ್ರೆ ತಿಂದು ಸ್ನಾನ ಮಾಡಿ ಕಡುಬಿನ ಊಟ ಮಾಡಿದ್ರೆ ಭೂರೆ ಊಟ ಮುಗೀತು.ನನ್ನ ತವರು ಮನೆ ಒಂಟಿ ಮನೆ. ಉಳಿದ ಮನೆಗಳೆಲ್ಲಾ ದೂರ..   ಮತ್ತು ಸದಾಕಾಲ ನಾಯಿಕಾವಲು ಇರುವುದರಿಂದ ಭೂರೆಗಳುವಿಗೆ ಅವಕಾಶವಿಲ್ಲ...!  




ಮತ್ತು ಮರುದಿನ ಅಮಾವಾಸ್ಯೆಯ ದಿನ ಹಿತ್ತಲೆಲ್ಲಾ ಅಲೆದು  ಚಂಡುಹೂ ಕೊಯ್ದು  ಗೋವಿನ ಕೊರಳಿಗೆ ಒಪ್ಪುವಂತೆ ಅದರ ದಂಡೆಗಳನ್ನು ಮಾಡಿ  ಜೋಡಿಸಿಡುವದು ಮನಸ್ಸಿಗೊಪ್ಪುವ ಕೆಲಸ. ದೀಪಾವಳಿ ಹಬ್ಬದ ದಿನ ಮಾತ್ರಾ ತುಂಬಾ ಸಂಭ್ರಮದ ದಿನ.ಎಲ್ಲರೂ  ಬೆಳಗ್ಗೆ ಬೇಗೆದ್ದು,
ಸೂರ್ಯ ಹುಟ್ಟುಟ್ಟುತ್ತಲೇ ಗೋಪೂಜೆಯೂ ಮುಗಿಯ ಬೇಕೆನ್ನುವುದು ಅಪ್ಪಯ್ಯನ ಸಂಪ್ರದಾಯ. ಅದೇ ಚಂದ ಎನ್ನುವುದು ಅವನ ಧೋರಣೆ. 
ಮಕ್ಕಳು  ಮೊಮ್ಮಕ್ಕಳೆಲ್ಲಾ ಬೇಗೆದ್ದು  ಪೂಜೆಯ ನಂತರ ಹುಲ್ಲುದೇವರ [ಹುಲಿದೇವರ] ಬನಕ್ಕೆ ಹೋಗಿ  ಅಲ್ಲಿ ಹಣ್ಣು ಕಾಯಿ ಪೂಜೆ ಮಾಡಿ ಪಟಾಕಿ ಹೊಡೆದು ಮನೆಗೆ ಬಂದು  ತುಳಸಿ ಮುಂದೆ ಸುತ್ತ ಮುತ್ತಲಿನ ಭೂತ, ಚೌಡಿ ಗಳಿಗೆಲ್ಲಾ ಕಾಯಿ ಒಡೆದು ಅಪ್ಪಯ್ಯ ಅವರನ್ನೆಲ್ಲಾ ಸರಿ ಮಾಡಿಟ್ಟುಕೊಳ್ಳುವುದನ್ನೂ ನೆನೆಸಿಕೊಳ್ಳುವುದಕ್ಕೆ ಹಿತ. 

ಆಮೇಲೆ ಬೆಳಗಿನ ತಿಂಡಿ ಸವತೆ ಕಾಯಿ ತೆಳ್ಳವು ತಿನ್ನದೂ ಅಂದ್ರೆ  ಅದರ ಸುಖ  ತಿಂದೇ ತಿಳಿಯಬೇಕು..!  ಆಮೇಲೆಲ್ಲಾ ಹೋಳಿಗೆ ಮಾಡುವುದೂ,  ಸೊಂಪಾಗಿ ಹಬ್ಬದೂಟ ಉಂಡು ಒಂದು ನ್ಯಾಪ್ ತೆಗೆಯುವುದು.  ಸಾಯಂಕಾಲ   ಎಲ್ಲ ಕಡೆ ಕೈಹಿಂಡ್ಲೆ ಕಾಯಿ ಅರ್ಧ ಮಾಡಿ ಅದಕ್ಕೆ ಸೂಡಿ ಸಿಕ್ಕಿಸಿ ದೀಪ ಹಚ್ಚಿಟ್ಟು ಹಬ್ಬ ಕಳಿಸುವುದೊಂದು  ಆಯಿಯ ಕೆಲಸ. ಮೊಮ್ಮೊಕ್ಕಳದು  ಜನ್ಗಟೆ  ಹೊಡೆದು ಸಾಂಪ್ರದಾಯಿಕ ಸ್ಲೋಗನ್ನುಗಳಾದ 'ದಿಪ್ ದಿಪ್ ದೀವಾಳ್ಗ್ಯೋ ಹಬ್ಬಕ್ಕೊಂದ್ ಹೋಳಿಗ್ಯೋ.. ಜೊತೆಗೆ ತುಂಟು ಮಕ್ಕಳ ಬಾಯಲ್ಲಿ ಹಬ್ಬಕ್ಕೊಂದ್ ಹರ್ಕ್ ಹೋಳಿಗ್ಯೋ.. ಎನ್ನುತ್ತಾ ಹಬ್ಬ ಕಳಿಸುವುದು ವಾಡಿಕೆ.ಇಲ್ಲಿಗೆ  ಹಬ್ಬ ನಮ್ಮ ಕಡೆಯಿಂದ ಮುಗಿದಂತೆ.
ಮಧ್ಯ ರಾತ್ರೆ ಯಲ್ಲಿ  ಬರುವ ಹಬ್ಬ ಹಾಡುವುವರನ್ನು ಸುಧಾರಿಸುವುದು ಅತ್ತಿಗೆಯಂದಿರ ಕೆಲಸ..ಮಲಗಿದಲ್ಲಿಯೇ, ಅಥವಾ ಅಲ್ಲೇ ಕುಳಿತೋ ಬಾಗಿಲ ಮರೆಯಲ್ಲಿ ನಿಂತೋ  ತೂಕಡಿಸುತ್ತಾ ಹಬ್ಬ ಹಾಡುವವರ ಹಾಡುಗಳನ್ನು ಕೇಳುವುದು  ನಮ್ಮ ಕೆಲಸ..!




ಈ ಸಲ ಹೀಗೆ ಹಬ್ಬವನ್ನು ನೆನೆಸುವುದೇ ವಿಶೇಷ. ಎದುರಿಗೆ ಇರುವುದರಲ್ಲಿರದ ಸುಖ ಕಲ್ಪನೆಯಲ್ಲಿದೆ ಅಲ್ಲವೇ..?   ಸಂಭ್ರಮದ  ದೀಪಾವಳಿ ಕೆಟ್ಟದ್ದನ್ನು ನಾಶ ಮಾಡಲು ಜ್ಞಾನದ ದಾರಿ  ದೀಪ ಹಚ್ಚಲು ಪ್ರತಿ ವರ್ಷ ಬರುತ್ತಲೇ   ಇರುತ್ತದೆ.. ಅರಿವಿನ ನಡುಗೆ ಮಾತ್ರ ನಮ್ಮದಾಗಬೇಕಷ್ಟೇ.


ಇನ್ನೊಂದು..ಈ ವಿಶೇಷದಲ್ಲಿ ಮತ್ತೊಂದು ವಿಶೇಷ.

ದೀಪಾವಳೀ ಹಬ್ಬದ ಸಂಜೆ ಎಲ್ಲರೂ ದೀಪ ಹಚ್ಚಿಟ್ಟು ಕೈ ಮುಗಿದು  ಕೈ ವರೆಸಿಕೊಂಡರೆ ತಲವಾಟದ ರಾಘಣ್ಣ ಮಾತ್ರ ಬೇರೆ ಐಡಿಯಾ ಮಾಡಿದ್ದಾರೆ.  ರಾಘಣ್ಣ ಅಂದರೆ ಶ್ರೀಶ೦  ಬ್ಲಾಗಿನ ರಾಘವೇಂದ್ರ ಶರ್ಮ...!  

ಇವರದ್ದು ಹೊಸ ನಮೂನೆಯ ದೀಪ...!   ತಮ್ಮ ಜೀವನಾನುಭವ, ಜೇನು ಕೃಷಿ , ಅಡಿಕೆ ಕೃಷಿ ಇವುಗಳ ಸಾರವನ್ನೆಲ್ಲಾ ತೆಗೆದು   ಕಥೆ ಕಟ್ಟಿ, ಅದನ್ನೆಲ್ಲ ಸಂಗ್ರಹಿಸಿ ''ಕಟ್ಟು ಕಥೆಯ ಕಟ್ಟು''  ಮಾಡಿ ಅದನ್ನು ಪ್ರಕಟಿಸುತ್ತಿದ್ದಾರೆ ಪುಸ್ತಕವಾಗಿ. ದೀಪಾವಳಿ ಸಂಜೆಯನ್ನು ಹೀಗೆ ಅರ್ಥಪೂರ್ಣವಾಗಿಸುತ್ತಿದ್ದಾರೆ. ಇವರ ಜೇನು ಕೃಷಿಯ  ಸಿಹಿಯನ್ನು ಮೆಲ್ಲುತ್ತಾ ನಮಗೆ  ಜ್ಞಾನ ಕೃಷಿ   ಮಾಡಲೊಂದು ಅವಕಾಶ..!ಎಲ್ಲ ಕಡೆ ಸೋಸಿ ತಂದ ಜೇನು ಹನಿಗಳನ್ನು  ಪುಸ್ತಕ  ಪಾತ್ರೆಯಲ್ಲಿ  ಇಟ್ಟು ಕೊಡುತ್ತಿದ್ದಾರೆ ಸವಿಯಿರೆಂದು.   ಆಗಾಗ ಕೈ ಚೀಲದಿಂದ ತೆಗೆದು ಸವಿಯಬಹುದು. ತುಪ್ಪ ಸಕ್ರೆ ಪಾಕದಲ್ಲಿ ನೆನೆಸಿದ   ಹೋಳಿಗೆಯ ಸವಿದಂತೆ. ಗುಡ್ ಐಡಿಯಾ ...!


ಈ ಎರಡೂ ಸಂಬ್ರಮಕ್ಕೂ ನನ್ನದು ಗೈರು ಹಾಜರಿ  ಅನ್ನುವುದೇ ಶೇಷ. ರಾಘಣ್ಣನ ಕಾರ್ಯಕ್ರಮಕ್ಕೆ ನನ್ನ ಶುಭ ಹಾರೈಕೆಗಳನ್ನು ಇಲ್ಲಿಂದಲೇ ರವಾನಿಸುತ್ತಿದ್ದೇನೆ. ಹಾಗಾಗಿ ನೀವು ಹೋದವರು ಅಲ್ಲಿ ಏನೇನೆಲ್ಲ ನಡೆಯಿತು ?ಕಾರ್ಯಕ್ರಮ ಹೇಗಾಯ್ತು ? ಅನ್ನುವುದನ್ನು ನನಗೂ ಹೇಳುತ್ತೀರಲ್ಲವೇ..? 


ನಿಮಗೆಲ್ಲಾ ದೀಪಾವಳಿಯ ಶುಭ ಹಾರೈಕೆಗಳು.










Sunday, October 31, 2010

ಜಲವಿಹಾರ

 ನಿನ್ನೆ ಲಾಲ್ ಬಾಗ್ ಕೆರೆಯಲ್ಲಿ ಸಿಕ್ಕ ಕೆಲ ಸಂತಸದ ಕ್ಷಣಗಳು.
ಇಲ್ಲಿದೆ ಮೀನು.. 


 ನಮ್ಮ ಸಂಸಾರ ಆನಂದ ಸಾಗರ 


ಜೊತೆಯಲಿ... ನೀರಲಿ...


 ಮುಂದೆ ನೀ ಹೋದಾಗ ಹಿಂದೆ ನಾ ಬರುವೆ..


ಕದಡದಿರು ಬಿಂಬ 




ಗೆಳತೀ ಓ ಗೆಳತಿ ಕೇಳೆ ಸ್ವಲ್ಪಾ...



ಎಲ್ಲರಿಗೂ ರಾಜ್ಯೋತ್ಸವದ ಶುಭ ಹಾರೈಕೆಗಳು.

Thursday, October 21, 2010

ಮರಿ ಹಾಕಿದ ನಾಯಿ ತನ್ನ ಮೊದಲ ಮರಿಯನ್ನು ತಿನ್ನುತ್ತದೆಯೇ...?

''ಮಕ್ಕಳೇ ... ಒಲೆ ಬದಿಗೆ ಹೋಗಬೇಡಿ. ಒಲೆ ಒಳಗೆ  ನಾಯಿ  ಮರಿ ಹಾಕಿದೆ...  ಹತ್ತಿರ ಹೋದವ್ರನ್ನ ಕಚ್ಚಿ ಬಿಡುತ್ತೆ.''
ಅಂಗಳದಲ್ಲಿ  ತೊಗರೊಲೆ  ಬದಿಗೆ   ಥ್ರೋಬಾಲ್ ಆಡುತ್ತಿದ್ದ ಕ್ಷಮಾ ಮತ್ತು ಪಾರ್ಥ ರನ್ನು ಕರೆದು ಅಜ್ಜ ಎಚ್ಚರಿಸಿದರು.ತೊಗರೊಲೆ ಅಂದರೆ ಅಡಿಕೆ ಬೇಯಿಸಲು ಉಪಯೋಗಿಸುವ ದೊಡ್ಡ ಒಲೆ.ನಾಯಿ ಒಲೆ ಒಳಗೆ, ಚೀಲದ ಸಂದು ಹೀಗೆ ಮರಿ ಹಾಕಲೊಂದು ಜಾಗ ಮಾಡಿಕೊಳ್ಳುತ್ತದೆ.
'' ಟಾಮಿ ಮರಿ ಹಾಕಿದೆಯಾ?  ನಾನು ನೋಡಬೇಕು... ತೋರಿಸು ಅಜ್ಜ...." ಕ್ಷಮಾ ಅಜ್ಜನಿಗೆ ಗಂಟು ಬಿದ್ದಳು.
''  ಹೇಳಿದ್ದೆ  ತಪ್ಪಾಯ್ತು. ನೋಡು ಮರಿ ಹಾಕಿದ ನಾಯಿಗೆ ಸಿಟ್ಟು ಜಾಸ್ತಿ. ಕಚ್ಚತ್ತೆ ಅಂದರೆ ಕೇಳಬೇಕು..ಇಲ್ಲ ನಾಯಿ ಕಚ್ಚಿದ್ದಕ್ಕೆ ಹೊಕ್ಕುಳ ಸುತ್ತ  ಹದಿನಾಲ್ಕು ಇಂಜಕ್ಷನ್ ಹಾಕಿಸ್ಕೋ ಬೇಕಾಗುತ್ತೆ.. ''
'' ದೂರದಿಂದ ನೋಡ್ತೇನೆ. ಟಾಮಿ ಪಾಪ ಏನೂ ಮಾಡಲ್ಲ, ಟಾಮಿ .. ಟಾಮಿ .. ಕ್ರು.. ಕ್ರು .. '' ಪಾರ್ಥ ಒಲೆಯಲ್ಲಿ ಬಗ್ಗಿ ನೋಡಿದ.
''  ಅಜ್ಜ ..    ಮೂರು ಮರಿ ಇದೆ.  ಕಣ್ಣು ಕೂಡಾ ಬಿಟ್ಟಿಲ್ಲ..'' ಬೆರಗಿನಿ೦ದ ತನ್ನ ಬಟ್ಟಲುಗಣ್ಣು ಅರಳಿಸುತ್ತಾ ಹೇಳಿದ.
''ನಾಕ್  ಹಾಕಿರ್ತೈತಿ....  ಮದಾಲಿನ್  ಮರೀನಾ ನಾಯೇ ತಿನ್ದ್ಬುಡ್ತೈತಿ. ಮೂರ್ ಉಳ್ಕಂಡ್  ಐತೆ ... '' ಕೆಲಸದ ಮಂಜ ವೀಳ್ಯದೆಲೆಗೆ ಸುಣ್ಣ ಸವರುತ್ತಾ ಹೇಳಿದ.
'' ಸುಳ್ಳು,  ಯಾವ್ದೂ ತನ್ನ ಮರೀನೆ ತಾನು ತಿನ್ನಲ್ಲಪ್ಪಾ.. ''  ಕ್ಷಮಾ ನಂಬಲು ತಯಾರಿಲ್ಲ.
''ಅಲ್ಲಾ .. ನಾ ನೋಡೀನಿ.. ಹೊದೊರ್ಸ ನಮ್ಮನೆ ನಾಯಿ ನಾ ನೋಡ್ ನೋಡ್ತಾ ಇದ್ದಂಗೆ ತಿಂದ ಬುಡ್ಲಾ.. ? ಮದಾಲಿನ್ ಮರೀನ್ ತಿನ್ನದ್ ಸುಳ್ಳಲ್ಲ... '' ಮ೦ಜ ವಾದಿಸಿದ.


''ಅಜ್ಜ ಹೌದಾ ..? ಮಂಜ ಹೇಳಿದ್ದು ನಿಜಾನ ...?''
''ಹಾಗಂತ ಹೇಳ್ತಾರೆ.. ಎಲ್ಲವೂ ತಿನ್ನತ್ತೆ ಅ೦ತ ಅಲ್ಲ.. ಹೋಗು ಮಹಡಿ ಮೇಲೆ ನಿನ್ನ ಅತ್ತೆ ಇದ್ದಾಳಲ್ಲ..ಅವಳನ್ನು ಕೇಳು.. ಸರಿಯಾಗಿ ವಿವರಿಸ್ತಾಳೆ. ''
''ಅತ್ತೆ .... ಅತ್ತೇ....  ವೀಣತ್ತೆ..'' ಮನೆ ಮೊಳಗುವಂತೆ ಕರೆಯುತ್ತಾ  ಮೆಟ್ಟಿಲುಗಳನ್ನು ಧಡ ಧಡ ಹತ್ತಿ ಬಂದರು ಕ್ಷಮಾ ಮತ್ತು ಪಾರ್ಥ.. ವೀಣಾ ಓದುತ್ತಾ  ಕುಳಿತಲ್ಲಿಗೆ.
ಮಕ್ಕಳು ತಮ್ಮ ಸಮಸ್ಯೆಯನ್ನು ಅತ್ತೆಯ ಮುಂದಿಟ್ಟರು. ''ಅತ್ತೇ, ನಾಯಿ ಮರಿ ಹಾಕಿದ ನಂತರ ತನ್ನ ಮರಿಗಳನ್ನೇ ತಿನ್ನುತ್ತಾ....? ಯಾಕೆ ತಿನ್ನುತ್ತೆ..? ಆಮೇಲೆ ಉಳಿದ ಮರಿಗಳನ್ನು ಯಾರಿಗೂ ಮುಟ್ಟಲು ಬಿಡದಂತೆ ಕಾಪಾಡುತ್ತದಲ್ಲ... ಯಾಕೆ ಹೀಗೆ....?
ಮಕ್ಕಳಿಬ್ಬರೂ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.
ವೀಣಾ ವಿವರಿಸಲು ತೊಡಗಿದಳು..'' ನೋಡಿ ..
ನೀವು ಹೈಸ್ಕೂಲ್ ಮಕ್ಕಳಲ್ಲವೇ, ನಿಮಗೆ ಅರ್ಥವಾಗುತ್ತದೆ ಈ ವಿಚಾರಗಳೆಲ್ಲ. 


ನಾಯಿ ಸೂಕ್ಷ್ಮ ಪ್ರಾಣಿ... ಅದಕ್ಕೆ ಹುಟ್ಟಿನಿಂದ ಬರುವ ಸಹಜ ಗುಣದ [basic instinct] ಜೊತೆಗೆ    ಹೇಳಿಕೊಟ್ಟಿದ್ದನ್ನು ಕಲಿಯುವ ಗುಣವಿದೆ. ಅದು ಕೆಲವನ್ನು ನೋಡಿಯೂ  ಅನುಸರಿಸಬಲ್ಲದು.ಅವು ಮರಿಯಾಗಿದ್ದಾಗಲೇ ಕಲಿಸುವಿಕೆ ಶುರು ಮಾಡಬೇಕಲ್ಲದೆ ಬೆಳೆದ ನಾಯಿಗಳಿಗೆ ಕಲಿಸುವುದು ಕಷ್ಟ.
ಈಗ ನಾಯಿ ತನ್ನ ಮರಿಯನ್ನು ಏಕೆ ತಿನ್ನುತ್ತದೆ....? ಪಟ್ಟಿ ಮಾಡೋಣ.



೧ . ನಾಯಿ ಮರಿ  ಹೊರಬರುವಾಗ ಮಾಸು ಚೀಲದ [ placenta ] ಸಮೇತ ಬರುತ್ತದೆ.ಪ್ರತಿ ಪ್ರಾಣಿಗೂ ತಾಯ್ತನ ಅನ್ನುವುದು ಸಹಜ ಗುಣ. ಅದು ಈ ಮಾಸುಚೀಲ ಅಥವಾ ನೀರ್ಮೊಟ್ಟೆಯನ್ನು ತನ್ನ ಹಲ್ಲುಗಳಿಂದ ಹರಿದು ಹೊಕ್ಕಳು ಬಳ್ಳಿಯನ್ನು ತುಂಡರಿಸಿ  ಮರಿಯನ್ನು ನೆಕ್ಕಲು ತೊಡಗುತ್ತದೆ.ಇದು ಮರಿಯ ಉಸಿರಾಟ ಕ್ರಿಯೆಯನ್ನು ಸರಾಗ ಗೊಳಿಸುತ್ತದೆ. ಮತ್ತು ಸಹಜವಾಗಿಯೇ ಎಲ್ಲಾ ಪ್ರಾಣಿಗಳೂ ತಮ್ಮ ಮಾಸನ್ನು ತಿನ್ನುತ್ತವೆ. ಮಾಸು ಕೀಳುವ ರಭಸದಲ್ಲಿ ಕೆಲವೊಮ್ಮೆ ಮರಿಗಳನ್ನೂ ಅಕಸ್ಮಾತ್ತಾಗಿ ತಿನ್ನುವ ಸಾಧ್ಯತೆಗಳಿವೆ.


೨.  ನಾಯಿ ಸುಮಾರಾಗಿ  ಮರಿ ಹಾಕುವ   ಒಂದು ದಿನ ಮುಂಚಿನಿಂದ ಆಹಾರವನ್ನು ಸರಿಯಾಗಿ ಸೇವಿಸುವುದಿಲ್ಲ. ತಿಂದಿದ್ದನ್ನು ಕಾರಿಕೊಳ್ಳುತ್ತದೆ.  ಹೆಚ್ಚಿನ ನಾಯಿಗಳದು ಕೋಪದ ಗುಣ.ತನಗೆ ನೋವಾದಾಗ, ನೋವಿಗೆ ಕಾರಣವಾದ  ವಸ್ತು ಅಥವಾ ಪ್ರಾಣಿಯ ಮೇಲೆ ಆಕ್ರಮಣ ಮಾಡುತ್ತದೆ. ಹೆರಿಗೆಯ ಸಮಯದಲ್ಲಾದ ನೋವಿನಿಂದ ಪ್ರಚೋದನೆಗೊಂಡ ನಾಯಿ ತನ್ನ ಮರಿಯನ್ನೇ ಕಚ್ಚುವ    ಸಾಧ್ಯತೆಗಳುಂಟು. ಮತ್ತು ಹಾಗೆಯೇ  ಮಾಂಸಹಾರಿ ಪ್ರಾಣಿಯಾದ್ದರಿಂದ ತಿನ್ನಲೂ ಬಹುದು.


೩. ಅಲ್ಲದೆ ಹೆರಿಗೆಯ ನಂತರ ತೀವ್ರವಾಗಿ ಹಸಿವೆಯಾಗುವುದೂ ಅಲ್ಲದೆ ನೋವಿನಿಂದ ಉಂಟಾದ ಕ್ರೋಧವೂ  ತನ್ನ ಮರಿಯನ್ನು ತಾನೇ ತಿನ್ನಲು ಕಾರಣವಿರಬಹುದು.ಏಕೆಂದರೆ ಮನುಷ್ಯರಂತೆ ಅವುಗಳಿಗೆ ವಿವೇಚನಾ ಶಕ್ತಿಯಿರುವುದಿಲ್ಲವಲ್ಲ.ಒಮ್ಮೆ ಹೊಟ್ಟೆ ತುಂಬಿದ ನಂತರ ಸಹಜ ತಾಯಿ ಭಾವದಿಂದ ಉಳಿದ ಮರಿಗಳನ್ನು ಕಾಪಾಡಬಹುದು. ಮತ್ತು ಆಗ ತನ್ನ ಮರಿಗಳನ್ನು  ಮುಟ್ಟಲು ಬಂದವರನ್ನು ಹೆದರಿಸುತ್ತದೆ.ಕೆಲವೊಮ್ಮೆ ಕಚ್ಚುತ್ತದೆ. ಅವುಗಳನ್ನು ಮೆತ್ತಗೆ ಕರೆಯುತ್ತಾ ವಿಶ್ವಾಸಕ್ಕೆ ತೆಗೆದುಕೊಂಡಾಗ ಅದು ನಮ್ಮನ್ನು ನಂಬುತ್ತದೆ.


ಮತ್ತು ಎಲ್ಲಾ ನಾಯಿಗಳೂ ಈ ರೀತಿ ತನ್ನ ಮರಿಯನ್ನು ತಾನೇ ತಿನ್ನುವುದಿಲ್ಲ. ಕೋಪದ ಪ್ರವೃತ್ತಿಯಿರುವ ನಾಯಿಗಳು ಹೀಗೆ ಮಾಡುತ್ತವೆ. [aggresive ness ] ಎಲ್ಲ  ನಾಯಿಗಳೂ  ಕಚ್ಚುವುದಿಲ್ಲವಲ್ಲ... ಹಾಗೇ.   ಅಲ್ಲದೆ ಪ್ರಾಣಿಗಳ ಕೆಲವು ನಡವಳಿಕೆಗಳು ಇನ್ನೂ ಅರ್ಥವಾಗದೆ ಇರುವಂತಹದ್ದು ಬೇಕಷ್ಟಿವೆ.     




 ಮತ್ತೆ ಅಲ್ಲಿಯೇ ಹೋಗಬೇಡಿ.. ಗೊತ್ತಾಯ್ತೆನ್ರೋ '' 
''ಸರಿ,   ಪೇರಳೆ ಮರಕ್ಕೆ ಹೋಗೋಣ '' ಎನ್ನುತ್ತಾ ಕ್ಷಮಾ ಪಾರ್ಥ  ಹೊರಗೆ  ನಡೆದರು.


 ಹೆಚ್ಚು ಕಡಿಮೆತಾಯಿಯ ಸಮಕ್ಕಿದೆ ಮರಿ. ಆದರೂ ತಾಯಿ ಪ್ರೀತಿ.

 ಪ್ರಾಣಿಗಳ ನಡವಳಿಕೆಗಳ ಅಧ್ಯಯನ ತು೦ಬಾ ಆಸಕ್ತಿ ದಾಯಕ. ಅವುಗಳ ವೈವಿಧ್ಯತೆಯನ್ನು, ವೈಚಿತ್ರ್ಯವನ್ನು  ಸೂಕ್ಷ್ಮವಾಗಿ ಗಮನಿಸಿಯೇ ಅರಿತುಕೊಳ್ಳಬೇಕು. ಮನುಷ್ಯರಂತೆ ಮಾತಾಡಬಲ್ಲವಾಗಿದ್ದರೆ ಒಮ್ಮೆ ಕೇಳಿ ನೋಡಬಹುದಿತ್ತು.. ಅಲ್ಲವೇ ?




[ ಈ ಬಗ್ಗೆ  ಇನ್ನೂ ಹೆಚ್ಚಿನ ಮಾಹಿತಿಯಿದ್ದವರು ದಯವಿಟ್ಟು ಹಂಚಿಕೊಳ್ಳಿ]

Tuesday, October 12, 2010

ಹೆಜ್ಜೆ ಮೇಲೆ ಹೆಜ್ಜೆ .. ಚಿತ್ತಾರದರಮನೆಗೆ ಆಯ್ತು ವರುಷ.....!

  ತುಂಬಾ ದಿನಗಳೇ ಆಗಿ ಹೋಯ್ತು. ಬ್ಲಾಗಿನ ಕಡೆ ಮುಖ ಹಾಕಿ..  
ಅಷ್ಟರಲ್ಲೇ ಚಿತ್ತಾರದರಮನೆಗೆ ವರ್ಷವಾಯ್ತೆನ್ನುವ ವಿಚಾರ ನನ್ನ ತಲೆಗೆ ಹೋಗಿದ್ದೂ ಲೇಟಾಗೆ... ಹಾಗಾಗಿ ಬಣ್ಣ ಬಡಿಯ ಬೇಕಾಗಿದೆಯೆ೦ದು ಗಡಿಬಿಡಿಯಲ್ಲಿಯೇ ಬ೦ದೆ....
ಮತ್ತಿನ್ನೇನು....  ಮಾತಿನ ಮಧ್ಯದಲ್ಲಿ ಸಿಕ್ಕಿದ ಮಾಹಿತಿಯ ಬೆನ್ನು ಹಿಡಿದು ಹೋದಾಗ ಸಿಕ್ಕಿದ್ದು ಈ ಚಿತ್ತಾರದರಮನೆಗೊಂದು ಸೈಟು ... 
ಸೈಟು   ಮಾಡಿಟ್ಟು ಕೊ೦ಡ ಮೇಲೆ ಮನೆ ಕಟ್ಟಿದ್ದೂ ಆಯ್ತು.. ಕಲರವ ಶುರು ಆಗಿದ್ದೂ ಆಯ್ತು.
ಸಪ್ಟೆ೦ಬರ್ ನಲ್ಲಿ ಶುರು ಮಾಡಿದ್ದಾದರೂ ಬರೆದದ್ದು ವಿಜಯದಶಮಿ ಕಳೆದ ಮೇಲೆ.. ಅಕ್ಟೋಬರ್ ಮಧ್ಯದಲ್ಲಿ.

ಬಹುಷ: ನಾನೇನಾದರೂ ಬರೆದಿದ್ದು [ಅಥವಾ ಅಕ್ಷರಗಳನ್ನು  ಕುಟ್ಟಿದ್ದು ] ಅ೦ತ ಅ೦ದರೆ ಈ ಬ್ಲಾಗಿನಲ್ಲಿಯೇ.. ಅಲ್ಲಿಯವರೆಗೆ ಬರಹ ಅದು,ಇದು ಮಣ್ಣು ಮಶಿ. ಅ೦ತ ಯೋಚಿಸಿದ್ದೇ ಇಲ್ಲ.

ಮೊದಲ ಪೋಸ್ಟ್ ಹಾಕಿದ ನ೦ತರ ನೂರಾ ಒ೦ದು ಸಲ ನಾನೇ ಓದಿದೆ....!!!!!! ಲಲಿತಾ ಸಹಸ್ರ ನಾಮ ಓದಿದ೦ತೆ.....!!!!  ಬ್ಲಾಗ್ ಅ೦ದರೇನೂ೦ತ ಗೊತ್ತಾಗಲಿಕ್ಕೆ ಸುಮಾರು ದಿನ ಬೇಕಾಯ್ತು. ಅಲ್ಲದೆ ನಾನು ಟೆಕ್ನಾಲಜಿಯಲ್ಲಿ ಸ್ವಲ್ಪ ಹಿ೦ದೆ.
ಪೋಸ್ಟ್ ಹಾಕಿದಾಕ್ಷಣ ಚುಕ್ಕಿ ಚಿತ್ತಾರದ ಮೇಡ್೦ ... ಅಕ್ಕಯ್ಯ...ತ೦ಗಿ... ಅದೇನೋ ಬರೆದಿದ್ದಾರೆ... ಅ೦ದುಕೊ೦ಡು ಸಡಗರದಿ೦ದ ಬ೦ದು ಓದುವವರು  ನೀವು....
 ನನ್ನ ಬ್ಲಾಗ್ ಬರಹಗಳನ್ನು ಓದಿ ಅದನ್ನು ವಿಮರ್ಶಿಸಿ,   ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಿದವರು ನೀವು .

ನಿಮಗೆ ನನ್ನ ಮೊದಲ ನಮಸ್ಕಾರ.

ಪ್ರತಿಯೊ೦ದು ಕ್ರಿಯೆಗೂ ಪ್ರೇರಣೆ ಬೇಕಾಗುತ್ತದೆ.. ಪ್ರೇರಣೆ ಇದ್ದಲ್ಲಿ ಪ್ರಗತಿಯೂ ಹೆಚ್ಚು . 
ನಾನು ಬರೆದ ಲೇಖನಗಳಾಗಲೀ, ಕಥೆಗಳಾಗಲೀ,  ಕವಿತೆಯಾಗಲೀ, ಚಿತ್ರಗಳಾಗಲೀ ನಿಮ್ಮೆಲ್ಲರ ಪ್ರೋತ್ಸಾಹವಿರದಿದ್ದಲ್ಲಿ  ಬೆಳೆಯುವುದು ಇನ್ನೂ  ನಿಧಾನವಾಗುತ್ತಿತ್ತೇನೋ ..... ಅಥವಾ ಆಸಕ್ತಿ ಕಡಿಮೆಯಾಗುತ್ತಿತ್ತೇನೋ..ಈ ಬ್ಲಾಗಿನ ಮಾಧ್ಯಮದಲ್ಲಿ ನನಗೆ ಪ್ರೇರಣೆಯಾಗಿದ್ದು ನಿಮ್ಮೆಲ್ಲರ ಪ್ರೋತ್ಸಾಹ... ಸಹಾಯ ... ಸಾ೦ತ್ವಾನ...
ಈ ಸಾಗರದಲ್ಲಿ ನಾನೊ೦ದು ಬಿ೦ದು. ಚಿಕ್ಕದೊ೦ದು ಚುಕ್ಕಿ. ಈ ಚುಕ್ಕಿಯನ್ನು ವಿಸ್ತಾರ ಮಾಡಲು ಸಹಕರಿಸಿದ್ದೀರಿ.  ತೆವಳುತ್ತಾ,  ತೊದಲುತ್ತಾ ಸಾಗುವ ನನ್ನ ನಡೆಗೊ೦ದು, ನುಡಿಗೊ೦ದು  identity ಒದಗಿಸಿದ್ದೀರಿ. ನನ್ನ ಕ್ರಿಯಾಶೀಲತೆ ಹೆಚ್ಚಿಸಿದ್ದೀರಿ.


ನಿಮಗೆ ನನ್ನ ನಮನ....


ನನ್ನದು  ಬರಹವೋ ಸಾಹಿತ್ಯವೋ ಮತ್ತೆ೦ತದೋ... ಅ೦ತೂ ನನ್ನ ಅಭಿಪ್ರಾಯಗಳನ್ನು ಹ೦ಚಿಕೊಳ್ಳಲು ಇರುವ ಅವಕಾಶ... ಒ೦ದು ವೇದಿಕೆ ಇದು. ನೀವೆಲ್ಲಾ ನನ್ನ ಅಭಿಪ್ರಾಯಗಳನ್ನು ಓದಿದ್ದೀರಿ. ಮೆಚ್ಚಿದ್ದೀರಿ. ತಪ್ಪು ತಿದ್ದಿದ್ದೀರಿ.  ನಿಮ್ಮ ಅಭಿಪ್ರಾಯಗಳ ಮೂಲಕ ನನ್ನ ಒಳ ಅರಿವಿನ ಹರಿವನ್ನು ಹೆಚ್ಚಿಸಿದ್ದೀರಿ. ಪ್ರತಿಕ್ರಿಯಿಸಿದ.. ಓದಿದ... ಪ್ರತಿಯೊಬ್ಬರೂ ನನಗೆ ತು೦ಬಾ ಮುಖ್ಯ.  ಮತ್ತೆ ನಿಮ್ಮೆಲ್ಲರ ಸ೦ಗಡ ನಾನೂ ಬರುತ್ತಿದ್ದೇನೆ....



ನನ್ನ ಕುಟು೦ಬದೊಡಗೂಡಿ ನಿಮಗೆಲ್ಲರಿಗೂ  ನನ್ನ ಹ್ರುತ್ಪೂರ್ವಕ ನಮಸ್ಕಾರಗಳು...









Thursday, August 5, 2010

ಹೀಗೊ೦ದು ಆಕ್ಸಿಡೆ೦ಟ್ ......

ಗೆಳತಿ ತುಂಬಾ ಒತ್ತಾಯ ಮಾಡಿ ಕರೆದಿದ್ದಕ್ಕೆ ಹೊರಟಿದ್ದು...ಯಜಮಾನ್ರು , ಮಕ್ಕಳನ್ನ ಆಫೀಸಿಗೆ , ಶಾಲೆಗೇ ಅಂತ ಕಳಿಸಿ ಗಡಿಬಿಡಿಯಲ್ಲೇ ತಯಾರಾಗಿ ಹೊರಡುವ ಹೊತ್ತಿಗೆ ಘಂಟೆ ೯. ೩೦ ಆಗಿತ್ತು.. ಹತ್ತು ಘಂಟೆಗೆಲ್ಲಾ ಗೆಳತಿಯ ಮನೆಗೆ 
   ಬರುತ್ತೇನೆಂದು ಹೇಳಿದ್ದೆ..ಅಲ್ಲಿಂದ ಇಬ್ಬರೂ  ಸಿಟಿಗೆ  ಹೋಗುವ ಪ್ಲಾನ್...


'' ಆಟೋ .... ಆಟೋ....'' ಯಾರೂ ನಿಲ್ಲಿಸುತ್ತಲೇ ಇಲ್ಲ..
ಒಬ್ಬ ನಿಲ್ಲಿಸಿದ..'' ಫಸ್ಟ್ ಬ್ಲಾಕ್ ಬರ್ತೀರಾ.... ?''
''ವಿಜಯನಗರ ಬೇಕಾದ್ರೆ ಬರ್ತೀನಿ ''

ಇವನ ತಲೆ ! ವಿಜಯನಗರಕ್ಕೆ ಹೋಗಿ ನಾನೇನು ಮಾಡ್ಲಿ....?ಏನ್ ಆಟೋದವರಪ್ಪಾ.. ಕರೆದಲ್ಲಿಗೆ ಬರುವುದಿಲ್ಲ.  ಆಟೋ ಇಟ್ಟಿದ್ದಾದರೂ ಯಾಕೆ ಅಂತಾ.  ಸಾಲಾಗಿ ಆಟೋ ನಿಲ್ಲಿಸಿಕೊಂಡು ಆಟೋ ಸ್ಟಾಂಡ್ ನಲ್ಲೆ ಬೇಕಾದರೆ ಬೆಳಗಿನಿಂದ ಸಂಜೆ ತನಕ ನಿಂತ್ಕೊಂಡು ಏನ್ ಮಾಡ್ತಾರೋ ?  ಏನೋ ಸ್ವಲ್ಪ ಬಂನೀಪ್ಪಾ ಅಂತ ಕರೆದರೆ ಸೊಕ್ಕು ಮಾಡುತ್ತಾರೆ.  ಹಾಳಾಗ್ ಹೋಗ್ಲಿ.  ನಿಂಗೆ ಇಲ್ಲ ದುಡಿಮೆ. ಮನದಲ್ಲೇ ಬೈದು ಕೊಂಡೆ.  ರೋಡಿನ ಆ ಪಕ್ಕಕ್ಕಾದರೂ ಹೋದ್ರೆ ಆಟೋ ಸಿಗಬಹುದು.  ಅಂದುಕೊಂಡೆ ರಸ್ತೆ ದಾಟಲು ಅಣಿಯಾದೆ.

ಒಹ್ ! ಏನು ಟ್ರಾಫಿಕ್ಕು ? ಹೌದು ಪೀಕ್ ಅವರ್ ಆಲ್ವಾ.  ಒಂದರ ಹಿಂದೆ ಒಂದು ಬರುತ್ತಲೇ ಇರುತ್ತವೆ.  ಈ ಬದಿಯಿಂದ ಆಬದಿಗೆ ಹೋಗಲು ಐದು ನಿಮಿಷಾನೆ ಬೇಕು.


ರ್ರ್ರೂಯ್ ..ರ್ರೂಯ್.... ರ್ರೋಯ್ .. ಇಂತಾ  ಟ್ರಾಫಿಕ್ ನಲ್ಲೂ ಈಪಡ್ಡೆ  ಹುಡುಗರ ಬೈಕ್ ಬಿಡುವ  ಉತ್ಸಾಹ ಮಾತ್ರಾ...   ಸಾಕಪ್ಪಾ ಸಾಕು.  ಮೈ ಮೇಲೆ ಹತ್ತಿಸಿಕೊಂಡು ಹೋಗ್ತಾರೇನೋ ಅನ್ನುವ ಭಯ   ನನಗೆ ಯಾವಾಗಲೂ.


ಸುಮ್ಮನೆ ನಿಂತೆ. ಎದುರಿಗೆ'' ಶಾಂತಿ ನಿವಾಸ '' ಎನ್ನುವ ಹೋಟೆಲ್ ಬೋರ್ಡ್ ಕಾಣಿಸಿತು.  ಪಕ್ಕನೆ ನಗು ಬಂತು...!   ಮಗ, ಮಗಳು ಬೆಳಿಗ್ಗೆ ಜಗಳ ಆಡುತ್ತಿದ್ದುದು ನೆನಪಾಗಿ. ವ್ಯಾಜ್ಯ ನನ್ನವರೆಗೂ ಬಂದಿದ್ದರಿಂದಲೇ  ನಗು ಬಂದಿದ್ದು.
''ಅಮ್ಮಾ,   ಶಾಂತಿ ಎಂದರೆ ಹಿ....[he] ನಾ...? ಶಿ....[she] ನಾ....? ಮಗ ಸಮಸ್ಯೆ ಹೊತ್ತು ತಂದಿದ್ದ..
'' ಪುಟ್ಟಾ ಶಾಂತಿ ಎಂದರೆ she ಕಣೋ .  ಶಾಂತಿ ಅನ್ನುವುದು ಹುಡುಗಿಯರ ಹೆಸರು''
''ನೋಡು ಅಮ್ಮಾ...   ಅಕ್ಕ ಓಂ ಶಾಂತಿ , ಶಾಂತಿ , ಶಾಂತಿ ಹಿ ಅಂತ ಹೇಳ್ತಾ ಇದ್ದಾಳೆ.  ನಾನೆಷ್ಟು ಹೇಳಿದ್ರೂ ಶಿ ಅಂತ ಹೇಳ್ತಿಲ್ಲಮ್ಮಾ.....?''
 ಎಲ್ಲರೂ ಜೋರಾಗಿ ನಕ್ಕಿದ್ದೆವು.
ಮತ್ತೆ ಸುತ್ತ ಮುತ್ತ ನೋಡಿಕೊಂಡೆ ನಕ್ಕಿದ್ದು ಯಾರಾದ್ರೂ ನೋಡಿದ್ರಾ ಅಂತ.

ಟ್ರಾಫಿಕ್ ಸ್ವಲ್ಪ ಕಡಿಮೆಯಾಗತೊಡಗಿತು.  ಸ್ವಲ್ಪ ದೂರದಲ್ಲಿ ಟ್ರಕ್ ಒಂದು ಬರುತ್ತಿತ್ತು  ಅಷ್ಟೇ.
ಈಗಲೇ  ರಸ್ತೆ ದಾಟಿದರೆ ದಾಟಬೇಕು. ಇಲ್ಲಾಂದ್ರೆ ಮತ್ತೆ ಸಿಗ್ನಲ್ ಬಿಟ್ಟು ವಾಹನಗಳ ಪ್ರವಾಹವೇ ಹರಿಯ ತೊಡಗುತ್ತೆ.
ಲಗುಬಗೆಯಿಂದ ದಾಟತೊಡಗಿದೆ.
'ಶ್ಯೇ .....ಆ ಟ್ರಕ್ ನವನು ಏಕ್ದಂ ಸ್ಪೀಡ್ ತಗೊಳ್ಳೋದೇ...?   ಮೈ ಮೇಲೆ ಬಂದಹಾಗೆ ಬಂದ ನೋಡಿ. ಚಂಗನೆ ಪಕ್ಕಕ್ಕೆ ಹಾರಿಕೊಂಡೆ. ಸವರಿಕೊಂಡೇ ಹೋದಂತೆನಿಸಿತು ಒಮ್ಮೆ. ಅಲ್ಲೇ ಬದಿಯಲ್ಲಿ ಕುಕ್ಕರಿಸಿದೆ..!   ಕಿರ್ರೋಓಒ ಅಂತ ಬ್ರೇಕ್ ಶಬ್ದ.

ಸ್ವಲ್ಪ ಸುಧಾರಿಸಿಕೊಂಡು ನೋಡ್ತೇನೆ. ಜನ ಎಲ್ಲಾ ಬರ್ತಾ ಇದ್ದಾರೆ. ನನಗೇನೂ ಆಗಿಲ್ಲ ಸಧ್ಯ...!! ಮತ್ಯಾರದ್ದೋ ಮೈ ಮೇಲೆ ಟ್ರಕ್ ಹತ್ತಿಸಿದ್ದಾನೆ.  ಈ ಟ್ರಕ್ ಡ್ರೈವರ್ ಗಳಿಗಂತೂ ಪ್ರಜ್ಞೆಯೇ ಇರುವುದಿಲ್ಲ. ಕುಡಿದಿದ್ದನಿರಬೇಕು.
ಎಲ್ಲಾ ಜನ ಸೇರತೊಡಗಿದರು.

ನಾನು ನೋಡ್ತಲೇ ಇದ್ದೇ. ಅದ್ಯಾರೋ ಬ್ಯಾಗ್ ನಿಂದ   'ಮೊಬೈಲ್ ' ತೆಗೆದು  ಕಾಲ್ ಮಾಡತೊಡಗಿದ....!!! ಅರೆ, ನನ್ನ ಬ್ಯಾಗು...! ಓಹ್ ,  ಹಾರಿಕೊಳ್ಳುವ ರಭಸದಲ್ಲಿ ಕೈ ತಪ್ಪಿಬಿದ್ದು  ಹೋಗಿತ್ತಾ ?  ಛೇ,  ಎಂತಾ ಜನ ಇರುತ್ತಾರೆ ನೋಡಿ.  ಏನೋ ಅಯ್ಯೋ ಪಾಪ ಅಂತ ಬ್ಯಾಗ್ ಹೆಕ್ಕಿ ಕೊಡುವುದು ಬಿಟ್ಟು ಮೊಬೈಲ್ ತೆಗೆದು ಕಾಲ್ ಬೇರೆ ಮಾಡ್ತಿದ್ದಾನಲ್ರೀ....?


''ಓಯ್ .... ಸ್ವಾಮಿ .. ಕೊಡ್ರೀ ಇಲ್ಲಿ.. ನಂ ಬ್ಯಾಗನ ಮೊಬೈಲ್ನ... ಕೊಡ್ರೀ ಇಲ್ಲಿ.. ''

ಅಯ್ಯೋ.  ಪುಣ್ಯಾತ್ಮ ತಿರುಗಿಯೂ ನೋಡಲಿಲ್ಲ. ಅಥವಾ ಭಯದಲ್ಲಿ ನನಗೆ ಧ್ವನಿಯೇ ಹೊರಡುತ್ತಿಲ್ಲವೋ !  ಅರ್ಥವಾಗುತ್ತಿಲ್ಲ..ಶಾಕ್ ಆಗುವುದೆಂದರೆ ಇದೆ ತರಾ ಇರಬೇಕು....!!  ಮು೦ದೆ ಹೆಜ್ಜೆ ಕಿತ್ತಿಡಲೂ ಸಾಧ್ಯ ಆಗ್ತಾ ಇಲ್ಲ  ನನಗೆ.


ನಾನೂ ಈಗ ಆಕ್ಸಿಡೆಂಟ್ ಆದ ವ್ಯಕ್ತಿಯತ್ತ ನೋಡತೊಡಗಿದೆ. ಅದು ಹೆಂಗಸು, ಸುತ್ತ ಮುತ್ತಿಕೊಂಡ ಜನರ ನಡುವೆಯೇ ನನಗೆ ಕಾಣಿಸುತ್ತಿತ್ತು. ನನಗೊಂದು ತರಾ ಸಿಟ್ಟು ಬಂತು. ಎಲ್ಲಾ ಆ ಹೆಂಗಸಿನ ಸುತ್ತಲೇ ಇದ್ದಾರೆ ಹೊರತೂ ಆಘಾತಕ್ಕೊಳಗಾದ ನನ್ನನ್ನು ಯಾರೂ ಗಮನಿಸುತ್ತಲೇ ಇಲ್ಲ.   ಛೇ..
ಅಷ್ಟರಲ್ಲಿ ನಮ್ಮವರ ಕಾರ್ ಬರುತ್ತಿದ್ದುದು ಕಾಣಿಸಿತು..      


ಓಹ್ ... ಸಧ್ಯ  ಇಲ್ಲೆಲ್ಲೊ ಕೆಲಸದ ಪ್ರಯುಕ್ತ  ಬ೦ದಿರಬೇಕು. ಕೈ ಮಾಡಿದೆ. ..... ರೀ.... ರೀ.....
ಹ್ನಾ.. ನನ್ನನ್ನ ನೋಡುತ್ತಲೇ ಇಲ್ಲ......!!!!  ಸೀದಾ ಗು೦ಪಿನತ್ತಲೇ ನಡೆದರು..ಏನ್ ಇವ್ರು.  ಇಷ್ಟು ಎದುರಲ್ಲಿ ನಿ೦ತಿದ್ದರೂ ನೋಡದೇ ಅಲ್ಯಾಕೆ ಹೋದರು..?




 ನನಗೆ ಎಲ್ಲವೂ ನಿಚ್ಚಳವಾಗತೊಡಗಿತ್ತು. ನನ್ನವರು   ತಲೆ ಮೇಲೆ ಕೈ ಹೊತ್ತು ಕೊ೦ಡು  ಹೆ೦ಗಸಿನ ಬದಿಯಲ್ಲಿ  ಕೂತುಕೊ೦ಡಿದ್ದು ಕಾಣಿಸುತ್ತಿತ್ತು.  ಅರೆ... ಇವರ ಆಫೀಸಿನಲ್ಲಿ ಕೆಲಸ ಮಾಡುವವರಾರಾದರೂ ಇರಬಹುದಾ...?  ಇದ್ದರೂ ಇರಬಹುದು..
ಆದರೆ ಇವರ ಕಣ್ಣಲ್ಲಿ ನೀರೇಕೆ....? ಉಳಿದ ಜೊತೆಯವರು ಇವರನ್ನು ಸಮಾಧಾನಿಸುವುದ್ಯಾಕೆ....?  ಯಾವುದೋ ಸ೦ಬ೦ಧದ  ಎಳೆ ಬಿಗಿಯತೊಡಗಿತು..


ಅಷ್ಟೋತ್ತಿಗೆ ಅ೦ಬ್ಯುಲೆನ್ಸ್  ಬ೦ತು.. ಆ ಹೆ೦ಗಸಿನ ದೇಹವನ್ನು ಎತ್ತಿ ವಾಹನದಲ್ಲಿಡತೊಡಗಿದರು.. ಸುಮಾರು ನನ್ನದೇ  ವಯಸ್ಸಿನಾಕೆ. ನಾನು ಧರಿಸಿದ೦ತೆಯೇ  ಆಕೆಯೂ ಬಿಳೀ ಬಣ್ಣದ ಚೂಡೀದಾರ್  ಧರಿಸಿದ್ದಳು..ರಕ್ತ ಚೆಲ್ಲಾಡಿತ್ತು.
  ನನ್ನವರೇನಾದರೂ ನಾನು ಅ೦ತ ತಪ್ಪು ತಿಳಿದಿರಬಹುದೇ...?
ಅಥವಾ  ರವಿಚ೦ದ್ರನ್ ಸಿನಿಮಾಗಳಲ್ಲಿ ಇರುವ೦ತೆ ಇಬ್ಬಿಬ್ಬರು  ಹೆಂಡತಿಯರು ............!!!!! ಇಬ್ಬರಿಗೂ ಒ೦ದೆ ತರಾ ಡ್ರೆಸ್ಸು ಗಿಫ್ಟ್ ಕೊಡುವುದು..!!!  ಒಂದೇ ತರದ ವಸ್ತುಗಳನ್ನು ಕೊಡುವುದು.....!!!  ದೇವ್ರೆ.....  ಹಾಗೊ೦ದು ಆಗದಿರಲಿ. ಕಣ್ಕತ್ತಲೆ ಬ೦ದ೦ತಾಯ್ತು.


                                                                           




ವಾಹನವೊಂದರಲ್ಲಿದ್ದೆ.. ನನಗೆ ಅರಿವು ಮೂಡಿದಾಗ .
.ಅದೊಂದು ಅಂಬುಲೆನ್ಸ್ ತರಾನೆ ಇತ್ತು.  ಈ ಮೊದಲು ಆ ತರದ ಗಾಡಿಯಲ್ಲಿ ಹೋದ ಅನುಭವವಿಲ್ಲ.
ಅರೆ ನಾನ್ಯಾವಾಗ ಹತ್ತಿಕೊಂಡೆ  ಈ ವೆಹಿಕಲ್ಲನ್ನ.  ನೆನಪಿಗೆ ಬರ್ತಾ ಇಲ್ಲ.  ಓಹೋ ಬಹುಷಃ ಎಚ್ಚರ ತಪ್ಪಿತ್ತು ಅಂತ ಕಾಣುತ್ತೆ  ನನಗೆ.   ಯಾರೋ ಎತ್ತಿ ಮಲಗಿಸಿದ್ದಾರೆ..ಪಾಪ ಪುಣ್ಯ ಇದೆ  ಜನಕ್ಕೆ.


ಅದೇನದು..? ಒಹ್,  ಆಕ್ಸಿಡೆಂಟ್ ಆದ ಹೆಂಗಸಿನ ಬಾಡಿ ಅನ್ನಿಸುತ್ತೆ. ಸತ್ತ ದೇಹದ ಜೊತೆ ನನ್ನನ್ನೂ ಕರೆದೊಯ್ಯುತ್ತಿದ್ದಾರೆ.   ಮನುಷ್ಯತ್ವವಿಲ್ಲದ ಜನರು.  ಭಾವನೆಗಳಿಗೆ ಬೆಲೆಯಿಲ್ಲ  ಇಲ್ಲಿ. ಅಥವಾ ಬೇರೆ ವೆಹಿಕಲ್ ಯಾಕೆ  ಹೆಣಕ್ಕೆ ಅಂತ ಅಂಬುಲೆನ್ಸ್ ನಲ್ಲಿಯೇ ಕರೆದೊಯ್ಯುತ್ತಿದ್ದಾರ... ?
ನನಗೇನಾಗಿದೆ ಮಹಾ  ಅಂತ ಅಂಬುಲೆನ್ಸ್ ನಲ್ಲಿ ಕರೆದೊಯ್ಯುತ್ತಿದ್ದಾರೆ.. ? ಯಾವ ನೋವು, ಉರಿ ಏನೂ ಇಲ್ಲ.   ಮುಖಕ್ಕಷ್ಟು ನೀರು ಚುಮುಕಿಸಿದ್ದಿದ್ದರೆ ಎಚ್ಚರವಾಗುತ್ತಿತ್ತು.   ಅದನ್ನು ಬಿಟ್ಟು ಈ ಹೆಣದ ಜೊತೆ ನನ್ನನ್ನು ...... ಛೆ.


ಯೋಚನೆಗಳ ಮಹಾಪೂರ ಮನದೊಳಗೆ ಪ್ರವಹಿಸುತ್ತಿತ್ತು.  ಗಾಡಿಯ ಅಲುಗಾಟದಿಂದ ಹೆಣದ ಮೇಲೆ ಮುಚ್ಚಿದ್ದ  ವಸ್ತ್ರ ಸರಿಯಲು ತೊಡಗಿತ್ತು.  ಕೈ ಮೇಲಿನ ಬಟ್ಟೆ ತುಸು ಸರಿಯಿತು.  ವಾಚು ಕಾಣಿಸಿತು.
ಹ್ಞಾ ... ಇದು ನನ್ನ ವಾಚಿನಂತದ್ದೆ.
 ಬೆರಳಿನಲ್ಲಿದ್ದ ಉಂಗುರ ಪರೀಕ್ಷಿಸಿದೆ. ಹೌದು.  ಹೋದ ವರ್ಷ ಹುಟ್ಟುಹಬ್ಬಕ್ಕೆ ಕೊಟ್ಟ ಉಡುಗೊರೆ  ಇದೆ ತರದ ಉಂಗುರವಲ್ಲವೇ...?
ಹ್ಹಾ ..ವಿಧಿಯೇ..! ಅನಿಲ್ ಕಪೂರ್ ಸಿನಿಮಾ ನೆನಪಾಯ್ತು.   ಘರವಾಲೀ ಬಾಹರ್ವಾಲೀ .....
ಮನೆಯಲ್ಲೊಬ್ಬಳು.   ಹೊರಗಡೆ ಇನ್ನೊಬ್ಬಳು. ಇಷ್ಟು ದಿನವಾದರೂ ಒಂಚೂರೂ ಗೊತ್ತಾಗದೆ ಹೋಯ್ತೆ.
ಹೇ  ದೇವ್ರೇ...!  ಸತ್ತವಳು ಸತ್ತಳು ನನಗೆ ಗೊತ್ತು ಮಾಡಿಯೇ ಸಾಯಬೇಕೆ....?
ಮನೆಗೆ ಹೋದಮೇಲೆ ವಿಚಾರಿಸಿಕೊಳ್ಳುತ್ತೇನೆ ಯಾವುದಕ್ಕೂ.


ಅಯ್ಯೋ ಎಷ್ಟೊತ್ತು ಆಗೋಯ್ತು. ಮಕ್ಕಳು ಬೇರೆ ಮನೆಗೆ ಬಂದು ಕಾದಿರುತ್ತಾರೆ .. ಅಮ್ಮಾ ಎಲ್ಲಿ ಅಂತ ಗಾಬರಿಯಾಗುತ್ತಾರೆ.
ಅಂತ ಟೈಮ್ ನೋಡಿದೆ ಕೈಲಿದ್ದ ವಾಚನ್ನು.
ಹ್ಞಾ ...ವಾಚೆಲ್ಲಿ...?...?    ಕೈ ತಿರುಗಿಸಿ ನೋಡಿದೆ..
ಉಸಿರು ನಿಂತಂತಾಯ್ತು.. ಕೈಯೇ ಕಾಣುತ್ತಿಲ್ಲ...!!
 ಯಾಕೋ ಅನುಮಾನ ......  ದೆವ್ವ ಮೆಟ್ಟಿಕೊಂಡಿತೆ ..? ....ಪುಣ್ಯಾತ್ಗಿತ್ತಿ ಯಾರಿವಳು  ನೋಡೋಣ ಅಂತ ಮುಖದ ಮೇಲಿನ ವಸ್ತ್ರವನ್ನು ನಿಧಾನವಾಗಿ ಸರಿಸುತ್ತಿದ್ದಂತೆ.......
..........................................
.........ಮುಖ
ನೋಡಿದರೆ....
ನೋಡಿದರೆ  ...  ....................
ಅದು ನನ್ನ ಮುಖ.......!!!!!!
...........................
ಹ್ಹಾ...ಹ್ಹಾ...ಹ್ಹ..
ನನಗೆ ತೆಲುಗು ಲೇಖಕರೆಲ್ಲ ಒಮ್ಮೆಲೇ ನೆನಪಾದರು... ಯಂಡಮೂರಿ..ವಂಶಿ... ..... ....ಇತ್ಯಾದಿ..
ಇದು ನನ್ನ ಮೂರನೇದೋ  ನಾಲ್ಕನೇದೋ   ಆಯಾಮಾ......!!!
ಹ್ಹಾ....ಹ್ಹಾ....ಹ್ಹಾ...






''ಏ... ಏಳೇ... ಏಳು ಘಂಟೆಯಾಯ್ತು. ಅನ್ನಪೂರ್ಣೆಶ್ವರಿ  ತಾಯೀ... ಏಳು ಟೀ ಮಾಡೇ .....''

 ಸದಾಶಿವ ಮೈ ಅಲುಗಾಡಿಸಿ ಎಚ್ಚರಿಸುತ್ತಿದ್ದ...
ದಿಗ್ಗನೆದ್ದಳು   ಸುಧಾ..  ಏನೂ ಅರ್ಥವಾಗದೆ ತನ್ನ ಮೈಯನ್ನೆಲ್ಲಾ ನೋಡಿಕೊಂಡಳು... ಪಕ್ಕದಲ್ಲಿ ನೋಡಿದಳು. ಮಗ ತಲೆಕೆಳಗಾಗಿ  ಮಲಗಿದ್ದ..ಮಗಳು ಮಲಗಿದಲ್ಲೆ ಕಣ್ಣು ಬಿಟ್ಟು ನೋಡುತ್ತಿದ್ದಳು.

ಅರೆ   ಇಷ್ಟೊತ್ತೂ ಕನಸಿನಲ್ಲಿದ್ದೆನಾ...?
ಮುಖದಲ್ಲಿ ನಗು ಹೊಮ್ಮಿತು..
  .[ ಕಥೆ]                                                  

Wednesday, July 28, 2010

ಇರಬಹುದೇ ಹೀಗೆ....?

ಇರಬಹುದೇ ಹೀಗೆ....?
ದೊಡ್ಡ ತಲೆ 
ಹೊರಚಾಚಿದ ಕಣ್ಣು 
ಕುತ್ತಿಗೆಗೇ ಕೈ 
ಸುರುಟಿಹೋದ ಮೈ...

  ಇರಬಹುದೇ ಹೀಗೆ ...?
ಕಿವಿಗೆರಡು ತೂತು..
ಬೇಕಿಲ್ಲದ ಮಾತು..  
ಒಣಗಿ ಹೋದ ನಾಲಿಗೆ ..
ಕೆಲಸವಿಲ್ಲ ಕಾಲಿಗೆ..

ಇರಬಹುದೇ ಹೀಗೆ ..?
ಪರಲೋಕದ ಜೀವಿಯ ಹಾಗೇ..
ಜೀವ ಜಗತ್ತು ವಿಕಾಸವಾದದ್ದು ಹೇಗೆ..?
ಕೆಲಸವಿಲ್ಲದ ಅಂಗ 
ಆಗಬಹುದೇ ಭಂಗ...?

ಇರಬಹುದೇ ಹೀಗೆ..?
ಹತ್ತಾರು ಸಾವಿರ ವರುಷದ ಕೊನೆಗೆ..
ಬೀಸಿ ಗಣಕ ಯಂತ್ರದ ಹೊಗೆ
ಕೆಲಸ.. ತಲೆಗೆ ಮತ್ತು 
ಕೈ ಬೆರಳುಗಳಿಗೆ ಮಾತ್ರ..

ಇರಲೂ ಬಹುದು ಹೀಗೆ..ಮಾನವ 
ಅಳಿಯದೆ ಇದ್ದರೆ ಅವನ ಪೀಳಿಗೆ
 ......ಈ ಭೂಮಿ    ಹಸಿರಿದ್ದರೆ ಜೊತೆಗೆ..


ಅಲ್ವೇ..?
ಆಧುನಿಕತೆ ಮತ್ತು ತಂತ್ರಜ್ಞಾನದ ಸುಳಿಗೆ ಸಿಕ್ಕಿದ ಮನುಷ್ಯ  ಮುಂದೆ... ವಿಕಾಸವಾದಂತೆಲ್ಲಾ.. ಹೀಗಿರಬಹುದೇ.. ಅನ್ನುವುದು ನನ್ನ ಕಲ್ಪನೆ.

ಈಗೀಗ ಕಂಪ್ಯೂಟರ್ ಅಂತೂ  ಪ್ರತಿ ಮನೆಯಲ್ಲೂ ಕಾಣಬಹುದು..ಕಚೇರಿಗಳಲ್ಲೊಂದೆ  ಅಲ್ಲ.. ನನ್ನಂತ ಗೃಹಿಣಿಯರೆ  ಅದರ ಮುಂದೆ ದಿನದಲ್ಲಿ ಎಷ್ಟೊತ್ತು ಕುಳಿತು ಕೊಳ್ಳುತ್ತೇವೆ .. ಅದೇ ಉದ್ಯೋಗ ಮಾಡುವವರು ಸತತ ಎಷ್ಟು ದಿನಗಳ ಕಾಲ ಕುಳಿತು ಕೊಳ್ಳುವರೋ....!!!!  ಮಾತು,  ಊಟ, ನಿದ್ರೆ, ಚಲನೆ ಯಾವುದೂ ನಿಯಮಿತವಾಗಿ ಇರದೇ...


ಇದೆ ತರಹ ಮುಂದುವರೆದರೆ ಮುಂದೊಮ್ಮೆ ಕೆಲವಷ್ಟು ಅಂಗಗಳನ್ನೆ ಕಳೆದು ಕೊಳ್ಳಬಹುದೇ...? ಜೀವ ವಿಕಾಸದ ನಿಯಮದ ಪ್ರಕಾರ...
ಗಣಕ ಯಂತ್ರದಲ್ಲಿ ತಲೆ ಹಾಕಿ ಕುಳಿತು ಕೊಂಡರೆ ಅಲ್ಲಿಂದ  ತಪ್ಪಿಸಿಕೊಳ್ಳಲು ಘಂಟೆ, ದಿನ, ವಾರಗಳೇ ಬೇಕಾಗಬಹುದು..!
ಎಲ್ಲಕ್ಕೂ ಕಂಪ್ಯೂಟರ್... ಹೀಗೆಯೇ ಮುಂದುವರೆದು ಪ್ರತಿ ಮನೆಯಲ್ಲೂ ರೋಬೋಟ್ ಬರಲು ಹೆಚ್ಚಿಗೆ ದಿನಗಳಿಲ್ಲ..ಯಾವ ಕೆಲಸಕ್ಕೂ ಕುಳಿತಲ್ಲಿಂದ ಏಳುವ ಕೆಲಸವಿಲ್ಲ...! ಉಪಯೋಗಿಸದೆ  ಬಿಟ್ಟರೆ ಕಬ್ಬಿಣ ತುಕ್ಕು ಹಿಡಿಯುವಂತೆ ಉಪಯೋಗಿಸದ ನಮ್ಮ ಅಂಗಾಂಗಗಳೂ   ನಶಿಸಿ ಹೋಗಲಾರದೆ...?

ಮುಂದೆ ನಮ್ಮ ಮಕ್ಕಳ, ಮೊಮ್ಮೊಕ್ಕಳ, ಮರಿಮಕ್ಕಳ, ಅವರ ....ಮಕ್ಕಳ ......ಕ್ಕಳ....ಕ್ಕಳ... ಳ...ಳ....ಳ....................................................................................................................................................................ಕಾಲದಲ್ಲಿ ಏನೇನಾಗುವುದೋ.....?





Friday, July 16, 2010

ಚಿಟ್ಟೆ ... ಹಿಡಿದು ಬಿಟ್ಟೆ....!!!

ಅಲ್ಲಿ ಕೂತು ಇಲ್ಲಿ ಕೂತು
ಮೆಲ್ಲ ಮೆಲ್ಲ ರೆಕ್ಕೆ ಬಡಿದು
ಚಿಣ್ಣರಂತೆ  ಕಣ್ಣು ಮುಚ್ಚೆ 
 ಮಾಯವಾಗುವೆ ಮತ್ತೆ ಮೊರೆ ತೋರುವೆ. 



ಮಣ್ಣು, ಹೂವು, ದರಕು ಪರಕು.
ಕಾಲು ಸೋತಲ್ಲಿ ಕುಳಿತು.
ಕೊಂಬನೆತ್ತಿ ಹೂವ ಮುಡಿಯ
ಸವರ ಬೇಕಿದೆ ನವಿರು ಭಾವತಾಕಿದೆ

ಅಂದ ಚಂದದೊಡವೆ ತನುಗೆ  [ತನುವಿಗೆ]

ಕಣ್ಣು ತುಂಬಾ ಕಣ್ಣೇ  ಮೈಗೆ..
ಹೂವ  ಹೀರುವಾಸೆ ನಿನಗೆ
ಸ್ವಪ್ನ ಸುಂದರಿ ಮನಕೆ  ಬಯಕೆ ದಳ್ಳುರಿ.




ಪಕ್ಕದೊಂದು ಸೈಟಿನಲ್ಲಿ
ಮುಕ್ತವಾಗಿ ಹಾರುತಿರುವೆ
ಮಕ್ಕಳೆಲ್ಲ ಮುದದಿ ನಿನ್ನ
ರೆಕ್ಕೆ ಹಿಡಿವರು ಬಣ್ಣ ಮೆತ್ತಿಕೊಳುವರು.






ಕಷ್ಟ ಪಟ್ಟು ಹಿಡಿದು ಬಿಟ್ಟೆ
ಇಷ್ಟ ಪಟ್ಟು ಫೋಟೋದಲ್ಲಿ
ಜತನದಿಂದ ಸಾರಲಿಕ್ಕೆ 
ಬ್ಲಾಗ ಬೇಕಿದೆ ಜನಕೆ  ತೋರಬೇಕಿದೆ..







[ಪಕ್ಕದ ಸೈಟಿನಲ್ಲಿ ತನ್ನಷ್ಟಕ್ಕೆ ಹೂ ಬಿಟ್ಟು ನಿಂತಿರುವ ಚದುರಂಗದ ಗಿಡಗಳ ಸುತ್ತ ಚಿಟ್ಟೆಗಳದೇ  ಹಾರಾಟ .. ನೋಡಲಾಗದೆ ನನ್ನ ಕ್ಯಾಮರಾದಲ್ಲಿ ಕೆಲವನ್ನು ಕಷ್ಟ ಪಟ್ಟು ಅಡಗಿಸಿಟ್ಟು ಕೊಂಡಿದ್ದೇನೆ..ಮತ್ತೆ 
ಹಾಗೇ   ಮಕ್ಕಳಿಗೊಂದು ಪದ್ಯ ಮನಸಿನಲ್ಲೇ ಮೂಡಿ ಬಂತು..]

Monday, July 5, 2010

ಪ್ರಕೃತಿ




[ಚಿತ್ರ ನನ್ನದೇ ರಚನೆ.ಗ್ರೀಟಿಂಗ್ ಒಂದರ ಸ್ಫೂರ್ತಿ ]


ನನ್ನಲ್ಲೇ
ಇರುವ
ನನ್ನಿಂದಲೇ ಹುಟ್ಟುವ
ನನ್ನಿಂದಲೇ ಬೆಳೆಯುವ
ಜೀವನ, ಕಲೆ, ಕಾವ್ಯಕೃಷಿಯನ್ನು
ಕದ್ದಿದ್ದೀರೆಂದು,
ಕೃತಿಚೌರ್ಯ ಮಾಡಿದ್ದೀರೆಂದು
ಬೊಬ್ಬೆ ಹೊಡೆಯದ
ಏಕೈಕ ವ್ಯಕ್ತಿಯೇ ನಾನು
.......

ಪ್ರಕೃತಿ


[ಗಮನಿಸಿ ; ಬ್ಲಾಗುಗಳಿಗೆನಾಗಿದೆಯೋ ಗೊತ್ತಿಲ್ಲ.. ಒಂದೂ ಕಾಮೆಂಟ್ ಪಬ್ಲಿಶ್ ಆಗುತ್ತಿಲ್ಲ..
ಬೇರೆಯವರ ಬ್ಲಾಗುಗಳಿಗೆ ಹಾಕಿದ ಕಾಮೆಂಟ್ ಗಳದ್ದು ಕೂಡಾ ಅದೇ ಹಣೆ ಬರಹ..
ಎಲ್ಲಿ ಏನು ತೊಂದರೆ.... ಒಂದೂ ಅರ್ಥವಾಗುತ್ತಿಲ್ಲ..
ಆಗಿನಿಂದ ನನ್ನಷ್ಟಕ್ಕೆ ಗೊಣಗಾಡುತ್ತಿದ್ದೇನೆ.. ಸುಮ್ಮನೆ..
ನೀವೇನೋ ಹೇಳ್ತಾ ಇದ್ದೀರಿ ನನಗೆ ಗೊತ್ತಾಗುತ್ತಿಲ್ಲ... ಕೂತಿದ್ದೇನೆ ಬಿಮ್ಮನೆ....]


Monday, June 7, 2010

ಅಧುನಿಕ ಭಸ್ಮಾಸುರ ವಧೆ...

ಅರ್ಜಂಟಿನಲ್ಲಿ ನಿಮಗೊಂದು ಆಧುನಿಕ [ಅತ್ಯಾಧುನಿಕ...?] ಕಥೆಯೊಂದನ್ನು ಹೇಳಲು ಬಂದೆ.

ನಿಜ ಅಂದರೆ ಇದು ನನ್ನವರು ಮಕ್ಕಳಿಗೆ ಹೇಳಲು ಹೊರಟ ಕಥೆ....!ನನ್ನವರ ಕಥಾ ಶೈಲಿಯ ಬಗ್ಗೆ ಆಸಕ್ತರು ಇಲ್ಲಿ
ನೋಡಿ ತಿಳಿಯಬಹುದು.ನನ್ನವರ ಕಾನ್ಸೆಪ್ಟ್ ಗೆ ನನ್ನ ಸ್ಕ್ರಿಪ್ಟ್....!!



ಈಶ, ನಾಣಿ ಮತ್ತು ಬರಮು ಪರಮ ಮಿತ್ರರು. ಅವರಲ್ಲಿ ಈಶ ಮತ್ತು ನಾಣಿ ಸ್ವಲ್ಪ ಜಾಸ್ತಿಯೇ ಫ್ರೆಂಡ್ಸು.

ಈಶ ಸ್ವಲ್ಪ ಕೊಳಕ, ಅಲ್ಲದೆ ಅಧ್ಯಾತ್ಮ ಜೀವಿ. ಸನ್ ರೇಸ್ ನಿಂದ ಮೈಗೆ ಅಲರ್ಜಿಯಾಗುವುದೆಂದು ಅವನು ಯಾವಾಗಲೂ ಪರಿಹಾರಾರ್ಥವಾಗಿ ಮೈ ತುಂಬಾ ಬೂದಿಯನ್ನು ಬಳಿದು ಕೊಳ್ಳುತ್ತಾನೆ. ಪಾರ್ವತಿ, ಅವನ ವೈಫು ಯಾವಾಗಲೂ ಈ ವಿಚಾರದ [ವಿಕಾರದ] ಬಗ್ಗೆ ಅಬ್ಜೆಕ್ಟ್ ಮಾಡುತ್ತಲೇ ಇರುತ್ತಾಳೆ. ಆದರೆ ಪಾರ್ವತಿ ಅದರಲ್ಲೆಲ್ಲಾ ಭಾರೀ ನಾಜೂಕು.ಮೈತಾಲೀ ಮಿಟ್ಟಿ , ಕ್ರೀಮು, ಪೌಡರುಗಳನ್ನೇ ಬಳಸುತ್ತಾಳೆ.
''ಯಾವಾಗಲೂ ನ್ಯಾಚುರಲ್ ಆಗಿರವು ...ತೆಳತ್ತನೇ, '' ಎನ್ನುವುದು ಈಶನ ಸಮರ್ಥನೆ.

ಇಷ್ಟಾಯ್ತಾ.... ಈಶನಿಗೆ ದಿನಾಲೂ ಬೂದಿ ಒದಗಿಸಲು ಪಾರ್ವತಿಯೇ ಬೇಕು. ದಿನಾಲೂ ಸ್ಮಶಾನಕ್ಕೆ ಹೋಗಿ... ಐ ಮೀನ್ ಹರಿಶ್ಚಂದ್ರ ಘಾಟ್ ಗೆ ಹೋಗಿ ಹೆಣ ಸುಟ್ಟ ಬೂದಿಯನ್ನ ತಂದು ಘನವಸ್ತುಗಳಾವುವೂ ಇಲ್ಲದಂತೆ ಜರಡಿಯಾಡಿ ಹಚ್ಚಿಕೊಳ್ಳಲು ಯೋಗ್ಯವಾದ ಪೌಡರ್ ಮಾಡಿಕೊಡಬೇಕು.[ಎಲ್ಲಾ ಕಡೆ ಒಲೆ ಉರಿಸಲು ಗ್ಯಾಸ್ ಇರುವುದರಿಂದ ಒಲೆ ಬೂದಿ ಸಿಗದ ಕಾರಣ ಈ ಆಲ್ಟರ್ನೆಟ್ ಅಡ್ಜಸ್ಟ್ಮೆಂಟು ]

ಒಮ್ಮೆ ಏನಾಯ್ತೆಂದರೆ, ಪಾರ್ವತೀ ಈಶನಿಗೆ ಕೊಟ್ಟ ಬೂದಿಯಲ್ಲಿ ಅದ್ಯಾವುದೋ ಎಲುಬೋ ... ಎಂತದೋ ಇತ್ತಂತೆ.
ಸಾಣಿಗೆ ಎಲ್ಲಾದ್ರೂ ತೂತು ಬಿದ್ದಿತ್ತೋ ಏನೋ ಪಾಪ.... ಪಾರ್ವತಿಯ ಮೇಲೆ ಈಶ ಭಯಂಕರ ಸಿಟ್ಟು ಮಾಡಿದ.......!!!!!
ಪಾರ್ವತಿ ಕಾರಣ ಕೊಟ್ಟರೂ ಕೇಳದೆ ಪೌಡರ್ ಡಬ್ಬಿಯನ್ನ
ಎತ್ತಿ ರಪ್ಪೆಂದು..ನೆಲದ ಮೇಲೆ ಬೀಸಾಡಿದ....
ಆ ರಭಸಕ್ಕೆ ಅಲ್ಲೊಬ್ಬ ''ಮಗ'' ಹುಟ್ಟಿದ.....!!!!!!![ ಅತ್ಯಾದುನಿಕ ಕಾಲ ] ಅಯ್ಯಬ್ಬಾ......ಅವನ ರೂಪವೋ.....ಥೇಟ್ ರಾಕ್ಷಸಾಕಾರ...!!! ಕೂಗಿದ ಅಂದ್ರೆ ಬ್ರಹ್ಮಾಂಡ ನಡುಗಬೇಕು...[ಬೂದಿಯಿಂದಲೂ ಮಕ್ಕಳು ಹುಟ್ಟುವ, ಮೈ ಬೆವರ ಮಣ್ಣಿನಿಂದಲೂ ಮಕ್ಕಳು ಹುಟ್ಟುವ ತಲೆ ಕೂದಲಿ೦ದಲೂ ಹುಟ್ಟುವ ಅತ್ಯಾಧುನಿಕ ಟೆಕ್ನಾಲಜಿ......!!!!!!]

ಅಷ್ಟೊತ್ತಿಗೆ ಈಶನ ಸಿಟ್ಟು ಕಮ್ಮಿಯಾಗತೊಡಗಿತು. ಪರಿಸ್ಥಿತಿ ಅರ್ಥ ಆಯ್ತು.
ಆದರೂ ಹುಟ್ಟಿದ ಮಗನಿಗೆ ಸಂಸ್ಕಾರ ಕೊಡಬೇಕಲ್ಲ.. ಹೆಸರಿಟ್ಟ. ''ಭಸ್ಮಾಸುರ '' ಭಸ್ಮದಿಂದ ಹುಟ್ಟಿದವ ಎಂದು. ಮಾತು ಕಲಿಸಿದ. ಸಂಬಂಧ ತಿಳಿಸಿಕೊಟ್ಟ. ಮಾಡಲೊಂದು ಕೆಲಸ ಬೇರೆ ಕೊಟ್ಟ...
'' ಮಗನೆ.... ಇನ್ನು ಮೇಲಿಂದ ನನಗೆ ಮೈಗೆ ಹಚ್ಚಿಕೊಳ್ಳಲು ನೀನೆ ಬೂದಿ ವ್ಯವಸ್ಥೆ ಮಾಡು....''

ಸರಿ.. ಅಂತೆಯೇ ಮಗನ ಕೆಲಸ... ಬೂದಿ ತಂದು ಅಪ್ಪನಿಗೆ ಕೊಡುವುದು... ನಡೆಯುತ್ತಾ ಇತ್ತು.
ಹೀಗಿರಲೋಮ್ಮೆ ರಾಕ್ಷಸ ಮಗನಿಗೊಂದು ಯೋಚನೆ ಬಂತು.


'
ಎಲ್ಲರೂ ಹೈ ಫೈ ಮಾಡಿಕೊಂಡು ಅವರವರ ವೆಹಿಕಲ್ ನಲ್ಲಿ ಜುಮ್ಮಂತ ಓಡಾಡಿ ಕೊಂಡಿರುವಾಗ, ಸ್ವಂತ ಜಾಬ್ ಮಾಡುವಾಗ, ನಾನು ಮಾತ್ರ ಅಪ್ಪನಲ್ಲಿ ಬೂದಿ ಕೆಲಸ ಮಾಡಬೇಕೆ.? ಎಷ್ಟು ದಿನಾ ಅಂತ ಹೀಗೆ ಇರುವುದು ...?' ಅನ್ನುವ ಒಂದು ವಿಚಾರ ಮಾಡುತ್ತಾ ...ಇದಕ್ಕೆ '' ಏನಾದರೂ ಮಾಡಲೇ ಬೇಕು'' ಎಂದುಕೊಳ್ಳುತ್ತಾ ಒಂದು ಖತರ್ನಾಕ್ ಐಡಿಯ ಯೋಚಿಸಿಕೊಂಡು ಅಳುತ್ತಾ ...ಐ ಮೀನ್ ಅಳುವಂತೆ ನಟಿಸುತ್ತ ಈಶನಲ್ಲಿಗೆ ಬಂದ.


ಈಶ ಮಗ ಅಳುತ್ತಿದ್ದುದನ್ನು ನೋಡಿ ಕರಗಿ ಹೋದ.  ದಿನಾ ಬೂದಿಯನ್ನು ಸರಿಯಾಗಿ ಗಾಳಿಸಿ ತಂದು ಕೊಡುತ್ತಿದ್ದುದರಿಂದ ಅವನಿಗೆ ಮಗನ ಮೇಲೆ ಪ್ರೀತಿ ಬಹಳ.
'' ಮಗಾ ಎಂತಾತ... ಅಳದೆಂತಕಾ....? '' ಬಾಳಾ ವಾತ್ಸಲ್ಯದಿಂದ ವಿಚಾರಿಸಿದ.

''ಊಂ ........ಊಂ .... ಬೂದಿ ಎಲ್ಲೂ ಸಿಗ್ತೇ ಇಲ್ಲೇ.   ಅದ್ಕೆ ನೀ ನನಗೊಂದು ''ವರ'' ಕೊಡವೂ ....ಊಂ ...ಊಂ .. ''

''ಹ್ನೂ ... ಅಕ್ಕು ಮಾರಾಯಎಂತ 'ವರ ' ಕೊಡವು ಕೇಳಾ.  ಕೊಡ್ತಿ ಅದ್ಕಿನ್ನೆಂತು.   ಅಳದೊಂದ್ ನಿಲ್ಸು ಕೇಳಲಾಗ್ತಿಲ್ಲೇ...''

'' ಕೊಡವೂ ... ಮತ್ತೆ.. ಊಂ... ಊಂ.. ಕೇಳಿದ್ಮೇಲೆ ಇಲ್ಲೇ ಹೇಳಲಿಲ್ಲೇ....''

'' ಕೇಳು .. ಕೇಳು..ಅಳು ನಿಲ್ಸು.. ಕೇಳಲಾಗ್ತಿಲ್ಲೇ.''

''ಊಂ.... ಮತ್ತೆ.. ಮತ್ತೆ.. ನಾ ಯಾರ ತಲೆ ಮೇಲೆ ಕೈ ಇಟ್ರೂ ಅವು ಸುಟ್ಟ ಭಸ್ಮವಾಗವೂ.... ಊಂ.. ವರ ಕೊಡ್ತ್ಯಾ... ? ಇಲ್ದಿದ್ರೆ ನಿಂಗೆ ಬೂದಿ ಸಿಗ್ತೆ ಇಲ್ಲೇ. ''

ಅಷ್ಟರಲ್ಲಿ ಪಾರ್ವತಿ ಈ ಸಂವಾದವನ್ನು ಕೇಳುತ್ತಿದ್ದವಳು, ''ಅಯ್ಯೋ ಹಂಗೊಂದು ವರ ಕೊಡಡಿ.. ಅನರ್ಥ ಆಗಿ ಹೋಕೂ.....'' ಕೂಗಿದಳು ಅಡುಗೆಮನೆಯಿಂದಲೇ..

'' ಕೊಡ್ತೀ ಹೇಳಿದ್ಮೇಲೆ ಕೊಡದೆಯ.   ಆನ್ ಯಾವತ್ತಾದರೂ ಮಾತಿಗೆ ತಪ್ಪವ್ ನನೆ....? ನೀನೂ ಹಂಗೇ ಮಾಡ್ತೆ...''ಎಂದು ಹೇಳಿದವನೇ ಈಶ್ವರ ಉರುಫ್ ಈಶ ಭಸ್ಮಾಸುರನಿಗೆ '' ನೀ ಯಾರ ತಲೆ ಮೇಲೆ ಕೈ ಇಟ್ರೂ ಅವರು ಭಸ್ಮವಾಗಲೀ ...'' ಎಂದು ವರ ಕೊಟ್ಟೆ ಬಿಟ್ಟ.

ವರ ಸಿಕ್ಕಿದ್ದೇ ತಡ, ಭಸ್ಮಾಸುರ ಕಂಡ ಕಂಡವರ ತಲೆ ಮೇಲೆಲ್ಲಾ ಕೈ ಇಟ್ಟು ಅವರನ್ನೆಲ್ಲಾ ಬೂದಿ ಮಾಡಿದ. ಇವನ ಉಪಟಳ ದಿನಾ ದಿನಾ  ಹೆಚ್ಚಾಯ್ತು.

ಇಷ್ಟೇ ಆಗಿದ್ರೆ ಸಾಕಿತ್ತು. ಅವರಿವರ ಸೈಟು, ಫಾರಂ ಹೌಸು.. ಎಲ್ಲಾದರ ಮೇಲೂ ಕಣ್ಣು ಬಿದ್ದು ಅಲ್ಲಿಯ ದೊಡ್ ದೊಡ್ ಮನುಷ್ಯರನ್ನೆಲ್ಲಾ ಅಟ್ಟಿಸಿಕೊಂಡು ಹೊರಟ. ''ಎಲ್ಲಾರ್ನೂ ಭಸ್ಮಾ ಮಾಡ್ತೀ..... ಏನಂತ ತಿಳ್ಕೈಂದ... ನನ್ನ...ಹ್ಞಾ.... '' ಎನ್ನುತ್ತಾ ಅಲೆದಾಡಿದ.

ಎಲ್ಲಾರಿಗೂ ಭಯವಾಗತೊಡಗಿ ಎಲ್ಲಾ ಸೀದಾ ಈಶ್ವರನಲ್ಲಿಗೆ ಬಂದು 'ನಿಮ್ಮನೆ ಮಾಣಿ ಹಿಂಗಿನ್ಗಲ್ಲ ಮಾಡ್ತಿದ್ದ. ನೀ ಒಂಚೂರು ಬುದ್ಧಿ ಹೇಳದೆಯ...' ಹೇಳಿ ಹೇಳಿದರು ದೇವೇಂದ್ರ.   ಮತ್ತೆ ಅವನ ಫ್ರೆಂಡ್ಸ್ ಎಲ್ಲ.

ಅವತ್ತೇ ಭಸ್ಮಾಸುರ ಭಸ್ಮ ತಗಂಡು ಈಶ್ವರನ ಹತ್ರ ಬಂದಿದ್ದೆ ತಡ.


''
ಎಂತಾ ಮಾಣಿ, ಆನ್ ನಿಂಗೆ ವರ ಕೊಟ್ಟಿದ್ದು ಕಂಡ ಕಂಡವರ ತಲೆ ಮೇಲೆ ಕೈ ಇಡು ಹೇಳನಾ..? '' ಹೇಳಿ ಅವನಿಗೆ ಹೊಡೆಯಲು ಹೊರಟ.

ಭಸ್ಮಾಸುರ ಮೊದಲೇ ನೀಚ, ವರದ ಬಲ ಬೇರೆ...
''ಹ್ಹ...ಹ್ಹ..ಹ್ಹಾ... ನೀ ಯಂಗೆ ಎಂತಾ ಮಾಡಲೂ ಆಗ್ತಿಲ್ಲೆ.. ಹೊಡಿತ್ಯ... ಹೊಡಿ ನೋಡನ. ಆನ್ ನಿನ್ ತಲೆ ಮೇಲೇ ಕೈ ಇಡ್ತೀ.... ಹ್ಹ..ಹ್ಹ... ಹ್ಹಾ....''

ಶಿವ ಉರುಫ್ ಈಶನಿಗೆ ಈಗ ಭಯವಾಗತೊಡಗಿತು.. ತಾನು ಕೊಟ್ಟ ವರದ ಅನರ್ಥ ಹೀಗಾಗುತ್ತೆ ಅಂದು ಕೊಂಡಿರದ ಶಿವ ಓಡತೊಡಗಿದ.  ಬಿಟ್ಟಾನ ಭಸ್ಮಾಸುರ.   ಅವನೂ ಅಟ್ಟಿಸಿಕೊಂಡು ಬಂದ.

ಓಡಿದ..ಓಡಿದ.. ಶಿವನಿಗೆ ಏನ್ ಮಾಡಲೂ ತೋಚಲಿಲ್ಲ. ಪಾರ್ವತಿ ಮಾತಾದರೂ ಕೇಳಬೇಕಿತ್ತು.  ಪಕ್ಕನೆ ಆಪ್ತ ಮಿತ್ರ ನಾಣಿಯ ನೆನಪಾಯಿತು.ಅವನ ಮನೆ ಕಡೆ ಧಾವಿಸಿದ.


ನಾಣಿ ತನ್ನ ವೈಕುಂಠ ನಿವಾಸದಲ್ಲಿ ಬೆಳಿಗ್ಗೆ ಎದ್ದು ಲಕ್ಷ್ಮಿ ಮಾಡಿದ ದೋಸೆ , ಮಾವಿನ ಹಣ್ಣಿನ ರಸಾಯನ ತಿಂದು ಅದನ್ನೇ ಬಣ್ಣಿಸುತ್ತಾ ಸೋಫಾದ ಮೇಲೆ ಪೇಪರ್ ನೋಡುತ್ತಾ ಕುಳಿತಿದ್ದ. ''ಮಾವಿನ ಹಣ್ಣು ಚನ್ನಾಗಿತ್ತನೆ...? ರಸಾಯನ ಚನಾಗಾಗಿತ್ತು. ಸುಳ್ಳಲ್ಲಾ .... ಎಳ್ಳು ಬೀಸಿ ಹಾಕಿದ್ಯನೆ...? ''
''ಹೌದು ಕಾಯಿ, ಎಳ್ಳು ಎಲ್ಲಾ ಬೀಸಿ ಹಾಕಿದ್ದಿ. ನಾಳೆ ಇನ್ನಷ್ಟು ಹಣ್ಣು ತಗಂಡು ಬನ್ನಿ.  ಹುಡ್ರಲ್ಲ ತಿನ್ಕತ್ತ...''ಕಿಚನ್ನಿಂದ ಕೇಳಿ ಬಂತು.

ಬಾಗಿಲು ಬಡಿದ ಸದ್ದಾಯ್ತು..ದಬ.. ದಬ... ಸದ್ದು ಹೆಚ್ಚಾಯ್ತು. ನಾಣಿಯೇ ಎದ್ದು.. ಒಂದು ಕೈಯಲ್ಲಿ ಪೇಪರ್ ಹಿಡಿದುಕೊಂಡೆ ಬಾಗಿಲು ತೆರೆದ..

''ನಾಣಿ  ನಾರಾಯಣಾಶ್ರೀಮನ್ನಾರಾಯಣ  ಬಾವಯ್ಯಾ.   ನೀನೆ ಕಾಪಾಡವೂ.. ಎನ್ನ...'' ಎನ್ನುತ್ತಾ ತೆರೆದ ಬಾಗಿಲಿಂದ ನಾಣಿಯನ್ನ ದಬ್ಬಿಕೊಂಡೆ ಬಂದು ಸೋಫಾದಲ್ಲಿ ಕುಸಿದ..

''ಬಾಗ್ಲು ಹಾಕುಅವ ಬತ್ತಬಂದ್ ಬುಡ್ತಾ...ಬಾಗ್ಲು ಹಾಕು...''ಶಿವ ಅವಸರಿಸಿದ..

''ಎಂತಾತ ಮಾರಾಯ, ಮತ್ಯನ್ತಾ ಭಾನ್ಗಡೆ ಮಾಡ್ಕ್ಯಂಡು ಬೈನ್ದ್ಯಾ...?ಯಾರ್ ಬತ್ವಾ?   ಹೆದ್ರಡಾ ಹೇಳುನಾ ಇದ್ದಿ... ''

ಶಿವ ಎಲ್ಲವನ್ನೂ, ಹೀಗ್ ಹೀಗೆ , ಹೀಗ್ಹೀಗೆ ಅಂತ ಒಂದೇ ಉಸುರಿಗೆ ಹೇಳಿ ಮುಗಿಸಿದ.

''ಅಲ್ದಾ ಮಾರಾಯ. ನಿಂಗೆ ಖುಷಿಯಾದರೂ ಮಕ್ಕ ಹುಟ್ತಾ ... ಸಿಟ್ ಬಂದರೂ ಮಕ್ಕ ಹುಟ್ತಾ ....!! ಸ್ವಲ್ಪ ಜ್ಞಾನ ಬ್ಯಾಡ್ದನಾ....? ವರ ಗಿರ ಕೊಡಕಿದ್ರೆಅನಾಹುತ ಅನಾಹುತವೇ. ನೀ ನಮ್ಮನಿಗೆ ಬರದೇ ಇಂತದಕ್ಕೆಮತ್ಯಾವಾಗ್ಲೂ ಪುರ್ಸೋತ್ತಿರ್ತಲ್ಲೇ... '' ಎಂದು ನಾಣಿ ಚೆನ್ನಾಗಿ ಕ್ಲಾಸ್ ತಗೊಂಡ..

''ನೋಡಾ..... ಎಂತಾರೂ ಪರಿಹಾರ ಕೊಡಹಂಗಿದ್ರೆ ಕೊಡು. ಮೊದ್ಲೇ ತಲೆ ಕೆಟ್ಟೋಜು...... ನಿಂಗೆ ಆಗ್ತಾ ಹೇಳು... ಇಲ್ದಿದ್ರೆ ಬರಮು ಹತ್ರಾರೂ ಹೋಗದೆಯ...... ಒಳ್ಳೆ ಗೋಟಾವಳಿ ವ್ಯಾಪಾರಾಗೊಜು....''

'' ಸುಮ್ನಿರಾ ಸಾಕು... ಅವಂಗೆ ಮೂರ್ಹೊತ್ತೂ ಸೃಷ್ಟಿ ಕಾರ್ಯ ಮಾಡದೆಯಾ...ಕೆಲಸ. ಈಗಿತ್ಲಾಗಂತೂ ವಯಸ್ಸಾತು ಅವಂಗೆ. ನೋಡು ಅರುಳು ಮರುಳು ಆದಂಗೆ ಆಯ್ದು. ಒಂದು ಮಕ್ಕ ಸೈತ ಸರಿ ಹುಟ್ತ್ವಲ್ಲೇಕೆಲವರಿಗೆ ಒಂದೊಂದೇ ಸಲಕ್ಕೆ ಅವಳಿ, ತ್ರಿವಳಿ.   ಇಲ್ದಿದ್ದ್ರೆ ಸಯಾಮಿ.  ಮತ್ ಕೆಲವರಿಗೆ ಎಂತಾ ಮಾಡಿದರೂ ಮಕ್ಕಾನೆ ಅಗ್ತ್ವಲ್ಲೇ. ಅವನತ್ರ ಹೋಗ್ತ್ನಡಾ ಇಂವಕೇಳೆ ಲಕ್ಷ್ಮೀ,  ಶಿವ್ ಬಾವಯ್ಯನ ಮಾತ....''

''ಸರಿಯಾಹಂಗಾರೆ ನೀನೆ ಎಂತಾರೂ ಉಪಾಯ ಹೇಳು ಭಸ್ಮಾಸುರನಿಂದ ತಪ್ಸಿಗಮ್ಬಲೇ'' .....'' ಅಯ್ಯೋ ಬಾವ,   ಅಂವ ಬಂದನೋ ಮಾರಾಯ....''

ಭಸ್ಮಾಸುರ ಕರ್ಕಶವಾಗಿ ಶಿವನನ್ನು ಕರೆಯುತ್ತಾ , ಕೂಗುತ್ತಾ..ನಾರಾಯಣನ ಮನೆ ಕಡೆ ಬರುವುದು ಕಾಣಿಸಿತು. ಹೆಜ್ಜೆ ಸದ್ದು ಒಳ್ಳೆ ಭೂಕಂಪವನ್ನೇ ನೆನಪಿಸುತ್ತಿತ್ತು.

''ನೀ ಹೆದ್ರಡದಾ... ಬಾವ.  ನೀ ಇಲ್ಲಿ ಗೆಸ್ಟ್ ರೂಮಲ್ಲಿ ಬಾಗ್ಲು ಹಾಕ್ಯಂಡು ಸಂದಿಂದ ನೋಡ್ತಾ ಇರು ಕೀ ಹೋಲಿಂದ. ನಾ ಎಲ್ಲನೋಡ್ಕ್ಯತ್ತಿ. ಒಳ್ಳೆ ಬೋಳೆ ಶಂಕರನ ಸವಾಸಾತು ...'' ಎಂದವನೇ ಶಿವನನ್ನು ಗೆಸ್ಟ್ ರೂಮಿಗೆ ಕಳಿಸಿ ತಾನು ಬೆಡ್ ರೂಮಿನ ಒಳಹೋದ ನಾರಾಯ್ಣ.

ನಾರಾಯ್ಣ.  ಅವ ಮೊದ್ಲೇ ಮ್ಯಾನೇಜ್ಮೆಂಟ್ ಗುರೂ.   ಕ್ರೈಸಿಸ್ ಮ್ಯಾನೆಜ್ ಮಾಡಲು ಹೇಳಿಕೊಡಬೇಕೆ...?ಬಾಳಾ ಕಡೆ ಉಪದೇಶ ಕೊಟ್ಟು ಒಳ್ಳೆ ಒಳ್ಳೆ ಹೆಸರು ತಗೊಂಡವನು.

ಶಿವ ಕೀ ಹೋಲಿಂದ ನೋಡುತ್ತಿದ್ದ .
ಭಸ್ಮಾಸುರನ ಹೆಜ್ಜೆ ಸದ್ದು ಹತ್ತಿರವಾಗುತ್ತಿತ್ತು. ಆಗ ನಾರಾಯಣನ ಬೆಡ್ರೂಮಿನಿಂದ ಸುಂದರಿಯೊಬ್ಬಳು ಹೊರಬಂದಳು. ಅವಳು ಎಷ್ಟು ಸುಂದರವಾಗಿದ್ದಳೆಂದರೆ ಅವಳನ್ನು ನೋಡುತ್ತಿದ್ದ ಶಿವನಿಗೆ ಭಸ್ಮಾಸುರನ ಭಯವೇ ಮರೆತು ಹೋಯಿತು...!!ಇದ್ಯಾವ ಮೋಹಿನಿ ಅಂತ.... ಮತ್ತು ಈ ನಾಣಿ ಹೀಗೊಂದು ಸೆಟಪ್ ಬೇರೆ ಇಟ್ಕೊಂಡಿದ್ದಾನಾ....? ತಂಗಿ ಲಕ್ಶ್ಮಿ ಎಲ್ಲಿ ಹೋದಳು..?.ಹಿಂದ್ ಗಡೆ ಕಸ ಮುಸರೆ ಮಾಡಲೇ ಹೊಯ್ದ್ಲಾ..?ಇವ್ಳು ಯಾರಾಗಿಕ್ಕು...?ಅಂತೆಲ್ಲ ಆಲೋಚಿಸತೊಡಗಿದ ಶಿವ.

ಅಷ್ಟೊತ್ತಿಗೆ ಭಸ್ಮಾಸುರ ಬಾಗಿಲ ಬಳಿ ಬಂದು ಬಾಗಿಲನ್ನು ಒದ್ದ ಹೊಡೆತಕ್ಕೆ  ಸುಮಾರಿನ ಮನೆ ಬಾಗಿಲಾಗಿದ್ರೆ ಚೂರ್ ಚೂರ್ ಆಗಿರುತ್ತಿತ್ತು. ಅದು ನಾರಾಯಣನ ಮನೆ ಬಾಗಿಲಾದ್ದರಿಂದ ಗಟ್ಟಿ  ಇತ್ತು.

ಒಳ ಬಂದವನೇ ಭಸ್ಮಾಸುರ 'ಎಲ್ಹೊದ್ಯೋ ಅಪ್ಪಾ... ' ಎಂದು ಕೂಗಲು ಬಾಯಿ ತೆರೆದವನು ಹಾಗೆಯೇ ನಿಂತ. ಮೋಹಿನಿಯನ್ನು ನೋಡಿ ಅವನೂ ವಿಸ್ಮಯಗೊಂಡ. ತೆರೆದ ಬಾಯಿ   ಬಿಟ್ಟ ಕಣ್ಣು ಮುಚ್ಚದೆ.... !!!!!

ಅಷ್ಟೊತ್ತಿಗೆ....   ಒಳಗಡೆ ಸಿ.ಡಿ.ಪ್ಲೇಯರ್ ಹಾಡತೊಡಗಿತು.

ರಾ ..ರಾ..... ರಾ...ರಾ .... ಸರಸಕು ರಾರಾ....ರಾರಾ
... .........
ನನು ಒಕಸಾರಿ ಕನುಲಾರ ತಿಲಕಿನ್ಚರ...
ನಾ ವ್ಯಥಲಲ್ಲು ಮನಸಾರ ಆಲಿಂಚರ............. ......... ...... ........


ಮೋಹಿನಿ ಬಳುಕುತ್ತಾ, ನುಲಿಯುತ್ತಾ ನರ್ತಿಸ ತೊಡಗಿದಳು. ಅವಳನ್ನೇ ನೋಡುತ್ತಾ ಮೈ ಮರೆತಿದ್ದ ಭಸ್ಮಾಸುರ ತಾನೂ ಅವಳನ್ನೇ ಅನುಕರಿಸ ತೊಡಗಿದ. ತನ್ನನ್ನು ಸೋಲಿಸೆಂಬಂತೆ ಆಕೆಯೂ ಕಣ್ ಸನ್ನೆ ಮಾಡುತ್ತಾ, ಹುಬ್ಬು ಹಾರಿಸುತ್ತಾ ಕುಣಿಯತೊಡಗಿದಳು.
ಮೋಹಿನಿ ಮಾಡಿದಂತೆಯೇ ನರ್ತಿಸುತ್ತಾ .. ನರ್ತಿಸುತ್ತಾ... ಭಸ್ಮಾಸುರ ತನ್ನನ್ನೇ ಮರೆತುಬಿಟ್ಟ.ಲಲನೆ ಮಾಟವಾಗಿ ತನ್ನ ಕೈಗಳೆರಡನ್ನೂ ಮೇಲೆತ್ತುತ್ತಾ....... ಮೇಲೆತ್ತುತ್ತಾ.... ತನ್ನ ತಲೆಯ ಮೇಲಿರಿಸಿ ಕೊಂಡಳು.

.... ಅದನ್ನೇ ಮಾಡಿದ ಭಸ್ಮಾಸುರ......

ಎದುರಿಗೆ ದೊಡ್ಡದಾದ ಬೂದಿ ಗುಡ್ಡೆ  ಬಿತ್ತು.....!!!

ಮೋಹಿನಿ ತುಟಿಯಂಚಿನಲ್ಲಿ ನಕ್ಕು ಬೆಡ್ರೂಮಿನ ಕಡೆ ನಡೆಯ ತೊಡಗಿದಳು. ಒಮ್ಮೆಲೇ ಗೆಸ್ಟ್ ರೂಮಿನ ಬಾಗಿಲು ತೆರೆದ ಶಿವ ಹಾರಿ ಹೋಗಿ ಸುಂದರಿಯ ಕೈ ಹಿಡಿದು ಕೊಂಡ.

''ಯಾರೇ ನೀನು ಚೆಲುವೆ.... ನಿನ್ನಷ್ಟಕ್ಕೆ ನೀನೆ ಏಕೆ ನಗುವೇ....''

... ಬಿಡಲೇ, ಇದೂ ನಾನು ನಾಣಿ.  ಸ್ತ್ರೀವೇಶ ಹಾಕ್ಯ ಬೈಂದಿ.... ಲಕ್ಷ್ಮಿ ಒಳಗೆ ಬರ ಮೊದ್ಲು ಅವಳ ಸೀರೆ ಯಥಾಸ್ಥಾನಕ್ಕೆ ಸೇರಿಸಿದ್ನಾ ಬಚಾವೂಬಿಡು ಬಿಡು...'' ಎನ್ನುತ್ತಾ ಸೆರಗು ಬಿಡಿಸಿಕೊಂಡ ನಾಣಿ ಕೋಣೆಯ ಒಳಗೆ ಓಡಿದ..

''ಅಂತೂ ಒದಗಿದ ಸಂಕಷ್ಟ ಪರಿಹಾರಾತು ಮಾರಾಯ....'' ಎನ್ನುತ್ತಾ ಶಿವ ತನ್ನ ಮನೆ ಕೈಲಾಸನಿಲಯದ ಕಡೆ ನಡೆಯ ತೊಡಗಿದ .


ವಂದನೆಗಳು.