Saturday, January 30, 2010

ತಿನ್ನುವಲ್ಲಿನ ತೊಂದರೆಗಳು.

ಹಸಿವು ಮನುಷ್ಯನ ಆಂತರಿಕ ಪ್ರೇರಣೆ.
ಬದುಕಲು ಹಸಿವನ್ನು ತಣಿಸಲೇ ಬೇಕು.
ಸ್ವಸ್ತ ಜೀವನ ನಡೆಸಲು ಸೂಕ್ತ ಪ್ರಮಾಣದ ಆಹಾರ ಸೇವಿಸಲೇ ಬೇಕು.
ಸರಿಯಾದ ರೀತಿಯಲ್ಲಿ , ಸಮತೋಲಿತ ಆಹಾರ ದೇಹಕ್ಕೆ ದೊರಕದಿದ್ದಲ್ಲಿ ತೊಂದರೆಗಳು ಶುರುವಾಗುತ್ತವೆ.

ಅವುಗಳಲ್ಲಿ ಎರಡು ವಿಧಗಳಿವೆ. ೧. ಅನೋರೆಕ್ಸಿಯ ನರ್ವೊಸಾ ಮತ್ತು ೨. ಬುಲಿಮಿಯ ನರ್ವೊಸಾ

1 . ಅನೋರೆಕ್ಸಿಯ ನರ್ವೋಸ : ಇದು ದೇಹದ ತೂಕವನ್ನು ಕಡಿಮೆ ಪ್ರಮಾಣದಲ್ಲಿ ಇರಿಸಿಕೊಳ್ಳಲೇ ಬೇಕೆಂಬ ಹಪಹಪಿಯಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವುದನ್ನು ಅಭ್ಯಾಸ ಮಾಡಿಕೊಂಡಿರುವ ಒಂದು ತರದ ಮಾನಸಿಕ ವ್ಯಾಧಿ.

ಮೊದಲು ಮಿತ ಆಹಾರ ಸೇವನೆ ,ಜೊತೆಗೆ ವ್ಯಾಯಾಮ ,ಜಾಗಿಂಗ್ ಇನ್ನಿತರ ದೈಹಿಕ ಕಸರತ್ತುಗಳನ್ನು ಮಾಡುವುದು.ಕ್ರಮೇಣ ಇದು ಚಟವಾಗಿ ಹೋಗುತ್ತದೆ. ದೇಹದ ತೂಕ ಸಹಜ ತೂಕಕ್ಕಿಂತ ಶೇಕಡಾ ಎಂಬತೈದು ಭಾಗಕ್ಕಿಂತಲೂ ಕಡಿಮೆ ಇದ್ದಾಗ ಅವರನ್ನು ಅನೋರೆಕ್ಸಿಕ್ ಎಂದು ಗುರುತಿಸಲಾಗುವುದು.

ಇದು ಮುಖ್ಯವಾಗಿ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುವ ಖಾಯಿಲೆ.ದೇಹವನ್ನು ಬಳುಕುವ ಬಳ್ಳಿಯಂತಿರಿಸಿಕೊಳ್ಳುವ ಪ್ರಯತ್ನದಿಂದ ಆಹಾರದ ಪ್ರಮಾಣವನ್ನು ಕಡಿಮೆ ಮಾಡುತ್ತಾ, ಮಾಡುತ್ತಾ ಒಂದು ಹಂತದಲ್ಲಿ ತಿನ್ನುವುದನ್ನೇ ನಿಲ್ಲಿಸುವ ಹಂತ ತಲುಪುತ್ತಾರೆ. ನಂತರ ಉಸಿರನ್ನು.....!!
ತಾವೆಷ್ಟು ತೆಳು ಶರೀರ ಹೊಂದಿದ್ದೇವೆ ಎನ್ನುವ ಸ್ವಯಂ ತೃಪ್ತಿಯೇ ಇಲ್ಲಿ ಮುಖ್ಯವಾಗಿರುತ್ತದೆ. ಇದು ಸಾಮಾಜಿಕ ಪಿಡುಗು.

ಗಂಡಸರಲ್ಲಿ ಈ ಖಾಯಿಲೆ ಕಾಣಿಸಿಕೊಂಡರೂ ಸ್ವಲ್ಪ ಪ್ರಮಾಣದಲ್ಲಿ ಮತ್ತು ಅಪಾಯಕಾರಿಯೇನಲ್ಲ. ವಯಸ್ಸಾದ ವ್ಯಕ್ತಿಗಳಲ್ಲೂ ಕೆಲವೊಮ್ಮೆ ಕಾಣಿಸಿಕೊಳ್ಳುವುದುಂಟು.

ಅನುವಂಶೀಯವಾಗಿ ಈ ರೋಗ ಬರಬಹುದು . ಮೆದುಳಿನಲ್ಲಿ ಸ್ರವಿಸುವ serotonin ಏರುಪೇರು ಮುಖ್ಯ ಕಾರಣ.

ದೇಹಕ್ಕೆ ಬೇಕಾಗುವಷ್ಟು ಪೌಷ್ಟಿಕಾಂಶಗಳ ಪೂರೈಕೆ ಆಗದ ಕಾರಣ ನಿಶ್ಯಕ್ತಿ ಉಂಟಾಗುವುದು. ಬೆಳವಣಿಗೆಯ ಹಂತದಲ್ಲಿರುವಾಗಲೇ ಇದು ಶುರುವಾಗುವುದರಿಂದ ಅನೇಕ ತರದ ದೈಹಿಕ, ಮಾನಸಿಕ ಸಮಸ್ಯೆಗಳು ತಲೆದೋರುವುವು.

ಕೂದಲು ಉದುರುವಿಕೆ, ಬಂಜೆತನ, ಎಲುಬಿನ ಬೆಳವಣಿಗೆ ಕುಂಟಿತವಾಗುವಿಕೆ, ವಾತ, ಹೃದಯದ ತೊಂದರೆಗಳೂ, ಮೂತ್ರ ಪಿಂಡದ ತೊಂದರೆಗಳೂ , ಇತರ ಮಾನಸಿಕ ತೊಂದರೆಗಳಾದ ಡಿಪ್ರೆಶನ್, ವ್ಯಕ್ತಿತ್ವ ದೋಷಗಳೂ ಕಾಣಿಸಿಕೊಳ್ಳುತ್ತವೆ.

ಅನೋರೆಕ್ಸಿಯ ರೋಗಿಗಳು ಸದಾಕಾಲ ಹಸಿವೆಯನ್ನು ಅನುಭವಿಸುತ್ತಿರುತ್ತಾರೆ ಮತ್ತು ತಿನ್ನಲು ಭಯಪಡುತ್ತಾರೆ.
ಕೆಲವರು ಆಹಾರದ ಪ್ರಮಾಣವನ್ನೇ ಮಿಥಿಗೊಳಿಸುತ್ತಾ ಬರುತ್ತಾರೆ. ಇವರಿಗೆ restricted type ಎನ್ನುತ್ತಾರೆ.

ಮತ್ತೆ ಕೆಲವರು ದಾಕ್ಷಿಣ್ಯಕ್ಕೋ ಮತ್ತಾವ ಕಾರಣಕ್ಕೋ ತಿನ್ನುವಾಗ ತಿಂದು ನಂತರ ಬಚ್ಚಲಿಗೆ ಹೋಗಿ ವಾಂತಿ ಮಾಡಿಕೊಳ್ಳುತ್ತಾರೆ ಇಲ್ಲವೇ ಭೇದಿ ಮಾತ್ರೆ ತೆಗೆದುಕೊಳ್ಳುತ್ತಾರೆ.ಇವರನ್ನು purging type ಎನ್ನುವರು.
ಈ ರೋಗ ಹೊರನೋಟಕ್ಕೆ ವಿಶೇಷವಾಗಿ ಅನ್ನಿಸದೆ ಹೋದರೂ ಇದಕ್ಕೆ ಚಿಕಿತ್ಸೆ ಬೇಕು.

ಮುಖ್ಯ ಲಕ್ಷಣಗಳೆಂದರೆ,

* ಮಿತ ಆಹಾರ ಸೇವನೆ. ಪ್ರತಿಯೊಂದು ಆಹಾರದಲ್ಲೂ ಪುನಃ ಪುನಃ ಕ್ಯಾಲೋರಿ ಲೆಕ್ಕ ಹಾಕುವುದು.
*ಎಲ್ಲರೆದುರು ತಿನ್ನುವಂತೆ ನಟಿಸುವುದು ಅಥವಾ ಹೊಟ್ಟೆ ತುಂಬಿದೆಯೆಂದು ಸುಳ್ಳು ಹೇಳುವುದು.
* ಸಾರ್ವಜನಿಕವಾಗಿ ತಿನ್ನಲು ನಿರಾಕರಿಸುವುದು. ತಿಂದರೂ ನಂತರ ಗುಟ್ಟಾಗಿ ವಾಂತಿ ಮಾಡಿಕೊಳ್ಳುವುದು.
*ಪದೇಪದೇ ಎಕ್ಸರ್ಸೈಸ್ ಮಾಡುವುದು.

ದೈಹಿಕ ಲಕ್ಷಣಗಳೆಂದರೆ,

*ಋತುಚಕ್ರದಲ್ಲಿ ಏರುಪೇರು,
*ನಿಶ್ಯಕ್ತಿ,
*ಒಣಗಿದ ಚರ್ಮ, ಹಳದೀ ಬಣ್ಣಕ್ಕೆ ತಿರುಗುವುದು.
*ಮಲಭದ್ದತೆ, ಹೊಟ್ಟೆನೋವು,
*ಅಶಾಂತಿ, ಅತಿನಿದ್ರೆ, ತಲೆನೋವು, ತಲೆಸುತ್ತು ಬರುವುದು.

ಸಿನಿಮಾ ನಟಿಯರೂ, ಮಾಡೆಲ್ ಗಳೂ ಈ ಕಾಯಿಲೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು.ಇಲ್ಲಿ ದೇಹ ಸೌಂದರ್ಯವೇ ಬಂಡವಾಳ. ಇಂಡಸ್ಟ್ರಿಯಲ್ಲಿ ಬಹುಕಾಲ ಇರಬೇಕೆನ್ನುವ ಒತ್ತಡದಿಂದ ಎಲ್ಲಾ ಸೌಕರ್ಯ,ಸವಲತ್ತುಗಳು ಇದ್ದಾಗ್ಯೂ ಮಿತಾಹಾರಿಗಳಾಗಿ ರೋಗಿಗಳಾಗುತ್ತಾರೆ. ತೆಳುದೇಹದ ಕಲ್ಪನೆ [slim fit ] ಪಾಶ್ಚಾತ್ಯರಿಂದ ಬಂದಿದ್ದು. ನಮಗಿದು ''imported culture ''

ಕೆಲವು ವರ್ಷಗಳ ಹಿಂದೆ ನಫೀಸಾ ಜೋಸೆಫ್ ಎನ್ನುವ M.t.v. ನಿರೂಪಕಿಯೊಬ್ಬಳು ಮುಂಬೈ ನ ತನ್ನ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆ ಹೇಗಿದ್ದಳೆಂದರೆ ಪೊರಕೆ ಕಡ್ಡಿಯಂತೆ .ಆಕೆಗೆ ಖಿನ್ನತೆಯಿತ್ತಂತೆ. ನನಗನ್ನಿಸುವ ಪ್ರಕಾರ ಈ ಅನೋರೆಕ್ಸಿಯಾ ಕೂಡ ಇತ್ತೇನೋ.
ಅನೇಕ ಮಾಡೆಲ್ ಗಳು ಫ್ಯಾಶನ್ ಷೋ ಗಳಲ್ಲಿ ramp ನ ಮೇಲೆ ನಡೆಯುತ್ತಿರುವಾಗಲೇ ಬಿದ್ದು ಸತ್ತಿರುವ ಘಟನೆಗಳುಂಟು.

ಮೊನ್ನೆ ಮೊನ್ನೆ ಕರೀನಾ ಕಪೂರ್ ನಿಶ್ಯಕ್ತಿ ಯಾಯ್ತೆಂದು ಆಸ್ಪತ್ರೆಗೆ ಸೇರಿದ ಘಟನೆ ನಮಗೆಲ್ಲರಿಗೂ ತಿಳಿದದ್ದೇ ಆಗಿದೆ.
ಐಶ್ವರ್ಯ ರೈ ಕೂಡಾ ಹೊರತೇನಲ್ಲ.
ಪ್ರತಿ ವರುಷವೂ ಈ ಕಾಯಿಲೆಗೆ ಹೆಣವಾಗುವವರ ಸಂಖ್ಯೆ ಸಾವಿರ ದಾಟುತ್ತದಂತೆ.

ಬಳುಕುವ ಸುಂದರಿಯರನ್ನು ನೋಡಿ ಹೊಟ್ಟೆ ಉರಿಸಿಕೊಳ್ಳುವ ಹೆಣ್ಣುಮಕ್ಕಳು ಇದರ ಹಿಂದೆ ಎಷ್ಟೆಲ್ಲಾ ಸಮಸ್ಯೆಯಿದೆಯೆಂದು ಅರ್ಥಮಾಡಿಕೊಳ್ಳಬೇಕಿದೆ.
ಯಶಸ್ಸು, ಹಣದ ಬೆನ್ನು ಹತ್ತಿ ತಮ್ಮ ದೇಹದ ಬಗೆಗಿನ ತಪ್ಪು ಕಲ್ಪನೆಯಿಂದ ತಮ್ಮನ್ನೇ ತಾವು ಶೋಷಿಸಿ ಕೊಳ್ಳುತ್ತಾರೆ. ಸೋಮಾಲಿಯಾದಂತ ದೇಶದಲ್ಲಿ ಎಷ್ಟೋ ಜನ ತುತ್ತಿಗೆ ಕಾತರಿಸುತ್ತಿದ್ದಾರೆ. ಒಂದು ಕಡೆ ಹಾಗೆ ..ಇನ್ನೊಂದು ಕಡೆ ಹೀಗೆ.
ಎಂತಹಾ ವಿಪರ್ಯಾಸ....!

೨. ಬುಲಿಮಿಯ ನರ್ವೋಸ : ಇದು ಅತಿ ತಿನ್ನುವ ರೋಗ.ತಿಂದು ತಿಂದು ವಾಂತಿ ಮಾಡುವುದು. ಈ ರೋಗಿಗಳು ಸಹಜತೂಕ ಅಥವಾ ಅದಕ್ಕಿಂತಲೂ ಹೆಚ್ಚಿನ ತೂಕವನ್ನು ಹೊಂದಿರುತ್ತಾರೆ.ತಿನ್ನುವ ಚಟ ಇವರಿಗೆ. ನಿಯಂತ್ರಣವೇ ಇರುವುದಿಲ್ಲ. ಸಮಾಜದಲ್ಲಿ ಆದ ಅವಮಾನ ಅಥವಾ ತಪ್ಪಿತಸ್ತ ಭಾವನೆಯಿಂದ ತಪ್ಪಿಸಿಕೊಳ್ಳಲು ಈ ರೀತಿಯ ಅಭ್ಯಾಸ ಮಾಡಿಕೊಂಡಿರುತ್ತಾರೆ.ಖಿನ್ನತೆ ಅಥವಾ ಅತಿ ಉದ್ವೇಗದ ಸನ್ನಿವೇಶಗಳಲ್ಲಿ ಇದು ಕಾಣಿಸಿಕೊಳ್ಳಬಹುದು. ಅನೋರೆಕ್ಸಿಯಾದ ಹೆಚ್ಚಿನ ಲಕ್ಷಣಗಳೇ ಇಲ್ಲೂ ಕಾಣಿಸಿಕೊಳ್ಳುತ್ತವೆ .

ಕೆಲವೊಮ್ಮೆ ಮೆದುಳಿನಲ್ಲಿ ಹಸಿವನ್ನು ನಿಯಂತ್ರಿಸುವ ಹೈಪೋಥಲಾಮಾಸ್ ಎನ್ನುವ ಭಾಗಕ್ಕೆ ಊನವಾದರೆ ಕೂಡಾ ಹಸಿವಾದದ್ದು , ಅಥವಾ ಹೊಟ್ಟೆ ತುಂಬಿದ ಸೂಚನೆ ಗೊತ್ತಾಗದೆ ಇರುವ ಪ್ರಸಂಗಗಳೂ ಉಂಟು.


ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಇದೆ ಮತ್ತು ಈ ರೋಗದಿಂದ ಮುಕ್ತರಾಗ ಬಹುದು. ಸಮಾಜದ , ಕುಟುಂಬದ ಬೆಂಬಲದಿಂದ ಹೊಸ ಮನುಷ್ಯರಾಗಬಹುದು.

ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮ ಮನುಷ್ಯನನ್ನು ಯಾವಾಗಲೂ ಆರೋಗ್ಯದಿಂದಿರಿಸುತ್ತದೆ.


Saturday, January 23, 2010

ಕೇಳಲಾರೆ... ತಾಳಲಾರೆ...

ನಿಮಗೆ ಮುಖ್ಯವಾದ ವಿಚಾರವೊ೦ದನ್ನು ಹೇಳಬೇಕೆಂದು ಕೊಂಡಿದ್ದೇನೆ. ...........

ಗಜಮುಖನೆ ನಾನು ಇಂದು....
ನಿನ್ನನೆ ಭಜಿಸುವೆಎಂದೂ .....
ಕರುಣೆ ತೋರು ನೀನು ನನ್ನಲೀ.......

ಅಯ್ಯೋ ... ಇದ್ಯಾವ ಸೀಮೆಯ ಭಕ್ತಿಗೀತೆಯಪ್ಪಾ... ಸಿನಿಮಾ ಹಾಡುಗಳ ಧಾಟಿಯಲ್ಲೇ ಭಕ್ತಿಗೀತೆಗಳನ್ನು ಹಾಡುವುದು ಹೊಸ ಸ್ಟೈಲಿರಬೇಕು....! ಅನಿಸುತಿದೆ ಯಾಕೋ ಇಂದು.... ಅಂದ ಹಾಗೆಯೇ ಕೇಳಿಸುತ್ತಿದೆ.

ನಾನು ಹೇಳಲು ಹೊರಟಿದ್ದು ಏನೆಂದರೆ..........

ಮಂದಾಕಿನಿಯೇ.. ನೀ ಸಿಡಿಲಿನ ಕಿಡಿಯೇ...
ಮಂದಾಕಿನಿಯೇ...ನೀ ಸುಡಬೇಡ ತಡಿಯೇ....
................. ............ ...................

ಕದ್ದು ಕದ್ದು ನೋಡ್ತಾರೆ....
ಪಾಪ ಇನ್ನೆನ್ಮಾಡ್ತಾರೆ...?

ಕಾಲೇಜು ಹುಡುಗರ ಹುಡುಗಾಟ ಚಂದ...ನಾವು ಪಿ. ಯು. ಸಿ. ಯಲ್ಲಿದ್ದಾಗ ಜೂವಾಲಜಿ ಲ್ಯಾಬಿಗೆ ಹೋಗುತ್ತಿದ್ದರೆ...
ಕೆಲ ಹುಡುಗರು ...ಜೂವಾಲಜಿ ಲ್ಯಾಬಿಗೆ ಹೊಸ ಎಮ್ಮೆ ತಂದಿದ್ದಾರಂತೆ... ನಿಮ್ಮನ್ನೇ ಕರೆಯುತ್ತಿದ್ದಾರೆ...
ಎಂದು ಗೋಳು ಹೊಯ್ದುಕೊಳ್ಳುತ್ತಿದ್ದರು... ತರದ ತುಂಟತನ ಇಷ್ಟವಾಗುತ್ತಿತ್ತು ನಮಗೆ.


ನೋಡಿ ನಮ್ಮಲ್ಲೀಗ ಏನಾಗಿದೆಯೆಂದರೆ ದೇಶದಲ್ಲಿ ಮೊದಲು....

ಹಳೆ ಪಾತ್ರೆ ..ಹಳೆ ಕಪಡಾ....ಹಳೆ ಪೇಪರ್ ..ತರವೊಯಿ...
ಪ್ರೀತಿ ಪ್ರೇಮ.......... ..... .....

ಎಲ್ಲ ಹಳೆಯದೇ ಬಿಡಿ . ಗ್ಲೋಬಲ್ ಈಟಿಂಗು... ಲೋಕಲ್ ತಿನ್ಕಿಂಗು ....ಪ್ರೀತಿ ಪ್ರೇಮ ಸುಲಭಕ್ಕೆ ದೊರಕುವುದಿಲ್ಲ..ಕಂಬಕ್ತ್ಇಷ್ಕ್....

ಈಗ ಹೇಳಲು ಆಗದಪ್ಪಾ.....ಈ ಗಲಾಟೆಯಲ್ಲಿ....

ನೋಡಿ ಇವರೇ.. ಪಕ್ಕದ ಬೀದಿಯಲ್ಲಿ ಈಗ ಗಣೇಶನ್ನ ಕೂರಿಸಿದ್ದಾರೆ.... ಹೊತ್ತಲ್ಲದ ಹೊತ್ತಲ್ಲಿ ಯಾವಾಗ ಬೇಕಾದರೂ ಹಬ್ಬಮಾಡುತ್ತಾರೆ.
ಬ್ರಹ್ಮಚಾರಿ ಗಣೇಶನ ಒಂದು ಪಕ್ಕದಲ್ಲಿ ಅಣ್ಣಮ್ಮ,ಇನ್ನೊಂದು ಪಕ್ಕದಲ್ಲಿ ಕನ್ನಡಮ್ಮ...
ಗಣೇಶ ಸಿದ್ಧಿ, ಬುದ್ಧಿ ಎಂಬಿಬ್ಬರೊಡನೆ ಕದ್ದು ವ್ಯವಹರಿಸುತ್ತಾನೆಂಬ ಸುದ್ದಿಯಿದ್ದರೂ ..... ವಿಚಾರ ಬಿಡಿ .. ನಾನು ನೋಡಿಲ್ಲ.
ಅಮ್ಮಂದಿರು ಬಹುಷಃ ಕಾವಲಿಗೆ ಕುಳಿತಿದ್ದರೂ ಕುಳಿತಿರಬಹುದು....!!

ಅವರದ್ದೇ ಗಲಾಟೆ..... ಅಂದರೆ ಮೈಕಿನದ್ದು ಎಂದರ್ಥ. ತರಾವರಿ ಗಾಯನ... ಬೆಳಗ್ಗೆ ನಾಲ್ಕು ಘಂಟೆಗೆ ಸುಪ್ರಭಾತದೊಂದಿಗೆ ಶುರುವಾದರೆ ರಾತ್ರಿ ಹನ್ನೊಂದರ ತನಕ ಬಿಡುವೆ ಇಲ್ಲ ಬಾಯಿಗೆ...[ ಮೈಕಿನದ್ದು]

ದಿನ ಬಂದಿದ್ದರಲ್ಲ ಪಡ್ಡೆ ಹೈದರು..ಚಂದಾ ಕೇಳಲು...
ಕೊಡುವುದಿಲ್ಲ ಇವರೇ... ಮೈಕಿನ ಗದ್ದಲ ಕೇಳಲು ಸಾಧ್ಯವಿಲ್ಲ. ದುಡ್ಡು ಕೊಟ್ಟು ದುಃಖ ಪಡಲೇ ನಾನು....?
ಬೈದು ಕಳಿಸಿದ್ದೇನೆ. ನಿಮ್ಮ ಮನೆ ಬಾಗಿಲಿಗೇ ಮೈಕ್ ಕಟ್ಟುತ್ತೇವೆಂದು ಹೇಳಿ ಹೋಗಿದ್ದರಲ್ಲ ....ಅವರೂ ಸಿಟ್ಟಲ್ಲಿ....!

ಹಾಗಾದರೆ ಗಣೇಶನಿಗಾದರೂ ಬುದ್ಧಿ ಇಲ್ಲದೆ ಅಲ್ಲೇ ಕುಳಿತಿದ್ದಾನೆಯೇ....?
ಯಾರಿಗ್ಗೊತ್ತು.... ದೇವರು ಆತ್ಮ ಸ್ವರೂಪಿಯಲ್ಲವೇ....? ಸರ್ವಾಂತರ್ಯಾಮಿ....ಎಲ್ಲಾದರೂ ಹೋಗಿರಲೂ ಬಹುದು...
ಮತ್ತೊಂದು, ಇದ್ದರೂ ಆತನ ಕಿವಿ ಕೆಪ್ಪವಾಗಿರಲಿಕ್ಕೆ ಸಾಕು... ಮೊರದಗಲ ಕಿವಿಯಿದ್ದರೂ ಹೊರಗಿನ ತಮಟೆ ಸದ್ದಿಗೆ ಒಳಗಿನ ತಮಟೆ ಹರಿದಿರಲೂಬಹುದು...! ಕಾಲದಲ್ಲಿ ಕ್ವಾಲಿಟಿ ಪ್ರಾಡಕ್ಟ್ ಯಾವುದಿದೆ ಹೇಳಿ....?

ದೇವರುಗಳನ್ನೆಲ್ಲಾ ಕೂರಿಸಿ ಹಬ್ಬ ಮಾಡುವ ಜನರಲ್ಲಿ ಅದೂ... ಇದು... ಕಾರ್ಯಕ್ರಮಗಳ ಲಿಸ್ಟ್ ಕೂಡಾ ಇರುತ್ತಂತೆ...

ಮಧ್ಯ ಮಧ್ಯ ಗಣ ಹೋಮ, ಚಂಡಿಕಾ ಯಾಗ, ಕನ್ನಡಮ್ಮನಿಗೆ ಅರ್ಕೆಷ್ಟ್ರಾ...... ಸ್ಪೆಷಲ್ ಹಿಂದಿ ಹಾಡುಗಳೂ.... ಜೊತೆಗೆ ಇಂಗ್ಲೀಷಿನಲ್ಲಿ ಹಾಡಿರುವ ಅಚ್ಚ ಕನ್ನಡದ ಗೀತೆಗಳು....!!!

ಪೂಜೆಗಳೆಲ್ಲಾ ಮುಗಿದ ಮೇಲೆ ಅಷ್ಟಾಂಗ ಸೇವೆ ಮಾಡುವ ಪದ್ಧತಿಯಿದೆ ನಮ್ಮ ಕಡೆ.. ಅದರಲ್ಲಿ ಸಂಗೀತ, ನೃತ್ಯ ಸೇವೆಗಳೂ ಒಳಗೊಂಡಿರುತ್ತವೆ..... ಕೆಲವರು ಸೇವೆಯ ಹರಕೆ ಹೊತ್ತಿರುತ್ತಾರೆ...
ಕಾಲಕ್ಕೆ ತಕ್ಕಂತೆ ಸಿನಿಮಾ ಸಂಗೀತ ಸೇವೆ.......!!
ಬ್ರಹ್ಮಚಾರೀ ಗಣಪನಿಗೆ ಟಂ ಸಾಂಗುಗಳನ್ನೇ ಹಾಡಿಸುತ್ತೀವಿ ಎನ್ನುವ ಹೊಸ ಹರಕೆ ಇರಬಹುದೇ.....? ಸೋಜಿಗ ನನಗೆ....!

ಹಾಳಾದ್ ಹಾಳಾದ್ ಹಾರ್ಟಲೀ.....
ಹೊಸಾ ಹುಡ್ಗೀರ್ ಹಾವಳಿ...

ಎಲೆ ಕೆಂಚಿ ತಾರೆ ..ನಂ ಮನೀ ತಂಕ ಬಾರೆ...

ಮಿಸ್ಸು ಲಚ್ಚಿ.. ನೀ ಕೊಂಚ ಹುಚ್ಚಿ ....
ಎಲ್ಲಾರೂ ಹಾಳಾಗೋದು ಪ್ರೀತಿಯಿಂದಲೇ.....

ಚಕ್ಲೀ ನಿಪ್ಪಟ್ ತಿನ್ಕೊಂಡು ...ಗೋಲಿ ಆಟ ಆಡ್ಕೊಂಡು ...
ಬಣ್ಣ ಬಣ್ಣದ್ ಡ್ರೆಸ್ಸು ಹಾಕ್ಕಂಡು ...ಸಿಳ್ಳೆ ಹೊಡಿಯೋಣ...
ಕಬಡಿ ಕಬಡಿ ಕಬಡಿ.....

ಏನಾಯ್ತೋ ....ಏನಾಯ್ತೋ ..ವಿಧಿಯಾಟ ಇದೇನಾಯ್ತೋ.....

ಅಯ್ಯಪ್ಪಾ.... ದೇವರೇ ಕಾಪಾಡಬೇಕು ಇವರನ್ನೆಲ್ಲಾ.....!!! ಸಾಯಂಕಾಲದ ಹೊತ್ತಿಗೆ ಸಕ್ಕತ್ ಹಾಟ್ ಮಗಾ....
ಭಕ್ತಿಯ ಅಂತಿಮ ಹಂತ ..ತೀರ್ಥ ಸೇವನೆ... ಚಮಚೆಗಳಲ್ಲಿ ಸೇವಿಸಿದರೆ ಪವರ್ರ್ ಸಾಕಾಗದು...ಹಾಗಾಗಿ ಬಾಟಲಿಗಳಲ್ಲೇ ಹೊಯ್ದುಕೊಂಡು ....ಬಾಡಿ ಅಕ್ಸಿಲರೆಟ್ ಮಾಡಿಕೊಳ್ಳಬೇಕು ಯುವಶಕ್ತಿಗೆ...!!!!
ಕುಡಿದು ಚರಂಡಿ ಅಳೆಯುವುದು....
ಯಾವ್ದಕ್ಕೂ ಮಸ್ತ್ ಮಜ್ಜಾ ಮಾಡಿ ..... ಸಿದ್ಧಾಂತ ...!

ಈಗೀಗ ನನ್ನ ಧ್ವನಿ ಯಾವಾಗಲೂ ಒಡೆದುಕೊಂಡೇ ಇರುವುದಕ್ಕೆ ಕಾರಣ ಮೈಕುಗಳೊಂದಿಗೆ ನಾನು ನಡೆಸುವ ಪೈಪೋಟಿ...
ಸಹಜ ಧ್ವನಿ ಯಾರಿಗೆ ಕೇಳಿಸುತ್ತೆ ಮನೆಯಲ್ಲಿ... ಎತ್ತರದ ಧ್ವನಿಯೇ ಬೇಕು....ಎಲ್ಲರಿಗೂ

ವಾರವಿಡೀ ಇದೇ ಹಾಡು... ಇದೇ ರಾಗ.. ಮೈಕಿಗೂ obsessions . ಬೀದಿ ಬದಲಾಗಿರುತ್ತೆ ಅಷ್ಟೇ..
ದೇವರಿಗೆ ರಜಾದಿನಗಳಿಲ್ಲ.. ಸೆವೆನ್ ಡೇಸ್ ವೀಕ್ ...!

ದಶ ದಿಕ್ಕುಗಳಿಂದಲೂ ಮೇಲಿಂದ ಮೇಲೆ..... ಕರ್ಣ ಪ್ರಹಾರವನ್ನು ತಾಳಿ ..ತಾಳಿ ..
ಗಾಯನದ ಮಾಧುರ್ಯತೆಯನ್ನು ...ಮಾರ್ಧವತೆಯನ್ನೂ ಅನುಭವಿಸುವ ಸಂವೇಧಿಗಳೇ ಭಗ್ನಗೊಂಡಿವೆ ನನ್ನ ಮೆದುಳಲ್ಲಿ....
ನೀವು ಎಂತಹಾ ಹಾಡುಗಾರರನ್ನೇ ಕರೆದು ತಂದು ನನ್ನೆದುರು ಹಾಡಿಸಿ ... ಚೆನ್ನಾಗಿದೆ ಎಂದು ನಾನೆಂದರೆ ಕೇಳಿ ..ಮತ್ತೆ.


ಮುಖ್ಯವಾದ ವಿಚಾರವೊಂದನ್ನು ಹೇಳಬೇಕೆಂದು ವಾರದಿಂದ ತಯಾರಿ ನಡೆಸಿದ್ದೆ...
ಹಾಳು ಗಲಾಟೆಯಲ್ಲಿ ಮರೆತು ಹೋಗುತ್ತಿದೆ..
ಮುಂದಿನ ವಾರ ಗಣೇಶನನ್ನು ಮುಳುಗಿಸಿದ ಮೇಲೆ ಮತ್ತೆ ಬರುವೆ.

Sunday, January 17, 2010

ಚಿತ್ತಾರದರಮನೆಯಲ್ಲಿ ಹೂದೋಟ..

ನಿಮಗೆ ಮೊದಲೊಮ್ಮೆ ಹೇಳಿದ್ದೆನಲ್ಲ.... ಬ್ಲಾಗೂರಲ್ಲೊಂದು ಪುಟ್ಟ ಅರಮನೆ ಕಟ್ಟುತ್ತಿದ್ದೇನೆ ಅಂತ ..ಬೇಕಾದರೆ ನೋಡಿ ಬನ್ನಿ..
(
ಬನ್ನಿರಲ್ಲ...ಬ್ಲಾಗೂರ ನನ್ನ ಮನೆಗೆ .)

ಅಲ್ಲೀಗ ಹೂದೋಟ ಮಾಡಿದ್ದೇನೆ..
ಹೀಗೆ.... ನೋಡಲು ಬಂದವರು ಹೇಳಿದ್ದು...
ಕಟ್ಟುತ್ತಿದ್ದ ಹಾಗೆ ನಾಲ್ಕಾರು ಗಿಡ ಗೆನ್ಟೆ ನೆಡು....
ಉಪ್ಪರಿಗೆ ಕಟ್ಟುವಷ್ಟರಲ್ಲಿ ಗಿಡ ದೊಡ್ಡದಾಗಿ ಹೂ ಬಿಡುತ್ತೆ... ನೋಡಲು ಚಂದ....ಅಂತ..
ನಾನೂ ಆಚೀಚೆ , ಅಲ್ಲಿ ಇಲ್ಲಿ ಗಿಡ ಒಟ್ಟು ಮಾಡಿ ತಂದು ನೆಟ್ಟಿದ್ದೇನೆ...

ಈಗದು ಹೂಬಿಟ್ಟಿದೆ.ಎಲ್ಲಾ ತರದ್ದೂ ಇದೆ.
ಒಂದೊಂದು ಸಾಲಿನಲ್ಲಿ ಒಂದೊಂದು ತರ...
ಎಷ್ಟೊಂದು ಚಂದ ಅಂದ್ರೆ ...ಬಾಳ ಸುಂದರ..
ಮನೆ ಕಟ್ಟುವಾಗ ಸ್ವಲ್ಪ ಸಿಮೆಂಟು, ಮರಳಿನ ಧೂಳು ಬಿದ್ದಿರಬಹುದು....
ಆದರೂ ಚಂದವಿದೆ ....
ಕಾಂಪೌಂಡ್ ನ ಪಕ್ಕಕ್ಕೆ ಸಾಲಾಗಿ ಜಿನಿಯಾ ಹಾಕಿದ್ದೇನೆ...
ಬರುವವರಿಗೆಲ್ಲಾ ಸ್ವಾಗತ ಕೋರಲು ನಿ೦ತ ಸು೦ದರಿಯರ ತರ ಕಾಣುತ್ತೆ...

ತರತರದ ತರುಣಿಯರು...ಕಣ್ಣೆರಡು ಸಾಕಾಗಲಿಕ್ಕಿಲ್ಲ...ಚಂದ ಸವಿಯಲು..ಮತ್ತೆ ಕಾಡುವ ಹುಡುಗರು ಹೂದೋಟದ ಸುತ್ತ ಸುತ್ತುತ್ತಲೇ ಇರುತ್ತಾರೆ... ಹೂಮುತ್ತಿನಾಸೆಗೆ ...
ಚಂಡು ಹೂ ಗೊತ್ತಲ್ಲವೇ...ಯಾವುದೋ ಒಣಗಿದ ಹೂಮಾಲೆ ಎಸೆದಿದ್ದು, ಬೀಜ ಉದುರಿ ಗಿಡ ಆಗಿತ್ತು .ರಾತ್ರಿ ಉಪ್ಪರಿಗೆಯ ಬಾಲ್ಕನಿಯಲ್ಲಿ ನನ್ನವರೊಂದಿಗೆ ನಿಂತು ನೋಡಿದರೆ........ ಏನಂತ ಹೇಳಲಿ ......!! ಮೋಡಗಳ ಮರೆಯಲ್ಲಿ ಚಂದಿರ ಹೂ ನಗೆ ಚೆಲ್ಲಿದಂತೆಲ್ಲಾ...
ನಲ್ಲನಲ್ಲಿ ತುಂಟ ಕವಿ ಇಣುಕುತ್ತಾನೆ........!

ನಲ್ಲೆ ನಗುವಾಗಲೆಲ್ಲಾ....
ಮಾರಿ ಗೋಲ್ಡ್ ....
ಮತ್ತೆ ಕೋಪಿಸಿಕೊಂಡರಂತೂ....
ಹೆಮ್ಮಾರಿ ಗೋಲ್ಡ್...

ಮತ್ತೆ ಮಾರಿ ತಿರುವಷ್ಟರಲ್ಲಿ ....ಇನ್ನೊಂದು ಕವಿತೆ ರೆಡಿ.

ನಲ್ಲೆ ಮೊಗ ಕೆಂಗುಲಾಬಿ ....
ಮುನಿಸ ಮುಳ್ಳ ಬೇಗ ತೆಗಿ......
ಬಾನಲ್ಲಿ ಇಣುಕುವ ಬಿದಿಗೆ ಚಂದ್ರಮ ಪಳಕ್ಕನೆ ನಗುತ್ತಾನೆ...!!!!!
ಹಾಗೆ ಪಕ್ಕನೆ ಮೋಡದಲ್ಲಿ ಮರೆಯಾಗುತ್ತಾನೆ......
ಶಾಪದ ಭೀತಿಗಲ್ಲ..... ತಾರೆಯ ನೆನಪಾಗಿರಬೇಕು......!


ಮತ್ತೆ ಗುಲಾಬಿ ಗಿಡಗಳು ಹೂಬಿಟ್ಟು ಮುಡಿಯುವವರಿಗಾಗಿ ಕಾದಿವೆ..ಮೈಯೆಲ್ಲಾ ಇಬ್ಬನಿಯಲ್ಲಿ ತೋಯಿಸಿಕೊಂಡು ಮಂದಹಾಸ ಬೀರುವ ಬಾಲೆಯಂತೆ ಕಾಣುತ್ತಾಳೆ.
ಮುತ್ತಿನ ಮಣಿಗಳಂತಿರುವ ಹನಿಯನ್ನು ಕೈಯಿಂದೊಮ್ಮೆ ಸವರಲೇ...... ಅನ್ನಿಸುವುದು.ಮೊಗ್ಗುಗಳದು ಚಂದವೇ ಬೇರೆ.....
ಎಲೆ ಬಿಸಿಲಿಗೆ... ಹರಯಕ್ಕೆ ಕಾಲಿಡುವ ಬಯಕೆ ....ಅವಕ್ಕೆ ..ತಲೆ ತುಂಬಾ ಸೆರಗ ಹೊದ್ದ ಪುಟಾಣಿ ವಧುವಿನಂತೆ ಕಂಗೊಳಿಸುವ ಬಯಕೆ ......ಹೇಳತೀರದು.
ಅಕ್ಕನ ಮದುವೆಯಲ್ಲಿ ತಂಗಿಯ ಸಡಗರಕ್ಕೇನು ಕೊರತೆ..
ಸಧ್ಯ.....! ನನಗೇನಿಲ್ಲ....
ಜವಾಬ್ಧಾರಿ ..... ಸಂಸಾರದ ಚಿಂತೆ.....!

ಗುಲಾಬಿಗಳ ವರ್ಣಿಸಿದ್ದು ಮುಗಿಯಿತಲ್ಲ..
ಸೇವಂತಿಗೆ ಕಣದ ಕಡೆ ಹೋಗೋಣ ಬನ್ನಿ....ಕಣದಲ್ಲಿ ಚೆನ್ನಾಗಿ ಮಣ್ಣು, ಗೊಬ್ಬರ ಹಾಕಿ ಸೇವಂತಿಗೆ ಗಿಡ ನೆಟ್ಟರೆ ಚೆನ್ನಾಗಿ ಹೂ ಬಿಡುತ್ತವೆ.
ಬೆಳಗಿನ ಬಿಸಿಲು ಬಿದ್ದರೆ ಕೇಳುವುದೇ ಬೇಡ....
ಬೇರೆ ಬಣ್ಣದವೂ ಇವೆ...


ಹಳದಿ ಬಣ್ಣದವೆಂದರೆ ನನಗಿಷ್ಟ...ಕುಂಡದಲ್ಲಿ ನೆಟ್ಟರೂ ಚೆಂದದ ಹೂಗಳು ಬಿಡುತ್ತವೆ...
ಇದನ್ನು ಹೊರ ಬಾಗಿಲ ಪಕ್ಕದಲ್ಲಿ ಮೆಟ್ಟಿಲ ಕೆಳಗೆ ಇಟ್ಟಿದ್ದೇನೆ.


ಇದು ಕಿಂಕರ ಅನ್ನುವ ಹೂಗಿಡ...ನಿಮ್ಮಲ್ಲೆಲ್ಲಾ ಏನಂತ ಕರೆಯುತ್ತೀರೋ....ಇದು ಈಗ್ಸೋರ ....ಪೊದೆ ಆಗುವುದರಿಂದ ಕಾಂಪೌಂಡಿನ ಮೂಲೆಯಲ್ಲಿ ಜಾಗ ಕೊಟ್ಟಿದ್ದೇನೆ.
ಆದರೂ ಸಾಲಿನಲ್ಲಿ ಮುಂದೆ ಬಂದು ನಿಂತಂತೆ ಕಾಣುತ್ತೆ.

ಇದಕ್ಕೆ ಸ್ಟಾರ್ ಕ್ಲಸ್ಟರ್ ಅನ್ನುತ್ತಾರಂತೆ...
ಕಿಂಗ್ ಫಿಷರ್ ವಿಮಾನದ ಒಯ್ಯಾರದ ಗಗನಸಖಿಯಂತಿದ್ದಾಳೆ. ಕೆಂಪು ...ಕೆಂಪು...


ಇದ್ಯಾವುದರ ಹೂ ಹೇಳಿ....?
ಗೊತ್ತಾಗಲಿಲ್ವಾ .......!! ಟೊಮೇಟೊ ಹೂ .... ಅರ್ಜಂಟ್ ಗೆ ಸಾರಿಗೆ ಬೇಕಾಗುತ್ತೆ ನೋಡಿ...


ಇನ್ನೂ ಕೆಲವು ಹೆಸರೇ ಗೊತ್ತಿರದ ಗಿಡಗಳೂ ಇವೆ....

ಮುಂದಿನ ಸಲ ಯಾವಾಗಲಾದರೂ ತೋರಿಸಲೇ....

[ ಮತ್ತೆ ಏನೆಂದರೆ.....ಪಾಪ ಇಷ್ಟೆಲ್ಲಾ ಗಿಡ ಗೆನ್ಟೆ ಬೆಳೆಸಿದ್ದಾರೆ... ಯಾರಾದರೂ ಕಳ್ಳ, ಕಾಕರು ಹೂ ಕದ್ದರೆ.....ಅಂತ ನೀವು ಚಿಂತೆ ಮಾಡುವುದೇನೂ ಬೇಡ...
ಮೊನ್ನೆ ಊರಿಗೆ ಹೋದಾಗ '' ಹೂ ಬನಕ್ಕೆ ಸಿಗಂದೂರು ಚೌಡಿಯ ಕಾವಲಿದೆ ....'' ಅಂತ ಬೋರ್ಡ್ ಬರೆಸಿ, ಪೂಜೆ ಮಾಡಿಸಿಕೊಂಡು ಬಂದು ತಗುಲು ಹಾಕಿದ್ದೇನೆ.
ಈ ಕೆಲಸವನ್ನು ನನ್ನವರು ಮೆಚ್ಚಿ ಶ್ಲಾಘಿಸಿದ್ದಾರೆ.'' ಅಲ್ವೇ...ಇನ್ನೊಂದು ಬೋರ್ಡ್ ಬರೆಸಿಕೊಂಡು ಬಂದು ಭಾರತ,,, ಪಾಕ್,,, ಗಡಿಯಲ್ಲಿ ಹಾಕು... ಭಾರತ ದೇಶಕ್ಕೆ ಸಿಗಂದೂರು ಚೌಡೇಶ್ವರಿಯ ಕಾವಲಿದೆ..... ಅಂತ,,,,'' ಎಂದು ಉಚಿತವಾಗಿ , ಉಪಯುಕ್ತ ಸಲಹೆ ಕೊಟ್ಟಿದ್ದಾರೆ. ಈಗ ಪುರಸೊತ್ತಿಲ್ಲ .... ಮಕ್ಕಳಿಗೆ ಪರೀಕ್ಷೆ ,,ಮುಗಿಯುತ್ತಿದ್ದಂತೆ ಮದುವೆ, ಉಪನಯನ ಇತ್ಯಾದಿ ಕಾರ್ಯದ ಮನೆಗಳ ಸಾಲು ಸಾಲು .... ಮಳೆಗಾಲಕ್ಕೆ ಬಿತ್ತು.....ಬಿಡಿ.. ಚೌಡೇಶ್ವರಿಯ ವ್ಯಾಪ್ತಿ ವಿಸ್ತಾರವಾಗಿದೆ. ]

Wednesday, January 13, 2010

ಶುಭಾಶಯಗಳು ....
ಬಾಳ ಪಥದಿ ಚಲಿಸಿ ಮುಂದೆ
ರಾಗ ದ್ವೇಷ ಬಿಟ್ಟು ಹಿಂದೆ
ಎಳ್ಳು ಬೆಲ್ಲ ಸವಿದು ಬೇಗ
ಶಾಂತಿ ಬಾಳ್ವೆ ನಡೆಸಿರೀಗ....


ಸರ್ವರಿಗೂ ಸಂಕ್ರಮಣದ ಹಾರ್ದಿಕ ಶುಭಾಶಯಗಳು.

Saturday, January 9, 2010

ನೀರ ದಾರಿ....................
ಯುಗಾದಿ ಕಳೆದು
ಮರಳುತಿರೆ ಮತ್ತೆ ಧರೆ
ಸುಡುನೆತ್ತಿ ಬಿಸಿಲ ಮುಸಲಧಾರೆ
ಕಂಕುಳ ಮಗುವಿಗೂ....ಬೆವರಹನಿ ಜಲಧಾರೆ..!


ಛಾಯೆಯಿಲ್ಲದ ಭೂಮಿ
ದೂರದಾ ಹರದಾರಿ
ತೀರದಾ ದಾಹಕ್ಕೆ
ನೀರ ಬಿಂದಿಗೆ ಹೊತ್ತ
ನೀರೆ ಹೊರಟಿಹಳಲ್ಲಿ.....ನೀರಬೇಟೆಗೆ....!


ಭರವಸೆಯ ಹುಸಿನೆರಳು
ವಿಧಿಯ ಕರಿನೆರಳು
ಏಗಬೇಕಿದೆ ಜೀವ
ಬವಣೆಯಾ ಬದುಕಿಗೆ
ಆಗಬೇಕಿದೆ ಅಲ್ಲಿ... ಚಮತ್ಕಾರ ಬಾನಲ್ಲಿ...!


ಸಾಗಬೇಕಿದೆಯಿನ್ನೂ...
ಜೀವದಾ ಹಾದಿ
ಜೀವಜಲ ದರುಶನಕೆ ಹುಡುಕಿ ದಾರಿ
ಬದುಕಲೇ ಬೇಕಿದೆ...ಸ್ವಾಮಿ
ನೀರೆ ಹೊರಟಿಹಳಲ್ಲಿ ...ಕಾಲನಿಗೆ ಬೆನ್ನು ತೋರಿ....!

[ ಚಿತ್ರ ನನ್ನದೇ ರಚನೆ.]

Wednesday, January 6, 2010

ಮಲೆನಾಡಿನಲ್ಲಿ ಯಂತ್ರಗಳು...

ಮಲೆನಾಡು ಎಂದಾಕ್ಷಣ ಗುಡ್ಡ ,ಬೆಟ್ಟ, ಕಾಡು, ಝರಿ ,ಹಳ್ಳ ,ತೊರೆ, ಕಾಫಿ , ಇವುಗಳೆಲ್ಲಾ ನೆನಪಾಗುತ್ತದಷ್ಟೇ...
ಜೊತೆಗೆ ಮುಖ್ಯವಾಗಿ ಇನ್ನೂ ಒಂದು ನೆನಪಾಗೇ ಆಗುತ್ತದೆ..........!!!
ಅಡಿಕೆತೋಟ...... ಅಲ್ಲವೇ .....?
ಅಡಿಕೆ ಮಲೆನಾಡಿನ ಮುಖ್ಯ ವಾಣಿಜ್ಯ ಬೆಳೆ. ತಾಂಬೂಲಕ್ಕೆ ಅಡಿಕೆಯೇ ರಾಜ..! ಮಲೆನಾ
ಡಿನಲ್ಲಿನ ಬಹುತೇಕ ಜನರಬಾಯಿ...ಗಲ್ಲವೆಲ್ಲಾ ತಾಂಬೂಲರಸಪೂರಿತ ......!!!
ಸಾಗರ,ಸೊರಬ, ಹೊಸನಗರ,ತೀರ್ಥಹಳ್ಳಿ , ಉತ್ತರಕನ್ನಡದ ಸಿರಸಿ , ಸಿದ್ದಾಪುರ, ಯೆಲ್ಲಾಪುರ ಈ ಸಾಲಿನಲ್ಲಿ ಅಡಿಕೆಬೆಳೆ ಅಧಿಕ .
ಅಲ್ಲದೆ ಕೆಲವು ವರ್ಷಗಳ ಹಿಂದೆ ಅಡಿಕೆ ಬೆಲೆ ಒಮ್ಮೆಲೇ ಹೆಚ್ಚಾಗಿದ್ದರಿಂದ ಚಿತ್ರದುರ್ಗದ ಸುತ್ತಮುತ್ತ , ಚನ್ನಗಿರಿ, ಹೊನ್ನಾಳಿ , ಭೀಮಸಮುದ್ರ ,....ಇನ್ನಿತರ ಕಡೆಗಳಲ್ಲೂ ಅಡಿಕೆ ಕೃಷಿ ಮಾಡಲು ಶುರುಮಾಡಿದ್ದಾರೆ.


ಅಡಿಕೆ ತೆಂಗಿನ ಮರದಂತೆಯೇ ಉದ್ದವಾಗಿ ಬೆಳೆಯುತ್ತದೆ . ಕಾಂಡದ ಅಗಲ ಕಡಿಮೆ. ತೆಂಗಿನಂತೆಯೇ ಗರಿಗಳು . ಅಡಿಕೆ ಮಡ್ಳು ಎನ್ನುತ್ತಾರೆ.
ಇದು ನೋಡಿ... ಅಡಿಕೆ ಮರ.ಕೊನೆಯಲ್ಲಿ ಕೊನೆ [ಗೊನೆ] ಬಿಟ್ಟಿದೆ .
ಅಡಿಕೆ ಬೆಳೆದ ನಂತರ ಅದರ ಮರಹತ್ತಿ ಕೊಯ್ಲು ಮಾಡಬೇಕು . ಹಸಿರು ಅಡಿಕೆ ಸುಲಿದು ಒಳಗಿನ ಬೇಳೆಯನ್ನು ಬೇಯಿಸಿ ಒಣಗಿಸ
ಬೇಕು. ಅದು ಕೆಂಪಡಿಕೆ . ಹಣ್ಣಾದ ಅಡಿಕೆಯನ್ನು ಹಾಗೆ ಒಣ ಹಾಕಿ ' ಚಾಲಿ ' ಮಾಡುತ್ತಾರೆ. ಈ ಅಡಿಕೆ ಕೊಯ್ಲು ನವೆಂಬರ್ ತಿಂಗಳಿನಿಂದ ಜನವರೀ ಕೊನೆವಾರದವರೆಗೂ ಇರುತ್ತದೆ.ಇದು ಹಣ್ಣಡಿಕೆಗಳ ರಾಶಿ .

ಇದನ್ನು ಸಂಸ್ಕರಿಸಲು ಅದರದೇ ಆದ ಕ್ರಮಗಳಿವೆ. ಕತ್ತಿಯಿಂದ ಪ್ರತಿಯೊಂದು ಅಡಿಕೆಯನ್ನೂ ಸುಲಿಯಬೇಕು. ಸುಲಿಯಲು ಬರದ, ಅರ್ಧ ಸುಲಿದ ಕಾಯಿಗಳು ಕುಕ್ಕುಗೋಟು ಆಗುತ್ತವೆ. ಕುಕ್ಕು ಗೋಟಿಗೆ ಬೆಲೆ ಕಡಿಮೆ.ಮೆಟ್ಗತ್ತಿಯಿಂದ ಅಡಿಕೆ ಸುಲಿಯುವುದು


ಕೂಲಿಯಾಳುಗಳ, ಅಡಿಕೆಸುಲಿಯುವವರ ಸಮಸ್ಯೆ ತಲೆದೊರಿದ್ದರಿಂದ ಅಡಿಕೆಬೆಳೆಗಾರರು ಈಗೀಗ ಅಡಿಕೆ ಸುಲಿಯುವ ಯಂತ್ರಗಳನ್ನು ಬಳಸ ತೊಡಗಿದ್ದಾರೆ.

ಮೊದಲು ಅಡಿಕೆಗಳನ್ನು ಗೊನೆಯಿಂದ ಬೇರ್ಪಡಿಸಬೇಕು.
ಇದು ನೋಡಿ ...ಗೊನೆಯಿಂದ ಅಡಿಕೆ ಬೇರ್ಪಡಿಸುವ ಯಂತ್ರ


ಇದಕ್ಕೆ 1 h.p. ಮೊಟರಿನ ಅಗತ್ಯವಿದೆ .ಆಳಿನ ಅಗತ್ಯವಿಲ್ಲದೆ ಹೆಣ್ಣು ಮಕ್ಕಳಾದ
ರೂ ಈ ಕೆಲಸ ಮಾಡಬಹುದು . ಸ್ವಲ್ಪ ಎಚ್ಚರಿಕೆ ಸಾಕು.

ಈಗ ಬಿಡಿಸಿದ ಅಡಿಕೆಗಳನ್ನು ಸುಲಿಯಬೇಕು.ಅದಕ್ಕೆ ಯಂತ್ರ ಸಿದ್ಧವಿದೆ.ಅರೆಕಾ ಹಸ್ಕರ್


ಇದರ ಮೇಲಿನ ಸಾಣಿಗೆಯಲ್ಲಿ ಹಸಿ ಅಡಿಕೆಗಳು ಕಾಣಿಸುತ್ತಿವೆಯಲ್ಲವೇ...? ಮೊದಲು ಅಡಿಕೆಗಳನ್ನು ಸಾಣಿಗೆಯಲ್ಲಿ ಸುರಿಯಬೇಕು....
ಕಲ್ಲುಗಳಿಲ್ಲದಂತೆ ನೋಡಿಕೊಳ್ಳಬೇಕು. ಇದ್ದರೆ ಬ್ಲೇಡ್ ಹಾಳಾಗಬಹುದು.ಇದು ಯಂತ್ರದ ಹಿಂಬಾಗ . ಇಲ್ಲಿಂದ ಸಿಪ್ಪೆ ಬೀಳುತ್ತದೆ.
ಅಡಿಕೆ ಬೀಳುವ ಜಾಗ

ಇಲ್ಲಿಂದ ಸುಲಿದ ಅಡಿಕೆ ಹೊರಬರುತ್ತದೆ . ಮೇಲಿನ ಪ್ಲೇಟ್ ನಿಂದ ಗಟ್ಟಿಯಿರುವ, ಅರ್ಧ ಸುಲಿದ ಅಡಿಕೆಗಳು ಹೊರಬರುತ್ತವೆ. ಅದನ್ನಾದರೂ ನಂತರ ಕೈಯಿಂದಲೇ ಸುಲಭವಾಗಿ ಬಿಡಿಸಿ ಹಾಕಬಹುದು.ಕೆಳಗಿರುವ ಪ್ಲೇಟ್ ನಿಂದ ಪೂರ್ಣ ಸುಲಿದ ಅಡಿಕೆಗಳು ಹೊರಬರುತ್ತವೆ.
ಕಸ ಬೇರ್ಪಡಿಸಲು ವೈಬ್ರೆ ಟರ್ ಅಳವಡಿಸಲಾಗಿದೆ.
ಅಡಿಕೆಯ ಮೇಲ್ಪದರಕ್ಕೆ ಹಾನಿಯಿಲ್ಲ.
ಸಣ್ಣ , ದೊಡ್ಡ ಎಂದು ಅಡಿಕೆಗಳನ್ನು ವರ್ಗೀಕರಿಸುವ ಅಗತ್ಯವಿಲ್ಲ. ಎಲ್ಲವನ್ನೂ ಸುಲಿಯುತ್ತದೆ.
ಸುಲಿದ ಅಡಿಕೆ


ಇದಕ್ಕೆ 1 h.p. ಮೋಟಾರ್ ಅಗತ್ಯವಿದೆ. ಒಂದು ಘಂಟೆಗೆ ನಾಲ್ಕು ಡಬ್ಬ ಅಡಿಕೆ ಸುಲಿಯುವ ಈ ಯಂತ್ರದ ಜೊತೆ ಹದಿನೈದು ಜನ ಆಳುಲೆಕ್ಕ ಬೇಕಾಗುವಲ್ಲಿ ನಾಲ್ಕೇ ಜನರಿದ್ದರೆ ಸಾಕಾಗುವುದು. ಅಡಿಕೆ ಕೊಳೆಸಿಕೊಳ್ಳುವ ಭಯವಿಲ್ಲ.

ಮಲೆನಾಡಿನಲ್ಲಿ ಕೂಲಿಯಾಳುಗಳ ಸಮಸ್ಯೆ ಅಧಿಕ ..
ಹಾಗಾಗಿ ಕೆಲಸಕ್ಕೆ ಪರ್ಯಾಯಮಾರ್ಗ ಹುಡುಕಿಕೊಳ್ಳುವುದು ಅನಿವಾರ್ಯ.ಜನರ ಬದಲಿಗೆ ಬೆಳೆಗಾರ ಯಂತ್ರದ ಮೊರೆಹೊಗಬೇಕಾಗಿದೆ.
ಅಡಿಕೆ
ಸುಲಿಯುವವರ ನಡುವಿನ ಹುಂಡಿ ಪದಗಳು, ಜನಪದಗೀತೆಗಳು, ಗಾದೆಮಾತುಗಳೂ, ಸುದ್ದಿ ಸಪ್ತಾಹಗಳು ಮರೆಯಾಗಿ ಜೀವನ ಯಾಂತ್ರಿಕವಾಗುತ್ತಿರುವುದು ಬೇಸರದ ಸಂಗತಿಯಾದರೂ.. ಗತ್ಯಂತರವಿಲ್ಲ .. ಬೆಳೆಗಾರನೂ ಬದುಕಬೇಕಲ್ಲ ...
ಜೀವ ಗಟ್ಟಿಯಿದ್ದರೆ ಭಾವ ಸೆಲೆಯೊಡೆದೀತು.......!!

ಮತ್ತೆ ಕಳೆ ಕೀಳಲು ಕೂಡಾ ವೀಡ್ ಕಟ್ಟರ್ ಉಪಯೋಗಿಸಲಾಗುತ್ತಿದೆ.ಗೌರವವಾಗಿ ಕಳೆಕೀಳಬಹುದು.ವೀಡ್ ಕಟ್ಟರ್


ಹಳ್ಳಿಗಳಲ್ಲಿ ವಿಧ್ಯುತ್ತಿನ ಅಭಾವ ಸಾಮಾನ್ಯ .
ಅದಕ್ಕೂ ಉಪಾಯವಿದೆ. ಮಲೆನಾಡಿನಲ್ಲಿ ಗುಡ್ಡದ ಇಳಿಜಾರಿನಲ್ಲಿ ಸಣ್ಣ ಪುಟ್ಟ ಝ
ರಿಗಳು ಹರಿಯುತ್ತಿರುತ್ತವೆ. ಅದನ್ನು ಕಿರು ಜಲವಿದ್ಯುತ್ ಯೋಜನೆಯ ಮೂಲಕ ವಿದ್ಯುತ್ ವುತ್ಪನ್ನ ಮಾಡಲು ಬಳಸಿಕೊಳ್ಳುತ್ತಾರೆ.

ಇದು ಮಿನಿ ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ಲಾಂಟ್


ಎಲ್ಲಾ ಸೌಲಭ್ಯಗಳನ್ನು ಹೊಂದಲು ಸರ್ಕಾರ ಸಹಾಯಧನವನ್ನು ಕೊಡುತ್ತದೆನ್ನುವುದು ಮೆಚ್ಚುವ ವಿಚಾರವಾಗಿದೆ.
ಮಲೆನಾಡಿನ ಸಂಪತ್ತನ್ನು ಯೋಗ್ಯರೀತಿಯಲ್ಲಿ ಬಳಸಿಕೊಂಡರೆ ಮಲೆನಾಡಿಗರಷ್ಟು ಅನುಕೂಲಸ್ತರು ಮತ್ಯಾರಿದ್ದಾರೆ....?

ಮಾಡುವ ಛಲ, ಬಳಸುವ ಕಲೆ ಗೊತ್ತಿದ್ದರೆ ಸಾಕೇ ಸಾಕು.
ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ.

Saturday, January 2, 2010

ಅಮ್ಮಾ.......ಅಮ್ಮಾ , ನಿನ್ನ ತೋಳತೆಕ್ಕೆಯಲ್ಲಿ,
ಮಡಿಲ ಮೆತ್ತೆಯಲ್ಲಿ,
ಕಣ್ಣಂಚಿನ ರಕ್ಷೆಯಲ್ಲಿ,
ಬರೆದಿದ್ದು ನನ್ನ ಬಾಳನಕ್ಷೆಯಲ್ಲವೇ...?ಮೊಗದ ತುಂಬಾ
ಮಮತೆ ಬಿಂಬ,
ಹೊತ್ತೆ ನೀನು, ಹೆತ್ತೆ ನೀನು,
ಗೊತ್ತೇ ಆಗಲಿಲ್ಲ.... ನಿನ್ನ ಕಷ್ಟವೇನು...?ಅಲ್ಲಿ ನೋವು ಕಾಣೆ, ದುಃಖ ಕಾಣೆ,
ಕಥೆಯಿಲ್ಲ, ವ್ಯಥೆಯಿಲ್ಲ,
ದೇವರಾಣೆಗೂ ಮಮತೆಯೊಂದರ
ಒರತೆಯಷ್ಟೇ..... ಅಲ್ವೇ ಅಮ್ಮಾ...?[ ಮೇಲಿನ ಚಿತ್ರ ನನ್ನದೇ ರಚನೆ. ಯಾರೂ ಇಲ್ಲದಿದ್ದಾಗ, ಹೊತ್ತು ಕಳೆಯಲು ಏನಾದರೂ ಬೇಕಲ್ಲ . ಅನಿಸಿದ್ದನ್ನು ಬರೆದು ಮುಗಿಸಿದಾಗ ಮನಸ್ಸಿಗೆ ಧ್ಯಾನ ನಂತರ ಸಿಗುವ ಆನಂದ ದೊರೆತಂತೆ ಭಾಸವಾಗುವುದು .
ಇದು ನಾನು ಬಾಲ್ಯದಿಂದ ಬೆಳೆಸಿಕೊಂಡು ಬಂದ ಹವ್ಯಾಸ.
ಗುಣಮಟ್ಟ ಹೇಗೆ ಇದ್ದರೂ.... ಹೆತ್ತವಳಿಗೆ ಹೆಗ್ಗಣ ಮುದ್ದು...
ಹಾಗೆ ...
ಅದನ್ನು ಹೆಚ್ಚಿಸಿಕೊಳ್ಳಲು ನಿಮ್ಮೆಲ್ಲರ ಪ್ರೋತ್ಸಾಹ ಅಗತ್ಯ..]