Monday, November 23, 2009

ದತ್ತಾತ್ರೇಯನ ಅವಾಂತರಗಳು

ನಾನು ಬೆಂಗಳೂರಿಗೆ ಬಂದು ವರ್ಷವಾಗಿತ್ತಷ್ಟೆ . ನಾನು ಮತ್ತು ಸೂರಿ ದಾಸರಹಳ್ಳಿಯ ಹನುಮೇಗೌಡರ ವಠಾರದಲ್ಲಿ ವಾಸ್ತವ್ಯ ಹೂಡಿದ್ದೆವು. ಅದೊಂದು ಸುವ್ಯವಸ್ತಿತ ರೂಂ . ಕಿಚನ್,ಡೈನಿಂಗ್ ಹಾಲ್,ಬೆಡ್ರೂಮ್ ಅಲ್ಲದೆ ಸ್ಟೋರ್ ರೂಂ ಕೂಡಾ ಅದೊಂದೇ ರೂಮಿನಲ್ಲಿ ಸುಸಜ್ಜಿತಗೊಂಡಿತ್ತಾದ್ದರಿಂದ ಬೇಕಾದಾಗ ಬಯಸಿದ್ದು ಕೈ ಕಾಲಿಗೆ ಎಟಕುವ ಸೌಲಭ್ಯವಿತ್ತು.

ಈ ನಡುವೆ ನಮ್ಮಿಬ್ಬರಿಗೆ ಇನ್ನೋರ್ವನ ಜೊತೆ ರೂಂ ಹಂಚಿಕೊಳ್ಳುವ ಸೌಭಾಗ್ಯ ಒದಗಿಬಂತು. ಮೂರನೆಯವನಾಗಿ ದಾಖಲಾದವನೇ ಶ್ರೀಮಾನ್ ದತ್ತಾತ್ರೇಯ. ಅವನ ವ್ಯಕ್ತಿತ್ವವನ್ನು ಬಣ್ಣಿಸಲಸದಳ.....!! ಅವನ ಜಾಣ್ಮೆಗೆ ಅವನೇ ಸಾಟಿ....!ಅಂಥಾ ಉದ್ಯೋಗದ ಅಭಾವದ ಕಾಲದಲ್ಲಿಯೂ ದಿನಕ್ಕೊಂದು ಉದ್ಯೋಗ ಬದಲಿಸಬಲ್ಲ ಅಸಾಧ್ಯ ಚತುರ...!

ಆತ ನಮ್ಮ ರೂಮಿಗೆ ಎಂಟರಾದದ್ದೇ ಆದದ್ದು ..... ರೂಮಿನ ದಿಕ್ಕೇ ಬದಲಾಗಿ ಹೋಯಿತು.ರಾತ್ರಿ ಮಲಗುವಾಗ ನಾವೆಲ್ಲ ಒಂದೇ ದಿಕ್ಕಿಗೆ ತಲೆ ಹಾಕಿ ಮಲಗಿದರೆ ದತ್ತು ದಿನಕ್ಕೊಂದು ದಿಕ್ಕಿಗೆ ತಲೆ ಹಾಕಿರುತ್ತಿದ್ದ.ಅಂವ ಮಾತ್ರಾ ಗಡಿಯಾರದ ಘಂಟೆ ಮುಳ್ಳೇ......! ಮಲಗುವಾಗಲೂ ಹೆಚ್ಚೇನು ತ್ರಾಸಿರಲಿಲ್ಲ. ಕಿವಿಗೆ ಹತ್ತಿ, ತಲೆಗೆ ಯಕ್ಷಗಾನದ ಭಾಗವತರನ್ನು ನೆನಪಿಗೆ ತರುವಂತಾ ರುಮಾಲು, ಹೊದೆಯಲು ಎಂತಾ ಬೇಸಿಗೆಯಲ್ಲೂ ಎರಡೇ ಎರಡು ಬ್ಲಾಂಕೆಟ್ ಸಾಕಾಗಿತ್ತು !

ಅವನ ಬೆಳಗಿನ ದಿನಚರಿ ಮಾತ್ರಾ .......ಪುಣ್ಯಾತ್ಮ ಟೀ ಮಾಡಲು ಪಾತ್ರೆ ಒಲೆಯ ಮೇಲಿಟ್ಟು ಸ್ನಾನಕ್ಕೆ ಹೋದರೆ ಬರುವಷ್ಟರಲ್ಲಿ ಬ್ಲಾಕ್ ಟೀ (?) ಯನ್ನು ಪಾತ್ರೆಯಿಂದ ಉದುರಿಸ ಬೇಕಾಗುತ್ತಿತ್ತು. ಸ್ನಾನ ಮಾಡುವಾಗೇನಾದರೂ ನಲ್ಲಿಯಲ್ಲಿ ನೀರು ಬರುವುದು ನಿಂತು ಹೋದರೆ ನಲ್ಲಿಯನ್ನು ಆರಿಸದೇ ನೆಟ್ಟಗೆ ಆಫೀಸಿಗೆ ಹೋಗುವುದು ಅವನ ಜಾಯಮಾನ.
ಅಂದು ಅವನಿಗೆ ಸೆಕೆಂಡ್ ಶಿಫ್ಟಿನ ಕೆಲಸ . ನಾನು, ಸೂರಿ ಮೊದಲೇ ಮನೆ ಬಿಟ್ಟಿದ್ದೆವು . ನೀರು ಬರುವುದು ನಿಂತಿದ್ದ ನಲ್ಲಿಯನ್ನು ಆರಿಸದೇ ಇಂವ ಆಫೀಸಿಗೆ ನಡೆದ. ಸಾಯಂಕಾಲ ನಾವು ಬಂದು ನೋಡುವ ಹೊತ್ತಿಗೆ ರೂಂ ಮಿನಿ ಸ್ವಿಮ್ಮಿಂಗ್ ಫೂಲಾಗಿತ್ತು...... ಪಾತ್ರೆಗಳು, ಹಾಸಿಗೆ ವಸ್ತ್ರಗಳಿಗೆ ನೀರಿನಲ್ಲಿ ಈಜುವ ಸಂತೋಷ .... ನಮಗೆ ತಡೆಯಲಾರದ ಆಕ್ರೋಶ ..ಮನೆಗೆ ಬಂದವನಲ್ಲಿ ವಿಚಾರಿಸಿದರೆ ಅಂವ ಹ್ಹ .... ಎಂದು ನಕ್ಕ ...ಜಡ ಶಂಕ್ರ....!!! ಅಂದು ರಾತ್ರಿ ಒದ್ದೆ ಹಾಸಿಗೆ ಮೇಲೆ ನಿದ್ದೆ ಬಾರದೆ ಹೊರಳಾಡಿದ್ದು ಮಾತ್ರಾ ಇನ್ನೂ ಹಸಿಹಸಿ ....ನೆನಪು

ನಾವು ಅವನನ್ನು ಸುಧಾರಿಸಿಕೊಳ್ಳಬೇಕಿತ್ತೇ ಹೊರತೂ ಅವನಿಂದ ಸುಧಾರಣೆ ನಿರೀಕ್ಷಿಸುವಂತೆಯೇ ಇರಲಿಲ್ಲ .( ಆಗ ಸುಧಾರಿಸಿಕೊಂಡು ಅಭ್ಯಾಸ ಮಾಡಿಕೊಂಡಿದ್ದು ಮದುವೆಯಾದ ಮೇಲೆ ಉಪಯೋಗಕ್ಕೆ ಬಂತೆಂದು ಹೇಳಿ ಮಡದಿಯ ಕೆಂಗಣ್ಣಿಗೆ ಗುರಿಯಾದದ್ದು ......ಸುಳ್ಳಲ್ಲ.)

ಅವನು ಮಾಡದ ಕೆಲಸವಿಲ್ಲ . ಅದ್ಯಾವುದೋ ಸೊಳ್ಳೆ ನಿವಾರಕಗಳ ವಿತರಕ ಅಂಗಡಿಗೆ ಸೇಲ್ಸ್ ಮ್ಯಾನ್ ಆಗಿಸೇರಿ ನಾಲ್ಕು ದಿನಕ್ಕೆ ಅದನ್ನು ಬಿಟ್ಟ. ನಂತರ ಒಂದು ಪ್ಲಾಸ್ಟಿಕ್ ಕವರ್ ಗಳ ವಿತರಕ ಅಂಗಡಿಗೆ ಸೇರಿದ.ಇಲ್ಲೂ ಸೇಲ್ಸ್ ಮ್ಯಾನ್ ಕೆಲಸವೇ. ಅಂಗಡಿಗಳಿಗೆ ಕವರ್ ಮಾರಿ ಬರುವ ಕೆಲಸ.ಅಂಗಡಿಯವನೊಬ್ಬ ಸರಿಯಾಗಿ ಹಣ ಪಾವತಿ ಮಾಡಲಿಲ್ಲ.ದತ್ತು ಏನ್ ಸಾಮಾನ್ಯದವನೇ .... ? ನಿನ್ನ ಅಂಗಡಿ ವಸ್ತುಗಳನ್ನೆಲ್ಲ ಸೀಜ್ ಮಾಡುವೆನೆಂದು ಹೆದರಿಸಿದ . ಅಂಗಡಿಯವನಿಗೆ ಇದೇನು ಹೊಸದೇ...? ಆಯ್ತಪ್ಪಾ ತಗಂಡು ಹೋಗು ಎಂದು ತಾನೆ ಮೂಟೆಯಲ್ಲಿ ತುಂಬಿಕೊಟ್ಟ. ದತ್ತು ಗೆದ್ದ ಸಂಭ್ರಮದಲ್ಲಿ ರೂಮಿಗೆ ಬಂದು ನಮಗೆ ತೋರಿಸಿದ. ಅವು , ಒಂದು ಬೇಲೂರು ಶಿಲಾಬಾಲಿಕೆಯಂತಾ ಪೌಡರ್ ಡಬ್ಬ ಮತ್ತು ಹದಿನೈದು ಕೆಜಿ ಅಕ್ಕಿ . ಅಕ್ಕಿಯಾದರೂ ಎಂತಾ ಕ್ವಾಲಿಟಿ....! ಹುಳುಗಳ ಮಧ್ಯೆ ಅಕ್ಕಿಯನ್ನು ಹುಡುಕಬೇಕಿತ್ತು.

ಆ ಕೆಲಸವೂ ಹೆಚ್ಚು ದಿನ ಬಾಳಿಕೆ ಬರಲಿಲ್ಲ. ಈಗ ಸೇರಿದ್ದು ಒಂದು ಅಕ್ಕಿ ಮಿಲ್ . ನಂತರದ್ದೆ ಸ್ವಲ್ಪ ಇಂಟರೆಸ್ಟಿಂಗ್ ಸ್ಟೋರಿ. ಸೇರಿದ ಕೆಲವೇ ದಿನಗಳಲ್ಲಿ ಇವನನ್ನು ನೈಟ್ ಶಿಫ್ಟ್ ಗೆ ಹಾಕಿದರು. ರಾತ್ರಿ ಹತ್ತರಿಂದ ಬೆಳಿಗ್ಗೆ ಆರರ ವರೆಗೆ ಕೆಲಸ. ನಾಲ್ಕು ದಿನ ರಾತ್ರಿ ನಿದ್ದೆ ಗೆಟ್ಟು ಕೆಲಸ ಮಾಡಿದ . ಐದನೇ ದಿನದಿಂದ ತನ್ನ ಚಾಳಿ ಶುರುಮಾಡಿದ. ಕಳ್ಳತನದಲ್ಲಿ ಮಲಗಲು ವ್ಯವಸ್ತೆಯನ್ನು ತುಂಬಾ ವ್ಯವಸ್ತಿತವಾಗಿಯೇ ಮಾಡಿಕೊಂಡ.ಅಕ್ಕಿ ತುಂಬಲು ಬಳಸುವ ಎರಡು ಗೋಣಿಚೀಲ ತೆಗೆದು ಕೊಂಡು , ಒಂದರಲ್ಲಿ ಕಾಲನ್ನೂ, ಇನ್ನೊಂದರಲ್ಲಿ ತಲೆಯನ್ನೂ ತೂರಿಸಿಕೊಂಡು ಕ್ಯಾಪ್ಸೂಲ್ ತರದಲ್ಲಿ ಅಕ್ಕಿ ಮೂಟೆಗಳ ಸಂದಿಯಲ್ಲಿ ನಿದ್ದೆ ಹೊಡೆಯಲಾರಂಬಿಸಿದ. ಈ ಉಪಾಯ ಸುಮಾರು ದಿನ ನಡೆಯಿತು.

ಒಂದು ದಿನ ಇವನ ಗ್ರಾಚಾರಕ್ಕೆ... ಇನ್ಸ್ಪೆಕ್ಷನ್ನಿಗೆಂದು ಫ್ಯಾಕ್ಟರಿಯ ಜನರಲ್ ಮ್ಯಾನೇಜರ್ರೆ ಹಾಜರಿ ಪುಸ್ತಕ ಹಿಡಿದು ಬಂದರು. ಒಬ್ಬನ ಸುಳಿವಿಲ್ಲ . ಹುಡುಕಲು ಆಜ್ನೆಯಾಯಿತು.ಅಕ್ಕಿ ಮೂಟೆಗಳ ಸಂದಿಯಲ್ಲಿ ಗೊರಕೆ ಹೊಡೆಯುತ್ತಿದ್ದ ಕ್ಯಾಪ್ಸೂಲ್ ದತ್ತು ಸಿಕ್ಕಿ ಬಿದ್ದ . G.M. ತರಾಟೆಗೆ ತೆಗೆದು ಕೊಂಡರು. ಹುಷಾರಿರಲಿಲ್ಲ.....ಅದೂ ಇದೂ ಹೇಳಿ ಕಣ್ಣೀರುಗರೆದ. ವಾರ್ನ್ ಮಾಡಿ ಬಿಟ್ಟರು. ಈ ಸಲ ದತ್ತು ಬದುಕಿಕೊಂಡ.

ಆಮೇಲೆ ಕೆಲದಿನಗಳು ಸರಿಯಾಗೇ ಕೆಲಸ ಮಾಡಿದ . ನಾಯಿ ಬಾಲ ಯಾವತ್ತೂ ಡೊಂಕೆ ... ಅದಕ್ಕೆ ಅಪಚಾರ ಆಗಬಾರದಲ್ಲ.. ಈ ಸಲ ನಿದ್ದೆ ಮಾಡಲು ಹೊಸ ತಂತ್ರವೊಂದನ್ನು ಅಳವಡಿಸಿಕೊಂಡ.ಅಕ್ಕಿ ಮೂಟೆಗಳ ಸಾಗಣಿಕೆಗೆಂದು ಲಾರಿಗಳು ನಿಂತಿರುತ್ತಿದ್ದವಲ್ಲಾ... ಲಾರಿಯಲ್ಲಿ ಮಲಗಲು ಶುರು ಮಾಡಿದ .ದಿಕ್ಕು ದೆಸೆ ಇಲ್ಲದ ದತ್ತು ಸ್ಟೇರಿಂಗ್ ಕಡೆ ಕಾಲಿಡಬೇಕೋ ,ತಲೆಯಿಡಬೇಕೋ ಒಂದೂ ಯೋಚಿಸದೆ ಮಲಗಿ ಗೊರೆಯುವುದೊಂದೇ ಮಾಡಿದ. ಒಂದಿನ ನಿದ್ರೆಯ ಭರದಲ್ಲಿ ಇವನ ಕಾಲು ಲಾರಿಯ ಹಾರನ್ ಮೇಲೆ ಬಿತ್ತು. ಪೊಂ .......... ........ ......... ಹಾರನ್ ಹೊಡೆದು ಕೊಳ್ಳತೊಡಗಿತು. ದತ್ತುಗೆ ಎಚ್ಚರವಾಗಿ ಗಡಿಬಿಡಿಯಾಗಿ ಶಬ್ಧವನ್ನು ನಿಲ್ಲಿಸಲು ನೋಡಿದ. ಊಹೂ .... ಹಾರನ್ ಸ್ಟ್ರಕ್ ಆಗಿಬಿಟ್ಟಿತ್ತು .

ಸೆಕ್ಯುರಿಟಿಯವರೆಲ್ಲ ಅಲರ್ಟ್ ಆದರು.ಶಬ್ದ ಬರುತ್ತಿರುವ ಲಾರಿಯ ಸಮೀಪ ಬರತೊಡಗಿದರು.ದತ್ತುಗೆ ಭಯವಾಗತೊಡಗಿ ಗೊಂದಲದಲ್ಲಿ ಏನು ಮಾಡಬೇಕೆಂದು ತೋಚದೆ ಬೆಡ್ ಶೀಟ್ ಮುಚ್ಚಿಕೊಂಡು ಓಡತೊಡಗಿದ. ಹಾಗೆಯೇ ಸಿಕ್ಕುಬಿದ್ದ.ಯಾರೆಂದು ನೋಡುವುದಕ್ಕಿಂತ ಮೊದಲು ಗುದ್ದುಗಳು ಬಿದ್ದವು. ಅಯ್ಯಯ್ಯೋ.... ಬಿಡಿ ನಾನು ದತ್ತಾತ್ರೇಯ..... ಎಂದು ಗೋಳಿಟ್ಟ. ಈ ಸಲ ಯಾವ ತಂತ್ರವೂ ನಡೆಯಲಿಲ್ಲ. ಆನ್ ದಿ ಸ್ಪಾಟ್ .... ಸಸ್ಪೆಂಡ್ ಆಯಿತು.

ಮುಖ ಒಣಗಿಸಿಕೊಂಡು ರೂಮಿಗೆ ಬಂದು ಬಿದ್ದುಕೊಂಡ. ಎರಡು ದಿನ ರೂಮಿನಲ್ಲಿಯೇ ಇದ್ದುದನ್ನು ಕಂಡು ನಾವು ಕೇಳಿದೆವು . ಈ ಕಥೆಯೆಲ್ಲಾ ಹೇಳಿದ.ಸಿಕ್ಕಿಹಾಕಿಕೊಂಡೆ ....ಎಂದು ಪಶ್ಚಾತ್ತಾಪ ಪಟ್ಟ ಹೊರತೂ ಬುದ್ದಿ ಕಲಿತ ಮಾತಾಡಲಿಲ್ಲ.

ನಂತರ ಇನ್ನೊಂದು ಕಡೆ ಕೆಲಸಕ್ಕೆ ಸೇರಿ , ಅಲ್ಲಿ ಫ್ಯಾಕ್ಟರಿಯ ಪಾಸ್ ಬುಕ್ ಕದ್ದು , ಪೋಲೀಸ್ ಕಂಪ್ಲೇಂಟ್ ಆಗಿ, ಪೊಲೀಸರು ರೂಮಿನ ತನಕ ಬಂದದ್ದೂ ಆಯ್ತು. ನಮ್ಮ ರೂಂ ಓನರಿಗೆ ದತ್ತು ನಮ್ಮ ರೂಮಿನಲ್ಲಿರುವ ಬಗ್ಗೆ ಗೊತ್ತಿರಲಿಲ್ಲವಾದ್ದರಿಂದ ದತ್ತಾತ್ರೇಯ ಎನ್ನುವವರು ಯಾರೂ ಇಲ್ಲಿಲ್ಲ ಎಂದು ಕಳಿಸಿ ಬಿಟ್ಟ.ಸಧ್ಯ ಬಚಾವಾದ..!

ನಮಗೆ ಇವನ ಸಹವಾಸ ಸಾಕಾಗಿ ಹೋಗಿತ್ತು.ಅವನ ಕೈಚೀಲ,ಹಾಸಿಗೆ ಹೊರಗಿಟ್ಟು,'' ನಾವು ರೂಂ ಬದಲಾಯಿಸುತ್ತಿದ್ದೇವೆ ನಿನಗಿಲ್ಲಿ ಅವಕಾಶವಿಲ್ಲ . ''ಎಂದು ಕಳಿಸುವಷ್ಟರಲ್ಲಿ ಹೈರಾಣವಾಗಿದ್ದೆವು. ಜೀವನದಲ್ಲಿ ಗೊತ್ತು ಗುರಿಯಿಲ್ಲದೆ, ಸ್ಥಿರತೆಯಿಲ್ಲದೆ, ಹೋದಲ್ಲೆಲ್ಲಾ ಒಂದೊಂದು ಭಾನಗಡಿ ಮಾಡಿಕೊಳ್ಳುವ ದತ್ತಾತ್ರೇಯ ಅಲ್ಲಿ ಇಲ್ಲಿ ಕೆಲಸ ಮಾಡಿ ಯಾವುದೂ ಬರಕಾಸ್ತಾಗದೆ, ಊರು ಸೇರಿಕೊಂಡಿದ್ದಾನೆ.ಹುಟ್ಟು ಗುಣ ಸುಟ್ಟರೂ ಬಿಡ... ಎಂಬಂತೆ ಯಡವಟ್ಟು ಮಾತಾಡುತ್ತಾ , ಹುಚ್ಚನಂತೆ ಅಲ್ಲಿ ಇಲ್ಲಿ ಅಲೆಯುತ್ತಿದ್ದಾನೆ.

ಆದರೆ ಜೀವನದಲ್ಲಿ ಹೇಗಿರಬಾರದು ಎಂಬುದನ್ನು ಕಲಿಸಿದ ಆತ ನಿಜವಾಗೂ ನನ್ನ ಗುರು......!

(ಈ ಮೇಲೆ ಬರೆದಿದ್ದೆಲ್ಲ ನನ್ನವರು ನನಗೆ ಹೇಳಿದ ಅನುಭವ ಕಥನ.)

Tuesday, November 17, 2009

ಹೈಪೋಕಾಂಡ್ರಿಯಾ [Hypochondria]

ಸಾಮಾನ್ಯವಾಗಿ ಮನುಷ್ಯನ ದೈಹಿಕ ಸಮತೋಲನ ತಪ್ಪಿದಾಗ ಕಾಣಿಸಿಕೊಳ್ಳುವ ಮುಖ್ಯ ಲಕ್ಷಣಗಳೆಂದರೆ ತಲೆನೋವು ,ಹೊಟ್ಟೆನೋವು,ನಿಶ್ಯಕ್ತಿ ಹಾಗು ಎದೆಬಡಿತ ಹೆಚ್ಚಾಗುವುದು. ಇವು ಆರೋಗ್ಯದ ಕಡೆ ಕಾಳಜಿ ವಹಿಸುವಂತೆ ಪ್ರಕಟವಾಗುವ ಮುನ್ನೆಚ್ಚರಿಕೆಗಳು ಕೂಡಾ.

ಕೆಲವೊಮ್ಮೆ ಈ 'ಕಾಳಜಿ 'ಅನ್ನುವುದು ಅತಿಯಾಗಿ ಖಾಯಿಲೆಯಾಗುತ್ತದೆ. ಯಾರಿಗೋ ಬ್ರೈನ್ ಹೆಮರೆಜ್ ಆಯಿತೆಂದು ಕೊಳ್ಳೋಣ.ಅದರ ಲಕ್ಷಣಗಳು ಮೊದಲು ಅತಿಯಾದ ತಲೆನೋವು , ನಂತರ ಪ್ರಜ್ಞೆ ತಪ್ಪುವುದು ಹೀಗೆ ..... ಸಹಜವಾದ ಸುಸ್ತಿನಿಂದಲೋ ,ನಿದ್ರೆಗೆಟ್ಟಿದ್ದರಿಂದಲೋ ಅಥವಾ ಇನ್ನಾವುದೋ ಕಾರಣದಿಂದ ನಮ್ಮಲ್ಲೂ ಅಲ್ಪ ಸ್ವಲ್ಪ ಈ ರೀತಿಯ ತಲೆನೋವು ಕಾಣಿಸಿಕೊಂಡಾಕ್ಷಣ 'ಅಯ್ಯೋ , ನನಗೆ ಬ್ರೈನ್ ಹೆಮರೆಜ್ ಆಗುತ್ತಿದೆ' ಎಂದು ಹೌಹಾರುವುದು ,ಕಳವಳಗೊಳ್ಳುವುದು ಮಾಡಿ ಮನೆಮಂದಿಯನ್ನೆಲ್ಲಾ ಗಾಬರಿಗೊಳಿಸುವುದು. ದಿನವಿಡೀ ಅದನ್ನೇ ಚಿಂತಿಸುವುದು.ಅದರಿಂದ ತಲೆನೋವು ಇನ್ನಷ್ಟು ಹೆಚ್ಚಿಸಿಕೊಳ್ಳುವುದು.

'' ಯಾವುಯಾವುದೋ ಭಯಂಕರ ಕಾಯಿಲೆಗಳ ಅಲ್ಪ ಸ್ವಲ್ಪ ಚಿನ್ಹೆಗಳು ನಮ್ಮ ದೇಹದಲ್ಲಿ ಕಾಣಿಸಿಕೊಂಡಾಗ ಆ ಕಾಯಿಲೆಗೆ ನಾವು ಒಳಗಾಗಿಯೇ ಬಿಟ್ಟಿದ್ದೇವೆಂದು ಅತಿಯಾಗಿ ತಳಮಳಗೊಳ್ಳುವ ಹಾಗು ಅದೇ ಚಿಂತೆಯಲ್ಲಿ ದಿನನಿತ್ಯದ ಜೀವನವನ್ನು ಹಾಳುಮಾಡಿಕೊಳ್ಳುವ ಈ ಸ್ವಭಾವ ........ಒಂದು ಮನೋದೈಹಿಕ ಕಾಯಿಲೆ. ಇದಕ್ಕೆ ಹೈಪೋಕಾಂಡ್ರಿಯಾ [Hypochondria ] ಅಥವಾ ಹೈಪೋಕಾಂಡ್ರಿಯಾಸಿಸ್ ಎನ್ನುತ್ತಾರೆ . ''

ಕೆಲವರು ತಮಗೇನೋ ದೊಡ್ಡ ಕಾಯಿಲೆ ಬಡಿದಿದೆಯೆಂದು ಪದೇ ಪದೇ ವೈದ್ಯರ ಹತ್ತಿರ ಹೋಗುತ್ತಿರುತ್ತಾರೆ.ಯಾವುದೇ ಗುರುತರ ಕಾಯಿಲೆ ಇಲ್ಲವೆಂದರೂ ವೈದ್ಯರ ಮಾತಿನಲ್ಲಿ ವಿಶ್ವಾಸವಿಲ್ಲ.ವೈದ್ಯರನ್ನು ಬದಲಾಯಿಸುತ್ತಾರೆಯೇ ಹೊರತು ತಮ್ಮ ನಂಬಿಕೆಯನ್ನು ಬದಲಾಯಿಸಲಾರರು.

ಇನ್ನು ಕೆಲವರು ಯಾವುದಾದರೂ ರೋಗದ ಲಕ್ಷಣಗಳನ್ನು ಗಮನಿಸಿದರೂ ಸಹಾ ವೈದ್ಯರ ಹತ್ತಿರ ಹೋಗಲಾರರು.ವೈದ್ಯರೇನಾದರೂ ದೊಡ್ಡ ರೋಗವಿದೆಯೆಂದು ಹೇಳಿದರೆ.....ಎನ್ನುವ ಭಯದಿಂದ ತಮ್ಮಲ್ಲಿಯೇ ಗೌಪ್ಯವಾಗಿರಿಸಿಕೊಂಡು, ರೋಗವನ್ನು ಉಲ್ಬಣಗೊಳಿಸಿಕೊಂಡು ತೊಂದರೆ ಪಡುತ್ತಿರುತ್ತಾರೆ ಮತ್ತು ತೊಂದರೆ ಕೊಡುತ್ತಿರುತ್ತಾರೆ.
ಈ ಎಲ್ಲಾ ಸ್ವಭಾವಗಳೂ ಹೈಪೋಕಾಂಡ್ರಿಯಾದ ಲಕ್ಷಣಗಳು.

ಈ ರೀತಿ ಕಾಯಿಲೆಗಳ ಬಗ್ಗೆ ಅತಿಯಾಗಿ ಚಿಂತಿಸುತ್ತಾ ,ಅನುಕೂಲವಿದ್ದವರು (!)ದಿನಗಟ್ಟಲೆ ಅಂತರ್ಜಾಲದಲ್ಲಿ ವೈದ್ಯಕೀಯ ವಿವರಗಳಿಗಾಗಿ ಶೋಧಿಸುತ್ತಾ 'ಸೈಬರ್ ಕಾಂಡ್ರಿಯಾ ' [Cyberchondria] ಎನ್ನುವ ಹೊಸ ರೋಗವೊಂದನ್ನು ತಂದುಕೊಳ್ಳುತ್ತಾರೆ.

ಹೈಪೋಕಾಂಡ್ರಿಯಾ ಸಾಮಾನ್ಯವಾಗಿ ಖಿನ್ನತೆ ,ಗೀಳುರೋಗ , ಭಯಗಳು [phobia] ಇವುಗಳೊಂದಿಗೆ ಸಾಮರಸ್ಯ ಹೊಂದಿದೆ. ಅನುವಂಶಿಕತೆಯೇನೂ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ.ಅನಾವಶ್ಯಕ ಉದ್ವೇಗ , ಒತ್ತಡ ಹಾಗೂ ಕಾಡುವ ಕಾಯಿಲೆಗಳಾದ ಸಕ್ಕರೆ ಕಾಯಿಲೆ ,ಸಂಧಿವಾತ ಕೆಲವೊಮ್ಮೆ ಕಾರಣಗಳಾಗುವ ಸಾಧ್ಯತೆ ಇರುತ್ತದೆ.ಖಿನ್ನತೆಗೆ ಕಾರಣವಾಗುವ ,ಮೆದುಳಿನಲ್ಲಿ ಸ್ರವಿಸುವ ರಾಸಾಯನಿಕಗಳಾದ serotonin ಮತ್ತು norepinephrine ಗಳ ಏರುಪೇರು ಕೂಡಾ ಕಾರಣವಾಗಬಲ್ಲದು. ಮೀರಿದ ಹಂತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಗಳೂ ಇಲ್ಲದಿಲ್ಲ.....!

ಇದನ್ನು ಸೈಕೋ ಥೆರಪಿಯಿಂದ ತಹಬದಿಗೆ ತರಬಹುದು.ಆಪ್ತ ಸಮಾಲೋಚನೆಯ ಮೂಲಕ ವಸ್ತುಸ್ತಿತಿಯ ಅರಿವು ಮೂಡಿಸುವುದರಿಂದ ರೋಗಿಯಲ್ಲಿ ಆತ್ಮವಿಶ್ವಾಸ ತುಂಬಬಹುದು.

Tuesday, November 10, 2009

ಮಕ್ಕಳೆಂಬ ಕೌತುಕಗಳು

ನನಗಿಬ್ಬರು ಮಕ್ಕಳು . ಮಗಳು ಐಶ್ವರ್ಯ ದೊಡ್ಡವಳು. ಮಗ ಶಿಶಿರ ಐದು ವರುಷದವನು .
ನನ್ನ ಮಗ ತುಂಟ . ಅವನಿಗೆ ಏನನ್ನೇ ಹೊಸತು ತಂದು ಕೊಟ್ಟರೂ ಅದನ್ನು ತಕ್ಷಣ ಉಪಯೋಗಿಸುವುದಿಲ್ಲ.ಅತ್ತ ತಿರುಗಿಸಿ ಇತ್ತ ತಿರುಗಿಸಿ ನೋಡುತ್ತಾ ತನ್ನಲ್ಲಿಯೇ ಹೆಮ್ಮೆಪಟ್ಟುಕೊಳ್ಳುತ್ತಿರುತ್ತಾನೆ.ಬಂದವರಿಗೆಲ್ಲಾ ' ನೋಡು ಹೊಸಾದು 'ಎಂದು ತೋರಿಸುತ್ತಾ ಇರುತ್ತಾನೆ.ಹೊಸತನ್ನು ಹಾಗೆಯೇ ಉಳಿಸಿಕೊಳ್ಳುವ ಯತ್ನ ಅವನದು.ಹೊಸ ಪೆನ್ಸಿಲ್ ,ಪುಸ್ತಕ ,ಶೂ ಹೀಗೆ ಏನೇ ತೆಗೆಸಿ ಕೊಟ್ಟರೂ ಅದನ್ನು ತಕ್ಷಣ ಬಳಸಲು ಒಪ್ಪುವುದಿಲ್ಲ.ಪೆನ್ಸಿಲ್ ಕೆತ್ತಿದರೆ ಚಿಕ್ಕದಾಗಿ ಖಾಲಿಯಾಗುವುದೆಂದು ಕೆತ್ತುವಂತೆಯೇ ಇಲ್ಲ.ನೋಟ್ ಪುಸ್ತಕ ಬರೆದರೆ ಹಳತಾಗುವುದೆಂದು ಬರೆಯದೇ ಹಾಗೆಯೇ ಇಟ್ಟುಕೊಳ್ಳುತ್ತಾನೆ.ಚಪ್ಪಲಿ ಹೊರಗಡೆಗೆ ಹಾಕಿಕೊಂಡು ಹೋದರೆ ಗಲೀಜಾಗುತ್ತದೆಂದು ಹಾಲ್ ನ ಮೂಲೆಯಲ್ಲಿ ಇಟ್ಟಿರುತ್ತಾನೆ ಜೋಪಾನವಾಗಿ.ಎಲ್ಲರೂ'' ಜಿಪುಣ ಕಣೋ ನೀನು ''ಎನ್ನುತ್ತಿರುತ್ತಾರೆ.ನನಗೆ ಮಾತ್ರಾ ಹಾಗನ್ನಿಸುವುದಿಲ್ಲ . ಒಮ್ಮೆ ಉಪಯೋಗಿಸಲು ಶುರು ಮಾಡಿದ ಅಂದರೆ ಸ್ವಲ್ಪ ಹೊತ್ತಿನಲ್ಲಿಯೇ ಆಟಿಕೆಗಳ ಒಂದೊಂದು ಭಾಗವೂ ಒಂದೊಂದು ದಿಕ್ಕಿಗೆ ದೇಶಾಂತರ ಹೊರಟು ಬಿಡುತ್ತವೆ . ಆರಿಸಲು ಪೊರಕೆಯೇ ಬೇಕು.

ನಾನು ,ನನ್ನ ಮಗಳು ಐಶು ಶಿಶಿರನೊಂದಿಗೆ ಕಣ್ಣ ಮುಚ್ಚಾಲೆ ಆಡುತ್ತಿರುತ್ತೇವೆ.ಒಮ್ಮೆ ಐಶು ಕಳ್ಳಿಯಾಗಿದ್ದಳು . ನಾನು, ಶಿಶಿರ ಬಾತ್ ರೂಮಿನಲ್ಲಿ ಅಡಗಿ ಕೊಂಡೆವು .ಐಶು ಹುಡುಕುತ್ತಾ ಬಂದಳು.ಶಿಶಿರ ' ನಾವು ಬಾತ್ ರೂಮಿನಲ್ಲಿ ಅಡಗಿ ಕೊಂಡಿಲ್ಲ 'ಎಂದು ದೊಡ್ಡದಾಗಿ ಹೇಳಿದ . ಐಶು ನಮ್ಮಿಬ್ಬರನ್ನು ಔಟ್ ಮಾಡಿದಳು.

ಶಿಶಿರನ ಕಥೆ ಒಂದಲ್ಲ , ಎರಡಲ್ಲ . ಒಂದಿನ ಪಾತ್ರೆ ತೊಳೆಯುವ ವಿಂ ಬಾರ್ ತೆಗೆದುಕೊಂಡು ಬಕೆಟ್ಟಿನಲ್ಲಿ ನೀರಿನೊಂದಿಗೆ ಕದಡುತ್ತಿದ್ದ.ಬರುತ್ತಿರುವ ನೊರೆಯೊಂದಿಗೆ ಐಸ್ಕ್ರೀಂ ಎಂದು ಆಟವಾಡುತ್ತಿದ್ದ . ನಾನು ಕೂಗಿದೆ, '' ಶಿಶಿರಾ ವಿಂ ಬಾರ್ ಮುಟ್ಬೇಡ .ಆಡಿದ್ದು ಸಾಕು ಬಾ ಇಲ್ಲಿ.. ಶಿಶಿರ ಕೈ ಸರಿಯಾಗಿ ತೊಳೆಯದೇ ಹಾಗೇ ಬಂದ.

ನಾನು ಬುದ್ಧಿ ಮಾತು ಹೇಳಲಾರಂಬಿಸಿದೆ....''ಪುಟ್ಟಾ ವಿಂ ಬಾರ್ ಜೊತೆಗೆಲ್ಲಾ ಆಟ ಆಡಬಾರದು . ಅದನ್ನ ಮುಟ್ಟಿದರೆ ನಿನ್ನ ಮೆತ್ತಗಿನ ಪುಟಾಣಿ ಕೈ ಒರಟಾಗಿ ಹೋಗತ್ತೆ. ಸರಿಯಾಗಿ ಕೈ ತೊಳದಿಲ್ಲ ನೋಡು.ಹೊಟ್ಟೆಗೆ ಹೋದ್ರೆ ವಿಷ ಗೊತ್ತಾ.. ಆಮೇಲೆ ಹೊಟ್ಟೆನೋವು, ವಾಂತಿ........ಮುಂದುವರೆಸುತ್ತಲಿದ್ದೆ.

ಶಿಶಿರ ಒಂದೇ ಮಾತಲ್ಲಿ ನನ್ನ ಬಾಯಿ ಮುಚ್ಚಿಸಿದ.'' ಅಮ್ಮಾ , ನಮ್ಮನೆಯಲ್ಲಿ ಪಾತ್ರೇನ ವಿಷ ಹಾಕಿ ತೊಳಿತಾರಾ........?


ಇನ್ನೊಮ್ಮೆ ನಾವೆಲ್ಲಾ ದಕ್ಷಿಣ ಭಾರತದ ಕಡೆ ಪ್ರವಾಸ ಹೋಗಿದ್ದೆವು . ತಂಜಾವೋರು ನೋಡಿಕೊಂಡು ಹೋಟಲಿನಲ್ಲಿ ಊಟ ಮಾಡಿಕೊಂಡು ಹೊರಟೆವು. ದಾರಿಯಲ್ಲಿ ನಮ್ಮ ವಾಹನ ನಿಲ್ಲಿಸಿ ಎಲ್ಲರಿಗೂ ಐಸ್ಕ್ರೀಂ ಕೊಡಿಸಲಾಯಿತು.ಎಲ್ಲರೂ ತಿನ್ನತೊಡಗಿದರು . ಶಿಶಿರ ಮಾತ್ರಾ ಮನೆಗೆ ಹೋದಮೇಲೆ ತಿನ್ನುತ್ತೇನೆಂದ..........!ಎಲ್ಲರೂ ನಕ್ಕರು.

ಮಕ್ಕಳು ಯಾವ ರೀತಿ ಆಲೋಚಿಸುವರೆಂಬುದು ಗೊತ್ತೇ ಆಗುವುದಿಲ್ಲ.ನನಗಂತೂ ದಿನ ದಿನವೂ ವಿಸ್ಮಯವಾಗಿಯೇ ಕಾಣಿಸುವುದು.ಅವರ ಛೇಸ್ಟೆಗಳು ಹೊಸತನ್ನ ನಮಗೂ ಕಲಿಸುತ್ತವೆ.

ಅದು ಸುಮಾರು ಅಮೆರಿಕಾದ w.t.c.ಕಟ್ಟಡ ವಿಧ್ವಂಸಗೊಂಡ ವರ್ಷ .ಎಲ್ಲರ ಬಾಯಲ್ಲೂ ಬಿನ್ ಲಾಡೆನ್ ,ಜಾರ್ಜ್ ಬುಷ್ ಎನ್ನುವ ಹೆಸರುಗಳೇ ನಲಿದಾಡುತ್ತಿದ್ದವು.
ಐಶು , ನನ್ನ ಮಗಳು ಚಿಕ್ಕವಳಿದ್ದಾಗ ತುಂಬಾ ಚೂಟಿ.ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಕೇಳುವ ಪ್ರಶ್ನೆಗಳಿಗೆ ಅನೇಕಕ್ಕೆ ನನ್ನಲ್ಲಿ ಉತ್ತರವಿರುತ್ತಿರಲಿಲ್ಲ. ಒಂದಿನ ರಾತ್ರಿ ಮಲಗಿದ್ದೆವು .ಸಮಯ ಹನ್ನೊಂದು ದಾಟಿತ್ತು.ನನಗೆ ನಿದ್ದೆಯ ಜೋಂಪು ಹತ್ತ ತೊಡಗಿತ್ತು .ಐಶು 'ಅಮ್ಮಾ.......'ಎಂದು ಕರೆದಳು. ಕಣ್ಣು ಮುಚ್ಚಿಕೊಂಡೇ ಊ.....ಗುಟ್ಟಿದೆ . ''ನಿದ್ದೆ ಬರ್ತಾ ಇಲ್ಲಾ........''ರಾಗವೆಳೆದಳು.ನಾನು ''ರಾಮರಾಮ ಹೇಳ್ತಾ ಮಲಗು..ನಿದ್ದೆ ಬರತ್ತೆ .''ಎಂದು ತಿರುಗಿ ಮಲಗಿದೆ.ನನ್ನವರಿಗಿನ್ನೂ ನಿದ್ರೆ ಬಂದಿರಲಿಲ್ಲಾಂತ ಕಾಣಿಸುತ್ತೆ, '' ಪುಟ್ಟಾ......ಪಕ್ಕದ್ಮನೆ ವೆಂಕಟೇಶ ,ಪಕ್ಕದ್ಮನೆ ವೆಂಕಟೇಶ.... ಅಂದ್ರೂ ನಿದ್ರೆ ಬರತ್ತೆ ಪುಟ್ಟಾ....''ಎಂದರು ನನ್ನನ್ನು ಛೇಡಿಸಲು. ಐಶು ತಕ್ಷಣ ''ಬಿನ್ ಲಾಡೆನ್, ಬಿನ್ ಲಾಡೆನ್.........ಎನ್ನಲು ಶುರು ಮಾಡಬೇಕೆ.....!!ನಮ್ಮಿಬ್ಬರಿಗೂ ನಗುವೋ ನಗು . ನಿದ್ದೆ ಹಾರಿಯೇ ಹೋಯ್ತು.

ಮಕ್ಕಳ ಪ್ರತೀ ನಡವಳಿಕೆಯೂ ಹೊಸತಲ್ಲವೇ...? ಕೌತುಕವಲ್ಲವೇ .....? ನಿಮಗೂ ಈ ರೀತಿಯ ಅನುಭವಗಳಾಗಿರಬಹುದಲ್ಲವೇ.....?

Tuesday, November 3, 2009

ಡಿಸ್ಥಿಮಿಯ.......!ಏನಿದು.......?

ಕೆಲವು ದಿನಗಳ ಹಿಂದೆ ಊರಿಗೆ ಹೋಗಿದ್ದಾಗ ಈ ವಿಷಯ ಚರ್ಚೆಯಲ್ಲಿತ್ತು.ಪರಿಚಯದ ಮಧ್ಯ ವಯಸ್ಸಿನ ಹೆಣ್ಣು ಮಗಳೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು ಎಂಬುದಾಗಿ.
ಆಕೆ ಜೀವನದಲ್ಲಿ ಅಪಾರ ಕಷ್ಟವನ್ನು ಉಂಡಾಕೆ.ಮದುವೆಯಾಗಿ ಕೈಲೊಂದು ಕೂಸು ಬರುವ ಹೊತ್ತಿಗೆ ವೈಧವ್ಯವೂ ಜೊತೆಯಾಗಿತ್ತು.ಜೀವನವನ್ನು ಎದುರಿಸಲು ಆಕೆ ಪಟ್ಟ ಪಾಡು ಲೆಕ್ಕವಿಲ್ಲದಷ್ಟು.ನರ್ಸ್ ಟ್ರೈನಿಂಗ್ ಮಾಡಿಕೊಂಡ ಆಕೆ ಹಳ್ಳಿಗಳಲ್ಲಿ ಸೇವೆ ಸಲ್ಲಿಸುವ ಬಾಯಮ್ಮ ಆದಳು.ಮಗ ಮಾವನ ಮನೆಯಲ್ಲಿ ಬೆಳೆಯುತ್ತಿದ್ದ.ಅನೇಕ ವರ್ಷಗಳಿಂದ ಆಕೆಗೆ ಒಂಟಿತನವೇ ಜೊತೆ.ದಿನವಿಡೀ ಕರ್ತವ್ಯದ ನಿಮಿತ್ಯ ಹಳ್ಳಿಗಳಲ್ಲಿ ಸುತ್ತಾಟ.ಕಷ್ಟ ಸುಖ ಹೇಳಿಕೊಳ್ಳಲು ಯಾರೂ ಇಲ್ಲ.... ಬಗ್ಗಿದವರ ಮೇಲೆ ಇನ್ನೊಂದು ಗುದ್ದು ಎಂಬಂತೆ ಸೌಮ್ಯ ಸ್ವಭಾವದ ಇವಳ ಮೇಲೆ ಕೆಲಸದ ಒತ್ತಡ .ವಿನಾಕಾರಣ ಮೇಲಧಿಕಾರಿಗಳ ಸಿಡಿಮಿಡಿ.

ಬಹುಷಃ ಈ ಸಮಯದಲ್ಲಿಯೇ ಆಕೆಯ ಮಾನಸಿಕ ಸ್ಥಿತಿ ಹತೋಟಿ ಕಳೆದು ಕೊಳ್ಳಲು ಶುರುವಾಗಿರಬಹುದು.ಹತ್ತಿರದಿಂದ ಗಮನಿಸುವವರು ಯಾರೂ ಇಲ್ಲವಾದ್ದರಿಂದ ಬೂದಿ ಮುಚ್ಚಿದ ಕೆಂಡದಂತೆ ಅದು ಆಕೆಯನ್ನು ಸುಡುತ್ತಿತ್ತು ಅನ್ನಿಸುತ್ತದೆ.ಮಾನಸಿಕವಾಗಿ ತುಂಬಾ ನೊಂದಾಕೆ ಎಂಬ ಭಾವದಿಂದ ಬಿಂಬಿತಳಾದ ಆಕೆಯ ಕೆಲವು ಅಸಂಬದ್ದತೆಗಳು ತವರಿನವರಿಗಾಗಲೀ,ಬಂಧುಗಳಿಗಾಗಲೀ ಸುಳಿವೇ ಸಿಗಲಿಲ್ಲ.ಆಕೆಯ ಕಷ್ಟಕ್ಕೆ ತವರಿನವರ ಸಹಾಯ ,ಬೆಂಬಲ ಸದಾ ಇರುತ್ತಿತ್ತು ಕೂಡಾ.ಮಗ ದೊಡ್ಡವನಾಗಿ ಒಳ್ಳೆಯ ರೀತಿಯಲ್ಲಿ ಸ್ವಂತ ಉದ್ಯೋಗ ಮಾಡಿಕೊಂಡಿದ್ದರೂ ಆಕೆಯು ಯೋಚಿಸುತ್ತಿದ್ದ ರೀತಿಯೇ ಬೇರೆ.ತಂದೆಯಿಲ್ಲದ ಮಗನಿಗೆ ಮದುವೆಯಾಗುವುದೋ ಇಲ್ಲವೊ....? ತನ್ನ ಸ್ಥಿತಿಯನ್ನು ನೋಡಿ ಸಂಬಂಧ ಬೆಳೆಸುವವರಾರು...? ಹೀಗೆ ನಾನಾತರದ ನಕಾರಾತ್ಮಕ ಯೋಚನೆಗಳು. ಆಗಾಗ ಹೇಳುತ್ತಿದ್ದಳಂತೆ.


ವಯಸ್ಸಿನ ನಿಮಿತ್ಯ ಸೊಂಟನೋವು ಶುರುವಾಗಿ ಸೊಂಟದ ನರದ ಆಪರೇಶನ್ ಕೂಡಾ ಆಗಿತ್ತು.ದೈಹಿಕ ತೊಂದರೆಯ ಜೊತೆಗೆ ತನ್ನ ಬಗೆಗೆ ಬೆಳೆಸಿಕೊಂಡ ಕೀಳರಿಮೆಯೂ ಸೇರಿಕೊಂಡು ಆಕೆ ಅದೇನು ನಿರ್ಧಾರ ತೆಗೆದುಕೊಂಡಳೋ...... ಒಂದು ದುರದೃಷ್ಟದ ಮುಂಜಾನೆ ಬಾವಿಗೆ ಬಿದ್ದು ಜೀವ ತೆಗೆದುಕೊಂಡಳು.

ಜೀವನವಿಡೀ ಕಷ್ಟ ಸಹಿಸಿಕೊಂಡ ಆಕೆ ಹೀಗೇಕೆ ಮಾಡಿದಳು...? ಹುಡುಕಲು ಹೊರಟವರಿಗೆ ತನ್ನ ಸಾವಿಗೆ ಯಾರೂ ಕಾರಣರಲ್ಲವೆಂದು ಬರೆದಿಟ್ಟ ಪತ್ರ ಸಿಕ್ಕರೂ ಮೊದಲು ಕಾಣಿಸಿದ್ದು ಮನೆ ತುಂಬಾ ತರತರದ ವಸ್ತುಗಳ ರಾಶಿ.ಬೇಕಾದ್ದಕ್ಕಿಂತಾ ಸಧ್ಯದ ಪರಿಸ್ಥಿತಿಯಲ್ಲಿ ಅಪ್ರಸ್ತುತವಾದವುಗಳೇ ಆಗಿತ್ತು.ಪೆಟ್ಟಿಗೆ ತುಂಬಾ ನೂರಾರು ಸೋಪುಗಳು,ನೆರಿಗೆ ಮುರಿಯದ [ಬಳಸದ]ಐವತ್ತರವತ್ತು ಸೀರೆಗಳು,ಲೆಕ್ಕವಿಲ್ಲದಷ್ಟು ಪಾತ್ರೆಪರಡಿಗಳು..
ಜೀವವಿಲ್ಲದ ಈ ವಸ್ತುಗಳೇ ಆಕೆಯ ಸಂಗಾತಿಗಳೇನೋ ಎಂಬಂತೆ....!!


ನನಗನ್ನಿಸಿದ ಪ್ರಕಾರ ಇದೊಂದು ಮಾನಸಿಕ ಖಾಯಿಲೆಯ ಪರಿಣಾಮ.ಇದು ಹೆಚ್ಚಾಗಿ ಡಿಸ್ಥಿಮಿಯಾ ಎನ್ನುವ ಮಾನಸಿಕ ಖಿನ್ನತೆಯ ಲಕ್ಷಣಗಳನ್ನು ಹೊಂದಿದೆ.

ಏನಿದು ....?ಡಿಸ್ಥಿಮಿಯ ...!!!

ಡಿಸ್ಥಿಮಿಯ ..ಇದು ತೀವ್ರತೆ ಕಡಿಮೆ ಇರುವ,ಬಹುಕಾಲದಿಂದ ಕಾಡುತ್ತಿರುವ ಮಾನಸಿಕ ಖಿನ್ನತೆ[ಮೈಲ್ಡ್ ಕ್ರೋನಿಕ್ ಡಿಪ್ರೆಶನ್]
ಸುಲಭವಾಗಿ ಹೇಳುವದಾದರೆ ಮನಸ್ಸಿನ ಕೆಟ್ಟ ಸ್ಥಿತಿ.
ಇದು ಮಾನಸಿಕ ಖಿನ್ನತೆಗಳ ಫಲಕದ ಅಡಿಯಲ್ಲಿಯೇ ಕಾಣಿಸಿಕೊಂಡರೂ ತೀವ್ರತೆ ಕಡಿಮೆ ಇರುವ ಕಾರಣ ಸಾಮಾನ್ಯರ ಗಮನಕ್ಕೆ ಸುಲಭವಾಗಿ ನಿಲುಕಲಾರದು.

ಈ ಕಾಯಿಲೆ ಯಾವ ಕಾರಣದಿಂದ ಬರಬಹುದೆಂಬುದು ನಿಖರವಾಗಿ ತಿಳಿದಿಲ್ಲವಾದರೂ ಮೆದುಳಿನಲ್ಲಿ ಸ್ರವಿಸುವ,ಉದ್ವೇಗ ನಿಯಂತ್ರಿಸುವ ರಾಸಾಯನಿಕ serotonin ನ ಅಸ್ಥವ್ಯಸ್ತತೆಯೇ ಕಾರಣ ಎಂಬುದು ಕೆಲವರ ಅಂಬೋಣ .
ಆನುವಂಶಿಕವಾಗಿ ಬರುವ ಸಾಧ್ಯತೆ ಪ್ರತಿಶತ ೫೦ ಕ್ಕೂ ಹೆಚ್ಚು.ಪ್ರತಿಶತ ೩ ಜನರು ಪ್ರತಿವರ್ಷವೂ ಈ ಕಾಯಿಲೆಗೆ ಈಡಾಗುತ್ತಿದ್ದಾರೆ.ಪ್ರೀತಿಪಾತ್ರರಾದವರ ಅಗಲಿಕೆ,ಸಾವು,ಘೋರವಾದಂತಹಾ ನೋಟ,ಅವಮಾನ,ಒಂಟಿತನ ಇವುಗಳಿಂದ ಚೇತರಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಈ ಡಿಸ್ಥಿಮಿಯಾ ಆವರಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ನಿರಾಶಾವಾದ,ನಿರಾಸಕ್ತಿ,ಏಕಾಗ್ರತೆಯ ಕೊರತೆ,ಸ್ವಂತಿಕೆಯ ಕೊರತೆ,ನಿರ್ಧಾರ ತೆಗೆದುಕೊಳ್ಳುವಲ್ಲಿನ ಅಸಾಮರ್ಥ್ಯ,ನಿಶ್ಯಕ್ತಿ,ನಿದ್ರಾಹೀನತೆ ಅಥವಾ ಅತಿನಿದ್ರೆ,ಹಸಿವಾಗದಿರುವಿಕೆ ಅಥವಾ ಅತಿ ಹಸಿವು ಇವು ಈ ಖಿನ್ನತೆಯ ಮುಖ್ಯ ಲಕ್ಷಣಗಳಾಗಿರುತ್ತವೆ.

ಎಷ್ಟೋ ಸಲ ನಾವು ಅನೇಕ ಕಾರಣಗಳಿಂದ ಖಿನ್ನರಾಗುತ್ತೇವೆ.ಪರಿಸ್ಥಿತಿಗನುಸಾರವಾಗಿ.... ನಾಲ್ಕಾರು ದಿನಗಳು ಕಳೆದಂತೆ ಅದು ತನ್ನಿಂತಾನೆ ಮರೆಯಾಗಿ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇವೆ.ಎಲ್ಲರ ಜೀವನದಲ್ಲಿ ಇದು ಸಹಜವೆಂಬಂತೆ ನಡೆದುಕೊಂಡು ಹೋಗುತ್ತಿರುತ್ತದೆ.ಆದರೆ ಈ ಡಿಸ್ತಿಮಿಯಾ ಇರುವವರಲ್ಲಿ ಖಿನ್ನತೆ ೨ ವರ್ಷಗಳಿಗೂ ಮುಂದುವರೆಯುತ್ತದೆ. ವ್ಯಕಿಗೆ ಅದರ ಅರಿವೇ ಆಗುವುದಿಲ್ಲ. ಗಂಡಸರಿಗಿಂತಾ ಹೆಂಗಸರಲ್ಲಿ ಈ ಕಾಯಿಲೆಯ ಪ್ರಮಾಣ ೨-೩ ಪಟ್ಟು ಹೆಚ್ಚು.ಇದು ಹರಯದಲ್ಲಿ ಅಥವಾ ಮಧ್ಯವಯಸ್ಸಿನಲ್ಲಿ ಶುರುವಾಗುತ್ತದೆ.ಈ ವ್ಯಕ್ತಿಗಳು ಸಂತೋಷವನ್ನು ಅನುಭವಿಸಲಾರರು. ನಿರಾಶಾವಾದತ್ತ ಮುಖ ಮಾಡಿಕೊಳ್ಳುವ ಇವರು ಸದಾ ಅಂತರ್ಮುಖಿಗಳಾಗಿರುತ್ತಾರೆ. ಉಳಿದವರೂ ಅವರು ಇರುವುದೇ ಹಾಗೆ ಅಂದುಕೊಂಡು ಬಿಟ್ಟಿರುತ್ತಾರೆ. ಮೊದಲಿನಿಂದ ಅವರು ಹಾಗೇ ಅನ್ನುವ ಅಭಿಪ್ರಾಯವಿರುತ್ತದೆ. ಆದರೆ ಒಳಗಿನ ಕೆಂಡ ಅಹಿತಕರ ಘಟನೆಗಳಲ್ಲಿ ಪರ್ಯವಸಾನಗೊಳ್ಳುವ ಸಾಧ್ಯತೆಗಳಿರುತ್ತದೆ.

ಹಾಗಾಗಿ ಯಾವುದೇ ವ್ಯಕ್ತಿ ಎರಡು ವಾರಗಳಿಗಿಂತಲೂ ಹೆಚ್ಚಿನ ಕಾಲಾವಧಿಯಲ್ಲಿ ಖಿನ್ನತೆ ಅನುಭವಿಸುತ್ತಿದ್ದರೆ ಅವರನ್ನು ಸೂಕ್ಷ್ಮವಾಗಿ ಗಮನಿಸಿ ವೈದ್ಯರಲ್ಲಿ ತಪಾಸಿಸುವುದೊಳಿತು.


ಖಿನ್ನತೆಯನ್ನು ಹೋಗಲಾಡಿಸಲು ದಾರಿಯಿದೆಯೇ......?

ಸಾಕಷ್ಟು ಮಾರ್ಗಗಳಿವೆ.ಕೆಲವರಿಗೆ ಮಾತ್ರೆ ಔಷಧಿಗಳು ಬೇಕಾಗಬಹುದು.ಆದರೆ ಸೈಕೋಥೆರಪಿ ತುಂಬಾ ಪ್ರಯೋಜನಕಾರಿ.ಕಾಗ್ನಿಟಿವ್ ಥೆರಪಿ [ಆಪ್ತ ಸಮಾಲೋಚನೆಯ ಮೂಲಕ ಅರಿವು,ತಿಳುವಳಿಕೆ ಮೂಡಿಸುವುದು],ಬಿಹೇವಿಯರ್ ಥೆರಪಿ [ಜನರೊಂದಿಗೆ ವ್ಯವಹರಿಸುವಲ್ಲಿ ಧನಾತ್ಮಕ ಚಿಂತನೆ]ಕೂಡಾ ಪ್ರಯೋಜನಕಾರಿ. ಔಷಧಿಗಳೊಂದಿಗೆ ಥೆರಪಿಯೂ ಸೇರಿದರೆ ಉತ್ತಮ ಫಲಿತಾಂಶ ದೊರೆಯುವುದರಲ್ಲಿ ಸಂಶಯವಿಲ್ಲ.

ವ್ಯಕಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಮೊದಲ ಹಂತದಲ್ಲಿಯೇ ಚಿಕಿತ್ಸೆಯನ್ನು ಪ್ರಾರಂಭ ಮಾಡಿದರೆ ಖಿನ್ನತೆಯನ್ನು ಕೊನೆಗಾಣಿಸಬಹುದು ಮತ್ತು ನಂತರದಲ್ಲಿ ಆಗುವ ಅವಗಢಗಳನ್ನೂ ತಡೆಯಬಹುದು.


ವಂದನೆಗಳು.